ಆ ರಿಕ್ಷಾದವ !

ಗೆಳತಿಯ ಮದುವೆಗಾಗಿ ಬೆಂಗಳೂರಿನಿಂದ ನನ್ನ ಪುಟ್ಟ ಮಗಳೊಂದಿಗೆ ಊರಿಗೆ ಬಂದಿದ್ದೆ. ಅಮ್ಮನ ಮನೆಯಿಂದ ಚೆನ್ನಾಗಿ ಸಿಂಗರಿಸಿಕೊಂಡು ಹೊರಟು ಬರುತ್ತಿರುವಾಗ ಒಂದು ರಿಕ್ಷಾ ಬರುತ್ತಿರುವುದನ್ನು ಕಂಡು ರಿಕ್ಷಾ ಎಂದು ಕೂಗುತ್ತ ಕೈ ಬೀಸಿದೆ. ನನ್ನ ಮಗಳೂ ತನ್ನ ತೊದಲು ಮಾತಿನಲ್ಲಿ ಮುದ್ದಾಗಿ ಲಿಕ್ಸಾ ಎಂದು ಕಿರುಚತೊಡಗಿದಳು. ರಿಕ್ಷಾದವ ನಮ್ಮತ್ತ ಒಮ್ಮೆ ನೋಡಿ ಖಾಲಿಯಿದ್ದರೂ ಮುಂದೆ ಹೋದ. ಛೆ, ಈಗಾಗೆ ಲೇಟಾಗಿದೆ ಇನ್ನು ರಿಕ್ಷಾ ಸಿಗುತ್ತೋ ಇಲ್ವೋ, ನಿಮ್ಮಿ ನಾನು ಇನ್ನೂ ಬಂದಿಲ್ಲವೆಂದು ಎಷ್ಟು ಸಿಟ್ಟು ಮಾಡಿಕೊಂಡಿರುತ್ತಾಳೋ ಎಂದುಕೊಂಡು ಪೇಚಾಡುತ್ತ ವಾಚು ನೋಡಿಕೊಂಡೆ. ಅಷ್ಟರಲ್ಲಿ ಮುಂದೆ ಹೋದ ರಿಕ್ಷಾ ಮತ್ತೆ ಹಿಂದೆ ಬಂದು ನಮ್ಮ ಬಳಿ ಬಂದು ನಿಂತಿತು. ರಿಚಾ, ಮಮ್ಮಿ, ಲಿಕ್ಸಾ ಲಿಕ್ಸಾ ಎಂದು ಸಂತಸದಿಂದ ಕುಣಿಯುತ್ತ ರಿಕ್ಷಾ ಹೊಕ್ಕಳು. ರಿಕ್ಷಾದವ ನನ್ನತ ನೋಡಿ ನಸುನಕ್ಕ. ನಾನು ಮಂದಹಾಸ ಬೀರಿ ಉಸ್ಸಪ್ಪ ಎನ್ನುತ್ತಾ ರಿಕ್ಷಾ ಏರಿ ಕುಳಿತುಕೊಂಡು ಮದುವೆ ಹಾಲ್ ನ ಅಡ್ರೆಸ್ ಹೇಳಿದೆ. ರಿಕ್ಷಾದವ ನನ್ನತ್ತ ತಿರುಗಿ ನೋಡಿ ನಾನೂ ಅಲ್ಲಿಗೇ ಹೋಗುತ್ತಿದ್ದೇನೆ ಎಂದಾಗ ನನ್ನ ಗೆಳತಿಯ ಮದ್ವೆಗೆ ಇವನು ಯಾಕಪ್ಪ ಬರುತ್ತಿದ್ದಾನೆ. ಬಹುಶ ಪುಕ್ಕಟೆ ಊಟ ಸಿಗುತ್ತದೆಂದು ಬರುತ್ತಿರಬಹುದು ಅಂದುಕೊಳ್ಳುತ್ತ ಹೂಂಗುಟ್ಟಿದೆ.

ರಿಕ್ಷಾ ಮುಂದಕ್ಕೆ ಹೋಗುತ್ತಿದ್ದಂತೆ ಒಮ್ಮೆ ನನ್ನ ಅಲಂಕಾರವೆಲ್ಲ ಸರಿಯಾಗಿದೆಯೇ ಎಂದು ನೋಡಲು ಪರ್ಸ್ ನಿಂದ ಪುಟ್ಟ ಕನ್ನಡಿ ತೆಗೆದು ನೋಡಿಕೊಂಡು ಎಲ್ಲವೂ ಸರಿಯಾಗಿದೆ ಅನಿಸಿ ತ್ರಪ್ತಿ ಪಟ್ಟುಕೊಂಡೆ. ರಿಕ್ಷಾದವ ನನ್ನನ್ನೇ ಗಮನಿಸುತ್ತಿದ್ದುದನ್ನು ಕಂಡು ಮುಜುಗರವಾಗಿ ಕನ್ನಡಿ ತೆಗೆದಿಟ್ಟು ರಿಚಾಳತ್ತ ಗಮನ ಹರಿಸಿದೆ. ಅವಳು ಹೊರಗೆ ನೋಡುತ್ತಾ ದಾರಿಹೋಕರಿಗೆಲ್ಲ ಟಾಟಾ ಮಾಡುತ್ತಾ ಉತ್ಸಾಹದಿಂದ ಇದ್ದುದು ಕಂಡು ಅವಳನ್ನು ಕೈ ಹೊರಗೆ ಹಾಕಬೇಡವೆಂದು ಎಚ್ಚರಿಸುತ್ತ ಅವಳ ತಲೆಕೂದಲನ್ನೆಲ್ಲ ಕೈನಿಂದಲೇ ಬಾಚಿ ಸರಿ ಮಾಡುತ್ತಾ ಕುಳಿತೆ. ರಿಕ್ಷಾದ ಕನ್ನಡಿಯಲ್ಲಿ ನೋಡಿದಾಗ ಅವನು ಮತ್ತೆ ನನ್ನತ್ತ ನೋಡುತ್ತಾ ಇದ್ದುದು ಕಂಡು ನನಗೆ ರೇಗಿ ಹೋಯಿತು. ಥೂ ದರಿದ್ರದವ, ಹೆಂಗಸರನ್ನು ಕಂಡೇ ಇಲ್ಲವೇನೋ ಅನ್ನೋ ಹಾಗೆ ನೋಡುತಿದ್ದಾನೆ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತ ಮುಖ ಸಿಂಡರಿಸಿದೆ. ಅದನ್ನು ಗಮನಿಸಿ ಆತ ತಕ್ಷಣ ತನ್ನ ಗಮನವನ್ನು ರಸೆಯತ್ತ ಹರಿಸಿದ. ರಿಚಾ, ಮಮ್ಮಿ ಅದು ನೋಡು ಇದು ನೋಡು ಎನ್ನುತ್ತಾ ಚಪ್ಪಾಳೆ ತಟ್ಟುತ್ತ ಖುಷಿಯಿಂದ ಕೇಕೆ ಹಾಕುತ್ತಿದ್ದಳು.

ಅಷ್ಟರಲ್ಲಿ, ನಿಮ್ಮ ಮಗಳಾ ಎಂದು ರಿಕ್ಷಾದವ ಕೇಳಿದ ಇವನಿಗ್ಯಾಕೆ ಅಧಿಕಪ್ರಸಂಗ ಸುಮ್ಮನೆ ಗಾಡಿ ಓಡಿಸ ಬಾರದೇ ಎಂದು ಮನಸ್ಸಲ್ಲೇ ರೇಗುತ್ತ ಹೂಂ ಗುಟ್ಟಿದೆ. ನನ್ನ ಉತ್ತರದಿಂದ ಉತ್ತೇಜಿತನಾಗಿ, ನೀವು ಎಲ್ಲಿರುವುದು ಈಗ ಎಂದು ಕೇಳಿದ. ನನಗಂತೂ ತೀರಾ ರೇಗಿ ಹೋಯಿತು. ನನ್ನ ಬಗ್ಗೆ ಇವನ್ಯಾಕೆ ಕೇಳುತ್ತಿದ್ದಾನೆ, ನಾನ್ಯಾಕೆ ನನ್ನ ಬಗ್ಗೆ ಇವನಿಗೆ ಹೇಳಬೇಕು ಜಾಸ್ತಿ ಸಲಿಗೆ ಕೊಟ್ಟರೆ ಮತ್ತೇನಾದರೂ ಕೇಳಿಯಾನು ಎಂದುಕೊಂಡು ಅವನಿಗೆ ಉತ್ತರಿಸುವ ಗೋಜಿಗೆ ಹೋಗದೆ ಹೊರಗೆ ನೋಡುತ್ತಾ ಕುಳಿತೆ. ರಿಕ್ಷಾ ಮುಖ್ಯ ರಸ್ತೆ ಬಿಟ್ಟು ಅಡ್ಡ ರಸ್ತೆಗೆ ತಿರುಗಿದಾಗ ನಾನು ಗಾಬರಿಗೊಂಡೆ. ಇವನ್ಯಾಕೆ ಅಡ್ಡ ರಸ್ತೆಯಲ್ಲಿ ಹೋಗುತ್ತಿದ್ದಾನೆ ಇವನ ಉದ್ದೇಶವೇನು, ನನ್ನ ಮೈ ಮೇಲಿದ್ದ ಚಿನ್ನದ ಒಡವೆಗಳೇ ಅಥವಾ ನನಗೇನಾದರೂ ಮಾಡಲೆಂದೇ ರಿಕ್ಷಾ ಅತ್ತ ತಿರುಗಿಸಿದನೆ ಎಂದುಕೊಂಡು ಭಯವಾಗಿ ರಿಚಾಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದಂತೆ ಧೈರ್ಯ ಉಕ್ಕಿ ಬಂದು ಅಡ್ಡ ರಸ್ತೆಯಲ್ಯಾಕೆ ಹೋಗುತ್ತಿದ್ದೀರಿ ಮದುವೆ ಹಾಲ್ ನ ದಾರಿ ಇಲ್ಲಿಂದ ನೇರವಾಗಿ ಅಲ್ಲವೇ ಎಂದು ಗಟ್ಟಿಯಾಗಿ ಕೇಳಿದೆ. ನನ್ನ ಸ್ವರಕ್ಕೆ ಬೆಚ್ಚಿ ಅವನು ಒಮ್ಮೆ ಹಿಂದಕ್ಕೆ ತಿರುಗಿ ನೋಡಿ, ಮುಖ್ಯ ರಸ್ತೆಯಿಂದ ಹೋಗಬಹುದು ಆದರೆ ಅಲ್ಲಿ ತುಂಬಾ ಟ್ರಾಫಿಕ್ ಇರುತ್ತದೆ, ಈ ರಸ್ತೆ ಹಾಲ್ ಗೆ ಹತ್ತಿರ ಕೂಡ ಆಗುತ್ತದೆ ಗಾಬರಿಯಾಗಬೇಡಿ, ನಿಮ್ಮನ್ನು ಸುರಕ್ಷಿತವಾಗಿ ಸಮಯಕ್ಕೆ ಸರಿಯಾಗಿ ಮದುವೆ ಹಾಲ್ ಗೆ ಕರೆದುಕೊಂಡು ಹೋಗುತ್ತೇನೆ ಯೋಚನೆ ಮಾಡಬೇಡಿ ಅನ್ನುತ್ತ ನಸುನಗು ನಕ್ಕ. ಆದರೂ ನನ್ನ ಮನದ ಮೂಲೆಯಲ್ಲಿ ಇನ್ನೂ ಅಳುಕು ಇದ್ದಿತು. ರಿಚಾ ಮಾತ್ರ ಯಾವ ಯೋಚನೆಯೂ ಇಲ್ಲದೆ ಮರಗಿಡಗಳನ್ನು ನೋಡುತ್ತಾ ಕುಳಿತಲ್ಲೇ ತೂಕಡಿಸ ತೊಡಗಿದಳು.

ರಿಕ್ಷಾದವ ಸಂದಿಗೊಂದಿನಲ್ಲಿ ರಿಕ್ಷಾವನ್ನು ನುಗ್ಗಿಸುತ್ತ ಕೊನೆಗೂ ಮುಖ್ಯ ರಸ್ತೆಗೆ ಬಂದಾಗ ನನಗೆ ಹೋದ ಜೀವ ಮರಳಿ ಬಂದಂತಾಯಿತು. ಮದುವೆ ಹಾಲ್ ಕೂಡ ಅಲ್ಲೇ ಎದುರಿಗೆ ಇದ್ದುದು ನೋಡಿ ಗಡಬಡಿಸುತ್ತ ರಿಚಾಳನ್ನು ಎತ್ತಿಕೊಂಡು ರಿಕ್ಷಾ ನಿಲ್ಲುತ್ತಿದ್ದಂತೆ ಕೆಳಕ್ಕಿಳಿದೆ. ರಿಕ್ಷಾದವನಿಗೆ ದುಡ್ಡು ಕೊಡಲು ಪರ್ಸ್ ಗೆ ಕೈ ಹಾಕುತ್ತಿದ್ದಂತೆ ಅವನು ಬೇಡ ಎನ್ನುತ್ತಾ ಕೈ ಸನ್ನೆ ಮಾಡಿದ. ಇವನು ದುಡ್ಡು ಯಾಕೆ ಬೇಡವೆನ್ನುತ್ತಿದ್ದಾನೆ ಎಂದು ಅರ್ಥವಾಗದೆ ಅವನನ್ನೇ ಮಿಕಿ ಮಿಕಿ ನೋಡಿದಾಗ ಅವನು, ಬಹುಶಃ ನಿಮಗೆ ನನ್ನ ಪರಿಚಯ ಆಗಿಲ್ಲ ಅಂತ ಕಾಣುತ್ತೆ. ನಾನು ಶಾಂತರಾಮ, ನೀವು ನನ್ನ ಕ್ಲಾಸ್ ಮೇಟ್ ಆಗಿದ್ರಿ ಹೈಸ್ಕೂಲಿನಲ್ಲಿ,ಎಂದಾಗ ನಾನು ಅಚ್ಚರಿಯಿಂದ ಅವನನ್ನೇ ದಿಟ್ಟಿಸಿ ನೋಡುತ್ತಾ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿ ಸೋತೆ ಆದರೂ ಅವನಿಗೆ ನನಗಿನ್ನೂ ನೆನಪಾಗಲಿಲ್ಲವೆಂದು ಹೇಳಲು ಮುಜುಗರವಾಗಿ ತಕ್ಷಣ ನೆನಪಾದಂತೆ ಹೋ ನೀವಾ ಎಂದು ಉದ್ಗರಿಸಿದೆ. ಅವನು ನಗುತ್ತ, ರಿಕ್ಷಾ ಪಾರ್ಕ್ ಮಾಡಿ ಬರುತ್ತೇನೆ ನೀವು ಮುಂದೆ ಹೋಗಿ ಎಂದಾಗ ನಾನು ತಲೆಯಾಡಿಸಿ ರಿಚಾಳನ್ನು ಎಬ್ಬಿಸಿ ಅವಳನ್ನು ಕೆಳಗಿಳಿಸಿ ಮುಂದಕ್ಕೆ ಹೆಜ್ಜೆ ಹಾಕುತ್ತ ನನ್ನ ಕ್ಲಾಸಿನ ಶಾಂತರಾಮ ಯಾರು ಎಂದು ನೆನಪು ಮಾಡಿಕೊಳ್ಳಲು ನೋಡಿದೆ. ಮರುಕ್ಷಣವೇ ನನಗೆ ಸಣಕಲು ಕುಳ್ಳಗಿನ ಶಾಂತರಾಮ ನೆನಪಾಗಿ ಇವನೇ ಅವನೇ, ಅದೆಷ್ಟು ಬದಲಾಗಿದ್ದಾನೆ ಈಗ ಅದೆಷ್ಟು ದಪ್ಪವಾಗಿದ್ದಾನೆ ಎಂದರೆ ಆನೆ ಮರಿಯಂತೆ ಕಾಣುತ್ತಾನೆ. ಆದರೆ ಈಗಲೂ ಕುಳ್ಳನೆ ಎಂದು ಅರಿವಾದಾಗ ನನ್ನ ಮುಖದಲ್ಲಿ ಮುಗುಳ್ನಗೆ ಮೂಡಿತು. ಛೆ! ನಾನು ಅವನ ಬಗ್ಗೆ ಏನೇನೋ ಅಂದುಕೊಂಡೆ. ಅವನು ತಾನು ಶಾಂತರಾಮ ಎಂದು ಮೊದಲೇ ಯಾಕೆ ಹೇಳಲಿಲ್ಲ ಎಂದುಕೊಂಡು ಪೇಚಾಡುತ್ತ ಮದುವೆ ಹಾಲ್ ನ ಒಳಗೆ ಕಾಲಿರಿಸಿದೆ.

ಪ್ರೀತಿಯೆಂಬ ನೀರಗುಳ್ಳೆ

ಮೈಲ್ ಪರಿಶೀಲಿಸುತ್ತಿದ್ದಾಗ ಒಂದು ಮದುವೆಯ ಆಮಂತ್ರಣ ಪತ್ರಿಕೆ ನೋಡಿ ಕುತೂಹಲದಿಂದ ಅದನ್ನು ತೆರೆದು ಕಣ್ಣಾಡಿಸಿದೆ. ಮೋನಿಕಾ ವೆಡ್ಸ್ ವಿಶಾಲ್ ಎಂದಿತ್ತು. ಒಂದು ಕ್ಷಣ ಈ ವಿಶಾಲ್ ಯಾರು, ಮೋನಿಕಾ ಯಾರು ಎಂದು ಗೊಂದಲವಾಯಿತು. ವಿಶಾಲ್ ಅಂತ ನನಗೆ ದೂರ ದೂರಕ್ಕೂ ಪರಿಚಯವಿಲ್ಲ, ಆದರೆ ಮೋನಿಕಾ ಎನ್ನುತ್ತಿದ್ದಂತೆ ಏನೋ ಮಸುಕಾದ ನೆನಪು. ಹಾಗೆ ಯೋಚಿಸುತ್ತಿದ್ದಂತೆ ನನಗೆ ಚಿಕ್ಕಂದಿನ ನೆನಪಾಯಿತು. ನಮ್ಮ ಬಿಲ್ಡಿಂಗ್ ನಲ್ಲಿ ಹೊಸದಾದ ಹಿಂದಿ ಮಾತನಾಡುವ ಸಂಸಾರ ಬಂದಿತ್ತು. ಅವರ ಮಗಳೇ ಮೋನಿಕಾ. ಅವಳು ನನ್ನ ಶಾಲೆಗೇ ಸೇರಿದ್ದರಿಂದ ನಾನೂ ಅವಳೂ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೆವು. ಕ್ರಮೇಣ ನಮ್ಮ ಸ್ನೇಹ ಗಾಢವಾಗತೊಡಗಿತು. ನಾನು ಎಂಟನೇ ಕ್ಲಾಸಿನಲ್ಲಿದ್ದರೆ ಅವಳು ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಳು. ನಾವಿಬ್ಬರೂ ಅದೆಷ್ಟು ಮಾತನಾಡುತ್ತಿದ್ದೆವೆಂದರೆ ನಮ್ಮಲ್ಲೊಬ್ಬರಿಗೆ ಬಾಯಿ ನೋವು ಬರಲು ಶುರುವಾದಾಗಲೇ ಮಾತು ನಿಲ್ಲಿಸುತ್ತಿದ್ದೆವು. ಅಂತಹದ್ದೇನು ಮಾತಾಡುತ್ತಿದ್ದೆವೋ ನನಗೀಗ ನೆನೆಸಿಕೊಂಡರೆ ನಗು ಬರುತ್ತದೆ. ಅಷ್ಟು ಸಾಲದು ಎಂದು ಒಬ್ಬರಿಗೊಬ್ಬರು ಮೆಸೇಜು ಕೂಡ ಮಾಡುತ್ತಿದ್ದೆವು. ನನಗೆ ಅವಳನ್ನು ಯಾವಾಗಲೂ ನೋಡುತ್ತಾ ಮಾತನಾಡಿಸುತ್ತ ಇರಬೇಕು ಅನಿಸುತ್ತಿತ್ತು. ಒಂದು ದಿನ ಅವಳನ್ನು ನೋಡದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ! ಇದೇ ಪ್ರೀತಿ ಎಂದುಕೊಂಡು ನಾವು ಒಬ್ಬರ ಮೇಲೊಬ್ಬರು ಪ್ರೇಮ ಕವನ ಬರೆಯಲು ಶುರು ಮಾಡಿದೆವು. ನಾನು ಇಂಗ್ಲೀಷ್ ನಲ್ಲಿ ಪ್ರೇಮ ಕವನ ಬರೆದರೆ ಅವಳು ನನಗೆ ಹಿಂದಿಯಲ್ಲಿ ಬರೆದು ಕಳುಹಿಸತೊಡಗಿದಳು. ನಂತರ ನಾವು ಸಮಯ ಸಿಕ್ಕಾಗಲೆಲ್ಲ ಕವನಗಳ ಬಗ್ಗೆ ಚರ್ಚಿಸುತ್ತಿದ್ದೆವು. ಮೊದಮೊದಲು ಅವಳು ನನ್ನೆಲ್ಲ ಕವನಗಳು ಬಹಳ ಸುಂದರವಾಗಿವೆ ಎನ್ನುತ್ತಿದ್ದಳು. ನಾನೂ ಅವಳು ಹೇಗೂ ಬರೆಯಲಿ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದೆ. ಬರಬರುತ್ತ ಅವಳ ಕವನಗಳೆಲ್ಲ ಅರ್ಥಹೀನವಾಗಿ ಕಂಡು ಸಹಿಸಲಾಗದೆ ಕೊನೆಗೊಮ್ಮೆ ನಾನು ಅವಳು ಬರೆದ ಕವನ ಚೆನ್ನಾಗಿಲ್ಲವೆಂದು ಪ್ರಾಮಾಣಿಕವಾಗಿ ಹೇಳಿದಾಗ ಅವಳು ಸಿಟ್ಟುಗೊಂಡು ನನ್ನ ಕವನಗಳನ್ನು ಟೀಕಿಸಲು ಶುರು ಮಾಡಿದಳು. ನನ್ನನ್ನು ಟೀಕಿಸಿ ಕವನ ಬರೆದು ಕಳುಹಿಸತೊಡಗಿದಳು. ನಾನೂ ಅವಳ ಹಿಂದಿನ ಕವನಗಳ ಜನ್ಮ ಜಾಲಾಡಲು ಶುರು ಮಾಡಿದೆ. ಇದು ಎಷ್ಟು ತಾರಕಕ್ಕೆ ಹೋಯಿತೆಂದರೆ ಪರಸ್ಪರ ಟೀಕಾ ಪ್ರಹಾರ ತಡೆದುಕೊಳ್ಳಲಾಗದೆ ಮಾತು ಬಿಟ್ಟೆವು. ಒಂದು ದಿನವೂ ಒಬ್ಬರನ್ನೊಬ್ಬರು ನೋಡದಿದ್ದರೆ ಅದೇನೋ ಕಳೆದುಕೊಂಡಂತೆ ಆಡುತ್ತಿದ್ದ ನಾವು ಜಗಳವಾದ ಬಳಿಕ ಒಬ್ಬರನ್ನೊಬ್ಬರು ನೋಡದೆ ದಿನಗಟ್ಟಲೆ ಕಳೆದರೂ ನಮಗೆ ಏನೂ ಅನಿಸದಾಗ ಇದು ಪ್ರೀತಿಯೇ ಎಂದು ನಾವೇ ಬೆರಗು ಪಟ್ಟಿದ್ದುಂಟು. ನಮ್ಮ ಸಿಟ್ಟಿಗೆ ಪ್ರೀತಿ ಮಂಜಿನಂತೆ ಶೀಘ್ರವಾಗಿ ಕರಗಿ ಸಿಟ್ಟೇ ಪ್ರಧಾನವಾಗಿ ಬಿಟ್ಟಿತ್ತು. ಅವಳು ನಮ್ಮ ಕ್ಲಾಸಿನ ಇನ್ನೊಬ್ಬ ಹುಡುಗ ಶರಣನ ಜೊತೆ ಸ್ನೇಹ ಬೆಳೆಸತೊಡಗಿದಳು. ಅವನೂ ನಮ್ಮ ಬಿಲ್ಡಿಂಗ್ ನಲ್ಲಿ ವಾಸವಿರುವ ಹುಡುಗನೇ. ಇದರಿಂದ ನನಗೆ ಇನ್ನಷ್ಟು ಸಿಟ್ಟು ಜಾಸ್ತಿಯಾಯಿತು. ಅವಳು ಆ ಹುಡುಗನ ಜೊತೆ ಮಾತನಾಡಬಾರದೆಂದು ಅವಳಿಗೆ ತಾಕೀತು ಮಾಡಿದೆ. ಆದರೆ ಅವಳು ಕೇಳಬೇಕಲ್ಲ. ನನಗೋ, ಅವಳ ಜೊತೆ ಮಾತು ಬಿಟ್ಟರೂ ಅವಳು ನನಗೆ ಸೇರಿದವಳು, ಬೇರೆ ಯಾರ ಜೊತೆಗೂ ಅವಳು ಮಾತನಾಡಬಾರದು ಎಂಬ ಹಠ. ಜೊತೆಗೆ ಅವಳು ಬೇರೆ ಹುಡುಗನ ಜೊತೆ ಸ್ನೇಹ ಬೆಳೆಸಿದರೆ ನನಗೆ ಅವಮಾನ ಎಂದುಕೊಂಡಿದ್ದೆ. ಆದರೆ ಅವಳು ಉದ್ದೇಶಪೂರ್ವಕವಾಗಿ ನನ್ನ ಮಾತನ್ನು ನಿರ್ಲಕ್ಷಿಸಿ ಅವನ ಜೊತೆ ಸ್ನೇಹ ಮುಂದುವರೆಸಿದಳು. ಅವಳು ನನ್ನ ಮಾತು ಕೇಳಲಿಲ್ಲ ಎಂದು ಸಿಟ್ಟಿನಲ್ಲಿ ಒಂದು ದಿನ ಶರಣನನ್ನೇ ಹಿಡಿದು ತದಕಿದ್ದೆ.

ಅದಾದ ಬಳಿಕ ನಾನು ಏನು ಮಾಡಬೇಡ ಎನ್ನುತ್ತೇನೋ ಅದನ್ನೇ ಅವಳು ಹಟಕ್ಕೆ ನಿಂತು ಮಾಡತೊಡಗಿದಳು. ನಾನು ಅದನ್ನು ತಡೆಯಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೆ. ಕೊನೆಗೆ ಅದು ದೊಡ್ಡ ರಂಪವಾಗಿ ಅವಳು ತನ್ನ ತಾಯಿಯ ಬಳಿ ದೂರು ಹೇಳಿ ನಮ್ಮ ಹಾಗೂ ಮೋನಿಕಾ ಳ ಅಪ್ಪ ಅಮ್ಮಂದಿರ ಮಧ್ಯೆ ಕಿತ್ತಾಟ ಶುರುವಾಗಿ ಕೊನೆಗೆ ಅವರೊಳಗೆ ಮಾತೇ ನಿಂತು ಹೋಯಿತು. ನನ್ನ ಮನೆಯವರು ಮೋನಿಕಾ ಜೊತೆ ಮಾತನಾಡದಂತೆ ನನಗೆ ನಿರ್ಬಂಧ ವಿಧಿಸಿದರು. ಇದರಿಂದ ಉತ್ತೇಜನ ಗೊಂಡ ಅವಳು ನನಗೆ ಸಿಟ್ಟು ಬರಿಸಬೇಕೆಂದು ಶರಣನ ಕೈ ಹಿಡಿದುಕೊಂಡೇ ನಡೆಯಲು ಶುರು ಮಾಡಿದಳು. ಹೀಗೆ ಇದ್ದರೆ ಸೋಲೊಪ್ಪಿಕೊಂಡ ಹಾಗೆ ಎಂದುಕೊಂಡು ನನಗೂ ರೇಗಿ ಹೋಗಿ ನಮ್ಮ ಕ್ಲಾಸಿನ ಹುಡುಗಿಯೊಬ್ಬಳ ಸ್ನೇಹ ಸಂಪಾದಿಸಿ ನಾನೂ ಅವಳೂ ಜೊತೆ ಜೊತೆ ಯಾಗಿ ತಿರುಗಾಡಲು ಶುರು ಮಾಡಿದೆವು. ನೀನು ನನ್ನ ಜೀವ, ನನ್ನ ಉಸಿರು ಎಂದು ಒಬ್ಬರಿಗೊಬ್ಬರು ಕವನ ಬರೆಯುತ್ತಿದ್ದ ನಾವು ಒಬ್ಬರಿಂದೊಬ್ಬರು ದೂರವಾಗುತ್ತ ಹೋದೆವು. ನಾನು ಅವಳ ಮೇಲಿನ ಸಿಟ್ಟಿನಿಂದ ಅವಳು ನನಗೆ ಇದುವರೆಗೆ ಕೊಟ್ಟ ವಸ್ತುಗಳು, ಅವಳ ಕವನಗಳು ಎಲ್ಲವನ್ನೂ ನಾಶ ಮಾಡಿ ಬಿಟ್ಟೆ. ಆಗ ಬಿಟ್ಟ ಬಿರುಕು ಮತ್ತೆ ಸರಿ ಹೋಗಲೇ ಇಲ್ಲ. ನಂತರ ಮೋನಿಕಾಳ ತಂದೆಗೆ ವರ್ಗವಾದ್ದರಿಂದ ಅವರು ಮನೆ ಖಾಲಿ ಮಾಡಿಕೊಂಡು ಹೋದರು. ಆ ಬಗ್ಗೆ ಅವಳು ನನಗೆ ಏನೂ ಹೇಳಲಿಲ್ಲ. ನನ್ನನ್ನು ಮಾತನಾಡಿಸಲು ಬರುವಳೇನೋ ಅಂತ ಕಾದು ಕುಳಿತಿದ್ದೆ. ಆದರೆ ಅವಳು ಬರಲೇ ಇಲ್ಲ. ಅವಳು ಹೋಗುವಾಗ ನಾನು ಮರೆಯಲ್ಲಿ ನಿಂತು ನೋಡಿದ್ದೆ. ಅವಳೂ ಒಂದು ಕ್ಷಣ ನಮ್ಮ ಮನೆಯತ್ತ ಕಣ್ಣು ಹಾಯಿಸಿದಾಗ ಪುಳಕ ಗೊಂಡಿದ್ದೆ. ಆದರೆ ಅವಳನ್ನು ನೇರವಾಗಿ ನೋಡಲು ನನ್ನ ಸ್ವಾಭಿಮಾನ ಅಡ್ಡ ಬಂದಿತ್ತು. ನಂತರ ಮೊದಲು ಅವಳೇ ಮಾತಾಡಲಿ ಎಂದು ನಾನು, ನಾನೇ ಮಾತನಾಡಿಸಲಿ ಎಂದು ಅವಳು ಹೀಗೆ ಮತ್ತಷ್ಟು ಹಟಕ್ಕೆ ಬಿದ್ದು ಮತ್ತಷ್ಟು ದೂರವಾದೆವು. ಶೀಘ್ರವಾಗಿ ಹುಟ್ಟಿಕೊಂಡ ಪ್ರೀತಿ ಅಷ್ಟೇ ಶೀಘ್ರವಾಗಿ ಕರಗಿ ಹೋಗಿತ್ತು. ನಂತರ ಅವಳೆಲ್ಲಿ ಇದ್ದಳೋ ನನಗೆ ತಿಳಿಯಲೇ ಇಲ್ಲ. ನಾನೂ ಅರಿಯಲು ಪ್ರಯತ್ನ ಮಾಡಲಿಲ್ಲ. ಕಾಲೇಜು, ಓದು,ಗೆಳೆಯರು ಇದರಲ್ಲೇ ಮುಳುಗಿ ಮೋನಿಕಾ ಳನ್ನು ಮರೆತೇ ಬಿಟ್ಟೆ. ಕಾಲೇಜು ಮುಗಿದು ಕೆಲಸ ಸಿಕ್ಕ ಮೇಲೆ ನಮ್ಮ ಸಂಬಂಧದ ಹುಡುಗಿಯನ್ನು ಪ್ರೀತಿಸಿ ಮದುವೆಯೂ ಆಗಿ ಬಿಟ್ಟೆ.

ಕಾಲಿಂಗ್ ಬೆಲ್ ಸದ್ದಾಯಿತು. ನಾನು ನನ್ನ ಯೋಚನಾ ಲಹರಿಯಿಂದ ಹೊರಬಂದೆ. ನನ್ನವಳು ಹೋಗಿ ಬಾಗಿಲು ತೆರೆದಳು. ನಾನೂ ಯಾರಿರಬಹುದು ಎಂದು ಕುತೂಹಲದಿಂದ ಹೋಗಿ ನೋಡಿದಾಗ ಮೋನಿಕಾ ನಿಂತಿದ್ದಳು ! ಈಗ ತಾನೇ ಅವಳ ಲಗ್ನ ಪತ್ರಿಕೆ ನೋಡುತ್ತಿದ್ದೆ, ಅಷ್ಟರಲ್ಲಿ ಅವಳೇ ಬಂದು ಬಿಟ್ಟಳಲ್ಲ ಎಂದುಕೊಳ್ಳುತ್ತ ಅರೆ! ಮೋನಿಕಾ, ನಿಂಗೆ ನಮ್ಮ ಮನೆ ಹೇಗೆ ಗೊತ್ತಾಯಿತು ಎಂದು ಆಶ್ಚರ್ಯದಿಂದ ಕೇಳಿದೆ. ಅವಳು, ಶರಣ್ ಹೇಳಿದ ಎಂದಾಗ ನಾನು ನಕ್ಕೆ. ಚಿಕ್ಕವರಿರುವಾಗ ನಾನು ಶರಣ್ ಜೊತೆ ಸ್ನೇಹ ಬೆಳೆಸಿದೆ ಎಂದು ನೀನು ಸಿಟ್ಟಾಗಿ ನಿಮ್ಮ ಕ್ಲಾಸಿನ ಹುಡುಗಿ ಜೊತೆ ತಿರುಗಾಡಲು ಶುರು ಮಾಡಿದೆ. ಈಗ ನಾನು, ನೀನು ಮದುವೆ ಮಾಡಿಕೊಂಡೆ ಎಂದು ಸಿಟ್ಟಿನಲ್ಲಿ ನಾನೂ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದಾಗ ಎಲ್ಲರೂ ನಕ್ಕರು. ಅವಳನ್ನು ರೇಗಿಸಲು, ಕೊನೆಗೂ ನಾನೇ ಗೆದ್ದೆ , ನೀನೇ ಬಂದು ನನ್ನನ್ನು ಮಾತನಾಡಿಸಿದೆಯಲ್ಲ ಎಂದಾಗ ಅವಳು ಮುಖ ಕೆಂಪಗೆ ಮಾಡಿಕೊಂಡು ದುರುದುರು ನೋಡಿದಾಗ ನಾನು ಜೋರಾಗಿ ನಗುತ್ತ, ಇನ್ನು ಪುನಃ ಜಗಳ ಶುರು ಮಾಡಬೇಡ ಎಂದೆ. ಅವಳು ಪಟ್ಟು ಬಿಡದೆ,ಜಗಳ ಶುರು ಮಾಡಿದ್ದು ನಾನಾ ನೀನಾ … ಎನ್ನುತ್ತಿದ್ದಂತೆ, ನಾವಿಬ್ಬರು ಮದುವೆಯಾಗಿದ್ದಿದ್ದರೆ ಒಂದೇ ದಿನದಲ್ಲಿ ಬೇರೆಯಾಗುತ್ತಿದ್ದೆವೇನೋ ಎಂದು ನಾನು ಹೇಳಿದಾಗ ಅವಳ ಮುಖ ಮತ್ತಷ್ಟು ಕೆಂಪಗಾಯಿತು. ಅದು ನಾಚಿಕೆಯಿಂದಲೋ ಅಥವಾ ಸಿಟ್ಟಿನಿಂದಲೋ ಎಂದು ನನಗೆ ತಿಳಿಯಲಿಲ್ಲ. ಅದರ ಜೊತೆ ಅವಳು ನನ್ನನ್ನು ಇನ್ನೂ ಪ್ರೀತಿಸುತ್ತಿದ್ದಿರಬಹುದೇ ಎಂದು ಗುಮಾನಿ ಮೂಡಿ ಅವಳ ಕಣ್ಣುಗಳಲ್ಲಿ ಉತ್ತರಕ್ಕಾಗಿ ತಡಕಾಡಿದೆ. ಮರುಕ್ಷಣ, ಛೆ! ನಾನೇನು ಯೋಚಿಸುತ್ತಿದ್ದೇನೆ. ಸಿಲ್ಲಿ, ಅವಳು ನನ್ನನ್ನು ಪ್ರೀತಿಸುತ್ತಿದ್ದಿದ್ದರೆ ನನ್ನಿಂದ ಇಷ್ಟು ಸಮಯ ದೂರವಿರುತ್ತಿದ್ದಳೆ ಎಂದು ನನಗೆ ನಾನು ಮನಸ್ಸಿನಲ್ಲೇ ಬೈದುಕೊಂಡು ಅವಳ ಜೊತೆ ಹರಟೆಗೆ ಕುಳಿತೆ.

