ಜಿರಳೆಯ ಕಣ್ಣಲ್ಲಿ ಮನುಷ್ಯರು

ಟಪ ಟಪ ಸದ್ದು ನಿಂತ ಮೇಲೆ ಜಿರಳೆಮ್ಮ ಓಡಿ ಬಂದು ಒಂದೇ ಸಮನೆ ರೋಧಿಸತೊಡಗಿದಳು. “ಅಯ್ಯಯ್ಯೋ,ನಮ್ ಮಕ್ಕಳೆಲ್ಲ ಸತ್ತು ಹೋಗಿ ಬಿಟ್ರಲ್ಲ ಪ್ಪೋ…”ಎನ್ನುತ್ತ ಬಾಯಿ ಬಾಯಿ ಬಡಿದುಕೊಂಡಳು. “ಏನಾಯ್ತು ಕೋರೋನ ನಾ.. “ಪಕ್ಕದ ಮನೆಯ ಕುಕ್ರೆಚ್ ಮಾಸ್ಕ್ ಸಿಕ್ಕಿಸುತ್ತ ಕೇಳಿದ.
“ಅಯ್ಯೋ, ಅಲ್ಲ, ಈ ಮನೆಯ ಮಂಕಾಳಮ್ಮ ನಮ್ಮ ಮಕ್ಕಳನ್ನೆಲ್ಲ ಚಪ್ಪಲಿಯಿಂದ ಟಪ ಟಪ ಹೊಡೆದು ಹೊಸಕಿ ಹಾಕಿಬಿಟ್ಲು. ಇನ್ನು ನಾನು ಹೇಗೆ ಬದುಕಲಿ? ನೂರೆಂಟು ಮಕ್ಕಳ ತಾಯಿಯಾಗಿ ಜಿನ್ನೆಸ್ ರೆಕಾರ್ಡ್ ಮಾಡಬೇಕು ಅಂತ ಕನಸು ಕಂಡಿದ್ದೆ, ಈಯಮ್ಮನಿಂದ ಎಲ್ಲ ಸರ್ವನಾಶ ಆಗೋಯ್ತು.. ಅವಳಿಗೆ ನಮ್ಮನ್ನೆಲ್ಲ ಕಂಡ್ರೆ ಆಗಲ್ಲ, ಉರಿದುರಿದು ಬೀಳ್ತಾಳೆ. ನಾವೇನು ಮಾಡ್ತೀವಂತ ಅಷ್ಟೊಂದು ದ್ವೇಷ ನಮ್ಮೇಲೆ?, ಏನೋ ಕಸದ ಬುಟ್ಟಿಯಲ್ಲಿದ್ದದ್ದು ತಿಂತೀವಿ, ಮಕ್ಕಳು ಮಾತ್ರ ಸ್ವಲ್ಪ ಚಪ್ಪಲಿ ಅದೂ ಇದೂ ಅಂತ ಮೆಲುಕಾಡೋಕೆ ತಿಂತಾರೆ, ಅಷ್ಟಕ್ಕೇ ಅವರನ್ನೆಲ್ಲ ಕೊಂದೇ ಬಿಡುದಾ? ಮನುಷ್ಯತ್ವನೇ ಇಲ್ಲ ಆಕೆಗೆ, ಇಷ್ಟಕ್ಕೂ ನಾವೇನು ಹಗಲು ಹೊತ್ತಲ್ಲಿ ಓಡಾಡಲ್ಲ. ಅವರ ಕಾಲ ಕೆಳಗೆ ಬಿದ್ದು ತುಳಿಸಿ ಕೊಳ್ಳೋದು ಬೇಡ ಅಂತ. ಆದ್ರೂ ರಾತ್ರಿ ಹೊತ್ತಲ್ಲಿ ಆಚಾನಾಕ್ಕಾಗಿ ಬಂದು ಸಿಕ್ಕವರನ್ನೆಲ್ಲ ಕೊಂದು ಬಿಡ್ತಾಳೆ. ಆ ಹಲ್ಲಿಯಪ್ಪ ಬಹಳ ಒಳ್ಳೆಯವ, ನಮ್ಮನ್ನೆಲ್ಲ ತಿನ್ನೋಕೆ ಬರೋದೇ ಇಲ್ಲ, ಆಯಮ್ಮ ತಿಂಡಿ ಪ್ಲೇಟು ಇಟ್ಟು ಆಚೆ ಹೋದ್ರೆ ಸಾಕು ತಿಂಡಿ ನೆಕ್ತಾ ಕೂತಿರ್ತಾನೆ…” ಮೀಸೆ ತಿಕ್ಕುತ್ತ ನುಡಿದಳು ಜಿರಳೆಮ್ಮ.
