ನಿಗೂಢ ಕಾಯಿಲೆ


ತನಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ ಆತ್ಮೀಯ ಗೆಳೆಯ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿದ ಸುದ್ದಿ ಕೇಳಿ ಆಘಾತದಿಂದ ಸಮರ್ ಗೆ ಕಣ್ಣು ಕತ್ತಲೆ ಬಂದಂತಾಯಿತು. ಆದರೂ ಚೇತರಿಸಿಕೊಂಡು ಗೆಳೆಯನಿಗೆ ಅಂತಿಮ ನಮನ ಸಲ್ಲಿಸಲು ಸಮರ್ ಆತನ ಮನೆಗೆ ಧಾವಿಸಿದ. ಅಲ್ಲಿ ಅವನ ಶೋಕತಪ್ತ ಮನೆಯವರಿಗೆ ಸಮಾಧಾನ ಹೇಳಿ ಅವರಿಗೆ ತನ್ನಿಂದ ಸಾಧ್ಯವಾದಷ್ಟೂ ಸಹಾಯ ಮಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವವರೆಗೂ ಅಲ್ಲಿದ್ದು ಕೊನೆಗೆ ಅಲ್ಲಿಂದ ಬರುತ್ತಿರುವಾಗ ಏನೋ ಕಾಲಿಗೆ ಚುಚ್ಚಿದಂತಾಗಿ ತೀವ್ರ ನೋವಾಯಿತು. ಅಸಾಧ್ಯ ನೋವನ್ನು ತಡೆಯಲಾಗದೆ ಸಮರ್, ತನ್ನ ಶೂಸ್ ಮತ್ತು ಸಾಕ್ಸನ್ನು ಭೇದಿಸಿ ತನ್ನ ಕಾಲನ್ನು ಚುಚ್ಚಬೇಕಾದರೆ ಅದು ಎಂಥಾ ಮುಳ್ಳಿರಬಹುದು ಎಂದುಕೊಳ್ಳುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ತನ್ನ ಶೂಸ್ ಮತ್ತು ಸಾಕ್ಸನ್ನು ಬಿಚ್ಚಿ ನೋಡಿದವನಿಗೆ ಆಶ್ಚರ್ಯ ಕಾದಿತ್ತು. ಎರೆಹುಳುವಿನಂತಿದ್ದ ಹುಳುವೊಂದರ ಅರ್ಧಭಾಗ ಇನ್ನೂ ಪಾದದ ಹೊರಗೆ ನೇತಾಡುತ್ತಿತ್ತು ! ಅರೆ ! ಹುಳು ಇಷ್ಟೊಂದು ನೋವು ಕೊಡುತ್ತದೆಯೇ ಅಲ್ಲದೆ ಅದು ತನ್ನ ಕಾಲಿನ ಒಳಗೆ ಹೊಕ್ಕಿದ್ದಾದರೂ ಹೇಗೆ ಎಂದು ಅಚ್ಚರಿ ಪಡುತ್ತ ಅದನ್ನು ಎಳೆದು ಹೊರ ತೆಗೆಯಲು ಪ್ರಯತ್ನಿಸಿದ. ಆದರೆ ಅದು ಆತನ ಕೈಗೆ ಸಿಗದೇ ಜಾರುತ್ತಿತ್ತು. ಕೊನೆಗೆ ಸಮರ್ ಅಲ್ಲಿ ಕೆಳಗೆ ಬಿದ್ದಿದ್ದ ಕಾಗದದ ಚೂರನ್ನು ತೆಗೆದುಕೊಂಡು ಅದರಿಂದ ಹುಳುವನ್ನು ಹೊರಕ್ಕೆ ತೆಗೆಯಲು ಯತ್ನಿಸಿದ. ಅವನು ಎಳೆದ ರಭಸಕ್ಕೆ ಹುಳ ಎರಡು ತುಂಡಾಯಿತು. ಹೊರಗೆ ನೇತಾಡುತ್ತಿದ್ದ ಭಾಗ ಮಾತ್ರ ಅವನ ಕೈಗೆ ಸಿಕ್ಕಿತು. ಇದರಿಂದ ಕ್ಷಣ ಕಾಲ ವಿಚಲಿತನಾದ ಸಮರ್ ಅರ್ಧ ಭಾಗ ಒಳಗೆ ಇದ್ದರೂ ಅದು ತುಂಡಾಗಿರುವುದರಿಂದ ಅದು ಸತ್ತು ಹೋಗುತ್ತದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಕೈಗೆ ಸಿಕ್ಕಿದ ಹುಳುವನ್ನು ನೋಡಲು ಮುದ್ದೆಯಾದ ಕಾಗದ ಬಿಚ್ಚಿ ನೋಡಿದ. ಆದರೇನಾಶ್ಚರ್ಯ, ಅಲ್ಲಿ ಹುಳು ಇರಲಿಲ್ಲ ಅದರ ಬದಲು ಸ್ವಲ್ಪ ಮಣ್ಣು ಇತ್ತು ! ಆತಂಕದಿಂದ ಸಮರ್ ಹುಳು ಎಲ್ಲಿ ಹೋಯಿತು ಎಂದು ಸುತ್ತ ಮುತ್ತ ಹುಡುಕಾಡಿದ. ಆದರೆ ಅದು ಸಿಗಲೇ ಇಲ್ಲ ಮತ್ತೆ ತನ್ನ ಪಾದವನ್ನು ಪರೀಕ್ಷಿಸಿ ನೋಡಿದಾಗ ಅಲ್ಲಿ ಗಾಯದ ಗುರುತೇ ಇರಲಿಲ್ಲ ! ಅದನ್ನು ನೋಡಿ ದಂಗಾದ ಸಮರ್, ಏನಾಗುತ್ತಿದೆ ತನಗೆ, ನಿಜವಾಗಿಯೂ ಕಾಲಿಗೆ ಏನಾದರೂ ಚುಚ್ಚಿತ್ತೆ ಅಥವಾ ಇದೆಲ್ಲ ಭ್ರಮೆಯೇ ಎಂದು ಗಲಿಬಿಲಿಗೊಂಡು ಬೇಗನೆ ಶೂಸ್ ಧರಿಸಿ ಮನೆಯತ್ತ ನಡೆದ. ಮನೆಯಲ್ಲಿ ಹೆಂಡತಿಯ ಬಳಿ ಹೇಳೋಣ ಎಂದುಕೊಂಡರೂ ಅವಳು ಗಾಬರಿಯಾದಾಳು ಎಂದು ಅವಳಿಗೆ ತಿಳಿಸುವುದು ಬೇಡ ಎಂದು ನಿರ್ಧರಿಸಿದ.

