ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳು ನಿಷೇಧವಾಗಿ ನಿನ್ನೆಗೆ 42 ದಿನಗಳು ಕಳೆದವು. ನಾನು ನನ್ನಲ್ಲಿದ್ದ ಎರಡು ಪಿಂಕ್ ನೋಟುಗಳನ್ನು ತೆಗೆದುಕೊಂಡು ಚಿಲ್ಲರೆ ಮಾಡಿಸಲು ಬ್ಯಾಂಕಿನತ್ತ ಹೆಜ್ಜೆ ಹಾಕಿದೆ. ಅಲ್ಲಿನ ಜನಜಂಗುಳಿ ನೋಡಿ ಜಾತ್ರೆಯ ನೆನಪಾಯಿತು. ನವೆಂಬರ್ 9 ರಂದು ಜನಜಂಗುಳಿ ಹೇಗಿತ್ತೋ ಹಾಗೆಯೇ ಇನ್ನೂ ಇದೆ. ಪರಿಸ್ಥಿತಿ ಕೊಂಚವಾದರೂ ಬದಲಾಗಿಲ್ಲವಲ್ಲ ಎಂದು ಆಶ್ಚರ್ಯವಾಯಿತು. ನನ್ನ ಮುಸ್ಲಿಂ ಗೆಳತಿ ಕೂಡ ಸರತಿ ಸಾಲಿನಲ್ಲಿ ನಿಂತಿದ್ದಳು.
ಅವಳನ್ನು ಕಂಡು ಸಂತಸದಿಂದ ಹಬ್ಬ ಹೇಗಾಯ್ತು ಎಂದು ಕೇಳಿದೆ. ಅದಕ್ಕವಳು, ನಮ್ಮ ಹಬ್ಬವೆಲ್ಲ ಕ್ಯೂನಲ್ಲಿ ನಿಂತೇ ಕಳೆದು ಹೋಯಿತು. ದುಡ್ಡಿಲ್ಲದೆ ಹಬ್ಬ ಹೇಗೆ ಮಾಡಲಿ, ಮನೆಯವರೆಲ್ಲ ಸೇರಿ ಕ್ಯೂನಲ್ಲಿ ನಿಂತೂ ನಿಂತೂ ಕಾಲು ನೋಯಿಸಿ ಕೊಂಡಿದ್ದೇ ಬಂತು. ಬಡವರಿಗೆ ದಾನ ಮಾಡೋದಿಕ್ಕೆ ನಮ್ಮ ಬಳಿಯೇ ದುಡ್ಡಿಲ್ಲ, ಎಂಥ ಗತಿ ಬಂದಿತು ನಮಗೆ ಎನ್ನುವಾಗ ಅವಳ ಕಣ್ಣಂಚಿನಲ್ಲಿ ನೀರು ಜಿನುಗಿತು. ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂದು ನನಗೆ ತಿಳಿಯಲಿಲ್ಲ. ನಮ್ಮೆಲ್ಲರ ಪರಿಸ್ಥಿತಿಯೂ ಅವಳಿಗಿಂತ ಭಿನ್ನವಾಗಿಲ್ಲ. ನಾನು ಕ್ಯೂನಲ್ಲಿ ನಿಂತುಕೊಂಡೆ. ನನ್ನ ಸರದಿ ಬಂದಾಗ ಚಿಲ್ಲರೆ ಕೊಡಪ್ಪ ಎಂದು ಪಿಂಕ್ ನೋಟು ಕೊಟ್ಟರೆ ನೂರು ಹಾಗೂ ಐವತ್ತರ ನೋಟುಗಳಿಲ್ಲ, ಹತ್ತರ ಬಂಡಲ್ ಆಗಬಹುದೇ ಎಂದು ಆತ ಕೇಳಿದಾಗ ಇಷ್ಟು ದಿನಗಳಾದರೂ ಪರಿಸ್ಥಿತಿ ಕೊಂಚವೂ ಸುಧಾರಿಸಿಲ್ಲವಲ್ಲ ಎಂದು ಆಶ್ಚರ್ಯ ವಾಯಿತು.
