ಕಾಂಗ್ರೆಸ್ ಸರ್ಕಾರದ ಇನ್ನೂರು ಯುನಿಟ್ ವಿದ್ಯುತ್ ಉಚಿತ ಎಂಬ ಘೋಷಣೆ ಜನ ಸಾಮಾನ್ಯರಿಗೆ ಖುಷಿ ತಂದಿದೆ. ಬೆಲೆಯೇರಿಕೆ ಯಿಂದ ತತ್ತರಿಸಿ ಹೈರಾಣಾಗಿರುವ ಬಡ ಹಾಗೂ ಮಧ್ಯಮ ವರ್ಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಕೆಲವು ದಿನಗಳಿಂದ ವಿದ್ಯುತ್ ಬಿಲ್ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ. ಜನ ಸಾಮಾನ್ಯ ರಂತೂ ಇನ್ನು ತಾವು ಬಿಲ್ ಕಟ್ಟಬೇಕಿಲ್ಲ ಎಂದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇನ್ನೂ ಕೂಡ ಸರಿಯಾಗಿ ಕಾರ್ಯಾರಂಭ ಮಾಡಿಲ್ಲ. ಜನರಿಗೆ ಆಗಲೇ ಗಡಿಬಿಡಿ ಶುರುವಾಗಿದೆ. ಉಚಿತ ವಿದ್ಯುತ್ ಘೋಷಣೆ ಮಾಡಿದ ತಕ್ಷಣ ನೀಡಲು ಅವರ ಬಳಿ ಮಂತ್ರ ದಂಡವಿದೆಯೇ?! ಅದಕ್ಕೆ ಬೇಕಾದ ಎಲ್ಲ ಕಾರ್ಯ ವಿಧಾನಗಳನ್ನು ಅನುಸರಿಸಿ, ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿ, ಅದಕ್ಕೆ ದುಡ್ಡು ಎಲ್ಲಿಂದ ಹೊಂದಿಸಬೇಕು ಎಂದು ಯೋಚಿಸಿ, ಫಲಾನುಭವಿಗಳನ್ನು ಗುರುತಿಸಿ, ಸದನದಲ್ಲಿ ಅದನ್ನು ಮಂಡಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಇಷ್ಟಕ್ಕೆಲ್ಲ ಸಮಯಾವಕಾಶ ಬೇಡವೇ, ಕೆಲವು ಜನರಂತೂ ತಾವು ಈ ತಿಂಗಳಿನಿಂದಲೇ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಅವರಿಗಂತೂ ಕಾರ್ಯ ವಿಧಾನ ಗಳ ಅರಿವಿಲ್ಲ ಏನೋ ಹೇಳುತ್ತಿದ್ದಾರೆ ಆದರೆ ವಿಪಕ್ಷದವರು ಅದೇ ರೀತಿ ವರ್ತಿಸಿದರೆ ಏನೆನ್ನಬೇಕು. ಅವರಿಗೆ ಕಾರ್ಯ ವಿಧಾನಗಳ ಜ್ಞಾನವೇ ಇಲ್ಲವೇ, ಅಥವಾ ಟೀಕಿಸಬೇಕೆಂದೇ ಹೇಳುವುದೇ. ಆದರೆ ಒಂದಂತೂ ಸತ್ಯ. ಎಲ್ಲರೂ ಬಿಲ್ ಕಟ್ಟಲೇ ಬೇಕು. ಅದರಿಂದ ಯಾರಿಗೂ ವಿನಾಯತಿ ಇಲ್ಲ.
ಯಾಕೆಂದರೆ ಈಗಿನ ಸರ್ಕಾರ ಉಚಿತ ಘೋಷಣೆ ಮಾಡಿರುವುದು 200 ಯುನಿಟ್. ಆದರೆ ವಿದ್ಯುತ್ ಮಂಡಳಿ ಯವರ ಇನ್ನಿತರ ಶುಲ್ಕಗಳನ್ನು ಸಹ ತಾವೇ ಭರಿಸುತ್ತೇವೆ ಎಂದು ಅವರು ಎಲ್ಲೂ ಹೇಳಿಲ್ಲ. ಹಾಗಾಗಿ ನಿಗದಿತ ಶುಲ್ಕವನ್ನು ಎಲ್ಲರೂ ಭರಿಸಬೇಕಾಗುತ್ತದೆ.
ಇನ್ನು ಎಲ್ಲರಿಗೂ ಇನ್ನೂರು ಯುನಿಟ್ ಉಚಿತ ವೆಂದು ಹೇಳಿದರೆ ಇದುವರೆಗೆ 50,100 ಯುನಿಟ್ ಉಪಯೋಗಿಸುವವರು ಇನ್ನು ಮುಂದೆ ಬೇಕಾಬಿಟ್ಟಿ ವಿದ್ಯುತ್ ಉಪಯೋಗಿಸಬಹುದು. ಬಿಟ್ಟಿ ಸಿಕ್ಕಿದರೆ ಯಾರಾದರೂ ಬಿಡುವರೇ?!
ಇದರಿಂದ ರಾಜ್ಯದ ಬೊಕ್ಕಸಕ್ಕೆ ಮಾತ್ರವಲ್ಲ ವಿದ್ಯುಚ್ಛಕ್ತಿ ಮಂಡಳಿಗೂ ಹೊರೆ ಯಾದೀತು. ಪರಿಣಾಮ ಇಡೀ ಕರ್ನಾಟಕ ಕತ್ತಲಲ್ಲಿ ಮುಳುಗಬೇಕಾದೀತು. ಈಗಾಗಲೇ ಬೇಸಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾದಾಗ ವಿದ್ಯುತ್ ಕಡಿತ ಉಂಟಾಗುತ್ತದೆ. ಅಂತಹುದರಲ್ಲಿ ಎಲ್ಲರೂ ಬೇಕಾಬಿಟ್ಟಿ ವಿದ್ಯುತ್ ಉಪಯೋಗಿಸಿದರೆ ಪರಿಸ್ಥಿತಿ ಏನಾಗಬೇಡ. ಅದರ ಬದಲು ಪ್ರತಿಯೊಂದು ಮನೆಯ ಏಪ್ರಿಲ್ ಅಥವಾ ಮೇ ತಿಂಗಳ ವಿದ್ಯುತ್ ಬಳಕೆಯಷ್ಟು ಅದು ಕೂಡ ಇನ್ನೂರರ ಒಳಗಿನ ಯುನಿಟ್ ಗಳನ್ನೂ ಬಡವರಿಗೆ ಮಾತ್ರ ಸರಕಾರ ಉಚಿತ ವಾಗಿ ನೀಡಿದರೆ ಯಾರಿಗೂ ಹೊರೆ ಯಾಗುವುದಿಲ್ಲ. ಈ ತಿಂಗಳಲ್ಲೇ ಅಧಿಕ ವಿದ್ಯುತ್ ಬಳಕೆಯಾಗುತ್ತದೆ. ಜನರೂ ತಮಗೆ ಬೇಕಾದಷ್ಟೇ ವಿದ್ಯುತ್ ಬಳಸುತ್ತಾರೆ. ಅಷ್ಟನ್ನೇ ಉಚಿತವಾಗಿ ನೀಡಿದರೆ ಉತ್ತಮ.
ಈ ಬಗ್ಗೆ ಸರಕಾರ ಯೋಚಿಸಿ ನಿರ್ಧಾರ ತೆಗೆದು ಕೊಳ್ಳಬೇಕು. ರಾಜ್ಯ ದ ಸುಮಾರು ಒಂದು ಕೋಟಿ ಮನೆಯವರು ಇನ್ನೂರಕ್ಕಿಂತ ಕಡಿಮೆ ಯುನಿಟ್ ಗಳನ್ನು ಬಳಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇವರಲ್ಲಿ ಅದೆಷ್ಟು ಜನ ಫಲಾನುಭವಿಗಳಿದ್ದಾರೆ ಎಂಬುದನ್ನು ಗಣನೆಗೆ ತೆಗೆದು ಕೊಳ್ಳಬೇಕು. ಒಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲವನ್ನೂ ಸೂಕ್ಷ್ಮ ವಾಗಿ ಅವಲೋಕಿಸಿ ಉತ್ತಮ ನಿರ್ಧಾರ ತೆಗೆದು ಕೊಳ್ಳಬೇಕು. ವಿಪಕ್ಷದವರಿಗಂತೂ ಈ ಗ್ಯಾರಂಟಿಗಳನ್ನೇ ಹಿಡಿದು ಅಸ್ತ್ರ ವಾಗಿ ಬಳಸಿ ಸರಕಾರವನ್ನು ಹೇಗೆ ಉರುಳಿಸುವುದು ಎಂದೇ ಯೋಚಿಸುತ್ತಿದ್ದಾರೆ.
ಅದೇ ಪ್ರಧಾನಿ ಮೋದಿ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಾಗ ಜನ ದುಡ್ಡಿಗಾಗಿ ಗಲಾಟೆ ಮಾಡಲಿಲ್ಲ. ಬ್ಯಾಂಕ್ ಗೆ ಓಡಾಡಿ ದುಡ್ಡು ಬಂತೇ ಎಂದು ವಿಚಾರಿಸಲಿಲ್ಲ. ಈಗ 500,1000 ರೂಪಾಯಿಗಳಿಗೋಸ್ಕರ ಗಲಾಟೆ ಮಾಡುತ್ತಿರುವುದನ್ನು ನೋಡಿದರೆ ಇದರ ಹಿಂದೆ ಯಾರ ಕುಮ್ಮಕ್ಕು ಇದೆ ಎಂದು ತಿಳಿಯುವುದಿಲ್ಲವೇ?