ಬದಲಾದ ಬದುಕು

ಹಳ್ಳಿಯಲ್ಲಿ ಹುಟ್ಟಿ ಅಪ್ಪನ ಮೂರೆಕರೆ ಜಮೀನಿನಲ್ಲಿ ತರಕಾರಿ, ಧಾನ್ಯಗಳ ಬೆಳೆ ನೋಡುತ್ತಾ, ತೋಟದಲ್ಲಿನ ಕಾಯಿಗಳನ್ನು ತಿನ್ನುತ್ತ ಮಣ್ಣಿನಲ್ಲೂ, ಅಪ್ಪ ಮಾಡಿದ ಬೆದರು ಗೊಂಬೆಯ ಜೊತೆಯಲ್ಲೂ, ಆಟವಾಡುತ್ತ ಬೆಳೆದ ನನಗೆ ನಗರದಲ್ಲಿರುವ ಹುಡುಗನ ಜೊತೆ ಮದುವೆಯಾದಾಗ ತುಂಬಾ ಬೇಜಾರಾಗಿತ್ತು. ನಗರದಲ್ಲಿ ಫ್ಲಾಟ್ ನಲ್ಲಿ ಮನೆ ಮಾಡಿದ ಮೇಲಂತೂ ಹಳ್ಳಿಯ ತೋಟ ಗದ್ದೆಗಳ ನೆನಪು ಕಾಡಿ ಆತ್ತಿದ್ದೆಷ್ಟೋ ಸಲ. ಮನೆಯ ಸುತ್ತಮುತ್ತ ಒಂದು ಹಿಡಿ ಮಣ್ಣು ಮುಟ್ಟಲು ಸಿಗದಾಗ ಇದೆಂಥಾ ಜೀವನ ಎಂದು ಕೊರಗಿದ್ದೆ. ಇವರು ನನ್ನ ಕೊರಗು ನೋಡಲಾಗದೆ ಒಮ್ಮೆ ಪಾರ್ಕ್ ಗೆ ಕರೆದುಕೊಂಡು ಹೋದಾಗ ನಾನು ಪುಟ್ಟ ಮಕ್ಕಳಂತೆ ಅಲ್ಲಿನ ಗಿಡ ಮರಗಳನ್ನು ಮುಟ್ಟಿ ನೋಡಿ ಅಪ್ಪಿ ಹಿಡಿದು ಸಂತೋಷ ಪಟ್ಟಿದ್ದೆ. ಇದನ್ನು ಕಂಡು ಪತಿರಾಯರಿಗೆ ಸಹಾನುಭೂತಿ ಉಕ್ಕಿಸ್ವಲ್ಪ ದಿನಗಳಲ್ಲೇ ಹಳ್ಳಿಗೆ ಕರೆದುಕೊಂಡು ಬಂದಿದ್ದರು. ನಾನು ಮನೆಗೆ ಬರುವ ದಾರಿಯಲ್ಲೇ ಬಗ್ಗಿ ಒಂದು ಹಿಡಿ ಮಣ್ಣನ್ನು ಹಿಡಿದು ಅದರ ವಾಸನೆ ಆಘ್ರಾಣಿಸುತ್ತ ಆನಂದ ಪಡುತ್ತಾ ಬರುವಾಗ ಇವರು ಕಿಸಕ್ಕನೆ ನಕ್ಕಿದ್ದರು. ಅಲ್ಲಿ ಯಾರು ಉಗಿದಿದ್ದರೋ, ಮೂತ್ರ, ಗಲೀಜು ಮಾಡಿದರೋ ಏನೋ, ಆ ಮಣ್ಣನ್ನು ಕೈಯಲ್ಲಿ ಹಿಡಿದು ಮೂಸುತ್ತ ಇದ್ದಿಯಲ್ಲೇ ಛೀ, ಅಷ್ಟು ಬೇಕಿದ್ರೆ ವಾಪಾಸು ಹೋಗೋವಾಗ ಒಂದು ಲೋಡ್ ಮಣ್ಣನ್ನು ತೊಗೊಂಡ್ ಹೋಗೋಣಾ ಅಂದರು. ಹೂಂ, ಆಮೇಲೆ ಮಣ್ಣು ತೆಗೆದು ನಿಮ್ಮ ತಲೆ ಮೇಲೆ ಸುರಿಯೋಣ, ಬೇರೆ ಎಲ್ಲಿದೆ ಜಾಗ ಎನ್ನುತ್ತಾ ಮನೆ ಹತ್ತಿರ ಬಂದಿದ್ದನ್ನು ನೋಡಿ ಓಡುತ್ತ ಹೋದೆ. ಅಪ್ಪ ಅಮ್ಮ ನಮ್ಮನ್ನು ಕಂಡು ಅವಕ್ಕಾದರು, ಜೊತೆಗೆ ಗಾಬರಿಯೂ ಕಣ್ಣಲ್ಲಿ ಎದ್ದು ಕಾಣುತ್ತಿತ್ತು. ಮಗಳು ಅಳಿಯ ಇದ್ದಕ್ಕಿದ್ದಂತೆ ಯಾಕಪ್ಪ ಬಂದರು, ಹೇಳಿಕೇಳಿ ನಮ್ಮ ಹುಡುಗಿ ಹಳ್ಳಿಯವಳು ಅಂತ ಅಳಿಯನಿಗೆ ಇಷ್ಟವಾಗಿಲ್ಲವೇ ಎಂದು ಆತಂಕದಿಂದ ಅಳಿಯನತ್ತ ಮುಖ ಮಾಡಿದಾಗ ಅವರ ದುಗುಡ ಅರಿತವನಂತೆ ನಿಮ್ಮ ಮಗಳಿಗೆ ಹಳ್ಳಿ ನೆನಪು ಕಾಡ್ತಾ ಇತ್ತು, ಅದಕ್ಕೆ ವಾರದ ಮಟ್ಟಿಗೆ ರಜೆಯಲ್ಲಿ ಕರೆದುಕೊಂಡು ಬಂದೆ ಎಂದಾಗ ಅಪ್ಪ ಅಮ್ಮ ಇಬ್ಬರೂ ನಿಟ್ಟುಸಿರು ಬಿಟ್ಟಿದ್ದರು.

ಅಮ್ಮ ಗಡಿಬಿಡಿಯಿಂದ ಅಳಿಯನಿಗೆ ವಿಶೇಷ ಅಡಿಗೆ ಮಾಡಲು ಅಡಿಗೆ ಮನೆಗೆ ಧಾವಿಸಿದರು. ನನಗೆ ತೋಟ ಗದ್ದೆ ನೋಡಬೇಕೆಂಬ ಆಸೆ ತೀವ್ರವಾಗಿದ್ದರೂ ಅಮ್ಮನಿಗೆ ಸಹಾಯ ಮಾಡಬೇಕಲ್ಲ ಎಂದು ನಾನೂ ಅಮ್ಮನನ್ನು ಹಿಂಬಾಲಿಸಿದೆ. ಅಮ್ಮನಿಗೆ ಸಹಾಯ ಮಾಡುತ್ತ, ಯಾವ ಬೆಳೆ ಬೆಳೀತಿದ್ದೀರಿ. ತೋಟದಲ್ಲಿ ಯಾವ ಹಣ್ಣುಗಳು ಆಗಿವೆ ಅಂತ ಬರೀ ಇದೇ ಮಾತುಗಳನ್ನು ಕೇಳಿದಾಗ ಅಮ್ಮ ನಕ್ಕು ಬಿಟ್ಟಿದ್ದರು. ನಿಂಗೆ ಪಟ್ಟಣದಲ್ಲಿರುವ ಹುಡುಗನಿಗಿಂತ ಯಾವುದಾದರೂ ರೈತನಿಗೆ ಕೊಟ್ಟು ಮದುವೆ ಮಾಡಬೇಕಿತ್ತು ಎಂದು ಕೀಟಲೆ ಮಾಡಿದರು. ಊಟ ಮುಗಿಸಿ ಇವರ ಜೊತೆ ಗದ್ದೆ ತೋಟ ಸುತ್ತಾಡಿ ಸಿಕ್ಕ ಹಣ್ಣುಗಳನ್ನೆಲ್ಲ ತಿನ್ನುತ್ತ ಒಬ್ಬರಿಗೊಬ್ಬರು ಕೀಟಲೆ ಮಾಡುತ್ತಾ ಅಡ್ಡಾಡುವಾಗ ಬದುಕು ಎಷ್ಟು ಸುಂದರ ಅನಿಸಿಬಿಟ್ಟಿತ್ತು. ಒಂದು ವಾರ ಒಂದು ದಿನದಂತೆ ಕಳೆದು ನಗರಕ್ಕೆ ವಾಪಾಸು ಹೋಗಬೇಕಾದಾಗ ತೋಟದಲ್ಲಿದ್ದ ಪ್ರತಿಯೊಂದು ಮರಗಿಡಗಳನ್ನು ಅಪ್ಪಿಕೊಂಡು ಅತ್ತು ಬಿಟ್ಟಿದ್ದೆ.

ಮನೆಗೆ ಬಂದು ಒಂದು ವಾರ ಕಳೆಯುವಷ್ಟರಲ್ಲಿ ಮತ್ತೆ ಹಳ್ಳಿ ನೆನಪು ಕಾಡಿ ಮಂಕಾಗಿ ಬಿಟ್ಟಿದ್ದೆ. ಅವತ್ತು ನನ್ನ ಹುಟ್ಟಿದ ಹಬ್ಬ, ನಿನಗೇನೋ ವಿಶೇಷ ಉಡುಗೊರೆ ಕೊಡ್ತೀನಿ ಎಂದು ಇವರು ಹೇಳಿದಾಗಲೂ ನನ್ನನ್ನು ಕವಿದ ಮಂಕು ಬಿಟ್ಟಿರಲಿಲ್ಲ. ಸಂಜೆ ಇವರು ಆಫೀಸು ಮುಗಿಸಿ ಮನೆಗೆ ಬಂದಾಗ ಬಾಗಿಲು ತೆರೆದ ನನಗೆ ಸಂತೋಷ ಸಂಭ್ರಮಗಳಿಂದ ಮಾತೇ ಬರದಾಯಿತು. ಇವರು ನಾಲ್ಕೈದು ಕುಂಡಗಳನ್ನು ಹೊತ್ತು ತಂದಿದ್ದರು. ಜೊತೆಗೆ ಕೆಲವು ಹೂವಿನ ಬೀಜಗಳು, ಮತ್ತು ತರಕಾರಿ ಬೀಜಗಳು. ಒಂದು ದೊಡ್ಡ ಚೀಲದ ತುಂಬಾ ಮಣ್ಣು. ನಾನಂತೂ ಅದನ್ನು ನೋಡಿ ಪುಟ್ಟ ಮಗುವಿನಂತೆ ಕುಣಿದು ಕುಪ್ಪಳಿಸಿ ಬಿಟ್ಟಿದ್ದೆ. ದಣಿದು ಬಂದಿದ್ದ ಇವರಿಗೆ ಕಾಫಿ ತಿಂಡಿ ಕೊಡುವ ಬದಲು ನಾನು ಕುಂಡಗಳನ್ನು ನಮ್ಮ ಮನೆಯ ಬಾಲ್ಕನಿಯಲ್ಲಿ ಸಾಲಾಗಿ ಜೋಡಿಸಿ ಆಗಲೇ ಬೀಜಗಳನ್ನು ಉತ್ತು ನೀರು ಹಾಕಿ ಸಂತ್ರಪ್ತಿಯಾದ ಮೇಲೆಯೇ ಒಳಗೆ ಬಂದಿದ್ದು. ಇವರಂತೂ ನಾನು ಮಾಡುತ್ತಿರುವುದನ್ನು ನಗುತ್ತ ನೋಡುತ್ತಾ ನಿಂತಿದ್ದರು. ಕೈ ತೊಳೆದು ಇವರಿಗೆ ಕಾಫಿ ತಿಂಡಿ ಕೊಡುವಾಗ ನನ್ನ ಮುಖದಲ್ಲಿನ ಸಂತಸದ ಕಳೆ ನೋಡಿ ಅಬ್ಬ ಅಂತೂ ನಗು ಬಂದು ಬಿಡ್ತು ನಾನೆಲ್ಲೋ ಹಳ್ಳಿಯಲ್ಲೇ ನಗೂನ ಬೀಳಿಸಿಕೊಂಡು ಬಂದ್ಯೇನೋ ಅಂದುಕೊಂಡಿದ್ದೆ ಎಂದು ಹಾಸ್ಯ ಮಾಡಿದಾಗ ನಾಚಿ ಬಿಟ್ಟೆ.

ಅಂದಿನಿಂದ ಬೆಳಗ್ಗೆ ಎದ್ದವಳಿಗೆ ಮೊದಲು ಬಾಲ್ಕನಿಗೆ ಓಡಿ ಹೋಗಿ ಯಾವ ಬೀಜ ಮೊಳಕೆಯೊಡೆದಿದೆ, ಬಂದ ಗಿಡ ಚೆನ್ನಾಗಿ ಬೆಳೀತಾ ಇದ್ಯಾ ಅಂತ ನೋಡಿದ್ರೇನೆ ಸಮಾಧಾನ. ಗಿಡಗಳು ಮೈಕೈ ತುಂಬಿ ಬೆಳೆದು ನಿಂತಾಗ ನನ್ನ ಸಂತೋಷ ಹೇಳತೀರದು. ಅದಕ್ಕೆ ಗೊಬ್ಬರ ಎಂದು ಟೀ ಮಾಡಿದ ಮೇಲೆ ಚರಟವನ್ನು ಶೇಖರಿಸಿಟ್ಟು ಆಗಾಗ ಗಿಡಗಳಿಗೆ ಹಾಕಿದೆ. ಅಂಗಡಿಯಿಂದ ನೆಲಕಡಲೆ ಹಿಂಡಿ ತಂದು ಮೂರು ದಿನ ಅದನ್ನು ನೀರಲ್ಲಿ ನೆನಸಿ ಗಿಡಗಳಿಗೆ ಉಣಿಸಿದಾಗ ಹಳ್ಳಿಯ ನೆನಪು. ಇವರು ಮನೆಗೆ ಬಂದವರೇ, ಅದೇನೇ ಮನೆ ತುಂಬಾ ಕೆಟ್ಟ ವಾಸನೆ ಎನ್ನುತ್ತಾ ಮೂಗು ಮುಚ್ಚಿಕೊಂಡಾಗ ನಾನು ನಗುತ್ತ, ಗಿಡಗಳಿಗೆ ಗೊಬ್ಬರ ಹಾಕಿದ್ದೀನಿ, ಇನ್ನು ನೋಡ್ತಾ ಇರಿ, ಗುಲಾಬಿ, ಟೊಮೇಟೊ, ಹಾಗಲಕಾಯಿ, ಹಸಿ ಮೆಣಸಿನ ಗಿಡ ಎಲ್ಲ ಎಷ್ಟು ಚೆನ್ನಾಗಿ ಬರುತ್ತವೆ ಅಂತ ಹೆಮ್ಮೆಯಿಂದ ಹೇಳಿದೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಯಾರಪ್ಪ ಬಂದರು ಅಂತ ಬಾಗಿಲು ತೆರೆದರೆ ಒಂದಷ್ಟು ಜನ ನಿಂತಿದ್ದರು. ನಿಮ್ಮ ಮನೆಯಿಂದ ಅದೇನೋ ಭಾರೀ ಕೆಟ್ಟ ವಾಸನೆ ಬರ್ತಿದ್ಯಲ್ಲ, ಏನು ವಾಸನೆ ಅದು, ಮಾಡಬಾರದ್ದೇನಾದರೂ ಮಾಡಿದ್ದೀರಾ ಅಂದಾಗ ನಮಗಿಬ್ಬರಿಗೂ ಅರ್ಥವಾಗದೆ ಪಿಳಿ ಪಿಳಿ ಕಣ್ಣು ಬಿಟ್ಟು ಅವರನ್ನೇ ಪ್ರಶ್ನಾರ್ಥಕವಾಗಿ ನೋಡಿದೆವು. ಆಗ ಅವರಲ್ಲೊಬ್ಬ ನೇರವಾಗಿ, ಯಾರನ್ನಾದರೂ ಕೊಲೆ ಮಾಡಿ ಮುಚ್ಚಿಟ್ಟಿದ್ದೀರಾ ಎಂದಾಗ ಮೊದಲು ಎದೆ ಧಸಕ್ಕೆಂದರೂನಂತರ ಸಾವರಿಸಿಕೊಂಡು ಇವರು ಜೋರಾಗಿ ನಗುತ್ತ, ಆ ವಾಸನೆ ಇವಳ ಗಿಡಗಳಿಗೆ ಹಾಕಿದ ಗೊಬ್ಬರದ್ದು ಬೇಕಾದ್ರೆ ನೀವೇ ಬಂದು ನೋಡಿ ಎಂದು ಹಿಂಡಿ ನೆನೆಸಿಟ್ಟ ಪಾತ್ರೆ ತೋರಿಸಿದರು, ನಂತರ ಅವರನ್ನು ಬಾಲ್ಕನಿಗೆ ಕರೆದೊಯ್ದು ಗಿಡಗಳನ್ನು ತೋರಿಸಿದಾಗ ಮೂಗು ಮುಚ್ಚಿಕೊಂಡೇ ಬೆರಗಿನ ಕಣ್ಣುಗಳಿಂದ ನೋಡಿದರು. ತಾವು ಕೊಲೆಗಾರರನ್ನು ಹಿಡಿದ್ವಿ ಅಂತ ಎದೆಯುಬ್ಬಿಸಿ ಬಂದವರು ಬೆರಗು ಕಣ್ಣಿನಿಂದಲೇ ಹೋದರು. ಅವರತ್ತ ಹೋದ ಮೇಲೆ ಇವರು ಹೊಟ್ಟೆ ಹಿಡ್ಕೊಂಡು ಅದೆಷ್ಟು ನಕ್ಕಿದ್ದರು. ನನಗಂತೂ ತುಂಬಾ ಮುಜುಗರ ಆಗಿತ್ತು.

ನಾನು ಬೆಳೆದ ಟೊಮ್ಯಾಟೋ ಗಿಡದ ತುಂಬ ಹಣ್ಣುಗಳಾದಾಗ ನನಗಿಂತ ಇವರು ತುಂಬಾ ಸಂತೋಷ ಪಟ್ಟಿದ್ದರು. ಸಿಕ್ಕಿದವರಿಗೆಲ್ಲ ತಮ್ಮ ಮನೆಯ ಟೊಮ್ಯಾಟೋ ಗಿಡ ತೋರಿಸಲು ಕರೆದುಕೊಂಡು ಬರುತ್ತಿದ್ದರು. ಬಿಲ್ಡಿಂಗ್ ನ ಹೆಂಗಸರಂತೂ ನನ್ನಿಂದ ಉತ್ತೇಜನಗೊಂಡು ಕುಂಡಗಳಲ್ಲಿ ಅಷ್ಟು ಚೆನ್ನಾಗಿ ಗಿಡಗಳನ್ನು ಹೇಗೆ ಬೆಳೆಸುವುದು ಎಂದು ನನ್ನನ್ನು ಕೇಳಿ ತಿಳಿದುಕೊಂಡು ಅವರ ಮನೆಯಲ್ಲೂ ಕುಂಡಗಳನ್ನು ತಂದು ತರಕಾರಿಗಳನ್ನು ಬೆಳೆಯಲಾರಂಭಿಸಿದರು. ಆಮೇಲಂತೂ ಇಡೀ ಬಿಲ್ಡಿಂಗ್ ಗಬ್ಬು ನಾತ ಬೀರತೊಡಗಿತು. ಗಿಡಗಳ ಬಗ್ಗೆ ಕೇಳೋಕೆ ಬರೋ ಜನ ಜಾಸ್ತಿಯಾಗಿ ಬಿಟ್ಟರು. ಮೊದಲೆಲ್ಲ ನಾಲ್ಕೈದು ಹೆಂಗಸರು ಒಟ್ಟಾಗಿ ಸೇರಿದರೆ ಟೀವಿಯಲ್ಲಿ ಬರುವ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಈಗ ನಮ್ಮ ಗಿಡದಲ್ಲಿ ಕಾಯಿ ಬಿಟ್ಟಿದೆ, ಹೂ ಬಿಟ್ಟಿದೆ ಅಂತ ಜಂಭ ಕೊಚ್ಚಿಕೊಳ್ಳುವರು ಕೆಲವರಾದರೆ ಇನ್ನು ಕೆಲವರು ತಮ್ಮ ಗಿಡ ಸತ್ತು ಹೋಯಿತು ಎಂದು ಮ್ಲಾನವಾದ ಮುಖ ಹೊತ್ತು ಕೊರಗುತ್ತ ಬೇರೆಯವರ ಸಲಹೆ ಸಲಹೆ ಪಡೆಯುವುದರಲ್ಲಿ ಕಾಲ ಕಳೆಯುತ್ತಿತ್ತು. ತರಕಾರಿಗೆ ಮಾಡುವ ಖರ್ಚಿನ ಉಳಿತಾಯದಿಂದ ಮನೆಯ ಗಂಡಸರಿಗೂ ಸಮಾಧಾನ.

ಒಂದು ದಿನ ಜೋರಾಗಿ ಬಂದ ಗಾಳಿ ಮಳೆಗೆ ಹಣ್ಣುಗಳಿಂದ ತುಂಬಿದ ನಮ್ಮ ಟೊಮ್ಯಾಟೋ ಗಿಡ ಬಾಲ್ಕನಿಯಿಂದ ಕೆಳಗೆ ಬಿದ್ದಿತು. ಬೆಳಗ್ಗೆ ಅದನ್ನು ನೋಡಿ ಜೋರಾಗಿ ಅಳಲು ಶುರು ಮಾಡಿದೆ. ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದರು ಏನಾಯ್ತು ಯಾಕೆ ಹಾಗೆ ಅಳ್ತಿದ್ದೀರಿ ಎಂದು ವಿಚಾರಿಸಿದಾಗ ನಾನು ಕೆಳಗೆ ಬಿದ್ದ ಟೊಮ್ಯಾಟೋ ಗಿಡ ತೋರಿಸಿದೆ. ಅಯ್ಯೋ ನೀವು ಅಳೋದು ನೋಡಿ ನಿಮ್ಮ ಮನೆಯವರಿಗೆ ಏನಾಗಿ ಬಿಡ್ತೋ ಎಂದುಕೊಂಡು ಗಾಬರಿಯಾಗಿ ಬಿಟ್ಟಿತು. ಎಂದಾಗ ನಾನು ದುರದುರನೆ ಅವರನ್ನು ನೋಡಿದಾಗ ಅವರೂ ತಮ್ಮ ಮಾತಿನ ಧಾಟಿ ಬದಲಿಸಿ, ಆದ್ರೂ ಪಾಪ, ನೀವು ಅಷ್ಟೊಂದು ಕಾಳಜಿ ವಹಿಸಿ ಬೆಳೆದ ಟೊಮ್ಯಾಟೋ ಗಿಡ ಬಿದ್ದಿದ್ದು ನೋಡಿದ್ರೆ ಯಾರದೋ ಕೆಟ್ಟ ಕಣ್ಣು ಬಿದ್ದಿರಬೇಕು. ಸಮಾಧಾನ ಮಾಡ್ಕೊಳ್ಳಿ. ಇನ್ನೊಂದ್ ಗಿಡ ಬೆಳೆದ್ರಾಯ್ತು ಆದ್ರೆ ಅದಕ್ಕೆ ಹಳೇ ಚಪ್ಪಲಿ ಕಟ್ಟಿ ಬಿಡಿ ಆವಾಗ ಯಾರ ದೃಷ್ಟಿನೂ ತಾಕಲ್ಲ ಎಂದರು. ನಾನು ಅಷ್ಟೊಂದು ಸಣ್ಣಗೆ ಇರುವ ಟೊಮ್ಯಾಟೋ ಗಿಡಕ್ಕೆ ಚಪ್ಪಲಿ ಕಟ್ಟೋದಾದರೂ ಹೇಗೆ ಎಂದು ಚಿಂತಾಮಗ್ನಳಾದೆ.
ಅದಾದ ಸ್ವಲ್ಪ ದಿವಸಗಳಲ್ಲೇ ನಮ್ಮ ಮನೆಗೆ ಪುಟ್ಟ ಪಾಪು ಬರುತ್ತೆ ಅಂತ ಗೊತ್ತಾದಾಗ ಇವರು ಪುಟ್ಟ ಮಕ್ಕಳಂತೆ ಕುಣಿದಾಡಿ ಬಿಟ್ಟಿದ್ದರು. ಅಕ್ಕಪಕ್ಕದ ಮನೆಯವರಿಗೆಲ್ಲ ವಿಷಯ ತಿಳಿದು ಖುಷಿ ಪಡುತ್ತ ಆ ಬಗ್ಗೆ ನನಗೆ ಪುಕ್ಕಟೆ ಸಲಹೆಗಳನ್ನು ಕೊಡುವ ಸರದಿ ಅವರದಾಯಿತು. ನಾನು ಮಾತ್ರ ಗಿಡಗಳ ಕೆಲಸ ಮಾತ್ರ ಬಿಡಲಿಲ್ಲ. ಹಾಗಲಕಾಯಿ ಬಳ್ಳಿ ಬಾಲ್ಕನಿ ತುಂಬಾ ಹರಡಿ ಬಿಟ್ಟಿತು. ಮೆಣಸಿನಕಾಯಿ ಗಿಡದಲ್ಲಿ ಹೂ ಬಿಟ್ಟಿತು. ಅದನ್ನು ನೋಡಿ ನಾನೂ ನಿಮ್ಮಂತೆ, ಇನ್ನು ಸ್ವಲ್ಪ ಸಮಯದಲ್ಲಿ ನನಗೂ ಪುಟ್ಟ ಮಗುವಾಗುತ್ತೆ ಎಂದು ನನ್ನ ಸಂತೋಷವನ್ನು ಗಿಡಗಳ ಬಳಿ ಹಂಚಿಕೊಂಡೆ. ಅವೆಲ್ಲ ತಮ್ಮ ಸಂತಸ ವ್ಯಕ್ತ ಪಡಿಸುವಂತೆ ತೂಗಾಡಿದಾಗ ನನ್ನ ಸಂಭ್ರಮ ಹೇಳತೀರದು.

ಆದರೆ ಪಾಪು ಹುಟ್ಟಿದ ಮೇಲೆ ಒಂದು ಕ್ಷಣವೂ ಬಿಡುವಿಲ್ಲ. ಅಮ್ಮನ ಮನೆಯಲ್ಲಿದ್ದಾಗಲೂ ತೋಟಕ್ಕೆ ಕಾಲಿಡಲೇ ಸಮಯವಿಲ್ಲ. ಆದರೂ ಮರ ಗಿಡ ಗಳ ನೆನಪು ಕಾಡಲಿಲ್ಲ.ನಂತರ ಗಂಡನ ಮನೆಗೆ ಬಂದ ಮೇಲಂತೂ ಮನೆ ಕೆಲಸ ಪಾಪೂನ ನೋಡ್ಕೊಳ್ಳೋದು ಇದರಲ್ಲೇ ಸಮಯ ಕಳೆದು ಹೋಗಿ ಬಿಡುತ್ತಿತ್ತು. ಬಾಲ್ಕನಿಗೆ ಹೋಗಿ ನೀರು ಹಾಕಲೂ ಸಮಯವಿಲ್ಲ. ಇದರಿಂದಾಗಿ ಗಿಡಗಳೆಲ್ಲ ಸೊರಗಿದವು. ಕಾಯಿ ಬಿಡುವ ಹಂತಕ್ಕೆ ಬಂದು ಸೊರಗಿದ ಗಿಡಗಳನ್ನು ನೋಡಿ ಪಾಪ ಪ್ರಜ್ಞೆ ಮೂಡಿ ಪಕ್ಕದ ಮನೆಯವರಿಗೆ ನನ್ನ ಗಿಡಗಳನ್ನೆಲ್ಲ ದಾನ ಮಾಡಿ ಬಿಟ್ಟೆ. ಈಗ ಮರ ಗಿಡ ಮಣ್ಣು ಅಂತೆಲ್ಲ ನೆನಪಾಗುವುದಿಲ್ಲ. ಮುದ್ದು ಪಾಪುವಿನ ಆಟ, ನಗುವಿನಲ್ಲಿ ಪ್ರಪಂಚವನ್ನೇ ಮರೆತು ಬಿಡುತ್ತೇನೆ.

ಆಸೆ ಪುರಾಣ

ಆಸೆಗಳು ಯಾರಿಗಿಲ್ಲ ಹೇಳಿ. ಮನುಷ್ಯನಿಗೆ ಆಸೆಯಿರುವುದು ಸಹಜವೇ, ಇಲ್ಲದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ, ಎಲ್ಲರಿಗೂ ಸಾಮಾನ್ಯವಾದ ಆಸೆ ಎಂದರೆ ಚೆನ್ನಾಗಿ ಬದುಕುವ ಆಸೆ. ಈ ಆಸೆ ಮಾತ್ರ ಎಲ್ಲ ಜೀವಿಜಂತುಗಳಿಗೂ ಇರುತ್ತವೆ. ನಮಗೆ ಬೆಳಗ್ಗೆ ಕಣ್ಣು ಬಿಟ್ಟ ಕೂಡಲೇ ಶುರುವಾಗುತ್ತದೆ ಆಸೆಗಳ ರೈಲು, ಬಗೆ ಬಗೆಯ ಭಕ್ಷ್ಯ ಗಳನ್ನು ತಿನ್ನುವ ಆಸೆ, ಸುಂದರವಾಗಿ ಕಾಣಿಸುವ ಆಸೆ ಯಾರನ್ನೋ ಅನುಕರಣೆ ಮಾಡುವ ಆಸೆ, ಸ್ಟೈಲ್ ಮಾಡುವ ಆಸೆ, ಸಂಸಾರಸ್ಥರಿಗೆ ಚೆನ್ನಾಗಿ ಬದುಕಬೇಕೆಂಬ ಆಸೆಯಾದರೆ ಸನ್ಯಾಸಿಗಳಿಗೆ ದೇವರನ್ನು ಒಲಿಸಿಕೊಳ್ಳುವ ಆಸೆ. ಹೀಗೆ ಪಟ್ಟಿ ಮಾಡಲು ಕುಳಿತರೆ ಈ ಪ್ರಬಂಧ ರಾಮಾಯಣದಷ್ಟು ದೊಡ್ಡದಾಗಿ ಎಂದಿಗೂ ಮುಗಿಯದ ಮಹಾ ಪ್ರಬಂಧವಾಗಿ ಬಿಡುತ್ತದೆ. ಅಸೆ ನೆರವೇರಿದಾಗ ಸಿಗುವ ಆನಂದ ಅದನ್ನು ಅನುಭವಿಸುವವರಿಗೇ ಗೊತ್ತು. ಆದ್ದರಿಂದಲೇ ಎಲ್ಲರೂ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಶ್ರಮಿಸುತ್ತಾರೆ. ಹಾಗಂತ ಅತಿಯಾದ ಆಸೆಗಳೂ ಒಳ್ಳೆಯದಲ್ಲ. ಮನುಷ್ಯ ಎಷ್ಟು ಆಸೆಬುರುಕನಾಗಿರುತ್ತಾನೋ ಅಷ್ಟು ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡು ಆಸೆಗಳ ಈಡೇರುವಿಕೆಯಲ್ಲೇ ಬದುಕನ್ನೇ ಸವೆಯುತ್ತಾನೆ.

