ಭಾಗ – 7

ಪೋಲೀಸರ ತೀವ್ರ ವಿಚಾರಣೆಯಿಂದಾಗಿ ಹೆಣ್ಣು ಮಕ್ಕಳ ಮೇಲೆ ತಾನೇ ಚೇಳು ಹಾಕುತ್ತಿದ್ದೆ ಎಂದು ಒಪ್ಪಿಕೊಂಡ ಆತ ಪೊಲೀಸರು, ಯಾಕೆ ಹಾಗೇ ಮಾಡುತ್ತಿದ್ದೆ ಆ ಹೆಣ್ಣು ಮಕ್ಕಳು ಏನು ಮಾಡಿದ್ದರು ನಿಂಗೆ ಎಂದಾಗ ಕುತೂಹಲಕಾರಿ ಸಂಗತಿಯೊಂದು ಆತನ ಬಾಯಿಯಿಂದ ಹೊರಬಂದಿತು. ಎಲ್ಲ ಯುವಕರಂತೆ ಆತನೂ ಸಹಜವಾಗಿ ಸುಂದರವಾಗಿ ಇದ್ದ. ಆತನ ಹೆಸರು ಸೌರಭ್, ವ್ರತ್ತಿಯಲ್ಲಿ ಇಂಜಿನೀಯರ್ ಆಗಿ ಪ್ರಖ್ಯಾತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಗೀತಾ ಎಂಬ ಗೆಳತಿಯೊಬ್ಬಳಿದ್ದಳು, ಅವಳನ್ನು ಆತ ಬಹಳ ಪ್ರೀತಿಸುತ್ತಿದ್ದ. ಅವಳೂ ಅವನನ್ನು ಬಹಳ ಹಚ್ಚಿಕೊಂಡಿದ್ದಳು. ಅವಳಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಬೇಕೆಂದು ಸೌರಭ್ ಕಾತರದಿಂದ ಕಾಯುತ್ತಿದ್ದ ಆದರೆ ಅವಳೆಲ್ಲಿ ನಿರಾಕರಿಸಿ ಬಿಡುತ್ತಾಳೋ ಎಂಬ ಭಯದಿಂದ ಅವನಿಗೆ ಧೈರ್ಯ ಸಾಲುತ್ತಿರಲಿಲ್ಲ. ಊರಿನಲ್ಲಿದ್ದ ತಂದೆತಾಯಿ ಆದಷ್ಟೂ ಬೇಗ ಅವನ ಮದುವೆ ಮಾಡಲು ಕಾತರರಾಗಿದ್ದರು.

ಹಾಗಾಗಿ ಸೌರಭ್ ತನ್ನ ಹುಟ್ಟಿದ ಹಬ್ಬದ ದಿನದಂದು ಗೀತಾಗೆ ತನ್ನ ಮನೆಗೆ ಬರುವಂತೆ ತಿಳಿಸಿದ್ದ. ಆ ದಿನ ಅವಳಿಗೆ ತನ್ನ ಪ್ರೇಮವನ್ನು ಹೇಳಿಕೊಂಡು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಬೇಕೆಂದು ನಿರ್ಧರಿಸಿದ. ಸೌರಭ್ ಅವಳಿಗೋಸ್ಕರ ತಾನೇ ಅಡಿಗೆ ಮಾಡಿ ಅವಳನ್ನು ಸಂತೋಷ ಪಡಿಸಬೇಕೆಂಬ ಆಸೆಯಿಂದ ಅಡಿಗೆ ಪ್ರಾರಂಭಿಸಿದ. ಅಡಿಗೆ ಮುಗಿದು ಒಗ್ಗರಣೆಗೆ ಬಾಣಲಿಯಲ್ಲಿ ಎಣ್ಣೆ ಹಾಕುವಾಗಲೇ ಕಾಲಿಂಗ್ ಬೆಲ್ ಸದ್ದಾಯಿತು, ಗೀತಾ ಬಂದಿರಬಹುದೆಂದು ಆತ ಬಾಗಿಲತ್ತ ಧಾವಿಸಿದ, ನೋಡಿದರೆ ಅವನು ಅಂದುಕೊಂಡ ಹಾಗೇ ಗೀತಾ ಅಲ್ಲಿ ನಿಂತಿದ್ದಳು. ಗೀತಾ ಎಂದಿಗಿಂತಲೂ ಬಹಳ ಸುಂದರವಾಗಿ ಕಂಡಳು. ಅವಳನ್ನು ಸಂತಸದಿಂದ ಬರಮಾಡಿಕೊಂಡು ಕುಳ್ಳಿರಿಸಿ ಸಂಭ್ರಮದಿಂದ ತಾನು ಈಗಲೇ ಬರುತ್ತೇನೆಂದು ಅಡಿಗೆ ಮನೆಗೆ ಧಾವಿಸಿದ.

ಅಲ್ಲಿ ಎಣ್ಣೆ ಕಾದು ಹಬೆ ಏಳುತ್ತಿತ್ತು. ತಕ್ಷಣ ಒಗ್ಗರಣೆ ಹಾಕಲು ಬಗ್ಗಿದಾಗ ಇದ್ದಕಿದ್ದಂತೆ ಎಣ್ಣೆಗೆ ಬೆಂಕಿ ಹತ್ತಿಕೊಂಡು ಅವನ ಬಲಬದಿಯ ಕೆನ್ನೆಯನ್ನೆಲ್ಲ ಸುಟ್ಟು ಬಿಟ್ಟಿತು. ಅವನು ಚೀರುತ್ತಾ ನೋವು ತಾಳಲಾರದೆ ಒದ್ದಾಡುತ್ತಿದುದನ್ನು ಕಂಡ ಅವನ ಗೀತಾ ಧಾವಿಸಿ ಬಂದು ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಬೆಂಕಿಯಿಂದಾಗಿ ಅವನ ಮುಖ ವಿರೂಪಗೊಂಡಿತ್ತು. ಅದನ್ನು ನೋಡಲಾಗದೆ ದುಃಖ ಪಡುತ್ತ ಗೀತಾ ಅವನಿಗೆ ಚಿಕಿತ್ಸೆ ಮಾಡಿಸಿ ಮನೆಗೆ ಕರೆದುಕೊಂಡು ಬಂದುಬಿಟ್ಟು ತನ್ನ ಮನೆಗೆ ಹೋದವಳು ಮತ್ತೆ ಅವನತ್ತ ತಿರುಗಿಯೂ ನೋಡಲಿಲ್ಲ. ಅವನು ಹೇಗಿದ್ದಾನೆಂದು ನೋಡಲೂ ಬರಲಿಲ್ಲ ವಿಚಾರಿಸಲೂ ಇಲ್ಲ. ಇದರಿಂದ ತೀವ್ರವಾಗಿ ಆತಂಕಗೊಂಡ ಸೌರಭ್ ಅವಳ ಜೊತೆ ಮಾತನಾಡಲು ಮಾಡದ ಪ್ರಯತ್ನಗಳಿರಲಿಲ್ಲ. ತನ್ನ ಸುಟ್ಟ ಮುಖವನ್ನೂ ಲೆಕ್ಕಿಸದೆ ಅವಳ ಮನೆಗೆ ಅಲೆದಾಡಿದ ಆದರೆ ಅವಳು ಯಾವಾಗಲೂ ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳುತ್ತಿದ್ದಳು.

