ಪ್ರಿನ್ಸ್ ಎಚ್ಚೆತ್ತು ನೋಡಿದಾಗ ತಾನು ಬೀದಿ ಬದಿಯಲ್ಲಿ ಮಲಗಿದ್ದು ಕಂಡು ಅದಕ್ಕೆ ಆಶ್ಚರ್ಯ ವಾಯಿತು. ಅರೆ ತಾನು ಇಲ್ಲಿಗೆ ಹೇಗೆ ಬಂದೆ ಎಂದು ಆತಂಕವಾಗಿ ಸುತ್ತಲೂ ನೋಡಿತು. ಅಪರಿಚಿತ ಜಾಗ, ಎಲ್ಲಿದ್ದೇನೆಂದು ಕ್ಷಣ ಕಾಲ ತಿಳಿಯಲೇ ಇಲ್ಲ. ಕೊನೆಗೆ ನಿನ್ನೆ ರಾತ್ರಿ ಯಜಮಾನನ ಜೊತೆ ಕಾರಿನಲ್ಲಿ ಕುಳಿತು ಲಾಂಗ್ ಡ್ರೈವ್ ಗೆ ಹೋಗಿದ್ದು ನೆನಪಾಯಿತು.
ಲಾಂಗ್ ಡ್ರೈವ್ ಹೋಗುವುದು ತನಗೆ ಯಾವಾಗಲೂ ಇಷ್ಟವೇ. ರಾತ್ರಿ ಹೊತ್ತಿನಲ್ಲಿ ಹೊರಗಿನ ತಂಪಾದ ಗಾಳಿಯನ್ನು ಆಹ್ಲಾದಿಸುತ್ತ ಹೋಗುವ ಮಜವೇ ಬೇರೆ. ಯಜಮಾನ ಖುಷಿಯಾದಾಗ ಹೀಗೆ ತನ್ನನ್ನು ಲಾಂಗ್ ಡ್ರೈವ್ ಗೆ ಕರೆದೊಯ್ಯುತ್ತಾನೆ. ಅರೆ! ಒಂದು ನಿಮಿಷ, ಲಾಂಗ್ ಡ್ರೈವ್ ಗೆ ಬಂದು ಮನೆಗೆ ಯಾಕೆ ವಾಪಾಸು ಹೋಗಿಲ್ಲ? ತಮ್ಮ ಕಾರು ಎಲ್ಲಿ? ಯಜಮಾನ ಎಲ್ಲಿ ? ಎಂದು ಆತಂಕದಿಂದ ಸುತ್ತಲೂ ನೋಡುತ್ತ ಓಡಾಡಿತು. ತಕ್ಷಣ ಯಜಮಾನ ಕತ್ತಲಲ್ಲಿ ತನಗೆ ಇಳಿಯಲು ಹೇಳಿ ಕಾರಿನಲ್ಲಿ ಭರ್ರೆಂದು ವಾಪಾಸು ಹೋಗಿದ್ದು ನೆನಪಾಗಿ ಖಿನ್ನ ಗೊಂಡಿತು.
ಹಿಂದೆಯೇ ಓಡುತ್ತ ಹೋದರೂ ಯಜಮಾನ ಕಾರು ನಿಲ್ಲಿಸಲೇ ಇಲ್ಲ. ಆದರೂ ಆತ ಕಾರು ನಿಲ್ಲಿಸಬಹುದು ಎಂದು ಆಸೆಯಿಂದ ತಾನು ಹಿಂದೆ ಓಡಿದ್ದೆ ಓಡಿದ್ದು, ಕೊನೆಗೆ ಆಯಾಸದಿಂದ ಸಿಟ್ಟೂ ಬಂದಿತು. ಯಜಮಾನನ ಈ ಹೊಸ ಆಟ ತನಗಿಷ್ಟವಾಗಲಿಲ್ಲ ಎಂದು ತೋರಿಸಲು ಹಿಂದೆ ಓಡುವುದನ್ನು ಬಿಟ್ಟು ಅಲ್ಲೇ ಕಾದು ಕುಳಿತೆ. ಆದರೆ ಯಜಮಾನ ಎಂದಿನ ಹಾಗೆ ಕಾರು ತಿರುಗಿಸಿ ಬರಲೇ ಇಲ್ಲ. ಯಜಮಾನನಿ ಗಾಗಿ ಕಾದು ಕಾದು ಅಲ್ಲೇ ನಿದ್ದೆ ಮಾಡಿ ಬಿಟ್ಟಿದ್ದೆ.
ಛೇ ತಾನು ಹಿಂದೆ ಓಡಿ ಕಾರನ್ನು ತಲುಪಬೇಕಿತ್ತು ಹಾಗೆ ಮಾಡಲಿಲ್ಲ ಎಂದು ಯಜಮಾನ ಸಿಟ್ಟಾಗಿರಬೇಕು ಎಂದು ಯೋಚಿಸುತ್ತ ವಾಸನೆಯಿಂದ ಗ್ರಹಿಸುತ್ತ ಮನೆಯ ಕಡೆ ಓಡಿತು. ಎಷ್ಟು ಓಡಿದ್ರೂ ಮನೆ ಸಿಗುತ್ತಿಲ್ಲ. ಓಡಿ ಓಡಿ ಸುಸ್ತಾಗಿ ಅಲ್ಲೇ ಕುಳಿತು ದಣಿವಾರಿಸುತ್ತಾ ಕುಳಿತಾಗ ಹಸಿವೆನಿಸಿತು.
ಸ್ವಲ್ಪ ದೂರದಲ್ಲಿ ಕಸದ ರಾಶಿ ಗೆ ಬೀದಿ ನಾಯಿಗಳು ಮುತ್ತಿಗೆ ಹಾಕಿದ್ದು ಕಂಡು ಅಲ್ಲಿಗೆ ನಡೆದರೂ ಕೊಳೆತ ವಾಸನೆ ಮೂಗಿಗೆ ಬಡಿದು ಛೇ! ನನಗ್ಯಾಕೆ ಕೊಳೆತ ಆಹಾರ, ಮನೆಗೆ ಹೋದರೆ ಯಜಮಾನ ಪರಿಮಳ ಭರಿತ ರುಚಿ ರುಚಿಯಾದ ಆಹಾರ ಕೊಡುತ್ತಾರೆ ಎಂದು ಜೊಲ್ಲು ಸುರಿಸುತ್ತ ಯಜಮಾನನ ಮನೆಯ ಕಡೆ ಧಾವಿಸಿತು. ಕೊನೆಗೂ ಮನೆ ತಲುಪಿದಾಗ ಗೇಟು ಮುಚ್ಚಿತ್ತು. ಅದನ್ನು ತಳ್ಳಿ ತೆರೆಯಲು ನೋಡಿದರೆ ಆಗುತ್ತಿಲ್ಲ, ಛೇ! ಎಂದುಕೊಳ್ಳುತ್ತ ಕಾಂಪೌಂಡ್ ಗೋಡೆ ಹತ್ತಿ ಹೋಗಲು ಪ್ರಯತ್ನಿಸಿತು. ಆದರೆ ಕುಬ್ಜ ಕಾಲುಗಳಿಂದಾಗಿ ಹಿಡಿತ ಗಟ್ಟಿಯಾಗುತ್ತಿಲ್ಲ, ಧಡೂತಿ ದೇಹದ ಭಾರವನ್ನು ಎತ್ತಿ ಕೊಳ್ಳಲೂ ಆಗದೆ ಅದು ಜಾರಿ ಕೆಳಗೆ ಬಿತ್ತು. ಆದರೆ ಅದಕ್ಕೆ ಹೇಗಾದರೂ ಮಾಡಿ ಮನೆಯೊಳಕ್ಕೆ ಹೋಗಲೇ ಬೇಕಿತ್ತು. ಅದು ಮತ್ತೆ ಮತ್ತೆ ಕಾಂಪೌಂಡ್ ಏರಲು ಪ್ರಯತ್ನಿಸಿತು. ಹಲವು ಬಾರಿ ಪ್ರಯತ್ನಿಸಿದ ಬಳಿಕ ಕಾಂಪೌಂಡ್ ಗೋಡೆ ಹತ್ತಿ ಕೊನೆಗೂ ಒಳಗೆ ಹಾರಿತು. ಹುಲ್ಲು ಹಾಸಿನ ಮೇಲೆ ಬಿದ್ದಿದ್ದರಿಂದ ಅದಕ್ಕೇನೂ ಆಗಲಿಲ್ಲ. ಸಾವರಿಸಿಕೊಂಡು ಎದ್ದು ಮನೆಯ ಮುಖ್ಯ ದ್ವಾರದ ಕಡೆ ಧಾವಿಸಿತು. ಬಾಗಿಲನ್ನು ಮೃದುವಾಗಿ ಕೆರೆಯುತ್ತಾ ಕುಯ್ ಕುಯ್ ಎನ್ನುತ್ತ ಯಜಮಾನನಿಗೆ ತಾನು ಬಂದಿರುವ ವಿಷಯ ತಿಳಿಸಿತು. ಇನ್ನೇನು ಯಜಮಾನ ಅವರ ಮಕ್ಕಳು ಎಲ್ಲ ಬಂದು ಬೇಗನೆ ಬಾಗಿಲು ತೆರೆದು ತನ್ನನ್ನು ಮುದ್ದಾಡಬಹುದು ಎಂದು ನಿರೀಕ್ಷಿಸಿಸುತ್ತ ಕಾದು ಕುಳಿತುಕೊಂಡಿತು.