“ನೀನು ಮರ್ತಿದ್ದೀಯಾ? ಮಂಕಾಳಮ್ಮನ ಹೊಸ ಪ್ಯೂರ್ ಸಿಲ್ಕ್ ಸೀರೆ ಸಖತ್ತಾಗಿದೆ ಅಂತ ನೀನೇ ತಾನೇ ತಿಂದಿದ್ದು, ಅವಳಿಗೆ ಕೋಪ ಬರಲ್ವಾ? ಅದೂ ಅಲ್ಲದೆ ಆಯಮ್ಮ ಯಾವಾಗಲೂ ಶುಚಿ ಮಾಡ್ತಾನೆ ಇರ್ತಾಳೆ, ನಮ್ಮ ಹಿಕ್ಕೆ ವಾಸನೆ ಹೇಗೆ ಸಹಿಸ್ಕೋತಾಳೆ. ಸಿಕ್ಕಿದ್ದಕ್ಕೆಲ್ಲ ಬಾಯಿ ಹಾಕಿದ್ರೆ ಸಿಟ್ಟು ಬಾರದೆ ಇರುತ್ತಾ? ಆದ್ರೆ ನಮ್ಮ ಮನೆಯವರೇ ವಾಸಿಪ್ಪ. ಹಿಂದಿ ಮಾತಾಡೋ ಜನ, ಬಟ್ಟೆ ಒಗ್ಯೋದೆ ಇಲ್ಲ, ಅವರ ಶೂ, ಸಾಕ್ಸ್ ಹತ್ರ ಹೋದ್ರೆ ನಮಗೇ ವಾಕರಿಕೆ ಬರುತ್ತೆ ಅಷ್ಟೊಂದು ಕೆಟ್ಟ ವಾಸನೆ. ಆದ್ರೆ ಅಡಿಗೆ ಮನೇಲಿ ತಿಂಡಿ ಡಬ್ಬ, ತಿಂದು ಬಿಟ್ಟ ಪ್ಲೇಟು ಎಲ್ಲ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನಮಗಂತೂ ದಿನಾ ಭೂರಿ ಭೋಜನ! ಸ್ನಾನ ಮಾಡೋದೂ ಕೂಡ ಇಲ್ಲ, ಮನೆ ಎಲ್ಲ ಬೆವರಿನ ವಾಸನೆಯಿಂದ ಘಮ ಘಮ ಅಂತಿರುತ್ತೆ! ಒಂದ್ ದಿನ ಕೂಡ ನಮ್ಮ ತಂಟೆಗೆ ಬಂದವರಲ್ಲ, ಕಂಠಮಟ್ಟ ಕುಡಿದು ಮಲಗಿದ್ರೆ ನಾವೆಲ್ಲ ಅವರ ಮೇಲೆ ಹರಿದಾಡಿದ್ರೂ ಗೊತ್ತಾಗಲ್ಲ ಅವ್ರಿಗೆ, ಎಷ್ಟೋ ಸಲ ಟ್ರೆಕ್ಕಿಂಗ್ ಅಂತ ಅವರ ಬಾಯೊಳಗೆ ಹೊಕ್ಕು ವಾಪಾಸ್ ಬಂದಿದೀವಿ, ನೀನೂ ನಮ್ಮನೆಗೆ ಬಂದ್ ಬಿಡು, ಅದ್ಯಾಕೆ ಹಠ ಮಾಡ್ಕೊಂಡು ಈಯಮ್ಮನ ಮನೇಲಿ ಕೂತಿದ್ದೀಯಾ? ಇಲ್ಲೇ ಇದ್ರೆ ನೀನೇ ಉಳಿಯಲ್ಲ ಒಂದಿನ, ನೋಡ್ತಾ ಇರು. ನಮ್ಮನೆ ಬೇಡಾ ಅಂದ್ರೆ ಆ ಎದುರುಗಡೆ ಮನೆಗೆ ಹೋಗು” ಸಲಹೆ ನೀಡಿದ ಕುಕ್ರೆಚ್.
“ಆ ಮನೆನಾ? ಅಲ್ಲಿ ಏನಿದೆ ಅಂತ ಹೋಗೋದು, ಅಲ್ಲಿರೋರು ಸ್ಟೂಡೆಂಟ್ಸ್. ಅಡಿಗೆ ಮಾಡೋದಿಲ್ಲ, ಬೇಕರಿ ತಿಂಡಿ ಕೂಡ ತಂದು ತಿನ್ನಲ್ಲ, ಎಲ್ಲ ಹೊರಗಡೇನೆ ಮುಗಿಸಿ ಬರ್ತಾರೆ. ಡ್ರಗ್ಸ್ ತೊಗೊಂಡು ರಾತ್ರಿ ಎಲ್ಲ ಕುಣಿದು ಕುಪ್ಪಳಿಸುತ್ತಾ ಇರ್ತಾರೆ, ನಮಗಂತೂ ಅಲ್ಲಿದ್ರೆ ಬರಗಾಲನೇ” ಜಿರಲೆಮ್ಮ ನಿಟ್ಟುಸಿರು ಬಿಟ್ಟಳು.