ಹಿಂದಿನ ಸರಕಾರ ಬಹಳಷ್ಟು ಸಾಲ ಮಾಡಿದೆ. ಹಾಗಿರುವಾಗ ಈ ಉಚಿತ ಘೋಷಣೆ ಗಳಿಗೆ ದುಡ್ಡು ಎಲ್ಲಿಂದ ಹೊಂದಿಸಬೇಕು ಎಂದು ಬಹಳ ಯೋಚಿಸಬೇಕಾಗುತ್ತದೆ. ಕಾಂಗ್ರೆಸ್ ಬಡವರ ಪಕ್ಷ ಎಂದು ಮುಂಚಿನಿಂದಲೂ ಹೇಳುತ್ತಿದೆ. ಹಾಗಾಗಿ ಅವರ ಘೋಷಣೆಗಳೆಲ್ಲ ಬಡವರಿಗೆ ಮಾತ್ರ. ಶ್ರೀಮಂತರು, ದುಡ್ಡು ಇರುವವರು ಈ ಉಚಿತಕ್ಕೆ ಜೊಲ್ಲು ಸುರಿಸುತ್ತ ಕಾಯುವುದು ಹಾಸ್ಯಾಸ್ಪದ. ಜನರು ತಾಳ್ಮೆಯಿಂದ ಕಾಯಬೇಕು. ಸರಕಾರದಿಂದ ಬರುವ ದುಡ್ಡು ಯಾವಾಗಲೂ ನಿಧಾನವಾಗಿಯೇ ಬರುವುದು. ಏನಾಗುತ್ತದೋ ಕಾದು ನೋಡೋಣ.
ಮನದ ಮಾತು
ನನ್ನ ಅನಿಸಿಕೆಗಳು
ಭಾವ ಪೂರ್ಣ ಶ್ರದ್ಧಾಂಜಲಿ
ಒಂದು ದಿನ ಬೆಳಕು ಹರಿಯ ಬೇಕಾದರೆ ಆಂಬುಲೆನ್ಸ್ ನ ಸೈರನ್ ಕೇಳಿಸಿತು. ಪಾಪ ಯಾರಿಗೆ ಏನಾಯಿತೋ ಎಂದು ಅನುಕಂಪ ಮೂಡಿತು. ಆದರೆ ಒಂದರ ಹಿಂದೆ ಒಂದರಂತೆ ಬರುತ್ತಿರುವ ಆಂಬುಲೆನ್ಸ್ ಗಳು ಕಂಡು ನಾವೆಲ್ಲ ಬೆಚ್ಚಿ ಬಿದ್ದೆವು. ಏನೋ ಬಹಳ ದೊಡ್ಡ ದುರಂತ ನಡೆದಿರಬೇಕು ಎಂದುಕೊಂಡಾಗ ಸುದ್ದಿ ತಿಳಿಯಿತು. ಮಂಗಳೂರಿನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ದುರಂತ ಕ್ಕೀಡಾಗಿದ್ದು ತಿಳಿದು ಮನಸ್ಸು ಮಮ್ಮಲ ಮರುಗಿತು. ಅಂದು 2010 ಮೇ ತಿಂಗಳ 22ನೇ ತಾರೀಕು. ನಾವ್ಯಾರೂ ಮರೆಯಲಾಗದ ದುರಂತ ಘಟಿಸಿದ ದಿನ.
ಅವತ್ತೀಡಿ ದಿನ ಆಂಬುಲೆನ್ಸ್ ಗಳ ಸೈರನ್ ಕೇಳಿ ಕೇಳಿ ನಾವೆಲ್ಲ ಮರಗಟ್ಟಿ ಹೋಗಿದ್ದೆವು. ಮನಸ್ಸುಗಳು ಭಾರವಾಗಿದ್ದವು ಕಣ್ಣುಗಳು ಆದ್ರವಾಗಿದ್ದವು. ನಮ್ಮೂರಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಊರಿಗೆ ಊರೇ ದಂಗು ಬಡಿದು ಹೋಗಿತ್ತು. ಯಾರಲ್ಲೂ ಚೈತನ್ಯವೇ ಇರಲಿಲ್ಲ.
ಘಟನೆ ನಡೆದು 13 ವರ್ಷ ಕಳೆದರೂ ಆ ದುರಂತವನ್ನು ಇನ್ನೂ ಮರೆಯಲಾಗುತ್ತಿಲ್ಲ.
ಆ ದಿನ ಮನುಷ್ಯನ ಬದುಕು ಅದೆಷ್ಟು ಅನಿಶ್ಚಿತ ಎನಿಸಿತು. ಊರು ತಲುಪಿದೆವು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ವಾಗಲೆ ವಿಧಿ ಅವರ ಉಸಿರನ್ನೆ ಕಿತ್ತುಕೊಂಡು ಬಿಟ್ಟಿತ್ತು. ಆ ವಿಮಾನದಲ್ಲಿದ್ದ ಪ್ರಯಾಣಿಕರ ಆಗಮನ ಅವರ ಕುಟುಂಬಕ್ಕೆ ಸಂತಸ ತರುವ ಬದಲು ಶೋಕವನ್ನೆ ತಂದಿಟ್ಟಿತು. ಕ್ರೂರ ವಿಧಿಯು ಆ ವಿಮಾನದ ಪೈಲಟ್ ನ ರೂಪದಲ್ಲಿ ಬಂದು ಅಟ್ಟಹಾಸವನ್ನು ನಡೆಸಿ ಬಿಟ್ಟಿತ್ತು. ಬಾಳಿ ಬದುಕಬೇಕಾದ ಹಲವು ಜೀವಗಳು ಕರಟಿ ಹೋದವು. ತಮ್ಮವರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ನೋವಿನಲ್ಲಿವೆ. ಆ ದುರಂತದಲ್ಲಿ ಮಡಿದವರೆಲ್ಲರಿಗೂ ನಮ್ಮೆಲ್ಲರ ಭಾವ ಪೂರ್ಣ ಶ್ರದ್ಧಾಂಜಲಿ.
ಅನಾಗರಿಕ ವರ್ತನೆ
ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ನಡೆದ ಘಟನೆ ಮಹಿಳೆಯರನ್ನು ಮಾತ್ರವಲ್ಲ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಹ ಪ್ರಯಾಣಿಕ ನೊಬ್ಬ ಕುಡಿದ ಮತ್ತಿನಲ್ಲಿ ವಯಸ್ಸಾದ ಮಹಿಳೆ ಮೇಲೆ ಏಕಾಏಕಿ ಮೂತ್ರಿಸುತ್ತಿರ ಬೇಕಾದರೆ ಆ ಮಹಿಳೆಗೆ ಹೇಗಾಗಿರಬೇಡ? ಯಾರೂ ಊಹಿಲಸಾಧ್ಯವಾದ ಘಟನೆ ನಡೆದಾಗ ಆ ಮಹಿಳೆ ಅದೆಷ್ಟು ಆಘಾತಕ್ಕೊಳ ಗಾಗಿರಬೇಕು? ನಾವು ನಮ್ಮದೇ ಮೂತ್ರವನ್ನು ಮುಟ್ಟಿಕೊಳ್ಳಲು ಅಸಹ್ಯ ಪಡುತ್ತೇವೆ ಅಂತಹದರಲ್ಲಿ ಬೇರೆಯವರ ಮೂತ್ರ ನಮ್ಮ ಮೇಲೆ ಬಿದ್ದರೆ ಹೇಗಾಗಬೇಕು ?
ಆ ಯುವಕನ ತಾಯಿಯ ಮೇಲೆ ಬೇರೆ ಯಾರೋ ಒಬ್ಬರು ಮೂತ್ರಿ ಸಿದರೆ ಹೇಗಾಗುತ್ತದೆ ಎಂದು ಅವನು ಯೋಚಿಸಬೇಕು. ಅದು ಬಿಟ್ಟು ಹತ್ತು ಹದಿನೈದು ಸಾವಿರ ಬಿಸಾಕಿ ಕ್ಷಮೆ ಕೇಳಿ ಬಿಟ್ಟರೆ ಸಾಕೆ? ಆಕೆ ಪಟ್ಟ ಆಘಾತ, ಯಾತನೆ, ಮುಜುಗರ, ಅಸಹ್ಯಕ್ಕೆ ಅಷ್ಟೇ ಬೆಲೆಯೇ? ಅಷ್ಟು ಸಾಲದು ಎಂದು ವಿಮಾನದಲ್ಲಿದ್ದ ಸಿಬ್ಬಂದಿ ವರ್ಗದವರೂ ಕ್ರೂರವಾಗಿ ನಡೆದುಕೊಂಡರು. ಆ ಸೀಟನ್ನು ಸ್ವಚ್ಛ ಗೊಳಿಸಿ ಮತ್ತೆ ಅದರಲ್ಲೇ ಕೂರುವಂತೆ ಮಾಡಿದರು. ಬೇರೆ ಯಾವ ಸೀಟು ಸಿಗಲಿಲ್ಲವೆ, ಫರ್ಸ್ಟ್ ಕ್ಲಾಸ್ ನಲ್ಲಿ ನಾಲ್ಕು ಸೀಟುಗಳು ಖಾಲಿ ಇದ್ದವು. ಆಕೆಯನ್ನು ಅಲ್ಲಿ ಕೂರಿಸ ಬಹುದಿತ್ತಲ್ಲವೆ? ಮಾನವೀಯತೆ ಮರೆತು ಬಿಟ್ಟರೆ ಸಿಬ್ಬಂದಿಗಳು? ಮೈಮೇಲೆ ನೀರು ಚೆಲ್ಲಿದಷ್ಟು ಹಗುರವಾಗಿ ತೆಗೆದುಕೊಂಡರಲ್ಲ ವಿಮಾನದ ಸಿಬ್ಬಂದಿಗಳು!
