ಅದು ಇದಾಗಿದೆ !

ನಾನು ಒಲೆಯ ಮೇಲೆ ಹಾಲಿಟ್ಟು ಅದು ಬಿಸಿಯಾಗುವುದನ್ನೇ ನೋಡುತ್ತಾ ನಿಂತಿದ್ದೆ. ಅಷ್ಟರಲ್ಲಿ ಪಕ್ಕದ ಮನೆಯ ಸೀಮಾ ಬಂದಿದ್ದರಿಂದ ನಾನು ಅವಳ ಜೊತೆ ಮಾತನಾಡಲು ಹೊರಹೋದೆ. ನಾವು ಮಾತನಾಡುತ್ತಿರುವಾಗ ಸೀಮಾಳ ಮಗಳು ಓಡುತ್ತ ಬಂದು ಮಮ್ಮಿ ಫೋನ್ ‘ಇದಾಗಿದೆ’ ಎಂದಳು. ಸೀಮಾ ಸ್ವಲ್ಪ ವಿಚಲಿತಳಾಗಿ ಇದಾಗಿದೆ ಅಂದ್ರೆ ಏನೇ ಅಂದಳು. ಮಗಳು, ಮಮ್ಮಿ ಗಾಬರಿಯಾಗಬೇಡ, ಬ್ಯಾಟರಿ ಡೌನ್ ಆಗಿದೆ ಅಷ್ಟೇ, ಚಾರ್ಜರ್ ಎಲ್ಲಿಟ್ಟಿದ್ದಿಯಾ ಎಂದು ಕೇಳಿದಳು. ಅಲ್ಲೇ ಎಲ್ಲೋ ಇದೆ ನೋಡೇ ಎಂದು ಹೇಳಿ ಸೀಮಾ ಅವಳನ್ನು ಕಳುಹಿಸಿದಳು. ಆ ಬಳಿಕ ಸೀಮಾ ತನ್ನ ಕೈಯಲ್ಲಿದ್ದ ಲೋಟವನ್ನು ಮುಂದಕ್ಕೆ ಚಾಚುತ್ತ, ರೀ, ಸ್ವಲ್ಪ ಹಾಲಿದ್ರೆ ಕೊಡ್ರಿ ನಮ್ಮನೆಯಲ್ಲಿದ್ದ ಹಾಲೆಲ್ಲ ‘ಇದಾಗಿದೆ’ ಎಂದಳು. ನನಗವಳ ‘ಇದಾಗಿದೆ’ ಎಂಬುದರ ಅರ್ಥವಾಗಿತ್ತು. ಒಂದೋ ಹಾಲು ಕೆಟ್ಟು ಹೋಗಿರಬೇಕು ಅಥವಾ ಖಾಲಿಯಾಗಿರಬೇಕು. ಒಟ್ಟಾರೆ ಅವರ ಮನೆಯಲ್ಲಿ ಹಾಲಿಲ್ಲ ಎಂದು ಅದರ ಅರ್ಥ. ಅವಳು ಹಾಲು ಅಂದಾಕ್ಷಣ ನನಗೆ ಹಾಲನ್ನು ಒಲೆಯ ಮೇಲಿಟ್ಟ ನೆನಪಾಗಿ ಒಳಕ್ಕೆ ಓಡಿದೆ. ಹಾಲೆಲ್ಲ ಉಕ್ಕಿ ಪಾತ್ರೆಯ ತಳದಲ್ಲಿ ಒಂದು ಲೋಟದಷ್ಟು ಹಾಲು ಮಾತ್ರ ಇತ್ತು. ತಕ್ಷಣ ಗ್ಯಾಸ್ ಆಫ್ ಮಾಡಿ ಸೀಮಾಗೆ ಹಾಲು ಎಲ್ಲಿಂದ ಕೊಡಲಿ, ನಮಗೇ ಹಾಲಿಲ್ಲ ಎಂದುಕೊಂಡರೂ ಅವಳಿಗೆ ಹಾಲು ಇಲ್ಲ ಎನ್ನಲು ‘ಇದಾಗಿ’ ಉಳಿದ ಹಾಲನ್ನು ಅವಳು ಕೊಟ್ಟ ಲೋಟಕ್ಕೆ ಸುರಿದು ತಂದುಕೊಟ್ಟೆ. ತುಂಬಾ ಥ್ಯಾಂಕ್ಸ್ ಕಣ್ರೀ ಎನ್ನುತ್ತಾ ಸೀಮಾ ಬಿಸಿ ಹಾಲಿನ ಲೋಟವನ್ನು ಸೆರಗಲ್ಲಿ ಸುತ್ತಿ ಮನೆಯತ್ತ ನಡೆದಳು. ನಾನು ಮನೆಯವರಿಗೆ ಫೋನ್ ಮಾಡಿ, ರೀ, ಬರ್ತಾ ಹಾಲಿನ ಪ್ಯಾಕೆಟ್ ತಗೊಂಡ್ ಬನ್ನಿ, ನಮ್ಮನೇಲಿದ್ದ ಹಾಲೆಲ್ಲ ‘ಇದಾಗಿದೆ’ ಎಂದೆ. ಅವರು ಇದಾಗಿದೆ ಎಂದರೆ ಏನು ಎಂದು ಕೇಳುವ ಗೋಜಿಗೆ ಹೋಗದೇ ಸರಿ ಎಂದರು !

ಆಗ ನನಗೆ ಹೊಳೆಯಿತು ನಾವು ಮಾತನಾಡುವಾಗ ಅದೆಷ್ಟು ಸಲ ‘ಇದಾಗಿದೆ’ ಎಂಬ ಪದವನ್ನು ಬಳಸುತ್ತಿದ್ದೇವಲ್ಲ ಎಂದು. ‘ಇದಾಗಿದೆ, ಇದಾಗಿ ಹೋಯ್ತ’ ಎನ್ನುವ ಶಬ್ದಗಳು ಇತ್ತೀಚಿಗೆ ಹೆಚ್ಚಾಗಿ ನಮ್ಮ ಮಾತಿನಲ್ಲಿ ಅದು ಹೇಗೋ ನುಸುಳಿ ಬಿಡುತ್ತವೆ. ಅದು ಯಾವಾಗಿನಿಂದ ಶುರುವಾಯಿತೋ, ಅದನ್ನು ಕಂಡು ಹಿಡಿದ ಮಹಾನುಭಾವರು ಯಾರೋ ಖಂಡಿತ ಗೊತ್ತಿಲ್ಲ. ಆದರೆ ‘ಇದಾಗಿದೆ’ ಎನ್ನುವ ಶಬ್ದ  ಮಾತ್ರ ಯೂನಿವರ್ಸಲ್ ಶಬ್ದ ಆಗಿ ಮಾತಿನಲ್ಲಿ ಬಳಸಲ್ಪಡುತ್ತಿದೆ. ‘ಇದಾಗಿದೆ’ ಎಂದರೆ ಹಲವು ಅರ್ಥಗಳಿಗೆ ಪರ್ಯಾಯವಾಗಿ ಬಳಸಬಹುದಾದ ಒಂದು ಚಮತ್ಕಾರಿ ಶಬ್ದ. ಮೊದಲೆಲ್ಲ ಮಾತಿನ ಭರದಲ್ಲಿ  ಸರಿಯಾದ ಶಬ್ದ ನೆನಪಿಗೆ ಬಾರದಿದ್ದರೆ  ತಡವರಿಸುತ್ತಿದ್ದೆವು. ಆದರೆ ಈಗ ಹಾಗಲ್ಲ  ಮಾತನಾಡುವಾಗ ನಾವು ಬಳಸಬೇಕಾದ ಶಬ್ದ ನೆನಪಿಗೆ ಬಾರದೆ ಇದ್ದರೆ ‘ಇದಾಗಿದೆ’ ಎಂದರಾಯಿತು !  ‘ಇದಾಗಿದೆ’ ಎಂದರೆ ಶಬ್ದ ಒಂದೇ, ಅರ್ಥಗಳು ಹಲವು. ಸುಮ್ಮನೆ ಮೆದುಳಿಗೆ ಯಾಕೆ ಕೆಲಸ ಕೊಡೋದು ಅಂತ  ಸೋಮಾರಿತನ ಕಾಡಿ ‘ಇದಾಗಿದೆ’ ಎಂದು ಹೇಳಿ ತಕ್ಷಣಕ್ಕೆ ಉಪಾಯದಿಂದ ತಪ್ಪಿಸಿಕೊಂಡು ಎದುರಿನವರ ಊಹಾ ಶಕ್ತಿಯ, ತಾಳ್ಮೆಯ ಪರೀಕ್ಷೆ ಮಾಡುತ್ತೇವೆ. ಅವರಿಗೆ  ಅರ್ಥವಾದರೆ ಸರಿ ಇಲ್ಲದಿದ್ದರೆ ಮತ್ತೆ ಅವರ ‘ಇದಾಗಿದೆ’ ಅಂದ್ರೆ ಏನು ಎನ್ನುವ ಪ್ರಶ್ನೆಗೆ  ನಾವು ಇದು ಅಂದ್ರೆ ಎನ್ನುತ್ತಾ ತಲೆ ಕೆರೆದುಕೊಳ್ಳುತ್ತಾ ಆ ಶಬ್ದಕ್ಕೆ ತಡಕಾಡಿ ನಂತರ ಸರಿಯಾದ ಶಬ್ದವನ್ನು ಹೇಳಲೇಬೇಕಾಗುತ್ತದೆ. ಮಕ್ಕಳು ಮಮ್ಮಿ ಪೆನ್ಸಿಲ್ ‘ಇದಾಗಿದೆ’ ಎನ್ನುವುದರಿಂದ ಹಿಡಿದು ದೊಡ್ಡವರು, ಮಾತಿಗೆ ಅವರಿಗೆ ಮೊನ್ನೆ ‘ಇದಾಯಿತಲ್ಲ’ ಎಂದು ಹೇಳುತ್ತಾ ಆತಂಕ ಸೃಷ್ಟಿಸಿ ಬಿಡುತ್ತಾರೆ.

ಅವರಿಗೆ ‘ಇದಾಯಿತಲ್ಲ’ ಎಂಬ ಈ ವಾಕ್ಯದಲ್ಲಿ ಅವರಿಗೆ ಏನು ಆಗಿರಬಹುದು ಎಂದು ನಾವು ಊಹೆ ಮಾಡುವುದು ಸುಲಭವಲ್ಲ. ಅದು ಒಳ್ಳೆಯದೂ ಆಗಿರಬಹುದು, ಕೆಟ್ಟದ್ದೂ ಆಗಿರಬಹುದು. ಅವರಿಗೆ ಕೆಲಸದಲ್ಲಿದ್ದರೆ ಟ್ರಾನ್ಸ್ ಫರ್ ಆಗಿರಬಹುದೇ ಅರೋಗ್ಯ ಸರಿ ಇಲ್ಲದಿದ್ದರೆ ಹೃದಯಾಘಾತ ಆಗಿರಬಹುದೇ, ಮದುವೆಯಾಗದಿದ್ದರೆ ಮದುವೆಯಾಗಿರಬಹುದೇ ಇತ್ಯಾದಿ. ಕೊನೆಗೆ ಅವರನ್ನೇ ‘ಇದಾಯಿತು’ ಅಂದ್ರೆ ಏನು ಮರುಪ್ರಶ್ನೆ ಮಾಡಿದಾಗಲೇ ನಮ್ಮ ಊಹಾಪೋಹಗಳಿಗೆಲ್ಲ ತೆರೆ ಬೀಳುತ್ತದೆ. ‘ಇದಾಯಿತಲ್ಲ’ ಎಂಬುದು ನಿಗೂಢ ಅರ್ಥದ ಶಬ್ದ, ಅದರ ನಿಜವಾದ ಅರ್ಥ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆಯಾಗಿರುತ್ತದೆ. ಅದೇ ಯಾರಾದರೂ ಒಂದು ವಸ್ತುವಿನ ಬಗ್ಗೆ ಹೇಳುತ್ತಾ ಅದು ಇದಾಗಿದೆ ಎಂದರೆ ನಾವ್ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮನುಷ್ಯರ ಬಗ್ಗೆ ಮಾತನಾಡುವಾಗ ಹಾಗೆ ಹೇಳಿದರೆ ತಕ್ಷಣ ಅವರಿಗೆ ಏನೋ ಒಂದು ಆಗಿದೆ ಆದ್ರೆ ಏನು ಆಗಿರಬಹುದು ಎಂದು ನಮ್ಮ ಮೆದುಳು ಚಕಚಕನೆ ಯೋಚಿಸತೊಡಗುತ್ತದೆ. ನಾನಾ ದಿಕ್ಕಿನಲ್ಲಿ ಯೋಚಿಸಿ ಸರಿಯಾದ ಕಾರಣ ಯಾವುದೆಂದು ತಿಳಿಯದೆ ನಂತರ ಕುತೂಹಲ ಹತ್ತಿಕ್ಕಲಾರದೆ ಅವರನ್ನೇ ಪ್ರಶ್ನಿಸುತ್ತೇವೆ. ಇದಾಗಿದೆ ಅಂದರೆ ಏನಾಗಿದೆ, ಆರೋಗ್ಯವಾಗಿದ್ದಾರೆ ತಾನೇ ಎಂದು ಮಾತಿನಲ್ಲಿ ಕಾಳಜಿಯೂ ನುಸುಳಿ ಬಿಡುತ್ತದೆ.

ಹೀಗೆ ಯೋಚಿಸುತ್ತಿದಂತೆ ಸೀಮಾಳ ಮಗಳು ಓಡೋಡಿ ಬಂದು ಏದುಸಿರು ಬಿಡುತ್ತ, ಆಂಟಿ, ನೀವು ಕೊಟ್ಟ ಹಲಸಿನ ಹಣ್ಣು ‘ಇದಾಗಿದೆ’ ಎಂದಳು. ನಾನು ಬಹುಶ ಅದು ಹಾಳಾಗಿದೆ ಎನ್ನುತ್ತಿದ್ದಾಳೆನೋ ಎಂದುಕೊಂಡು, ಛೆ ಪಾಪ ನೀನು ಎಷ್ಟು ಆಸೆಯಿಂದ ಅದು ಯಾವಾಗ ಹಣ್ಣಾಗುತ್ತದೆ ಎಂದು ಕಾಯ್ತಾ ಇದ್ದೆಯಲ್ಲವೇ ಎಂದಾಗ ಅವಳು ಇಲ್ಲ ಆಂಟಿ, ಹಲಸಿನ ಹಣ್ಣು, ಹಣ್ಣಾಗಿದೆ ಅಂತ ಹೇಳೋಕೆ ಬಂದೆ ಎಂದಳು ! ನೋಡಿದಿರಾ, ‘ಇದಾಗಿದೆ’ ಎಂದರೆ ಏನೆಂದು ಊಹಿಸುವುದು ಅದೆಷ್ಟು ಕಷ್ಟ. ಇದನ್ನೆಲ್ಲಾ ನೋಡಿ ‘ಇದಾಗಿದೆ ಎಂಬ ಪದ ನಮ್ಮ ಶಬ್ದ ಭಂಡಾರದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ.  ಈ ಲೇಖನ ಇನ್ನಷ್ಟು ಮುಂದುವರೆಸಬೇಕೆಂದು ನನಗೆ ಆಸೆ ಆದರೆ ನನ್ನ ಕೈಗಳು ‘ಇದಾಗಿವೆ ‘!