“ಹಾಗಿದ್ರೆ ಆ ಮೂರನೇ ಮನೆಗೆ ಹೋಗು..” “ಅಯ್ಯಯ್ಯೋ ಆ ಮನೆ ಮಾತ್ರ ಬೇಡಾಪಾ ..”
” ಯಾಕೆ.. ?’
ಆ ಮನೇಲಿ ಇರೋದು ಚೀನಾದವರು, ನಮ್ಮನ್ನೆಲ್ಲ ಬಿಸಿ ಬಿಸಿ ಎಣ್ಣೆಯಲ್ಲಿ ಕರಿದು ಕರುಂ ಕುರುಂ ಅಂತ ತಿಂತಾರೆ, ನಮ್ಮ ಮೊಟ್ಟೆಗಳನ್ನು ಸೂಪ್ ಮಾಡಿ ಕುಡಿತಾರೆ, ದೇವರ ದಯೆಯಿಂದ ನಮ್ಮ ಮೊಟ್ಟೆಗಳು ಬಹಳ ಚಿಕ್ಕವು ಇಲ್ಲದಿದ್ರೆ ಆಮ್ಲೆಟ್ ಕೂಡ ಮಾಡಿ ತಿಂತಿದ್ರೇನೋ! ಆಗಾಗ ಅವರು ನಮ್ಮನೆಗೆ ಬರ್ತಾರೆ. ಈ ಮಂಕಾಳಮ್ಮಾ ಒಂದು ಕವರಲ್ಲಿ ನಮ್ಮವರನ್ನೆಲ್ಲ ತುಂಬಿಸಿ ಅವ್ರಿಗೆ ಕೊಡ್ತಾಳೆ!
ಮೊದ್ಲು ನಮ್ಮವರ ಮೇಲೆಲ್ಲ ಸ್ಪ್ರೇ ಮಾಡಿ ಸಾಯಿಸ್ತಿದ್ಲು. ಒಮ್ಮೆ ನೆಲದ ಮೇಲೆ ಬಿದ್ದ ಸ್ಪ್ರೇ ಮೇಲೆ ಕಾಲು ಜಾರಿ ಬಿದ್ದು ಕೈ ಮುರ್ಕೊಂಡ್ಲು, ನಂಗಂತೂ ಅದನ್ನು ನೋಡೋವಾಗ ಬಹಳ ಖುಷಿಯಾಗಿತ್ತು, ಆಮೇಲೆ ಸ್ವಲ್ಪ ದಿನ ನಮ್ಮ ತಂಟೆಗೆ ಬಂದಿಲ್ಲ ಹ ಹಾ…ಅದರ ನಂತರ ಚಪ್ಪಲಿಯಿಂದ ಹೊಡೆಯೋಕೆ ಶುರು ಮಾಡಿದ್ಲು”
“ಹೂಂ.. ಈ ಮನುಷ್ಯರಿಂದ ನಮ್ಗೆ ಉಳಿಗಾಲನೇ ಇಲ್ಲ, ಎಲ್ಲ ಮನುಷ್ಯರು ಕೊರೋನದಿಂದ ಸತ್ ಹೋದ್ರೆ ಎಷ್ಟು ಚೆನ್ನಾಗಿತ್ತು”
“ನಿನ್ನ ತಲೆ, ಅವರಿಲ್ಲಾಂದ್ರೆ ನಾವೂ ಇರಲ್ಲ, ಅವರಿಂದಾಗಿ ನಮ್ಗೆ ಹೊಟ್ಟೆ ತುಂಬಾ ಸಿಗೋದು ಇಲ್ಲಾಂದ್ರೆ ನಮ್ಗೆ ತಿಂಡಿ ಎಲ್ಲ ಎಲ್ಲಿಂದ ಸಿಗಬೇಕು?”
“ಓಹ್! ಹೌದಲ್ವಾ!? ನೀನು ಭಾರಿ ಜಾಣೆ…” ಟಪ್ ಟಪ್.. “ಕೊನೆಗೂ ಇಬ್ರೂ ಸಿಕ್ಕಿಬಿಟ್ರಲ್ವಾ ..” ಮಂಕಾಳಮ್ಮನ ಧ್ವನಿ!