ನಾನು ಶಾಪಿಂಗ್ ಮುಗಿಸಿ ನಮ್ಮ ಕಾರಿನತ್ತ ನಡೆಯುತ್ತಿದ್ದಂತೆ ಅಚಾನಕ್ಕಾಗಿ ಎಲ್ಲಿಂದಲೋ ಓಡಿ ಬಂದ ಪುಟ್ಟ ಹುಡುಗಿ ಏದುಸಿರು ಬಿಡುತ್ತ ನನ್ನ ಕೈ ಹಿಡಿದು, ಮಮ್ಮಿ, ನೀನು ಇಲ್ಲಿದ್ದಿಯಾ, ನಾನು ಎಲ್ಲೆಲ್ಲ ನಿನ್ನನ್ನು ಹುಡುಕಾಡಿದೆ ಗೊತ್ತಾ ಎಂದು ಹೇಳಿದಾಗ ನಾನು ಕಕ್ಕಾಬಿಕ್ಕಿಯಾದೆ. ಸ್ವಲ್ಪ ದೂರದಲ್ಲಿ ತರಕಾರಿ ಮಾರುತ್ತಿದ್ದವ ನನ್ನನ್ನೇ ನೋಡಿದ. ಛೆ ಎಂಥಾ ಹೆಂಗಸು ಮಗಳ ಜವಾಬ್ದಾರಿನೇ ಇಲ್ಲ ಎನ್ನುತ್ತಾ ಮುಖ ಸಿಂಡರಿಸಿದ. ನಾನು ಅವನ ಮಾತನ್ನು ನಿರ್ಲಕ್ಷಿಸುತ್ತ, ಯಾರಪ್ಪ ಈ ಹುಡುಗಿ, ನನ್ನನ್ನು ಯಾಕೆ ಮಮ್ಮಿ ಎನ್ನುತ್ತಿದ್ದಾಳೆ ಎಂದು ನಾನು ಆಶ್ಚರ್ಯ ಪಡುತ್ತ, ಯಾರಮ್ಮ ನೀನು, ನನ್ನನ್ನು ಮಮ್ಮಿ … ಎನ್ನುತ್ತಿದ್ದಂತೆ ಅವಳು ತನ್ನ ಪುಟ್ಟ ಕೈಗಳಿಂದ ನನ್ನನ್ನು ಜಗ್ಗುತ್ತ ಗುಟ್ಟು ಹೇಳುವವಳಂತೆ ನನ್ನನ್ನು ಎಳೆದಳು. ನಾನು ಬಗ್ಗಿದಾಗ ನನ್ನ ಕಿವಿಯಲ್ಲಿ ಗುಟ್ಟಾಗಿ, ಆಂಟಿ, ಸಾರಿ, ನೀವು ಯಾರೋ ಗೊತ್ತಿಲ್ಲ ಆದರೆ ನನ್ನನ್ನು ಯಾರೋ ಕಿಡ್ ನ್ಯಾಪ್ ಮಾಡಲು ನೋಡುತ್ತಿದ್ದಾರೆ. ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎನ್ನುತ್ತಾ ಅತ್ತಿತ್ತ ನೋಡಿ ಸುಮಾರು ದೂರದಲ್ಲಿ ನಿಂತು ಸುತ್ತಲೂ ನೋಡುತ್ತಿದ್ದ ಯುವಕನ ಕಡೆ ಬೆಟ್ಟು ಮಾಡಿದಳು. ಅವನನ್ನು ನೋಡುತ್ತಿದ್ದಂತೆ ಅವನ ಕಟ್ಟು ಮಸ್ತಾದ ಶರೀರ ಕಂಡು ನನ್ನೆದೆ ಝಲ್ಲೆಂದಿತು. ಅವಳು ನನ್ನ ಕೈ ಬಿಗಿಯಾಗಿ ಹಿಡಿಯುತ್ತ, ಮಮ್ಮಿ, ನಡಿ ಹೋಗೋಣ ಎಂದಳು. ಕೆಲವರು ನಮ್ಮತ್ತಲೇ ನೋಡುತ್ತಿದ್ದರು. ಎಂಥ ತಾಯಿ, ಮಗಳ ಪರಿವೆ ಇಲ್ಲದೆ ಶಾಪಿಂಗ್ ನಲ್ಲಿ ಮಗ್ನಳಾಗಿದ್ದಳಲ್ಲ ಎಂಬ ಭಾವ ಅವರ ಮುಖದಲ್ಲಿ ಕಂಡು ನಾನು ಏನೂ ಹೇಳಲಾಗದೆ ತಲೆ ತಗ್ಗಿಸಿದೆ.
