ಪಕ್ಕದ ಮನೆಯ ಎದುರು ಒಂದು ಕಾರು ಬಂದು ನಿಂತಾಗ ಹನುಮಂತಯ್ಯ ಕುತೂಹಲದಿಂದ ತನ್ನ ಕನ್ನಡಕವನ್ನು ಸರಿ ಮಾಡಿಕೊಳ್ಳುತ್ತ ಕಣ್ಣುಗಳನ್ನು ಕಿರಿದು ಗೊಳಿಸಿ ಕಾರಿನಿಂದ ಯಾರು ಇಳಿಯುತ್ತಿದ್ದಾರೆ ಎಂದು ನೋಡಿದರು. ಎದುರಿನ ಸೀಟಿನಿಂದ ಯುವಕನೊಬ್ಬ ಇಳಿದು ಕಾರಿನ ಹಿಂದಿನ ಬಾಗಿಲು ತೆರೆದು ನಿಂತ. ಒಬ್ಬ ವಯಸ್ಸಾದ ಮಹಿಳೆಯೊಬ್ಬಳು ಇಳಿಯುತ್ತಿರುವುದನ್ನು ಕಂಡು ಮತ್ತಷ್ಟು ಕುತೂಹಲದಿಂದ ತಮ್ಮ ಮನೆಯ ವರಾಂಡದ ತುದಿಯಲ್ಲಿ ನಿಂತು ನೋಡ ತೊಡಗಿದರು.
ಆ ಮಹಿಳೆ ಇಳಿಯುವಾಗ ಯುವಕ ಅವರ ಸಹಾಯಕ್ಕಾಗಿ ನೀಡಿದ ಕೈಯನ್ನು ಆಕೆ ತಿರಸ್ಕರಿಸುತ್ತ ಅತ್ತ ತಳ್ಳಿ ನಿಧಾವಾಗಿ ಇಳಿದು ತಲೆ ತಗ್ಗಿಸಿ ನಡೆಯುತ್ತಾ ಮನೆಯೊಳಕ್ಕೆ ಹೋದರು. ಅವರ ತಲೆಯ ತುಂಬಾ ಬಿಳಿ ಕೂದಲು ನೋಡಿ ಹನುಮಂತಯ್ಯ ನವರಿಗೆ ತಕ್ಷಣಕ್ಕೆ ಯಾರೆಂದು ತಿಳಿಯದಿದ್ದರೂ ಅದು ಶಾಂತಿ ಇರಬಹುದೇ ಎಂದು ಯೋಚಿಸುತ್ತ ನಿಂತರು. ಅವರ ಮನಸ್ಸು ಹಿಂದಕ್ಕೋಡಿತು. ನೆನಪುಗಳು ಮತ್ತೆ ಹಸಿರಾಗತೊಡಗಿತು.
ಪಕ್ಕದ ಮನೆಯ ಶಾಂತಿ ಹಾಗೂ ಹನುಮಂತಯ್ಯ ಜೊತೆಯಲ್ಲೇ ಆಡಿ ಬೆಳೆದವರು. ಅವಳ ಅಣ್ಣ ಶಾಂತರಾಮ ಹನುಮಂತಯ್ಯನವರ ಸ್ನೇಹಿತ ಹಾಗೂ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಶಾಂತಿ ಅವರಿಗಿಂತ ನಾಲ್ಕು ವರುಷ ಚಿಕ್ಕವಳಾದರೂ ಅವರಿಬ್ಬರಿಗಿಂತ ತಾನೇ ಹಿರಿಯವಳು ಅನ್ನುವ ತರಹ ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು. ಆಗ ಅವಳ ಮನೆಯವರೆಲ್ಲ ಅದನ್ನು ನೋಡಿ ಈಗಲೇ ಹೀಗಾದರೆ ಇನ್ನು ಇವಳು ತನ್ನ ಗಂಡನ ಮೇಲೆ ಅಧಿಕಾರ ಇನ್ನೆಷ್ಟು ಚಲಾಯಿಸುತ್ತಾಳೋ ಎಂದು ಆತಂಕಗೊಂಡಿದ್ದರು.