ಎರಡು ದಿನಗಳಾದರೂ ತನಗೆ ಆರೋಗ್ಯದಲ್ಲಿ ಏನೂ ಸಮಸ್ಯೆಯಾಗದೇ ಇದ್ದುದ್ದು ಕಂಡು ಸಮರ್ ಆ ಹುಳದಿಂದ ಏನೂ ತೊಂದರೆಯಿಲ್ಲ ಎಂದುಕೊಂಡು ನಿರಾಳನಾದ. ಆದರೆ ಕೆಲವು ದಿನಗಳ ಬಳಿಕ ರಾತ್ರಿ ಸುಮಾರು ಹೊತ್ತಿನ ನಂತರ ಸಮರ್ ನ ಹೆಂಡತಿ ಅವನ ಗೊರಕೆಯ ವಿಪರೀತ ಸದ್ದಿನಿಂದ ಎಚ್ಚೆತ್ತು ಗಂಡನನ್ನು ಎಬ್ಬಿಸಲು ಲೈಟ್ ಹಾಕಿದಳು. ಇನ್ನೇನು ಅವನನ್ನು ಎಬ್ಬಿಸಬೇಕು ಎನ್ನುವಷ್ಟರಲ್ಲಿ ಅವಳ ದೃಷ್ಟಿ ಅಚಾನಕ್ಕಾಗಿ ಅವನ ಮೂಗಿನತ್ತ ಹರಿಯಿತು. ಅವನ ಮೂಗಿನಿಂದ ಹುಳುವೊಂದು ಅವನ ಉಸಿರಾಟಕ್ಕೆ ತಕ್ಕಂತೆ ಹೊರಗೆ ಬರುತ್ತಾ ಒಳಗೆ ಹೋಗುತ್ತಾ ಇತ್ತು. ಇದನ್ನು ಕಂಡ ಜ್ಯೋತಿ ಬೆಚ್ಚಿ ಬಿದ್ದು ಗಂಡನ ಮೂಗಿನಲ್ಲಿ ಹುಳ ಎಲ್ಲಿಂದ ಬಂತು ಎಂದುಕೊಂಡು ಸೂಕ್ಷ್ಮವಾಗಿ ಅದನ್ನು ಪರಿಶೀಲಿಸಿದಳು. ಅದು ನೋಡಲು ಎರೆ ಹುಳುವಿನಂತೆ ಇತ್ತು. ಫಳಫಳನೆ ಹೊಳೆಯುತ್ತಿತ್ತು. ಗಂಡನನ್ನು ಎಬ್ಬಿಸಿದರೆ ಅವನು ಉಸಿರೆಳೆದುಕೊಂಡಾಗ ಅದು ಪೂರ್ತಿಯಾಗಿ ಒಳ ಹೋಗಿಬಿಟ್ಟರೆ ಎಂದು ಭಯವಾಗಿ ತಾನೇ ಅದನ್ನು ಹೊರ ತೆಗೆಯಲು ಪ್ರಯತ್ನಿಸಬೇಕು ಎಂದುಕೊಂಡರೂ ಅವಳಿಗೆ ಕೈಯಿಂದ ಅದನ್ನು ಮುಟ್ಟಲು ಅಸಹ್ಯವಾಗಿ ಅಲ್ಲೇ ಟೇಬಲ್ ಮೇಲಿದ್ದ ಗಂಡನ ಕರ್ಚೀಫ್ ತೆಗೆದು ಮೆಲ್ಲನೆ ಅದರಿಂದ ಹುಳುವನ್ನು ಹಿಡಿದೆಳೆಯಲು ಪ್ರಯತ್ನಿಸಿದಳು. ಅವನು ಉಸಿರು ಬಿಟ್ಟಾಗ ಹೊರಬರುತ್ತಿದ್ದ ಹುಳು ಅವನು ಉಸಿರೆಳೆದಾಗ ಮತ್ತೆ ಒಳಗೆ ಹೋಗುತ್ತಿತ್ತು. ಹಾಗಾಗಿ ಜಾಗರೂಕತೆಯಿಂದ ಹೊರಬರುವುದನ್ನೇ ಕಾದು ಕರ್ಚೀಫಿನ ಮೂಲಕ ಚಕ್ಕನೆ ಹಿಡಿದು ಮೆಲ್ಲಗೆ ಎಳೆದಳು. ಹುಳು ಅವಳ ಕೈಗೆ ಬಂದಾಗ ನಿಟ್ಟುಸಿರು ಬಿಟ್ಟು ಗಂಡನನ್ನು ಎಬ್ಬಿಸಿದಳು.

ಸಮರ್ ಗೆ ಅವನ ಮೂಗಿನಿಂದ ಹೊರಬರುತ್ತಿದ್ದ ಹುಳುವಿನ ಬಗ್ಗೆ ಅವಳು ಹೇಳಿದಾಗ ಸಮರ್ ಬೆಚ್ಚಿ ಬಿದ್ದು ಎಲ್ಲಿ ಆ ಹುಳು ತೋರಿಸು ಎಂದಾಗ ಜ್ಯೋತಿ ಅವನ ಕರ್ಚೀಫ್ ತೆರೆದಳು. ಆದರೆ ಅದರಲ್ಲಿ ಹುಳು ಮಾತ್ರ ಇರಲಿಲ್ಲ. ಅದನ್ನು ನೋಡಿ ಜ್ಯೋತಿ ಗಾಬರಿಯಿಂದ ಅದು ಜಾರಿ ಇಲ್ಲೇ ಎಲ್ಲಾದರೂ ಬಿದ್ದಿರಬಹುದು ಎಂದುಕೊಂಡು ಇಡೀ ಹಾಸಿಗೆಯನ್ನೇ ಬುಡಮೇಲು ಮಾಡಿ ಹುಡುಕಿದರೂ ಹುಳು ಮಾತ್ರ ಸಿಗಲೇ ಇಲ್ಲ. ಸಮರ್ ಗೆ ಆಗ ತನಗೆ ಸ್ನೇಹಿತನ ಅಂತ್ಯಕ್ರಿಯೆಗೆ ಹೋದಾಗ ಹುಳು ಚುಚ್ಚಿದ್ದು ನೆನಪಾಗಿ ಇದು ಅದರ ಉಳಿದ ಅರ್ಧಭಾಗವೇ ಇರಬಹುದೇ, ಆದರೆ ಕಾಲಿಗೆ ಚುಚ್ಚಿದ್ದು ಮೂಗಿನಲ್ಲಿ ಬಂದದ್ದಾದರೂ ಹೇಗೆ ಎಂದು ಆತಂಕಗೊಂಡ. ಜ್ಯೋತಿಗೆ ಈ ವಿಷಯ ಹೇಳಲೇಬೇಕೆಂದುಕೊಂಡು ಗೆಳೆಯನ ಅಂತ್ಯಕ್ರಿಯೆಗೆ ಹೋದಾಗ ಹುಳು ಕಾಲಿಗೆ ಚುಚ್ಚಿದ್ದು ಅದನ್ನು ತಾನು ಕಷ್ಟ ಪಟ್ಟು ಹೊರತೆಗೆಯುವಾಗ ಹುಳುವಿನ ಅರ್ಧಭಾಗ ಮಾತ್ರ ಹೊರಗೆ ಬಂದಿದ್ದು, ನಂತರ ನೋಡಿದಾಗ ಹುಳುವಿನ ತುಂಡು ಸಿಗದೇ ಇದ್ದಿದ್ದು, ಆ ಹುಳುವಿನ ಅರ್ಧ ಭಾಗವೇ ಇದಾಗಿರಬಹುದು ಎಂದು ಹೇಳಿದಾಗ ಜ್ಯೋತಿ ಕಂಗಾಲಾದಳು. “ನಾಳೆನೇ ಡಾಕ್ಟರ್ ಹತ್ರ ಹೋಗೋಣ ಕಣ್ರೀ, ನನಗ್ಯಾಕೋ ಭಯವಾಗ್ತಿದೆ. ನೀವು ಯಾಕಾದರೂ ಸ್ಮಶಾನಕ್ಕೆ ಹೋದಿರೋ” ಎಂದು ಆತಂಕ ವ್ಯಕ್ತಪಡಿಸಿದಾಗ ಸಮರ್, “ಆ ಹುಳು ನನಗೆ ಏನೂ ಮಾಡಿಲ್ಲ, ಅಲ್ಲದೆ ಆ ಹುಳುವಿನ ಅರ್ಧಭಾಗ ಇದ್ದಿದ್ದು ಅದೂ ಈಗ ಹೊರಗೆ ಹೋಯಿತಲ್ಲ ಅಷ್ಟೇ, ನೀನು ಸುಮ್ಮನೆ ಟೆನ್ಶನ್ ಮಾಡ್ಕೊಳ್ತೀಯಾ ಅಂತ ನಾನು ಮೊದಲೇ ನಿಂಗೆ ಹೇಳಿಲ್ಲ, ಈಗ ಸುಮ್ಮನೆ ಮಲಕ್ಕೋ” ಎಂದು ತಾನೂ ಮುಸುಕೆಳೆದು ಮಲಗಿಕೊಂಡ. ಜ್ಯೋತಿಗೆ ಏನೂ ಇಲ್ಲವೆಂದು ಹೇಳಿದರೂ ಅವನಲ್ಲೂ ಆತಂಕ ಮನೆ ಮಾಡಿತ್ತು. ಆದರೆ ತಾನು ಗಾಬರಿಯಾದರೆ ಜ್ಯೋತಿ ಕಂಗಾಲಾಗುತ್ತಾಳೆ ಎಂದು ತನ್ನ ಆತಂಕವನ್ನು ತೋರಗೊಡಲಿಲ್ಲ. ದೇವರೇ, ಇವರಿಗೆ ಏನೂ ಆಗದಂತೆ ಕಾಪಾಡಪ್ಪ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತ ಜ್ಯೋತಿಯೂ ಮಲಗಿದಳು. ಆದರೆ ಇಬ್ಬರಿಗೂ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ.