ಕೊನೆಗೆ ಒಂದು ದಿನ ಗೀತಾ ಅವನ ಕಾಟ ತಡೆಯಲಾಗದೆ ಇದಕ್ಕೆಲ್ಲ ಒಂದು ಕೊನೆ ಕಾಣಿಸಬೇಕೆಂದು ಒಂದು ನಿರ್ಧಾರಕ್ಕೆ ಬಂದು ಅವನಿಗೆ ಫೋನ್ ಮಾಡಿ, ಇನ್ನು ಮುಂದೆ ತನ್ನನ್ನು ಹೀಗೆ ಕಾಡಿಸಬೇಡ, ನನಗೆ ನಿನ್ನ ಭಯಾನಕ ಮುಖ ನೋಡುವಾಗ ಹೆದರಿಕೆಯಲ್ಲದೆ ಬೇರೆ ಯಾವ ಭಾವನೆಗಳೂ ಮೂಡುವುದಿಲ್ಲ. ಹಾಗಿರುವಾಗ ನಿನ್ನ ಜೊತೆ ಜೀವನ ಪರ್ಯಂತ ಇರಲು ಹೇಗೆ ಸಾಧ್ಯ ಎಂದವಳೇ ಅವನ ಮಾತಿಗೆ ಕಾಯದೆ ಫೋನ್ ನಲ್ಲಿದ್ದ ಸಿಮ್ ತೆಗೆದು ಬಿಸಾಕಿ ಆ ಊರನ್ನೇ ಬಿಟ್ಟು ಹೊರಟು ಹೋದಳು. ಅವನ ಮನಸ್ಸಿಗೆ ತಡೆಯಲಸಾಧ್ಯ ನೋವಾಯಿತು. ಮತ್ತೆ ಅವಳ ಫೋನ್ ಗೆ ಪ್ರಯತ್ನಿಸಿದಾಗ ಸಾಧ್ಯವಾಗದೆ ಅವಳ ಮನೆಯತ್ತ ಧಾವಿಸಿದ. ಆದರೆ ಮನೆಗೆ ಬೀಗ ಹಾಕಿತ್ತು, ಅವಳನ್ನು ಹುಡುಕುತ್ತ ಹುಚ್ಚನಂತೆ ಬೀದಿ ಬೀದಿ ಅಲೆದಾಡಿದ. ಕೊನೆಗೆ ಅವಳು ಊರನ್ನೇ ತೊರೆದು ಹೋದ ವಿಷಯ ತಿಳಿದಾಗ ತೀರಾ ದುಃಖ ಪಟ್ಟ. ತಾನು ಇಷ್ಟೊಂದು ಅವಳನ್ನು ಪ್ರೀತಿಸಿ ಅವಳಿಗಾಗಿ ಅಡಿಗೆ ಮಾಡಲು ಹೋಗಿ ತನ್ನ ಮುಖವನ್ನೇ ವಿರೂಪ ಮಾಡಿಕೊಂಡೆ. ಆದರೆ ಆಕೆ ಬರೀ ಬಾಹ್ಯ ಸೌದರ್ಯಕ್ಕೆ ಒತ್ತುಕೊಟ್ಟು ತನ್ನನ್ನು ನಿರಾಕರಿಸಿದಳಲ್ಲ ಎಂದು ಅವಳ ಮೇಲೆ ರೋಷ ಉಕ್ಕಿತು.

ಮುಖದ ಮೇಲಿನ ಸುಟ್ಟ ಗಾಯದ ನೋವಿಗಿಂತ ಅವಳು ಕೊಟ್ಟ ಮನಸ್ಸಿನ ನೋವು ಸಹಿಸಲಾಗದೆ ಅವನಿಗೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸಾಗಲಿಲ್ಲ. ಅದರನಂತರ ಅವನು ತನ್ನ ಬಾಸ್ ನನ್ನು ಭೇಟಿಯಾಗಿ ತನ್ನ ಪರಿಸ್ಥಿತಿ ತಿಳಿಸಿ ತಾನು ಮನೆಯಿಂದಲೇ ಕೆಲಸ ಮಾಡುವುದಾಗಿ ತಿಳಿಸಿದಾಗ ಬಾಸ್ ಗೆ ಅವನ ಮನಸ್ಥಿತಿಯ ಅರಿವಾಗಿ ಸಹಾನುಭೂತಿಯಿಂದ ಒಪ್ಪಿಗೆ ಕೊಟ್ಟ ಮೇಲೆ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತ ತನ್ನ ನೋವನ್ನು ಮರೆಯಲು ಯತ್ನಿಸಿದ.  ಮನೆಗೆ ಬೇಕಾದ ಸಾಮಾನುಗಳನ್ನು  ಆದಷ್ಟೂ ಫೋನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಲು ನೋಡುತ್ತಾ ಹೊರಗೆ ಕಾಲಿಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಆದರೆ ಯಾವಾಗಲೊಮ್ಮೆ ಅನಿವಾರ್ಯವಾಗಿ ಹೊರಗೆ ಹೋಗಬೇಕಾಗಿ ಬಂದಾಗ ಅವನ ಮುಖ ಕಂಡ ಯುವತಿಯರು ಮುಖ ತಿರುವಿಕೊಳ್ಳುತ್ತಿದ್ದುದನ್ನು ಕಂಡ ಸೌರಭ್ ಗೆ ಗೀತಾಳ ನೆನಪಾಗಿ ಅವರ ಮೇಲೆ ರೋಷ ಉಕ್ಕಿ ತನಗಾದ ನೋವು ಅವರೂ ಅನುಭವಿಸಬೇಕೆಂಬ ರೋಷದಿಂದ ನಿರ್ಧರಿಸಿ ಕೊನೆಗೆ ಅವರ ಮೇಲೆ ಚೇಳು ಹಾಕುವ ನಿರ್ಧಾರ ಕೈ ಗೊಂಡ. ಯಾರೆಲ್ಲ ತನ್ನ ಮುಖ ನೋಡಿ ಕಿವಿಚಿ ಕೊಳ್ಳುತ್ತಾರೋ ಅವರನ್ನು ಹಿಂಬಾಲಿಸಿ ಅವರ ದಿನಚರಿ ನೋಡಿ ನಂತರ ಸಮಯ ಸಾಧಿಸಿ ಅವರನ್ನು ಹಿಂಬಾಲಿಸಿ ತನ್ನ ಪರಿಚಯವಾಗದಂತೆ ಮುಖಕ್ಕೆ ಮೀಸೆ ಗಡ್ಡ ಅಂಟಿಸಿ ಬಗೆ ಬಗೆಯ ಟೋಪಿ ಧರಿಸಿ ಅವರ ಮೇಲೆ ಚೇಳು ಹಾಕಿ ಅವರು ಒದ್ದಾಡುವುದನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಆದರೆ ಅವನಿಗೆ ಅವರನ್ನೆಲ್ಲ ಕೊಲ್ಲುವ ಉದ್ದೇಶವಿಲ್ಲದಿದ್ದರೂ ಆ ಹುಡುಗಿಯರು ಸತ್ತಾಗ ಮಾತ್ರ ಅವನಿಗೆ ವಿಲಕ್ಷಣ ಆನಂದವಾಗಿತ್ತು. ಹಾಗಾಗಿ ಅದನ್ನು ಮುಂದುವರೆಸಿಕೊಂಡು ಬಂದಿದ್ದ. ಅವನ ವಿಚಿತ್ರ ಕಥೆಯನ್ನು ಕೇಳಿ ಪೊಲೀಸರು ದಂಗಾದರು. ಮಾಧ್ಯಮಗಳಲ್ಲಿ ಚೇಳು ಹಾಕಿ ಹೆಣ್ಣು ಮಕ್ಕಳಲ್ಲಿ ಭೀತಿಯನ್ನು ಹುಟ್ಟಿಸಿದವನ ಹುಟ್ಟಡಗಿಸಿ ಅವನನ್ನು ಸೆರೆ ಹಿಡಿದ ವಿಷಯ ಪ್ರಸಾರವಾದಾಗ ಹೆಣ್ಣುಮಕ್ಕಳೆಲ್ಲ ನಿಟ್ಟುಸಿರು ಬಿಟ್ಟರು.

(ಮುಗಿಯಿತು).

