ಜಿರಳೆಯ ಕಣ್ಣಲ್ಲಿ ಮನುಷ್ಯರು

ಟಪ ಟಪ ಸದ್ದು ನಿಂತ ಮೇಲೆ ಜಿರಳೆಮ್ಮ ಓಡಿ ಬಂದು ಒಂದೇ ಸಮನೆ ರೋಧಿಸತೊಡಗಿದಳು. “ಅಯ್ಯಯ್ಯೋ,ನಮ್ ಮಕ್ಕಳೆಲ್ಲ ಸತ್ತು ಹೋಗಿ ಬಿಟ್ರಲ್ಲ ಪ್ಪೋ…”ಎನ್ನುತ್ತ ಬಾಯಿ ಬಾಯಿ ಬಡಿದುಕೊಂಡಳು. “ಏನಾಯ್ತು ಕೋರೋನ ನಾ.. “ಪಕ್ಕದ ಮನೆಯ ಕುಕ್ರೆಚ್ ಮಾಸ್ಕ್ ಸಿಕ್ಕಿಸುತ್ತ ಕೇಳಿದ.
“ಅಯ್ಯೋ, ಅಲ್ಲ, ಈ ಮನೆಯ ಮಂಕಾಳಮ್ಮ ನಮ್ಮ ಮಕ್ಕಳನ್ನೆಲ್ಲ ಚಪ್ಪಲಿಯಿಂದ ಟಪ ಟಪ ಹೊಡೆದು ಹೊಸಕಿ ಹಾಕಿಬಿಟ್ಲು. ಇನ್ನು ನಾನು ಹೇಗೆ ಬದುಕಲಿ? ನೂರೆಂಟು ಮಕ್ಕಳ ತಾಯಿಯಾಗಿ ಜಿನ್ನೆಸ್ ರೆಕಾರ್ಡ್ ಮಾಡಬೇಕು ಅಂತ ಕನಸು ಕಂಡಿದ್ದೆ, ಈಯಮ್ಮನಿಂದ ಎಲ್ಲ ಸರ್ವನಾಶ ಆಗೋಯ್ತು.. ಅವಳಿಗೆ ನಮ್ಮನ್ನೆಲ್ಲ ಕಂಡ್ರೆ ಆಗಲ್ಲ, ಉರಿದುರಿದು ಬೀಳ್ತಾಳೆ. ನಾವೇನು ಮಾಡ್ತೀವಂತ ಅಷ್ಟೊಂದು ದ್ವೇಷ ನಮ್ಮೇಲೆ?, ಏನೋ ಕಸದ ಬುಟ್ಟಿಯಲ್ಲಿದ್ದದ್ದು ತಿಂತೀವಿ, ಮಕ್ಕಳು ಮಾತ್ರ ಸ್ವಲ್ಪ ಚಪ್ಪಲಿ ಅದೂ ಇದೂ ಅಂತ ಮೆಲುಕಾಡೋಕೆ ತಿಂತಾರೆ, ಅಷ್ಟಕ್ಕೇ ಅವರನ್ನೆಲ್ಲ ಕೊಂದೇ ಬಿಡುದಾ? ಮನುಷ್ಯತ್ವನೇ ಇಲ್ಲ ಆಕೆಗೆ, ಇಷ್ಟಕ್ಕೂ ನಾವೇನು ಹಗಲು ಹೊತ್ತಲ್ಲಿ ಓಡಾಡಲ್ಲ. ಅವರ ಕಾಲ ಕೆಳಗೆ ಬಿದ್ದು ತುಳಿಸಿ ಕೊಳ್ಳೋದು ಬೇಡ ಅಂತ. ಆದ್ರೂ ರಾತ್ರಿ ಹೊತ್ತಲ್ಲಿ ಆಚಾನಾಕ್ಕಾಗಿ ಬಂದು ಸಿಕ್ಕವರನ್ನೆಲ್ಲ ಕೊಂದು ಬಿಡ್ತಾಳೆ. ಆ ಹಲ್ಲಿಯಪ್ಪ ಬಹಳ ಒಳ್ಳೆಯವ, ನಮ್ಮನ್ನೆಲ್ಲ ತಿನ್ನೋಕೆ ಬರೋದೇ ಇಲ್ಲ, ಆಯಮ್ಮ ತಿಂಡಿ ಪ್ಲೇಟು ಇಟ್ಟು ಆಚೆ ಹೋದ್ರೆ ಸಾಕು ತಿಂಡಿ ನೆಕ್ತಾ ಕೂತಿರ್ತಾನೆ…” ಮೀಸೆ ತಿಕ್ಕುತ್ತ ನುಡಿದಳು ಜಿರಳೆಮ್ಮ.