ಇಷ್ಟೆಲ್ಲ ಸಾಲದು ಎಂದು ಆತನ ತಂದೆ ನ್ಯೂಸ್ ಚಾನಲ್ ಗಳಲ್ಲಿ ನೀಡುವ ಅಸಂಬದ್ಧ ಹೇಳಿಕೆ ಕೇಳುತ್ತಿದ್ದರೆ ಮೈಯೆಲ್ಲ ಉರಿದು ಹೋಯಿತು. ಆಕೆ ಬೇಕೆಂದೇ ಇದೆಲ್ಲ ಮಾಡುತ್ತಿದ್ದಾರಂತೆ. ಮಗ ಮೂತ್ರಿ ಸಿದ ಎಂದು ಯಾವ ಸಾಕ್ಷಿ ಇದೆ? ದುಡ್ಡಿ ಗೋಸ್ಕರ ಮಾಡುತ್ತಿದ್ದಾರೆ ಎಂದೆಲ್ಲ ಹೇಳುತ್ತಿದ್ದ ಆ ಕದೀಮ, ಪುತ್ರ ಮೋಹದ ತಂದೆಗೆ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂದಿತ್ತು. ಲಾಂಡ್ರಿ ಖರ್ಚು ಎಂದು ದುಡ್ಡು ಕೊಟ್ಟಿದ್ದಾರೆ ಬೇರೇನು ಬೇಕು ಎನ್ನುತ್ತಿದ್ದ. ಲಾಂಡ್ರಿ ದುಡ್ಡು ಯಾರಿಗೆ ಬೇಕು? ಆಕೆ ಕೂಡ ಬ್ಯುಸಿನೆಸ್ ಕ್ಲಾಸ್ ನಲ್ಲೇ ಪ್ರಯಾಣಿಸುತ್ತಿದ್ದರು ಅಂದರೆ ಅವರಿಗೆ ಲಾಂಡ್ರಿ ದುಡ್ಡು ಕೇಳುವಷ್ಟು ಗತಿ ಕೆಟ್ಟಿಲ್ಲ. ಅದು ಬಿಡಿ, ಆ ಬಟ್ಟೆಗಳನ್ನು ಮತ್ತೆ ಆಕೆ ಧರಿಸುತ್ತಾರೆ ಎಂದು ಯಾವ ನಂಬಿಕೆಯ ಮೇಲೆ ಹೇಳಿದ ಅವನು. ಯಾರಾದರೂ ಅಂತಹ ಕೆಟ್ಟ ಘಟನೆಯನ್ನು ನೆನಪಿಸುವ ಬಟ್ಟೆಗಳನ್ನು ಮತ್ತೆ ಧರಿಸುತ್ತಾರಾ? ಆಕೆಗಾದ ಅನ್ಯಾಯಕ್ಕೆ ನ್ಯಾಯ ಕೇಳುವ ಹಕ್ಕೂ ಇಲ್ಲವೇ ?
ಪೈಲಟ್ ವಿಮಾನ ಇಳಿಸಿದ ಮೇಲೆ ನಿಲ್ದಾಣದಲ್ಲಿ ದೂರು ದಾಖಲಿಸಿ ಬೇಕಿತ್ತು, ಅದನ್ನೂ ಕೂಡ ಮಾಡಿಲ್ಲ, ಬಲವಂತದಿಂದ ರಾಜಿ ಮಾಡಿಸಿ ಕಳುಹಿಸಿ ಬಿಟ್ಟರು. ಮೂತ್ರಿಸಿದ್ದನ್ನು ಮೈಮೇಲೆ ನೀರು ಎರಚಿದಷ್ಟು ಹಗುರವಾಗಿ ತೆಗೆದುಕೊಂಡಿದ್ದು ಎಷ್ಟು ಸರಿ ? ಆಕೆ ಒಂದು ತಿಂಗಳ ನಂತರ ದೂರು ದಾಖಲಿಸಿದ್ದಾರೆ ಎಂದರೆ ಆಕೆಗೆ ಈ ಆಘಾತದಿಂದ ಚೇತರಿಸಿ ಕೊಳ್ಳಲು ಒಂದು ತಿಂಗಳೇ ಬೇಕಾಯಿತು ಎಂದಾಯಿತು. ಹಾಗಾದರೆ ಅದೆಷ್ಟು ಆಘಾತ ವಾಗಿರಬೇಕು ನೀವೇ ಊಹಿಸಿ? ಇನ್ನು ಆಕೆ ಜನ್ಮದಲ್ಲೇ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಪ್ರಯಾಣ ಯಾಕೆ ಮನೆ ಬಿಟ್ಟು ಹೊರಗೆ ಹೋಗಲು ಸಹ ಭಯ ಪಡಬಹುದು. ಆಕೆ ಮಾತ್ರವಲ್ಲ ಉಳಿದ ಮಹಿಳೆಯರು ಕೂಡ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಅದಕ್ಕೆಲ್ಲ ಯಾರು ಹೊಣೆ?
ಅಷ್ಟೇ ಅಲ್ಲ ಆತ ಈಗ ತಾನು ಆಕೆಯ ಮೇಲೆ ಮೂತ್ರ ಮಾಡಿದ್ದೆ ಇಲ್ಲ ಎಂದು ಕೋರ್ಟ್ ನಲ್ಲಿ ವಾದಿಸುತ್ತಿದ್ದಾನಂತೆ! ಅವನ ವಕೀಲೆ ಸ್ವತಃ ಮಹಿಳೆಯಾಗಿ, ‘ಆಕೆ ತಾನೇ ಮೂತ್ರ ಮಾಡಿಕೊಂಡಿದ್ದಾಳೆ, ಆ ಮಹಿಳೆ ಒಬ್ಬ ಕಥಕ್ ನೃತ್ಯ ಕಲಾವಿದೆ ಹಾಗಾಗಿ ಅಂತಹವರಿಗೆ ಒಮ್ಮೊಮ್ಮೆ ಹೀಗಾಗುತ್ತದೆ’ ಎಂದು ವಾದಿಸಿದರಂತೆ! ಆಕೆ ಸ್ವತಃ ಮಹಿಳೆಯಾಗಿ ಹೀಗೆ ಹೇಳಬಹುದೇ? ಒಬ್ಬ ಮಹಿಳೆ ಹೇಗೆ ತನ್ನ ಮೇಲೆ ಎರಚಿದಂತೆ ಮೂತ್ರ ಮಾಡಿಕೊಳ್ಳಬಹುದು? ಎಷ್ಟು ಹಾಸ್ಯಾಸ್ಪದ ಅಲ್ಲವೇ? ಆಕೆ ಬಹುದೊಡ್ಡ ವಕೀಲೆಯಾಗಿ ಅಷ್ಟೂ ಸಾಮಾನ್ಯ ಜ್ಞಾನ ಇಲ್ಲವೇ ? ಆಕೆಯ ಮೇಲೆ ಮೂತ್ರ ಮಾಡಿದ್ದು ಸಾಲದು ಎಂದು ಈಗ ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಕೆಸರೆರೆಚುತ್ತಿದ್ದಾರೆ. ಎಷ್ಟೊಂದು ಅಮಾನವೀಯ ಅಲ್ಲವೇ ? ಆತ ದುಡ್ಡಿನ ಬಲದಿಂದ ಈ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಲು ಬಹುದು ಅಥವಾ ಮುಚ್ಚಿ ಹೋಗಲು ಬಹುದು.
ಆತನ ಬಾಸ್ ಆತನನ್ನು ಕೆಲಸದಿಂದ ವಜಾ ಮಾಡಿದ್ದು ಸರಿಯಾಗಿಯೇ ಇದೆ ಇಲ್ಲದಿದ್ದರೆ ಆತ ವಿಮಾನದಲ್ಲಿ ಮಾಡಿದ್ದನ್ನು ಕಚೇರಿಯಲ್ಲಿ ಕೂಡ ಮಾಡಬಹುದು! ಹಾಗಾಗಿ ಅವನಿಗೆ ತಕ್ಕ ಶಿಕ್ಷೆ ಆಗಲೇಬೇಕು. ಮಾತ್ರವಲ್ಲ
ಆತನಿಗೆ ಕಠಿಣ ಶಿಕ್ಷೆ ಯಾಗಬೇಕು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಂತಹ ಹಲವು ಘಟನೆಗಳು ನಡೆಯಬಹುದು. ಅಷ್ಟೇ ಯಾಕೆ? ಇನ್ನು ಮುಂದೆ ಬಸ್, ರೈಲುಗಳಲ್ಲೂ ಸಹ ನಡೆಯಬಹುದು.ಅಷ್ಟು ಮಾತ್ರವಲ್ಲ ಇನ್ನು ವಿದೇಶಿ ಪ್ರಯಾಣಿಕರು ಭಾರತೀಯ ಪುರುಷರ ಜೊತೆ ಪ್ರಯಾಣಿಸಲು ನಿರಾಕರಿಸಬಹುದು. ಭಾರತೀಯ ಪುರುಷರನ್ನು ಅವಮಾನಿಸಲೂ ಬಹುದು.
ಒಬ್ಬನ ಕೆಟ್ಟ ವರ್ತನೆಯಿಂದಾಗಿ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇಂತಹ ವರ್ತನೆಗೆ ಅವರ ಪೋಷಕರು ಕೂಡ ಕಾರಣರಾಗಿರುತ್ತಾರೆ. ಗಂಡು ಮಕ್ಕಳು ಏನು ಮಾಡಿದರೂ ಸರಿ, ಹೇಗೆ ಮಾಡಿದರೂ ಸರಿ ಎನ್ನುವ ಧೋರಣೆ. ಗಲ್ಲಿ ಗಲ್ಲಿಗಳಲ್ಲಿ ಇಂತಹ ಪುರುಷರು ಬಹಿರ್ದೆಸೆಗೆ ನಿಲ್ಲುವುದನ್ನು ಈಗಲೂ ಕಾಣಬಹುದು.
