ಮಾಸದ ಪ್ರೀತಿ

ಪಕ್ಕದ ಮನೆಯ ಎದುರು ಒಂದು ಕಾರು ಬಂದು ನಿಂತಾಗ ಹನುಮಂತಯ್ಯ ಕುತೂಹಲದಿಂದ ತನ್ನ ಕನ್ನಡಕವನ್ನು ಸರಿ ಮಾಡಿಕೊಳ್ಳುತ್ತ ಕಣ್ಣುಗಳನ್ನು ಕಿರಿದು ಗೊಳಿಸಿ ಕಾರಿನಿಂದ ಯಾರು ಇಳಿಯುತ್ತಿದ್ದಾರೆ ಎಂದು ನೋಡಿದರು. ಎದುರಿನ ಸೀಟಿನಿಂದ ಯುವಕನೊಬ್ಬ ಇಳಿದು ಕಾರಿನ ಹಿಂದಿನ ಬಾಗಿಲು ತೆರೆದು ನಿಂತ. ಒಬ್ಬ ವಯಸ್ಸಾದ ಮಹಿಳೆಯೊಬ್ಬಳು ಇಳಿಯುತ್ತಿರುವುದನ್ನು ಕಂಡು ಮತ್ತಷ್ಟು ಕುತೂಹಲದಿಂದ ತಮ್ಮ ಮನೆಯ ವರಾಂಡದ ತುದಿಯಲ್ಲಿ ನಿಂತು ನೋಡ ತೊಡಗಿದರು.

ಆ ಮಹಿಳೆ ಇಳಿಯುವಾಗ ಯುವಕ ಅವರ ಸಹಾಯಕ್ಕಾಗಿ ನೀಡಿದ ಕೈಯನ್ನು ಆಕೆ ತಿರಸ್ಕರಿಸುತ್ತ ಅತ್ತ ತಳ್ಳಿ ನಿಧಾವಾಗಿ ಇಳಿದು ತಲೆ ತಗ್ಗಿಸಿ ನಡೆಯುತ್ತಾ ಮನೆಯೊಳಕ್ಕೆ ಹೋದರು. ಅವರ ತಲೆಯ ತುಂಬಾ ಬಿಳಿ ಕೂದಲು ನೋಡಿ ಹನುಮಂತಯ್ಯ ನವರಿಗೆ ತಕ್ಷಣಕ್ಕೆ ಯಾರೆಂದು ತಿಳಿಯದಿದ್ದರೂ ಅದು ಶಾಂತಿ ಇರಬಹುದೇ ಎಂದು ಯೋಚಿಸುತ್ತ ನಿಂತರು. ಅವರ ಮನಸ್ಸು ಹಿಂದಕ್ಕೋಡಿತು. ನೆನಪುಗಳು ಮತ್ತೆ ಹಸಿರಾಗತೊಡಗಿತು.

ಪಕ್ಕದ ಮನೆಯ ಶಾಂತಿ ಹಾಗೂ ಹನುಮಂತಯ್ಯ ಜೊತೆಯಲ್ಲೇ ಆಡಿ ಬೆಳೆದವರು. ಅವಳ ಅಣ್ಣ ಶಾಂತರಾಮ ಹನುಮಂತಯ್ಯನವರ ಸ್ನೇಹಿತ ಹಾಗೂ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಶಾಂತಿ ಅವರಿಗಿಂತ ನಾಲ್ಕು ವರುಷ ಚಿಕ್ಕವಳಾದರೂ ಅವರಿಬ್ಬರಿಗಿಂತ ತಾನೇ ಹಿರಿಯವಳು ಅನ್ನುವ ತರಹ ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು. ಆಗ ಅವಳ ಮನೆಯವರೆಲ್ಲ ಅದನ್ನು ನೋಡಿ ಈಗಲೇ ಹೀಗಾದರೆ ಇನ್ನು ಇವಳು ತನ್ನ ಗಂಡನ ಮೇಲೆ ಅಧಿಕಾರ ಇನ್ನೆಷ್ಟು ಚಲಾಯಿಸುತ್ತಾಳೋ ಎಂದು ಆತಂಕಗೊಂಡಿದ್ದರು.

ಆದರೆ ಹನುಮಂತಯ್ಯನಿಗೆ ಅವಳು ತನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿ ತುಂಬಾ ಇಷ್ಟವಾಗುತ್ತಿತ್ತು. ನೋಡಲೂ ಸುಂದರವಾಗಿದ್ದ ಅವಳ ಮೇಲೆ ಹನುಮಂತಯ್ಯನಿಗೆ ಪ್ರೀತಿ ಹುಟ್ಟಿತು. ಆದರೆ ಅವನು ಅದನ್ನು ಮಾತ್ರ ಅವಳೊಂದಿಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲ. ಆದರೂ ಮನೆಯಲ್ಲಿ ತನ್ನ ತಾಯಿಯ ಬಳಿ ತಾನು ಮದುವೆಯಾಗುವುದಾದರೆ ಶಾಂತಿಯನ್ನೇ ಎಂದು ಹೇಳಿದಾಗ ಅವನ ಅಮ್ಮ ನಕ್ಕು ಬಿಟ್ಟಿದ್ದರು. ಜೊತೆಗೆ ಅವಳನ್ನು ಮದುವೆಯಾದರೆ ನೀನು ಅವಳ ಗುಲಾಮನಾಗಬೇಕಾಗುತ್ತದೆ, ಅವಳು ನಿನ್ನ ಮಾತು ಕೇಳುವವಳಲ್ಲ ಎಂದು ಗೇಲಿ ಮಾಡುತ್ತಿದ್ದರು.

ಮಗ ಇನ್ನೂ ಚಿಕ್ಕವ, ಸುಮ್ಮನೆ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ಗಾಯತ್ರಿಗೆ ಅವನು ದೊಡ್ಡವನಾಗಿ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೂ ಅದೇ ಮಾತನ್ನು ಹೇಳಿದಾಗ ಗಾಯತ್ರಿಗೆ ಹಿಡಿಸಲಿಲ್ಲ. ಅಂತಹ ಗಂಡುಬೀರಿ ಹೆಣ್ಣು ತಮ್ಮ ಮನೆಯ ಸೊಸೆಯಾಗುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಶಾಂತಿ ಹತ್ತನೆಯ ತರಗತಿಯಲ್ಲಿ ಫೈಲಾದಾಗ ಗಾಯತ್ರಿ ಅವಳನ್ನು ಬೇಡವೆನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಿತು. ಅವಳು ದಡ್ಡಿ, ಅವಳನ್ನು ಮದುವೆಯಾದರೆ ಮುಂದೆ ನಿನ್ನ ಮಕ್ಕಳೂ ದಡ್ಡರಾಗುತ್ತಾರೆ ಎಂದು ಮಗನಿಗೆ ಹೆದರಿಸಿದ್ದಳು.

ಶಾಂತಿಯ ಮನೆಯವರಿಗೂ ತಮ್ಮ ಪಕ್ಕದ ಮನೆಯ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡುವುದು ಇಷ್ಟವಿರಲಿಲ್ಲ. ಆದರೆ ಶಾಂತಿಯ ಮನಸ್ಸಿನಲ್ಲಿ ಏನಿದೆ ಎಂದು ಅವಳೆಂದೂ ಬಾಯಿ ಬಿಟ್ಟಿರಲಿಲ್ಲ. ಅವಳಿಗೆ ಹನುಮಂತಯ್ಯನ ಜೊತೆ ಮದುವೆಯಾಗುವುದು ಬೇಡವೆಂದಾಗ ಅವಳು ವಿರೋಧಿಸಲೂ ಇಲ್ಲ. ಹಾಗಾಗಿ ಎರಡೂ ಮನೆಯವರ ವಿರೋಧದಿಂದ ಹನುಮಂತಯ್ಯನ ಪ್ರೀತಿಗೆ ಕಡಿವಾಣ ಬಿದ್ದಿತು. ಶಾಂತಿಯ ಮನೆಯವರು ಅವಳಿಗೆ ಬೇರೆ ಹುಡುಗನನ್ನು ಗೊತ್ತು ಮಾಡಿ ಮದುವೆಯನ್ನು ಮುಗಿಸಿಯೂ ಬಿಟ್ಟರು. ಆದರೆ ಹನುಮಂತಯ್ಯನಿಗೆ ಮಾತ್ರ ಇದು ಸಹಿಸಲಾಗದೆ ಅವತ್ತೀಡಿ ದಿನ ರೂಮು ಸೇರಿಕೊಂಡು ಅತ್ತಿದ್ದ.