ಭಾಗ – 6

ಪೊಲೀಸರು ತಮ್ಮ ಶಕ್ತಿ ಮೀರಿ ಊರೆಲ್ಲ ಜಾಲಾಡಿದರೂ ಆರೋಪಿಯ ಸುಳಿವೂ ಕೂಡ ಸಿಗಲಿಲ್ಲ. ಅವನ ಮುಖ ಚಹರೆಯ ರೇಖಾ ಚಿತ್ರವನ್ನು ಅಲ್ಲಲ್ಲಿ ಹಾಕಿ ಆತನನ್ನು ಯಾರಾದರೂ ನೋಡಿದ್ದಲ್ಲಿ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿಕೊಂಡರೂ ಪರಿಣಾಮ ಮಾತ್ರ ಶೂನ್ಯ.  ಯಾವುದೇ ಸುಳಿವು ಸಿಗದೆ ಇದರಲ್ಲಿ ಮುಂದೆ ಹೋಗುವುದು ಹೇಗೆ ಎಂದು ಪೊಲೀಸರಿಗೆ ತಿಳಿಯಲಿಲ್ಲ.  ಆತ ಚೇಳುಗಳನ್ನು ಎಲ್ಲಿಂದ ತರುತ್ತಿರಬಹುದು, ಅವನು ಒಬ್ಬನೇ ಇದ್ದಾನೆಯೇ ಅಥವಾ ಆತ  ತನ್ನ ಸಹಚರರೊಂದಿಗೆ ಸೇರಿ ಇದೆಲ್ಲ ಮಾಡುತ್ತಿದ್ದಾನೆಯೇ, ಸಿಖ್ ಟೋಪಿಧಾರಿ  ಮತ್ತು ಥಿಯೇಟರ್ ನಲ್ಲಿದ್ದ ವ್ಯಕ್ತಿ ಒಬ್ಬನೆಯೇ ಅಥವಾ ಬೇರೆ ಬೇರೆಯೇ, ಮುಂದಿನ  ಬಾರಿ ಆತ ಚೇಳು ಹಾಕುವಾಗಲೇ ಆತನನ್ನು ಹಿಡಿಯಬೇಕು ಅನ್ಯ ಮಾರ್ಗವೇ ಇಲ್ಲ ಎಂದು ನಿರ್ಧರಿಸಿ ಯಾರಿಗಾದರೂ ಮೈ ಮೇಲೆ ಚೇಳು ಬಿದ್ದರೆ ಅಪರಾಧಿಯನ್ನು ಜನರೆಲ್ಲ ಸೇರಿ ಹಿಡಿದು ಪೋಲೀಸ್ ವಶಕ್ಕೆ ಕೊಡಬೇಕೆಂದೂ ಹೆಣ್ಣುಮಕ್ಕಳು ವಿಶೇಷವಾಗಿ ಈ ಬಗ್ಗೆ ಗಮನ ಹರಿಸಬೇಕೆಂದೂ ಪೊಲೀಸರು ವಿನಂತಿ ಮಾಡಿಕೊಂಡರು. ಆದರೆ ಅಪರಾಧಿ ಇದರಿಂದ ಎಚ್ಚೆತ್ತು ಕೊಂಡನೇನೋ ಅನ್ನುವಂತೆ ಅಂತಹ ಘಟನೆಗಳು ಆಮೇಲೆ ನಡೆಯಲಿಲ್ಲ.

ಮುಂದೆ ದಾರಿ ಕಾಣದೆ ಪೋಲೀಸ್ ಇಲಾಖೆಯೇ ಕೈ ಚೆಲ್ಲಿ ಕುಳಿತಾಗ ಒಂದು ದಿನ ಫ್ಯಾನ್ ರಿಪೇರಿಯ ಅಂಗಡಿಯ ಯುವಕನಿಗೆ ಫ್ಯಾನ್ ರಿಪೇರಿಗೆ ಬರಲು ಒಂದು ಮನೆಯ ಮಾಲೀಕರಿಂದ ಕರೆ ಬಂದಿತು. ಯುವಕ ಆ ಮನೆಗೆ ಹೋದಾಗ ಒಬ್ಬ ಭಯಾನಕ ಮುಖದ ವ್ಯಕ್ತಿ ಬಾಗಿಲು ತೆರೆದ. ಆ ವ್ಯಕ್ತಿಯ ಒಂದು ಪಾರ್ಶ್ವ ಸುಂದರವಾಗಿ ಸಹಜವಾಗಿ ಇದ್ದರೆ ಇನ್ನೊಂದು ಪಾರ್ಶ್ವದ ಒಂದು ಹುಬ್ಬು ಇರಲಿಲ್ಲ, ಕೆನ್ನೆಯ ಚರ್ಮ ಸುಟ್ಟು ಮುದ್ದೆಯಾಗಿ ನೆರಿಗೆಗಟ್ಟಿದಂತೆ ಇದ್ದು ವಿರೂಪವಾಗಿತ್ತು. ಒಮ್ಮೆಲೇ ನೋಡಿದಾಗ ಯಾರಾದರೂ ಬೆಚ್ಚಿ ಬೀಳಬೇಕು ಹಾಗಿತ್ತು ಅವನ ರೂಪ. ಆತನನ್ನು ಕಂಡು ಈ ಯುವಕ ಒಂದು ಕ್ಷಣ ಬೆಚ್ಚಿ ಬಿದ್ದನಾದರೂ ಅವನಿಗೆ ತಾನು ಭಯ ಪಟ್ಟವನಂತೆ ವರ್ತಿಸಿದರೆ ಬೇಜಾರಾಗಬಹುದು ಪಾಪ ಅವನ ಬಾಳಲ್ಲಿ ಏನು ದುರಂತ ನಡೆದಿದೆಯೋ ಏನೋ, ಆತ ನೋಡಲು ಹೇಗಿದ್ದರೆ ತನಗೇನು ತಾನು ಬಂದಿರುವ ಕೆಲಸ ಮಾಡಿ ಹೋಗುವುದಷ್ಟೇ ತನ್ನ ಕೆಲಸ ಎಂದುಕೊಂಡು ಮಾತಿಲ್ಲದೆ ಆ ವ್ಯಕ್ತಿಯ ಹಿಂದೆ ಹೊರಟ.

ಮಲಗುವ ರೂಮಿನಲ್ಲಿ ಫ್ಯಾನ್ ಕೆಲಸ ಮಾಡುತ್ತಿಲ್ಲ ಎಂದು ಆ  ವ್ಯಕ್ತಿ ಹೇಳಿದಾಗ ಆತನನ್ನು ಹಿಂಬಾಲಿಸಿ ರೂಮಿಗೆ ಹೋಗಿ ಫ್ಯಾನ್ ರಿಪೇರಿ ಕೆಲಸದಲ್ಲಿ ತೊಡಗಿದ. ಆ ವ್ಯಕ್ತಿ ಈತನನ್ನು ಕೆಲಸ ಮಾಡಲು ಬಿಟ್ಟು ತನ್ನ ಪಾಡಿಗೆ ತಾನು ಹೊರಟು ಹೋದ. ಯುವಕ ಫ್ಯಾನ್ ಸಂಪೂರ್ಣವಾಗಿ ಬಿಚ್ಚಿ ಅದನ್ನು ಸರಿ ಮಾಡುವಷ್ಟರ ಹೊತ್ತಿಗೆ ಅವನಿಗೆ ಸುಸ್ತಾಗಿ ಬಾಯಾರಿಕೆಯಾಯಿತು. ನೀರು ಕೇಳೋಣವೆಂದು ಹೊರಗೆ ಬಂದರೆ ಯಾರೂ ಕಾಣಲಿಲ್ಲ. ಸರ್ ಎಂದು ಕರೆದರೂ ಆತ ಬರಲಿಲ್ಲವಾದ್ದರಿಂದ ಸೆಖೆಗೆ ಬಾಯಾರಿಕೆ ತಡೆಯಲಾಗದೆ ಆ ಯುವಕ ಅಡಿಗೆಮನೆಯನ್ನು ಹುಡುಕಿಕೊಂಡು ಹೊರಟ.

