ಕ್ರೌರ್ಯದ ಪರಮಾವಧಿ


ಇದು ಸತ್ಯ ಘಟನೆ. ನಿನ್ನೆ ನಾನು ಬಸ್ಸಿನಲ್ಲಿ ಬರುತ್ತಿರುವಾಗ ಕಿಟಕಿಯ ಬಳಿ ಕುಳಿತಿದ್ದ ನನಗೆ ಡಬ್ ಎಂಬ ಶಬ್ದ ಕೇಳಿ ಗಾಬರಿಯಾಗಿ ಹೊರಗೆ ನೋಡಿದಾಗ ಕಾರೊಂದು ನಮ್ಮ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಶರವೇಗದಿಂದ ಧಾವಿಸಿ ಒಂದು ಬೀದಿನಾಯಿಗೆ ಡಿಕ್ಕಿ ಹೊಡೆದು ನಾಯಿ ಕಾರಿನಡಿಗೆ ಬಿದ್ದಿತು. ಕಾರು ಅದನ್ನು ಹಾಗೆ ಬಿಟ್ಟು ಮುಂದಕ್ಕೆ ಹೋಗುತ್ತಿದ್ದಂತೆ ನೋವಿನಿಂದ ಕಿರಿಚುತ್ತಿದ್ದ ನಾಯಿ ಎದ್ದೇಳಲು ಪ್ರಯತ್ನಿಸುವಷ್ಟರಲ್ಲಿ ಕ್ಷಣಮಾತ್ರದಲ್ಲಿ ಇನ್ನೊಂದು ಕಾರು ಅದೇ ರೀತಿಯಲ್ಲಿ ಶರವೇಗದಿಂದ ಮತ್ತೊಮ್ಮೆ ಆ ಹತಭಾಗ್ಯ ನಾಯಿಯ ಮೇಲೆ ಹರಿದು ಅದನ್ನು ಸ್ವಲ್ಪ ಮುಂದಕ್ಕೆ ಎಸೆಯಿತು. ಈ ಬಾರಿ ಅದರ ಹೊಟ್ಟೆ ಹಾಗೂ ಕಾಲುಗಳ ಮೇಲೆ ಕಾರಿನ ಚಕ್ರಗಳು ನಿರ್ದಯೆಯಿಂದ ತುಳಿಯುತ್ತ ಮುಂದೆ ಸಾಗುತ್ತಿರುವುದನ್ನು ಕಂಡು ನಾನು ಅಯ್ಯೋ ದೇವರೇ ಎಂದು ಉದ್ಗರಿಸಿದೆ. ನಾಯಿ ಮತ್ತೊಮ್ಮೆ ನೋವಿನಿಂದ ಕಿರಿಚುತ್ತ ಎದ್ದೇಳಲು ಪ್ರಯತ್ನಿಸಿತು. ಆದರೆ ನಾಯಿಯ ದುರಾದೃಷ್ಟಕ್ಕೆ ಇಲ್ಲಿಗೆ ಕೊನೆಯಾಗಲಿಲ್ಲ. ನೋಡನೋಡುತ್ತಿದ್ದಂತೆ ಮತ್ತೊಂದು ಕಾರು ಅದರ ಮೇಲೆ ನಿಷ್ಕಾರುಣ್ಯವಾಗಿ ಅದೇ ಶರವೇಗದಿಂದ ಚಲಿಸಿತು. ನಾಯಿ ಮತ್ತೆ ನೋವಿನಿಂದ ಕಿರುಚಿತು. ಈಗ ಆ ನಾಯಿಗೆ ನೋವಿಂದ ಎದ್ದೇಳಲೂ ಆಗದಂತಹ ಪರಿಸ್ಥಿತಿ. ಅಷ್ಟರಲ್ಲಿ  ಮಗದೊಂದು  ಕಾರು ಅದೇ ರೀತಿ ಶರವೇಗದಲ್ಲಿ ಚಲಿಸಿ ನಾಯಿಯ ಮೇಲೆ ಮತ್ತೆ ಚಲಿಸಿ ನಾಯಿ ರಸ್ತೆ ಬದಿಗೆ ಎಸೆಯಲ್ಪಟ್ಟಿತು. 

