ಬೆಲ್ ಶಬ್ದ ಕೇಳಿ ಯಾರು ಬಂದಿರಬಹುದು ಎಂದು ನಾನು ಯೋಚಿಸುತ್ತ ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಕೈ ತೊಳೆದು ಕೊಂಡು ಟವೆಲ್ ನಿಂದ ಕೈಯೊರೆಸುತ್ತ ಬಾಗಿಲ ಬಳಿ ಬಂದೆ. ಬಾಗಿಲ ತೂತಿನಲ್ಲಿ ನೋಡಿದರೆ ಬೋಳು ತಲೆಯ ಕನ್ನಡಕಧಾರಿ ವ್ಯಕ್ತಿಯೊಬ್ಬ ಅಲ್ಲಿ ನಿಂತಿದ್ದ. ಯಾರಪ್ಪ ಇವನು ಅಂತ ಯೋಚಿಸುತ್ತಿರುವಾಗಲೇ ಆತ ಮತ್ತೊಮ್ಮೆ ಬೆಲ್ ಒತ್ತಿದ. ನಾನು ತಟ್ಟನೆ ಬಾಗಿಲು ತೆರೆದು ಏನು ಎನ್ನುವಂತೆ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದೆ. ಅವನು ನನ್ನತ್ತ ಅನುಮಾನದಿಂದ ನೋಡುತ್ತಾ, “ಕನ್ನಡ” … ಎಂದ. ನಾನು ಹೌದು ಎನ್ನುವಂತೆ ತಲೆಯಾಡಿಸಿದೆ. ಅವನ ಮುಖ ಅರಳಿ, “ಅಬ್ಬಾ, ನೀವು ನಮ್ಮವರೇ! ನನಗೆ ತುಂಬಾ ಖುಷಿಯಾಯಿತು. ನಿಮ್ಮ ಬಿಲ್ಡಿಂಗ್ ನಲ್ಲಿ ಅನ್ಯ ಭಾಷಿಗರು ಜಾಸ್ತಿ ಇದ್ದಾರಲ್ಲವೇ, ಅದಕ್ಕೆ ಹಾಗೆ ಕೇಳಿದೆ. ನಿಮ್ಮನ್ನು ನೋಡಿದ ಕೂಡಲೇ ತಿಳಿಯಿತು, ನೀವು ನಮ್ಮವರೆಂದು. ಆದರೂ ಕೇಳಬೇಕಲ್ಲವೇ” ಎಂದು ನನ್ನ ಪ್ರತ್ಯುತ್ತರಕ್ಕೆ ಕಾದ.
ನಾನು, “ಅದು ಸರಿ, ನೀವು ಯಾರೂಂತ ನನಗೆ ಗೊತ್ತಾಗಲಿಲ್ಲ … ” ಎಂದು ಮಾತು ಮುಂದುವರೆಸುವಷ್ಟರಲ್ಲಿ ಆತ ತನ್ನ ಬ್ಯಾಗಿನಿಂದ ಪ್ಲಾಸ್ಟಿಕ್ ಚೀಲವೊಂದನ್ನು ಹೊರತೆಗೆದ. ಅದರ ಜೊತೆ ಮಾವಿನ ಹಣ್ಣಿನ ಪರಿಮಳ ನನ್ನ ಮೂಗಿಗೆ ಬಡಿಯಿತು. ಆ ಆಹ್ಲಾದಕರ ಪರಿಮಳವನ್ನು ಮೂಗರಳಿಸಿ ಆಘ್ರಾಣಿಸುತ್ತ, ಮಾವಿನ ಹಣ್ಣೇ! ಆಹಾ! ಇದು ನನ್ನ ಅತ್ಯಂತ ಪ್ರೀತಿಯ ಹಣ್ಣು. ಆದರೆ ಇವನೇಕೆ ನನಗೆ ಕೊಡುತ್ತಿದ್ದಾನೆ. ನಾನು ತೆಗೆದುಕೊಳ್ಳಬೇಕೋ ಬೇಡವೋ ಎಂದು ಯೋಚಿಸುತ್ತಿರುವಾಗಲೇ ಅವನು, “ಮೇಡಂ, ನೋಡಿ ಒಳ್ಳೆ ರಸ್ಪೂರಿ ಮಾವಿನ ಹಣ್ಣು. ಎಷ್ಟು ಸಿಹಿಯಾಗಿದೆ ಅಂದರೆ ಅಮೃತ.. ಅಮೃತ, ಒಂದು ತಿಂದು ನೋಡಿ. ಆಮೇಲೆ ನಂಗೆ ದಿನಾ ತರೋಕೆ ಹೇಳ್ತೀರಿ. ನಿಮ್ಮ ಮಕ್ಕಳಿಗೂ ತುಂಬಾ ಇಷ್ಟವಾಗಬಹುದು” ಎಂದೆಲ್ಲ ಅದರ ಗುಣಗಾನ ಆರಂಭಿಸಿದ.
