ಅತ್ತಿಗೆಯೂ, ಜಿರಲೆಯೂ

ಒಳ್ಳೆಯ ಸಿಹಿ ನಿದ್ದೆಯಲ್ಲಿದ್ದ ನನಗೆ ಮೈಮೇಲೆ ಏನೋ ಹರಿದಾಡಿದಂತಾಗಿ ಎಚ್ಚರವಾಯಿತು. ಗಾಬರಿಯಾಗಿ  ಮೈಯನ್ನು ಜೋರಾಗಿ ಕೊಡವಿಕೊಂಡು ಧಡಕ್ಕನೆದ್ದು ಲೈಟು ಹಾಕಿದೆ. ಲೈಟು ಬೆಳಕಿಗೆ ಪಕ್ಕದಲ್ಲೇ ಮಲಗಿದ್ದ ಅತ್ತಿಗೆಗೆ ಎಚ್ಚರವಾಯಿತು. ಏನಾಯಿತಮ್ಮ ಎನ್ನುತ್ತಾ ನಿದ್ದೆಯ ಅಮಲಿನಿಂದ ಕಣ್ಣುಗಳನ್ನು ತೆರೆಯಲು ಆಗದೆ ಕಣ್ಣು ಮುಚ್ಚಿಕೊಂಡೇ ಕೇಳಿದರು. ನನಗೆ ಅವರ ಅವಸ್ಥೆ ಕಂಡು ನಗು ಬಂದರೂ, ಪಾಪ ಇಡೀ ದಿನ ಮನೆ ಕೆಲಸ, ಅದೂ ಇದೂ ಅಂತ ಒಂದು ಘಳಿಗೆಯೂ ಸುಮ್ಮನೆ ಕೂರದ ಜೀವಕ್ಕೆ ಅಷ್ಟೇ ನಿದ್ದೆ ಬೇಕಲ್ಲವೇ ಎಂದುಕೊಳ್ಳುತ್ತ ಅತ್ತಿಗೆ, ನೀವು ಮಲಗಿಕೊಳ್ಳಿ, ಒಂದೇ ನಿಮಿಷ ಲೈಟು ಆಫ್ ಮಾಡಿಬಿಡುತ್ತೇನೆ ಎನ್ನುತ್ತಾ ನನ್ನ ಕಣ್ಣುಗಳನ್ನು ಸುತ್ತಲೂ ಹರಿದಾಡಿಸಿದೆ.

ನೆಲದ ಮೇಲೆ ಪ್ರಾಣಭಯದಿಂದ ಓಡುತ್ತಿದ್ದ ಜಿರಲೆ ಕಂಡು, ಅಯ್ಯೋ ದೇವರೇ ಎಂದು ಕಿರುಚುತ್ತ ಮಂಚದ ಮೇಲೆ ಹಾರಿದೆ. ಪಾಪ ಅತ್ತಿಗೆ ಬೆಚ್ಚಿಬಿದ್ದು, ಏನಾಯಿತೇ ಸುಮಾ ಯಾಕೆ ಹಂಗೆ ಕಿರುಚ್ದೆ ಎನ್ನುತ್ತಾ ಏಳಲಾಗದೆ ಕಣ್ಣು ಬಿಡಲಾಗದೆ ಪಡಿಪಾಟಲು ಪಡುವುದನ್ನು ಕಂಡು, ಜಿರಲೆ ಅತ್ತಿಗೆ ಎಂದೇ ಅಷ್ಟೇ! ಅವರ ನಿದ್ದೆ ಮಾರುದ್ದ ದೂರ ಹಾರಿ ಹೋಯಿತು. ಅದುವರೆಗೂ ಕಣ್ಣು ತೆರೆಯಲು ಕಷ್ಟ ಆಡುತ್ತಿದ್ದ ಅತ್ತಿಗೆ ಕಣ್ಣುಗಳನ್ನು ದೊಡ್ಡದಾಗಿ ಅರಳಿಸುತ್ತಾ, ಏನು ಜಿರಲೆನಾ, ಅಯ್ಯೋ ದೇವರೇ ಏನು ಮಾಡ್ಲೀಪಾ, ಇವುಗಳ ಕಾಟ ತಡೆಯೋಕೆ ಆಗ್ತಿಲ್ಲ. ಫ್ಲಾಟ್ ನಲ್ಲಿದ್ದ್ರೆ ಇದೆ ಖರ್ಮ, ಬೇರೆಯವರ ಮನೆ ಜಿರಲೆ ನಮ್ಮ ಮನೆ ಸೇರುತ್ವೆ. ಅವುಗಳನ್ನು  ಸಾಯಿಸೋಕೆ ಅಂತ ಔಷಧಿ  ತಂದರೆ ಒಂದೇ ವಾರದಲ್ಲಿ ಖಾಲಿಯಾದರೂ ಜಿರಲೆ ಮಾತ್ರ ರಕ್ತ ಬೀಜಾಸುರನಂತೆ ದಿನೇದಿನೇ ಜಾಸ್ತಿಯಾಗ್ತಾನೇ ಇದೆ. ನನ್ನ ಎರಡು ಒಳ್ಳೆ ಸೀರೆನಾ ತಿನ್ಧಾಕಿವೆ, ಇವರ್ದು ಅದೇನೋ ಕೇಬಲ್ ತಿಂದು ಹಾಕಿದೆ ಅಂತಿದ್ರು ಎನ್ನುತ್ತಾ ಅತ್ತಿಗೆ ಪಟ್ಟಿ ಮಾಡುತ್ತಲೇ  ಓಡಿ ಹೋಗಿ ಚಪ್ಪಲಿ ತಂದು ಜಿರಲೆಗೆ ರಪ್ಪನೆ ಬಡಿದರು. ಒಂದೇ ಏಟಿಗೆ ಜಿರಲೆ ಗೊಟಕ್ !

 ನಾನು ಜೋರಾಗಿ ಆಕಳಿಸುತ್ತಾ, ಅಷ್ಟೇ ಅಲ್ಲ ಅತ್ತಿಗೆ, ಮೊನ್ನೆ ಅದ್ಯಾವುದೋ ಪೇಪರ್ ನಲ್ಲಿ ಓದ್ದೆ.  ಚೀನಾದಲ್ಲಿ ಒಬ್ಬನ ಕಿವಿಯಿಂದ ಡಾಕ್ರು ಬರೋಬ್ಬರಿ 26 ಜಿರಳೆಗಳನ್ನು ತೆಗೆದ್ರಂತೆ ಅಂದಾಗ ಅತ್ತಿಗೆ ನಗೆಯಾಡುತ್ತ, ಚೀನಾದಲ್ಲಿ ಜನಸಂಖ್ಯೆ ಜಾಸ್ತಿ ಅಲ್ವೇ ಅದಕ್ಕೆ ಪಾಪ, ಜಾಗ ಇಲ್ಲದೆ ಮನುಷ್ಯರ ಕಿವಿಯೊಳಗೆ ಮನೆ ಮಾಡಿಕೊಂಡಿರಬೇಕು ಎನ್ನುತ್ತಾ ಹೊದಿಕೆಯನ್ನು ಸರಿ ಮಾಡಿಕೊಳ್ಳುತ್ತ ಮಂಚದ ಮೇಲೆ ಪವಡಿಸಿದರು. ನಾನು ಅತ್ತಿಗೆ, ಕಾಟನ್ ಎಲ್ಲಿದೆ ಎಂದು ಕೇಳಿದೆ. ಇಷ್ಟೊತ್ತಲ್ಲಿ ಕಾಟನ್ ಯಾಕೆ ನಿಂಗೆ, ನಾಳೆ ಬೆಳಿಗ್ಗೆ ಕೊಡ್ತೀನಿ, ಇವಾಗ ಮಲಕ್ಕೋ ಎನ್ನುತ್ತಾ ಕಣ್ಣು ಮುಚ್ಚಿಕೊಂಡರು.

ನಾನು, ನೀವು ಎಲ್ಲಿದೆ ಅಂತ ಹೇಳಿ ನಾನೇ ತೊಗೋತೀನಿ ಅಂದಾಗ ಅವರು, ಏನು ಅದು ಅಷ್ಟು ಅರ್ಜೆಂಟು, ಏನಾಯಿತು ಮೈ ಕೈ ಏನಾದರೂ ಗಾಯ ಆಗಿದ್ಯಾ ಎನ್ನುತ್ತಾ ಕಾಳಜಿಯಿಂದ ಎದ್ದು ಬಂದು ದೇವರ ಗೂಡಿನಲ್ಲಿದ್ದ ಹತ್ತಿಯನ್ನು ಸ್ವಲ್ಪ ಮುರಿದು ನನ್ನ ಕೈಗೆ ತಂದಿಟ್ಟು ನೀರು ಕುಡಿಯಲು ಅಡಿಗೆ ಮನೆಗೆ ಹೋದರು. ಅಡಿಗೆಮನೆಯಲ್ಲಿ  ಅತ್ತಿಗೆ ಏನೋ ಶಬ್ದ ಮಾಡುತ್ತಿರುವುದನ್ನು ಕಂಡು ಅತ್ತಿಗೆ ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂದು ನೋಡಲು ನಾನೂ ಅಡಿಗೆ ಮನೆಗೆ ನಡೆದೆ. ನೋಡಿದರೆ ಅತ್ತಿಗೆ ಚಪ್ಪಲಿಯಿಂದ ಜಿರಲೆಗಳನ್ನು ಹೊಡೆದು ಸಾಯಿಸುವುದರಲ್ಲಿ ಮಗ್ನರಾಗಿದ್ದರು.

 ನಾನು ಸತ್ತ ಜಿರಲೆಗಳನ್ನು ಎಣಿಸಲು ಆರಂಭಿಸಿದೆ. ಒಟ್ಟು ಹನ್ನೆರಡು ಜಿರಲೆಗಳು, ಜೊತೆಗೆ ಸಣ್ಣ ಪುಟ್ಟ ಮರಿಗಳೂ ಇದ್ದವು. ನಾನು ಅತ್ತಿಗೆಗೆ, ಜಿರಲೆ ಎಲ್ಲಿಂದ ಬರುತ್ತದೆ ಎಂದು ನೋಡಿ ಆ ದಾರಿ ಮುಚ್ಚಿಡಬಹುದಲ್ಲ ಎಂದು ಸಲಹೆ ಮಾಡಿದೆ. ಅಯ್ಯೋ ಅದೆಲ್ಲ ಮಾಡಾಯ್ತು, ಬಾಗಲ ಸಂದಿನಿಂದ, ಕಿಟಕಿ ಸಂದಿನಿಂದ, ಎಲ್ಲೆಲ್ಲಿಂದಾನೋ ಬರ್ತಾವೆ. ಬಹಳಷ್ಟು ಸಂದಿಗಳನ್ನು ಮುಚ್ಚಿ ಬಿಟ್ಟಿದೀನಿ, ಅದರೂ ಜಿರಲೆ ಬರೋದು ಮಾತ್ರ ನಿಂತಿಲ್ಲ ಎಂದಾಗ ನಾನು, ಅತ್ತಿಗೆ ನೀವು ಬೆಕ್ಕು ಸಾಕಬಹುದಲ್ವೆ ಎಂದೆ.ಅವರು, ನನಗೆ ಬೆಕ್ಕು ಕಂಡ್ರೆನೆ ಆಗಲ್ಲ,  ಬೆಳಗ್ಗೆನೇ ಶುರು ಆದ್ರೆ ಅದ್ರ ಪಿರಿಪಿರಿ ರಾತ್ರಿ ಅದರೂ ನಿಲ್ಲಲ್ಲ. ಅದಕ್ಕಿಂತ ಜಿರಲೇನೆ ವಾಸಿ, ಅವುಗಳದೇನಿದ್ರೂ ರಾತ್ರಿ  ಮಾತ್ರ ಕಾರುಬಾರು ಎಂದರು. ಜಿರಲೆಗಳ ಮಾರಣ ಹೋಮ ಮುಗಿಸಿ ಎಲ್ಲವನ್ನು ಸ್ವಚ್ಛ ಮಾಡಿ ಇಬ್ಬರೂ ಮಲಗುವ ಕೋಣೆಗೆ ಬಂದೆವು.

 ನಾನು ಅತ್ತಿಗೆ ಕೊಟ್ಟ ಹತ್ತಿಯನ್ನು ಎರಡು ಭಾಗವನ್ನಾಗಿ ಮಾಡಿಕೊಂಡು ಉಂಡೆ ಮಾಡಿ ನನ್ನ ಎರಡೂ ಕಿವಿಯೊಳಗೆ ತುರುಕಿಸಿ ಬಿಟ್ಟೆ. ಅತ್ತಿಗೆ ಅಚ್ಚರಿಯಿಂದ ನನ್ನನ್ನು ನೋಡುತ್ತಾ, ಹೋ ನಿನಗೆ ಆ ಚೀನಾದವನ ನೆನಪಾಯಿತಾ, ನಮ್ಮನೆಯಲ್ಲಿ ತುಂಬಾನೇ ಜಾಗ ಇದೆ ಕಣೆ ಜಿರಲೆಗಳಿಗೆ, ನೀನು ಹೆದರ್ಕೋಬೇಡ ಬಾ ಮಲಕ್ಕೋ ಎಂದರು. ಆದರೂ ನಾನು ಹತ್ತಿಯನ್ನು ಕಿವಿಯಿಂದ ತೆಗೆಯದೆ, ಪರವಾಗಿಲ್ಲ ನನಗೆ ತುಂಬಾನೇ ಭಯ ಆಗ್ತಿದೆ. ಎನ್ನುತ್ತಾ ಲೈಟು ಆಫ್ ಮಾಡಿ ಅವರ ಪಕ್ಕದಲ್ಲೇ ಉರುಳಿಕೊಂಡೆ. ಅತ್ತಿಗೆ ಅಷ್ಟರಲ್ಲೇ ನಿದ್ದೆ ಹೋಗಿದ್ದರು. ಅತ್ತಿಗೆ ಬಹಳ ಪುಣ್ಯವಂತರಪ್ಪ, ನಿದ್ದೆ ಬಹಳ ಚೆನ್ನಾಗಿ ಬರುತ್ತೆ ಅಂದುಕೊಳ್ಳುತ್ತ ನಾನು ತಿರುಗುತ್ತಿದ್ದ ಫ್ಯಾನನ್ನು ದಿಟ್ಟಿಸಿ ನೋಡುತ್ತಾ ಮಲಗಿದೆ.

ನಮ್ಮಣ್ಣ ಶಿವೂ ದೂರದ ಊರಿಗೆಲ್ಲ ಹೋಗಬೇಕಾದ್ರೆ ಪಕ್ಕದ ಊರಿನಲ್ಲೇ ಇದ್ದ ನನ್ನನ್ನು ಅತ್ತಿಗೆ ಕರೆಸಿಕೊಳ್ಳುತ್ತಿದ್ದಳು. ನಾನು ಖುಶಿಯಿಂದಲೇ ಓಡಿ ಬರುತ್ತಿದ್ದೆ. ಗಂಡನಿಗೆ ನಾನು ಆಗಾಗ ತವರಿಗೆ ದೌಡಾಯಿಸುವುದು ಇಷ್ಟವಾಗದೆ ಇದ್ದರೂ ಏನೂ ಹೇಳುತ್ತಿರಲಿಲ್ಲ. ಕಾರಣ ನಮ್ಮತ್ತಿಗೆ. ಅಪ್ಪ ಅಮ್ಮ ಇಲ್ಲದ ನನ್ನನ್ನು ಸ್ವಂತ ತಾಯಿಗಿಂತ ಹೆಚ್ಚಾಗಿ ಅಕ್ಕರೆಯಿಂದ ಕಾಣುತ್ತಿದ್ದಳು.

ನಾನು ಮದುವೆಯಾದ ಮೊದಲಿಗೆ ನನ್ನ ಗಂಡ ವಿನಾ ಕರಣ ಜಗಳ ಮಾಡುತ್ತಿದ್ದರು. ನಿಂಗೆ ತವರಿನವರು ಅದು ಕೊಡಲಿಲ್ಲ ಇದು ಕೊಡಲಿಲ್ಲ ಎಂದು ಕಿಚಾಯಿಸುತ್ತಿದ್ದರು. ಅತ್ತೆ  ಮಾವ ಕೂಡ ಕಿರುಕುಳ ಕೊಡಲು ಶುರು ಮಾಡಿದಾಗ ಅತ್ತಿಗೆ ಬಳಿ ಫೋನಿನಲ್ಲಿ ಹೇಳಿಕೊಂಡು ಅತ್ತಿದ್ದೆ. ಅವಳು ತಕ್ಷಣ ಅಣ್ಣನ ಜೊತೆ ನಮ್ಮ ಮನೆಗೆ ಬಂದು ಎಲ್ಲರಿಗೂ ಚೆನ್ನಾಗಿ ದಬಾಯಿಸಿ ನಮ್ಮ ಹುಡುಗಿಗೆ ಏನೋ ಬೇಕೋ ಅದನ್ನು ನಾವು ಕೊಡ್ತೇವೆ. ನಿಮಗೆ ಏನೋ ಬೇಕೋ ಅದನ್ನು ನೀವೇ ತೊಗೋಬೇಕು, ನನ್ನ ನಾದಿನಿ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ, ನಮ್ಮಣ್ಣ ಪೋಲೀ ಸ್ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದಾನೆ. ಅವನಿಗೆ ಒಂದು ಫೋನು ಮಾಡಿದ್ರೆ ಸಾಕು, ಮತ್ತೆ ನೀವೆಲ್ಲ ಜೀವನ ಪೂರ್ತಿ ಜೈಲಿನಲ್ಲೇ ಕಳೆಯಬೇಕಾಗುತ್ತೆ ಎಂದು ಎಚ್ಚರಿಸಿದ್ದಳು.

ನನ್ನ ಅಣ್ಣ ಅವಳ ಮಾತು ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಂಡು, ಸುಧಾ, ನನ್ನ ತಂಗಿ ಎಂದರೆ ನಿನಗೆಷ್ಟು ಪ್ರೀತಿ ಕಣೆ ಎಂದಿದ್ದ. ನನಗೂ ಅತ್ತಿಗೆ ಮೇಲೆ ಅಭಿಮಾನ ಉಕ್ಕಿ ಬಿಟ್ಟಿತ್ತು. ಅಂದಿನಿಂದ ಗಂಡನ ಮನೆಯವರು ನಾನು ಏನು ಮಾಡಿದರೂತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಒಂದು ತಿಂಗಳ ನಂತರ ಅತ್ತಿಗೆ ಅವರ ಅಣ್ಣನೊಂದಿಗೆ ನಮ್ಮ ಮನೆಗೆ ಬಂದಾಗ ನಮ್ಮ ಅತ್ತೆ ಮಾವ ಬೆವರಿಬಿಟ್ಟಿದ್ದರು. ಕೊನೆಗೆ ಅವರು ಬಂದಿದ್ದು ಅವರ ಮಗನ ಬ್ರಹ್ಮೋಪದೇಶಕ್ಕೆ ಆಮಂತ್ರಣ ನೀಡಲು ಎಂದು ತಿಳಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆಗ ಅತ್ತಿಗೆ ನನ್ನತ್ತ ವಾರೆ ನೋಟ ಬೀರಿ ನಕ್ಕಿದ್ದಳು. ಎಲ್ಲ ನೆನಪು ಮಾಡಿಕೊಳ್ಳುತ್ತಲೇ ನಿದ್ದೆ ಹೋದೆ.