ಬೆಳಗ್ಗೆ ಎದ್ದ ಜ್ಯೋತಿ, ಮುಸುಕೆಳೆದು ಮಲಗಿದ್ದ ಗಂಡನ ಹೊದಿಕೆ ಮೆಲ್ಲನೆ ಎಳೆದು ಮತ್ತೆ ಅವನ ಮೂಗಿನಲ್ಲಿ ಹುಳು ಇದೆಯೇ ಎಂದು ಪರೀಕ್ಷಿಸಿದಳು. ಆದರೆ ಹುಳು ಇರದ್ದು ಕಂಡು ನಿಟ್ಟುಸಿರು ಬಿಡುತ್ತ ಅಡಿಗೆ ಮನೆಯತ್ತ ನಡೆದಳು. ಸಮರ್ ಏನೂ ಆಗದವರಂತೆ ಎಂದಿನಂತೆ ಎದ್ದು, ಮಕ್ಕಳನ್ನು ಎಬ್ಬಿಸಿ ಅವರನ್ನು ಹಲ್ಲುಜ್ಜಿಸಿ, ಶಾಲೆಗೆ ಹೊರಡಿಸಿ ತಿಂಡಿ ತಿನ್ನಲು ಕರೆದುಕೊಂಡು ಬಂದಾಗ ಜ್ಯೋತಿಯ ಗಮನ ಗಂಡನತ್ತಲೇ ಇತ್ತು. ಅವನು ಏನೂ ಆಗದವರಂತೆ ಇದ್ದುದು ನೋಡಿ ದೇವರಿಗೆ ಮನಸ್ಸಿನಲ್ಲೇ ಧನ್ಯವಾದ ಅರ್ಪಿಸಿದಳು. ಮಕ್ಕಳು ಶಾಲೆಗೆ ಹೊರಡುತ್ತಲೇ ಗಂಡನಿಗೆ ಡಾಕ್ಟರ್ ಬಳಿ ಹೋಗಲು ತಿಳಿಸಿದಳು. ಆದರೆ ಸಮರ್ ಮಾತ್ರ, ಡಾಕ್ಟರ್ ಬಳಿ ಏನೆಂದು ಹೇಳಲಿ, ಹುಳು ಕೂಡ ಇಲ್ಲ, ಗಾಯದ ಗುರುತು ಕೂಡ ಇಲ್ಲ ಅಲ್ಲದೆ ತಾನಂತೂ ಆರೋಗ್ಯವಾಗಿದ್ದೇನೆ ಮತ್ಯಾಕೆ ಎಂದಾಗ ಜ್ಯೋತಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಕೊನೆಗೆ ಸಮರ್ ಇನ್ನೊಮ್ಮೆ ಹುಳು ಕಾಣಿಸಿಕೊಂಡರೆ ಹೋದರಾಯಿತು ಏನೂ ಚಿಂತೆ ಮಾಡಬೇಡ ಎನ್ನುತ್ತಾ ಸ್ನಾನಕ್ಕೆ ಹೊರಟ. ಅದಾಗಿ ಕೆಲವು ದಿನಗಳಾದರೂ ಮತ್ತೆ ಹುಳು ಕಾಣಿಸಿಕೊಳ್ಳದಿದ್ದಾಗ ಇಬ್ಬರೂ ಅದರ ಚಿಂತೆಯನ್ನು ಬಿಟ್ಟುಬಿಟ್ಟರು.

