ಕೊರೋನ ರಕ್ಕಸ


ಈಗೀಗ ಎಲ್ಲರ ಬಾಯಲ್ಲೂ ಕೊರೋನ ರಕ್ಕಸನದ್ದೇ ಮಾತು. ಪ್ರಪಂಚವನ್ನೇ ದಿಗಿಲು ಪಡಿಸುತ್ತಾ ರಕ್ಕಸ ತನ್ನ ಕದಂಬ ಬಾಹುಗಳನ್ನು ಚಾಚಿ ಮನುಷ್ಯರನ್ನು ತನ್ನ ಮುಷ್ಟಿಯಲ್ಲಿ ನಲುಗಿಸಲು ನೋಡುತ್ತ ಜನರನ್ನು ಭಯಭೀತಗೊಳಿಸುತ್ತಿದ್ದಾನೆ. ಸಾಮಾನ್ಯ ಕಣ್ಣಿಗೆ ಕಾಣದ ರಕ್ಕಸ ಮನುಷ್ಯನ ದೇಹದೊಳಗೆ ಅಡಗಿ ಕುಳಿತು ಬೃಹದಾಕಾರ ತಾಳಿ ಸದ್ದಿಲ್ಲದೆ ಜನರನ್ನು ನುಂಗುತ್ತಿದ್ದಾನೆ. ಈ ರಕ್ಕಸನ ದಾಳಿಗೆ ಜಗತ್ತೇ ತತ್ತರಿಸಿ ಹೋಗಿದೆ. ದೇಶಗಳ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತವನ್ನೆ ಕೊಡುತ್ತಿದ್ದಾನೆ. ಷೇರು ಮಾರ್ಕೆಟ್ಟುಗಳು ಕೊರೋನ ರಕ್ಕಸನ ದಾಳಿಗೆ ಬೆದರಿ ಪಾತಾಳಕ್ಕಿಳಿದಿವೆ.

ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ಜಗತ್ತಿನಾದ್ಯಂತ ಹಬ್ಬಲು, ಜನರನ್ನು ಬಲಿ ತೆಗೆದುಕೊಳ್ಳಲೂ ಸಿದ್ಧವಾಗಿದ್ದಾನೆ. ಇಟಲಿ ಯಲ್ಲಿ ಸಾವಿರಕ್ಕೂ ಹೆಚ್ಚು ಜನ ಕೊರೋನ ರಕ್ಕಸನಿಗೆ ಬಲಿಯಾಗಿದ್ದಾರೆ. ನಮ್ಮ ದೇಶದಲ್ಲೂ ಕೊರೋನ ರಕ್ಕಸ ಕಾಲಿಟ್ಟಿದ್ದಾನೆ. ಆದರೆ ಕದೀಮ ರಕ್ಕಸ ವಿದೇಶಗಳಿಂದ ಬಂದವರಲ್ಲಿ ಅಡಗಿ ಕುಳಿತು ಹೊರಬರಲು ನೋಡುತ್ತಿದ್ದಾನೆ. ರಕ್ಕಸನನ್ನು ನಮ್ಮ ದೇಶದ ಜನರ ಬಲಿ ತೆಗೆದುಕೊಳ್ಳಲು ನಾವು ಬಿಡಬಾರದು. ಇದನ್ನು ಪ್ರಮುಖವಾಗಿ ವಿದೇಶಗಳಿಂದ ಬಂದವರು ಅರಿತು ಕೊಳ್ಳಬೇಕು. ಕೊರೋನ ರಕ್ಕಸ ನಿಮ್ಮೊಳಗೇ ಇದ್ದರೂ 5 ದಿನಗಳವರೆಗೆ ಅಡಗಿ ಕುಳಿತಿರುತ್ತಾನೆ. ನಿಮ್ಮ ದೇಹ ತನ್ನ ಉಷ್ಣತೆಯನ್ನು ಹೆಚ್ಚಿಸಿ ವೈರಸ್ ಕೊಲ್ಲಲು ಪ್ರಯತ್ನಿಸುತ್ತದೆ ಅದೇ ಜ್ವರ. ನಂತರ ಗಂಟಲು ನೋವು, ಕೆಮ್ಮು ಶುರುವಾಗುತ್ತದೆ. ನಂತರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗಿಯ ಕೆಮ್ಮು, ಸೀನಿನ ಹನಿಯಲ್ಲಿ ಕೊರೋನ ರಕ್ಕಸ ಅಡಗಿ ಕುಳಿತು ಇತರರನ್ನು ತನ್ನ ಮುಷ್ಟಿಯೊಳಗೆ ಸೇರಿಸಲು ಪ್ರಯತ್ನ ಪಡುತ್ತಾನೆ.