ನಾನು ನಗುತ್ತ, “ನನಗೆ ಮಾವಿನ ಹಣ್ಣೆಂದರೆ ಬಹಳ ಇಷ್ಟ” ಎಂದೆ. ಅವನ ಮುಖ ಊರಗಲವಾಗಿ,”ಹೌದೇನು, ತೊಗೊಳ್ಳಿ ಮೇಡಮ್, ನಿಮಗಾಗಿಯೇ ತಂದಿದ್ದೇನೆ” ಎನ್ನುತ್ತಾ ನನ್ನ ಕೈಗೆ ಪ್ಲಾಸ್ಟಿಕ್ ಚೀಲವನ್ನು ರವಾನಿಸಿದ. ನಾನು ಚೀಲದಲ್ಲಿದ್ದ ಹಣ್ಣುಗಳನ್ನು ಪರೀಕ್ಷಿಸುತ್ತಿರುವಾಗಲೇ ಅವನು, ಇನ್ನೂರು ರೂಪಾಯಿ ಕೊಡಿ ಮೇಡಂ, ಒಂದು ಕೆಜಿ ಇದೆ ಎಂದಾಗ ನಾನು, ಓಹ್ ಇವನು ಮಾರಲು ಬಂದಿದ್ದಾನೆ ಅಂತ ಅಂದುಕೊಂಡೆ. ಅದರ ಜೊತೆ ರೇಟು ಕೇಳಿ ಕರೆಂಟು ಹೊಡೆದ ಹಾಗಾಯಿತು, “ಏನು? ಇನ್ನೂರು ರೂಪಾಯಿನಾ? ನಾನು ಮೊನ್ನೆ ನೂರು ರೂಪಾಯಿಗೆ ಒಂದು ಕೆಜಿ ತೊಗೊಂಡು ಬಂದಿದ್ದೇನೆ” ಎಂದು ನಾನೆಂದಾಗ, ಅವನು , “ಅಯ್ಯೋ ಮೇಡಂ, ಅವರೆಲ್ಲ ನಿಮಗೆ ರಸಪೂರಿ ಅಂತ ಸುಳ್ಳು ಹೇಳಿ ಮೋಸ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೆಲ್ಲ ಈ ಹಣ್ಣು ಸಿಗೋದೇ ಇಲ್ಲ. ಹಣ್ಣುಗಳ ಸೈಜ್ ನೋಡಿ ಮೇಡಮ್” ಎಂದ. ಆದರೆ ನಾನು, ಇನ್ನೂರು ರೂಪಾಯಿ ಹೆಚ್ಚಾಯಿತು ಎನ್ನುತ್ತಾ ಅವನ ಕೈಗೆ ಪ್ಲಾಸ್ಟಿಕ್ ಚೀಲ ಕೊಡಲು ಹೋದೆ, ಅವನು ತೆಗೆದುಕೊಳ್ಳಲಿಲ್ಲ. “ನಿಮಗೆ ಅಂತ ಕಡಿಮೆಗೆ ಕೊಡ್ತಿದ್ದೀನಿ. ಇಲ್ಲಿ ಬೇರೆಯವರಿಗೆಲ್ಲ ಇನ್ನೂರಕ್ಕೆ ಕೊಟ್ಟೆ. ನೀವು ನೂರ ಎಂಭತ್ತು ಕೊಡಿ, ನೀವು ನಮ್ಮವರೇ ಅಲ್ವ” ಅಂದ.