ನಂತರ ವರುಷಗಳು ಉರುಳಿದಂತೆ ಶಾಂತಿಯ ನೆನಪೂ ಮಸುಕಾಗತೊಡಗಿತು. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದ. ಕಾಲ ಕ್ರಮೇಣ ಅವಳನ್ನು ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾದ. ಅವನಿಗೆ ನಾಲ್ಕು ಗಂಡು ಮಕ್ಕಳೂ ಆದವು. ಆಮೇಲೆ ಹನುಮಂತಯ್ಯ ಶಾಂತಿಯನ್ನು ನೋಡಿರಲೇ ಇಲ್ಲ. ಅವಳು ಮುಂಬೈನಲ್ಲಿ ಇದ್ದಾಳೆ ಎಂದು ಮಾತ್ರ ತಿಳಿದಿತ್ತು. ಅವಳು ತವರು ಮನೆಗೂ ಬರುತ್ತಿರಲಿಲ್ಲ. ಅವಳನ್ನು ನೋಡಿಕೊಂಡು ಬರಲು ತಾಯಿ ಮನೆಯವರೇ ಮುಂಬೈಗೆ ಹೋಗಿ ಬರುತ್ತಿದ್ದರು.

ವರುಷಗಳು ಕಳೆದಂತೆ ಹನುಮಂತಯ್ಯನ ಮಕ್ಕಳೆಲ್ಲ ದೊಡ್ಡವರಾಗಿ, ವಿದ್ಯಾವಂತರಾಗಿ ಒಳ್ಳೆಯ ಕೆಲಸವೂ ದೊರಕಿತು. ಆಗ ಹನುಮಂತನ ತಾಯಿ, ನೀನು ಶಾಂತಿಯನ್ನು ಮದುವೆಯಾಗಿದ್ದಿದ್ದರೆ ನಿನ್ನ ಮಕ್ಕಳೆಲ್ಲ ಹೀಗಿರುತ್ತಿರಲಿಲ್ಲ ಎಂದು ಛೇಡಿಸಿದ್ದರು. ಶಾಂತಿಗೆ ಮಕ್ಕಳಾಗಿದೆಯೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಅವಳ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಶಾಂತರಾಮ ದುಬೈ ಸೇರಿ ಅಲ್ಲೇ ನೆಲೆ ನಿಂತ. ಯಾರನ್ನಾದರೂ ವಿಚಾರಿಸೋಣವೆಂದರೆ ಮದುವೆಯಾದ ಮಹಿಳೆಯ ಬಗ್ಗೆ ವಿಚಾರಿಸಲು ಧೈರ್ಯ ಸಾಲುತ್ತಿರಲಿಲ್ಲ.

 ಎರಡು ವರುಷಗಳ ಹಿಂದೆ ಹನುಮಂತಯ್ಯನ ಹೆಂಡತಿ ಕಾಯಿಲೆ ಬಂದು ತೀರಿಕೊಂಡ ಮೇಲೆ ಶಾಂತಿಯ ನೆನಪು ಅವನಿಗೆ ಬಹುವಾಗಿ ಕಾಡಿತ್ತು. ಹೆಂಡತಿಗೆ ಸಾಯುವ ಮುನ್ನ ತನ್ನ ಮಕ್ಕಳ ಮದುವೆ ನೋಡಲು ಆಸೆಯೆಂದು ಬೇಗ ಬೇಗನೆ ಅವರ ಮದುವೆಯನ್ನೂ ಮಾಡಿಸಿದ್ದಾಯಿತು. ಮಕ್ಕಳೆಲ್ಲ ರೆಕ್ಕೆ ಬಂದ ಹಕ್ಕಿಯಂತೆ ಹಾರಿ ಹೋದಾಗ ಹನುಮಂತಯ್ಯ ಒಬ್ಬಂಟಿಗರಾಗಿ ಬಿಟ್ಟಿದ್ದರು.

ಹೆಂಡತಿ ತೀರಿಕೊಂಡ ಮೇಲೆ ಹನುಮಂತಯ್ಯ ತಮ್ಮ ಊರಿಗೆ ಬಂದು ತಮ್ಮ ಮನೆಯನ್ನು ರಿಪೇರಿ ಮಾಡಿಸಿ ಅಲ್ಲೇ ಇರತೊಡಗಿದರು. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರೂ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ಅವರಿಗೆ ತಮ್ಮ ಜೊತೆ ಬಂದಿರಲು ಹೇಳಿದ್ದರೂ ಹನುಮಂತಯ್ಯ ಮಾತ್ರ ತಾನು ತನ್ನ ಮನೆಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಬೇರೆ ದಾರಿ ಕಾಣದೆ ಮಕ್ಕಳು ಅಡಿಗೆ ಮತ್ತು ಮನೆಕೆಲಸ ಮಾಡಲು ಜನ ನೇಮಿಸಿದ್ದರು.

ಈಗ ಸುಮಾರು ಮೂವತ್ತು ವರುಷಗಳಾದ ಮೇಲೆ ಶಾಂತಿಯನ್ನು ನೋಡಿದಾಗ ಅವಳು ಹೌದೋ ಅಲ್ಲವೋ ಎಂದು ಗೊಂದಲವಾಯಿತು. ಆದರೆ ಸಂಜೆಯ ಹೊತ್ತಿಗೆ, ಬಂದಿರುವುದು ಶಾಂತಿಯೇ ಎಂದು ಅಡಿಗೆಯ ಸುಂದರಮ್ಮನಿಂದ ತಿಳಿಯಿತು. ಅವಳು ಬಂದ ದಿನ ಅವಳ ಬೋಳು ಹಣೆ ನೋಡಿದ ನೆನಪಾಗಿ ಹನುಮಂತಯ್ಯನಿಗೆ ಶಾಂತಿಯನ್ನು ನೋಡಬೇಕು ಅವಳ ಜೊತೆ ಮಾತನಾಡಬೇಕು ಎಂದು ಹಂಬಲವಾಯಿತು. ಜೊತೆಗೆ ಹಿಂದಿನ ನೆನಪುಗಳು ಮತ್ತೆ ಬಲವಾಗಿ ಕಾಡತೊಡಗಿದವು. ದಿನವೂ ಹನುಮಂತಯ್ಯ ಶಾಂತಿ ಏನಾದರೂ ಕಾಣುವಳೇ ಎಂದು ಪಕ್ಕದ ಮನೆಯತ್ತ ಯಾವಾಗಲೂ ನೋಡುತ್ತಿದ್ದರು. ಆದರೆ ಶಾಂತಿ ಮಾತ್ರ ಹೊರಗೆಲ್ಲೂ ಕಾಣಿಸಲಿಲ್ಲ.