ಈಗಾಗಲೇ ಜಾಲತಾಣಗಳಲ್ಲಿ ಹಲವು ವಿದೇಶಿಯರು ಭಾರತೀಯ ಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಭಾರತೀಯ ಪುರುಷರು ಮನೆಗೆ ಬಂದವರು ಲಾನ್ ನಲ್ಲಿ ಮೂತ್ರ ಮಾಡಿದ್ದಾರೆ,ಪಾತ್ರೆಗಳಲ್ಲಿ ಮೂತ್ರ ಮಾಡಿದ್ದಾರೆ, ಬಾಟಲಿಗಳಲ್ಲಿ ಮೂತ್ರ ಮಾಡಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಅದೆಲ್ಲ ಎಷ್ಟು ನಿಜವೋ ಎಷ್ಟು ಸುಳ್ಳೋ ಯಾರಿಗೆ ಗೊತ್ತು. ಆದರೆ ಮರ್ಯಾದೆ ಹೋಗುವುದು ಭಾರತೀಯ ಪುರುಷರದ್ದು. ಇನ್ನು ಪರಿಹಾರ ಎಷ್ಟು ಕೊಟ್ಟರೂ ಅದನ್ನು ಆಕೆ ಸ್ವೀಕರಿಸುವುದು ಸಂದೇಹ ಯಾಕೆಂದರೆ ಆ ಹಣ ಎಲ್ಲಿಂದ ಬಂತು ಎಂಬ ವಿಷಯ ಆಕೆಯನ್ನು ಆ ಘಟನೆ ಯ ಬಗ್ಗೆ ಯಾವಾಗಲೂ ನೆನಪಿಸುತ್ತಿರುತ್ತದೆ.
ಅವನಿಗೆ ಸರಿಯಾದ ಶಿಕ್ಷೆ ಎಂದರೆ ಒಂದು ವಾರ ಅವನ ಮೇಲೆ ಮೂತ್ರ ಎರಚಿ ಗಂಟೆಗಟ್ಟಲೆ ಹಾಗೇ ಕೂರುವಂತೆ ಮಾಡಬೇಕು. ಇದರಿಂದಲಾದರೂ ಅವನಿಗೆ ಬುದ್ಧಿ ಬರಬಹುದು. ಇನ್ನು ಮುಂದೆ ಅಂತಹ ವರ್ತನೆ ತೋರಿಸಲು ಅಂತಹ ವಿಕೃತ ಮನಸ್ಸಿನವರು ಹೆದರಬೇಕು.
ವ್ಯಾಕ್ಸಿನ್- ನನ್ನ ಅನುಭವ
ಕೊರೋನ ಲಸಿಕೆ ಬಂದರೂ ಜನರಿಗೆ ಅದೇನೋ ಅವ್ಯಕ್ತ ಭಯ. ಲಸಿಕೆ ತೆಗೆದುಕೊಂಡರೆ ಹಾಗಾಗುತ್ತಂತೆ, ಹೀಗಾಗುತ್ತಂತೆ, ಏನೇನೋ ಅಡ್ಡ ಪರಿಣಾಮಗಳೂ ಆಗುತ್ತಂತೆ ಎಂದೆಲ್ಲ ಗಾಳಿ ಸುದ್ದಿಗಳು ನಿಜವೇನೋ ಎಂದು ಜನರೆಲ್ಲ ನಂಬಿ ಭಯಭೀತರಾಗಿದ್ದರು. ಒಂದು ಕಡೆ ಕೊರೋನ ಇನ್ನೊಂದು ಕಡೆ ಲಸಿಕೆ! ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿತ್ತು ನಮ್ಮ ಜನರ ಪರಿಸ್ಥಿತಿ. ನಾನೂ ಇದಕ್ಕೆ ಹೊರತಾಗಿರಲಿಲ್ಲ! ಕೋರೋನದಿಂದ ತಪ್ಪಿಸಿಕೊಳ್ಳೋಣ ಎಂದರೆ ಲಸಿಕೆ ಗುಮ್ಮನಂತೆ ಕಾಡುತ್ತಿತ್ತು. ಲಸಿಕೆ ತೆಗೆದುಕೊಂಡವರು ಜ್ವರ, ಮೈ ಕೈ ನೋವು, ಇತ್ಯಾದಿ ಹೇಳುವಾಗಲೇ ನನಗೆ ಜ್ವರ ಬಂದಂತೆ ಆಗುತ್ತಿತ್ತು. ಆದರೂ ಕೋರೋನದಿಂದ ಬಚಾವಾಗಲು ಅದೊಂದೇ ದಾರಿಯಾಗಿತ್ತು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಲಸಿಕೆ ಹಾಕಿಸಿ ಕೊಳ್ಳುವ ನಿರ್ಧಾರ ಮಾಡಿದೆ. ಧೈರ್ಯಕ್ಕೆ ಮಗನ ಸ್ನೇಹಿತರೊಬ್ಬರು (ಡಾಕ್ಟರ್) ಊರಿನಲ್ಲಿ ಇರುವ ಸಮಯದಲ್ಲೇ ಲಸಿಕೆ ಹಾಕಿಸಿಕೊಳ್ಳುವುದು ಎಂದು ತೀರ್ಮಾನವಾಯಿತು. ನನಗೆ ಏನೇ ಆದರೂ ತಕ್ಷಣ ಬಂದು ಸಹಾಯ ಮಾಡುತ್ತೇನೆ ಎಂದು ಅವರ ಎರಡು ಫೋನ್ ನಂಬರ್ ಗಳನ್ನು ಕೊಟ್ಟರು. ಅದೇ ಧೈರ್ಯದಲ್ಲಿ ಲಸಿಕೆ ಹಾಕಿಸಿ ಕೊಳ್ಳಲು ರಿಜಿಸ್ಟರ್ ಮಾಡಿಸಿದೆ.
ಮನೆಯಿಂದ ಹೊರಟಾಗ ಕ್ಷೇಮವಾಗಿ ಮನೆಗೆ ಮರಳುವಂತೆ ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಲಸಿಕಾ ಕೇಂದ್ರದತ್ತ ನನ್ನ ಸವಾರಿ ಹೊರಟಿತು. ಅಲ್ಲಿ ಮೊದಲು ಕಂಡ ಸಿಸ್ಟರ್ ಹತ್ತಿರ ನನ್ನ ಭಯ ತೋಡಿಕೊಂಡೆ. “ಹಾಗೇನೂ ಆಗಲ್ಲ, ಸ್ವಲ್ಪ ಜ್ವರ ಮೈ ಕೈ ನೋವು ಕಾಣಿಸಿಕೊಳ್ಳಬಹುದು, ಎಷ್ಟೆಂದರೂ ಅದು ಆಂಟಿಬಾಡಿ ಅಲ್ವಾ, ನಿಮ್ಮ ದೇಹದೊಳಕ್ಕೆ ಹೋದಾಗ ಪ್ರತಿರೋಧ ಸಹಜ. ಆದರೆ ಅದೆಲ್ಲ ಎರಡು ಮೂರು ದಿನದೊಳಗೆ ನಿಲ್ಲುತ್ತದೆ. ಗಾಬರಿ ಪಡಬಾರದು. ಲಸಿಕೆ ತೆಗೆದುಕೊಳ್ಳುವಾಗ ಹೊಟ್ಟೆ ತುಂಬಿರಬೇಕು, ಧೈರ್ಯವಾಗಿರಿ ಏನೂ ಆಗುವುದಿಲ್ಲ, ಎಷ್ಟೋ ಜನ ಹಾಕಿಸಿಕೊಂಡಿದ್ದಾರೆ ಏನೂ ಆಗಿಲ್ಲ” ಎಂಬ ಸಿಸ್ಟರ್ ಮಾತಿಗೆ ಕೊಂಚ ನಿರಾಳವಾದೆ.
ಅಲ್ಲಿಯೇ ಇದ್ದು ಕಾಯುತ್ತ ಇದ್ದಂತೆ ಒಳಗಿನಿಂದ ಲಸಿಕೆ ತೆಗೆದುಕೊಂಡ ಮಹಿಳೆಯೊಬ್ಬಳು ಹೊರ ಬರುತ್ತಿರುವುದು ಕಾಣಿಸಿತು. ಆಕೆಯ ಒಂದು ಕೈಗೆ ಬ್ಯಾಂಡೇಜ್, ಒಂದು ಕಾಲು ಸ್ವಲ್ಪ ಎಳೆದುಕೊಂಡೆ ನಡೆಯುತ್ತಿದ್ದಳು. ಆಕೆಯನ್ನು ಕಂಡ ಮೇಲಂತೂ ನನ್ನಲ್ಲಿ ಧೈರ್ಯ ತುಂಬಿ ತುಳುಕಾಡಿತು. ನನ್ನ ಸರದಿ ಬಂದಾಗ ಧೈರ್ಯದಿಂದಲೇ ಹೋದೆ. ಸೂಜಿ ಚುಚ್ಚಿದಾಗ ನೋವಾಗಲಿಲ್ಲ. ಸಿಸ್ಟರ್ ಗೆ ಹೇಳಿದೆ. ಮನೆಯಲ್ಲಿ ಇರುವೆ ಕಚ್ಚಿ ಕಚ್ಚಿ ಈಗ ಇಂಜೆಕ್ಷನ್ ನೋವೇ ಗೊತ್ತಾಗುತ್ತಿಲ್ಲ ಎಂದು. ಅವರೆಲ್ಲ ಹೋ ಎಂದು ನಕ್ಕರು. ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳಿ ಎಂದು ಹೇಳಿ ಬರೆದು ಕೊಟ್ಟರು. ಅರ್ಧ ಗಂಟೆ ಅಲ್ಲೇ ಕುಳಿತುಕೊಳ್ಳಲು ಸ್ಥಳ ತೋರಿಸಿದರು.
