ಮುಸ್ಸಂಜೆಯ ಸಮಯ. ನಾನು ನಮ್ಮ ಬೀದಿಯ ಕೊನೆಯ ಮನೆಯವನ ಜೊತೆ ಹೆಜ್ಜೆ ಹಾಕುತ್ತಿದ್ದೆ. ನಮ್ಮ ಮನೆ ಸಮೀಸುತ್ತಿದ್ದಂತೆ ಆತ ಅರೆ ! ನಿಮ್ಮ ಮನೆಯಲ್ಲಿ ಅಮಾವಾಸ್ಯೆಯಾಗಿದೆಯಲ್ಲ, ಯಾಕೆ ? ಹೆಂಡತಿ ಮನೆಯಲ್ಲಿಲ್ಲವೇ ಎಂದು ಉತ್ಸುಕನಾಗಿ ಕೇಳಿದ. ನಾನು ಅವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಆಕಾಶವನ್ನು ದಿಟ್ಟಿಸಿದೆ. ಮಿಂಚೊಂದು ಆಗಾಗ ಫಳಾರನೆ ಮಿಂಚಿ ಮರೆಯಾಗುತ್ತಿತ್ತು. ಅದರ ಜೊತೆ ಮೆಲ್ಲನೆ ಗುಡುಗಿನ ಸದ್ದು ಕೇಳಿಸಿತು. ಅದನ್ನು ನೋಡಿ ನನ್ನ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮೂಡಿತು.
ನನ್ನ ಮೌನ ಕಂಡು ನನ್ನ ಸ್ನೇಹಿತ, ಯಾಕೋ, ಈ ಸಲ ಬಿಲ್ ಕಟ್ಟಿಲ್ಲವೇನೋ ಎಂದು ಅನುಕಂಪದಿಂದ ಮತ್ತೆ ಪ್ರಶ್ನಿಸಿದ. ನಾನು ನಗುತ್ತ, “ಛೆ, ಹಾಗೇನಿಲ್ಲಪ್ಪ, ನನ್ನ ಹೆಂಡತಿ ಮನೆಯಲ್ಲೇ ಇದ್ದಾಳೆ. ಜೊತೆಗೆ ಬಿಲ್ ಯಾವೊತ್ತೋ ಕಟ್ಟಿದೀನಿ… ನಾನು ಕಾರಣ ಹೇಳುವ ಮೊದಲೇ ಆತ ನನ್ನ ಮಾತನ್ನು ಮಧ್ಯದಲ್ಲೇ ತುಂಡರಿಸಿ ಮತ್ತಷ್ಟು ಕುತೂಹಲದಿಂದ, ಹಾಗಾದ್ರೆ ನಿಮ್ಮನೆಯಲ್ಲಿ ಕತ್ತಲ್ಯಾಕೋ ಎಂದು ಕೇಳಿದ.
ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಂದವಾದ ಬೆಳಕು ಕಾಣಿಸಿತು. ಅದನ್ನು ಕಂಡು ನಾನು ಮುಗುಳ್ನಗುತ್ತ, ಅವಳಿಗೆ ಬೇರೆ ಕೆಲಸ ಇಲ್ಲ. ಮುನ್ನೆಚ್ಚರಿಕೆ ಕ್ರಮ ತೊಗೊಂಡಿದಾಳೆ ಎಂದೆ. ಅವನಿಗೆ ಏನೂ ಅರ್ಥವಾಗದೆ, ಏನೋ ಹಾಗಂದ್ರೆ ಎಂದ. ಮೇಲ್ನೋಡು, ಮಿಂಚು ಬರ್ತಾ ಇದೆಯಲ್ವ, ಎಲ್ಲಾದ್ರೂ ಸಿಡಿಲು ನಮ್ಮನೆಗೆ ಬಡಿದು ಬಿಟ್ರೆ ಅಂತಾ ನನ್ನಾಕೆ ಮೈನ್ ಸ್ವಿಚ್ ಆಫ್ ಮಾಡಿ ಬಿಟ್ಟಿದಾಳೆ. ಮಿಂಚು ಗುಡುಗು ಮರೆಯಾಗೊವರೆಗೂ ನಮಗೆ ಅಮವಾಸ್ಯೇನೆ, ಟೀವಿ ನೋಡೋ ಹಾಗಿಲ್ಲ, ಕರೆಂಟಿದ್ರೂ ಮೊಂಬತ್ತಿ ಬೆಳಕಲ್ಲಿ ಕೂರೋ ಯೋಗ ಎಂದು ಲಘುವಾಗಿ ನಕ್ಕೆ.
