ಬುದ್ಧಿವಾದ

ಶಾಂತಲಾ ಕೆಲವು ಸಮಯದಿಂದ ಪೇಟೆಗೆ ಹೋದಾಗೆಲ್ಲ ಒಬ್ಬ ಮಹಿಳೆಯನ್ನು ಗಮನಿಸುತ್ತಿದ್ದರು. ಹಸುಕೂಸನ್ನು ಸೆರಗಲ್ಲಿ ಕಟ್ಟಿಕೊಂಡು ಆಕೆ ಅವರಿವರ ಬಳಿ ಭಿಕ್ಷೆ ಬೇಡುತ್ತಿದ್ದಳು. ಅದೆಷ್ಟೋ ಜನ ಅವಳನ್ನು ಕಂಡರೂ ಕಾಣದಂತೆ ಸುಮ್ಮನೆ ಹೋಗುತ್ತಿದ್ದರೂ ಆಕೆ ಅವರನ್ನು ಹಿಂಬಾಲಿಸಿಕೊಂಡು ಅಂಗಲಾಚಿ ಬೇಡಿಕೊಳ್ಳುತ್ತಿದ್ದಳು. ಶಾಂತಲಾಗೆ ಅದನ್ನು ಕಂಡು ಅಯ್ಯೋ ಪಾಪ ಎನಿಸಿ ತಾವೇ ಅವಳ ಬಳಿ ಹೋಗಿ ಹತ್ತು ರೂಪಾಯಿ ಕೊಟ್ಟು ಬರುತ್ತಿದ್ದರು. ಕೆಲವೊಮ್ಮೆ ಬೇಕರಿಯಿಂದ ಬ್ರೆಡ್ಡೋ. ಬನ್ನೋ ಹೀಗೆ ಏನಾದರೂ ಕೊಡಿಸುತ್ತಿದ್ದರು.

ಹೀಗೆ ತಿಂಗಳುಗಳು ಉರುಳಿದಂತೆ ಭಿಕ್ಷುಕಿಯ ಮಗು ಸ್ವಲ್ಪ ದೊಡ್ಡದಾದಂತೆ ಅದನ್ನು ಹೆಗಲಿಗೆ ಹಾಕಿ ಭಿಕ್ಷೆ ಬೇಡಹತ್ತಿದಳು. ಶಾಂತಲಾಗೆ ಆಕೆ ದಿನವಿಡೀ ಬಿರು ಬಿಸಲಲ್ಲಿ ಅಲೆದಾಡುತ್ತ ಮಗುವನ್ನೂ ಬಿಸಿಲಿಗೆ ಒಡ್ಡುತ್ತಾ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡಬಹುದಲ್ಲವೇ ಎನಿಸಿದರೂ ಮಗು ಇನ್ನೂ ಸ್ವಲ್ಪ ದೊಡ್ಡದಾದ ಮೇಲೆ ತಾನೇ ಹೋಗಬಹುದು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡರು.

ವರುಷ ಕಳೆದು ಮಗು ನಡೆದಾಡಲು ಶುರು ಮಾಡಿದ ಮೇಲೂ ಆಕೆ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿಲ್ಲ. ಅಷ್ಟೇ ಅಲ್ಲ ಈಗ ಆ ಪುಟ್ಟ ಕಂದನಿಂದಲೂ ಭಿಕ್ಷೆ ಬೇಡಿಸತೊಡಗಿದಳು. ಅದನ್ನು ಕಂಡು ಶಾಂತಲಾಗೆ ಕರುಳು ಚುರುಕ್ಕೆಂದಿತು. ಸೀದಾ ಅವಳ ಬಳಿಗೆ ಹೋಗಿ, ಆ ಮಗು ಕೈಯ್ಯಲ್ಲೂ ಭಿಕ್ಷೆ ಬೇಡಿಸ್ತಿಯಲ್ಲ ನಿಂಗೆ ಮನಸ್ಸಾದರೂ ಹೇಗೆ ಬರುತ್ತದೆ. ಆಟವಾಡಿ ಸಂತೋಷವಾಗಿ ಇರಬೇಕಾದ ಕಂದನನ್ನು ಹೀಗೆ ಬಿಸಿಲಲ್ಲಿ ಅಲೆದಾಡಿಸ್ತಿಯಲ್ಲ, ನಾಚಿಕೆಯಾಗಲ್ವಾ ಎಂದು ಅವಳನ್ನು ಗದರಿಸಿದರು.