ನನಗೆ ಅದರ ತೂಕದ ಮೇಲೆ ಸಂಶಯವಾಗಿ, “ಇರಿ, ಒಂದು ನಿಮಿಷ, ಒಂದು ಕೆಜಿ ಇದೆಯೋ ಇಲ್ಲವೋ ಅಂತ ನೋಡ್ತೀನಿ” ಅಂತ ಅನ್ನುತ್ತ ಒಳಗೆ ಹೋದೆ. ಸ್ಕೇಲ್ ಮೇಲೆ ಇಟ್ಟು ನೋಡಿದರೆ ಕಾಲು ಕೆಜಿಯಷ್ಟು ಕಡಿಮೆ ಬಂದಿತು. ಅಬ್ಬಾ ಇವನು ಮೋಸ ಮಾಡುತ್ತಿದ್ದಾನೆ, ತೂಕದಲ್ಲೂ ಮೋಸ, ಜೊತೆಗೆ ದುಪ್ಪಟ್ಟು ರೇಟು ಬೇರೆ. ನನಗೇನು ಗ್ರಹಚಾರವೇ ಇದನ್ನು ಕೊಳ್ಳಲು ಎಂದುಕೊಳ್ಳುತ್ತ ಹೊರಗೆ ಬಂದು ಅವನಿಗೆ, “ನನಗೆ ಬೇಡ, ತೂಕ ಬೇರೆ ಕಡಿಮೆ ಇದೆ” ಎಂದೆ. ಅವನು, “ಇಲ್ಲ ಮೇಡಂ ತೂಕ ಸರಿಯಾಗಿಯೇ ಇದೆ. ನಾನು ತೂಕ ಮಾಡಿಯೇ ತಂದಿದ್ದು, ನಿಮ್ಮ ಸ್ಕೇಲ್ ಸರಿ ಇಲ್ಲವೇನೋ” ಎಂದಾಗ ನನಗೆ ರೇಗಿ ಹೋದರೂ ಅವನ ಜೊತೆ ವಾಗ್ವಾದ ಮಾಡಲು ಮನಸ್ಸಿಲ್ಲದೆ, ಏನೇ ಇರಲಿ ದುಪ್ಪಟ್ಟು ದುಡ್ಡು ಕೊಟ್ಟು ಮಾವಿನ ಹಣ್ಣು ಕೊಳ್ಳುವ ಗ್ರಹಚಾರ ನನಗೆ ಬಂದಿಲ್ಲ, ಬೇಡ ಎಂದೆ.
ಆಗಲೂ ಅವನು ಚೀಲ ತೆಗೆದುಕೊಳ್ಳಲಿಲ್ಲ. ನಾನು ಚೀಲವನ್ನು ಅಲ್ಲೇ ನೆಲದ ಮೇಲಿಟ್ಟು ಬಾಗಿಲು ಹಾಕಲು ಹೋದೆ. ತಟ್ಟನೆ ಅವನು, “ಮೇಡಂ ಪ್ಲೀಸ್, ಹಣ್ಣು ತೊಗೊಳ್ಳಿ, ನೀವು ಹಣ್ಣು ತೆಗೆದುಕೊಳ್ಳದಿದ್ದರೆ ನಾನು, ಹೆಂಡತಿ, ಮಕ್ಕಳು ಉಪವಾಸ ಬೀಳಬೇಕಾಗುತ್ತದೆ” ಎನ್ನುತ್ತಿದ್ದಂತೆ ಅವನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಬೇರೆಯವರಿಗೆಲ್ಲ ಹಣ್ಣು ಮಾರಿ ಬಂದಿದ್ದೇನೆ ಎಂದವ ಈಗ ಹೀಗೆ ಮಾತನಾಡುತ್ತಾನೆ ಛೆ, ಯಾಕೆ ಬೇಕಿತ್ತು ನನಗೆ ಇವನ ಸಹವಾಸ, ಮನೆಕೆಲಸ ಬೇರೆ ಬಾಕಿ ಇದೆ ಎಂದು ಕಿರಿಕಿರಿಯಾಗಿ ಅವನನ್ನೊಮ್ಮೆ ಸಾಗ ಹಾಕುವ ಉದ್ದೇಶದಿಂದ, ಮತ್ತೆ ಎಷ್ಟಕ್ಕೆ ಕೊಡ್ತೀಯಾ ಎಂದು ಕೇಳಿದೆ. ನೂರೈವತ್ತು ಕೊಡಿ ಮೇಡಂ, ತೂಕ ಕಡಿಮೆ ಇದೆ ಅಂದ್ರಲ್ಲ ನಾಳೆ ಇಷ್ಟೇ ದೊಡ್ಡ ಎರಡು ಹಣ್ಣುಗಳನ್ನು ತಂದು ಕೊಡುತ್ತೇನೆ ನಿಮಗೆ ಎಂದು ಅಂಗಲಾಚಿದ.