ಆಸೆಗಳು ತೀರಾ ಚಿಕ್ಕದರಿಂದ ಹಿಡಿದು ಅತೀ ದೊಡ್ಡ ಆಸೆಗಳು ಇರಬಲ್ಲುದು. ಆಸೆಗಳೆಷ್ಟೇ ಇದ್ದರೂ ಎಲ್ಲರ ಎಲ್ಲಾ ಆಸೆಗಳು ಈಡೇರುವುದಿಲ್ಲ, ಕೆಲವು ಆಸೆಗಳನ್ನು ಅವರೇ ಕಡೆಗಣಿಸಿಬಿಟ್ಟರೆ ಇನ್ನು ಕೆಲವು ಆಸೆಗಳು ಪರಿಸ್ತಿತಿಯ ಒತ್ತಡದಿಂದ ನೆರವೇರುವುದಿಲ್ಲ. ಇನ್ನು ಕೆಲವರು ತಮ್ಮ ಆಸೆಗಳನ್ನು ಹೇಳಿಕೊಳ್ಳಲಾಗದೆ ಮನಸ್ಸಿನಲ್ಲೇ ಮುಚಿಟ್ಟು ಬಿಟ್ಟು ಕೊರಗುತ್ತಿರುತ್ತಾರೆ. ನನಗೆ ತಿಳಿದ ಮಹಿಳೆಯೊಬ್ಬಳು ಯಾವಾಗಲೂ ತನಗೆ ಈ ಆಸೆ ತನಗೆ ಆ ಅಸೆ ಎಂದು ದಿನವೂ ಹೊಸ ಹೊಸ ಆಸೆಗಳ ಪಟ್ಟಿಯನ್ನೇ ಗಂಡನ ಮುಂದಿಡುತ್ತಿದ್ದಳು. ಆಕೆಯ ಗಂಡ ಶ್ರೀಮಂತನಾಗಿದ್ದುದರಿಂದ ಅವಳ ಎಲ್ಲ ಆಸೆಗಳಿಗೆ ಬೆಲೆ ಕೊಡುತ್ತ ಅದನ್ನು ನೆರವೇರಿಸುತ್ತಿದ್ದ . ಆಕೆ ಒಂದು ದಿನ ಇದ್ದಕ್ಕಿದ್ದಂತೆ ಸತ್ತಾಗ ಅವನಿಗೆ ತಾನು ಅವಳ ಅಸೆಗಳನ್ನೆಲ್ಲ ಮೊದಲೇ ನೆರವೇರಿಸಿದ್ದು ಸಮಾಧಾನ ತಂದಿತು. ಆದರೆ ಆಕೆಯ ಅಂತ್ಯಕ್ರಿಯೆಗೆ ಬಂದಿದ್ದವರೊಬ್ಬರು ನನ್ನ ಬಳಿ,ಆಕೆ ಬೇಗನೆ ಸತ್ತಿದ್ದರಿಂದ ಆಯಪ್ಪನಿಗೆ ಒಳ್ಳೇದಾಯಿತು ಇಲ್ಲದಿದ್ದರೆ ದಿನಾ ಆಸೆಗಳ ಪಟ್ಟಿ ಹಿಡಿದು ಕೊನೆಗೆ ಅವನನ್ನೇ ಬೀದಿಗೆ ತಂದ್ಬಿಡುತ್ತಿದ್ದಳೋ ಏನೋ ಎಂದರು! ಮಕ್ಕಳು ಶಾಲೆಯಲ್ಲಿ ತಾವು ತಂದ ವಿಶೇಷವಾದ ತಿಂಡಿಯನ್ನು ಒಬ್ಬರೇ ತಿನ್ನುತ್ತಿದ್ದರೆ ಬೇರೆ ಮಕ್ಕಳು ನನಗೆ ಕೊಡದೆ ತಿನ್ತಿಯಾ, ನಾವು ಆಸೆ ಪಟ್ಟಿದ್ದರಿಂದ ನಿಂಗೆ ಹೊಟ್ಟೆನೋವು ಬರುತ್ತೆ ಎಂದು ಹೆದರಿಸಿ ಅವರಿಗೂ ಸಿಗುವಂತೆ ಮಾಡುತ್ತಾರೆ. ನಮ್ಮ ಬಳಿ ಇರುವ ವಸ್ತುವಿನ ಮೇಲೆ ಬೇರೆಯವರು ಆಸೆ ಪಟ್ಟರೆ ನಮಗೆ ನೆಮ್ಮದಿ ಇರುವುದಿಲ್ಲ. ಆಸೆಗಳು ಮನುಷ್ಯನಿಂದ ಮನುಷ್ಯನಿಗೆ ಭಿನ್ನವಾಗಿರುತ್ತವೆ. ಹಾಗೇ ಅದರ ಪ್ರಾಮುಖ್ಯತೆ ಕೂಡ. ಕೆಲವು ಆಸೆಗಳು ಹಣದ ಮೂಲಕವೇ ನೆರವೇರುತ್ತವೆ. ಹಾಗಾಗಿ ಬಡವನಿಗೆ ಅಂತಹ ಆಸೆಗಳು ಇದ್ದರೂ ಅವನು ಅದನ್ನು ಚಿವುಟಿ ಬಿಡುತ್ತಾನೆ. ಮಕ್ಕಳಿಗೂ ಅದನ್ನೇ ಮಾಡಲು ಹೇಳಿ ನಾವು ಬಡವರು, ನಮಗೆ ಅಂತಹ ಆಸೆಗಳೆಲ್ಲ ಇರಬಾರದು ಎಂದು ಮಕ್ಕಳ ಆಸೆಯನ್ನೂ ಚಿವುಟಿ ಹಾಕುತ್ತಾರೆ. ಆಸೆಗಳಿದ್ದರೂ ಅವುಗಳನ್ನೆಲ್ಲ ಈಡೇರಿಸಲೇಕೆಂಬ ನಿಯಮಗಳಿಲ್ಲವಾದ್ದರಿಂದ ಜನರು ಮಹತ್ವದ ಆಸೆಗಳತ್ತ ಮಾತ್ರ ತಮ್ಮ ಗಮನ ಹರಿಸುತ್ತಾರೆ. ಚಿಕ್ಕ ಪುಟ್ಟ ಆಸೆಗಳೇನಿದ್ದರೂ ಬೇಗನೆ ಈಡೇರುತ್ತವೆ. ಕೆಲವು ಆಸೆಗಳನ್ನು ತಮ್ಮಿಂದ ಈಡೇರಿಸಿ ಕೊಳ್ಳಲು ಸಾಧ್ಯವಿಲ್ಲದಿದ್ದರೂ ಆಸೆ ಮಾತ್ರ ಪಡುತ್ತಾರೆ. ಚಿಕ್ಕ ಮಕ್ಕಳ ಆಸೆಗೆ ಬಹು ಬೇಗ ಮನ್ನಣೆ ಸಿಗುತ್ತದೆ ಕಾರಣ ಅವರ ಆಸೆಗಳು ದೊಡ್ಡವರ ಆಸೆಗಳಂತೆ ದುಬಾರಿ ಆಸೆಗಳಲ್ಲ ಸುಲಭದಲ್ಲೇ ನೆರವೇರುವಂತಹವು.

ಆಸೆಗಳು ನೆರವೇರಲು ಯೋಗ್ಯತೆ ಕೂಡ ಬೇಕಾಗುತ್ತದೆ. ಆಸೆ ಪಡಲು ಬಡವ ಬಲ್ಲಿದ ಎಂಬ ಭೇದವಿಲ್ಲದ್ದರೂ ಜನರೆಲ್ಲ ಅವರ ಯೋಗ್ಯತೆಗೆ ತಕ್ಕಂತೆ ಆಸೆ ಪಡುತ್ತಾರೆ. ಯಾರು ಯಾವ ಆಸೆಗಳನ್ನು ಹೊಂದಿರುತ್ತಾರೆ, ಆ ಆಸೆಗಳು ಅವರಿಗೆ ಎಷ್ಟು ಮುಖ್ಯ. ಆಸೆಗಳು ಈಡೇರಲು ಇರಬೇಕಾದ ಪರಿಸ್ತಿತಿ ಇದೆಯೇ ಎಂಬುದರ ಮೇಲೆ ಆ ಆಸೆಗಳ ಈಡೇರುವಿಕೆ ನಿರ್ಧರಿತವಾಗುತ್ತದೆ . ಎಷ್ಟೇ ಧನಿಕರಾದರೂ, ಗಣ್ಯವಕ್ತಿಗಳಾದರೂ ಅವರ ಎಲ್ಲ ಆಸೆಗಳು ನೆರವೇರುವುದಿಲ್ಲ. ಎಲ್ಲರಿಗೂ ತಮ್ಮದೊಂದು ಆಸೆ ನೆರವೇರಲೇ ಇಲ್ಲ ಎಂದು ಕೊನೆಗಾಲದಲ್ಲಿ ಕೊರಗುತ್ತಿರುತ್ತಾರೆ. ತಾರುಣ್ಯದಲ್ಲಿ ಬದುಕಿನಲ್ಲಿ ಮೇಲೇರಬೇಕು, ಯಶಸ್ಸು ಗಳಿಸಬೇಕೆಂಬ ಹುಮ್ಮನಸ್ಸಿನಿಂದ ಅದಕ್ಕೆ ಅಡ್ಡಿಯಾಗಬಹುದಾದಂತಹ ಆಸೆಗಳನ್ನೆಲ್ಲ ಚಿವುಟಿ ಹಾಕಿ ಮುನ್ನಡೆಯುತ್ತಾರೆ. ತಮ್ಮಲ್ಲಿನ ಚಿತ್ರಕಲೆ, ಬರವಣಿಗೆ ಇತ್ಯಾದಿ ಕಲೆಗಳ ಪ್ರತಿಭೆಯನ್ನು ಮೂಲೆಗುಂಪಾಗಿಸಿ ಬಹಳಷ್ಟು ಹಣ ಮಾಡುವ ಆಸೆಯಿಂದ ಅಂತಹ ಕೆಲಸಗಳನ್ನೇ ಮಾಡಿ ಒದ್ದಾಡುತ್ತಿರುತ್ತಾರೆ. ಇನ್ನು ನಮ್ಮ ಕೈಗೆಟುಕದ ಆಸೆಗಳನ್ನು ಬರೀ ಕಣ್ಣಿಂದ ನೋಡಿ ತೀರಿಸಿಕೊಳ್ಳುತ್ತೇವೆ. ಶಾಪಿಂಗ್ ಹೋದಾಗ ಅತ್ಯಾಕರ್ಷಕ ಉಡುಪುಗಳನ್ನು ನೋಡಿ ಆಸೆ ಪಟ್ಟು ಕೊಳ್ಳುವ ಮನಸ್ಸಾಗಿ ಅದರ ಬೆಲೆ ನೋಡಿ ಕಣ್ಣು ಕತ್ತಲೆ ಬಂದು ಕೊಳ್ಳಲಾಗದೆ ಕ್ಷಣ ಕಾಲ ಅದನ್ನೇ ಮನಸ್ಸಿಗೆ ತೃಪ್ತಿಯಾಗುವಷ್ಟು ನೋಡಿ ವಾಪಾಸಾಗುತ್ತೇವೆ. ಅದಕ್ಕೇ ಹೆಂಗಸರು ಶಾಪಿಂಗ್ ಮಾಡಲು ಬಹಳ ಸಮಯ ತೆಗೆದುಕೊಳ್ಳುವುದು, ತಮ್ಮ ಕಣ್ಣಿಗೆ ಅತ್ಯಂತ ಸುಂದರವಾಗಿ ಕಾಣುವ, ಬೇರೆ ಯಾರ ಬಳಿಯೂ ಇರದಂತಹ ಉಡುಪನ್ನೇ ಕೊಳ್ಳಬೇಕು ಎಂದು ಬಯಸಿ ಅಂಗಡಿಗೆ ಹೋದರೆ ಕಣ್ಣಿಗೆ ತೃಪ್ತಿಯಾದರೆ ಪರ್ಸ್ ಗೆ ಹಿತವಾಗುವುದಿಲ್ಲ. ಪರ್ಸ್ ಗೆ ಹಿತವಾಗುವಂತಹುದು ಕಣ್ಣಿಗೆ ಹಿತವಾಗುವುದಿಲ್ಲ ಇಂತಹ ಹೊಯ್ದಾಟದಿಂದಾಗಿ ಬಹಳಷ್ಟು ಸಮಯ ಪರ್ಸಿಗೂ ಕಣ್ಣಿಗೂ ಸರಿಹೊಂದುವಂತಹ ಉಡುಪುಗಳನ್ನೇ ಹುಡುಕುತ್ತ ಕಳೆದು ಬಿಡುತ್ತದೆ. ಇದು ಮಾತ್ರ ಅವರ ಗಂಡಂದಿರಿಗೆ ಅರ್ಥವಾಗದೇ ಎಷ್ಟು ಹೊತ್ತು ಮಾಡ್ತಿಯಾ ಬೇಗನೆ ಯಾವುದಾದರೊಂದು ತೆಗೆದುಕೊಳ್ಳಬಾರದೇ ಎಂದು ರೇಗುತ್ತಾರೆ.

ಆಭರಣ ಅಂಗಡಿಗಳಲ್ಲೂ ಅಷ್ಟೇ, ಹೋಗುವುದು ಉಂಗುರ ತೆಗೆದುಕೊಳ್ಳಲು ಆದರೆ ಕಣ್ಣೆಲ್ಲ ಹೊಸ ಡಿಸೈನ್ ನದ್ದು ಯಾವ ಆಭರಣ ಬಂದಿದೆ ಎಂದು ಕಣ್ಣುಗಳೂ ಸುತ್ತಲೂ ತಿರುಗಿ ಎಕ್ಸ್ ರೇ ಮಾಡುತ್ತಾ ಹುಡುಕುತ್ತವೆ. ಮನಸ್ಸಿಗೊಪ್ಪುವಂತಹದ್ದು ಯಾವುದಾದರೂ ಕಂಡರೆ ಸಾಕು ಧಾವಿಸಿ ಅದನ್ನೇ ನೋಡುತ್ತಾ ತಾನು ಉಂಗುರ ಕೊಳ್ಳಲು ಬಂದಿದ್ದು ಎಂದು ಮರೆತುಹೋಗಿ ಅದನ್ನೇ ಮಂತ್ರಮುಗ್ಧ ವಾಗಿ ನೋಡುತ್ತಾ ನಮ್ಮನ್ನು ನಾವು ಮರೆಯುತ್ತೇವೆ. ಅದರ ಬೆಲೆ ಕೇಳಿದಾಗ ಮಾತ್ರ ಜರ್ರನೆ ವಾಸ್ತವ ಸ್ಥಿತಿಗೆ ಬಂದು ತಾನು ಉಂಗುರ ಕೊಳ್ಳಲು ಬಂದಿದ್ದು ನೆನಪಾಗಿ ಆ ಆಭರಣವನ್ನು ಮತ್ತೆ ಅಸೆ ಕಣ್ಣುಗಳಿಂದ ನೋಡುತ್ತಾ ಇದನ್ನು ಕೊಳ್ಳುವ ಭಾಗ್ಯ ಯಾರಿಗೆ ಸಿಗುತ್ತೋ ಏನೋ ಎಂದುಕೊಳ್ಳುತ್ತ ಅವರ ಬಗ್ಗೆ ಅಸಾಧ್ಯ ಹೊಟ್ಟೆಯುರಿ ಶುರುವಾಗುತ್ತದೆ. ಅದೇ ಮೂಡಿನಲ್ಲಿ ಹೊರಬಂದಾಗ ದೂರದಲ್ಲಿ ಪಾನಿ ಪುರಿ ಗಾಡಿ ಕಂಡು ಮನಸ್ಸಿನಲ್ಲಿ ಮತ್ತೊಂದು ಆಸೆ ಮೂಡುತ್ತದೆ. ಪಾನಿ ಪುರಿಯನ್ನಾದರೂ ಹೊಟ್ಟೆತುಂಬಾ ತಿನ್ನೋಣ ಎಂದು ಅತ್ತ ಧಾವಿಸಿ ಮನಸ್ಸೋ ಇಚ್ಛೆ ತಿಂದು ಆಭರಣ ಕೊಳ್ಳಲಾಗದೆ ಇದ್ದ ಅತ್ರಪ್ತಿಯನ್ನು ಪಾನಿಪುರಿ ತಿನ್ನುವ ಮೂಲಕ ಶಾಂತ ಗೊಳಿಸಿ ಮನೆಯತ್ತ ಹೆಜ್ಜೆ ಹಾಕುತ್ತೇವೆ.

 ಮನೆಯಲ್ಲಿ ಸಾಕಿದ ನಾಯಿ ಕೂಡ ಯಜಮಾನ ತನ್ನನ್ನು ತುಂಬ ಪ್ರೀತಿಸಬೇಕು ಎಂದು ಆಸೆ ಪಡುತ್ತದೆ. ಆದರೆ ಅದು ಪ್ರೀತಿಸಲು ಯೋಗ್ಯವಾಗಿದ್ದರೆ ಮಾತ್ರ ಯಜಮಾನ ಪ್ರೀತಿಸುತ್ತಾನೆ . ಅವನಿಗೂ ಆ ನಾಯಿಯ ಬಗ್ಗೆ ಆಸೆಗಳಿರುತ್ತವೆ. ತಮ್ಮ ನಾಯಿಯನ್ನು ಎಲ್ಲರೂ ನೋಡಿ ಮೆಚ್ಚಬೇಕು ಅದು ಏನಾದರೂ ಸಾಹಸ ಕಾರ್ಯ ಮಾಡಬೇಕು, ಬೇರೆ ನಾಯಿಗಳಂತೆ ಇರದೇ ವಿಶಿಷ್ಟವಾಗಿರಬೇಕು, ತನಗೆ ನಿಷ್ಠೆ ಯಿಂದ ಇರಬೇಕು ಇತ್ಯಾದಿ. ಮನುಷ್ಯನ ಕೆಲವು ಆಸೆಗಳು ಸುಲಭದಲ್ಲೇ ಈಡೇರಿದರೆ ಮತ್ತೆ ಕೆಲವು ಆಸೆಗಳನ್ನು ಪೂರೈಸಲು ಬಹಳ ಶ್ರಮ ಪಡಬೇಕಾಗುತ್ತದೆ. ಪೆನ್ನು ಬೇಕೆಂಬ ಆಸೆಯನ್ನು ಸುಲಭವಾಗಿ ಈಡೆರಿಸಿಕೊಳ್ಳಬಹುದು, ಆದರೆ ಚಿನ್ನದ ಪೆನ್ನು ಬೇಕೆಂದು ಆಸೆ ಪಟ್ಟರೆ ಅದಕ್ಕೆ ಶ್ರಮ ಪಡಬೇಕಾಗುತ್ತದೆ . ಇನ್ನು ಕೆಲವರು ತಮ್ಮ ಆಸೆ ಪೂರೈಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಾರೆ. ಆದರೆ ಆ ದಾರಿ ಅವನನ್ನು ಕೆಟ್ಟವನನ್ನಾಗಿ ಮಾಡುತ್ತದೆ. ಹಾಗಾಗಿ ಆಸೆ ಪೂರೈಸಿಕೊಂಡರೂ ಆ ಸಂತೋಷ ಮಾತ್ರ ಬಹಳ ಸಮಯವಿರುವುದಿಲ್ಲ.

ಇನ್ನು ವಯಸ್ಸಿಗೆ ತಕ್ಕ ಹಾಗೇಆಸೆಗಳೂ ಕೂಡ ಬೇರೆ ಬೇರೆಯಾಗಿರುತ್ತದೆ. ಪುಟ್ಟ ಮಗುವಿರುವಾಗ ಗೊಂಬೆಗಾಗಿ ಆಸೆ ಪಟ್ಟರೆ ಅದೇ ಮಗು ದೊಡ್ಡವನಾದ ಮೇಲೆ ಬೈಕ್ ಗಾಗಿ ಆಸೆ ಪಡುತ್ತಾನೆ. ದೊಡ್ಡವನಾದ ಮೇಲೆ ಅವನು ಗೊಂಬೆಗಾಗಿ ಆಸೆ ಪಟ್ಟರೆ ನಗೆಪಾಟಲಿಗೀಡಾಗಬೇಕಾಗುತ್ತದೆ. ಅವನೇ ಮುಂದೆ ಸಂಸಾರಿಯಾದ ಮೇಲೆ ಬೈಕ್, ಕಾರ್ ಗಿಂತ ಸ್ವಂತ ಮನೆ ಬೇಕೆಂಬ ಆಸೆ ಹೊಂದುತ್ತಾನೆ. ಹೀಗೆ ವಯಸ್ಸಿಗೆ ತಕ್ಕ ಹಾಗೇ ಆಸೆಗಳು ಅದರ ಪ್ರಾಮುಖ್ಯತೆಗಳೂ ಬದಲಾಗುತ್ತವೆ. ಗಂಡು ಮಕ್ಕಳ ಆಸೆಯನ್ನು ಅವರ ತಂದೆತಾಯಂದಿರು ಬಹಳ ಕಾಳಜಿ ವಹಿಸಿ ಪೂರೈಸಿದರೆ ಹೆಣ್ಣುಮಕ್ಕಳಿಗೆ ತಮ್ಮ ಆಸೆಗಳನ್ನೆಲ್ಲ ಹೇಳಿಕೊಳ್ಳಲೂ ಬಿಡುವುದಿಲ್ಲ . ಹೆಣ್ಣುಮಕ್ಕಳಿಗೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ದೇವರು ವಿಶಿಷ್ಟವಾದ ವರ ಕರುಣಿಸಿದ್ದಾನೆ. ಹೆಣ್ಣು ಗರ್ಭವತಿಯಾದಾಗ ಮನೆಯವರೆಲ್ಲರೂ ಅತ್ಯಂತ ಕಾಳಜಿ ವಹಿಸಿ ಅವಳ ಎಲ್ಲ ಆಸೆಗಳನ್ನು ಪೂರೈಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದು ಅವಳಿಗಾಗಿ ಅಲ್ಲದೆ ಅವಳ ಹೊಟ್ಟೆಯಲ್ಲಿರುವ ತಮ್ಮ ವಂಶೋದ್ಧಾರಕ ಕುಡಿಗಾಗಿ ಮಾಡಿದರೂ ಹೆಣ್ಣು ಮಾತ್ರ ಈ ಸಮಯವನ್ನು ತನ್ನ ಆಸೆಗಳನ್ನೆಲ್ಲ ಪೂರೈಸಲು ಮೀಸಲಿಡಬೇಕು! ಹಿಂದಿನ ಕಾಲದಲ್ಲಿ ಹೆಂಗಸರು ಮಗುವನ್ನು ಹೆತ್ತಮೇಲೆ ಬದುಕುಳಿಯುವುದೂ ಬಹಳ ಕಷ್ಟವಾಗಿತ್ತು. ಹೆರಿಗೆ ನೋವು ಅನುಭವಿಸಿ ಬದುಕುಳಿದರೆ ಅದು ಪುನರ್ಜನ್ಮ ಎನ್ನುತ್ತಿದ್ದರು. ಆ ಕಾರಣದಿಂದಲೂ ಅವಳ ಆಸೆಗಳನ್ನೆಲ್ಲ ಪೂರೈಸುತ್ತಿದ್ದರೋ ಏನೋ. ಇನ್ನು ಆಸೆಗಳಲ್ಲಿ ಸಹಜವಾದ ಆಸೆಗಳು ಅಸಹಜ ಆಸೆಗಳು ಎಂಬ ಹಣೆ ಪಟ್ಟಿ ಹೊತ್ತುಕೊಂಡು ಒಂದಕ್ಕೊಂದು ವಿರೋಧಿಯಾಗಿ ಕುಳಿತಿವೆ. ಮದುವೆಯಾಗುವ ಆಸೆ ಸಹಜವಾದ ಆಸೆಯಾದರೆ ಆಕಾಶದಲ್ಲಿ ಮದುವೆಯಾಗುವುದು ನೀರಿನಲ್ಲಿ ಮದುವೆಯಾಗುವುದು ಇತ್ಯಾದಿ ಅಸಹಜ ಆಸೆಗಳಾಗುತ್ತವೆ.

ಗಂಡಿನ ಆಸೆಗಳು ಪ್ರತ್ಯೇಕ ವಾಗಿದ್ದರೆ ಹೆಣ್ಣಿನ ಆಸೆಗಳೂ ಪ್ರತ್ಯೆಕವಾಗಿರುತ್ತವೆ. ಗಂಡು ಹೆಣ್ಣಿನಂತೆ ಇರಲು ಆಸೆ ಪಟ್ಟರೆ ಹೆಣ್ಣಿಗ ಎಂದು ಜನ ಗೇಲಿ ಮಾಡುತ್ತಾರೆ. ಅದೇ ರೀತಿ ಹೆಣ್ಣು ಗಂಡಿನಂತೆ ಇರಲು ಬಯಸಿದರೆ ಗಂಡು ಬೀರಿ ಎನ್ನುತ್ತಾರೆ. ಗಂಡಿನ ಆಸೆಗಳು ಹೆಚ್ಚಿನವು ಈಡೇರಿದರೆ ಹೆಣ್ಣು ಮಾತ್ರ ಮನೆಯವರನ್ನು ಗಂಡನನ್ನು ಅವಲಂಬಿಸಿರುತ್ತಾಳೆ. ಹೆಚ್ಚಿನ ಮಹಿಳೆಯರು ತಮ್ಮ ಆಸೆಗಳನ್ನೆಲ್ಲ ಬದಿಗಿಟ್ಟು ಗಂಡ ಮಕ್ಕಳ ಆಸೆಗಳನ್ನು ಪೂರೈಸುವುದರಲ್ಲೇ ತಲ್ಲೀನರಾಗಿ ಬಿಡುತ್ತಾರೆ. ಇನ್ನು ಕೆಲವು ಮಹಿಳೆಯರಿಗೆ ತಮ್ಮ ಆಸೆಗಳೇ ಪ್ರಾಧಾನ್ಯವಾಗಿ ತನ್ನ ಗಂಡನನ್ನೇ ಕೆಟ್ಟ ಕೆಲಸ ಮಾಡಲು ಪ್ರೇರೇಪಿಸುತ್ತಾರೆ. ಇದಕ್ಕೆ ಕೆಲವು ಗಂಡಸರೂ ಹೊರತಾಗಿಲ್ಲ. ಆದರೆ ಈಗೀಗ ಕಾಲ ಬದಲಾಗುತ್ತಿದೆ. ಹೆಣ್ಣು ವಿದ್ಯೆ ಕಲಿತು ಉದ್ಯೋಗ ಮಾಡಿ ಬರುವ ಸಂಪಾದನೆಯಿಂದ ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಶಕ್ತಳಾಗಿದ್ದಾಳೆ. ಸಣ್ಣ ಪುಟ್ಟ ಆಸೆಗಳು ಅಷ್ಟೇನೂ ಮಹತ್ವ ಪಡೆಯದೆ ಅಲ್ಲೇ ಕರಗಿ ಹೋಗುತ್ತವೆ. ಆದ್ರೆ ಮಹತ್ವ ಪಡೆದುಕೊಂಡ ದೊಡ್ಡ ಆಸೆಗಳು ಮಾತ್ರ ಆ ವ್ಯಕ್ತಿಯನ್ನು ಪ್ರೇರೇಪಿಸುತ್ತ ಜೀವನದಲ್ಲಿ ಮುನ್ನುಗ್ಗಿಸುತ್ತವೆ. ಆಸೆಗಳಿಂದಾಗಿಯೇ ಈ ಜಗತ್ತು ಇಷ್ಟೊಂದು ಮುಂದುವರೆದಿದೆ. ಮನುಷ್ಯನಿಗೆ ಆಸೆಯೇ ಇಲ್ಲದಿದ್ದರೆ ಈ ಪ್ರಪಂಚವನ್ನು ಊಹಿಸಲು ಅಸಾಧ್ಯ. ಮನುಷ್ಯ ಏನನ್ನಾದರೂ ಸಾಧಿಸಬೇಕಾದರೆ ಆಸೆಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಈ ಆಸೆಗಳಿಂದಲೇ ಮಾನವ ಚಂದ್ರಲೋಕಕ್ಕೆ ಕಾಲಿಡಲು ಸಾಧ್ಯವಾಗಿದ್ದು. ಅತ್ಯಾಧುನಿಕ ತಂತ್ರಜ್ಞಾನಗಳ ಆವಿಷ್ಕಾರ ಮಾಡಿದ್ದು. ಆಸೆಗಳ ಮೂಲಕವೇ ಪ್ರಗತಿ ಸಾಧ್ಯ.

ಜೈಲಿನಲ್ಲಿ ಮರಣದಂಡನೆಗೆ ಗುರಿಯಾದ ಅಪರಾಧಿಗೆ ಗಲ್ಲು ಶಿಕ್ಷೆಯಾಗುವ ಮೊದಲು ಅವನ ಕೊನೆಯಾಸೆ ಏನೆಂದು ಕೇಳಿ ಅದನ್ನು ಪೂರೈಸಲು ಪ್ರಯತ್ನಿಸುತ್ತಾರೆ. ಮರಣ ಶಯ್ಯೆಯಲ್ಲಿರುವ ರೋಗಿಗಳ ಆಸೆಗಳನ್ನು ಅವರ ಮನೆಯವರು ಸಾಧ್ಯವಾದಷ್ಟು ನೆರವೇರಿಸಲು ಪ್ರಯತ್ನಿಸುತ್ತಾರೆ. ಆಸೆಗಳು ಈಡೇರದೆ ಸತ್ತರೆ ಅವನು ಪ್ರೇತವಾಗಿ ಬಿಡುತ್ತಾನೆ ಎಂಬ ನಂಬಿಕೆ ಅವರ ಆಸೆಗಳನ್ನು ಈಡೇರಿಸಲು ಸಹಾಯ ಮಾಡುತ್ತವೆ. ಆದರೆ ನಿಜವಾಗಿಯೂ ಎಲ್ಲರ ಎಲ್ಲ ಆಸೆಗಳು ನೆರವೇರುತ್ತದೆಯೇ, ಯಾಕೆಂದರೆ ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ . ಅವು ರಕ್ತ ಬೀಜಾಸುರನಂತೆ ಮತ್ತೆ ಮತ್ತೆ ಹುಟ್ಟಿ ಬರುತ್ತವೆ. ಒಂದು ಆಸೆ ಈಡೇರಿದರೆ ಇನ್ನೊಂದು ಆಸೆ ಧುತ್ತೆಂದು ಎದುರು ಬಂದು ಕಾಡುತ್ತದೆ. ಕಡಿಮೆ ಹಣವಿರುವ ಮನುಷ್ಯನಿಗಿಂತ ಶ್ರೀಮಂತ ಮನುಷ್ಯನ ಬಹಳಷ್ಟು ಆಸೆಗಳು ಸುಲಭದಲ್ಲೇ ನೆರವೇರುವುವು. ಹಾಗಾಗಿ ದುಡ್ಡು ಮನುಷ್ಯನಿಗೆ ತನ್ನ ಆಸೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎನ್ನಬಹುದು. ಆಸೆ ನೆರವೇರದೇ ಇದ್ದರೂ ದುಃಖ. ಅತಿಯಾದ ಆಸೆಗಳಿದ್ದರೆ ಅವನ್ನೆಲ್ಲ ಈಡೇರಿಸಲು ಆಗದೆ ಒದ್ದಾಟ. ಇನ್ನು ಆಸೆಗಳನ್ನು ಈಡೇರಿಸಲು ಕೆಲವೊಮ್ಮೆ ಮನುಷ್ಯ ನೀಚನಾಗಿ ಬಿಡುತ್ತಾನೆ. ಮನುಷ್ಯನಿಗೆ ಆಸೆಗಳು ಇರಬೇಕೆ ಹೊರತು ದುರಾಸೆಗಳಿರಬಾರದು. ಅಂತಹ ಆಸೆಗಳನ್ನು ಪೂರೈಸಲು ಅಡ್ಡದಾರಿ ಹಿಡಿದು ಕೆಟ್ಟ ಕೆಲಸ ಮಾಡಿ ಅಪರಾಧಿಯಾಗಿ ಜೈಲು ಸೇರುತ್ತಾನೆ.

ಒಂದೇ ವಸ್ತುವಿಗಾಗಿ ಹಲವು ಜನರು ಆಸೆ ಪಟ್ಟರೆ ಅಲ್ಲಿ ಜಗಳ ವೆಮನಸ್ಯ ಹಿಂಸೆ ಕಿತ್ತಾಟ ವಂಚನೆ ಮೋಸ ಎಲ್ಲ ನಡೆದು ಯಾರು ಬಲಿಷ್ಠನೋ ಅವನಿಗೆ ಆ ವಸ್ತು ಸಿಕ್ಕಿ ಅವನ ಆಸೆ ಈಡೇರುತ್ತದೆ. ಸ್ಪರ್ಧೆಗಳಲ್ಲಿ ತನೆಗೆ ಮೊದಲ ಬಹುಮಾನ ಸಿಗಬೇಕು ಎಂದುಪ್ರತಿಯೊಬ್ಬ ಸ್ಪರ್ಧಾಳುವಿಗೆ ಆಸೆ ಇರುತ್ತದೆ . ರಿಯಾಲಿಟಿ ಷೋ ಗಳಲ್ಲಿ, ರಾಜಕೀಯದಲ್ಲಿ ಬಂದ ಸ್ಪರ್ಧಿಗಳು ತಾವು ಗೆಲ್ಲಬೇಕು ಎಂಬ ಹುನ್ನಾರದಲ್ಲಿ ಏನೇನೋ ಷಡ್ಯಂತ್ರ ಕುತಂತ್ರ ಯುಕ್ತಿ ಎಲ್ಲವನ್ನೂ ಪ್ರಯೋಗಿಸಿ ಗೆಲ್ಲಲು ಪ್ರಯತ್ನಿಸುತ್ತಾರೆ. ಮನುಷ್ಯ ಕೆಟ್ಟವನಾದಷ್ಟೂ ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಧಾರ್ಷ್ಟಿಕತನ ತೋರಿ ಬಹುತೇಕ ಆಸೆಗಳನ್ನು ಈಡೇ ರಿಸಿಕೊಳ್ಳುತ್ತಾನೆ. ಮೋಸ, ವಂಚನೆ, ಕೊಲೆ ಇತ್ಯಾದಿಗಳೂ ಮನುಷ್ಯನ ಆಸೆಗಳ ಕಾರಣದಿಂದಲೇ ನಡೆಯುತ್ತವೆ. ಬೇರೆಯವರ ದುಡ್ಡು , ಮನೆ, ಆಸ್ತಿ ಭೂಮಿ ಇತ್ಯಾದಿಗಳನ್ನು ತಮ್ಮದಾಗಿಸಲು ಏನು ಮಾಡಲೂ ಸಿದ್ಧರಾಗಿ ಕ್ರೌರ್ಯದ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿ ಕೊಳ್ಳುತ್ತಾರೆ. ಆದರೆ ಅಂತಹ ಆಸೆಗಳು ನೆರವೇರಿದರೂ ಅವರು ಅದನ್ನು ಅನುಭವಿಸುವ ಯೋಗ್ಯತೆಯನ್ನು ಕಳೆದುಕೊಂಡು ಬಿಡುತ್ತಾರೆ. ಆಸೆಗಳು ಮಿತಿಯಲ್ಲಿದ್ದರೆ ಚೆಂದ. ಅತಿಯಾದ ಆಸೆ ಗತಿ ಕೆಡಿಸಿತು ಎಂಬ ನಾಣ್ನುಡಿ ಸುಳ್ಳಲ್ಲ. ಅಸೆಗಳಿದ್ದುದರಿಂದಲೇ ಪ್ರಪಂಚ, ಅದರಲ್ಲಿನ ಜನ ಇಷ್ಟೊಂದು ಪ್ರಗತಿ ಹೊಂದಿದ್ದಾರೆ. ಆದರೆ ಅತಿಯಾದ ಆಸೆಗಳೇ ಮಾನವನಿಗೆ ಮುಳುವಾಗಿ ಬಿಡುತ್ತವೆ ಎಂಬುದನ್ನು ನಾವು ಮರೆಯಬಾರದು. ಅತಿ ಆಸೆಯಿಂದ ಇದ್ದ ಕಾಡುಗಳನ್ನೆಲ್ಲ ಕಡಿದು ಕಟ್ಟಡ ಗಳನ್ನು ಕಟ್ಟಿ ಕೆಟ್ಟಹೊಗೆ ಉಗುಳುವ ಕಾರ್ಖಾನೆಗಳನ್ನು ಸ್ಥಾಪಿಸಿ ಪರಿಸರ ಮಾಲಿನ್ಯ ಮಾಡಿದರೆ ಅನುಭವಿಸುವುದು ನಾವೇ. ಆದ್ದರಿಂದ ನಮ್ಮ ಆಸೆಗಳೆಲ್ಲ ಹಿತವಾಗಿ, ಮಿತವಾಗಿರಲಿ. ಯಾರಿಗೂ ಯಾವುದಕ್ಕೂ ಹಾನಿಯಾಗದಂತಹ ಆಸೆಗಳನ್ನೇ ನೆರವೇರಿಸಿಕೊಳ್ಳಲು ಪ್ರಯತ್ನ ಪಡೋಣ.

