ನಮ್ಮ ಮನೆಯ ನೆಂಟರು !


ನಾವು ಹೊಸ ಮನೆಗೆ ಬಂದಾಗ ಮನೆಯ ಸುತ್ತಲೂ ಹಸಿರರಾಶಿ ಕಂಡು ಪುಳಕಗೊಂಡಿದ್ದೆ. ಮಾರನೆಯ ದಿನ ಬಾಲ್ಕನಿಗೆ ಹೋದಾಗ ಅಲ್ಲಿ ಮತ್ತೊಬ್ಬರು ನಮಗಿಂತ ಮೊದಲೇ ವಾಸಿಸುತ್ತಿರುವುದು ಕಂಡು ದಂಗಾದೆ. ಗಾಬರಿಯಾಗಿ ಬಿಟ್ರಾ ? ಮನುಷ್ಯರಲ್ಲ, ಹಕ್ಕಿಗಳು ! ಎ. ಸಿ ಬಾಕ್ಸ್ ನ ಹಿಂದೆ ಪುಟ್ಟ ಗೂಡು ಕಟ್ಟಿಕೊಂಡು ಚಿಲಿಪಿಲಿ ಮಾಡುತ್ತಿದ್ದವು. ನನ್ನನ್ನು ಕಂಡು ಬೆದರಿ, ಅತಿಕ್ರಮಣ ಮಾಡಿದ್ದಕ್ಕೆ ಶಿಕ್ಷಿಸುವೇನೋ ಎಂಬ ಭೀತಿಯಿಯಿಂದ ಪುರ್ರನೆ ಹಾರಿ ಹೋಗಿದ್ದವು ಜೋಡಿ ಹಕ್ಕಿಗಳು. ನನಗೆ ಅದು ಯಾವ ಹಕ್ಕಿ ಎಂದು ನಿರ್ಧಿಷ್ಟವಾಗಿ ತಿಳಿಯದಿದ್ದರೂ ಅವು ಗಾತ್ರದಲ್ಲಿ ಗುಬ್ಬಚ್ಚಿಯಷ್ಟೇ ಇದ್ದರೂ ಅದರ ಹಾಗೆ ದುಂಡು ದುಂಡಾಗಿರದೆ ತೆಳ್ಳಗೆ ಇತ್ತು. ಮೈ ಬಣ್ಣ ತಿಳಿ ಕಂದು ಬಣ್ಣ ಹೊಟ್ಟೆಯ ಬಳಿ ಬಿಳಿ ಬಣ್ಣ. ಎಲ್ಲರೂ ಪಂಜರದಲ್ಲಿ ಹಕ್ಕಿಗಳನ್ನಿಟ್ಟು ಸಾಕುತ್ತರಲ್ಲವೇ, ನಾನು ಪಂಜರವಿಲ್ಲದೆ ಅವರನ್ನು ಸಾಕುತ್ತೇನೆ ಎಂದು ಹುರುಪಿನಿಂದ ಅಡಿಗೆ ಮನೆಗೆ ಹೋಗಿ ಕೆಲವು ಧಾನ್ಯಗಳನ್ನು ಅಕ್ಕಿ,ಗೋಧಿ ಕಾಳುಗಳನ್ನು ಸೇರಿಸಿ ಒಂದು ಪುಟ್ಟ ತಟ್ಟೆಯಲ್ಲಿಟ್ಟು ಅವುಗಳ ಗೂಡಿನ ಬಳಿ ಇಟ್ಟೆ. ಸಂಜೆ ನಾನು ಬಾಗಿಲು ಮುಚ್ಚುತ್ತಿದ್ದಂತೆ ಅದನ್ನೇ ಕಾಯುತ್ತ ಕುಳಿತ ಹಕ್ಕಿಗಳು ಹಾರಿ ಬಂದು ಗೂಡನ್ನು ಸೇರಿಕೊಂಡವು.

