ಭಾಗ – 4


ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದುವರೆ ಗಂಟೆಯಾಗಿರಬಹುದು. ಶಾಲಾ ಕಾಲೇಜುಗಳಿಗೆ ಮಧ್ಯಾಹ್ನ ರಜೆಯಾಗಿದ್ದುದರಿಂದ ಮಕ್ಕಳೆಲ್ಲ ಮನೆಗೆ ಹೋಗಲು ಆತುರರಾಗಿ ಬಸ್ ನಿಲ್ದಾಣದತ್ತ ಧಾವಿಸುತ್ತಿದ್ದರು. ಬಸ್ಸು ಬಂದು ನಿಂತೊಡನೆ ಸೀಟಿಗಾಗಿ ಎಲ್ಲರೂ ಮುನ್ನುಗ್ಗತೊಡಗಿದರು. ಕಾಲೇಜಿನ ಹುಡುಗಿಯೊಬ್ಬಳು ಆ ಗುಂಪಿನಲ್ಲಿ ಕಷ್ಟಪಟ್ಟು ಬಸ್ಸು ಹತ್ತುತ್ತಿದ್ದಂತೆ ಅವಳಿಗೆ ಏನೋ ಚುಚ್ಚಿದ ಅನುಭವವಾಯಿತು. ಹಿಂದೆ ಹತ್ತುತ್ತಿದ್ದ ಹುಡುಗರ ಕಾಟವಿರಬೇಕು ಎಂದುಕೊಳ್ಳುತ್ತ ಆಕೆ ಬಸ್ಸು ಹತ್ತಿದಳು. ಸೀಟೊಂದು ಸಿಕ್ಕಿ ಕುಳಿತುಕೊಳ್ಳಲು ಹೋದಾಗ ಅವಳಿಗೆ ಬೆನ್ನಲ್ಲಿ ಏನೋ ಹರಿದಾಡಿದ ಅನುಭವ. ಹುಡುಗರೇನಾದರೂ ಮಾಡುತ್ತಿರಬಹುದೇ ಎಂದು ತಟ್ಟನೆ ತಿರುಗಿ ನೋಡಿದಳು.

ಅವಳ ಹಿಂದೆ ಒಬ್ಬ ಗಡ್ಡಧಾರಿ ವ್ಯಕ್ತಿಯೊಬ್ಬ ಕುಳಿತಿದ್ದ, ಪಂಜಾಬಿನವರಂತೆ ತಲೆಗೆ ಟೋಪಿ ಹಾಕಿದ್ದ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ. ಮುಖದ ತುಂಬಾ ಗಡ್ಡ ಮೀಸೆ  ಅವನ ಕೈ ಇವಳ ಸೀಟಿನತ್ತ ಚಾಚಿಕೊಂಡಿತ್ತು. ಇವನೇ ತನ್ನ ಬೆನ್ನ ಮೇಲೆ ಕೈ ಹಾಕಿರಬಹುದೇ ಎಂದು ಸಂಶಯವಾಗಿ ಅವನನ್ನು ದುರುಗುಟ್ಟಿ ನೋಡಿದಳು. ಅವನು ಅವಳತ್ತ ನೋಡದೆ ಚಾಚಿದ ಕೈಯನ್ನು ಮೆಲ್ಲನೆ ಹಿಂದಕ್ಕೆಳೆದು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತ. ಆ ಹುಡುಗಿಗೆ ಬೆನ್ನಲ್ಲಿ ಜೋರಾಗಿ ತುರಿಕೆಯಾಗಿ ಸೀಟಿಗೆ ತನ್ನ ಬೆನ್ನನ್ನು ತಿಕ್ಕುತ್ತ ಆಗಾಗ ಹಿಂದೆ ನೋಡುತ್ತಾ ಅವನು ಇನ್ನೇನಾದರೂ ಮಾಡುತ್ತಾನೆಯೇ ಎಂದು ಅವನ ಮೇಲೆ ಒಂದು ಕಣ್ಣಿಟ್ಟಳು. ಹೆಣ್ಣು ಮಕ್ಕಳಿಗೆ ಕಾಮುಕರ ಕಾಟ ಎಲ್ಲಿ ಹೋದರೂ ತಪ್ಪಿದ್ದಲ್ಲ ಸಮಯ ಸಿಕ್ಕಾಗೆಲ್ಲ ಮೈ ಮೇಲೆ ಕೈ ಹಾಕುತ್ತಾರೆ ದರಿದ್ರದವರು ಎಂದುಕೊಂಡು ಮನಸ್ಸಿನಲ್ಲೇ ಬೈಯುತ್ತ ನಂತರ ಸೀಟಿನಲ್ಲಿ ಆದಷ್ಟೂ ಮುಂದೆ ಜರುಗಿ ಅವನಿಗೆ ತಾನು ಎಟುಕದಂತೆ ಕುಳಿತಳು.

