ಮಾಸದ ಪ್ರೀತಿ

ಪಕ್ಕದ ಮನೆಯ ಎದುರು ಒಂದು ಕಾರು ಬಂದು ನಿಂತಾಗ ಹನುಮಂತಯ್ಯ ಕುತೂಹಲದಿಂದ ತನ್ನ ಕನ್ನಡಕವನ್ನು ಸರಿ ಮಾಡಿಕೊಳ್ಳುತ್ತ ಕಣ್ಣುಗಳನ್ನು ಕಿರಿದು ಗೊಳಿಸಿ ಕಾರಿನಿಂದ ಯಾರು ಇಳಿಯುತ್ತಿದ್ದಾರೆ ಎಂದು ನೋಡಿದರು. ಎದುರಿನ ಸೀಟಿನಿಂದ ಯುವಕನೊಬ್ಬ ಇಳಿದು ಕಾರಿನ ಹಿಂದಿನ ಬಾಗಿಲು ತೆರೆದು ನಿಂತ. ಒಬ್ಬ ವಯಸ್ಸಾದ ಮಹಿಳೆಯೊಬ್ಬಳು ಇಳಿಯುತ್ತಿರುವುದನ್ನು ಕಂಡು ಮತ್ತಷ್ಟು ಕುತೂಹಲದಿಂದ ತಮ್ಮ ಮನೆಯ ವರಾಂಡದ ತುದಿಯಲ್ಲಿ ನಿಂತು ನೋಡ ತೊಡಗಿದರು.

ಆ ಮಹಿಳೆ ಇಳಿಯುವಾಗ ಯುವಕ ಅವರ ಸಹಾಯಕ್ಕಾಗಿ ನೀಡಿದ ಕೈಯನ್ನು ಆಕೆ ತಿರಸ್ಕರಿಸುತ್ತ ಅತ್ತ ತಳ್ಳಿ ನಿಧಾವಾಗಿ ಇಳಿದು ತಲೆ ತಗ್ಗಿಸಿ ನಡೆಯುತ್ತಾ ಮನೆಯೊಳಕ್ಕೆ ಹೋದರು. ಅವರ ತಲೆಯ ತುಂಬಾ ಬಿಳಿ ಕೂದಲು ನೋಡಿ ಹನುಮಂತಯ್ಯ ನವರಿಗೆ ತಕ್ಷಣಕ್ಕೆ ಯಾರೆಂದು ತಿಳಿಯದಿದ್ದರೂ ಅದು ಶಾಂತಿ ಇರಬಹುದೇ ಎಂದು ಯೋಚಿಸುತ್ತ ನಿಂತರು. ಅವರ ಮನಸ್ಸು ಹಿಂದಕ್ಕೋಡಿತು. ನೆನಪುಗಳು ಮತ್ತೆ ಹಸಿರಾಗತೊಡಗಿತು.

ಪಕ್ಕದ ಮನೆಯ ಶಾಂತಿ ಹಾಗೂ ಹನುಮಂತಯ್ಯ ಜೊತೆಯಲ್ಲೇ ಆಡಿ ಬೆಳೆದವರು. ಅವಳ ಅಣ್ಣ ಶಾಂತರಾಮ ಹನುಮಂತಯ್ಯನವರ ಸ್ನೇಹಿತ ಹಾಗೂ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಶಾಂತಿ ಅವರಿಗಿಂತ ನಾಲ್ಕು ವರುಷ ಚಿಕ್ಕವಳಾದರೂ ಅವರಿಬ್ಬರಿಗಿಂತ ತಾನೇ ಹಿರಿಯವಳು ಅನ್ನುವ ತರಹ ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು. ಆಗ ಅವಳ ಮನೆಯವರೆಲ್ಲ ಅದನ್ನು ನೋಡಿ ಈಗಲೇ ಹೀಗಾದರೆ ಇನ್ನು ಇವಳು ತನ್ನ ಗಂಡನ ಮೇಲೆ ಅಧಿಕಾರ ಇನ್ನೆಷ್ಟು ಚಲಾಯಿಸುತ್ತಾಳೋ ಎಂದು ಆತಂಕಗೊಂಡಿದ್ದರು.

ಆದರೆ ಹನುಮಂತಯ್ಯನಿಗೆ ಅವಳು ತನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿ ತುಂಬಾ ಇಷ್ಟವಾಗುತ್ತಿತ್ತು. ನೋಡಲೂ ಸುಂದರವಾಗಿದ್ದ ಅವಳ ಮೇಲೆ ಹನುಮಂತಯ್ಯನಿಗೆ ಪ್ರೀತಿ ಹುಟ್ಟಿತು. ಆದರೆ ಅವನು ಅದನ್ನು ಮಾತ್ರ ಅವಳೊಂದಿಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲ. ಆದರೂ ಮನೆಯಲ್ಲಿ ತನ್ನ ತಾಯಿಯ ಬಳಿ ತಾನು ಮದುವೆಯಾಗುವುದಾದರೆ ಶಾಂತಿಯನ್ನೇ ಎಂದು ಹೇಳಿದಾಗ ಅವನ ಅಮ್ಮ ನಕ್ಕು ಬಿಟ್ಟಿದ್ದರು. ಜೊತೆಗೆ ಅವಳನ್ನು ಮದುವೆಯಾದರೆ ನೀನು ಅವಳ ಗುಲಾಮನಾಗಬೇಕಾಗುತ್ತದೆ, ಅವಳು ನಿನ್ನ ಮಾತು ಕೇಳುವವಳಲ್ಲ ಎಂದು ಗೇಲಿ ಮಾಡುತ್ತಿದ್ದರು.

ಮಗ ಇನ್ನೂ ಚಿಕ್ಕವ, ಸುಮ್ಮನೆ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ಗಾಯತ್ರಿಗೆ ಅವನು ದೊಡ್ಡವನಾಗಿ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೂ ಅದೇ ಮಾತನ್ನು ಹೇಳಿದಾಗ ಗಾಯತ್ರಿಗೆ ಹಿಡಿಸಲಿಲ್ಲ. ಅಂತಹ ಗಂಡುಬೀರಿ ಹೆಣ್ಣು ತಮ್ಮ ಮನೆಯ ಸೊಸೆಯಾಗುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಶಾಂತಿ ಹತ್ತನೆಯ ತರಗತಿಯಲ್ಲಿ ಫೈಲಾದಾಗ ಗಾಯತ್ರಿ ಅವಳನ್ನು ಬೇಡವೆನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಿತು. ಅವಳು ದಡ್ಡಿ, ಅವಳನ್ನು ಮದುವೆಯಾದರೆ ಮುಂದೆ ನಿನ್ನ ಮಕ್ಕಳೂ ದಡ್ಡರಾಗುತ್ತಾರೆ ಎಂದು ಮಗನಿಗೆ ಹೆದರಿಸಿದ್ದಳು.

ಶಾಂತಿಯ ಮನೆಯವರಿಗೂ ತಮ್ಮ ಪಕ್ಕದ ಮನೆಯ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡುವುದು ಇಷ್ಟವಿರಲಿಲ್ಲ. ಆದರೆ ಶಾಂತಿಯ ಮನಸ್ಸಿನಲ್ಲಿ ಏನಿದೆ ಎಂದು ಅವಳೆಂದೂ ಬಾಯಿ ಬಿಟ್ಟಿರಲಿಲ್ಲ. ಅವಳಿಗೆ ಹನುಮಂತಯ್ಯನ ಜೊತೆ ಮದುವೆಯಾಗುವುದು ಬೇಡವೆಂದಾಗ ಅವಳು ವಿರೋಧಿಸಲೂ ಇಲ್ಲ. ಹಾಗಾಗಿ ಎರಡೂ ಮನೆಯವರ ವಿರೋಧದಿಂದ ಹನುಮಂತಯ್ಯನ ಪ್ರೀತಿಗೆ ಕಡಿವಾಣ ಬಿದ್ದಿತು. ಶಾಂತಿಯ ಮನೆಯವರು ಅವಳಿಗೆ ಬೇರೆ ಹುಡುಗನನ್ನು ಗೊತ್ತು ಮಾಡಿ ಮದುವೆಯನ್ನು ಮುಗಿಸಿಯೂ ಬಿಟ್ಟರು. ಆದರೆ ಹನುಮಂತಯ್ಯನಿಗೆ ಮಾತ್ರ ಇದು ಸಹಿಸಲಾಗದೆ ಅವತ್ತೀಡಿ ದಿನ ರೂಮು ಸೇರಿಕೊಂಡು ಅತ್ತಿದ್ದ.

ನಂತರ ವರುಷಗಳು ಉರುಳಿದಂತೆ ಶಾಂತಿಯ ನೆನಪೂ ಮಸುಕಾಗತೊಡಗಿತು. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದ. ಕಾಲ ಕ್ರಮೇಣ ಅವಳನ್ನು ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾದ. ಅವನಿಗೆ ನಾಲ್ಕು ಗಂಡು ಮಕ್ಕಳೂ ಆದವು. ಆಮೇಲೆ ಹನುಮಂತಯ್ಯ ಶಾಂತಿಯನ್ನು ನೋಡಿರಲೇ ಇಲ್ಲ. ಅವಳು ಮುಂಬೈನಲ್ಲಿ ಇದ್ದಾಳೆ ಎಂದು ಮಾತ್ರ ತಿಳಿದಿತ್ತು. ಅವಳು ತವರು ಮನೆಗೂ ಬರುತ್ತಿರಲಿಲ್ಲ. ಅವಳನ್ನು ನೋಡಿಕೊಂಡು ಬರಲು ತಾಯಿ ಮನೆಯವರೇ ಮುಂಬೈಗೆ ಹೋಗಿ ಬರುತ್ತಿದ್ದರು.