ಆದರೆ ತುಂಬಾ ಹೊತ್ತಾದರೂ ಯಾರೂ ಬರಲಿಲ್ಲ . ಹೋಗಲಿ ಕಾಲಿಂಗ್ ಬೆಲ್ ಒತ್ತೋಣ, ಯಜಮಾನ ತನ್ನನ್ನು ವಾಕಿಂಗ್ ಗೆ ಕರೆದು ಕೊಂಡು ಹೋಗಿ ವಾಪಾಸು ಬರುವಾಗ ಅಲ್ಲಿ ಬೆಲ್ ಒತ್ತಿದ ಮೇಲೆಯೇ ಬಾಗಿಲು ತೆರೆಯುತ್ತಾಳೆ ಗಂಗಾ. ಹಾಗಾದರೆ ತಾನೂ ಈಗ ಬೆಲ್ ಒತ್ತಬೇಕು ಎಂದುಕೊಳ್ಳುತ್ತ ಮೇಲಕ್ಕೆ ಹಾರಿ ಹಾರಿ ತನ್ನ ಕಾಲಿನಿಂದ ಬೆಲ್ ಒತ್ತಲು ಪ್ರಯತ್ನಿಸಿತು. ಆದರೆ ಅದಕ್ಕೆ ಬೆಲ್ ಇರುವ ಎತ್ತರಕ್ಕೆ ಹಾರಲು ಅದರ ಧಡೂತಿ ದೇಹ, ಕುಬ್ಜ ಕಾಲುಗಳು ಈಗಲೂ ಸಹಾಯ ಮಾಡಲಿಲ್ಲ. ಆದರೂ ಅದು ತನ್ನ ಪ್ರಯತ್ನ ಮುಂದುವರೆಸಿತು. ತಾನು ಈಗ ಬೆಲ್ ಒತ್ತಿದರೆ ಯಜಮಾನನಿಗೆ ಖುಷಿಯಾಗಿ ತನ್ನನ್ನು ಮುದ್ದಾಡಬಹುದು ಎಂದು ಆಸೆಯಿಂದ ಮತ್ತೆ ಮತ್ತೆ ಮೇಲಕ್ಕೆ ಹಾರಿತು. ಆದರೆ ಹಾರಿ ಹಾರಿ ದಣಿವಾಯಿತೇ ಹೊರತು ಬೆಲ್ ಇರುವ ಕಡೆಗೆ ಹಾರಲು ಆಗಲೇ ಇಲ್ಲ . ಇನ್ನು ಉಳಿದಿರುವ ದಾರಿ ಎಂದರೆ ಬೊಗಳುವುದು, ಆಗಲಾದರೂ ಯಜಮಾನ ಓಡೋಡಿ ಬರಬಹುದು ಎಷ್ಟೆಂದರೂ ತಾನು ಆತನ ಮುದ್ದಿನ ಪ್ರಿನ್ಸ್ ಎಂದುಕೊಳ್ಳುತ್ತ ಬೊಗಳಲು ಶುರು ಮಾಡಿತು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಅರೆ! ಯಾರೂ ಮನೆಯಲ್ಲಿ ಇಲ್ಲವೇ ಎಂದು ಯೋಚಿಸುತ್ತ ಕಿಟಕಿ ಬಳಿ ಧಾವಿಸಿತು. ಕಿಟಕಿ ಮುಚ್ಚಿತ್ತು. ಆದರೆ ಮಕ್ಕಳು ಪಿಸು ದನಿಯಲ್ಲಿ ಮಾತನಾಡುವುದು ಕೇಳಿಸಿ ಸಂತಸದಿಂದ ಜೋರಾಗಿ ಬೊಗಳಿತು. ಆದರೆ ಮಕ್ಕಳ ಪಿಸು