ನಾನಂತೂ ಆಸೆಗಳ ಬಗ್ಗೆ ಪ್ರಬಂಧ ಬರೆಯಬೇಕೆಂಬ ನನ್ನ ಆಸೆಯನ್ನು ಪೂರೈಸಿಯೇ ಬಿಟ್ಟೆ!!

ಯಾರ ಪಯಣ ಎಲ್ಲಿಗೋ ?

ಕುಂದಾಪುರದಲ್ಲಿ ಹೆಂಡತಿ ಮಕ್ಕಳನ್ನು ಬೀಳ್ಕೊಟ್ಟು ನಾನು ಬೆಂಗಳೂರಿನ ಬಸ್ಸು ಹತ್ತುವಾಗ ರಾತ್ರಿ ಸುಮಾರು ಎಂಟು ಗಂಟೆಯಾಗಿತ್ತು. ಬಸ್ಸು ಮುಂದೆ ಹೋಗುತ್ತಿದ್ದಂತೆ ಬಸ್ಸಿನ ಶಬ್ದ ಜೋಗುಳ ಹಾಡಿದಂತಾಗಿ ನಂಗೆ ನಿದ್ದೆ ಆವರಿಸಿತು. ನಾನು ಹದಿನೈದು ದಿನಗಳಿಗೊಮ್ಮೆ  ಊರಿಗೆ ಬರುತ್ತಿದ್ದುದರಿಂದ ಬಸ್ ಪ್ರಯಾಣ ನನಗೆ ಹೊಸತೇನಾಗಿರಲಿಲ್ಲ. ಬಸ್ ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದುವರೆಯುತ್ತಿತ್ತು. ಜನರು ಹತ್ತುವಾಗ ದಡಬಡ ಶಬ್ದ, ಅವರನ್ನು ಬೀಳ್ಕೊಡಲು ಬಂದ ಜನರ ಮಾತುಗಳು ಎಲ್ಲವೂ ನನಗೆ ಕೇಳಿಸುತ್ತಿದ್ದರೂ ನಿದ್ದೆಯ ಮಂಪರಿನಲ್ಲಿದ್ದ ನಾನು ಕಣ್ಣು ತೆರೆಯದೇ ಕುಳಿತಿದ್ದೆ. ಬಸ್ಸು ಮಂಗಳೂರಿಗೆ ಬಂದು ನಿಂತಾಗ ಬಹಳಷ್ಟು ಜನ ಹತ್ತಿದರು. ಖಾಲಿಯಾಗಿದ್ದ ಬಸ್ಸು ತುಂಬಿಕೊಂಡರೂ ನನ್ನ ಬಳಿ ಇದ್ದ ಸೀಟು ಮಾತ್ರ ಖಾಲಿಯಾಗಿತ್ತು. ಅದನ್ನು ನೋಡಿ ಇನ್ನು ಯಾರೂ ಬರಲಿಕ್ಕಿಲ್ಲ ಎಂದುಕೊಂಡು ಖುಷಿಯಾಗಿ ನನ್ನ ಮತ್ತು ಆ ಸೀಟಿನ ನಡುವೆ ಕೈ ಇಡಲು ಇದ್ದ ಹಿಡಿಯನ್ನು ಮೇಲೆತ್ತಿ ನಾನು ರಾಜನಂತೆ ಎರಡೂ ಸೀಟಿನಲ್ಲಿ ನನ್ನ ದೇಹವನ್ನು ಹರಡಿಕೊಂಡು ಇನ್ನಷ್ಟು ಆರಾಮಾವಾಗಿ ಮಲಗಿಕೊಂಡೆ. ತಕ್ಷಣ ಗಾಢವಾದ ನಿದ್ದೆ ಆವರಿಸಿತು. ಸುಮಾರು ದೂರ ಬಂದ ಬಳಿಕ ಬಸ್ಸು ಏಕಾಏಕಿ ನಿಂತಿತು. ಬ್ರೇಕ್ ಹಾಕಿದ ಶಬ್ದಕ್ಕೆ ಎಚ್ಚರವಾಗಿ ಏನಾಯಿತಪ್ಪ ಎಂದು ನಾವೆಲ್ಲ ಆತಂಕ ಪಡುತ್ತಿರುವಾಗ ಒಬ್ಬ ಧಡೂತಿ ದೇಹದ ಮನುಷ್ಯ ನಮ್ಮ ಬಸ್ಸನ್ನೇರಿ ನನ್ನ ಸೀಟಿನ ಬಳಿಯೇ ಧಾವಿಸಿ ಬರುತ್ತಿರುವುದನ್ನು ಕಂಡು ಅಬ್ಬ! ಇವನೊಬ್ಬನಿಗೇ ಎರಡು ಸೀಟು ಬೇಕಾದೀತು, ನನ್ನ ಸೀಟನ್ನೂ ಇವನು ಆವರಿಸಿಕೊಂಡರೆ ನಾನು ಮುದ್ದೆಯಾಗಿ ಕುಳಿತು ಉಸಿರುಕಟ್ಟಿ ಸತ್ತೇ ಹೋಗಿಬಿಡುತ್ತೇನೆ ಎಂದು ಭಯವಾಗಿ ತಕ್ಷಣ ಕೈ ಹಿಡಿಯನ್ನು ಅದರ ಸ್ವಸ್ಥಾನಕ್ಕೆ ಸೇರಿಸಿ ನನ್ನ ಸೀಟಿನಲ್ಲೇ ಆದಷ್ಟೂ ಆರಾಮಾವಾಗಿ ಕುಳಿತು ಕಣ್ಣು ಮುಚ್ಚಿಕೊಂಡು ಆತನೇನಾದರೂ ಕೈ ಹಿಡಿಯನ್ನು ಎತ್ತಿದರೆ ಎಂದು ಅದರ ಮೇಲೆ ಕೈ ಇಟ್ಟು ನಿದ್ದೆ ಬಂದವನಂತೆ ನಟಿಸಿದೆ. ಆತನಿಗೆ ಇಂತಹ ಅನುಭವಗಳು ಸಾಕಷ್ಟು ಬಾರಿ ಆಗಿದ್ದಿರಬೇಕು ಎನ್ನುವಂತೆ ತನ್ನ ಸೀಟಿನಲ್ಲಿ ಧಡೂತಿ ಶರೀರವನ್ನು ತುರುಕಿಸುತ್ತ ಕಷ್ಟ ಪಟ್ಟು ಕುಳಿತ. ಅವನು ಕುಳಿತೊಡನೆ ಇಡೀ ಬಸ್ಸು ಅವನ ಭಾರಕ್ಕೆ ಸ್ವಲ್ಪ ಅಲುಗಾಡಿತು.ಅದರೊಡನೆ ಬೆವರಿನ ವಾಸನೆಯೂ ನನ್ನ ಮೂಗಿಗೆ ಬಡಿದು ಮೂಗು ಮುಚ್ಚಿಕೊಳ್ಳುವಂತಾಯಿತು. ಅವನ ಮೈ ಎಲ್ಲ ಬೆವರಿನಿಂದ ಒದ್ದೆಯಾಗಿತ್ತು, ಬಹುಶಃ ಬರುವುದು ಲೇಟಾಗಿ ಓಡಿ ಬಂದಿರಬೇಕು. ನನಗೆ ವಾಸನೆ ತಡೆಯಲಾಗದೆ ವಾಂತಿ ಬಂದಂತಾಗಿ ಎದ್ದು ಕಿಟಕಿಯನ್ನು ಪೂರ್ತಿಯಾಗಿ ತೆರೆದೆ. ಹೊರಗಿನಿಂದ ತಂಗಾಳಿ ಬೀಸಿದಾಗ ಹಾಯೆನಿಸಿತು.

ಅಷ್ಟರಲ್ಲಿ ಹಿಂದಿನ ಸೀಟಿನವ ನಾನು ಕಿಟಕಿಯನ್ನು ಪೂರ್ತಿಯಾಗಿ ತೆರೆದಿದ್ದುದರಿಂದ ಅವನ ಕಿಟಕಿ ಮುಚ್ಚಿಹೋಗಿದ್ದಕ್ಕಾಗಿ ಗೊಣಗಾಡುತ್ತ ಕಿಟಕಿಯ ಗಾಜನ್ನು ಸರಿಸಲು ನೋಡಿದ. ಆಗ ನಾನು ಐದೇ ನಿಮಿಷ, ಮತ್ತೆ ನೀವು ಕಿಟಕಿಯ ಗಾಜನ್ನು ಸರಿಸಬಹುದು ನನಗೆ ವಾಂತಿ ಬಂದಂತೆ ಆಗುತ್ತಿದೆ ಎಂದಾಗ ಅವನು ಮುಖ ಸಿಂಡರಿಸಿಕೊಂಡು ತಾನು ಗಾಜು ಸರಿಸಿದರೆ ವಾಂತಿ ತನ್ನ ಮೇಲೆ ಸಿಡಿಯಬಹುದು ಎಂದು ಮತ್ತೆ ಗಾಜನ್ನು ಸರಿಸಲು ಹೋಗಲಿಲ್ಲ. ನಾನು ಆದಷ್ಟೂ ನನ್ನ ಮುಖವನ್ನು ಕಿಟಕಿಯ ಹೊರಗೆ ಹಾಕಿ ತಂಗಾಳಿಯನ್ನು ಆಸ್ವಾದಿಸುತ್ತ ಕುಳಿತೆ. ಒಮ್ಮೆ ತಿರುಗಿ ನೋಡಿದಾಗ ಆ ಧಡೂತಿ ಮನುಷ್ಯ ತನ್ನ ಕರ್ಚೀಫು ತೆಗೆದು ತನ್ನ ಮೈಯೆಲ್ಲಾ ಒರೆಸಿ ನಂತರ ಅದನ್ನು ಹಿಂಡಿ ಹಾಕಿ ಎದುರಿನ ಸೀಟಿನ ಮೇಲೆ ಒಣಗಿಸಲು ಹಾಕಿದ. ಅಬ್ಬಾ! ಎಂತಹ ಕೊಳಕು ಮನುಷ್ಯ, ಇಂತಹವನ ಜೊತೆ ನಾನು ಇಡೀ ರಾತ್ರಿ ಪ್ರಯಾಣ ಮಾಡಬೇಕಲ್ಲಪ್ಪ ಎಲ್ಲ ನನ್ನ ಗ್ರಹಚಾರ ಎಂದುಕೊಳ್ಳುತ್ತ ನನ್ನ ಮೋರೆಯನ್ನು ಮತ್ತೆ ಕಿಟಕಿಯತ್ತ ತಿರುಗಿಸಿದೆ. ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ತಂಗಾಳಿಗೆ ಬೆವರಿನ ವಾಸನೆಯೂ ಹೋಗಿ ಹಾಯಾದಂತಾಗಿ ಹಿಂದಿನ ಸೀಟಿನವನಿಗೆ ಕಿಟಕಿಯ ಗಾಜು ಸರಿಸಿ ಕೊಟ್ಟೆ. ಆದರೆ ಅವನು ನಾನು ವಾಂತಿ ಮಾಡಿದರೆ ಎಂದು ಭಯದಿಂದ ಕಿಟಕಿಯನ್ನು ಮುಚ್ಚಿಬಿಟ್ಟ ! ನನಗೆ ಸಂತೋಷವಾಗಿ ತಂಗಾಳಿಗೆ ಮೈಯೊಡ್ಡಿ ಮತ್ತೆ ನಿದ್ದೆ ಹೋದೆ. ಸುಮಾರು ಹೊತ್ತಿನ ಬಳಿಕ ಆ ಧಡೂತಿ ಮನುಷ್ಯ ನನ್ನನ್ನು ಎಬ್ಬಿಸಿ ತನಗೆ ವಾಂತಿ ಬರುತ್ತಿದೆ ಆದ್ದರಿಂದ ನನ್ನ ಸೀಟನ್ನು ಅವನಿಗೆ ಬಿಟ್ಟುಕೊಡಬೇಕೆಂದು ಹೇಳಿದ. ಆದರೆ ನನಗೆ ಸೀಟನ್ನು ಬಿಟ್ಟುಕೊಡಲು ಸುತರಾಂ ಇಷ್ಟವಿರಲಿಲ್ಲ, ಅಷ್ಟರಲ್ಲಿ ಬಸ್ಸು ನಿಂತಿದ್ದರಿಂದ ಆ ಧಡೂತಿ ಮನುಷ್ಯ ಎದ್ದು ಕೆಳಗಿಳಿದು ಹೋದ. ನಾನು ಅಬ್ಬಾ ಎಂದು ನಿಟ್ಟುಸಿರು ಬಿಟ್ಟೆ. ಅವನ ಹಿಂದೆ ಇನ್ನೂ ಕೆಲವರು ಇಳಿದರು. ಬಸ್ಸು ಮತ್ತೆ ಹೊರಡುತ್ತಿದ್ದಂತೆ ಉಳಿದವರೊಂದಿಗೆ ಆತ ಮತ್ತೆ ಬಸ್ಸನ್ನೇರಿದ. ಬಸ್ಸು ಮುಂದೆ ಹೋಗುತ್ತಿದ್ದಂತೆ ನನಗೆ ನಿದ್ದೆ ಆವರಿಸಿತು.

ಬಸ್ಸು ಘಾಟಿಯಲ್ಲಿ ಹೋಗುತ್ತಿದ್ದಂತೆ ತಿರುವಿನಲ್ಲಿ ಆತ ನಿದ್ದೆಯಲ್ಲೇ ನನ್ನ ಕಡೆ ವಾಲಿದ. ಅವನ ತಲೆಗೆ ಹಾಕಿದ ಎಣ್ಣೆಯ ಘಾಟು ನನ್ನನ್ನು ಎಚ್ಚರಿಸಿ ನನಗೆ ಅವನ ಮೈ ಮುಟ್ಟಲು ಅಸಹ್ಯವೆನಿಸಿ ರೀ, ಸ್ವಲ್ಪ ಸರಿಯಾಗಿ ಕೂತ್ಕೊಳ್ರೀ ಎಂದೆ. ಆದರೆ ಆತ ಬಹಳ ಗಾಢ ನಿದ್ದೆಯಲ್ಲಿದ್ದಂತೆ ಕಾಣಿಸಿತು. ಅದಕ್ಕೆ ನಾನು ನನ್ನ ಬೆರಳಿನಿಂದ ಅವನ ತಲೆಯನ್ನು ಸರಿಸಲು ನೋಡಿದೆ. ಆದರೆ ನನ್ನ ಬೆರಳು ಮುರಿದಂತಾಗಿ ನೋವಾಯಿತೇ ಹೊರತು ಅವನ ತಲೆ ನನ್ನ ಭುಜದ ಮೇಲಿನಿಂದ ಒಂದಿಂಚೂ ಅಲುಗಾಡಲಿಲ್ಲ. ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದುಕೊಳ್ಳುತ್ತ ನಾನು ಸ್ವಲ್ಪ ಮುಂದಕ್ಕೆ ಜರುಗಿ ಕುಳಿತೆ. ಆಗ ಅವನು ಪೂರ್ತಿಯಾಗಿ ನನ್ನ ಸೀಟಿನ ಮೇಲೆ ವಾಲಿಬಿಟ್ಟ! ಅಷ್ಟಾದರೂ ಅವನಿಗೆ ಎಚ್ಚರಿಕೆಯಾಗದ್ದು ನೋಡಿ ನನಗೆ ಆಶ್ಚರ್ಯ ವಾಯಿತು! ಛೆ! ಎಂತಹ ನಿದ್ದೆನಪ್ಪ ಇವನಿಗೆ ಎಂದುಕೊಂಡು ಅವನನ್ನು ನಾನೇ ಎತ್ತಿ ಆ ಕಡೆ ಸರಿಸಿದೆ. ಆಗ ಆತ ಇನ್ನೊಂದು ಕಡೆ ವಾಲಿ ಬಿದ್ದ. ಏನಾದರಾಗಲಿ ನನ್ನ ಕಡೆ ವಾಲದಿದ್ದರೆ ಸರಿ ಎಂದುಕೊಂಡು ಮತ್ತೆ ಕಣ್ಣು ಮುಚ್ಚಿದೆ. ಮುಂದಿನ ತಿರುವಿನಲ್ಲಿ ಮತ್ತೆ ಅವನು ನನ್ನ ಕಡೆ ವಾಲಿದಾಗ ಮತ್ತೆ ಅವನನ್ನು ಆ ಕಡೆ ಸರಿಸಿದೆ. ಇನ್ನು ಘಾಟಿ ಮುಗಿಯುವವರೆಗೂ ಇದು ಪುನರಾವರ್ತನೆ ಯಾಗುತ್ತದೆ ಎಂದುಕೊಳ್ಳುತ್ತ ಮೇಲಿಟ್ಟ ನನ್ನ ಬ್ಯಾಗನ್ನು ತೆಗೆದು ನನ್ನ ಮತ್ತು ಆತನ ನಡುವೆ  ಅಡ್ಡವಾಗಿ ಇಟ್ಟು ಆತ ನನ್ನ ಕಡೆ ವಾಲದ ಹಾಗೆ ಮಾಡಿದೆ. ನನ್ನ ಉಪಾಯ ಫಲಿಸಿ ಆತ ಇನ್ನೊಂದು ಕಡೆಗೇ ವಾಲಿದಾಗ ನಿರಾಳವಾಗಿ ಮಲಗಿದೆ. ಇಷ್ಟಾದರೂ ಅವನಿಗೆ ಒಂದು ಸಲವೂ ಎಚ್ಚರವಾಗಿಲ್ಲದ್ದು ನೋಡಿ ಪರಮಾಶ್ಚರ್ಯ ವಾಯಿತು. ಎಂಥಾ ಜನರಿದ್ದಾರಪ್ಪ ಈ ಲೋಕದಲ್ಲಿ ಎಂದುಕೊಂಡು ಮತ್ತೆ ಕಣ್ಣ್ಮುಚ್ಚಿ ನಿದ್ರಿಸಲು ನೋಡಿದೆ. ಹಾಸನ ಬಂದಾಗ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದರೆ ಆತ ಆ ಕಡೆಗೆ ವಾಲಿದ ಸ್ಥಿತಿಯಲ್ಲೇ ಇದ್ದ. ಬಸ್ಸು ನಿಂತಾಗ ಜನರಿಗೆ ಇಳಿದು ಹೋಗಲು ದಾರಿಯಲ್ಲಿ ಅವನು ಅಡ್ಡಲಾಗಿ ವಾಲಿದ್ದರಿಂದ ಆಗದೆ ಅವರೆಲ್ಲ ಪಿರಿಪಿರಿ ಮಾಡುತ್ತಾ ಆತನನ್ನು ನೂಕಿಕೊಂಡೇ ಹೋಗತೊಡಗಿದರು. ಇಷ್ಟಾದರೂ ಅವನಿಗೆ ಎಚ್ಚರವಾಗದ್ದು ನೋಡಿ ಸಂಶಯವಾಗಿ ಒಬ್ಬ ಪ್ರಯಾಣಿಕ  ಆ ಧಡೂತಿ ಮನುಷ್ಯನನ್ನು ಎತ್ತಿ ಸರಿಸಲು ಹೋದಾಗ ಅವನ ಮೈ ತಣ್ಣಗೆ ಅನಿಸಿ ಅವನ ನಾಡಿ ಹಿಡಿದು ನೋಡಿ ಬೆಚ್ಚಿ ಬಿದ್ದ. ತಕ್ಷಣವೇ ನನಗೆ ಆ ಮನುಷ್ಯ ಬದುಕಿಲ್ಲವೇನೋ ಎಂದು ಅನಿಸಿ ನಾನೂ ಬೆಚ್ಚಿ ಬಿದ್ದೆ. ಸುದ್ದಿ ತಿಳಿದು ತಕ್ಷಣವೇ ಬಸ್ಸಿನ ಕಂಡಕ್ಟರ್ ಡ್ರೈವರ್ ಎಲ್ಲ ಅವನನ್ನು ನೋಡಲು ಬಂದು ಆ ಮನುಷ್ಯ ಸತ್ತಿರುವುದನ್ನು ಖಾತ್ರಿ ಮಾಡಿಕೊಂಡರು. ನಾನು ಹೌಹಾರಿ ಬಿಟ್ಟೆ. ಕೆಲವರಂತೂ ನಾನೇನಾದರೂ ಅವನ ಕೊಲೆ ಮಾಡಿರಬಹುದೇ ಎಂದು ನನ್ನ ಕಡೆ ಸಂಶಯದಿಂದ ನೋಡುತ್ತಿದ್ದರು. ಆಯ್ಯೋ ದೇವರೇ ಈ ಮನುಷ್ಯ ಯಾವಾಗ ಸತ್ತ, ನಾನು ಇಷ್ತೊತ್ತಿನಿಂದ ಹೆಣದ ಜೊತೆ ಕುಳಿತು ಪ್ರಯಾಣ ಮಾಡುತ್ತಿದ್ದೆನೆ?  ಆ ಮನುಷ್ಯನನ್ನು ಎಷ್ಟು ಎಬ್ಬಿಸಿದರೂ ಎಚ್ಚರವಾಗದೇ ಇದ್ದಾಗ ತನಗೇಕೆ ಸಂಶಯ ಬರಲಿಲ್ಲ? ಯಾವಾಗ ಸತ್ತಿದ್ದಾನೋ ಏನೋ, ಎಂಥ ಕರ್ಮ ನನ್ನದು, ಏನು ಪಾಪ ಮಾಡಿದ್ದೇನೋ ಏನೋ ಅದಕ್ಕೆ ಇವತ್ತು ಹೆಣದ ಜೊತೆ ಪ್ರಯಾಣ ಮಾಡಬೇಕಾಯಿತು ಎಂದು ಹಣೆಗೆ ಬಡಿದುಕೊಂಡು ಕಂಡಕ್ಟರ್ ಬಳಿ ನನಗೆ ಬೇರೆ ಸೀಟು ಕೊಡುವಂತೆ ಹೇಳಿದೆ. ಆದರೆ ಬೇರೆ ಯಾವ ಸೀಟೂ ಖಾಲಿಯಿರಲಿಲ್ಲ, ಕೊನೆಗೆ ಡ್ರೈವರ್ ಬಳಿ ಇದ್ದ ಸೀಟನ್ನಾದರೂ ನನಗೆ ಕೊಡಿ ಎಂದೆ. ಅವರಿಗೆ ನನ್ನ ಪರಿಚಯವಿದ್ದುದರಿಂದ ನನಗೆ ಆ ಸೀಟನ್ನು ಬಿಟ್ಟುಕೊಟ್ಟು ಬಸ್ಸನ್ನು ಪೋಲೀಸ್ ಸ್ಟೇಷನ್ ಕಡೆಗೆ ತಿರುಗಿಸಿದರು. ಪ್ರಯಾಣಿಕರೆಲ್ಲ ಭಯದಿಂದ ಜೀವ ಕೈಯಲ್ಲಿ ಹಿಡಿದು ಮುಂದೇನು ಕಾದಿದೆಯೋ, ತಮ್ಮ ಪ್ರಯಾಣಕ್ಕೆ ದೊಡ್ಡ ಅಪಶಕುನವಾಯಿತು ಎಂದು ಎಲ್ಲ ಗುಸುಗುಸು ಮಾತನಾಡುತ್ತ  ಕುಳಿತರು. ಕೆಲ ಹೆಂಗಸರು ಅಳತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಬಸ್ಸಿನಲ್ಲಿ ಸ್ಮಶಾನ ಮೌನ ಆವರಿಸಿತು. ಕತ್ತಲಲ್ಲಿ ಆ ಮನುಷ್ಯನ ಆತ್ಮ ಇಲ್ಲೇ ಇದ್ದು  ಕಾಡಿದರೆ ಎಂದು ಭಯವಾಗಿ ಡ್ರೈವರ್ ಗೆ ಬಸ್ಸಿನ ಒಳಗಿನ ಲೈಟು ತೆಗೆಯುವುದು ಬೇಡ ಎಂದು ಎಲ್ಲರೂ ಕೇಳಿಕೊಂಡಿದ್ದರಿಂದ ಲೈಟು ಉರಿದೇ ಇತ್ತು. 

ಇವತ್ತು ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ದೇನೋ ಎಂಥ ಕೆಟ್ಟ ದಿನವಪ್ಪ ಇವತ್ತು ಇನ್ನು ಪೋಲೀಸ್ ಸ್ಟೇಷನ್ ನಲ್ಲಿ ಎಷ್ಟು ಹೊತ್ತಾಗುತ್ತದೋ ಎಂದುಕೊಳ್ಳುತ್ತಾ ಆತಂಕ ಪಟ್ಟೆ. ಮರುಕ್ಷಣವೇ ನಾನು ಎಷ್ಟೊಂದು ಸ್ವಾರ್ಥಿಯಾಗಿ ಯೋಚಿಸುತ್ತಿದ್ದೇನೆ ಪಾಪ, ಆತ ಮನೆಯವರು ಯಾರೂ ಹತ್ತಿರವಿಲ್ಲದೆ ಇದ್ದ ಸಮಯದಲ್ಲಿ ತೀರಿಕೊಂಡಿದ್ದಾನೆ. ಬೆಂಗಳೂರಿಗೆ ಒಬ್ಬನೇ ಯಾಕೆ ಹೊರಟಿದ್ದನೋ,  ಆತನಿಗೆ ಏನೆಲ್ಲಾ ಆಸೆಗಳಿದ್ದವೋ ಏನೋ, ಸಾವು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬರಬಹುದು. ಆತನ ಮನೆಯವರು ಎಷ್ಟು ದುಃಖ ಪಡುತ್ತಾರೋ ಏನೋ ಎಂದೆಲ್ಲ ಮನಸ್ಸಿಗೆ ಬರುತ್ತಿದ್ದಂತೆ ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹಾರೈಸಿದೆ. ಬಸ್ಸಿನಲ್ಲಿ ಎಲ್ಲರ ನಿದ್ದೆಯೂ ಹಾರಿ ಹೋಗಿತ್ತು. ಎಲ್ಲರೂ ಗುಸುಗುಸು ಮಾತನಾಡುವವರೇ, ಒಂದು ಚಿಕ್ಕ ಶಬ್ದವಾದರೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದರು.  ಅಕ್ಕ ಪಕ್ಕದ ಸೀಟಿನವರಿಗೆ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಭಯವಾಗಿ ಹಿಂದೆ ಹೋಗಿ ನಿಂತೇ ಪ್ರಯಾಣಿಸಿದರು. ಬಸ್ಸು ಪೋಲೀಸ್ ಸ್ಟೇಷನ್ ತಲುಪಿ ಪೊಲೀಸರು ಮೃತ ದೇಹವನ್ನು ಪರಿಶೀಲಿಸಿ ಡಾಕ್ಟರ್ ಗೆ ಬರಹೇಳಿ ನಮಗೆಲ್ಲ ಅಲ್ಲೇ ಇರುವಂತೆ ಹೇಳಿದಾಗ ಕೆಲವರು ಹಣೆ ಚಚ್ಚಿಕೊಂಡರು. ನನ್ನನ್ನು ಪೊಲೀಸರು ಕರೆದಾಗ ನನ್ನ ಎದೆ ಜೋರಾಗಿ ಬಡಿದುಕೊಳ್ಳತೊಡಗಿತು. ನನ್ನನ್ನು ಯಾಕೆ ಕರೆಯುತ್ತಿದ್ದಾರಪ್ಪ ಎಂದು ಗಾಬರಿಯಾದೆ. ಆ ಮನುಷ್ಯನ ಬಗ್ಗೆ ನನಗೆ ತಿಳಿದುದೆಲ್ಲ ಹೇಳಿದೆ ಆದರೂ ಅವನು ಸತ್ತ ಬಗ್ಗೆ ನನಗೆ ತಿಳಿದಿರಲಿಲ್ಲ ಬೇರೆ ಪ್ರಯಾಣಿಕ ಹೇಳಿದ ಮೇಲೆ ತಿಳಿಯಿತು ಎಂದೆ. ನನಗೆ ಅವರೆಲ್ಲಿ ನಾನೇ ಕೊಲೆ ಮಾಡಿರಬೇಕು ಎನ್ನುವ ಸಂಶಯ ಮೂಡಿ ನನ್ನನ್ನು ಅರೆಸ್ಟ್ ಮಾಡಿದರೆ ನನ್ನ ಗತಿ ಏನು ಎಂದು ಭಯವಾಯಿತು. ಅಷ್ಟರಲ್ಲಿ ಡಾಕ್ಟರ್ ಬಂದು ಮೃತ ದೇಹವನ್ನು ಪರಿಶೀಲಿಸಿ ಆ ಮನುಷ್ಯ ಸತ್ತು ಮೂರು ನಾಲ್ಕು ಗಂಟೆಗಳಾದರೂ ಆಗಿರಬಹುದು ಎಂದಾಗ ನಾವೆಲ್ಲ ಬೆಚ್ಚಿ ಬಿದ್ದೆವು. ಪೊಲೀಸರು ಅವನ ಬ್ಯಾಗ್ ತರಿಸಿ ತೆರೆದು ನೋಡುವಾಗ ಅಲ್ಲಿ ಫೈಲೊಂದು ಇದ್ದಿದ್ದು ಕಂಡು ತೆರೆದು ನೋಡಿದರು. ಅದು ಆಸ್ಪತ್ರೆಯ ರಿಪೋರ್ಟ್ ಆಗಿತ್ತು. ಡಾಕ್ಟರ್ ಅದನ್ನು ಪರಿಶೀಲಿಸಿದಾಗ ಆತನಿಗೆ ಈ ಮೊದಲು ಹೃದಯಘಾತವಾಗಿದ್ದುದು ಕಂಡು ಬಂದಿತು. ಆದ್ದರಿಂದ ಆ ಮನುಷ್ಯ ಮತ್ತೆ ತೀವ್ರ ಹೃದಯಘಾತವಾಗಿ ಸತ್ತಿರಬೇಕು ಎಂದು ಡಾಕ್ಟರ್ ಹೇಳಿದಾಗ ನಾನು ಅಬ್ಬಾ! ಪೊಲೀಸರು ಇನ್ನು ನನ್ನ ಮೇಲೆ ಸಂಶಯ ಪಡಲಿಕ್ಕಿಲ್ಲ ಎಂದು ನೀಳವಾದ ನಿಟ್ಟುಸಿರು ಬಿಟ್ಟೆ. ಪೊಲೀಸರು ನಮ್ಮೆಲ್ಲರ ವಿವರಗಳನ್ನು ಕೇಳಿ ತಿಳಿದುಕೊಂಡು ನಮ್ಮನ್ನೆಲ್ಲ ಹೋಗಲು ಬಿಟ್ಟಾಗ ನಾವೆಲ್ಲ ಬದುಕಿದೆಯಾ ಬಡ ಜೀವವೇ ಎಂದು ಕೊಂಡು ಬೇಗನೆ ಬಸ್ ಹತ್ತಿದೆವು. ಆ ಮನುಷ್ಯನ ಮೃತ ದೇಹವಿಲ್ಲದಿದ್ದರೂ ಕುಳಿತುಕೊಳ್ಳಲು ಭಯವಾದರೂ ಇನ್ನೂ ತುಂಬಾ ಹೊತ್ತು ಪ್ರಯಾಣ ಮಾಡಬೇಕಾಗಿದ್ದುದರಿಂದ ಎಲ್ಲರೂ ವಿಧಿಯಿಲ್ಲದೇ ದೇವರ ಜಪ ಮಾಡುತ್ತಾ ಕುಳಿತೆವು. ಕೆಲವರು ತಾವು ಕೇಳಿದ ಇಂತಹ ಅನುಭವಗಳ ಬಗ್ಗೆ ಮಾತನಾಡತೊಡಗಿದರು.  ನಿದ್ದೆಯಂತೂ ಮಾರು ದೂರ ಹಾರಿ ಹೋಗಿತ್ತು. ಕೊನೆಗೆ ಬಸ್ಸು ಬೆಂಗಳೂರು  ಸುಮಾರು ಹನ್ನೆರಡು ಗಂಟೆಗೆ ತಲುಪಿದಾಗ ನಾವೆಲ್ಲ ನಿಟ್ಟುಸಿರು ಬಿಟ್ಟೆವು.

ಪೀಕಲಾಟ

ಬಸ್ಸಿನಲ್ಲಿ ವಿಪರೀತ ನೂಕುನುಗ್ಗಲು. ಸರಿಯಾಗಿ ಕಾಲಿಡಲು ಜಾಗ ಸಿಗದೆ ಒಂಟಿ ಕಾಲಲ್ಲಿ ಸರ್ಕಸ್ ಮಾಡುತ್ತ ಇನ್ನೊಂದು ಕಾಲಿಡಲು ಜಾಗ ಸಿಗದೆ ಬೇರೆ ಯಾರದೋ ಕಾಲ ಮೇಲೆ ಕಾಲಿಟ್ಟೆ . ಆಗ ಅವರು ತಮ್ಮ ಕಾಲು ಸರಿಸುತ್ತಾರೆ ಎಂಬುದು ನನ್ನ ಅನುಭವ. ಆದರೆ ಆ ಪ್ರಾಣಿ ಜೋರಾಗಿ ಕಿರಿಚುತ್ತ ಕೆಟ್ಟದಾಗಿ ಬೈಯುತ್ತ ತನ್ನ ಕಾಲು ಹಿಂದಕ್ಕೆಳೆದ. ನನಗೆ ಕಸಿವಿಸಿಯಾದರೂ ಇದೆಲ್ಲ ಮಾಮೂಲು ಎಂದುಕೊಳ್ಳುತ್ತ ಅವನ ಮಾತಿಗೆ ಬೇಸರಿಸಿಕೊಳ್ಳದೆ ಟಿಕೆಟ್ ಗೆ ಹಣ ತೆಗೆದೆ. ಪಕ್ಕದಲ್ಲಿದ್ದವನ ಬೆವರಿನ ವಾಸನೆ ಸಹಿಸಲಾಗದೆ ಮುಖವನ್ನು ಬೇರೆ ಕಡೆಗೆ ತಿರುಗಿಸಿದೆ ನನ್ನ ಗ್ರಹಚಾರಕ್ಕೆ ಈ ಕಡೆಯವ ಬಟ್ಟೆ ಒಗೆಯದೆ ಅದೆಷ್ಟು ಸಮಯವಾಗಿತ್ತೋ ಅಸಾಧ್ಯ ಕಮಟು ವಾಸನೆ ಇನ್ನೇನು ವಾಂತಿ ಮಾಡಿಬಿಡುತ್ತೇನೋ ಎಂದು ಗಾಬರಿಯಾಗಿ ಕಷ್ಟಪಟ್ಟು ಕರ್ಚೀಫ್ ತೆಗೆದು ಮೂಗು ಮುಚ್ಚುವಂತೆ ಕಟ್ಟಿಕೊಂಡೆ. ಅದನ್ನು ನೋಡಿದ ಕೆಲವರು ನಾನು ಎಲ್ಲಿಂದಲೋ ತಪ್ಪಿಸಿಕೊಂಡು ಬಂದ ಉಗ್ರನನ್ನು ನೋಡುವಂತೆ ನನ್ನತ್ತ ಸಂಶಯಾಸ್ಪದ ನೋಟ ಬೀರತೊಡಗಿದರು. ನನಗಂತೂ ಯಾವಾಗ ನನ್ನ ಸ್ಟಾಪ್ ಬಂದು ಬಿಡುತ್ತೋ ಎಂದು ಅನಿಸಿಬಿಟ್ಟಿತು. ನನ್ನ ಸ್ಟಾಪ್ ಬಂದೊಡನೆ ಗಡಿಬಿಡಿಯಿಂದ ಸಿಕ್ಕ ಸಿಕ್ಕವರ ಕಾಲೆಲ್ಲ ತುಳಿದು ಅವರಿಂದ ಸಹಸ್ರನಾಮ ಕೇಳಿಸಿಕೊಂಡು ಕೆಳಗಿಳಿದು ಕರ್ಚೀಫನ್ನು ತೆಗೆದು ಅಯ್ಯಬ್ಬ ಬಚಾವಾದೆ ಎಂದು ದೀರ್ಘವಾಗಿ ಉಸಿರು ಬಿಟ್ಟೆ.