ಮರುದಿನ ಬೆಳಗ್ಗೆ ನೋಡಿದರೆ ಹಕ್ಕಿಗಳು ಅದಾಗಲೇ ಆಹಾರ ಹುಡುಕಿಕೊಂಡು ಹೊರಟಿದ್ದವು. ನಾನು ಇಟ್ಟ ಧಾನ್ಯಗಳ ತಟ್ಟೆಯನ್ನು ಮುಟ್ಟಲೇ ಇಲ್ಲ. ಅದನ್ನು ನೋಡಿ ಹಕ್ಕಿಗಳನ್ನು ಸಾಕುವ ಉತ್ಸಾಹ ಟುಸ್ಸೆಂದಿತು. ನೀನು ನಮ್ಮ ತಂಟೆಗೆ ಬರಬೇಡ ನಾವು ನಿಮ್ಮ ತಂಟೆಗೆ ಬರುವುದಿಲ್ಲ ಎಂದು ಅವು ಈ ಮೂಲಕ ಹೇಳುತ್ತಿವೆಯೇನೋ ಅನಿಸಿ ಮನಸಿಗೆ ಪಿಚ್ಚೆನಿಸಿತು. ನಂತರ ನಾನು ಅದೆಷ್ಟು ವಿಧದ ತಿನಿಸು ಅನ್ನ ಎಲ್ಲ ಇಟ್ಟು ನೋಡಿದೆ. ನಿನ್ನ ಹಂಗು ನಮಗೆ ಬೇಡ ನಮ್ಮ ಹೊಟ್ಟೆಯನ್ನು ನಾವೇ ತುಂಬಿಸಿ ಕೊಳ್ಳುತ್ತೇವೆ ಎನ್ನುವ ಹಾಗೆ. ಬಹಳ ಸ್ವಾಭಿಮಾನಿ ಹಕ್ಕಿಗಳೇನೋ ಅಂದುಕೊಂಡು ನಾನು ಅದಕ್ಕೆ ತಿಂಡಿ ಇಡುವುದನ್ನು ಬಿಟ್ಟು ಬಿಟ್ಟೆ. ಅದರ ತಂಟೆಗೂ ಹೋಗದೆ ನನ್ನ ಪಾಡಿಗೆ ನಾನಿದ್ದರೆ ಅವು ಅವುಗಳ ಪಾಡಿಗೆ ಇದ್ದವು. ಸಂಜೆ ಮಾತ್ರ ಬಾಲ್ಕನಿಯಲ್ಲಿ ಅತ್ತಿತ್ತ ಹಾರಿಕೊಂಡು ಕತ್ತಲಾದ ಮೇಲೆ ಗೂಡು ಸೇರುತ್ತಿದ್ದವು.

ಒಂದು ದಿನ ಸಂಜೆ ನಾನು ತಿಂಡಿ ತಿನ್ನುತ್ತಿರುವಾಗ ನನಗೆ ನೆತ್ತಿಗೇರಿ ಒಮ್ಮೆಲೇ ವಿಪರೀತ ಕೆಮ್ಮು ಶುರುವಾಯಿತು. ನಾನು ಖೊಕ್ ಖೊಕ್ ಎಂದು ಕೆಮ್ಮುವುದು ಕೇಳಿಸಿ ಹಕ್ಕಿಗಳು ಗಾಬರಿಗೊಂಡವು. ಅವುಗಳ ಚಿಲಿಪಿಲಿ ಜೋರಾಗಿ ನಂತರ ಅವು ಗೂಡಿನಿಂದ ಹಾರಿ ಹೋದವು. ಬಹುಶಃ ನನ್ನ ಕೆಮ್ಮು ಅವುಗಳಿಗೆ ಕರ್ಣ ಕಠೋರವಾಗಿರಬೇಕು ! ನಾನು ಅವುಗಳನ್ನು ಹೆದರಿಸಿದೆನಲ್ಲ ಎಂದು ಬೇಸರವಾಯಿತು. ನಂತರ ರಾತ್ರಿಯಾದರೂ ಅವುಗಳ ಸುಳಿವಿಲ್ಲ. ಮರುದಿನವೂ ಪತ್ತೆಯಿಲ್ಲ. ನನ್ನ ಕೆಮ್ಮು ಅವುಗಳನ್ನು ಅಷ್ಟೊಂದು ಹೆದರಿಸಿ ಬಿಟ್ಟಿತೆ ಎಂದು ನನಗೆ ನಗು ಬಂದಿತು. ವಾರವಾದರೂ ಹಕ್ಕಿಗಳ ಸುಳಿವಿಲ್ಲ. ಅವು ಇನ್ನು ಬರಲಿಕ್ಕಿಲ್ಲವೆಂದು ನಾನು ಸುಮ್ಮನಾಗಿ ಬಿಟ್ಟೆ.