ವರುಷಗಳು ಕಳೆದಂತೆ ಹನುಮಂತಯ್ಯನ ಮಕ್ಕಳೆಲ್ಲ ದೊಡ್ಡವರಾಗಿ, ವಿದ್ಯಾವಂತರಾಗಿ ಒಳ್ಳೆಯ ಕೆಲಸವೂ ದೊರಕಿತು. ಆಗ ಹನುಮಂತನ ತಾಯಿ, ನೀನು ಶಾಂತಿಯನ್ನು ಮದುವೆಯಾಗಿದ್ದಿದ್ದರೆ ನಿನ್ನ ಮಕ್ಕಳೆಲ್ಲ ಹೀಗಿರುತ್ತಿರಲಿಲ್ಲ ಎಂದು ಛೇಡಿಸಿದ್ದರು. ಶಾಂತಿಗೆ ಮಕ್ಕಳಾಗಿದೆಯೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಅವಳ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಶಾಂತರಾಮ ದುಬೈ ಸೇರಿ ಅಲ್ಲೇ ನೆಲೆ ನಿಂತ. ಯಾರನ್ನಾದರೂ ವಿಚಾರಿಸೋಣವೆಂದರೆ ಮದುವೆಯಾದ ಮಹಿಳೆಯ ಬಗ್ಗೆ ವಿಚಾರಿಸಲು ಧೈರ್ಯ ಸಾಲುತ್ತಿರಲಿಲ್ಲ.

 ಎರಡು ವರುಷಗಳ ಹಿಂದೆ ಹನುಮಂತಯ್ಯನ ಹೆಂಡತಿ ಕಾಯಿಲೆ ಬಂದು ತೀರಿಕೊಂಡ ಮೇಲೆ ಶಾಂತಿಯ ನೆನಪು ಅವನಿಗೆ ಬಹುವಾಗಿ ಕಾಡಿತ್ತು. ಹೆಂಡತಿಗೆ ಸಾಯುವ ಮುನ್ನ ತನ್ನ ಮಕ್ಕಳ ಮದುವೆ ನೋಡಲು ಆಸೆಯೆಂದು ಬೇಗ ಬೇಗನೆ ಅವರ ಮದುವೆಯನ್ನೂ ಮಾಡಿಸಿದ್ದಾಯಿತು. ಮಕ್ಕಳೆಲ್ಲ ರೆಕ್ಕೆ ಬಂದ ಹಕ್ಕಿಯಂತೆ ಹಾರಿ ಹೋದಾಗ ಹನುಮಂತಯ್ಯ ಒಬ್ಬಂಟಿಗರಾಗಿ ಬಿಟ್ಟಿದ್ದರು.

ಹೆಂಡತಿ ತೀರಿಕೊಂಡ ಮೇಲೆ ಹನುಮಂತಯ್ಯ ತಮ್ಮ ಊರಿಗೆ ಬಂದು ತಮ್ಮ ಮನೆಯನ್ನು ರಿಪೇರಿ ಮಾಡಿಸಿ ಅಲ್ಲೇ ಇರತೊಡಗಿದರು. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರೂ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ಅವರಿಗೆ ತಮ್ಮ ಜೊತೆ ಬಂದಿರಲು ಹೇಳಿದ್ದರೂ ಹನುಮಂತಯ್ಯ ಮಾತ್ರ ತಾನು ತನ್ನ ಮನೆಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಬೇರೆ ದಾರಿ ಕಾಣದೆ ಮಕ್ಕಳು ಅಡಿಗೆ ಮತ್ತು ಮನೆಕೆಲಸ ಮಾಡಲು ಜನ ನೇಮಿಸಿದ್ದರು.

ಈಗ ಸುಮಾರು ಮೂವತ್ತು ವರುಷಗಳಾದ ಮೇಲೆ ಶಾಂತಿಯನ್ನು ನೋಡಿದಾಗ ಅವಳು ಹೌದೋ ಅಲ್ಲವೋ ಎಂದು ಗೊಂದಲವಾಯಿತು. ಆದರೆ ಸಂಜೆಯ ಹೊತ್ತಿಗೆ, ಬಂದಿರುವುದು ಶಾಂತಿಯೇ ಎಂದು ಅಡಿಗೆಯ ಸುಂದರಮ್ಮನಿಂದ ತಿಳಿಯಿತು. ಅವಳು ಬಂದ ದಿನ ಅವಳ ಬೋಳು ಹಣೆ ನೋಡಿದ ನೆನಪಾಗಿ ಹನುಮಂತಯ್ಯನಿಗೆ ಶಾಂತಿಯನ್ನು ನೋಡಬೇಕು ಅವಳ ಜೊತೆ ಮಾತನಾಡಬೇಕು ಎಂದು ಹಂಬಲವಾಯಿತು. ಜೊತೆಗೆ ಹಿಂದಿನ ನೆನಪುಗಳು ಮತ್ತೆ ಬಲವಾಗಿ ಕಾಡತೊಡಗಿದವು. ದಿನವೂ ಹನುಮಂತಯ್ಯ ಶಾಂತಿ ಏನಾದರೂ ಕಾಣುವಳೇ ಎಂದು ಪಕ್ಕದ ಮನೆಯತ್ತ ಯಾವಾಗಲೂ ನೋಡುತ್ತಿದ್ದರು. ಆದರೆ ಶಾಂತಿ ಮಾತ್ರ ಹೊರಗೆಲ್ಲೂ ಕಾಣಿಸಲಿಲ್ಲ.

ಒಂದು ದಿನ ಅವರು ವಾಕಿಂಗ್ ನಿಂದ ಬರುತ್ತಿರುವಾಗ ಶಾಂತಿ ವರಾಂಡದಲ್ಲಿ ನಿಂತು ತಮ್ಮ ಮನೆಯತ್ತ ನೋಡುತ್ತಾ ನಿಂತಿದ್ದು ಕಂಡು ಹನುಮಂತಯ್ಯನಿಗೆ ಸಂತೋಷವಾಗಿ ಲಗುಬಗೆಯಿಂದ ಅವಳ ಮನೆಯತ್ತ ಹೆಜ್ಜೆ ಹಾಕಿದರು. ಹೇ ಶಾಂತಿ ಹೇಗಿದ್ದೀಯಾ ಎಂದು ಹಿಂದಿನ ಸಲುಗೆಯಿಂದಲೇ ಕೇಳಿದಾಗ ಶಾಂತಿ ತನ್ನ ಕನ್ನಡಕವನ್ನು ಸರಿ ಮಾಡಿ ಕೊಳ್ಳುತ್ತಾ, ಯಾರು, ಹನುಮನಾ ಎಂದು ಕೇಳಿದಳು. ನಂತರ ಗೇಟು ತೆರೆದು ಬಂದು, ನೀನು ಇದ್ದ ಹಾಗೆ ಇದ್ದೀಯಲ್ಲೋ, ಮುಖದ ಮೇಲೆ ನಾಲ್ಕು ಗೆರೆ ಬಿಟ್ಟರೆ ಏನೂ ವ್ಯತ್ಯಾಸವಾಗಿಲ್ಲ ಎಂದಾಗ ಹನುಮಂತಯ್ಯನಿಗೆ ಸಂತಸವಾಗಿ, ಬಾ ನಮ್ಮ ಮನೆಗೆ, ನಿನ್ನ ಬಳಿ ಮಾತನಾಡುವುದಿದೆ ಎಂದಾಗ ಶಾಂತಿ ನಗುತ್ತ ಇನ್ನೂ ನಿನ್ನ ಹಳೆಯ ಚಾಳಿ ಬಿಟ್ಟಿಲ್ಲವೇನೋ ಎನ್ನುತ್ತಾ ಅವನ ಹಿಂದೆಯೇ ಬರುತ್ತಾ ಅವನ ಮನೆಯ ಕಡೆ ನಡೆದಳು.

ಇಬ್ಬರೂ ತಮ್ಮ ತಮ್ಮ ಸಂಸಾರದ ಬಗ್ಗೆ ಮಾತನಾಡಿಕೊಂಡರು. ಆಗ ಶಾಂತಿ ನಾನು ನಿನ್ನನ್ನು ಬಿಟ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಮದುವೆಯಾದ ಮೇಲೆ ತಿಳೀತು. ಮದುವೆಗೆ ಮೊದಲು ಗಂಡ ಶ್ರೀಮಂತ, ಜೊತೆಗೆ ಮುಂಬೈ ನಲ್ಲಿ ಇರುವವರು ಎಂದು ಕುಣಿದಾಡಿ ಬಿಟ್ಟಿದ್ದೆ. ನನ್ನ ಗಂಡನ ಮನೆಯವರು ಶ್ರೀಮಂತರೇನೋ ನಿಜ, ಆದರೆ ನನ್ನ ಗಂಡ ಮಾತ್ರ ಮಹಾ ಕುಡುಕ, ಕುಡಿದ ಅಮಲಿನಲ್ಲಿ ಆತ ದಿನವೂ ನಡೆಸುತ್ತಿದ್ದ ರಂಪ ರಾಮಾಯಣ ನೋಡಿ ಎಷ್ಟೋ ಸಲ ನಿನ್ನಂಥಾ ಒಳ್ಳೆಯ ಹುಡುಗನನ್ನು ಬಿಟ್ಟೆನಲ್ಲ ಎಂದು ಅದೆಷ್ಟೋ ಬಾರಿ ಅತ್ತಿದ್ದುಂಟು.

