ಹೀಗೂ ಉಂಟೇ?!

ಬಸ್ಸಿನಲ್ಲಿ ಕುಳಿತಿದ್ದ, ಎರೆಡೆರಡು ಚಿನ್ನದ ಸರ ಧರಿಸಿ ಜರತಾರಿ ಸೀರೆಯುಟ್ಟ ಮಹಿಳೆಯೊಬ್ಬಳು ಹಿಂದಕ್ಕೆ ತಿರುಗಿ ಬಲಬದಿಯ ಹಿಂದಿನ ಸೀಟಿನಲ್ಲಿದ್ದ ಬಡ ಹೆಂಗಸಿನ ಮಡಿಲಲ್ಲಿದ್ದ ಪುಟ್ಟ ಮಗುವನ್ನು ದಿಟ್ಟಿಸಿ ನೋಡುತ್ತಲೇ ಇದ್ದಳು. ಆ ಮಗು ಕಪ್ಪಗಿದ್ದರೂ ನೋಡಲು ಲಕ್ಷಣವಾಗಿತ್ತು. ಆ ಮಗುವನ್ನು ತದೇಕ ಚಿತ್ತದಿಂದ ನೋಡುತ್ತಿದ್ದ ಮಹಿಳೆಗೆ ಬಸ್ಸು ಹೊರಟರೂ ಅವಳ ದೃಷ್ಟಿ ಬದಲಾಗಲಿಲ್ಲ. ಇವಳನ್ನೇ ಗಮನಿಸುತ್ತಿದ್ದ ಆ ಮಗುವಿನ ತಾಯಿ ಈಕೆಯನ್ನು ನೋಡಿ ಮುಗುಳ್ನಕ್ಕಳು. ಅದನ್ನು ನೋಡಿ ಉತ್ತೇಜಿತಳಾಗಿ ಆ ಮಹಿಳೆ ನಗುತ್ತ, ಏನು ಮಗು ಎಂದು ಕೇಳಿದಾಗ ಆ ಹೆಂಗಸು ಹೆಣ್ಣು ಮಗು ಎಂದು ನಿರುತ್ಸಾಹದಿಂದಲೇ ಹೇಳಿದಳು.

ಆ ಹೆಂಗಸಿನ ಸೀಟಿನ ಹಿಂದೆ ಸುಮಾರು ಮೂರು ವರುಷ ವಯಸ್ಸಿನ ಪುಟ್ಟ ಹುಡುಗಿ ಕುಳಿತಿದ್ದಳು. ಜೊತೆಗೆ ಅವಳ ಅಜ್ಜಿಯೂ ಅವಳ ಬಳಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಆ ಪುಟ್ಟ ಹುಡುಗಿ ಅಮ್ಮಾ ಅಮ್ಮಾ ಎಂದು ಕರೆದಾಗ ಮಗುವನ್ನೆತ್ತಿಕೊಂಡು ಕುಳಿತಿದ್ದ ಹೆಂಗಸು ಹಿಂದೆ ತಿರುಗಿ ನೋಡುತ್ತಾ ಸುಮ್ನೆ ಕೂತ್ಕೋ ಎಂದು ಗದರಿದಳು. ಈಗ ಈ ಮಹಿಳೆಗೆ ಮಾತಿಗೆ ಇನ್ನೊಂದು ವಿಷಯ ಸಿಕ್ಕಂತಾಯಿತು. ಆಕೆಯನ್ನು ಮಹಿಳೆ, ಆ ಮಗೂನೂ ನಿನ್ನದೇನಾ ಎಂದು ಕೇಳಿದಳು. ಆ ಬಡ ಹೆಂಗಸು ನಿರ್ಲಿಪ್ತಳಾಗಿ ಹೂಂ ನಮ್ಮ, ಇಬ್ಬರೂ ಹೆಣ್ ಮಕ್ಳೆಯಾ ಎಂದು ಹೇಳಿದಳು.

