ಅಭಿಮಾನಿ
ಉಪ್ಪಿಟ್ಟು ಎಂದರೆ ರೇಗಾಡುತ್ತಿದ್ದವ ಉಪ್ಪಿ-2 ರಿಲೀಸ್ ಆದ ದಿನ ಮಾತ್ರ ಭರ್ಜರಿಯಾಗಿ ಬಾರಿಸಿದ.
ವ್ಯತ್ಯಾಸ
ಟೈಲರ್ ತನ್ನ ಮಶೀನಿಗೆ ಯಾವಾಗಲೂ ಎಣ್ಣೆ ಹಾಕುತ್ತಿದ್ದ. ಅದರ ಜೊತೆ ತಾನೂ ‘ಎಣ್ಣೆ ‘ ಹಾಕಿಕೊಳ್ಳುತ್ತಿದ್ದ.
ಎಣ್ಣೆ ಕುಡಿದ ಮಶೀನು ಚೈತನ್ಯಗೊಂಡರೆ ಟೈಲರ್ ಮಾತ್ರ ಚೈತನ್ಯವಿಲ್ಲದೆ ಬಿದ್ದಿದ್ದ !
ಬಂಪರ್
ಕೋಳಿ ಫಾರಂನವನಿಗೆ ಆ ದಿನ ಭರ್ಜರಿ ಮೊಟ್ಟೆಗಳು ಬರೀ ಫಾರಂ ನಲ್ಲಿ ಮಾತ್ರ ಅಲ್ಲ
ಮಕ್ಕಳ ಶಾಲಾ ರಿಪೋರ್ಟ್ ಕಾರ್ಡ್ ಗಳಲ್ಲೂ ಬರೀ ಮೊಟ್ಟೆಗಳೇ !!
ತುಡಿತ
ಹೊಸದಾಗಿ ಕ್ಷೌರ ಮಾಡಲು ಕಲಿತವನಿಗೆ ಮಧ್ಯರಾತ್ರಿಯಲ್ಲಿ ಕ್ಷೌರ ಮಾಡುವ ತುಡಿತ.
ಸರಿ, ಕತ್ತರಿ ಹಿಡಿದು ಶುರು ಹಚ್ಚಿಕೊಂಡ. ಹೆಂಡತಿ ಮಕ್ಕಳು ಬೆಳಗೆದ್ದು ನೋಡುವಾಗ
ಕ್ಷೌರಿಕನ ತಲೆಯಲ್ಲಿ ಸೊಂಪಾದ ಕೂದಲಿದ್ದರೆ ಉಳಿದವರ ತಲೆ ಬೋಳು ಬೋಳು !!
ವಿಪರ್ಯಾಸ
ದಿನವೂ ಪಿರಿಪಿರಿ ಮಾಡುತ್ತಿದ್ದ ಹೆಂಡತಿಯ ಕಿರಿಕಿರಿ ಸಹಿಸಲಾಗದೆ ಗಂಡ ಅವಳು ಸಾಯುವುದನ್ನೇ ಕಾಯುತ್ತಿದ್ದ.
ಅವಳು ಸತ್ತ ಮೇಲೆ ಮನೆಯಲ್ಲಿನ ನೀರವತೆ ಸಹಿಸಲಾಗದೆ ನೇಣು ಬಿಗಿದುಕೊಂಡು ಸತ್ತ!
ಸಿಗರೇಟಿನ ಪ್ರತೀಕಾರ
ಹುಲ್ಲಿನ ಬಣವೆ ಮೇಲೆ ಕುಳಿತು ಸಿಗರೇಟು ಸೇದುತ್ತಿದವನಿಗೆ ನಿದ್ದೆ ಬಂದು ಸಿಗರೇಟು ಕೆಳಗೆ ಬಿತ್ತು.
ಮೊದಲು ಅವನು ಸಿಗರೇಟು ಸುಟ್ಟ. ಆಮೇಲೆ ಸಿಗರೇಟು ಅವನನ್ನು ಸುಟ್ಟಿತು.
