ಕೊರೋನ ಲಸಿಕೆ ಬಂದರೂ ಜನರಿಗೆ ಅದೇನೋ ಅವ್ಯಕ್ತ ಭಯ. ಲಸಿಕೆ ತೆಗೆದುಕೊಂಡರೆ ಹಾಗಾಗುತ್ತಂತೆ, ಹೀಗಾಗುತ್ತಂತೆ, ಏನೇನೋ ಅಡ್ಡ ಪರಿಣಾಮಗಳೂ ಆಗುತ್ತಂತೆ ಎಂದೆಲ್ಲ ಗಾಳಿ ಸುದ್ದಿಗಳು ನಿಜವೇನೋ ಎಂದು ಜನರೆಲ್ಲ ನಂಬಿ ಭಯಭೀತರಾಗಿದ್ದರು. ಒಂದು ಕಡೆ ಕೊರೋನ ಇನ್ನೊಂದು ಕಡೆ ಲಸಿಕೆ! ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿತ್ತು ನಮ್ಮ ಜನರ ಪರಿಸ್ಥಿತಿ. ನಾನೂ ಇದಕ್ಕೆ ಹೊರತಾಗಿರಲಿಲ್ಲ! ಕೋರೋನದಿಂದ ತಪ್ಪಿಸಿಕೊಳ್ಳೋಣ ಎಂದರೆ ಲಸಿಕೆ ಗುಮ್ಮನಂತೆ ಕಾಡುತ್ತಿತ್ತು. ಲಸಿಕೆ ತೆಗೆದುಕೊಂಡವರು ಜ್ವರ, ಮೈ ಕೈ ನೋವು, ಇತ್ಯಾದಿ ಹೇಳುವಾಗಲೇ ನನಗೆ ಜ್ವರ ಬಂದಂತೆ ಆಗುತ್ತಿತ್ತು. ಆದರೂ ಕೋರೋನದಿಂದ ಬಚಾವಾಗಲು ಅದೊಂದೇ ದಾರಿಯಾಗಿತ್ತು. ಹೀಗಾಗಿ ಗಟ್ಟಿ ಮನಸ್ಸು ಮಾಡಿಕೊಂಡು ಲಸಿಕೆ ಹಾಕಿಸಿ ಕೊಳ್ಳುವ ನಿರ್ಧಾರ ಮಾಡಿದೆ. ಧೈರ್ಯಕ್ಕೆ ಮಗನ ಸ್ನೇಹಿತರೊಬ್ಬರು (ಡಾಕ್ಟರ್) ಊರಿನಲ್ಲಿ ಇರುವ ಸಮಯದಲ್ಲೇ ಲಸಿಕೆ ಹಾಕಿಸಿಕೊಳ್ಳುವುದು ಎಂದು ತೀರ್ಮಾನವಾಯಿತು. ನನಗೆ ಏನೇ ಆದರೂ ತಕ್ಷಣ ಬಂದು ಸಹಾಯ ಮಾಡುತ್ತೇನೆ ಎಂದು ಅವರ ಎರಡು ಫೋನ್ ನಂಬರ್ ಗಳನ್ನು ಕೊಟ್ಟರು. ಅದೇ ಧೈರ್ಯದಲ್ಲಿ ಲಸಿಕೆ ಹಾಕಿಸಿ ಕೊಳ್ಳಲು ರಿಜಿಸ್ಟರ್ ಮಾಡಿಸಿದೆ.
