ಒಂದು ದಿನ ಬೆಳಕು ಹರಿಯ ಬೇಕಾದರೆ ಆಂಬುಲೆನ್ಸ್ ನ ಸೈರನ್ ಕೇಳಿಸಿತು. ಪಾಪ ಯಾರಿಗೆ ಏನಾಯಿತೋ ಎಂದು ಅನುಕಂಪ ಮೂಡಿತು. ಆದರೆ ಒಂದರ ಹಿಂದೆ ಒಂದರಂತೆ ಬರುತ್ತಿರುವ ಆಂಬುಲೆನ್ಸ್ ಗಳು ಕಂಡು ನಾವೆಲ್ಲ ಬೆಚ್ಚಿ ಬಿದ್ದೆವು. ಏನೋ ಬಹಳ ದೊಡ್ಡ ದುರಂತ ನಡೆದಿರಬೇಕು ಎಂದುಕೊಂಡಾಗ ಸುದ್ದಿ ತಿಳಿಯಿತು. ಮಂಗಳೂರಿನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ದುರಂತ ಕ್ಕೀಡಾಗಿದ್ದು ತಿಳಿದು ಮನಸ್ಸು ಮಮ್ಮಲ ಮರುಗಿತು. ಅಂದು 2010 ಮೇ ತಿಂಗಳ 22ನೇ ತಾರೀಕು. ನಾವ್ಯಾರೂ ಮರೆಯಲಾಗದ ದುರಂತ ಘಟಿಸಿದ ದಿನ.
ಅವತ್ತೀಡಿ ದಿನ ಆಂಬುಲೆನ್ಸ್ ಗಳ ಸೈರನ್ ಕೇಳಿ ಕೇಳಿ ನಾವೆಲ್ಲ ಮರಗಟ್ಟಿ ಹೋಗಿದ್ದೆವು. ಮನಸ್ಸುಗಳು ಭಾರವಾಗಿದ್ದವು ಕಣ್ಣುಗಳು ಆದ್ರವಾಗಿದ್ದವು. ನಮ್ಮೂರಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಊರಿಗೆ ಊರೇ ದಂಗು ಬಡಿದು ಹೋಗಿತ್ತು. ಯಾರಲ್ಲೂ ಚೈತನ್ಯವೇ ಇರಲಿಲ್ಲ.
ಘಟನೆ ನಡೆದು 13 ವರ್ಷ ಕಳೆದರೂ ಆ ದುರಂತವನ್ನು ಇನ್ನೂ ಮರೆಯಲಾಗುತ್ತಿಲ್ಲ.
ಆ ದಿನ ಮನುಷ್ಯನ ಬದುಕು ಅದೆಷ್ಟು ಅನಿಶ್ಚಿತ ಎನಿಸಿತು. ಊರು ತಲುಪಿದೆವು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ವಾಗಲೆ ವಿಧಿ ಅವರ ಉಸಿರನ್ನೆ ಕಿತ್ತುಕೊಂಡು ಬಿಟ್ಟಿತ್ತು. ಆ ವಿಮಾನದಲ್ಲಿದ್ದ ಪ್ರಯಾಣಿಕರ ಆಗಮನ ಅವರ ಕುಟುಂಬಕ್ಕೆ ಸಂತಸ ತರುವ ಬದಲು ಶೋಕವನ್ನೆ ತಂದಿಟ್ಟಿತು. ಕ್ರೂರ ವಿಧಿಯು ಆ ವಿಮಾನದ ಪೈಲಟ್ ನ ರೂಪದಲ್ಲಿ ಬಂದು ಅಟ್ಟಹಾಸವನ್ನು ನಡೆಸಿ ಬಿಟ್ಟಿತ್ತು. ಬಾಳಿ ಬದುಕಬೇಕಾದ ಹಲವು ಜೀವಗಳು ಕರಟಿ ಹೋದವು. ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ನೋವಿನಲ್ಲಿವೆ. ಆ ದುರಂತದಲ್ಲಿ ಮಡಿದವರೆಲ್ಲರಿಗೂ ನಮ್ಮೆಲ್ಲರ ಭಾವ ಪೂರ್ಣ ಶ್ರದ್ಧಾಂಜಲಿ.