ಮರುದಿನ ಬೆಳಗ್ಗೆ ಎದ್ದಾಗ ಅತ್ತಿಗೆಯ ಹಾಡು ಮೆಲ್ಲನೆ ಕೇಳಿಸುತ್ತಿತ್ತು. ಅವರು ಆಗಲೇ ಸ್ನಾನ ಮಾಡಿ ಕಾಫಿ ತಿಂಡಿ ರೆಡಿ ಮಾಡಿ ಆಗಿತ್ತು. ನಾನು ಜಿರಲೆ ಭಯದಿಂದ ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತಾ ಬೆಳಗಿನ ಜಾವದಲ್ಲಿ ನಿದ್ದೆಗೆ ಜಾರಿದ್ದೆ. ಹಾಗಾಗಿ ಅತ್ತಿಗೆ ನನ್ನನ್ನು ಎಬ್ಬಿಸಿರಲಿಲ್ಲ. ನನ್ನನ್ನು ಕಂಡ ಅತ್ತಿಗೆ, ಎದ್ಯಾ ಮುಖ ತೊಳಕೊಂಡು ಬಾ ಕಾಫಿ ಕೊಡ್ತೀನಿ ಅಂದರು, ನಾನು ಹಲ್ಲುಜ್ಜಲು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ಹಲ್ಲುಜ್ಜಿಕೊಂಡು ಫ್ರೆಶ್ ಆಗಿ ಹೊರಗೆ ಬರುವಾಗ ಮೇಲಿನಿಂದ ಒಂದು ಹಲ್ಲಿ  ನನ್ನ ಎದುರೇ ಕೆಳಗಿ ಬಿದ್ದು ಬಿಟ್ಟಿತು. ಅದನ್ನು ಕಂಡು ಗಾಬರಿಯಾಗಿ ನಾನು ಕಿರುಚಿದೆ. ಅತ್ತಿಗೆ ನಗುತ್ತ, ಹಯ್ಯೋ ಆ ಹಲ್ಲಿ ನಿನಗೇನೂ ಮಾಡಲ್ಲ ಬಾ. ಮನೆ ತುಂಬಾ ಜಿರಲೆಗಳಿದ್ರೂ ತಾನೇ ಒಂದೇ ಒಂದು ಜಿರಲೆ ಹಿಡಿಯಲ್ಲ, ನಾನು ಸಾಯ್ಸಿದ ಜಿರಲೇನ ತಿನ್ನೋಕೆ ಮಾತ್ರ ಬಂದ್ಬಿಡುತ್ತೆ ಸೋಮಾರಿ ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಹಲ್ಲಿ  ಅಲ್ಲಿದ್ದ ಸೋಫಾದ ಕೆಳಗೆ ನುಣುಚಿ ಕೊಂಡಿತು. ಅಲ್ಲ ಅತ್ತಿಗೆ ಇಷ್ಟು ಸಮಯದಿಂದ ನಾನು ಈ ಮನೆಗೆ ಬರ್ತಾ ಇದ್ದೀನಿ. ಆದ್ರೆ ಒಂದಿನಾನೂ ನಂಗೆ ಜಿರಲೆ ಕಾಣಿಸಿಲ್ಲ ಎಂದು ನನ್ನ ಸಂದೇಹ ವ್ಯಕ್ತ ಪಡಿಸಿದೆ. ಅದಕ್ಕವರು, ಓ ಅದಾ ನಿಮ್ಮಣ್ಣ ಯಾವಾಗಲೂ ದೂರದ ಊರಿಗೆ ಹೋಗಬೇಕಾದ್ರೆ ನಾಲ್ಕು ದಿನ ಮುಂಚೆನೇ ಹೇಳುತ್ತಿದ್ದರು. ಅವರಿಗೂ ಗೊತ್ತು ನಿಂಗೆ ಜಿರಲೆ ಕಂಡ್ರೆ ಭಯ ಅಂತ! ನಾನು ನೀನು ಬರುವ ಮೊದಲೇ ಔಷಧಿ ಹಾಕಿ ಜಿರಲೆ ಸಂಹಾರ ಮಾಡಿ ಮುಗಿಸ್ತಿದ್ದೆ. ಆದ್ರೆ ಈ ಸಲ ಅವರಿಗೇನೋ ಬಹಳ ಅರ್ಜೆಂಟಾಗಿ ಹೋಗಬೇಕಾಗಿ ಬಂತು. ಹಾಗಾಗಿ ನಂಗೆ ಔಷಧಿ ಹಾಕೋಕೆ ಸಮಯ ಸಿಕ್ಕಿಲ್ಲ ಎಂದರು. ಅಣ್ಣ ಅತ್ತಿಗೆಗೆ ನನ್ನ ಮೇಲಿರುವ ಕಾಳಜಿ ಕಂಡು ನನಗೆ ಅಭಿಮಾನ ಮೂಡಿತು.

ಆಗ ನನಗೆ ಒಮ್ಮೆ ಯಾರೋ ಜಿರಲೆಗಳಿಗೆ ಅಂತ ಬಾಂಬ್ ಇದೆ, ಅದನ್ನು ಉಪಯೋಗಿಸೋವಾಗ ಮನೆಯವರು ಮಾತ್ರ ಎರಡು ದಿನ ಮನೇಲಿ ಇರಬಾರದಂತೆ ಅಂತ ಹೇಳಿದ್ದು ನೆನಪಾಯಿತು, ಅದನ್ನೇ ಅತ್ತಿಗೆಗೆ ಹೇಳಿದೆ, ಎರಡು ದಿನ ನೀವಿಬ್ಬರೂ ನಮ್ಮನೆಗೆ ಬಂದ್ಬಿಡಿ, ನಿಮ್ಮ ಸಮಸ್ಯೆ ಪರಿಹಾರವಾದ ಹಾಗೆನೇ ಎಂದೆ. ಅತ್ತಿಗೆ, ಏನೂ ಬಾಂಬಾ, ಮನೇಲಿ ಗ್ಯಾಸ್ ಅದೂ ಇದೂ ಎಲ್ಲ ಇದೆ ಕಣೆ, ಮನೆನೇ ಸುಟ್ಟು ಹೋದರೆ ಎಂದು ಆತಂಕ ವ್ಯಕ್ತ ಪಡಿಸಿದರು. ನಾನು ನಗುತ್ತ, ಅಯ್ಯೋ ಅತ್ತಿಗೆ ಅಂಥಾ ಬಾಂಬ್ ಅಲ್ಲ, ಏನೂ ಆಗಲ್ಲ ಎಂದೆ. ಅದರ ಬಗ್ಗೆ ನನಗೆ ಜಾಸ್ತಿ ಏನೂ ಮಾಹಿತಿ ಇರಲಿಲ್ಲ.

ಆಗ ಅತ್ತಿಗೆ, ಒಂದು ದಿನ ಮನೆಗೆ ಬೀಗ ಇದ್ರೆ ಕಳ್ರು ನುಗ್ತಾರೆ, ಇನ್ನು ಎರಡು ದಿನ ಮನೆ ಬಿಟ್ಟಿದ್ದರೆ ಕಳ್ಳರು ಬಂದು ಮನೆನ ಗುಡ್ಸಿ ಗುಂಡಾಂತರ ಮಾಡಿ ಬಿಡ್ತಾರೆ, ಆಮೇಲೆ ಮನೆಯೆಲ್ಲ ಖಾಲಿ ಖಾಲಿ,ಜಿರಲೆಗಳೂ ಇಲ್ಲ, ಮನೆ ಸಾಮಾನೂ ಇಲ್ಲ ಎನ್ನುತ್ತಾ ನಕ್ಕರು, ನಾನೂ ನಕ್ಕೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ನಾನು ಓಡಿ ಹೋಗಿ ಬಾಗಿಲು ತೆರೆದೆ, ಅಣ್ಣ ಬಂದಿದ್ದ, ಅತ್ತಿಗೆ ಅವನನ್ನು ಕಂಡು ಆಶ್ಚರ್ಯದಿಂದ, ಏನು ಇವತ್ತು ಬಂದ್ರಿ, ನಾಳೆ ಬರ್ತೀನಿ ಅಂತಿದ್ರಿ ಎಂದಾಗ ಅಣ್ಣ ಅಲ್ಲಿ ಕೆಲಸವೆಲ್ಲ ಬೇಗ ಮುಗೀತು ಅದಕ್ಕೆ ಬಂದೆ, ಸುಮ್ನೆ ನಮ್ಮ ಸುಮಾಗೆ ಯಾಕೆ ತೊಂದ್ರೆ ಎನ್ನುತ್ತಾ ಸೋಫಾದ ಮೇಲೆ ಉಶ್ ಎನ್ನುತ್ತಾ ಕುಕ್ಕರಿಸಿದರು.

Advertisements

ಹೆಂಡತಿಯೊಬ್ಬಳು…

ಮುಸ್ಸಂಜೆಯ ಸಮಯ. ನಾನು ನಮ್ಮ ಬೀದಿಯ ಕೊನೆಯ ಮನೆಯವನ ಜೊತೆ ಹೆಜ್ಜೆ ಹಾಕುತ್ತಿದ್ದೆ. ನಮ್ಮ ಮನೆ ಸಮೀಸುತ್ತಿದ್ದಂತೆ ಆತ ಅರೆ ! ನಿಮ್ಮ ಮನೆಯಲ್ಲಿ ಅಮಾವಾಸ್ಯೆಯಾಗಿದೆಯಲ್ಲ, ಯಾಕೆ ? ಹೆಂಡತಿ ಮನೆಯಲ್ಲಿಲ್ಲವೇ ಎಂದು ಉತ್ಸುಕನಾಗಿ ಕೇಳಿದ. ನಾನು ಅವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಆಕಾಶವನ್ನು ದಿಟ್ಟಿಸಿದೆ. ಮಿಂಚೊಂದು ಆಗಾಗ ಫಳಾರನೆ ಮಿಂಚಿ ಮರೆಯಾಗುತ್ತಿತ್ತು. ಅದರ ಜೊತೆ ಮೆಲ್ಲನೆ ಗುಡುಗಿನ ಸದ್ದು ಕೇಳಿಸಿತು. ಅದನ್ನು ನೋಡಿ ನನ್ನ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮೂಡಿತು.

ನನ್ನ ಮೌನ ಕಂಡು ನನ್ನ ಸ್ನೇಹಿತ, ಯಾಕೋ, ಈ ಸಲ ಬಿಲ್ ಕಟ್ಟಿಲ್ಲವೇನೋ ಎಂದು ಅನುಕಂಪದಿಂದ ಮತ್ತೆ ಪ್ರಶ್ನಿಸಿದ. ನಾನು ನಗುತ್ತ, “ಛೆ, ಹಾಗೇನಿಲ್ಲಪ್ಪ, ನನ್ನ ಹೆಂಡತಿ ಮನೆಯಲ್ಲೇ ಇದ್ದಾಳೆ. ಜೊತೆಗೆ ಬಿಲ್ ಯಾವೊತ್ತೋ ಕಟ್ಟಿದೀನಿ…  ನಾನು ಕಾರಣ ಹೇಳುವ ಮೊದಲೇ ಆತ ನನ್ನ ಮಾತನ್ನು ಮಧ್ಯದಲ್ಲೇ ತುಂಡರಿಸಿ ಮತ್ತಷ್ಟು ಕುತೂಹಲದಿಂದ, ಹಾಗಾದ್ರೆ ನಿಮ್ಮನೆಯಲ್ಲಿ ಕತ್ತಲ್ಯಾಕೋ ಎಂದು ಕೇಳಿದ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಂದವಾದ ಬೆಳಕು ಕಾಣಿಸಿತು. ಅದನ್ನು ಕಂಡು ನಾನು ಮುಗುಳ್ನಗುತ್ತ,  ಅವಳಿಗೆ ಬೇರೆ ಕೆಲಸ ಇಲ್ಲ. ಮುನ್ನೆಚ್ಚರಿಕೆ ಕ್ರಮ ತೊಗೊಂಡಿದಾಳೆ ಎಂದೆ.  ಅವನಿಗೆ ಏನೂ ಅರ್ಥವಾಗದೆ, ಏನೋ ಹಾಗಂದ್ರೆ ಎಂದ. ಮೇಲ್ನೋಡು, ಮಿಂಚು ಬರ್ತಾ ಇದೆಯಲ್ವ, ಎಲ್ಲಾದ್ರೂ ಸಿಡಿಲು ನಮ್ಮನೆಗೆ ಬಡಿದು ಬಿಟ್ರೆ ಅಂತಾ ನನ್ನಾಕೆ ಮೈನ್ ಸ್ವಿಚ್ ಆಫ್ ಮಾಡಿ ಬಿಟ್ಟಿದಾಳೆ. ಮಿಂಚು ಗುಡುಗು ಮರೆಯಾಗೊವರೆಗೂ ನಮಗೆ ಅಮವಾಸ್ಯೇನೆ, ಟೀವಿ ನೋಡೋ ಹಾಗಿಲ್ಲ, ಕರೆಂಟಿದ್ರೂ ಮೊಂಬತ್ತಿ ಬೆಳಕಲ್ಲಿ ಕೂರೋ ಯೋಗ ಎಂದು ಲಘುವಾಗಿ ನಕ್ಕೆ. 

ಅವನು ನಕ್ಕು ಲೇವಡಿ ಮಾಡಬಹುದು ಅಂತಿದ್ದ ನನ್ನೆಣಿಕೆ ಸುಳ್ಳಾಯಿತು. ಆತ ನಗಲಿಲ್ಲ. ಬದಲಾಗಿ ಅವನ ಮುಖ ಗಂಭೀರವಾಯಿತು. ಈಗ ಕುತೂಹಲ ಪಡುವ ಸರದಿ ನನ್ನದಾಯಿತು. ನಾನು ಬೀದಿ ದೀಪದ ಬೆಳಕಿನಲ್ಲಿ ಅವನ ಮುಖವನ್ನೇ ದಿಟ್ಟಿಸಿದೆ. ಆತನ ಮುಖ ಮಂಕಾಗಿ, ನೀನು ಪುಣ್ಯ ಮಾಡಿದ್ದೀಯಾ ನಿಮ್ಮನೆ ಬಗ್ಗೆ ಇಷ್ಟೊಂದು ಕಾಳಜಿ ವಹಿಸೋ ಹೆಂಡತಿ ನಿನಗೆ ಸಿಕ್ಕಿದ್ದಾಳೆ ನೀನು ಅದೃಷ್ಟವಂತ ಕಣೋ ಎನ್ನುತ್ತಾ ನನ್ನ ಬೆನ್ನು ತಟ್ಟಿದ.

ನಾನು ಗಲಿಬಿಲಿಯಿಂದ ಅವನತ್ತಲೇ ನೋಡಿದೆ. ಆಗ ಅವನು, ಹಿಂದೊಮ್ಮೆ ನಮ್ಮ ಮನೆಗೆ ಸಿಡಿಲು ಬಡಿದಿತ್ತು. ಮನೆಯಲ್ಲಿದ್ದ ಟೀವಿ, ಫ್ರಿಜ್ಜು, ಎಲ್ಲ ಸುಟ್ಟು ಹೋಯಿತು. ಕೊನೆಗೆ ಲೈಟ್ ಬಲ್ಬ್ ಕೂಡ ಉಳೀಲಿಲ್ಲ, ಎಲ್ಲ ಸುಟ್ಟು ಭಸ್ಮವಾಗಿ ಬಿಟ್ಟಿತ್ತು. ಇಷ್ಟೆಲ್ಲಾ ಆಗುವಾಗ ನನ್ನ ಹೆಂಡತಿ ಮಧ್ಯಾಹ್ನದ ಸವಿ ನಿದ್ದೆಯಲ್ಲೇ ಮುಳುಗಿದ್ದಳು. ಮನೆಯೆಲ್ಲ ಸುಟ್ಟ ವಾಸನೆ ತುಂಬಿದಾಗಲೇ ಅವಳಿಗೆ ಎಚ್ಚರಾವಾಗಿದ್ದು… ಅವನು ಮಾತು ಮುಗಿಸುವ ಮೊದಲೇ ನಾನು, ನಿನ್ನ ಪುಣ್ಯ ಕಣೋ, ಹೆಂಡತಿ ಬದುಕಿಕೊಂಡಳಲ್ಲ ಎಂದು ಉದ್ಗರಿಸಿದೆ. ಆದರೆ ಅವನು ಮಾತ್ರ ಏನೂ ಹೇಳಲ್ಲಿಲ್ಲ.

ಅಷ್ಟರಲ್ಲಿ ಸ್ವಲ್ಪ ದೊಡ್ಡ ಮಿಂಚೊಂದು ಮಿಂಚಿ ಮರೆಯಾಯಿತು. ನನ್ನ ಸ್ನೇಹಿತ, ನಾನು ಹೋಗ್ತಿನೋ, ನಾಳೆ ಸಿಗೋಣ ಎಲ್ಲರೂ ನಿನ್ನಷ್ಟು ಅದೃಷ್ಟವಂತರಲ್ಲಪ್ಪ,ನಾನೇ ಮನೆಗೆ ಹೋಗಿ ಎಲ್ಲ ಕನೆಕ್ಷನ್ ಕಿತ್ತಾಕಬೇಕು ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೆ ತನ್ನ ಮನೆಯತ್ತ ಅವಸರದ ಹೆಜ್ಜೆ ಹಾಕಿದ. ನಾನು ನಮ್ಮ ಮನೆಯ ಗೇಟು ತೆರೆದು ಒಳಹೊಕ್ಕೆ.

 ಶ್ರೀಮತಿ ನನ್ನನ್ನು ಕಂಡು, ರೀ ರೇಗಾಡಬೇಡಿ, ಹೊರಗೆ ಮಿಂಚು ಬರ್ತಿದೆ ಅದಕ್ಕೆ … ಎನ್ನುತ್ತಾ ನನ್ನ ಮುಖವನ್ನು ನೋಡಲು ಧೈರ್ಯ ಸಾಲದೇ  ತಲೆತಗ್ಗಿಸಿದಳು. ನಾನು ಅವಳನ್ನು ಅಪ್ಪಿಕೊಂಡು, ನೀನು ನನ್ನ ಪಾಲಿನ ಅದೃಷ್ಟ ದೇವತೆ ಕಣೆ ಇನ್ಯಾವತ್ತೂ ನಿನ್ನ ಮೇಲೆ ರೇಗಲ್ಲ ಎಂದು ಅವಳ ಕಿವಿಯಲ್ಲಿ ಮೆಲ್ಲನುಸುರಿದೆ.

ಅವಳಿಗೆ ದಿಗ್ಭ್ರಮೆಯಾಗಿ, ರೀ ಏನಾಯ್ತು ನಿಮಗೆ ಇದ್ದಕ್ಕಿದ್ದಂತೆ, ಯಾವಾಗಲೂ ನಾನು ಸಿಡಿಲು ಬರುತ್ತೇಂತ ಮೇನ್ ಸ್ವಿಚ್ ಆಫ್ ಮಾಡಿ ಕೇಬಲ್ ಕನೆಕ್ಷನ್ ಫೋನ್ ಕನೆಕ್ಷನ್ ಎಲ್ಲ ತೆಗೆದು ಬಿಟ್ರೆ ರಂಪ ರಾಮಾಯಣ ಮಾಡ್ತಿದ್ರಿ ಇವತ್ತೇನಾಯ್ತು, ಹೊಸದಾಗಿ ಕುಡಿಯೋ ಅಭ್ಯಾಸ ಶುರು ಮಾಡಿಲ್ಲ ತಾನೇ ಎಂದಳು.