ಮನೆಯಿಂದ ಹೊರಟಾಗ ಕ್ಷೇಮವಾಗಿ ಮನೆಗೆ ಮರಳುವಂತೆ ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಲಸಿಕಾ ಕೇಂದ್ರದತ್ತ ನನ್ನ ಸವಾರಿ ಹೊರಟಿತು. ಅಲ್ಲಿ ಮೊದಲು ಕಂಡ ಸಿಸ್ಟರ್ ಹತ್ತಿರ ನನ್ನ ಭಯ ತೋಡಿಕೊಂಡೆ. “ಹಾಗೇನೂ ಆಗಲ್ಲ, ಸ್ವಲ್ಪ ಜ್ವರ ಮೈ ಕೈ ನೋವು ಕಾಣಿಸಿಕೊಳ್ಳಬಹುದು, ಎಷ್ಟೆಂದರೂ ಅದು ಆಂಟಿಬಾಡಿ ಅಲ್ವಾ, ನಿಮ್ಮ ದೇಹದೊಳಕ್ಕೆ ಹೋದಾಗ ಪ್ರತಿರೋಧ ಸಹಜ. ಆದರೆ ಅದೆಲ್ಲ ಎರಡು ಮೂರು ದಿನದೊಳಗೆ ನಿಲ್ಲುತ್ತದೆ. ಗಾಬರಿ ಪಡಬಾರದು. ಲಸಿಕೆ ತೆಗೆದುಕೊಳ್ಳುವಾಗ ಹೊಟ್ಟೆ ತುಂಬಿರಬೇಕು, ಧೈರ್ಯವಾಗಿರಿ ಏನೂ ಆಗುವುದಿಲ್ಲ, ಎಷ್ಟೋ ಜನ ಹಾಕಿಸಿಕೊಂಡಿದ್ದಾರೆ ಏನೂ ಆಗಿಲ್ಲ” ಎಂಬ ಸಿಸ್ಟರ್ ಮಾತಿಗೆ ಕೊಂಚ ನಿರಾಳವಾದೆ.
ಅಲ್ಲಿಯೇ ಇದ್ದು ಕಾಯುತ್ತ ಇದ್ದಂತೆ ಒಳಗಿನಿಂದ ಲಸಿಕೆ ತೆಗೆದುಕೊಂಡ ಮಹಿಳೆಯೊಬ್ಬಳು ಹೊರ ಬರುತ್ತಿರುವುದು ಕಾಣಿಸಿತು. ಆಕೆಯ ಒಂದು ಕೈಗೆ ಬ್ಯಾಂಡೇಜ್, ಒಂದು ಕಾಲು ಸ್ವಲ್ಪ ಎಳೆದುಕೊಂಡೆ ನಡೆಯುತ್ತಿದ್ದಳು. ಆಕೆಯನ್ನು ಕಂಡ ಮೇಲಂತೂ ನನ್ನಲ್ಲಿ ಧೈರ್ಯ ತುಂಬಿ ತುಳುಕಾಡಿತು. ನನ್ನ ಸರದಿ ಬಂದಾಗ ಧೈರ್ಯದಿಂದಲೇ ಹೋದೆ. ಸೂಜಿ ಚುಚ್ಚಿದಾಗ ನೋವಾಗಲಿಲ್ಲ. ಸಿಸ್ಟರ್ ಗೆ ಹೇಳಿದೆ. ಮನೆಯಲ್ಲಿ ಇರುವೆ ಕಚ್ಚಿ ಕಚ್ಚಿ ಈಗ ಇಂಜೆಕ್ಷನ್ ನೋವೇ ಗೊತ್ತಾಗುತ್ತಿಲ್ಲ ಎಂದು. ಅವರೆಲ್ಲ ಹೋ ಎಂದು ನಕ್ಕರು. ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳಿ ಎಂದು ಹೇಳಿ ಬರೆದು ಕೊಟ್ಟರು. ಅರ್ಧ ಗಂಟೆ ಅಲ್ಲೇ ಕುಳಿತುಕೊಳ್ಳಲು ಸ್ಥಳ ತೋರಿಸಿದರು.
ಸುಮಾರು ಕಾಲು ಗಂಟೆ ನಂತರ ಟೀ, ಕಾಫಿ ಬಂದಿತು. ನಾನು ತೆಗೆದುಕೊಳ್ಳಲಿಲ್ಲ. ಅಷ್ಟೊಂದು ಬಿಸಿ, ಸ್ಟ್ರಾಂಗ್ ನಾನು ಕುಡಿಯುವುದೇ ಇಲ್ಲ. ಅರ್ಧ ಗಂಟೆಯ ನಂತರ ನಾನು ಅಲ್ಲಿಂದ ಹೊರಟು ಬಂದೆ. ಮೆಡಿಕಲ್ ಶಾಪ್ ಗೆ ಹೋಗಿ ಜ್ವರದ ಮಾತ್ರೆ ಕೇಳಿದೆ. ಆ ಹುಡುಗಿ ಹಿಂದೆ ತಿರುಗಿ ಅಲ್ಲಿ ನಿಂತಿದ್ದವನ ಬಳಿ ಮಾತ್ರೆ ಕೊಡಿ ಎಂದು ಹೇಳಿದಳು. ಹಿಂಬದಿಯಲ್ಲಿ ನಿಂತಿದ್ದವ ಕಣ್ಣುಗಳನ್ನು ದೊಡ್ಡದಾಗಿಸಿಕೊಂಡು ಭಯದಿಂದಲೇ ನನ್ನತ್ತ ನೋಡಿದ. ನನಗೆ ಕೋರೋನ ಆಗಿರಬೇಕು ಅಂತ ಅನುಮಾನ ಅವನಿಗೆ! “ನಾನು ವ್ಯಾಕ್ಸೀನ್ ತೆಗೆದುಕೊಂಡಿದ್ದೇನೆ, ಜ್ವರ ಬಂದರೆ ಇರಲಿ ಅಂತ ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದೆ.