ಒಂದು ದಿನ ಅವರು ವಾಕಿಂಗ್ ನಿಂದ ಬರುತ್ತಿರುವಾಗ ಶಾಂತಿ ವರಾಂಡದಲ್ಲಿ ನಿಂತು ತಮ್ಮ ಮನೆಯತ್ತ ನೋಡುತ್ತಾ ನಿಂತಿದ್ದು ಕಂಡು ಹನುಮಂತಯ್ಯನಿಗೆ ಸಂತೋಷವಾಗಿ ಲಗುಬಗೆಯಿಂದ ಅವಳ ಮನೆಯತ್ತ ಹೆಜ್ಜೆ ಹಾಕಿದರು. ಹೇ ಶಾಂತಿ ಹೇಗಿದ್ದೀಯಾ ಎಂದು ಹಿಂದಿನ ಸಲುಗೆಯಿಂದಲೇ ಕೇಳಿದಾಗ ಶಾಂತಿ ತನ್ನ ಕನ್ನಡಕವನ್ನು ಸರಿ ಮಾಡಿ ಕೊಳ್ಳುತ್ತಾ, ಯಾರು, ಹನುಮನಾ ಎಂದು ಕೇಳಿದಳು. ನಂತರ ಗೇಟು ತೆರೆದು ಬಂದು, ನೀನು ಇದ್ದ ಹಾಗೆ ಇದ್ದೀಯಲ್ಲೋ, ಮುಖದ ಮೇಲೆ ನಾಲ್ಕು ಗೆರೆ ಬಿಟ್ಟರೆ ಏನೂ ವ್ಯತ್ಯಾಸವಾಗಿಲ್ಲ ಎಂದಾಗ ಹನುಮಂತಯ್ಯನಿಗೆ ಸಂತಸವಾಗಿ, ಬಾ ನಮ್ಮ ಮನೆಗೆ, ನಿನ್ನ ಬಳಿ ಮಾತನಾಡುವುದಿದೆ ಎಂದಾಗ ಶಾಂತಿ ನಗುತ್ತ ಇನ್ನೂ ನಿನ್ನ ಹಳೆಯ ಚಾಳಿ ಬಿಟ್ಟಿಲ್ಲವೇನೋ ಎನ್ನುತ್ತಾ ಅವನ ಹಿಂದೆಯೇ ಬರುತ್ತಾ ಅವನ ಮನೆಯ ಕಡೆ ನಡೆದಳು.

ಇಬ್ಬರೂ ತಮ್ಮ ತಮ್ಮ ಸಂಸಾರದ ಬಗ್ಗೆ ಮಾತನಾಡಿಕೊಂಡರು. ಆಗ ಶಾಂತಿ ನಾನು ನಿನ್ನನ್ನು ಬಿಟ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಮದುವೆಯಾದ ಮೇಲೆ ತಿಳೀತು. ಮದುವೆಗೆ ಮೊದಲು ಗಂಡ ಶ್ರೀಮಂತ, ಜೊತೆಗೆ ಮುಂಬೈ ನಲ್ಲಿ ಇರುವವರು ಎಂದು ಕುಣಿದಾಡಿ ಬಿಟ್ಟಿದ್ದೆ. ನನ್ನ ಗಂಡನ ಮನೆಯವರು ಶ್ರೀಮಂತರೇನೋ ನಿಜ, ಆದರೆ ನನ್ನ ಗಂಡ ಮಾತ್ರ ಮಹಾ ಕುಡುಕ, ಕುಡಿದ ಅಮಲಿನಲ್ಲಿ ಆತ ದಿನವೂ ನಡೆಸುತ್ತಿದ್ದ ರಂಪ ರಾಮಾಯಣ ನೋಡಿ ಎಷ್ಟೋ ಸಲ ನಿನ್ನಂಥಾ ಒಳ್ಳೆಯ ಹುಡುಗನನ್ನು ಬಿಟ್ಟೆನಲ್ಲ ಎಂದು ಅದೆಷ್ಟೋ ಬಾರಿ ಅತ್ತಿದ್ದುಂಟು.

ತಮ್ಮ ಮಗನಿಗೆ ಜೋರಿನ ಹುಡುಗಿ ಸಿಕ್ಕಿದರೆ ಅವಳೇ ತನ್ನ ಗಂಡನನ್ನು ಸರಿ ಮಾಡುತ್ತಾಳೆ ಎಂದು ಅವನ ತಾಯಿ ನನ್ನನ್ನು ಆರಿಸಿದ್ದರು. ಆದರೆ ಅವನ ರಂಪಾಟದ ಮುಂದೆ ನನ್ನದೇನೂ ನಡೆಯಲೇ ಇಲ್ಲ. ಕೊನೆಗೆ ಅವನು ಕುಡಿದು ಕುಡಿದೇ ಸತ್ತು ಬಿಟ್ಟ. ಹುಟ್ಟಿದ ಒಬ್ಬ ಮಗನಿಗೂ ನಾನು ಬೇಕಾಗಿಲ್ಲ. ಅವನಿಗೆ ಅಮೆರಿಕಾದಲ್ಲಿ ಒಳ್ಳೆ ಕೆಲಸ ಸಿಕ್ಕಿ ಬಿಟ್ಟಿದೆ. ಅದಕ್ಕೆ ನಮ್ಮ ಅತ್ತಿಗೆ ಇಲ್ಲಿ ಬಂದಿರು ಅಂತ ಹೇಳಿದ್ಲು, ಅಣ್ಣನೂ ಇಲ್ಲ ಅವರಿಗೆ ಮಕ್ಕಳೂ ಇಲ್ಲ, ಅವಳಿಗೂ ಒಂಟಿತನ ಬೇಜಾರು ಬಂದು ಬಿಟ್ಟಿದೆ, ಅದಕ್ಕೆ ನನ್ನ ಮಗ ಇಲ್ಲಿ ಕರೆತಂದು ಬಿಟ್ಟು ಹೋದ ಎಂದು ಹೇಳಿ ತನ್ನ ಕಥೆಯನ್ನು ಮುಗಿಸಿದಳು.

ಹನುಮಂತಯ್ಯ, ನನಗೂ ಹೆಂಡತಿ ತೀರಿಕೊಂಡ ಮೇಲೆ ಒಂಟಿ ಬಾಳು ಸಾಕಾಗಿದೆ. ನೀನು ಒಪ್ಪೊದಾದ್ರೆ ನಾನು ಈಗ್ಲೂ ನಿನ್ನನ್ನು ಮದ್ವೇಯಾಗೋಕೆ ರೆಡಿ, ನಿನ್ನನ್ನು ಮದುವೆಯಾಗಬೇಕು ಎನ್ನುವ ಆಸೆ ಇನ್ನೂ ಜೀವಂತವಾಗೇ ಇದೆ ಎಂದಾಗ ಶಾಂತಿ ನಾಚುತ್ತ, ಥೂ ಈ ವಯಸ್ಸಿನಲ್ಲೇ? ಜನ ಕೇಳಿದ್ರೆ ನಕ್ಕಾರು, ಊರು ಹೋಗಿ ಕಾಡು ಹತ್ತಿರ ಬಂತು ಅನ್ನೋ ಸಮಯದಲ್ಲಿ, ಹೋಗ್ಲಿ ನಿನ್ನ ಮಕ್ಕಳು ಏನೂ ಅನ್ನೋಲ್ವಾ ಎಂದಾಗ ಹನುಮಂತಯ್ಯ ಆತುರಾತುರವಾಗಿ, ಅದಕ್ಕೆಲ್ಲ ನೀನು ತಲೆ ಕೆಡಿಸಿಕೊ ಬೇಡಾ ನೀನು ಹೂಂ ಅನ್ನು ಸಾಕು, ಪ್ರೀತಿಗೆ ವಯಸ್ಸನ್ನೋದು ಇಲ್ಲ ಎಂದಾಗ ಶಾಂತಿಯ ಮುಖ ಲಜ್ಜೆಯಿಂದ ಕೆಂಪೇರಿತು. ಅದನ್ನು ನೋಡಿ ಹನುಮಂತಯ್ಯನಿಗೆ ಯೌವ್ವನ ಮರುಕಳಿಸಿದಂತಾಯಿತು.