ಮನೆಯೊಳಗೆ ಕಾಲಿಡುತ್ತಲೇ ಜಯಾ ಯಾಕೆ ಮಂಕಾಗಿದ್ದೀರಾ ಹುಷಾರಿಲ್ಲವೇ ಅಥವಾ ಆಯಾಸಾನಾ ಎಂದು ಕೇಳುತ್ತ ನೀರಿನ ಗ್ಲಾಸ್ ಕೈಗಿತ್ತಳು. ನಾನು ನೀರು ಕುಡಿದು ಉಸ್ಸೆಂದು ಕುಳಿತು ಬಿಟ್ಟೆ. ಇವತ್ತು ಬಸ್ಸಲ್ಲಿ ವಿಪರೀತ ರಶ್ ಇತ್ತು ಕಣೇ ಸಾಕಾಗಿ ಹೋಯಿತು ಎಂದು ಹೇಳುವಷ್ಟರಲ್ಲಿ ಅದನ್ನೇ ನಿರೀಕ್ಷಿಸಿದವಳಂತೆ ಅದಕ್ಕೇ ಕಾರ್ ತೊಗೊಳ್ಳೋಣ ಅಂತ ನಾವಿಬ್ಬರೂ ಡಿಸೈಡ್ ಮಾಡಿದೀವಿ ಅಲ್ವೇನೋ ಪುಟ್ಟಾ ಎಂದು ಮಗನತ್ತ ಕಣ್ಣು ಮಿಟುಕಿಸಿದಾಗ ಅವನು ತಲೆ ಆಡಿಸಿದ. ನನಗೆ ಬಾಂಬ್ ಬಿದ್ದಂತಾಗಿ ಬೆಚ್ಚಿ ಬಿದ್ದೆ. ಯಾವ ವಿಷಯವನ್ನು ನಾನು ಇಷ್ಟು ಸಮಯದಿಂದ ಮುಚ್ಚಿಡುತ್ತಿದ್ದೆನೋ ಅದು ಈಗ ಬಯಲಾಗುವ ಸಮಯ ಬಂತಲ್ಲಪ್ಪಾ ಎಂದು ಬೆದರಿ ಏ .. ಏನು .. ಕಾರಾ ? ಕಾರು ಯಾಕೀಗ ? ನಿನ್ನ ಹತ್ರ ಸ್ಕೂಟಿ ಇಲ್ವೇನೆ ಎಂದು ಜಯಾಳನ್ನು ಕೇಳಿದೆ. ಏನ್ರೀ ನೀವು, ನಿಮ್ಮ ಫ್ರೆಂಡ್ಸ್ ಎಲ್ಲರೂ ಕಾರು ತೊಗೊಂಡಿದಾರೆ, ನನ್ನ ಕಲೀಗ್ಸ್ ಕೂಡ ಕಾರಲ್ಲೇ ಬರೋದು ಸ್ಕೂಟಿ ಹಳೇದಾಯ್ತು . ಅಲ್ದೇ ಕಾರು ತೊಗೊಂಡ್ರೆ ನೀವು ಕೂಡಾ ನಮ್ ಜೊತೆ ಬರ್ಬಹುದಲ್ವಾ ಬಸ್ಸಲ್ಲಿ ಅಷ್ಟೊಂದು ಕಷ್ಟ ಪಡಬೇಕಿಲ್ಲ ಎಂದಾಗ ನಾನು ಪೆಚ್ಚು ಪೆಚ್ಚಾಗಿ ನಗುತ್ತಾ ಹಾ .. ಹೂಂ ಎಂದೆ. ಅವಳು ಮಗನತ್ತ ಸನ್ನೆ ಮಾಡಿದಳು ಅವನು ಶುರು ಮಾಡಿದ, ಪಪ್ಪಾ ಕಾರ್ ತೊಗೊಳ್ಳೇ ಬೇಕು ನನ್ನ ಫ್ರೆಂಡ್ಸೆಲ್ಲ ಕಾರಲ್ಲೇ ಡ್ಯಾಡಿ ಜೊತೆ ಬರ್ತಾರೆ, ನಾನ್ ಮಾತ್ರ ಮಮ್ಮಿ ಜೊತೆ ಹಳೇ ಸ್ಕೂಟೀಲಿ ಹೋಗೋದು ನನ್ನ ಫ್ರೆಂಡ್ಸೆಲ್ಲ ಎಷ್ಟ್ ತಮಾಷೆ ಮಾಡ್ತಾರೆ ಗೊತ್ತಾ ಎಂದು ಅಳು ಮೋರೆ ಮಾಡಿದ. ಅದಕ್ಕೇನೋ, ಹೊಸ ಸ್ಕೂಟಿ ಕೊಂಡರಾಯ್ತು ಎಂದು ಹೇಳಿ ಸಧ್ಯ ಇವತ್ತು ತಪ್ಪಿಸಿಕೊಂಡೆ ಎಂದು ನಾನು ನಿರಾಳವಾಗುವಷ್ಟರಲ್ಲಿ ಜಯಾ ಮತ್ತೆ ರೀ ಎಂದಳು. ಇವತ್ತು ಇವರಿಬ್ಬರೂ ಎಲ್ಲ ತಯಾರಿ ಮಾಡಿಕೊಂಡೇ ಬಂದಿರುವ ಹಾಗಿದೆ ನಾನು ತಪ್ಪಿಸಿಕೊಳ್ಳುವ ಲಕ್ಷಣವೇ ಕಾಣುತ್ತಿಲ್ಲ ಎಂದು ಅವಳತ್ತ ನೋಡಿದೆ.

ಸ್ಕೂಟೀಲಿ ಹೋಗೋದು ತುಂಬಾ ಡೇಂಜರ್ ಕಣ್ರೀ ಮೊನ್ನೆ ನಿಮ್ಮ ಮಗ ಹಿಂದೆ ಕೂತಿದ್ದವ ನಿದ್ದೆ ಮಾಡ್ಬಿಟ್ಟಿದ್ದ, ಯಾರೋ ಕಾರಿನವರು ಹೇಳಿದ್ರಿಂದ ಗೊತ್ತಾಯ್ತು ಇಲ್ಲಾಂದ್ರೆ …. ಅಷ್ಟಕ್ಕೆ ನಿಲ್ಲಿಸಿ ನನ್ನನ್ನು ದಿಟ್ಟಿಸಿ ನೋಡಿದಳು. ನನಗೆ ಒಮ್ಮೆ ಎದೆ ಝಲ್ಲೆಂದಿತು, ನನ್ನ ಮುಖದಲ್ಲಾದ ಬದಲಾವಣೆ ಕಂಡು ಜಯಾ ಇನ್ನಷ್ಟು ಆತುರದಿಂದ ಅವಳ ಕಲೀಗ್ ಹೇಳಿದ ಘಟನೆ ಬಗ್ಗೆ ಹೇಳತೊಡಗಿದಳು. ಯಾರೋ ಒಬ್ಬ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಲಾರಿ ಬಂದು ಡಿಕ್ಕಿ ಹೊಡೆದು ಮಕ್ಕಳಿಬ್ಬರೂ ಬಿದ್ದು ಆಸ್ಪತ್ರೆ ಸೇರಿದ್ದಾರೆ ಎನ್ನುತ್ತ ಜಯಾ ನನ್ನ ಮುಖವನ್ನು ಸೂಕ್ಷ್ಮವಾಗಿ ನಿಟ್ಟಿಸಿ ನೋಡಿದಳು. ನಾನು ಕಂಗಾಲಾಗಿ ಬೆವರಿನಿಂದ ತೊಯ್ದು ಹೋಗಿದ್ದೆ. ನನ್ನ ಗುಟ್ಟು ಬಯಲಾದರೂ ಹೆಂಡತಿ ಮಗನ ಜೀವಕ್ಕಿಂತ ದೊಡ್ಡದಲ್ಲ ಎಂದು ಅವರಿಗೆ ಶರಣಾಗತನಾದಂತೆ ಆಗಲಿ ಕಾರ್ ತೊಗೊಳ್ಳೋಣ ಎನ್ನುತ್ತ ಬೆವರೊರೆಸಿದೆ. ನನ್ನ ಬಾಯಿಂದ ಅದನ್ನೇ ಕೇಳಲು ಕಾಯುತ್ತಿದ್ದ ತಾಯಿ ಮಗ ನಿರಾಳವಾದರು. ಮಗನಂತೂ ಯಾವ ಕಾರ್ ತೆಗೆದು ಕೊಳ್ಳುವುದು ಎನ್ನುತ್ತ ಸರ ಸರನೆ ಹಲವಾರು ಬ್ರಾಂಡ್ ನ ಕಾರುಗಳ ಬಗ್ಗೆ ಮಾಹಿತಿ ನೀಡಲು ಆರಂಭಿಸಿದಾಗ ನಾನು ಬಿಟ್ಟ ಬಾಯಿ ಬಿಟ್ಟಂತೆ ಅವನತ್ತ ನೋಡುತ್ತ ಇನ್ನೂ ಹನ್ನೊಂದು ವರುಷ ಪೂರ್ತಿಯಾಗದ ಹುಡುಗನಿಗೆ ಕಾರುಗಳ ಬಗ್ಗೆ ಅದೆಷ್ಟು ಮಾಹಿತಿ ಗೊತ್ತಿದೆ ಎಂದು ಬೆರಗಾಗಿ ತನಗೆ ಇಷ್ಟು ವರುಷಗಳಾದರೂ ಕಾರಿನ ಬಗ್ಗೆ ಏನೂ ಮಾಹಿತಿಯೇ ಇಲ್ಲವಲ್ಲ ಎಂದು ಪೆಚ್ಚಾಗಿ ಅಲ್ಲಿಂದ ಎದ್ದು ರೂಮಿಗೆ ನಡೆದೆ.
ರಾತ್ರಿ ಎಷ್ಟು ಹೊತ್ತಾದರೂ ನಿದ್ದೆಯೇ ಬರಲಿಲ್ಲ. ಚಿಕ್ಕಂದಿನಲ್ಲಿ ಸೈಕಲ್ ಬಿಡುವುದನ್ನು ಕಲಿಯಲು ಅದೆಷ್ಟು ಕಷ್ಟಪಟ್ಟಿದ್ದೆ. ಓರಗೆಯವರೆಲ್ಲ ವಾರದಲ್ಲೇ ಕಲಿತರೆ ತನಗೆ ವರುಷವಾದರೂ ಒಬ್ಬನೇ ಸೈಕಲ್ ಓಡಿಸಲು ಆಗುತ್ತಿರಲಿಲ್ಲ. ಕೆಲ್ಸದಾಳು ನಿಂಗಣ್ಣ ಯಾವಾಗಲೂ ನನ್ನ ಹಿಂದೆ ಸೈಕಲ್ ಹಿಡಿದು ನಾನು ಬೀಳದಂತೆ ನೋಡಿಕೊಳ್ಳುತ್ತಿದ್ದ. ಕೊನೆಗೆ ನಿಂಗಣ್ಣನ ಕಷ್ಟ ನೋಡಲಾಗದೆ ನನ್ನ ತಂದೆ ಸೈಕಲ್ ನ ಎರಡೂ ಬದಿಯಲ್ಲಿ ಎರಡು ಪುಟ್ಟ ಚಕ್ರಗಳನ್ನು ಆಧಾರಕ್ಕಾಗಿ ಕೂರಿಸಿ ನಾನೊಬ್ಬನೇ ಸೈಕಲ್ ಬಿಡುವಂತೆ ಮಾಡಿದ್ದರು. ಸೈಕಲೇ ಬಿಡಲು ಬರದಿದ್ದ ಮೇಲೆ ಬೈಕ್ ಬಿಡಲು ತನ್ನಿಂದಾದೀತೇ ಎಂದು ಬೈಕ್ ಬಿಡಲು ಕಲಿಯುವ ಗೋಜಿಗೇ ಹೋಗಲಿಲ್ಲ. ಮದುವೆಯಾದ ಮೇಲೆ ಹೆಂಡತಿ ಬೈಕ್ ತೊಗೊಳ್ಳಿ ಎಂದು ಅದೆಷ್ಟು ಕಾಡಿದ್ದಳು ಆದರೆ ನಾನು ಜಾತಕದಲ್ಲಿ ನನಗೆ ಹತ್ತು ವರುಷಗಳ ಕಾಲ ಅಪಘಾತ ಭಯವಿದೆ ಎಂದು ಜ್ಯೋತಿಷರು ಹೇಳಿದ್ದಾರೆ ಎಂದು ಸುಳ್ಳು ಹೇಳಿ ಅವಳನ್ನು ಸುಮ್ಮನಾಗಿಸಿದ್ದೆ. ನಂತರ ಮಗನನ್ನು ಸ್ಕೂಲಿಗೆ ಕರೆದೊಯ್ಯಲೂ ಹಾಗೂ ತನಗೆ ಆಫೀಸ್ ಗೆ ಹೋಗಲೂ ಅನುಕೂಲವಾಗುತ್ತದೆ ಎಂದು ಹೇಳಿ ಸ್ಕೂಟಿ ಕೊಂಡುಕೊಂಡಿದ್ದಳು. ಈಗ ಕಾರು ಡ್ರೈವಿಂಗ್ ಕಲಿಯಲೇ ಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಒಂದು ವೇಳೆ ನನಗೆ ಡ್ರೈವಿಂಗ್ ಬಾರದೇ ಹೋದರೆ ಏನು ಮಾಡುವುದು ಹೆಂಡತಿ ಮಗನ ಮುಂದೆ ನನ್ನ ಮರ್ಯಾದೆ ಹೋಗುತ್ತದಲ್ಲ ಎಂದು ಪೇಚಾಡಿಕೊಂಡೆ.

ಬೆಳಗ್ಗೆ ಕಾಫಿ ಕುಡಿಯುವಾಗ ಕಾರಿನ ಬಗ್ಗೆ ತಾಯಿ ಮಗನ ಚರ್ಚೆ ನಡೆಯುತ್ತಿತ್ತು. ನಾನು ಮಾತ್ರ ಮೌನವಾಗಿ ಕಾಫಿ ಹೀರುತ್ತ ಕುಳಿತಿದ್ದೆ. ಪಪ್ಪಾ ಯಾವ ಮೊಡೆಲ್ ನ ಕಾರು ತೆಗೆದುಕೊಳ್ಳುವುದು ಎಂದು ಮಗ ಪೀಠಿಕೆ ಹಾಕಿದ. ಮೊದಲು ಡ್ರೈವಿಂಗ್ ಕಲಿತು ಆಮೇಲೆ ಕಾರು ತೆಗೆದುಕೊಳ್ಳುವುದು ಎಂದು ಅವನ ಕುತೂಹಲಕ್ಕೆ ತಣ್ಣೀರೆರಚಿದೆ. ಸರಿ ಡ್ರೈವಿಂಗ್ ಇವತ್ತೇ ಕಲಿಯೋದಕ್ಕೆ ಶುರು ಮಾಡಿ ಒಂದು ತಿಂಗಳಲ್ಲಿ ಲೈಸನ್ಸ್ ಬಂದ್ ಬಿಡತ್ತೆ. ಆಮೇಲೆ ಕಾರು ಕೊಳ್ಳೋದು ಮತ್ತೆ ಸುಯ್ಯನೆ ಹೋಗೋದು ಎನ್ನುತ್ತಾ ಕಾರು ಬಿಡುವವನಂತೆ ನಟಿಸಿ ಓಡಿದಾಗ ನನಗೆ ನಗು ಬಂತು. ಸಂಜೆ ಮನೆಗೆ ಬಂದಾಗ ಡ್ರೈವಿಂಗ್ ಕಲಿಯೋಕೆ ಶುರು ಮಾಡಿದ್ರಾ ಎಂಬ ಜಯಾಳ ಪ್ರಶ್ನೆಗೆ ತುಸು ಸಿಟ್ಟು ಬಂದು ಸುಸ್ತಾಗಿ ಮನೆಗೆ ಬಂದವನಿಗೆ ನೀರು ಕೋಡೋದು ಬಿಟ್ಟು ಡ್ರೈವಿಂಗ್ ಅಂತೆ ಡ್ರೈವಿಂಗ್ ಎನ್ನುತ್ತ ಫ್ಯಾನ್ ಗಾಳಿಗೆ ಮೈಯೊಡ್ಡಿ ಕುಳಿತೆ. ಅದರ ನಂತರ ದಿನವೂ ಮಗ ಇಲ್ಲವೇ ಜಯಾ ಡ್ರೈವಿಂಗ್ ಕಲಿಯಲು ಶುರು ಮಾಡಿದಿರಾ ಎಂದು ಕೇಳಲು ಶುರು ಮಾಡಿದರು. ಇವರಿಗೊಂದು ಬಲವಾದ ಕಾರಣ ಕೊಟ್ಟು ಬಾಯಿ ಮುಚ್ಚಿಸಬೇಕು ಆದರೆ ಏನು ಹೇಳಲಿ ಎನ್ನುತ್ತ ಕ್ಯಾಲೆಂಡರ್ ನತ್ತ ಗಮನ ಹರಿದಾಗ ನಾಳೆಯಿಂದ ಮಹಾಲಯ ಆರಂಭ ಎಂದಿತ್ತು ಅದನ್ನು ನೋಡಿ ಖುಶಿಯಾಗಿ ಇನ್ನು ಹದಿನೈದು ದಿನ ಡ್ರೈವಿಂಗ್ ಬಗ್ಗೆ ಯಾರೂ ಮಾತನಾಡುವ ಹಾಗಿಲ್ಲ ಎಂದುಕೊಂಡು ನಾನು ನಾಳೆಯೇ ಡ್ರೈವಿಂಗ್ ಕಲಿಯೋದಕ್ಕೆ ಶುರು ಮಾಡೋಣಾಂತಿದ್ದೆ ಆದರೆ ನಾಳೆಯಿಂದ ಮಹಾಲಯ ಶುರು. ಮಹಾಲಯ ಮುಗೀಲಿ ಆಮೇಲೆ ನೋಡೋಣ ಎನ್ನುತ್ತ ಜಯಾಳತ್ತ ನೋಡಿದೆ ಅವಳು ನಿರಾಶೆಯಾದರೂ ಸರಿ ಎನ್ನುವಂತೆ ತಲೆ ಆಡಿಸಿದಳು. ನಾನು ರೂಮಿಗೆ ಬಂದು ಪ್ರಪಂಚವನ್ನೇ ಗೆದ್ದು ಬಿಟ್ಟವರ ಹಾಗೇ ಸಂತೋಷದಿಂದ ಕುಣಿದಾಡಿದೆ.

ನಂತರದ ದಿನಗಳಲ್ಲಿ ಕಾರಿನ ಬಗ್ಗೆ ಮಾತನಾಡುವುದು ಕಡಿಮೆಯಾಗುತ್ತ ಬಂದಿತು. ಅಬ್ಬಾ ! ಇನ್ನು ಸ್ವಲ್ಪ ದಿನ ಕಳೆದರೆ ಇಬ್ಬರೂ ಕಾರಿನ ವಿಷಯವನ್ನೇ ಮರೆತು ಬಿಡಬಹುದು ಎಂದುಕೊಂಡು ನಿರಾಳನಾದೆ. ಆದರೆ ಮಹಾಲಯ ಮುಗಿದ ಮರುದಿನವೇ ಡ್ರೈವಿಂಗ್ ಕಲಿಯೋದಕ್ಕೆ ಯಾವಾಗ ಹೋಗ್ತೀರಿ ಎಂಬ ರಾಗ ಮತ್ತೆ ಶುರುವಾಯಿತು. ನಾನು ಈಗ ನವರಾತ್ರಿಯಲ್ಲವೇ ಹಬ್ಬದ ಟೈಮಲ್ಲಿ ಯಾರಿಗೆ ಪುರುಸೊತ್ತಿದೆ ಎಂದು ಮತ್ತೆ ವಿಷಯ ಮರೆಸಲು ನೋಡಿದೆ. ಈಗಂತೂ ಜಯಾ ಮುಖ ಕಪ್ಪಿಟ್ಟಿತು. ಹೀಗೆ ಮಾಡಿ ಸುಮ್ಮನೆ ದಿನ ಕಳೆಯುತ್ತಾರೆ ಹೊರತು ಇವರು ಕಲಿಯೊಲ್ಲ , ಹೀಗೆ ಅವರು ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತ ಕುಳಿತರೆ ನಾವು ಮುದುಕರಾದರೂ ಕಾರಿನಲ್ಲಿ ಹೋಗುವ ಆಸೆ ಕನಸಾಗಿಯೇ ಉಳಿದುಬಿಡುತ್ತದೆ. ಇದಕ್ಕೆ ಏನಾದರೂ ಮಾಡಬೇಕು ಎಂದು ಮಗನಿಗೆ ಮೆಲ್ಲನೆ ಹೇಳುತ್ತಿದ್ದುದು ಕೇಳಿಸಿತು. ನಾನು ಮಾತ್ರ ಏನೂ ಅರಿಯದವನಂತೆ ಸುಮ್ಮನೆ ಕುಳಿತು ಬಿಟ್ಟೆ. ಮಾರನೆಯ ದಿನ ಸಂಜೆ ನಾನು ಮನೆಗೆ ಬಂದಾಗ ಮನೆಗೆ ಬೀಗವಿತ್ತು. ನನಗೆ ಆತಂಕವಾಗತೊಡಗಿತು ನಾನು ಕಾರು ತೆಗೆದುಕೊಳ್ಳಲು ಹಿಂಜರಿದುದು ತಪ್ಪಾಯಿತೇ. ದೇವರೇ, ನನ್ನ ಹೆಂಡತಿ ಮತ್ತು ಮಗ ಕ್ಷೇಮವಾಗಿ ಮನೆ ತಲುಪುವಂತೆ ಮಾಡಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತ ಬೀಗ ತೆಗೆದು ಮೈಯಲ್ಲಿ ಬಲವೇ ಇಲ್ಲದಂತಾಗಿ ಸೋಫಾದಲ್ಲಿ ಉಸ್ಸೆಂದು ಕುಳಿತೆ. ಜಯಾಗೆ ಫೋನ್ ಮಾಡೋಣ ಎಂದು ನೋಡುವಷ್ಟರಲ್ಲಿ ಸ್ಕೂಟಿ ಹಾರ್ನ್ ಕೇಳಿಸಿತು. ನಾನು ಹೊರಗೆ ಧಾವಿಸಿದೆ ಅಬ್ಬಾ! ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ದೀರ್ಘ ಉಸಿರು ಬಿಟ್ಟೆ. ಜಯಾ ಮನೆಯೊಳಗೆ ಕಾಲಿಡುತ್ತ ನಾನು ಡ್ರೈವಿಂಗ್ ಸ್ಕೂಲಿಗೆ ಹೋಗಿ ನೀವು ಬರ್ತೀರಿ ಅಂತ ಹೇಳಿ ದುಡ್ಡು ಕೊಟ್ಟು ಬಂದಿದೀನಿ ತೊಗೊಳ್ಳಿ ಅಡ್ರೆಸ್ಸು ಎಂದು ರಶೀದಿಯನ್ನು ನನ್ನ ಕೈಗೆ ತುರುಕಿದಳು. ಓಹ್ ! ಪರವಾಗಿಲ್ಲವೇ ,ನಾನು ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೆ ತೂರ್ಕೊಂಡಿದ್ದಾರೆ. ಇನ್ನು ನನ್ನ ಮರ್ಯಾದೆ ಹರಾಜಾಗುವುದರಲ್ಲಿ ಯಾವುದೇ ಸಂಶಯವಿಲ್ಲ ತನಗೆ ಡ್ರೈವಿಂಗ್ ಬರದೇ ಹೋದರೆ ಜಯಾ ಮತ್ತು ನನ್ನ ಮಗನ ಪ್ರತಿಕ್ರಿಯೆ ಹೇಗಿರಬಹುದು ಎಂದು ಮನಸ್ಸಿಗೆ ಬಂದಿದ್ದೇ ತಡ ಧೊಪ್ಪನೆ ಸೋಫಾ ಮೇಲೆ ಕುಸಿದೆ.

ವ್ಯತಿರಿಕ್ತ

ಹಣ್ಣಿನ ಅಂಗಡಿ ವ್ಯಾಪಾರಿಯಾದ ಅಶೋಕ ಎಂದಿನಂತೆ ತನ್ನ ಅಂಗಡಿ ಬಾಗಿಲು ತೆರೆದು ದೇವರಿಗೆ ಪೂಜೆ ಮಾಡಿ ಚೆನ್ನಾಗಿರುವ ಹಾಗೂ ಹಾಳಾದ ಹಣ್ಣುಗಳನ್ನು ವಿಂಗಡಿಸಿ ಉಸ್ಸೆಂದು ಕುಳಿತಾಗ ಹೊರಗೆ ಭಾರಿ ಮಳೆ ಶುರುವಾಯಿತು. ಹೀಗೆ ದಿನವಿಡೀ ಮಳೆ ಬಂದರೆ ತನಗೆ ಇವತ್ತು ಬೋಣಿ ಕೂಡ ಆಗಲಿಕ್ಕಿಲ್ಲ ಎಂದು ಅಶೋಕ ಚಿಂತೆಗೀಡಾದ. ರೈತಾಪಿ ಜನರು ಸರಿಯಾಗಿ ಮಳೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರೆ ಮಳೆ ಬಂದರೆ ವ್ಯಾಪಾರ ಆಗುವುದಿಲ್ಲ ಎಂಬ ಚಿಂತೆ ತನಗೆ ಎಂದು ಅಂದುಕೊಂಡ. ಮಧ್ಯಾಹ್ನವಾದರೂ ಒಬ್ಬನೇ ಒಬ್ಬ ಗಿರಾಕಿ ಸುಳಿಯದ್ದು ಕಂಡು ಇವತ್ತು ಇನ್ನು ವ್ಯಾಪಾರವಾದ ಹಾಗೇ ಎಂದು ನಿರಾಶೆಯಿಂದ ಹಣ್ಣುಗಳಿಂದ ಹಾಳಾದ ಭಾಗವನ್ನು ತೆಗೆಯುತ್ತಾ ಊಟದ ಬದಲು ತಿನ್ನಲು ತಯಾರಿ ನಡೆಸಿದ. ಅವನ ಮಧ್ಯಾಹ್ನ ಹಾಗೂ ಸಂಜೆ ಊಟ, ತಿಂಡಿಯ ಬದಲು ಇಂಥಾ ಅರೆಬರೆ ಹಾಳಾದ ಹಣ್ಣುಗಳನ್ನೇ ತಿನ್ನುತ್ತಿದ್ದ. ಅವನು ತಿಂದು ಮತ್ತೂ ಉಳಿದರೆ ಮನೆಗೆ ಕೊಂಡೊಯ್ಯುತ್ತಿದ್ದ.

ಅಷ್ಟರಲ್ಲಿ ಒಬ್ಬ ಸಣಕಲು ದೇಹದ ಹೆಂಗಸು ತನ್ನ ಅಂಗಡಿಯತ್ತ ಬರುವುದನ್ನು ಗಮನಿಸಿ ಉತ್ಸಾಹದಿಂದ ಆಕೆಯನ್ನು ಬರ ಮಾಡಿಕೊಂಡ. ಏನಮ್ಮ ಏನು ಕೊಡಲಿ ಎಂದಾಗ ಆಕೆ ಅಳುತ್ತ ಅಣ್ಣಾ, ನನ್ನ ಮಗನಿಗೆ ತೀರಾ ಹುಷಾರಿಲ್ಲ ಅವನಿಗೆ ಡಾಕ್ಟರ್ ಹಣ್ಣು ತಿನ್ನೋದಕ್ಕೆ ಹೇಳಿದ್ದಾರೆ ಆದರೆ ನಮ್ಮಂಥಾ ಬಡವರಿಗೆ ದಿನಕ್ಕೆ ಒಪ್ಪತ್ತು ಊಟ ಸಿಗೋದೆ ಕಷ್ಟ ಅಂಥಾದ್ರಲ್ಲಿ ಹಣ್ಣು ಎಲ್ಲಿಂದ ತರೋಣ. ಅಲ್ದೆ ನನ್ನ ಗಂಡ ಮಗನ ಚಿಕಿತ್ಸೆಗೆ ದುಡ್ಡು ಹೊಂದಿಸೋಕೆ ಆಗ್ದೆ ಅವರ ಒಂದು ಕಿಡ್ನಿ ಮಾರಿದ್ದಾರೆ. ಈಗ ಅವರಿಗೂ ಹುಷಾರಿಲ್ಲ ಕೆಲಸ ಮಾಡೋಕೆ ಆಗ್ತಾ ಇಲ್ಲ ನಾನೊಬ್ಬಳೇ ದುಡಿದು ತಂದ ಹಣದಲ್ಲಿ ಎಲ್ಲ ಖರ್ಚೂ ಹೋಗ್ಬೇಕು. ನಿಮ್ಮಲ್ಲಿ ಹಾಳಾಗಿರೋ ಹಣ್ಣಿದ್ರೂ ಕೊಡಿ ಸ್ವಾಮಿ ಅದೇ ನಮ್ಮ ಸೌಭಾಗ್ಯ ಅಂತ ತಿಳ್ಕೋತೀವಿ ಎಂದು ಗೋಗರೆಯತೊಡಗಿದಾಗ ಅಶೋಕನಿಗೆ ಕಿರಿಕಿರಿಯೆನ್ನಿಸಿತು. ವ್ಯಾಪಾರ ಆಗಲಿಲ್ಲ ಎಂದು ತಾನು ಒದ್ದಾಡುತ್ತಿದ್ದರೆ ಈಕೆ ಪುಗಸಟ್ಟೆ ಹಣ್ಣು ಕೇಳ್ತಿದ್ದಾಳೆ. ಬೋಣಿಯೇ ಆಗದೆ ಇದ್ದಾಗ ತಾನು ಹಾಳಾದ ಹಣ್ಣು ಕೊಟ್ಟರೂ ಇನ್ನು ಇವತ್ತು ವ್ಯಾಪಾರ ಆಗುವುದುಂಟೇ, ಅಷ್ಟಕ್ಕೂ ಹಾಳಾದ ಹಣ್ಣನ್ನೆಲ್ಲ ತಾನೇ ತಿಂದು ಮುಗಿಸಿದೆ ಎಂದು ಹೇಳುವುದು ಹೇಗೆ ಎಂದು ಯೋಚಿಸುತ್ತ ನಿಂತ ಅಶೋಕನಿಗೆ ಅಕ್ಕ ಪಕ್ಕದ ಅಂಗಡಿಯವರು ಎಲ್ಲಾ ಬಿಟ್ಟು ಆ ಹೆಂಗ್ಸು ಆ ಜಿಪುಣಾಗ್ರೇಸರ ಹತ್ರ ಕೇಳೋಕೆ ಹೋಗಿದ್ದಾಳೆ. ಇಷ್ಟು ವರುಷಗಳಿಂದ ನಮಗೇ ಒಂದೇ ಒಂದು ಹಣ್ಣು ಕೊಡದವನು ಇನ್ನು ಇವಳಿಗೆ ಕೊಟ್ಟಾನೆ ಎನ್ನುತ್ತ ನಗುತ್ತಿದ್ದುದನ್ನು ನೋಡಿ ಸಿಟ್ಟು ಬಂತು. ನನ್ಗೆ ಜಿಪುಣ ಅಂತ ಆಡ್ಕೊಂಡು ನಗ್ತಾರೆ ಇವ್ರ ಬಾಯಿ ಮುಚ್ಚಿಸೋಕೆ ಆದ್ರೂ ನಾನು ಅವಳಿಗೆ ಹಣ್ಣುಗಳನ್ನು ಕೊಡಲೇ ಬೇಕು ಎಂದುಕೊಂಡರೂ ಕೊಡಲು ಮಾತ್ರಾ ಕೈ ಬರಲಿಲ್ಲ. ನೋಡಮ್ಮಾ, ಇವತ್ತು ಬೆಳಿಗ್ಗಿನಿಂದ ಬೋಣಿಯೇ ಆಗಿಲ್ಲ ಹಾಗಿರುವಾಗ ಹೇಗೆ ಕೊಡ್ಲಿ, ಹೋಗಮ್ಮಾ ಸುಮ್ನೆ ಎಂದ ಆದರೆ ಆಕೆ ಪಟ್ಟು ಬಿಡಲಿಲ್ಲ. ಹಾಗೆ ಹೇಳ್ಬೇಡಿ ಸ್ವಾಮಿ, ದೇವರು ನಿಮ್ಗೆ ಒಳ್ಳೆ ವ್ಯಾಪಾರ ಆಗೋ ಹಾಗೇ ಮಾಡ್ತಾನೆ ಎರಡು ಹಣ್ಣಾದರೂ ಕೊಡಿ ಎಂದಳು. ಈಕೆ ಸುಮ್ಮನೆ ಹೋಗುವ ಜಾಯಮಾನದವಳಲ್ಲ ಇವಳನ್ನು ಆದಷ್ಟು ಬೇಗ ಇಲ್ಲಿಂದ ಸಾಗಹಾಕಬೇಕು ಎಂದುಕೊಂಡು ಅಶೋಕ ಹುಡುಕಿ ಹುಡುಕಿ ಎರಡೇ ಹಣ್ಣುಗಳನ್ನು ಆರಿಸಿ ತೆಗೆದು ದೇವರೇ ಇವತ್ತು ವ್ಯಾಪಾರ ಆಗ್ದೇ ಇದ್ರೂ ಈ ಹಣ್ಣುಗಳನ್ನು ನಿನ್ನ ಹೆಸರಲ್ಲಿ ಕೊಡ್ತಾ ಇದ್ದೀನಿ ಅದು ನಂಗೆ ವಾಪಾಸು ಬರೋ ಹಾಗೆ ಮಾಡೋ ಜವಾಬ್ದಾರಿ ನಿಂದು ಎಂದುಕೊಳ್ಳುತ್ತ ಅಕ್ಕಪಕ್ಕದವರು ನೋಡಲೆಂದು ಜೋರಾಗಿ ತೊಗೋಮ್ಮ ಎಂದವನು ನಂತರ ಮೆತ್ತಗೆ ಅವಳಿಗೆ ಮಾತ್ರ ಕೇಳಿಸುವಂತೆ ಇವತ್ತು ನಿನ್ನಿಂದ ವ್ಯಾಪಾರ ಆಗ್ದೇ ಹೋದ್ರೆ ಇನ್ನು ಯಾವತ್ತೂ ನಿಂಗೆ ಏನೂ ಕೊಡಲ್ಲ ಇನ್ನು ಯಾವತ್ತೂ ಹೀಗೆ ಹಣ್ಣು ಬಿಟ್ಟಿ ಕೇಳೋಕೆ ಬರ್ಬೇಡ ಎನ್ನುತ್ತ ಹಣ್ಣುಗಳನ್ನು ಅವಳ ಕೈಗಿತ್ತ. ಆ ಹೆಂಗಸು ಅದನ್ನೇ ಮಹಾ ಪ್ರಸಾದವೆನ್ನುವಂತೆ ಕಣ್ಣಿಗೊತ್ತಿಕೊಂಡು ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹರಸಿ ಹೋದಳು. ಅಕ್ಕಪಕ್ಕದ ಅಂಗಡಿಯವರಿಗೆ ಅಚ್ಚರಿಯೋ ಅಚ್ಚರಿ ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಬಂದಿದ್ದಾನೆ ಎಂದು ಅವನಿಗೆ ಕೇಳಿಸುವಂತೆ ಕೀಟಲೆ ಮಾಡತೊಡಗಿದರು.