ಕಾಳಧನಿಕರನ್ನು ಮಟ್ಟ ಹಾಕಲು ಮಾಡಿದ ನೋಟು ನಿಷೇಧ ಸಾಮಾನ್ಯ ಜನರ ಬದುಕನ್ನು ಘೋರವಾಗಿಸಿ ಬಿಟ್ಟಿತು. ಹಳೆಯ ನೋಟುಗಳ ನಾಲ್ಕು ಸಾವಿರ ರೂಪಾಯಿಗಳನ್ನು ಮಾತ್ರ ವಿನಿಮಯ ಮಾಡಿಸಿಕೊಂಡು ಉಳಿದ ಹಣವನ್ನೆಲ್ಲ ತಮ್ಮ ಖಾತೆಗೆ ಜಮೆ ಮಾಡಿದ ರೈತರಿರ ಕೈಗೆ ದಕ್ಕಿದ್ದು ಎರಡು ಪಿಂಕ್ ನೋಟುಗಳು. ಅದನ್ನು ಚಿಲ್ಲರೆ ಮಾಡಿಸಲು ಕೊಟ್ಟ ಬ್ಯಾಂಕುಗಳಿಗೆ ಹೋದರೂ ಚಿಲ್ಲರೆ ಇಲ್ಲವೆನ್ನುತ್ತಿದ್ದಾರೆ. ಇದರಿಂದಾಗಿ ರೈತರಿಗೆ ತಾವು ಬೆಳೆದ ಫಸಲನ್ನು ಕಟಾವು ಮಾಡಿಸಲಾಗುತ್ತಿಲ್ಲ. ಕಷ್ಟ ಪಟ್ಟು ಹೇಗೋ ಕಟಾವು ಮಾಡಿಸಿ ಮಾರುಕಟ್ಟೆಗೆ ತಂದರೆ ಕೊಳ್ಳುವವರಿಲ್ಲ ಕಾರಣ ಕೊಳ್ಳುವವರ ಬಳಿ ಹಣವಿಲ್ಲ. ಕೂಲಿಯಾಳುಗಳಿಗೆ ಕೆಲಸವೇ ದೊರಕುತ್ತಿಲ್ಲ. ಕೆಲಸ ಸಿಕ್ಕಿದರೂ ಸಂಬಳ ಸಿಗುತ್ತಿಲ್ಲ. ಈ ಪರಿಸ್ಥಿತಿಯ ದುರ್ಲಾಭ ಮಾಡಿಕೊಂಡು ಕೆಲವರು ಕೆಲಸದವರಿಗೆ ಕಡಿಮೆ ಸಂಬಳ ಕೊಡುತ್ತಿದ್ದಾರೆ. ಆದರೂ ಅವರು ಪಾಪ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಕೆಲಸ ಮಾಡುತ್ತಿದ್ದಾರೆ. ಹೊಟ್ಟೆ ಪಾಡಿಗೋಸ್ಕರ ಕೆಲಸ ಮಾಡಲೇ ಬೇಕಲ್ಲವೇ.