ಸುಮಾರು ಕಾಲು ಗಂಟೆ ನಂತರ ಟೀ, ಕಾಫಿ ಬಂದಿತು. ನಾನು ತೆಗೆದುಕೊಳ್ಳಲಿಲ್ಲ. ಅಷ್ಟೊಂದು ಬಿಸಿ, ಸ್ಟ್ರಾಂಗ್ ನಾನು ಕುಡಿಯುವುದೇ ಇಲ್ಲ. ಅರ್ಧ ಗಂಟೆಯ ನಂತರ ನಾನು ಅಲ್ಲಿಂದ ಹೊರಟು ಬಂದೆ. ಮೆಡಿಕಲ್ ಶಾಪ್ ಗೆ ಹೋಗಿ ಜ್ವರದ ಮಾತ್ರೆ ಕೇಳಿದೆ. ಆ ಹುಡುಗಿ ಹಿಂದೆ ತಿರುಗಿ ಅಲ್ಲಿ ನಿಂತಿದ್ದವನ ಬಳಿ ಮಾತ್ರೆ ಕೊಡಿ ಎಂದು ಹೇಳಿದಳು. ಹಿಂಬದಿಯಲ್ಲಿ ನಿಂತಿದ್ದವ ಕಣ್ಣುಗಳನ್ನು ದೊಡ್ಡದಾಗಿಸಿಕೊಂಡು ಭಯದಿಂದಲೇ ನನ್ನತ್ತ ನೋಡಿದ. ನನಗೆ ಕೋರೋನ ಆಗಿರಬೇಕು ಅಂತ ಅನುಮಾನ ಅವನಿಗೆ! “ನಾನು ವ್ಯಾಕ್ಸೀನ್ ತೆಗೆದುಕೊಂಡಿದ್ದೇನೆ, ಜ್ವರ ಬಂದರೆ ಇರಲಿ ಅಂತ ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದೆ.
ಮಾತ್ರೆ ಕೊಂಡುಕೊಂಡು ಅಲ್ಲಿಂದ ಮನೆಯತ್ತ ಹೊರಟೆ. ದಾರಿಯಲ್ಲಿ ಹೋಗುವಾಗ ತರಕಾರಿ ಅಂಗಡಿ ಕಾಣಿಸಿತು. ನನಗಿಷ್ಟವಾದ ತರಕಾರಿಗಳು ತುಂಬಿ ತುಳುಕುತ್ತಿದ್ದವು. ಬಾಯಲ್ಲಿ ನೀರೂರಿತು. ಈಗ ತಾನೇ ವ್ಯಾಕ್ಸೀನ್ ತೆಗೆದುಕೊಂಡೆ, ಭಾರ ಹೊರಲು ಆಗದಿದ್ದರೆ…? ಬೇಡ ಎನಿಸಿತು ಸೀದಾ ನಡೆದುಕೊಂಡು ಹೋದೆ. ಬಿರು ಬಿಸಿಲಿಗೆ ಲಸಿಕೆ ಪ್ರಭಾವ ಸೇರಿ ತಲೆ ತಿರುಗಿ ಬಿದ್ದರೆ ಎಂದು ಭಯವಾಯಿತು. ದಾರಿಯಲ್ಲಿ ಸಿಕ್ಕ ರಿಕ್ಷಗಳಿಗೆ ಕೈ ತೋರಿಸಿದೆ. ಯಾವುದೂ ನಿಲ್ಲಲಿಲ್ಲ. ದುಡ್ಡು ಉಳೀತು ಅಂದುಕೊಳ್ಳುತ್ತ ಕೊಡೆ ಬಿಡಿಸಿಕೊಂಡು ಆರಾಮವಾಗಿ ನಡೆದುಕೊಂಡು ಹೋಗಿ ಮನೆ ತಲುಪಿದೆ. ಕೈ ಕಾಲು ತೊಳೆದುಕೊಂಡು ಹಾಸಿಗೆ ಮೇಲೆ ಬಿದ್ದೆ.
ಮನೆಯಿಂದ ಹೊರಡುವ ಮುನ್ನವೇ ಎರಡು ದಿನಗಳಿಗಾಗುವಷ್ಟು ಅಡಿಗೆ, ಮನೆ ಕೆಲಸ ಎಲ್ಲ ಮುಗಿಸಿಕೊಂಡು ಹೋಗಿದ್ದೆ. ಹಾಗಾಗಿ ಮಾಡಲು ಕೆಲಸವಿಲ್ಲದೆ ಹಾಯಾಗಿ ಮಲಗಿದೆ. ಸಂಜೆವರೆಗೂ ಚೆನ್ನಾಗಿಯೇ ಇದ್ದೆ. ಇಪ್ಪತ್ನಾಲ್ಕು ಗಂಟೆಯ ಬಳಿಕ ಜ್ವರ ಮೈ, ಕೈ ನೋವು ಬರಬಹುದು ಎಂದು ಹೇಳಿದ್ದರಿಂದ ಆರಾಮವಾಗಿ ಇದ್ದೆ.
ರಾತ್ರಿ ಊಟ ಮುಗಿಸಿ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಟೀವಿ ನೋಡುತ್ತ ಕುಳಿತೆ. ರಾತ್ರಿ ಎಂಟೂವರೆ ಗಂಟೆಯ ಅಷ್ಟೊತ್ತಿಗೆ ಚಳಿಯ ಅನುಭವವಾಯಿತು. ಸ್ಪಲ್ಪ ಹೊತ್ತಿನಲ್ಲೇ ಚಳಿ ತಡೆಯಲಾಗದೆ ಮೈ ಗಡಗಡ ನಡುಗಲು ಶುರುವಾಯಿತು! ಇಂಥಾ ಬೇಸಿಗೆಯಲ್ಲಿ ಯಾಕೆ ಇಷ್ಟೊಂದು ಚಳಿಯಾಗುತ್ತಿದೆ ಅನಿಸಿ ಬ್ಲಾಂಕೆಟ್ ಹೊದ್ದುಕೊಂಡೆ. ಆರಾಮವೆನಿಸಿತು. ಸ್ವಲ್ಪ ಹೊತ್ತಿನ ಬಳಿಕ ಚಳಿ ಇನ್ನಷ್ಟು ಜಾಸ್ತಿಯಾಯಿತು. ಮೈ ಮೇಲೆ ಬಂದವರಂತೆ ನನ್ನ ಮೈ ನಡುಗುತ್ತಿತ್ತು! ಹಲ್ಲುಗಳು ಕಟಕಟ ಶಬ್ದ ಮಾಡಲು ಶುರು ಮಾಡಿದವು! ಬೇಗನೆ ಹೋಗಿ ಸ್ವೆಟರ್ ಧರಿಸಿದೆ. ಇದು ಲಸಿಕೆ ಪರಿಣಾಮ! ಇನ್ನೂ ಏನೆಲ್ಲ ಕಾದಿದೆಯೋ ಎಂದು ಭಯವಾಗಿ ಟಿವಿ ಆಫ್ ಮಾಡಿ ಮಲಗಿದೆ. ಸುಮಾರು ಹತ್ತು ಕಾಲು ಗಂಟೆಗೆ ಮೈಯೆಲ್ಲ ವಿಪರೀತ ಬಿಸಿಯೇರತೊಡಗಿತು. ನನಗೆ ಭಯವಾಗಿ ಹೊದ್ದ ಬ್ಲಾಂಕೆಟ್, ಸ್ವೆಟರ್ ಕಿತ್ತು ಬಿಸಾಕಿದೆ. ಥರ್ಮಾಮೀಟರ್ ಬಾಯಲ್ಲಿಟ್ಟು ನೋಡಿದರೆ ನೂರ ಮೂರನ್ನೂ ಕೂಡ ದಾಟಿ ಮುಂದಕ್ಕೆ ಓಡುತ್ತಿತ್ತು. ಭಯವಾಗಿ ಅದನ್ನು ನೋಡದೆ ಹಾಗೆ ಇಟ್ಟೆ. ಬೇಗನೆ ಮಾತ್ರೆ ತೆಗೆದುಕೊಳ್ಳಬೇಕು ಎಂದುಕೊಂಡೆ. ಆದರೆ ಖಾಲಿ ಹೊಟ್ಟೆ ಬೇಡ ಎಂದು ಫ್ರಿಜ್ಜಿನಲ್ಲಿದ್ದ ಚಪಾತಿ ತೆಗೆದು ಬಿಸಿ ಮಾಡಿ ಸಕ್ಕರೆ ಹಾಕಿಕೊಂಡು ತಿಂದೆ. ಜೊತೆಗೆ ಹಾಲು ಬಿಸಿ ಮಾಡಿ ಕುಡಿದು ಮಾತ್ರೆ ತೆಗೆದುಕೊಂಡೆ. ಒಂದು ಗಂಟೆಯಾದರೂ ಜ್ವರ ಇಳಿಯುವ ಲಕ್ಷಣ ಕಾಣಿಸಲಿಲ್ಲ. ಹೇಗೋ ಎದ್ದು ನೀರನ್ನು ಫ್ರೀಜರ್ ನಲ್ಲಿ ತಣ್ಣಗಾಗಲು ಇಟ್ಟೆ. ಒಂದು ತೆಳ್ಳಗಿನ ಬಟ್ಟೆ ತಂದಿಟ್ಟೆ. ನೀರು ಸ್ವಲ್ಪ ತಣ್ಣಗಾದ ಮೇಲೆ ಎದ್ದುಹೋಗಿ ನೀರಿನ ಪಾತ್ರೆ ತಂದು ಬಟ್ಟೆಯನ್ನು ನೀರಲ್ಲಿ ಮುಳುಗಿಸಿ ಹಿಂಡಿ ಹಣೆಯ ಮೇಲಿಟ್ಟುಕೊಂಡು ಮಲಗಿದೆ. ನಿದ್ದೆ ಬರಲಿಲ್ಲ. ಆಗಾಗ ತಣ್ಣೀರ ಬಟ್ಟೆ ಪಟ್ಟಿ ಹಣೆಯ ಮೇಲೆ, ಹೊಟ್ಟೆಯ ಮೇಲೆ ಇಡುತ್ತಾ ಬಂದೆ. ಅಷ್ಟೆಲ್ಲ ಆದರೂ ನನಗೆ ಡಾಕ್ಟರ್ ನೆನಪೇ ಆಗಲಿಲ್ಲ!