ಮಾತ್ರೆ ಕೊಂಡುಕೊಂಡು ಅಲ್ಲಿಂದ ಮನೆಯತ್ತ ಹೊರಟೆ. ದಾರಿಯಲ್ಲಿ ಹೋಗುವಾಗ ತರಕಾರಿ ಅಂಗಡಿ ಕಾಣಿಸಿತು. ನನಗಿಷ್ಟವಾದ ತರಕಾರಿಗಳು ತುಂಬಿ ತುಳುಕುತ್ತಿದ್ದವು. ಬಾಯಲ್ಲಿ ನೀರೂರಿತು. ಈಗ ತಾನೇ ವ್ಯಾಕ್ಸೀನ್ ತೆಗೆದುಕೊಂಡೆ, ಭಾರ ಹೊರಲು ಆಗದಿದ್ದರೆ…? ಬೇಡ ಎನಿಸಿತು ಸೀದಾ ನಡೆದುಕೊಂಡು ಹೋದೆ. ಬಿರು ಬಿಸಿಲಿಗೆ ಲಸಿಕೆ ಪ್ರಭಾವ ಸೇರಿ ತಲೆ ತಿರುಗಿ ಬಿದ್ದರೆ ಎಂದು ಭಯವಾಯಿತು. ದಾರಿಯಲ್ಲಿ ಸಿಕ್ಕ ರಿಕ್ಷಗಳಿಗೆ ಕೈ ತೋರಿಸಿದೆ. ಯಾವುದೂ ನಿಲ್ಲಲಿಲ್ಲ. ದುಡ್ಡು ಉಳೀತು ಅಂದುಕೊಳ್ಳುತ್ತ ಕೊಡೆ ಬಿಡಿಸಿಕೊಂಡು ಆರಾಮವಾಗಿ ನಡೆದುಕೊಂಡು ಹೋಗಿ ಮನೆ ತಲುಪಿದೆ. ಕೈ ಕಾಲು ತೊಳೆದುಕೊಂಡು ಹಾಸಿಗೆ ಮೇಲೆ ಬಿದ್ದೆ.
ಮನೆಯಿಂದ ಹೊರಡುವ ಮುನ್ನವೇ ಎರಡು ದಿನಗಳಿಗಾಗುವಷ್ಟು ಅಡಿಗೆ, ಮನೆ ಕೆಲಸ ಎಲ್ಲ ಮುಗಿಸಿಕೊಂಡು ಹೋಗಿದ್ದೆ. ಹಾಗಾಗಿ ಮಾಡಲು ಕೆಲಸವಿಲ್ಲದೆ ಹಾಯಾಗಿ ಮಲಗಿದೆ. ಸಂಜೆವರೆಗೂ ಚೆನ್ನಾಗಿಯೇ ಇದ್ದೆ. ಇಪ್ಪತ್ನಾಲ್ಕು ಗಂಟೆಯ ಬಳಿಕ ಜ್ವರ ಮೈ, ಕೈ ನೋವು ಬರಬಹುದು ಎಂದು ಹೇಳಿದ್ದರಿಂದ ಆರಾಮವಾಗಿ ಇದ್ದೆ.