ಇನ್ನು ಅನೇಕ ಅಶಕ್ತರು, ಅನಾರೋಗ್ಯ ಪೀಡಿತರು, ವಯಸ್ಸಾದವರು ಬ್ಯಾಂಕಿನ ಕ್ಯೂನಲ್ಲಿ ನಿಲ್ಲಲಾಗದೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ವ್ಯಾಪಾರಿಗಳು ಗ್ರಾಹಕರಿಗಾಗಿ ಕಾದು ಕಾದೂ ಸೋತುಹೋದರೇ ವಿನಃ ಒಂದು ಪೈಸೆಯ ವ್ಯಾಪಾರ ಕೂಡ ಆಗದೆ ಒದ್ದಾಡುತ್ತಿದ್ದಾರೆ. ಸಾಲಸೋಲ ಮಾಡಿ ಬಂಡವಾಳ ಹಾಕಿ ಅಂಗಡಿ ಹಾಕಿದವರ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾರಿಗೂ ವ್ಯಾಪಾರವಿಲ್ಲ. ಯಾರ ಮುಖದಲ್ಲೂ ಲವಲವಿಕೆ ಇಲ್ಲ, ಇನ್ನು ದುಡ್ಡಿದ್ದವರ ಪರಿಸ್ಥಿತಿಯೂ ಅಷ್ಟೇ. ತಮ್ಮದೇ ಹಣ ಬ್ಯಾಂಕಿನಲ್ಲಿ ಬೇಕಾದಷ್ಟು ಇದ್ದರೂ ತೆಗೆಯಲಾರದಂಥ ಪರಿಸ್ಥಿತಿ. ಆದರೂ ಅವರಿಗೆಲ್ಲ ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮುಂತಾದ ಸೌಲಭ್ಯಗಳಿದ್ದುದರಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ತೀವ್ರವಾದ ಹೊಡೆತ ಬಿದ್ದಿದ್ದು ಸಾಮಾನ್ಯ ಜನರಿಗಷ್ಟೇ. ಆದರೂ ಜನ ಎಲ್ಲವನ್ನು ಸಹಿಸಿಕೊಂಡು ದೇಶಕ್ಕೆ ಒಳಿತಾಗುವುದಾದರೆ ಆಗಲಿ ಎಂದು ಸುಮ್ಮನಿದ್ದಾರೆ.
ಆದರೆ ಮೋದಿಯವರು ಹೇಳಿದಂತೆ ಡಿಸೆಂಬರ್ ಕಳೆದ ಬಳಿಕ ಎಲ್ಲವೂ ಸರಿಯಾಗುವುದೇ ಎಂದು ಈಗೀಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ನವೆಂಬರ್ 8 ರಂದು ಮೋದಿ ಹೇಳಿದ ಮಾತಿನಂತೆ ಇದುವರೆಗೂ ನಡೆದಿಲ್ಲ. ಅವರಿಂದ ಕಾಳ ಧನಿಕರನ್ನು ಮಟ್ಟ ಹಾಕಲು ಆಗಲಿಲ್ಲ. ಸರಕಾರ ಚಾಪೆ ಕೆಳಗೆ ತೂರಿದರೆ ಕಾಳಧನಿಕರು ರಂಗೋಲಿಯಡಿ ತೂರಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಇರುವ ಕಾಳಧನಿಕರೆಲ್ಲ ಏನೇನೋ ಉಪಾಯ ಮಾಡಿ ತಮ್ಮಲ್ಲಿದ್ದ ಹಳೆಯ ನೋಟುಗಳನ್ನೆಲ್ಲ ಬದಲಾಯಿಸಿಕೊಂಡರು. ಅವರ ಪ್ರಯತ್ನಗಳನ್ನು ನಿಷ್ಫಲಗೊಳಿಸಲು ಸರಕಾರ ದಿನಕ್ಕೊಂದು ಆದೇಶ ಹೊರಡಿಸಿತು. ಆದರೆ ಅವರ ಆದೇಶಗಳಿಂದ ಸಾಮಾನ್ಯ ಜನರಿಗೆ ಮತ್ತಷ್ಟು ಹೊಡೆತಗಳು ಬಿದ್ದವೇ ಹೊರತು ಕಾಳಧನಿಕರು ಮಾತ್ರ ಆರಾಮವಾಗಿ ಇದ್ದಾರೆ.