ಅಷ್ಟರಲ್ಲಿ ಆ ಪುಟ್ಟ ಕಂದ ಇವರ ಸೀರೆಯನ್ನು ಜಗ್ಗುತ್ತ ತನ್ನ ಪುಟ್ಟ ಕೈಯನ್ನು ಇವರ ಮುಂದೆ ಚಾಚಿದಾಗ ಅದರ ಮುಗ್ಧ ಮುಖ ಕಂಡು ಅಯ್ಯೋ ಪಾಪ ಎನಿಸಿ ಮನಸ್ಸು ಕರಗಿ ಅಲ್ಲೇ ಇದ್ದ ಬೇಕರಿಗೆ ಹೋಗಿ ಬಿಸ್ಕೆಟ್ ಪೊಟ್ಟಣ ಖರೀದಿಸಿ ತಂದು ಆ ಮಗುವಿನ ಕೈಯಲ್ಲಿಟ್ಟರು. ನಂತರ ಅವಳನ್ನು ನೋಡುತ್ತಾ, ನೋಡು ಹೀಗೆ ಭಿಕ್ಷೆ ಬೇಡುವ ಬದಲು ಯಾವುದಾದರೂ ಕೆಲಸ ಮಾಡು. ಮಗುವನ್ನು ಅಂಗನವಾಡಿಯಲ್ಲಿ ಬಿಡಬಹುದು. ಅಲ್ಲಿ ಮಗುವಿಗೆ ಮಧ್ಯಾಹ್ನದ ಊಟ ಕೊಡ್ತಾರೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀನು ನಿನ್ನ ಪಾಡಿಗೆ ಆರಾಮವಾಗಿ ಕೆಲಸ ಮಾಡಬಹುದು. ನೀನು ಭಿಕ್ಷೆ ಬೇಡಿದ್ದು ಸಾಲದು ಅಂತ ನಿನ್ನ ಮಗನೂ ಮುಂದೆ ಜೀವನ ಪೂರ್ತಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕಾ, ಅವನನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡು. ತಾಯಿಯಾದವಳು ಮಗುವಿನ ಬಾಳು ಹಸನು ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತಾಳೆ. ನೀನು ಮಾತ್ರ ನಿನ್ನ ಮಗುವಿನ ಬಾಳಿಗೆ ಶತ್ರು ಆಗಿ ಬಿಟ್ಟಿದ್ದೀಯಾ ಎಂದೆಲ್ಲ ಗದರಿಸಿದರು.

ಅಷ್ಟಕ್ಕೇ ಅವಳಿಗೆ ಸಿಟ್ಟು ಬಂದು ಶಾಂತಲಾರನ್ನು ದುರುಗುಟ್ಟಿ ನೋಡುತ್ತಾ, ಏನಮ್ಮ ಸುಮ್ನೆ ಇದ್ದೀನಂತ ಬಾಯಿಗೆ ಬಂದ ಹಾಗೆ ಮಾತಾಡ್ತೀರಾ, ಏನೋ ನಾಲ್ಕು ಕಾಸು ಕೊಟ್ಟಿದೀನಿ ಅಂತ ಜಮಾಯ್ಸೋಕೆ ಬರ್ತೀರಾ, ಅವನು ನನ್ನ ಮಗ, ನಾನು ಏನಾದ್ರೂ ಮಾಡಿಸ್ತೀನಿ, ಅದನ್ನು ಕಟ್ಕೊಂಡು ನಿನಗೇನು ಆಗ್ಬೇಕಿದೆ, ಸುಮ್ನೆ ನಿನ್ನ ಪಾಡಿಗೆ ನೀನು ಹೋಯ್ತಾ ಇರು ಎನ್ನುತ್ತಾ ಮಗು ತಿನ್ನುತ್ತಿದ್ದ ಬಿಸ್ಕೆಟ್ ಪ್ಯಾಕೆಟ್ ನ್ನು ಅದರ ಕೈಯಿಂದ ಕಿತ್ತುಕೊಂಡು ಎಸೆದಳು. ಆ ಪುಟ್ಟ ಬಾಲಕ ಅಳತೊಡಗಿದ. ಅವಳು ಅವನನ್ನು ದರದರನೆ ಎಳೆದುಕೊಂಡು ಮುಂದೆ ಸಾಗಿದಳು.