ಅಲ್ಲಿದ್ದ ನೀರಿನ ಜಗ್ ಎತ್ತಿಕೊಂಡು ಒಂದು ಲೋಟಕ್ಕೆ ನೀರು ಹಾಕಿ ಕುಡಿಯಲು ತಲೆ ಎತ್ತಿದಾಗ ಅವನಿಗೆ ಒಂದು ವಿಚಿತ್ರ ಕಂಡಿತು. ಅಡಿಗೆ ಮನೆಯ ಅಟ್ಟದ ಮೇಲೆ ಸಾಲಾಗಿ ಗಾಜಿನ ಬಾಟಲಿಗಳನ್ನು ಜೋಡಿಸಲಾಗಿತ್ತು. ಅದರ ತುಂಬಾ ಜೀವಂತ ಚೇಳುಗಳು ಹರಿದಾಡುತ್ತಾ ಇದ್ದವು!! ಯುವಕನಿಗೆ ಭಯವಾಗಿ ಸುತ್ತ ನೋಡಿದಾಗ ಅಡಿಗೆ ಮನೆಯ ಒಂದು ಮೂಲೆಯಲ್ಲಿ ವಿವಿಧ ಬಗೆಯ ಟೋಪಿಗಳನ್ನು ನೇತು ಹಾಕಲಾಗಿತ್ತು. ಅದನ್ನೆಲ್ಲ ನೋಡಿ ಯುವಕನಿಗೆ ಹೆಣ್ಣು ಮಕ್ಕಳ ಮೇಲೆ ಚೇಳು ಬಿದ್ದಿದ್ದು  ಇಬ್ಬರು ಯುವತಿಯರು ಸತ್ತಿದ್ದು, ಅವನನ್ನು ಹಿಡಿಯಲು ಪೊಲೀಸರು ಪರದಾಡುತ್ತಿದ್ದುದು ಎಲ್ಲವೂ ನೆನಪಾಗಿ ಕುಡಿದ ನೀರು ನೆತ್ತಿಗೇರಿದಂತಾಗಿ ಯುವಕ ಒಮ್ಮೆಲೇ ಕೆಮ್ಮಲು ಶುರು ಮಾಡಿದ.

ಅವನ ಕೆಮ್ಮಿನ ಶಬ್ದ ಕೇಳಿ ಆ ವಿರೂಪ ಮುಖದ ವ್ಯಕ್ತಿ ಧಾವಿಸಿ ಬಂದ. ಯುವಕ ಆತನನ್ನು ನೋಡುತ್ತಲೇ ತೀರಾ ಗಾಬರಿಗೊಂಡು ಆತನನ್ನು ನೂಕಿ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿದ. ಆ ಭಯಾನಕ ವ್ಯಕ್ತಿ ಆತನನ್ನು ಹಿಂಬಾಲಿಸಿ ಅವನ ಹಿಂದೆ ಓಡತೊಡಗಿದ. ಆ ಯುವಕ ಇನ್ನಷ್ಟು ಗಾಬರಿಗೊಂಡು ದಾರಿಹೋಕರಿಗೆ ಕೊಲೆಗಡುಕ ಬರ್ತಿದ್ದಾನೆ ಅವನನ್ನು ಹಿಡೀರಿ ಎಂದು ಕಿರಿಚಲು ಶುರು ಮಾಡಿದ. ಇದನ್ನು ಕೇಳಿ ಆ ವ್ಯಕ್ತಿ ಆ ಯುವಕನನ್ನು ಹಿಂಬಾಲಿಸುವುದನ್ನು ಬಿಟ್ಟು ಮನೆಯ ಕಡೆಗೇ ಓಡತೊಡಗಿದ. ಆದರೆ ಅಷ್ಟರಲ್ಲಿ ಸೇರಿದ ಜನ ಅವನನ್ನು ಕಷ್ಟ ಪಟ್ಟು ಹಿಡಿದು ಬಿಟ್ಟರು. ಅದನ್ನು ನೋಡಿದ ಯುವಕನಿಗೆ ಸ್ವಲ್ಪ ಧೈರ್ಯ ಬಂದಂತಾಗಿ ಓಡುವುದನ್ನು ಬಿಟ್ಟು ತನ್ನ ಫೋನ್ ತೆಗೆದು ಪೊಲೀಸರಿಗೆ ಫೋನ್ ಮಾಡಿದ. ಪೊಲೀಸರು ತಕ್ಷಣವೇ ಧಾವಿಸಿ ಬಂದಾಗ ಆತನನ್ನು ಹಿಡಿದ ಜನರ ಗಮನ ಅತ್ತ ಸರಿಯುತ್ತಲೇ ಸಮಯ ಸಾಧಿಸಿ ಆ ವಿರೂಪ ಮುಖದ ವ್ಯಕ್ತಿ ಅವರಿಂದ ಅದು ಹೇಗೂ ತಪ್ಪಿಸಿಕೊಂಡು ಓಡತೊಡಗಿದ.

ಪೊಲೀಸರು ಅವನ ಹಿಂದೆ ಓಡತೊಡಗಿದರು. ಜನರು ಅವರಿಗೆ ಸಹಾಯ ಮಾಡಲು ಧಾವಿಸಿ ಅವರೂ ಆತನನ್ನು ಹಿಂಬಾಲಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಕೊನೆಗೂ ಆತನನ್ನು ಪೊಲೀಸರಿಗೆ ಹಿಡಿದು ಕೊಡುವಲ್ಲಿ ಯಶಸ್ವಿಯಾದರು. ಇಡೀ ಪ್ರಕರಣ ಸಿನೀಮಿಯ ರೀತಿಯಲ್ಲಿ ನಡೆದು ಕೊನೆಗೂ ಅಪರಾಧಿ ಕೈಗೆ ಸಿಕ್ಕಾಗ ಪೊಲೀಸರು ನಿಟ್ಟುಸಿರು ಬಿಟ್ಟರು. ಎಲ್ಲರಿಗೂ ಒಂದೇ ಕುತೂಹಲವಿತ್ತು, ಯಾಕಾಗಿ ಅವನು ಹೆಣ್ಣು ಮಕ್ಕಳ ಮೇಲೆ ಚೇಳು ಹಾಕುತ್ತಿದ್ದ, ಅದರಿಂದ ಅವನಿಗಾದ ಲಾಭವಾದರೂ ಏನು ಎಂದು. ಪೊಲೀಸರು ಆತನನ್ನು ಸ್ಟೇಷನ್ ಗೆ ಎಳೆದೊಯ್ದು  ವಿಚಾರಣೆಗೆ ಒಳಪಡಿಸಿದಾಗ ಎಲ್ಲವೂ ಬಯಲಿಗೆ ಬಂದಿತು.

(ಮುಂದುವರಿಯುವುದು)

ಭಾಗ – 4

ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದುವರೆ ಗಂಟೆಯಾಗಿರಬಹುದು. ಶಾಲಾ ಕಾಲೇಜುಗಳಿಗೆ ಮಧ್ಯಾಹ್ನ ರಜೆಯಾಗಿದ್ದುದರಿಂದ ಮಕ್ಕಳೆಲ್ಲ ಮನೆಗೆ ಹೋಗಲು ಆತುರರಾಗಿ ಬಸ್ ನಿಲ್ದಾಣದತ್ತ ಧಾವಿಸುತ್ತಿದ್ದರು. ಬಸ್ಸು ಬಂದು ನಿಂತೊಡನೆ ಸೀಟಿಗಾಗಿ ಎಲ್ಲರೂ ಮುನ್ನುಗ್ಗತೊಡಗಿದರು. ಕಾಲೇಜಿನ ಹುಡುಗಿಯೊಬ್ಬಳು ಆ ಗುಂಪಿನಲ್ಲಿ ಕಷ್ಟಪಟ್ಟು ಬಸ್ಸು ಹತ್ತುತ್ತಿದ್ದಂತೆ ಅವಳಿಗೆ ಏನೋ ಚುಚ್ಚಿದ ಅನುಭವವಾಯಿತು. ಹಿಂದೆ ಹತ್ತುತ್ತಿದ್ದ ಹುಡುಗರ ಕಾಟವಿರಬೇಕು ಎಂದುಕೊಳ್ಳುತ್ತ ಆಕೆ ಬಸ್ಸು ಹತ್ತಿದಳು. ಸೀಟೊಂದು ಸಿಕ್ಕಿ ಕುಳಿತುಕೊಳ್ಳಲು ಹೋದಾಗ ಅವಳಿಗೆ ಬೆನ್ನಲ್ಲಿ ಏನೋ ಹರಿದಾಡಿದ ಅನುಭವ. ಹುಡುಗರೇನಾದರೂ ಮಾಡುತ್ತಿರಬಹುದೇ ಎಂದು ತಟ್ಟನೆ ತಿರುಗಿ ನೋಡಿದಳು.