ನಾನು ಮಾತ್ರ  ನನ್ನಲ್ಲಾದ ಬದಲಾವಣೆಯ ಗುಟ್ಟು ಬಿಟ್ಟು ಕೊಡದೆ, ನೀನು ಏನು ಬೇಕಾದರೂ ಹೇಳು, ಒಂದು ರೀತೀಲಿ ಇವತ್ತು ನನಗೆ ಜ್ಞಾನೋದಯ ಆಯ್ತು ಅಂತಾನೆ ತಿಳ್ಕೋ. ನೀನು ಇಷ್ಟೆಲ್ಲಾ ಜಾಗ್ರತೆ ವಹಿಸೋದು ನಮ್ಮ ಒಳ್ಳೆಯದಕ್ಕೆ ತಾನೇ. ಅದಕ್ಯಾಕೆ ನಾನು ರೇಗಬೇಕು, ಇನ್ಮೇಲೆ ಯಾವಾತೂ ನಿನ್ಮೇಲೆ ರೇಗಲ್ಲ ಎಂದು ಅವಳಿಗೆ ಭರವಸೆ ಇತ್ತೆ.

ಅವಳು ಮಾತ್ರ ಅತ್ಯಾಶ್ಚರ್ಯದಿಂದ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ನಾನು, ನಂಗೆ ತುಂಬಾ ಹಸಿವಾಗ್ತಿದೆ. ಅಡಿಗೆ ಏನು ಮಾಡಿದ್ದೀಯಾ ಎನ್ನುತ್ತಾ ಅವಳ ಗಮನವನ್ನು ಬೇರೆಡೆಗೆ ಹರಿಸಲು ಪ್ರಯತ್ನಿಸಿದೆ. ತಕ್ಷಣ ಅವಳು, ನಿಮಗಿಷ್ಟ ಅಂತಾ ಏನೋ ಮಾಡಿದ್ದೀನಿ. ಬೇಗ ಕೈಕಾಲು ತೊಳ್ಕೊಂಡು ಊಟಕ್ಕೆ ಬನ್ನಿ ಎನ್ನುತ್ತಾ ಅವಸರದಿಂದ ಅಡಿಗೆಮನೆಯತ್ತ ಹೆಜ್ಜೆ ಹಾಕಿದಳು. ಅವಳ ಸಂಭ್ರಮ ಕಂಡು ನಾನೂ ಸಂತಸದಿಂದ ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ.

ಅವತ್ತು ಮಧ್ಯರಾತ್ರಿಯಲ್ಲಿ ಬಾತ್ ರೂಮಿಗೆ ಹೋಗಲು ನಾನು ಎದ್ದು ರೂಮಿನ ಟ್ಯೂಬ್ ಲೈಟು ಸ್ವಿಚ್ ಹಾಕಿದೆ. ನನ್ನಾಕೆ ಗಾಢ ನಿದ್ದೆಯಲ್ಲಿದ್ದಳು. ನಾನು ಅವಳನ್ನೊಮ್ಮೆ ನೋಡಿ ಬಾತ್ ರೂಮಿಗೆ ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ, ಅವಳು ಗಡಬಡಿಸಿ  ಎದ್ದು, ಅಯ್ಯೋ ಎಲ್ಲ ಹೋಯಿತು ಸಿಡಿಲು ಬಡಿದೇ  ಬಿಟ್ಟಿತು. ನಾನು ಮೊದಲೇ ಎಚ್ಚರಿಕೆ ವಹಿಸಬೇಕಿತ್ತು ಎಂದೆಲ್ಲ ಬಡಬಡಿಸ ತೊಡಗಿದಳು.

ನಾನು ಗಾಬರಿಯಿಂದ, ಏನಾಯ್ತು ಕಣೆ, ಯಾಕೆ ಇಷ್ಟೊಂದು ಗಾಬರಿಯಾಗಿದ್ದೀಯ ಎಲ್ಲೂ ಸಿಡಿಲು ಬಡಿದಿಲ್ಲ, ನಾನು ಟ್ಯೂಬ್ ಲೈಟು ಹಾಕಿದ್ದೆ, ಅದು ನಿದ್ದೆಯಲ್ಲಿ ನಿನಗೆ ಮಿಂಚಿನ ಹಾಗೆ ಕಾಣಿಸಿರಬೇಕು, ಹೊರಗಡೆ ಆಕಾಶದಲ್ಲಿ ನಕ್ಷತ್ರ ಕಾಣಿಸ್ತಿದೆ ನೋಡು ಎನ್ನುತ್ತ ಅವಳ ಮುಖದಲ್ಲಿ ಕಾಣಿಸಿಕೊಂಡ ಬೆವರನ್ನು ಒರೆಸುತ್ತಾ ಸಮಾಧಾನ ಮಾಡಿದೆ. ನೀನು ಮಲಕ್ಕೋ ಏನೂ ಆಗಿಲ್ಲ ಎನ್ನುತ್ತಾ ಮಗುವಿನಂತೆ ಅವಳನ್ನು ತಟ್ಟಿ ಮಲಗಿಸಿದೆ. ಅವಳು ಅಲ್ಲೇ ನಿದ್ದೆ ಹೋದಳು.

ನಾನು ಮೆಲ್ಲನೆ ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ನನ್ನ ಹೆಂಡತಿ ಎಷ್ಟು ಒಳ್ಳೆಯವಳು, ನಿದ್ದೆಯಲ್ಲೂ ಅವಳಿಗೆ ಮನೆಯ ಚಿಂತೆ. ನಾನು ಮಾತ್ರ ಅವಳ ಒಳ್ಳೆಯ ಗುಣ ನೋಡಿ ಮೆಚ್ಚುವುದನ್ನು ಬಿಟ್ಟು ಇಷ್ಟು ಸಮಯ ರೇಗಾಡುತ್ತಿದ್ದೆನಲ್ಲ, ನನ್ನ ಸ್ನೇಹಿತನ ಹೆಂಡತಿಯಂತೆ ಇವಳೂ ಆಗಿದಿದ್ದರೆ ಇಷ್ಟೊತ್ತು ನನಗದೆಷ್ಟೆಲ್ಲ ನಷ್ಟವಾಗುತ್ತಿತ್ತೇನೋ ಎಂದು ಭಾವುಕನಾಗಿ ಗಂಟಲುಬ್ಬಿ ಬಂದಿತು. 

ಆಗಂತುಕನ ಆಗಮನ!

ಅದೊಂದು ರಾತ್ರಿ ನಿದ್ದೆ ಬಾರದಿದ್ದಾಗ  ಕಿಟಕಿಯಿಂದ ಹೊರ ನೋಡುತ್ತಾ  ಮಲಗಿದ್ದೆ. ಬಾವಲಿಯೊಂದು ಕಿಟಕಿಯ ಬಳಿಯೇ ಹಾರಾಡುತ್ತಿತ್ತು. ಅದನ್ನು ನೋಡುತ್ತಾ ನಾನು ಕಣ್ಣು ಮುಚ್ಚಿದೆ. ಸುಮಾರು ಹೊತ್ತಿನ ಬಳಿಕ ಕಣ್ತೆರೆದು ನೋಡಿದಾಗ  ಸೀಲಿಂಗ್ ನ ಸುತ್ತ ಕತ್ತಲಲ್ಲಿ ಹಕ್ಕಿಯೊಂದು ಹಾರಾಡಿದಂತಾಯಿತು. ಅರೆ! ಇದೇನಾಶ್ಚರ್ಯ! ಈ ಹಕ್ಕಿ ಮನೆಯ ಒಳಗೆ ಬಂದಿದ್ದಾದರೂ ಹೇಗೆ, ಯಾವುದೇ ಕಿಟಕಿ ತೆರೆದಿಟ್ಟಿಲ್ಲ, ಬಾಗಿಲೂ ಮುಚ್ಚಿದೆ. ಹಾಗಿದ್ರೆ ಇದು ಬಂದಿದ್ದಾದರೂ ಎಲ್ಲಿಂದ, ಅದು ನಿಜವಾಗಿಯೂ ಬಂದಿದೆಯೇ ಅಥವಾ ನಾನು ಕನಸು ಕಾಣುತ್ತಿದ್ದೆನೆಯೇ ಎಂದು ನನಗೆ ಗೊಂದಲವಾಯಿತು.

ಕುತೂಹಲದಿಂದ ಕೈಗೆ ಚಿವುಟಿಕೊಂಡೆ. ನೋವಾದಾಗ ಇದು ಕನಸಲ್ಲ ಎಂದು ಅರಿವಾಗಿ ಧಿಗ್ಗನೆದ್ದು ಲೈಟು ಹಾಕಿದೆ. ನೋಡಿದರೆ ಅದು ಹಕ್ಕಿಯಲ್ಲ,  ಕಿಟಕಿಯ ಹೊರಗೆ ಹಾರಾಡುತ್ತಿದ್ದ ಸಣ್ಣ ಬಾವಲಿ ! ಅದನ್ನು ಕಂಡು ನನಗೆ ಧಿಗ್ಭ್ರಮೆಯಾಯಿತು. ಇದು ಮನೆಯೊಳಕ್ಕೆ ಯಾಕೆ ಬಂದಿತು. ಅದು ಬಂದಿದ್ದಾದರೂ ಎಲ್ಲಿಂದ ಎಂದು ಯೋಚಿಸುವಷ್ಟರಲ್ಲಿ ಅದು ನನ್ನ ರೂಮಿನಿಂದ ಹೊರಕ್ಕೆ ಹೋಗಿ ಹಾಲ್ ನಲ್ಲಿ, ಅಡಿಗೆ ಮನೆಯಲ್ಲಿ ಹೀಗೆ ಎಲ್ಲ ರೂಮಿಗೆ ಹೋಗಿ ವೃತ್ತಾಕಾರವಾಗಿ ಹಾರಾಡತೊಡಗಿತು.

ಅದನ್ನು ನೋಡಿ ನನಗೆ ವಿಚಿತ್ರವೆನಿಸಿ ಆದಷ್ಟು ಬೇಗ ಅದು ಹೊರಗೆ ಹೋಗಲಿ ಎಂದು ಮನೆಯ ಹಿಂಬಾಗಿಲನ್ನು ತೆರೆದಿಟ್ಟೆ. ಆದರೆ ಅದು ಬಾಗಿಲ ತನಕ ಹೋಗಿ ಮತ್ತೆ ಪುನಃ ರೂಮಿಗೆ ಬಂದು ಸುತ್ತು ಹಾಕತೊಡಗಿತು. ಸುತ್ತು ಹಾಕುತ್ತ ಪ್ರತೀ ಸಲವೂ ನನ್ನ ಬಳಿಗೆ ಕುಕ್ಕಲು ಬಂದವರಂತೆ ಬರತೊಡಗಿತು. ನನಗೆ ಭಯವಾಗಿ ಪ್ರತೀಸಲವೂ ಚಾಕಚಕ್ಯತೆಯಿಂದ ಅದರಿಂದ ತಪ್ಪಿಸಿಕೊಂಡೆ.

ಎಷ್ಟೇ ಹೊತ್ತಾದರೂ ಅದು ಹೊರಗೆ ಹೋಗುವ ಲಕ್ಷಣ ಕಾಣಿಸದಾಗ ಮೆಲ್ಲನೆ ನಾನು ಅಲ್ಲೇ ಇದ್ದ ದಿಂಬನ್ನು ಗುರಾಣಿಯನ್ನಾಗಿ ಮಾಡಿಕೊಂಡೆ. ಪ್ರತೀ ಸಲವೂ ಅದು ನನ್ನ ಬಳಿ ಬಂದಾಗ ನಾನು ದಿಂಬನ್ನು ಬೀಸಿ ಅದಕ್ಕೆ ಹೊಡೆಯಲು ಪ್ರಯತ್ನಿಸಿದೆ. ಆದರೆ ತಾನೂ ಕೂಡ ಏನೂ ಕಡಿಮೆಯಿಲ್ಲ ಎನ್ನುವಂತೆ ಅದು ಪ್ರತೀ ಸಲವೂ ತಪ್ಪಿಸಿಕೊಳ್ಳತೊಡಗಿತು. ಇದರಿಂದ ಹೇಗೆ ಪಾರಾಗಲಿ ಎಂದು ನನಗೆ ತಿಳಿಯದೇ ಒದ್ದಾಡಿದೆ.

ಬೆಳಕಿನಲ್ಲಿ ಅದಕ್ಕೆ ಕಣ್ಣು ಕಾಣಿಸುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ಲೈಟು ಆರಿಸಲು ಭಯ. ಕತ್ತಲಲ್ಲಿ ಅದು ಎಲ್ಲಿದೆ ಎಂದು ತಿಳಿಯುವುದಾದರೂ ಹೇಗೆ, ಹೀಗೆ ಇದ್ದರೆ ಇವತ್ತು ರಾತ್ರಿಯೆಲ್ಲ ಜಾಗರಣೆ ಎಂದುಕೊಂಡು ಮೆಲ್ಲನೆ ಅದರಿಂದ ತಪ್ಪಿಸಿಕೊಂಡು ಬಂದು ರೂಮಿಗೆ ಬಂದು ಬಾಗಿಲು ಹಾಕಿಕೊಂಡು, ಫೋನಿನಲ್ಲಿ ಬಾವಲಿಯನ್ನು ಹೇಗೆ ಹೊರಕ್ಕೆ ಹಾಕುವುದು ಎಂದು ತಿಳಿಯಲು ಅಂತರ್ಜಾಲದಲ್ಲಿ ತಡಕಾಡಿದೆ.

ಕೆಲವರು ಅದಕ್ಕೆ ಟ್ರಾಪ್ ಬಳಸಬೇಕು ಎಂದರೆ ಇನ್ನು ಕೆಲವರು ನೆಟ್ ಬಳಸಿ ಅದನ್ನು ಹಿಡಿಯಬಹುದು ಎಂದು ತಿಳಿಸಿದ್ದರು. ಅದೆಲ್ಲ ನನ್ನ ಬಳಿ ಇಲ್ಲ, ಈಗೇನು ಮಾಡುವುದು ಎಂದು ಮತ್ತಷ್ಟು ಹುಡುಕಾಡಲು  ಶುರು ಮಾಡಿದೆ. ಒಬ್ಬರಂತೂ ಬಾವಲಿ ಎಲ್ಲಾದರೂ ಕುಳಿತಾಗ ಮೆಲ್ಲನೆ ಅದರ ಮೇಲೆ ಒಂದು ಬಟ್ಟಲನ್ನು ಬೋರಲು ಹಾಕಿ ಪೇಪರ್ ನಿಂದ ಅದನ್ನು ಮುಚ್ಚಿ ಹಿಡಿದು ಹೊರಹಾಕಬಹುದು ಎಂದಿದ್ದರು.

 ಆದರೆ ನಮ್ಮ ಮನೆಗೆ ಬಂದ ಬಾವಲಿ ಎಲ್ಲಾದರೂ ಕೂತಿದ್ದರೆ ತಾನೇ ಹಿಡಿಯುವುದು ಎಂದುಕೊಳ್ಳುತ್ತ ಇನ್ನೂ ಜಾಲಾಡುತ್ತಿದ್ದಾಗ ಬಾವಲಿಗಳಿಗೆ ರೇಬಿಸ್ ಬರುತ್ತದೆಂದೂ ಅದು ಕಚ್ಚಿದರೆ ಅಪಾಯ ಎಂದು ತಿಳಿದಾಗ ನನಗೆ ಮತ್ತಷ್ಟು ಗಾಬರಿಯಾಯಿತು. ಅಯ್ಯೋ ದೇವರೇ ಏನು ಮಾಡಲಿ ಹೇಗೆ ಇದನ್ನು ಹೊರಗೆ ಸಾಗಹಾಕಲಿ ಎಂದು ಯೋಚಿಸುತ್ತ ರೂಮಿನಿಂದ ಹೊರಗೆ ಬಂದು ನೋಡಿದರೆ ಬಾವಲಿ ಎಲ್ಲಿಯೂ ಕಾಣಿಸಲಿಲ್ಲ! ಎಲ್ಲಿ ಹೋಯಿತು ಎಂದು ಕುತೂಹಲದಿಂದ ಅಡಿಗೆಮನೆಯಲ್ಲಿ ಮೆಲ್ಲನೆ ಇಣುಕಿದೆ. ಅಲ್ಲೂ ಇಲ್ಲ, ನನಗೆ ಆಶ್ಚರ್ಯ ವಾಗಿ ಅದನ್ನು ಹುಡುಕುತ್ತಿದ್ದಂತೆ ಅದು ಎಲ್ಲಾದರೂ ಕೂತಿರಬಹುದೇ ಇಷ್ಟು ಹೊತ್ತು ಹಾರಾಡಿ ಅದಕ್ಕೆ ದಣಿವಾಗಿರಬಹುದಲ್ಲವೇ ಎಂದು ಯೋಚಿಸಿದಾಗ ಮತ್ತಷ್ಟು ಭಯವಾಯಿತು.

ಕಿಟಕಿ ಪರದೆ ಸಹ ಮುಟ್ಟಲು ಭಯವಾಯಿತು, ಎಲ್ಲಿ ಅವಿತುಕೊಂಡು ಕುಳಿತು ನಾನು ಹತ್ತಿರ ಬಂದಾಗ ಮೇಲೆರಗಿದರೆ ಎಂದು ಕಂಪಿಸಿದೆ. ಆದರೂ ಬಾವಲಿಯನ್ನು ಹೊರಹಾಕಲೇಬೇಕಿತ್ತು, ಅದಕ್ಕಾಗಿ ನಾನು ಅದನ್ನು ಹುಡುಕಲೇಬೇಕು ಎಂದುಕೊಳ್ಳುತ್ತ ಇದ್ದಬದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಹುಡುಕಲು ಶುರು ಮಾಡಿದೆ.

ಆದರೆ ಅದು ಎಲ್ಲಿಯೂ ಕಾಣಿಸದಾಗ ಅದು ತಾನಾಗಿಯೇ ಹೊರಗೆ ಹೋಗಿರಬೇಕೆಂದು ಅನುಮಾನ ಪಟ್ಟೆ. ಸಮಾಧಾನವಾಗಿ ಬಾಗಿಲು ಹಾಕಿಕೊಂಡು ಬಂದು ಮಲಗಿದೆ. ಆದರೆ ನಿದ್ದೆ ಹಾರಿ ಹೋಗಿತ್ತು. ಫೋನ್ ತೆಗೆದುಕೊಂಡು  ಅಂತರ್ಜಾಲದಲ್ಲಿ ನಮ್ಮ ಶಕುನ ಶಾಸ್ತ್ರದ ಪ್ರಕಾರ ಬಾವಲಿ ಬಂದರೆ ಒಳ್ಳೆಯದೋ ಕೆಟ್ಟದೋ ಎಂದು ಜಾಲಾಡಿದೆ.  ಕೆಲವು ಕಡೆ ಬಾವಲಿ ಮನೆಯೊಳಗೇ ಬಂದು ಹಾರಾಡಿದರೆ ಶುಭ ಶಕುನ ಎಂದಿತ್ತು, ಅದನ್ನು ನೋಡಿ ಸಂತೋಷವಾಯಿತು.