ಕೆಲವು ತಿಂಗಳ ಬಳಿಕ ಒಂದು ದಿನ ಹಕ್ಕಿಗಳ ಚಿಲಿಪಿಲಿ ಕೇಳಿಸಿತು. ಧಾವಿಸಿ ಬಂದು ನೋಡಿದೆ. ಹಕ್ಕಿಗಳು ಗೂಡಿಗೆ ಮರಳಿದ್ದವು. ಬಹುಶ ನನ್ನ ಕೆಮ್ಮನ್ನು ಅವುಗಳು ಮರೆತಿರಬಹುದು ಎಂದುಕೊಂಡು ಅಂದಿನಿಂದ ಜೋರಾಗಿ ಕೆಮ್ಮದ ಹಾಗೆ ಜಾಗ್ರತೆ ವಹಿಸಿದೆ. ಅವು ತಮ್ಮ ಗೂಡನ್ನು ರಿಪೇರಿ ಮಾಡುತ್ತಿದ್ದವು. ಅತ್ತಿಂದಿತ್ತ ಹಾರುತ್ತ ಬಾಯಲ್ಲಿ ಹುಲ್ಲನ್ನು ಕಚ್ಚಿಕೊಂಡು ಬಂದು ಗೂಡಿಗೆ ಜೋಡಿಸುತ್ತಿದ್ದವು. ನಾವು ಕೆಲಕಾಲ ಮನೆಗೆ ಬೀಗ ಹಾಕಿ ನಂತರ ಪುನಃ ಬಂದು ವಾಸಿಸುವ ಮೊದಲು ಎಲ್ಲವನ್ನು ಚೊಕ್ಕ ಮಾಡುವ ಹಾಗೆ ಮಾಡುತ್ತದಲ್ಲವೇ ಎಂದು ನನಗೆ ಸೋಜಿಗವಾಯಿತು. ನಂತರ ಕೆಲವು ದಿನಗಳು ಕಳೆದ ಮೇಲೆ ಒಂದು ದಿನ ಹಕ್ಕಿಗಳು ಗೂಡಿನಿಂದ ಬೆಳಗ್ಗೆ ಆರು ಗಂಟೆಗೆ ಹೊರಡುವ ಮುನ್ನ ಚೀವ್ ಚೀವ್ ಎಂದು ಲಯಬದ್ಧವಾಗಿ ಹಾಡಲು ಶುರು ಮಾಡಿದವು. ಆದರೆ ಜೊತೆ ಎಳೆಯ ಸ್ವರಗಳೂ ಕೇಳಿಸಿ ಹಕ್ಕಿ ಮರಿ ಹಾಕಿರಬೇಕು ಎಂದು ಸಂತಸ ಪಟ್ಟೆ.