ಆದರೆ ಒಂದು ದಿನ ಸಮರ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಎಡ ಕೈಯಲ್ಲಿ ಏನೋ ಹರಿದಂತಾಗಿ ನೋಡಿದಾಗ ಅವನ ಕೈಯ ಚರ್ಮದ ಕೆಳಗೆ ಸಣ್ಣ ಹುಳುವೊಂದು ಅತ್ತಿತ್ತ ಸರಿಯುತ್ತಿದ್ದುದ್ದು ಸ್ಪಷ್ಟವಾಗಿ ಕಾಣಿಸಿತು. ಅದನ್ನು ನೋಡಿ ಸಮರ್ ದಿಗ್ಭ್ರಾಂತನಾದ. ಇದು ತನಗೆ ಮಾತ್ರ ಕಾಣಿಸುತ್ತಿದೆಯೋ ಎಂದುಕೊಂಡು ಪಕ್ಕದಲ್ಲಿ ಕುಳಿತ್ತಿದ್ದ ಕಲೀಗ್ ಗೆ ತನ್ನ ಕೈ ತೋರಿಸಿದಾಗ ಆತ ಬೆಚ್ಚಿ ಬಿದ್ದು, “ಏನೋ ಇದು ವಿಚಿತ್ರ .. ಇದ್ಯಾವ ಯಾವ ಹುಳು ನಿನ್ನ ಕೈ ಹೊಕ್ಕಿದೆ. ಇಂಗ್ಲೀಷ್ ನ ಹಾರರ್ ಫಿಲಂ ನಲ್ಲಿ ಇದ್ದ ಹಾಗಿದೆಯಲ್ಲೋ” ಎಂದು ಉದ್ಗರಿಸಿದ. ಅದನ್ನು ಕೇಳಿ ಸಮರ್ ಗೆ ಮತ್ತಷ್ಟು ಆತಂಕವಾಯಿತು. ಅವನ ಮಾತು ಕೇಳಿ ಇತರರೆಲ್ಲ ಧಾವಿಸಿ ಬಂದರು. ಎಲ್ಲರಿಗೂ ಅವನ ಕೈಯಲ್ಲಿ ತೆವಳುತ್ತಿದ್ದ ಹುಳು ಕಂಡು ಆಶ್ಚರ್ಯವಾಯಿತು. ಕೆಲವರು ಡಾಕ್ಟರ್ ಬಳಿ ಹೋಗಲು ತಿಳಿಸಿದರೆ ಇನ್ನು ಕೆಲವರು ಅವನು ತನ್ನ ಕೈಗೆ ಬ್ಲೇಡಿನಿಂದ ಗೀರಿಕೊಂಡರೆ ಹುಳುವನ್ನು ಹೊರ ತೆಗೆಯಬಹುದು, ಡಾಕ್ಟರ್ ಬಳಿ ಹೋಗುವವರೆದೂ ಅದು ಹುಳು ಅಲ್ಲಿ ಇರದಿದ್ದರೆ ಎಂದು ತಮ್ಮ ಆತಂಕ ವ್ಯಕ್ತ ಪಡಿಸಿದರು. ಅದನ್ನು ಕೇಳಿ ಸಮರ್ ತನ್ನ ಟೇಬಲ್ ಡ್ರಾಯರ್ ತೆರೆದು ಅಲ್ಲಿದ್ದ ಬ್ಲೇಡ್ ತೆಗೆದುಕೊಂಡು ವಾಶ್ ರೂಂನತ್ತ ಧಾವಿಸಿದ. ವಾಶ್ ಬೇಸಿನ್ ನಲ್ಲಿ ಕೈಯಿಟ್ಟು ಮೆಲ್ಲನೆ ಹುಳು ಇರುವ ಕಡೆ ಗೀರಿದ. ಆದರೆ ಅದು ತಪ್ಪಿಸಿಕೊಂಡು ಮುಂದೆ ಹೋಯಿತು. ತುಂಬಾ ನೋವಾಗುತ್ತಿದರೂ ಸಹಿಸಿಕೊಂಡು ಹುಳುವನ್ನು ಹಿಡಿಯಲೇ ಬೇಕೆಂಬ ಹಟದಿಂದ ಸಮರ ಅಲ್ಲಿಯೂ ಗೀರಿದ. ಆದರೆ ಅವನೆಷ್ಟೇ ಪ್ರಯತ್ನಿಸಿದರೂ ಕೈ ತುಂಬಾ ಗಾಯಗಳಾಗಿ ರಕ್ತಧಾರೆಯೇ ಹರಿಯಿತೇ ವಿನಃ ಹುಳು ಮಾತ್ರ ಸಿಗಲೇ ಇಲ್ಲ. ಸಮರ್ ಆತಂಕದಿಂದ ರಕ್ತ ಸಿಕ್ತ ಕೈಗೆ ಟವೆಲ್ ಸುತ್ತಿ ಇನ್ನು ಡಾಕ್ಟರ್ ಬಳಿ ಹೋಗುವುದೊಂದೇ ದಾರಿ ಎಂದುಕೊಂಡು ಹೊರಬಂದ. ಅವನ ಅವಸ್ಥೆ ಕಂಡು ಆಫೀಸಿನವರೆಲ್ಲ ಕಂಗಾಲಾಗಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಆದರೆ ಡಾಕ್ಟರ್ ಬಂದು ಪರೀಕ್ಷೆ ಮಾಡಿದಾಗ ಯಾವ ಹುಳುವೂ ಅವರಿಗೆ ಗೋಚರಿಸಲಿಲ್ಲ. ಸಮರ್ ನ ಆಫೀಸಿನವರೆಲ್ಲ ಹುಳುವನ್ನು ತಾವೂ ನೋಡಿದ್ದಾಗಿ ಹೇಳಿದಾಗ ಡಾಕ್ಟರ್ ಗೆ ವಿಚಿತ್ರವೆನಿಸಿತು. ಆಗ ಸಮರ್ ತನ್ನ ಕತೆಯೆಲ್ಲ ಹೇಳಿದಾಗ ಎಲ್ಲರೂ ದಂಗು ಬಡಿದು ಹೋದರು. ಡಾಕ್ಟರ್ ಗೆ ಇದು ಯಾವ ಕಾಯಿಲೆ ಎಂದು ತಿಳಿಯಲಿಲ್ಲ. ಅವನ ರಕ್ತ ಪರೀಕ್ಷೆ ಎಲ್ಲ ಬಗೆಯ ಸ್ಕ್ಯಾನಿಂಗ್ ಮಾಡಿದರೂ ಡಾಕ್ಟರ್ ಗೆ ಸಮರ್ ಗೆ ಇರುವ ಸಮಸ್ಯೆ ಯನ್ನು ಕಂಡು ಹಿಡಿಯಲಾಗಲಿಲ್ಲ. ಆದರೂ ಅವರು ಹುಳಕ್ಕೆ ಮಾತ್ರೆ ಬರೆದು ಕೊಟ್ಟು ಇದನ್ನು ತೆಗೆದುಕೊಂಡು ನೋಡಿ, ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿ ಅವನ ರಕ್ತಸಿಕ್ತ ಕೈಯನ್ನು ಶುದ್ದಿ ಮಾಡಿ ಬ್ಯಾಂಡೇಜ್ ಹಾಕಿ ಕಳುಹಿಸಿದರು. ಸಮರ್ ಅಲ್ಲಿಂದ ನೇರವಾಗಿ ಮನೆಗೆ ಹೋದ.