ಒಬ್ಬಂಟಿ ಅಜ್ಜಿಯ ಪ್ರೀತಿಸುವ ಹೃದಯಗಳು

ತರಕಾರಿ ತರಲು ಮಾರ್ಕೆಟ್ ಕಡೆ ಹೋಗುತ್ತಿದ್ದಾಗ ಮಾರ್ಕೆಟ್ ನ ಮುಂಭಾಗದಲ್ಲಿ ಮುದುಕಿಯೊಬ್ಬಳು ಬುಟ್ಟಿಯಲ್ಲಿ ಸ್ವಲ್ಪ ತರಕಾರಿ ಇಟ್ಟು ಮಾರಾಟಕ್ಕೆ ಕುಳಿತಿದ್ದಳು. ಅವಳನ್ನು ನೋಡಿ ನಮ್ಮ ಮನೆಯ ಬಳಿ ಇದ್ದ ಶಾಲೆಗೆ ತಿಂಡಿ ಮಾರಲು ಬರುತ್ತಿದ್ದ ಅಜ್ಜಿಯ ನೆನಪಾಯಿತು. ಒಬ್ಬ ವಯಸ್ಸಾದ ಕ್ರಿಶ್ಚಿಯನ್ ಹೆಂಗಸು ಬುಟ್ಟಿ ತುಂಬಾ ನಾನಾ ಬಗೆಯ ತಿಂಡಿಗಳನ್ನು ತಾನೇ ತಯಾರಿಸಿ ಚಿಕ್ಕ ಪುಟ್ಟ ಪೊಟ್ಟಣಗಳನ್ನು ಮಾಡಿ ಶಾಲೆಯ ಮಕ್ಕಳಿಗೆ ಮಾರಲು ತರುತ್ತಿದ್ದಳು. ಅವಳ ಹೆಸರೇನೆಂದು ಯಾರಿಗೂ ತಿಳಿದಿರಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ಸರಿಯಾಗಿ ಅವಳು ಶಾಲೆಯ ಗೇಟಿನ ಬಳಿ ಬುಟ್ಟಿ ಸಮೇತ ಬಂದು ಕುಳಿತುಕೊಳ್ಳುತ್ತಿದ್ದಳು. ಮಕ್ಕಳು ಮಧ್ಯಾಹ್ನದ ಊಟ ಮುಗಿಸಿ ಅವಳ ಬಳಿ ತಿಂಡಿಕೊಳ್ಳಲು ಧಾವಿಸುತ್ತಿದ್ದರು.

ಮಧ್ಯಾಹ್ನದ ಹೊತ್ತು ಚಕ್ಕುಲಿ, ನಿಪ್ಪಟ್ಟು, ಕೊಡುಬಳೆ ಇತ್ಯಾದಿ ತರಹೇವಾರಿ ಕುರುಕಲು ತಿಂಡಿಗಳು ಅವಳ ಬಳಿ ಇರುತ್ತಿದ್ದವು. ಅವಳ ಬಳಿ ಬರಬೇಕಾದರೆ ಕೈ ತೊಳೆದುಕೊಂಡು ಬರಬೇಕು ಎಂದು ಅವಳು ಕಟ್ಟಪ್ಪಣೆ ಮಾಡಿದ್ದರಿಂದ ಅವಳು ತರುವ ರುಚಿಕರವಾದ ತಿಂಡಿಗಳಿಗೋಸ್ಕರ ಎಲ್ಲ ಮಕ್ಕಳು ತಪ್ಪದೆ ಕೈ ತೊಳೆದು ಅವಳ ಬಳಿ ಧಾವಿಸಿ ಅವಳಿಗೆ ತಮ್ಮ ಕೈಗಳು ಶುಚಿಯಾಗಿವೆ ಎಂದು ತೋರಿಸಿ ದುಡ್ಡು ಕೊಟ್ಟು ತಮಗೆ ಬೇಕಾದ ತಿಂಡಿಗಳನ್ನು ಕೊಂಡು ಅವುಗಳನ್ನು ಮೆಲ್ಲುತ್ತ ತಮ್ಮ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಅಜ್ಜಿಯ ಬಳಿ ಹೇಳಿಕೊಂಡರೇನೆ ಮಕ್ಕಳಿಗೆಲ್ಲ ಏನೋ ಒಂದು ರೀತಿಯ ಸಮಾಧಾನವಾಗುತ್ತಿತ್ತು. ಕ್ಲಾಸಿನಲ್ಲಿ ಟೀಚರ್ ಬೈದರೆ, ಯಾರಾದರೂ ಹೊಡೆದರೆ, ತಮ್ಮ ಪೆನ್ನು ಪೆನ್ಸಿಲ್ ಯಾರಾದರೂ ಕದ್ದರೆ ಇಂತಹ ದೂರುಗಳು ಅಜ್ಜಿಯ ಬಳಿ ಬರುತ್ತಿದ್ದವು. ಅಜ್ಜಿ ಎಲ್ಲರ ದೂರುಗಳನ್ನು ಸಹನೆಯಿಂದ ಕೇಳಿಕೊಳ್ಳುತ್ತಿದ್ದಳು. ಅಜ್ಜಿ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡಿ ಶಾಲೆಯ ಗಂಟೆ ಬಾರಿಸಿದಾಗ ಖಾಲಿಯಾದ ಬುಟ್ಟಿಯೊಡನೆ ಮನೆಗೆ ಮರಳುತ್ತಿದ್ದಳು.

ಸಂಜೆ ಶಾಲೆ ಬಿಡುವಾಗ ಸರಿಯಾಗಿ ಮತ್ತೆ ಅವಳು ಗೇಟಿನ ಬಳಿ ಬಂದು ಬುಟ್ಟಿ ಹಿಡಿದು ಕುಳಿತುಕೊಂಡಿರುತ್ತಿದ್ದಳು. ಸಂಜೆಯ ಹೊತ್ತು ಅವಳ ಬುಟ್ಟಿಯಲ್ಲಿ ಚುರುಮುರಿ, ಹುರಿದ ಕಡ್ಲೆ ಬೀಜ, ಸಿಹಿ ತಿನಿಸುಗಳು ಇತ್ಯಾದಿ ತಿಂಡಿಗಳು ಇರುತ್ತಿದ್ದವು. ಒಮ್ಮೊಮ್ಮೆ ಸಮೋಸ, ಬಜ್ಜಿ ಇತ್ಯಾದಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತರುತ್ತಿದ್ದಳು. ಸಂಜೆ ಹೊತ್ತು ಮಕ್ಕಳು ಆರಾಮವಾಗಿ ತಿಂಡಿಗಳನ್ನು ಕೊಂಡು ಅವಳು ಹಾಸಿದ ದೊಡ್ಡ ಚಾಪೆಯ ಮೇಲೆ ಕುಳಿತು ಅವಳು ಹೇಳುವ ಕಥೆಗಳನ್ನು ಕೇಳುತ್ತ ತಿಂಡಿಯನ್ನು ಸವಿಯುತ್ತಿದ್ದರು. ಮಧ್ಯಾಹ್ನದ ಹೊತ್ತು ಕೇಳಿದ ಮಕ್ಕಳ ಸಮಸ್ಯೆಗಳು ಸಂಜೆ ಹೊತ್ತು ಕಥಾರೂಪ ಪಡೆದು ಆ ಸಮಸ್ಯೆಗಳಿಗೆ ಕಥೆಯಲ್ಲೇ ಪರಿಹಾರವನ್ನು ಸೂಚಿಸುತ್ತಿದ್ದಳು. ಅವಳ ಕಥೆಗಳು ಬಹಳ ರೋಚಕವಾಗಿರುತ್ತಿದ್ದವು. ಕಳ್ಳತನ ಮಾಡಿದರೆ ಏನಾಗುತ್ತದೆ, ಸುಳ್ಳು ಹೇಳಿದರೆ ಹೇಗೆ ಸಿಕ್ಕಿ ಬಿದ್ದು ಕಷ್ಟ ಅನುಭವಿಸುತ್ತಾರೆ. ಬೇರೆಯವರಿಗೆ ಅನ್ಯಾಯ ಮಾಡಿದರೆ ತಮಗೂ ಕೆಡುಕಾಗುತ್ತದೆ ಎಂಬೆಲ್ಲ ನೀತಿಗಳನ್ನು ಕಥೆಯ ಮೂಲಕ ಮಕ್ಕಳಿಗೆ ಮನದಟ್ಟು ಮಾಡುತ್ತಿದ್ದಳು. ಅವಳ ಕಥೆಗೆ ಧಾರಾವಾಹಿಯಂತೆ ಮುಕ್ತಾಯವೆಂಬುದೇ ಇರುತ್ತಿರಲಿಲ್ಲ. ಹಳೆಯ ಪಾತ್ರಗಳು ಹೋಗುತ್ತಲೇ ಹೊಸ ಹೊಸ ಪಾತ್ರಗಳು ಸೇರ್ಪಡೆ ಗೊಳ್ಳುತ್ತಿದ್ದವು.