ದನಿ ನಿಂತು ಹೋಯಿತೇ ಹೊರತು ಅವರ್ಯಾರೂ ಕಿಟಕಿ ಬಳಿಯೂ ಬರಲಿಲ್ಲ, ಬಾಗಿಲೂ ತೆರೆಯಲಿಲ್ಲ. ಪ್ರಿನ್ಸ್ ಗೆ ಬಹಳ ದುಃಖವಾಯಿತು. ಯಾಕೆ ಇವರೆಲ್ಲ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ? ನಾನು ಮಾಡಿದ ತಪ್ಪಾದರೂ ಏನು? ಎಂದು ಯೋಚಿಸಿತು. ಅಷ್ಟರಲ್ಲಿ ಮನೆಯ ಬಾಗಿಲು ತೆರೆಯಿತು. ಪ್ರಿನ್ಸ್ ಸಂತಸದಿಂದ ಬಾಗಿಲ ಕಡೆ ಧಾವಿಸಿತು. ಆದರೆ ಬಂದವಳು ಗಂಗಾ, ಮನೆಯ ಕೆಲಸದಾಕೆ. ಅವಳ ಕೈಯಲ್ಲೊಂದು ದೊಡ್ಡ ಕೋಲು. ಬಟ್ಟೆಯಿಂದ ಮುಖ ಮುಚ್ಚಿಕೊಂಡೆ ಕೋಲಿನಿಂದ ಹಚ ಹಚಾ ಎನ್ನುತ್ತ ಪ್ರಿನ್ಸ್ ನನ್ನು ಓಡಿಸಲು ಪ್ರಯತ್ನಿಸಿದಳು. ಪ್ರಿನ್ಸ್ ಕಕ್ಕಾಬಿಕ್ಕಿಯಾಗಿ ಯಾಕೆ ಇವಳು ಬೀದಿ ನಾಯಿಯನ್ನು ಓಡಿಸುವಂತೆ ಹಚಾ ಹಚಾ ಎನ್ನುತ್ತಿದ್ದಾಳೆ? ಕೈಯಲ್ಲಿ ಕೋಲು ಯಾಕಿದೆ? ಯಾಕೆ ಇವಳು ನನ್ನನ್ನು ಓಡಿಸಲು ನೋಡುತ್ತಿದ್ದಾಳೆ? ಎಂದು ಅದಕ್ಕೆಅವಮಾನವಾಯಿತು ಜೊತೆಗೆ ಸಿಟ್ಟು ಬಂದಿತು. ಗುರ್ ಗುರ್ ಎನ್ನುತ್ತ ಆಕೆಗೆ ತನ್ನ ಹಲ್ಲುಗಳನ್ನು ಪ್ರದರ್ಶಿಸಿ ಹೆದರಿಸಲು ನೋಡಿತು. ಏ, ಹೋಗೋ ನಾಯಿ, ನಿನ್ನಿಂದ ನಮಗೆಲ್ಲ ಕೋರೋನ ಬಂದು ನಾವು ಸತ್ರೆ.. ? ತೊಲಗು ಪೀಡೆ, ಎನ್ನುತ್ತ ಕೋಲಿನಿಂದ ಬಾರಿಸಲು ಬಂದಾಗ ಪ್ರಿನ್ಸ್ ಗೆ ಅವಮಾನ ದುಃಖ ಎಲ್ಲವೂ ಒಟ್ಟಿಗೆ ಬಂದು ಇವರಿಗೆ ನಾನು ಬೇಡವಾಗಿ ಬಿಟ್ಟೆನೇ ಎಂದು ತಲೆ ತಗ್ಗಿಸಿ ಕೊಂಡು ನಿಧಾನವಾಗಿ ಅಲ್ಲಿಂದ ಹೊರ ಬಂದಿತು.