ಅವಳ ಹಿಂದೆ ಒಬ್ಬ ಗಡ್ಡಧಾರಿ ವ್ಯಕ್ತಿಯೊಬ್ಬ ಕುಳಿತಿದ್ದ, ಪಂಜಾಬಿನವರಂತೆ ತಲೆಗೆ ಟೋಪಿ ಹಾಕಿದ್ದ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ. ಮುಖದ ತುಂಬಾ ಗಡ್ಡ ಮೀಸೆ  ಅವನ ಕೈ ಇವಳ ಸೀಟಿನತ್ತ ಚಾಚಿಕೊಂಡಿತ್ತು. ಇವನೇ ತನ್ನ ಬೆನ್ನ ಮೇಲೆ ಕೈ ಹಾಕಿರಬಹುದೇ ಎಂದು ಸಂಶಯವಾಗಿ ಅವನನ್ನು ದುರುಗುಟ್ಟಿ ನೋಡಿದಳು. ಅವನು ಅವಳತ್ತ ನೋಡದೆ ಚಾಚಿದ ಕೈಯನ್ನು ಮೆಲ್ಲನೆ ಹಿಂದಕ್ಕೆಳೆದು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತ. ಆ ಹುಡುಗಿಗೆ ಬೆನ್ನಲ್ಲಿ ಜೋರಾಗಿ ತುರಿಕೆಯಾಗಿ ಸೀಟಿಗೆ ತನ್ನ ಬೆನ್ನನ್ನು ತಿಕ್ಕುತ್ತ ಆಗಾಗ ಹಿಂದೆ ನೋಡುತ್ತಾ ಅವನು ಇನ್ನೇನಾದರೂ ಮಾಡುತ್ತಾನೆಯೇ ಎಂದು ಅವನ ಮೇಲೆ ಒಂದು ಕಣ್ಣಿಟ್ಟಳು. ಹೆಣ್ಣು ಮಕ್ಕಳಿಗೆ ಕಾಮುಕರ ಕಾಟ ಎಲ್ಲಿ ಹೋದರೂ ತಪ್ಪಿದ್ದಲ್ಲ ಸಮಯ ಸಿಕ್ಕಾಗೆಲ್ಲ ಮೈ ಮೇಲೆ ಕೈ ಹಾಕುತ್ತಾರೆ ದರಿದ್ರದವರು ಎಂದುಕೊಂಡು ಮನಸ್ಸಿನಲ್ಲೇ ಬೈಯುತ್ತ ನಂತರ ಸೀಟಿನಲ್ಲಿ ಆದಷ್ಟೂ ಮುಂದೆ ಜರುಗಿ ಅವನಿಗೆ ತಾನು ಎಟುಕದಂತೆ ಕುಳಿತಳು.

ಕೆಲ ಹೊತ್ತಿನ ನಂತರ ಅವಳಿಗೆ ಬೆನ್ನಲ್ಲಿ ಉರಿ ಶುರುವಾಯಿತು. ತಾನು ತುರಿಕೆಯಾಗುತ್ತದೆ ಎಂದು ಬೆನ್ನು ತಿಕ್ಕಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ಸುಮ್ಮನಾದಳು. ಸ್ವಲ್ಪ ಹೊತ್ತಿನಲ್ಲಿ ಆ ಹುಡುಗಿ ಇಳಿಯುವ ಸ್ಟಾಪ್ ಬಂದಿದ್ದರಿಂದ ಅವಳು ಗಡಬಡಿಸಿ ಎದ್ದು ಹೋಗಿ ಬಸ್ಸು ನಿಲ್ಲುವುದನ್ನೇ ಕಾಯುತ್ತ ನಿಂತಳು. ಬಸ್ಸಿನಿಂದಿಳಿದು ಮನೆಗೆ ಹೋಗಿ ಮೊದಲು ಬೆನ್ನ ಮೇಲೆ ತಣ್ಣೀರು ಸುರಿಯಬೇಕು ಎಂದುಕೊಂಡು ಅವಸರದ ಹೆಜ್ಜೆ ಹಾಕುತ್ತ ಮನೆಗೆ ನಡೆದಳು. ಮನೆಗೆ ಬಂದವಳೇ ಬ್ಯಾಗನ್ನು ಬಿಸಾಕಿ ಬಾತ್ ರೂಂ ಗೆ ಧಾವಿಸಿ ಬಟ್ಟೆ ಬಿಚ್ಚಿ ಶವರ್ ನ್ನು ತಿರುಗಿಸಿ ತನ್ನ ಬೆನ್ನ ಮೇಲೆ ತಣ್ಣೀರು ಬೀಳುನತೆ ಮಾಡಿದಾಗ ಅವಳಿಗೆ ಹಾಯೆನಿಸಿತು. ಸ್ವಲ್ಪ ಹೊತ್ತು ಹಾಗೇ ನಿಂತು ನಂತರ ಬಟ್ಟೆಗಳನ್ನು ಹಾಕಿಕೊಳ್ಳಲು ಎತ್ತಿದಾಗ ಅದರಲ್ಲಿದ್ದ ಸತ್ತ ಚೇಳು ನೆಲಕ್ಕೆ ಬಿದ್ದಿತು. ಆ ಹುಡುಗಿಗೆ ಭಯವಾಗಿ ಚೀರಿ ಬಿಟ್ಟಳು.

ಅವಳ ತಾಯಿಗೆ ಮಗಳು ಚೀರಿದ್ದು ಕೇಳಿಸಿ ಮಗಳು ಮನೆಗೆ ಬರುತ್ತಿದ್ದಂತೆ ಯಾಕೆ ಕಿರಿಚಿಕೊಂಡಳು ಎಂದು ನೋಡಲು ಧಾವಿಸಿದರು. ಏನಾಯಿತೇ? ಯಾಕೆ ಕಿರಿಚಿಕೊಂಡೆ, ಜಿರಳೆ ನೋಡಿದ್ಯಾ ? ಮನೆಗೆ ಯಾವಾಗ ಬಂದೆ, ನಂಗೆ ಗೊತ್ತಾಗಲೇ ಇಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದಾಗ ಆ ಹುಡುಗಿ ಬೇಗನೆ ಬಟ್ಟೆ ಹಾಕಿಕೊಂಡು ಬಾಗಿಲು ತೆರೆದು ಅಮ್ಮನತ್ತ ಧಾವಿಸಿ ಅವರನ್ನು ತಬ್ಬಿಕೊಂಡಳು. ಯಾಕೆ ಏನಾಯಿತಮ್ಮ ಎಂದು ತಾಯಿ ಕೇಳಿದಾಗ ಅವರನ್ನು ಕರೆದುಕೊಂಡು ಹೋಗಿ ಬಾತ್ ರೂಂ ನಲ್ಲಿ ಬಿದ್ದಿದ ಸತ್ತ ಚೇಳನ್ನು ತೋರಿಸಿ ಇದು ನನ್ನ ಬಟ್ಟೆಯಲ್ಲಿತ್ತಮ್ಮ ಎಂದಾಗ ಅವಳ ತಾಯಿ ಬೆಚ್ಚಿ ಬಿದ್ದು ಈ ಹಿಂದೆ ಚೇಳು ಕಚ್ಚಿ ಸಾವಿಗೀಡಾದ ಹೆಣ್ಣು ಮಕ್ಕಳ ನೆನಪಾಗಿ, ನಿನಗೇನೂ ಆಗಿಲ್ಲ ತಾನೇ, ಯಾವುದಕ್ಕೂ ಬೇಗ ಡಾಕ್ಟರ್ ಹತ್ತಿರ ಹೋಗೋಣ ಎಂದು ಅವಸರಿಸಿ ಡಾಕ್ಟರ್ ಬಳಿ ಧಾವಿಸಿದರು.