ಭಿಕ್ಷುಕಿಯ ಅಹಂಕಾರದ ಮಾತುಗಳನ್ನು ಕೇಳಿ ಶಾಂತಲಾಗೆ ಗರಬಡಿದಂತಾಯಿತು. ಯಕಃಶ್ಚಿತ್ ಭಿಕ್ಷೆ ಬೇಡುವವಳ ಬಳಿ ಉಗಿಸಿಕೊಂಡೆನಲ್ಲ. ಇಷ್ಟಕ್ಕೂ ತಾನೇ ಅವಳಿಗೆ ಅದೆಷ್ಟೋ ಬಾರಿ ಭಿಕ್ಷೆ ಕೊಟ್ಟಿದ್ದುಂಟು. ಆದರೂ ಅವಳಿಗೆ ಅದೆಷ್ಟು ಕೊಬ್ಬು. ನನಗಾದರೂ ಯಾಕೆ ಬೇಕಿತ್ತು ಅವಳ ಸಹವಾಸ. ಸುಮ್ನೆ ಅವಳ ಕೈಯ್ಯಲ್ಲಿ ಉಗಿಸಿಕೊಂಡೆನಲ್ಲ ಎಂದು ಅವರಿಗೆ ಬೇಸರವಾಯಿತು. ಈ ಕಾಲದಲ್ಲಿ ಯಾರಿಗೂ ಬುದ್ಧಿ ಹೇಳುವ ಹಾಗೆ ಇಲ್ಲ. ಅವಳು ಏನೇ ಮಾಡಿಕೊಂಡು ಸಾಯಲಿ ನನಗೇನು ಎನ್ನುತ್ತಾ ಅಪಮಾನದಿಂದ ತಲೆತಗ್ಗಿಸಿ ಅಲ್ಲಿಂದ ಹೊರಟರು.

ಮನೆಗೆ ಬಂದಾಗ ಪತಿ, ಮಕ್ಕಳು ಇವರ ಮ್ಲಾನವದನ ಕಂಡು ಏನಾಯಿತೆಂದು ಆತಂಕದಿಂದ ವಿಚಾರಿಸಿದರು. ಆದರೆ ಶಾಂತಲಾ ಭಿಕ್ಷುಕಿಗೆ ಬುದ್ಧಿ ಹೇಳಲು ಹೋಗಿ ಅವಳ ಕೈಲಿ ತಾನು ಬೈಸಿಕೊಂಡೆ ಎಂದು ಹೇಳಿದರೆ ಎಲ್ಲರೂ ತನ್ನನ್ನೇ ಗದರಿಸುವರು. ನಿನಗ್ಯಾಕೆ ಬೇಕಿತ್ತು ಅದೆಲ್ಲ. ಅವಳು ಏನಾದರೂ ಮಾಡ್ಲಿ ನಿನಗೇನು ಎಂದು ಅನ್ನಬಹುದು ಎಂದುಕೊಳ್ಳುತ್ತಾ, ಏನಿಲ್ಲ ತುಂಬಾ ಸುಸ್ತಾಗಿದೆ ಅಷ್ಟೇ ಎನ್ನುತ್ತಾ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತರು. ಅದನ್ನು ನೋಡಿ ಅವರ ಪತಿ ಇಷ್ಟೊಂದು ಸುಸ್ತಾಗುತ್ತೆ ಅಂದರೆ ಇನ್ನು ಮುಂದೆ ನಾನು ಅಥವಾ ಮಕ್ಕಳು ಸಾಮಾನು ತಂದು ಕೊಡುತ್ತೇವೆ. ನೀನು ಮನೆಯಲ್ಲೇ ಇರು ಎಂದಾಗ ಅವರಿಗೂ ಮತ್ತೆ ಆ ಭಿಕ್ಷುಕಿಯ ಮುಖ ನೋಡಲು ಮನಸ್ಸಿಲ್ಲವಾದ್ದರಿಂದ, ಹಾಗೇ ಆಗಲಿ ಎಂದರು.