ಜ್ಯೋತಿಗೆ ಈ ವಿಷಯ ತಿಳಿದಾಗ ಕಂಗಾಲಾದಳು. ಡಾಕ್ಟರ್ ಗೆ ಗೊತ್ತಿಲ್ಲ ಅಂದ್ರೆ ಏನ್ರೀ, ನಾವು ಬೇರೆ ಡಾಕ್ಟರ್ ಹತ್ರ ಹೋಗೋಣ ಎಂದು ಊರಿನ ಪ್ರಖ್ಯಾತ ಡಾಕ್ಟರ್ ಬಳಿ ಗಂಡನನ್ನು ಕರೆದುಕೊಂಡು ಹೋದಳು. ಅಲ್ಲಿಯೂ ಡಾಕ್ಟರ್ ಹಲವಾರು ಪರೀಕ್ಷೆಗಳನ್ನು ನಡೆಸಿ ಮರುದಿನ ಬರುವಂತೆ ಅವರಿಗೆ ತಿಳಿಸಿದರು. ಆ ಇಡೀ ದಿನ ಇಬ್ಬರೂ ಆತಂಕದಲ್ಲೇ ಕಳೆದರು. ಶಾಲೆಯಿಂದ ಬಂದ ಮಕ್ಕಳು ತಂದೆಯ ಕೈಯಲ್ಲಿ ಬ್ಯಾಂಡೇಜ್ ನೋಡಿ ಗಾಬರಿಗೊಂಡು ಏನಾಯಿತು ಎಂದು ಕೇಳಿದರು. ಆದರೆ ಸಮರ್ ಗೂ, ಜ್ಯೋತಿಗೂ ಮಕ್ಕಳಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. ಹುಳುವಿನ ಬಗ್ಗೆ ಹೇಳಿದರೆ ಮಕ್ಕಳು ಗಾಬರಿಯಾದಾರು ಎಂದುಕೊಂಡು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಗಾಯವಾಯಿತು ಎಂದು ಸುಳ್ಳು ಹೇಳಿದಾಗ ಆ ಪುಟ್ಟ ಮಕ್ಕಳು, ಮಮ್ಮಿ ಅಪ್ಪನಿಗೆ ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು ಎಂದು ಯಾಕೆ ಅವರಿಗೆ ಗೊತ್ತಾಗುವುದಿಲ್ಲ ಎಂದು ಹಿರಿಯರಂತೆ ಮಾತನಾಡಿದಾಗ ಸಮರ್ ಗೆ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ. ಆದರೂ ಜ್ಯೋತಿ, ಇನ್ಮೇಲೆ ಡ್ಯಾಡಿ ಹೀಗೆಲ್ಲ ಗಾಯ ಮಾಡಿ ಕೊಳ್ಳಲ್ಲ ಸರಿನಾ ಎಂದಾಗ ಮಕ್ಕಳು ಗುಡ್ ಬಾಯ್ ಎಂದು ಹೇಳಿದಾಗ ಜ್ಯೋತಿಗೆ ಸಂಕಟದಲ್ಲೂ ನಗು ಬಂದಿತು. ಮರುದಿನ ಡಾಕ್ಟರ್ ಬಳಿ ಹೋದಾಗ ಅವರಿಗೂ ಸಮರ್ ಗೆ ಇರುವ ಸಮಸ್ಯೆ ಏನೆಂದು ಸರಿಯಾಗಿ ತಿಳಿಯಲಿಲ್ಲ. ಆದರೆ ಇಂಥ ಸಮಸ್ಯೆ ಬೇರೆ ಕೆಲವು ದೇಶಗಳಲ್ಲಿ ಇದ್ದು ಅವರು ಅದರ ಬಗ್ಗೆ ಓದಿದ್ದರು. ಹಾಗಾಗಿ ಆ ದೇಶದ ವೈದ್ಯರನ್ನು ಸಂಪರ್ಕಿಸಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರೂ ಸಮರ್ ನ ಸಮಸ್ಯೆ ಅದಕ್ಕಿಂತ ಭಿನ್ನವಾಗಿದೆ ಅನಿಸಿದ್ದರಿಂದ ತಮಗೆ ತಿಳಿದ ಮಾತ್ರೆಗಳನ್ನು ಕೊಟ್ಟರು.

ಕೆಲವು ದಿನಗಳ ನಂತರ ಸಮರ್ ಕೈನ ಬ್ಯಾಂಡೇಜ್ ಬಿಚ್ಚಿ ಗಾಯಗಳು ಗುಣವಾದರೂ ಹುಳುವಿನ ನೆನಪು ಮಾತ್ರ ಹೋಗಲಿಲ್ಲ. ಇನ್ನು ಯಾವಾಗ ಎಲ್ಲಿ ಹುಳು ಕಾಣಿಸಿಕೊಳ್ಳುತ್ತದೋ ಎಂದು ಇಬ್ಬರಲ್ಲೂ ಆತಂಕ ಮನೆ ಮಾಡಿತ್ತು. ಸಮರ್ ಅಂತೂ ಇಡೀ ದಿನ ಆಗಾಗ್ಗೆ ತನ್ನ ಮೈ ಕೈ ಮೂಗು ಎಲ್ಲ ಪರೀಕ್ಷಿಸಿ ನೋಡುತ್ತಿದ್ದ. ತಿಂಗಳಾದರೂ ಹುಳು ಕಾಣಿಸಿಕೊಳ್ಳದಿದ್ದಾಗ ಸಮರ್ ಹಾಗೂ ಜ್ಯೋತಿ ಡಾಕ್ಟರ್ ಮದ್ದು ಪರಿಣಾಮ ಬೀರಿರಬೇಕು, ಇನ್ನು ಹುಳು ಕಾಣಿಸಿ ಕೊಳ್ಳುವುದಿಲ್ಲ ಎಂದು ನಿರಾಳವಾದರು. ಸಮರ್ ನಲ್ಲಿ ನಿಧಾನವಾಗಿ ಹಿಂದಿನ ಲವಲವಿಕೆ ಮೂಡ ತೊಡಗಿತು. ಇಬ್ಬರೂ ಹುಳುವಿನ ಬಗ್ಗೆ ಮರೆತೂ ಬಿಟ್ಟರು. ತಮ್ಮ ಸಂಸಾರದಲ್ಲಿ ಸಂತಸದಿಂದ ಇರುವಾಗ ಒಂದು ಭಾನುವಾರ ಸಮರ್ ಸ್ನಾನ ಮಾಡುತ್ತಿರುವಾಗ ಅವನಿಗೆ ಬೆನ್ನಲ್ಲಿ ತುರಿಕೆಯಾದಂತಾಗಿ ಹೆಂಡತಿಗೆ ತನ್ನ ಬೆನ್ನುಜ್ಜಲು ಕರೆದ. ಅವಳೂ ಗಂಡ ಮೊದಲಿನಂತೆ ರಸಿಕನಾಗುತ್ತಿದ್ದಾನೆ ಎಂದು ಖುಷಿ ಪಡುತ್ತ ಬಾತ್ ರೂಮಿಗೆ ಹೋದಳು. ಸೋಪ್ ತೆಗೆದುಕೊಂಡು ಗಂಡನ ಬೆನ್ನುಜ್ಜುವಾಗ ಅವಳಿಗೆ ಮಿಂಚು ಹೊಡೆದಂತಾಯಿತು. ಸಮರ್ ನ ಬೆನ್ನಲ್ಲಿ ಚರ್ಮದ ಕೆಳಗೆ ಅಲ್ಲಲ್ಲಿ ನಾಲ್ಕೈದು ಸಣ್ಣ ಹುಳುಗಳು ನಿಧಾನವಾಗಿ ತೆವಳುತ್ತಿದ್ದವು. ಗಾಬರಿಯಿಂದ ಜ್ಯೋತಿ ಚಿಟ್ಟನೆ ಚೀರಿದಳು. ಸಮರ್ ಏನಾಯಿತು ಎಂದು ಕೇಳಿದಾಗ ಜ್ಯೋತಿಗೆ ವಿಷಯ ಅವನಿಗೆ ತಿಳಿಸುವುದೋ ಬೇಡವೋ ಎಂದು ಗೊಂದಲವಾಯಿತು. ಕೈಯಲ್ಲಿ ಒಂದು ಹುಳು ಓಡಾಡುತ್ತಿರುವುದನ್ನು ಕಂಡು ಕೈಯೆಲ್ಲ ಗೀರಿ ಕೊಂಡ ಮನುಷ್ಯ, ಇನ್ನು ನಾಲೈದು ಹುಳುಗಳು ಬೆನ್ನಲ್ಲಿ ತೆವಳುತ್ತಿವೆ ಎಂದರೆ ಏನಾದೀತು ಎಂದುಕೊಳ್ಳುತ್ತ, ಏನಿಲ್ಲ ಓಲೆ ಮೇಲೆ ಹಾಲಿಟ್ಟದ್ದು ಜ್ಞಾಪಕ ಬಂದಿತು ಅಷ್ಟೇ ಎಂದು ಬಾತ್ ರೂಮಿನಿಂದ ಹೊರಗೆ ಧಾವಿಸಿದಳು. ಸಮರ್ ಗೆ ಜ್ಯೋತಿಯ ಮಾತಿನ ಮೇಲೆ ನಂಬಿಕೆ ಹುಟ್ಟಲಿಲ್ಲ. ಅವಳ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು. ಯಾಕಾಗಿರಬಹುದು ಎಂದು ಯೋಚಿಸುತ್ತಿದ್ದಂತೆ ಅವನಿಗೆ ತಟ್ಟನೆ ಹುಳುವಿನ ನೆನಪಾಯಿತು. ಮತ್ತೆ ಹುಳುವೇನಾದರೂ ಮತ್ತೆ ಬೆನ್ನಲ್ಲಿ ಕಾಣಿಸಿಕೊಂಡಿರಬಹುದೇ, ಅದನ್ನು ನೋಡಿ ಜ್ಯೋತಿ ಚೀರಿದಳೇನು ಎಂದು ಸಂಶಯವಾಗಿ ಬೇಗ ಬೇಗ ಸ್ನಾನ ಮುಗಿಸಿ ರೂಮಿಗೆ ಧಾವಿಸಿದ.