ಅವನು ನಕ್ಕು ಲೇವಡಿ ಮಾಡಬಹುದು ಅಂತಿದ್ದ ನನ್ನೆಣಿಕೆ ಸುಳ್ಳಾಯಿತು. ಆತ ನಗಲಿಲ್ಲ. ಬದಲಾಗಿ ಅವನ ಮುಖ ಗಂಭೀರವಾಯಿತು. ಈಗ ಕುತೂಹಲ ಪಡುವ ಸರದಿ ನನ್ನದಾಯಿತು. ನಾನು ಬೀದಿ ದೀಪದ ಬೆಳಕಿನಲ್ಲಿ ಅವನ ಮುಖವನ್ನೇ ದಿಟ್ಟಿಸಿದೆ. ಆತನ ಮುಖ ಮಂಕಾಗಿ, ನೀನು ಪುಣ್ಯ ಮಾಡಿದ್ದೀಯಾ ನಿಮ್ಮನೆ ಬಗ್ಗೆ ಇಷ್ಟೊಂದು ಕಾಳಜಿ ವಹಿಸೋ ಹೆಂಡತಿ ನಿನಗೆ ಸಿಕ್ಕಿದ್ದಾಳೆ ನೀನು ಅದೃಷ್ಟವಂತ ಕಣೋ ಎನ್ನುತ್ತಾ ನನ್ನ ಬೆನ್ನು ತಟ್ಟಿದ.
ನಾನು ಗಲಿಬಿಲಿಯಿಂದ ಅವನತ್ತಲೇ ನೋಡಿದೆ. ಆಗ ಅವನು, ಹಿಂದೊಮ್ಮೆ ನಮ್ಮ ಮನೆಗೆ ಸಿಡಿಲು ಬಡಿದಿತ್ತು. ಮನೆಯಲ್ಲಿದ್ದ ಟೀವಿ, ಫ್ರಿಜ್ಜು, ಎಲ್ಲ ಸುಟ್ಟು ಹೋಯಿತು. ಕೊನೆಗೆ ಲೈಟ್ ಬಲ್ಬ್ ಕೂಡ ಉಳೀಲಿಲ್ಲ, ಎಲ್ಲ ಸುಟ್ಟು ಭಸ್ಮವಾಗಿ ಬಿಟ್ಟಿತ್ತು. ಇಷ್ಟೆಲ್ಲಾ ಆಗುವಾಗ ನನ್ನ ಹೆಂಡತಿ ಮಧ್ಯಾಹ್ನದ ಸವಿ ನಿದ್ದೆಯಲ್ಲೇ ಮುಳುಗಿದ್ದಳು. ಮನೆಯೆಲ್ಲ ಸುಟ್ಟ ವಾಸನೆ ತುಂಬಿದಾಗಲೇ ಅವಳಿಗೆ ಎಚ್ಚರಾವಾಗಿದ್ದು… ಅವನು ಮಾತು ಮುಗಿಸುವ ಮೊದಲೇ ನಾನು, ನಿನ್ನ ಪುಣ್ಯ ಕಣೋ, ಹೆಂಡತಿ ಬದುಕಿಕೊಂಡಳಲ್ಲ ಎಂದು ಉದ್ಗರಿಸಿದೆ. ಆದರೆ ಅವನು ಮಾತ್ರ ಏನೂ ಹೇಳಲ್ಲಿಲ್ಲ.
ಅಷ್ಟರಲ್ಲಿ ಸ್ವಲ್ಪ ದೊಡ್ಡ ಮಿಂಚೊಂದು ಮಿಂಚಿ ಮರೆಯಾಯಿತು. ನನ್ನ ಸ್ನೇಹಿತ, ನಾನು ಹೋಗ್ತಿನೋ, ನಾಳೆ ಸಿಗೋಣ ಎಲ್ಲರೂ ನಿನ್ನಷ್ಟು ಅದೃಷ್ಟವಂತರಲ್ಲಪ್ಪ,ನಾನೇ ಮನೆಗೆ ಹೋಗಿ ಎಲ್ಲ ಕನೆಕ್ಷನ್ ಕಿತ್ತಾಕಬೇಕು ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೆ ತನ್ನ ಮನೆಯತ್ತ ಅವಸರದ ಹೆಜ್ಜೆ ಹಾಕಿದ. ನಾನು ನಮ್ಮ ಮನೆಯ ಗೇಟು ತೆರೆದು ಒಳಹೊಕ್ಕೆ.