ತಮ್ಮ ಮಗನಿಗೆ ಜೋರಿನ ಹುಡುಗಿ ಸಿಕ್ಕಿದರೆ ಅವಳೇ ತನ್ನ ಗಂಡನನ್ನು ಸರಿ ಮಾಡುತ್ತಾಳೆ ಎಂದು ಅವನ ತಾಯಿ ನನ್ನನ್ನು ಆರಿಸಿದ್ದರು. ಆದರೆ ಅವನ ರಂಪಾಟದ ಮುಂದೆ ನನ್ನದೇನೂ ನಡೆಯಲೇ ಇಲ್ಲ. ಕೊನೆಗೆ ಅವನು ಕುಡಿದು ಕುಡಿದೇ ಸತ್ತು ಬಿಟ್ಟ. ಹುಟ್ಟಿದ ಒಬ್ಬ ಮಗನಿಗೂ ನಾನು ಬೇಕಾಗಿಲ್ಲ. ಅವನಿಗೆ ಅಮೆರಿಕಾದಲ್ಲಿ ಒಳ್ಳೆ ಕೆಲಸ ಸಿಕ್ಕಿ ಬಿಟ್ಟಿದೆ. ಅದಕ್ಕೆ ನಮ್ಮ ಅತ್ತಿಗೆ ಇಲ್ಲಿ ಬಂದಿರು ಅಂತ ಹೇಳಿದ್ಲು, ಅಣ್ಣನೂ ಇಲ್ಲ ಅವರಿಗೆ ಮಕ್ಕಳೂ ಇಲ್ಲ, ಅವಳಿಗೂ ಒಂಟಿತನ ಬೇಜಾರು ಬಂದು ಬಿಟ್ಟಿದೆ, ಅದಕ್ಕೆ ನನ್ನ ಮಗ ಇಲ್ಲಿ ಕರೆತಂದು ಬಿಟ್ಟು ಹೋದ ಎಂದು ಹೇಳಿ ತನ್ನ ಕಥೆಯನ್ನು ಮುಗಿಸಿದಳು.

ಹನುಮಂತಯ್ಯ, ನನಗೂ ಹೆಂಡತಿ ತೀರಿಕೊಂಡ ಮೇಲೆ ಒಂಟಿ ಬಾಳು ಸಾಕಾಗಿದೆ. ನೀನು ಒಪ್ಪೊದಾದ್ರೆ ನಾನು ಈಗ್ಲೂ ನಿನ್ನನ್ನು ಮದ್ವೇಯಾಗೋಕೆ ರೆಡಿ, ನಿನ್ನನ್ನು ಮದುವೆಯಾಗಬೇಕು ಎನ್ನುವ ಆಸೆ ಇನ್ನೂ ಜೀವಂತವಾಗೇ ಇದೆ ಎಂದಾಗ ಶಾಂತಿ ನಾಚುತ್ತ, ಥೂ ಈ ವಯಸ್ಸಿನಲ್ಲೇ? ಜನ ಕೇಳಿದ್ರೆ ನಕ್ಕಾರು, ಊರು ಹೋಗಿ ಕಾಡು ಹತ್ತಿರ ಬಂತು ಅನ್ನೋ ಸಮಯದಲ್ಲಿ, ಹೋಗ್ಲಿ ನಿನ್ನ ಮಕ್ಕಳು ಏನೂ ಅನ್ನೋಲ್ವಾ ಎಂದಾಗ ಹನುಮಂತಯ್ಯ ಆತುರಾತುರವಾಗಿ, ಅದಕ್ಕೆಲ್ಲ ನೀನು ತಲೆ ಕೆಡಿಸಿಕೊ ಬೇಡಾ ನೀನು ಹೂಂ ಅನ್ನು ಸಾಕು, ಪ್ರೀತಿಗೆ ವಯಸ್ಸನ್ನೋದು ಇಲ್ಲ ಎಂದಾಗ ಶಾಂತಿಯ ಮುಖ ಲಜ್ಜೆಯಿಂದ ಕೆಂಪೇರಿತು. ಅದನ್ನು ನೋಡಿ ಹನುಮಂತಯ್ಯನಿಗೆ ಯೌವ್ವನ ಮರುಕಳಿಸಿದಂತಾಯಿತು.

ರಾಹುಕಾಲ

ಉಮಾ ತಮ್ಮ ಮದುವೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಬೆಳಗ್ಗೆ ಬೇಗನೆ ಎದ್ದು ಸ್ನಾನ ಪೂಜೆ ಮುಗಿಸಿ ಹಾಡೊಂದನ್ನು ಮೆಲ್ಲನೆ ಹಾಡುತ್ತ ಕಾಫಿ ತಿಂಡಿಯ ತಯಾರಿಯಲ್ಲಿ ತೊಡಗಿದ್ದರು. ಬಿಸಿ ಕಾಫಿ ಮಾಡಿ ಒಂದು ಕಪ್ ನಲ್ಲಿ ಹಾಕಿ ಗಂಡನಿಗೆ ಕೊಡಲೆಂದು ರೂಮಿಗೆ ಹೊರಟರು. ಗಂಡ ಮಹೇಶ್ ಇನ್ನೂ ಎದ್ದಿರದ್ದು ಕಂಡು ಉಮಾ ನಸು ಮುನಿಸಿನಿಂದ “ಏನ್ರೀ ಇವತ್ತು, ಏಳೋ ಮನಸ್ಸೇ ಇಲ್ವಾ, ಕಾಫಿ ತಂದಿದ್ದೀನಿ ಏಳಿ ಮೇಲೆ” ಎನ್ನುತ್ತಾ ಕಾಫಿಯನ್ನು ಅಲ್ಲೇ ಇದ್ದ ಟೇಬಲ್ ಮೇಲೆ ಇಟ್ಟು ಅವರ ಹೊದಿಕೆಯನ್ನೆಳೆದರು.

ಮಹೇಶ್ “ಇನ್ನೂ ಸ್ವಲ್ಪ ಹೊತ್ತು ಮಲಗೋಕೆ ಬಿಡೇ” ಎನ್ನುತ್ತಾ ಗಡಿಯಾರದ ಕಡೆ ನೋಡಿ “ಇನ್ನೂ ಎಂಟು ಗಂಟೆ ಕೂಡ ಆಗಿಲ್ಲ, ಯಾಕೆ ಇಷ್ಟು ಬೇಗ ಎಬ್ಬಿಸಿದೆ” ಎನ್ನುತ್ತ ಮತ್ತೆ ಹೊದಿಕೆಯನ್ನು ಹೊದೆಯಲು ನೋಡಿದರು. “ರೀ ಇವತ್ತು ದೇವಸ್ಥಾನಕ್ಕೆ ಹೋಗ್ಬೇಕು ಮರೆತು ಬಿಟ್ರಾ” ಎಂದು ಉಮಾ ಅಂದಾಗ ಮಹೇಶ್ ಗೆ ತಕ್ಷಣ ಇವತ್ತು ನಮ್ಮ ಮದುವೆಯ ವಾರ್ಷಿಕೋತ್ಸವ ಎಂದು ನೆನಪಾಗಿ ತಕ್ಷಣವೇ ಹೆಂಡತಿಯ ಕೈ ಹಿಡಿದು ಎಳೆದು ಅವರನ್ನು ತನ್ನ ಪಕ್ಕ ಕೂರಿಸಿಕೊಂಡು ಏನೂ ಗೊತ್ತಿಲ್ಲದವರಂತೆ “ಯಾಕೆ? ಇವತ್ತು ಏನು ಸ್ಪೆಷಲ್?” ಎಂದಾಗ ಉಮಾ “ನೀವು ಯಾವಾಗಲೂ ಹೀಗೆ, ಯಾವುದೂ ನಿಮಗೆ ನೆನಪಿರೋದೇ ಇಲ್ಲ. ಆದ್ರೆ ನಿಮ್ಮ ಬಿಸಿನೆಸ್ ನಲ್ಲಿ ಯಾವ ಪ್ರಾಜೆಕ್ಟ್ ಯಾವಾಗ ಶುರು ಮಾಡಿದ್ದು ಅಂತೆಲ್ಲ ಯಾವಾಗಲೂ ನೆನಪಿರುತ್ತೆ. ಅದರಲ್ಲೇ ಗೊತ್ತಾಗುತ್ತೆ ನಿಮಗೆ ನಾನು ಮುಖ್ಯ ಅಲ್ಲ ಅಂತ” ಎಂದು ಉಮಾ ಮೂತಿ ಉಬ್ಬಿಸಿದರು.

ಮಹೇಶ್ ” ಲೇ,ಲೇ, ನಂಗೆ ಚೆನ್ನಾಗಿ ನೆನಪಿದೆ ಕಣೆ, ಸುಮ್ನೆ ನಿನ್ನನ್ನು ಸ್ವಲ್ಪ ಗೋಳು ಹುಯ್ಕೊಳ್ಳೋಣ ಅನ್ನಿಸ್ತು, ಹ್ಯಾಪ್ಪಿ ಆನಿವರ್ಸರಿ ಚಿನ್ನ” ಎಂದು ಉಮಾ ಕೆನ್ನೆಗೆ ಸಿಹಿ ಮುತ್ತೊಂದನ್ನು ಇತ್ತಾಗ ಉಮಾ ನಾಚಿ “ಛೀ, ಏನ್ರೀ ಇದು, ಚಿನ್ನ ರನ್ನಾಂತ, ಬೆಳೆದ ಮಕ್ಕಳು ಮನೇಲಿದ್ದಾರೆ, ಅವರೇನಾದರೂ ನೋಡಿದ್ರೆ …. ನಿಮಗೆ ಸ್ವಲ್ಪಾನೂ ಮಾನ ಮರ್ಯಾದೆ ಅನ್ನೋದೇ ಇಲ್ಲ” ಎನ್ನುತ್ತಾ ನಸುನಕ್ಕು ಕಾಫಿ ಕಪ್ಪನ್ನು ಗಂಡನ ಕೈಗಿತ್ತರು. ಮಹೇಶ್ “ನಮ್ಮ ರೂಮಲ್ಲಿ ನಾವು ಏನೇ ಮಾಡಿದ್ರೂ ಮಕ್ಕಳಿಗೆ ಹೇಗೆ ಗೊತ್ತಾಗುತ್ತೆ. ಅಷ್ಟಕ್ಕೂ ಅವರಿಬ್ಬರೂ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲ್ಲ” ಎನ್ನುತ್ತಿದ್ದಂತೆ “ಹ್ಯಾಪಿ ಆನಿವರ್ಸರಿ ಡ್ಯಾಡಿ, ಮಮ್ಮಿ” ಎನ್ನುತ್ತಾ ಮಕ್ಕಳಿಬ್ಬರೂ ರೂಮಿಗೆ ಬಂದಾಗ ಮಹೇಶ್ ಕಕ್ಕಾಬಿಕ್ಕಿಯಾದರು.