ಸಂಜೆಯಾದರೂ ಯಾರೊಬ್ಬರೂ ತನ್ನ ಅಂಗಡಿಯತ್ತ ಸುಳಿಯದ್ದನ್ನು ಕಂಡು ನಾನು ಆ ಹೆಂಗ್ಸಿಗೆ ಹಣ್ಣು ಕೊಡ್ಲೇ ಬಾರದಿತ್ತು ಯಾಕಾದ್ರೂ ಬಂದ್ಲೋ ನನ್ನ ವ್ಯಾಪಾರ ಹಾಳು ಮಾಡೋದಿಕ್ಕೆ ಎಂದು ಅವಳನ್ನು ಶಪಿಸಿದ. ಇನ್ನೇನು ಅಂಗಡಿ ಬಾಗಿಲು ಮುಚ್ಚಬೇಕು ಅನ್ನುವಷ್ಟರಲ್ಲಿ ಒಂದು ದೊಡ್ಡ ಕಾರು ಅಂಗಡಿಯ ಬಳಿ ನಿಂತಿತು. ಅದರಿಂದ ಇಳಿದ ವ್ಯಕ್ತಿ ತನ್ನ ಅಂಗಡಿಗೆ ಬರುತ್ತಿರುವುದನ್ನು ಕಂಡು ಅಶೋಕನಿಗೆ ಖುಶಿಯಾಯಿತು. ಆ ವ್ಯಕ್ತಿ ಬಂದವರೇ ಎಲ್ಲಾ ಹಣ್ಣುಗಳನ್ನು ಎರಡು ಕಿಲೋ ಕೊಡಿ ಎಂದಾಗ ಅಶೋಕನಿಗೆ ಅರ್ಥವಾಗದೆ ಎಲ್ಲಾ ಹಣ್ಣು ಒಟ್ಟಿಗೆ ಎರಡು ಕಿಲೋನಾ ಎಂದು ನಿರುತ್ಸಾಹದಿಂದ ಕೇಳಿದ. ಆಗ ಆ ವ್ಯಕ್ತಿ ಅಲ್ಲಾ ಸ್ವಾಮಿ ಪ್ರತಿಯೊಂದು ಹಣ್ಣು ಅಂದ್ರೆ ಆಪಲ್ ಎರಡು ಕಿಲೋ ಮೂಸಂಬಿ ಎರಡು ಕಿಲೋ ಹಾಗೇ ಎಲ್ಲಾ ಹಣ್ಣುಗಳು ಎರಡೆರಡು ಕಿಲೋ ಇರಲಿ ಎಂದಾಗ ಅಶೋಕನ ಮುಖ ಅರಳಿತು. ಉತ್ಸಾಹದಿಂದಲೇ ಎಲ್ಲವನ್ನೂ ಪ್ಯಾಕ್ ಮಾಡಿ ಕೊಟ್ಟ. ಅಬ್ಬ !! ಇವತ್ತು ದಿನವಿಡೀ ಆಗದೇ ಇದ್ದ ವ್ಯಾಪಾರ ಅರ್ಧ ಗಂಟೆಯಲ್ಲಿ ಎರಡು ದಿನದ ವ್ಯಾಪಾರದಷ್ಟಾಯಿತು. ಅಂತೂ ಆ ಹೆಂಗಸಿಗೆ ಹಣ್ಣುಗಳನ್ನು ಕೊಟ್ಟದ್ದು ದಂಡವಾಗಲಿಲ್ಲ. ಒಂದು ರೀತಿಯಲ್ಲಿ ಆ ಹೆಂಗಸಿಗೆ ಹಣ್ಣುಗಳನ್ನು ಕೊಟ್ಟಿದ್ದಿರಿಂದಲೇ ನನಗೆ ಇಷ್ಟೊಂದು ವ್ಯಾಪಾರ ಆಯಿತೋ ಏನೋ, ಆ ಹೆಂಗಸು ನನಗೆ ಲಕ್ಕಿ ಇರಬಹುದೇ , ನಾಳೆಯೂ ಆ ಹೆಂಗಸು ಬಂದರೆ ಇವತ್ತಿನಂತೆ ವ್ಯಾಪಾರ ಆಗಬಹುದೇನೋ ಆದರೆ ನಾನೇ ಅವಳಿಗೆ ಬರಬೇಡವೆಂದು ತಾಕೀತು ಮಾಡಿ ಕಳಿಸಿದ್ದೆನೆಲ್ಲ, ಛೆ ತಾನು ಹಾಗೆ ಹೇಳಬಾರದಿತ್ತು ಆದರೆ ತನಗೇನು ಗೊತ್ತಿತ್ತು ಅವಳಿಂದ ತನಗೆ ಇಷ್ಟೊಂದು ಲಾಭವಾಗುತ್ತದೆ ಎಂದು ಅದೂ ಅಲ್ಲದೆ ಅದು ಅವಳಿಂದಲೇ ಆಗಿರುವುದು ಎಂದು ಖಾತ್ರಿ ಏನಿಲ್ಲ ಅವಳು ಮತ್ತೊಮ್ಮೆ ಬಂದರೆ ಆ ದಿನ ಮತ್ತೆ ಹಾಗೇ ಲಾಭವಾದರೆ ಮಾತ್ರ ಗೊತ್ತಾಗುವುದು ಎಂದುಕೊಳ್ಳುತ್ತ ತನ್ನ ಮಕ್ಕಳಿಗೋಸ್ಕರ ಒಳ್ಳೆಯ ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಹೋದ. ಯಾವಾಗಲೂ ಅರೆ ಬರೆ ಹಾಳಾದ ಹಣ್ಣುಗಳನ್ನೇ ತರುತ್ತಿದ್ದ ತಮ್ಮ ತಂದೆ ಇವತ್ತು ಒಳ್ಳೆಯ ಹಣ್ಣುಗಳನ್ನು ಅದೂ ಕೂಡ ಇಷ್ಟೊಂದು ರಾಶಿ ತಂದಿದ್ದನ್ನು ಯಾವತ್ತೂ ಕಂಡಿರದ ಮಕ್ಕಳು ಖುಶಿಯಿಂದ ಕುಣಿದಾಡಿದರು. ಅಶೋಕನ ಹೆಂಡತಿಯೂ ಅಚ್ಚರಿ ಪಟ್ಟಳು. ಅಶೋಕ ಮಾತ್ರ ನಾಳೆಯೂ ಆ ಹೆಂಗಸು ಬಂದರೆ ಒಳ್ಳೆಯ ಹಣ್ಣುಗಳನ್ನು ಕೊಡಬೇಕು ಅದರಿಂದ ಇನ್ನಷ್ಟು ಲಾಭ ತನಗಾಗಬಹುದು ಎಂದುಕೊಳ್ಳುತ್ತ ನಿದ್ದೆ ಹೋದ. ಮರುದಿನ ಉತ್ಸಾಹದಿಂದಲೇ ಅಶೋಕ ಅಂಗಡಿಗೆ ಹೋದ. ಆ ಹೆಂಗಸು ಬಂದರೆ ಕೊಡಲು ಕೆಲವು ಹಣ್ಣುಗಳನ್ನು ತೆಗೆದು ಜೋಪಾನವಾಗಿ ಬೇರೆ ಕಡೆಯಿಟ್ಟ. ಮಾರುಕಟ್ಟೆಯಿಂದ ಹಣ್ಣುಗಳನ್ನು ತಂದು ಚೆನ್ನಾಗಿ ಜೋಡಿಸಿ ಇಟ್ಟು ಗಿರಾಕಿಗಳಿಗಾಗಿ ಕಾದು ಕುಳಿತ.

ಆ ದಿನ ಮಳೆ ಇಲ್ಲದ್ದರಿಂದ ವ್ಯಾಪಾರ ಚೆನ್ನಾಗಿಯೇ ಆಯಿತು. ಆ ಹೆಂಗಸು ಎಲ್ಲಾದರೂ ಕಾಣ ಸಿಗುವಳೇನೋ ಎಂದು ಅಶೋಕ ಆಗಾಗ ಸುತ್ತಮುತ್ತ ನೋಡುತ್ತಿದ್ದ. ಆದರೆ ಆ ಹೆಂಗಸು ಮತ್ತೆ ಬರಲಿಲ್ಲ. ದಿನಗಳು ಉರುಳಿದರೂ ಅಶೋಕನಿಗೆ ಅವತ್ತು ಆದಷ್ಟು ವ್ಯಾಪಾರ ಮತ್ತೆ ಆಗಲಿಲ್ಲ. ಒಂದು ದಿನ ಮಧ್ಯಾಹ್ನ ಹಣ್ಣುಗಳನ್ನು ತಿನ್ನುತ್ತ ಕುಳಿತ ಅಶೋಕನಿಗೆ ಆವತ್ತು ಬಂದ ಆ ಹೆಂಗಸನ್ನು ಮತ್ತೆ ಕಂಡಂತಾಯಿತು. ತಿನ್ನುವುದನ್ನು ಬಿಟ್ಟು ಎದ್ದು ಬಂದು ನೋಡಿದರೆ ಅದೇ ಹೆಂಗಸು ತಲೆ ತಗ್ಗಿಸಿ ನಡೆಯುತ್ತಿದ್ದಳು. ಅಶೋಕ ಇವತ್ತು ತನ್ನ ಅದೃಷ್ಟ ಮತ್ತೆ ಖುಲಾಯಿಸಲಿದೆ ಎಂದು ಖುಶಿಯಿಂದ ಚಪ್ಪಾಳೆ ತಟ್ಟಿ ಅಮ್ಮ , ಅಮ್ಮ ಎಂದು ಕೂಗಿ ಕರೆದ. ಪಕ್ಕದ ಅಂಗಡಿಯವರು ಇವನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು. ಆ ಹೆಂಗಸು ಅಶೋಕ ಕರೆಯುತ್ತಿರುವುದನ್ನು ಗಮನಿಸಿ ಅವನ ಅಂಗಡಿಯತ್ತ ಬಂದಳು. ಅಶೋಕ ಅವಳನ್ನು ಆದರದಿಂದ ಬರಮಾಡಿಕೊಂಡು ಏನಮ್ಮ ಮತ್ತೆ ಬರಲೇ ಇಲ್ಲ ಎಂದಾಗ ಅವಳು ನೀವೇ ಬರ್ಬೇಡಾಂತ ಹೇಳಿದ್ರಿ ಮತ್ತೆ ಯಾಕೆ ಬರ್ಲಿ ಸ್ವಾಮಿ,ಎಂದಳು. ಅಶೋಕನಿಗೆ ಕಸಿವಿಸಿಯಾದರೂ ತೋರಗೊಡದೆ ಕೆಲವು ಹಣ್ಣುಗಳನ್ನು ಆರಿಸಿ ಅವಳಿಗೆ ಕೊಡಲು ಬಂದಾಗ ಅವಳು ನಿರಾಕರಿಸಿದಳು. ಇನ್ಯಾಕೆ ಸ್ವಾಮಿ ಇದೆಲ್ಲ, ಆವತ್ತು ನೀವು ಒಳ್ಳೆ ಮನಸ್ಸಿಂದ ಹಣ್ಣುಗಳನ್ನು ಕೊಟ್ಟಿರಲಿಲ್ಲ ಅದ್ರಿಂದಾನೋ ಏನೋ ನನ್ನ ಮಗನಿಗೆ ತೀರಾ ಹುಷಾರು ತಪ್ಪಿ ತೀರ್ಕೊಂಡ್ ಬಿಟ್ಟ. ನಿಮ್ಮ ಹಣ್ಣುಗಳನ್ನು ನೀವೇ ಇಟ್ಕೊಳ್ಳಿ ಸ್ವಾಮಿ ಎಂದವಳು ಅಳುತ್ತ ಹೊರಟುಹೋದಳು. ಅಶೋಕನಿಗೆ ಕೆನ್ನೆಗೆ ಜೋರಾಗಿ ಬಾರಿಸಿದಂತಾಯಿತು. ತಾನು ಒಳ್ಳೆಯ ಮನಸ್ಸಿನಿಂದ ಅವಳಿಗೆ ದಾನ ಕೊಟ್ಟಿದ್ದಿದ್ದರೆ ಅವಳಿಗೆ ಒಳ್ಳೆಯದಾಗಿ ಅವಳಿಂದ ತನಗೂ ಒಳ್ಳೆಯದಾಗುತ್ತಿತ್ತೇನೋ ಛೆ! ಎಂಥಾ ಕೆಲಸ ಮಾಡಿಬಿಟ್ಟೆ. ಈಗ ಅವಳು ಕೋಪಿಸಿಕೊಂಡು ಹೋಗಿ ತನ್ನ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮವಾದರೆ ಏನು ಮಾಡುವುದು ಎಂದುಕೊಳ್ಳುತ್ತ ಕಾಲು ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡತೊಡಗಿದ.

ಹಾರುತ ದೂರ ದೂರ ….!

ಭಾರವಾದ ತರಕಾರಿ ಚೀಲ ಹೊತ್ತುಕೊಂಡು ಮನೆಗೆ ಮರಳುತ್ತಿರುವಾಗ  ಗಾಳಿ ಶುರುವಾಯಿತು ಅದರೊಂದಿಗೆ ತುಂತುರು ಮಳೆ ಕೂಡ. ಚೀಲವನ್ನು ಕೆಳಗೆ ಇಟ್ಟು ಕೊಡೆಯನ್ನು ಬಿಡಿಸಿದೆ. ಇದ್ದಕ್ಕಿದ್ದಂತೆ ಗಾಳಿ ಮಳೆ ಜೋರಾಯಿತು. ಛೆ! ಬೇಗನೆ ಹೊರಡಬೇಕಿತ್ತು ಅಂತ ಅಂದುಕೊಳ್ಳುತ್ತ ಮುಂದೆ ನಡೆದೆ. ವಿಪರೀತ ಗಾಳಿಗೆ ನನ್ನ ಕೊಡೆ ವಾಲಾಡತೊಡಗಿತು. ಇನ್ನು ಇದು ತಿರುಚಿ ಬಿದ್ದರೆ ಮಳೆಯಲ್ಲಿ ನೆನೆದು ನಾಳೆ ನೆಗಡಿ ಖಂಡಿತ ಎಂದು ಅಂದುಕೊಳ್ಳುತ್ತಿದ್ದಂತೆ ರೊಯ್ಯನೆ ಬೀಸಿದ ಗಾಳಿಗೆ ಯಾರೋ ನನ್ನನ್ನು ಜೋರಾಗಿ ನೂಕಿದ ಹಾಗಾಯಿತು. ಮಳೆ ಗಾಳಿ ಸ್ವಲ್ಪ ಕಡಿಮೆಯಾಗಲಿ ಎಲ್ಲಾದರೂ ಸ್ವಲ್ಪ ನಿಂತು ಮತ್ತೆ ಹೋದರಾಯಿತು ಎಂದುಕೊಂಡು ಸೂಕ್ತವಾದ ಜಾಗ ಕಂಡು ಅತ್ತ ನಡೆದೆ. ಆದರೆ ಅಷ್ಟರಲ್ಲೇ ಗಾಳಿ ವಿಪರೀತವಾಗಿ ನಾನು ನೆಲದಿಂದ ಸ್ವಲ್ಪ ಮೇಲಕ್ಕೆ ಏರತೊಡಗಿದೆ! ನನ್ನ ಕಾಲುಗಳು ನೆಲಕ್ಕೆ ತಾಕುತ್ತಿರಲಿಲ್ಲ ! ನನಗೆ ವಿಚಿತ್ರವೆನಿಸಿತು. ಅತ್ತೆ ಯಾವಾಗಲೂ ಹೇಳುತ್ತಿದ್ದರು ನೀನು ಎಷ್ಟು ಸಣ್ಣಕ್ಕಿದ್ದಿಯಾ ಅಂದ್ರೆ ಗಾಳಿ ಬಂದ್ರೆ ಹಾರಿ  ಹೋಗ್ತೀಯಾ ಅಂತ. ಈಗ ನಿಜವಾಗಿಯೂ ಹಾಗೆ ಆಗುತ್ತಿದೆ !  ದೇವರೆ, ನನ್ನನ್ನು ಕ್ಷೇಮವಾಗಿ ಮನೆಗೆ ತಲುಪಿಸಪ್ಪ ಎಂದು ದೇವರಲ್ಲಿ ಬೇಡಿಕೊಂಡೆ. ಆದರೆ ದೇವರು ಅದ್ಯಾವ ಕೆಲಸದಲ್ಲಿ ಮುಳುಗಿದ್ದನೋ ಏನೋ ನನ್ನ ಬೇಡಿಕೆ ಕೇಳಿಸಿಕೊಳ್ಳಲೇ ಇಲ್ಲ, ನಾನು ಮೇಲ ಮೇಲಕ್ಕೆ ಹಾರತೊಡಗಿದೆ. ಇದು ನನ್ನ ಭ್ರಮೆಯೋ ಅಥವಾ ನಿಜವೋ ಒಂದೂ ಗೊತ್ತಾಗದೆ ಎಲ್ಲರಿಗೂ ಹೀಗೆ ಆಗುತ್ತಿದೆಯೇ ಎಂದು ನೋಡಿದರೆ ಅವರೆಲ್ಲ ರಸ್ತೆಯಲ್ಲೇ  ನಡೆಯುತ್ತಿದ್ದರು. ಕೆಲವರ ಕೊಡೆ ತಿರುಚಿ ಹೋಗಿತ್ತು. ಅವರೆಲ್ಲ ಆಶ್ರಯ ಹುಡುಕುತ್ತ ಅತ್ತಿಂದಿತ್ತ ಧಾವಿಸತೊಡಗಿದರು.

ನನಗೆ ದಿಗಿಲಾಯಿತು.ನಾನೇಕೆ ಹಕ್ಕಿಯಂತೆ ಹಾರುತ್ತಿದ್ದೇನೆ? ಈಗ ಏನು ಮಾಡುವುದು ? ಕೊಡೆಯಿಂದಾಗಿ ಹೀಗಾಗುತ್ತಿದೆಯೇ ? ಹಾಗಿದ್ದರೆ ಬೇರೆಯವರ್ಯಾಕೆ ನನ್ನಂತೆ ಹಾರುತ್ತಿಲ್ಲ ಏನಪ್ಪಾ ಇದು ವಿಚಿತ್ರ !!  ನನ್ನ ಕೊಡೆಯಲ್ಲಿ ಅಂಥಾ ವಿಶೇಷ ಏನಿದೆ, ಹಳೇಯ ಕೊಡೆ,  ಅಲ್ಲಲ್ಲಿ ಸಣ್ಣ ಸಣ್ಣ ರಂಧ್ರ ಗಳಿವೆ, ನನ್ನ ಕೊಡೆ ಗ್ಯಾಸ್ ಬಲೂನ್ ನಂತೆ ಕೆಲಸ ಮಾಡುತ್ತಿದೆಯೇ ಎಂದು ಆಶ್ಚರ್ಯಪಟ್ಟೆ ಅಥವಾ ನನ್ನ ಚಪ್ಪಲಿಯಲ್ಲಿ ಏನಾದರೂ ಮಾಂತ್ರಿಕ ಶಕ್ತಿ ಇದೆಯೇ ಎಂದುಕೊಂಡು ಕಾಲಿನತ್ತ ನೋಡಿದರೆ ಚಪ್ಪಲಿಗಳು ಅದ್ಯಾವಾಗಲೋ ಬಿದ್ದುಹೋಗಿದ್ದವು.  ಅದ್ಯಾರ ತಲೆ ಮೇಲೆ ಬಿತ್ತೋ ಏನೋ, ಅಂತೂ ಇವತ್ತು ನಾನು ಬದುಕುಳಿದರೆ ದೊಡ್ದ ಖರ್ಚಿನ ಬಾಬ್ತೇ ಸರಿ   ಅಂತ ಸೋಜಿಗ ಪಡುತ್ತಿದ್ದಂತೆ ಮಳೆ ಒಮ್ಮೇಲೆ ಜೋರಾಗಿ ನನ್ನ ಕೊಡೆ ಒಂದೆಡೆ ವಾಲತೊಡಗಿತು.  ನಾನು ಕೊಡೆಯನ್ನು ಸರಿಯಾಗಿ ಹಿಡಿಯದಿದ್ದರೆ ಅಷ್ಟು ಎತ್ತರದಿಂದ ಕೆಳಗೆ ಬಿದ್ದು ಪುಡಿಪುಡಿಯಾಗುವುದು ಖಂಡಿತ ಎಂದುಕೊಂಡು ಭಯದಿಂದ ಎರಡೂ  ಕೈಯಿಂದ ಕೊಡೆ ಹಿಡಿಯಲು ನೋಡಿದೆ, ಆದರೆ ತರಕಾರಿ ಚೀಲ ಇದ್ದಿದುರಿಂದ ಕೈ ಎತ್ತಲಾಗಲಿಲ್ಲ.  ಬದುಕಿ ಉಳಿದರೆ ನಾಳೆ  ಮತ್ತೆ  ತಂದರಾಯಿತು ಎಂದುಕೊಂಡು ತರಕಾರಿ ಚೀಲದ ಕೈ ಬಿಟ್ಟೆ.  ಚೌಕಾಸಿ ಮಾಡಿ ಮಾಡಿ, ಚೀಲ ತುಂಬಾ ತುಂಬಿಸಿದ್ದ ತರಕಾರಿಗಳು ಚೀಲದಿಂದ ಹೊರಬಿದ್ದು ಎಲ್ಲೆಂದರಲ್ಲಿ ಬೀಳುವುದನ್ನು ನೋಡಿ ದುಃಖವಾಯಿತು. ಅಲ್ಲಿ ನಡೆಯುತ್ತಿದ್ದ ಜನರ ಕೊಡೆಗಳ ಮೇಲೆ, ಚಲಿಸುತ್ತಿದ್ದ  ವಾಹನಗಳ ಮೇಲೆ  ಎಲ್ಲ ತರಕಾರಿಗಳು ಬೀಳತೊಡಗಿದವು ಅದನ್ನು ಕಂಡು  ಜನರೆಲ್ಲ ಆಶ್ಚರ್ಯದಿಂದ  ಮೇಲೆ ನೋಡತೊಡಗಿದರು. ಆಗಲೇ ಅವರಿಗೆ ನಾನು ಮೆಲಕ್ಕೆ ಹಾರುತ್ತಿದ್ದುದು ಕಾಣಿಸಿತು. ಕೆಲವರು ಬಿಟ್ಟ  ಬಾಯನ್ನು  ಬಿಟ್ಟಂತೆ ನೋಡುತ್ತಿದ್ದರೆ ಇನ್ನು ಕೆಲವರು ನಾನು ಹಾರುತ್ತಿರುವ ಫೋಟೋ ತೆಗೆಯತೊಡಗಿದರು. ನನಗೆ ಮುಜುಗರವಾಗತೊಡಗಿತು. ನಾನು ಕಾಪಾಡಿ .. ಕಾಪಾಡಿ ಎಂದು ಚೀರತೊಡಗಿದೆ. ಆದರೆ ನಾನು ಸಹಾಯಕ್ಕಾಗಿ ಕೂಗಿದ್ದು ಮಳೆಯ ಶಬ್ದದಲ್ಲಿ ಅಡಗಿ ಹೋಯಿತು.

ನಾನು ಚಿಕ್ಕವಳಿರುವಾಗ ಹಕ್ಕಿಯಂತೆ ನಾನೂ ಬಾನಲ್ಲಿ ಹಾರಬೇಕು ಎಂದು ಗಾಳಿಪಟವನ್ನು ಬೆನ್ನಿಗೆ ಕಟ್ಟಿ ಹಾರಲು ಹೋಗಿ ಬಿದ್ದು ಕಾಲು ಉಳುಕಿಸಿಕೊಂಡಿದ್ದೆ. ಆದರೆ ಈಗ ನಿಜವಾಗಿ ಹಾರುವ ಅವಕಾಶ ಸಿಕ್ಕಿದಾಗ ಆ ಆನಂದವೇ ಆಗುತ್ತಿಲ್ಲ, ಬದಲಾಗಿ ಕ್ಷೇಮವಾಗಿ ಕೆಳಗಿಳಿದರೆ ಸಾಕು ಅನ್ನಿಸುತ್ತಿದೆ. ಈಗ ಜೀವಭಯ ಜಾಸ್ತಿಯಾಗಿದೆ ಎಂದುಕೊಳ್ಳುತ್ತ ಕೆಳಗೆ ನೋಡಿದಾಗ ಜನ ನನಗೆ  ಸಹಾಯ ಮಾಡುವ ಬದಲು ಫೋಟೋ ತೆಗೆಯುವುದರಲ್ಲೇ ಮಗ್ನರಾಗಿದ್ದಾರೆ. ಈ ಜನಗಳೇ ಹಾಗೆ, ಸಹಾಯ ಮಾಡುವುದಕ್ಕಿಂತ ಫೋಟೋ ತೆಗೆಯುವುದರಲ್ಲೇ ಮಜಾ ತೆಗೆದುಕೊಳ್ಳುತ್ತಾರೆ,  ಅವರೂ ತಾನೆ ಏನು  ಮಾಡಿಯಾರು. ಆಗ ಮತ್ತಷ್ಟು ಜೋರಾಗಿ ಗಾಳಿ ಬೀಸತೊಡಗಿತು. ನಾನು ಮತ್ತಷ್ಟು  ಮೇಲಕ್ಕೇರತೊಡಗಿದೆ! ಹ್ಯಾರಿ ಪೋಟರ್ ಸಿನಿಮಾದಲ್ಲಿ  ಮಕ್ಕಳು ಪೊರಕೆ  ಮೇಲೆ ಅತ್ತಿಂದಿತ್ತ ಹಾರಾಡುತ್ತಿದ್ದರೆ ನಾನು ಕೊಡೆ ಹಿಡಿದುಕೊಂಡು ಹಾರುತ್ತಿದ್ದೇನೆ ! ಈಗಂತೂ ಕೆಳಗೆ ನೋಡಲೂ ಭಯ, ಎಲ್ಲ ಬರೀ ಚಿಕ್ಕದಾಗಿ ಕಾಣಿಸುತ್ತಿದ್ದವು.

ಇದ್ದಕ್ಕಿದ್ದಂತೆ ಗಾಳಿ ಕಡಿಮೆಯಾಗತೊಡಗಿತು ನಾನು ಕೆಳಗೆ ಇಳಿಯತೊಡಗಿದೆ. ಇಳಿಯುವಾಗ ಹೊಟ್ಟೆಯಲ್ಲಿ ಒಂಥರಾ ಎಲ್ಲ ಖಾಲಿಯಾದ ಅನುಭವ. ಎಲ್ಲಾದರೂ ಮರ ಸಿಕ್ಕಿದರೆ ಅದನ್ನು ಹಿಡಿಯಬೇಕು  ಎಂದುಕೊಂಡು ಸುತ್ತ ನೋಡಿದೆ. ನನ್ನ ಗ್ರಹಚಾರಕ್ಕೆ ಒಂದೇ ಒಂದು ಮರ ಕಾಣಿಸಲಿಲ್ಲ. ಮನುಷ್ಯನಿಗೆ ಕಟ್ಟಡ ಕಟ್ಟಿ ದುಡ್ಡು ಮಾಡುವುದರಲ್ಲಿ ಇರುವ ಆಸಕ್ತಿ ಮರಗಳನ್ನು ಬೆಳೆಯಿಸುವುದರಲ್ಲಿ ಇಲ್ಲ. ಛೆ! ಒಂದು ಕಟ್ಟಡವಾದರೂ ಸಿಕ್ಕರೆ ಅದರ ಟೆರೇಸ್ ಮೇಲಾದರೂ ಹಾರಿ ಪ್ರಾಣ ಉಳಿಸಿಕೊಳ್ಳಬೇಕು  ಅಂತ ನೋಡಿದೆ ಆದರೆ ಗಾಳಿ ಇದ್ದಕ್ಕಿದ್ದಂತೆ ಜೋರಾಯಿತು  ನನ್ನ ವ್ಯಾನಿಟಿ ಬ್ಯಾಗ್ ಮಾತ್ರ ನನ್ನ ಹೆಗಲಲ್ಲಿ ಗಟ್ಟಿಯಾಗಿ ಕೂತದ್ದು ಅರಿವಾಗಿದ್ದು ಗಾಳಿ ಬೀಸಿ ಅದು ನನ್ನ ಮುಖಕ್ಕೆ ಬಡಿದಾಗಲೇ. ನಾನು ಎಲ್ಲಿಗೆ ಹೋಗುತ್ತಿದ್ದೇನೆ, ನಮ್ಮ ಊರು ದಾಟಿ ಹೋಯಿತೇ , ಎಲ್ಲೋ ಹೋಗಿ ಬಿದ್ದರೆ ನಮ್ಮ ಮನೆಯವರಿಗೆ ತಿಳಿಯುವುದಾದರೂ ಹೇಗೆ?  ಯಾವುದೋ ಒಂದು ನದಿ ಕಾಣಿಸಿತು ನಮ್ಮ ಊರಿನಲ್ಲಿ ಯಾವ ನದಿಯಿದೆ ಎಂದು ಜ್ಞಾಪಿಸಿಕೊಳ್ಳಲು ನೋಡಿದೆ. ನನಗೆ ತಿಳಿದಂತೆ ಯಾವುದೇ ನದಿ ಇಲ್ಲ ! ಅಂದರೆ ನಾನು ನಮ್ಮ ಊರಿನಿಂದ ಬಹುದೂರ ಬಂದಿದ್ದೇನೆ! ಆ ನದಿ ಹತ್ತಿರ ಬರುತ್ತಿದ್ದಂತೆ ಗಾಳಿ ಕಡಿಮೆಯಾಗಿ ನಾನು ಮತ್ತಷ್ಟು ಕೆಳಗಿಳಿದೆ ದೇವರೇ, ನಾನು ನದಿಯಲ್ಲಿ ಬೀಳುವುದು ಬೇಡ, ನನಗೆ ಈಜಲು ಕೂಡ ಬರುವುದಿಲ್ಲ ಎಂದು ದೇವರನ್ನು ಮತ್ತೆ ಬೇಡಿಕೊಂಡೆ. ನದಿಯನ್ನು ದಾಟಿ ನಾನು ಮುಂದಕ್ಕೆ ಹೋದಾಗ ಸಮಾಧಾನವಾಯಿತು. ಮನೆಯವರೆಲ್ಲ ನನ್ನ ಬಗ್ಗೆ ಅದೆಷ್ಟು ಚಿಂತೆ ಮಾಡುತ್ತಿದ್ದಾರೇನೋ, ಜನರು ತೆಗೆದ ಫೋಟೋಗಳಲ್ಲಿ ನಾನು ಸ್ಪಷ್ಟವಾಗಿ ಕಾಣಿಸಿರಬಹುದೇ, ಅವರೆಲ್ಲ ತಮ್ಮ ಫೇಸ್ ಬುಕ್, ವಾಟ್ಸ್ಯಾಪ್ ಗಳಲ್ಲಿ ಹಾಕಿರಬಹುದೇ, ಟೀವಿಯಲ್ಲಿ ನನ್ನ ಬಗ್ಗೆ ಬಂದಿರಬಹುದೇ, ಹಾಗೇನಾದರೂ ಆದರೆ ಎಂದು ಒಂದು ಕಡೆ ಮುಜುಗರ ಅನಿಸಿದರೂ ಈ ಕಾರಣದಿಂದಾದರೂ ನಾನು ಫೇಮಸ್ ಆಗುತ್ತೇನಲ್ಲ ಎಂದು ಒಳಗೊಳಗೆ ಖುಶಿಯೂ ಆಯಿತು. ಆದರೆ ಇದೆಲ್ಲ ನಾನು ಬದುಕುಳಿದರೆ ಮಾತ್ರ ಎಂದು ಅನಿಸಿದಾಗ ಬೇಸರವಾಯಿತು.

ಹೀಗೆ ಮುಂದೆ ಮುಂದೆ ತೇಲುತ್ತ ಹೋಗುತ್ತಾ ಇದ್ದಂತೆ ಮಳೆ ಕಡಿಮೆಯಾಯಿತು. ಗಾಳಿಯೂ ಕಡಿಮೆಯಾಗುತ್ತ ಬಂದಿತು. ದೂರದಲ್ಲಿ ದೊಡ್ಡದಾದ ಹಸಿರು ದಿಬ್ಬ ಕಂಡಿತು. ಏನೇ ಆಗಲಿ, ಈ ದಿಬ್ಬ ಹತ್ತಿರ ಬಂದಾಗ ಕೊಡೆ ಬಿಟ್ಟು ಕೆಳಕ್ಕೆ ಹಾರಿ ಬಿಡುವುದು ಎಂದು ನಿಶ್ಚಯಿಸಿದೆ.  ದಿಬ್ಬ ಹತ್ತಿರವಾದಂತೆ ಗಾಳಿಯ ಪ್ರಭಾವ ಕಡಿಮೆಯಾಗತೊಡಗಿತು, ನಾನು ಇನ್ನೂ ಕೆಳಕ್ಕೆ ಹಾರತೊಡಗಿದೆ. ನನಗೆ ಬದುಕಿ ಉಳಿಯುವ ಎಲ್ಲಾ ಲಕ್ಷಣಗಳೂ ಗೋಚರಿಸತೊಡಗಿದವು. ವ್ಯಾನಿಟಿ ಬ್ಯಾಗ್ ಇದ್ದದ್ದು ಒಳ್ಳೆಯದಾಯಿತು. ಬಿದ್ದ ಮೇಲೆ ಮನೆಯವರಿಗೆ ಫೋನ್ ಮಾಡಲಿಕ್ಕಾದರೂ ಆಗುತ್ತದೆ! ಸ್ವಲ್ಪ ಹಣವೂ ಇದ್ದುದರಿಂದ ಮನೆಗೆ ಹೋಗಲೂ ಆಗುತ್ತದೆ ಎಂದುಕೊಳ್ಳುತ್ತಿರುವಾಗಲೇ ದಿಬ್ಬ ಬಂದಿತು, ನಾನು ಕೊಡೆ ಬಿಟ್ಟುಬಿಟ್ಟೆ. ದಿಬ್ಬ ಇಳಿಜಾರಾಗಿದ್ದುದುರಿಂದ ನಾನು ದಿಬ್ಬದ ಮೇಲೆ ಬಿದ್ದು ಉರುಳುತ್ತ ಕೆಳಗೆ ಹೋದೆ ಜೊತೆಗೆ ಜೋರಾಗಿ  ಹೋ ಎಂದು ಕಿರುಚುತ್ತಲೂ ಇದ್ದೆ.