ರಾತ್ರಿ ಊಟ ಮುಗಿಸಿ ಪಾತ್ರೆಗಳನ್ನೆಲ್ಲ ತೊಳೆದಿಟ್ಟು ಟೀವಿ ನೋಡುತ್ತ ಕುಳಿತೆ. ರಾತ್ರಿ ಎಂಟೂವರೆ ಗಂಟೆಯ ಅಷ್ಟೊತ್ತಿಗೆ ಚಳಿಯ ಅನುಭವವಾಯಿತು. ಸ್ಪಲ್ಪ ಹೊತ್ತಿನಲ್ಲೇ ಚಳಿ ತಡೆಯಲಾಗದೆ ಮೈ ಗಡಗಡ ನಡುಗಲು ಶುರುವಾಯಿತು! ಇಂಥಾ ಬೇಸಿಗೆಯಲ್ಲಿ ಯಾಕೆ ಇಷ್ಟೊಂದು ಚಳಿಯಾಗುತ್ತಿದೆ ಅನಿಸಿ ಬ್ಲಾಂಕೆಟ್ ಹೊದ್ದುಕೊಂಡೆ. ಆರಾಮವೆನಿಸಿತು. ಸ್ವಲ್ಪ ಹೊತ್ತಿನ ಬಳಿಕ ಚಳಿ ಇನ್ನಷ್ಟು ಜಾಸ್ತಿಯಾಯಿತು. ಮೈ ಮೇಲೆ ಬಂದವರಂತೆ ನನ್ನ ಮೈ ನಡುಗುತ್ತಿತ್ತು! ಹಲ್ಲುಗಳು ಕಟಕಟ ಶಬ್ದ ಮಾಡಲು ಶುರು ಮಾಡಿದವು! ಬೇಗನೆ ಹೋಗಿ ಸ್ವೆಟರ್ ಧರಿಸಿದೆ. ಇದು ಲಸಿಕೆ ಪರಿಣಾಮ! ಇನ್ನೂ ಏನೆಲ್ಲ ಕಾದಿದೆಯೋ ಎಂದು ಭಯವಾಗಿ ಟಿವಿ ಆಫ್ ಮಾಡಿ ಮಲಗಿದೆ. ಸುಮಾರು ಹತ್ತು ಕಾಲು ಗಂಟೆಗೆ ಮೈಯೆಲ್ಲ ವಿಪರೀತ ಬಿಸಿಯೇರತೊಡಗಿತು. ನನಗೆ ಭಯವಾಗಿ ಹೊದ್ದ ಬ್ಲಾಂಕೆಟ್, ಸ್ವೆಟರ್ ಕಿತ್ತು ಬಿಸಾಕಿದೆ. ಥರ್ಮಾಮೀಟರ್ ಬಾಯಲ್ಲಿಟ್ಟು ನೋಡಿದರೆ ನೂರ ಮೂರನ್ನೂ ಕೂಡ ದಾಟಿ ಮುಂದಕ್ಕೆ ಓಡುತ್ತಿತ್ತು. ಭಯವಾಗಿ ಅದನ್ನು ನೋಡದೆ ಹಾಗೆ ಇಟ್ಟೆ. ಬೇಗನೆ ಮಾತ್ರೆ ತೆಗೆದುಕೊಳ್ಳಬೇಕು ಎಂದುಕೊಂಡೆ. ಆದರೆ ಖಾಲಿ ಹೊಟ್ಟೆ ಬೇಡ ಎಂದು ಫ್ರಿಜ್ಜಿನಲ್ಲಿದ್ದ ಚಪಾತಿ ತೆಗೆದು ಬಿಸಿ ಮಾಡಿ ಸಕ್ಕರೆ ಹಾಕಿಕೊಂಡು ತಿಂದೆ. ಜೊತೆಗೆ ಹಾಲು ಬಿಸಿ ಮಾಡಿ ಕುಡಿದು ಮಾತ್ರೆ ತೆಗೆದುಕೊಂಡೆ. ಒಂದು ಗಂಟೆಯಾದರೂ ಜ್ವರ ಇಳಿಯುವ ಲಕ್ಷಣ ಕಾಣಿಸಲಿಲ್ಲ. ಹೇಗೋ ಎದ್ದು ನೀರನ್ನು ಫ್ರೀಜರ್ ನಲ್ಲಿ ತಣ್ಣಗಾಗಲು ಇಟ್ಟೆ. ಒಂದು ತೆಳ್ಳಗಿನ ಬಟ್ಟೆ ತಂದಿಟ್ಟೆ. ನೀರು ಸ್ವಲ್ಪ ತಣ್ಣಗಾದ ಮೇಲೆ ಎದ್ದುಹೋಗಿ ನೀರಿನ ಪಾತ್ರೆ ತಂದು ಬಟ್ಟೆಯನ್ನು ನೀರಲ್ಲಿ ಮುಳುಗಿಸಿ ಹಿಂಡಿ ಹಣೆಯ ಮೇಲಿಟ್ಟುಕೊಂಡು ಮಲಗಿದೆ. ನಿದ್ದೆ ಬರಲಿಲ್ಲ. ಆಗಾಗ ತಣ್ಣೀರ ಬಟ್ಟೆ ಪಟ್ಟಿ ಹಣೆಯ ಮೇಲೆ, ಹೊಟ್ಟೆಯ ಮೇಲೆ ಇಡುತ್ತಾ ಬಂದೆ. ಅಷ್ಟೆಲ್ಲ ಆದರೂ ನನಗೆ ಡಾಕ್ಟರ್ ನೆನಪೇ ಆಗಲಿಲ್ಲ!
