ಭಾಗ – 3


ಆ ಘಟನೆ ನಡೆದ ಕೆಲವು ದಿನಗಳ ಬಳಿಕ, ರಾತ್ರಿ ಎಂಟರ ಸಮಯ. ಬಸ್ಸು ಜನರಿಂದ ಗಿಜಿಗುಡುತ್ತಿತ್ತು. ಬಸ್ಸು ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಬಂದಿತ್ತು. ಹೆಂಗಸರ ಮಧ್ಯೆ ನಿಂತಿದ್ದ ಚೂಡಿದಾರ್ ಧರಿಸಿದ ಹುಡುಗಿಯೊಬ್ಬಳ ದೇಹ ಇದ್ದಕ್ಕಿದ್ದಂತೆ ಊದಿಕೊಂಡು ಆಕೆ ಅಮ್ಮಾ ಎನ್ನುತ್ತಾ ನೆಲಕ್ಕೆ ಬಿದ್ದಳು. ಅವಳ ಬಾಯಿಂದ ಜೊಲ್ಲು ಸುರಿಯುತ್ತಿತ್ತು. ಅವಳ ಮೈಯೆಲ್ಲಾ ಕೆಂಪಗಾಗಿತ್ತು. ಸಹಪ್ರಯಾಣಿಕರೆಲ್ಲ ನಿರ್ವಾಹಕನನ್ನು ಕರೆದು ಹುಡುಗಿ ಬಿದ್ದಿರುವ ವಿಷಯ ಹೇಳಿದರು. ಬಸ್ಸಿನ ನಿರ್ವಾಹಕ ಗಾಬರಿಗೊಂಡು ಬಸ್ಸನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿ ಆಂಬುಲೆನ್ಸ್ ಗೆ ಕರೆ ಮಾಡಿ ಪೊಲೀಸರಿಗೂ ತಿಳಿಸಿದ. ಸಹ ಪ್ರಯಾಣಿಕರೆಲ್ಲ ಗಾಬರಿಯಾಗಿ ಪೊಲೀಸರು ತಮ್ಮನ್ನು ವಿಚಾರಿಸಿದರೆ ಎಂದು ಭಯ ಪಟ್ಟು ಕೆಲವರು ಬಸ್ಸಿನಿಂದ ಇಳಿದು ಬೇರೆ ಬಸ್ಸು ಹತ್ತಿದರು. ಪೊಲೀಸರು ಬಂದು ಆ ಹುಡುಗಿಯನ್ನು ನೋಡಿ ಬಾಯಿಂದ ಜೊಲ್ಲು ಬಂದಿರುವುದನ್ನು ಕಂಡು ಇವಳಿಗೆ ಮೂರ್ಛೆ ರೋಗ ವಿರಬಹುದೇ ಅಥವಾ ವಿಷವೇನಾದರೂ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರಬಹುದೇ ಎಂದು ಅನುಮಾನ ಪಟ್ಟರು. ಅವಳ ನಾಡಿ ಬಡಿತ ಕ್ಷೀಣವಾಗಿತ್ತು. ಅವಳು ಬದುಕುಳಿಯುವುದು ಅನುಮಾನವಾಗಿ ಬಿಟ್ಟಿತು.