ರಾತ್ರಿ ಎರಡೂವರೆ ನಂತರ ಜ್ವರ ಕಡಿಮೆಯಾಗಿ ನಿದ್ದೆ ಬಂದಿತು. ಬೆಳಗ್ಗೆ ಎದ್ದಾಗ ಜ್ವರ ಬಿಟ್ಟು ಸ್ವಲ್ಪ ಬೆವರು ಕೂಡ ಬಂದಿತು. ಅಬ್ಬಾ ಎನ್ನುತ್ತ ಖುಷಿಪಟ್ಟೆ. ಮಗನ ಸ್ನೇಹಿತ ಡಾಕ್ಟರ್ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಜ್ವರ ಮತ್ತೆ ಬರುತ್ತದೆ, ನಾಳೆ ಬೆಳಿಗ್ಗೆ ಪೂರ್ತಿಯಾಗಿ ಹುಶಾರಾಗುತ್ತಿರಿ ಎಂದರು. ಮಗನೂ ಆಗಾಗ ವಿಚಾರಿಸುತ್ತಿದ್ದ. ಅವತ್ತು ಸ್ವಲ್ಪ ಮನೆಕೆಲಸ ಮಾಡಿದೆ. ಇಂಜೆಕ್ಷನ್ ಚುಚ್ಚಿದ ಕೈ ನೋಯಲು ಶುರುವಾಯಿತು. ಮಧ್ಯಾಹ್ನದ ಹೊತ್ತಿಗೆ ಸಣ್ಣಗೆ ಜ್ವರ ಶುರುವಾಯಿತು. ಆದರೂ ಟಿವಿ ನೋಡುತ್ತ ಕುಳಿತೆ. ರಾತ್ರಿ ಊಟ ಮಾಡಿ ಟಿವಿ ನೋಡುತ್ತಿದ್ದೆ. ಮತ್ತೆ ಸ್ವಲ್ಪ ಚಳಿ ಶುರುವಾಯಿತು. ಜ್ವರ ಬಂದಂತಾಯಿತು. ಥರ್ಮಾಮೀಟರ್ ಇಟ್ಟು ನೋಡಿದರೆ 102 ಡಿಗ್ರಿ ತೋರಿಸುತ್ತಿತ್ತು. ಓಹ್! ನಿನ್ನೆಯ ಪುನರಾವರ್ತನೆ ಆಗುತ್ತದೆ ಎಂದು ಭಯವಾಗಿ ಬೇಗನೆ ಮಾತ್ರೆ ತೆಗೆದುಕೊಂಡು ಮಲಗಿದೆ. ಮಲಗುವ ಮುನ್ನ ಎರಡು ಪಾತ್ರೆ ಗಳಲ್ಲಿ ನೀರು ಹಾಕಿ ಫ್ರೀಜರ್ ನಲ್ಲಿಟ್ಟೆ. ಜ್ವರ ಏರಿದರೆ ತಣ್ಣೀರ ಬಟ್ಟೆ ಪಟ್ಟಿ ಹಾಕಲು ಬೇಕಾಗುತ್ತದಲ್ಲ. ಕುಡಿಯಲು ನೀರನ್ನು ಹಾಸಿಗೆಯ ಬಳಿ ತಂದಿಟ್ಟು ಮಲಗಿದೆ. ಜ್ವರ ಜಾಸ್ತಿಯಾಗದಿದ್ದರೆ ತಣ್ಣೀರ ಬಟ್ಟೆ ಪಟ್ಟಿ ಬೇಡ ಎಂದುಕೊಂಡು ಮಲಗಿದೆ.
ರಾತ್ರಿಯಲ್ಲಿ ಯಾವಾಗಲೋ ಎಚ್ಚರವಾಯಿತು. ಮೈಯೆಲ್ಲ ಬೆವರಿ ಧರಿಸಿದ ಬಟ್ಟೆ ಎಲ್ಲ ಒದ್ದೆಯಾಗಿತ್ತು. ಜ್ವರ ಪೂರ್ತಿಯಾಗಿ ಬಿಟ್ಟಿತು ಎಂದು ಖುಷಿಯಾಯಿತು. ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇದ್ದೆ. ಕೈ ನೋವು ಕೂಡ ಮಾಯವಾಗಿತ್ತು. ಪೂರ್ತಿ ಹುಷಾರಾದೆ ಎಂದು ಖುಷಿಯಾಯಿತು. ಈಗ ನಾನು ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ನನ್ನ ಹಾಗೆ ನೀವು ಭಯ ಪಡಬೇಡಿ. ಏನೂ ಆಗುವುದಿಲ್ಲ, ಕೆಲವರಿಗೆ ನನ್ನಷ್ಟು ಜ್ವರ ಕೂಡ ಬರಲಿಲ್ಲ. ಇನ್ನೂ ಕೆಲವರಿಗೆ ಏನೂ ಆಗಲಿಲ್ಲ. ಆದ್ದರಿಂದ ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿ.
ಲಸಿಕೆ ತೆಗೆದುಕೊಳ್ಳುವ ಮೊದಲು ನೀವು ಮಾಡಬೇಕಾಗಿರುವುದು.
ನೀವು ನಿಮ್ಮ ಅಗತ್ಯದ ಕೆಲಸಗಳನ್ನೆಲ್ಲ ಮೊದಲೇ ಮುಗಿಸಿ. ಒಬ್ಬರೇ ಇದ್ದರೆ ಮನೆಗೆ ಬೇಕಾಗುವ ಸಾಮಾನುಗಳನ್ನೆಲ್ಲ ಮೊದಲೇ ತರಿಸಿಡಿ.
ಜ್ವರದ ಮಾತ್ರೆಯನ್ನು ಡಾಕ್ಟರ್ ಬಳಿ ಕೇಳಿ ಮೊದಲೇ ತಂದಿಟ್ಟುಕೊಳ್ಳಿ.
ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ.
ತಣ್ಣೀರ ಬಟ್ಟೆ ಪಟ್ಟಿಗೆ ಮೊದಲೇ ಸಿದ್ಧ ಪಡಿಸಿ.
ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಕೈಗೆ ವ್ಯಾಯಾಮ ಮಾಡಬೇಕು. ತೀರಾ ಜಾಸ್ತಿ ನೋವಿದ್ದರೆ ತಣ್ಣೀರ ಬಿಟ್ಟೆಯಿಂದ ಒರೆಸಿ. ನಂತರ ಹದಿನೈದು ದಿನ ಜಾಸ್ತಿ ಹೊರಗೆ ಓಡಾಡಬೇಡಿ. ಎಲ್ಲರೂ ಲಸಿಕೆ ಹಾಕಿಕೊಂಡರೆ ಕೊರೋನ ತಾನಾಗಿಯೇ ತೊಲಗುತ್ತದೆ. ಇಸ್ರೇಲ್ ಹಾಗೂ ಯು. ಕೆ. ದೇಶದವರು ಮಾಡಿದ್ದು ಅದನ್ನೇ. ಎಲ್ಲರೂ ಆರಾಮವಾಗಿ ಹೊರಗೆ ಓಡಾಡಿಕೊಂಡು ಆರೋಗ್ಯದಿಂದ ಇರಬೇಕಾದರೆ ವ್ಯಾಕ್ಸಿನ್ ಒಂದೇ ದಾರಿ. ನೀವೂ ಲಸಿಕೆ ಹಾಕಿಸಿ ಕೊಳ್ಳಿ. ನಿಮ್ಮ ಮನೆಯವರಿಗೂ ಲಸಿಕೆ ಹಾಕಿಸಿ.
ಅವಲಕ್ಕಿ ಮಿಕ್ಸ್ ಚರ್
ಅವಲಕ್ಕಿ ಮಿಕ್ಸ್ ಚರ್ ರುಚಿಕರವಾದ ಒಂದು ಬೇಕರಿ ತಿನಿಸು. ಇದಕ್ಕೆ ಜಾಸ್ತಿ ಎಣ್ಣೆ ಬೇಕಾಗಿಲ್ಲ. ಸುಲಭವಾಗಿ ಇದನ್ನು ಮನೆಯಲ್ಲೇ ಮಾಡಬಹುದು. ಮಕ್ಕಳಿಗೂ ಇದು ತುಂಬಾ ಇಷ್ಟ. ನೀವೂ ಇದನ್ನು ಮಾಡಿ ನೋಡಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ವೀಡಿಯೊವನ್ನು ನೋಡಿ.