“ನೀನು ಮರ್ತಿದ್ದೀಯಾ? ಮಂಕಾಳಮ್ಮನ ಹೊಸ ಪ್ಯೂರ್ ಸಿಲ್ಕ್ ಸೀರೆ ಸಖತ್ತಾಗಿದೆ ಅಂತ ನೀನೇ ತಾನೇ ತಿಂದಿದ್ದು, ಅವಳಿಗೆ ಕೋಪ ಬರಲ್ವಾ? ಅದೂ ಅಲ್ಲದೆ ಆಯಮ್ಮ ಯಾವಾಗಲೂ ಶುಚಿ ಮಾಡ್ತಾನೆ ಇರ್ತಾಳೆ, ನಮ್ಮ ಹಿಕ್ಕೆ ವಾಸನೆ ಹೇಗೆ ಸಹಿಸ್ಕೋತಾಳೆ. ಸಿಕ್ಕಿದ್ದಕ್ಕೆಲ್ಲ ಬಾಯಿ ಹಾಕಿದ್ರೆ ಸಿಟ್ಟು ಬಾರದೆ ಇರುತ್ತಾ? ಆದ್ರೆ ನಮ್ಮ ಮನೆಯವರೇ ವಾಸಿಪ್ಪ. ಹಿಂದಿ ಮಾತಾಡೋ ಜನ, ಬಟ್ಟೆ ಒಗ್ಯೋದೆ ಇಲ್ಲ, ಅವರ ಶೂ, ಸಾಕ್ಸ್ ಹತ್ರ ಹೋದ್ರೆ ನಮಗೇ ವಾಕರಿಕೆ ಬರುತ್ತೆ ಅಷ್ಟೊಂದು ಕೆಟ್ಟ ವಾಸನೆ. ಆದ್ರೆ ಅಡಿಗೆ ಮನೇಲಿ ತಿಂಡಿ ಡಬ್ಬ, ತಿಂದು ಬಿಟ್ಟ ಪ್ಲೇಟು ಎಲ್ಲ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನಮಗಂತೂ ದಿನಾ ಭೂರಿ ಭೋಜನ! ಸ್ನಾನ ಮಾಡೋದೂ ಕೂಡ ಇಲ್ಲ, ಮನೆ ಎಲ್ಲ ಬೆವರಿನ ವಾಸನೆಯಿಂದ ಘಮ ಘಮ ಅಂತಿರುತ್ತೆ! ಒಂದ್ ದಿನ ಕೂಡ ನಮ್ಮ ತಂಟೆಗೆ ಬಂದವರಲ್ಲ, ಕಂಠಮಟ್ಟ ಕುಡಿದು ಮಲಗಿದ್ರೆ ನಾವೆಲ್ಲ ಅವರ ಮೇಲೆ ಹರಿದಾಡಿದ್ರೂ ಗೊತ್ತಾಗಲ್ಲ ಅವ್ರಿಗೆ, ಎಷ್ಟೋ ಸಲ ಟ್ರೆಕ್ಕಿಂಗ್ ಅಂತ ಅವರ ಬಾಯೊಳಗೆ ಹೊಕ್ಕು ವಾಪಾಸ್ ಬಂದಿದೀವಿ, ನೀನೂ ನಮ್ಮನೆಗೆ ಬಂದ್ ಬಿಡು, ಅದ್ಯಾಕೆ ಹಠ ಮಾಡ್ಕೊಂಡು ಈಯಮ್ಮನ ಮನೇಲಿ ಕೂತಿದ್ದೀಯಾ? ಇಲ್ಲೇ ಇದ್ರೆ ನೀನೇ ಉಳಿಯಲ್ಲ ಒಂದಿನ, ನೋಡ್ತಾ ಇರು. ನಮ್ಮನೆ ಬೇಡಾ ಅಂದ್ರೆ ಆ ಎದುರುಗಡೆ ಮನೆಗೆ ಹೋಗು” ಸಲಹೆ ನೀಡಿದ ಕುಕ್ರೆಚ್.
“ಆ ಮನೆನಾ? ಅಲ್ಲಿ ಏನಿದೆ ಅಂತ ಹೋಗೋದು, ಅಲ್ಲಿರೋರು ಸ್ಟೂಡೆಂಟ್ಸ್. ಅಡಿಗೆ ಮಾಡೋದಿಲ್ಲ, ಬೇಕರಿ ತಿಂಡಿ ಕೂಡ ತಂದು ತಿನ್ನಲ್ಲ, ಎಲ್ಲ ಹೊರಗಡೇನೆ ಮುಗಿಸಿ ಬರ್ತಾರೆ. ಡ್ರಗ್ಸ್ ತೊಗೊಂಡು ರಾತ್ರಿ ಎಲ್ಲ ಕುಣಿದು ಕುಪ್ಪಳಿಸುತ್ತಾ ಇರ್ತಾರೆ, ನಮಗಂತೂ ಅಲ್ಲಿದ್ರೆ ಬರಗಾಲನೇ” ಜಿರಲೆಮ್ಮ ನಿಟ್ಟುಸಿರು ಬಿಟ್ಟಳು.
“ಹಾಗಿದ್ರೆ ಆ ಮೂರನೇ ಮನೆಗೆ ಹೋಗು..” “ಅಯ್ಯಯ್ಯೋ ಆ ಮನೆ ಮಾತ್ರ ಬೇಡಾಪಾ ..”
” ಯಾಕೆ.. ?’
ಆ ಮನೇಲಿ ಇರೋದು ಚೀನಾದವರು, ನಮ್ಮನ್ನೆಲ್ಲ ಬಿಸಿ ಬಿಸಿ ಎಣ್ಣೆಯಲ್ಲಿ ಕರಿದು ಕರುಂ ಕುರುಂ ಅಂತ ತಿಂತಾರೆ, ನಮ್ಮ ಮೊಟ್ಟೆಗಳನ್ನು ಸೂಪ್ ಮಾಡಿ ಕುಡಿತಾರೆ, ದೇವರ ದಯೆಯಿಂದ ನಮ್ಮ ಮೊಟ್ಟೆಗಳು ಬಹಳ ಚಿಕ್ಕವು ಇಲ್ಲದಿದ್ರೆ ಆಮ್ಲೆಟ್ ಕೂಡ ಮಾಡಿ ತಿಂತಿದ್ರೇನೋ! ಆಗಾಗ ಅವರು ನಮ್ಮನೆಗೆ ಬರ್ತಾರೆ. ಈ ಮಂಕಾಳಮ್ಮಾ ಒಂದು ಕವರಲ್ಲಿ ನಮ್ಮವರನ್ನೆಲ್ಲ ತುಂಬಿಸಿ ಅವ್ರಿಗೆ ಕೊಡ್ತಾಳೆ!
