ಭಾಗ – 5


ಆ ಹುಡುಗಿ ತನಗಾದ ಅನುಭವವನ್ನು ತನ್ನ ಗೆಳತಿಯರೊಂದಿಗೆ ಹೇಳಿಕೊಂಡಳು. ಅವರೆಲ್ಲ ನೀನು ಬದುಕಿ ಉಳಿದದ್ದೇ ಪುಣ್ಯ ಉಳಿದ ಹುಡುಗಿಯರಂತೆ ಆಗಿದಿದ್ದರೆ ಎಂದಾಗ ಆ ಹುಡುಗಿ ಮೆಲ್ಲನೆ ಕಂಪಿಸಿದಳು. ಈ ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಮಾಧ್ಯಮದವರಿಗೂ ತಿಳಿಯಿತು. ಅವರು ಆ ಹುಡುಗಿಯನ್ನು ಆ ಬಗ್ಗೆ ವಿಚಾರಿಸಿ ಆತ ನೋಡಲು ಹೇಗಿದ್ದ ಎಂಬುದನ್ನೆಲ್ಲ ವಿವರವಾಗಿ ಕೇಳಿ, ಚೇಳು ಆಕಸ್ಮಿಕವಾಗಿ ಬಿದ್ದಿಲ್ಲ, ಯಾರೋ ಅದನ್ನು ಉದ್ದೇಶ ಪೂರ್ವಕವಾಗಿ ಹೆಣ್ಣು ಮಕ್ಕಳ ಮೇಲೆ ಹಾಕುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಆ ಮನುಷ್ಯ ಸಿಖ್ ಸಂಪ್ರದಾಯದಂತೆ ಧರಿಸಿದ ಟರ್ಬನ್ ಬಗ್ಗೆ ಕೇಳಿದ ಮೇಲೆ ಜನರೆಲ್ಲ ಟರ್ಬನ್ ಧರಿಸಿದ ಗಂಡಸರನ್ನು ಸಂಶಯಾಸ್ಪದವಾಗಿ ನೋಡತೊಡಗಿದರು.

ಹೆಣ್ಣು ಮಕ್ಕಳಂತೂ ಅಂತಹವರಿಂದ ದೂರ ಧಾವಿಸತೊಡಗಿದರು. ಇದನ್ನು ನೋಡಿ ಸಿಖ್ ಪಂಥದವರಿಗೆ ಅವಮಾನವೆನಿಸತೊಡಗಿತು. ಅವರೆಲ್ಲ ಸೇರಿ ಪೊಲೀಸರಿಗೆ ಆದಷ್ಟೂ ಬೇಗ ಅಪರಾಧಿಯನ್ನು ಕಂಡುಹಿಡಿದು ಬಂಧಿಸಬೇಕು ಇಲ್ಲದಿದ್ದರೆ ತಮ್ಮ ಬದುಕು ದುಸ್ತರವಾಗುತ್ತದೆ ಎಂದು ವಿನಂತಿಸಿಕೊಂಡರು. ಪೊಲೀಸರು ತಾವು ಅಪರಾಧಿಯನ್ನು ಶೀಘ್ರವಾಗಿ ಪತ್ತೆ ಹಚ್ಚುವೆವು ಎಂದು ಅವರಿಗೆ ಭರವಸೆಯನ್ನು ನೀಡಿದರು. ಆದರೆ ಪೊಲೀಸರಿಗೆ ಆ ಸಿಖ್ ಟೋಪಿಧಾರಿ ಮನುಷ್ಯನೇ ಅಪರಾಧಿಯೇ ಎಂದು ಖಚಿತವಾಗಲಿಲ್ಲ. ಆದರೆ ಆ ಹುಡುಗಿ ಹೇಳಿದಂತೆ ಅವಳ ಸೀಟಿನತ್ತ ಅವನ ಚಾಚಿದ ಕೈ, ಅವಳ ಬಟ್ಟೆಯಲ್ಲಿ ಸಿಕ್ಕ ಚೇಳು ಕೇವಲ ಆಕಸ್ಮಿಕವೇ ಅಥವಾ ಅವನೇ ಹಾಕಿರಬಹುದೇ ಎಂದು ಗೊಂದಲವಾದರೂ ಆ ಬಗ್ಗೆ ತನಿಖೆ ನಡೆಸಲು ನಿಶ್ಚಯಿಸಿದರು.