ಚಾಕೊಲೇಟ್ ಕೇಕ್
ಚಾಕೊಲೇಟ್ ಕೇಕ್ ಈಗ ಮನೆಯಲ್ಲಿ ಮಾಡಿ ನೋಡಿ. ಇದಕ್ಕೆ ಮೊಟ್ಟೆ ಬೇಕಾಗಿಲ್ಲ, ಓವನ್ ಕೂಡ ಬೇಕಾಗಿಲ್ಲ. ಮನೆಯಲ್ಲಿರುವ ಪ್ರೆಷರ್ ಕುಕ್ಕರ್ ಬಳಸಿ ಸುಲಭವಾಗಿ ತಯಾರಿಸಬಹುದು. ಬಹಳ ಕಡಿಮೆ ಖರ್ಚಿನಲ್ಲಿ ಸ್ವಾದಿಷ್ಟ ವಾದ ಚಾಕೊಲೇಟ್ ಕೇಕ್ ಮಾಡಿ. ಮಕ್ಕಳಿಗಂತೂ ಇದು ತುಂಬಾ ಇಷ್ಟ ವಾಗುತ್ತದೆ. ಚಾಕೊಲೇಟ್ ಕೇಕ್ ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೋ ನೋಡಿರಿ.
ಬೂದು ಕುಂಬಳ ಕಾಯಿ ಬರ್ಫಿ
ಬೂದು ಕುಂಬಳ ಕಾಯಿಯ ಬರ್ಫಿ ಮನೆಯಲ್ಲಿ ಮಾಡಿದ್ದೀರಾ, ತುಂಬಾ ರುಚಿಕರ ವಾದ ಈ ಸಿಹಿ ಮಕ್ಕಳಿಗಂತೂ ತುಂಬಾ ಇಷ್ಟ ವಾಗುತ್ತದೆ. ದೊಡ್ಡವರೂ ಕೂಡ ಬಹಳ ಇಷ್ಟ ಪಡುವ ಈ ಬರ್ಫಿ ಯನ್ನು ಮಾಡುವ ವಿಧಾನ ಗೊತ್ತಿಲ್ಲವೇ, ಹಾಗಿದ್ದರೆ ಈ ಕೆಳಗಿನ ವೀಡಿಯೋ ನೋಡಿ ಸುಲಭದಲ್ಲೇ ಕಲಿತು ಮನೆಯಲ್ಲಿ ಮಾಡಿ ತಿಂದು ಆನಂದಿಸಿರಿ.
ದೀಪಾವಳಿ ಶುಭಾಶಯಗಳು
ಈ ವರ್ಷದ ಆರಂಭದಿಂದಲೇ ಎಲ್ಲರೂ ಕಷ್ಟ, ದುಃಖ, ನಷ್ಟ, ನೋವುಗಳನ್ನು ಅನುಭವಿಸುವಂತಾಯಿತು. ಇದೆಲ್ಲವೂ ಇಲ್ಲಿಯೇ ಕೊನೆಯಾಗಲಿ. ಈ ದೀಪಾವಳಿಯು ಎಲ್ಲರ ಬಾಳಿನಲ್ಲಿ ಬೆಳಕು, ಸಂತಸ, ಸಮೃದ್ಧಿ, ಆಯುರಾರೋಗ್ಯ, ಸಂತಸ ಹಾಗೂ ನೆಮ್ಮದಿ ಕರುಣಿಸಲಿ ಎಂದು ನನ್ನ ಹಾರೈಕೆ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಕೊರೋನ ರಕ್ಕಸ
ಈಗೀಗ ಎಲ್ಲರ ಬಾಯಲ್ಲೂ ಕೊರೋನ ರಕ್ಕಸನದ್ದೇ ಮಾತು. ಪ್ರಪಂಚವನ್ನೇ ದಿಗಿಲು ಪಡಿಸುತ್ತಾ ರಕ್ಕಸ ತನ್ನ ಕದಂಬ ಬಾಹುಗಳನ್ನು ಚಾಚಿ ಮನುಷ್ಯರನ್ನು ತನ್ನ ಮುಷ್ಟಿಯಲ್ಲಿ ನಲುಗಿಸಲು ನೋಡುತ್ತ ಜನರನ್ನು ಭಯಭೀತಗೊಳಿಸುತ್ತಿದ್ದಾನೆ. ಸಾಮಾನ್ಯ ಕಣ್ಣಿಗೆ ಕಾಣದ ರಕ್ಕಸ ಮನುಷ್ಯನ ದೇಹದೊಳಗೆ ಅಡಗಿ ಕುಳಿತು ಬೃಹದಾಕಾರ ತಾಳಿ ಸದ್ದಿಲ್ಲದೆ ಜನರನ್ನು ನುಂಗುತ್ತಿದ್ದಾನೆ. ಈ ರಕ್ಕಸನ ದಾಳಿಗೆ ಜಗತ್ತೇ ತತ್ತರಿಸಿ ಹೋಗಿದೆ. ದೇಶಗಳ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತವನ್ನೆ ಕೊಡುತ್ತಿದ್ದಾನೆ. ಷೇರು ಮಾರ್ಕೆಟ್ಟುಗಳು ಕೊರೋನ ರಕ್ಕಸನ ದಾಳಿಗೆ ಬೆದರಿ ಪಾತಾಳಕ್ಕಿಳಿದಿವೆ.
ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು ಜಗತ್ತಿನಾದ್ಯಂತ ಹಬ್ಬಲು, ಜನರನ್ನು ಬಲಿ ತೆಗೆದುಕೊಳ್ಳಲೂ ಸಿದ್ಧವಾಗಿದ್ದಾನೆ. ಇಟಲಿ ಯಲ್ಲಿ ಸಾವಿರಕ್ಕೂ ಹೆಚ್ಚು ಜನ ಕೊರೋನ ರಕ್ಕಸನಿಗೆ ಬಲಿಯಾಗಿದ್ದಾರೆ. ನಮ್ಮ ದೇಶದಲ್ಲೂ ಕೊರೋನ ರಕ್ಕಸ ಕಾಲಿಟ್ಟಿದ್ದಾನೆ. ಆದರೆ ಕದೀಮ ರಕ್ಕಸ ವಿದೇಶಗಳಿಂದ ಬಂದವರಲ್ಲಿ ಅಡಗಿ ಕುಳಿತು ಹೊರಬರಲು ನೋಡುತ್ತಿದ್ದಾನೆ. ರಕ್ಕಸನನ್ನು ನಮ್ಮ ದೇಶದ ಜನರ ಬಲಿ ತೆಗೆದುಕೊಳ್ಳಲು ನಾವು ಬಿಡಬಾರದು. ಇದನ್ನು ಪ್ರಮುಖವಾಗಿ ವಿದೇಶಗಳಿಂದ ಬಂದವರು ಅರಿತು ಕೊಳ್ಳಬೇಕು. ಕೊರೋನ ರಕ್ಕಸ ನಿಮ್ಮೊಳಗೇ ಇದ್ದರೂ 5 ದಿನಗಳವರೆಗೆ ಅಡಗಿ ಕುಳಿತಿರುತ್ತಾನೆ. ನಿಮ್ಮ ದೇಹ ತನ್ನ ಉಷ್ಣತೆಯನ್ನು ಹೆಚ್ಚಿಸಿ ವೈರಸ್ ಕೊಲ್ಲಲು ಪ್ರಯತ್ನಿಸುತ್ತದೆ ಅದೇ ಜ್ವರ. ನಂತರ ಗಂಟಲು ನೋವು, ಕೆಮ್ಮು ಶುರುವಾಗುತ್ತದೆ. ನಂತರ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ರೋಗಿಯ ಕೆಮ್ಮು, ಸೀನಿನ ಹನಿಯಲ್ಲಿ ಕೊರೋನ ರಕ್ಕಸ ಅಡಗಿ ಕುಳಿತು ಇತರರನ್ನು ತನ್ನ ಮುಷ್ಟಿಯೊಳಗೆ ಸೇರಿಸಲು ಪ್ರಯತ್ನ ಪಡುತ್ತಾನೆ.
ಆದ್ದರಿಂದ ವಿದೇಶಗಳಿಂದ ಬಂದವರು ಕದ್ದು ಮುಚ್ಚಿ ಆರೋಗ್ಯಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡಬೇಡಿ. ಬೇರೆಯವರ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡಲು ನಿಮಗೆ ಯಾವ ಹಕ್ಕೂ ಇಲ್ಲ. ವಿದೇಶದಿಂದ ಬಂದ ಮೇಲೆ ಅವರಿಗೆ ವಿಷಯ ತಿಳಿಸಿ, ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿ. ಅವರೊಂದಿಗೆ ಸಹಕರಿಸಿ. ಮನೆಗೆ ಬಂದ ಮೇಲೂ ಮುಕ್ತವಾಗಿ ಬೆರೆಯುವುದು ಬೇಡ. 14 ದಿನಗಳ ಬಳಿಕವೂ ನೀವು ಆರೋಗ್ಯವಾಗಿದ್ದರೆ ನಂತರ ಸಮಸ್ಯೆಯಿಲ್ಲ. ಅದುವರೆಗೂ ಬೇರೆಯವರನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ. ನಿಮಗೆ ಸಣ್ಣ ಜ್ವರ ನೆಗಡಿ ಕಾಣಿಸಿಕೊಂಡರೂ ನಿರ್ಲಕ್ಷ್ಯ ಬೇಡ.