ಆನಂತರ ಏನೇ ಬೇಕಿದ್ದರೂ ಮಕ್ಕಳು ಅಥವಾ ಪತಿಯೇ ತಂದು ಕೊಡಲು ಶುರು ಮಾಡಿದರು. ನಿಧಾನವಾಗಿ ಅವರು ಭಿಕ್ಷುಕಿಯಿಂದ ಆದ ಅಪಮಾನವನ್ನು ಮರೆಯತೊಡಗಿದರು. ಕೆಲವು ಸಮಯದ ನಂತರ ಅವರಿಗೆ ಬ್ಯಾಂಕಿಗೆ ಹೋಗಲೆಬೇಕಾಗಿ ಬಂದಾಗ ಆ ಭಿಕ್ಷುಕಿಯ ನೆನಪಾಗಿ ಅವಳು ಸಿಕ್ಕಿದರೆ ಅವಳತ್ತ ನೋಡಲೇ ಬಾರದೆಂದು ನಿರ್ಧರಿಸಿದರೂ ಕಣ್ಣುಗಳು ಮಾತ್ರ ಅವಳನ್ನೇ ಹುಡುಕತೊಡಗಿದವು. ಆದರೆ ಅವಳೆಲ್ಲೂ ಕಾಣಿಸಲಿಲ್ಲ. ನಿಟ್ಟುಸಿರು ಬಿಡುತ್ತ ಶಾಂತಲಾ ಬ್ಯಾಂಕಿನ ಕಡೆ ಹೆಜ್ಜೆ ಹಾಕಿದರು. ಮತ್ತೆ ಅವರು ಆ ಕಡೆ ತಲೆ ಹಾಕಲೇ ಇಲ್ಲ.

ಕೆಲಸಮಯದ ನಂತರ ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುವಾಗ ಶಾಂತಲಾ, ಸುಮ್ಮನೆ ಮಕ್ಕಳಿಗೆ ತೊಂದರೆ ಯಾಕೆ ಅವರ ಸಮಯ ಯಾಕೆ ದಂಡ ಮಾಡೋದು ಅವರು ಚೆನ್ನಾಗಿ ಓದಿ ಕೊಳ್ಳಲಿ ಎಂದುಕೊಂಡು ತಾವೇ ಪೇಟೆಗೆ ಹೋಗಲು ಶುರು ಮಾಡಿದರು. ಆದರೆ ಆ ಭಿಕ್ಷುಕಿ ಅವರಿಗೆ ಮತ್ತೆಂದೂ ಕಾಣಿಸಲಿಲ್ಲ. ಅವಳಿಗೆ ಏನಾಗಿರಬಹುದು, ನಾನು ಮತ್ತೆ ಅವಳ ತಂಟೆಗೆ ಬಂದರೆ ಎಂದು ಬೇರೆ ಕಡೆ ಹೋಗಿ ಭಿಕ್ಷೆ ಬೇಡುತ್ತಿರಬಹುದೇ, ಅವಳು ಎಲ್ಲಿದ್ದಾಳೆ ಎಂದು ಇಲ್ಲಿ ಯಾರ ಬಳಿಯಾದರೂ ಕೇಳಲೇ ಅಂದುಕೊಂಡರು.