ಅವಳ ಕಲ್ಪನಾ ಶಕ್ತಿಯಂತೂ ಅತ್ಯದ್ಭುತವಾಗಿತ್ತು. ಅವಳ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದಿದ್ದರೆ ಅತ್ಯುತ್ತಮ ಲೇಖಕಿ ಎಂದು ಹೆಸರು ಗಳಿಸುತ್ತಿದ್ದಳೇನೋ. ಸಂಜೆಯ ಹೊತ್ತು ಕೇವಲ ಹದಿನೈದು ಇಪ್ಪತ್ತು ನಿಮಿಷಗಳ ಕಾಲದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಕಥೆ ಹೇಳುವಾಗ ಮಕ್ಕಳೆಲ್ಲ ಮಂತ್ರಮುಗ್ಧರಾಗಿ ಆಲಿಸುತ್ತಿದ್ದರು. ಒಮ್ಮೊಮ್ಮೆ ಶಾಲೆಯ ಅಧ್ಯಾಪಕರೂ ಅವಳ ಕಥೆಗಳನ್ನು ಕೇಳಲು ಬರುತ್ತಿದ್ದರು. ಕೇಳುಗರನ್ನೆಲ್ಲ ಹಿಡಿದಿಟ್ಟುಕೊಳ್ಳುವ ಅಂಥಾ ಅದ್ಭುತ ಶಕ್ತಿ ಅವಳ ಕಥೆಗೆ ಇರುತ್ತಿತ್ತು. ಅವರು ಅಜ್ಜಿ, ನೀನು ನಿನ್ನ ಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಲ್ಲ ಎಂದರೆ ತನ್ನ ಬೊಚ್ಚು ಬಾಯನ್ನು ಅಗಲಿಸಿ ನಗುತ್ತಿದ್ದಳು. ಹೇಳುತ್ತಿದ್ದ ಕಥೆಯನ್ನು ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿ ಅಂದಿನ ಕಥೆಯನ್ನು ಅಲ್ಲಿಗೆ ಮುಗಿಸಿ ಮಕ್ಕಳನ್ನು ಮುದ್ದಾಡಿ ಮನೆಗೆ ಹೊರಡುತ್ತಿದ್ದಳು. ಮಕ್ಕಳಿಗೆಲ್ಲ ಆ ಕ್ಷಣಕ್ಕೆ ಬೇಸರವಾದರೂ ಮುಂದೇನಾಗಬಹುದು ಎಂದು ತಮ್ಮ ತಮ್ಮಲ್ಲಿ ಚರ್ಚಿಸುತ್ತ ಮನೆಯತ್ತ ತೆರಳುತ್ತಿದ್ದರು.

ಅವಳ ಕಥೆ ಕೇಳಲೆಂದೇ ಮಕ್ಕಳು ಶಾಲೆಗೆ ನಿತ್ಯವೂ ತಪ್ಪದೇ ಬರುತ್ತಿದ್ದರು. ಶನಿವಾರದಂದು ಮಾತ್ರ ಅವಳು ಶಾಲೆಗೆ ಬರುತ್ತಿರಲಿಲ್ಲ, ಆ ದಿನ ಅವಳು ಪಕ್ಕದೂರಿನ ಅನಾಥಾಶ್ರಮಕ್ಕೆ ಹೋಗಿ ದಿನ ಪೂರ್ತಿ ಅಲ್ಲಿನ ಮಕ್ಕಳ ಜೊತೆ ಕಳೆಯುತ್ತಿದ್ದಳು. ಅವರಿಗಾಗಿ ತಿಂಡಿಗಳನ್ನು ಮಾಡಿ ತೆಗೆದುಕೊಂಡು ಹೋಗುತ್ತಿದ್ದಳು. ಆದರೆ ಅಲ್ಲಿನ ಮಕ್ಕಳಿಗೆ ತಿಂಡಿಗಳು ಉಚಿತವಾಗಿ ದೊರೆಯುತ್ತಿದ್ದವು. ಹಾಗಾಗಿ ಅಲ್ಲಿನ ಮಕ್ಕಳಿಗೆ ಶನಿವಾರ ಬಲು ಪ್ರಿಯವಾದ ದಿನವಾಗಿತ್ತು. ಅವರಿಗೂ ಅಜ್ಜಿ ಕಥೆ ಹೇಳುತ್ತಿದ್ದಳು. ಆದರೆ ಕಥೆ ಅಂದೇ ಮುಕ್ತಾಯಗೊಳ್ಳುತ್ತಿತ್ತು. ರವಿವಾರದಂದು ಅಜ್ಜಿ ಚರ್ಚ್ ಗೆ ಹೋಗುತ್ತಿದ್ದಳು. ಶುಕ್ರವಾರ ಹೇಳಿ ನಿಲ್ಲಿಸಿದ ಕಥೆ ಮುಂದೇನಾಗುತ್ತದೋ ಎಂಬ ಕುತೂಹಲದಿಂದ ಶಾಲೆಯ ಮಕ್ಕಳು ಸೋಮವಾರ ಬರುವುದನ್ನೇ ಕಾಯುತ್ತಿದ್ದರು.

ಅಜ್ಜಿ ಒಂದು ದಿನವೂ ಶಾಲೆಗೆ ತಿಂಡಿ ತೆಗೆದುಕೊಂಡು ಬರುವುದನ್ನು ತಪ್ಪಿಸುತ್ತಿರಲಿಲ್ಲ. ಆದರೆ ಅವಳ ತಿಂಡಿ ಕೊಳ್ಳುವ, ಕಥೆ ಕೇಳುವ ಭಾಗ್ಯ ಎಲ್ಲ ಮಕ್ಕಳಿಗೆ ಇರಲಿಲ್ಲ. ಶ್ರೀಮಂತರ ಮನೆಯ ಮಕ್ಕಳಿಗೆ ಅವಳು ಮಾರುವ ತಿಂಡಿಗಳನ್ನು ಕೊಳ್ಳಲು ಆಸೆ ಇದ್ದರೂ ಅವರ ಮನೆಯವರು ರಸ್ತೆ ಬದಿಯಲ್ಲಿ ಮಾರುವ ತಿಂಡಿಗಳನ್ನು ಕೊಳ್ಳಬಾರದು ತಾಕೀತು ಮಾಡಿದ್ದರಿಂದ ಅಸಹಾಯಕರಾಗಿ ಆಸೆಕಣ್ಣುಗಳಿಂದ ನೋಡುತ್ತಲೇ ಮನೆಗೆ ತೆರಳುತ್ತಿದ್ದರು. ಇನ್ನು ತೀರಾ ಬಡಮಕ್ಕಳಿಗೆ ಕೊಳ್ಳಲು ಹಣವಿಲ್ಲದೆ ಬೇರೆ ಮಕ್ಕಳು ತಿನ್ನುವಾಗ ಆಸೆಯಿಂದ ಅವರನ್ನೇ ದಿಟ್ಟಿಸಿ ನೋಡುತ್ತ ಅಜ್ಜಿ ಹೇಳುವ ಕಥೆಗಳನ್ನು ಮಾತ್ರ ಕೇಳುತ್ತಿದ್ದರು. ಆಗೆಲ್ಲ ಅಜ್ಜಿಗೆ ಅವರನ್ನು ನೋಡಿ ಅಯ್ಯೋ ಎನಿಸಿ ಒಂದು ಪೊಟ್ಟಣ ತೆಗೆದು ಆ ಮಕ್ಕಳಿಗೆ ಉಚಿತವಾಗಿ ಹಂಚುತ್ತಿದ್ದಳು.

ಅಜ್ಜಿ ಹಣಕ್ಕಾಗಿ ತಿಂಡಿ ಮಾರುತ್ತಿರಲಿಲ್ಲ. ಅವಳಿಗೆ ಸ್ವಂತ ಮನೆಯಿತ್ತು, ತೋಟವಿತ್ತು. ಆದರೆ ಆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಅವಳ ಗಂಡ ತೀರಿ ಹೋಗಿದ್ದ, ಮಕ್ಕಳಿರಲಿಲ್ಲ. ಅವಳು ತನ್ನ ಒಂಟಿತನವನ್ನು ಕೆಲಕಾಲದ ಮಟ್ಟಿಗಾದರೂ ಮರೆಯಲು ತಿಂಡಿ ಮಾರುವ ನೆಪದಲ್ಲಿ ಶಾಲೆಗೆ ಬಂದು ಮಕ್ಕಳೊಡನೆ ಸಂತಸದಿಂದ ಕಾಲ ಕಳೆಯುತ್ತಿದ್ದಳು. ಅವಳ ಬುಟ್ಟಿಯ ಹತ್ತಿರ ಯಾವಾಗಲೂ ಒಂದು ಪ್ಲಾಸ್ಟಿಕ್ ಡಬ್ಬವಿರುತ್ತಿತ್ತು. ಪ್ರತಿ ಪ್ಯಾಕೆಟ್ ಗೆ, ಅಂಗಡಿಯಲ್ಲಿ ಅದಕ್ಕೆ ಮೂರು ಪಟ್ಟು ಬೆಲೆ ಇದ್ದರೂ ಮಕ್ಕಳಿಗಾಗಿ ಬರೀ ಒಂದು ರೂಪಾಯಿಯಂತೆ ದರ ವಿಧಿಸಿದ್ದಳು. ಏನೇ ಕೊಂಡರೂ ಒಂದೇ ರೂಪಾಯಿ. ಮಕ್ಕಳಿಗೆ ದುಡ್ಡಿನ ಮಹತ್ವ ತಿಳಿಯಲಿ ಎಂದು ಬಡ ಮಕ್ಕಳನ್ನು ಹೊರತು ಪಡಿಸಿ ಬೇರೆ ಎಲ್ಲ ಮಕ್ಕಳಿಂದಲೂ ದುಡ್ಡು ವಸೂಲು ಮಾಡದೆ ಬಿಡುತ್ತಿರಲಿಲ್ಲ. ಬಡಮಕ್ಕಳಿಗೂ ಪುಕ್ಕಟೆ ಯಾವಾಗಲೂ ಸಿಗುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಲು ದಿನವೂ ಉಚಿತವಾಗಿ ತಿಂಡಿ ಕೊಡುತ್ತಿರಲಿಲ್ಲ.

ಒಮ್ಮೆ ಒಬ್ಬ ಹುಡುಗ ಅವನ ಬಳಿ ಹಣವಿಲ್ಲದೆ ದುಡ್ಡಿನ ಬದಲು ತಗಡಿನ ಚೂರೊಂದನ್ನು ಒಂದು ರೂಪಾಯಿ ಆಕಾರಕ್ಕೆ ಕತ್ತರಿಸಿ ಅವಳ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ತಿಂಡಿಕೊಂಡು ನಂತರ ಅಪರಾಧಿ ಭಾವದಿಂದ ತಲೆ ತಗ್ಗಿಸಿ ತಿನ್ನುತ್ತಿರುವಾಗ ಅಜ್ಜಿಗೆ ಸಂಶಯ ಬಂದು ಆ ಹುಡುಗನನ್ನು ಕೇಳಿದಾಗ ಅವನು ನಿಜವನ್ನು ಹೇಳಲೇ ಬೇಕಾಯಿತು. ಆಗ ಅವಳು ಹೇಳುತ್ತಿದ್ದ ಕಥೆಗೆ ಇವನ ಪಾತ್ರವೊಂದು ಸೇರ್ಪಡೆಯಾಗಿ ಬೇರೆಯವರಿಗೆ ಮೋಸ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಆ ಹುಡುಗನಿಗೆ ಮನವರಿಕೆಯಾಗುವಂತೆ ಮಾಡಿದಳು. ನಂತರ ಆ ಹುಡುಗ ಅಳುತ್ತ ಅವಳ ಬಳಿ ಕ್ಷಮೆಯಾಚಿಸಿ ಮರುದಿನ ತಿಂಡಿ ಕೊಳ್ಳುವಾಗ ಅವನು ಡಬ್ಬಿಗೆ ಎರಡು ರೂಪಾಯಿಯನ್ನು ಹಾಕಿದಾಗ ತನ್ನ ಮಾತು ಪರಿಣಾಮ ಬೀರಿದೆ ಎಂದು ಅಜ್ಜಿ ನಸು ನಕ್ಕಿದ್ದಳು. ಹೀಗೆ ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಿ ಸನ್ಮಾರ್ಗದಲ್ಲಿ ನಡೆಯುವಂತೆ ಅಜ್ಜಿ ಅವರನ್ನು ಪ್ರೇರೇಪಿಸುತ್ತಿದ್ದಳು. ಅದೆಷ್ಟೋ ಮಕ್ಕಳು ಅಜ್ಜಿಯಿಂದಾಗಿ ತಮ್ಮ ಕೆಟ್ಟ ಬುದ್ಧಿಗಳನ್ನು ಬಿಟ್ಟು ಒಳ್ಳೆಯವರಾಗಿದ್ದರು. ಇದು ಆ ಶಾಲೆಯ ಅಧ್ಯಾಪಕ ವೃಂದವರಿಗೆಲ್ಲ ತಿಳಿದು ತಮ್ಮಿಂದಾಗದ ಕೆಲಸವನ್ನು ಈ ಅಜ್ಜಿ ಮಾಡುತ್ತಿದ್ದಾಳಲ್ಲ ಎಂದು ಸಂತಸಪಟ್ಟಿದ್ದರು.

ಅಜ್ಜಿಯ ಕೆಲ ಸಂಬಂಧಿಕರಿಗೆ ಅವಳ ಆಸ್ತಿಯ ಮೇಲೆ ಕಣ್ಣಿತ್ತು. ಅವಳನ್ನು ತಮ್ಮ ಮನೆಯಲ್ಲಿರಿಸಿಕೊಂಡು ಅವಳ ಆಸ್ತಿ ಹೊಡೆಯಬೇಕೆಂದು ಅದೆಷ್ಟೋ ಪ್ರಯತ್ನಗಳನ್ನು ಮಾಡಿದರೂ ಅಜ್ಜಿಗೆ ಅವರ ಕುತಂತ್ರಗಳೆಲ್ಲ ತಿಳಿದಿದ್ದರಿಂದ ಅವರ ಮನೆಗೆ ಹೋಗಲು ನಿರಾಕರಿಸಿದ್ದಳು. ಇದು ಅವರ ಕೆಂಗಣ್ಣಿಗೆ ಗುರಿಯಾಯಿತು. ಅಜ್ಜಿ ಶಾಲೆ ಹೋಗುವುದನ್ನು ತಪ್ಪಿಸಿದರೆ ಮಾತ್ರ ಅವಳು ತಮ್ಮ ಮನೆಗೆ ಬರುತ್ತಾಳೆ ಎಂದು ಅವಳ ಸಂಬಂಧಿಕರು ಅವಳು ಶಾಲೆಗೆ ಹೋಗುವುದನ್ನು ತಪ್ಪಿಸಲು ಹಲವಾರು ಕುತಂತ್ರಗಳನ್ನು ನಡೆಸಿದರು. ಅವಳಿಗೆ ಶಾಲೆಗೆ ಬರುವ ದಾರಿಯಲ್ಲಿ ಅಡ್ಡ ನಿಂತು ಅವಳ ಬುಟ್ಟಿ ಕಿತ್ತುಕೊಳ್ಳುವುದು, ಅವಳ ಮನೆಗೆ ಹೊರಗಿನಿಂದ ಚಿಲಕ ಹಾಕಿ ಶಾಲೆಗೆ ಹೋಗದಂತೆ ಮಾಡುವುದು ಮುಂತಾದವುಗಳನ್ನು ಮಾಡತೊಡಗಿದರು. ಏನೇ ಮಾಡಿದರೂ ಅವಳಿಗೆ ಆ ಸಮಯದಲ್ಲಿ ಯಾರಾದರೂ ಸಹಾಯಕ್ಕೆ ಬಂದು ಅವಳು ಶಾಲೆಗೆ ತಪ್ಪದೆ ಹೋಗುವಂತಾಗುತಿತ್ತು.