ಕನ್ನಡಿಯಲ್ಲಿ ಬೆನ್ನನ್ನು ನೋಡಿಕೊಂಡಾಗ ಅವನಿಗೆ ಕಣ್ಣು ಕತ್ತಲೆ ಬಂದತಾಯಿತು. ಅಲ್ಲಿ ಒಂದಲ್ಲ ಎರಡಲ್ಲ ನಾಲ್ಕೈದು ಹುಳುಗಳು ಚಲಿಸುತ್ತಿದ್ದವು. ಹುಳುಗಳಿದ್ದ ಚರ್ಮದ ಭಾಗ ಉಬ್ಬಿಕೊಂಡು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದನ್ನು ನೋಡಿ ಸಮರ್ ಕಂಗಾಲಾದ. ಬೇಗನೆ ಬಟ್ಟೆ ಧರಿಸಿ ಜ್ಯೋತಿಗೂ ಹೇಳದೆ ಸೀದಾ ಡಾಕ್ಟರ್ ಶಾಪ್ ಗೆ ಧಾವಿಸಿದ. ಆದರೆ ಕ್ಲಿನಿಕ್ ಭಾನುವಾರವಾದ್ದರಿಂದ ಮುಚ್ಚಿತ್ತು. ಅವನಿಗೆ ಆತಂಕದಿಂದ ಏನು ಮಾಡುವುದೆಂದು ತೋಚಲಿಲ್ಲ. ಮನೆಗೆ ಮರಳಿ ಜ್ಯೋತಿಗೆ ಅತಿಯಾದ ಬಿಸಿ ನೀರಿನ ಬ್ಯಾಗ್ ಸಿದ್ಧ ಪಡಿಸಿ ರೂಮಿಗೆ ತರಲು ಹೇಳಿದ. ಜ್ಯೋತಿ ತಕ್ಷಣ ಅವನು ಹೇಳಿದಂತೆ ಬಿಸಿ ನೀರಿನ ಬ್ಯಾಗ್ ತಂದು ಎಲ್ಲೆಲ್ಲ ಹುಳುಗಳು ಚಲಿಸುತ್ತಿವೆಯೋ ಅಲ್ಲೆಲ್ಲ ಸ್ವಲ್ಪ ಹೊತ್ತು ಅದರ ಮೇಲೆ ಇಟ್ಟು ಬಿಸಿಗೆ ಹುಳುಗಳು ಸಾಯಬಹುದು ಎಂದು ತನ್ನ ಪ್ರಯತ್ನ ಮಾಡಿದಳು. ಆದರೆ ಬಿಸಿ ತಾಗಿ ಸಮರ್ ನೋವು ಅನುಭವಿಸಿದ್ದೇ ಹೊರತು ಹುಳಗಳಿಗೆ ಏನೂ ಆಗಲಿಲ್ಲ. ಅದನ್ನು ನೋಡಿ ಜ್ಯೋತಿಗೆ ಇನ್ನೊಬ್ಬ ಡಾಕ್ಟರ್ ನೆನಪಾಗಿ ಅವರ ಬಳಿ ಹೋಗುವಂತೆ ಹೇಳಿದಾಗ ಸಮರ್ ಧಾವಿಸಿದ. ಅವನ ಪುಣ್ಯಕ್ಕೆ ಅಲ್ಲಿ ಡಾಕ್ಟರ್ ಇದ್ದರು. ಸಮರ್ ತನ್ನ ಶರ್ಟ್ ಬಿಚ್ಚಿ ಬೆನ್ನು ತೋರಿಸಿದಾಗ ಡಾಕ್ಟರ್ ದಿಗ್ಮೂಢ ರಾದರು. ಅಲ್ಲಿ ಹುಳುಗಳು ಅತ್ತಿಂದಿತ್ತ ಚಲಿಸುತ್ತಿದನ್ನು ಕಂಡು ಅವನನ್ನು ಬೇಗನೆ ಆಪರೇಶನ್ ಥಿಯೇಟರ್ ಗೆ ಕರೆದುಕೊಂಡು ಹೋದರು. ಹುಳುಗಳಿದ್ದ ಕಡೆ ಗಾಯ ಮಾಡಿ ಒಳಗೆ ಪರೀಕ್ಷಿಸಿದರೆ ಅಲ್ಲಿ ಏನೂ ಕಾಣಲಿಲ್ಲ. ಹುಳುಗಳು ಅಲ್ಲಿಂದ ತಪ್ಪಿಸಿ ಬೇರೆ ಕಡೆ ಚಲಿಸಲು ಆರಂಭಿಸಿದವು. ಅಲ್ಲಿಯೂ ಗಾಯ ಮಾಡಿದರೂ ಹುಳುಗಳು ಮಾತ್ರ ಕಾಣ ಸಿಗಲಿಲ್ಲ. ಡಾಕ್ಟರ್ ಈ ವಿಚಿತ್ರ ನೋಡಿ ದಂಗು ಬಡಿದು ಹೋದರು. ಕೊನೆಗೆ ನಿಸ್ಸಹಾಯಕರಾಗಿ ಗಾಯ ಹಾಕುವುದನ್ನು ಬಿಟ್ಟು ಗಾಯಗಳಿಗೆಲ್ಲ ಮದ್ದು ಹಾಕಿ ಬ್ಯಾಂಡೇಜ್ ಸುತ್ತಿದರು. ಸಮರ್ ಗೆ, ಡಾಕ್ಟರ್ ಗೆ ಏನೂ ಮಾಡಲಾಗಲಿಲ್ಲ ಎಂದು ತಿಳಿದು ಆತಂಕ ಮತ್ತಷ್ಟು ಹೆಚ್ಚಿತು. ಹುಳುಗಳೆಲ್ಲ ಮೈ ತುಂಬಾ ಆವರಿಸಿದರೆ ಏನು ಮಾಡುವುದು ಎಂದು ಅವನಿಗೆ ಭಯವಾಯಿತು. ಮನೆಗೆ ಬಂದು ಜ್ಯೋತಿಗೆ ವಿಷಯ ತಿಳಿಸಿದಾಗ ಅವಳಿಗೂ ಏನು ಮಾಡುವುದೆಂದು ತಿಳಿಯಲಿಲ್ಲ. ಕೊನೆಗೆ ಆಯುರ್ವೇದ ಪಂಡಿತರ ಬಳಿ ಹೋಗಲು ನಿರ್ಧರಿಸಿ ಜ್ಯೋತಿ ತನ್ನ ಗಂಡನನ್ನು ಪಂಡಿತರ ಬಳಿ ಕರೆದುಕೊಂಡು ಹೋಗಿ ನಡೆದ ಎಲ್ಲ ವಿಷಯ ತಿಳಿಸಿದರು. ಪಂಡಿತರು ಎಲ್ಲವನ್ನು ಕೇಳಿಸಿಕೊಂಡು ಲೇಪವನ್ನು ಅರೆದು ಸಮರ್ ನ ಬೆನ್ನಿನ ಬ್ಯಾಂಡೇಜ್ ತೆಗೆದು ಬೆನ್ನಿಗೆಲ್ಲ ಸವರಿ ಬಿಟ್ಟರು. ದಿನವೂ ಆ ಲೇಪವನ್ನು ಹಚ್ಚಲು ತಿಳಿಸಿ ವಾರದ ಬಳಿಕ ಮತ್ತೆ ಬರಲು ತಿಳಿಸಿದರು. ಒಂದು ವಾರದಲ್ಲಿ ಬೆನ್ನಿನಲ್ಲಿ ಚಲಿಸುತ್ತಿದ್ದ ಹುಳಗಳು ಕಣ್ಮರೆಯಾದವು. ಸಮರ್ ಗೆ ಸಮಧಾವಾದರೂ ಜ್ಯೋತಿಗೆ ಮಾತ್ರ, ಅದು ಬೇರೆ ಕಡೆ ಬಚ್ಚಿಟ್ಟು ಕೊಂಡಿರಬಹುದು ಇನ್ನೊಂದು ದಿನ ಮತ್ತೆ ಕಾಣಿಸಬಹುದು ಎಂದು ಚಿಂತೆಯಾಯಿತು.