ರಾತ್ರಿ ಎರಡೂವರೆ ನಂತರ ಜ್ವರ ಕಡಿಮೆಯಾಗಿ ನಿದ್ದೆ ಬಂದಿತು. ಬೆಳಗ್ಗೆ ಎದ್ದಾಗ ಜ್ವರ ಬಿಟ್ಟು ಸ್ವಲ್ಪ ಬೆವರು ಕೂಡ ಬಂದಿತು. ಅಬ್ಬಾ ಎನ್ನುತ್ತ ಖುಷಿಪಟ್ಟೆ. ಮಗನ ಸ್ನೇಹಿತ ಡಾಕ್ಟರ್ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಜ್ವರ ಮತ್ತೆ ಬರುತ್ತದೆ, ನಾಳೆ ಬೆಳಿಗ್ಗೆ ಪೂರ್ತಿಯಾಗಿ ಹುಶಾರಾಗುತ್ತಿರಿ ಎಂದರು. ಮಗನೂ ಆಗಾಗ ವಿಚಾರಿಸುತ್ತಿದ್ದ. ಅವತ್ತು ಸ್ವಲ್ಪ ಮನೆಕೆಲಸ ಮಾಡಿದೆ. ಇಂಜೆಕ್ಷನ್ ಚುಚ್ಚಿದ ಕೈ ನೋಯಲು ಶುರುವಾಯಿತು. ಮಧ್ಯಾಹ್ನದ ಹೊತ್ತಿಗೆ ಸಣ್ಣಗೆ ಜ್ವರ ಶುರುವಾಯಿತು. ಆದರೂ ಟಿವಿ ನೋಡುತ್ತ ಕುಳಿತೆ. ರಾತ್ರಿ ಊಟ ಮಾಡಿ ಟಿವಿ ನೋಡುತ್ತಿದ್ದೆ. ಮತ್ತೆ ಸ್ವಲ್ಪ ಚಳಿ ಶುರುವಾಯಿತು. ಜ್ವರ ಬಂದಂತಾಯಿತು. ಥರ್ಮಾಮೀಟರ್ ಇಟ್ಟು ನೋಡಿದರೆ 102 ಡಿಗ್ರಿ ತೋರಿಸುತ್ತಿತ್ತು. ಓಹ್! ನಿನ್ನೆಯ ಪುನರಾವರ್ತನೆ ಆಗುತ್ತದೆ ಎಂದು ಭಯವಾಗಿ ಬೇಗನೆ ಮಾತ್ರೆ ತೆಗೆದುಕೊಂಡು ಮಲಗಿದೆ. ಮಲಗುವ ಮುನ್ನ ಎರಡು ಪಾತ್ರೆ ಗಳಲ್ಲಿ ನೀರು ಹಾಕಿ ಫ್ರೀಜರ್ ನಲ್ಲಿಟ್ಟೆ. ಜ್ವರ ಏರಿದರೆ ತಣ್ಣೀರ ಬಟ್ಟೆ ಪಟ್ಟಿ ಹಾಕಲು ಬೇಕಾಗುತ್ತದಲ್ಲ. ಕುಡಿಯಲು ನೀರನ್ನು ಹಾಸಿಗೆಯ ಬಳಿ ತಂದಿಟ್ಟು ಮಲಗಿದೆ. ಜ್ವರ ಜಾಸ್ತಿಯಾಗದಿದ್ದರೆ ತಣ್ಣೀರ ಬಟ್ಟೆ ಪಟ್ಟಿ ಬೇಡ ಎಂದುಕೊಂಡು ಮಲಗಿದೆ.
ರಾತ್ರಿಯಲ್ಲಿ ಯಾವಾಗಲೋ ಎಚ್ಚರವಾಯಿತು. ಮೈಯೆಲ್ಲ ಬೆವರಿ ಧರಿಸಿದ ಬಟ್ಟೆ ಎಲ್ಲ ಒದ್ದೆಯಾಗಿತ್ತು. ಜ್ವರ ಪೂರ್ತಿಯಾಗಿ ಬಿಟ್ಟಿತು ಎಂದು ಖುಷಿಯಾಯಿತು. ಬೆಳಗ್ಗೆ ಎದ್ದಾಗ ಉಲ್ಲಾಸದಿಂದ ಇದ್ದೆ. ಕೈ ನೋವು ಕೂಡ ಮಾಯವಾಗಿತ್ತು. ಪೂರ್ತಿ ಹುಷಾರಾದೆ ಎಂದು ಖುಷಿಯಾಯಿತು. ಈಗ ನಾನು ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ನನ್ನ ಹಾಗೆ ನೀವು ಭಯ ಪಡಬೇಡಿ. ಏನೂ ಆಗುವುದಿಲ್ಲ, ಕೆಲವರಿಗೆ ನನ್ನಷ್ಟು ಜ್ವರ ಕೂಡ ಬರಲಿಲ್ಲ. ಇನ್ನೂ ಕೆಲವರಿಗೆ ಏನೂ ಆಗಲಿಲ್ಲ. ಆದ್ದರಿಂದ ಧೈರ್ಯವಾಗಿ ಲಸಿಕೆ ಹಾಕಿಸಿಕೊಳ್ಳಿ.
ಲಸಿಕೆ ತೆಗೆದುಕೊಳ್ಳುವ ಮೊದಲು ನೀವು ಮಾಡಬೇಕಾಗಿರುವುದು.
ನೀವು ನಿಮ್ಮ ಅಗತ್ಯದ ಕೆಲಸಗಳನ್ನೆಲ್ಲ ಮೊದಲೇ ಮುಗಿಸಿ. ಒಬ್ಬರೇ ಇದ್ದರೆ ಮನೆಗೆ ಬೇಕಾಗುವ ಸಾಮಾನುಗಳನ್ನೆಲ್ಲ ಮೊದಲೇ ತರಿಸಿಡಿ.
ಜ್ವರದ ಮಾತ್ರೆಯನ್ನು ಡಾಕ್ಟರ್ ಬಳಿ ಕೇಳಿ ಮೊದಲೇ ತಂದಿಟ್ಟುಕೊಳ್ಳಿ.
ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಡಿ.
ತಣ್ಣೀರ ಬಟ್ಟೆ ಪಟ್ಟಿಗೆ ಮೊದಲೇ ಸಿದ್ಧ ಪಡಿಸಿ.
ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಕೈಗೆ ವ್ಯಾಯಾಮ ಮಾಡಬೇಕು. ತೀರಾ ಜಾಸ್ತಿ ನೋವಿದ್ದರೆ ತಣ್ಣೀರ ಬಿಟ್ಟೆಯಿಂದ ಒರೆಸಿ. ನಂತರ ಹದಿನೈದು ದಿನ ಜಾಸ್ತಿ ಹೊರಗೆ ಓಡಾಡಬೇಡಿ. ಎಲ್ಲರೂ ಲಸಿಕೆ ಹಾಕಿಕೊಂಡರೆ ಕೊರೋನ ತಾನಾಗಿಯೇ ತೊಲಗುತ್ತದೆ. ಇಸ್ರೇಲ್ ಹಾಗೂ ಯು. ಕೆ. ದೇಶದವರು ಮಾಡಿದ್ದು ಅದನ್ನೇ. ಎಲ್ಲರೂ ಆರಾಮವಾಗಿ ಹೊರಗೆ ಓಡಾಡಿಕೊಂಡು ಆರೋಗ್ಯದಿಂದ ಇರಬೇಕಾದರೆ ವ್ಯಾಕ್ಸಿನ್ ಒಂದೇ ದಾರಿ. ನೀವೂ ಲಸಿಕೆ ಹಾಕಿಸಿ ಕೊಳ್ಳಿ. ನಿಮ್ಮ ಮನೆಯವರಿಗೂ ಲಸಿಕೆ ಹಾಕಿಸಿ.