ಅಷ್ಟರಲ್ಲಿ ಆಂಬುಲೆನ್ಸ್ ಬಂದು ಆ ಹುಡುಗಿಯನ್ನು ಆಸ್ಪತ್ರೆಗೆ ಕರೆದೊಯ್ದರು ಜೊತೆಗೆ ಪೊಲೀಸರೂ ಹೋದರು. ಆಸ್ಪತ್ರೆಯಲ್ಲಿ ಆಕೆಯ ಫೋನ್ ನಿಂದ ಅವಳ ಮನೆಯವರಿಗೆ ಪೊಲೀಸರು ಫೋನ್ ಮಾಡಿದರು. ಆ ಹುಡುಗಿಯ ಮನೆಯವರು ತಮ್ಮ ಮಗಳಿಗೆ ಇದ್ದಕ್ಕಿದ್ದಂತೆ ಏನಾಯಿತು ಬೆಳಿಗ್ಗೆ ಮನೆಯಿಂದ ಹೊರಟಾಗ ಸರಿಯಾಗೇ ಇದ್ದಳಲ್ಲ ಎಂದು ಕಳವಳಗೊಂಡು ಆಸ್ಪತ್ರೆಗೆ ಧಾವಿಸಿದರು. ಡಾಕ್ಟರ್ ಆ ಹುಡುಗಿಯನ್ನು ಪರೀಕ್ಷಿಸಿದಾಗ ಅವಳ ನಾಡಿ ಬಡಿತ ಅದಾಗಲೇ ತನ್ನ ಕೆಲಸವನ್ನು ನಿಲ್ಲಿಸಿ ಬಿಟ್ಟಿತ್ತು. ಅವಳ ಮೈಯೆಲ್ಲಾ ವಿಪರೀತವಾಗಿ ಊದಿಕೊಂಡದ್ದು ನೋಡಿ ಡಾಕ್ಟರ್ ಅವಳ ಬಟ್ಟೆ ಸರಿಸಿ ನೋಡಿದಾಗ ಅಲ್ಲಿ ಚೇಳು ಹರಿದಾಡುತ್ತಿರುವುದನ್ನು ಗಮನಿಸಿ ಡಾಕ್ಟರ್ ಆಕೆಗೆ ಚೇಳಿನ ಕಡಿತದಿಂದ ತೀವ್ರ ಅಲರ್ಜಿ ಉಂಟಾಗಿದ್ದು ಅದರಿಂದಾಗಿಯೇ ಅವಳ ಸಾವು ಸಂಭವಿಸಿದೆ ಎಂದು ಘೋಷಿಸಿದರು. ಇದನ್ನು ಕೇಳಿ ಪೊಲೀಸರು ಬೆಚ್ಚಿ ಬಿದ್ದರು. ಅವಳ ಮನೆಯವರಿಗೆ ಆಶ್ಚರ್ಯ ವಾಯಿತು. ಚೇಳು ಅವಳ ಬಟ್ಟೆಯಲ್ಲಿ ಬಂದಿದ್ದಾದರೂ ಹೇಗೆ ಎಂದು ಹೌಹಾರಿದರು. ಪೊಲೀಸರಿಗೆ ಆ ಹುಡುಗಿಯ ಸಾವು ಚೇಳು ಕಡಿತದಿಂದ ಆಗಿದ್ದು ಎಂದು ಕೇಳಿದಾಗ ಅವರಿಗೆ ಆಶ್ಚರ್ಯವಾಯಿತು. ಜೊತೆಗೆ ಕೆಲದಿನಗಳ ಹಿಂದೆ ಯುವತಿಯೊಬ್ಬಳು ಹೀಗೆ ಚೇಳು ಕಡಿತದಿಂದ ಸಾವನ್ನಪ್ಪಿದ್ದು ನೆನಪಿಗೆ ಬಂದು ಅವರಿಗೆ ಇದು ಆಕಸ್ಮಿಕ ಸಾವಲ್ಲದೆ ಕೊಲೆಯಾಗಿರಬಹುದೇ ಎಂದು ಸಂಶಯದ ಹುಳು ಅವರ ತಲೆಯನ್ನು ಕೊರೆಯತೊಡಗಿತು.

ಆ ಹುಡುಗಿ ಕಾಲೇಜಿನಲ್ಲಿ ಓದುತ್ತಿದ್ದಳಾದ್ದರಿಂದ ವಿಷಯ ಕಾಲೇಜು ತುಂಬಾ ಹರಡಿ ಮಾಧ್ಯಮಗಳಲ್ಲಿ ಕೂಡ ಪ್ರಸಾರವಾಗತೊಡಗಿತು. ಮಾಧ್ಯಮದವರು ಈ ಹುಡುಗಿಗಿಂತ ಮೊದಲು ಇನ್ನೊಬ್ಬ ಯುವತಿಯೂ ಹೀಗೆ ಚೇಳಿನ ಕಡಿತದಿಂದ ಸಾವನ್ನಪ್ಪಿದ ವಿಷಯ ಕಂಡುಕೊಂಡು ಆ ಬಗ್ಗೆ ಮಾಧ್ಯಮಗಳಲ್ಲಿ ಜನರ ಗಮನ ಸೆಳೆದು ಚೇಳುಗಳು ಬರುವುದಾದರೂ ಎಲ್ಲಿಂದ, ಅದೂ ಇಬ್ಬರೂ ಬಸ್ಸಿನಲ್ಲಿ ಬರುತ್ತಿರುವಾಗಲೇ ಚೇಳಿನ ಕಡಿತದಿಂದ ಸಾವನ್ನಪ್ಪಬೇಕಾದರೆ ಬಸ್ಸಿನಲ್ಲಿ ಅವರ ಮೇಲೆ ಚೇಳು ಬಿದ್ದುದಾದರೂ ಎಲ್ಲಿಂದ, ಈ ಸಾವು ಆಕಸ್ಮಿಕವಲ್ಲದೆ ಕೊಲೆ ಇರಬಹುದೇ ಅಥವಾ ಕಾಕತಾಳೀಯವೇ ಎರಡೂ ಘಟನೆಗಳು ಕತ್ತಲಾದ ಮೇಲೆಯೇ ನಡೆದಿದ್ದೀಕೆ ಎಂಬ ಪ್ರಶ್ನೆಗಳನ್ನು ಜನರ ಮುಂದಿಟ್ಟು ಸಂಶಯವನ್ನು ಜನರ ಮನಸ್ಸಿನಲ್ಲಿ ಹುಟ್ಟು ಹಾಕಿದರು. ಈ ಘಟನೆಯಿಂದಾಗಿ ಹೆಣ್ಣುಮಕ್ಕಳು, ಅವರ ಪೋಷಕರು ಆತಂಕಗೊಂಡು ರಾತ್ರಿ ಹೊತ್ತು ಬಸ್ಸಿನಲ್ಲಿ ಪ್ರಯಾಣಿಸಲು ಹಿಂದೇಟು ಹಾಕತೊಡಗಿದರು.