ನವೆಂಬರ್ 8 ರಂದು ಮೊದಲಿಗೆ ಕೇವಲ ನಾಲ್ಕು ಸಾವಿರ ರೂಪಾಯಿಗಳನ್ನಷ್ಟೇ ವಿನಿಮಯ ಮಾಡಿಕೊಳ್ಳಬಹುದು ನವೆಂಬರ್ 24ರ ಬಳಿಕ ಇದನ್ನು ಸಡಿಲಿಸಲಾಗುವುದು ಎಂದರು. ಆದರೆ ದಿನಗಳು ಕಳೆದಂತೆ ನಿಯಮಗಳು ಮತ್ತಷ್ಟು ಬಿಗಿಯಾಗುತ್ತಲೇ ಹೋದವು. ಡಿಸೆಂಬರ್ 30ರವರೆಗೆ ಕಾಲಾವಕಾಶವಿದೆ ಜನರು ಆತಂಕ ಪಡಬೇಕಿಲ್ಲ ಎಂದರು. ಆದರೆ ನಿನ್ನೆ ಇದುವರೆಗೂ ಯಾಕೆ ಹಳೆನೋಟುಗಳನ್ನು ಜಮೆ ಮಾಡಿಲ್ಲ ಎನ್ನುವುದಕ್ಕೆ ಜನ ಸ್ಪಷ್ಟೀಕರಣ ನೀಡಬೇಕು ಎನ್ನುತ್ತಿದ್ದಾರೆ. ಈ ಲೇಖನ ಬರೆಯುತ್ತಿದ್ದಂತೆ ಟೀವಿಯಲ್ಲಿ ಇನ್ನು ಮುಂದೆ ಹಳೇ ನೋಟುಗಳನ್ನು ಖಾತೆಗಳಲ್ಲಿ ಜಮೆ ಮಾಡುವಾಗ ಸ್ಪಷ್ಟೀಕರಣ ನೀಡಬೇಕಾಗಿಲ್ಲ ಜೊತೆಗೆ ಜನರು ತಮ್ಮ ಬಳಿ ಇದ್ದ ಹಣವನ್ನೆಲ್ಲ ಜಮೆ ಮಾಡಬಹುದು ಅದಕ್ಕೆ ಯಾವುದೇ ಮಿತಿ ಇಲ್ಲ ಎಂದು ಜನರ ತೀಕ್ಷ್ಣ ಪ್ರತಿಕ್ರಿಯೆಗೆ ಬೆದರಿ ತಮ್ಮ ಆದೇಶವನ್ನು ಹಿಂಪಡೆದರು ಎಂದು ಮಾಹಿತಿ ಬಂದಾಗ ಬಗ್ಗಿದವನಿಗೆ ಗುದ್ದು ಹೆಚ್ಚು ಎಂಬ ನಾಣ್ನುಡಿ ನೆನಪಾಯಿತು.
ಜನರಲ್ಲಿ ಪ್ರಮುಖವಾಗಿ ಇದ್ದ ನೋಟುಗಳನ್ನು ನಿಷೇಧ ಮಾಡಿದರೆ ಅದಕ್ಕೆ ಬದಲಾಗಿ ಸಣ್ಣ ನೋಟುಗಳನ್ನುಮೊದಲೇ ಬ್ಯಾಂಕು ಗಳಿಗೆ ಸರಕಾರ ಒದಗಿಸಬೇಕಿತ್ತು. ಸರಕಾರ ಅದನ್ನೂ ಮಾಡಲಿಲ್ಲ.ಇದೆಲ್ಲವನ್ನು ನೋಡುತ್ತಿದ್ದರೆ ಮೋದಿಯವರಿಗೆ ನೋಟು ನಿಷೇಧ ಮಾಡಿದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿರಲಿಲ್ಲವೋ ಅಥವಾ ಅವರು ಕೇವಲ ಕಾಳಧನಿಕರನ್ನು ಮಾತ್ರ ಗುರಿಯಾಗಿಟ್ಟುಕೊಂಡರೋ ಎಂದು ಸಂಶಯ ಮೂಡುತ್ತದೆ. ಅವರು ಕೊಟ್ಟ ಕಾರಣಗಳು ನೋಟುಗಳ ನಿಷೇಧದಿಂದ ಕಪ್ಪು ಹಣ ಮತ್ತು ಕಳ್ಳ ನೋಟುಗಳ ಹಾವಳಿ ಮತ್ತು ಭಯೋತ್ಪಾದನೆಗೆ ಬಳಸಲ್ಪಡುವ ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಸಹಾಯವಾಗಲಿದೆ ಎಂದು. ಆದರೆ ನಿಜವಾಗಿಯೂ ಹಾಗೆ ಆಗುತ್ತಿದೆಯೇ, ಭಯೋತ್ಪಾದಕರ ಬಳಿ ಸಿಕ್ಕ ಹೊಸ ನೋಟುಗಳು, ಕಾಳ ಧನಿಕರು ಏನೇನೋ ಸರ್ಕಸ್ ಗಳನ್ನೂ ಮಾಡಿಕೊಂಡು ತಮ್ಮಲ್ಲಿದ್ದ ಕಪ್ಪು ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಂಡಿದ್ದು ನೋಡಿದರೆ ಅನುಮಾನ ಮೂಡುತ್ತದೆ. ಜೊತೆಗೆ ಇನ್ನು ಮುಂದೆಯೂ ಅವರೆಲ್ಲ ಕಾಳ ಧನ ಕೂಡಿಡುವ ಕೆಲಸ ಮಾಡುವದಿಲ್ಲ ಎನ್ನುವುದು ಏನು ಗ್ಯಾರಂಟಿ.