ಸ್ವಲ್ಪ ದೂರ ನಡೆದಾಗ ಬೀದಿಯ ಬದಿಯಲ್ಲಿ ಪಕ್ಕದ ಮನೆಯ ನಾಯಿ ರಾಣಿ ಅಲ್ಲಿತ್ತು, ಬಹುಶಃ ಅದನ್ನೂ ಮನೆಯ ಯಜಮಾನ ಹೊರ ಹಾಕಿರಬೇಕು ಏನಾಗಿದೆ ಇವರಿಗೆಲ್ಲ? ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ರಾಣಿಯನ್ನು ಕೇಳಿತು. ಎಲ್ಲರೂ ಕೋರೋನ ಕೊರೋನ ಅಂತಿದ್ದಾರೆ, ಅದು ಏನು ಅಂತ ನನಗೂ ಗೊತ್ತಿಲ್ಲ ಅಂದಿತು. ಅಷ್ಟರಲ್ಲಿ ಇಬ್ಬರು ಹರಕಲು ಬಟ್ಟೆಯ ಪುಟ್ಟ ಹುಡುಗರು ಆ ದಾರಿಯಾಗಿ ಬಂದವರು ಮುದ್ದಾದ ನಾಯಿಗಳನ್ನು ಕಂಡು ಎತ್ತಿಕೊಂಡು ಮುದ್ದಾಡಿದರು. ಪ್ರೀತಿಗಾಗಿ ಹಲುಬುತ್ತಿದ್ದ ಪ್ರಿನ್ಸ್ ಮತ್ತು ರಾಣಿ ಆ ಹರಕಲು ಬಟ್ಟೆ ಹುಡುಗರ ಪ್ರೀತಿಗೆ ಕರಗಿ ಹೋದವು. ಇಬ್ಬರೂ ನಾಯಿಗಳನ್ನು ಎತ್ತಿಕೊಂಡು ತಮ್ಮ ಹರಕಲು ಜೋಪಡಿಯತ್ತ ಹೊರಟರು.
ಆ ಹುಡುಗರ ಮನೆಯವರು ನಾಯಿಗಳನ್ನು ಆಶ್ಚರ್ಯದಿಂದ ನೋಡಿ ನಂತರ, ಈ ಕೋರೋನದಿಂದ ನಮ್ಗೆ ಹೊಟ್ಟೆಗೆ ಸರಿಯಾಗಿಲ್ಲ, ಇನ್ನು ಇವಕ್ಕೆ ಎಲ್ಲಿಂದ ತಂದು ಹಾಕ್ತೀಯಾ, ಎಲ್ಲಿಂದ ತಂದ್ರೋ ಅಲ್ಲೇ ಬಿಟ್ಟು ಬನ್ನಿ ಎಂದು ಗದರಿದಾಗ ಪ್ರಿನ್ಸ್ ಮತ್ತು ರಾಣಿ ಮಂಕಾದವು. ಹುಡುಗರು ಮಾತ್ರ, ನಾವು ಏನು ತಿಂತಿವೋ ಅದನ್ನೇ ಅವಕ್ಕೆ ಸ್ವಲ್ಪ ಕೊಟ್ಟರಾಯಿತು. ಬೇಡಿ ಕೊಂಡು ತಂದಾ ದರೂ ಹಾಕ್ತೀವಿ ಬಿಟ್ಟು ಬಾ ಅಂತ ಮಾತ್ರ ಹೇಳಬೇಡ ಎನ್ನುತ್ತಿದ್ದಂತೆ ಅವರ ಅಪ್ಪ ಮನೆಗೆ ಬಂದವನು ದುಬಾರಿ ಜಾತಿಯ ನಾಯಿಗಳು ಮಕ್ಕಳ ಕೈಯಲ್ಲಿರುವುದನ್ನು ಕಂಡು ಲಾಟರಿ ಹೊಡೆದವರಂತೆ ಏ, ಎಲ್ಲಿ ಸಿಕ್ತೋ ಇವು, ಇವನ್ನ ಮಾರಿದ್ರೆ ಲಕ್ಷ ಲಕ್ಷ ಬರುತ್ತೆ ಕಣ್ರೋ ಎಂದಾಗ ಮಕ್ಕಳಿಗೆ ಬೇಸರವಾದರೂ ದುಡ್ಡು ಸಿಗುತ್ತಲ್ಲ ಎಂದು ಖುಷಿ ಪಟ್ಟರು. ಆವತ್ತಿನಿಂದ ಹುಡುಗರ ಅಪ್ಪ ಎಲ್ಲೆಲ್ಲಿಂದನೋ ಮಾಂಸದ ತುಣುಕುಗಳನ್ನು, ಮೀನು ಎಲ್ಲ ನಾಯಿಗಳಿಗಾಗಿ ತರತೊಡಗಿದ. ಹೊಸ ಆಹಾರ ಸ್ವಲ್ಪ ಹಳಸಲಾಗಿದ್ದರೂ ಎಲ್ಲರ ಪ್ರೀತಿ ದೊರಕುತ್ತಲ್ಲ ಎಂದು ಎರಡೂ ನಾಯಿಗಳೂ ಒಗ್ಗಿಕೊಂಡವು. ಅವು ಸ್ವಚ್ಛಂದ ವಾಗಿ ಓಡಾಡುತ್ತಿದ್ದವು. ಹಾಗೆ ಮಾಡಬೇಡ ಹೀಗೆ ಮಾಡಬೇಡ ಎನ್ನುವ ನಿರ್ಭಂದ ಗಳಿಲ್ಲದೆ ನಿರ್ಭಿಡೆಯಾಗಿ ಬದುಕುವ ಈ ಜೀವನ ಹಿಂದಿನ ರಾಜ ವೈಭವದ ಮನೆಯ ಬದುಕಿಗಿಂತ ಬಹಳ ಇಷ್ಟವಾಯಿತು. ಬಂದವರಿಗೆ ಕೈ ಕುಲುಕುವುದು, ಮನೆಯ ಯಜಮಾನ ಹೇಳಿದಂತೆ ಮಾಡಿದರೆ ಬಿಸ್ಕಿಟ್ ಸಿಗುತ್ತಿತ್ತು. ಇಲ್ಲಿ ಹಾಗಿಲ್ಲ ಹಾಗೆ ಮಾಡು ಹೀಗೆ ಮಾಡಬೇಡ ಎನ್ನುವವರೇ ಇಲ್ಲ. ಜೊತೆಗೆ ಸರಪಳಿ ಬಂಧನವೂ ಇಲ್ಲ. ಎರಡೂ ನಾಯಿಗಳು ಹೊಟ್ಟೆಗೆ ಸರಿಯಾಗಿಲ್ಲದೆ ಸ್ವಲ್ಪ ಸೊರಗಿದರೂ ಸಿಕ್ಕಿದ ಸ್ವಾತಂತ್ರ್ಯವನ್ನು ಅನುಭವಿಸುತ್ತ ಹಾಯಾಗಿದ್ದವು.
ಕೋರೋನ ಕಾಟ ಮುಗಿದ ಮೇಲೆ ಒಂದು ದಿನ ಪ್ರಿನ್ಸ್ ನ ಹಳೆಯ ಯಜಮಾನನ ಮಕ್ಕಳು ಕಾರಿನಲ್ಲಿ ಹೋಗುವಾಗ ಪ್ರಿನ್ಸ್ ಹರಕಲು ಬಟ್ಟೆಯ ಹುಡುಗನ ಜೊತೆ ನಡೆದುಕೊಂಡು ಹೋಗುವುದನ್ನು ಕಂಡು ಖುಷಿಯಿಂದ “ಅಪ್ಪ, ಪ್ರಿನ್ಸ್ ನೋಡಲ್ಲಿ” ಎನ್ನುತ್ತ “ಪ್ರಿನ್ಸ್, ಪ್ರಿನ್ಸ್” ಎಂದು ಕರೆಯತೊಡಗಿದರು. ಪ್ರಿನ್ಸ್ ಗೆ ಮಕ್ಕಳ ಧ್ವನಿ ಕೇಳಿ ಸಂತಸವಾಗಿ ಅವರತ್ತ ನೋಡುತ್ತಿದ್ದಂತೆ ಅದಕ್ಕೆ ಹಿಂದೆ ಅವರು ಅವಮಾನಿಸಿ ಮನೆಯಿಂದ ಹೊರ ಹಾಕಿದ್ದು ನೆನಪಾಗಿ ಹುಡುಗನ ಮರೆಯಲ್ಲಿ ನಿಂತಿತು. ಹುಡುಗ,”ಏ ಇಲ್ಲಿ ಯಾರೂ ಪ್ರಿನ್ಸ್ ಇಲ್ಲ, ಅದು ನನ್ನ ನಾಯಿ ರಾಜ, ಅಲ್ವೇನೋ” ಎನ್ನುತ್ತ ಅದನ್ನು ಎತ್ತಿ ಮುದ್ದಾಡಿದಾಗ ಅದು ಸಂತಸದಿಂದ ಅವನನ್ನು ನೆಕ್ಕಿತು. ಮಕ್ಕಳು ಮಾತ್ರ ಅದು ತಮ್ಮ ಪ್ರಿನ್ಸ್, ತಮಗೆ ಅದನ್ನು ವಾಪಾಸ್ ಕೊಡುವಂತೆ ಹಠ ಮಾಡಿದರು.
ಅದುವರೆಗೂ ಕಾರಿನಲ್ಲಿ ಸುಮ್ಮನೆ ಕುಳಿತಿದ್ದ ಯಜಮಾನ ಕಾರಿನಿಂದ ಇಳಿದು ಬಂದು, “ಏ, ಈ ನಾಯಿ ನಮ್ದು, ಸುಮ್ನೆ ಕೊಟ್ಬಿಡು, ಇಲ್ಲಾಂದ್ರೆ…” ಎನ್ನುತ್ತ ಹೊಡೆಯಲು ಬಂದಾಗ ಹುಡುಗ ಪ್ರಿನ್ಸ್ ನನ್ನು ಎತ್ತಿಕೊಂಡು ಓಡಿದ. ಮಕ್ಕಳು ಅಳತೊಡಗಿದರು. ಯಜಮಾನ ಪೊಲೀಸರಿಗೆ ಫೋನ್ ಮಾಡಿ, ನಮ್ಮ ನಾಯಿಯನ್ನು ಗುಡಿಸಲ ಹುಡುಗರು ಕದ್ದಿದ್ದಾರೆ ಎಂದು ದೂರು ಕೊಟ್ಟು ತಕ್ಷಣ ಬರಲು ತಿಳಿಸಿದರು. ಪೊಲೀಸರು ಬಂದು ಹುಡುಗನ ಜೋಪಡಿ ಹುಡುಕಿ ಪ್ರಿನ್ಸ್ ಮತ್ತು ಹುಡುಗನನ್ನು ಹೊರ ಕರೆ ತಂದರು.
ಪೊಲೀಸರು ಪ್ರಿನ್ಸ್ ನನ್ನು ಎತ್ತಿಕೊಂಡು ಯಜಮಾನ,ಮಕ್ಕಳ ಬಳಿ ತಂದು ಬಿಟ್ಟಾಗ ಅದು ವಾಪಾಸು ಓಡಿ ಬಂದು ಜೋಪಡಿ ಹುಡುಗನ ಕಾಲು ನೆಕ್ಕಿತು. ಅದನ್ನು ಕಂಡು ಪೊಲೀಸರು “ಇದು ನಿಮ್ಮ ನಾಯಿಯಲ್ಲ, ನಿಮ್ಮದಾಗಿದ್ದರೆ ನಿಮ್ಮನ್ನು ಬಿಟ್ಟು ಓಡುತ್ತಿರಲಿಲ್ಲ. ಇದು ಅದರಂತೆ ಇರುವ ನಾಯಿ, ಅವನಿಗೆ ದಾರಿಯಲ್ಲಿ ಸಿಕ್ಕಿದ್ದಂತೆ” ಎಂದಾಗ ಯಜಮಾನ, “ಇಲ್ಲ ಇದು ನಮ್ಮದೇ ನಾಯಿ” ಎನ್ನುತ್ತ “ಪ್ರಿನ್ಸ್… ಬಾ …ಪ್ರಿನ್ಸ್” ಎನ್ನುತ್ತ ಮುದ್ದಿನಿಂದ ಕರೆಯುತ್ತಾ ಹತ್ತಿರ ಬಂದಾಗ ಪ್ರಿನ್ಸ್ ಗುರ್ ಎಂದಿತು. ತನ್ನೆಲ್ಲ ಹಲ್ಲುಗಳನ್ನು ತೋರಿಸುತ್ತ ಹೆದರಿಸಲು ನೋಡಿದಾಗ ಅವರೆಲ್ಲ ಬೇರೆ ದಾರಿ ಕಾಣದೆ ಹೊರಟು ಹೋದರು. ಜೋಪಡಿ ಹುಡುಗ “ನನ್ನ ಮುದ್ದು ರಾಜ” ಎನ್ನುತ್ತ ಅದನ್ನೆತ್ತಿಕೊಂಡು ಮುದ್ದಿಸಿದಾಗ ಅದು ಸಂತಸದಿಂದ ಅವನ ಮುಖವನ್ನು ನೆಕ್ಕಿತು.