ನನ್ನ ಮನಸ್ಸು ಕರಗಿ, ಹೋಗಲಿ ಯಾವ್ಯಾವುದಕ್ಕೋ ಖರ್ಚು ಮಾಡ್ತೀವಿ, ಹಾಗೆ ಹೋಯಿತು ಎಂದುಕೊಂಡರಾಯಿತು. ಅಲ್ಲದೆ ನಾಳೆ ಹಣ್ಣು ತಂದುಕೊಡುತ್ತಾನೆ ಎಂದನಲ್ಲ, ಮತ್ಯಾಕೆ ಚಿಂತೆ ಎಂದುಕೊಳ್ಳುತ್ತ ಒಳಗೆ ಹೋಗಿ ಪರ್ಸ್ ನಿಂದ ನೂರೈವತ್ತು ರೂಪಾಯಿ ತಂದುಕೊಟ್ಟು ಮಾವಿನ ಹಣ್ಣುಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಕೈಗೆತ್ತಿಕೊಂಡೆ. ಅವನು ನಾನು ಕೊಟ್ಟ ದುಡ್ಡನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಸಂತಸದಿಂದ, ನಾಳೆ ಬರ್ತೀನಿ ಮೇಡಂ ಎಂದು ಹೇಳಿ ಹೊರಟು ಹೋದ.
ನಾನು ಒಳಗೆ ಬಂದು ನನ್ನ ಕೆಲಸದಲ್ಲಿ ಮುಳುಗಿದೆ. ಮಧ್ಯಾಹ್ನ ಗಂಡ ಮಕ್ಕಳು ಊಟಕ್ಕೆ ಮನೆಗೆ ಬಂದಾಗ ಮಾವಿನ ಹಣ್ಣಿನ ನೆನಪಾಗಿ ಹಣ್ಣುಗಳನ್ನು ತೊಳೆದು ಹೋಳುಗಳನ್ನಾಗಿ ಮಾಡಿ ಒಂದು ತಟ್ಟೆಯಲ್ಲಿಟ್ಟು ಟೇಬಲ್ ಮೇಲಿಟ್ಟೆ. ಮಕ್ಕಳು, ವಾವ್! ಮಾವಿನ ಹಣ್ಣು ಎನ್ನುತ್ತಾ ಒಂದೊಂದು ಹೋಳುಗಳನ್ನು ಕೈಗೆತ್ತಿಕೊಂಡರು. ಇವರು ಊಟ ಮಾಡುವುದರಲ್ಲೇ ಮಗ್ನರಾಗಿದ್ದರು. ಮಕ್ಕಳು, “ಮಮ್ಮಿ ಹಣ್ಣು ಭಾರಿ ರುಚಿಯಾಗಿದೆ” ಎಂದಾಗ ನನಗೆ ನೂರೈವತ್ತು ಕೊಟ್ಟೆನಲ್ಲ ಎಂದು ಇದ್ದ ಅಸಮಾಧಾನ ಹೊರಟು ಹೋಯಿತು. ಜೊತೆಗೆ ಸಂತಸವಾಗಿ ನಾನೂ ಒಂದು ಹೋಳನ್ನು ಕೈಗೆತ್ತಿಕೊಂಡೆ, ಇವರಿಗೂ ಕೊಟ್ಟೆ. ಅವನು ಹೇಳಿದಂತೆ ಹಣ್ಣು ಮಾತ್ರ ಬಹಳ ರುಚಿಯಾಗಿತ್ತು. ಇವರೂ ತಿಂದು, ಹಣ್ಣು ಅದ್ಭುತವಾಗಿದೆ ಎಲ್ಲಿ ತೊಗೊಂಡೆ ಎಂದಾಗ ನಾನು ಹಣ್ಣು ಮಾರಲು ಬಂದಿದ್ದ ವಿಷಯ ಹೇಳಿದೆ.