ಉಮಾ ಮಹೇಶರತ್ತ ನೋಡಿ ಕೀಟಲೆಯ ನಗು ನಕ್ಕಾಗ ಮಕ್ಕಳು “ಡ್ಯಾಡಿ, ಇವತ್ತು ಪಾರ್ಟಿ ಇಟ್ಕೊಳ್ಳೋಣ. ಸಿಲ್ವರ್ ಜ್ಯುಬಿಲಿಯಾದ್ರಿಂದ ಸೆಲೆಬ್ರೇಟ್ ಮಾಡಲೇ ಬೇಕು” ಎಂದು ಗಲಾಟೆ ಮಾಡಿದರು. ಮಹೇಶ್ ಹೊದಿಕೆ ಸರಿಸುತ್ತ “ಸಾರಿ ಮಕ್ಳಾ, ಇವತ್ತು ನಂಗೆ ದೊಡ್ಡ ಪ್ರಾಜೆಕ್ಟ್ ಸಿಗೋದ್ರಲ್ಲಿದೆ, ಅದಕ್ಕಾಗಿ ತುಂಬಾ ಓಡಾಡಬೇಕು, ಆದ್ರೆ ರಾತ್ರಿ ನಾನು ಬಂದ ಮೇಲೆ ನಾವೇ ಸೇರಿ ಒಂದು ಚಿಕ್ಕ ಪಾರ್ಟಿ ಮಾಡೋಣ. ಯಾರಿಗೂ ಹೇಳೋದು ಬೇಡ” ಎಂದಾಗ ಮಕ್ಕಳಿಬ್ಬರಿಗೂ ತುಸು ಬೇಸರವಾದರೂ ಅಪ್ಪನ ಪ್ರಾಜೆಕ್ಟ್ ಮುಖ್ಯವಾದ್ದರಿಂದ ಹೆಚ್ಚು ಬಲವಂತ ಮಾಡದೆ ತಾವೇ ನಡೆಸುವ ಪಾರ್ಟಿಯನ್ನಾದರೂ ಭರ್ಜರಿಯಾಗಿ ಮಾಡಬೇಕೆಂದು ಅದರ ಬಗ್ಗೆಯೇ ಮಾತನಾಡುತ್ತ ಅಣ್ಣ ತಂಗಿ ಅಲ್ಲಿಂದ ಹೊರಟರು.

ಉಮಾಗೂ ಗಂಡ ಇವತ್ತೂ ಕೂಡ ತನ್ನೊಂದಿಗೆ ಇರುವುದಿಲ್ಲ ಎಂದು ತಿಳಿದು ಬೇಸರವಾಗಿತ್ತು. ಆದರೆ ವ್ಯವಹಾರವನ್ನೂ ಕಡೆಗಣಿಸಲಾಗುವುದಿಲ್ಲ. ಮಕ್ಕಳಿಬ್ಬರ ಮೆಡಿಕಲ್ ಕಾಲೇಜ್ ಫೀಸೇ ಬೇಕಾದಷ್ಟಾಗುತ್ತದೆ. ಅದಕ್ಕಾಗಿ ಗಂಡನಿಗೆ ಒತ್ತಾಯ ಮಾಡದೆ ದೇವಸ್ಥಾನಕ್ಕಾದ್ರೂ ಹೋಗಿ ಬರೋಣ ಎಂದಾಗ ಮಹೇಶರಿಗೆ ಹೆಂಡತಿಯ ಮುದುಡಿದ ಮುಖ ನೋಡಲಾಗದೆ ಸ್ನಾನಕ್ಕೆ ಧಾವಿಸಿದರು. ಮನೆಯವರೆಲ್ಲ ಸೇರಿ ಕಾರಿನಲ್ಲಿ ದೇವಸ್ಥಾನಕ್ಕೆ ಹೋದರು. ಉಮಾಗೆ ಗಂಡ ತನಗಾಗಿ ಇಷ್ಟಾದರೂ ಮಾಡಿದರಲ್ಲ ಎಂದು ತೃಪ್ತಿಯಾಯಿತು. ಮನೆಗೆ ವಾಪಸು ಬರುತ್ತಿದ್ದಂತೆ ಮಗಳು ವಿನ್ಯಾ, “ಮಮ್ಮಿ, ಇವತ್ತು ರಿಂಗ್ ಎಕ್ಸ್ ಚೇಂಜ್ ಆದರೂ ಮಾಡ್ಬೇಕು” ಅನ್ನುತ್ತ, “ಡ್ಯಾಡಿ, ಜ್ಯುವೆಲ್ಲರಿ ಶಾಪ್ ಗೆ ಹೋಗೋಣ” ಎಂದಳು. ಆಗ ಉಮಾ, “ಇಷ್ಟು ಬೇಗ ಯಾವ ಅಂಗಡೀನೂ ತೆರೆದಿರಲ್ಲ. ಆಮೇಲೆ ನಾನೇ ಹೋಗಿ ತೊಗೊಂಡ್ ಬರ್ತೀನಿ” ಎಂದರು. ಮಗ ಸುದೇಶ್, “ಕೊನೇಪಕ್ಷ ಬಟ್ಟೆ ಅಂಗ್ಡಿಗಾದರೂ ಹೋಗಿ ಹೊಸ ಬಟ್ಟೆಗಳನ್ನ ತರೋಣ” ಎಂದಾಗ ಉಮಾ, ಡ್ರೆಸ್ ಗಳನ್ನು ತಾನು ನಿನ್ನೆಯೇ ತಂದಿಟ್ಟಿದ್ದೇನೆ ಅದು ಸರ್ಪ್ರೈಸ್ ಎಂದು ಉಮಾ ಮಗನ ಕಿವಿಯಲ್ಲಿ ಪಿಸುಗುಟ್ಟಿದರು.

ಗಂಡ ಆಫೀಸಿಗೆ, ಮಕ್ಕಳು ಕಾಲೇಜಿಗೆ ಹೋದ ಮೇಲೆ ಉಮಾ, ಕೆಲಸದವಳು ತನ್ನ ಕೆಲಸ ಮುಗಿಸುವುದನ್ನೇ ಕಾಯುತ್ತ ಅವಳು ಹೊರಡುತ್ತಿದ್ದಂತೆ ತಾವೂ ಚಿನ್ನದ ಅಂಗಡಿಗೆ ಹೊರಟರು. ಡ್ರೈವರ್ ಎರಡು ದಿನ ರಜಾ ಹಾಕಿದ್ದರಿಂದ ತಾನೇ ಸ್ವತಹ ಡ್ರೈವ್ ಮಾಡಿಕೊಂಡು ಹೋದರು. ಇವರನ್ನು ನೋಡಿ ಚಿನ್ನದ ಅಂಗಡಿಯವನ ಮುಖ ಅರಳಿತು. ಇವತ್ತು ತನಗೆ ಒಳ್ಳೆಯ ವ್ಯಾಪಾರವಾಗಲಿದೆ ಎಂದುಕೊಳ್ಳುತ್ತ ಅವರನ್ನು ಸಂತಸದಿಂದಲೇ ಬರಮಾಡಿಕೊಂಡರು. ತಮ್ಮ ಹುಡುಗನಿಗೆ ಅವರಿಗೆ ಅತ್ಯುತ್ತಮವಾದುದನ್ನೇ ತೋರಿಸಲು ಹೇಳಿ, ಅದೇ ಸಮಯದಲ್ಲಿ ಬೇರೆ ಗ್ರಾಹಕರು ಬಂದದ್ದು ನೋಡಿ ಗಲ್ಲಾ ಪೆಟ್ಟಿಗೆಯತ್ತ ನಡೆದರು.

ಅಲ್ಲಿದ್ದ ಸಿಸಿ ಟೀವಿಯಲ್ಲಿ ಗ್ರಾಹರನ್ನು ಗಮನಿಸುತ್ತ ಕುಳಿತರು. ಉಮಾ ಮೊದಲು ಉಂಗುರ ತೋರಿಸುವಂತೆ ಹೇಳಿದಾಗ ಅಂಗಡಿಯ ಹುಡುಗ ವಿವಿಧ ವಿನ್ಯಾಸದ ಉಂಗುರಗಳಿದ್ದ ಪೆಟ್ಟಿಗೆಯನ್ನೇ ತೆರೆದಿಟ್ಟ. ಉಮಾ ಎಲ್ಲವನ್ನೂ ನೋಡುತ್ತಾ ಕೊನೆಗೆ ತನಗೂ ಹಾಗೂ ತನ್ನ ಗಂಡನಿಗೆಂದು ಅತ್ಯುತ್ತಮವಾದ ಎರಡು ವಜ್ರದುಂಗುರಗಳನ್ನು ಆರಿಸಿದರು. ಜೊತೆಗೆ ತನಗೊಂದು ಬ್ರೇಸ್ ಲೆಟ್ ತೆಗೆದುಕೊಳ್ಳುವ ಆಸೆಯಾಗಿ ಅಂಗಡಿಯವರಿಗೆ ಬ್ರೇಸ್ ಲೆಟ್ ತೋರಿಸಲು ಹೇಳಿದಾಗ ಆತ ಉಂಗುರಗಳ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಬ್ರೇಸ್ ಲೆಟ್ ತರಲು ಹೋದ. ಉಮಾ ಅಷ್ಟು ಹೊತ್ತು ಮಾಡುವುದೇನು ಎಂದುಕೊಂಡು ಉಂಗುರಗಳನ್ನೇ ಮತ್ತೆ ನೋಡತೊಡಗಿದರು.