ಹುಡುಗಿ ನೋಡಲು ತುಂಬಾ ಮುದ್ದಾಗಿದ್ದಳು. ಸುಮಾರು ಐದಾರು ವರುಷವಿರಬಹುದು. ಅವಳನ್ನು ನೋಡುತ್ತಿದ್ದರೆ ಮಧ್ಯಮ ವರ್ಗದ ಹುಡುಗಿಯಂತೆ ಕಾಣುತ್ತಿದ್ದಳು. ನಾನು ಅವಳ ಬಳಿ ಪಿಸುದನಿಯಲ್ಲಿ, ನೀನು ಯಾರಮ್ಮ ? ನಿನ್ನ ಅಪ್ಪ ಅಮ್ಮ ಎಲ್ಲಿ ? ಎಂದು ಕೇಳಿದೆ. ಅದಕ್ಕವಳು, ಆಂಟಿ, ಈಗ ಸುಮ್ಮನೆ ನಡೀರಿ ಎಂದು ನನಗೆ ಆಣತಿಯಿತ್ತಳು ! ನಾನು ವಿಧೇಯಳಂತೆ ತಲೆಯಾಡಿಸುತ್ತಾ ಅವಳನ್ನು ಕರೆದುಕೊಂಡು ಕಾರಿನತ್ತ ನಡೆದೆ. ನಮ್ಮ ಡ್ರೈವರ್, ನನ್ನ ಜೊತೆ ಬರುತ್ತಿದ್ದ ಪುಟ್ಟ ಹುಡುಗಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದ. ನಾವು ಕಾರಿನ ಬಳಿ ಬಂದ ತಕ್ಷಣ ಡ್ರೈವರ್ ಬಾಗಿಲು ತೆರೆದು, ಯಾರು ಮೇಡಂ, ಈ ಹುಡುಗಿ ಎಂದು ಕೇಳಿದ. ನಾನು ಅವನಿಗೆ ಅವಳ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಆ ಹುಡುಗಿ ನನ್ನ ಕೈ ಕೊಸರಿಕೊಂಡು ಓಡಿದಳು. ನಾನು ಗಾಬರಿಯಿಂದ ಇವಳು ಮತ್ತೆ ಆ ಧಡಿಯನ ಕೈಗೆ ಸಿಕ್ಕಿ ಬಿಡುತ್ತಾಳಲ್ಲ ಎಂಬ ಆತಂಕದಿಂದ ಡ್ರೈವರ್ ಗೆ ಅವಳನ್ನು ಹಿಡಿಯುವಂತೆ ಹೇಳಿ ನಾನೂ ಅವಳ ಹಿಂದೆ ಧಾವಿಸಿದೆ. ಜನರೆಲ್ಲಾ ನಮ್ಮನ್ನೇ ನೋಡುತ್ತಿದ್ದರು. ಆ ಹುಡುಗಿ ಯಾಕೆ ಓಡುತ್ತಿದ್ದಾಳೆ ಎಲ್ಲಿಗೆ ಓಡುತ್ತಿದ್ದಾಳೆ ಎಂದು ಮಿಕಿ ಮಿಕಿ ನೋಡುತ್ತಿದ್ದರು. ನಾನು ನೋಡುತ್ತಿದ್ದಂತೆ ಆ ಹುಡುಗಿ ಅಲ್ಲೇ ನಿಂತಿದ್ದ ಮಹಿಳೆಯೊಬ್ಬಳ ಬಳಿ ಧಾವಿಸಿ ಮಮ್ಮಿ .. ಎಂದಳು.
ನನಗೆ ರೇಗಿ ಹೋಯಿತು. ಇವಳು ಒಮ್ಮೆ ನನ್ನನ್ನು ಮಮ್ಮಿ ಎಂದಳು ಈಗ ಈಕೆಯನ್ನು ಮಮ್ಮಿ ಎನ್ನುತ್ತಿದ್ದಾಳೆ, ಏನಾಗಿದೆ ಈ ಹುಡುಗಿಗೆ ಎಂದುಕೊಳ್ಳುತ್ತಿದ್ದಂತೆ ನಾನು ಅವರನ್ನು ಸಮೀಪಿಸಿದೆ. ಡ್ರೈವರ್ ಕೂಡ ಆಕೆಯನ್ನು ಸಮೀಪಿಸಿ ಹುಡುಗಿಯ ಕೈ ಹಿಡಿದು, ಬಾಮ್ಮ ನಡೀ ಹೋಗೋಣ ಎಂದಾಗ ಅವಳು ಅವನ ಕೈ ಕೊಡವುತ್ತ, ಇವರೇ ನನ್ನ ಮಮ್ಮಿ ಎಂದಳು. ಅಷ್ಟರಲ್ಲಿ ನಾನು ಅವಳನ್ನು ಏನಮ್ಮ ನಾಟಕ ಆಡ್ತಿದ್ದೀಯಾ ಕ್ಷಣಕ್ಕೊಬ್ಬರನ್ನು ಮಮ್ಮಿ ಅನ್ನುತ್ತಿದ್ದೀಯಾ ಏನು ನಿನ್ನ ಕತೆ ಎಂದು