ಡಾಕ್ಟರ್ ಆ ಹುಡುಗಿಯನ್ನು ಪರೀಕ್ಷಿಸಿ ಆ ಭಾಗವನ್ನು ಸ್ವಚ್ಛ ಮಾಡಿ ಏನೂ ತೊಂದರೆಯಿಲ್ಲ ಇವಳಿಗೆ ಆ ಅಲರ್ಜಿ ಇಲ್ಲದ್ದರಿಂದ ಏನೂ ಆಗಿಲ್ಲ. ಹೆಚ್ಚಿನವರಿಗೆ ಚೇಳು ಕಚ್ಚಿದರೆ ಅದು ಮಾರಣಾಂತಿಕವಾಗುವುದಿಲ್ಲ ಅಲರ್ಜಿ ಇದ್ದವರಿಗೆ ಮಾತ್ರ ಹೆಚ್ಚಿನ ತೊಂದರೆಯಾಗುತ್ತದೆ ಆದರೆ ಈ ಬಗ್ಗೆ ಮಾತ್ರ ಪೊಲೀಸರಿಗೆ ತಿಳಿಸಿ, ಇದು ಯಾರೋ ಬೇಕೆಂದೇ ಮಾಡುತ್ತಿರಬಹುದು. ಅವನು ಬಹಳ ಅಪಾಯಕಾರಿ ಮನುಷ್ಯನೂ ಆಗಿರಬಹುದು ಎಂದಾಗ ಆ ಹುಡುಗಿ ಬಸ್ಸಿನಲ್ಲಿ ತನ್ನ ಹಿಂದೆ ಕುಳಿತ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದುದನ್ನು ಹೇಳಿದಳು. 

ಆ ಹುಡುಗಿ ಡಾಕ್ಟರ್ ಹೇಳಿದಂತೆ ತನ್ನ ತಾಯಿ ಜೊತೆ ನೇರವಾಗಿ ಪೋಲೀಸ್ ಸ್ಟೇಷನ್ ಗೆ ತೆರಳಿ ತನಗೆ ಚೇಳು ಕಚ್ಚಿದ್ದು, ಬಸ್ಸಿನಲ್ಲಿ ತನ್ನ ಹಿಂದೆ ಕುಳಿತಿದ್ದವ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದು ಎಲ್ಲ ವಿವರವಾಗಿ ಹೇಳಿದಾಗ ಪೊಲೀಸರಿಗೆ ಆ ಹುಡುಗಿಯ ಅನುಮಾನ ನಿಜವಿರಬಹುದೇ, ಅವನೇ ಆ ಚೇಳನ್ನು ಹಾಕಿರಬಹುದೇ ಅಥವಾ ಆತ ಬರಿಯ ಬೀದಿ ಕಾಮಣ್ಣನೇ, ಹಾಗಿದ್ದರೆ ಚೇಳು ಬಂದಿದ್ದಾದರೂ ಎಲ್ಲಿಂದ, ಅದೂ ಬರೀ ಯುವತಿಯರ ಮೇಲೆಯೇ ಚೇಳು ಬೀಳಲು ಕಾರಣವೇನು ಇದು ಯಾರೋ ಮಾಡುವ ಕುತಂತ್ರವಿರಬಹುದೇ ಯುವತಿಯರಿಗೆ ಚೇಳು ಕಚ್ಚಿಸಿ ಅವರಿಗೆ ಸಿಗುವ ಲಾಭವೇನು, ಅವರನ್ನು ಕೊಲ್ಲಲು ಈ ರೀತಿ ಮಾಡುತ್ತಿದ್ದಾನೆಯೇ, ಹಾಗಿದ್ದರೆ ಈ ಹುಡುಗಿ ಏಕೆ ಸಾಯಲಿಲ್ಲ, ಹೀಗೆ ಮಾಡುತ್ತಿರುವವರನ್ನು ಹಿಡಿಯುವುದು ಹೇಗೆ ಎಂದೆಲ್ಲ ಹಲವಾರು ಪ್ರಶ್ನೆಗಳು ಪೋಲೀಸರ ತಲೆ ತಿನ್ನತೊಡಗಿದವು. ಆ ಹುಡುಗಿಗೆ ಇನ್ನೊಮ್ಮೆ ಆತ ಕಾಣಲು ಸಿಕ್ಕರೆ ತಕ್ಷಣ ತಮಗೆ ಫೋನ್ ಮಾಡಿ ತಿಳಿಸಲು ಹೇಳಿ ಅವರನ್ನು ಕಳುಹಿಸಿದರು.

(ಮುಂದುವರಿಯುವುದು)

ಚೇಳು ಬಂದದ್ದಾದರೂ ಎಲ್ಲಿಂದ ?

ಭಾಗ – 1

ಸಂಜೆ ಸುಮಾರು ಏಳರ ಸಮಯ. ಎಲ್ಲರಿಗೂ ಆದಷ್ಟೂ ಬೇಗ ಮನೆ ತಲುಪುವ ಆತುರದಿಂದಾಗಿ ಬಸ್ ನಿಲ್ದಾಣದಲ್ಲಿ ಜನಜಂಗುಳಿಯೇ ಸೇರಿತ್ತು. ಅಲ್ಲಿ ಆಗ ತಾನೇ ಬಂದು ನಿಂತಿದ್ದ ಬಸ್ ಕಿಕ್ಕಿರಿದು ತುಂಬಿತ್ತು. ಆದರೂ ಇನ್ನಷ್ಟು ಜನ ಆ ಬಸ್ಸನ್ನು ಹತ್ತುವ ಆತುರ ತೋರಿದಾಗ ಬಸ್ಸಿನ ನಿರ್ವಾಹಕ ಅವರಿಗೆ ಹತ್ತದಂತೆ ತಡೆದು ಸೀಟಿ ಊದಿದ. ಬಸ್ಸು ತುಂಬಿದ ಗರ್ಭಿಣಿಯಂತೆ ವಾಲಾಡುತ್ತ ನಿಧಾನವಾಗಿ ಚಲಿಸತೊಡಗಿದಾಗ ಅದುವರೆಗೂ ಬಸ್ಸಿನಲ್ಲಿ ಉಸಿರಾಡಲೂ ಸಾಧ್ಯವಾಗದೇ ಚಡಪಡಿಸುತ್ತಿದ್ದ ಜನರೆಲ್ಲಾ ಒಮ್ಮೆ ನಿಟ್ಟುಸಿರು ಬಿಟ್ಟರು. ಬಸ್ಸು ಹೊರಟ ಮೇಲೆ ಬಸ್ಸಿನ ಒಳಗೆ ಸ್ವಲ್ಪ ಗಾಳಿ ಆಡಿ ಸೆಖೆಯಿಂದ ಅಳುತ್ತಿದ್ದ ಮಕ್ಕಳಿಗೆ ಹಾಯೆನಿಸಿ ಕಿಟಕಿಯಿಂದ ಹೊರಗೆ ನೋಡತೊಡಗಿದರು.

ಕುಳಿತಿದ್ದ ಪ್ರಯಾಣಿಕರೆಲ್ಲ ಆದಷ್ಟೂ ವಿಶಾಲವಾಗಿ ಕಿಟಕಿಯ ಗಾಜನ್ನು ಸರಿಸಿ ಹೊರಗಿನ ತಂಗಾಳಿಯನ್ನು ಆಸ್ವಾದಿಸುತ್ತಾ ತಮ್ಮ ತಮ್ಮ ಯೋಚನೆಗಳಲ್ಲಿ ಮುಳುಗಿದರು. ಕೆಲವರು ತಮ್ಮ ಫೋನ್ ತೆಗೆದು ತಮಗೆ ಬಂದಂತಹ ಮೆಸೇಜುಗಳನ್ನು ಓದುತ್ತ ಮುಗುಳ್ನಗುತ್ತಿದ್ದರೆ ಇನ್ನು ಕೆಲವರು ಫೋನ್ ನಲ್ಲಿ ಯಾರ ಜೊತೆಗೋ ದೊಡ್ಡ ಧ್ವನಿಯಲ್ಲಿ ಮಾತನಾಡತೊಡಗಿದಾಗ ಏನೂ ಮಾಡದೆ ಸುಮ್ಮನೆ ಕುಳಿತಿದ್ದ ಕೆಲವರ ಕಿವಿ ನೆಟ್ಟಗಾಗಿ ಅವರ ಸಂಭಾಷಣೆಯನ್ನು ಆಲಿಸಲಾರಂಭಿಸಿದರು. ಪಡ್ಡೆ ಹುಡುಗರು ಕಿವಿಗೆ ಹೆಡ್ ಫೋನ್ ತುರುಕಿಕೊಂಡು ತಮಗಿಷ್ಟವಾದ ಸಂಗೀತ ಕೇಳುತ್ತ ಕಲ್ಪನಾ ಲೋಕದಲ್ಲಿ ವಿಹರಿಸತೊಡಗಿದರು.