ನಂತರ ಕೆಲವು ದಿನಗಳು ಏನೂ ನಡೆಯಲಿಲ್ಲ. ಆ ಹುಡುಗಿಗೆ ಆ ಗಡ್ಡಧಾರಿ ಸಿಖ್ ಮನುಷ್ಯ ಮತ್ತೆ ಕಾಣ ಸಿಗಲೇ ಇಲ್ಲ. ಒಂದು ದಿನ ಯಾರೋ ಗಣ್ಯ ವ್ಯಕ್ತಿಗಳು ತೀರಿಕೊಂಡರೆಂದು ಶಾಲಾ ಕಾಲೇಜುಗಳಿಗೆ ರಜ ಸಾರಲಾಯಿತು. ಕಾಲೇಜಿನ ಹುಡುಗ ಹುಡುಗಿಯರೆಲ್ಲ ಮನೆಗೆ ಹೋಗಿ ಮಾಡುವುದಾದರೂ ಏನು ಎಂದು ಸಿನೆಮಾಗೆ ಹೋಗಲು ನಿರ್ಧರಿಸಿ ಥಿಯೇಟರ್ ಗೆ ಹೊರಟರು. ಸಿನೆಮಾ ಹಾಲ್ ನಲ್ಲಿ ಸಿನೆಮಾ ಶುರುವಾಗಿ ಎಲ್ಲರೂ ಅದರಲ್ಲಿ ಮಗ್ನರಾದಾಗ ಒಬ್ಬ ಹುಡುಗ, ಟೋಪಿಧಾರಿ ವ್ಯಕ್ತಿಯೊಬ್ಬ ಮುಂದೆ ಕುಳಿತ ಹುಡುಗಿಯ ಸೀಟಿನತ್ತ ಬಾಗಿ ಏನೋ ಮಾಡುತ್ತಿದ್ದುದನ್ನು ಗಮನಿಸಿದ.

ಮುಂದೆ ಕುಳಿತಿದ್ದ ಹುಡುಗಿಗೆ ತನ್ನ ಬಟ್ಟೆಯೊಳಗೆ ಏನೋ ಹರಿದಾಡಿದಂತಾಗಿ ಅಮ್ಮಾ ಎಂದು ಕಿರುಚಿ ತನ್ನ ಬಟ್ಟೆಗಳನ್ನು ಒದರಲಾರಂಭಿಸಿದಾಗ ಆ ಹುಡುಗನಿಗೆ ಟೋಪಿಧಾರಿ ವ್ಯಕ್ತಿಯ ಮೇಲೆ ಅನುಮಾನ ಬಂದು ತನ್ನ ಗೆಳೆಯರಿಗೆ ವಿಷಯ ತಿಳಿಸಿದ. ಅವರೆಲ್ಲ ಒಟ್ಟಾಗಿ ಸೇರಿ ಧಾವಿಸಿ ಅವನ ಬಳಿ ಬರುತ್ತಿರುವುದನ್ನು ಕಂಡ ಟೋಪಿಧಾರಿ ವ್ಯಕ್ತಿ ಬಾಗಿಲ ಬಳಿ ಧಾವಿಸಿದ. ಹುಡುಗರೆಲ್ಲ ಅವನನ್ನು ಹಿಡಿಯಿರಿ ಎಂದು ಕಿರಿಚುತ್ತಿದ್ದಂತೆ ಆ ವ್ಯಕ್ತಿ ತಪ್ಪಿಸಿಕೊಂಡು ಹೊರಗೆ ಓಡಿ ಬಿಟ್ಟ. ಹುಡುಗರೆಲ್ಲ ಅವನನ್ನು ಹಿಂಬಾಲಿಸಿಕೊಂಡು ಬಂದರೂ ಕತ್ತಲಲ್ಲಿ ಅವನ ಮುಖ ಪರಿಚಯವಾಗದ ಕಾರಣ ಆತ ಯಾರು, ಯಾವ ಕಡೆ ಓಡಿ ಹೋದ ಎಂದು ತಿಳಿಯಲಿಲ್ಲ. ರಸ್ತೆಯಲ್ಲಿ  ಟೋಪಿ ಹಾಕಿಕೊಂಡವರು ಯಾರೂ ಕಾಣಲಿಲ್ಲ, ಯಾರೂ ಓಡುತ್ತ ಹೋಗುತ್ತಿರಲಿಲ್ಲವಾದ್ದರಿಂದ ಅವನಾಗಲೇ ತಪ್ಪಿಸಿಕೊಂಡಿರಬೇಕು ಎಂದುಕೊಳ್ಳುತ್ತ ಥಿಯೇಟರ್ ಗೆ ಮರಳಿ ಬಂದರು.