ಆದರೆ ಹನುಮಂತಯ್ಯನಿಗೆ ಅವಳು ತನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿ ತುಂಬಾ ಇಷ್ಟವಾಗುತ್ತಿತ್ತು. ನೋಡಲೂ ಸುಂದರವಾಗಿದ್ದ ಅವಳ ಮೇಲೆ ಹನುಮಂತಯ್ಯನಿಗೆ ಪ್ರೀತಿ ಹುಟ್ಟಿತು. ಆದರೆ ಅವನು ಅದನ್ನು ಮಾತ್ರ ಅವಳೊಂದಿಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲ. ಆದರೂ ಮನೆಯಲ್ಲಿ ತನ್ನ ತಾಯಿಯ ಬಳಿ ತಾನು ಮದುವೆಯಾಗುವುದಾದರೆ ಶಾಂತಿಯನ್ನೇ ಎಂದು ಹೇಳಿದಾಗ ಅವನ ಅಮ್ಮ ನಕ್ಕು ಬಿಟ್ಟಿದ್ದರು. ಜೊತೆಗೆ ಅವಳನ್ನು ಮದುವೆಯಾದರೆ ನೀನು ಅವಳ ಗುಲಾಮನಾಗಬೇಕಾಗುತ್ತದೆ, ಅವಳು ನಿನ್ನ ಮಾತು ಕೇಳುವವಳಲ್ಲ ಎಂದು ಗೇಲಿ ಮಾಡುತ್ತಿದ್ದರು.
ಮಗ ಇನ್ನೂ ಚಿಕ್ಕವ, ಸುಮ್ಮನೆ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ಗಾಯತ್ರಿಗೆ ಅವನು ದೊಡ್ಡವನಾಗಿ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೂ ಅದೇ ಮಾತನ್ನು ಹೇಳಿದಾಗ ಗಾಯತ್ರಿಗೆ ಹಿಡಿಸಲಿಲ್ಲ. ಅಂತಹ ಗಂಡುಬೀರಿ ಹೆಣ್ಣು ತಮ್ಮ ಮನೆಯ ಸೊಸೆಯಾಗುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಶಾಂತಿ ಹತ್ತನೆಯ ತರಗತಿಯಲ್ಲಿ ಫೈಲಾದಾಗ ಗಾಯತ್ರಿ ಅವಳನ್ನು ಬೇಡವೆನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಿತು. ಅವಳು ದಡ್ಡಿ, ಅವಳನ್ನು ಮದುವೆಯಾದರೆ ಮುಂದೆ ನಿನ್ನ ಮಕ್ಕಳೂ ದಡ್ಡರಾಗುತ್ತಾರೆ ಎಂದು ಮಗನಿಗೆ ಹೆದರಿಸಿದ್ದಳು.
ಶಾಂತಿಯ ಮನೆಯವರಿಗೂ ತಮ್ಮ ಪಕ್ಕದ ಮನೆಯ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡುವುದು ಇಷ್ಟವಿರಲಿಲ್ಲ. ಆದರೆ ಶಾಂತಿಯ ಮನಸ್ಸಿನಲ್ಲಿ ಏನಿದೆ ಎಂದು ಅವಳೆಂದೂ ಬಾಯಿ ಬಿಟ್ಟಿರಲಿಲ್ಲ. ಅವಳಿಗೆ ಹನುಮಂತಯ್ಯನ ಜೊತೆ ಮದುವೆಯಾಗುವುದು ಬೇಡವೆಂದಾಗ ಅವಳು ವಿರೋಧಿಸಲೂ ಇಲ್ಲ. ಹಾಗಾಗಿ ಎರಡೂ ಮನೆಯವರ ವಿರೋಧದಿಂದ ಹನುಮಂತಯ್ಯನ ಪ್ರೀತಿಗೆ ಕಡಿವಾಣ ಬಿದ್ದಿತು. ಶಾಂತಿಯ ಮನೆಯವರು ಅವಳಿಗೆ ಬೇರೆ ಹುಡುಗನನ್ನು ಗೊತ್ತು ಮಾಡಿ ಮದುವೆಯನ್ನು ಮುಗಿಸಿಯೂ ಬಿಟ್ಟರು. ಆದರೆ ಹನುಮಂತಯ್ಯನಿಗೆ ಮಾತ್ರ ಇದು ಸಹಿಸಲಾಗದೆ ಅವತ್ತೀಡಿ ದಿನ ರೂಮು ಸೇರಿಕೊಂಡು ಅತ್ತಿದ್ದ.