ಆದರೆ ನನ್ನ ಸಂತಸ ಬಹಳ ಸಮಯ ಉಳಿಯಲಿಲ್ಲ. ಕೆಲವೆಡೆ ಬಾವಲಿ ಸೂತಕದ ಛಾಯೆಯಂತೆ ಎಂದು ಬಿಂಬಿಸಿದಾಗ ನನಗೆ ದೂರದ ದೇಶಕ್ಕೆ ಕಾನ್ಫರೆನ್ಸ್ ಗೆ ಹೋದ ಪತಿರಾಯರು, ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದ ಮಗ, ಮುಂಬೈನಲ್ಲಿ ಸಂಸಾರ ನಡೆಸುತ್ತಿದ್ದ ಮಗಳು ನೆನಪಾಗಿ ಎದೆ ಝಲ್ಲೆಂದಿತು. ಅಬ್ಬಾ ದೇವರೇ,ಯಾರಿಗೂ ಏನೂ ಆಗದಿರಲಿ ಅವರೆಲ್ಲ ಕ್ಷೇಮವಾಗಿರಲಿ  ಎಂದು ದೇವರಲ್ಲಿ ಮೊರೆಯಿಟ್ಟೆ.

ಅಲ್ಲದೆ ಅದು ನನಗೂ ಅನ್ವಯಿಸಬಹುದು ಎಂಬ ಯೋಚನೆ ಬಂದಾಗ ಅಧೀರಳಾಗಿ ಬಿಟ್ಟೆ. ದೇವರೇ ಇಷ್ಟು ಬೇಗ ನನ್ನು ಕರೆಸಿಕೊಳ್ಳಬೇಡ. ನನಗೆ ಇನ್ನೂ ಸಾಕಷ್ಟು ಜವಾಬ್ದಾರಿಗಳಿವೆ, ಆಸೆಗಳಿವೆ ಎಂದುಕೊಳ್ಳುತ್ತಿದ್ದಂತೆ ಮನಸ್ಸು ಮುದುಡಿತು. ಬಾವಲಿ ಮನೆ ಬಿಟ್ಟು ಹೋದರೂ ನಿದ್ದೆ ಮಾತ್ರ ಮಾರುದೂರ ಹಾರಿ ಹೋಗಿತ್ತು.

ಮರುದಿನ ಬೆಳಿಗ್ಗೆ ಗಂಡ ಮಕ್ಕಳಿಗೆಲ್ಲ ವಿಷಯ ತಿಳಿಸಿ ಎಲ್ಲರೂ ಸಾಧ್ಯವಾದಷ್ಟು ಜಾಗ್ರತೆ ವಹಿಸಬೇಕು ಎಂದೆ. ಅವರೆಲ್ಲ,  ನೀನು ಅದನ್ನೆಲ್ಲ ನಂಬಬೇಡ ಯಾರಿಗೂ ಏನೂ ಆಗುವುದಿಲ್ಲ. ಆ ಬಾವಲಿ ತಪ್ಪಿ ಬಂದಿರಬೇಕು ಎಂದು ಹೇಳಿದಾಗ ಎಲ್ಲೋ ಒಂದು ಕಡೆ ಸಮಾಧಾನ.

 ಆವತ್ತು ಮನೆ ಕೆಲಸವೆಲ್ಲ ಮುಗಿದಮೇಲೆ, ಇದ್ದಕ್ಕಿದ್ದಂತೆ ಬಾವಲಿ ಬಂದಿದ್ದಾದರೂ ಎಲ್ಲಿಂದ ಎಂದು ಯೋಚನೆ ಬಂದಿತು. ಯಾವ ಕಿಟಕಿಯೂ ತೆರೆದಿಲ್ಲ, ಬಾಗಿಲೂ ಭದ್ರವಾಗಿ ಮುಚ್ಚಿರುವಾಗ ಅದು ಒಳಗೆ ಬರಲು ಹೇಗೆ ಸಾಧ್ಯ ಎಂದುಕೊಳ್ಳುತ್ತ ಮತ್ತೆ ಫೋನು ಕೈಗೆತ್ತಿಕೊಂಡೆ. ಸ್ಮಾರ್ಟ್ ಫೋನ್ ಬಂದ ಮೇಲೆ ನಮ್ಮ ಸಂದೇಹಗಳಿಗೆಲ್ಲ ಅದೆಷ್ಟು ಬೇಗ ಉತ್ತರ ಸಿಗುತ್ತದೆ ಎಂದುಕೊಳ್ಳುತ್ತ ಹೆಮ್ಮೆಯಿಂದ ಮತ್ತೆ ಅಂತರಜಾಲದಲ್ಲಿ ಬಾವಲಿ ಮನೆಯೊಳಕ್ಕೆ ಹೇಗೆ ಬರುತ್ತದೆ ಎಂದು ನೋಡುತ್ತಾ ಹೋದೆ. ಅಲ್ಲಿ ಸಿಕ್ಕ ಮಾಹಿತಿ ಕಂಡು ಬೆರಗಾಗಿ ಬಿಟ್ಟೆ.

ಮೂರರಿಂದ ನಾಲ್ಕು ಇಂಚು ಅಗಲದ ರೆಕ್ಕೆ ಇರುವ ಬಾವಲಿ ಕೇವಲ ಅರ್ಧ ಇಂಚು ಜಾಗವಿದ್ದರೂ ಅದರ ಮೂಲಕ ಅದು ಒಳಕ್ಕೆ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ಎದ್ದು ಓಡಿ ಹೋಗಿ ಕಿಟಕಿಯ ಬಳಿ ಇದ್ದ ಎಡೆಗಳನ್ನೆಲ್ಲ ಮುಚ್ಚಿ ಬಿಟ್ಟೆ. ಅದರ ಜೊತೆ ಬಾವಲಿ ನಮ್ಮ ಮನೆಯ ಸುತ್ತ ಹಾರಾಡುತ್ತಿದ್ದರೆ ನಮಗೇ ಒಳ್ಳೆಯದು ಎಂದೂ ತಿಳಿಯಿತು. ನಿಮಗೆಲ್ಲ ಆಶ್ಚರ್ಯವಾಗಬಹುದು ಒಂದು ಬಾವಲಿ ಒಮ್ಮೆಗೆ ಇನ್ನೂರು ಮುನ್ನೂರು ಸೊಳ್ಳೆಗಳನ್ನು ತಿನ್ನುತ್ತವಂತೆ. ಒಂದು ರೀತಿಯಲ್ಲಿ ಅದು ನಮ್ಮನ್ನು ಡೆಂಗ್ಯೂ ಮಲೇರಿಯಾ ಚಿಕನ್ ಗುನ್ಯಾದಂತಹ ಮಾರಕ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.

ಅದೇ ಕಾರಣಕ್ಕೋ ಏನೋ ನಮ್ಮ ಮನೆಯ ಸುತ್ತಮುತ್ತ ಸೊಳ್ಳೆಗಳೇ ಇಲ್ಲ. ಅದನ್ನು ಓದಿದ ಬಳಿಕ ಬಾವಲಿಯ ಬಗ್ಗೆ ಇದ್ದ ಭಯ ಹೋಯಿತು. ಬಾವಲಿ ಮನೆಯೊಳಗೆ ಬಂದ ಬಳಿಕ  ನಮಗೆ ಕೆಟ್ಟದ್ದೇನೂ ಆಗಿಲ್ಲ. ಒಳ್ಳೆಯದಂತೂ ಆಗಿದೆ. ಅದು ಬಾವಲಿಯಿಂದಾಗಿ ಆಗಿದ್ದು ಅನ್ನೋದು ಮಾತ್ರ ಖಾತ್ರಿಯಿಲ್ಲ.

ಪ್ಲಾಸ್ಟಿಕ್ ಫುಡ್ !

ಮೊನ್ನೆಯಿಂದ ಟೀವಿಯಲ್ಲಿ ಪ್ಲಾಸ್ಟಿಕ್ ಫುಡ್ ನದ್ದೇ ಕಾರುಬಾರು. ಮೊದಲು ನಾನು ಟೀವಿಯಲ್ಲಿ ನೋಡಿದಾಗ ಪ್ಲಾಸ್ಟಿಕ್ ಕ್ಯಾಬೇಜನ್ನು ಹೇಗೆ ತಯಾರಿಸಿ ಅದನ್ನು ಮಾರುತ್ತಾರೆ ಎಂಬುದನ್ನು ಒಬ್ಬಾತ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸುತ್ತಿದ್ದ. ಹಿಂದಿನ ದಿನವೇ ನಾನು ಸೂಪರ್ ಮಾರ್ಕೆಟ್ನಿಂದ ಕ್ಯಾಬೇಜ್ ಖರೀದಿಸಿದ್ದೆ. ಹಾಗಾಗಿ ಆತಂಕದಿಂದ ಓಡಿ ಹೋಗಿ ಫ್ರಿಜ್ ನಲ್ಲಿದ್ದ ಕ್ಯಾಬೇಜನ್ನು ಹೊರ ತೆಗೆದು ಪರಿಶೀಲಿಸಿದೆ. ನನಗೇನೂ ಅದು ಪ್ಲಾಸ್ಟಿಕ್ ತರಹ ಕಾಣಲಿಲ್ಲ. ಆದರೂ ಖಚಿತ ಪಡಿಸಿಕೊಳ್ಳಲು ಅದರ ಒಂದು ಪದರನ್ನು ತುಂಡು ಮಾಡಿ ಮೂಸುತ್ತ ಬಾಯಿಗಿಟ್ಟೆ. ಕ್ಯಾಬೇಜ್ ರುಚಿ ಬಾಯಿ ತುಂಬಾ ಹರಡುತ್ತಿದ್ದಂತೆ ಅಬ್ಬಾ ನಾನು ತಂದಿದ್ದು ಕ್ಯಾಬೇಜೆ ಅಂತ ಖಾತ್ರಿಯಾಗಿ ಸಮಾಧಾನವಾಯಿತು. ಆದರೂ ಸಮಾಧಾನವಾಗದೇ ಅಂತರ್ಜಾಲದಲ್ಲಿ ಈ ಬಗ್ಗೆ ಜಾಲಾಡಿದಾಗ ಅದೆಲ್ಲ ಸುಳ್ಳು ಎಂದು ತಿಳಿಯಿತು.

ಮರುದಿನ ಟೀವಿಯಲ್ಲಿ ಬೆಂಗಳೂರಿಗೆ ಪ್ಲಾಸ್ಟಿಕ್ ಅಕ್ಕಿ ಬಂದಿದೆ ಎಂದು ಸುದ್ದಿ ಪ್ರಸಾರವಾಯಿತು. ಜೊತೆಗೆ ಜನರು ಅನ್ನಮಾಡಿಕೊಂಡು ಊಟಕ್ಕೆ ಕುಳಿತುಕೊಂಡು ಊಟ ಮಾಡುವ ಬದಲು ಅನ್ನವನ್ನು ಉಂಡೆಗಳನ್ನಾಗಿ ಮಾಡಿ ಚೆಂಡಿನಂತೆ ಅದನ್ನು ಗೋಡೆಗೆ ಬಡಿಯುತ್ತ ಅದು ಪುಟಿದು ವಾಪಾಸು ಬರುವುದನ್ನು ತೋರಿಸುತ್ತ ಅದು ಪ್ಲಾಸ್ಟಿಕ್ ಅಕ್ಕಿ ಎಂದು ವಿವರಿಸುತ್ತಿದ್ದರು. ಅದನ್ನು ನೋಡಿ ನನಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಪ್ಲಾಸ್ಟಿಕ್ ಅಕ್ಕಿಯಾದರೆ ಅದು ಮೇಲಕ್ಕೆ ಬಂದು ತೇಲುವುದಿಲ್ಲವೇ, ಅಕ್ಕಿ ಕುದಿಯುತ್ತಿರುವಾಗಲೇ ಬಿಸಿಗೆ ಕರಗುವುದಿಲ್ಲವೇ, ಪ್ಲಾಸ್ಟಿಕ್ ವಾಸನೆ ಬರುವುದಿಲ್ಲವೇ ಇಂಥ ಆಲೋಚನೆ ಯಾರಿಗೂ ಯಾಕೆ ಬಂದಿಲ್ಲ. ಟೀವಿಯವರು ಜನರ ಗೊಂದಲ ಹೋಗಲಾಡಿಸಲು ಆಹಾರ ತಜ್ಞರನ್ನು ಕರೆಸಿ ಈ ಬಗ್ಗೆ ಗಹನವಾದ ಚರ್ಚೆ ಮಾಡಿಸಿದ್ದೂ ಆಯಿತು. ಅವರು ಅದು ಪ್ಲಾಸ್ಟಿಕ್ ಅಕ್ಕಿಯಲ್ಲ ಎಂದು ಅದನ್ನು ಚೆನ್ನಾಗಿ ಪರಿಶೀಲಿಸಿ ಅನ್ನಬೆಂದ ಮೇಲೆ ಅದರಲ್ಲಿ ಗಾಳಿ ಸೇರುತ್ತದೆ ಜೊತೆಗೆ ಪಿಷ್ಟವೂ ಅಧಿಕವಾಗಿ ಇರುವುದರಿಂದ ಹಾಗಾಗುತ್ತದೆ ಎಂದು ತಿಳಿ ಹೇಳಿದರೂ ಅವರ ಮಾತು ಕೇಳುವವರೇ ಇಲ್ಲ!

ನಾನೂ ಊಟ ಮಾಡುವಾಗ ತಮಾಷೆಗೆ ಟೀವಿಯಲ್ಲಿ ಕಂಡಂತೆ ಅನ್ನವನ್ನು ಉಂಡೆ ಕಟ್ಟಿ ತಟ್ಟೆಯಲ್ಲೇ ಸ್ವಲ್ಪ ಮೇಲಿಂದ ಕೆಳಕ್ಕೆ ಎಸೆದೆ. ಅದು ಪಚಕ್ಕನೆ ಬಿದ್ದು ಮುದ್ದೆಯಾಗಿ ಬಿಟ್ಟಿತು. ನನ್ನನ್ನೇ ಗಮನಿಸುತ್ತಿದ್ದ ನಮ್ಮ ಮಕ್ಕಳೆಲ್ಲ ಒಬ್ಬೊಬ್ಬರೇ ಉಂಡೆ ಕಟ್ಟಿ ಪ್ರಯೋಗ ಮಾಡಲು ಸಿದ್ಧರಾದರು. ಇನ್ನು ಇವರೆಲ್ಲ ಸಿಕ್ಕ ಸಿಕ್ಕ ಗೋಡೆಗೆಲ್ಲ ಬಡಿದರೆ ಗೋಡೆಗಳ ಸೌಂದರ್ಯ ಹಾಳಾಗುತ್ತದೆ, ಜೊತೆಗೆ ಪೇಯಿಂಟ್ ಖರ್ಚು ಬೇರೆ ಎಂದುಕೊಳ್ಳುತ್ತ ಮಕ್ಕಳಿಗೆ ಗದರಿಸಿ ಸುಮ್ಮನೆ ಊಟ ಮಾಡುವಂತೆ ಹೇಳಿದೆ. ಆದರೂ ಮೊದಲು ಶುರು ಮಾಡಿದ್ದು ನಾನು ಎಂಬ ಅಪರಾಧಿ ಪ್ರಜ್ಞೆ ನನ್ನನ್ನು ಕಾಡತೊಡಗಿತು.

ಅಷ್ಟರಲ್ಲಿ ಪ್ಲಾಸ್ಟಿಕ್ ಮೊಟ್ಟೆಯ ಬಗ್ಗೆಯೂ ವರದಿ ಬರತೊಡಗಿತು. ಮೊಟ್ಟೆಯ ಸಿಪ್ಪೆಯ ಪದರನ್ನು ತೆಗೆದು ಅದಕ್ಕೆ ಬೆಂಕಿ ಹಚ್ಚುತ್ತ ನೋಡಿ ಇದು ಪ್ಲಾಸ್ಟಿಕ್ ಎಂದು ಅವರು ವಿವರಿಸುವಾಗ ನನಗೆ ತುಂಬಾ ನಗು ಬಂದಿತು. ಸಕ್ಕರೆಯಲ್ಲೂ ಪ್ಲಾಸ್ಟಿಕ್ ಸಕ್ಕರೆ ಇದೆಯೆಂದು ತೋರಿಸುತ್ತಿದ್ದರು. ಆಹಾರ ತಜ್ಞರು ಎಷ್ಟೇ ಬರಿ ಅದನ್ನು ವಿವರಿಸಿ ಹೇಳಿದರೂ ಜನ ನಂಬುವ ಸ್ಥಿತಿಯಲ್ಲೇ ಇಲ್ಲ. ಅದೆಷ್ಟು ಜನ ತಾವು ತಂದ ಅಕ್ಕಿ ಸಕ್ಕರೆ ಮೊಟ್ಟೆಗಳನ್ನು ಹೊರಕ್ಕೆಸೆದರೋ ದೇವರೇ ಬಲ್ಲ.

ನಮ್ಮ ವಠಾರದ ಕೆಲವು ಮನೆಗಳಲ್ಲಿ ಅನ್ನದಿಂದ ಮಾಡಿದ ಚೆಂಡುಗಳನ್ನು ನೋಡಿ ಮಕ್ಕಳಿಗೆ ಖುಷಿಯೋ ಖುಷಿ. ಹಿರಿಯರೆಲ್ಲ ಆತಂಕದಲ್ಲಿರುವಾಗ ಮಕ್ಕಳೆಲ್ಲ ಅನ್ನದ ಚೆಂಡುಗಳನ್ನು ತೆಗೆದುಕೊಂಡು ಕ್ರಿಕೆಟ್ ಆಡಲು ಓಡಿದರು. ಮೊದಲೆಲ್ಲ ಒಂದು ಚೆಂಡು ಕೊಡಿಸು ಎಂದು ಅಂಗಲಾಚಿದರೂ ಎಲ್ಲಿ ಮಕ್ಕಳು ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳನ್ನು ಒಡೆಯುತ್ತಾರೋ ಎಂಬ ಭಯದಿಂದ ಮನೆಯವರು ಕೊಡಿಸುತ್ತಿರಲಿಲ್ಲ. ಈಗ ಅನ್ನದಿಂದ ಮಾಡಿದ ಮೆತ್ತನೆಯ ಬಾಲ್ ಸಿಕ್ಕಿದ್ದು ಮಕ್ಕಳಿಗೆ ನಿಧಿ ಸಿಕ್ಕಿದ ಹಾಗಾಯಿತು. ಆದರೂ ರಜೆ ಮುಗಿದು ಶಾಲೆ ಶುರುವಾದ ಮೇಲೆ ಸಿಕ್ಕಿತಲ್ಲ ಮೊದಲೇ ಸಿಕ್ಕಿದ್ದರೆ ಅದೆಷ್ಟು ಮ್ಯಾಚುಗಳನ್ನು ಆಡಬಹುದಿತ್ತು ಎಂದು ಪರಿತಪಿಸಿದರು. ಅದರ ಜೊತೆಗೆ ತಮ್ಮ ಅಮ್ಮಂದಿರಿಗೆ ಅಕ್ಕಿಯನ್ನು ಚೆಲ್ಲದೇ ಹಾಗೆ ತೆಗೆದಿರಿಸಲು ತಾಕೀತು ಮಾಡಿದರು. ಕೆಲವು ಯುವಕರು ರೈಸ್ ಕ್ರಿಕೆಟ್ ಬಾಲ್ ತಯಾರಿಸಿ ಹೊಸ ಸ್ಟಾರ್ಟ್ ಅಪ್ ಬ್ಯುಸಿನೆಸ್ ಮಾಡುವ ಕನಸು ಕಾಣತೊಡಗಿದರು.