ಎಂಥಾ ರಾಕ್ಷಸ ಜನರು!  ಒಂದರ ಹಿಂದೆ ಒಂದರಂತೆ ನಾಲ್ಕು ಕಾರುಗಳು ನಾಯಿಯ ಮೇಲೆ ಹರಿದ ಘನಘೋರ ದೃಶ್ಯ ಕಂಡು ನಾನು ಸ್ಥಂಭೀಭೂತಳಾದೆ. ಪ್ರತಿ ಬಾರಿ ನಾಯಿಯ ಮೇಲೆ ಕಾರು ಹರಿದಾಗ ನಾನು ನೋವಿನಿಂದ ಅಯ್ಯೋ ದೇವರೇ ಎನ್ನುತ್ತಿದ್ದೆ. ನನ್ನ ಬಳಿ ಕುಳಿತಿದ ಹುಡುಗಿಯೂ ಕೂಡ ಅಯ್ಯೋ ಅಯ್ಯೋ ಎನ್ನುತ್ತಿದ್ದಳು. ಈ ಬೀಭತ್ಸ್ಯ ದೃಶ್ಯಕ್ಕೆ ನಾನು ಮೂಕ ಸಾಕ್ಷಿಯಾಗಿ ಬಿಟ್ಟಿದ್ದೆ. ಆಗ ನನಗೆ, ನಾವೆಷ್ಟು ಅಸಹಾಯಕರು ಎಂದೆನಿಸಿತು. ನನಗೆ ಆ ನಾಯಿಯನ್ನು ಉಳಿಸಲಾಗಲಿಲ್ಲ ಎಂದು ಬಹಳ ಬೇಸರವಾಯಿತು. ಆ ಭೀಭತ್ಯ ದೃಶ್ಯ ನೋಡಿದ ನಮ್ಮ ಬಸ್ಸಿನ ಪ್ರಯಾಣಿಕರೆಲ್ಲ ದಂಗು ಬಡಿದು ಹೋಗಿದ್ದರು. ಇಷ್ಟೆಲ್ಲಾ ಆದರೂ ಆ ನಾಯಿ ಇನ್ನೂ ಜೀವಂತವಾಗಿತ್ತು, ಆದರೆ ಅದೆಷ್ಟು ಹೊತ್ತೋ ? ನಾಯಿಯೂ ಒಂದು ಜೀವಿ, ನಮಗೆ ಎಷ್ಟು ಈ ಭೂಮಿಯ ಮೇಲೆ ಹಕ್ಕಿದೆಯೋ ಅಷ್ಟೂ ಹಕ್ಕು ಆ ನಾಯಿಗೂ ಇದೆ. ಮೂಕ ಪ್ರಾಣಿಗೆ ತನ್ನ ಹಕ್ಕು ಸ್ಥಾಪಿಸಲು ಬರುವುದಿಲ್ಲ ಎಂದು ಅದಕ್ಕೆ ನೋವು ಚಿತ್ರಹಿಂಸೆ ಕೊಟ್ಟು ಸಂತಸ ಪಡುವ ವಿಕೃತ ಮನಸ್ಸಿನ ಜನರು ಅದೇನು ಸಾಧನೆ ಮಾಡುತ್ತಾರೋ ದೇವರೇ ಬಲ್ಲ. ಮನಷ್ಯರು ಯಾಕಿಷ್ಟು ಕ್ರೂರಿಗಳಾಗುತ್ತಿದ್ದಾರೆ?  ಮನುಷ್ಯರಲ್ಲಿದ್ದ ಪ್ರೀತಿ, ಅನುಕಂಪ, ಕರುಣೆ ತಾಳ್ಮೆ ಎಲ್ಲ ಯಾಕೆ ಕೊನೆಯುಸಿರೆಳೆಯುತ್ತಿದೆ ? ಮುಂದೆ ಒಂದು ದಿನ ಅವರಿಗೂ ಆ ನಾಯಿಯ ಪರಿಸ್ಥಿತಿ ಬಂದರೆ ಆಗ ಅವರಿಗೆ ಅದರ ನೋವು ಸಂಕಟ ತಿಳಿಯುತ್ತದೆ. ಹೀಗೊಂದು ಘಟನೆ ನಡೆಯಬಹುದು ಎಂದು ಊಹಿಸಲು ಅಸಾಧ್ಯವಾದ ದೃಶ್ಯ. ನನಗೆ ರಾತ್ರಿ ಕಣ್ಣು ಮುಚ್ಚಿದರೆ ಆ ನಾಯಿಯದ್ದೇ ಆ ಭಯಾನಕ ದೃಶ್ಯ ಕಣ್ಣ ಮುಂದೆ ಸುಳಿದು ನಿದ್ದೆಯೇ ಬರಲಿಲ್ಲ. ಆ ಕಟುಕರೆಲ್ಲ ಏನೂ ಆಗದವರಂತೆ ಚೆನ್ನಾಗಿ ನಿದ್ರಿಸಿರಬಹುದು. ಇದೆಲ್ಲವನ್ನು ನೋಡುತ್ತಿದ್ದರೆ ಮುಂದೆ ಮನುಷ್ಯ ಇನ್ನೇನೆಲ್ಲ ಮಾಡುವನೋ ಎಂದು ಭಯವಾಗುತ್ತಿದೆ.

