ಅವನು ಹೆಣ್ಣು ನೋಡಲು ತನ್ನ ತಂದೆ ತಾಯಿ ಜೊತೆ ಹೊರಟಿದ್ದ. ಇದುವರೆಗೂ ಅದೆಷ್ಟೋ ಹೆಣ್ಣುಗಳನ್ನು ನೋಡಿದರೂ ಯಾವುದೂ ಸರಿಯಾಗಿ ಕೂಡಿ ಬಂದಿರಲಿಲ್ಲ. ಅವನು ಒಪ್ಪಿದರೆ ಹೆಣ್ಣಿನ ಮನೆಯವರು ಯಾವ್ಯಾವುದೋ ಕಾರಣಕ್ಕೆ ಒಪ್ಪುತ್ತಿರಲಿಲ್ಲ. ಇನ್ನು ಇವನು ಬೇಡವೇ ಬೇಡ ಎಂದು ಬಿಟ್ಟ ಹೆಣ್ಣಿನ ಕಡೆಯವರು ಉತ್ಸಾಹ ತೋರಿಸುತ್ತಿದ್ದರು. ಅವನ ಜೀವನದಲ್ಲಿ ಮೊದಲಿನಿಂದಲೂ ಹೀಗೆ, ಎಲ್ಲವೂ ಉಲ್ಟಾ. ಅವನು ಬೇಕೆಂದೆದು ಅವನಿಗೆ ಸಿಗುತ್ತಿರಲಿಲ್ಲ. ಇದು ಅವನಿಗೆ ಚಿಕ್ಕವನಿದ್ದಾಗಲೇ ತಕ್ಕಮಟ್ಟಿಗೆ ಅಂದಾಜಾ ಗಿದ್ದ ರೂ ಕಾಲೇಜಿಗೆ ಓದಲು ಹೋದ ಮೇಲಂತೂ ಖಾತ್ರಿಯಾಗಿಬಿಟ್ಟಿತು. ಓದಿನಲ್ಲಿ ಸದಾ ಮುಂದಿದ್ದ ಅವನು
ಪಿ ಯು ಸಿ ನಲ್ಲಿ ಡಿಸ್ಟಿಂಕ್ಷನ್ ಬಂದೇ ಬರುತ್ತದೆ, ತಾನು ಇಂಜಿನೀಯರಿಂಗ್ ಓದುತ್ತೇನೆ ಎಂದುಕೊಂಡು ವಿಜ್ಞಾನ ವಿಷಯ ಆರಿಸಿಕೊಂಡರೂ ಅವನು ಬರೇ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದ. ಅವನಿಗೆ ಒಳ್ಳೆಯ ಕಾಲೇಜು ಕೂಡ ಸಿಗದೇ ಕೊನೆಗೆ ಬಿಕಾಂ ಓದಿ ಸಿ. ಎ ಪರೀಕ್ಷೆ ಕಟ್ಟಿದ. ಅವನು ಪರೀಕ್ಷೆಗಳನ್ನು ನಿರುತ್ಸಾಹದಿಂದಲೇ ಬರೆಯುತ್ತಿದ್ದರೂ ಅವನಿಗೆ ಆಶ್ಚರ್ಯ ಆಗುವಷ್ಟು ಅಂಕಗಳು ದೊರೆಯುತ್ತಿದ್ದವು. ಕೊನೆಗೆ ಸಿ ಎ ಕೊನೆಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಯಲ್ಲಿ ಪಾಸಾದಾಗ ಅವನಿಗಂತೂ ನಂಬಲಸಾಧ್ಯವಾಯಿತು. ಕೂಡಲೇ ಒಳ್ಳೆಯ ಕೆಲಸ ಕೂಡ ಸಿಕ್ಕಿತು. ಪ್ರೀತಿಸಿ ಮದುವೆಯಾಗಬೇಕು ಎಂಬ ಹಂಬಲದದಿಂದ ಕಾಲೇಜಿನ ಅದೆಷ್ಟೋ ಹುಡುಗಿಯರ ಹಿಂದೆ ಬಿದ್ದರೂ ಯಾರೂ ಅವನನ್ನು ಇಷ್ಟ ಪಡಲಿಲ್ಲ. ಕೊನೆಗೆ ತನ್ನ ಹಣೆಯಲ್ಲಿ ಪ್ರೀತಿಸಿ ಮದುವೆಯಾಗಿ ಬರೆದಿಲ್ಲವೇನೋ ಎಂದು ನಿರಾಶನಾಗಿ ಅಪ್ಪ ಅಮ್ಮ ನೋಡಿದ ಹೆಣ್ಣನ್ನೇ ಮದುವೆಯಾಗುವುದು ಎಂದು ನಿರ್ಧರಿಸಿದ್ದ. ಅವರು ತೋರಿಸುವ ಹೆಣ್ಣುಗಳನ್ನು ನೋಡುವುದೇ ಅವನ ಕೆಲಸವಾಯಿತು. ಇಂದೂ ಕೂಡ ಹಾಗೇ ಹೊರಟಿದ್ದ.
ಈ ಹುಡುಗಿ ಹೇಗೆ ಇರಲಿ, ನನಗವಳು ಬೇಡ ಫೋಟೋ ನೋಡಿದರೆ ಗೊತ್ತಾಗುತ್ತದೆ
ಅವಳೆಷ್ಟು ಅಲಂಕಾರ ಪ್ರಿಯಳು ಅಂತ. ನನಗೆ ಸರಳವಾಗಿರುವ ಹುಡುಗಿ ಬೇಕು, ನೊಡಲೇನೋ ಸುಂದರವಾಗಿದ್ದಾಳೆ, ಅವಳು ನನ್ನನ್ನು ಒಪ್ಪಬೇಕಲ್ಲ, ಅವಳು ನನ್ನನ್ನು ನಿರಾಕರಿಸುವ ಮೊದಲೇ ನಾನೇ ನಿರಾಕರಿಸಿ ಬಿಡಬೇಕು ಎಂದೆಲ್ಲ ಯೋಚಿಸಿದ.
ಹುಡುಗಿ ಮನೆಯಲ್ಲಿ ಭವ್ಯ ಸ್ವಾಗತ ಕಂಡು ಖುಷಿಯಾದರೂ ಅದೇನೋ ಪೆಚ್ಚು ಕಳೆ ಎಲ್ಲರ ಮುಖದ ಮೇಲಿತ್ತು. ಬಹುಶಃ ನಾನಿವರಿಗೆ ಇಷ್ಟವಾಗಿಲ್ಲ ಅಂತ ಕಾಣುತ್ತೆ, ಪರವಾಗಿಲ್ಲ ನಾನೂ ಹುಡುಗಿ ಬೇಡ ಎಂದು ಮೊದಲೇ ಹೇಳುತ್ತೇನೆ ಎಂದುಕೊಂಡ.