ಜನ ಸಾಮಾನ್ಯರಿಗೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ದೊರಕದ ಹಣ ಕಾಳ ಧನಿಕರಿಗೆ ಅದೆಲ್ಲಿಂದ ದೊರಕಿತು. ಇನ್ನು ಕಳ್ಳ ನೋಟಿನ ಜಾಲದವರು ಹೊಸ ನೋಟುಗಳ ಪರಿಚಯವೇ ಇಲ್ಲದ ಮುಗ್ಧ ಜನರಿಗೆ ಹೊಸನೋಟಿನ ನಕಲಿ ನೋಟುಗಳನ್ನು ಕೊಟ್ಟು ವಂಚಿಸುತ್ತಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಜನ ನರಳುತ್ತಿರುವಾಗಲೇ ಸರಕಾರ ಎಲ್ಲರೂ ಆದಷ್ಟೂ ತಂತ್ರಜ್ಞಾನ ಉಪಯೋಗಿಸಿ ವ್ಯವಹಾರ ನಡೆಸಬೇಕು ಎಂದು ಆದೇಶ ಮಾಡಿತು. ಆದರೆ ಸರಕಾರ ಯಾಕೆ ಯೋಚಿಸುತ್ತಿಲ್ಲ. ಆನ್ ಲೈನ್ ವ್ಯವಹಾರ, ಕಾರ್ಡ್ ಬಳಕೆ ಅದೆಷ್ಟು ಸುರಕ್ಷಿತವಾಗಿದೆ, ಎಷ್ಟೋ ಜನ ವಿದ್ಯಾವಂತರೇ ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಅದೆಷ್ಟೋ ಕಾರ್ಡು ಹೊಂದಿರುವವರು ಸುಳ್ಳು ಕರೆಗಳಿಗೆ ಮೋಸ ಹೋಗಿ ಹಣ ಕಳೆದುಕೊಂಡಿದ್ದಾರೆ. ಮೊದಲು ಅದರ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದು.