ನಂತರ ವರುಷಗಳು ಉರುಳಿದಂತೆ ಶಾಂತಿಯ ನೆನಪೂ ಮಸುಕಾಗತೊಡಗಿತು. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದ. ಕಾಲ ಕ್ರಮೇಣ ಅವಳನ್ನು ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾದ. ಅವನಿಗೆ ನಾಲ್ಕು ಗಂಡು ಮಕ್ಕಳೂ ಆದವು. ಆಮೇಲೆ ಹನುಮಂತಯ್ಯ ಶಾಂತಿಯನ್ನು ನೋಡಿರಲೇ ಇಲ್ಲ. ಅವಳು ಮುಂಬೈನಲ್ಲಿ ಇದ್ದಾಳೆ ಎಂದು ಮಾತ್ರ ತಿಳಿದಿತ್ತು. ಅವಳು ತವರು ಮನೆಗೂ ಬರುತ್ತಿರಲಿಲ್ಲ. ಅವಳನ್ನು ನೋಡಿಕೊಂಡು ಬರಲು ತಾಯಿ ಮನೆಯವರೇ ಮುಂಬೈಗೆ ಹೋಗಿ ಬರುತ್ತಿದ್ದರು.
ವರುಷಗಳು ಕಳೆದಂತೆ ಹನುಮಂತಯ್ಯನ ಮಕ್ಕಳೆಲ್ಲ ದೊಡ್ಡವರಾಗಿ, ವಿದ್ಯಾವಂತರಾಗಿ ಒಳ್ಳೆಯ ಕೆಲಸವೂ ದೊರಕಿತು. ಆಗ ಹನುಮಂತನ ತಾಯಿ, ನೀನು ಶಾಂತಿಯನ್ನು ಮದುವೆಯಾಗಿದ್ದಿದ್ದರೆ ನಿನ್ನ ಮಕ್ಕಳೆಲ್ಲ ಹೀಗಿರುತ್ತಿರಲಿಲ್ಲ ಎಂದು ಛೇಡಿಸಿದ್ದರು. ಶಾಂತಿಗೆ ಮಕ್ಕಳಾಗಿದೆಯೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಅವಳ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಶಾಂತರಾಮ ದುಬೈ ಸೇರಿ ಅಲ್ಲೇ ನೆಲೆ ನಿಂತ. ಯಾರನ್ನಾದರೂ ವಿಚಾರಿಸೋಣವೆಂದರೆ ಮದುವೆಯಾದ ಮಹಿಳೆಯ ಬಗ್ಗೆ ವಿಚಾರಿಸಲು ಧೈರ್ಯ ಸಾಲುತ್ತಿರಲಿಲ್ಲ.