ಅದರಲ್ಲಿ ಒಂದು ನವರತ್ನದ ಉಂಗುರ ಅವರಿಗೆ ಬಹಳ ಹಿಡಿಸಿತು. ಆದರೆ ಯಾಕೋ ಏನೋ ಆ ಕ್ಷಣ ಅವರಿಗೆ ಅದನ್ನು ಕದಿಯುವ ಮನಸ್ಸಾಯಿತು. ತಾನು ಒಂದು ಉಂಗುರ ಕದ್ದರೆ ಯಾರಿಗೂ ತಿಳಿಯಲಾರದು. ಅಂಗಡಿಯವ ತನಗೆ ಚೆನ್ನಾಗಿ ಪರಿಚಯವಿರುವುದರಿಂದ ತನ್ನ ಮೇಲೆ ಆತನಿಗೆ ಅನುಮಾನ ಬಾರದು ಎಂದುಕೊಂಡು ಅತ್ತಿತ್ತ ನೋಡಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಖಾತ್ರಿ ಪಡಿಸಿ ತಕ್ಷಣವೇ ಅದನ್ನೆತ್ತಿ ತನ್ನ ಬ್ಯಾಗಿಗೆ ಹಾಕಿಕೊಂಡರು. ಅಷ್ಟರಲ್ಲಿ ಬ್ರೇಸ್ ಲೆಟ್ ಬಂದಿದ್ದರಿಂದ ಉಮಾ ಏನೂ ಆಗಿಯೇ ಇಲ್ಲವೆಂಬಂತೆ ಅದನ್ನು ನೋಡತೊಡಗಿದರು. ಇತ್ತ ಅಂಗಡಿಯಾತ ಸಿಸಿಟೀವಿಯಲ್ಲಿ ಉಮಾ ಒಂದು ಉಂಗುರ ತೆಗೆದು ತನ್ನ ಬ್ಯಾಗಿಗೆ ಹಾಕಿಕೊಳ್ಳುವುದನ್ನು ನೋಡಿ ದಿಗ್ಭ್ರಮೆಗೊಂಡರು. ಅವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಅಷ್ಟೊಂದು ಶ್ರೀಮಂತ ಮನೆತನದಿಂದ ಬಂದವರು ಕಳವು ಮಾಡುವರೇ ಅಥವಾ ಅವರು ತಾವೇ ತಂದ ಉಂಗುರವನ್ನೇ ತನ್ನ ಬ್ಯಾಗಿಗೆ ಹಾಕಿಕೊಂಡರೆ ಎಂದು ಅವರಿಗೆ ಗೊಂದಲವಾಯಿತು.

ಉಂಗುರಗಳನ್ನು ತೆಗೆದಿಡುತ್ತಿದ್ದ ಹುಡುಗ ಬಂದು ಅವರ ಕಿವಿಯಲ್ಲಿ ಒಂದು ನವರತ್ನದ ಉಂಗುರ ಕಾಣಿಸುತ್ತಿಲ್ಲ ಎಂದು ಗುಟ್ಟಾಗಿ ಹೇಳಿದಾಗ ಅಂಗಡಿಯ ಮಾಲೀಕರಿಗೆ ಉಮಾ ಉಂಗುರ ಕದ್ದಿದ್ದು ಖಾತ್ರಿಯಾಯಿತು. ಜೊತೆಗೆ ಅವರಿಗೆ ಆಶ್ಚರ್ಯವಾಯಿತು. ಅವರು ಯಾವತ್ತೂ ಹೀಗೆ ಮಾಡಿದವರಲ್ಲ, ಏನಾಯಿತು ಅವರಿಗೆ ಇದ್ದಕ್ಕಿದ್ದಂತೆ, ಅದರಲ್ಲೂ ಅವರು ಕೊಂಡ ಉಂಗುರಗಳ ಬೆಲೆಗಿಂತ ಕಡಿಮೆ ಬೆಲೆಯದ್ದನ್ನು ಕದಿಯುವ ಆವಶ್ಯಕತೆಯಾದರೂ ಏನಿತ್ತು? ಯಾಕೆ ಹಾಗೆ ಮಾಡಿದರು ಎಂದುಕೊಳ್ಳುತ್ತ ಅಚ್ಚರಿ, ದಿಗ್ಭ್ರಮೆಗಳಿಂದ ಅವರತ್ತ ನೋಡಿದರು.

ಉಮಾ ಮಾತ್ರ ಏನೂ ಆಗದವರಂತೆ ಬ್ರೇಸ್ ಲೆಟ್ ಗಳನ್ನು ನೋಡುತ್ತಾ ಕುಳಿತರು. ಹುಡುಗ ಆಕೆ ಉಂಗುರ ಕದ್ದಿದ್ದರಿಂದ ಇನ್ನು ಬ್ರೇಸ್ ಲೆಟ್ ಕೂಡ ಕದ್ದರೆ ಎಂದು ಭಯವಾಗಿ ಅಲ್ಲೇ ನಿಂತು ಅವರನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಅವನಿಗೂ ಉಮಾ ವರ್ತನೆ ಅಚ್ಚರಿ ತಂದಿತ್ತು. ಇಷ್ಟೊಂದು ಶ್ರೀಮಂತ ಮನೆತನದವರು ಉಂಗುರ ಕದ್ದಿದ್ದಾದರೂ ಯಾಕೆ ಎಂದು ಅಚ್ಚರಿಯಿಂದ ಅವರನ್ನೇ ನೋಡುತ್ತಾ ನಿಂತ.
ಉಮಾ ಬ್ರೇಸ್ ಲೆಟ್ ನ್ನು ಆರಿಸಿ ಅದನ್ನು ಪ್ಯಾಕ್ ಮಾಡಲು ತಿಳಿಸಿ ದುಡ್ಡು ಕೊಡಲು ಗಲ್ಲಾ ಪೆಟ್ಟಿಗೆಯತ್ತ ನಡೆದರು. ಅಲ್ಲಿ ಮಾಲೀಕರು, ಉಂಗುರ ಮತ್ತು ಬ್ರೇಸ್ ಲೆಟ್ ಗಳ ದರವನ್ನೆಲ್ಲ ಪರಿಶೀಲಿಸಿ ಹುಡುಗನಿಗೆ ಅದನ್ನೆಲ್ಲ ಚೆನ್ನಾಗಿ ಪ್ಯಾಕ್ ಮಾಡಲು ಹೇಳಿ ಅಲ್ಲಿಂದ ಕಳುಹಿಸಿದರು.

ಅಂಗಡಿಯಾತ, ಉಮಾ ಕೊಂಡ ಆಭರಣಗಳ ಜೊತೆ ನವರತ್ನದ ಉಂಗುರದ ಬೆಲೆಯನ್ನೂ ನಮೂದಿಸಿ ಬಿಲ್ಲನ್ನು ಅವರ ಕೈಗಿತ್ತು ಅವರನ್ನೇ ಗಮನಿಸುತ್ತ ಕುಳಿತರು. ಉಮಾ ಬಿಲ್ಲನ್ನು ಪರಿಶೀಲಿಸುತ್ತಿದ್ದಂತೆ ಅವರ ಮುಖ ಕಪ್ಪಿಟ್ಟಿತು. ಅಂಗಡಿಯಾತ ತಾನು ಕದ್ದ ಉಂಗುರದ ಬೆಲೆಯನ್ನು ನಮೂದಿಸಿ ತಾನು ಕದ್ದಿದ್ದು ಅವರಿಗೆ ತಿಳಿದಿದೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದು ನೋಡಿ ಉಮಾಗೆ ತೀವ್ರ ಮುಜುಗರವಾಯಿತು.
ಛೆ, ತಾನೇಕೆ ಉಂಗುರವನ್ನು ಕದ್ದೆ, ತನ್ನ ಗಂಡ ಅಂತಹ ನೂರು ಉಂಗುರಗಳನ್ನು ಒಮ್ಮೆಲೇ ಕೊಂಡುಕೊಳ್ಳುವ ಶಕ್ತಿಯಿದ್ದವರಾಗಿದ್ದೂ ತಾನೇಕೆ ಕದಿಯುವಂತಹ ಹೀನ ಕೆಲಸಕ್ಕೆ ಕೈ ಹಾಕಿದೆ, ಎಂತಹ ಅವಮಾನವಾಯಿತು. ಇನ್ನು ಆ ಹುಡುಗ ಮತ್ತು ಅಂಗಡಿಯಾತ ತಾನು ಕದ್ದ ವಿಷಯವನ್ನು ಎಲ್ಲರ ಬಳಿ ಹೇಳಿಕೊಂಡರೆ ತಮ್ಮ ಮರ್ಯಾದೆಯೇ ಹೋಗುತ್ತದೆ. ಛೆ, ಛೆ, ಎಂತಹ ಕೆಲಸ ಮಾಡಿಬಿಟ್ಟೆ, ಚಿನ್ನದ ಅಂಗಡಿಯಲ್ಲಿ ಯಾರೂ ಗಮನಿಸುತ್ತಿಲ್ಲವೆಂದು ಯಾಕೆ ತಾನು ಅಂದುಕೊಂಡೆ. ಅವರು ಪೋಲೀಸಿವರಿಗೆ ಹೇಳಿದ್ದರೆ ತನ್ನ ಗತಿ ಏನಾಗುತ್ತಿತ್ತು. ತಾನು ಉಂಗುರ ಕದ್ದೆ ಎಂದು ಎಲ್ಲರಿಗೂ ತಿಳಿಯುವಂತೆ ಗಲಾಟೆ ಮಾಡದೆ ತನಗೆ ಅವಮಾನವಾಗಬಾರದು ಎಂದು ಇಷ್ಟು ಸೂಕ್ಷ್ಮವಾಗಿ ತಿಳಿಸಿದ್ದಾರೆ, ಅವರೆಷ್ಟು ಒಳ್ಳೆಯವರು. ತಾನು ಮಾತ್ರ ತನ್ನ ಮರ್ಯಾದೆ ಬಗ್ಗೆ ಯೋಚಿಸದೆ ಒಂದು ಕ್ಷಣಕ್ಕೆ ಮತಿಗೆಟ್ಟು ಎಂಥ ಕೆಲಸ ಮಾಡಿಬಿಟ್ಟೆ. ಈಗ ತಾನು ಉಂಗುರದ ದರ ಕೊಡಲು ಒಪ್ಪದಿದ್ದರೆ ಅವರು ಖಂಡಿತ ದೊಡ್ಡ ಗಲಾಟೆ ಮಾಡುತ್ತಾರೆ. ದುಡ್ಡು ಕೊಟ್ಟು ಬಿಟ್ಟರೆ ತಾನು ಕಳ್ಳಿಯೆಂದು ಒಪ್ಪಿಕೊಂಡಂತಾಗುತ್ತದೆ ಎಂದುಕೊಂಡು ದ್ವಂದ್ವಕ್ಕೊಳಗಾದರು. ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ.