ಅಷ್ಟರಲ್ಲಿ ಯಾರೋ ನನ್ನನ್ನು ಅಲುಗಾಡಿಸುತ್ತಿರುವಂತೆ ಅನಿಸಿತು. ಇಲ್ಲಿ ಯಾರಪ್ಪಾ ಇದ್ದಾರೆ ಎಂದು ನೋಡಿದರೆ ಅತ್ತೆ ನಿಂತಿದ್ದರು! ಅರೆ! ಇವರು ನನ್ನನ್ನು ಹಿಂಬಾಲಿಸಿಕೊಂಡು ಇಲ್ಲಿವರೆಗೂ ಬಂದರೇ ಎಂದು ಅಂದುಕೊಳ್ಳುವಷ್ಟರಲ್ಲಿ, ಏನೇ ಮೈತ್ರಿ, ಅದ್ಯಾಕೆ ಹಾಗೆ ಊರೆಲ್ಲ ಕೇಳಿಸೋ ಹಾಗೆ ಕಿರಿಚಿಕೊಂಡು ಮಂಚದ ಮೇಲಿಂದ ಕೆಳಗೆ ಬಿದ್ದೆ ಸಣ್ಣ ಮಕ್ಕಳ ಹಾಗೆ. ಎರಡು ಮಕ್ಕಳ ತಾಯಿಯಾಗಿ ಈ ವಯಸ್ಸಿನಲ್ಲಿ…ಛೆ ..ಛೆ   ಏನಾಯಿತು,  ಮಧ್ಯಾಹ್ನದ ಹೊತ್ತಿನ ನಿದ್ರೆಯಲ್ಲೂ ಕನಸು ಬಿತ್ತಾ ಎಂದು ಉದ್ಗಾರ ತೆಗೆದರು. ನಾನು ಆಶ್ಚರ್ಯದಿಂದ ಸುತ್ತ ನೋಡಿದೆ ಅರೆ!  ಹೌದು, ನಾನು ಮನೆಯಲ್ಲೇ ಇದ್ದೇನೆ, ಇಷ್ಟು ಹೊತ್ತು ನಡೆದಿದ್ದು ಕನಸಾ?! ಛೆ! ಒಂಥರಾ  ಚೆನ್ನಾಗಿತ್ತು ಕನಸು ಎಂದುಕೊಡು ನಾಚಿಕೊಳ್ಳುತ್ತ ಮೇಲೇಳಲು ನೋಡಿದೆ ಆದರೆ ಬಿದ್ದ ಪೆಟ್ಟಿಗೆ ಕಾಲು ಉಳುಕಿತ್ತು. ಅತ್ತೆ ತಕ್ಷಣ ತಮ್ಮ ಮಗನಿಗೆ ಫೋನ್ ಮಾಡಿ  ಡಾಕ್ಟರನ್ನು ಕೂಡ ಕರೆಸಿದರು. ಡಾಕ್ಟರ್ ಬ್ಯಾಂಡೇಜ್ ಹಾಕುತ್ತ  ನೀವು ಇಷ್ಟು ದೊಡ್ಡವರಾಗಿ ಮಂಚದ ಮೇಲಿಂದ ಅದು ಹೇಗೆ ಬಿದ್ದಿರಿ ಎಂದು ಗಹಗಹಿಸಿ ನಗಲು ಶುರುಮಾಡಿದರು. ಅವರೊಂದಿಗೆ ಗಂಡ,  ಮಕ್ಕಳು,  ಅತ್ತೆ ಎಲ್ಲ ಸೇರಿ ನಗತೊಡಗಿದರು, ನನಗೆ ನಾಚಿಕೆಯಾಗಿ ದಿಂಬಿನಿಂದ ಮುಖ ಮುಚ್ಚಿಕೊಂಡೆ.

ಕಿಲಾಡಿ ಅಜ್ಜಿ!!

ಯಶೋದಮ್ಮ  ತನ್ನ ಗಂಡನೊಡನೆ ಮದುವೆ ಮಂಟಪದಿಂದ ಗಡಿಬಿಡಿಯಿಂದ ಹೊರಬಂದರು. “ರೀ, ಬೇಗ ಒಂದು ಆಟೋ ಹಿಡೀರಿ, ಇನ್ನೊಂದು ಮದ್ವೆಗೆ ಹೋಗ್ಬೇಕು ಲಗ್ನದ ಟೈಮ್ ಆಗ್ತಾ ಬಂತು, ಮದುವೆ ಮುಗಿದ ಮೇಲೆ ಹೋದ್ರೆ ಏನು ಚೆನ್ನ” ಎಂದರು. ವಿರೂಪಾಕ್ಷ ನವರು   ಮುಂದೆ ಹೋಗಿ ಬರೋ ಆಟೋಗಳಿಗೆ ಕೈ ತೋರಿಸ್ತಿದ್ರೂ ಯಾವುದೇ ಆಟೋ ನಿಲ್ಲಲಿಲ್ಲ. “ಯಾವುದೂ ಸಿಗ್ತಾ ಇಲ್ವೆ ಏನ್ ಮಾಡೋದು” ಎಂದು ಸಪ್ಪೆ ಮೋರೆ ಹಾಕಿದಾಗ “ನಿಮ್ಮಿಂದ ಏನ್ ತಾನೇ ಆಗತ್ತೆ ಎಲ್ಲ ಇಷ್ಟು ವಯಸ್ಸಾಗಿದ್ದೂ  ದಂಡ,  ಎಲ್ಲ ನಾನೇ ಮಾಡ್ಬೇಕು ನನ್ನ ಕರ್ಮ” ಎಂದು ವಟಗುಟ್ಟುತ್ತ ಆಗ ತಾನೇ ಬರುತ್ತಿದ್ದ ಆಟೋಗೆ ಕೈ ತೋರಿಸಿದರು ಆಟೋ ನಿಂತಿತು. ಅಜ್ಜಿ ಎಲ್ಲಿಗೆ ಹೋಗ್ಬೇಕು ಎಂದು ಡ್ರೈವರ್ ಕೇಳಿದಾಗ ಮದುವೆ ಮಂಟಪದ ಹೆಸರು ಹೇಳಿ ಆಟೋ ಹತ್ತಿ ಗಂಡನಿಗೆ ಬೇಗ ಹತ್ತುವಂತೆ ಹೇಳಿ “ ನೋಡಿದ್ರಾ,  ನಾನ್ ಕೈ ತೋರಿಸ್ದ  ಮೊದಲ್ನೆ ಆಟೋ ನೆ ಸಿಕ್ಕಿ ಬಿಡ್ತು”  ಎಂದು ಹೆಮ್ಮೆಯಿಂದ ಬೀಗಿದಾಗ “ ಹೌದು,  ಈ ಆಟೋ ಡ್ರೈವರ್ ಗಳು  ಹೆಂಗಸ್ರಿಗೆ ಕೊಡೋ ಮರ್ಯಾದೆ  ಗಂಡಸ್ರಿಗೆ ಕೊಡೋಲ್ಲ.”  ಎಂದು ಗುಣುಗುಟ್ಟುತ್ತ ಆಟೋ ಹತ್ತಿದರು. ಆಟೋ ಮುಂದೆ ಹೋಗುತ್ತಿದ್ದಂತೆ ಯಶೋದಮ್ಮನಿಗೆ ಕವರ್ ತೆಗೆದುಕೊಳ್ಳಲು ಮರೆತಿದ್ದು ನೆನಪಾಗಿ ಡ್ರೈವರ್ ಬಳಿ  ಅಂಗಡಿ ಹತ್ರ ನಿಲ್ಲಿಸಲು ಹೇಳಿದರು. ಆದರೆ ಆಟೋದವ ಕೇಳಿಸದವನಂತೆ ಆಟೋ ಜೋರಾಗಿ ಮುಂದಕ್ಕೋಡಿಸತೊಡಗಿದ. ಯಶೋದಮ್ಮ ತನ್ನೆಲ್ಲ ಒಡವೆಗಳು ಸರಿಯಾಗಿದೆವೆಯೇ ಎಂದು ನೋಡುವುದರಲ್ಲಿ ಮಗ್ನರಾದರು. ಆಗ ವಿರೂಪಾಕ್ಷ “ ಒಡ್ವೆನೆಲ್ಲ ತೆಗ್ದು ಬ್ಯಾಗ್ ಗೆ ಹಾಕಿಬಿಡು ಕಾಲ ಕೆಟ್ಟದ್ದು. ಮದುವೆ ಮಂಟಪಕ್ಕೆ ಹೋದ್ ಮೇಲೆ ಹಾಕಿದ್ರಾಯಿತು”  ಎಂದರು. ಯಶೋದಮ್ಮ ಸಿಟ್ಟಿಗೆದ್ದು “ ನೀವ್ ಸುಮ್ನಿರಿ,  ನಿಮ್ಗೆ ಏನೂ ಗೊತ್ತಾಗಲ್ಲ”  ಎಂದು ಪತಿಯನ್ನು ಸುಮ್ಮನಾಗಿಸಿದರು. ಯಶೋದಮ್ಮ ಮತ್ತೆ, ಕವರ್ ತೊಗೊಳ್ಬೇಕು ನಿಲ್ಸಪ್ಪ ಆ ಅಂಗಡಿ ಮುಂದೆ ಎಂದು ಹೇಳಿದಾಗ ಡ್ರೈವರ್ ಆಟೋ ನಿಲ್ಲಿಸಿದ. ವಿರೂಪಾಕ್ಷ ಕೆಳಗಿಳಿದು ತಾನು ಹೋಗಿ ಕವರ್ ತರುವುದಾಗಿ ಹೇಳಿ ಹೊರಟರು. ಆಗ ಇದ್ದಕ್ಕಿದ್ದಂತೆ  ಡ್ರೈವರ್ ಆಟೋ ಸ್ಟಾರ್ಟ್ ಮಾಡಿ  ಮುಂದಕ್ಕೆ ಓಡಿಸತೊಡಗಿದ. ಯಶೋದಮ್ಮ ನಿಲ್ಲಿಸಲು ಹೇಳಿದರೂ ಡ್ರೈವರ್ ಮಾತ್ರ “ಇಲ್ಲಿ ಗಾಡಿ ನಿಲ್ಸೋ ಹಾಗಿಲ್ಲ ಅಜ್ಜಿ,  ಬೇರೆ ಎಲ್ಲಾದರೂ ನಿಲ್ಲಿಸ್ತೀನಿ” ಎಂದು ಮತ್ತೆ ಮುಂದಕ್ಕೆ ಓಡಿಸತೊಡಗಿದ. ಯಶೋದಮ್ಮ ಡ್ರೈವರ್ ನತ್ತ  ನೋಡಿದಾಗ ಅವನು ಕನ್ನಡಿಯಲ್ಲಿ ತನ್ನನ್ನೇ ನೋಡುತ್ತಿರುವುದನ್ನು ನೋಡಿ ಮುದುಕಿಯಾದರೂ ತನ್ನ ಸೌಂದರ್ಯಕ್ಕೆ ಏನೂ ಕುಂದು ಬಂದಿಲ್ಲ ಎಂದು ನಾಚಿಕೊಂಡರು. ಆದರೆ ಅವನು ಮತ್ತೆ ಮತ್ತೆ ನೋಡುತ್ತಿರುವುದನ್ನು ಕಂಡು ಸಂಶಯ ಬಂದಾಗ ಅವನು ತನ್ನನ್ನಲ್ಲ ತನ್ನ ಒಡವೆಗಳನ್ನು ನೋಡುತ್ತಿರುವುದು ಎಂದು ಗಮನಕ್ಕೆ ಬಂದಾಗ   ಯಶೋದಮ್ಮನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಆಟೋ ನಿಲ್ಲಿಸು ಎಂದು ಕಿರುಚಿದರೂ ಅವನು ಆಟೋ ಮಾತ್ರ ನಿಲ್ಲಿಸಲಿಲ್ಲ.  ಇಷ್ಟು  ವರುಷಗಳ  ಕಾಲ ತಾನು ಮೈ ತುಂಬಾ ಒಡವೆಗಳನ್ನು ಹಾಕಿ ಮೆರೆದಿದ್ದ ತನಗೆ ಇದೇ ಕೊನೆಯ ದಿನವೋ ಎಂದು ಗಾಬರಿಯಾಗಿ ಏನು ಮಾಡುವುದು ಎಂದು ಯೋಚಿಸತೊಡಗಿದರು.

ಯಶೋದಮ್ಮನಿಗೆ ಮೊದಲಿನಿಂದಲೂ ಒಡವೆಗಳೆಂದರೆ ಬಲು ಪ್ರೀತಿ. ಅದಕ್ಕೆ ತಕ್ಕಂತೆ ಅವರ  ತಂದೆ ಮದುವೆ ಸಮಯದಲ್ಲಿ ಹಲವು ಒಡವೆಗಳನ್ನು ಕೊಟ್ಟಿದ್ದರು. ಆದರೂ ಯಶೋದಮ್ಮನಿಗೆ ಅದು ಸಾಕೆನ್ನಿಸುತ್ತಿರಲಿಲ್ಲ. ಮದುವೆಯಾದ ಮೇಲೂ ಆಗಾಗ ಗಂಡನನ್ನು ಕಾಡಿ ಬೇಡಿ  ಸಾಕಷ್ಟು ಒಡವೆಗಳನ್ನು ಮಾಡಿಸಿಕೊಂಡಿದ್ದರು. ಯಾವ ಮದುವೆಗೆ ಹೋಗಬೇಕಾದರೂ ಮೈ ತುಂಬಾ ಒಡವೆಗಳನ್ನು ಹಾಕಿಕೊಂಡೇ ಹೋಗುತ್ತಿದ್ದರು. ಇದನ್ನು ನೋಡಿ ಜನ ಅವರಿಗೆ ಬಂಗಾರಮ್ಮ ಎಂದು ಹೆಸರಿಟ್ಟಿದ್ದರು. ಅವರು ತಮ್ಮ ಮದುವೆಗೆ ಬಂದರೆ ಗಣ್ಯ ವ್ಯಕ್ತಿ ಬಂದಹಾಗೆ ಎಂದು ಜನ ಭಾವಿಸಿ ಎಲ್ಲರೂ ಅವರನ್ನು ಮದುವೆ ಸಮಾರಂಭಕ್ಕೆ ತಪ್ಪದೆ ಆಮಂತ್ರಿಸುತ್ತಿದ್ದರು. ಅಷ್ಟೇ ಅಲ್ಲ ಅವರು ಬಂದಾಗ ಧಾವಿಸಿ ಬಂದು ಅವರನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುತ್ತಿದ್ದರು. ಶ್ರೀಮಂತ ಮಹಿಳೆ ತಮಗೆ ತುಂಬಾ ಬೇಕಾದವರು ಎಂದು ತೋರಿಸಿಕೊಡಲು ಅವರೊಡನೆ ನಿಂತು ಫೋಟೋ ತೆಗೆಸಿಕೊಳುತ್ತಿದ್ದರು. ಆಗೆಲ್ಲ ವಿರೂಪಾಕ್ಷನವರಿಗೆ ಯಶೋದಮ್ಮನ  ಮೇಲೆ ಅಸೂಯೆ ಉಂಟಾಗುತ್ತಿತ್ತು. ಆದರೆ ಯಶೋದಮ್ಮನಿಗೆ ಅವರೆಲ್ಲ ತನ್ನ ಒಡವೆಗಳಿಗೆ ಹಾಗೂ ತನ್ನ ಶ್ರೀಮಂತಿಕೆಗೆ ಮರ್ಯಾದೆ ಕೊಡುತ್ತಿರುವುದು ತನಗಲ್ಲ ಎಂದು ಗೊತ್ತಿದ್ದರೂ ಅದನ್ನು ಗಂಡನಿಗೆ ಹೇಳದೆ ಅವರು ಅಸೂಯೆಯಿಂದ ನೋಡುವಾಗ ಅವರೆದುರು ಮತ್ತಷ್ಟು ಹೆಮ್ಮೆಯಿಂದ ಬೀಗಿ ಅವರತ್ತ ವಾರೆ ನೋಟ ಬೀರಿ ಮಜಾ ಮಾಡುತ್ತಿದ್ದರು. ಕಾಲಕ್ರಮೇಣ ವಿರೂಪಾಕ್ಷನವರು ನಿವೃತ್ತರಾದ ಮೇಲೆ ಯಶೋದಮ್ಮ ಒಡವೆಗಳನ್ನು ಮಾಡಿಸುವುದು ನಿಂತುಹೋಯಿತು.

ಹೆಣ್ಣುಮಕ್ಕಳಿಬ್ಬರಿಗೆ ತಮ್ಮದೇ ಕೆಲವು ಒಡವೆಗಳನ್ನು ಕೊಡಬೇಕಾಗಿ ಬಂದಾಗ ಯಶೋದಮ್ಮನಿಗೆ ತುಂಬಾ ಬೇಸರವಾಯಿತು. ನಂತರ ಇಬ್ಬರು ಸೊಸೆಯಂದಿರಿಗೆ ಸಹ ತನ್ನದೇ ಒಡವೆಗಳನ್ನು ಕೊಡಬೇಕಾಯಿತು. ಮೊಮ್ಮಕ್ಕಳಿಗೂ ಕೊಡಬೇಕಾಯಿತು.  ಆದರೂ ಇನ್ನೂ ಕೆಲವು ಒಡವೆಗಳಿದ್ದುದರಿಂದ  ಯಶೋದಮ್ಮನಿಗೆ ಒಂದು ಉಪಾಯ ಹೊಳೆಯಿತು. ಅಂಗಡಿಗೆ ಹೋಗಿ ಕೆಲವು ನಕಲಿ ಒಡವೆಗಳನ್ನು ಖರೀದಿಸಿ ತಂದರು. ಅವುಗಳನ್ನು ಸಾಚಾ ಒಡವೆಗಳ ನಡುವೆ ಒಂದೊಂದಾಗಿ ಧರಿಸಿ ಸಮಾರಂಭಗಳಿಗೆ ಹೋಗತೊಡಗಿದರು. ಅವರ ಇನ್ನಷ್ಟು ಹೊಸ ಒಡವೆಗಳನ್ನು ನೋಡಿ ಜನ ಇವರಿಗೆ ಚಿನ್ನದ ಕೊಪ್ಪರಿಗೆ ಏನಾದರೂ ಸಿಕ್ಕಿರಬಹುದೇ ಎಂದು ಮಾತನಾಡಿಕೊಳ್ಳುತ್ತಿದ್ದರು. ಜನ ಅವರನ್ನು ಮತ್ತಷ್ಟು ಗೌರವದಿಂದ ಅವರನ್ನು ಕಾಣತೊಡಗಿದರು. ಹೆಣ್ಣುಮಕ್ಕಳಿಗೂ, ಸೊಸೆಯಂದಿರಿಗೂ  ಯಶೋದಮ್ಮನ  ಮೇಲೆ ಪ್ರೀತಿ ಜಾಸ್ತಿಯಾಗತೊಡಗಿತು. ಊರಿಗೆ ಬರುವಾಗ ಹೆಣ್ಣುಮಕ್ಕಳು ಹಾಗೂ ಸೊಸೆಯಂದಿರು ಸ್ಪರ್ಧೆಯಂತೆ ಒಳ್ಳೊಳ್ಳೆಯ ಸೀರೆಗಳನ್ನು ತಂದುಕೊಡಲಾರಂಭಿಸಿದರು. ಯಶೋದಮ್ಮನಿಗೆ  ಮಾತ್ರ ತನ್ನ ಗುಟ್ಟು ಎಲ್ಲರಿಗೂ ಗೊತ್ತಾಗಿಬಿಟ್ಟರೆ ಯಾರೂ ತನ್ನತ್ತ ತಿರುಗಿ ಕೂಡ ನೋಡಲಿಕ್ಕಿಲ್ಲ ಎಂದು ಭಯವಿದ್ದರೂ ಅದನ್ನು ತೋರ್ಪಡಿಸದೆ ಸಹಜವಾಗಿಯೇ ಇರತೊಡಗಿದರು. ಮತ್ತಷ್ಟು ಹೊಸ ಒಡವೆ ಖರೀದಿಸಲು ಇವಳಿಗೆ ದುಡ್ದೆಲ್ಲಿಂದ ಬಂದಿತು ಎಂದು ವಿರೂಪಾಕ್ಷನವರಿಗೆ ಅನುಮಾನವಾಗಿ ಕೇಳಿದಾಗ ತಾನು ಚಿನ್ನದ ಗಟ್ಟಿಗಳನ್ನು ಕೊಂಡು ಇಟ್ಟಿದ್ದೆ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದರು. ಹೆಣ್ಣುಮಕ್ಕಳು ಆಮ್ಮಾ ನಮ್ಗೆ ಹೊಸ ಒಡವೆ ಕೋಡೋದು ಬಿಟ್ಟು ನಿಮ್ಮ ಹಳೇ ಒಡವೆಗಳನ್ನು ಕೊಟ್ಟಿದ್ದೀರಲ್ಲ ಎಂದು ಆಕ್ಷೇಪಿಸಿದಾಗ ಯಶೋದಮ್ಮನಿಗೆ ಮುಜುಗರವಾದರೂ ಅದು ನನ್ನಿಷ್ಟ ನಂಗೆ ಯಾರಿಗೆ ಏನು ಕೊಡ್ಬೇಕು  ಅಂತ ಅನ್ಸುತ್ತೋ ಅದನ್ನೇ ಕೋಡೋದು ಅದು ಇಷ್ಟ ಇಲ್ಲಾಂದ್ರೆ ನಂಗೆ ವಾಪಾಸ್ ಕೊಡ್ಬಹುದು ಎಂದಾಗ ಎಲ್ಲಿ ತಮಗೆ ಸಿಕ್ಕಿರುವ ಒಡವೆಗಳೂ ಕೈತಪ್ಪುತ್ತೋ ಎಂಬ ಭಯದಿಂದ ಸುಮ್ಮನಾದರು. ಅಲ್ಲದೆ ತಾಯಿಯ ಕಾಲಾನಂತರ ಹೇಗೂ ತಮಗೆ ಪಾಲು ಸಿಕ್ಕೇ ಸಿಗುತ್ತೆ ಎಂದು ತಮ್ಮನ್ನು ತಾವೇ ಸಮಾಧಾನಮಾಡಿಕೊಂಡರು. ಹೆಣ್ಣುಮಕ್ಕಳು ಹಟ ಮಾಡದೆ ಇದ್ದುದು ನೋಡಿ ತಮ್ಮ ಗುಟ್ಟು ಎಲ್ಲಿ ಬಯಲಾಗುತ್ತೋ ಎಂದು ಹೆದರಿದ್ದ ಯಶೋದಮ್ಮ ನಿಗೆ ನಿರಾಳವಾಯಿತು.

ಆದರೆ ಇಂದು ತನ್ನ ಗುಟ್ಟು ಬಯಲಾಗುವುದು ಖಂಡಿತ ನಂತರ ತಾನು ತಲೆ ಎತ್ತಿ ತಿರುಗಲಾಗುವುದಿಲ್ಲ ಎಂದೆಲ್ಲ ಯೋಚಿಸಿ ಹೇಗಾದರೂ ಮಾಡಿ ಆಟೋವನ್ನು ನಿಲ್ಲಿಸಬೇಕೆಂದು ಮತ್ತೆ ಮತ್ತೆ ಕಿರುಚತೊಡಗಿದರು. ತಲೆ ಹೊರಹಾಕಿ ಹೆಲ್ಪ್,  ಕಾಪಾಡಿ ಎಂದು ಅರಚತೊಡಗಿದರು. ಅವರು ಹಾಗೆಂದಾಗ ಜನರಿಗೆ ತನ್ನ ಮೆಲೆ ಸಂಶಯ ಬಾರದಿರಲೆಂದು ಆಟೋದವ ಬ್ರೇಕ್ ಫೇಲ್ ಎಂದು ಕಿರುಚತೊಡಗಿದ!! ನೋಡುತ್ತಿದ್ದ ಜನರಿಗೆ ಇದು ಯಾವುದಾದರೂ  ಶೂಟಿಂಗೋ,  ನಿಜವೋ ತಿಳಿಯದೆ ಗೊಂದಲಕ್ಕೊಳಗಾದರು. ಕೆಲವರು ಈ ದೃಶ್ಯವನ್ನು  ತಮ್ಮ ಫೋನಿನಲ್ಲಿ ಚಿತ್ರೀಕರಿಸತೊಡಗಿದರು!! ಅಷ್ಟೊತ್ತಿಗಾಗಲೇ ಆಟೋದವ ಸಿಕ್ಕಸಿಕ್ಕ ಗಲ್ಲಿಗಳಲ್ಲಿ ನುಗ್ಗತೊಡಗಿದ ಆದರೆ ಅವನ ದುರಾದೃಷ್ಟಕ್ಕೆ  ಅಂದು ಜನರಿಲ್ಲದ ಬೀದಿಯೇ ಇರಲಿಲ್ಲ. ಯಶೋದಮ್ಮ ತಾನು ಧೈರ್ಯ ಕಳೆದುಕೊಳ್ಳಬಾರದು ಎಂದು ಮೆಲ್ಲನೆ  ಅವನ ಸೀಟಿನ ಹಿಂದೆ ಇರುವ ಅವನ ಐಡಿ ಫೋಟೋ ತೆಗೆದರು. ಅಲ್ಲದೆ ಪೋಲೀಸರ ಫೋನ್ ನಂಬರ್ ಒತ್ತಿ  ಫೋನ್ ಕೆಳಗೆ ಇಟ್ಟು ಜೋರಾಗಿ ಡ್ರೈವರ್ ಬಳಿ ನನ್ನನ್ನು ಕಿಡ್ನ್ಯಾಪ್  ಮಾಡಬೇಡಿ ನಿಮ್ಗೆ ನನ್ನ ಒಡ್ವೆ ಬೇಕಾದ್ರೆ ಕೊಡ್ತೀನಿ ಆದ್ರೆ ನನ್ನನ್ನು ಮಾತ್ರ ಏನೂ ಮಾಡಬೇಡಿ ಎಂದು ಯಾವುದೋ ಸಿನಿಮಾದಲ್ಲಿ ತಾವು ನೋಡಿದ್ದನ್ನು ನೆನಪಿಸಿಕೊಂಡು ಹಾಗೇ ಮಾಡತೊಡಗಿದರು. ಆದರೆ ಲೈನ್ ಕಟ್ಟಾಗಿದ್ದನ್ನು ಮಾತ್ರ ಅವರು ಗಮನಿಸಲೇ ಇಲ್ಲ!!  ಡ್ರೈವರ್ ಮಾತ್ರ ಮತ್ತಷ್ಟು ಅವಸರದಿಂದ ಗಾಡಿ ಓಡಿಸತೊಡಗಿದ.  ಇನ್ನು ಸ್ವಲ್ಪ ಸಮಯದಲ್ಲೇ ಪೋಲೀಸರು ಬರುತ್ತಾರೆ ಎಂದು ಧೈರ್ಯವಾಗಿ ಕುಳಿತು ಅಗಾಗ ಹಿಂದಕ್ಕೆ ನೋಡತೊಡಗಿದರು. ಎಷ್ಟು ಹೊತ್ತಾದರೂ ಪೋಲೀಸರ ಸುಳಿವಿಲ್ಲದೆ ಇದ್ದುದು ನೋಡಿ ನಿರಾಶೆಗೊಂಡು ತಾನೇ ಏನಾದರೂ ಮಾಡಬೇಕು ಎಂದುಕೊಂಡು ಯೋಚಿಸತೊಡಗಿದರು. ಡ್ರೈವರ್ ಗಮನ ತನ್ನ ಗಾಡಿಯ ಇಂಧನದತ್ತ ಹೋದಾಗ ಗ್ಯಾಸ್ ಮುಗಿಯುತ್ತ ಬಂದುದು ನೋಡಿ ಇನ್ನು ತಾನು ಸಿಕ್ಕಿ ಬಿದ್ದಂತೆ ಅದಕ್ಕೆ ಮೊದಲು ತಾನು ಒಡವೆಗಳನ್ನು ಕಸಿದು ಓಡಿಹೋಗಬೇಕೆಂದು ಯೋಚಿಸಿ  ಅಜ್ಜಿ ಬೇಗ ಬೇಗ ನಿಮ್ ಒಡ್ವೆಗಳನ್ನೆಲ್ಲ ನಿಮ್ಮ ಬ್ಯಾಗ್ ನಲ್ಲಿ ಹಾಕಿ ಕೊಡಿ ಟೈಮಿಲ್ಲ  ಇಲ್ಲಾಂದ್ರೆ ನಿಮ್ಮನ್ನ ಕೊಲೆ ಮಾಡ್ಬೇಕಾಗುತ್ತೆ ಎಂದು ಹೆದರಿಸಿದ.

ಯಶೋದಮ್ಮ  ಹೆದರಿ ಏನು ಮಾಡುವುದು ಎಂದು ಯೋಚಿಸುತ್ತಲೇ  ಮೆಲ್ಲನೆ  ಮನಸ್ಸಿಲ್ಲದ ಮನಸ್ಸಿನಿಂದ ಅವನು ಹೇಳಿದಂತೆ ಒಂದೊಂದಾಗಿ ತಮ್ಮ ಒಡವೆಗಳನ್ನು ತೆಗೆಯತೊಡಗಿದರು.  ಇದ್ದಕ್ಕಿದ್ದಂತೆ ಅವರಿಗೊಂದು ಉಪಾಯ ಹೊಳೆಯಿತು. ತಮ್ಮ ಬ್ಯಾಗಿನಲ್ಲಿದ್ದ  ಒಳ ಪದರ ಹೊಲಿಗೆ ಬಿಟ್ಟಿತ್ತು. ಅದನ್ನು ಇನ್ನಷ್ಟು ಬಿಡಿಸಿ  ಅದರಲ್ಲಿ ತಮ್ಮ ಚಿನ್ನದ ಒಡವೆಗಳನ್ನು ಹಾಕಿದರು. ನಕಲಿ ಒಡವೆಗಳನ್ನು ತೆಗೆದು ಮೇಲೆ ಕಾಣುವಂತೆ ಹಾಕಿ ನಗುತ್ತ ತಗೋಪ್ಪ ನಿಂಗೆ ಬೇಕಿದ್ರೆ ತೊಗೊಂಡ್ ಹೋಗು ಆದ್ರೆ ನಂಗೆ ಮಾತ್ರ ಏನೂ ಮಾಡ್ಬೇಡ ಎನ್ನುತ್ತ ಬ್ಯಾಗನ್ನು ಅವನತ್ತ ಚಾಚಿದರು. ಅವನು ಬ್ಯಾಗ್ ಕೈಗೆ ಬರುತ್ತಲೇ ಆಟೋ ನಿಲ್ಲಿಸತೊಡಗಿದ. ಆಗ ಯಶೋದಮ್ಮ ಆದರೆ ಆ ಒಡ್ವೆಗಳು ಮಾತ್ರ  ನಕಲಿ ನೀನು ಇಷ್ಟು ಕಷ್ಟ ಪಟ್ಟಿದ್ದೇ ಬಂತು ಏನೂ  ಗಿಟ್ಟಲ್ಲ  ಎಂದು ನಗತೊಡಗಿದಾಗ  ಡ್ರೈವರ್ ಗೆ ಅನುಮಾನ ಬಂದು ಒಂದು ಒಡವೆಯನ್ನು ತಿಕ್ಕಿದಾಗ ಅದರ ಬಣ್ಣ ಕಳೆಗುಂದಿದ್ದು ನೋಡಿ ಅಯ್ಯೋ  ತನ್ನ ದುರಾದೃಷ್ಟವೇ,  ಇನ್ನು ಈ ಅಜ್ಜಿ ತನ್ನನ್ನು ಪೋಲೀಸರಿಗೆ ಹಿಡಿದುಕೊಡಬಹುದು ಎಂದು ಬ್ಯಾಗನ್ನು ಆಲ್ಲೇ ಬಿಟ್ಟು ಗಾಡಿಯಿಂದ ಇಳಿದು ಓಡತೊಡಗಿದ. ಯಶೋದಮ್ಮ ಅವನು ಬ್ಯಾಗು ಬಿಟ್ಟು ಓಡಿದ್ದು ನೋಡಿ  ಉಸ್ಸೆಂದು ಉಸಿರು ಬಿಟ್ಟು ನಿರಾಳಗೊಂಡು ತಮ್ಮ ಉಪಾಯ ಫಲಿಸಿತು ಎಂದು ಸಂತಸದಿಂದ ಬ್ಯಾಗನ್ನು ಕೈಗೆತ್ತಿ ಕಳ್ಳ  ಕಳ್ಳ  ಎಂದು ಕೂಗತೊಡಗಿದರು. ಸುತ್ತಮುತ್ತಲಿದ್ದ ಜನ ಓಡುತ್ತಿದ್ದ  ಡ್ರೈವರ್ ನನ್ನು ನೋಡಿ ಅವನೇ ಕಳ್ಳನಿರಬೇಕೆಂದು ಅವನನ್ನು ಹಿಂಬಾಲಿಸಿ ಹೋಗಿ ಅವನನ್ನು ಹಿಡಿದು ಅವನನ್ನು ಚೆನ್ನಾಗಿ ತದಕಿದರು. ಯಾರೋ ಪೋಲೀಸರಿಗೆ ಫೋನ್ ಮಾಡಿದರು. ಪೋಲೀಸರು ಬಂದು  ಯಶೋದಮ್ಮನಿಂದ ಎಲ್ಲ ವಿವರ ಪಡೆದು ಡ್ರೈವರ್ ಗೆ ಕೋಳ ಹಾಕಿಕೊಂಡು ಕರೆದೊಯ್ದರು ಡ್ರೈವರ್ ಮಾತ್ರ ಇಷ್ಟೊಂದ್ ನಕಲೀ ಒಡವೆಗಳನ್ನ್ ಯಾರಾದ್ರೂ ಹಾಕ್ತಾರಾ  ಏನ್ ಜನಾನೋ ಎಂದು ವಟಗುಟ್ಟುತ್ತ ನಡೆದ. ಯಶೋದಮ್ಮ ತನ್ನ  ಉಪಾಯ ಫಲಿಸಿದ್ದಕ್ಕೆ ಬೆನ್ನನ್ನು ತಾನೇ ತಟ್ಟುತ್ತ  ಮದುವೆ ಮುಹೂರ್ತ ಮೀರಿದ್ದರಿಂದ  ಮದುವೆಗೆ ಹೋಗದೆ ತನ್ನ ಗಂಡನನ್ನು ಹುಡುಕುತ್ತ ಹೊರಟರು.