ಕೇಳಿದೆ. ಅವಳು ಬೆದರಿ ಆ ಮಹಿಳೆಯನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆ ಮಹಿಳೆ ನನ್ನತ್ತ ನೋಡುತ್ತಾ ಸಾರಿ, ಇವಳು ನನ್ನ ಮಗಳು ರಾಣಿ, ಅವಳಿಗೆ ಡ್ರಾಮಾ ಜೂನಿಯರ್ಸ್ ಗೆ ಹೋಗಬೇಕೆಂದು ಆಸೆ. ಆದ್ರೆ ನಾನು ಬೇಡಾ ಅಂತ ಹೇಳ್ತಿದ್ದೆ ನಿಂಗೆ ಅದೆಲ್ಲ ಮಾಡಕ್ಕೆ ಬರಲ್ಲ ಅಂತ ಅದ್ಕೆ ಅವಳು ನಿಮ್ಮ ಬಳಿ ಬಂದು ನಾಟಕ ಮಾಡಿದ್ಲು ಬೇಜಾರಾಗಿದ್ರೆ ಕ್ಷಮಿಸಿ ಎಂದಳು. ಆ ಹುಡುಗಿ ನನ್ನನ್ನು ಬೇಸ್ತು ಬೀಳಿಸಿದ್ದು ನೋಡಿ ಪೆಚ್ಚಾದೆ. ಅವಳು ಇಷ್ಟೊತ್ತು ನಾಟಕ ವಾಡಿದಳೆ, ನನಗೆ ಗೊತ್ತಾಗಲೇ ಇಲ್ವಲ್ಲ, ಛೆ! ನಾನೆಂಥಾ ಪೆದ್ದು, ಇಷ್ಟೊಂದು ಜನ ಓಡಾಡೋ ಜಾಗದಲ್ಲಿ ಯಾರಾದರೂ ಕಿಡ್ ನ್ಯಾಪ್ ಮಾಡಲು ನೋಡುತ್ತಾರೆಯೇ ಎಂದುಕೊಂಡು ನಾಚುತ್ತ, ಪರವಾಗಿಲ್ಲಮ್ಮ ನಿಮ್ಮ ಮಗಳು ತುಂಬಾ ಚೆನ್ನಾಗಿ ನಾಟಕ ಮಾಡ್ತಾಳೆ ಅವಳನ್ನು ಆ ಸ್ಪರ್ಧೆಗೆ ಖಂಡಿತ ಕಳುಹಿಸಿ ನಾವು ಚಿಕ್ಕವವರಿರುವಾಗ ಇಂಥಾ ಸ್ಪರ್ಧೆಗಳಿರಲಿಲ್ಲ ಈಗಿನ ಮಕ್ಕಳಿಗೆ ಅಂಥಾ ಅವಕಾಶವಿರುವಾಗ ಯಾಕೆ ಬೇಡವೆನ್ನುತ್ತೀರಿ ಸ್ಪರ್ಧೆಯಲ್ಲಿ ಜಯ ಗಳಿಸುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪುಟ್ಟ ಭಾಷಣ ಬಿಗಿದೆ. ಆ ಹುಡುಗಿಯ ಬೆನ್ನು ತಟ್ಟುತ್ತ, ತುಂಬಾ ಚೆನ್ನಾಗಿ ಮಾಡಿದೆ, ಶಹಭಾಸ್ ಎಂದೆ. ಅವಳು ತುಂಟ ನಗು ಬೀರುತ್ತ, ಸಾರಿ ಆಂಟಿ ಎಂದಳು. ನಾನು ಪರವಾಗಿಲ್ಲ ಇನ್ನೂ ಚೆನ್ನಾಗಿ ಮಾಡು ಎಂದು ಹೇಳಿ ಡ್ರೈವರ್ ಗೆ ಕಾರು ಅಲ್ಲೇ ತರಲು ತಿಳಿಸಿ ಅತ್ತಿತ್ತ ನೋಡಿದೆ. ಯಾರಾದರೂ ನಾನು ಪೇಚಿಗೆ ಸಿಲುಕಿದ್ದನ್ನು ಕಂಡರೆನೋ ಎಂಬ ಮುಜುಗರ. ದೂರದಲ್ಲಿ ಆ ಧಾಂಡಿಗ ಯುವಕ ಇನ್ನೂ ಅಲ್ಲೇ ಇದ್ದ. ಅವನೂ ಈ ನಾಟಕದಲ್ಲಿ ಶಾಮೀಲಾಗಿರಬಹುದೇ ಎಂದುಕೊಳ್ಳುತ್ತಿದ್ದಂತೆ ಕಾರು ಬಂದು ನಿಂತಿತು. ಕಾರಿನಲ್ಲಿ ಕುಳಿತು ಒಮ್ಮೆ ಹಿಂತಿರುಗಿ ನೋಡಿದಾಗ ಆ ಹುಡುಗಿ ತಾಯಿಯ ಜೊತೆ ಸಂತಸದಿಂದ ಕುಣಿಯುತ್ತ ಹೋಗುತ್ತಿದ್ದಳು. ಬಹುಶ ಅವಳ ಅಮ್ಮ ಸ್ಪರ್ಧೆಗೆ ಕಳುಹಿಸಲು ಒಪ್ಪಿರಬೇಕು ಅಂತ ಅಂದುಕೊಂಡೆ.