ಶ್ರೀಮತಿ ನನ್ನನ್ನು ಕಂಡು, ರೀ ರೇಗಾಡಬೇಡಿ, ಹೊರಗೆ ಮಿಂಚು ಬರ್ತಿದೆ ಅದಕ್ಕೆ … ಎನ್ನುತ್ತಾ ನನ್ನ ಮುಖವನ್ನು ನೋಡಲು ಧೈರ್ಯ ಸಾಲದೇ ತಲೆತಗ್ಗಿಸಿದಳು. ನಾನು ಅವಳನ್ನು ಅಪ್ಪಿಕೊಂಡು, ನೀನು ನನ್ನ ಪಾಲಿನ ಅದೃಷ್ಟ ದೇವತೆ ಕಣೆ ಇನ್ಯಾವತ್ತೂ ನಿನ್ನ ಮೇಲೆ ರೇಗಲ್ಲ ಎಂದು ಅವಳ ಕಿವಿಯಲ್ಲಿ ಮೆಲ್ಲನುಸುರಿದೆ.
ಅವಳಿಗೆ ದಿಗ್ಭ್ರಮೆಯಾಗಿ, ರೀ ಏನಾಯ್ತು ನಿಮಗೆ ಇದ್ದಕ್ಕಿದ್ದಂತೆ, ಯಾವಾಗಲೂ ನಾನು ಸಿಡಿಲು ಬರುತ್ತೇಂತ ಮೇನ್ ಸ್ವಿಚ್ ಆಫ್ ಮಾಡಿ ಕೇಬಲ್ ಕನೆಕ್ಷನ್ ಫೋನ್ ಕನೆಕ್ಷನ್ ಎಲ್ಲ ತೆಗೆದು ಬಿಟ್ರೆ ರಂಪ ರಾಮಾಯಣ ಮಾಡ್ತಿದ್ರಿ ಇವತ್ತೇನಾಯ್ತು, ಹೊಸದಾಗಿ ಕುಡಿಯೋ ಅಭ್ಯಾಸ ಶುರು ಮಾಡಿಲ್ಲ ತಾನೇ ಎಂದಳು.
ನಾನು ಮಾತ್ರ ನನ್ನಲ್ಲಾದ ಬದಲಾವಣೆಯ ಗುಟ್ಟು ಬಿಟ್ಟು ಕೊಡದೆ, ನೀನು ಏನು ಬೇಕಾದರೂ ಹೇಳು, ಒಂದು ರೀತೀಲಿ ಇವತ್ತು ನನಗೆ ಜ್ಞಾನೋದಯ ಆಯ್ತು ಅಂತಾನೆ ತಿಳ್ಕೋ. ನೀನು ಇಷ್ಟೆಲ್ಲಾ ಜಾಗ್ರತೆ ವಹಿಸೋದು ನಮ್ಮ ಒಳ್ಳೆಯದಕ್ಕೆ ತಾನೇ. ಅದಕ್ಯಾಕೆ ನಾನು ರೇಗಬೇಕು, ಇನ್ಮೇಲೆ ಯಾವಾತೂ ನಿನ್ಮೇಲೆ ರೇಗಲ್ಲ ಎಂದು ಅವಳಿಗೆ ಭರವಸೆ ಇತ್ತೆ.
ಅವಳು ಮಾತ್ರ ಅತ್ಯಾಶ್ಚರ್ಯದಿಂದ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ನಾನು, ನಂಗೆ ತುಂಬಾ ಹಸಿವಾಗ್ತಿದೆ. ಅಡಿಗೆ ಏನು ಮಾಡಿದ್ದೀಯಾ ಎನ್ನುತ್ತಾ ಅವಳ ಗಮನವನ್ನು ಬೇರೆಡೆಗೆ ಹರಿಸಲು ಪ್ರಯತ್ನಿಸಿದೆ. ತಕ್ಷಣ ಅವಳು, ನಿಮಗಿಷ್ಟ ಅಂತಾ ಏನೋ ಮಾಡಿದ್ದೀನಿ. ಬೇಗ ಕೈಕಾಲು ತೊಳ್ಕೊಂಡು ಊಟಕ್ಕೆ ಬನ್ನಿ ಎನ್ನುತ್ತಾ ಅವಸರದಿಂದ ಅಡಿಗೆಮನೆಯತ್ತ ಹೆಜ್ಜೆ ಹಾಕಿದಳು. ಅವಳ ಸಂಭ್ರಮ ಕಂಡು ನಾನೂ ಸಂತಸದಿಂದ ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ.