ಸಾಸಿವೆ ಹಾಕಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದ ಜನರ ನಡುವೆ ಬಸ್ಸಿನ ನಿರ್ವಾಹಕ ಗೂಳಿಯಂತೆ ನುಗ್ಗಿಕೊಂಡು ಬರುತ್ತಾ ಅವರಿವರ ಕಾಲು ತುಳಿದು ಅವರಿಂದ ಬೈಸಿಕೊಂಡು ಟಿಕೇಟ್ ಟಿಕೇಟ್ ಎಂದು ಅರಚುತ್ತ ಬಂದ. ಅದುವರೆಗೂ ಟಿಕೇಟ್ ಕೊಳ್ಳದವರು ಹಣವನ್ನು ಅವನತ್ತ ಚಾಚಿ ಟಿಕೇಟ್ ಗಾಗಿ ಕಾದರು. ಎಲ್ಲರೂ ದೊಡ್ಡ ದೊಡ್ಡ ನೋಟುಗಳನ್ನೇ ಕೊಡಲಾರಂಭಿಸಿದಾಗ ನಿರ್ವಾಹಕ ಚಿಲ್ಲರೆಗಾಗಿ ಪರದಾಡುತ್ತ ಅವರನ್ನೇ ಕೇಳಿ ರೇಗಾಡುತ್ತ ಟಿಕೇಟ್ ಗಳನ್ನು ವಿತರಿಸುತ್ತಾ ಬಂದ. ಬಸ್ಸು ಸುಮಾರು ದೂರ ಬಂದ ಮೇಲೆ ಪ್ರಯಾಣಿಕರೆಲ್ಲ ಅಕ್ಕ ಪಕ್ಕ ಕುಳಿತವರ ಜೊತೆ ಹರಟುತ್ತ ಮಾತಿನ ಮಂಟಪ ಕಟ್ಟುತ್ತ ತಮ್ಮ ತಮ್ಮ ಲೋಕದಲ್ಲಿ ಮುಳುಗಿರುವಾಗ ಮಹಿಳೆಯರ ಕೊನೆಯ ಸೀಟಿನಲ್ಲಿ ಕುಳಿತಿದ್ದ ಜೀನ್ಸಧಾರಿ ಯುವತಿಯೊಬ್ಬಳಿಗೆ ಏನೋ ಕಚ್ಚಿದ ಅನುಭವವಾಗಿ ಒಮ್ಮೇಲೆ ಅಮ್ಮಾ ಎಂದು ಕಿರಿಚುತ್ತ ವಿಲವಿಲ ಒದ್ದಾಡುತ್ತಾ ತನ್ನ ಟೀ ಶರ್ಟ್ ನ್ನು ಒದರುತ್ತ ನಲಿದಾಡತೊಡಗಿದಳು. ಇದನ್ನು ನೋಡಿ ಅಕ್ಕ ಪಕ್ಕ ಕುಳಿತವರು ತಮ್ಮ ಹೌಹಾರಿ ಹಾವು ಮೈ ಮೇಲೆ ಬಿದ್ದವರಂತೆ ವರ್ತಿಸತೊಡಗಿದರು. ಪಡ್ಡೆ ಹುಡುಗರು ಅವಳತ್ತ ನೋಡುತ್ತಾ ಕಿಸಿ ಕಿಸಿ ನಗತೊಡಗಿದರು. ಅವಳಿಗೆ ಉರಿ ತಡೆಯಲಾಗದೆ ಕುಳಿತುಕೊಳ್ಳಲೂ ನಿಂತುಕೊಳ್ಳಲೂ ಆಗದೆ ಒದ್ದಾಡುತ್ತಾ ಶರ್ಟ್ ಒಳಗೆ ಏನೋ ಜಂತು ಹರಿದಾಡಿದ ಅನುಭವವಾಗಿ ಕಿಟಾರನೆ ಕಿರಿಚುತ್ತ ಎಲ್ಲರ ಗಮನ ಕ್ಷಣಕಾಲ ಸೆಳೆದಳಾದರೂ ಮಾತಿನ ಪ್ರಪಂಚದಲ್ಲಿ ಮುಳುಗಿದ ಜನರಿಗೆ ತಮ್ಮ ಮಾತುಗಳೇ ಮುಖ್ಯವೆನಿಸಿ ಅವರೆಲ್ಲ ಮತ್ತೆ ತಮ್ಮ ಪ್ರಪಂಚಕ್ಕೆ ಮರಳಿದರು.

ಆ ಯುವತಿಗೆ ತಡೆಯಲಾಗದೆ ಆದಷ್ಟೂ ಬೇಗನೆ ಇಳಿದು ತಕ್ಷಣವೇ ಎಲ್ಲಿಗಾದರೂ ಹೋಗಿ ಶರ್ಟ್ ಬಿಚ್ಚಿ ಆ ಜಂತುವನ್ನು ತೆಗೆದು ಬಿಸಾಕಿದರೆ ಸಾಕು ಎನಿಸಿ ಆಗಾಗ ಬಟ್ಟೆಯನ್ನು ಒದರುತ್ತ ತನ್ನ ಬ್ಯಾಗನ್ನು ಎತ್ತಿಕೊಂಡು ನಿಂತಿದ್ದ ಜನರ ನಡುವೆ ನುಗ್ಗುತ್ತಾ ಸಿಕ್ಕಸಿಕ್ಕವರ ಕಾಲು ತುಳಿಯುತ್ತ ಅವರೆಲ್ಲ ಅವಳಿಗೆ ಸಹಸ್ರನಾಮ ಮಾಡಿದರೂ ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿ ಇಲ್ಲದ ಅವಳು ಅದು ಹೇಗೋ ನುಗ್ಗಿಕೊಂಡು ಬಸ್ಸಿನ ಬಾಗಿಲ ಬಳಿ ಬಂದು ನಿರ್ವಾಹಕನಿಗೆ, ತನಗೆ ತುರ್ತಾಗಿ ಇಳಿಯಬೇಕಾಗಿದೆ, ಶರ್ಟ್ ಒಳಗೆ ಏನೋ ಸೇರಿಕೊಂಡಿದೆ ದಯವಿಟ್ಟು ಬಸ್ಸು ನಿಲ್ಲಿಸಿ ಎಂದು ಗೋಗರೆದಳು. ಅವನೂ ಪಡ್ಡೆ ಹುಡುಗರಂತೆ ಅಶ್ಲೀಲವಾಗಿ ಕಿಸಿ ಕಿಸಿ ನಕ್ಕು ಸೀಟಿ ಊದಿದ. ಬಸ್ಸು ನಿಲ್ಲುತ್ತಿದ್ದಂತೆ ಯುವತಿಗೆ ನಿತ್ರಾಣವಾಗಿ ಮೈಯಲ್ಲಿ ಬಲವಿಲ್ಲದಂತಾಗಿ ಇಳಿಯುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದಳು.