ನೂರೈವತ್ತು ರೂಪಾಯಿ ಕೊಟ್ಟೆ ಎಂದಾಗ ಇವರು ಹುಬ್ಬೇರಿಸಿದರು. “ಇದೇನೂ ಸೀಸನ್ ನ ಮೊದಲ ಹಣ್ಣಲ್ಲ, ಅಷ್ಟೊಂದು ದುಬಾರಿ ರೇಟು ಕೊಟ್ಟು ಕೊಂಡುಕೊಳ್ಳೋಕೆ. ಯಾಕೆ ತೊಗೊಂಡೆ ನೀನು” ಎಂದು ಇವರು ಆಕ್ಷೇಪಿಸಿದಾಗ ನಾಳೆ ಎರಡು ಹಣ್ಣು ಫ್ರೀಯಾಗಿ ತಂದುಕೊಡುತ್ತೇನೆ ಎಂದು ಹೇಳಿದ್ದಾನೆ ಎಂದಾಗ, “ಹೌದು ಹೌದು, ಕಾಯ್ತಾ ಇರು, ಆದ್ರೆ ಅವನು ಮಾತ್ರ ಬರಲ್ಲ, ನಿಮ್ಮಂಥ ಮುಗ್ಧ ಹೆಂಗಸರಿಗೆ ಮೋಸ ಮಾಡೋದು ಅದೆಷ್ಟು ಸುಲಭ, ಸ್ವಲ್ಪ ಕಣ್ಣೀರು ಹಾಕಿದ್ರೆ ಇದ್ದುದೆಲ್ಲ ಕೊಟ್ಟು ಬಿಡ್ತೀರಿ” ಎಂದು ಇವರು ರೇಗಿದಾಗ ನನಗೆ, ನಾನು ನಿಜವಾಗಿಯೂ ಮೋಸ ಹೋದೆನೇ, ಛೆ ಆ ಮನುಷ್ಯ ನೋಡಿದರೆ ಒಳ್ಳೆಯವನ ಹಾಗೆ ಕಾಣುತ್ತಾನೆ ಎಂದುಕೊಳ್ಳುತ್ತಿದ್ದಂತೆ ಮರುಕ್ಷಣ ನನ್ನ ಒಳಮನಸ್ಸು ಅವನು ದುಪ್ಪಟ್ಟು ದರ ಹೇಳಿಲ್ಲವೇ ಅದರ ಜೊತೆ ತೂಕದಲ್ಲೂ ಮೋಸ ಮಾಡಿದ್ದಾನೆ ಅಂದ ಮೇಲೆ ಅವನು ಒಳ್ಳೆಯವನಿರಲು ಹೇಗೆ ಸಾಧ್ಯ. ಹಾಗಿದ್ದರೆ ಮೊಸಳೆ ಕಣ್ಣೀರು ಹಾಕಿಕೊಂಡು ಮಹಿಳೆಯರಿಗೆಲ್ಲ ಮೋಸ ಮಾಡಿ ಹೋಗುವ ಮೋಸಗಾರನೇ, ಆದರೆ ಅವನು ನಾಳೆ ಬರುತ್ತೇನೆ ಎಂದಿದ್ದಾನಲ್ಲವೇ ನೋಡೋಣ ಎಂದುಕೊಳ್ಳುತ್ತ, ಯಾವುದಕ್ಕೂ ನಾಳೆ ನೋಡೋಣ ಎಂದೆ. ಇವರು ಸುಮ್ಮನಾದರು.
ಮಾರನೆಯ ದಿನ ಹಣ್ಣು ಮಾರುವವನಿಗಾಗಿ ಕಾಯುತ್ತ ಕುಳಿತೆ. ಸಂಜೆಯಾದರೂ ಆತನ ಪತ್ತೆಯಿಲ್ಲ. ನನಗೆ ತೀವ್ರ ನಿರಾಸೆಯಾಯಿತು. ಇವರು ಹೇಳಿದ್ದು ನಿಜವಾಯಿತಲ್ಲ ಛೆ, ನನ್ನನ್ನು ಮಾತಿನಿಂದ ಮರುಳು ಮಾಡಿ ಮೋಸ ಮಾಡಿಬಿಟ್ಟನಲ್ಲ, ಇನ್ನು ಬಂದರೆ ಅವನು ಎಷ್ಟೇ ಬೇಡಿಕೊಂಡರೂ ಅವನ ಬಳಿ ಹಣ್ಣುಗಳನ್ನು ಕೊಳ್ಳುವುದಿಲ್ಲ ಎಂದು ಸಿಟ್ಟಿನಲ್ಲೇ ಶಪಥ ಮಾಡಿದೆ. ಇವರು ಮನೆಗೆ ಬಂದಮೇಲೆ, ಹಣ್ಣು ತಂದುಕೊಟ್ಟನೇ ಎಂದು ಕೇಳ ಹೊರಟವರು ನನ್ನ ಸಪ್ಪೆ ಮುಖ ಕಂಡು ಸುಮ್ಮನಾದರು. ಇವತ್ತಲ್ಲ ನಾಳೆ ಬಂದಾನು ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದರೆ ಅವನು ಬರಲೇ ಇಲ್ಲ.
ಆಗ ನನಗೆ ಅವನು ಮೋಸ ಮಾಡಿದ್ದರ ಬಗ್ಗೆ ಕಿಂಚಿತ್ತೂ ಸಂಶಯ ಉಳಿಯಲಿಲ್ಲ. ನನಗೆ ಬಹಳ ಬೇಸರವಾಯಿತು, ಇಂಥಾ ಮೋಸಗಾರರು ಇರುವುದರಿಂದಲೇ ಜನರಿಗೆ ಬೇರೆಯವರನ್ನು ನಂಬುವುದು ಕಷ್ಟವಾಗುವುದು, ತಾವೆಲ್ಲಿ ಮೋಸ ಹೋಗುತ್ತೇವೋ ಎಂಬ ಅನುಮಾನದಿಂದ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಜನ ಸಹಾಯ ಮಾಡಲು ಹಿಂದೇಟು ಹಾಕುವುದು. ಇನ್ನು ಯಾರೇ ಕಣ್ಣೀರು ಹಾಕಿದರೂ ನಾನು ಸಹಾಯ ಮಾಡಲು ಹೋಗುವುದಿಲ್ಲ ಎಂದು ನಾನು ಶಪಥ ಮಾಡಿಕೊಂಡೆ. ನಾನು ಮೋಸ ಹೋಗಿದ್ದು ನನಗೆ ತೀವ್ರ ಮುಜುಗರ ತಂದಿತ್ತು.
ವಾರದ ಬಳಿಕ ಹಣ್ಣಿನವ ನಮ್ಮ ಮನೆಯ ಎದುರು ಮನೆಗೆ ಬಂದು ಬೆಲ್ ಮಾಡಿದ. ಅದನ್ನು ಕಿಟಕಿಯಿಂದ ನೋಡಿದ ನನಗೆ ಅವನು ನಮ್ಮ ಮನೆಗೆ ಬಂದು ಹಣ್ಣು ಕೊಡಬಹುದು. ಇಷ್ಟು ದಿನ ಬರದೇ ಇರಲು ಏನಾದರೂ ಬಲವಾದ ಕಾರಣವಿರಬಹುದು. ಅವನಿಗೆ ಹುಷಾರಿರಲಿಲ್ಲವೇನೋ ಎಂದುಕೊಳ್ಳುತ್ತಿದ್ದಂತೆ ಮತ್ತೆ ಆಸೆ ಚಿಗುರಿತು. ನಾನು ನನ್ನ ಕೆಲಸದಲ್ಲಿ ಮಗ್ನಳಾಗಿ ಬಿಟ್ಟೆ. ಸುಮಾರು ಹೊತ್ತಾದ ಮೇಲೆ ಅವನ ನೆನಪಾಗಿ ಕಿಟಕಿಯಿಂದ ಹೊರ ನೋಡಿದೆ. ಅಲ್ಲಿ ಅವನಿರಲಿಲ್ಲ. ಓಹ್! ಅವನು ನಿಜವಾಗಿಯೂ ಮೋಸಗಾರನೇ ಎಂದುಕೊಳ್ಳುತ್ತಿದ್ದಂತೆ ನಿರುತ್ಸಾಹ ಮೂಡಿತು. ನಮಗೆ ಹಣ್ಣು ಕೊಡಲಿಕ್ಕಿದೆ ಎಂದು ಅವನಿಗೆ ಚೆನ್ನಾಗಿ ನೆನಪಿತ್ತು. ಅದಕ್ಕೇ ನಮ್ಮ ಮನೆಗೆ ಬರಲಿಲ್ಲ. ಇನ್ನು ಬರಲಿ, ಬಾಗಿಲೇ ತೆರೆಯುವುದಿಲ್ಲ ಎಂದು ನಿರ್ಧಾರ ಮಾಡಿಕೊಂಡೆ. ಆದರೆ ಆಮೇಲೆ ಅವನ ಪತ್ತೆಯೇ ಇಲ್ಲ.