ಆದ್ದರಿಂದ ವಿದೇಶಗಳಿಂದ ಬಂದವರು ಕದ್ದು ಮುಚ್ಚಿ ಆರೋಗ್ಯಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡಬೇಡಿ. ಬೇರೆಯವರ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡಲು ನಿಮಗೆ ಯಾವ ಹಕ್ಕೂ ಇಲ್ಲ. ವಿದೇಶದಿಂದ ಬಂದ ಮೇಲೆ ಅವರಿಗೆ ವಿಷಯ ತಿಳಿಸಿ, ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿ. ಅವರೊಂದಿಗೆ ಸಹಕರಿಸಿ. ಮನೆಗೆ ಬಂದ ಮೇಲೂ ಮುಕ್ತವಾಗಿ ಬೆರೆಯುವುದು ಬೇಡ. 14 ದಿನಗಳ ಬಳಿಕವೂ ನೀವು ಆರೋಗ್ಯವಾಗಿದ್ದರೆ ನಂತರ ಸಮಸ್ಯೆಯಿಲ್ಲ. ಅದುವರೆಗೂ ಬೇರೆಯವರನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ. ನಿಮಗೆ ಸಣ್ಣ ಜ್ವರ ನೆಗಡಿ ಕಾಣಿಸಿಕೊಂಡರೂ ನಿರ್ಲಕ್ಷ್ಯ ಬೇಡ.

ನಮ್ಮನ್ನು ನಾವು ಕೊರೋನ ರಕ್ಕಸನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಹೊರಗಡೆ ಕಾಲಿಟ್ಟ ಮೇಲೆ ಮೂಗು ಕಣ್ಣು ಬಾಯಿಗಳಿಗೆ ಬೆರಳು ಹಾಕುವುದು ಬೇಡ. ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ. ಕೈಕಾಲುಗಳಿಗೆ ಗಾಯವಿದ್ದರೆ ಪಟ್ಟಿಕಟ್ಟಿ ಕೊಳ್ಳಿ. ಹೆಚ್ಚು ಜನ ಸೇರಿರುವ ಕಡೆ ಓಡಾಡಬೇಡಿ. ಅನಗತ್ಯ ಓಡಾಟ ಬೇಡ. ನಿರ್ಲಕ್ಷ್ಯವೂ ಬೇಡ. ಇತರರ ಜೊತೆ ಕೈ ಕುಲುಕಬೇಡಿ. ನಮ್ಮ ದೇಶದ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ತೆ ಎನ್ನಿ ಸಾಕು. ಪಾಶ್ಚಮಾತ್ಯ ದೇಶಗಳಲ್ಲಿ ಈಗ ಜನ ಕೈ ಕುಲುಕಲಾಗದೆ ಏನೇನೋ ಮಾಡುತ್ತಾರೆ ಬೂಟುಗಾಲಿನಿಂದ ಒಬ್ಬರಿಗೊಬ್ಬರು ತಾಕಿಸುವುದು, ಮೊಣಕೈ ತಾಗಿಸುವುದು, ಏನೇನೋ ಮಾಡಿ ನಗೆಪಾಟಲಿಗೀಡಾಗುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಎಷ್ಟು ಒಳ್ಳೆಯದಲ್ಲವೇ,

ಮನೆಗೆ ಬಂದ ಮೇಲೆ ಮೊದಲ ಕೆಲಸ ಕೈಕಾಲು ಮುಖ ಒಂದಿಂಚೂ ಬಿಡದೆ ಸೋಪಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದುಕೊಳ್ಳಿ, ಸಾಧ್ಯವಾದಲ್ಲಿ ಸ್ನಾನವನ್ನು ಮಾಡಿ. ಧರಿಸಿದ ಬಟ್ಟೆಗಳನ್ನು ಒಗೆದು ಹಾಕಿ. ಮನೆಗೆ ಬಂದ ಮೇಲೆ ಕೈ ತೊಳೆಯದೆ ಎಲ್ಲೆಲ್ಲ ಮುಟ್ಟಿದಿರೋ, ಉದಾ: ಬಾಗಿಲು, ಬೀಗದ ಕೈ, ನಲ್ಲಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ. ಹೊರಗೆ ಹೋಗುವಾಗ ಹಾಕಿಕೊಂಡ ಚಪ್ಪಲಿ ಅಥವಾ ಬೂಟುಗಳನ್ನು ಮನೆಯೊಳಗೆ ಧರಿಸಿಕೊಂಡು ಓಡಾಡಬೇಡಿ. ಸಧ್ಯಕ್ಕೆ ಉಗುರು ಬೆಳೆಸುವ ಫಾಷನ್ ಬೇಡ. ಉಗುರುಗಳನ್ನು ಕತ್ತರಿಸಿ, ರಕ್ಕಸ ಅಲ್ಲಿ ಸಹ ಅಡಗಿ ಕೂರಬಹುದು.

ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ತರಕಾರಿ ನಿಮ್ಮನ್ನು ತಲುಪುವ ಮೊದಲು ಯಾರೆಲ್ಲ ಸೀನಿರಬಹುದು ಯಾರೆಲ್ಲ ಸಿಂಬಳದ ಕೈಯಿಂದ ಮುಟ್ಟಿರಬಹುದು ಎಂದು ತಿಳಿಯದು ಅದಕ್ಕಾಗಿ ಈ ಮುಂಜಾಗರೂಕತೆ. ಮಾಂಸ ಮೊಟ್ಟೆ ತಿನ್ನುವವರು ಎಲ್ಲವನ್ನೂ ಚೆನ್ನಾಗಿ ಬೇಯಿಸಿ ತಿನ್ನಿರಿ. ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಪುಟ್ಟ ಮಕ್ಕಳ ಹಾಗೂ ವೃದ್ಧರ ಹೆಚ್ಚಿನ ಜಾಗ್ರತೆ ಮಾಡಿರಿ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ನಿಮಗೆ ಬೇರೆ ರೋಗಗಳಿದ್ದರೆ ಕೊರೋನ ರಕ್ಕಸ ಬಹಳ ಖುಷಿಯಿಂದಲೇ ನಿಮ್ಮ ದೇಹದಲ್ಲಿ ಆಶ್ರಯ ಪಡುತ್ತಾನೆ. ಆರೋಗ್ಯವಂತರ ಮೇಲೆ ಅವನಾಟ ಹೆಚ್ಚಾಗಿ ನಡೆಯದಿದ್ದರೂ ದುರ್ಬಲ ದೇಹಗಳ ಮೇಲೆ ಅಟ್ಟಹಾಸ ಮೆರೆಯುತ್ತಾನೆ.ಉದಾ: ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರಕ್ತ ದೊತ್ತಡದ ಸಮಸ್ಯೆ ಇತ್ಯಾದಿ. ಇಂಥವರು ಇನ್ನೂ ಹೆಚ್ಚಿನ ಜಾಗ್ರತೆ ವಹಿಸಿ.

ಆದಷ್ಟೂ ಜನ ಜನ ಜಂಗುಳಿಯಿಂದ ದೂರವಿರಿ. ಮುಖಕ್ಕೆ ಮಾಸ್ಕ್ ಕೊರೋನ ತೆಕ್ಕೆಗೆ ತುತ್ತಾದವರು ಮಾತ್ರ ಹಾಕಿದರೆ ಒಳ್ಳೆಯದು. ಅವರು ತಮ್ಮ ಸೀನು ಕೆಮ್ಮುಗಳ ಮುಖಾಂತರ ರೋಗವನ್ನು ಇತರರಿಗೆ ಹರಡದಂತೆ ಅದು ತಡೆಯುತ್ತದೆ. ಆದಷ್ಟೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ವಿಟಮಿನ್ ಸಿ ಪೋಷಕಾಂಶವಿರುವ ಹಣ್ಣು ತರಕಾರಿ ಸೇವಿಸಿ.ಕಿತ್ತಳೆ ಹಣ್ಣು, ನೆಲ್ಲಿ ಕಾಯಿ ನಿಂಬೆ ಹಣ್ಣು ಇತ್ಯಾದಿ 
ವಿಟಮಿನ್ ಇ ಪೋಷಕಾಂಶವಿರುವ ಬಾದಾಮಿ, ವೆಜಟೇಬಲ್ ಆಯಿಲ್, ಪಾಲಕ್, ಹಸಿರು ಸೊಪ್ಪುಗಳು, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ವಿಟಮಿನ್ ಬಿ 6 ಅಂಶವಿರುವ ಮೊಟ್ಟೆ, ಕೋಳಿ ಮಾಂಸ, ಬ್ರೆಡ್, ಮೀನು ತರಕಾರಿಗಳು, ಸೋಯಾ ಬೀನ್ಸ್ ಬಳಸಿರಿ. ನಿಮ್ಮ ದೈನಂದಿನ ಅಡುಗೆಯಲ್ಲಿ ಅರಶಿನ, ಬೆಳ್ಳುಳ್ಳಿ ಲವಂಗ, ಶುಂಠಿ ಇತ್ಯಾದಿಗಳನ್ನು ಬಳಸಿ. ಪ್ರತಿಯೊಬ್ಬರೂ ತಮಗೆ ಕಾಯಿಲೆ ಬರದಂತೆ ಜಾಗ್ರತೆ ವಹಿಸಿ ಎಚ್ಚರಿಕೆಯಿಂದ ಇದ್ದರೆ ಕೊರೋನ ರಕ್ಕಸನನ್ನು ನಾವೆಲ್ಲರೂ ಸೇರಿ ಹಿಮ್ಮೆಟ್ಟಿಸಬಹುದು.

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.