ವಿಪರ್ಯಾಸ
ಕಾಲೇಜು ತುಂಬಾ ಡ್ರಗ್ಸ್ ಹಾವಳಿ
ಹುಡುಗ ಹುಡುಗಿಯರೆಲ್ಲ ಅದಕ್ಕೆ ಬಲಿ
ಚಟಕ್ಕೆ ಬಿದ್ದವರಿಗೆ ಭ್ರಮಾಲೋಕದ ಪ್ರಭಾವಳಿ
ನೊಂದ ಹೆತ್ತವರ ಕಳಕಳಿ.
ಗರ್ಲ್ ಫ್ರೆಂಡ್
ಒಬ್ಬ ಹುಡುಗಿಯೂ ಸಿಗದೇ ಪರದಾಡುತ್ತಿದ್ದ ಹುಡುಗನಿಗೆ
ಮೋಡಿ ಮಾಡಿತು ಬಸ್ಟಾಪಿನಲ್ಲಿ ನಿಂತಿದ್ದ ಚೆಂದುಳ್ಳಿ ಚೆಲುವೆಯ ನಗೆ
ಬಂಪರ್ ಹೊಡೆಯಿತು ಎಂದುಕೊಂಡು ಸನಿಹ ಧಾವಿಸಿದವನಿಗೆ
ಅರಿವಾಯಿತು ಆಕೆ ಅವಳಲ್ಲ, ಅವರು ಎಂದು!
ಗ್ರಹಣ ಗ್ರಹಚಾರ
ಒಂದೆಡೆ ಗ್ರಹಣ ಕಾಲದಲಿ ಭುಜಿಸುವ ವಿಚಾರವಾದಿಗಳು
ಗ್ರಹಣ ನಿರುಕಿಸುವ ಕುತೂಹಲಿಗಳು
ಗ್ರಹಣ ವಿಸ್ಮಯ ಎನುತಿರುವ ವಿಜ್ಞಾನಿಗಳು
ಇನ್ನೊಂದೆಡೆ ಮೌಢ್ಯದಿ
ಮಕ್ಕಳನ್ನೇ ಹೂತ ಹೆತ್ತವರು
ಖಾಲಿ ಓಡುತ್ತಿರುವ ಬಸ್ಸುಗಳು, ಬಿಕೋ ಎನ್ನುತ್ತಿರುವ ರಸ್ತೆಗಳು
ದೇವರನ್ನೇ ಬಂಧಿಸಿದ ಪೂಜಾರಿಗಳು
ರಸ್ತೆ ಕಾಂಕ್ರಿಟೀಕರಣ
ಮನೆ ಒಳಗೆ ಕೂರಂಗಿಲ್ಲ
ಹೊರ ಬರೋ ಹಂಗಿಲ್ಲ
ಧೂಳು, ಟ್ರಾಫಿಕ್ಕು, ಗಜ
ಗಾತ್ರದ ಮಶೀನುಗಳ
ನಡುವೆ ನುಗ್ಗಿ ಕ್ಷೇಮವಾಗಿ
ಬರೋನೇ ಪರಮ ವೀರ!
ಪರಿಸ್ಥಿತಿ
ಗಗನಕ್ಕೇರುತ್ತಿದೆ ಈರುಳ್ಳಿ, ತರಕಾರಿ ರೇಟು
ಬೀಳುತ್ತಿವೆ ಜನಸಾಮಾನ್ಯನ ಕಿಸೆಗೆ ಗೀಟು
ಕೊಳ್ಳಲಾಗದೆ ಸೋತು ನೆಲಕ್ಕೊರಗುತ್ತಿವೆ
ಬಡ ಜೀವಗಳು
ಅಟ್ಟಹಾಸ ಮೆರೆಯುತ್ತಿವೆ ಮಧ್ಯವರ್ತಿ ಕುಳಗಳು.