ಭಾಗ – 6


ಪೊಲೀಸರು ತಮ್ಮ ಶಕ್ತಿ ಮೀರಿ ಊರೆಲ್ಲ ಜಾಲಾಡಿದರೂ ಆರೋಪಿಯ ಸುಳಿವೂ ಕೂಡ ಸಿಗಲಿಲ್ಲ. ಅವನ ಮುಖ ಚಹರೆಯ ರೇಖಾ ಚಿತ್ರವನ್ನು ಅಲ್ಲಲ್ಲಿ ಹಾಕಿ ಆತನನ್ನು ಯಾರಾದರೂ ನೋಡಿದ್ದಲ್ಲಿ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿಕೊಂಡರೂ ಪರಿಣಾಮ ಮಾತ್ರ ಶೂನ್ಯ.  ಯಾವುದೇ ಸುಳಿವು ಸಿಗದೆ ಇದರಲ್ಲಿ ಮುಂದೆ ಹೋಗುವುದು ಹೇಗೆ ಎಂದು ಪೊಲೀಸರಿಗೆ ತಿಳಿಯಲಿಲ್ಲ.  ಆತ ಚೇಳುಗಳನ್ನು ಎಲ್ಲಿಂದ ತರುತ್ತಿರಬಹುದು, ಅವನು ಒಬ್ಬನೇ ಇದ್ದಾನೆಯೇ ಅಥವಾ ಆತ  ತನ್ನ ಸಹಚರರೊಂದಿಗೆ ಸೇರಿ ಇದೆಲ್ಲ ಮಾಡುತ್ತಿದ್ದಾನೆಯೇ, ಸಿಖ್ ಟೋಪಿಧಾರಿ  ಮತ್ತು ಥಿಯೇಟರ್ ನಲ್ಲಿದ್ದ ವ್ಯಕ್ತಿ ಒಬ್ಬನೆಯೇ ಅಥವಾ ಬೇರೆ ಬೇರೆಯೇ, ಮುಂದಿನ  ಬಾರಿ ಆತ ಚೇಳು ಹಾಕುವಾಗಲೇ ಆತನನ್ನು ಹಿಡಿಯಬೇಕು ಅನ್ಯ ಮಾರ್ಗವೇ ಇಲ್ಲ ಎಂದು ನಿರ್ಧರಿಸಿ ಯಾರಿಗಾದರೂ ಮೈ ಮೇಲೆ ಚೇಳು ಬಿದ್ದರೆ ಅಪರಾಧಿಯನ್ನು ಜನರೆಲ್ಲ ಸೇರಿ ಹಿಡಿದು ಪೋಲೀಸ್ ವಶಕ್ಕೆ ಕೊಡಬೇಕೆಂದೂ ಹೆಣ್ಣುಮಕ್ಕಳು ವಿಶೇಷವಾಗಿ ಈ ಬಗ್ಗೆ ಗಮನ ಹರಿಸಬೇಕೆಂದೂ ಪೊಲೀಸರು ವಿನಂತಿ ಮಾಡಿಕೊಂಡರು. ಆದರೆ ಅಪರಾಧಿ ಇದರಿಂದ ಎಚ್ಚೆತ್ತು ಕೊಂಡನೇನೋ ಅನ್ನುವಂತೆ ಅಂತಹ ಘಟನೆಗಳು ಆಮೇಲೆ ನಡೆಯಲಿಲ್ಲ.

ಮುಂದೆ ದಾರಿ ಕಾಣದೆ ಪೋಲೀಸ್ ಇಲಾಖೆಯೇ ಕೈ ಚೆಲ್ಲಿ ಕುಳಿತಾಗ ಒಂದು ದಿನ ಫ್ಯಾನ್ ರಿಪೇರಿಯ ಅಂಗಡಿಯ ಯುವಕನಿಗೆ ಫ್ಯಾನ್ ರಿಪೇರಿಗೆ ಬರಲು ಒಂದು ಮನೆಯ ಮಾಲೀಕರಿಂದ ಕರೆ ಬಂದಿತು. ಯುವಕ ಆ ಮನೆಗೆ ಹೋದಾಗ ಒಬ್ಬ ಭಯಾನಕ ಮುಖದ ವ್ಯಕ್ತಿ ಬಾಗಿಲು ತೆರೆದ. ಆ ವ್ಯಕ್ತಿಯ ಒಂದು ಪಾರ್ಶ್ವ ಸುಂದರವಾಗಿ ಸಹಜವಾಗಿ ಇದ್ದರೆ ಇನ್ನೊಂದು ಪಾರ್ಶ್ವದ ಒಂದು ಹುಬ್ಬು ಇರಲಿಲ್ಲ, ಕೆನ್ನೆಯ ಚರ್ಮ ಸುಟ್ಟು ಮುದ್ದೆಯಾಗಿ ನೆರಿಗೆಗಟ್ಟಿದಂತೆ ಇದ್ದು ವಿರೂಪವಾಗಿತ್ತು. ಒಮ್ಮೆಲೇ ನೋಡಿದಾಗ ಯಾರಾದರೂ ಬೆಚ್ಚಿ ಬೀಳಬೇಕು ಹಾಗಿತ್ತು ಅವನ ರೂಪ. ಆತನನ್ನು ಕಂಡು ಈ ಯುವಕ ಒಂದು ಕ್ಷಣ ಬೆಚ್ಚಿ ಬಿದ್ದನಾದರೂ ಅವನಿಗೆ ತಾನು ಭಯ ಪಟ್ಟವನಂತೆ ವರ್ತಿಸಿದರೆ ಬೇಜಾರಾಗಬಹುದು ಪಾಪ ಅವನ ಬಾಳಲ್ಲಿ ಏನು ದುರಂತ ನಡೆದಿದೆಯೋ ಏನೋ, ಆತ ನೋಡಲು ಹೇಗಿದ್ದರೆ ತನಗೇನು ತಾನು ಬಂದಿರುವ ಕೆಲಸ ಮಾಡಿ ಹೋಗುವುದಷ್ಟೇ ತನ್ನ ಕೆಲಸ ಎಂದುಕೊಂಡು ಮಾತಿಲ್ಲದೆ ಆ ವ್ಯಕ್ತಿಯ ಹಿಂದೆ ಹೊರಟ.