ಬಸ್ಸು ಖಾಲಿಯಿದ್ದುದರಿಂದ ಆ ಮಹಿಳೆ ಮತ್ತೆ ಮಾತು ಮುಂದುವರಿಸಿದಳು. ನಿನ್ನ ಮಗು ತುಂಬಾ ಮುದ್ದಾಗಿದೆ ಎಂದಳು. ಅದನ್ನು ಕೇಳಿ ಆ ಬಡ ಹೆಂಗಸಿನ ಮುಖ ಸ್ವಲ್ಪ ಅರಳಿತು. ಅಷ್ಟರಲ್ಲಿ ಆ ಪುಟ್ಟ ಮಗು ಅಳಲಾರಂಬಿಸಿತು. ಆ ಹೆಂಗಸು ಮಗುವಿನ ಬೆನ್ನಿಗೆ ತಟ್ಟುತ್ತ ಅದಕ್ಕೆ ಸಮಾಧಾನ ಮಾಡಲೆತ್ನಿಸಿದಳು. ಆದರೆ ಮಗುವಿನ ಅಳು ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ. ಆ ಮಹಿಳೆ ಇನ್ನೂ ಹಾಗೇ ನೋಡುತ್ತಾ ಕುಳಿತಿದ್ದಳು. ಆ ಹೆಂಗಸು ಮಗುವಿಗೆ ಮುದ್ದು ಮಾಡಿದರೂ ಮಗುವಿನ ಅಳು ನಿಲ್ಲದಾಗ ಆ ಮಹಿಳೆಗೆ ಚಡಪಡಿಕೆ ಶುರುವಾಯಿತು. ಪಾಪ ಹಸಿವಾಗ್ತಿದೆಯೋ ಏನೋ ಎಂದು ಹೇಳಿದಳು.

ಆದರೆ ಆ ಹೆಂಗಸು ಅವಳ ಮಾತಿಗೆ ಪ್ರತಿಕ್ರಯಿಸದೆ ಮಗುವನ್ನು ಎತ್ತಿಕೊಂಡು ಕಿಟಕಿಯ ಹೊರಗೆ ನೋಡುವಂತೆ ಹೇಳಿ ಅದರ ಗಮನ ಬೇರೆಡೆ ಸೆಳೆಯಲು ಯತ್ನಿಸಿದಳು. ಆದರೆ ಆ ಮಗು ಮಾತ್ರ ತನ್ನ ಅಳು ನಿಲ್ಲಿಸಲೇ ಇಲ್ಲ. ಮಗುವಿನ ನಿರಂತರ ಅಳು ಕೇಳಿಸಿ ಎಲ್ಲರ ಗಮನ ಆ ಬಡ ಹೆಂಗಸಿನ ಮಗುವಿನತ್ತ ಹರಿಯಿತು. ಎದುರುಗಡೆ ಕುಳಿತಿದ್ದ ಆ ಮಹಿಳೆಗೆ ಮಗುವಿನ ಅಳು ನೋಡಿ ಸಹಿಸಲಾಗದೆ ಅಲ್ಲಿಂದ ಎದ್ದು ಆ ಹೆಂಗಸಿನ ಬಳಿ ಬಂದಳು. ಇಲ್ಲಿ ಕೊಡು ನಾನು ಸಮಾಧಾನ ಮಾಡುತ್ತೇನೆ ಎಂದಾಗ ಆ ಬಡ ಹೆಂಗಸಿಗೆ ಅಚ್ಚರಿಯಾಯಿತು.

ನಮ್ಮಂತವರು ತಮ್ಮ ಬಳಿ ಕುಳಿತರೆ ತಮ್ಮ ಬಟ್ಟೆಗೆಲ್ಲಿ ಕೊಳೆಯಾಗುವುದೋ, ತಮ್ಮ ಘನತೆಗೆ ಕಡಿಮೆಯಾಗುವುದೋ ಎಂದು ಯೋಚಿಸುವ ಜನರ ನಡುವೆ ಈ ಮಹಿಳೆ ತನ್ನ ಮಗುವನ್ನು ಎತ್ತಿಕೊಳ್ಳಲು ಬಂದಿದ್ದಾಳಲ್ಲ. ಅದೂ ಜರತಾರಿ ಸೀರೆಯುಟ್ಟವರು ಎಂದು ಅಚ್ಚರಿ ಪಡುತ್ತ, ಬೇಡಾಮ್ಮ ನಿಮ್ಮ ಸೀರೆ ಕೊಳೆಯಾದೀತು ಎಂದಾಗ ಆ ಮಹಿಳೆ, ಏನಿಲ್ಲ ಮಗೂನ ಇಲ್ಲಿ ಕೊಡು ಎನ್ನುತ್ತ ಅವಳ ಕೈಯಿಂದ ಮಗುವನ್ನು ಕಿತ್ತುಕೊಂಡು ತನ್ನ ಸೀಟಿಗೆ ಹೋಗಿ ಮಗುವಿಗೆ ಸಮಾಧಾನ ಮಾಡುತ್ತ ಕುಳಿತಳು.