ಆದರೆ ನಾನು ಆ ಭಿಕ್ಷುಕಿ ಬಗ್ಗೆ ಯಾಕೆ ಕೇಳುತ್ತಿದ್ದೇನೆ ಎಂದು ಅವರು ಕೇಳಿದರೆ ಏನು ಹೇಳಲಿ, ಬೇಡ, ನನಗೆ ಅಷ್ಟೊಂದು ಅಪಮಾನ ಮಾಡಿದ ಅವಳ ಬಗ್ಗೆ ನನಗೇಕೆ ಇಷ್ಟೊಂದು ಕಾಳಜಿ, ಅವಳು ಎಲ್ಲೇ ಇರಲಿ, ಎಲ್ಲೇ ಹೋಗಲಿ ನನಗೇನು ಎಂದುಕೊಳ್ಳುತ್ತ ತಾವು ಖರೀದಿಸಿದ ಸಾಮಾನುಗಳನ್ನು ರಿಕ್ಷಾದಲ್ಲಿ ಹಾಕಿ ರಿಕ್ಷಾ ಹತ್ತಬೇಕು ಅನ್ನುವಷ್ಟರಲ್ಲಿ ಯಾರೋ ತನ್ನ ಕಾಲುಗಳನ್ನುಬಿಗಿಯಾಗಿ ಹಿಡಿದಂತಾಗಿ ಗಾಬರಿಯಿಂದ ಕೆಳಗೆ ನೋಡಿದಾಗ ಆ ಭಿಕ್ಷುಕಿ ! ಅರೆ ಇವಳು ತನ್ನ ಕಾಲು ಯಾಕೆ ಹಿಡೀತಾಳೆ ಅವತ್ತು ಅಷ್ಟೆಲ್ಲ ಅಂದವಳು ಎಂದು ಅವರು ಯೋಚಿಸುವಷ್ಟರಲ್ಲಿ ಅವಳು ಅಮ್ಮಾ ನನ್ನನ್ನು ಕ್ಷಮಿಸಿ ಬಿಡಮ್ಮ, ಅವತ್ತು ನಿಮಗೆ ಏನೇನೋ ಹೇಳಿಬಿಟ್ಟೆ. ನೀವು ಕ್ಷಮಿಸಿದೆ ಅನ್ನೋವರೆಗೂ ನಾನು ನಿಮ್ಮ ಕಾಲು ಬಿಡಲ್ಲ ಅನ್ನುತ್ತ ಅವರ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಳು.

ಶಾಂತಲಾ ನಿರ್ಲಿಪ್ತರಾಗಿ, ನನ್ನ ಹತ್ತಿರ ಕ್ಷಮೆ ಕೇಳೋ ಅಗತ್ಯ ಇಲ್ಲ, ನಾನ್ಯಾರು ನಿಂಗೆ ಬುದ್ಧಿ ಹೇಳೋಕೆ, ಹಾಗೆ ನೋಡಿದ್ರೆ ನಾನೇ ನಿನ್ನ ಬಳಿ ಕ್ಷಮಾಪಣೆ ಕೇಳಬೇಕು, ನಿನ್ನ ಬದುಕಿನ ಬಗ್ಗೆ ಮಾತನಾಡುವ ಹಕ್ಕಿರಲಿಲ್ಲ ನನಗೆ. ಆದರೂ ಮಾತಾಡ್ದೆ ನೋಡು ಅದಕ್ಕೆ ಎನ್ನುತ್ತಾ ತಮ್ಮ ಎರಡೂ ಕೈಗಳನ್ನು ಜೋಡಿಸಿದಾಗ ಅವಳು ಧಿಗ್ಗನೆದ್ದು ದಯವಿಟ್ಟು ಹಾಗೆಲ್ಲ ಮಾಡಬೇಡೀಮ್ಮಾ, ಅವತ್ತು ನೀವು ಹಾಗೆಲ್ಲ ಹೇಳಿದ ಮೇಲೆ ಜೋಪಡಿಗೆ ಹೋಗಿ ಹಾಗೇ ಯೋಚಿಸ್ತಾ ಕೂತ್ಕೊಂಡೆ. ಆಗ ನೀವು ಹೇಳಿದ್ದು ದಿಟ ಅಂತ ಅನ್ನಿಸ್ತು. ನನ್ನ ಬಾಳಿನ ಹಾಗೆ ಮಗನ ಬಾಳು ಹಾಳಾಗಬಾರದು. ಅವನನ್ನು ಚೆನ್ನಾಗಿ ಓದಿಸಬೇಕು ಅಂತ ಅವತ್ತೇ ನಿರ್ಧಾರ ಮಾಡ್ಕೊಂಡೆ. ಮಾರನೆ ದಿನಾನೇ ಕೂಲಿ ಕೆಲ್ಸಕ್ಕೆ ಸೇರ್ಕೊಂಡೆ. ನೀವು ಹೇಳ್ದ ಹಾಗೇ ಮಗೂನ ಅಂಗನವಾಡಿಲಿ ಬಿಟ್ಟೆ. ಈವಾಗ ನೀವು ಹೇಳ್ದ ಹಾಗೆ ನನ್ನ ಬದುಕು ಚೆನ್ನಾಗಿದೆ. ಅವತ್ತಿಂದ ನಾನು ನಿಮ್ಮ ಹತ್ರ ಕ್ಷಮೆ ಕೇಳಬೇಕು ಅಂತ ನಿಮಗೋಸ್ಕರ ಹುಡುಕಾಡಿದೆ. ಆದರೆ ನಾನು ಕೆಲಸ ಮುಗಿಸಿ ಬರೋವಾಗ ಕತ್ತಲಾಗ್ತಿತ್ತು. ಅದೂ ಅಲ್ಲದೆ ನಿಮ್ಮ ಮನೆ ಎಲ್ಲಿದೆ ಅಂತ ಕೂಡ ಗೊತ್ತಿಲ್ಲ. ಯಾವಾಗ್ಲಾದ್ರೂ ನೀವು ನೋಡೋಕೆ ಸಿಗಬಹುದು ಅಂತ ಆಗಾಗ ಈ ಕಡೆ ಬರ್ತಾ ಇರ್ತೀನಿ. ಇವತ್ತು ಸಿಕ್ಕಿದ್ರಲ್ಲ ನನ್ನ ಪುಣ್ಯ. ನಿಮ್ಮ ಆಶೀರ್ವಾದ ನನ್ನ ಹಾಗೂ ನನ್ನ ಮೇಲಿರಲಿ ತಾಯಿ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ಎಂದು ಅವಳು ಅಂಗಲಾಚಿ ಬೇಡಿಕೊಂಡಳು.