ಗೌರಮ್ಮನ ಕಿತಾಪತಿ

ಗೌರಮ್ಮ ಕಸ ಎಸೆಯಲು ಮನೆಯಿಂದ ಹೊರ ಬಂದರು. ಅವರ ದೃಷ್ಟಿ ಎದುರು ಮನೆಯ ಕಡೆ ಹೋಯಿತು. ಆ ಮನೆಯ ಬಾಗಿಲು ತೆರೆದಿತ್ತು. ಅರೆ ! ಮೊನ್ನೆ  ತಾನೇ ಆ ಮನೆಯಲ್ಲಿದ್ದ ನಾಲ್ಕೈದು ಅವಿವಾಹಿತ ಗಂಡಸರು ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಅಷ್ಟರಲ್ಲೇ ಬೇರೆಯವರು ಬಂದ್ರಾ ಎಂದು ಅನುಮಾನದಿಂದ ಕಿಟಕಿಯತ್ತ ಕಣ್ಣಾಡಿಸಿದರು. ಆದರೆ ಕಿಟಕಿಗಳು ಮುಚ್ಚಿದ್ದವು. ಹೊರಗೆ ಯಾರ ಚಪ್ಪಲಿಯೂ ಕಾಣಲಿಲ್ಲ. ಒಳ್ಳೆಯದೇ ಆಯಿತು. ಈ ಮನೆ ಕಟ್ಟಿದಾಗಿನಿಂದ ಆ ಮನೆಯ ಒಳಗೆ ಹೇಗಿದೆ ಎಂದು ನೋಡಬೇಕೆಂದು ಬಹಳ ಆಸೆಯಿತ್ತು. ಆ ಮನೆ ನೋಡಿ ಬಂದವರೆಲ್ಲರೂ ಬಹಳ ಚೆನ್ನಾಗಿದೆ ಅದ್ಭುತವಾಗಿದೆ ಎಂದೆಲ್ಲ ಹೇಳುವುದನ್ನು ನೋಡಿ  ಆ ಮನೆಯನ್ನು ನೋಡಬೇಕೆಂಬ ಆಸೆ ಮತ್ತಷ್ಟು ಹೆಚ್ಚಾಯಿತು. ಆದರೆ ತನ್ನ ಮಗ ಸುಂದರನಿಗೂ ಆ ಮನೆಯ ಒಡೆಯನಿಗೂ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಮನಸ್ತಾಪವಾಗಿತ್ತು. ಹಾಗಾಗಿ ಎದುರು ಮನೆಯವರಾದರೂ ತಮಗೆ ಗೃಹ ಪ್ರವೇಶಕ್ಕೆ ಆಮಂತ್ರಣವಿರಲ್ಲಿಲ್ಲ. ಇದರಿಂದಾಗಿ ಆ ಮನೆ ಹೇಗಿದೆ ಎಂದು ನೋಡುವ ಅವಕಾಶ ಗೌರಮ್ಮನಿಗೆ ತಪ್ಪಿತ್ತು. ಆದರೂ ಯಾವತ್ತಾದರೂ ಒಂದು ದಿನ ನೋಡೇ ನೋಡುತ್ತೇನೆ ಎಂದು ವಿಶ್ವಾಸವಿತ್ತು. ಆದರೆ ಆ ಮನೆಯವರು ವಾಸಿಸಲು ಬಂದ ಆರು ತಿಂಗಳಲ್ಲೇ ಆ ಮನೆಯೊಡೆಯನಿಗೆ ದುಬೈನಲ್ಲಿ ಉತ್ತಮ ಕೆಲಸ ಸಿಕ್ಕಿದುದರಿಂದ ಈ ಮನೆಯನ್ನು ಬಾಡಿಗೆಗೆ ಕೊಟ್ಟು ದುಬೈ ಸೇರಿದ್ದರು. ಆ ಮನೆಗೆ ಬಾಡಿಗೆಗೆ ಕುಟುಂಬ  ಬಂದರೆ  ಗೌರಮ್ಮ ಅವರನ್ನು ಮಾತನಾಡಿಸುವ ನೆಪದಿಂದ ಮನೆ ನೋಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಒಬ್ಬೊಬ್ಬ ಗಂಡಸರೇ ಬರತೊಡಗಿದಾಗ ಅವರ ಯೋಜನೆ ತಲೆಕೆಳಗಾಯಿತು. ಕ್ರಮೇಣ ಆ ಆಸೆ ಕೈಗೂಡಲಾರದು ಎಂದು ಅದಕ್ಕೆ ಎಳ್ಳು ನೀರು ಬಿಟ್ಟಿದ್ದರು. ಆದರೆ ಇವತ್ತು ಮನೆಯ ಬಾಗಿಲು ತೆರೆದೇ ಇದ್ದುದ್ದು ಗೌರಮ್ಮನಲ್ಲಿದ್ದ ಆಸೆ ಮತ್ತೆ ಚಿಗುರಿತು. ಮಗ ಸೊಸೆ ಕೆಲಸಕ್ಕೆ ಹೋಗಿದ್ದರು. ಸ್ವಲ್ಪದೂರದಲ್ಲಿದ್ದ ಇನ್ನೊಂದು ಮನೆಯವರೂ ಕೆಲಸಕ್ಕೆ ಹೋಗಿಯಾಗಿತ್ತು. ಯಾರೂ ನೋಡುತ್ತಿಲ್ಲವಲ್ಲ ಎಂದು ಖಾತ್ರಿ ಪಡಿಸಿ ತಮ್ಮ ಮನೆಗೆ ಬೀಗ ಹಾಕಿ ಗಡಿಬಿಡಿಯಿಂದ ಎದುರು ಮನೆಗೆ ಧಾವಿಸಿದರು. ಮನೆಯೊಳಗೆ ಯಾರಾದರೂ ಇದ್ದಾರೇನೋ ಎಂದು ಇಣುಕಿದರು. ಯಾರೂ ಕಾಣಲಿಲ್ಲ ಹಾಗೇ ಒಳಕಾಲಿಟ್ಟು ಕಳ್ಳ ಬೆಕ್ಕಿನಂತೆ ಸುತ್ತಲೂ ನೋಡುತ್ತಾ ನಡೆದರು. ಹಾಲ್ ನಿಜವಾಗಿಯೂ ಚೆನ್ನಾಗಿತ್ತು. ವಿಶಾಲವಾಗಿ ಗಾಳಿ ಬೆಳಕು ಚೆನ್ನಾಗಿತ್ತು. ನೆಲದ ಮೇಲೆ ರಂಗೋಲಿ ಬಿಡಿಸಿದಂತೆ  ಬಣ್ಣ ಬಣ್ಣದ ಹಾಸುಗಲ್ಲಿನಿಂದ ಮಾಡಿದ ರೀತಿ ಚೆನ್ನಾಗಿತ್ತು. ದೇವರ ಕೋಣೆಯೂ ವಿಶಾಲವಾಗಿತ್ತು. ಆದರೆ ಅಲ್ಲಿ ದೇವರ ಕ್ಯಾಲೆಂಡರ್ ಬಿಟ್ಟರೆ ಏನೂ ಇರಲಿಲ್ಲ. ಅಲ್ಲಿಂದ ಅಡಿಗೆ ಮನೆಗೆ ಬಂದರು. ಅಡಿಗೆ ಮನೆ ಅವರಿಗೆ ಬಹಳ ಹಿಡಿಸಿತು ಆದರೆ ಅಲ್ಲಿದ್ದ ಗಂಡಸರು ಕೊಳಕು ಮಾಡಿ  ಬಿಟ್ಟು ಹೋಗಿದ್ದರು. ಛೆ ! ಇಷ್ಟು ಚೆನ್ನಾಗಿರುವ ಮನೆಯನ್ನು ಗಂಡಸರಿಗೆ ಯಾತಕ್ಕಾದರೂ ಕೊಟ್ಟರೋ ಎಂದುಕೊಳ್ಳುತ್ತ ಮಲಗುವ ಕೋಣೆಯನ್ನು ನೋಡಲು ಹೋದರು.

ಇತ್ತ ಮನೆಯ ಬ್ರೋಕರ್ ತಾನು ಮನೆಗೆ ಬೀಗ ಹಾಕಲು ಮರೆತದ್ದು ಜ್ಞಾಪಕಕ್ಕೆ ಬಂದು ಮತ್ತೆ ಮನೆಗೆ ಬಂದು ಬೀಗ ಹಾಕಿಕೊಂಡು ಹೋದ. ಅವನು ಒಳಗಿದ್ದ ಗೌರಮ್ಮನನ್ನು ಗಡಿಬಿಡಿಯಲ್ಲಿ ನೋಡಲೇ ಇಲ್ಲ.  ಗೌರಮ್ಮ ಮನೆ ನೋಡುವುದರಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ಹೊರಗೆ ಬೀಗ ಹಾಕಿದ ಸದ್ದು ಕೂಡ ಅವರ ಕಿವಿಗೆ ಬೀಳಲಿಲ್ಲ.  ಪೂರ್ತಿ ಮನೆಯನ್ನು ನೋಡಿಯಾದ ಮೇಲೆ ಇನ್ನು ಮನೆಗೆ ಹೋಗಬೇಕು, ಅಡಿಗೆ ಮಾಡಬೇಕು ಎಂದು ಯೋಚಿಸುತ್ತ ಬಾಗಿಲ ಬಳಿ ಬಂದರೆ ಬಾಗಿಲು ಮುಚ್ಚಿತ್ತು !! ಬಾಗಿಲನ್ನು ತೆರೆಯಲು ನೋಡಿದರು ಆಗಲಿಲ್ಲ. ಗೌರಮ್ಮನಿಗೆ ಭಯವಾಯಿತು ಯಾರಾದರೂ ಬಂದು ಬೀಗ ಹಾಕಿದರೋ ಎಂದು ಮತ್ತೆ ಮತ್ತೆ ಪ್ರಯತ್ನ ಮಾಡಿದರು, ಬಾಗಿಲನ್ನು ತಟ್ಟಿದರು. ನಾನು ಒಳಗೆ ಇದ್ದೀನಿ  ಬಾಗಿಲು ತೆಗೀರಿ ಎಂದು ಜೋರಾಗಿ ಬಾಗಿಲು ಬಡಿಯಲು ಶುರು ಮಾಡಿದರು. ಪ್ರತ್ಯುತ್ತರ ಬಾರದೆ ಇರುವುದನ್ನು ಕಂಡು ಕಿಟಕಿ ತೆರೆದು ನೋಡಿದರು. ಹೊರಗೆ ಯಾರೂ ಇರಲಿಲ್ಲ,  ಅಯ್ಯೋ ದೇವರೇ ಏನಾಗಿ ಹೋಯಿತು, ಯಾರಾದರೂ ಕಾಪಾಡಿ ಎಂದು ಕಿಟಕಿ ಬಳಿ ನಿಂತು ಜೋರಾಗಿ ಕಿರುಚತೊಡಗಿದರು ಆದರೆ ಅಲ್ಲಿ ಯಾರಾದರೂ ಇದ್ದರಲ್ಲವೇ ಸಹಾಯ ಮಾಡುವುದು ಎಲ್ಲರೂ ಕೆಲಸಕ್ಕೆ ಹೋಗುವವರೇ. ದೇವರೇ ತಾನೆಂತಹ ತಪ್ಪು ಮಾಡಿ ಬಿಟ್ಟೆ ತನ್ನ ಗತಿಯೇನು ? ಬೀಗ ತೆಗೆದವರು ಬೀಗ ಹಾಕಲು ಬರುತ್ತಾರೆಂದು ತನಗ್ಯಾಕೆ ಹೊಳೆಯಲಿಲ್ಲ ? ಸಾಯಂಕಾಲ ತನ್ನ ಮಗ ಸೊಸೆ ಬರುವವರೆಗೂ ತಾನು ಹೊಟ್ಟೆಗಿಲ್ಲದೆ ಇಲ್ಲಿ ಬಿದ್ದಿರಬೇಕೆ ಎಂಬ ಯೋಚನೆಯಿಂದ ತಲೆ ಗಿರ್ರೆಂದಿತು. ತನಗೆ ಬೀಪಿ ಬೇರೆ ಇದೆ ಮಾತ್ರೆ ತೆಗೆದುಕೊಳ್ಳದಿದ್ದರೆ ಕಷ್ಟ, ಏನು  ಮಾಡುವುದು ಎಂದು ಯೋಚನೆ ಮಾಡಿದರು. ಯಾರಿಗಾದರೂ ಫೋನ್ ಮಾಡೋಣ ಎಂದರೆ ಫೋನ್ ಮನೆಯಲ್ಲೇ  ಬಿಟ್ಟಿದ್ದರು. ಎಂಥ ಪೆದ್ದು ಕೆಲಸ ಮಾಡಿಬಿಟ್ಟೆ, ಆರಾಮವಾಗಿ ಮನೆಯಲ್ಲಿ ಇರಬೇಕಾದವಳು ಆಸೆಗೆ ಬಲಿ ಬಿದ್ದು ಮನೆ ನೋಡಲು ಬಂದು ಈಗ  ಹೊಟ್ಟೆಗಿಲ್ಲದೆ ಉಪವಾಸ ಇರಬೇಕಾಯಿತಲ್ಲ ನನ್ನ ಪ್ರಾರಬ್ಧ  ಕರ್ಮ, ಅದಕ್ಕೆ ಇರಬೇಕು  ಅತಿ  ಆಸೆ ಗತಿಕೇಡು  ಎನ್ನುವುದು. ಮಗನಿಗೆ ತಾನಿಲ್ಲಿಗೆ  ಬಂದುದು ಗೊತ್ತಾದರೆ ಸುಮ್ಮನಿರುವನೆ? ತನ್ನ ಪೆದ್ದುತನಕ್ಕೆ ನಗುವುದಿಲ್ಲವೇ , ಸೊಸೆಯ ಎದುರು ತನ್ನ ಮರ್ಯಾದೆ ಹೋಗುತ್ತಲ್ಲ ಅವರು ಬರುವುದರೊಳಗೆ ಇಲ್ಲಿಂದ ಹೇಗಾದರೂ  ಮಾಡಿ  ಹೊರ ಹೋಗಬೇಕೆಂದು  ಏನೋ ಹೊಳೆದವರಂತೆ  ಹಿತ್ತಿಲ ಬಾಗಿಲತ್ತ  ಧಾವಿಸಿದರು. ಆದರೆ ಅದಕ್ಕೂ ಹೊರಗಿನಿಂದ  ಬೀಗ  ಹಾಕಲಾಗಿತ್ತು.  ಕಿಟಕಿಗಳೋ  ಇನ್ನೂ ಹೊಸದಾಗಿದ್ದರಿಂದ  ಗಟ್ಟಿಮುಟ್ಟಾಗಿದ್ದವು. ತಾನು ಮಗ ಬರುವವರೆಗೆ ಇಲ್ಲೇ ಕೊಳೆಯಬೇಕೆ ಎಂದು ಮುಜುಗರ ಪಟ್ಟರು. ಭಯದಿಂದ ಗಂಟಲು ಒಣಗತೊಡಗಿತ್ತು. ನೀರಾದರೂ ಇದೆಯೇ ಎಂದು ಅಡಿಗೆ ಮನೆಯ ಪೈಪು ತಿರುಗಿಸಿದರು, ನೀರು ಬರುತ್ತಿದ್ದುದನ್ನು ಕಂಡು ಅಬ್ಬಾ! ಹೊಟ್ಟೆಗೇನೂ ಇಲ್ಲದಿದ್ದರೂ ನೀರಾದರೂ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಂಡರು. ತಾನು ಇಲ್ಲಿಗೇಕೆ ಬಂದೆ ಎಂದರೆ ಮಗನಿಗೆ ಏನು ಹೇಳುವುದು ಎಂದು ಯೋಚಿಸುತ್ತ ಕುಳಿತರು. ಆಗಾಗ ಯಾರಾದರೂ ನೋಡಸಿಗುವರೆನೋ ಎಂದು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರು. ತನ್ನ ಗ್ರಹಚಾರಕ್ಕೆ ಪೋಸ್ಟ್ ಮ್ಯಾನ್ ಕೂಡ ತಾನು ಈ ಮನೆಗೆ ಬರುವ ಮೊದಲೇ ಬಂದು ಹೋಗಿದ್ದ. ಹಾಗೆ ನೋಡಿದರೆ ಒಳ್ಳೆಯದೇ ಆಯಿತು ಅವನು ತಾನಿರುವ ಪರಿಸ್ಥಿತಿ ನೋಡಿ ಊರೆಲ್ಲ ಡಂಗುರ ಸಾರಿ ನಗುವುದಿಲ್ಲವೇ. ಇರುವ ಮೂರು ನಾಲ್ಕು ಮನೆಗಳಲ್ಲಿ ಎಲ್ಲರೂ ಕೆಲಸಕ್ಕೆ ಹೋಗುವವರೇ. ಆದ್ದರಿಂದ ತಮ್ಮ ಮನೆಯನ್ನೊಂದು ಬಿಟ್ಟರೆ ಎಲ್ಲ ಮನೆಗಳಿಗೂ ಬೀಗ, ಹೀಗಾಗಿ ಯಾರೂ ಬರಲಾರರು.

ತಮ್ಮ ಮಗ ಯಾವಾಗಲೂ ಮೊಬೈಲ್ ಫೋನ್ ಹತ್ತಿರ ಇಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದ. ತಾನು ಮಾತ್ರ ಅದನ್ನು ಟೇಬಲ್ ಮೇಲಿಟ್ಟು ತನ್ನ ಕೆಲಸದಲ್ಲಿ ಮುಳುಗಿಬಿಡುತ್ತಿದ್ದೆ. ಈಗ ಅದರ ಬೆಲೆ ಗೊತ್ತಾಗುತ್ತಿದೆ ಅವನು ಯಾಕೆ ಹಾಗೆ ಹೇಳುತ್ತಿದ್ದ ಎಂದು ಅನಿಸಿ ಅವನ ಮಾತು ಕೇಳದ್ದಕ್ಕೆ  ಪಶ್ಚಾತ್ತಾಪಗೊಂಡರು. ತನ್ನ ಪರಿಸ್ಥಿತಿ ಬಿಸಿ ತುಪ್ಪದಂತೆ ನುಂಗಲೂ ಉಗುಳಲೂ ಆಗದ ಸ್ಥಿತಿ ಜನರ ಸಹಾಯ ಕೇಳಿದರೆ ನಗೆಪಾಟಲು, ಕೇಳದಿದ್ದರೆ ಇಲ್ಲೇ ಕೊಳೆಯಬೇಕು. ಏನು ಮಾಡುವುದು ಎಂದು ಯೋಚಿಸುತ್ತ ಕುಳಿತಲ್ಲೇ ನಿದ್ದೆ ಹೋದರು. ಮಧ್ಯಾಹ್ನ ಎರಡು ಗಂಟೆಗೆ  ಹಸಿವಿನಿಂದ ಎಚ್ಚರವಾಯಿತು. ಮೊದಲು ತಾನೆಲ್ಲಿದ್ದೇನೆ ಎಂಬುದೇ ಅರಿವಾಗಲಿಲ್ಲ ನಂತರ ಸುತ್ತಲೂ ನೋಡಿದಾಗ ವಾಸ್ತವ ಸ್ಥಿತಿಯ ಅರಿವಾಗಿ ಕಸಿವಿಸಿಗೊಂಡರು. ಛೆ ! ಇದು ಕನಸಾಗಿದ್ದರೆ ಚೆನ್ನಾಗಿತ್ತು ಎಂದುಕೊಂಡರು. ಮತ್ತೆ ಕಿಟಕಿಯಿಂದ ಕಣ್ಣು ಹಾಯಿಸಿ ಸುತ್ತ ನೋಡಿದರು, ರಣ ರಣ ಬಿಸಿಲು. ಒಂದು ಕಾಗೆ ಕೂಡ ಕಾಣಲಿಲ್ಲ. ಇಂಥಹ ಸುಡು ಬಿಸಿಲಲ್ಲಿ ಯಾರನ್ನಾದರೂ ನಿರೀಕ್ಷಿಸುವುದು ಮೂರ್ಖತನ. ಇನ್ನೂ ಸಂಜೆಯವರೆಗೆ ನೀರೇ ಗತಿ ಎಂದು ಎದ್ದು ಮತ್ತೆ  ಹೊಟ್ಟೆತುಂಬಾ ನೀರು ಕುಡಿದರು. ತಲೆ ತಿರುಗತೊಡಗಿತ್ತು. ಬೀಪಿ ಮಾತ್ರೆ  ತೆಗೆದುಕೊಳ್ಳುವ ಸಮಯ, ಏನು ಮಾಡಿಕೊಂಡು ಬಿಟ್ಟೆ, ನೋಡಿದ ಜನ ನಗುವುದಿಲ್ಲವೇ ತನ್ನ ಪರಿಸ್ಥಿತಿಗೆ ಎಂದು ನಾಚಿಕೆ ಪಟ್ಟುಕೊಂಡರು. ಏನು ಮಾಡಲೂ ಆಗದೆ ನಿಸ್ಸಹಾಯಕರಾಗಿ ಮತ್ತೆ ಮತ್ತೆ ಮನೆಯನ್ನು ನೋಡತೊಡಗಿದರು. ಈಗ ನೋಡಲೂ ಉತ್ಸಾಹವಿರಲಿಲ್ಲ ಆದರೂ ಸಮಯ ಕಳೆಯಬೇಕಲ್ಲ ಎಂದು ಅತ್ತಿಂದಿತ್ತ ಅಡ್ಡಾಡತೊಡಗಿದರು. ಸ್ವಲ್ಪ ಸಮಯದ ನಂತರ ತಲೆಸುತ್ತು ಬಂದಂತಾಯಿತು.

ಸಂಜೆ ಐದುವರೆಗೆ ಮಗ ಸೊಸೆ ಕೆಲಸ ಮುಗಿಸಿ ಮನೆಗೆ ಬಂದರು. ಬೆಲ್ ಮಾಡಿದರೆ ಅಮ್ಮ ಬಾಗಿಲೇ ತೆರೆಯುತ್ತಿಲ್ಲ. ಸುಂದರನಿಗೆ ತನ್ನ ಅಮ್ಮನಿಗೇನಾದರೂ ಆಯಿತೆ, ಮೊದಲೇ ಬೀಪಿ ಇದೆ ಎಂದು ಆತಂಕವಾಯಿತು. ಕಿಟಕಿಯ ಬಳಿ ಬಂದು ಅಮ್ಮ, ಅಮ್ಮಾ ಎಂದು ಕರೆದರೂ  ಉತ್ತರವಿಲ್ಲ. ಸೊಸೆ ಫಾಲ್ಗುಣಿಯೂ ಅತ್ತೆ, ಅತ್ತೆ  ಬಾಗಿಲು ತೆಗೀರಿ ಎಂದು ಕರೆದಳು. ಸುಂದರ ಗಡಿಬಿಡಿಯಿಂದ ಧಾವಿಸಿ ತನ್ನ ಕಾರಿನಲ್ಲಿದ್ದ ಮನೆಯ ಇನ್ನೊಂದು ಬೀಗದ  ಕೈ ತೆಗೆದುಕೊಂಡು ಬೀಗ ತೆಗೆದು ಒಳಧಾವಿಸಿದ. ಎಲ್ಲಿ ನೋಡಿದರೂ ತನ್ನ ತಾಯಿಯ ಸುಳಿವಿಲ್ಲ. ಅಮ್ಮ ಎಲ್ಲಿ ಹೋದರು ಎಂದು ಅಮ್ಮನ ಮೊಬೈಲ್ ನಂಬರಿಗೆ ಫೋನ್ ಮಾಡಿದ. ಅಲ್ಲೇ ಟೇಬಲ್ ಮೇಲಿದ್ದ ಗೌರಮ್ಮನ ಫೋನ್ ರಿಂಗಣಿಸಿತು. ಅದನ್ನು ಕಂಡ ಸುಂದರನಿಗೆ ಸಿಟ್ಟು ಬರತೊಡಗಿತು. ಫೋನ್ ತನ್ನ ಹತ್ತಿರವೇ ಇಟ್ಟುಕೊಳ್ಳು ಎಂದು ಎಷ್ಟು ಹೇಳಿದರೂ ಅಮ್ಮ ಕೇಳುವುದೇ ಇಲ್ಲ ಈಗ ಏನು ಮಾಡಲಿ ಯಾರನ್ನು ಕೇಳುವುದು ಅಮ್ಮ ಎಲ್ಲಿ ಹೋಗಿರಬಹುದು ಎಂದು ಯೋಚಿಸತೊಡಗಿದ. ಇತ್ತ ಫಾಲ್ಗುಣಿ  ಕೂಡ ತನ್ನ ಅತ್ತೆಯನ್ನು ಹುಡುಕತೊಡಗಿದಳು. ಹೊಟ್ಟೆ ಚುರುಗುಟ್ಟುತ್ತಿತ್ತು, ಸುಸ್ತು ಕೂಡ ಆಗಿತ್ತು ಆದರೆ ಅತ್ತೆ ಎಲ್ಲಿದ್ದಾರೆ ಎಂದು ಗೊತ್ತಾಗದೆ ಹೇಗೆ ತಿನ್ನುವುದು ಎಂದು ಯೋಚಿಸಿ ಮನೆಯ ಹೊರ ಬಂದು ಸುತ್ತಲೂ ನೋಡಿದಳು. ಎಲ್ಲೂ ಯಾರೂ ಕಾಣಲಿಲ್ಲ. ಸುಂದರ ಕಾರಿನಲ್ಲಿ ಹೋಗಿ ತನ್ನ ಅಮ್ಮ ಹೋಗುತ್ತಿದ್ದ ಜಾಗಗಳಿಗೆಲ್ಲ ಹೋಗಿ ನೋಡಿದ. ಅಲ್ಲೆಲ್ಲೂ ತನ್ನ ತಾಯಿ ಕಾಣದ್ದು ಕಂಡು ಅವನಿಗೆ ವಿಚಿತ್ರವೆನಿಸಿತು. ಮನೆಗೆ ಬೀಗ ಹಾಕಿತ್ತು ಎಂದರೆ ಅಮ್ಮ ಮನೆಯಿಂದ ಹೊರಗೆಲ್ಲೋ ಹೋಗಿದ್ದಾಳೆ ಆದರೆ ಎಲ್ಲಿ ಎಂದು ಮಾತ್ರ ಅವನಿಗೆ ಹೊಳೆಯಲಿಲ್ಲ.

ಪೊಲೀಸರಿಗೆ ದೂರು ಕೊಡುವುದು ಒಳ್ಳೆಯದು ಎಂದು ಅನಿಸಿ ಸುಂದರ ಪೋಲಿಸ್ ಸ್ಟೇಶನ್ ಗೆ ಹೋದ.  ಇಲ್ಲೇ ಎಲ್ಲೋ ಹೋಗಿರಬೇಕು ಬರ್ತಾರೆ ಬಿಡಿ. ಅವರಿಗೆ ಮನಸ್ಸಿಗೆ ನೋವಾಗುವಂಥಾದ್ದು ಏನಾದರೂ ನಡೆಯಿತೆ ? ಅತ್ತೆ ಸೊಸೆ ಜಗಳ ? ಎಂದು ಪೊಲೀಸರು ಕೇಳಿದರು. ಇಲ್ಲ, ಅಂಥಾದ್ದೇನೂ ಆಗಿಲ್ಲ, ಎಲ್ಲ ಕಡೆ ಹುಡುಕಿದ್ದಾಯಿತು ದಯವಿಟ್ಟು ನನ್ನ ಅಮ್ಮನನ್ನು ಹುಡುಕಿ ಕೊಡಿ ಎಂದು ಸುಂದರ ಕೇಳಿಕೊಂಡ. ಅವರು ಫೋಟೋ ಕೊಡಿ ಎಂದಾಗ ಮನೆಗೆ ಹೋಗಿ ತರುತ್ತೇನೆ ಎಂದು ಮನೆಗೆ ಬಂದ. ಇತ್ತ ಫಾಲ್ಗುಣಿಯ ದೃಷ್ಟಿ ಅಕಸ್ಮಾತ್ತಾಗಿ ಎದುರು ಮನೆಯ ಕಡೆ ಹೋಯಿತು. ಆ ಮನೆಗೆ ಬೀಗವಿತ್ತು ಆದರೆ ಕಿಟಕಿಯೊಂದು ತೆರೆದಿತ್ತು. ಯಾವುದಕ್ಕೂ ಒಂದು ಸಲ ನೋಡೋಣ ಎಂದು ಧಾವಿಸಿ ಬಂದು  ಕಿಟಕಿಯ ಮೂಲಕ ನೋಡಿದರೆ ಗೌರಮ್ಮ ನೆಲದ ಮೇಲೆ ಬಿದ್ದಿದ್ದರು. ಫಾಲ್ಗುಣಿಗೆ ತನ್ನ ಅತ್ತೆ ಬಿದ್ದಿರುವುದನ್ನು ನೋಡಿ ಆಘಾತವಾಗಿ ಕೊಲೆ, ಕೊಲೆ ಎಂದು ಅರಚಿದಳು. ಅದೇ ಸಮಯಕ್ಕೆ ಸುಂದರ ಮನೆಗೆ ಬಂದ. ಹೆಂಡತಿ ಕಿರುಚುತ್ತಿರುವುದನ್ನು ಕಂಡು ಅತ್ತ ಧಾವಿಸಿದ. ನೋಡಿದರೆ ತನ್ನ ತಾಯಿ ನೆಲದ ಮೇಲೆ ಬಿದ್ದಿರುವುದು ಕಂಡಿತು, ಕೂಡಲೇ ಪೊಲೀಸರಿಗೆ ಫೋನ್ ಮಾಡಿದ. ಪೊಲೀಸರು ಬಂದು ಆ ಮನೆಯ ಬೀಗ ತೆಗೆಸಿ ಗೌರಮ್ಮನ ಕಡೆ ಧಾವಿಸಿದರು. ಎಲ್ಲೂ ರಕ್ತ ಕಾಣಲಿಲ್ಲ, ಗೌರಮ್ಮನ ಮೈ ಮೇಲೂ ಗಾಯಗಳಿರಲಿಲ್ಲ. ನಾಡಿ ಹಿಡಿದು ನೋಡಿದರೆ ಗೌರಮ್ಮ ಜೀವಂತವಾಗಿರುವುದು ತಿಳಿಯಿತು. ಆಗ ಪೊಲೀಸರು ಬಹುಶ ಪ್ರಜ್ಞೆ ತಪ್ಪಿರಬೇಕು ಎಂದುಕೊಂಡು ನೀರನ್ನು ತಂದು ಮುಖದ ಮೇಲೆ ಚಿಮುಕಿಸಿದರು.

ಗೌರಮ್ಮನಿಗೆ ಪ್ರಜ್ಞೆ ಬಂದು ತನ್ನ ಸುತ್ತಲೂ ಸೇರಿದ ಪೋಲಿಸರನ್ನು ಕಂಡು ಹೆದರಿದರು. ಯಾರಮ್ಮ ನಿಮ್ಮನ್ನು ಕಿಡ್ನ್ಯಾಪ್  ಮಾಡಿದ್ದು ಎಂದು ಪೊಲೀಸರು ಕೇಳಿದಾಗ ಗೌರಮ್ಮ ಆ ಮನೆ ನೋಡಲು ಹೋಗಿ ಒಳಗೆ ಸಿಕ್ಕಿ ಹಾಕಿಕೊಂಡದ್ದು ಹೇಗೆ ಹೇಳುವುದು ಎಂದು ಮುಜುಗರಕ್ಕೊಳಗಾದರು. ಸುಂದರ ಅವರಿಗೆ ಬೀಪಿ ಇದೆ. ಅವರು ಸ್ವಲ್ಪ ಸುಧಾರಿಸಿಕೊಳ್ಳಲಿ ಆಮೇಲೆ ವಿಚಾರಿಸಿದರಾಯಿತು ಎಂದು ಅಮ್ಮ ಸಿಕ್ಕಿದ್ದೇ ತನ್ನ ಭಾಗ್ಯ ಎಂದುಕೊಂಡು ಅಮ್ಮನನ್ನು ನಿಧಾನವಾಗಿ ನಡೆಸಿಕೊಂಡು ಮನೆಗೆ ಕರೆತಂದ. ತಿಂಡಿ ಮಾತ್ರೆ ಎಲ್ಲ ಆದ ಮೇಲೆ ಗೌರಮ್ಮನನ್ನು ಪೊಲೀಸರು ಅಲ್ಲಿಗೆ ಹೇಗೆ ಹೋಗಿದ್ದು ಎಂದು ಕೇಳಿದಾಗ ಇವರೆಲ್ಲ ಕೊಲೆ, ಕಿಡ್ನ್ಯಾಪ್ ಎಂದುಕೊಂಡಿದ್ದಾರೆ ಆದರೆ ನಿಜ ವಿಷಯ ತಿಳಿದರೆ ನಗುವುದಿಲ್ಲವೇ ಎಂದೆನಿಸಿ ನಾಚಿಕೆ ಅವಮಾನದಿಂದ ಭೂಮಿ ಬಾಯಿ ಬಿಡಬಾರದೇ ಎಂದೆನಿಸಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು.  ಪೊಲೀಸರು “ಅಮ್ಮ ನೀವು ಭಯ ಪಡಬೇಡಿ ಧೈರ್ಯವಾಗಿ ಹೇಳಿ, ನಿಮ್ಮನ್ನು ಕಿಡ್ನ್ಯಾಪ್  ಮಾಡಲು ನೋಡಿದವರನ್ನು ನಾವು ಖಂಡಿತ ಸುಮ್ಮನೆ ಬಿಡುವುದಿಲ್ಲ” ಎಂದರು. ಆಗ ಗೌರಮ್ಮನಿಗೆ ಒಂದು ಉಪಾಯ ಹೊಳೆಯಿತು. ತಾನು ಮನೆಗೆ ಬೀಗ ಹಾಕಿ ಹೋಗುತ್ತಿದ್ದಾಗ ಯಾರೋ ಹಿಂದಿನಿಂದ ಬಂದು ಮೂಗಿಗೆ ಕರವಸ್ತ್ರ ಹಿಡಿದರು. ನನಗೆ ಆಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಯಾರು ಎಂದು ಕೂಡ ಗೊತ್ತಾಗಲಿಲ್ಲ ಎಂದು ಬುರುಡೆ ಬಿಟ್ಟರು! ಪೊಲೀಸರು ಗೌರಮ್ಮನನ್ನು ಕಿಡ್ನ್ಯಾಪ್ ಮಾಡಿದವರನ್ನು ಕಂಡು ಹಿಡಿಯಲು ಕಾರ್ಯ ಪ್ರವೃತ್ತ ರಾದರು. ಆದರೆ ಅವರಿಗೆ ಯಾವ ಸುಳಿವೂ ಸಿಗಲಿಲ್ಲ. ಗೌರಮ್ಮ ಆ ಮನೆಯಲ್ಲಿ ಸಿಕ್ಕಿಬಿದ್ದ ಕಾರಣ ಮಾತ್ರ ಚಿದಂಬರ ರಹಸ್ಯವಾಗಿಯೇ ಉಳಿಯಿತು!