ಕೆಲ ಹೊತ್ತಿನ ನಂತರ ಅವಳಿಗೆ ಬೆನ್ನಲ್ಲಿ ಉರಿ ಶುರುವಾಯಿತು. ತಾನು ತುರಿಕೆಯಾಗುತ್ತದೆ ಎಂದು ಬೆನ್ನು ತಿಕ್ಕಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ಸುಮ್ಮನಾದಳು. ಸ್ವಲ್ಪ ಹೊತ್ತಿನಲ್ಲಿ ಆ ಹುಡುಗಿ ಇಳಿಯುವ ಸ್ಟಾಪ್ ಬಂದಿದ್ದರಿಂದ ಅವಳು ಗಡಬಡಿಸಿ ಎದ್ದು ಹೋಗಿ ಬಸ್ಸು ನಿಲ್ಲುವುದನ್ನೇ ಕಾಯುತ್ತ ನಿಂತಳು. ಬಸ್ಸಿನಿಂದಿಳಿದು ಮನೆಗೆ ಹೋಗಿ ಮೊದಲು ಬೆನ್ನ ಮೇಲೆ ತಣ್ಣೀರು ಸುರಿಯಬೇಕು ಎಂದುಕೊಂಡು ಅವಸರದ ಹೆಜ್ಜೆ ಹಾಕುತ್ತ ಮನೆಗೆ ನಡೆದಳು. ಮನೆಗೆ ಬಂದವಳೇ ಬ್ಯಾಗನ್ನು ಬಿಸಾಕಿ ಬಾತ್ ರೂಂ ಗೆ ಧಾವಿಸಿ ಬಟ್ಟೆ ಬಿಚ್ಚಿ ಶವರ್ ನ್ನು ತಿರುಗಿಸಿ ತನ್ನ ಬೆನ್ನ ಮೇಲೆ ತಣ್ಣೀರು ಬೀಳುನತೆ ಮಾಡಿದಾಗ ಅವಳಿಗೆ ಹಾಯೆನಿಸಿತು. ಸ್ವಲ್ಪ ಹೊತ್ತು ಹಾಗೇ ನಿಂತು ನಂತರ ಬಟ್ಟೆಗಳನ್ನು ಹಾಕಿಕೊಳ್ಳಲು ಎತ್ತಿದಾಗ ಅದರಲ್ಲಿದ್ದ ಸತ್ತ ಚೇಳು ನೆಲಕ್ಕೆ ಬಿದ್ದಿತು. ಆ ಹುಡುಗಿಗೆ ಭಯವಾಗಿ ಚೀರಿ ಬಿಟ್ಟಳು.

ಅವಳ ತಾಯಿಗೆ ಮಗಳು ಚೀರಿದ್ದು ಕೇಳಿಸಿ ಮಗಳು ಮನೆಗೆ ಬರುತ್ತಿದ್ದಂತೆ ಯಾಕೆ ಕಿರಿಚಿಕೊಂಡಳು ಎಂದು ನೋಡಲು ಧಾವಿಸಿದರು. ಏನಾಯಿತೇ? ಯಾಕೆ ಕಿರಿಚಿಕೊಂಡೆ, ಜಿರಳೆ ನೋಡಿದ್ಯಾ ? ಮನೆಗೆ ಯಾವಾಗ ಬಂದೆ, ನಂಗೆ ಗೊತ್ತಾಗಲೇ ಇಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದಾಗ ಆ ಹುಡುಗಿ ಬೇಗನೆ ಬಟ್ಟೆ ಹಾಕಿಕೊಂಡು ಬಾಗಿಲು ತೆರೆದು ಅಮ್ಮನತ್ತ ಧಾವಿಸಿ ಅವರನ್ನು ತಬ್ಬಿಕೊಂಡಳು. ಯಾಕೆ ಏನಾಯಿತಮ್ಮ ಎಂದು ತಾಯಿ ಕೇಳಿದಾಗ ಅವರನ್ನು ಕರೆದುಕೊಂಡು ಹೋಗಿ ಬಾತ್ ರೂಂ ನಲ್ಲಿ ಬಿದ್ದಿದ ಸತ್ತ ಚೇಳನ್ನು ತೋರಿಸಿ ಇದು ನನ್ನ ಬಟ್ಟೆಯಲ್ಲಿತ್ತಮ್ಮ ಎಂದಾಗ ಅವಳ ತಾಯಿ ಬೆಚ್ಚಿ ಬಿದ್ದು ಈ ಹಿಂದೆ ಚೇಳು ಕಚ್ಚಿ ಸಾವಿಗೀಡಾದ ಹೆಣ್ಣು ಮಕ್ಕಳ ನೆನಪಾಗಿ, ನಿನಗೇನೂ ಆಗಿಲ್ಲ ತಾನೇ, ಯಾವುದಕ್ಕೂ ಬೇಗ ಡಾಕ್ಟರ್ ಹತ್ತಿರ ಹೋಗೋಣ ಎಂದು ಅವಸರಿಸಿ ಡಾಕ್ಟರ್ ಬಳಿ ಧಾವಿಸಿದರು.