ಶಾಂತಲಾ ಅವಳನ್ನು ಹಿಡಿದು ಮೇಲಕ್ಕೆತ್ತಿ, ಚೆನ್ನಾಗಿ ಬಾಳು. ಮಗನನ್ನು ಚೆನ್ನಾಗಿ ನೋಡ್ಕೋ ಎಂದು ಹರಸಿದರು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ತುಂಬಾ ದೊಡ್ಡ ಮನಸ್ಸು ತಾಯಿ ನಿಮ್ಮದು ಎನ್ನುತ್ತಾ ತನ್ನ ಸೀರೆಯ ಸೆರಗಿನಿಂದ ಕಣ್ಣೊರೆಸುತ್ತ, ನಾನು ಬರ್ತೀನಿ ತಾಯಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹೇಳಿ ಹೊರಟು ಹೋದಳು. ಅಷ್ಟೂ ಹೊತ್ತು ಮೂಕ ಪ್ರೇಕ್ಷಕನಾಗಿ ನಿಂತಿದ್ದ ರಿಕ್ಷಾದವ, ಅಮ್ಮಾ ನೀವು ತುಂಬಾ ಒಳ್ಳೇ ಕೆಲಸ ಮಾಡಿದ್ರಿ ಎಂದಾಗ ಶಾಂತಲಾ ನಿಟ್ಟುಸಿರು ಬಿಟ್ಟರು.