ಎರಡು ವರುಷಗಳ ಹಿಂದೆ ಹನುಮಂತಯ್ಯನ ಹೆಂಡತಿ ಕಾಯಿಲೆ ಬಂದು ತೀರಿಕೊಂಡ ಮೇಲೆ ಶಾಂತಿಯ ನೆನಪು ಅವನಿಗೆ ಬಹುವಾಗಿ ಕಾಡಿತ್ತು. ಹೆಂಡತಿಗೆ ಸಾಯುವ ಮುನ್ನ ತನ್ನ ಮಕ್ಕಳ ಮದುವೆ ನೋಡಲು ಆಸೆಯೆಂದು ಬೇಗ ಬೇಗನೆ ಅವರ ಮದುವೆಯನ್ನೂ ಮಾಡಿಸಿದ್ದಾಯಿತು. ಮಕ್ಕಳೆಲ್ಲ ರೆಕ್ಕೆ ಬಂದ ಹಕ್ಕಿಯಂತೆ ಹಾರಿ ಹೋದಾಗ ಹನುಮಂತಯ್ಯ ಒಬ್ಬಂಟಿಗರಾಗಿ ಬಿಟ್ಟಿದ್ದರು.
ಹೆಂಡತಿ ತೀರಿಕೊಂಡ ಮೇಲೆ ಹನುಮಂತಯ್ಯ ತಮ್ಮ ಊರಿಗೆ ಬಂದು ತಮ್ಮ ಮನೆಯನ್ನು ರಿಪೇರಿ ಮಾಡಿಸಿ ಅಲ್ಲೇ ಇರತೊಡಗಿದರು. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರೂ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ಅವರಿಗೆ ತಮ್ಮ ಜೊತೆ ಬಂದಿರಲು ಹೇಳಿದ್ದರೂ ಹನುಮಂತಯ್ಯ ಮಾತ್ರ ತಾನು ತನ್ನ ಮನೆಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಬೇರೆ ದಾರಿ ಕಾಣದೆ ಮಕ್ಕಳು ಅಡಿಗೆ ಮತ್ತು ಮನೆಕೆಲಸ ಮಾಡಲು ಜನ ನೇಮಿಸಿದ್ದರು.
ಈಗ ಸುಮಾರು ಮೂವತ್ತು ವರುಷಗಳಾದ ಮೇಲೆ ಶಾಂತಿಯನ್ನು ನೋಡಿದಾಗ ಅವಳು ಹೌದೋ ಅಲ್ಲವೋ ಎಂದು ಗೊಂದಲವಾಯಿತು. ಆದರೆ ಸಂಜೆಯ ಹೊತ್ತಿಗೆ, ಬಂದಿರುವುದು ಶಾಂತಿಯೇ ಎಂದು ಅಡಿಗೆಯ ಸುಂದರಮ್ಮನಿಂದ ತಿಳಿಯಿತು. ಅವಳು ಬಂದ ದಿನ ಅವಳ ಬೋಳು ಹಣೆ ನೋಡಿದ ನೆನಪಾಗಿ ಹನುಮಂತಯ್ಯನಿಗೆ ಶಾಂತಿಯನ್ನು ನೋಡಬೇಕು ಅವಳ ಜೊತೆ ಮಾತನಾಡಬೇಕು ಎಂದು ಹಂಬಲವಾಯಿತು. ಜೊತೆಗೆ ಹಿಂದಿನ ನೆನಪುಗಳು ಮತ್ತೆ ಬಲವಾಗಿ ಕಾಡತೊಡಗಿದವು. ದಿನವೂ ಹನುಮಂತಯ್ಯ ಶಾಂತಿ ಏನಾದರೂ ಕಾಣುವಳೇ ಎಂದು ಪಕ್ಕದ ಮನೆಯತ್ತ ಯಾವಾಗಲೂ ನೋಡುತ್ತಿದ್ದರು. ಆದರೆ ಶಾಂತಿ ಮಾತ್ರ ಹೊರಗೆಲ್ಲೂ ಕಾಣಿಸಲಿಲ್ಲ.