ಎಷ್ಟು ಮರಿಗಳಿರಬಹುದು, ನೋಡಲು ಹೇಗಿರಬಹುದು, ಅದರ ಫೋಟೋ ತೆಗೆಯಬೇಕು ಎಂದೆಲ್ಲ ಕೌತುಕವಾಯಿತು. ಹಕ್ಕಿಗಳು ಎಂದಿನಂತೆ ಆರು ಗಂಟೆಗೆ ಹಾರಿ ಹೋದರೂ ತಾಯಿ ಹಕ್ಕಿ ಮಾತ್ರ ಗೂಡನ್ನು ನಿಮಿಷಕ್ಕೊಂದು ಸಲ ಬಂದು ಮರಿಗಳು ಕ್ಷೇಮವಾಗಿವೆಯೇ ಎಂದು ನೋಡಿ ಹೋಗುತ್ತಿತ್ತು. ಅದನ್ನು ನೋಡಿ ಹಕ್ಕಿಯಾದರೂ ತಾಯ ಹೃದಯ, ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಅಂತ ಅಂದುಕೊಂಡೆ. ಅದಕ್ಕೆ ಆತಂಕ ಕೊಡುವುದು ಬೇಡ ಎಂದು ಮರಿಗಳನ್ನು ನೋಡುವ ಆಸೆ ಕೈ ಬಿಟ್ಟೆ. ಮನುಷ್ಯರು ಮುಟ್ಟಿದರೆ ಮತ್ತೆ ಆ ಮರಿಗಳನ್ನು ಹಕ್ಕಿಗಳು ತಮ್ಮ ಬಳಿ ಸೇರಿಸಿಕೊಳ್ಳುವುದಿಲ್ಲ ಎಂದು ಕೇಳಿದ್ದೆ. ಹಾಗೇನಾದರೂ ಆದರೆ ಮರಿಗಳಿಗೆ ನಾನೇ ಆಹಾರ ಕೊಡಬೇಕಾಗುತ್ತದೆ. ಆದರೆ ಅಷ್ಟು ಪುಟ್ಟ ಮರಿಗಳಿಗೆ ಏನು ಕೊಡುವುದು ಅಲ್ಲದೆ ತಾಯಿಯಿಂದ ಮರಿಗಳನ್ನು ದೂರ ಮಾಡುವ ಪಾಪಕಾರ್ಯ ಮಾಡಲು ಮನಸ್ಸಾಗಲಿಲ್ಲ. ಅವುಗಳು ಚೆನ್ನಾಗಿರಲಿ ಎಂದು ಅವುಗಳ ಗೂಡಿನತ್ತ ಹೋಗುವುದನ್ನು ಬಿಟ್ಟೆ.

ದಿನವೂ ಬೆಳಿಗ್ಗೆ ಹಕ್ಕಿಗಳು ಹೊರಹೋಗುವ ಮುನ್ನ ಅವುಗಳ ಸಂಗೀತ ಕಚೇರಿ ನಡೆಯುತ್ತಿತ್ತು. ಚೀವ್ ಚೀವ್ ಎಂದು ಲಯಬದ್ಧವಾಗಿ ಹಾಡುತ್ತಿದ್ದವು. ಬಳಿಕ ದೊಡ್ಡ ಹಕ್ಕಿಗಳು ಸಂಜೆ ಮರಳಿ ಬರುವವರೆಗೂ ಮರಿಗಳು ತೆಪ್ಪಗೆ ಸದ್ದು ಮಾಡದೆ ಬಿದ್ದು ಕೊಂಡಿರುತ್ತಿದ್ದವು. ಅವುಗಳು ಸಂಜೆ ಬಂದ ಕೂಡಲೇ ಮತ್ತೆ ಸಂಗೀತ ಕಚೇರಿ ಶುರುವಾಗುತ್ತಿತ್ತು. ಕೆಲವೊಮ್ಮೆ ಅದು ಎಷ್ಟು ತಾರಕ್ಕೇರುತ್ತಿತ್ತೆಂದರೆ ನಂಗೆ ಟಿವಿಯ ದ್ವನಿ ಕೇಳಿಸುತ್ತಿರಲಿಲ್ಲ ! ನಾನು ಅವುಗಳ ಗಾಯನವನ್ನು ಅವುಗಳಿಗೆ ತಿಳಿಯದ ಹಾಗೆ ರೆಕಾರ್ಡ್ ಮಾಡಿಕೊಂಡೆ. ಒಂದು ದಿನ ದೊಡ್ಡ ಹಕ್ಕಿಗಳು ಗೂಡಿನಿಂದ ಹೋದಮೇಲೆ ನಾನು ಅದನ್ನು ಹಾಕಿ ಮರಿಗಳ ಪ್ರತಿಕ್ರಿಯೆ ಏನಿರಬಹುದು ಎಂದು ಕುತೂಹಲದಿನ ಗಮನಿಸಿದೆ. ಆದರೆ ಅವುಗಳು ತುಟಿ ಪಿಟಿಕ್ಕೆನ್ನದೆ ಮೌನವಾಗಿ ಕುಳಿತಿದ್ದವು. ಸಂಜೆ ದೊಡ್ಡ ಹಕ್ಕಿಗಳು ಬಂದ ಮೇಲೆ ಗಾಯನ ಮತ್ತೆ ಶುರುವಾಯಿತು. ಇದು ದಿನವೂ ತಪ್ಪದೆ ನಡೆಯುತ್ತಿತ್ತು, ಸಂಗೀತಾಭ್ಯಾಸ ಮಾಡುವವರು ನಿತ್ಯವೂ ಹಾಡುವ ಹಾಗೆ!