ಹುಡುಗಿ ಬಂದಾಗ ಅವನಿಗೆ ಅಚ್ಚರಿಯಾಯಿತು. ಅವಳು ಸರಳವಾಗಿ ಅಲಂಕಾರ ಮಾಡಿಕೊಂಡಿದ್ದಳು. ಫೋಟೋ ಗಿಂತ ನೋಡೋಕೆ ಚೆನ್ನಾಗಿದ್ದಾಳೆ ಅಂತ ಅಂದುಕೊಂಡ. ರೂಪವೇನೋ ಹಿಡಿಸಿತು ಆದರೆ ಗುಣ. ಮಾತನಾಡಿ ನೋಡಿದ. ಅವಳ ಗುಣ ಸ್ವಭಾವ ಕೂಡ ಅವನಿಗೆ ಹಿಡಿಸಿತು. ಆಗ ತಟ್ಟನೆ ಅವನಿಗೆ ನೆನಪಾಯಿತು, ತಾನು ಇಷ್ಟ ಪಟ್ಟಿದ್ದೆಲ್ಲ ಸಿಗುವುದಿಲ್ಲ ಅಂದರೆ ಈ ಹುಡುಗಿ ನನಗೆ ಸಿಗಲಾರಳು ಎಂದು ಬೇಜಾರು ಪಟ್ಟುಕೊಂಡ. ಅವನ ತಾಯಿ ಹುಡುಗಿ ಫೋಟೋಗಿಂತ ಚೆನ್ನಾಗಿದ್ದಾಳೆ ಎಂದು ಹೇಳಿದಾಗ ಹುಡುಗಿಯ ಅಜ್ಜಿ, “ಅವಳ ಅಮ್ಮ ಅಲಂಕಾರ ಪ್ರಿಯೆ, ಅದಕ್ಕೆ ಇವಳು ಬೇಡ ಅಂದ್ರೂ ಮೇಕಪ್ ಮಾಡಿಸಿ ಫೋಟೋ ತೆಗೆಸಿದ್ದು” ಎನ್ನುತ್ತಾ ಸೊಸೆ ಕಡೆ ನೋಡಿ “ನೋಡಿದ್ಯಾ, ಇನ್ಮೇಲೆ ಹಾಗೆಲ್ಲ ಮೇಕಪ್ ಮಾಡಿಸಬೇಡ. ಅವಳು ಹಾಗೇ ಚೆನ್ನಾಗಿದ್ದಾಳೆ” ಎಂದಾಗ ಅವನಿಗೆ ಟುಸ್ಸೆನಿಸಿತು. ಅಂದರೆ ಅಜ್ಜಿಗೆ ನಾನು ಇಷ್ಟವಾಗಿಲ್ಲ ಅಂದಾಯಿತು ಅಂತ ಅನಿಸಿ ಸಪ್ಪೆ ಮೋರೆ ಹಾಕಿದ. ಅವನ ತಾಯಿ ಇವನ ಬಳಿ ಮೆಲುದನಿಯಲ್ಲಿ” ಏನೋ ನಿಂಗೆ ಹಿಡಿಸಿ ದ್ಲೇನೋ ಅಂತ ಕೇಳಿದಾಗ “ಮೊದ್ಲು ಅವರನ್ನು ಕೇಳು, ಇಷ್ಟೊಂದು ಹುಡುಗೀರನ್ನ ನೋಡಿದಾಗ ಆದ ಅನುಭವ, ಅವಮಾನ ಸಾಕು. ಮೊದ್ಲು ಅವರನ್ನೇ ಕೇಳು ಎಂದವನು ಪಿಸುದನಿಯಲ್ಲಿ ನುಡಿದಾಗ ಅವನ ತಾಯಿ ಹುಡುಗಿಯನ್ನು ನೇರವಾಗಿ ಕೇಳಿದರು. “ಏನಮ್ಮ ನನ್ನ ಮಗ ಇಷ್ಟವಾದನಾ” ಆಕೆ ನಿಧಾನವಾಗಿ ಹೌದೆಂದು ತಲೆಯಾಡಿಸಿದಳು. ಒಂದು ಕ್ಷಣ ಅವನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅಂದರೆ ಹುಡುಗಿಗೂ ನಾನು ಇಷ್ಟವಾದೇ ಅಂದರೆ ಈ ಮದುವೆ ನಡೆಯುತ್ತದೆ, ಕೊನೆಗೂ ನನ್ನ ಜೀವನದಲ್ಲಿ ಉಲ್ಟಾ ನಡೆಯುವುದು ನಿಲ್ಲುತ್ತೆ ಎಂದು ಬಹಳ ಸಂತೋಷ ಪಟ್ಟ. ಅದೇ ಖುಷಿಯಲ್ಲಿ ನನಗೂ ಒಪ್ಪಿಗೆ ಅಂತ ಗಟ್ಟಿಯಾಗಿ ಹೇಳಿದಾಗ ಎಲ್ಲರೂ ನಕ್ಕರು. ಹುಡುಗಿ ಮನೆಯವರು ಇವತ್ತೇ ನಿಶ್ಚಿತಾರ್ಥ ನಡೆಯಲಿ ಎಂದಾಗ ಇವನಿಗೆ ರೋಗಿ ಬಯಸಿದ್ದೂ ಹಾಲು ವೈದ್ಯರೂ ಹೇಳಿದ್ದೂ ಹಾಲು ಎಂದಂತಾಯಿತು. ಸರಳವಾಗಿ ನಿಶ್ಚಿತಾರ್ಥ ದ ಶಾಸ್ತ್ರ ಕೂಡ ಮುಗಿಯಿತು.