ಹೀಗೆ ಕೆಲವು ದಿನಗಳು ಕಳೆದ ಮೇಲೆ ಒಂದು ದಿನ ಬೆಳಗ್ಗೆ ಸಮರ್ ಅಸಾಧ್ಯ ಕಿವಿ ನೋವಿನಿಂದ ನರಳತೊಡಗಿದ. ನೋವಿನ ಮಾತ್ರೆ ತೆಗೆದುಕೊಂಡರೂ ನಿಲ್ಲದ ನೋವು. ಕಣ್ಣು ಕತ್ತಲೆ ಬರುವಷ್ಟು ನೋವಿನಿಂದ ನರಳುತ್ತಿದ್ದ ಸಮರ ನನ್ನು ಕಂಡು ಜ್ಯೋತಿ ಜೋರಾಗಿ ಅಳಲು ಪ್ರಾರಂಭಿಸಿದಳು. ಅವಳು ಅಳುವುದನ್ನು ನೋಡಿ ಮಕ್ಕಳೂ ಆಳಲಾರಂಭಿಸಿದರು. ಕೊನೆಗೆ ತಡೆಯಲಾಗದೆ ಜ್ಯೋತಿ ಊರಿನಲ್ಲಿದ್ದ ತನ್ನ ಅತ್ತೆಗೆ ಕರೆ ಮಾಡಿ ವಿಷಯವನ್ನೆಲ್ಲ ಹೇಳಿದಳು. ಅತ್ತೆ ಮಾವ ತಕ್ಷಣ ಹೊರಟು ಬರುವುದಾಗಿ ಹೇಳಿದರು. ಸಮರನ ತಾಯಿ ಬಂದವರೇ ಎಣ್ಣೆ ಬಿಸಿ ಮಾಡಿ ಅವನ ಕಿವಿಗೆ ಹಾಕಿದರು. ಸಮರ ನ ಕಿವಿಯಿಂದ ಹುಳುಗಳು ಒಂದೊಂದಾಗಿ ಹೊರಬರಲು ಪ್ರಾರಂಭಿಸಿದವು. ಅದನ್ನು ನೋಡಿ ಎಲ್ಲರೂ ದಿಗ್ಮೂಢರಾದರು. ಮಕ್ಕಳು ಓಡಿಹೋಗಿ ತಾಯಿಯ ಹಿಂದೆ ಬಚ್ಚಿಟ್ಟುಕೊಂಡರು. ಜ್ಯೋತಿ ಪೇಪರ್ ತುಂಡೊಂದನ್ನು ಸಮರನ ಕಿವಿಯ ಬಳಿ ಇಟ್ಟಳು. ಆದರೆ ಹುಳುಗಳು ಕೆಳಕ್ಕೆ ಬೀಳುತ್ತಿರಲಿಲ್ಲ ಅದರ ಬದಲಾಗಿ ಒಳಕ್ಕೂ ಹೊರಗೂ ಚಲಿಸತೊಡಗಿದವು. ಅದನ್ನು ನೋಡಿ ಸಮರ್ ನ ತಾಯಿ ಬಿಸಿ ಎಣ್ಣೆಯನ್ನು ಕಿವಿಯ ಒಳಗೆ ಹೋಗದಂತೆ ನಿಗಾ ವಹಿಸಿ ಕಿವಿಯ ಮೇಲೆ ಸುರಿದು ಬಿಟ್ಟರು. ಹುಳುಗಳೆಲ್ಲ ಕಿವಿಯ ಸುತ್ತ ಆವರಿಸಿ ಕೊಂಡವು. ಸಮರ್ ನೋವು ಸಹಿಸಲಾಗದೆ ಬೊಬ್ಬಿಡುತ್ತಿದ್ದ. ಅದನ್ನು ನೋಡಿ ಜ್ಯೋತಿ ಆಯುರ್ವೇದ ಪಂಡಿತರನ್ನು ಕರೆಸಿದಳು. ಅವರು ಬಂದು ಅವನ ಕಿವಿಯ ಮೇಲೆ ಲೇಪವನ್ನು ಸುರಿದರು. ನಿಮಿಷದಲ್ಲೇ ಆ ಹುಳುಗಳೆಲ್ಲ ಕರಗಿ ಹೋದವು. ಇದನ್ನು ನೋಡಿ ಮನೆಯವರೆಲ್ಲ ನಿಟ್ಟುಸಿರು ಬಿಟ್ಟರು. ಸಮರ್ ನೋವಿನಿಂದ ಮುಕ್ತನಾದ. ಅಬ್ಬಾ ಕೊನೆಗೂ ನೋವು ಹೋಯಿತಲ್ಲ ಎಂದು ಸಮರ್ ಸ್ವಲ್ಪ ಹೊತ್ತಿನಲ್ಲೇ ಎದ್ದು ತನ್ನ ಕೆಲಸದಲ್ಲಿ ತೊಡಗಿದ. ಮಗ ಆರೋಗ್ಯವಾಗಿದ್ದನ್ನು ಕಂಡು ಅವನ ತಂದೆ ತಾಯಿ ಊರಿಗೆ ಹೊರಟು ನಿಂತರು.