ನಮ್ಮ ದೇಶದಲ್ಲಿ ಅದೆಷ್ಟೋ ಜನ ಅವಿದ್ಯಾವಂತರಿದ್ದಾರೆ. ಅನೇಕ ಜನರಿಗೆ ಬ್ಯಾಂಕ್ ಖಾತೆಗಳಿಲ್ಲ, ಅದೆಷ್ಟೋ ಜನರ ಬಳಿ ಮೊಬೈಲ್ ಫೋನುಗಳಿಲ್ಲ, ಅದೆಲ್ಲ ಇದ್ದವರಲ್ಲೂ ಎಷ್ಟು ಜನರಿಗೆ ಇಂಟರ್ನೆಟ್ ಬಳಸಲು ಗೊತ್ತಿದೆ. ಅದೆಲ್ಲ ಬಿಡಿ ಇಂಟರ್ನೆಟ್ ಹಳ್ಳಿಗಳಲ್ಲಿ ಸುಸೂತ್ರವಾಗಿ, ನಿಯಮಿತವಾಗಿ ಸಿಗುತ್ತದೆಯೇ, ಮೊಬೈಲ್ ಫೋನುಗಳಿಗೆ ನೆಟ್ ವರ್ಕ್ ಸಿಗದ ಹಳ್ಳಿಗಳೆಷ್ಟೋ ಇವೆ. ಇನ್ನು ವಿದ್ಯುತ್ ಎಷ್ಟು ಹಳ್ಳಿಗಳಲ್ಲಿ ಇಪ್ಪತ್ನಾಲ್ಕು ತಾಸು ಇರುತ್ತವೆ. ಹಳ್ಳಿಯ ಜನ ಮುಗ್ಧರು, ತಮಗೆ ಆಧುನಿಕ ತಂತ್ರಜ್ಞಾನ ತಿಳಿಯದೆಂದು ಅವರು ಬೇರೆಯವರನ್ನು ಅವಲಂಬಿಸಿ ಬಿಡುತ್ತಾರೆ. ಅವರ ಮುಗ್ಧತೆಯನ್ನು ಬೇರೆಯವರು ದುರುಪಯೋಗ ಮಾಡಿಕೊಂಡರೆ ಅದಕ್ಕೆ ಯಾರು ಹೊಣೆ.
ಬಲವಂತದ ಮಾಘಸ್ನಾನ ಮಾಡಿಸಲು ಹೋದರೆ ಮುಂದೆ ಸಾಮಾನ್ಯ ಜನರಿಗೆ ಆನ್ ಲೈನ್ ಹಾಗೂ ಕಾರ್ಡ್ ಬಳಕೆಯಲ್ಲಿ ವಂಚನೆಗಳು ಅಧಿಕವಾಗಬಹುದು. ಕ್ಯಾಶ್ ಲೆಸ್ ವ್ಯವಹಾರ ಎನ್ನುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವಂತಾಯಿತು. ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಜನ ಒದ್ದಾಟ ನಡೆಸುತ್ತಿರುವಾಗ ಸರಕಾರ ನೋಟು ನಿಷೇಧ ಮಾಡಿ ಇನ್ನಷ್ಟು ಹೊಡೆತ ಕೊಟ್ಟಿದೆ. ಜನ ನೀರಿಗಾಗಿ ಕ್ಯೂ ನಿಲ್ಲುತ್ತಿದ್ದವರು ಈಗ ದುಡ್ಡಿಗಾಗಿ ಕ್ಯೂನಲ್ಲಿ ನಿಲ್ಲಲೋ ಅಥವಾ ನೀರಿಗೋ ಎಂದು ಗೊಂದಲ ಪಡುವಂತಾಗಿದೆ.
ಮೊದಲು ಸರಕಾರ ಜನರನ್ನು ವಿದ್ಯಾವಂತರನ್ನಾಗಿ ಮಾಡಲಿ. ಅವರಿಗೆ ಜೀವನಾವಶ್ಯಕವಾದ ನೀರು, ರಸ್ತೆ,ವಿದ್ಯುತ್ ಗಳನ್ನೂ ಒದಗಿಸಲಿ, ನಂತರ ಕ್ಯಾಶ್ ಲೆಸ್ ಮಾಡುವತ್ತ ಚಿತ್ತ ಹರಿಸಲಿ. ದೇಶ ಅಭಿವೃದ್ಧಿಯಾಗುವುದನ್ನು ಯಾವ ಪ್ರಜೆ ತಾನೇ ನೋಡಲು ಬಯಸುವುದಿಲ್ಲ. ಬದಲಾವಣೆ ತರಬೇಕು ನಿಜ ಆದರೆ ರಾತೋ ರಾತ್ರಿ ಬದಲಾವಣೆ ಅಸಾಧ್ಯ. ಅಂತಹ ಪ್ರಯತ್ನಗಳನ್ನು ಮಾಡಲು ಹೋದರೆ ಇಡೀ ದೇಶವೇ ಸಂಕಷ್ಟಕ್ಕೀಡಾಗುತ್ತದೆಯೇ ಹೊರತು ಲಾಭವೇನಿಲ್ಲ. ಮುಖ್ಯವಾಗಿ ತಾಳ್ಮೆ ಹಾಗೂ ಸಹನೆ ಇರಬೇಕು. ಅದು ಇವತ್ತಿನವರೆಗೆ ಜನರಲ್ಲಿ ಇದೆ ಆದರೆ ಸರಕಾರಕ್ಕೆ ಮಾತ್ರ ಇಲ್ಲ. ಯಾರೋ ಕೆಲವರು ಮಾಡುವ ತಪ್ಪಿಗೆ ಸರಕಾರ ಎಲ್ಲರನ್ನೂ ಶಿಕ್ಷಿಸುತ್ತಿದೆ. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುತ್ತಿದೆ ಇದು ಎಷ್ಟು ಸರಿ ?