ಬುದ್ಧಿವಾದ

ಶಾಂತಲಾ ಕೆಲವು ಸಮಯದಿಂದ ಪೇಟೆಗೆ ಹೋದಾಗೆಲ್ಲ ಒಬ್ಬ ಮಹಿಳೆಯನ್ನು ಗಮನಿಸುತ್ತಿದ್ದರು. ಹಸುಕೂಸನ್ನು ಸೆರಗಲ್ಲಿ ಕಟ್ಟಿಕೊಂಡು ಆಕೆ ಅವರಿವರ ಬಳಿ ಭಿಕ್ಷೆ ಬೇಡುತ್ತಿದ್ದಳು. ಅದೆಷ್ಟೋ ಜನ ಅವಳನ್ನು ಕಂಡರೂ ಕಾಣದಂತೆ ಸುಮ್ಮನೆ ಹೋಗುತ್ತಿದ್ದರೂ ಆಕೆ ಅವರನ್ನು ಹಿಂಬಾಲಿಸಿಕೊಂಡು ಅಂಗಲಾಚಿ ಬೇಡಿಕೊಳ್ಳುತ್ತಿದ್ದಳು. ಶಾಂತಲಾಗೆ ಅದನ್ನು ಕಂಡು ಅಯ್ಯೋ ಪಾಪ ಎನಿಸಿ ತಾವೇ ಅವಳ ಬಳಿ ಹೋಗಿ ಹತ್ತು ರೂಪಾಯಿ ಕೊಟ್ಟು ಬರುತ್ತಿದ್ದರು. ಕೆಲವೊಮ್ಮೆ ಬೇಕರಿಯಿಂದ ಬ್ರೆಡ್ಡೋ. ಬನ್ನೋ ಹೀಗೆ ಏನಾದರೂ ಕೊಡಿಸುತ್ತಿದ್ದರು.

ಹೀಗೆ ತಿಂಗಳುಗಳು ಉರುಳಿದಂತೆ ಭಿಕ್ಷುಕಿಯ ಮಗು ಸ್ವಲ್ಪ ದೊಡ್ಡದಾದಂತೆ ಅದನ್ನು ಹೆಗಲಿಗೆ ಹಾಕಿ ಭಿಕ್ಷೆ ಬೇಡಹತ್ತಿದಳು. ಶಾಂತಲಾಗೆ ಆಕೆ ದಿನವಿಡೀ ಬಿರು ಬಿಸಲಲ್ಲಿ ಅಲೆದಾಡುತ್ತ ಮಗುವನ್ನೂ ಬಿಸಿಲಿಗೆ ಒಡ್ಡುತ್ತಾ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡಬಹುದಲ್ಲವೇ ಎನಿಸಿದರೂ ಮಗು ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ತಾನೇ ಹೋಗಬಹುದು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡರು.

ವರುಷ ಕಳೆದು ಮಗು ನಡೆದಾಡಲು ಶುರು ಮಾಡಿದ ಮೇಲೂ ಆಕೆ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ ಈಗ ಆ ಪುಟ್ಟ ಕಂದನಿಂದಲೂ ಭಿಕ್ಷೆ ಬೇಡಿಸತೊಡಗಿದಳು. ಅದನ್ನು ಕಂಡು ಶಾಂತಲಾಗೆ ಕರುಳು ಚುರುಕ್ಕೆಂದಿತು. ಸೀದಾ ಅವಳ ಬಳಿಗೆ ಹೋಗಿ, ಆ ಮಗು ಕೈಯ್ಯಲ್ಲೂ ಭಿಕ್ಷೆ ಬೇಡಿಸ್ತಿಯಲ್ಲ ನಿಂಗೆ ಮನಸ್ಸಾದರೂ ಹೇಗೆ ಬರುತ್ತದೆ. ಆಟವಾಡಿ ಸಂತೋಷವಾಗಿ ಇರಬೇಕಾದ ಕಂದನನ್ನು ಹೀಗೆ ಬಿಸಿಲಲ್ಲಿ ಅಲೆದಾಡಿಸ್ತಿಯಲ್ಲ, ನಾಚಿಕೆಯಾಗಲ್ವಾ ಎಂದು ಅವಳನ್ನು ಗದರಿಸಿದರು.

ಅಷ್ಟರಲ್ಲಿ ಆ ಪುಟ್ಟ ಕಂದ ಇವರ ಸೀರೆಯನ್ನು ಜಗ್ಗುತ್ತ ತನ್ನ ಪುಟ್ಟ ಕೈಯನ್ನು ಇವರ ಮುಂದೆ ಚಾಚಿದಾಗ ಅದರ ಮುಗ್ಧ ಮುಖ ಕಂಡು ಅಯ್ಯೋ ಪಾಪ ಎನಿಸಿ ಮನಸ್ಸು ಕರಗಿ ಅಲ್ಲೇ ಇದ್ದ ಬೇಕರಿಗೆ ಹೋಗಿ ಬಿಸ್ಕೆಟ್ ಪೊಟ್ಟಣ ಖರೀದಿಸಿ ತಂದು ಆ ಮಗುವಿನ ಕೈಯಲ್ಲಿಟ್ಟರು. ನಂತರ ಅವಳನ್ನು ನೋಡುತ್ತಾ, ನೋಡು ಹೀಗೆ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡು. ಮಗುವನ್ನು ಅಂಗನವಾಡಿಯಲ್ಲಿ ಬಿಡಬಹುದು. ಅಲ್ಲಿ ಮಗುವಿಗೆ ಮಧ್ಯಾಹ್ನದ ಊಟ ಕೊಡ್ತಾರೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀನು ನಿನ್ನ ಪಾಡಿಗೆ ಆರಾಮವಾಗಿ ಕೆಲಸ ಮಾಡಬಹುದು. ನೀನು ಭಿಕ್ಷೆ ಬೇಡಿದ್ದು ಸಾಲದು ಅಂತ ನಿನ್ನ ಮಗನೂ ಮುಂದೆ ಜೀವನ ಪೂರ್ತಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕಾ, ಅವನನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡು. ತಾಯಿಯಾದವಳು ಮಗುವಿನ ಬಾಳು ಹಸನು ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತಾಳೆ. ನೀನು ಮಾತ್ರ ನಿನ್ನ ಮಗುವಿನ ಬಾಳಿಗೆ ಶತ್ರು ಆಗಿ ಬಿಟ್ಟಿದ್ದೀಯಾ ಎಂದೆಲ್ಲ ಗದರಿಸಿದರು.

ಅಷ್ಟಕ್ಕೇ ಅವಳಿಗೆ ಸಿಟ್ಟು ಬಂದು ಶಾಂತಲಾರನ್ನು ದುರುಗುಟ್ಟಿ ನೋಡುತ್ತಾ, ಏನಮ್ಮ ಸುಮ್ನೆ ಇದ್ದೀನಂತ ಬಾಯಿಗೆ ಬಂದ ಹಾಗೆ ಮಾತಾಡ್ತೀರಾ, ಏನೋ ನಾಲ್ಕು ಕಾಸು ಕೊಟ್ಟಿದೀನಿ ಅಂತ ಜಮಾಯ್ಸೋಕೆ ಬರ್ತೀರಾ, ಅವನು ನನ್ನ ಮಗ, ನಾನು ಏನಾದ್ರೂ ಮಾಡಿಸ್ತೀನಿ, ಅದನ್ನು ಕಟ್ಕೊಂಡು ನಿನಗೇನು ಆಗ್ಬೇಕಿದೆ, ಸುಮ್ನೆ ನಿನ್ನ ಪಾಡಿಗೆ ನೀನು ಹೋಯ್ತಾ ಇರು ಎನ್ನುತ್ತಾ ಮಗು ತಿನ್ನುತ್ತಿದ್ದ ಬಿಸ್ಕೆಟ್ ಪ್ಯಾಕೆಟ್ ನ್ನು ಅದರ ಕೈಯಿಂದ ಕಿತ್ತುಕೊಂಡು ಎಸೆದಳು. ಆ ಪುಟ್ಟ ಬಾಲಕ ಅಳತೊಡಗಿದ. ಅವಳು ಅವನನ್ನು ದರದರನೆ ಎಳೆದುಕೊಂಡು ಮುಂದೆ ಸಾಗಿದಳು.

ಭಿಕ್ಷುಕಿಯ ಅಹಂಕಾರದ ಮಾತುಗಳನ್ನು ಕೇಳಿ ಶಾಂತಲಾಗೆ ಗರಬಡಿದಂತಾಯಿತು. ಯಕಃಶ್ಚಿತ್ ಭಿಕ್ಷೆ ಬೇಡುವವಳ ಬಳಿ ಉಗಿಸಿಕೊಂಡೆನಲ್ಲ. ಇಷ್ಟಕ್ಕೂ ತಾನೇ ಅವಳಿಗೆ ಅದೆಷ್ಟೋ ಬಾರಿ ಭಿಕ್ಷೆ ಕೊಟ್ಟಿದ್ದುಂಟು. ಆದರೂ ಅವಳಿಗೆ ಅದೆಷ್ಟು ಕೊಬ್ಬು. ನನಗಾದರೂ ಯಾಕೆ ಬೇಕಿತ್ತು ಅವಳ ಸಹವಾಸ. ಸುಮ್ನೆ ಅವಳ ಕೈಯ್ಯಲ್ಲಿ ಉಗಿಸಿಕೊಂಡೆನಲ್ಲ ಎಂದು ಅವರಿಗೆ ಬೇಸರವಾಯಿತು. ಈ ಕಾಲದಲ್ಲಿ ಯಾರಿಗೂ ಬುದ್ಧಿ ಹೇಳುವ ಹಾಗೆ ಇಲ್ಲ. ಅವಳು ಏನೇ ಮಾಡಿಕೊಂಡು ಸಾಯಲಿ ನನಗೇನು ಎನ್ನುತ್ತಾ ಅಪಮಾನದಿಂದ ತಲೆತಗ್ಗಿಸಿ ಅಲ್ಲಿಂದ ಹೊರಟರು.

ಮನೆಗೆ ಬಂದಾಗ ಪತಿ, ಮಕ್ಕಳು ಇವರ ಮ್ಲಾನವದನ ಕಂಡು ಏನಾಯಿತೆಂದು ಆತಂಕದಿಂದ ವಿಚಾರಿಸಿದರು. ಆದರೆ ಶಾಂತಲಾ ಭಿಕ್ಷುಕಿಗೆ ಬುದ್ಧಿ ಹೇಳಲು ಹೋಗಿ ಅವಳ ಕೈಲಿ ತಾನು ಬೈಸಿಕೊಂಡೆ ಎಂದು ಹೇಳಿದರೆ ಎಲ್ಲರೂ ತನ್ನನ್ನೇ ಗದರಿಸುವರು. ನಿನಗ್ಯಾಕೆ ಬೇಕಿತ್ತು ಅದೆಲ್ಲ. ಅವಳು ಏನಾದರೂ ಮಾಡ್ಲಿ ನಿನಗೇನು ಎಂದು ಅನ್ನಬಹುದು ಎಂದುಕೊಳ್ಳುತ್ತಾ, ಏನಿಲ್ಲ ತುಂಬಾ ಸುಸ್ತಾಗಿದೆ ಅಷ್ಟೇ ಎನ್ನುತ್ತಾ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತರು. ಅದನ್ನು ನೋಡಿ ಅವರ ಪತಿ ಇಷ್ಟೊಂದು ಸುಸ್ತಾಗುತ್ತೆ ಅಂದರೆ ಇನ್ನು ಮುಂದೆ ನಾನು ಅಥವಾ ಮಕ್ಕಳು ಸಾಮಾನು ತಂದು ಕೊಡುತ್ತೇವೆ. ನೀನು ಮನೆಯಲ್ಲೇ ಇರು ಎಂದಾಗ ಅವರಿಗೂ ಮತ್ತೆ ಆ ಭಿಕ್ಷುಕಿಯ ಮುಖ ನೋಡಲು ಮನಸ್ಸಿಲ್ಲವಾದ್ದರಿಂದ, ಹಾಗೇ ಆಗಲಿ ಎಂದರು.

ಆನಂತರ ಏನೇ ಬೇಕಿದ್ದರೂ ಮಕ್ಕಳು ಅಥವಾ ಪತಿಯೇ ತಂದು ಕೊಡಲು ಶುರು ಮಾಡಿದರು. ನಿಧಾನವಾಗಿ ಅವರು ಭಿಕ್ಷುಕಿಯಿಂದ ಆದ ಅಪಮಾನವನ್ನು ಮರೆಯತೊಡಗಿದರು. ಕೆಲವು ಸಮಯದ ನಂತರ ಅವರಿಗೆ ಬ್ಯಾಂಕಿಗೆ ಹೋಗಲೆಬೇಕಾಗಿ ಬಂದಾಗ ಆ ಭಿಕ್ಷುಕಿಯ ನೆನಪಾಗಿ ಅವಳು ಸಿಕ್ಕಿದರೆ ಅವಳತ್ತ ನೋಡಲೇ ಬಾರದೆಂದು ನಿರ್ಧರಿಸಿದರೂ ಕಣ್ಣುಗಳು ಮಾತ್ರ ಅವಳನ್ನೇ ಹುಡುಕತೊಡಗಿದವು. ಆದರೆ ಅವಳೆಲ್ಲೂ ಕಾಣಿಸಲಿಲ್ಲ. ನಿಟ್ಟುಸಿರು ಬಿಡುತ್ತ ಶಾಂತಲಾ ಬ್ಯಾಂಕಿನ ಕಡೆ ಹೆಜ್ಜೆ ಹಾಕಿದರು. ಮತ್ತೆ ಅವರು ಆ ಕಡೆ ತಲೆ ಹಾಕಲೇ ಇಲ್ಲ.

ಕೆಲಸಮಯದ ನಂತರ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುವಾಗ ಶಾಂತಲಾ, ಸುಮ್ಮನೆ ಮಕ್ಕಳಿಗೆ ತೊಂದರೆ ಯಾಕೆ ಅವರ ಸಮಯ ಯಾಕೆ ದಂಡ ಮಾಡೋದು ಅವರು ಚೆನ್ನಾಗಿ ಓದಿ ಕೊಳ್ಳಲಿ ಎಂದುಕೊಂಡು ತಾವೇ ಪೇಟೆಗೆ ಹೋಗಲು ಶುರು ಮಾಡಿದರು. ಆದರೆ ಆ ಭಿಕ್ಷುಕಿ ಅವರಿಗೆ ಮತ್ತೆಂದೂ ಕಾಣಿಸಲಿಲ್ಲ. ಅವಳಿಗೆ ಏನಾಗಿರಬಹುದು, ನಾನು ಮತ್ತೆ ಅವಳ ತಂಟೆಗೆ ಬಂದರೆ ಎಂದು ಬೇರೆ ಕಡೆ ಹೋಗಿ ಭಿಕ್ಷೆ ಬೇಡುತ್ತಿರಬಹುದೇ, ಅವಳು ಎಲ್ಲಿದ್ದಾಳೆ ಎಂದು ಇಲ್ಲಿ ಯಾರ ಬಳಿಯಾದರೂ ಕೇಳಲೇ ಅಂದುಕೊಂಡರು.

ಆದರೆ ನಾನು ಆ ಭಿಕ್ಷುಕಿ ಬಗ್ಗೆ ಯಾಕೆ ಕೇಳುತ್ತಿದ್ದೇನೆ ಎಂದು ಅವರು ಕೇಳಿದರೆ ಏನು ಹೇಳಲಿ, ಬೇಡ, ನನಗೆ ಅಷ್ಟೊಂದು ಅಪಮಾನ ಮಾಡಿದ ಅವಳ ಬಗ್ಗೆ ನನಗೇಕೆ ಇಷ್ಟೊಂದು ಕಾಳಜಿ, ಅವಳು ಎಲ್ಲೇ ಇರಲಿ, ಎಲ್ಲೇ ಹೋಗಲಿ ನನಗೇನು ಎಂದುಕೊಳ್ಳುತ್ತ ತಾವು ಖರೀದಿಸಿದ ಸಾಮಾನುಗಳನ್ನು ರಿಕ್ಷಾದಲ್ಲಿ ಹಾಕಿ ರಿಕ್ಷಾ ಹತ್ತಬೇಕು ಅನ್ನುವಷ್ಟರಲ್ಲಿ ಯಾರೋ ತನ್ನ ಕಾಲುಗಳನ್ನುಬಿಗಿಯಾಗಿ ಹಿಡಿದಂತಾಗಿ ಗಾಬರಿಯಿಂದ ಕೆಳಗೆ ನೋಡಿದಾಗ ಆ ಭಿಕ್ಷುಕಿ ! ಅರೆ ಇವಳು ತನ್ನ ಕಾಲು ಯಾಕೆ ಹಿಡೀತಾಳೆ ಅವತ್ತು ಅಷ್ಟೆಲ್ಲ ಅಂದವಳು ಎಂದು ಅವರು ಯೋಚಿಸುವಷ್ಟರಲ್ಲಿ ಅವಳು ಅಮ್ಮಾ ನನ್ನನ್ನು ಕ್ಷಮಿಸಿ ಬಿಡಮ್ಮ, ಅವತ್ತು ನಿಮಗೆ ಏನೇನೋ ಹೇಳಿಬಿಟ್ಟೆ. ನೀವು ಕ್ಷಮಿಸಿದೆ ಅನ್ನೋವರೆಗೂ ನಾನು ನಿಮ್ಮ ಕಾಲು ಬಿಡಲ್ಲ ಅನ್ನುತ್ತ ಅವರ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಳು.

ಶಾಂತಲಾ ನಿರ್ಲಿಪ್ತರಾಗಿ, ನನ್ನ ಹತ್ತಿರ ಕ್ಷಮೆ ಕೇಳೋ ಅಗತ್ಯ ಇಲ್ಲ, ನಾನ್ಯಾರು ನಿಂಗೆ ಬುದ್ಧಿ ಹೇಳೋಕೆ, ಹಾಗೆ ನೋಡಿದ್ರೆ ನಾನೇ ನಿನ್ನ ಬಳಿ ಕ್ಷಮಾಪಣೆ ಕೇಳಬೇಕು, ನಿನ್ನ ಬದುಕಿನ ಬಗ್ಗೆ ಮಾತನಾಡುವ ಹಕ್ಕಿರಲಿಲ್ಲ ನನಗೆ. ಆದರೂ ಮಾತಾಡ್ದೆ ನೋಡು ಅದಕ್ಕೆ ಎನ್ನುತ್ತಾ ತಮ್ಮ ಎರಡೂ ಕೈಗಳನ್ನು ಜೋಡಿಸಿದಾಗ ಅವಳು ಧಿಗ್ಗನೆದ್ದು ದಯವಿಟ್ಟು ಹಾಗೆಲ್ಲ ಮಾಡಬೇಡೀಮ್ಮಾ, ಅವತ್ತು ನೀವು ಹಾಗೆಲ್ಲ ಹೇಳಿದ ಮೇಲೆ ಜೋಪಡಿಗೆ ಹೋಗಿ ಹಾಗೇ ಯೋಚಿಸ್ತಾ ಕೂತ್ಕೊಂಡೆ. ಆಗ ನೀವು ಹೇಳಿದ್ದು ದಿಟ ಅಂತ ಅನ್ನಿಸ್ತು. ನನ್ನ ಬಾಳಿನ ಹಾಗೆ ಮಗನ ಬಾಳು ಹಾಳಾಗಬಾರದು. ಅವನನ್ನು ಚೆನ್ನಾಗಿ ಓದಿಸಬೇಕು ಅಂತ ಅವತ್ತೇ ನಿರ್ಧಾರ ಮಾಡ್ಕೊಂಡೆ. ಮಾರನೆ ದಿನಾನೇ ಕೂಲಿ ಕೆಲ್ಸಕ್ಕೆ ಸೇರ್ಕೊಂಡೆ. ನೀವು ಹೇಳ್ದ ಹಾಗೇ ಮಗೂನ ಅಂಗನವಾಡಿಲಿ ಬಿಟ್ಟೆ. ಈವಾಗ ನೀವು ಹೇಳ್ದ ಹಾಗೆ ನನ್ನ ಬದುಕು ಚೆನ್ನಾಗಿದೆ. ಅವತ್ತಿಂದ ನಾನು ನಿಮ್ಮ ಹತ್ರ ಕ್ಷಮೆ ಕೇಳಬೇಕು ಅಂತ ನಿಮಗೋಸ್ಕರ ಹುಡುಕಾಡಿದೆ. ಆದರೆ ನಾನು ಕೆಲಸ ಮುಗಿಸಿ ಬರೋವಾಗ ಕತ್ತಲಾಗ್ತಿತ್ತು. ಅದೂ ಅಲ್ಲದೆ ನಿಮ್ಮ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಯಾವಾಗ್ಲಾದ್ರೂ ನೀವು ನೋಡೋಕೆ ಸಿಗಬಹುದು ಅಂತ ಆಗಾಗ ಈ ಕಡೆ ಬರ್ತಾ ಇರ್ತೀನಿ. ಇವತ್ತು ಸಿಕ್ಕಿದ್ರಲ್ಲ ನನ್ನ ಪುಣ್ಯ. ನಿಮ್ಮ ಆಶೀರ್ವಾದ ನನ್ನ ಹಾಗೂ ನನ್ನ ಮೇಲಿರಲಿ ತಾಯಿ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ಎಂದು ಅವಳು ಅಂಗಲಾಚಿ ಬೇಡಿಕೊಂಡಳು.