ಊರಿನ ಪ್ರಖ್ಯಾತ ಬಿಲ್ಡರ್ ನ ಹೆಂಡತಿ ಚಿನ್ನದ ಅಂಗಡಿಯಲ್ಲಿ ಉಂಗುರ ಕದ್ದಳೆಂದರೆ ಅದಕ್ಕಿಂತ ಅವಮಾನಕರ ಬೇರಿಲ್ಲ. ಇದೆಲ್ಲ ಮಾಧ್ಯಮದಲ್ಲಿ ಪ್ರಸಾರವಾದರೆ ಏನು ಮಾಡುವುದು ಎಂದು ಜಿಲ್ಲನೆ ಬೆವರಿದರು. ಅವರಿಗೆ ಬಿಸಿ ತುಪ್ಪದಂತೆ ಅಲ್ಲವೆನ್ನಲೂ ಆಗದೆ ಸರಿ ಎಂದು ಒಪ್ಪಿಕೊಳ್ಳಲೂ ಆಗದೆ ತೊಳಲಾಡಿದರು. ಚಿನ್ನದ ಅಂಗಡಿಯಲ್ಲಿ ಎ.ಸಿ ಹಾಕಿದ್ದರೂ ಉಮಾ ಬೆವರಿನಿಂದ ತೋಯ್ದು ಹೋಗಿದ್ದರು.
ಬಹಳ ಯೋಚಿಸಿ ಕೊನೆಗೆ ಇದೆಲ್ಲದರಿಂದ ಪಾರಾಗಲು ತಾನು ತಪ್ಪಿ ಅದನ್ನು ಬ್ಯಾಗ್ ಗೆ ಹಾಕಿದೆ. ದಯವಿಟ್ಟು ಕ್ಷಮಿಸಿ ಎನ್ನುತ್ತಾ ಅದರ ಮೊತ್ತವನ್ನೂ ಸೇರಿಸಿ ದುಡ್ಡು ಕೊಟ್ಟರು. ಅಂಗಡಿಯಾತ ಏನೂ ಆಗದವರಂತೆ, ಪರವಾಗಿಲ್ಲಮ್ಮ, ಒಮ್ಮೊಮ್ಮೆ ಹೀಗಾಗುತ್ತದೆ, ಯೋಚನೆ ಮಾಡಬೇಡಿ ಎಂದು ಮಂದಹಾಸ ಬೀರಿ ಅವರನ್ನು ಬೀಳ್ಕೊಟ್ಟರು.

ಅಂಗಡಿಯಿಂದ ಹೊರ ಬಂದೊಡನೆ ಉಮಾಗೆ ಅವರು ಬೇರೆಯವರಿಗೆ ಈ ವಿಚಾರ ಹೇಳಿದರೆ ಏನು ಮಾಡುವುದು. ತನ್ನ ಗಂಡನಿಗೆ ಗೊತ್ತಾದರೆ ಆಘಾತವಾಗುತ್ತದೆ, ಇನ್ನು ಮಕ್ಕಳಿಗೆ ಗೊತ್ತಾದರೆ ಎಷ್ಟು ಅವಮಾನ, ತಾನು ಯಾಕಾದರೂ ಕದಿಯಲು ಹೋದೇನೋ, ಯಾವ ರೋಗ ತನಗೆ ಬಡಿದಿತ್ತೋ, ತಾನು ಆ ಘಟನೆಯೇ ನಡೆಯದಂತೆ ಮತ್ತೆ ಸರಿ ಮಾಡಲು ಆಗಿದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಒಂದು ಕ್ಷಣದ ತಪ್ಪಿಗೆ ಜೀವಮಾನವಿಡೀ ನರಳುವಂತಾಯಿತಲ್ಲ ಎಂದು ಪಶ್ಚಾತ್ತಾಪ ಪಟ್ಟರು.

ತನ್ನ ಗಂಡ ತನಗೆ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ದುಡ್ಡಿಗೇನೂ ಬರವಿಲ್ಲ ಆದರೂ ತಾನ್ಯಾಕೆ ಇಂಥ ಕೆಲಸ ಮಾಡಿದೆ, ಇನ್ನು ತಾನು ಈ ಅಂಗಡಿಗೆ ಬರಲು ಸಾಧ್ಯವೇ, ಇನ್ನು ಕದ್ದ ಉಂಗುರವನ್ನು ತನ್ನ ಬಳಿ ಇಟ್ಟುಕೊಂಡರೆ ಅದು ತಾನು ಕದ್ದಿದ್ದನ್ನು ಜೀವಮಾನವಿಡೀ ನೆನಪಿಸುತ್ತದೆ. ಇದನ್ನು ತೆಗೆದು ಬಿಸಾಕಲೇ ಎಂದುಕೊಂಡರು. ಆದರೆ ಮರುಕ್ಷಣವೇ, ಬಿಸಾಕಿದರೆ ಯಾರಿಗಾದರೂ ಅದು ಸಿಕ್ಕಿ ಅವರು ಪ್ರಾಮಾಣಿಕವಾಗಿ ಹಿಂತಿರುಗಿಸಲು ಬಯಸಿ ಪತ್ರಿಕೆಗಳಲ್ಲಿ ಮಾಹಿತಿ ಕೊಟ್ಟರೆ ಚಿನ್ನದ ಅಂಗಡಿಯಾತ ಅದು ತಾನು ಉಂಗುರ ಕದ್ದ ವಿಷಯ ಹೊರಬಂದರೇ! ಎಂದುಕೊಂಡು ಮತ್ತಷ್ಟು ಬೆವರಿದರು.

ಕೊನೆಗೆ ಅದನ್ನು ಮನೆಯಲ್ಲಿ ಯಾವುದಾರೂ ಮೂಲೆಯಲ್ಲಿ ಇರಿಸಿದರಾಯಿತು ಎಂದುಕೊಳ್ಳುತ್ತ ಕಾರಿನತ್ತ ನಡೆದರು. ಸುತ್ತಲಿದ್ದ ಜನರೆಲ್ಲಾ ತಾನು ಕಳ್ಳಿಯೆಂದು ತನ್ನತ್ತಲೇ ದಿಟ್ಟಿಸಿ ನೋಡುತ್ತಿದ್ದಾರೆ ಎಂದೆನಿಸಿ ಮುಜುಗರವಾಗಿ ಲಗುಬಗೆಯಿಂದ ಕಾರಿನತ್ತ ಧಾವಿಸಿದರು. ಚಿನ್ನದ ಅಂಗಡಿಗೆ ಬರುವಾಗ ಇದ್ದ ಸಂಭ್ರಮ ಅಲ್ಲಿಂದ ಹೊರಡುವಾಗ ಅವರ ಮುಖದಲ್ಲಿ ಇರಲಿಲ್ಲ. ಹೇಗೋ ಕಾರು ಚಲಾಯಿಸಿ ಮನೆಗೆ ಬಂದರು. ಇವತ್ತು ಬೆಳಗ್ಗೆ ಎದ್ದ ಘಳಿಗೆಯೇ ಸರಿ ಇಲ್ಲ ಎಂದುಕೊಂಡರೂ ಬೆಳಗ್ಗಿನಿಂದ ಚೆನ್ನಾಗಿಯೇ ಇದ್ದುದು ನೆನಪಾಗಿ ತಾನು ಚಿನ್ನದ ಅಂಗಡಿಗೆ ಹೋದ ಘಳಿಗೆಯೇ ಸರಿ ಇಲ್ಲ ಎಂದುಕೊಂಡರು.

ಅವರಿಗೆ ಒಂದು ಕಡೆ ಕುಳಿತು ಕೊಳ್ಳಲು ಆಗದೆ ಅತ್ತಿಂದಿತ್ತ ಶತಪಥ ಹೆಜ್ಜೆ ಹಾಕಿದರು. ಅವರ ಫೋನ್ ಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯ ಕೋರಲು ಸಂಬಂಧಿಕರ ಕರೆಗಳು ಒಂದಾದರ ಮೇಲೊಂದರಂತೆ ಬರುತ್ತಿದ್ದವು. ಆದರೆ ಉಮಾಗೆ ಕರೆ ಸ್ವೀಕರಿಸುವ ಸ್ಥಿತಿಯಲ್ಲೇ ಇರಲಿಲ್ಲ. ಚಿನ್ನದ ಅಂಗಡಿಯವ ವಿಷಯ ಎಲ್ಲರಿಗೂ ಹೇಳಿ ಆ ಬಗ್ಗೆ ಕೇಳಲು ಅವರು ಫೋನ್ ಮಾಡಿರಬಹುದೇ ಎಂದು ಅವರಿಗೆ ಸಂದೇಹ.

ಗಾಬರಿಯಿಂದ ಟೀವಿ ಹಾಕಿ ನ್ಯೂಸ್ ಚ್ಯಾನೆಲ್ ಗಳನ್ನೂ ಬದಲಾಯಿಸುತ್ತ ನೋಡಿದರು. ಎಲ್ಲಾದರೂ ತಾನು ಉಂಗುರ ಕದ್ದ ವಿಷಯ ಬಂದಿರಬಹುದೇ ಎಂದು ಸಂಶಯದಿಂದ ಮತ್ತೆ ಮತ್ತೆ ಹಾಕಿ ನೋಡಿದರು. ಆದರೆ ಎಲ್ಲೂ ವಿಷಯದ ಪ್ರಸ್ತಾಪವೇ ಇಲ್ಲದಾಗ ಉಮಾಗೆ ಸ್ವಲ್ಪ ಸಮಾಧಾನವಾಯಿತು. ಮರುಕ್ಷಣವೇ ನಾಳಿನ ಪತ್ರಿಕೆಯಲ್ಲಿ ವಿಷಯ ಬಹಿರಂಗವಾದರೆ ಏನು ಮಾಡುವುದು ಎಂದು ಚಿಂತಾಕ್ರಾಂತರಾದರು. ಅವರಿಗೆ ಬದುಕುವುದೇ ಬೇಡವೆನಿಸಿತು. ಇದೆಲ್ಲ ನೋಡಲು ತಾನು ಬದುಕಿದ್ದರೆ ತಾನೇ, ಅದಕ್ಕಿಂತ ತಾನು ಸಾಯುವುದು ಒಳ್ಳೆಯದು ಎಂದು ಉಮಾಗೆ ಮನಸ್ಸಿಗೆ ಬಂದದ್ದೇ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು.