ಡಾಕ್ಟರ್ ಆ ಹುಡುಗಿಯನ್ನು ಪರೀಕ್ಷಿಸಿ ಆ ಭಾಗವನ್ನು ಸ್ವಚ್ಛ ಮಾಡಿ ಏನೂ ತೊಂದರೆಯಿಲ್ಲ ಇವಳಿಗೆ ಆ ಅಲರ್ಜಿ ಇಲ್ಲದ್ದರಿಂದ ಏನೂ ಆಗಿಲ್ಲ. ಹೆಚ್ಚಿನವರಿಗೆ ಚೇಳು ಕಚ್ಚಿದರೆ ಅದು ಮಾರಣಾಂತಿಕವಾಗುವುದಿಲ್ಲ ಅಲರ್ಜಿ ಇದ್ದವರಿಗೆ ಮಾತ್ರ ಹೆಚ್ಚಿನ ತೊಂದರೆಯಾಗುತ್ತದೆ ಆದರೆ ಈ ಬಗ್ಗೆ ಮಾತ್ರ ಪೊಲೀಸರಿಗೆ ತಿಳಿಸಿ, ಇದು ಯಾರೋ ಬೇಕೆಂದೇ ಮಾಡುತ್ತಿರಬಹುದು. ಅವನು ಬಹಳ ಅಪಾಯಕಾರಿ ಮನುಷ್ಯನೂ ಆಗಿರಬಹುದು ಎಂದಾಗ ಆ ಹುಡುಗಿ ಬಸ್ಸಿನಲ್ಲಿ ತನ್ನ ಹಿಂದೆ ಕುಳಿತ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದುದನ್ನು ಹೇಳಿದಳು. 

ಆ ಹುಡುಗಿ ಡಾಕ್ಟರ್ ಹೇಳಿದಂತೆ ತನ್ನ ತಾಯಿ ಜೊತೆ ನೇರವಾಗಿ ಪೋಲೀಸ್ ಸ್ಟೇಷನ್ ಗೆ ತೆರಳಿ ತನಗೆ ಚೇಳು ಕಚ್ಚಿದ್ದು, ಬಸ್ಸಿನಲ್ಲಿ ತನ್ನ ಹಿಂದೆ ಕುಳಿತಿದ್ದವ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದು ಎಲ್ಲ ವಿವರವಾಗಿ ಹೇಳಿದಾಗ ಪೊಲೀಸರಿಗೆ ಆ ಹುಡುಗಿಯ ಅನುಮಾನ ನಿಜವಿರಬಹುದೇ, ಅವನೇ ಆ ಚೇಳನ್ನು ಹಾಕಿರಬಹುದೇ ಅಥವಾ ಆತ ಬರಿಯ ಬೀದಿ ಕಾಮಣ್ಣನೇ, ಹಾಗಿದ್ದರೆ ಚೇಳು ಬಂದಿದ್ದಾದರೂ ಎಲ್ಲಿಂದ, ಅದೂ ಬರೀ ಯುವತಿಯರ ಮೇಲೆಯೇ ಚೇಳು ಬೀಳಲು ಕಾರಣವೇನು ಇದು ಯಾರೋ ಮಾಡುವ ಕುತಂತ್ರವಿರಬಹುದೇ ಯುವತಿಯರಿಗೆ ಚೇಳು ಕಚ್ಚಿಸಿ ಅವರಿಗೆ ಸಿಗುವ ಲಾಭವೇನು, ಅವರನ್ನು ಕೊಲ್ಲಲು ಈ ರೀತಿ ಮಾಡುತ್ತಿದ್ದಾನೆಯೇ, ಹಾಗಿದ್ದರೆ ಈ ಹುಡುಗಿ ಏಕೆ ಸಾಯಲಿಲ್ಲ, ಹೀಗೆ ಮಾಡುತ್ತಿರುವವರನ್ನು ಹಿಡಿಯುವುದು ಹೇಗೆ ಎಂದೆಲ್ಲ ಹಲವಾರು ಪ್ರಶ್ನೆಗಳು ಪೋಲೀಸರ ತಲೆ ತಿನ್ನತೊಡಗಿದವು. ಆ ಹುಡುಗಿಗೆ ಇನ್ನೊಮ್ಮೆ ಆತ ಕಾಣಲು ಸಿಕ್ಕರೆ ತಕ್ಷಣ ತಮಗೆ ಫೋನ್ ಮಾಡಿ ತಿಳಿಸಲು ಹೇಳಿ ಅವರನ್ನು ಕಳುಹಿಸಿದರು.

(ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.