ಶಾಂತಲಾ ಅವಳನ್ನು ಹಿಡಿದು ಮೇಲಕ್ಕೆತ್ತಿ, ಚೆನ್ನಾಗಿ ಬಾಳು. ಮಗನನ್ನು ಚೆನ್ನಾಗಿ ನೋಡ್ಕೋ ಎಂದು ಹರಸಿದರು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಂಬಾ ದೊಡ್ಡ ಮನಸ್ಸು ತಾಯಿ ನಿಮ್ಮದು ಎನ್ನುತ್ತಾ ತನ್ನ ಸೀರೆಯ ಸೆರಗಿನಿಂದ ಕಣ್ಣೊರೆಸುತ್ತ, ನಾನು ಬರ್ತೀನಿ ತಾಯಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹೇಳಿ ಹೊರಟು ಹೋದಳು. ಅಷ್ಟೂ ಹೊತ್ತು ಮೂಕ ಪ್ರೇಕ್ಷಕನಾಗಿ ನಿಂತಿದ್ದ ರಿಕ್ಷಾದವ, ಅಮ್ಮಾ ನೀವು ತುಂಬಾ ಒಳ್ಳೇ ಕೆಲಸ ಮಾಡಿದ್ರಿ ಎಂದಾಗ ಶಾಂತಲಾ ನಿಟ್ಟುಸಿರು ಬಿಟ್ಟರು.

ನಯವಂಚಕ

ಬೆಲ್ ಶಬ್ದ ಕೇಳಿ ಯಾರು ಬಂದಿರಬಹುದು ಎಂದು ನಾನು ಯೋಚಿಸುತ್ತ ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಕೈ ತೊಳೆದು ಕೊಂಡು ಟವೆಲ್ ನಿಂದ ಕೈಯೊರೆಸುತ್ತ ಬಾಗಿಲ ಬಳಿ ಬಂದೆ. ಬಾಗಿಲ ತೂತಿನಲ್ಲಿ ನೋಡಿದರೆ ಬೋಳು ತಲೆಯ ಕನ್ನಡಕಧಾರಿ ವ್ಯಕ್ತಿಯೊಬ್ಬ ಅಲ್ಲಿ ನಿಂತಿದ್ದ. ಯಾರಪ್ಪ ಇವನು ಅಂತ ಯೋಚಿಸುತ್ತಿರುವಾಗಲೇ ಆತ ಮತ್ತೊಮ್ಮೆ ಬೆಲ್ ಒತ್ತಿದ. ನಾನು ತಟ್ಟನೆ ಬಾಗಿಲು ತೆರೆದು ಏನು ಎನ್ನುವಂತೆ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದೆ. ಅವನು ನನ್ನತ್ತ ಅನುಮಾನದಿಂದ ನೋಡುತ್ತಾ, “ಕನ್ನಡ” … ಎಂದ. ನಾನು ಹೌದು ಎನ್ನುವಂತೆ ತಲೆಯಾಡಿಸಿದೆ. ಅವನ ಮುಖ ಅರಳಿ, “ಅಬ್ಬಾ, ನೀವು ನಮ್ಮವರೇ! ನನಗೆ ತುಂಬಾ ಖುಷಿಯಾಯಿತು. ನಿಮ್ಮ ಬಿಲ್ಡಿಂಗ್ ನಲ್ಲಿ ಅನ್ಯ ಭಾಷಿಗರು ಜಾಸ್ತಿ ಇದ್ದಾರಲ್ಲವೇ, ಅದಕ್ಕೆ ಹಾಗೆ ಕೇಳಿದೆ. ನಿಮ್ಮನ್ನು ನೋಡಿದ ಕೂಡಲೇ ತಿಳಿಯಿತು, ನೀವು ನಮ್ಮವರೆಂದು. ಆದರೂ ಕೇಳಬೇಕಲ್ಲವೇ” ಎಂದು ನನ್ನ ಪ್ರತ್ಯುತ್ತರಕ್ಕೆ ಕಾದ.

ನಾನು, “ಅದು ಸರಿ, ನೀವು ಯಾರೂಂತ ನನಗೆ ಗೊತ್ತಾಗಲಿಲ್ಲ … ” ಎಂದು ಮಾತು ಮುಂದುವರೆಸುವಷ್ಟರಲ್ಲಿ ಆತ ತನ್ನ ಬ್ಯಾಗಿನಿಂದ ಪ್ಲಾಸ್ಟಿಕ್ ಚೀಲವೊಂದನ್ನು ಹೊರತೆಗೆದ. ಅದರ ಜೊತೆ ಮಾವಿನ ಹಣ್ಣಿನ ಪರಿಮಳ ನನ್ನ ಮೂಗಿಗೆ ಬಡಿಯಿತು. ಆ ಆಹ್ಲಾದಕರ ಪರಿಮಳವನ್ನು ಮೂಗರಳಿಸಿ ಆಘ್ರಾಣಿಸುತ್ತ, ಮಾವಿನ ಹಣ್ಣೇ! ಆಹಾ! ಇದು ನನ್ನ ಅತ್ಯಂತ ಪ್ರೀತಿಯ ಹಣ್ಣು. ಆದರೆ ಇವನೇಕೆ ನನಗೆ ಕೊಡುತ್ತಿದ್ದಾನೆ. ನಾನು ತೆಗೆದುಕೊಳ್ಳಬೇಕೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಅವನು, “ಮೇಡಂ, ನೋಡಿ ಒಳ್ಳೆ ರಸ್ಪೂರಿ ಮಾವಿನ ಹಣ್ಣು. ಎಷ್ಟು ಸಿಹಿಯಾಗಿದೆ ಅಂದರೆ ಅಮೃತ.. ಅಮೃತ, ಒಂದು ತಿಂದು ನೋಡಿ. ಆಮೇಲೆ ನಂಗೆ ದಿನಾ ತರೋಕೆ ಹೇಳ್ತೀರಿ. ನಿಮ್ಮ ಮಕ್ಕಳಿಗೂ ತುಂಬಾ ಇಷ್ಟವಾಗಬಹುದು” ಎಂದೆಲ್ಲ ಅದರ ಗುಣಗಾನ ಆರಂಭಿಸಿದ.

ನಾನು ನಗುತ್ತ, “ನನಗೆ ಮಾವಿನ ಹಣ್ಣೆಂದರೆ ಬಹಳ ಇಷ್ಟ” ಎಂದೆ. ಅವನ ಮುಖ ಊರಗಲವಾಗಿ,”ಹೌದೇನು, ತೊಗೊಳ್ಳಿ ಮೇಡಮ್, ನಿಮಗಾಗಿಯೇ ತಂದಿದ್ದೇನೆ” ಎನ್ನುತ್ತಾ ನನ್ನ ಕೈಗೆ ಪ್ಲಾಸ್ಟಿಕ್ ಚೀಲವನ್ನು ರವಾನಿಸಿದ. ನಾನು ಚೀಲದಲ್ಲಿದ್ದ ಹಣ್ಣುಗಳನ್ನು ಪರೀಕ್ಷಿಸುತ್ತಿರುವಾಗಲೇ ಅವನು, ಇನ್ನೂರು ರೂಪಾಯಿ ಕೊಡಿ ಮೇಡಂ, ಒಂದು ಕೆಜಿ ಇದೆ ಎಂದಾಗ ನಾನು, ಓಹ್ ಇವನು ಮಾರಲು ಬಂದಿದ್ದಾನೆ ಅಂತ ಅಂದುಕೊಂಡೆ. ಅದರ ಜೊತೆ ರೇಟು ಕೇಳಿ ಕರೆಂಟು ಹೊಡೆದ ಹಾಗಾಯಿತು, “ಏನು? ಇನ್ನೂರು ರೂಪಾಯಿನಾ? ನಾನು ಮೊನ್ನೆ ನೂರು ರೂಪಾಯಿಗೆ ಒಂದು ಕೆಜಿ ತೊಗೊಂಡು ಬಂದಿದ್ದೇನೆ” ಎಂದು ನಾನೆಂದಾಗ, ಅವನು , “ಅಯ್ಯೋ ಮೇಡಂ, ಅವರೆಲ್ಲ ನಿಮಗೆ ರಸಪೂರಿ ಅಂತ ಸುಳ್ಳು ಹೇಳಿ ಮೋಸ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೆಲ್ಲ ಈ ಹಣ್ಣು ಸಿಗೋದೇ ಇಲ್ಲ. ಹಣ್ಣುಗಳ ಸೈಜ್ ನೋಡಿ ಮೇಡಮ್” ಎಂದ. ಆದರೆ ನಾನು, ಇನ್ನೂರು ರೂಪಾಯಿ ಹೆಚ್ಚಾಯಿತು ಎನ್ನುತ್ತಾ ಅವನ ಕೈಗೆ ಪ್ಲಾಸ್ಟಿಕ್ ಚೀಲ ಕೊಡಲು ಹೋದೆ, ಅವನು ತೆಗೆದುಕೊಳ್ಳಲಿಲ್ಲ. “ನಿಮಗೆ ಅಂತ ಕಡಿಮೆಗೆ ಕೊಡ್ತಿದ್ದೀನಿ. ಇಲ್ಲಿ ಬೇರೆಯವರಿಗೆಲ್ಲ ಇನ್ನೂರಕ್ಕೆ ಕೊಟ್ಟೆ. ನೀವು ನೂರ ಎಂಭತ್ತು ಕೊಡಿ, ನೀವು ನಮ್ಮವರೇ ಅಲ್ವ” ಅಂದ.

ನನಗೆ ಅದರ ತೂಕದ ಮೇಲೆ ಸಂಶಯವಾಗಿ, “ಇರಿ, ಒಂದು ನಿಮಿಷ, ಒಂದು ಕೆಜಿ ಇದೆಯೋ ಇಲ್ಲವೋ ಅಂತ ನೋಡ್ತೀನಿ” ಅಂತ ಅನ್ನುತ್ತ ಒಳಗೆ ಹೋದೆ. ಸ್ಕೇಲ್ ಮೇಲೆ ಇಟ್ಟು ನೋಡಿದರೆ ಕಾಲು ಕೆಜಿಯಷ್ಟು ಕಡಿಮೆ ಬಂದಿತು. ಅಬ್ಬಾ ಇವನು ಮೋಸ ಮಾಡುತ್ತಿದ್ದಾನೆ, ತೂಕದಲ್ಲೂ ಮೋಸ, ಜೊತೆಗೆ ದುಪ್ಪಟ್ಟು ರೇಟು ಬೇರೆ. ನನಗೇನು ಗ್ರಹಚಾರವೇ ಇದನ್ನು ಕೊಳ್ಳಲು ಎಂದುಕೊಳ್ಳುತ್ತ ಹೊರಗೆ ಬಂದು ಅವನಿಗೆ, “ನನಗೆ ಬೇಡ, ತೂಕ ಬೇರೆ ಕಡಿಮೆ ಇದೆ” ಎಂದೆ. ಅವನು, “ಇಲ್ಲ ಮೇಡಂ ತೂಕ ಸರಿಯಾಗಿಯೇ ಇದೆ. ನಾನು ತೂಕ ಮಾಡಿಯೇ ತಂದಿದ್ದು, ನಿಮ್ಮ ಸ್ಕೇಲ್ ಸರಿ ಇಲ್ಲವೇನೋ” ಎಂದಾಗ ನನಗೆ ರೇಗಿ ಹೋದರೂ ಅವನ ಜೊತೆ ವಾಗ್ವಾದ ಮಾಡಲು ಮನಸ್ಸಿಲ್ಲದೆ, ಏನೇ ಇರಲಿ ದುಪ್ಪಟ್ಟು ದುಡ್ಡು ಕೊಟ್ಟು ಮಾವಿನ ಹಣ್ಣು ಕೊಳ್ಳುವ ಗ್ರಹಚಾರ ನನಗೆ ಬಂದಿಲ್ಲ, ಬೇಡ ಎಂದೆ.

ಆಗಲೂ ಅವನು ಚೀಲ ತೆಗೆದುಕೊಳ್ಳಲಿಲ್ಲ. ನಾನು ಚೀಲವನ್ನು ಅಲ್ಲೇ ನೆಲದ ಮೇಲಿಟ್ಟು ಬಾಗಿಲು ಹಾಕಲು ಹೋದೆ. ತಟ್ಟನೆ ಅವನು, “ಮೇಡಂ ಪ್ಲೀಸ್, ಹಣ್ಣು ತೊಗೊಳ್ಳಿ, ನೀವು ಹಣ್ಣು ತೆಗೆದುಕೊಳ್ಳದಿದ್ದರೆ ನಾನು, ಹೆಂಡತಿ, ಮಕ್ಕಳು ಉಪವಾಸ ಬೀಳಬೇಕಾಗುತ್ತದೆ” ಎನ್ನುತ್ತಿದ್ದಂತೆ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಬೇರೆಯವರಿಗೆಲ್ಲ ಹಣ್ಣು ಮಾರಿ ಬಂದಿದ್ದೇನೆ ಎಂದವ ಈಗ ಹೀಗೆ ಮಾತನಾಡುತ್ತಾನೆ ಛೆ, ಯಾಕೆ ಬೇಕಿತ್ತು ನನಗೆ ಇವನ ಸಹವಾಸ, ಮನೆಕೆಲಸ ಬೇರೆ ಬಾಕಿ ಇದೆ ಎಂದು ಕಿರಿಕಿರಿಯಾಗಿ ಅವನನ್ನೊಮ್ಮೆ ಸಾಗ ಹಾಕುವ ಉದ್ದೇಶದಿಂದ, ಮತ್ತೆ ಎಷ್ಟಕ್ಕೆ ಕೊಡ್ತೀಯಾ ಎಂದು ಕೇಳಿದೆ. ನೂರೈವತ್ತು ಕೊಡಿ ಮೇಡಂ, ತೂಕ ಕಡಿಮೆ ಇದೆ ಅಂದ್ರಲ್ಲ ನಾಳೆ ಇಷ್ಟೇ ದೊಡ್ಡ ಎರಡು ಹಣ್ಣುಗಳನ್ನು ತಂದು ಕೊಡುತ್ತೇನೆ ನಿಮಗೆ ಎಂದು ಅಂಗಲಾಚಿದ.

ನನ್ನ ಮನಸ್ಸು ಕರಗಿ, ಹೋಗಲಿ ಯಾವ್ಯಾವುದಕ್ಕೋ ಖರ್ಚು ಮಾಡ್ತೀವಿ, ಹಾಗೆ ಹೋಯಿತು ಎಂದುಕೊಂಡರಾಯಿತು. ಅಲ್ಲದೆ ನಾಳೆ ಹಣ್ಣು ತಂದುಕೊಡುತ್ತಾನೆ ಎಂದನಲ್ಲ, ಮತ್ಯಾಕೆ ಚಿಂತೆ ಎಂದುಕೊಳ್ಳುತ್ತ ಒಳಗೆ ಹೋಗಿ ಪರ್ಸ್ ನಿಂದ ನೂರೈವತ್ತು ರೂಪಾಯಿ ತಂದುಕೊಟ್ಟು ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಕೈಗೆತ್ತಿಕೊಂಡೆ. ಅವನು ನಾನು ಕೊಟ್ಟ ದುಡ್ಡನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಸಂತಸದಿಂದ, ನಾಳೆ ಬರ್ತೀನಿ ಮೇಡಂ ಎಂದು ಹೇಳಿ ಹೊರಟು ಹೋದ.

ನಾನು ಒಳಗೆ ಬಂದು ನನ್ನ ಕೆಲಸದಲ್ಲಿ ಮುಳುಗಿದೆ. ಮಧ್ಯಾಹ್ನ ಗಂಡ ಮಕ್ಕಳು ಊಟಕ್ಕೆ ಮನೆಗೆ ಬಂದಾಗ ಮಾವಿನ ಹಣ್ಣಿನ ನೆನಪಾಗಿ ಹಣ್ಣುಗಳನ್ನು ತೊಳೆದು ಹೋಳುಗಳನ್ನಾಗಿ ಮಾಡಿ ಒಂದು ತಟ್ಟೆಯಲ್ಲಿಟ್ಟು ಟೇಬಲ್ ಮೇಲಿಟ್ಟೆ. ಮಕ್ಕಳು, ವಾವ್! ಮಾವಿನ ಹಣ್ಣು ಎನ್ನುತ್ತಾ ಒಂದೊಂದು ಹೋಳುಗಳನ್ನು ಕೈಗೆತ್ತಿಕೊಂಡರು. ಇವರು ಊಟ ಮಾಡುವುದರಲ್ಲೇ ಮಗ್ನರಾಗಿದ್ದರು. ಮಕ್ಕಳು, “ಮಮ್ಮಿ ಹಣ್ಣು ಭಾರಿ ರುಚಿಯಾಗಿದೆ” ಎಂದಾಗ ನನಗೆ ನೂರೈವತ್ತು ಕೊಟ್ಟೆನಲ್ಲ ಎಂದು ಇದ್ದ ಅಸಮಾಧಾನ ಹೊರಟು ಹೋಯಿತು. ಜೊತೆಗೆ ಸಂತಸವಾಗಿ ನಾನೂ ಒಂದು ಹೋಳನ್ನು ಕೈಗೆತ್ತಿಕೊಂಡೆ, ಇವರಿಗೂ ಕೊಟ್ಟೆ. ಅವನು ಹೇಳಿದಂತೆ ಹಣ್ಣು ಮಾತ್ರ ಬಹಳ ರುಚಿಯಾಗಿತ್ತು. ಇವರೂ ತಿಂದು, ಹಣ್ಣು ಅದ್ಭುತವಾಗಿದೆ ಎಲ್ಲಿ ತೊಗೊಂಡೆ ಎಂದಾಗ ನಾನು ಹಣ್ಣು ಮಾರಲು ಬಂದಿದ್ದ ವಿಷಯ ಹೇಳಿದೆ.