ಮಲಗುವ ರೂಮಿನಲ್ಲಿ ಫ್ಯಾನ್ ಕೆಲಸ ಮಾಡುತ್ತಿಲ್ಲ ಎಂದು ಆ  ವ್ಯಕ್ತಿ ಹೇಳಿದಾಗ ಆತನನ್ನು ಹಿಂಬಾಲಿಸಿ ರೂಮಿಗೆ ಹೋಗಿ ಫ್ಯಾನ್ ರಿಪೇರಿ ಕೆಲಸದಲ್ಲಿ ತೊಡಗಿದ. ಆ ವ್ಯಕ್ತಿ ಈತನನ್ನು ಕೆಲಸ ಮಾಡಲು ಬಿಟ್ಟು ತನ್ನ ಪಾಡಿಗೆ ತಾನು ಹೊರಟು ಹೋದ. ಯುವಕ ಫ್ಯಾನ್ ಸಂಪೂರ್ಣವಾಗಿ ಬಿಚ್ಚಿ ಅದನ್ನು ಸರಿ ಮಾಡುವಷ್ಟರ ಹೊತ್ತಿಗೆ ಅವನಿಗೆ ಸುಸ್ತಾಗಿ ಬಾಯಾರಿಕೆಯಾಯಿತು. ನೀರು ಕೇಳೋಣವೆಂದು ಹೊರಗೆ ಬಂದರೆ ಯಾರೂ ಕಾಣಲಿಲ್ಲ. ಸರ್ ಎಂದು ಕರೆದರೂ ಆತ ಬರಲಿಲ್ಲವಾದ್ದರಿಂದ ಸೆಖೆಗೆ ಬಾಯಾರಿಕೆ ತಡೆಯಲಾಗದೆ ಆ ಯುವಕ ಅಡಿಗೆಮನೆಯನ್ನು ಹುಡುಕಿಕೊಂಡು ಹೊರಟ.

ಅಲ್ಲಿದ್ದ ನೀರಿನ ಜಗ್ ಎತ್ತಿಕೊಂಡು ಒಂದು ಲೋಟಕ್ಕೆ ನೀರು ಹಾಕಿ ಕುಡಿಯಲು ತಲೆ ಎತ್ತಿದಾಗ ಅವನಿಗೆ ಒಂದು ವಿಚಿತ್ರ ಕಂಡಿತು. ಅಡಿಗೆ ಮನೆಯ ಅಟ್ಟದ ಮೇಲೆ ಸಾಲಾಗಿ ಗಾಜಿನ ಬಾಟಲಿಗಳನ್ನು ಜೋಡಿಸಲಾಗಿತ್ತು. ಅದರ ತುಂಬಾ ಜೀವಂತ ಚೇಳುಗಳು ಹರಿದಾಡುತ್ತಾ ಇದ್ದವು!! ಯುವಕನಿಗೆ ಭಯವಾಗಿ ಸುತ್ತ ನೋಡಿದಾಗ ಅಡಿಗೆ ಮನೆಯ ಒಂದು ಮೂಲೆಯಲ್ಲಿ ವಿವಿಧ ಬಗೆಯ ಟೋಪಿಗಳನ್ನು ನೇತು ಹಾಕಲಾಗಿತ್ತು. ಅದನ್ನೆಲ್ಲ ನೋಡಿ ಯುವಕನಿಗೆ ಹೆಣ್ಣು ಮಕ್ಕಳ ಮೇಲೆ ಚೇಳು ಬಿದ್ದಿದ್ದು  ಇಬ್ಬರು ಯುವತಿಯರು ಸತ್ತಿದ್ದು, ಅವನನ್ನು ಹಿಡಿಯಲು ಪೊಲೀಸರು ಪರದಾಡುತ್ತಿದ್ದುದು ಎಲ್ಲವೂ ನೆನಪಾಗಿ ಕುಡಿದ ನೀರು ನೆತ್ತಿಗೇರಿದಂತಾಗಿ ಯುವಕ ಒಮ್ಮೆಲೇ ಕೆಮ್ಮಲು ಶುರು ಮಾಡಿದ.