ಅಜ್ಜಿ ಕ್ರಿಸ್ಮಸ್ ಹಬ್ಬದ ಮುಂಚಿನ ದಿನ ಶಾಲೆಗೆ ಬಂದಾಗ ಮಕ್ಕಳಿಗೆಲ್ಲ ಕ್ರಿಸ್ಮಸ್ ಹಬ್ಬದ ತಿಂಡಿಗಳನ್ನು ಉಚಿತವಾಗಿ ವಿತರಿಸಿ ಸಂಭ್ರಮ ಪಡುತ್ತಿದ್ದಳು. ಇದನ್ನು ನೋಡಿ ಅಸಹನೆಯಿಂದ ಕುದಿದ ಅವರು ಅಜ್ಜಿ ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸಲು ನೋಡುತ್ತಾಳೆ ಎಂದು ಗುಲ್ಲೆಬ್ಬಿಸತೊಡಗಿದರು. ಇದು ಶಾಲಾ ಮಕ್ಕಳ ಪೋಷಕರ ಕಿವಿಗೂ ಬಿದ್ದು ಗಾಬರಿಗೊಂಡ ಪೋಷಕರು ಶಾಲೆಗೆ ಬಂದು ಅಜ್ಜಿಯನ್ನು ಶಾಲೆಯ ಬಳಿ ಬಾರದಂತೆ ನೋಡಿಕೊಂಡರೆ ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿದರು. ಅವರು, ಅಜ್ಜಿ ಅಂಥವಳಲ್ಲ, ನಿಮ್ಮ ಮಕ್ಕಳಿಗೆ ಒಳ್ಳೆಯದನ್ನೇ ಹೇಳಿಕೊಡುತ್ತಿದ್ದಾಳೆ ಎಂದು ಅವರು ಎಷ್ಟೇ ಮನವರಿಕೆ ಮಾಡಲು ನೋಡಿದರೂ ವ್ಯರ್ಥವಾಗಿ ಕೊನೆ ಬೇರೆ ದಾರಿಯಿಲ್ಲದೆ ಆ ಅಜ್ಜಿಗೆ ಇನ್ನು ಶಾಲೆಗೆ ಬರಬಾರದೆಂದು ತಾಕೀತು ಮಾಡಿದರು.

ಅಜ್ಜಿಗೆ ಇದರ ಹಿಂದೆ ಅವರ ಸಂಬಂಧಿಕರ ಕೈವಾಡವಿದ್ದುದು ಗೊತ್ತಾಯಿತು. ಆದರೂ ಮರುಮಾತನಾಡದೆ ಮನೆಗೆ ಮರಳಿದಳು. ಅವಳಿಗೆ ಮಕ್ಕಳು ಮತ್ತೆ ತಾನು ಶಾಲೆಗೆ ಬರುವಂತೆ ಮಾಡೇ ಮಾಡುತ್ತಾರೆ ಎಂದು ವಿಶ್ವಾಸವಿತ್ತು. ಆದರೆ ಮಕ್ಕಳಿಗೆ ಈ ವಿಷಯ ಗೊತ್ತಾಗಲೇ ಇಲ್ಲ. ಎರಡು ದಿನ ಅಜ್ಜಿಯನ್ನು ಕಾಣದೆ ಮಕ್ಕಳು ಚಡಪಡಿಸತೊಡಗಿದರು. ಅವಳು ಯಾಕೆ ಬರುತ್ತಿಲ್ಲವೆಂದು ತಿಳಿಯದೆ ಒದ್ದಾಡಿದರು. ಅಜ್ಜಿಗೆ ಹುಷಾರಿಲ್ಲವೇನೋ ಎಂದು ಆತಂಕಗೊಂಡರು. ಕೊನೆಗೆ ತಮ್ಮ ಟೀಚರನ್ನೇ ಕೇಳಿದಾಗ ಅವರು ಅಜ್ಜಿಗೆ ಶಾಲೆಗೆ ಬರಬಾರದೆಂದು ಮುಖ್ಯೋಪಾಧ್ಯಾಯರು ಕಟ್ಟಪ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು. ಇದರಿಂದ ಸಿಟ್ಟುಗೊಂಡ ಮಕ್ಕಳು ಆ ಅಜ್ಜಿ ಶಾಲೆಗೆ ಬರದಿದ್ದರೆ ತಾವು ಶಾಲೆಗೆ ಬರುವುದಿಲ್ಲವೆಂದು ಧರಣಿ ಕುಳಿತರು. ಮಕ್ಕಳಿಗೆ ಅಜ್ಜಿಯ ಮೇಲಿನ ಪ್ರೀತಿ ಕಂಡು ಶಾಲೆಯವರು ಮೂಕವಿಸ್ಮಿತರಾದರು. ಅವರ ಪೋಷಕರೇ ಅಜ್ಜಿಯನ್ನು ಬರದಂತೆ ಮಾಡಿದ್ದಾರೆ ಎಂದು ಶಾಲೆಯವರು ಹೇಳಿದಾಗ ಮಕ್ಕಳು ದಂಗಾದರು.

ಮಕ್ಕಳು ಮಧ್ಯಾಹ್ನ ಊಟ ಕೂಡ ಮಾಡದಾಗ ಅಧ್ಯಾಪಕ ವೃಂದದವರು ಮಕ್ಕಳ ಪೋಷಕರಿಗೆ ಕರೆ ಮಾಡಿ ಶಾಲೆಗೆ ಬರುವಂತೆ ಹೇಳಿದರು. ಪೋಷಕರು ಬಂದ ಮೇಲೂ ಮಕ್ಕಳು ತಮ್ಮ ಹಟ ಬಿಡದಾಗ ಅವರು ಸೋತು ಅಜ್ಜಿಯನ್ನು ಬರುವಂತೆ ಹೇಳಿ ಕಳುಹಿಸಿದರು. ಅವರ ಕರೆಯನ್ನೇ ಕಾತರದಿಂದ ಕಾಯುತ್ತಿದ್ದ ಅಜ್ಜಿ ಓಡೋಡಿ ಶಾಲೆಗೆ ಬಂದಳು. ಅಜ್ಜಿಯನ್ನು ಕಂಡ ಮಕ್ಕಳು ಸಂತೋಷದಿಂದ ಅವಳತ್ತ ಧಾವಿಸಿ ಅವಳನ್ನು ಸುತ್ತುವರೆದು ಕುಣಿದಾಡಿದಾಗ ಅಜ್ಜಿ ಮಕ್ಕಳನ್ನು ಅಪ್ಪಿಕೊಂಡು ಸಂತಸದಿಂದ ಮುದ್ದಾಡಿದಳು. ಇದನ್ನು ನೋಡಿ ಪೋಷಕರು ಭಾವುಕರಾಗಿ ಅವರ ಕಣ್ಣಿನಿಂದ ಆನಂದಭಾಷ್ಪ ಸುರಿಯತೊಡಗಿತು. ಅಂದಿನಿಂದ ಮತ್ತೆ ಅವಳು ಯಥಾವತ್ತಾಗಿ ಶಾಲೆಗೆ ಬರಲು ಪ್ರಾರಂಭಿಸಿದಳು. ಆ ಘಟನೆಯ ನಂತರ ಅವಳು ಬೇರೆ ಧರ್ಮಗಳ ಹಬ್ಬದ ದಿನಗಳಲ್ಲೂ ಮಿಠಾಯಿಗಳನ್ನು ಮಕ್ಕಳಿಗೆ ಹಂಚಲು ಶುರು ಮಾಡಿದಳು.