ಕೆಲವು ಸಮಯದ ನಂತರ ಮರಿಗಳೆಲ್ಲ ಒಂದೊಂದಾಗಿ ಹಾರಲು ಪ್ರಯತ್ನಿಸುತ್ತಾ ಇರುವುದನ್ನು ಕಂಡು ಮರಿಗಳೆಷ್ಟು ಎಂದು ನೋಡಿದೆ. ಆದರೆ ಮರಿಗಳು ಯಾವುವು ? ದೊಡ್ದಹಕ್ಕಿಗಳು ಯಾವುವು ಎಂದು ತಿಳಿಯದಷ್ಟು ಮರಿಗಳು ದೊಡ್ಡದಾಗಿ ಬೆಳೆದಿದ್ದವು. ಒಟ್ಟು ಆರು ಹಕ್ಕಿಗಳಿದ್ದವು. ಹಾಗಿದ್ದರೆ ನಾಲ್ಕು ಮರಿಗಳಿರಬೇಕು ಎಂದು ಯೋಚಿಸಿದೆ. ಈಗ ಅವುಗಳಿಗೆ ನನ್ನ ಭಯ ಅಷ್ಟೊಂದು ಇರಲಿಲ್ಲ. ಕಿಟಕಿ ತೆರೆದಿಟ್ಟರೆ ಒಂದೊಂದಾಗಿ ಒಳಬಂದು ಹಾರಾಡಿ ಮತ್ತೆ ಹೊರಗೆ ಹೋಗುತ್ತಿದ್ದವು. ಹೀಗೆ ಆದರೆ ನನ್ನ ಹಾಗೂ ಅವುಗಳ ಸ್ನೇಹಕ್ಕೆ ಸಧ್ಯದಲ್ಲೇ ನಾಂದಿ ಹಾಡಬಹುದು ಎಂದುಕೊಂಡು ಖುಷಿ ಪಟ್ಟೆ. ಆದರೆ ಅವುಗಳು ಒಳ ಬಂದಾಗ ನಾನು ಕುಳಿತಲ್ಲಿಂದ ಸ್ವಲ್ಪ ಅಲುಗಾಡಿದರೂ ಹಾರಿ ಹೋಗುತ್ತಿದ್ದವು. ಹೀಗೆ ಬಂದು ಹೋಗುತ್ತಾ ಇದ್ದಾರೆ ಅವುಗಳ ಭಯ ಕಡಿಮೆಯಾಗಿ ನನ್ನ ಜತೆ ಸ್ನೇಹ ಬೆಳೆಸಬಹುದು ಎಂದುಕೊಂಡು ಆ ದಿನಕ್ಕಾಗಿ ಕಾತರದಿಂದ ಕಾಯತೊಡಗಿದೆ. ನಂತರ ದಿನವೂ ಎಲ್ಲ ಹಕ್ಕಿಗಳು ಬೆಳಗ್ಗೆ ಆರಕ್ಕೆ ಗೂಡನ್ನು ಬಿಟ್ಟರೆ ಸಂಜೆ ಗೂಡಿಗೆ ಮರಳುವುದು ಅವುಗಳ ದಿನಚರಿಯಾಯಿತು. ಅಷ್ಟು ಪುಟ್ಟ ಗೂಡಲ್ಲಿ ಅದು ಹೇಗೆ ಆರು ಹಕ್ಕಿಗಳು ವಾಸ ಮಾಡುತ್ತವೋ ಎಂದು ಆಶ್ಚರ್ಯ ಪಟ್ಟೆ. ಆದರೆ ಒಂದು ದಿನ ಹಾರಿಹೋದ ಹಕ್ಕಿಗಳು ಮತ್ತೆ ಗೂಡಿಗೆ ಮರಳಲಿಲ್ಲ. ನಾನು ಚಾತಕ ಪಕ್ಷಿಯಂತೆ ಅವುಗಳ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದೆ. ವಾರಗಳು ಉರುಳಿ ತಿಂಗಳಾದರೂ ಅವುಗಳ ಪತ್ತೆಯೇ ಇಲ್ಲ. ಇನ್ನು ಅವು ಬರುವುದಿಲ್ಲವೇನೋ ಎಂದು ಆಸೆಯನ್ನೇ ಬಿಟ್ಟೆ.