ಕತ್ತಲಲ್ಲಿ ಅವಳು ಬಿದ್ದಿದ್ದನ್ನು ನೋಡದೆ ನಿರ್ವಾಹಕ ಮತ್ತೆ ಸೀಟಿ ಊದಿದ. ಬಸ್ಸು ಹೊರಡುತ್ತಿದ್ದಂತೆ ಕಿಟಕಿಯ ಬಳಿ ಕುಳಿತಿದ್ದ ಪ್ರಯಾಣಿಕರು ಆ ಯುವತಿ ಕೆಳಗೆ ಬಿದ್ದಿದ್ದು ನೋಡಿ ಬೊಬ್ಬೆ ಹಾಕಿ ಬಸ್ಸು ಮುಂದೆ ಹೋಗದಂತೆ ತಡೆದರು. ನಿರ್ವಾಹಕ ಏನಾಯಿತು ಎಂದು ಧಾವಿಸಿ ಬಂದು ನೋಡಿದಾಗ ಆಗ ತಾನೇ ಇಳಿದ ಯುವತಿ ರಸ್ತೆಯಲ್ಲಿ ಮುದ್ದೆಯಾಗಿ ಬಿದ್ದಿದ್ದಳು. ಇದನ್ನು ನೋಡಿ ಸುತ್ತಮುತ್ತಲಿದ್ದ ಜನರೆಲ್ಲಾ ಧಾವಿಸಿ ಓಡಿ ಬಂದು ಬಸ್ಸಿನವ ಆ ಯುವತಿ ಕೆಳಗೆ ಇಳಿಯುವುದಕ್ಕೆ ಮೊದಲೇ ಬಸ್ ಚಾಲನೆ ಮಾಡಿದ್ದರಿಂದ ಅವಳು ಆಯ ತಪ್ಪಿ ಅವಳು ಕೆಳಕ್ಕೆ ಬಿದ್ದಿರಬೇಕು ಎಂದು ಭಾವಿಸಿ ಬಸ್ಸಿನ ಬಳಿ ಬಂದು ಬಸ್ಸಿಗೆ ಬಡಿಯುತ್ತ ಗಲಾಟೆ ಮಾಡತೊಡಗಿದರು. ಚಾಲಕ ಹಾಗೂ ನಿರ್ವಾಹಕ, ಆ ಯುವತಿ ಕೆಳಗಿಳಿಯುವವರೆಗೂ ತಾವು ಬಸ್ಸನ್ನು ಚಾಲನೆ ಮಾಡಿಲ್ಲವೆಂದು ಪ್ರತಿಪಾದಿಸತೊಡಗಿದರು. ಬಸ್ಸಿನಲ್ಲಿ ಕಿಟಕಿಯ ಬಳಿ ಕುಳಿತ ಪ್ರಯಾಣಿಕರು ಅವರಿಗೆ ಸಾಥ್ ನೀಡಿದರು. ಇವರ ಗಲಾಟೆಯಿಂದ ತಾವು ಮನೆಗೆ ಇನ್ನಷ್ಟು ವಿಳಂಬವಾಗಿ ತಲುಪುತ್ತೇವಲ್ಲ ಎಂಬ ಬೇಸರ, ಸ್ವಾರ್ಥ  ಬಸ್ಸಿನಲ್ಲಿದ್ದ ಎಲ್ಲರಲ್ಲೂ ಎದ್ದು ಕಾಣುತ್ತಿತ್ತೇ ಹೊರತು ಕೆಳಗೆ ಬಿದ್ದ ಆ ಹುಡುಗಿಯ ಬಗ್ಗೆ ಒಂದಿಷ್ಟೂ ಕಾಳಜಿ ಕಾಣಿಸಲಿಲ್ಲ.

ಕೆಲವರು ಈ ಗಲಾಟೆ ಜೋರಾಗಿ ಬಸ್ಸನ್ನು ಮುಂದಕ್ಕೆ ಹೋಗಲು ಬಿಡದಿದ್ದರೆ ತಾವೆಲ್ಲ ಇವತ್ತು ಮನೆ ತಲುಪಿದಾಗ ಹಾಗೇ ಎಂದುಕೊಂಡು ಬೇರೆ ಬಸ್ಸನ್ನು ಹಿಡಿಯಲು ಒಬ್ಬೊಬ್ಬರಾಗಿ ಇಳಿದು ಹೋಗತೊಡಗಿದರು. ಮುಂದಿನ ಒಂದೆರಡು ಸ್ಟಾಪ್ ಗಳಲ್ಲಿ  ಇಳಿಯಬೇಕಾದವರು  ಇನ್ನೊಂದು ಬಸ್ಸಿಗೆ ಕಾಯುವಷ್ಟು ವ್ಯವಧಾನವಿಲ್ಲದೆ ನಡೆದುಕೊಂಡೇ ಹೋದರು. ಕೆಳಗಿದ್ದ ಜನರೆಲ್ಲಾ ಬಸ್ಸಿನ ಚಾಲಕ, ನಿರ್ವಾಹಕರೊಂದಿಗೆ  ಪರಸ್ಪರ ವಾಕ್ ಪ್ರಹಾರದಲ್ಲೇ  ಮುಳುಗಿದ್ದರೇ ವಿನಃ ಕೆಳಕ್ಕೆ ಬಿದ್ದ ಯುವತಿಯನ್ನು ಎತ್ತುವವರಿಲ್ಲವಾಗಿ ಬಸ್ಸಿನಲ್ಲಿದ್ದ ಕೆಲವು ಮಹಿಳೆಯರಿಗೆ ಪಾಪ ಅನ್ನಿಸಿ ತಾವೇ ಕೆಳಗಿಳಿದು ಅವಳನ್ನು ತಟ್ಟಿ ಎಬ್ಬಿಸಲು ನೋಡಿದಾಗ ಅವಳು ಏಳದೆ ಇದ್ದುದ್ದು ಕಂಡು ನೀರಿಗಾಗಿ ಬೊಬ್ಬೆ ಹಾಕುತ್ತ ಕೊನೆಗೆ ಯಾರದೋ ನೀರಿನ ಬಾಟಲಿ ಸಿಕ್ಕಿ ಅದರ ತಳಭಾಗದಲ್ಲಿ ಸ್ವಲ್ಪವೇ ಇದ್ದ ನೀರನ್ನು ಅವಳ ಮುಖಕ್ಕೆ ಚಿಮುಕಿಸಿದರು.

ಆಗಲೂ ಅವಳು ಎಚ್ಚರಗೊಳ್ಳದಿದ್ದಾಗ ಅವರೆಲ್ಲ ಗಾಬರಿಗೊಂಡು  ಗಲಾಟೆ ಮಾಡುತ್ತಿದ್ದ ಜನರಿಗೆ, ಮೊದಲು ಗಲಾಟೆ ನಿಲ್ಲಿಸಿ ಈ ಹುಡುಗಿಗೆ ಸಹಾಯ ಮಾಡಿ, ಇಲ್ಲಾ ಪೊಲೀಸರಿಗೆ ಫೋನ್ ಮಾಡಿ, ಆಂಬುಲೆನ್ಸ್ ಗೆ ಫೋನ್ ಮಾಡಿ ಎಂದು ಕಿರಿಚಿದಾಗ ಅಲ್ಲಿಯವರೆಗೂ ಗಲಾಟೆ ಮಾಡುತ್ತಿದ್ದ ಜನರೆಲ್ಲಾ ಒಮ್ಮೆಲೇ ಸ್ತಂಭೀಭೂತರಾಗಿ  ಪರಿಸ್ಥಿತಿಯ ಗಂಭೀರತೆ ಕಂಡು ತಮ್ಮ ತಮ್ಮ ಫೋನ್ ಗಳತ್ತ ಗಮನ ಹರಿಸಿದರು. ಕೆಲವರು ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದರೆ ಇನ್ನು ಕೆಲವರು ಆಂಬುಲೆನ್ಸ್ ಗೆ ಕರೆ ಮಾಡಿದರು. ಪಡ್ಡೆ ಹುಡುಗರು  ಆ ಹುಡುಗಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಡತೊಡಗಿದರು. ಚಾಲಕ ಮತ್ತು ನಿರ್ವಾಹಕ ತಮಗೆ ಮುಂದೇನು ಕಾದಿದೆಯೋ ಎಂದು ಚಿಂತಾಕ್ರಾಂತ ಮುಖ ಹೊತ್ತು ಅನಿವಾರ್ಯತೆಯಿಂದ ಪೋಲೀಸರ ಬರವಿಗಾಗಿ ಕಾಯುತ್ತ ತಾವು ಇವತ್ತು ಬೆಳಿಗ್ಗೆ ಏಳುವಾಗ ಯಾರ ಮುಖ ನೋಡಿದೆವು ಎಂದು ನೆನಪಿಸಿಕೊಳ್ಳ ತೊಡಗಿದರು.

(ಮುಂದುವರಿಯುವುದು)