ಒಂದು ದಿನ ಅವರು ವಾಕಿಂಗ್ ನಿಂದ ಬರುತ್ತಿರುವಾಗ ಶಾಂತಿ ವರಾಂಡದಲ್ಲಿ ನಿಂತು ತಮ್ಮ ಮನೆಯತ್ತ ನೋಡುತ್ತಾ ನಿಂತಿದ್ದು ಕಂಡು ಹನುಮಂತಯ್ಯನಿಗೆ ಸಂತೋಷವಾಗಿ ಲಗುಬಗೆಯಿಂದ ಅವಳ ಮನೆಯತ್ತ ಹೆಜ್ಜೆ ಹಾಕಿದರು. ಹೇ ಶಾಂತಿ ಹೇಗಿದ್ದೀಯಾ ಎಂದು ಹಿಂದಿನ ಸಲುಗೆಯಿಂದಲೇ ಕೇಳಿದಾಗ ಶಾಂತಿ ತನ್ನ ಕನ್ನಡಕವನ್ನು ಸರಿ ಮಾಡಿ ಕೊಳ್ಳುತ್ತಾ, ಯಾರು, ಹನುಮನಾ ಎಂದು ಕೇಳಿದಳು. ನಂತರ ಗೇಟು ತೆರೆದು ಬಂದು, ನೀನು ಇದ್ದ ಹಾಗೆ ಇದ್ದೀಯಲ್ಲೋ, ಮುಖದ ಮೇಲೆ ನಾಲ್ಕು ಗೆರೆ ಬಿಟ್ಟರೆ ಏನೂ ವ್ಯತ್ಯಾಸವಾಗಿಲ್ಲ ಎಂದಾಗ ಹನುಮಂತಯ್ಯನಿಗೆ ಸಂತಸವಾಗಿ, ಬಾ ನಮ್ಮ ಮನೆಗೆ, ನಿನ್ನ ಬಳಿ ಮಾತನಾಡುವುದಿದೆ ಎಂದಾಗ ಶಾಂತಿ ನಗುತ್ತ ಇನ್ನೂ ನಿನ್ನ ಹಳೆಯ ಚಾಳಿ ಬಿಟ್ಟಿಲ್ಲವೇನೋ ಎನ್ನುತ್ತಾ ಅವನ ಹಿಂದೆಯೇ ಬರುತ್ತಾ ಅವನ ಮನೆಯ ಕಡೆ ನಡೆದಳು.
ಇಬ್ಬರೂ ತಮ್ಮ ತಮ್ಮ ಸಂಸಾರದ ಬಗ್ಗೆ ಮಾತನಾಡಿಕೊಂಡರು. ಆಗ ಶಾಂತಿ ನಾನು ನಿನ್ನನ್ನು ಬಿಟ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಮದುವೆಯಾದ ಮೇಲೆ ತಿಳೀತು. ಮದುವೆಗೆ ಮೊದಲು ಗಂಡ ಶ್ರೀಮಂತ, ಜೊತೆಗೆ ಮುಂಬೈ ನಲ್ಲಿ ಇರುವವರು ಎಂದು ಕುಣಿದಾಡಿ ಬಿಟ್ಟಿದ್ದೆ. ನನ್ನ ಗಂಡನ ಮನೆಯವರು ಶ್ರೀಮಂತರೇನೋ ನಿಜ, ಆದರೆ ನನ್ನ ಗಂಡ ಮಾತ್ರ ಮಹಾ ಕುಡುಕ, ಕುಡಿದ ಅಮಲಿನಲ್ಲಿ ಆತ ದಿನವೂ ನಡೆಸುತ್ತಿದ್ದ ರಂಪ ರಾಮಾಯಣ ನೋಡಿ ಎಷ್ಟೋ ಸಲ ನಿನ್ನಂಥಾ ಒಳ್ಳೆಯ ಹುಡುಗನನ್ನು ಬಿಟ್ಟೆನಲ್ಲ ಎಂದು ಅದೆಷ್ಟೋ ಬಾರಿ ಅತ್ತಿದ್ದುಂಟು.