ಮಾಸದ ಪ್ರೀತಿ

ಪಕ್ಕದ ಮನೆಯ ಎದುರು ಒಂದು ಕಾರು ಬಂದು ನಿಂತಾಗ ಹನುಮಂತಯ್ಯ ಕುತೂಹಲದಿಂದ ತನ್ನ ಕನ್ನಡಕವನ್ನು ಸರಿ ಮಾಡಿಕೊಳ್ಳುತ್ತ ಕಣ್ಣುಗಳನ್ನು ಕಿರಿದು ಗೊಳಿಸಿ ಕಾರಿನಿಂದ ಯಾರು ಇಳಿಯುತ್ತಿದ್ದಾರೆ ಎಂದು ನೋಡಿದರು. ಎದುರಿನ ಸೀಟಿನಿಂದ ಯುವಕನೊಬ್ಬ ಇಳಿದು ಕಾರಿನ ಹಿಂದಿನ ಬಾಗಿಲು ತೆರೆದು ನಿಂತ. ಒಬ್ಬ ವಯಸ್ಸಾದ ಮಹಿಳೆಯೊಬ್ಬಳು ಇಳಿಯುತ್ತಿರುವುದನ್ನು ಕಂಡು ಮತ್ತಷ್ಟು ಕುತೂಹಲದಿಂದ ತಮ್ಮ ಮನೆಯ ವರಾಂಡದ ತುದಿಯಲ್ಲಿ ನಿಂತು ನೋಡ ತೊಡಗಿದರು.

ಆ ಮಹಿಳೆ ಇಳಿಯುವಾಗ ಯುವಕ ಅವರ ಸಹಾಯಕ್ಕಾಗಿ ನೀಡಿದ ಕೈಯನ್ನು ಆಕೆ ತಿರಸ್ಕರಿಸುತ್ತ ಅತ್ತ ತಳ್ಳಿ ನಿಧಾವಾಗಿ ಇಳಿದು ತಲೆ ತಗ್ಗಿಸಿ ನಡೆಯುತ್ತಾ ಮನೆಯೊಳಕ್ಕೆ ಹೋದರು. ಅವರ ತಲೆಯ ತುಂಬಾ ಬಿಳಿ ಕೂದಲು ನೋಡಿ ಹನುಮಂತಯ್ಯ ನವರಿಗೆ ತಕ್ಷಣಕ್ಕೆ ಯಾರೆಂದು ತಿಳಿಯದಿದ್ದರೂ ಅದು ಶಾಂತಿ ಇರಬಹುದೇ ಎಂದು ಯೋಚಿಸುತ್ತ ನಿಂತರು. ಅವರ ಮನಸ್ಸು ಹಿಂದಕ್ಕೋಡಿತು. ನೆನಪುಗಳು ಮತ್ತೆ ಹಸಿರಾಗತೊಡಗಿತು.

ಪಕ್ಕದ ಮನೆಯ ಶಾಂತಿ ಹಾಗೂ ಹನುಮಂತಯ್ಯ ಜೊತೆಯಲ್ಲೇ ಆಡಿ ಬೆಳೆದವರು. ಅವಳ ಅಣ್ಣ ಶಾಂತರಾಮ ಹನುಮಂತಯ್ಯನವರ ಸ್ನೇಹಿತ ಹಾಗೂ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಶಾಂತಿ ಅವರಿಗಿಂತ ನಾಲ್ಕು ವರುಷ ಚಿಕ್ಕವಳಾದರೂ ಅವರಿಬ್ಬರಿಗಿಂತ ತಾನೇ ಹಿರಿಯವಳು ಅನ್ನುವ ತರಹ ಅವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದಳು. ಆಗ ಅವಳ ಮನೆಯವರೆಲ್ಲ ಅದನ್ನು ನೋಡಿ ಈಗಲೇ ಹೀಗಾದರೆ ಇನ್ನು ಇವಳು ತನ್ನ ಗಂಡನ ಮೇಲೆ ಅಧಿಕಾರ ಇನ್ನೆಷ್ಟು ಚಲಾಯಿಸುತ್ತಾಳೋ ಎಂದು ಆತಂಕಗೊಂಡಿದ್ದರು.

ಆದರೆ ಹನುಮಂತಯ್ಯನಿಗೆ ಅವಳು ತನ್ನ ಮೇಲೆ ಅಧಿಕಾರ ಚಲಾಯಿಸುವ ರೀತಿ ತುಂಬಾ ಇಷ್ಟವಾಗುತ್ತಿತ್ತು. ನೋಡಲೂ ಸುಂದರವಾಗಿದ್ದ ಅವಳ ಮೇಲೆ ಹನುಮಂತಯ್ಯನಿಗೆ ಪ್ರೀತಿ ಹುಟ್ಟಿತು. ಆದರೆ ಅವನು ಅದನ್ನು ಮಾತ್ರ ಅವಳೊಂದಿಗೆ ಹೇಳಿಕೊಳ್ಳಲು ಧೈರ್ಯ ಸಾಲಲಿಲ್ಲ. ಆದರೂ ಮನೆಯಲ್ಲಿ ತನ್ನ ತಾಯಿಯ ಬಳಿ ತಾನು ಮದುವೆಯಾಗುವುದಾದರೆ ಶಾಂತಿಯನ್ನೇ ಎಂದು ಹೇಳಿದಾಗ ಅವನ ಅಮ್ಮ ನಕ್ಕು ಬಿಟ್ಟಿದ್ದರು. ಜೊತೆಗೆ ಅವಳನ್ನು ಮದುವೆಯಾದರೆ ನೀನು ಅವಳ ಗುಲಾಮನಾಗಬೇಕಾಗುತ್ತದೆ, ಅವಳು ನಿನ್ನ ಮಾತು ಕೇಳುವವಳಲ್ಲ ಎಂದು ಗೇಲಿ ಮಾಡುತ್ತಿದ್ದರು.

ಮಗ ಇನ್ನೂ ಚಿಕ್ಕವ, ಸುಮ್ಮನೆ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದ ಗಾಯತ್ರಿಗೆ ಅವನು ದೊಡ್ಡವನಾಗಿ ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೂ ಅದೇ ಮಾತನ್ನು ಹೇಳಿದಾಗ ಗಾಯತ್ರಿಗೆ ಹಿಡಿಸಲಿಲ್ಲ. ಅಂತಹ ಗಂಡುಬೀರಿ ಹೆಣ್ಣು ತಮ್ಮ ಮನೆಯ ಸೊಸೆಯಾಗುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದರು. ಶಾಂತಿ ಹತ್ತನೆಯ ತರಗತಿಯಲ್ಲಿ ಫೈಲಾದಾಗ ಗಾಯತ್ರಿ ಅವಳನ್ನು ಬೇಡವೆನ್ನುವುದಕ್ಕೆ ಇನ್ನೊಂದು ಕಾರಣವೂ ಸಿಕ್ಕಿತು. ಅವಳು ದಡ್ಡಿ, ಅವಳನ್ನು ಮದುವೆಯಾದರೆ ಮುಂದೆ ನಿನ್ನ ಮಕ್ಕಳೂ ದಡ್ಡರಾಗುತ್ತಾರೆ ಎಂದು ಮಗನಿಗೆ ಹೆದರಿಸಿದ್ದಳು.

ಶಾಂತಿಯ ಮನೆಯವರಿಗೂ ತಮ್ಮ ಪಕ್ಕದ ಮನೆಯ ಹುಡುಗನಿಗೆ ತಮ್ಮ ಹುಡುಗಿಯನ್ನು ಕೊಡುವುದು ಇಷ್ಟವಿರಲಿಲ್ಲ. ಆದರೆ ಶಾಂತಿಯ ಮನಸ್ಸಿನಲ್ಲಿ ಏನಿದೆ ಎಂದು ಅವಳೆಂದೂ ಬಾಯಿ ಬಿಟ್ಟಿರಲಿಲ್ಲ. ಅವಳಿಗೆ ಹನುಮಂತಯ್ಯನ ಜೊತೆ ಮದುವೆಯಾಗುವುದು ಬೇಡವೆಂದಾಗ ಅವಳು ವಿರೋಧಿಸಲೂ ಇಲ್ಲ. ಹಾಗಾಗಿ ಎರಡೂ ಮನೆಯವರ ವಿರೋಧದಿಂದ ಹನುಮಂತಯ್ಯನ ಪ್ರೀತಿಗೆ ಕಡಿವಾಣ ಬಿದ್ದಿತು. ಶಾಂತಿಯ ಮನೆಯವರು ಅವಳಿಗೆ ಬೇರೆ ಹುಡುಗನನ್ನು ಗೊತ್ತು ಮಾಡಿ ಮದುವೆಯನ್ನು ಮುಗಿಸಿಯೂ ಬಿಟ್ಟರು. ಆದರೆ ಹನುಮಂತಯ್ಯನಿಗೆ ಮಾತ್ರ ಇದು ