ರಾತ್ರಿಯ ಸಮಯ. ಚೂರು ಪಾರು ಮೋಡಗಳೆಲ್ಲ ಅಲ್ಲಲ್ಲಿ ಒಂಟಿಯಾಗಿ ವಿಹರಿಸುತ್ತಿದ್ದ ಸಮಯದಲ್ಲಿ ವಾಯುದೇವ ಮೆರವಣಿಗೆಯ ಸಮಯವಾಯಿತು ಎಂದು ಎಲ್ಲರನ್ನೂ ಒಗ್ಗೂಡಿಸುತ್ತ ಮುಂದೆ ಹೋದ. ಮೋಡಗಳೆಲ್ಲ ಜೊತೆಯಾಗಿ ಸೇರಿ ಬೃಹತ್ ಕಾರ್ಮೋಡಗಳಾಗಿ ಮಾರ್ಪಾಡು ಹೊಂದಲು ಹವಣಿಸತೊಡಗಿದವು. ಮಧ್ಯರಾತ್ರಿ ಕಳೆದು ತಾಸಾಗುತ್ತಿದ್ದಂತೆ ಮೋಡಗಳೆಲ್ಲ ಆಗಲೇ ಗುಂಪಾಗಿ ಸೇರಿ ಮೆರವಣಿಗೆಗೆ ಸಜ್ಜಾಗಿ ನಿಂತಿದ್ದವು. ವರುಣ ರಾಜನ ಆಗಮನಕ್ಕೆ ವಾಯುದೇವ ಬಹು ಪರಾಕ್ ಹೇಳಿದೊಡನೆಯೇ ಶುರುವಾಯಿತು ಮೇಘರಾಜನ ಘರ್ಜನೆ, ಕಣ್ಣು ಕೋರೈಸುವ ಬೆಳಕಿನ ಚಾಟಿಯನ್ನು ಆಗಾಗ ಬೀಸುತ್ತ, ಘರ್ಜಿಸುತ್ತ ಮೇಘಗಳ ಮೆರವಣಿಗೆ ಮುನ್ನಡೆಯಿತು. ಅವುಗಳ ಘರ್ಜನೆಗೆ ಗಾಢ ನಿದ್ದೆಯಲ್ಲಿದ್ದ ಕಂದಮ್ಮಗಳು ಬೆಚ್ಚಿ ಎದ್ದು ಅಳತೊಡಗಿದಂತೆ ತಾಯಂದಿರು ಕಂದಮ್ಮಗಳನ್ನು ಎದೆಗವಚಿಕೊಂಡಾಗ ಸುರಕ್ಷತೆಯ ಅರಿವಾಗಿ ಬೆಚ್ಚನೆಯ ಆಲಿಂಗನದಲ್ಲಿ ಮತ್ತೆ ನಿದ್ರಾವಶರಾದರು.
ದೂರದ ಗುಡ್ಡದಲ್ಲಿ ನಲಿದಾಡುತ್ತಿದ್ದ ನವಿಲುಗಳು ಮೋಡಗಳ ಘರ್ಜನೆಗೆ ಬೆದರಿ ಕೂಗತೊಡಗಿದವು. ಮನೆಯ ಗಂಡಸರು ಎದ್ದು ಬೆಳಕಿನ ಚಾಟಿ ತಮ್ಮ ಮನೆಗೆ ಬಡಿದರೆ ಎಂದು ಆತಂಕದಲ್ಲಿ ವಿದ್ಯುತ್ ನ್ನು ನಿಷ್ಕ್ರಿಯಗೊಳಿಸಿದರು. ಪೃಥ್ವಿ ಗೆ ತನ್ನ ಆಗಮನ ತಿಳಿಸಲು ಆಗಾಗ ಬೆಳಕಿನ ಚಾಟಿಯಿಂದ ಚುರುಕು ಮುಟ್ಟಿಸುತ್ತ ಮೇಘಗಳು ಚುರುಕುಗೊಂಡಂತೆ ಅವುಗಳ ಆರ್ಭಟ ಇನ್ನಷ್ಟು ಜೋರಾಗತೊಡಗಿತು. ಬೆಳಕಿನ ಚಾಟಿ ಕೆಲ ಬಡಪಾಯಿಗಳ ಮನೆ ಮೇಲರಗಿದರೆ ಇನ್ನು ಕೆಲವು ಎತ್ತರದ ಮರಗಳನ್ನು ಸುಟ್ಟವು. ವರುಣನ ಜೊತೆ ವಾಯುದೇವನ ವಿಹಾರದಿಂದ ಬಡ ಜನರ ಮನೆಗಳು ನಲುಗಿದವು. ತೋಟಗಳಲ್ಲಿನ ಮರಗಿಡಗಳು ಧರೆಗೆ ಶರಣಾದವು. ಜನರನ್ನು ಬೆಚ್ಚಿ ಬೀಳಿಸುತ್ತ ಅವರ ಸುಖದ ನಿದ್ದೆಗೆ ಭಂಗ ತರುತ್ತ ಸಾಕಷ್ಟು ಚುರುಕು ಮುಟ್ಟಿಸಿದ ಮೇಲೆ ತಾನು ಬರುತ್ತಿದ್ದೇನೆಂದು ಎಲ್ಲರಿಗೂ ಅರಿವಾಗಿರಬೇಕು ತನ್ನ ಸ್ವಾಗತದ ತಯಾರಿ ಭರ್ಜರಿಯಾಗಿದೆ ಎಂದುಕೊಂಡು ಭಾವುಕಗೊಂಡ ಮೋಡಗಳು ಕರಗಿ ನೀರಾದವು.
ತಟಪಟನೆ ಸದ್ದು ಮಾಡುತ್ತಾ ಬಂದ ವರುಣ ಗೆಳೆಯ ವಾಯುದೇವನಿಂದಾಗಿ ಮತ್ತಷ್ಟು ಹುರುಪಿನಿಂದ ಪೃಥ್ವಿಗೆ ನೀರ ಅಭಿಷೇಕ ಮಾಡತೊಡಗಿದ. ಕಾಡು ಪ್ರಾಣಿಗಳು, ಪಕ್ಷಿಗಳು ಸುರಕ್ಷಿತ ತಾಣವನ್ನು ಹುಡುಕಿ ಓಡಾಡಿದವು. ಇಷ್ಟು ದಿನಗಳ ಕಾಲ ಮಳೆಯಿಲ್ಲದೆ ಧೂಳಿನಿಂದ ತುಂಬಿಕೊಂಡು ಕಳೆಗುಂದಿದ ಮರಗಿಡಗಳು ವರುಣನ ಕೃಪೆಯಿಂದ ಧೂಳನ್ನು ಕೊಡವಿಕೊಂಡು ಮತ್ತೆ ಹಸಿರಿನಿಂದ ನಳ ನಳಿಸಳಿಸತೊಡಗಿದವು. ಮಳೆಯ ಸಿಂಚನ ಅವುಗಳ ಪಾಲಿಗೆ ಅಮೃತದಂತಾಗಿ ಗಟಗಟನೆ ನೀರು ಕುಡಿದು ತಮ್ಮ ದಾಹವನ್ನು ತೀರಿಸಿಕೊಂಡು ಸಂತಸದಿಂದ ತಲೆದೂಗತೊಡಗಿದವು. ಕಾದ ಹೆಂಚಿನಂತಾಗಿದ್ದ ಭೂಮಿ ಮಳೆಯ ಸಿಂಚನದಿಂದ ತನ್ನ ಮೈಯನ್ನು ತಂಪಾಗಿಸುತ್ತ ಮಣ್ಣಿನ ಕಂಪನ್ನು ಬೀರತೊಡಗಿತು. ಧೂಳಿನಿಂದ ಬಣ್ಣಗೆಟ್ಟು ಮುದುರಿ ಮಲಗಿದ್ದ ಟಾರು ರಸ್ತೆಗಳು ಮಳೆಯ ನೀರಿನಿಂದಾಗಿ ಧೂಳೆಲ್ಲ ತೊಳೆದು ಹೋಗಿ ಕಪ್ಪನೆ ಮಿರಮಿರ ಮಿಂಚುತ್ತ ಕರಿನಾಗರ ಹರಿದಂತೆ ಕಾಣತೊಡಗಿತು. ಸೆಖೆಯಿಂದ ನರಳಿ ಬೆವರಿಳಿಸಿ ಸುಸ್ತಾದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನೀರಿಲ್ಲದೆ ಒದ್ದಾಡುತ್ತಿದ್ದ ಜನ ಇನ್ನು ನೀರಿಗೆ ತೊಂದರೆಯಿಲ್ಲ ಎಂದು ನಿರಾಳವಾದರು.