ನಮ್ಮನ್ನು ನಾವು ಕೊರೋನ ರಕ್ಕಸನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಹೊರಗಡೆ ಕಾಲಿಟ್ಟ ಮೇಲೆ ಮೂಗು ಕಣ್ಣು ಬಾಯಿಗಳಿಗೆ ಬೆರಳು ಹಾಕುವುದು ಬೇಡ. ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ. ಕೈಕಾಲುಗಳಿಗೆ ಗಾಯವಿದ್ದರೆ ಪಟ್ಟಿಕಟ್ಟಿ ಕೊಳ್ಳಿ. ಹೆಚ್ಚು ಜನ ಸೇರಿರುವ ಕಡೆ ಓಡಾಡಬೇಡಿ. ಅನಗತ್ಯ ಓಡಾಟ ಬೇಡ. ನಿರ್ಲಕ್ಷ್ಯವೂ ಬೇಡ. ಇತರರ ಜೊತೆ ಕೈ ಕುಲುಕಬೇಡಿ. ನಮ್ಮ ದೇಶದ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ತೆ ಎನ್ನಿ ಸಾಕು. ಪಾಶ್ಚಮಾತ್ಯ ದೇಶಗಳಲ್ಲಿ ಈಗ ಜನ ಕೈ ಕುಲುಕಲಾಗದೆ ಏನೇನೋ ಮಾಡುತ್ತಾರೆ ಬೂಟುಗಾಲಿನಿಂದ ಒಬ್ಬರಿಗೊಬ್ಬರು ತಾಕಿಸುವುದು, ಮೊಣಕೈ ತಾಗಿಸುವುದು, ಏನೇನೋ ಮಾಡಿ ನಗೆಪಾಟಲಿಗೀಡಾಗುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಎಷ್ಟು ಒಳ್ಳೆಯದಲ್ಲವೇ,
ಮನೆಗೆ ಬಂದ ಮೇಲೆ ಮೊದಲ ಕೆಲಸ ಕೈಕಾಲು ಮುಖ ಒಂದಿಂಚೂ ಬಿಡದೆ ಸೋಪಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದುಕೊಳ್ಳಿ, ಸಾಧ್ಯವಾದಲ್ಲಿ ಸ್ನಾನವನ್ನು ಮಾಡಿ. ಧರಿಸಿದ ಬಟ್ಟೆಗಳನ್ನು ಒಗೆದು ಹಾಕಿ. ಮನೆಗೆ ಬಂದ ಮೇಲೆ ಕೈ ತೊಳೆಯದೆ ಎಲ್ಲೆಲ್ಲ ಮುಟ್ಟಿದಿರೋ, ಉದಾ: ಬಾಗಿಲು, ಬೀಗದ ಕೈ, ನಲ್ಲಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ. ಹೊರಗೆ ಹೋಗುವಾಗ ಹಾಕಿಕೊಂಡ ಚಪ್ಪಲಿ ಅಥವಾ ಬೂಟುಗಳನ್ನು ಮನೆಯೊಳಗೆ ಧರಿಸಿಕೊಂಡು ಓಡಾಡಬೇಡಿ. ಸಧ್ಯಕ್ಕೆ ಉಗುರು ಬೆಳೆಸುವ ಫಾಷನ್ ಬೇಡ. ಉಗುರುಗಳನ್ನು ಕತ್ತರಿಸಿ, ರಕ್ಕಸ ಅಲ್ಲಿ ಸಹ ಅಡಗಿ ಕೂರಬಹುದು.
ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ತರಕಾರಿ ನಿಮ್ಮನ್ನು ತಲುಪುವ ಮೊದಲು ಯಾರೆಲ್ಲ ಸೀನಿರಬಹುದು ಯಾರೆಲ್ಲ ಸಿಂಬಳದ ಕೈಯಿಂದ ಮುಟ್ಟಿರಬಹುದು ಎಂದು ತಿಳಿಯದು ಅದಕ್ಕಾಗಿ ಈ ಮುಂಜಾಗರೂಕತೆ. ಮಾಂಸ ಮೊಟ್ಟೆ ತಿನ್ನುವವರು ಎಲ್ಲವನ್ನೂ ಚೆನ್ನಾಗಿ ಬೇಯಿಸಿ ತಿನ್ನಿರಿ. ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಪುಟ್ಟ ಮಕ್ಕಳ ಹಾಗೂ ವೃದ್ಧರ ಹೆಚ್ಚಿನ ಜಾಗ್ರತೆ ಮಾಡಿರಿ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ನಿಮಗೆ ಬೇರೆ ರೋಗಗಳಿದ್ದರೆ ಕೊರೋನ ರಕ್ಕಸ ಬಹಳ ಖುಷಿಯಿಂದಲೇ ನಿಮ್ಮ ದೇಹದಲ್ಲಿ ಆಶ್ರಯ ಪಡುತ್ತಾನೆ. ಆರೋಗ್ಯವಂತರ ಮೇಲೆ ಅವನಾಟ ಹೆಚ್ಚಾಗಿ ನಡೆಯದಿದ್ದರೂ ದುರ್ಬಲ ದೇಹಗಳ ಮೇಲೆ ಅಟ್ಟಹಾಸ ಮೆರೆಯುತ್ತಾನೆ.ಉದಾ: ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರಕ್ತ ದೊತ್ತಡದ ಸಮಸ್ಯೆ ಇತ್ಯಾದಿ. ಇಂಥವರು ಇನ್ನೂ ಹೆಚ್ಚಿನ ಜಾಗ್ರತೆ ವಹಿಸಿ.
ಆದಷ್ಟೂ ಜನ ಜನ ಜಂಗುಳಿಯಿಂದ ದೂರವಿರಿ. ಮುಖಕ್ಕೆ ಮಾಸ್ಕ್ ಕೊರೋನ ತೆಕ್ಕೆಗೆ ತುತ್ತಾದವರು ಮಾತ್ರ ಹಾಕಿದರೆ ಒಳ್ಳೆಯದು. ಅವರು ತಮ್ಮ ಸೀನು ಕೆಮ್ಮುಗಳ ಮುಖಾಂತರ ರೋಗವನ್ನು ಇತರರಿಗೆ ಹರಡದಂತೆ ಅದು ತಡೆಯುತ್ತದೆ. ಆದಷ್ಟೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ವಿಟಮಿನ್ ಸಿ ಪೋಷಕಾಂಶವಿರುವ ಹಣ್ಣು ತರಕಾರಿ ಸೇವಿಸಿ.ಕಿತ್ತಳೆ ಹಣ್ಣು, ನೆಲ್ಲಿ ಕಾಯಿ ನಿಂಬೆ ಹಣ್ಣು ಇತ್ಯಾದಿ
ವಿಟಮಿನ್ ಇ ಪೋಷಕಾಂಶವಿರುವ ಬಾದಾಮಿ, ವೆಜಟೇಬಲ್ ಆಯಿಲ್, ಪಾಲಕ್, ಹಸಿರು ಸೊಪ್ಪುಗಳು, ಸೂರ್ಯಕಾಂತಿ ಬೀಜಗಳನ್ನು ಸೇವಿಸಿ. ವಿಟಮಿನ್ ಬಿ 6 ಅಂಶವಿರುವ ಮೊಟ್ಟೆ, ಕೋಳಿ ಮಾಂಸ, ಬ್ರೆಡ್, ಮೀನು ತರಕಾರಿಗಳು, ಸೋಯಾ ಬೀನ್ಸ್ ಬಳಸಿರಿ. ನಿಮ್ಮ ದೈನಂದಿನ ಅಡುಗೆಯಲ್ಲಿ ಅರಶಿನ, ಬೆಳ್ಳುಳ್ಳಿ ಲವಂಗ, ಶುಂಠಿ ಇತ್ಯಾದಿಗಳನ್ನು ಬಳಸಿ. ಪ್ರತಿಯೊಬ್ಬರೂ ತಮಗೆ ಕಾಯಿಲೆ ಬರದಂತೆ ಜಾಗ್ರತೆ ವಹಿಸಿ ಎಚ್ಚರಿಕೆಯಿಂದ ಇದ್ದರೆ ಕೊರೋನ ರಕ್ಕಸನನ್ನು ನಾವೆಲ್ಲರೂ ಸೇರಿ ಹಿಮ್ಮೆಟ್ಟಿಸಬಹುದು.
ಹರುಷವಾಗಿದೆ ಮನಕೆ
ಪ್ರಿಯ ಓದುಗರೇ,
ನಾನು ಬರೆದ ಕಸ ಎಂಬ ಕಥೆಯು ಈ ತಿಂಗಳ ಅಂದರೆ ಜನವರಿ ತಿಂಗಳ, ನಿಮ್ಮೆಲ್ಲರ ಮಾನಸ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಅನೇಕ ವರುಷ ಗಳಿಂದ ಈ ಬ್ಲಾಗ್ ನಲ್ಲಿ ಕಥೆಗಳನ್ನು ಬರೆಯುತ್ತಿದ್ದರೂ ಇದುವರೆಗೂ ಯಾವ ಪತ್ರಿಕೆಗೂ ಕಳುಹಿಸುವ ಸಾಹಸ ಮಾಡಿರಲಿಲ್ಲ. ಆದರೆ ನಿಮ್ಮೆಲ್ಲರ ಮಾನಸ ಎಂಬ ಪತ್ರಿಕೆ ಓದಿದ ಮೇಲೆ ಯಾಕೋ ಮನಸ್ಸಿಗೆ ಹತ್ತಿರವಾಗಿದೆ ಎಂದೆನಿಸಿ ಕಥೆಯನ್ನು ಕಳುಹಿಸಿದ್ದೆ. ಒಂದು ತಿಂಗಳಲ್ಲೇ ನನ್ನ ಕಥೆ ಪ್ರಕಟಗೊಳ್ಳಲು ಆಯ್ಕೆಗೊಂಡಿದೆ ಎಂದು ಸಂಪಾದಕರಿಂದ ಸಂದೇಶ ಬಂದಾಗ ಬಹಳ ಸಂತೋಷ ವಾಯಿತು. ಬಹು ದಿನಗಳ ಕನಸು ಇಂದು ನನಸಾಗಿದೆ. ನಿಮ್ಮೆಲ್ಲರ ಮಾನಸ ಪತ್ರಿಕೆಗೆ ಧನ್ಯವಾದಗಳು