 ದಿನ ಪತ್ರಿಕೆ ತೆರೆದು ನೋಡಿದರೆ ಬೀದಿನಾಯಿಗಳ ಸಂತಾನ ಹರಣ ಶಸ್ತ್ರಕ್ರಿಯೆ ನಡೆಸಲಾಗುತ್ತಿದೆ ಎಂಬುದನ್ನು ಓದಿ ಬಹಳ ಬೇಸರವಾಯಿತು. ನಾಯಿಗಳಿಗೆ ಮರಿ ಹಾಕುವ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೆ ಹಕ್ಕಿದೆ, ನಾಯಿಗಳಿದ್ದರೆ ಕಳ್ಳಕಾಕರ ಕಾಟ ಕಡಿಮೆಯಾಗುತ್ತದೆ. ಹೀಗೆ ಸಂತಾನಹರಣ ಶಸ್ತ್ರಕ್ರಿಯೆ ನಡೆಸಿ ಮುಂದೆ ನಾಯಿಗಳೇ ಇಲ್ಲವಾದಾಗ ಅದರ ಬೆಲೆ ಗೊತ್ತಾಗುತ್ತದೆ. ಇನ್ನೊಂದು ಕ್ರೌರ್ಯದ ವಿಷಯವೆಂದರೆ ಶಸ್ತ್ರಕ್ರಿಯೆ ನಡೆಸಿದ ನಾಯಿಗಳ ಗುರುತಿಗಾಗಿ ಅವುಗಳ ಕಿವಿಯನ್ನು ಇಂಗ್ಲಿಷ್  ನ ‘ವಿ’ ಆಕಾರದಲ್ಲಿ ಕತ್ತರಿಸುವುದಂತೆ! ಆಘಾತಕಾರಿ ವಿಷಯವೆಂದರೆ ಈ ಮಹಾನ್ ಕಾರ್ಯ ಪ್ರಾಣಿದಯಾ ಸಂಘದವರ ಸಹಯೋಗದಲ್ಲೇ ನಡೆಯುತ್ತಿದೆ!  ಸ್ವಲ್ಪ ಸಮಾಧಾನದ ವಿಷಯವೆಂದರೆ ಅವರು ಒಂದು ಒಳ್ಳೆ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಅದು ಬೀದಿ ನಾಯಿಗಳಿಗೆ ಲಸಿಕೆ ಹಾಕಿಸುವುದು.

ನಾಯಿಗಳ ಉಪಟಳವಿರುವುದು ಮನುಷ್ಯನ ಕೆಟ್ಟ ಬುದ್ದಿಯಿಂದಾಗಿಯೇ ಹೊರತು ಬೇರೇನಲ್ಲ. ಜನರು ಎಲ್ಲೆಂದರಲ್ಲಿ ಬಿಸಾಕಿದ ಮಾಂಸದ ತ್ಯಾಜ್ಯಗಳನ್ನು ತಿಂದು ಬದುಕುವ ನಾಯಿಗಳು ಇನ್ನೇನು ಮಾಡಬಲ್ಲವು. ಇದಕ್ಕೆ ಸರಳ ಪರಿಹಾರ, ಪ್ರತಿಯೊಂದು ಏರಿಯಾದವರು ಅಲ್ಲಿನ ಬೀದಿ ನಾಯಿಗಳಿಗೆ ಆಗಾಗ ಲಸಿಕೆ ನೀಡುತ್ತಾ ಬಂದರೆ ನಾಯಿಗಳೂ ಕ್ರೂರಿಗಳಾಗುವುದಿಲ್ಲ, ಅಲ್ಲಿನ ಜನರನ್ನು ಕಳ್ಳಕಾಕರಿಂದ ರಕ್ಷಿಸುತ್ತವೆ. ನಾವು ಮನೆಯಲ್ಲಿ ಸಾಕುವ ನಾಯಿಗಳು ನಮ್ಮ ಸಣ್ಣ ಪುಟ್ಟ ಮಕ್ಕಳನ್ನು ಅದೆಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಮಕ್ಕಳನ್ನು  ಅದೆಷ್ಟು ಚೆನ್ನಾಗಿ ಕಾಯುತ್ತವೆ ಎಂಬುದೇ ನಾಯಿ ಸ್ವಭಾವತಃ ಕ್ರೂರಿಯಲ್ಲ ಎಂದು ಸಾಕ್ಷಿ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಕೇಳಿಲ್ಲವೇ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಹಾಗೆಯೇ ನಾವು ನಾಯಿಗಳನ್ನು ರಕ್ಷಿಸಿದರೆ ಅವುಗಳು ನಮ್ಮನ್ನು ರಕ್ಷಿಸುತ್ತವೆ. ಕೆಲಸಮಯದ ಹಿಂದೆ ಕೊಡಗಿನಲ್ಲಿ ಕೆಲವು ಸಾಕುನಾಯಿಗಳಿಂದಾಗಿಯೇ ಮನೆಯವರೆಲ್ಲ ಬದುಕಿಕೊಂಡಿದ್ದಾರೆ. ನಾಯಿ ಎಷ್ಟೋ ಮನುಷ್ಯರಿಗಿಂತ ಗುಣದಲ್ಲಿ ಮೇಲು. ನಾವು ಹಾಕಿದ ಅನ್ನ ತಿಂದು ನಮಗೆ ದ್ರೋಹ ಬಗೆಯುವ ಅದೆಷ್ಟು ಜನರಿದ್ದಾರೆ ಈ ಲೋಕದಲ್ಲಿ. ಆದರೆ ಅಂತಹ ಬುದ್ಧಿಯ ಒಂದು ನಾಯಿಯಾದರೂ ಇದೆಯೇ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.