ಸುಮಾರು ಒಂದು ತಿಂಗಳಾದ ಮೇಲೆ ಒಂದು ದಿನ ನಮ್ಮ ಮನೆಯ ಡೋರ್ ಬೆಲ್ ಬಾರಿಸಿತು. ಯಾರೆಂದು ಬಾಗಿಲ ತೂತಿನಿಂದ ನೋಡಿದಾಗ ನನಗೆ ಅಚ್ಚರಿಯಾಯಿತು. ಅಲ್ಲಿ ಹಣ್ಣಿನವ ನಿಂತಿದ್ದ! ನಾನು ನಮಗೆ ಕೊಡಬೇಕಾದ ಹಣ್ಣುಗಳ ಬಗ್ಗೆ ಕೇಳಲೇ ಅಥವಾ ಅವನೇ ಹಣ್ಣು ಕೊಡಲು ಬಂದಿರಬಹುದೇ ಎಂದು ತುಡಿತವುಂಟಾಗಿ ಬಾಗಿಲು ತೆರೆದೆ. ನನ್ನನ್ನು ಹೊಸದಾಗಿ ನೋಡುವವನಂತೆ ನೋಡುತ್ತಾ ಕನ್ನಡ ಎಂದು ಪ್ರಶ್ನಾರ್ಥಕವಾಗಿ ನೋಡಿದಾಗ ನನಗೆ ಅವನ ಮೇಲೆ ಜಿಗುಪ್ಸೆ ಉಂಟಾಯಿತು. ಛೆ, ಎಷ್ಟು ನಾಟಕ ಮಾಡ್ತಿದ್ದಾನೆ. ಇನ್ನು ನಾನು ಹಣ್ಣುಗಳ ಬಗ್ಗೆ ಕೇಳಿದರೆ ಏನೂ ಗೊತ್ತಿಲ್ಲದವನಂತೆ ನಟಿಸಬಹುದು, ಇವನ ಬಳಿ ತನಗೇನು ಕೆಲಸ ಎಂದುಕೊಳ್ಳುತ್ತ ನಾನು ಅಲ್ಲವೆನ್ನುವಂತೆ ತಲೆಯಾಡಿಸಿ ಬಾಗಿಲು ಹಾಕಿಬಿಟ್ಟೆ.
ಅವನು ಹೊರಗೆ ನಿಂತು ಹಿಂದಿಯಲ್ಲಿ, ಅರೆಬರೆ ಇಂಗ್ಲಿಷ್ನಲ್ಲಿ, ತಾನು ತಂದ ಹಣ್ಣುಗಳ ವರ್ಣನೆ ಮಾಡುತ್ತಲೇ ಇದ್ದ. ನಾನು ಮಾತ್ರ ಮುಚ್ಚಿದ ಬಾಗಿಲನ್ನು ಮತ್ತೆ ತೆರೆಯಲೇ ಇಲ್ಲ. ಸ್ವಲ್ಪ ಹೊತ್ತು ಅಲ್ಲೆ ನಿಂತಿದ್ದವ ನಂತರ ಹೊರಟು ಹೋದ. ಮಾರನೆಯ ದಿನ ಮತ್ತೆ ಬಂದ. ಆದರೆ ನನಗೆ, ಬಂದ್ದಿದ್ದು ಅವನು ಎಂದು ತಿಳಿದು ಬಾಗಿಲು ತೆರೆಯಲಿಲ್ಲ. ಎಂಥಾ ಮೋಸಗಾರರಿದ್ದಾರೆ ಈ ಜಗತ್ತಿನಲ್ಲಿ, ಇನ್ಯಾರನ್ನೂ ನಂಬಬಾರದು ಎಂದು ನಾನು ದೃಢವಾಗಿ ನಿಶ್ಚಯಿಸಿದೆ.