ಬೆಳಗಾದರೂ ಮೋಡಗಳ ಘರ್ಜನೆ ನಿಲ್ಲಲಿಲ್ಲ. ವರುಣ ತನ್ನ ಕೆಲಸ ಮುಂದುವರೆಸಿಕೊಂಡೇ ಇದ್ದ. ಹಗಲೂ ರಾತ್ರಿ ಜನರ ಬೆವರಿಳಿಸಿದ ರವಿ ಸದ್ದಿಲ್ಲದೇ ಮೋಡಗಳ ಹಿಂದೆ ಅವಿತು ಕುಳಿತಿದ್ದ. ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದ ಮಕ್ಕಳು ಮಳೆಯಲ್ಲೇ ಶಾಲೆಗೆ ಹೋಗುವುದು ಎಂದುಕೊಳ್ಳುತ್ತಾ ರೋಮಾಂಚನಗೊಂಡು ಶಾಲೆಗೆ ಹೋಗಲು ಉತ್ಸಾಹದಿಂದ ಸಜ್ಜಾಗತೊಡಗಿದರು. ಹರಿಯುವ ನೀರಲ್ಲಿ ದೋಣಿ ಮಾಡಿ ಬಿಡಲು ಅಮ್ಮನಿಗೆ ಗೊತ್ತಾಗದಂತೆ ತಮ್ಮ ಪುಸ್ತಕಗಳ ಪುಟಗಳನ್ನು ಹರಿದು ದೋಣಿ ತಯಾರಿಸತೊಡಗಿದರು. ನೀರಲ್ಲಿ ಕಾಲು ಬಡಿಯುತ್ತ, ಬೇರೆಯವರ ಮೇಲೆ ನೀರು ಚಿಮ್ಮಿಸುತ್ತಾ ಹೋಗುವುದೆಷ್ಟು ಮಜಾ ಎಂದುಕೊಂಡು ಸಂತಸ ಪಟ್ಟರು. ದೇವಸ್ಥಾನಗಳಲ್ಲಿ ಮರುಣನ ಕೃಪೆಗಾಗಿ ಮಾಡಿಸಿದ ಪೂಜೆ ಫಲ ಕೊಟ್ಟಿತು ಎಂದು ಅರ್ಚಕರು ಬೀಗತೊಡಗಿದರು. ಕೆಲಸಕ್ಕೆ ಹೋಗುವ ಮಹಿಳೆಯರು ಮತ್ತು ಗಂಡಸರು ಇನ್ನು ಒದ್ದೆ ಬಟ್ಟೆಯಲ್ಲೇ ಕೆಲಸಕ್ಕೆ ಹೋಗಬೇಕು, ಶಿಸ್ತಾಗಿ ಸಿಂಗರಿಸಿಕೊಂಡು ಹೋದರೂ ವರುಣ ಅದನ್ನೆಲ್ಲ ಕೆಡಿಸಿ ಬಿಡುತ್ತಾನೆ ಎಂದು ಕೋಪಿಸಿಕೊಂಡರು. ಗೃಹಿಣಿಯರು ಇನ್ನು ಬಿಸಿಲಿಗೆ ಏನೂ ಒಣ ಹಾಕುವಂತಿಲ್ಲ, ಬಟ್ಟೆಗಳೂ ಬೇಗನೆ ಒಣಗುವುದಿಲ್ಲ ಎಂದು ಬೇಸರಿಸಿಕೊಂಡರೂ ವರುಣನ ಆಗಮನ ಅವರಲ್ಲಿ ಸಂತಸ ತಂದಿತ್ತು. ಮನೆಯಲ್ಲಿ ಎಣ್ಣೆಯಲ್ಲಿ ಕರಿಯುವ ತಿಂಡಿಗಳಿಗೆ ಇನ್ನು ಬೇಡಿಕೆ ಜಾಸ್ತಿ ಎಂದುಕೊಂಡು ಮಂದಸ್ಮಿತರಾದರು.