ಆ ಮಗು ಈಕೆಯ ಒಡವೆ ಜರತಾರಿ ಸೀರೆ ಎಲ್ಲವನ್ನು ಕಂಡು ಅಚ್ಚರಿ ಪಡುತ್ತ ಆಕೆಯ ಸರದೊಂದಿಗೆ ಆಟವಾಡುತ್ತ ತನ್ನ ಅಳುವನ್ನು ನಿಲ್ಲಿಸಿತು. ಅದನ್ನು ಕಂಡು ಆ ಬಡ ಹೆಂಗಸಿಗೆ ನಿರಾಳವಾಯಿತು. ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಈ ಅಚ್ಚರಿಯನ್ನು ನೋಡುತ್ತಾ ಕುಳಿತಿದ್ದರು. ಆ ಮಹಿಳೆ ಮಗುವನ್ನು ಮುದ್ದಾಡಿ ಇನ್ನು ತಾನು ಇಳಿಯಬೇಕಾದ ಸ್ಟಾಪ್ ಬಂದಿತು ಎಂದು ಎದ್ದು ಆ ಹೆಂಗಸಿನ ಬಳಿ ಬಂದಾಗ ಅವಳು ಹಿಂದಕ್ಕೆ ತಿರುಗಿ ತನ್ನ ಮಗಳೊಂದಿಗೆ ಏನೋ ಮಾತನಾಡುತ್ತಿದ್ದಳು. ಅದನ್ನು ಗಮನಿಸಿದ ಆ ಮಹಿಳೆ ತಕ್ಷಣವೇ ಮಗುವಿನೊಂದಿಗೆ ದಡಬಡನೆ ಬಸ್ಸಿನಿಂದಿಳಿದು ಅಲ್ಲಿಯೇ ನಿಂತಿದ್ದ ರಿಕ್ಷಾ ಹತ್ತಿ ಹೊರಟು ಹೋದಳು.

ಕ್ಷಣ ಮಾತ್ರದಲ್ಲಿ ನಡೆದ ಘಟನೆಯಿಂದ ಜನರೆಲ್ಲಾ ಒಂದು ಕ್ಷಣ ದಿಗ್ಮೂಢರಾಗಿ ಬಿಟ್ಟರು. ಆದರೆ ಆ ಹೆಂಗಸು ಇದ್ಯಾವುದರ ಪರಿವೆಯೇ ಇಲ್ಲದೆ ತನ್ನ ಮಗಳೊಂದಿಗೆ ಮಾತನಾಡುತ್ತ ಕುಳಿತಿದ್ದಳು. ಅದನ್ನು ನೋಡಿ ಜನರೆಲ್ಲಾ ಒಮ್ಮೇಲೆ, ಅಯ್ಯೋ ನೋಡಮ್ಮಾ ನಿನ್ನ ಮಗೂನ ಆಕೆ ಎತ್ಕೊಂಡ್ ಹೋದರು ಎಂದು ಬೊಬ್ಬೆ ಹೊಡೆದರು. ಕ್ಷಣ ಕಲ ವಿಚಲಿತಳಾದ ಆಕೆ ಬಸ್ಸಿನಿಂದ ಹೊರಗೆ ಇಣುಕಿ ನೋಡಿದಾಗ ಆಕೆ ಆಗಲೇ ಜಾಗ ಖಾಲಿ ಮಾಡಿದ್ದು ಕಂಡು ಪುನಃ ತನ್ನ ಸೀಟಿನಲ್ಲಿ ಕುಳಿತಳು. ಅವಳ ನಿರ್ಲಿಪ್ತತೆ ಕಂಡು ನಿರ್ವಾಹಕ, ಏನಮ್ಮಾ ನಿಂಗೆ ನಿನ್ನ ಮಗು ಬೇಡವೇ, ಹೋಗಿ ಪೋಲೀಸ್ ಕಂಪ್ಲೇಟ್ ಕೊಡೋದಿಲ್ಲವೇ, ಅವಳು ನಿನ್ನ ಮಗೂನ ಎತ್ಕೊಂಡು ಹೋಗಿ ಬಿಟ್ಳಲ್ಲ ಎಂದಾಗ ಆ ಬಡ ಹೆಂಗಸು ಏನು ಮಾಡಾಣಾ ಸಾಮಿ, ಹೋಗ್ಲಿ ಬಿಡಿ, ನಮಗೇ ಹೊಟ್ಟೆಗಿಲ್ಲ, ನಮ್ಮ ಜೊತೆ ಇದ್ದು ಆ ಮಗು ಸುಖ ಪಡೋದು ಅಷ್ಟರಲ್ಲೇ ಇದೆ. ಆಯಮ್ಮನ ಜೊತೆ ಆದರೂ ಸುಖವಾಗಿರ್ಲಿ ಎನ್ನುತ್ತಾ ನಿರ್ಲಿಪ್ತಳಾಗಿ ಕುಳಿತು ಬಿಟ್ಟಳು.