ಮಕ್ಕಳಿಗೆ ಬೇಸಗೆ ರಜೆ ಪ್ರಾರಂಭವಾಗುವ ಮುಂಚಿನ ದಿನ, ನಾಳೆಯಿಂದ ಬೇಸಗೆ ರಜಾ ಶುರುವಾಗುತ್ತದೆ ಮಕ್ಕಳಿಗೆ, ಇನ್ನು ಕೆಲವು ದಿನ ಮಕ್ಕಳನ್ನು ನೋಡಲು ತನಗಾಗುವುದಿಲ್ಲ ಎಂದು ಅಜ್ಜಿ ಆದಷ್ಟು ಬಗೆಯ ತಿಂಡಿಗಳನ್ನು ಮಾಡಿ ಶಾಲೆಗೆ ಬರುವುದು ಸ್ವಲ್ಪ ತಡವಾಗಿ ಆತುರಾತುರವಾಗಿ ಓಡೋಡಿ ಬರುತ್ತ ರಸ್ತೆ ದಾಟುವಾಗ ಯಮದೂತನಂತೆ ಬಂದ ಲಾರಿಯೊಂದು ಅವಳ ಮೇಲೆರಗಿತು. ಅಜ್ಜಿಯು ಲಾರಿಯ ಚಕ್ರದೆಡೆಗೆ ಸಿಲುಕಿ ಅಪ್ಪಚ್ಚಿಯಾಗಿ ರಸ್ತೆಯಲ್ಲಿ ರಕ್ತದೋಕುಳಿಯೇ ಚೆಲ್ಲಿತ್ತು.

ಅವಳ ಬುಟ್ಟಿಯಲ್ಲಿದ್ದ ತಿಂಡಿಗಳೆಲ್ಲ ಲಾರಿಯ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದ್ದವು. ಅಕ್ಕಪಕ್ಕದವರೆಲ್ಲ ಧಾವಿಸಿ ಬಂದು ನೋಡಿದಾಗ ಅಜ್ಜಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ವಿಷಯ ತಿಳಿದ ಮಕ್ಕಳು ಅಳಲು ಶುರು ಮಾಡಿದರು. ಶಾಲೆಯವರಿಗೂ ಅಜ್ಜಿ ಅಪಘಾತದಲ್ಲಿ ತೀರಿಕೊಂಡಿದ್ದು ಬಹಳ ದುಃಖವಾಯಿತು. ಮಕ್ಕಳನ್ನು ಸಂತೈಸಲಾಗದೆ ಪೋಷಕರನ್ನು ಕರೆಸಬೇಕಾಯಿತು. ಸಂತಾಪ ಸಭೆ ನಡೆಸಿ ಆಜ್ಜಿಯ ಆತ್ಮಕ್ಕೆ ಶಾಂತಿಯನ್ನು ಕೋರುತ್ತ ಒಂದು ನಿಮಿಷ ಮೌನ ಆಚರಿಸಿದರು. ಮಕ್ಕಳು ಮಾತ್ರ ತಮ್ಮದೇ ಅಜ್ಜಿ ತೀರಿಕೊಂಡರೆನೋ ಅನ್ನುವಷ್ಟು ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತರು. ಆ ದಿನ ಶಾಲೆಗೆ ರಜೆ ಸಾರಲಾಯಿತು.

ಮರುದಿನ ಅಂತಿಮ ಗೌರವವನ್ನು ಸಲ್ಲಿಸಲು ಅಜ್ಜಿಯ ಮೃತದೇಹವನ್ನು ಶಾಲೆಯಲ್ಲಿ ಇರಿಸಿದಾಗ ನೋಡಲು ಸಾವಿರಾರು ಜನ ಸೇರಿದರು. ಅಜ್ಜಿಯನ್ನು ಕಳೆದುಕೊಂಡ ಮಕ್ಕಳು ಕಂಗಾಲಾಗಿದ್ದರು. ಮಕ್ಕಳ ಅವಸ್ಥೆ ನೋಡಿ ಪೋಷಕರು ಆತಂಕಗೊಡಿದ್ದರು. ಎಲ್ಲರ ಮುಖದಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು. ಕೆಲವು ವರುಷಗಳಿಂದ ಮನೆಯಲ್ಲಿ ಒಬ್ಬಂಟಿಗಳಾಗಿ ಬಾಳಿದ ಅಜ್ಜಿ ಹಲವಾರು ಜನರ ಪ್ರೀತಿ ವಿಶ್ವಾಸ ಗಳಿಸಿ ಸಾಯುವ ಕಾಲದಲ್ಲಿ ಅಜ್ಜಿ ಒಬ್ಬಂಟಿಯಲ್ಲ ಎಂಬುದಕ್ಕೆ ಅಲ್ಲಿ ನೆರೆದ ಸಾವಿರಾರು ಜನರೇ ಸಾಕ್ಷಿಯಾದರು. ಅಜ್ಜಿಯ ಸಂಬಂಧಿಕರಿಗೆ ಅವಳು ಸತ್ತದ್ದು ಸಂತಸವಾಗಿ ಅವಳ ಆಸ್ತಿ ಇನ್ನು ತಮ್ಮದಾಯಿತು ಎಂದು ಅವಳ ಪಾರ್ಥಿವ ಶರೀರದ ಮುಂದೆಯೇ ತಮ್ಮ ತಮ್ಮಲ್ಲಿಯೇ ಕಿತ್ತಾಡತೊಡಗಿದರು.

ಆದರೆ ವಕೀಲರು ಬಂದು ಅಜ್ಜಿ, ಮನೆಯನ್ನು ಆ ಶಾಲೆಯ ಬಡಮಕ್ಕಳ ಕಲ್ಯಾಣಕ್ಕಾಗಿ ಉಪಯೋಗಿಸಬೇಕೆಂದೂ, ಅವಳ ತೋಟವನ್ನು ಅನಾಥಾಶ್ರಮಕ್ಕೂ, ಬ್ಯಾಂಕ್ ನಲ್ಲಿದ್ದ ಅವಳ ಹಣವನ್ನೆಲ್ಲ ಚರ್ಚ್ ಗೆ ದಾನ ಮಾಡಿದ ವೀಲುನಾಮೆಯನ್ನು ತೋರಿಸಿದಾಗ ಅಜ್ಜಿಯ ಸಂಬಂಧಿಕರು ಮಂಕು ಬಡಿದಂತಾದರು. ಆ ಅಜ್ಜಿಯ ನಿಧನದ ಬಳಿಕ ಅದೆಷ್ಟೋ ಜನ ಹೆಂಗಸರು ವ್ಯಾಪಾರದ ದೃಷ್ಟಿಯಿಂದ ತಿಂಡಿಗಳನ್ನು ಮಾರಲು ಶಾಲೆಗೆ ಬಂದರೂ ಅಜ್ಜಿಯಂತೆ ಕಥೆ ಹೇಳದೆ ಮಾತು ಮಾತಿಗೂ ಸಿಡುಕುತ್ತ ಗದರಿಸುತ್ತಾ ಇರುವ ಅವರನ್ನು ನೋಡಿ ಮಕ್ಕಳಿಗೆ ತಿಂಡಿಗಳನ್ನು ಕೊಳ್ಳುವುದರಲ್ಲಿನ ಆಸಕ್ತಿಯೇ ಹೊರಟು ಹೋಯಿತು.