ಹಲವು ತಿಂಗಳುಗಳು ಕಳೆದ ಮೇಲೆ ಆಗೀಗ ಒಂದು ಹಕ್ಕಿ ಆಗಾಗ ಬಂದು ಗೂಡನ್ನು ಪರಿಶೀಲಿಸಿ ಹೋಗುತ್ತಿದೆ. ಬಹುಶ ಅದು ಮರಿ ಇಡುವ ಕಾಲ ಸನ್ನಿಹಿತವಾಗಿದೆಯೇನೋ ಅಂತ ಅಂದುಕೊಂಡೆ. ಇವತ್ತು ಬೆಳಿಗ್ಗೆ ಟಿವಿಯಲ್ಲಿ ಜ್ಯೋತಿಷಿಗಳು ಅಶ್ವಿನಿ ಮೃಗಶಿರಾ ಇತ್ಯಾದಿ ನಕ್ಷತ್ರಗಳ ದಿನ ಹೊಸ ಮನೆಗೆ ಹೋದರೆ ಶುಭ ಎಂದು ಹೇಳಿದರು. ನಂತರ ನಾನು ಬಾಲ್ಕನಿಗೆ ಬಂದು ನೋಡಿದರೆ ಹಕ್ಕಿಗಳು ಬಂದಿದ್ದವು. ಅದು ಮೊದಲು ಬಂದ ಜೋಡಿ ಹಕ್ಕಿಗಳೋ ಅಥವಾ ಮರಿ ಹಕ್ಕಿ ತನ್ನ ಸಂಗಾತಿಯೊಡನೆ ಬಂದಿದೆಯೋ ಎಂದು ಮಾತ್ರ ತಿಳಿಯಲಿಲ್ಲ. ಗೂಡನ್ನು ಶುಚಿ ಹಾಗೂ ರಿಪೇರಿ ಮಾಡುವ ಕೆಲಸ ಭರದಿಂದ ನಡೆಯುತ್ತಿತ್ತು. ನನಗೆ ಸಂತಸವಾಗಿ ಅವುಗಳಿಗೆ ತೊಂದರೆಯಾಗುವುದು ಬೇಡವೆಂದು ಸದ್ದಿಲ್ಲದೆ ಒಳಗೆ ಬಂದೆ. ಅಚಾನಕ್ಕಾಗಿ ನನ್ನ ಗಮನ ಕ್ಯಾಲೆಂಡರ್ ನತ್ತ ಹರಿದಾಗ ಇವತ್ತು ಮೃಗಶಿರಾ ನಕ್ಷತ್ರವೆಂದಿತ್ತು! ಪರವಾಗಿಲ್ಲ, ಹಕ್ಕಿಗಳು ಒಳ್ಳೆ ದಿನ ನೋಡಿ ಬಂದಿವೆ. ಅವುಗಳಿಗೆ ಇವತ್ತು ಮೃಗಶಿರಾ ನಕ್ಷತ್ರ ಎಂದು ಗೊತ್ತಿರಬಹುದೇ ಎಂದು ಪೆದ್ದು ಪೆದ್ದಾಗಿ ಯೋಚಿಸಿದೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.