ಅವಳ ಮಾತಿಗೆ ಬಸ್ಸಿನಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಹೀಗೂ ಉಂಟೇ, ಹೆತ್ತ ತಾಯಿ ತನ್ನ ಮಗುವನ್ನು ಬೇರೆ ಯಾರೋ ಕದ್ದೊಯ್ಯುವಾಗಲೂ ಇಷ್ಟೊಂದು ನಿರ್ಲಿಪ್ತರಾಗಿ ಇರಲು ಸಾಧ್ಯವೇ, ಅವಳು ಆ ಮಗುವಿನ ಮೇಲಿನ ಪ್ರೀತಿಯಿಂದ ಹಾಗೆ ಹೇಳಿದಳೋ ಅಥವಾ ಅವಳಿಗೆ ಆ ಮಗು ಬೇಡದ ಮಗುವಾಗಿತ್ತೋ ಎಂದು ಅವರಿಗೆಲ್ಲ ಗೊಂದಲವಾಯಿತು. ಕೆಲವರು ಆಕೆ ಅದೆಂಥಾ ತಾಯಿ ತನ್ನ ಕರುಳ ಕುಡಿಯನ್ನೇ ಬೇರೆಯವರು ಕದ್ದುಕೊಂಡು ಹೋದರೂ ಸುಮ್ನೇ ಕೂತಿದ್ದಾಳಲ್ಲ, ಆಕೆ ತಾಯಿ ಹೆಸರಿಗೇನೆ ಕಳಂಕ ಎಂದು ಮಾತನಾಡಿಕೊಂಡರೆ ಇನ್ನು ಕೆಲವರು, ಪಾಪ ತಾಯಿ ಹೃದಯ ತನ್ನ ಸ್ವಾರ್ಥ ಬಿಟ್ಟು ಮಗುವಿನ ಸುಖ ಬಯಸಿತು. ಆಕೆ ಎಂಥಾ ತ್ಯಾಗಮಯಿ, ತನ್ನ ಮಗುವನ್ನು ಆ ಮಹಿಳೆ ಕದ್ದೊಯ್ದರೂ ಏನೂ ಮಾಡದೆ ಮಗುವಿನ ಶ್ರೇಯಸ್ಸು ಬಯಸಿ ಸುಮ್ಮನಿದ್ದಾಳೆ ಎಂದರೆ ಆಕೆ ಜೀವನದಲ್ಲಿ ಅದೆಷ್ಟು ಕಷ್ಟ ಪಟ್ಟಿರಬೇಕು ಎಂದು ವಾದಿಸಿದರು. ಇವರ ತರ್ಕ ವಿತರ್ಕದ ನಡುವೆ ಬಸ್ಸು ಮುಂದಕ್ಕೋಡಿತು.