ಆ ಹುಡುಗಿಯ ಬಟ್ಟೆಯಲ್ಲಿ ಚೇಳು ಇದ್ದಿದ್ದು ತಿಳಿದು ಅವಳ ಗೆಳತಿಯರೆಲ್ಲ ಸೇರಿ ಅವಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರು. ಒಬ್ಬ ಹುಡುಗ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ತಮ್ಮ ನಡುವೆ  ಚೇಳು ಹಾಕುವ ಅಪರಾಧಿಯೊಬ್ಬ ಕುಳಿತಿದ್ದ ಎಂಬ ವಿಷಯ ತಿಳಿದು ಹೆಣ್ಣುಮಕ್ಕಳೆಲ್ಲ ತಲ್ಲಣಿಸಿ ಹೋದರು. ಅವನೇನಾದರೂ ಸರಣಿ ಹಂತಕನಿರಬಹುದೇ ಅವನ ಉದ್ದೇಶವೇನಿರಬಹುದು, ಯಾಕಾಗಿ ಹೆಣ್ಣು ಮಕ್ಕಳನ್ನೇ ಗುರಿಯಾಗಿಟ್ಟುಕೊಂಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತ ಥಿಯೇಟರ್ ನಿಂದ ಹೊರಗೆ ಧಾವಿಸಿದರು.