ಇತ್ತ ಪೊಲೀಸರು, ಯಾರಾದರೂ ದ್ವೇಷದಿಂದ ಇದನ್ನು ಮಾಡುತ್ತಿರಬಹುದೇ ಅಥವಾ ಅವರು ನಿಜವಾಗಿಯೂ ಆಕಸ್ಮಿಕವಾಗಿ ಚೇಳಿನಿಂದ ಸತ್ತರೆ, ಕೆಲವು ಜಾತಿಯ ಚೇಳುಗಳನ್ನು ಬಿಟ್ಟರೆ ಸಾಮಾನ್ಯವಾಗಿ ಚೇಳು ಕಡಿದರೆ ಮನುಷ್ಯ ಸಾಯುವುದಿಲ್ಲ. ಆದರೆ ಅಂತಹ ಕಾರ್ಕೋಟಕ ವಿಷದ ಚೇಳುಗಳು ನಮ್ಮ ಪರಿಸರದಲ್ಲಿ ಸಧ್ಯಕ್ಕಂತೂ ಕಾಣಸಿಗುವುದಿಲ್ಲ.ಅಥವಾ ಆ ಹೆಣ್ಣು ಮಕ್ಕಳಿಬ್ಬರಿಗೂ ಕಾಕತಾಳೀಯವಾಗಿ ಅದರ ವಿಷ ಅಲರ್ಜಿಯಾಗಿದ್ದುದರಿಂದ ಸಾವನ್ನಪ್ಪಿದರೆ ಎಂಬ ಸಂದೇಹ ಪೋಲೀಸರನ್ನು ಕಾಡತೊಡಗಿತು. ಮಾಧ್ಯಮದವರು ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಅದರ ವಿವರ ಮಾಧ್ಯಮದ ಮೂಲಕ ಜನರನ್ನು ತಲುಪುವಂತೆ ಮಾಡಿ ಜನರ ಆತಂಕವನ್ನು ಕಡಿಮೆ ಮಾಡಬೇಕು ಎಂದು ಪೋಲೀಸರನ್ನು ಒತ್ತಾಯಿಸಿದರು.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಬಿಸಿ ಬಿಸಿ ಚರ್ಚೆಗಳು ನಡೆದರೂ ದಿನಗಳು ಕಳೆದಂತೆ ತಣ್ಣಗಾಗುತ್ತ ಬಂದಿತು ಅದಕ್ಕೆ ಕಾರಣವೂ ಇತ್ತು ಆ ಘಟನೆಯ ನಂತರ ಹಲವು ದಿನಗಳಾದರೂ ಅಂತಹ ಘಟನೆಗಳು ಆಮೇಲೆ ಘಟಿಸದೆ ಇದ್ದಾಗ ಜನರೆಲ್ಲ ಆ ಹೆಣ್ಣು ಮಕ್ಕಳು ಚೇಳು ಕಡಿದು ಸಾವನ್ನಪ್ಪಿದ್ದಲ್ಲದೆ ಅವರ ಕೊಲೆ ನಡೆದಿಲ್ಲ ಎಂದು ತೀರ್ಮಾನಕ್ಕೆ ಬಂದರು, ಆದರೆ ಕೆಲವೇ ದಿನಗಳಲ್ಲಿ ಜನರು ತಾವು ಅಂದುಕೊಂಡಿದ್ದು ತಪ್ಪು ಎಂದು ಸಾಬೀತು ಪಡಿಸುವಂತಹ ಘಟನೆ ನಡೆದಾಗ ಜನ ಬೆಚ್ಚಿ ಬಿದ್ದರು.

(ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.