ಸುಮಾರು ಹದಿನೈದು ದಿನಗಳ ಬಳಿಕ ಒಂದು ಬೆಳಿಗ್ಗೆ ಸಮರ್ ಗೆ ಇನ್ನೊಂದು ಕಿವಿ ನೋಯಲು ಶುರು ಮಾಡಿತು. ಸಮರ್ ಮತ್ತೆ ನೋವಿನಿಂದ ವಿಲವಿಲನೆ ಒದ್ದಾಡಿದ. ಅದರ ಜೊತೆ ಮೂಗೂ ಕೂಡ ನೋಯತೊಡಗಿತು. ಪರಿಸ್ಥಿತಿಯ ಗಂಭೀರತೆ ಕಂಡು ಜ್ಯೋತಿ ಮತ್ತೆ ಅತ್ತೆಗೆ ಫೋನ್ ಮಾಡಿ ತಕ್ಷಣ ಹೊರಟು ಬರಲು ಹೇಳಿದಳು. ಇವನ ಆರ್ತನಾದ ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಧಾವಿಸಿ ಬಂದರು. ವಿಷಯ ತಿಳಿದಾಗ ಕೆಲವರು ಬಹುಶ ಸ್ನೇಹಿತನೇ ದೆವ್ವವಾಗಿ ಸಮರನನ್ನು ಕಾಡುತ್ತಿರಬೇಕು ಎಂದೆಲ್ಲ ಮಾತನಾಡಿಕೊಂಡರು. ಇನ್ನು ಕೆಲವರು ಯಾರೋ ಆಗದವರು ಮಾಟ ಮಾಡಿರಬೇಕು ಅಂದರು.

ಊರಿನಿಂದ ಬಂದ ಸಮರ್ ನ ತಂದೆತಾಯಿಗೆ ಮಗನ ಪರಿಸ್ಥಿತಿ ಕಂಡು ಕರುಳು ಕಿತ್ತು ಬರುವಂತಾಯಿತು. ಪಕ್ಕದ ಮನೆಯವರ ಸಲಹೆಯಂತೆ ಸಮರ್ ನ ತಂದೆ ಅವರ ಸಹಾಯದಿಂದ ಮಾಂತ್ರಿಕನನ್ನು ಕರೆಸಿದರು. ಮಾಂತ್ರಿಕ ಇಡೀ ದಿನ ತನ್ನ ತಂತ್ರ ಮಂತ್ರ ಹೋಮ ಹವನ ಎಲ್ಲ ಮಾಡಿದರೂ ಸಮರ್ ನ ನೋವು ಮಾತ್ರ ಕಡಿಮೆಯಾಗಲೇ ಇಲ್ಲ. ಅವನ ನೋವು ನರಳಾಟ ನೋಡಿ ಅವನ ತಾಯಿ, ಜ್ಯೋತಿ ಎಲ್ಲ ಅಳಲು ಶುರು ಮಾಡಿದರು. ಸಮರನ ಮೂಗಿನಿಂದ, ಕಿವಿಯಿಂದ ಹುಳುಗಳು ಹೊರಗೆ ಬರಲು ಆರಂಭಿಸಿದವು. ಅವುಗಳನ್ನು ಹಿಡಿಯಲು ಹೋದರೆ ಕೈಗೆ ಸಿಗುತ್ತಿರಲಿಲ್ಲ. ಅದನ್ನು ನೋಡಿ ಕಂಗಾಲಾದ ಸಮರ್ ನ ತಂದೆ ಡಾಕ್ಟರ್ ನ್ನು ಕರೆಸಿದರು. ಡಾಕ್ಟರ್ ಬಂದು ಸಮರ ನನ್ನು ಪರೀಕ್ಷಿಸಿ ಇಂಜೆಕ್ಷನ್ ಮಾತ್ರೆ ಎಲ್ಲ ಕೊಟ್ಟರು. ಆದರೂ ಸಮರ್ ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದನ್ನು ನೋಡಲಾಗದೆ ಜ್ಯೋತಿ ಮಕ್ಕಳನ್ನು ಕರೆದುಕೊಂಡು ಬೇರೆ ರೂಮಿಗೆ ಹೋಗಿ ಅಳುತ್ತ ಕುಳಿತಳು. ಪಂಡಿತರಿಗೂ ಕರೆ ಹೋಗಿ ಅವರು ಬಂದು ಮೂಗು ಕಿವಿಗೆಲ್ಲ ಲೇಪ ಹಚ್ಚಿದರು. ಆದರೆ ಈ ಬಾರಿ ಲೇಪ ತನ್ನ ಕೆಲಸ ಮಾಡಲಿಲ್ಲ. ಹುಳುಗಳ ಸಂಖ್ಯೆ ಜಾಸ್ತಿಯಾದವೇ ಹೊರತು ಕಡಿಮೆಯಾಗಲಿಲ್ಲ. ಡಾಕ್ಟರ್ ಪಂಡಿತ, ಮಾಂತ್ರಿಕ ಎಲ್ಲರ ಪ್ರಯತ್ನಗಳು ನಿಷ್ಫಲವಾಗಿ ಅವರೆಲ್ಲ ಅಸಹಾಯಕರಾಗಿ ನೋಡುತ್ತಿದ್ದಂತೆ ನೋವಿನಿಂದ ಅರಚುತ್ತ ವಿಲವಿಲನೆ ಒದ್ದಾಡುತ್ತಿದ್ದ ಸಮರ ಉಸಿರಾಡಲು ಚಡಪಡಿಸುತ್ತಾ ಅಮ್ಮಾ ಎಂದು ಜೋರಾಗಿ ಕಿರಿಚಿ ನಂತರ ನಿಶ್ಚಲನಾಗಿ ಬಿಟ್ಟ. ಡಾಕ್ಟರ್ ಸಮರನನ್ನು ಪರೀಕ್ಷಿಸಿ ಅವನಿಲ್ಲವೆಂದಾಗ ಎಲ್ಲರ ಅಳು ತಾರಕ್ಕೇರಿತು. ಬರೀ ಒಂದು ಸಣ್ಣ ಹುಳ ಕಚ್ಚಿ ಸಮರನ ಜೀವಕ್ಕೇ ಅಪಾಯವಾಗಬಹುದು ಎಂದು ಯಾರೂ ಎಣಿಸಿರಲಿಲ್ಲ. ಆರೋಗ್ಯವಂತನಾಗಿದ್ದ ಸಮರ್ ಗೆ ತೀರಿಕೊಂಡ ಗೆಳೆಯನೇ ಹುಳುವಿನ ರೂಪದಲ್ಲಿ ಕಾಟ ಕೊಟ್ಟನೆ ? ಆದರೆ ಸಮರ್ ನ ಒಳ್ಳೆಯ ಸ್ನೇಹಿತನಾಗಿದ್ದ ಅವನು ಸಮರ್ ಗೆ ಯಾಕೆ ತೊಂದರೆ ಮಾಡುತ್ತಾನೆ. ಹಾಗಿದ್ದರೆ ಸಮರ್ ಗೆ ಏನಾಗಿತ್ತು ಅವನಿಗೆ ಇದ್ದ ಸಮಸ್ಯೆಯಾದರೂ ಏನು ? ಸಮರ್ ನ ಕಾಲಿಗೆ ಕಚ್ಚಿದ ಆ ಹುಳು ಯಾವುದು ಎಂಬುದು ಕಗ್ಗಂಟಾಗಿಯೇ ಉಳಿಯಿತು.

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.