ಪೊಲೀಸರಿಗೆ ಚೇಳು ಆಕಸ್ಮಿಕವಾಗಿ ಬೀಳದೆ ಯಾರೋ ಕಿಲಾಡಿಯೇ ಚೇಳು ಹಾಕುತ್ತಾನೆ, ಈ ಮೊದಲು ಹುಡುಗಿ ಹೇಳಿದ್ದು ನಿಜ ಎಂದು ಖಚಿತವಾಗಿ ನೇರವಾಗಿ ಥಿಯೇಟರ್ ಗೆ ಧಾವಿಸಿದರು. ಅಲ್ಲಿ ಸಿ ಸಿ ಕ್ಯಾಮೆರಾದ ದೃಶ್ಯವನ್ನೆಲ್ಲ ಪರಿಶೀಲಿಸಿದಾಗ ಒಬ್ಬ ಟೋಪಿಧಾರಿ ವ್ಯಕ್ತಿಯನ್ನು ಕಂಡು ಅಲ್ಲಿದ್ದ ಹುಡುಗರನ್ನು ವಿಚಾರಿಸಿದಾಗ ತಾವು ನೋಡಿದ ವ್ಯಕ್ತಿ ಅವನೇ ಎಂದು ಅವರು ಗುರುತು ಹಿಡಿದರು. ಆದರೆ ಪೊಲೀಸರಿಗೆ ಆತನ ಟೋಪಿ ಮುಖಕ್ಕೆ ಅಡ್ಡವಾಗಿದ್ದುದರಿಂದ ಮುಖ ಚಹರೆ ತಿಳಿಯಲಿಲ್ಲ. ಆದ್ದರಿಂದ ತಮ್ಮ ತನಿಖೆಯನ್ನು ತೀವ್ರಗೊಳಿಸಿ ಆತನ ಅಕ್ಕ ಪಕ್ಕದಲ್ಲಿ ಕುಳಿತಿದ್ದವರನ್ನು ಕಂಡು ಹಿಡಿದು ಅವರನ್ನು ವಿಚಾರಿಸಿದರು. ಆದರೆ ಅವರ್ಯಾರೂ ಆತನ ಮುಖ ಚಹರೆಯನ್ನು ಸರಿಯಾಗಿ ನೋಡಿರಲಿಲ್ಲ. ಆದರೂ ಪೋಲೀಸರ ತನಿಖೆಯಲ್ಲಿ ಆತ ಕಾಲೇಜು ವಿದ್ಯಾರ್ಥಿಯಲ್ಲ ಎಂದು ಖಚಿತವಾಯಿತು. ಆದರೆ  ಇದರಿಂದ ಕೇಸು ಮತ್ತಷ್ಟು ಜಟಿಲಗೊಂಡಿತು.

ಇತ್ತ ಬಟ್ಟೆಯಲ್ಲಿ ಚೇಳು ಇದ್ದಿದ್ದು ಕಂಡು ಹೆದರಿದ್ದ ಹುಡುಗಿಗೆ ಪ್ರಜ್ಞೆ ಇರಲಿಲ್ಲ. ಡಾಕ್ಟರ್ ಅವಳ ದೇಹವನ್ನು ಪರಿಶೀಲಿಸಿದಾಗ ಅವಳಿಗೆ ಚೇಳು ಕಡಿಯದೇ ಇದ್ದುದು ಕಂಡು ನಿಟ್ಟುಸಿರು ಬಿಟ್ಟರು. ಅವಳಿಗೆ ಪ್ರಜ್ಞೆ ಬರಲು ಚುಚ್ಚುಮದ್ದನ್ನು ಕೊಟ್ಟು ಅವಳಿಗೆ ಪ್ರಜ್ಞೆ ಬರುವುದನ್ನು ಕಾಯುತ್ತ ನಿಂತರು.  ಅವಳ ಗೆಳತಿಯರು ಆತಂಕದಿಂದ ಅವಳ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರಿಂದ ಅವರೆಲ್ಲ ಗಾಬರಿಯಿಂದ ಓಡಿ ಬಂದು ನೋಡಿದಾಗ ತಮ್ಮ ಮಗಳು ಪ್ರಜ್ಞಾ ಶೂನ್ಯವಾಗಿ ಬಿದ್ದಿರುವುದನ್ನು ಕಂಡು ಮಗಳಿಗೇನಾಯಿತೋ ಎಂದು ಅಳತೊಡಗಿದರು. ಡಾಕ್ಟರ್ ಅವರನ್ನು ಸಮಾಧಾನ ಪಡಿಸಿ ಅವರ ಮಗಳು ಕ್ಷೇಮವಾಗಿ ಇದ್ದಾಳೆ ಅವಳಿಗೆ ಚೇಳು ಕಡಿಯದಿದ್ದರೂ ಭಯದಿಂದಲೇ ಅವಳು ಪ್ರಜ್ಞೆ ತಪ್ಪಿದ್ದಾಳೆ, ಇನ್ನೇನು ಪ್ರಜ್ಞೆ ಮರಳಿ ಬರಲಿದೆ ಅಷ್ಟರವರೆಗೆ ತಾಳ್ಮೆಯಿಂದ ಕಾಯಿರಿ ಎಂದು ಹೇಳಿ ಅಲ್ಲಿಂದ ಹೊರಟರು.