ವಾರದ ನಂತರ ಮತ್ತೆ ಬಂದು ಬೆಲ್ ಮಾಡಿದ. ಆದರೂ ನಾನು ಬಾಗಿಲು ತೆರೆಯಲಿಲ್ಲ. ಆದರೂ ಅವನು ಎದುರು ಮನೆಗೆ ಬಂದಾಗಲೆಲ್ಲ ನಮ್ಮ ಮನೆಯ ಬೆಲ್ ಬಾರಿಸುವುದು ಮಾತ್ರ ಬಿಡಲಿಲ್ಲ. ಒಂದು ದಿನ ನಾನು ಎದುರು ಮನೆಯವರ ಬಳಿ ಆತನ ವಿಷಯ ಹೇಳಿದೆ. ಅವರು, “ಅದೊಂದು ಕಿರಿಕ್ ಪಾರ್ಟಿ, ಮೇಲಿಂದ ಮೇಲೆ ಬೆಲ್ ಬಾರಿಸ್ತಾನೆ ಅಂತ ಬಾಗ್ಲು ತೆರಿಯೋದು. ಬಾಗಿಲು ತೆರೆದ್ರೆ ತೊಗೊಳ್ಳೊವರೆಗೂ ಬಿಡೋದೇ ಇಲ್ಲ. ನಮಗೂ ಮೋಸ ಮಾಡಿದ್ದಾನೆ ಅದಕ್ಕೇ ತೊಗೊಳ್ಳಲ್ಲ, ಆದ್ರೂ ಬರ್ತಾನೆ ಇರ್ತಾನೆ. ಬರಬೇಡಾ ಅಂತ ಎಷ್ಟೇ ಹೇಳಿದರೂ ಕೇಳಲ್ಲ. ಒಂದು ದಿನ ಬೇಜಾರಾಗಿ ಅವನೇ ಬರೋದನ್ನ ನಿಲ್ಲಿಸಿ ಬಿಡ್ತಾನೆ” ಎಂದರು. ಆಗ ನನಗೆ, ಮೋಸ ಹೋಗಿದ್ದು ನಾನೊಬ್ಬಳೇ ಅಲ್ಲ ಅಂತ ತಿಳಿದು ಸಮಾಧಾನವಾಯಿತು.
ಆ ಘಟನೆ ನಡೆದು ಒಂದು ವರುಷವಾದರೂ ಅವನು ನಮ್ಮ ಮನೆಗೆ ಬರುವುದನ್ನು ಮಾತ್ರ ಬಿಟ್ಟಿಲ್ಲ. ನಾನು ಬಾಗಿಲು ತೆರೆದರೆ ನನಗೆ ಮತ್ತೊಮ್ಮೆ ಮೋಸ ಮಾಡೋಣ ಎನ್ನುವ ಆಸೆಯಿಂದಲೋ ಅಥವಾ ನಾವಿದ್ದ ಮನೆಗೆ ಬೇರೆಯವರು ಬಂದಿದ್ದರೆ ಅವರಿಗೆ ಮೋಸ ಮಾಡೋಣವೆಂಬ ಉದ್ದೇಶದಿಂದಲೋ ಅಂತೂ ಬೆಲ್ ಬಾರಿಸುವುದನ್ನು ಮಾತ್ರ ಇನ್ನೂ ಬಿಟ್ಟಿಲ್ಲ.
ಆಗೋ, ಡೋರ್ ಬೆಲ್ ಬಾರಿಸಿತು. ಅವನೇ ಬಂದನೇನೋ !?