ಕೆಲಸಕ್ಕೆ ಹೋಗುವ ಸಮಯವಾದಂತೆ ರಸ್ತೆಯ ತುಂಬಾ ಅಣಬೆಗಳಂತೆ ಬಣ್ಣ ಬಣ್ಣದ ಕೊಡೆಗಳು ಅರಳತೊಡಗಿದವು. ಇದುವರೆಗೂ ಅನಾಥವಾಗಿ ಮನೆಯ ಮೂಲೆಯಲ್ಲಿ ಬಿದ್ದುಕೊಂಡಿದ್ದ ಕೊಡೆಗಳು ಮೈ ಮೇಲಿನ ಧೂಳು ಕೊಡವಿಕೊಂಡು ಮರು ಜೀವ ತಾಳಿದವು. ಹೊಸ ಕೊಡೆಯನ್ನು ಕೊಂಡವರು ಸಂಭ್ರಮದಿಂದ ತಮ್ಮ ಕೊಡೆಯನ್ನು ಅರಳಿಸಿ ಹೆಮ್ಮೆಯಿಂದ ಬೀಗುತ್ತ ಮುನ್ನಡೆಯತೊಡಗಿದರು. ಇದನ್ನು ಮಹಡಿಯ ಮೇಲೆ ನಿಂತು ನೋಡುತ್ತಿದ್ದ ವೃದ್ಧನೊಬ್ಬ ಮುಂಗಾರಿನ ಆಗಮನವಾಯಿತು ಎಂದುಕೊಂಡು ಇನ್ನು ಸೆಖೆಯಿಂದ ಒದ್ದಾಡಬೇಕಿಲ್ಲ ಎಂದು ಮುಗುಳ್ನಕ್ಕ. ಐಸ್ ಕ್ರೀಂ ಮಾರುವವ ಇನ್ನು ತನಗೆ ವ್ಯಾಪಾರವಿಲ್ಲ ಎಂದು ಕೊರಗತೊಡಗಿದ. ಕೊಡೆ ಮಾರುವವರು ಸಂಭ್ರಮದಿಂದ ತರಹೇವಾರಿ ಕೊಡೆಗಳನ್ನು ಅಂಗಡಿಗಳ ಮುಂದೆ ನೇತು ಹಾಕಿ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿ ಗ್ರಾಹಕರನ್ನು ಸೆಳೆಯತೊಡಗಿದರು. ರಸ್ತೆ ಬದಿ ಕುಳಿತು ಮಾರುತ್ತಿದ್ದವರು ಇನ್ನು ತಮಗೆ ಇಲ್ಲಿ ಕುಳಿತು ವ್ಯಾಪಾರ ಮಾಡಲಾಗುವುದಿಲ್ಲವಲ್ಲ ಎಂದು ಬೇಜಾನ್ ಬೇಸರ ಪಟ್ಟುಕೊಂಡರು. ಮಳೆಯಲ್ಲಿ ಮಕ್ಕಳ ಆಟ, ದೊಡ್ಡವರ ಸಿಡಿಮಿಡಿ ನೋಡುತ್ತಾ ಯಾರು, ಹೇಗೂ ತನ್ನನ್ನು ಸ್ವಾಗತಿಸಿದರೂ ಇನ್ನು ಮೂರು ನಾಲ್ಕು ತಿಂಗಳುಕಾಲ ತನ್ನದೇ ರಾಜ್ಯಭಾರ ಎಂದುಕೊಂಡು ವರುಣ ರಾಜ ಗಾಂಭೀರ್ಯ ತೋರಿದ. ನಾಡಿಗೆ ಮುಂಗಾರಿನ ಪ್ರವೇಶವಾಗಿತ್ತು.