ಮದುವೆ ಗೊತ್ತಾದ ಮೇಲಂತೂ ಅವನು ಆಕಾಶದಲ್ಲಿ ತೇಲಾಡುತ್ತಿದ್ದ. ಅಬ್ಬಾ
ಇನ್ನೇನೂ ಚಿಂತೆಯಿಲ್ಲ, ಇನ್ನು ಮುಂದೆ ತಾನು ಇಷ್ಟ ಪಟ್ಟಿದ್ದು ತನಗೆ ಸಿಗುತ್ತದೆ. ಇನ್ನು ತನ್ನ ಜೀವನದಲ್ಲಿ ಉಲ್ಟಾ ಆಗಲಿಕ್ಕಿಲ್ಲ. ಸುಂದರವಾದ ಒಳ್ಳೆ ಗುಣಗಳಿರುವ ಸರಳವಾದ ಹುಡುಗಿ ತನಗೆ ಸಿಕ್ಕಿದ್ದಾಳೆ ಎಂದು ಸ್ನೇಹಿತರಿಗೆ ಹೇಳಿಕೊಂಡು ತಿರುಗಿದ. ಅವನ ಸ್ನೇಹಿತರು ಕೊನೆಗೂ ಜಾಕ್ ಪಾಟ್ ಹೊಡೆದೆಯಲ್ಲೋ ಎಂದು ಮತ್ಸರದಿಂದ ನುಡಿದಾಗ ಅವನು ಉಬ್ಬಿಹೋದ.
ಮದುವೆ ಆದಷ್ಟೂ ಬೇಗನೆ ಆದರೆ ಒಳ್ಳೆಯದು ಎಂದು ಅಮ್ಮನನ್ನು ಕಾಡಿ ಬೇಡಿ, ತಿಂಗಳಲ್ಲೇ ಮದುವೆ ನಿಶ್ಚಯಿಸಿದ. ಹುಡುಗಿ ಜೊತೆ ದಿನವೂ ಫೋನಿನಲ್ಲಿ ಮಾತು, ವಾರಕ್ಕೊಮ್ಮೆ ಪಾರ್ಕ್ ಸಿನಿಮಾ ಹೋಟೆಲು ಎಂದೆಲ್ಲ ಸುತ್ತಾಡಿ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡ.
ಮದುವೆ ದಿನವಂತೂ ಅವನ ಸಂತೋಷ ಹೇಳತೀರದು. ಮದುವೆ ಮಂಟಪದಲ್ಲಿ ತನ್ನ ಮನದರಸಿ ಬರುವುದನ್ನೇ ಕಾದು ಕುಳಿತ. ಆದರೆ ಹುಡುಗಿಯ ಅಲಂಕಾರ ಮುಗಿದಿಲ್ಲ, ಬಟ್ಟೆ ಸಿಗ್ತಾ ಇಲ್ಲ ಅಂತ
ಏನೇನೋ ಸಬೂಬು ಹೇಳುತ್ತ ಇನ್ನಷ್ಟು ಕಾಯುವಂತಾದಾಗ ಅವನಿಗೆ ಯೋಚನೆ ಯಾಯಿತು. ದೇವರೇ ಕೊನೆ ಘಳಿಗೆಯಲ್ಲಿ ಉಲ್ಟಾ ಮಾಡಬೇಡಪ್ಪ, ನಂಗೆ ಈ ಹುಡುಗಿ ಜೊತೆ ಮದುವೆಯಾಗೋ ಯೋಗ ಕರುಣಿಸು ಅಂತ ದೇವರಲ್ಲಿ ಬೇಡಿಕೊಂಡ.