ಬದುಕು ಎಷ್ಟು ಚೆನ್ನಾಗಿ ನಡೆಯುತ್ತಿತ್ತು. ಯಾವುದೋ ವಿಷ ಘಳಿಗೆಯಲ್ಲಿ ತನ್ನ ಕೈಯಾರೆ ತಾನೇ ಬದುಕನ್ನು ಹಾಳು ಮಾಡಿಕೊಂಡೆ. ಆದರೆ ತಾನು ಆತ್ಮಹತ್ಯೆ ಮಾಡಿಕೊಂಡರೆ ತನ್ನ ಸಾವಿಗೆ ಬೇರೆ ಯಾವುದೇ ಕಾರಣಗಳಿಲ್ಲದೆ ಪೊಲೀಸರು ತನಿಖೆ ನಡೆಸಿ ತಾನು ಉಂಗುರ ಕದ್ದು ಅವಮಾನ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡೆ ಎಂದು ಸತ್ಯ ಬಯಲಾದರೆ ಏನು ಮಾಡುವುದು. ಸತ್ತ ಮೇಲೂ ತನ್ನ ಗಂಡ ಮಕ್ಕಳು ಊರಿನವರು ಎಲ್ಲರಿಗೂ ತಿಳಿದು ಬಿಡುತ್ತದೆ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಬಾರದು, ಆದರೆ ಬದುಕುವುದಾದರೂ ಹೇಗೆ, ತಾನು ಉಂಗುರ ಕದ್ದೆ ಎನ್ನುವುದು ಇನ್ನು ದಿನವೂ ಮನಸ್ಸಿಗೆ ಚುಚ್ಚುತ್ತಿರುತ್ತದೆ.

ತನ್ನ ಪಾಲಿಗೆ ಇವತ್ತು ಸಂಭ್ರಮದ ದಿನ, ಬೆಳಗ್ಗಿನಿಂದ ಅದೆಷ್ಟು ಸಂತೋಷವಾಗಿದ್ದೆ, ಯಾರ ಕೆಟ್ಟ ದೃಷ್ಟಿ ಬಿದ್ದಿತೋ ಏನೋ ಎಲ್ಲ ಹಾಳಾಗಿ ಹೋಯಿತು. ನಾಳಿನ ಪತ್ರಿಕೆಯಲ್ಲಿ ನಾನು ಉಂಗುರ ಕದ್ದ ವಿಷಯ ಬಂದರೆ ತಾನು ತಲೆ ಎತ್ತಿ ತಿರುಗಾಡಲಾದೀತೇ, ನನ್ನ ಮಕ್ಕಳು ನನ್ನ ಬಗ್ಗೆ ಏನು ತಿಳಿದುಕೊಂಡಾರು. ಅವರು ಊರಿನಲ್ಲಿ ತಲೆ ಎತ್ತಿ ತಿರುಗಾಡಲಾದೀತೇ, ಅದಕ್ಕಿಂತ ಹೆಚ್ಚಾಗಿ ಮಹೇಶ್ ಗೆ ಹೇಗಾದೀತು, ಅವರು ಎದೆ ಒಡೆದುಕೊಂಡು ಸತ್ತಾರು. ಇದನ್ನೆಲ್ಲಾ ಹೇಗೆ ಸರಿ ಮಾಡಲಿ ದೇವರೇ ಅಂಗಡಿಯವರು ನಾನು ಕದ್ದ ವಿಷಯ ಯಾರ ಬಳಿಯೂ ಹೇಳದಿರಲಿ ಎಂದು ಬೇಡಿಕೊಂಡರು.
ಅಡಿಗೆ ಮಾಡಲೂ ಅವರಿಗೆ ಆಸಕ್ತಿ ಉಳಿಯಲಿಲ್ಲ. ಒಂದು ಕ್ಷಣದಲ್ಲಿ ಏನೆಲ್ಲಾ ಆಗಿ ಹೋಯಿತು ಎಂದುಕೊಳ್ಳುತ್ತ ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು. ಅವಮಾನ, ಮಾನಸಿಕ ಕಿರಿಕಿರಿ ತಾಳಲಾರದೇ ಸಾಯುವುದೇ ಮೇಲು ಎಂದುಕೊಂಡು ಮನೆಯಲ್ಲಿ ಯಾವಾಗಲೋ ತಂದಿಟ್ಟ ನಿದ್ದೆ ಮಾತ್ರೆಗಳ ನೆನಪಾಗಿ ಬಾಟಲಿ ತೆರೆದರು. ಅದರಲ್ಲಿ ಎರಡು ಮಾತ್ರೆಗಳು ಮಾತ್ರ ಇದ್ದವು. ಅಷ್ಟಾದರೂ ಸಾಕು ಎಂದುಕೊಂಡು ಮಾತ್ರೆಗಳನ್ನು ನುಂಗಿಕೊಂಡು ಹಾಸಿಗೆಯ ಮೇಲೆ ಬಿದ್ದರು. ಕ್ಷಣ ಕಾಲ ಅವರ ಬದುಕೆಲ್ಲ ಒಂದು ಚಿತ್ರದಂತೆ ಅವರ ಸ್ಮ್ರತಿ ಪಟಲದ ಮುಂದೆ ಸುಳಿಯತೊಡಗಿತು. ಕ್ರಮೇಣ ಅವರು ನಿದ್ದೆಗೆ ಜಾರಿದರು.

ಮಕ್ಕಳಿಬ್ಬರೂ ಸಂಜೆ ಕಾಲೇಜು ಮುಗಿಸಿ ಪಾರ್ಟಿಗೆ ಬೇಕಾದ ಎಲ್ಲ ಸಾಮಾನುಗಳನ್ನು ಖರೀದಿಸಿ ಮನೆಗೆ ಬಂದಾಗ ಗಂಟೆ ಏಳಾಗಿತ್ತು. ಮನೆಯಲ್ಲಿ ಆವರಿಸಿದ ಕತ್ತಲು ನೋಡಿ ಮಕ್ಕಳಿಬ್ಬರಿಗೂ ಆತಂಕವಾಯಿತು. ಅಮ್ಮ ಎಲ್ಲಿ ಹೋದರು, ಮನೆಯಲ್ಲಿ ಯಾಕೆ ಇಷ್ಟೊಂದು ಕತ್ತಲಿದೆ. ಅಮ್ಮನೇ ಏನಾದರೂ ಸರ್ ಪ್ರೈಸ್ ಮಾಡಲು ಹೀಗೆ ಮಾಡಿರಬಹುದೇ ಎಂದುಕೊಳ್ಳುತ್ತ, ಮಮ್ಮಿ ಮಮ್ಮಿ ಎಂದು ಕರೆಯುತ್ತ ಹೊರಟರು. ಆದರೆ ಅವರ ಸುಳಿವೇ ಇಲ್ಲದ್ದು ಕಂಡು ತಾವೇ ಮನೆಯ ಎಲ್ಲ ಲೈಟು ಗಳನ್ನೂ ಉರಿಸಿ ಅಮ್ಮನ ರೂಮಿನತ್ತ ಧಾವಿಸಿದರು.
ಅಲ್ಲಿ ಉಮಾ ಅಂಗಾತವಾಗಿ ಮಲಗಿದ್ದರು. ಅದನ್ನು ನೋಡಿ ಬೆಚ್ಚಿ ಬಿದ್ದ ಮಕ್ಕಳು, ಮಮ್ಮಿ ಮಮ್ಮಿ ಎನ್ನುತ್ತ ಅವರನ್ನು ಅಲುಗಾಡಿಸಿ ಎಬ್ಬಿಸಲು ನೋಡಿದರು. ಆದರೆ ಉಮಾ ಎಚ್ಚರಗೊಳ್ಳಲಿಲ್ಲ. ಅದನ್ನು ನೋಡಿ ಭಯಭೀತರಾಗಿ ತಮ್ಮ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದರು. ಮಹೇಶ್ ಕೂಡಲೇ ಡಾಕ್ಟರ್ ಗೆ ಕರೆ ಮಾಡಿ ವಿಷಯ ತಿಳಿಸಿ ತಕ್ಷಣವೇ ಮನೆಗೆ ಹೋಗುವಂತೆ ತಿಳಿಸಿ ತಾವೂ ಮನೆಯತ್ತ ಧಾವಿಸಿದರು.