ನೂರೈವತ್ತು ರೂಪಾಯಿ ಕೊಟ್ಟೆ ಎಂದಾಗ ಇವರು ಹುಬ್ಬೇರಿಸಿದರು. “ಇದೇನೂ ಸೀಸನ್ ನ ಮೊದಲ ಹಣ್ಣಲ್ಲ, ಅಷ್ಟೊಂದು ದುಬಾರಿ ರೇಟು ಕೊಟ್ಟು ಕೊಂಡುಕೊಳ್ಳೋಕೆ. ಯಾಕೆ ತೊಗೊಂಡೆ ನೀನು” ಎಂದು ಇವರು ಆಕ್ಷೇಪಿಸಿದಾಗ ನಾಳೆ ಎರಡು ಹಣ್ಣು ಫ್ರೀಯಾಗಿ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ ಎಂದಾಗ, “ಹೌದು ಹೌದು, ಕಾಯ್ತಾ ಇರು, ಆದ್ರೆ ಅವನು ಮಾತ್ರ ಬರಲ್ಲ, ನಿಮ್ಮಂಥ ಮುಗ್ಧ ಹೆಂಗಸರಿಗೆ ಮೋಸ ಮಾಡೋದು ಅದೆಷ್ಟು ಸುಲಭ, ಸ್ವಲ್ಪ ಕಣ್ಣೀರು ಹಾಕಿದ್ರೆ ಇದ್ದುದೆಲ್ಲ ಕೊಟ್ಟು ಬಿಡ್ತೀರಿ” ಎಂದು ಇವರು ರೇಗಿದಾಗ ನನಗೆ, ನಾನು ನಿಜವಾಗಿಯೂ ಮೋಸ ಹೋದೆನೇ, ಛೆ ಆ ಮನುಷ್ಯ ನೋಡಿದರೆ ಒಳ್ಳೆಯವನ ಹಾಗೆ ಕಾಣುತ್ತಾನೆ ಎಂದುಕೊಳ್ಳುತ್ತಿದ್ದಂತೆ ಮರುಕ್ಷಣ ನನ್ನ ಒಳಮನಸ್ಸು ಅವನು ದುಪ್ಪಟ್ಟು ದರ ಹೇಳಿಲ್ಲವೇ ಅದರ ಜೊತೆ ತೂಕದಲ್ಲೂ ಮೋಸ ಮಾಡಿದ್ದಾನೆ ಅಂದ ಮೇಲೆ ಅವನು ಒಳ್ಳೆಯವನಿರಲು ಹೇಗೆ ಸಾಧ್ಯ. ಹಾಗಿದ್ದರೆ ಮೊಸಳೆ ಕಣ್ಣೀರು ಹಾಕಿಕೊಂಡು ಮಹಿಳೆಯರಿಗೆಲ್ಲ ಮೋಸ ಮಾಡಿ ಹೋಗುವ ಮೋಸಗಾರನೇ, ಆದರೆ ಅವನು ನಾಳೆ ಬರುತ್ತೇನೆ ಎಂದಿದ್ದಾನಲ್ಲವೇ ನೋಡೋಣ ಎಂದುಕೊಳ್ಳುತ್ತ, ಯಾವುದಕ್ಕೂ ನಾಳೆ ನೋಡೋಣ ಎಂದೆ. ಇವರು ಸುಮ್ಮನಾದರು.

ಮಾರನೆಯ ದಿನ ಹಣ್ಣು ಮಾರುವವನಿಗಾಗಿ ಕಾಯುತ್ತ ಕುಳಿತೆ. ಸಂಜೆಯಾದರೂ ಆತನ ಪತ್ತೆಯಿಲ್ಲ. ನನಗೆ ತೀವ್ರ ನಿರಾಸೆಯಾಯಿತು. ಇವರು ಹೇಳಿದ್ದು ನಿಜವಾಯಿತಲ್ಲ ಛೆ, ನನ್ನನ್ನು ಮಾತಿನಿಂದ ಮರುಳು ಮಾಡಿ ಮೋಸ ಮಾಡಿಬಿಟ್ಟನಲ್ಲ, ಇನ್ನು ಬಂದರೆ ಅವನು ಎಷ್ಟೇ ಬೇಡಿಕೊಂಡರೂ ಅವನ ಬಳಿ ಹಣ್ಣುಗಳನ್ನು ಕೊಳ್ಳುವುದಿಲ್ಲ ಎಂದು ಸಿಟ್ಟಿನಲ್ಲೇ ಶಪಥ ಮಾಡಿದೆ. ಇವರು ಮನೆಗೆ ಬಂದಮೇಲೆ, ಹಣ್ಣು ತಂದುಕೊಟ್ಟನೇ ಎಂದು ಕೇಳ ಹೊರಟವರು ನನ್ನ ಸಪ್ಪೆ ಮುಖ ಕಂಡು ಸುಮ್ಮನಾದರು. ಇವತ್ತಲ್ಲ ನಾಳೆ ಬಂದಾನು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದರೆ ಅವನು ಬರಲೇ ಇಲ್ಲ.

ಆಗ ನನಗೆ ಅವನು ಮೋಸ ಮಾಡಿದ್ದರ ಬಗ್ಗೆ ಕಿಂಚಿತ್ತೂ ಸಂಶಯ ಉಳಿಯಲಿಲ್ಲ. ನನಗೆ ಬಹಳ ಬೇಸರವಾಯಿತು, ಇಂಥಾ ಮೋಸಗಾರರು ಇರುವುದರಿಂದಲೇ ಜನರಿಗೆ ಬೇರೆಯವರನ್ನು ನಂಬುವುದು ಕಷ್ಟವಾಗುವುದು, ತಾವೆಲ್ಲಿ ಮೋಸ ಹೋಗುತ್ತೇವೋ ಎಂಬ ಅನುಮಾನದಿಂದ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಜನ ಸಹಾಯ ಮಾಡಲು ಹಿಂದೇಟು ಹಾಕುವುದು. ಇನ್ನು ಯಾರೇ ಕಣ್ಣೀರು ಹಾಕಿದರೂ ನಾನು ಸಹಾಯ ಮಾಡಲು ಹೋಗುವುದಿಲ್ಲ ಎಂದು ನಾನು ಶಪಥ ಮಾಡಿಕೊಂಡೆ. ನಾನು ಮೋಸ ಹೋಗಿದ್ದು ನನಗೆ ತೀವ್ರ ಮುಜುಗರ ತಂದಿತ್ತು.

ವಾರದ ಬಳಿಕ ಹಣ್ಣಿನವ ನಮ್ಮ ಮನೆಯ ಎದುರು ಮನೆಗೆ ಬಂದು ಬೆಲ್ ಮಾಡಿದ. ಅದನ್ನು ಕಿಟಕಿಯಿಂದ ನೋಡಿದ ನನಗೆ ಅವನು ನಮ್ಮ ಮನೆಗೆ ಬಂದು ಹಣ್ಣು ಕೊಡಬಹುದು. ಇಷ್ಟು ದಿನ ಬರದೇ ಇರಲು ಏನಾದರೂ ಬಲವಾದ ಕಾರಣವಿರಬಹುದು. ಅವನಿಗೆ ಹುಷಾರಿರಲಿಲ್ಲವೇನೋ ಎಂದುಕೊಳ್ಳುತ್ತಿದ್ದಂತೆ ಮತ್ತೆ ಆಸೆ ಚಿಗುರಿತು. ನಾನು ನನ್ನ ಕೆಲಸದಲ್ಲಿ ಮಗ್ನಳಾಗಿ ಬಿಟ್ಟೆ. ಸುಮಾರು ಹೊತ್ತಾದ ಮೇಲೆ ಅವನ ನೆನಪಾಗಿ ಕಿಟಕಿಯಿಂದ ಹೊರ ನೋಡಿದೆ. ಅಲ್ಲಿ ಅವನಿರಲಿಲ್ಲ. ಓಹ್! ಅವನು ನಿಜವಾಗಿಯೂ ಮೋಸಗಾರನೇ ಎಂದುಕೊಳ್ಳುತ್ತಿದ್ದಂತೆ ನಿರುತ್ಸಾಹ ಮೂಡಿತು. ನಮಗೆ ಹಣ್ಣು ಕೊಡಲಿಕ್ಕಿದೆ ಎಂದು ಅವನಿಗೆ ಚೆನ್ನಾಗಿ ನೆನಪಿತ್ತು. ಅದಕ್ಕೇ ನಮ್ಮ ಮನೆಗೆ ಬರಲಿಲ್ಲ. ಇನ್ನು ಬರಲಿ, ಬಾಗಿಲೇ ತೆರೆಯುವುದಿಲ್ಲ ಎಂದು ನಿರ್ಧಾರ ಮಾಡಿಕೊಂಡೆ. ಆದರೆ ಆಮೇಲೆ ಅವನ ಪತ್ತೆಯೇ ಇಲ್ಲ.

ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ನಮ್ಮ ಮನೆಯ ಡೋರ್ ಬೆಲ್ ಬಾರಿಸಿತು. ಯಾರೆಂದು ಬಾಗಿಲ ತೂತಿನಿಂದ ನೋಡಿದಾಗ ನನಗೆ ಅಚ್ಚರಿಯಾಯಿತು. ಅಲ್ಲಿ ಹಣ್ಣಿನವ ನಿಂತಿದ್ದ! ನಾನು ನಮಗೆ ಕೊಡಬೇಕಾದ ಹಣ್ಣುಗಳ ಬಗ್ಗೆ ಕೇಳಲೇ ಅಥವಾ ಅವನೇ ಹಣ್ಣು ಕೊಡಲು ಬಂದಿರಬಹುದೇ ಎಂದು ತುಡಿತವುಂಟಾಗಿ ಬಾಗಿಲು ತೆರೆದೆ. ನನ್ನನ್ನು ಹೊಸದಾಗಿ ನೋಡುವವನಂತೆ ನೋಡುತ್ತಾ ಕನ್ನಡ ಎಂದು ಪ್ರಶ್ನಾರ್ಥಕವಾಗಿ ನೋಡಿದಾಗ ನನಗೆ ಅವನ ಮೇಲೆ ಜಿಗುಪ್ಸೆ ಉಂಟಾಯಿತು. ಛೆ, ಎಷ್ಟು ನಾಟಕ ಮಾಡ್ತಿದ್ದಾನೆ. ಇನ್ನು ನಾನು ಹಣ್ಣುಗಳ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲದವನಂತೆ ನಟಿಸಬಹುದು, ಇವನ ಬಳಿ ತನಗೇನು ಕೆಲಸ ಎಂದುಕೊಳ್ಳುತ್ತ ನಾನು ಅಲ್ಲವೆನ್ನುವಂತೆ ತಲೆಯಾಡಿಸಿ ಬಾಗಿಲು ಹಾಕಿಬಿಟ್ಟೆ.

ಅವನು ಹೊರಗೆ ನಿಂತು ಹಿಂದಿಯಲ್ಲಿ, ಅರೆಬರೆ ಇಂಗ್ಲಿಷ್ನಲ್ಲಿ, ತಾನು ತಂದ ಹಣ್ಣುಗಳ ವರ್ಣನೆ ಮಾಡುತ್ತಲೇ ಇದ್ದ. ನಾನು ಮಾತ್ರ ಮುಚ್ಚಿದ ಬಾಗಿಲನ್ನು ಮತ್ತೆ ತೆರೆಯಲೇ ಇಲ್ಲ. ಸ್ವಲ್ಪ ಹೊತ್ತು ಅಲ್ಲೆ ನಿಂತಿದ್ದವ ನಂತರ ಹೊರಟು ಹೋದ. ಮಾರನೆಯ ದಿನ ಮತ್ತೆ ಬಂದ. ಆದರೆ ನನಗೆ, ಬಂದ್ದಿದ್ದು ಅವನು ಎಂದು ತಿಳಿದು ಬಾಗಿಲು ತೆರೆಯಲಿಲ್ಲ. ಎಂಥಾ ಮೋಸಗಾರರಿದ್ದಾರೆ ಈ ಜಗತ್ತಿನಲ್ಲಿ, ಇನ್ಯಾರನ್ನೂ ನಂಬಬಾರದು ಎಂದು ನಾನು ದೃಢವಾಗಿ ನಿಶ್ಚಯಿಸಿದೆ.

ವಾರದ ನಂತರ ಮತ್ತೆ ಬಂದು ಬೆಲ್ ಮಾಡಿದ. ಆದರೂ ನಾನು ಬಾಗಿಲು ತೆರೆಯಲಿಲ್ಲ. ಆದರೂ ಅವನು ಎದುರು ಮನೆಗೆ ಬಂದಾಗಲೆಲ್ಲ ನಮ್ಮ ಮನೆಯ ಬೆಲ್ ಬಾರಿಸುವುದು ಮಾತ್ರ ಬಿಡಲಿಲ್ಲ. ಒಂದು ದಿನ ನಾನು ಎದುರು ಮನೆಯವರ ಬಳಿ ಆತನ ವಿಷಯ ಹೇಳಿದೆ. ಅವರು, “ಅದೊಂದು ಕಿರಿಕ್ ಪಾರ್ಟಿ, ಮೇಲಿಂದ ಮೇಲೆ ಬೆಲ್ ಬಾರಿಸ್ತಾನೆ ಅಂತ ಬಾಗ್ಲು ತೆರಿಯೋದು. ಬಾಗಿಲು ತೆರೆದ್ರೆ ತೊಗೊಳ್ಳೊವರೆಗೂ ಬಿಡೋದೇ ಇಲ್ಲ. ನಮಗೂ ಮೋಸ ಮಾಡಿದ್ದಾನೆ ಅದಕ್ಕೇ ತೊಗೊಳ್ಳಲ್ಲ, ಆದ್ರೂ ಬರ್ತಾನೆ ಇರ್ತಾನೆ. ಬರಬೇಡಾ ಅಂತ ಎಷ್ಟೇ ಹೇಳಿದರೂ ಕೇಳಲ್ಲ. ಒಂದು ದಿನ ಬೇಜಾರಾಗಿ ಅವನೇ ಬರೋದನ್ನ ನಿಲ್ಲಿಸಿ ಬಿಡ್ತಾನೆ” ಎಂದರು. ಆಗ ನನಗೆ, ಮೋಸ ಹೋಗಿದ್ದು ನಾನೊಬ್ಬಳೇ ಅಲ್ಲ ಅಂತ ತಿಳಿದು ಸಮಾಧಾನವಾಯಿತು.

ಆ ಘಟನೆ ನಡೆದು ಒಂದು ವರುಷವಾದರೂ ಅವನು ನಮ್ಮ ಮನೆಗೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ನಾನು ಬಾಗಿಲು ತೆರೆದರೆ ನನಗೆ ಮತ್ತೊಮ್ಮೆ ಮೋಸ ಮಾಡೋಣ ಎನ್ನುವ ಆಸೆಯಿಂದಲೋ ಅಥವಾ ನಾವಿದ್ದ ಮನೆಗೆ ಬೇರೆಯವರು ಬಂದಿದ್ದರೆ ಅವರಿಗೆ ಮೋಸ ಮಾಡೋಣವೆಂಬ ಉದ್ದೇಶದಿಂದಲೋ ಅಂತೂ ಬೆಲ್ ಬಾರಿಸುವುದನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ಆಗೋ, ಡೋರ್ ಬೆಲ್ ಬಾರಿಸಿತು. ಅವನೇ ಬಂದನೇನೋ !?

ಕನಸೋ ? ವಾಸ್ತವವೋ ?

ಗಾಢ ನಿದ್ದೆಯಲ್ಲಿದ್ದ ಹೇಮಂತನಿಗೆ ಮಕ್ಕಳ ರೂಮಿನಲ್ಲಿ ಏನೋ ಧೊಪ್ಪನೆ ಬಿದ್ದ ಸದ್ದಿನಿಂದ ಎಚ್ಚರವಾಯಿತು. ಏನದು ಶಬ್ದ ? ಮನೆಯಲ್ಲಿ ತನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಹೆಂಡತಿ, ಮಕ್ಕಳ ಜೊತೆ ತವರು ಮನೆಗೆ ಹೋಗಿದ್ದಾಳೆ. ಹಾಗಾದರೆ ಕಳ್ಳ ಬಂದಿರಬಹುದೇ ಎಂದು ಅವನಿಗೆ ಆತಂಕ ಶುರುವಾಯಿತು. ಎದ್ದು ಹೋಗಿ ನೋಡಲೂ ಅವನಿಗೆ ಭಯವಾಯಿತು. ಕಳ್ಳನ ಬಳಿ ಚಾಕು ಚೂರಿ ಅಥವಾ ಗನ್ ಇದ್ದರೆ ಸುಮ್ಮನೆ ಜೀವಕ್ಕೆ ಅಪಾಯ ತಂದುಕೊಂಡಂತೆ ಆಗುತ್ತದೆ. ಆದರೆ ಕಳ್ಳ ಏನಾದರೂ ಹೊತ್ತುಕೊಂಡು ಹೋದರೆ ಎಂದೂ ಆತಂಕವಾಯಿತು. ಚಿನ್ನ ಒಡವೆ ಇರುವ ಕಪಾಟು ತನ್ನ ರೂಮಿನಲ್ಲೇ ಇದೆಯಾದರೂ ದೇವರ ಕೋಣೆಯಲ್ಲಿ ಬೆಳ್ಳಿ ವಿಗ್ರಹಗಳು, ದೀಪಗಳೆಲ್ಲ ಇದೆಯಲ್ಲ ಎಂದುಕೊಳ್ಳುತ್ತಾ ಮೆಲ್ಲನೆದ್ದ. ಲೈಟು ಹಾಕಲೂ ಅವನಿಗೆ ಭಯವಾಯಿತು. ತನ್ನ ಫೋನಿನ ಬೆಳಕಿನಲ್ಲಿ ಮೆಲ್ಲನೆ ಹೆಜ್ಜೆಯಿಡುತ್ತ ಮಕ್ಕಳ ರೂಮಿನತ್ತ ನಡೆದ. 

ಮಕ್ಕಳ ರೂಮಿನ ಬಾಗಿಲು ಅರೆ ತೆರೆದಿತ್ತು. ಅರೆ! ನಾನು ರಾತ್ರಿ ಮಲಗುವ ಮುನ್ನ ರೂಮಿನ ಬಾಗಿಲು ಹಾಕಿದ್ದೆನಲ್ಲ, ಈಗ ತೆರೆದಿದೆ ಅಂದರೆ ಖಂಡಿತವಾಗಿಯೂ ಕಳ್ಳ ಬಂದಿದ್ದಾನೆ ಅಂತಾಯ್ತು. ಈಗ ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಅವನ ಫೋನಿಗೆ ಯಾವುದೋ ಹೊಸ ನಂಬರಿನಿಂದ ಕರೆ ಬಂದಿತು. ಹೇಮಂತನಿಗೆ ಅಚ್ಚರಿಯಾಯಿತು. ರಾತ್ರಿ ಎರಡುವರೆ ಕಳೆದಿದೆ. ಇಷ್ಟೊತ್ತಿನಲ್ಲಿ ತನಗೆ ಫೋನ್ ಮಾಡುತ್ತಿರುವವರು ಯಾರು, ತನ್ನ ಹೆಂಡತಿ ಇರಬಹುದೇ, ಎಂದುಕೊಂಡ. ಆದರೆ ಮರುಕ್ಷಣ ಅವಳು ಅವಳ ಫೋನ್ ಬಿಟ್ಟು ಯಾಕೆ ಬೇರೆ ನಂಬರ್ ನಿಂದ ಕಾಲ್ ಮಾಡುತ್ತಾಳೆ ಎಂದು ಅನಿಸಿದರೂ ಯಾರೆಂದು ನೋಡಲು ಕುತೂಹಲವಾಗಿ ಅವನು ಫೋನ್ ಎತ್ತಿ ಹಲೋ ಎಂದ.
ಅತ್ತ ಕಡೆಯಿಂದ ವಿಕೃತವಾದ ನಗು ಕೇಳಿಸಿ ಹೇಮಂತ ಬೆಚ್ಚಿ ಬಿದ್ದ. ಅದರ ಜೊತೆ ಗೊಗ್ಗರು ಧ್ವನಿಯಲ್ಲಿ ಹಲೋ ಎಂದು ಕೇಳಿಸಿತು. ಅದರ ಜೊತೆಯಲ್ಲೇ ಮತ್ತೆ ವಿಕಟ ನಗೆ, ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಅವನ ಕೈಕಾಲುಗಳು ಗಡಗಡ ನಡುಗಲು ಆರಂಭಿಸಿದವು.