ಅವತ್ತು ಮಧ್ಯರಾತ್ರಿಯಲ್ಲಿ ಬಾತ್ ರೂಮಿಗೆ ಹೋಗಲು ನಾನು ಎದ್ದು ರೂಮಿನ ಟ್ಯೂಬ್ ಲೈಟು ಸ್ವಿಚ್ ಹಾಕಿದೆ. ನನ್ನಾಕೆ ಗಾಢ ನಿದ್ದೆಯಲ್ಲಿದ್ದಳು. ನಾನು ಅವಳನ್ನೊಮ್ಮೆ ನೋಡಿ ಬಾತ್ ರೂಮಿಗೆ ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ, ಅವಳು ಗಡಬಡಿಸಿ ಎದ್ದು, ಅಯ್ಯೋ ಎಲ್ಲ ಹೋಯಿತು ಸಿಡಿಲು ಬಡಿದೇ ಬಿಟ್ಟಿತು. ನಾನು ಮೊದಲೇ ಎಚ್ಚರಿಕೆ ವಹಿಸಬೇಕಿತ್ತು ಎಂದೆಲ್ಲ ಬಡಬಡಿಸ ತೊಡಗಿದಳು.
ನಾನು ಗಾಬರಿಯಿಂದ, ಏನಾಯ್ತು ಕಣೆ, ಯಾಕೆ ಇಷ್ಟೊಂದು ಗಾಬರಿಯಾಗಿದ್ದೀಯ ಎಲ್ಲೂ ಸಿಡಿಲು ಬಡಿದಿಲ್ಲ, ನಾನು ಟ್ಯೂಬ್ ಲೈಟು ಹಾಕಿದ್ದೆ, ಅದು ನಿದ್ದೆಯಲ್ಲಿ ನಿನಗೆ ಮಿಂಚಿನ ಹಾಗೆ ಕಾಣಿಸಿರಬೇಕು, ಹೊರಗಡೆ ಆಕಾಶದಲ್ಲಿ ನಕ್ಷತ್ರ ಕಾಣಿಸ್ತಿದೆ ನೋಡು ಎನ್ನುತ್ತ ಅವಳ ಮುಖದಲ್ಲಿ ಕಾಣಿಸಿಕೊಂಡ ಬೆವರನ್ನು ಒರೆಸುತ್ತಾ ಸಮಾಧಾನ ಮಾಡಿದೆ. ನೀನು ಮಲಕ್ಕೋ ಏನೂ ಆಗಿಲ್ಲ ಎನ್ನುತ್ತಾ ಮಗುವಿನಂತೆ ಅವಳನ್ನು ತಟ್ಟಿ ಮಲಗಿಸಿದೆ. ಅವಳು ಅಲ್ಲೇ ನಿದ್ದೆ ಹೋದಳು.
ನಾನು ಮೆಲ್ಲನೆ ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ನನ್ನ ಹೆಂಡತಿ ಎಷ್ಟು ಒಳ್ಳೆಯವಳು, ನಿದ್ದೆಯಲ್ಲೂ ಅವಳಿಗೆ ಮನೆಯ ಚಿಂತೆ. ನಾನು ಮಾತ್ರ ಅವಳ ಒಳ್ಳೆಯ ಗುಣ ನೋಡಿ ಮೆಚ್ಚುವುದನ್ನು ಬಿಟ್ಟು ಇಷ್ಟು ಸಮಯ ರೇಗಾಡುತ್ತಿದ್ದೆನಲ್ಲ, ನನ್ನ ಸ್ನೇಹಿತನ ಹೆಂಡತಿಯಂತೆ ಇವಳೂ ಆಗಿದಿದ್ದರೆ ಇಷ್ಟೊತ್ತು ನನಗದೆಷ್ಟೆಲ್ಲ ನಷ್ಟವಾಗುತ್ತಿತ್ತೇನೋ ಎಂದು ಭಾವುಕನಾಗಿ ಗಂಟಲುಬ್ಬಿ ಬಂದಿತು.