ತಮ್ಮ ಮಗನಿಗೆ ಜೋರಿನ ಹುಡುಗಿ ಸಿಕ್ಕಿದರೆ ಅವಳೇ ತನ್ನ ಗಂಡನನ್ನು ಸರಿ ಮಾಡುತ್ತಾಳೆ ಎಂದು ಅವನ ತಾಯಿ ನನ್ನನ್ನು ಆರಿಸಿದ್ದರು. ಆದರೆ ಅವನ ರಂಪಾಟದ ಮುಂದೆ ನನ್ನದೇನೂ ನಡೆಯಲೇ ಇಲ್ಲ. ಕೊನೆಗೆ ಅವನು ಕುಡಿದು ಕುಡಿದೇ ಸತ್ತು ಬಿಟ್ಟ. ಹುಟ್ಟಿದ ಒಬ್ಬ ಮಗನಿಗೂ ನಾನು ಬೇಕಾಗಿಲ್ಲ. ಅವನಿಗೆ ಅಮೆರಿಕಾದಲ್ಲಿ ಒಳ್ಳೆ ಕೆಲಸ ಸಿಕ್ಕಿ ಬಿಟ್ಟಿದೆ. ಅದಕ್ಕೆ ನಮ್ಮ ಅತ್ತಿಗೆ ಇಲ್ಲಿ ಬಂದಿರು ಅಂತ ಹೇಳಿದ್ಲು, ಅಣ್ಣನೂ ಇಲ್ಲ ಅವರಿಗೆ ಮಕ್ಕಳೂ ಇಲ್ಲ, ಅವಳಿಗೂ ಒಂಟಿತನ ಬೇಜಾರು ಬಂದು ಬಿಟ್ಟಿದೆ, ಅದಕ್ಕೆ ನನ್ನ ಮಗ ಇಲ್ಲಿ ಕರೆತಂದು ಬಿಟ್ಟು ಹೋದ ಎಂದು ಹೇಳಿ ತನ್ನ ಕಥೆಯನ್ನು ಮುಗಿಸಿದಳು.
ಹನುಮಂತಯ್ಯ, ನನಗೂ ಹೆಂಡತಿ ತೀರಿಕೊಂಡ ಮೇಲೆ ಒಂಟಿ ಬಾಳು ಸಾಕಾಗಿದೆ. ನೀನು ಒಪ್ಪೊದಾದ್ರೆ ನಾನು ಈಗ್ಲೂ ನಿನ್ನನ್ನು ಮದ್ವೇಯಾಗೋಕೆ ರೆಡಿ, ನಿನ್ನನ್ನು ಮದುವೆಯಾಗಬೇಕು ಎನ್ನುವ ಆಸೆ ಇನ್ನೂ ಜೀವಂತವಾಗೇ ಇದೆ ಎಂದಾಗ ಶಾಂತಿ ನಾಚುತ್ತ, ಥೂ ಈ ವಯಸ್ಸಿನಲ್ಲೇ? ಜನ ಕೇಳಿದ್ರೆ ನಕ್ಕಾರು, ಊರು ಹೋಗಿ ಕಾಡು ಹತ್ತಿರ ಬಂತು ಅನ್ನೋ ಸಮಯದಲ್ಲಿ, ಹೋಗ್ಲಿ ನಿನ್ನ ಮಕ್ಕಳು ಏನೂ ಅನ್ನೋಲ್ವಾ ಎಂದಾಗ ಹನುಮಂತಯ್ಯ ಆತುರಾತುರವಾಗಿ, ಅದಕ್ಕೆಲ್ಲ ನೀನು ತಲೆ ಕೆಡಿಸಿಕೊ ಬೇಡಾ ನೀನು ಹೂಂ ಅನ್ನು ಸಾಕು, ಪ್ರೀತಿಗೆ ವಯಸ್ಸನ್ನೋದು ಇಲ್ಲ ಎಂದಾಗ ಶಾಂತಿಯ ಮುಖ ಲಜ್ಜೆಯಿಂದ ಕೆಂಪೇರಿತು. ಅದನ್ನು ನೋಡಿ ಹನುಮಂತಯ್ಯನಿಗೆ ಯೌವ್ವನ ಮರುಕಳಿಸಿದಂತಾಯಿತು.