ಅವನ ಕೆಮ್ಮಿನ ಶಬ್ದ ಕೇಳಿ ಆ ವಿರೂಪ ಮುಖದ ವ್ಯಕ್ತಿ ಧಾವಿಸಿ ಬಂದ. ಯುವಕ ಆತನನ್ನು ನೋಡುತ್ತಲೇ ತೀರಾ ಗಾಬರಿಗೊಂಡು ಆತನನ್ನು ನೂಕಿ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿದ. ಆ ಭಯಾನಕ ವ್ಯಕ್ತಿ ಆತನನ್ನು ಹಿಂಬಾಲಿಸಿ ಅವನ ಹಿಂದೆ ಓಡತೊಡಗಿದ. ಆ ಯುವಕ ಇನ್ನಷ್ಟು ಗಾಬರಿಗೊಂಡು ದಾರಿಹೋಕರಿಗೆ ಕೊಲೆಗಡುಕ ಬರ್ತಿದ್ದಾನೆ ಅವನನ್ನು ಹಿಡೀರಿ ಎಂದು ಕಿರಿಚಲು ಶುರು ಮಾಡಿದ. ಇದನ್ನು ಕೇಳಿ ಆ ವ್ಯಕ್ತಿ ಆ ಯುವಕನನ್ನು ಹಿಂಬಾಲಿಸುವುದನ್ನು ಬಿಟ್ಟು ಮನೆಯ ಕಡೆಗೇ ಓಡತೊಡಗಿದ. ಆದರೆ ಅಷ್ಟರಲ್ಲಿ ಸೇರಿದ ಜನ ಅವನನ್ನು ಕಷ್ಟ ಪಟ್ಟು ಹಿಡಿದು ಬಿಟ್ಟರು. ಅದನ್ನು ನೋಡಿದ ಯುವಕನಿಗೆ ಸ್ವಲ್ಪ ಧೈರ್ಯ ಬಂದಂತಾಗಿ ಓಡುವುದನ್ನು ಬಿಟ್ಟು ತನ್ನ ಫೋನ್ ತೆಗೆದು ಪೊಲೀಸರಿಗೆ ಫೋನ್ ಮಾಡಿದ. ಪೊಲೀಸರು ತಕ್ಷಣವೇ ಧಾವಿಸಿ ಬಂದಾಗ ಆತನನ್ನು ಹಿಡಿದ ಜನರ ಗಮನ ಅತ್ತ ಸರಿಯುತ್ತಲೇ ಸಮಯ ಸಾಧಿಸಿ ಆ ವಿರೂಪ ಮುಖದ ವ್ಯಕ್ತಿ ಅವರಿಂದ ಅದು ಹೇಗೂ ತಪ್ಪಿಸಿಕೊಂಡು ಓಡತೊಡಗಿದ.

ಪೊಲೀಸರು ಅವನ ಹಿಂದೆ ಓಡತೊಡಗಿದರು. ಜನರು ಅವರಿಗೆ ಸಹಾಯ ಮಾಡಲು ಧಾವಿಸಿ ಅವರೂ ಆತನನ್ನು ಹಿಂಬಾಲಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಕೊನೆಗೂ ಆತನನ್ನು ಪೊಲೀಸರಿಗೆ ಹಿಡಿದು ಕೊಡುವಲ್ಲಿ ಯಶಸ್ವಿಯಾದರು. ಇಡೀ ಪ್ರಕರಣ ಸಿನೀಮಿಯ ರೀತಿಯಲ್ಲಿ ನಡೆದು ಕೊನೆಗೂ ಅಪರಾಧಿ ಕೈಗೆ ಸಿಕ್ಕಾಗ ಪೊಲೀಸರು ನಿಟ್ಟುಸಿರು ಬಿಟ್ಟರು. ಎಲ್ಲರಿಗೂ ಒಂದೇ ಕುತೂಹಲವಿತ್ತು, ಯಾಕಾಗಿ ಅವನು ಹೆಣ್ಣು ಮಕ್ಕಳ ಮೇಲೆ ಚೇಳು ಹಾಕುತ್ತಿದ್ದ, ಅದರಿಂದ ಅವನಿಗಾದ ಲಾಭವಾದರೂ ಏನು ಎಂದು. ಪೊಲೀಸರು ಆತನನ್ನು ಸ್ಟೇಷನ್ ಗೆ ಎಳೆದೊಯ್ದು  ವಿಚಾರಣೆಗೆ ಒಳಪಡಿಸಿದಾಗ ಎಲ್ಲವೂ ಬಯಲಿಗೆ ಬಂದಿತು.

(ಮುಂದುವರಿಯುವುದು)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.