ಅವಳ ಮನೆಯವರೆಲ್ಲ ಚೇಳು ಹಾಕಿದವನನ್ನು ಮನಸಾರೆ ಶಪಿಸತೊಡಗಿದರು.  ಪೊಲೀಸರು ಆಸ್ಪತ್ರಗೆ ಬಂದು ವಿಚಾರಿಸಿದಾಗ ಆ ಹುಡುಗಿ ಕ್ಷೇಮವಾಗಿ ಇದ್ದಿದ್ದು ಕಂಡು ನಿರಾಳವಾಗಿ ಅವಳನ್ನು ವಿಚಾರಿಸಲು ರೂಮಿಗೆ ನಡೆದರು. ಆಗ ತಾನೇ ಕಣ್ಣು ಬಿಡುತ್ತಿದ್ದ ಮಗಳನ್ನು ಕಂಡು ಅವಳ ಹೆತ್ತವರು ಸಂತೋಷ ಸಂಭ್ರಮಗಳಿಂದ ಅವಳನ್ನು ಬಿಗಿದಪ್ಪಿದರು. ಅವಳಿಗೆ ಚೇಳು ಕಡಿದಿಲ್ಲವೆಂದು ಹೇಳಿದಾಗ ಆ ಹುಡುಗಿಗೆ ಸಮಾಧಾನವಾಯಿತು. ಪೊಲೀಸರು ಬಂದು ಆ ಹುಡುಗಿಯನ್ನು ವಿಚಾರಿಸಿದಾಗ ಆ ಹುಡುಗಿ ಚೇಳು ಹಾಕಿದವನನ್ನು ತಾನು ನೋಡಿಲ್ಲ, ಮೈ ಮೇಲೆ ಏನೋ ಹರಿದಾಡಿದ ಅನುಭವವಾಗಿ ಭಯದಿಂದ ತನ್ನ ಗಮನವೆಲ್ಲ ಅದನ್ನು ಪರಿಶೀಲಿಸಿವುದರಲ್ಲೇ ಇದ್ದುದರಿಂದ ಆತನತ್ತ ನೋಡಲಾಗಲಿಲ್ಲ ಎಂದಾಗ ಪೊಲೀಸರಿಗೆ ನಿರಾಶೆಯಾಯಿತು. ಅವರಿಗೆ ಆ ಹುಡುಗಿ ಆತನ ಬಹಳ ಹತ್ತಿರದಲ್ಲೇ ಇದ್ದುದ್ದರಿಂದ ಅವಳು ನೋಡಿರಬಹುದು ಎಂದೆನಿಸಿತ್ತು. ಆದ್ದರಿಂದ ಅವರು ಅಲ್ಲಿಂದ ಸೀದಾ ಸ್ಟೇಷನ್ ಗೆ ಹೋಗಿ ಈ ಮೊದಲು ಹುಡುಗಿ ನೋಡಿದ್ದ ಸಿಖ್ ಮನುಷ್ಯನ ಮುಖದ ಚಿತ್ರ ಬರೆಸಲು ನಿರ್ಧರಿಸಿ ಆ ಹುಡುಗಿಯನ್ನು ಪೋಲೀಸ್ ಸ್ಟೇಷನ್ ಗೆ ಕರೆಸಿದರು. ಅವಳು ಹೇಳಿದಂತೆ ಆತನ ರೇಖಾ ಚಿತ್ರ ಬಿಡಿಸಿ ಅವನೇ ಅಪರಾಧಿ ಎಂದು ತೀರ್ಮಾನಿಸಿ ತಕ್ಷಣ ಕಾರ್ಯ ಪ್ರವ್ರತ್ತರಾದರು.

(ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.