ಅಷ್ಟರಲ್ಲಿ ಅವನ ಮುಂದೆ ಆಕೃತಿಯೊಂದು ಹಾದು ಹೋದಂತಾಯಿತು. ಹೇಮಂತನಿಗೆ ಪ್ರಜ್ಞೆ ತಪ್ಪುವುದೊಂದೇ ಬಾಕಿ. ಗಾಬರಿಯಿಂದ ಅವನ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದು ಬ್ಯಾಟರಿ ಎಲ್ಲ ಹೊರಬಂದಿತು. ಅವನಿಗೆ ಅದನ್ನು ಎತ್ತಿಕೊಳ್ಳಲೂ ಭಯವಾಗಿ ಅಲ್ಲಿಂದ ಒಂದೇ ಉಸಿರಿನಲ್ಲಿ ತನ್ನ ರೂಮಿಗೆ ಓಡಿ ಹೋಗಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡ. ಅವನ ಎದೆ ನಗಾರಿಯಂತೆ ಬಡಿಯುತ್ತಿತ್ತು. ತಾನು ನೋಡಿದ್ದು ದೆವ್ವವನ್ನೇ ಅಥವಾ ಕಳ್ಳನನ್ನೇ ಎಂದು ಅವನಿಗೆ ಗೊಂದಲವಾಯಿತು. ಅದರ ಜೊತೆಗೆ ಫೋನ್ ನಲ್ಲಿ ಮಾತನಾಡಿದವರ್ಯಾರು, ಅದು ಮನುಷ್ಯರ ಸ್ವರದಂತಿರಲಿಲ್ಲವಲ್ಲ, ಅಬ್ಬ ಅದೆಷ್ಟು ಕ್ರೂರತೆ ಆ ಧ್ವನಿಯಲ್ಲಿ, ಅದು ದೆವ್ವವಾಗಿರಬಹುದೇ ಎಂದು ಮನಸ್ಸಿಗೆ ಬಂದಾಗ ಚಳಿ ಬಂದವರಂತೆ ಮತ್ತಷ್ಟು ಗಡಗಡ ನಡುಗತೊಡಗಿದ.

ಈಗ ನೋಡಿದ್ದು ದೆವ್ವವೇ ಇರಬಹುದೇ, ಹೇಗೆ ತಾನು ದೆವ್ವದಿಂದ ತಪ್ಪಿಸಿ ಕೊಳ್ಳಲಿ. ತಾನು ಎದ್ದು ಬಂದಿದ್ದು ಅದಕ್ಕೆ ತಿಳಿದಿದೆ ಎಂದು ನನಗೆ ತಿಳಿಸಲು ಫೋನ್ ಮಾಡಿತೇ, ಅದು ಇಲ್ಲಿಗೆ ಬಂದಿದ್ದಾದರೂ ಏಕೆ, ಈಗ ಅದು ತನ್ನ ರೂಮಿಗೆ ಬಂದು ಬಿಟ್ಟರೆ ಏನು ಮಾಡುವುದು, ದೆವ್ವಗಳಿಗೆ ಬಾಗಿಲು ಕಿಟಕಿ ಯಾವುದೂ ತಡೆಯಾಗುವುದಿಲ್ಲ ಎಂದು ಸಿನಿಮಾಗಳಲ್ಲಿ ನೋಡಿದ ನೆನಪು. ಹಾಗೆ ಅದು ಬಂದರೆ ತಾನು ಏನು ಮಾಡಲಿ ಎಂದುಕೊಳ್ಳುತ್ತಿದ್ದಂತೆ ಮತ್ತಷ್ಟು ಭಯವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ಹನುಮಾನ್ ಚಾಲಿಸಾ ಪಠಿಸಲು ಶುರು ಮಾಡಿದ. ಆದರೂ ಅವನ ಭಯ ಮಾತ್ರ ಸ್ವಲ್ಪ ಕೂಡ ಕಡಿಮೆಯಾಗಲಿಲ್ಲ. ತಾನು ಕಣ್ಣು ಮುಚ್ಚಿಕೊಂಡರೆ ದೆವ್ವ ಬಂದರೆ ತನಗೆ ತಿಳಿಯುವುದಾದರೂ ಹೇಗೆ ಎಂದು ಮತ್ತಷ್ಟು ಭಯವಾಗಿ ಕಣ್ಣು ತೆರೆಯುತ್ತಿದ್ದಂತೆ ಅವನ ಮುಂದೆ ವಿಕಾರವಾದ ಆಕೃತಿಯೊಂದು ನಿಂತಂತೆ ಭಾಸವಾಗಿ ಅವನು ಅಲ್ಲೇ ಪ್ರಜ್ಞೆ ತಪ್ಪಿ ನೆಲದಲ್ಲಿ ಬಿದ್ದ.

ಬೆಳಗ್ಗೆ ಹೇಮಂತನಿಗೆ ಎಚ್ಚರವಾದಾಗ ರಾತ್ರಿ ನಡೆದ ಘಟನೆ ನೆನಪಾಗಿ ಧಿಗ್ಗನೆದ್ದು ಕುಳಿತ. ಅರೆ, ತಾನು ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಮಂಚದ ಮೇಲೆ ಹೇಗೆ ಬಂದೆ.ಅಂದರೆ ತಾನು ನೋಡಿದ್ದು ಕನಸಿರಬಹುದೇ ಎಂದುಕೊಳ್ಳುತ್ತಿದ್ದಂತೆ ಅವನ ಗಮನ ಬಾಗಿಲಿನತ್ತ ಹರಿಯಿತು. ಅರೆ! ತನ್ನ ರೂಮಿನ ಬಾಗಿಲಿಗೆ ಬೋಲ್ಟ್ ಹಾಕಿದೆ ಅಂದರೆ ದೆವ್ವ ಬಂದಿದ್ದು ಕನಸಿನಲ್ಲಿ ಅಲ್ಲ ನಿಜವಾಗಿಯೂ ಬಂದಿತ್ತು! ತಾನು ಮಲಗುವ ಮುಂಚೆ ಬಾಗಿಲು ತೆರೆದೇ ಇಟ್ಟಿದ್ದೆ. ಮನೆಗೆ ಯಾರಾದರೂ ನುಗ್ಗಿದರೆ ಗೊತ್ತಾಗಲಿ ಎಂದು ಬಾಗಿಲು ಹಾಕಿರಲಿಲ್ಲ. ಈಗ ನೋಡಿದರೆ ಬೋಲ್ಟ್ ಹಾಕಿದೆ, ಅದು ನಾನು ರಾತ್ರಿ ದೆವ್ವದಿಂದ ತಪ್ಪಿಸಿಕೊಂಡು ರೂಮಿಗೆ ಬಂದ ಮೇಲೆ ಹಾಕಿದ್ದು ಎಂದುಕೊಳ್ಳುತ್ತಿದ್ದಂತೆ ಮತ್ತೆ ಅವನಿಗೆ ಭಯವಾಯಿತು.

ದೆವ್ವ ಈಗಲೂ ಇಲ್ಲೇ ಇರಬಹುದೇ ಎಂದು ಅವನಿಗೆ ಆತಂಕವಾಯಿತು. ತಾನು ನೋಡಿದ ಹಾರರ್ ಸಿನಿಮಾಗಳಲ್ಲಿ ದೆವ್ವಗಳು ರಾತ್ರಿ ಹೊತ್ತು ಮಾತ್ರವೇ ಅಡ್ಡಾಡುತ್ತವೆ. ಅಂದರೆ ಈಗ ದೆವ್ವ ಇರಲಿಕ್ಕಿಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತ ಮೆಲ್ಲನೆ ತನ್ನ ರೂಮಿನ ಬಾಗಿಲು ತೆರೆದು ಬಗ್ಗಿ ಅತ್ತಿತ್ತ ನೋಡಿದ. ಎಲ್ಲೂ ಏನೂ ಕಾಣಿಸದಾಗ ಅವನಿಗೆ ತನ್ನ ಫೋನ್ ಮಕ್ಕಳ ರೂಮಿನ ಹೊರಗೆ ಬಿದ್ದಿದ್ದು ನೆನಪಾಗಿ ಬಾಗಿಲು ತೆರೆದು ಅದನ್ನು ನೋಡಲು ಓಡಿದ. ಆದರೆ ಅಲ್ಲಿ ಅವನ ಫೋನ್ ಇರಲಿಲ್ಲ! ಅವನಿಗೆ ಆಶ್ಚರ್ಯವಾಗಿ ಫೋನ್ ಗಾಗಿ ಎಲ್ಲ ಕಡೆ ಹುಡುಕಲು ಶುರು ಮಾಡಿದ. ಆದರೆ ಅಲ್ಲೆಲ್ಲೂ ಅವನ ಫೋನ್ ಕಾಣಿಸಲಿಲ್ಲ.

ರಾತ್ರಿ ಬಂದ ದೆವ್ವ ತನ್ನ ಫೋನ್ ಕದ್ದೊಯ್ಯಿತೆ ಎಂದು ಅಂದುಕೊಂಡ. ಆದರೆ ಮರುಕ್ಷಣವೇ ತನ್ನ ಮೂರ್ಖತನಕ್ಕೆ ಅವನಿಗೆ ನಗು ಬಂದಿತು. ದೆವ್ವಗಳಿಗೆ ಫೋನ್ ಯಾತಕ್ಕೆ ಬೇಕು, ಛೆ, ತಾನು ಮೂರ್ಖನಂತೆ ಯೋಚಿಸುತ್ತಿದ್ದೇನೆ ಎಂದು ಅವನಿಗೆ ಅರಿವಾದರೂ ನೆಲದ ಮೇಲೆ ಬಿದ್ದ ಫೋನ್ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಮಾತ್ರ ಅವನಿಗೆ ಉತ್ತರ ದೊರಕಲಿಲ್ಲ. ಕೊನೆಗೆ ವಾಪಾಸು ತನ್ನ ರೂಮಿಗೆ ಬಂದ. ಬೆಡ್ ನ ಪಕ್ಕದ ಕಾರ್ನರ್ ಟೇಬಲ್ ಮೇಲೆ ತನ್ನ ಫೋನ್ ಇದ್ದಿದ್ದು ಕಂಡು ಅವನಿಗೆ ಮತ್ತಷ್ಟು ಆಶ್ಚರ್ಯವಾಯಿತು. ನನ್ನ ಫೋನ್ ಇಲ್ಲಿ ಬಂದಿದ್ದಾದರೂ ಹೇಗೆ, ದೆವ್ವ ತನ್ನ ಫೋನ್ ಬ್ಯಾಟರಿ ಎಲ್ಲ ಹಾಕಿ ಇಲ್ಲಿ ತಂದು ಬಿಟ್ಟಿತೆ ಎಂದುಕೊಳ್ಳುತ್ತಿರುವಷ್ಟರಲ್ಲಿ ಅವನಿಗೆ ಮತ್ತೆ ತಾನು ಮೂರ್ಖನಂತೆ ಯೋಚಿಸುತ್ತಿದ್ದೇನೆ ಎಂದು ಅನಿಸತೊಡಗಿತು.

ಆದರೆ ದೆವ್ವವಲ್ಲದೆ ಬೇರೆ ಇನ್ನಾರು ಇದ್ದರು ಈ ಮನೆಯಲ್ಲಿ? ಏನಾಗುತ್ತಿದೆ ಇದೆಲ್ಲ? ಛೆ! ಹೆಂಡತಿ ಮಕ್ಕಳನ್ನು ಯಾಕಾದರೂ ಕಳುಹಿಸಿದೇನೋ ಅವರೆಲ್ಲ ಇದ್ದಿದ್ದರೆ ದೆವ್ವ ಬರುತ್ತಿರಲಿಲ್ಲವೇನೋ ಅಂದುಕೊಂಡಾಗ ಅವನಿಗೆ, ದೆವ್ವಕ್ಕೆ ತನ್ನ ಮೇಲೆ ಏನಾದರೂ ಸಿಟ್ಟಿದ್ದು ಅದನ್ನು ತೀರಿಸಲೆಂದು ಹೆಂಡತಿ ಮಕ್ಕಳಿಲ್ಲದ ಸಮಯದಲ್ಲಿ ಬಂದಿರಬಹುದೇ ಎಂದು ಯೋಚನೆ ಬರುತ್ತಿದ್ದಂತೆ ಜೀವ ಝಲ್ಲೆಂದಿತು. ಅವನ ಎದೆ ಮತ್ತ ನಗಾರಿಯಂತೆ ಹೊಡೆದುಕೊಳ್ಳಲು ಶುರುವಾಯಿತು. ಆಗ ಅವನಿಗೆ ತನ್ನ ಫೋನ್ ಗೆ ರಾತ್ರಿ ಹೊತ್ತು ಕಾಲ್ ಬಂದ ನೆನಪಾಗಿ ನಿಜವಾಗಿಯೂ ದೆವ್ವ ಬಂದಿದ್ದರೆ ಅದರ ಫೋನ್ ಕಾಲ್ ನಿಂದ ತಿಳಿಯುತ್ತದೆ ಎಂದುಕೊಂಡು ಅವನು ಫೋನ್ ಕೈಗೆತ್ತಿಕೊಂಡು ನೋಡಿದಾಗ ಫೋನ್ ನಿರ್ಜೀವವಾಗಿತ್ತು. ಛೆ! ಇದೂ ಈಗಲೇ ಕೈ ಕೊಡಬೇಕೇ ಎಂದುಕೊಳ್ಳುತ್ತ ಅವನು ಅತುರಾತುರದಿಂದ ಅದನ್ನು ಚಾರ್ಜರ್ ಗೆ ಸಿಕ್ಕಿಸಿ ಫೋನ್ ಚಾರ್ಜ್ ಮಾಡಲು ಇಟ್ಟ. ಸ್ವಲ್ಪ ಚಾರ್ಜ್ ಆಗಲಿ ಆಮೇಲೆ ನೋಡಿದರಾಯಿತು, ಅದುವರೆಗೂ ಬಾತ್ ರೂಮಿಗೆ ಹೋಗಿ ಬರುತ್ತೇನೆ ಎಂದು ಹೊರಟ.

ಅವನು ಹಲ್ಲುಜ್ಜುತ್ತಿದ್ದಂತೆ ಡಬ್ ಎಂದು ಜೋರಾಗಿ ಶಬ್ದ ಕೇಳಿಸಿತು. ಹೇಮಂತನಿಗೆ ದೆವ್ವ ಮತ್ತೆ ಬಂದು ಬಿಟ್ಟಿತೆ ಎಂದು ಭಯವಾಯಿತು. ಅವನಿಗೆ ಏನು ಮಾಡವುದೆಂದು ಎಂದು ತೋಚಲಿಲ್ಲ. ದೇವರೇ ನನಗೆ ಯಾಕೆ ಇಂಥಾ ಶಿಕ್ಷೆ ಕೊಡುತ್ತಿದ್ದಿಯಾ, ನಾನು ಯಾರಿಗೂ ಏನೂ ಅನ್ಯಾಯ ಮಾಡಿಲ್ಲ. ಈ ದೆವ್ವ ನನ್ನನ್ನು ಯಾಕೆ ಹೀಗೆ ಕಾಡುತ್ತಿದೆ. ದಯವಿಟ್ಟು ನನ್ನನ್ನು ಈ ದೆವ್ವದಿಂದ ಪಾರು ಮಾಡು ಎಂದು ದೇವರಲ್ಲಿ ಕಳಕಳಿಯಿಂದ ಮನವಿ ಮಾಡಿದ. ನಂತರ ಮೆಲ್ಲನೆ ಬಾತ್ ರೂಮಿನ ಬಾಗಿಲು ತೆರೆದು ಹೊರಬಂದ. ಶಬ್ದವಾಗಿದ್ದು ಏನು ಎಂದು ಸುತ್ತಲೂ ನೋಡುವಾಗ ಅವನ ಮೂಗಿಗೆ ಸುಟ್ಟ ವಾಸನೆ ಬಡಿಯಿತು.

ಅವನ ಗಮನ ಫೋನ್ ನತ್ತ ಹರಿದು ಅದನ್ನು ನೋಡಿ ಬೆಚ್ಚಿ ಬಿದ್ದ. ಚಾರ್ಜ್ ಗೆ ಇಟ್ಟ ಫೋನ್ ಸುಟ್ಟು ಹೋಗಿ ಹೊಗೆ ಏಳುತ್ತಿತ್ತು ! ಅಯ್ಯೋ ದೇವರೇ, ಇದು ದೆವ್ವದ ಕೆಲಸವಾಗಿರಬಹುದೇ, ಹಾಗಿದ್ದರೆ ದೆವ್ವ ನಿಜವಾಗಿಯೂ ಬಂದಿತ್ತೆ ನಿನ್ನೆ, ತಾನು ಕಂಡಿದ್ದು ಕನಸೇ ಅಲ್ಲ.. ನಿಜವೇ ಆಗಿರಬಹುದೇ, ಅಥವಾ ರಾತ್ರಿ ಹೊತ್ತು ತಾನೇ ಎದ್ದು ರೂಮಿನ ಬೋಲ್ಟ್ ಹಾಕಿರಬಹುದೇ, ನಿದ್ದೆಯ ಅಮಲಿನಲ್ಲಿ ಅದು ತನಗೆ ಮರೆತು ಹೋಯಿತೇ, ಹಾಗಿದ್ದರೆ ಫೋನ್ ಸುಟ್ಟಿದ್ದಾದರೂ ಹೇಗೆ ಎಂದು ಹಲವು ಪ್ರಶ್ನೆಗಳು ಅವನ ತಲೆ ತಿನ್ನತೊಡಗಿದವು. ಆದರೆ ವಾಸ್ತವ ಏನೆಂದು ತಿಳಿಯಲು ಫೋನ್ ನಲ್ಲಿ ಇದ್ದ ಒಂದು ಸುಳಿವು ಕೂಡ ಫೋನ್ ಜೊತೆಗೆ ಸುಟ್ಟುಹೋಯಿತಲ್ಲ. ಈಗ ನಿಜವೇನೆಂದು ತಿಳಿಯುವ ಬಗೆಯಾದರೂ ಹೇಗೆ ಎಂದು ಅವನ ತಲೆ ಗೊಂದಲದ ಗೂಡಾಯಿತು.