ಕೊನೆಗೆ ಮುಹೂರ್ತ ಮೀರುವ ಸಮಯವಾದಾಗ ಪುರೋಹಿತರು ಹೆಣ್ಣನ್ನು ಬೇಗನೆ ಕರೆದುಕೊಂಡು ಬನ್ನಿ ಮುಹೂರ್ತ ಮೀರುತ್ತಿದೆ, ಆಮೇಲೆ ಈ ಮದುವೆ ನಡೆಯಲ್ಲ ಎಂದಾಗ ಹುಡುಗಿಯ ತಂದೆ ಮುಂದೆ ಬಂದು ತಲೆ ತಗ್ಗಿಸಿ ನಿಂತು ಪುರೋಹಿತರೇ, ಈ ಮದುವೆ ನಡೆಯುವುದಿಲ್ಲ ಎಂದಾಗ ಅವನಿಗೆ ಎದೆ ಧಸಕ್ಕೆಂದಿತು. “ಅರೆ, ಯಾಕೆ ಏನಾಯಿತು ಅವಳ ಜೊತೆ ನಾನು ಮಾತಾಡಿದ್ದೆ, ಎಲ್ಲೆಲ್ಲೋ ಸುತ್ತಾಡಿದೆವು, ಈಗ ಅಂಥಾದ್ದು ಏನಾಯ್ತು” ಎಂದವನು ಆತಂಕದಿಂದ ಕೇಳಿದಾಗ “ಅವಳು ಪ್ರೀತಿಸಿದವನ ಜೊತೆ ಓಡಿ ಹೋದಳು, ನಮ್ಮ ಮರ್ಯಾದೆ ಕಳೆದು ಬಿಟ್ಟಳು. ಈ ಮದುವೆ ಒಪ್ಪಿಕೊಂಡ ಹಾಗೆ ನಾಟಕ ಮಾಡಿ ನಮ್ಮ ಮುಖಕ್ಕೆ ಮಸಿ ಬಳಿದು ಬಿಟ್ಟಳು” ಎಂದವರು ಬಿಕ್ಕಿದಾಗ ಅವನಿಗೆ ಭೂಮಿಯೇ ಬಾಯಿ ಬಿಟ್ಟಂತಾಯಿತು. ಆದರೂ ಕೂಡ ಅವನ ಜೀವನದಲ್ಲಿ ಇದುವರೆಗೂ ಅವನಿಷ್ಟದ ವಿರುದ್ಧ ನಡೆಯುವುದೆಲ್ಲ ಅವನ ಒಳ್ಳೆಯದಕ್ಕೆ ಎಂದು ಮಾತ್ರ ಅವನಿಗರಿವಾ ಗಲೇ ಇಲ್ಲ. ಅವನು ತನ್ನ ಗ್ರಹಚಾರ, ದುರಾದೃಷ್ಟ ಎಂದೆಲ್ಲ ಹಳಿದುಕೊಂಡಿದ್ದರೂ ವಿಧಿ ಮಾತ್ರ ಪ್ರತೀ ಸಲವೂ ಅವನನ್ನು ಕಷ್ಟದಿಂದ ಪಾರು ಮಾಡಲು ಪ್ರಯತ್ನಿಸುತ್ತಿತ್ತು.