ಕಳೆದ ವರ್ಷ ಕೇಬಲ್ ಟೀವಿ ಗೆ ಸೆಟ್ ಟಾಪ್ ಬಾಕ್ಸ್ ಹಾಕಿಸುವುದು ಅನಿವಾರ್ಯ ಎಂದು ಸರಕಾರ ಆದೇಶ ಹೊರಡಿಸಿತು. ಇದರಿಂದ ಜನರಿಗೆ ಏನು ಲಾಭವಾಯಿತು. ಹೇಳಿಕೊಳ್ಳಲು ಡಿಜಿಟಲ್ ಇಂಡಿಯಾ ಎಂದು ಆಯಿತೇ ಹೊರತು ಜನರಿಗೆ ಮಾತ್ರ ನಷ್ಟವಾಯಿತು. ಸೆಟ್ ಟಾಪ್ ಬಾಕ್ಸ್ ಖರೀದಿಸಲು ಸುಮಾರು ಎರಡು ಸಾವಿರ ರೂಪಾಯಿಗಳನ್ನು ಅನಾವಶ್ಯಕವಾಗಿ ತೆರಬೇಕಾಯಿತು. ಇನ್ನೂರು ಇನ್ನೂರೈವತ್ತು ರೂಪಾಯಿ ಕೊಟ್ಟು ಕೇಬಲ್ ಟೀವಿ ನೋಡುತ್ತಿದ್ದವರು ಅದೇ ಚಾನೆಲ್ ಗಳನ್ನೂ ಇನ್ನೂ ಹೆಚ್ಚಿನ ದರ ಕೊಟ್ಟು ನೋಡಬೇಕಾಗಿದೆ. ಜೊತೆಗೆ ಸೆಟ್ ಟಾಪ್ ಬಾಕ್ಸ್ ನಿಂದ ವಿದ್ಯುತ್ ಖರ್ಚು ಬೇರೆ. ಅದೂ ಅಲ್ಲದೆ ಸೆಟ್ ಟಾಪ್ ಬಾಕ್ಸ್ ಕೆಟ್ಟು ಹೋದರೆ ಅದರ ರಿಪೇರಿ ಖರ್ಚು ಬೇರೆ. ಒಟ್ಟಿನಲ್ಲಿ ಜನಸಾಮಾನ್ಯರಿಗೆ ತೊಂದರೆಯೇ ಹೊರತು ಲಾಭವೇನಾಗಿಲ್ಲ. ಈ ವರುಷ ಗ್ರಾಮೀಣ ಭಾಗದವರಿಗೆ ಸೆಟ್ ಟಾಪ್ ಬಾಕ್ಸ್ ನ ಭೂತ ಕಾಡುತ್ತಿದೆ. ದುಡ್ಡಿಲ್ಲದೆ ಒದ್ದಾಡುತ್ತಿರುವ ಸಮಯದಲ್ಲಿ ಈ ಸಮಸ್ಯೆ ಬೇರೆ. ಇನ್ನು ಮುಂದೆ ಏನೇನು ಕಾದಿದೆಯೋ ? ಇನ್ನು ನೋಟಿನ ಸಮಸ್ಯೆ ಯಾವಾಗ ಬಗೆ ಹರಿಯುವುದೋ ಆ ಭಗವಂತನೇ ಬಲ್ಲ.