ಮೊದ್ಲು ನಮ್ಮವರ ಮೇಲೆಲ್ಲ ಸ್ಪ್ರೇ ಮಾಡಿ ಸಾಯಿಸ್ತಿದ್ಲು. ಒಮ್ಮೆ ನೆಲದ ಮೇಲೆ ಬಿದ್ದ ಸ್ಪ್ರೇ ಮೇಲೆ ಕಾಲು ಜಾರಿ ಬಿದ್ದು ಕೈ ಮುರ್ಕೊಂಡ್ಲು, ನಂಗಂತೂ ಅದನ್ನು ನೋಡೋವಾಗ ಬಹಳ ಖುಷಿಯಾಗಿತ್ತು, ಆಮೇಲೆ ಸ್ವಲ್ಪ ದಿನ ನಮ್ಮ ತಂಟೆಗೆ ಬಂದಿಲ್ಲ ಹ ಹಾ…ಅದರ ನಂತರ ಚಪ್ಪಲಿಯಿಂದ ಹೊಡೆಯೋಕೆ ಶುರು ಮಾಡಿದ್ಲು”
“ಹೂಂ.. ಈ ಮನುಷ್ಯರಿಂದ ನಮ್ಗೆ ಉಳಿಗಾಲನೇ ಇಲ್ಲ, ಎಲ್ಲ ಮನುಷ್ಯರು ಕೊರೋನದಿಂದ ಸತ್ ಹೋದ್ರೆ ಎಷ್ಟು ಚೆನ್ನಾಗಿತ್ತು”
“ನಿನ್ನ ತಲೆ, ಅವರಿಲ್ಲಾಂದ್ರೆ ನಾವೂ ಇರಲ್ಲ, ಅವರಿಂದಾಗಿ ನಮ್ಗೆ ಹೊಟ್ಟೆ ತುಂಬಾ ಸಿಗೋದು ಇಲ್ಲಾಂದ್ರೆ ನಮ್ಗೆ ತಿಂಡಿ ಎಲ್ಲ ಎಲ್ಲಿಂದ ಸಿಗಬೇಕು?”
“ಓಹ್! ಹೌದಲ್ವಾ!? ನೀನು ಭಾರಿ ಜಾಣೆ…” ಟಪ್ ಟಪ್.. “ಕೊನೆಗೂ ಇಬ್ರೂ ಸಿಕ್ಕಿಬಿಟ್ರಲ್ವಾ ..” ಮಂಕಾಳಮ್ಮನ ಧ್ವನಿ!

ಪ್ರೇರಣೆ

… ಮೊದಲು ನಿಮ್ಮ ಕುಟುಂಬವನ್ನು ಪ್ರೀತಿಸಿ, ಮನೆಯಲ್ಲಿರುವ ಹಿರಿಯರನ್ನು ಆದರಿಸಿ ಗೌರವಿಸಿ, ನಿಮ್ಮ ಪತಿಗೆ ನೆರಳಾಗಿ ನಿಂತು ಸಹಾಯ ಮಾಡಿ, ಮಕ್ಕಳಿಗೆ ಒಳ್ಳೆಯ ಸ್ನೇಹಿತರಾಗಿ, ನೆರೆಹೊರೆಯವರಿಗೆ ಸಹಾಯ ಮಾಡಿ …” ತಾನು ಮಹಿಳಾ ಮಂಡಳಿಯಲ್ಲಿ ಮಾಡಿದ ಭಾಷಣವನ್ನು ಮನೆಯಲ್ಲಿ ಎಲ್ಲರೂ ಪುನಃ ಪುನಃ ಕೇಳುತ್ತಿರುವುದನ್ನು ಗಮನಿಸಿದ ರಜನಿ”ಅಲ್ಲ, ನಿಮಗೆಲ್ಲ ನನ್ನ ಭಾಷಣ ಅಷ್ಟೊಂದು ಇಷ್ಟವಾಯಿತೇ?!”ಎಂದು ಕೇಳಿದಳು. ಅವಳ ಪತಿ ಮಹಾಶಯ”ಹಾಗೇನಿಲ್ಲ, ಭಾಷಣದಲ್ಲಿ ಹೇಳಿದ ಮಾತುಗಳು ನಿನಗೇ ಪ್ರೇರಣೆಯಾಗಿ ನಿನ್ನಲ್ಲಿ ಬದಲಾವಣೆಯಾದರೆ ನಮಗೆಲ್ಲ ಒಳ್ಳೆಯದಾಗಬಹುದೇನೋ ಎಂದು ನಾವೆಲ್ಲ ಸೇರಿ ಪ್ರಯತ್ನ ಮಾಡುತ್ತಿದ್ದೇವೆ!”

ಹಾಡಿನ ಚಾಟಿ

ಅದೊಂದು ಅಪಾರ್ಟ್ಮೆಂಟ್. ಅಲ್ಲಿ ರಾಘವೇಂದ್ರ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕರೆಂಟ್ ಹೋದರೆ ಜನರೇಟರ್ ಹಾಕುವ ಕೆಲಸ ಅವನದ್ದು. ಆದರೆ ಅವನು ಬಹಳ ಸೋಮಾರಿಯಾಗಿದ್ದ. ಕರೆಂಟ್ ಹೋಗಿ ಬಹಳ ಹೊತ್ತಾದರೂ ಅವನಿಗೆ ಜನರೇಟರ್ ಹಾಕಬೇಕೆಂದು ಅನಿಸುತ್ತಿರಲ್ಲಿಲ್ಲ. ಅಲ್ಲಿನ ಮನೆಯವರೆಲ್ಲ ಜನರೇಟರ್ ಹಾಕೋ ಎಂದು ಗಲಾಟೆ ಮಾಡಿದಾಗಲೇ ಅವನು ಎದ್ದು ಹೋಗಿ ಹಾಕುತ್ತಿದ್ದ. ಇವನ ಕಾಟ ತಡೆಯಲು ಅಸಾಧ್ಯವಾಗಿತ್ತು. ಅದೊಂದು ದಿನ ಕತ್ತಲಾದ ಮೇಲೆ ಕರೆಂಟ್ ಕೈ ಕೊಟ್ಟಿತು. ಯಥಾ ಪ್ರಕಾರ ರಾಘವೇಂದ್ರ ಜನರೇಟರ್ ಹಾಕದೇ ಸುಮ್ಮನೆ ಕುಳಿತಿದ್ದ. ಫ್ಲಾಟ್ ನ ಜನ ಎಲ್ಲ ಒಬ್ಬೊಬ್ಬರಾಗಿ ಅವನನ್ನು ಕರೆದು ಜನರೇಟರ್ ಹಾಕಲು ಹೇಳಿದರೂ ಅವನು ಮಾತ್ರ ತೂಕಡಿಸುತ್ತಾ ಕುಳಿತಿದ್ದ. ಅಷ್ಟರಲ್ಲಿ ಜನರೆಲ್ಲ ರೋಸಿ ಹೋಗಿ ಗಲಾಟೆ ಮಾಡತೊಡಗಿದರು. ಅದರ ಮಧ್ಯೆ ಕೀರಲು ಧ್ವನಿಯೊಂದು ಆಲಾಪ ಶುರು ಮಾಡಿತು. ಆ ..ಆ…ಆ…..ಆ ಕರ್ಣ ಕಠೋರ ಸ್ವರಕ್ಕೆ ಬೆಚ್ಚಿ ಎಲ್ಲರೂ ಸ್ತಬ್ಧರಾಗಿ ಬಿಟ್ಟರು. ಆ ಧ್ವನಿ ಹಾಡಲು ಶುರು ಮಾಡಿತು.
ರಾಘವೇಂದ್ರಾ… ರಾಘವೇಂದ್ರಾ ….
ನೀ ಮೌನವಾದರೆ ನಮ್ಮ ಗತಿಯೇನು….ನಿನ್ನ ಜನರೇಟರ್ ನ ಜ್ಯೋತಿ ನಮ್ಮ ಮನೆಯನು ಬೆಳಗುವ ತನಕಾ .. ಬಿಡೆನು ಇನ್ನು ನಾನು… ಹಾಡದೆ ಇರೆನು ಇನ್ನು ನಾನು …
ಗಂಟಲು ಬಿರಿಯಲಿ… ಕಿವಿಯೂ ಹರಿಯಲಿ.. ಏನೇ ಆದರೂ ಹಾಡದೆ ಬಿಡೆನು.. ಬಿಡೆನು ಇನ್ನು ನಾನು .. ಬಿಡೆನು ಇನ್ನು ನಾನು…
ಜನರೇಟರನು ಹಾಕುವ ತನಕ… ಅಂಧಕಾರವನು ಅಳಿಸುವ ತನಕ ..ಬಿಡೆನು ಇನ್ನು ನಾನು.. ಹಾಡದೇ ಇರೆನು ಇನ್ನು ನಾನು.. ಬಿಡೆನು ಇನ್ನು ನಾನು…
ತಕ್ಷಣವೇ ಜನರೇಟರ್ ಶಬ್ದ ಕೇಳಿಸಿತು. ಅದರ ಜೊತೆಗೆ ದೀಪಗಳೆಲ್ಲ ಬೆಳಗಿದವು. ಹಾಡು ನಿಂತುಹೋಯಿತು. ಮತ್ತೆಂದೂ ಆ ಸ್ವರಕ್ಕೆ ಹಾಡಲು ಅವಕಾಶ ಸಿಗಲೇ ಇಲ್ಲ!!

ಹಾಡಿಗೆ ಪ್ರೇರಣೆ : ಬಿಡೆನು ನಿನ್ನ ಪಾದ – ಚಲನಚಿತ್ರ – ನಾ ನಿನ್ನ ಬಿಡಲಾರೆ .

ಟಕ ಟಕ….

ಟಕ ಟಕ ಬಾಗಿಲಿಗೆ ಬಡಿದ ಶಬ್ದ.   ದಿನವಿಡೀ  ಕೆಲಸ ಮಾಡಿ  ಸುಸ್ತಾದ ಸುಲತ  ಆಗ ತಾನೇ ನಿದ್ದೆ ಹೋಗಿದ್ದಳು. ಹಾಸಿಗೆಯಲ್ಲಿ ಬಿದ್ದವಳಿಗೆ ಲೋಕವೇ ಇರಲಿಲ್ಲ. ಬಾಗಿಲು ಬಡಿದ ಶಬ್ದ ಕೇಳಿದರೂ ಕಣ್ಣು ತೆರೆಯಲಾಗದಷ್ಟು ನಿದ್ದೆ ಆವರಿಸಿತ್ತು. ಅವಳ ಮಗ ತುಷಾರ್ ರಾತ್ರಿ ಹೊತ್ತು ತನಗೆ ಏನಾದರೂ ಬೇಕಾದಾಗ ಉಗುರಿನಿಂದ  ಹಾಗೇ ಬಾಗಿಲು ಬಡಿಯುತ್ತಿದ್ದ. ಅವನೇ ಇರಬೇಕೆಂದು   ಕಷ್ಟಪಟ್ಟು ಕಣ್ಣು ತೆರೆದು ಏನೋ ಅದು ? ಏನಾಯಿತು, ಹುಷಾರಿಲ್ಲವಾ ? ಎಂದು ಕೇಳಿದಳು. ಆದರೆ ಅವನ ಉತ್ತರವೇ ಇಲ್ಲದ್ದನ್ನು ಕಂಡು ಬಾಗಿಲು ಬಡಿದ ಹಾಗೆ  ತನಗೆ ಕನಸು ಬಿದ್ದಿರಬೇಕು ಎಂದುಕೊಳ್ಳುತ್ತ ಮುಸುಕೆಳೆದು ಮಲಗಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಮತ್ತೆ ಟಕ ಟಕ ಸದ್ದು,  ಅವಳಿಗೆ ರೇಗಿ ಹೋಯಿತು. ಆರಾಮವಾಗಿ ಒಂದು ಗಳಿಗೆ ಮಲಗಲೂ ಸ್ವಾತಂತ್ರ್ಯವಿಲ್ಲ ಎಂದುಕೊಂಡು ಸಿಟ್ಟಿನಿಂದ ಎದ್ದು ಬಾಗಿಲು ತೆರೆದಳು. ಮಗನಿಗೆ  ಚೆನ್ನಾಗಿ ಗದರಿಸಬೇಕೆಂದುಕೊಂಡವಳಿಗೆ ಅಲ್ಲಿ ಯಾರೂ ಇರದ್ದು ಕಂಡು ಮತ್ತಷ್ಟು ಸಿಟ್ಟು ಬಂದಿತು. ಸೀದಾ ಮಗನ ರೂಮಿಗೆ ಹೋಗಿ ಲೈಟು ಹಾಕಿದಳು. ಮಗ ಚೆನ್ನಾಗಿ ನಿದ್ರಿಸುತ್ತಿದ್ದ,  ನಾಟಕ ಮಾಡುತ್ತಿದ್ದಾನೆಯೇ ಎಂದು ನೋಡಲು ಅವನ ಮೈ ಅಲುಗಾಡಿಸಿದಳು. ನಿದ್ದೆಯಲ್ಲಿದ್ದ  ಅವನು ಗಾಬರಿಗೊಂಡು ಎದ್ದು ಏನಾಯಿತು ಮಮ್ಮಿ ಎಂದ. ಅರೆ! ನೀನು ಬಂದು ಬಾಗಿಲು ಬಡಿದು ನನ್ನನ್ನು ಎಬ್ಬಿಸಿ ಈಗ ನಾಟಕವಾಡುತ್ತೀಯಾ ಎಂದು ಗದರಿಸಿದಳು.

ಅತ್ತ ಕಡೆಯ ರೂಮಿನಿಂದ ಅವಳ ಅತ್ತೆ ಒಂದು ಗಳಿಗೆ ನಿದ್ದೆ ಮಾಡುವ ಹಾಗಿಲ್ಲ ಮಧ್ಯರಾತ್ರಿಯಲ್ಲೂ ಅದೇನು ಮಾತೋ ಎಂದು ಗೊಣಗುವುದು ಕೇಳಿಸಿತು. ಸುಲತಾಳ  ಸಿಟ್ಟು ಅತ್ತೆಯ ಮೇಲೆ ತಿರುಗಿತು. ಅತ್ತೆ  ಆರೋಗ್ಯವಾಗಿದ್ದರೂ ಸಹ ದಿನವಿಡೀ ಮಲಗಿಕೊಂಡೇ ಇರುವುದು, ತನಗೆ ಮನೆಕೆಲಸದಲ್ಲಿ ಯಾವುದೇ ಸಹಾಯ ಮಾಡುವುದಿಲ್ಲ ಆದರೂ ನಿದ್ದೆಯ ಭೂತ ಹಿಡಿದಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಜೋರಾಗಿ ಹೇಳಿದರೆ ನಡುರಾತ್ರಿಯಲ್ಲೂ  ಜಗಳಕ್ಕೆ ಕಾಲು ಕೆರೆದು ಬರುತ್ತಾರೆ ಎಂದು ಅವಳಿಗೆ ಚೆನ್ನಾಗಿ ಗೊತ್ತು. ತುಷಾರ್ ತನಗೆ ಸ್ವಲ್ಪ ತಲೆನೋಯುತ್ತಿದೆ ಆದರೂ ತಾನು ಬಾಗಿಲು ಬಡಿದಿಲ್ಲ ಎಂದ. ಸರಿ ಎಂದು ಅವನಿಗೆ ತಲೆನೋವಿಗೆ ಮಾತ್ರೆ ಕೊಟ್ಟು ತನ್ನ ರೂಮಿಗೆ ನಡೆದಳು. ಅವಳ ಗಂಡ ಶ್ರೀಪತಿ ಆರಾಮವಾಗಿ ಮಲಗಿದ್ದ . ಇವರಿಗಂತೂ ಮನೆಯ ಮಾಡೇ ತಲೆ ಮೇಲೆ ಬಿದ್ದರೂ  ಗೊತ್ತಾಗಲಿಕ್ಕಿಲ್ಲ ಎಂದು ಹೇಳುತ್ತ ಮಲಗಿಕೊಂಡಳು.

ಸುಮಾರು ಅರ್ಧ ಗಂಟೆಯ ನಂತರ ಮತ್ತೆ  ಟಕ ಟಕ ಸದ್ದು ಕೇಳಿಸಿತು. ಯಾಕೋ  ಇವತ್ತು ನನಗೆ ನಿದ್ದೆ ಮಾಡುವ ಯೋಗವೇ ಇಲ್ಲ ಎಂದುಕೊಳ್ಳುತ್ತ ಗಂಡ ಹಾಯಾಗಿ ಮಲಗಿದ್ದನ್ನು ನೋಡಿ ಈ ಸಲ ಅವರೇ ಎದ್ದು ನೋಡಲಿ ಎಂದು ಸುಮ್ಮನಾದಳು. ಟಕ ಟಕ ಶಬ್ದ ಮುಂದುವರೆಯಿತು. ಆಸಾಮಿ ಏಳುವ ಲಕ್ಷಣ ಇರಲಿ ಅತ್ತಿಂದಿತ್ತ ಅಲುಗಾಡಲೂ ಇಲ್ಲ. ಸುಲತಾಗೆ ರೇಗಿಹೋಯಿತು ಎಲ್ಲ ನಾನೇ ಯಾಕೆ ಮಾಡಬೇಕು  ಎಂದುಕೊಳ್ಳುತ್ತ ಗಂಡನನ್ನು ಎಬ್ಬಿಸಿದಳು ನೋಡಿ, ಯಾರೋ ಬಾಗಿಲು ಬಡಿಯುತ್ತಿದ್ದಾರೆ,  ಮಗ ನಿದ್ದೆ ಮಾಡುತ್ತಿದ್ದಾನೆ  ಬಹುಶಃ  ನಿಮ್ಮ ಅಪ್ಪ ಇರಬೇಕು ಎಂದಳು. ಆದರೆ ಆ ಮಹಾಶಯ ಕಣ್ಣು ಕೂಡ ತೆರೆಯದೇ ಕುಡಿದು ಅಮಲೇರಿದವನಂತೆ  ಯಾರಾ… ದರೂ ಇರ್ಲಿ….  ನೀನು..  ಸುಮ್ನೆ ..ಮಲಕ್ಕೋ ಎಂದು ಉಲಿದು ಸಣ್ಣದಾಗಿ  ಗೊರಕೆ ಆರಂಭಿಸಿದ. ಅವಳಿಗೆ ತಲೆ ಚಿಟ್ಟು ಹಿಡಿದಂತಾಯಿತು. ಅತ್ತ   ಟಕ  ಟಕ ಸದ್ದು ಇತ್ತ ಗೊರಕೆ ಸದ್ದು  ಕೇಳಲಾಗದೆ ಅವಳಿಗೆ ಜೋರಾಗಿ ಕಿರಿಚಿಕೊಳ್ಳೋಣ ಎಂದೆನಿಸಿತು. ತಕ್ಷಣವೇ ಅವನ ಮೂಗು ಹಿಡಿದಳು, ಗೊರಕೆಯ ಸದ್ದು ನಿಂತಿತು. ಅವನು ಬದಿಗೆ ತಿರುಗಿ ಮಲಗಿದ. ಅದು ಅವನಿಗೆ ತಿಳಿದದ್ದೇ. ದಿನಾ ಅವನು ದೊಡ್ಡದಾಗಿ ಗೊರಕೆ ಹೊಡೆಯುವುದು ಒಳ್ಳೆಯ ನಿದ್ದೆಯಲ್ಲಿದ್ದ ಅವಳು ಅವನ ಭಯಾನಕ ಗೊರಕೆ ಸದ್ದಿಗೆ ಬೆಚ್ಚಿ  ಏಳುವುದು ನಂತರ ಅವನ ಗೊರಕೆ ನಿಲ್ಲಿಸಲು ಅವನ ಮೂಗು ಹಿಡಿಯುವುದು ಆಗ ಅವನಿಗೆ ಎಚ್ಚರವಾಗಿ ಬದಿಗೆ ತಿರುಗಿ ಮಲಗುವುದು ಇದು  ಪದ್ಧತಿ !

ಗೊರಕೆಯಂತೂ ನಿಂತಿತು,  ಇನ್ನು ಬಾಗಿಲಿಗೆ ಯಾರು ಬಡಿಯುತ್ತಿದ್ದಾರೆ ಎಂದು ನೋಡಬೇಕು ಎಂದು ಮೆಲ್ಲನೆ ಬಾಗಿಲು ತೆರೆದಳು. ಆದರೆ ಅಲ್ಲಿ ಯಾರೂ ಇರಲಿಲ್ಲ . ಇದೇನಪ್ಪಾ ಆಶ್ಚರ್ಯ ! ಭೂತ, ಪ್ರೇತ ಏನಾದರೂ ಇರಬಹುದೇ  ಎಂದುಕೊಳ್ಳುತ್ತಿದ್ದಂತೆ ಮೈಯೆಲ್ಲ ಬೆವರಿತು. ಭಯದಿಂದ ತಕ್ಷಣವೇ ಬಾಗಿಲು ಹಾಕಿ ದೇವರನ್ನು ಧ್ಯಾನಿಸತೊಡಗಿದಳು. ಭಯದಿಂದ ಅವಳ ನಿದ್ದೆ ಹಾರಿ ಹೋಗಿತ್ತು. ಹಳೇಯ ಕಾಲದ ಮನೆ, ಇವರ ತಾತ ಮುತ್ತಾತ ಏನಾದರೂ ದೆವ್ವವಾಗಿ ಬಂದರೇ ಎಂದುಕೊಂಡು ನಡುಗಿದಳು. ಇಷ್ಟೆಲ್ಲ ಯೋಚನೆ ಮಾಡುತ್ತಿರುವಾಗ  ಸದ್ದು ನಿಂತಿದ್ದು ಅವಳ ಗಮನಕ್ಕೆ ಬರಲಿಲ್ಲ. ದಿಂಬಿನಿಂದ ಮುಖ ಮುಚ್ಚಿಕೊಂಡು ಮುದ್ದೆಯಾಗಿ ಮಲಗಿದಳು. ಆಗ ಅವಳಿಗೆ ಸದ್ದು ನಿಂತಿದ್ದು ಅರಿವಾಯಿತು. ಸಧ್ಯ ದೆವ್ವ ಹೋಯಿತು ಅಂದುಕೊಂಡು ಮಲಗಿದಳು.

ಸುಮಾರು ಹೊತ್ತಿನ ಬಳಿಕ ಮತ್ತೆ ಟಕ ಟಕ ಶಬ್ದ ಶುರುವಾಯಿತು. ದೇವರಿದ್ದ ಕಡೆ ದೆವ್ವ ಬರುವುದಿಲ್ಲ ಎಂದು ಕೇಳಿ ಅರಿತಿದ್ದ ಅವಳು ದೇವರ ಮೂರ್ತಿಯನ್ನು ಬಾಗಿಲ ಬಳಿ ಇಟ್ಟರೆ ಹೇಗೆ  ಅಂತ ಅಂದುಕೊಂಡಳು. ಎದ್ದು ಲೈಟ್  ಹಾಕಿದಳು,  ತಮ್ಮ ಕೋಣೆಯಲ್ಲಿದ್ದ ದೇವರ ಮೂರ್ತಿಯನ್ನು ಬಾಗಿಲ ಬಳಿ ಇಡಲು ಬಗ್ಗಿದಾಗ ಅಲ್ಲಿ ಇಲಿಯೊಂದು ಬಾಗಿಲಿಗಿದ್ದ   ಚಿಕ್ಕ ಎಡೆಯನ್ನು ಕೊರೆದು ಸ್ವಲ್ಪ ದೊಡ್ಡದು ಮಾಡಿ ಅದರ ಮೂಲಕ ಹೊರಹೋಗಲು ಹವಣಿಸುತ್ತಿರುವುದನ್ನು ನೋಡಿ ಅವಳಿಗೆ ಜೋರಾಗಿ  ನಗು ಬಂದಿತು. ಟಕ ಟಕ ಸದ್ದು ಮಾಡುತ್ತಿದುದು ದೆವ್ವವಲ್ಲ, ಇಲಿ ! ನೀನಾ ನನ್ನ ನಿದ್ದೆ ಹಾಳು ಮಾಡಿದ್ದು ? ಇವತ್ತಿಗೆ ನಿನ್ನ ಕಾಲ ಮುಗೀತು ಎಂದು ಇಲಿಯನ್ನು ಹೊಡೆಯಲು ಏನಾದರೂ ಸಿಗುವುದೇ ಎಂದು ಸುತ್ತ ಮುತ್ತ ನೋಡಿದಳು. ಏನೂ ಸಿಗಲಿಲ್ಲ, ಕಾಲಿನಿಂದಲೇ ತುಳಿಯಲು ನೋಡಿದಳು. ಅದು ಬಾಗಿಲ ಎಡೆಯಿಂದ ನುಸುಳಿತು.  ಇನ್ನು ಅದು ಪಾರಾದಂತೆಯೇ ಎಂದುಕೊಂಡವಳಿಗೆ ಬಾಲ ಇನ್ನೂ ಬಾಗಿಲ ಒಳಗೇ ಇದ್ದುದು ಕಂಡು ಸಂತೋಷವಾಗಿ ತಕ್ಷಣವೇ ಬಾಲವನ್ನೇ ಗಟ್ಟಿಯಾಗಿ ಹಿಡಿದಳು! ಅದನ್ನು ಮುಟ್ಟಲು ಅವಳಿಗೆ ಮುಜುಗರವಾದರೂ ತನ್ನ ನಿದ್ದೆಯನ್ನು ಹಾಳುಮಾಡಿದ್ದಕ್ಕಾಗಿ ಅವಳಿಗೆ ಆ ಇಲಿಯ ಮೇಲೆ ಕೆಟ್ಟ ಕೋಪ ಬಂದಿತ್ತು. ಅದನ್ನು ಬಿಡಲೇಬಾರದು ಎಂದು ಛಲ ತೊಟ್ಟಳು.

ಬಾಗಿಲ ಹೊರಗಿದ್ದ  ಇಲಿ ತನ್ನ ಬಾಲ ಬಿಡಿಸಿಕೊಳ್ಳಲು ಹೆಣಗಾಡತೊಡಗಿತು. ಅವಳಿಗೂ, ಇಲಿಗೂ ಬಾಲ ಜಗ್ಗಾಟ ನಡೆಯಿತು.  ಇನ್ನು ಅದು ಹೇಗಾದರೂ ಮಾಡಿ ತಪ್ಪಿಸಿಕೊಂಡು ಓಡುತ್ತದೆ ಎಂದುಕೊಂಡು ತನ್ನ ಎರಡೂ ಕೈಗಳಿಂದ ಬಾಲವನ್ನು ಭದ್ರವಾಗಿ ಹಿಡಿದುಕೊಂಡಳು!  ಅತ್ತೆ..  ಅತ್ತೆ .. ಮಾವ..  ಮಾವ  ಎಂದು ಜೋರಾಗಿ ಕಿರಿಚಿದಳು. ಇವಳು ಅಪರಾತ್ರಿಯಲ್ಲಿ ಯಾಕೆ ಕಿರಿಚಿದಳು? ಮಗನಿಗೇನಾದರೂ ಆಯಿತೇ ಎಂದು ಭಯದಿಂದ ಇಬ್ಬರೂ ಓಡಿ ಬಂದರು. ಆಗ ಸುಲತ ಬಾಗಿಲು ತೆರೆಯದೇ  ನಮ್ಮ ರೂಮಿನ ಬಾಗಿಲ ಹತ್ತಿರ ಇಲಿ ಸಿಕ್ಕಿಹಾಕಿಕೊಂಡಿದೆ, ಇಲಿ ಹೊರಗೆ ಬಂದಿದೆ ಆದರೆ  ಅದರ ಬಾಲ ಮಾತ್ರ ನಾನು ಒಳಗಿನಿಂದ ಹಿಡಿದುಕೊಂಡಿದ್ದೇನೆ ನೀವು ಅದನ್ನು ಕೊಂದುಬಿಡಿ ಎಂದಳು. ಅತ್ತೆ, ಮಾವ ಇಬ್ಬರೂ ಇವಳು ಇಲಿಯ ಬಾಲ ಹಿಡಿದು ಕೂತಿದ್ದಾಳೆ ಎಂದಾಗ  ಇವಳು ನಿದ್ದೆಯಲ್ಲೇನೋ ಮಾತಾಡುತ್ತಿದ್ದಾಳೆ ಯಾರಿಗಾದರೂ ಇಲಿಯ ಬಾಲ ಹಿಡಿಯಲಿಕ್ಕಾಗುತ್ತದೆಯೇ ಎಂದು ಜೋರಾಗಿ ನಕ್ಕರು. ಸುಲತಾಗೆ ಸಿಟ್ಟು ಬಂದು ಬಾಗಿಲ ಬುಡದಲ್ಲಿ ನೋಡಿ, ಇಲಿ ಕಾಣುತ್ತದೆಯೇ ಎಂದಾಗ ಅಲ್ಲಿ ಕೊಸರಾಡುತ್ತಿದ್ದ ಇಲಿಯನ್ನು ಕಂಡು ಬೆರಗಾದರು. ಆಗ ಅವಳ ಮಾವನಿಗೆ ತಕ್ಷಣವೇ ಪಕ್ಕದ ಮನೆಯ ಬೆಕ್ಕಿನ ನೆನಪಾಗಿ ಅವರು ಬಿಲ್ಲು….  ಬಿಲ್ಲು ಎಂದು ಜೋರಾಗಿ ಅರಚುತ್ತ ಹೊರಗೆ ಓಡಿದರು ! ಆ ಹೊತ್ತಿನಲ್ಲಿ ಬೆಕ್ಕೆಲ್ಲಿ ಸಿಗಬೇಕು? ಈಗ ನಗುವ ಸರದಿ ಸುಲತಾಳದ್ದಾಯಿತು.  ಅಲ್ಲಿ ಪೊರಕೆ ಇದ್ದರೆ ಅದರಿಂದ ಹೊಡೆದುಬಿಡಿ ಜಾಸ್ತಿ ಹೊತ್ತು ನನಗೆ ಹಿಡಿದಿಡಲು ಆಗುವುದಿಲ್ಲ  ಅತ್ತೆ, ಎಂದಳು. ಅವಳ ಅತ್ತೆ,  ನಾನು ಇಲಿಯನ್ನು ಕೊಲ್ಲುವ ಪಾಪ ಮಾಡಲಾರೆ,  ನನ್ನಿಂದಾಗದು ಎಂದರು. ಸುಲತಾಗೆ ಸಿಟ್ಟು ಬಂದು  ಇಡೀ ದಿನ ಮನೆಯಲ್ಲಿ ಇಲ್ಲ ಸಲ್ಲದ ಕಾರಣಕ್ಕೆ ನನ್ನ ಜೀವ ತಿನ್ನುವಾಗ ಪಾಪ ಪುಣ್ಯದ ಅರಿವಿರುವುದಿಲ್ಲ. ನನ್ನ ಜೀವ ತಿಂದು ನರಕಕ್ಕೆ ಹೋಗುವುದಿಲ್ಲ ಅಂದುಕೊಂಡಿದ್ದೀರಾ ಎಂದು ಗೊಣಗಿದಳು. ಅಷ್ಟರಲ್ಲಿ ತುಷಾರ್ ಎದ್ದು ರೂಮಿನಿಂದಲೇ, ಏನು ಗಲಾಟೆ ಮಮ್ಮೀ ಎಂದ. ಸುಲತಾ, ಏನಿಲ್ಲ ಪುಟ್ಟಾ,  ಇಲಿ ಬಂದಿದೆ, ನೀನು ಮಲಕ್ಕೋ ಎಂದಳು.

ಅವಳ ಅತ್ತೆ ಹೊರಗೆ ಹೋಗಿ ತನ್ನ ಗಂಡನಿಗೆ, ಈ ಹೊತ್ತಿನಲ್ಲಿ ಬೆಕ್ಕನ್ನು ಹುಡುಕಲು ನಿಮಗೆ ತಲೆ ಸರಿ ಇಲ್ವಾ?  ಮುದಿಭ್ರಾಂತಿ ಶುರುವಾಗಿದೆ ನಿಮಗೆ  ಎಂದು ಬೈಯುವುದು ಕೇಳಿಸಿತು. ಇನ್ನು ಇವರಿಬ್ಬರ ಜಗಳ ಶುರುವಾದರೆ ಈ ಇಲಿಯನ್ನು ಕೊಂದಹಾಗೇ ಎಂದುಕೊಂಡು ಮಾವ … ಮಾವ  ಎಂದು ಕಿರುಚಿದಳು. ಹೆಂಡತಿಯ ಬೈಗುಳ ತಪ್ಪಿಸಿಕೊಳ್ಳಲು ಒಳ್ಳೆಯ ಅವಕಾಶ ಎಂದು ಅವಳ ಮಾವ ಓಡೋಡಿ ಬಂದರು. ಸುಲತಾ, ಮಾವನಿಗೆ ಇಲಿಯನ್ನು ಪೊರಕೆಯಿಂದ ಹೊಡೆದು ಕೊಲ್ಲಲು ಹೇಳಿ ಪೊರಕೆ ಅಡಿಗೆ ಮನೆಯ ಮೂಲೆಯಲ್ಲಿದೆ ಎಂದು ತಿಳಿಸಿದಳು. ಅವಳ ಮಾವ ಪೊರಕೆಯಿಂದ  ಇಲಿಗೆ ರಪ್ಪನೆ ಬಡಿದು ಹೆಂಡತಿಯ ಮೇಲಿನ ಸಿಟ್ಟನ್ನು ಇಲಿಯ ಮೇಲೆ ತೀರಿಸಿದರು! ಅವರ ಒಂದೇ ಏಟಿಗೆ ಇಲಿ  ಸತ್ತು ಬಿದ್ದಿತು. ಸುಲತಾ ತಕ್ಷಣವೇ ತಾನು  ಹಿಡಿದುಕೊಂಡಿದ್ದ ಇಲಿಯ ಬಾಲವನ್ನು ಬಿಟ್ಟಳು. ಅಬ್ಬ!  ಇನ್ನು ನಾನು ನಿಶ್ಚಿಂತೆಯಿಂದ ನಿದ್ದೆ  ಮಾಡಬಹುದಲ್ಲ ಎಂದು  ಸುಲತಾ ಖುಶಿ ಪಟ್ಟಳು. ಅವಳ ಮಾವ ಆಗ ತಾನೇ ಹೆಂಡತಿ ಬೈದಿದ್ದು ಮರೆತು ಮತ್ತೆ ಬಿಲ್ಲು….  ಬಿಲ್ಲು ಎನ್ನುತ್ತ ಬೆಕ್ಕನ್ನು ಸತ್ತ ಇಲಿ ತಿನ್ನಲು ಕರೆಯತೊಡಗಿದರು!  ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ಅವಳ ಪತಿ ಮಹಾಶಯ ಮಾತ್ರ ಸ್ವಲ್ಪವೂ ಎಚ್ಚರಗೊಳ್ಳದೆ ಹಾಯಾಗಿ ಮಲಗಿದ್ದ!!