ಡಾಕ್ಟರ್ ಬಂದು ಪರೀಕ್ಷೆ ಮಾಡಿ ಅವರು ನಿದ್ದೆ ಮಾತ್ರೆ ತೆಗೆದುಕೊಂಡಿರುವುದರಿಂದ ಅವರಿಗೆ ಎಚ್ಚರವಾಗಿಲ್ಲ, ಮನೆಯಲ್ಲಿ ಏನಾದರೂ ಅವರ ಮನಸ್ಸಿಗೆ ನೋವಾಗುವ ಘಟನೆ ನಡೆಯಿತೇ ಎಂದು ಕೇಳಿದಾಗ ಎಲ್ಲರೂ, ಏನೂ ನಡೆದಿಲ್ಲ. ಬೆಳಗ್ಗಿನಿಂದಲೂ ಅವರು ಖುಷಿಯಾಗಿಯೇ ಇದ್ದರು ಎಂದರು. ಆದರೆ ಅವರಿಗೆಲ್ಲ ಉಮಾ ನಿದ್ದೆ ಮಾತ್ರೆ ಯಾವ ಕಾರಣಕ್ಕಾಗಿ ತೆಗೆದುಕೊಂಡರು ಎಂದು ಮಾತ್ರ ಅರಿವಾಗಲಿಲ್ಲ.
ವಿನ್ಯಾ ಅಮ್ಮನ ವ್ಯಾನಿಟಿ ಬ್ಯಾಗ್ ತೆರೆದು ಅಲ್ಲೇನಾದರೂ ಸುಳಿವು ಸಿಗುತ್ತದೋ ಎಂದು ನೋಡಿದಳು. ಆದರೆ ಅಲ್ಲಿ ಮೂರು ಉಂಗುರ ಒಂದು ಬ್ರೇಸ್ ಲೆಟ್ ಮತ್ತು ಅವುಗಳ ಬಿಲ್ ಬಿಟ್ಟರೆ ಬೇರೆ ಏನೂ ಸಿಗಲಿಲ್ಲ. ಡಾಕ್ಟರ್ ಉಮಾಗೆ ಇಂಜೆಕ್ಷನ್ ನೀಡಿ ನಾಳೆ ಬೆಳಿಗ್ಗೆ ಅವರಿಗೆ ಎಚ್ಚರವಾಗಬಹುದು. ಹಾಗೇನಾದರೂ ಆಗದಿದ್ದರೆ ತನಗೆ ತಿಳಿಸಿ ಎಂದು ಹೇಳಿ ಅಲ್ಲಿಂದ ಹೊರಟರು.

ಬೆಳಗ್ಗೆ ಉಮಾಗೆ ಎಚ್ಚರವಾದಾಗ ವಿಪರೀತ ತಲೆ ಸಿಡಿಯುತ್ತಿತ್ತು. ತಕ್ಷಣವೇ ಅವರಿಗೆ ತಾನು ಸಾಯಬೇಕೆಂದು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡರೂ ತಾನು ಸಾಯದೆ ಇದ್ದುದು ಕಂಡು ಅವರಿಗೆ ಆಶ್ಚರ್ಯವಾಯಿತು. ದೇವರೇ, ನಾನು ಅವಮಾನಗಳಿಂದ ತಪ್ಪಿಸಿಕೊಳ್ಳಲು ನೋಡಿದರೆ ನೀನು, ನಾನು ಅವಮಾನ ಅನುಭವಿಸಲೆಬೇಕೆಂದು ಹಟದಿಂದ ನನ್ನನ್ನು ಬದುಕಿಸಿದೆಯಾ ಎಂದು ನೊಂದುಕೊಳ್ಳುತ್ತ ಇವತ್ತಿನ ಪತ್ರಿಕೆಗಳಲ್ಲಿ ನಾನು ಉಂಗುರ ಕದ್ದ ವಿಷಯ ಬಂದಿರಬಹುದೇ ಎಂದುಕೊಂಡು ಗಾಬರಿಯಾಗಿ ಮುಂಬಾಗಿಲತ್ತ ಧಾವಿಸಿದರು. ಪತ್ರಿಕೆಯನ್ನು ಗಡಿಬಿಡಿಯಿಂದ ಬಿಡಿಸಿ ನೋಡಿದಾಗ ಎಲ್ಲೂ ತನ್ನ ವಿಷಯ ಬರದೆ ಇದ್ದಿದ್ದು ಕಂಡು ಒಂದು ಕ್ಷಣ ಮನಸ್ಸಿಗೆ ಸಮಾಧಾನವಾಯಿತು. ಮರುಗಳಿಗೆಯಲ್ಲಿ ಟೀವಿಯಲ್ಲಿ ಏನಾದರೂ ಬಂದಿರಬಹುದೇ ಎಂದು ನೋಡಲು ಅತ್ತ ಧಾವಿಸಿದರು. ಟೀವಿಯಲ್ಲೂ ಎಲ್ಲೂ ಕಳ್ಳತನದ ವಿಷಯ ಬರಲೇ ಇಲ್ಲ, ಅಬ್ಬಾ, ತಾನು ಬಚಾವಾದೆ. ಇನ್ನು ಯಾವತ್ತಿಗೂ ಆ ಚಿನ್ನದ ಅಂಗಡಿಯತ್ತ ಕಾಲಿಡುವುದಿಲ್ಲ ಎಂದುಕೊಂಡರು.

ಮಹೇಶರಿಗೆ ಎಚ್ಚರವಾಗಿ ಉಮಾಳ ನೆನಪಾಗಿ ಗಡಿಬಿಡಿಯಿಂದ ಎದ್ದು ನೋಡಿದಾಗ ಉಮಾ ಆರೋಗ್ಯವಾಗಿ ಇರುವುದನ್ನು ನೋಡಿ ಸಮಾಧಾನ ಪಟ್ಟುಕೊಂಡರು. ಮಹೇಶ್ ಆಕೆಗೆ ನಿದ್ದೆ ಮಾತ್ರೆ ಏಕೆ ತೆಗೆದುಕೊಂಡೆ ಎಂದು ಕೇಳಿದಾಗ ಉಮಾಳಿಗೆ ಏನು ಹೇಳಬೇಕೆಂದು ತೋಚದೆ ತಡಬಡಾಯಿಸಿದರು. ಇವರಿಗೆ ಹೇಗೆ ಗೊತ್ತಾಯಿತು ತಾನು ನಿದ್ದೆ ಮಾತ್ರೆ ತೆಗೆದುಕೊಂಡದ್ದು ಎಂದು ಆಶ್ಚರ್ಯವೂ ಆಯಿತು.
ಅವರ ಮನಸ್ಸನ್ನು ಅರಿತವರಂತೆ ಮಹೇಶ್, ನಿನ್ನೆ ಉಮಾ ಮೈ ಮೇಲೆ ಎಚ್ಚರವಿಲ್ಲದವರಂತೆ ಮಲಗಿದಾಗ ಗಾಬರಿಯಾಗಿ ಡಾಕ್ಟರ್ ನ್ನು ಕರೆಸಿದ್ದ ವಿಷಯ ಹೇಳಿದರು. ನಂತರ, ನೀನು ನಿದ್ದೆ ಮಾತ್ರೆ ಯಾಕೆ ತೆಗೆದುಕೊಂಡೆ ಎಂದೂ ನನಗೆ ಗೊತ್ತು ಎಂದಾಗ ಉಮಾ ಮುಖ ಕಪ್ಪಿಟ್ಟಿತು.

ಚಿನ್ನದ ಅಂಗಡಿಯವ ಇವರಿಗೆ ವಿಷಯ ಹೇಳಿರಬಹುದೇ ಎಂದುಕೊಂಡು ಕಳವಳ ಪಡುತ್ತಿರುವಾಗ ಮಹೇಶ್, “ನಾನು ನಮ್ಮ ಸಿಲ್ವರ್ ಜ್ಯುಬಿಲಿ ದಿನ ನಿನ್ನ ಜೊತೆ ಇರಲಿಲ್ಲ ಅಂತ ಬೇಜಾರು ಮಾಡ್ಕೊಂಡೆ ಅಲ್ವಾ. ಬೆಳಗ್ಗೆ ನಿನ್ನ ಮುಖ ನೋಡಿದಾಗಲೇ ನನಗೆ ಅನ್ನಿಸ್ತು. ಆದರೆ ನೀನು ಇಷ್ಟೊಂದು ಬೇಜಾರು ಮಾಡಿಕೊಂಡಿದ್ದೀಯಾ ಅಂತ ತಿಳಿದಿರಲಿಲ್ಲ, ಸಾರಿ ಕಣೆ” ಎಂದು ಅವರನ್ನು ಅಪ್ಪಿಕೊಂಡಾಗ ಉಮಾಗೆ, ಚಿನ್ನದ ಅಂಗಡಿಯವ ವಿಷಯ ಯಾರಿಗೂ ಹೇಳಿಲ್ಲವೆಂದಾಯಿತು ಎಂದುಕೊಂಡು ನಿರಾಳವಾದರು.

ಮಕ್ಕಳು ಎಚ್ಚರಗೊಳ್ಳುತ್ತಲೇ ತಾಯಿಯನ್ನು ನೋಡಲು ಬೇಗನೆ ಎದ್ದು ಧಾವಿಸಿದರು. ತಾಯಿ ಎಚ್ಚರವಾಗಿರುವುದನ್ನು ನೋಡಿ ಅವರಿಗೂ ಸಮಾಧಾನವಾಯಿತು. ವಿನ್ಯಾ ಅಮ್ಮನಲ್ಲಿ ಹುರುಪು ಮೂಡಿಸಲು ಅಮ್ಮನ ವ್ಯಾನಿಟಿ ಬ್ಯಾಗ್ ತೆಗೆದಾಗ ಉಮಾ ಬಿಳಿಚಿಕೊಂಡರು. ಅವಳು ಆ ಉಂಗುರ ಯಾರಿಗಾಗಿ ತಂದಿದ್ದು ಎಂದು ಕೇಳಿದರೆ ಎಂದು ಹೆದರಿದರು. ವಿನ್ಯಾ, ಉಂಗುರ ಹಾಗೂ ಬ್ರೇಸ್ ಲೆಟ್ ಗಳನ್ನು ಹೊರತೆಗೆದು, ಮಮ್ಮೀ, ಈ ಎರಡು ವಜ್ರದುಂಗುರ ನಿಮಗೆ ಮತ್ತು ಡ್ಯಾಡಿಗೆ, ಈ ಬ್ರೇಸ್ ಲೆಟ್ ನನಗೆ ಮತ್ತೆ ಈ ನವರತ್ನದ ಉಂಗುರ …ಅಣ್ಣನಿಗೆ ಅಲ್ವಾ ಮಮ್ಮಿ ಎಂದಾಗ ಉಮಾ ನಿಟ್ಟುಸಿರುಬಿಟ್ಟರು.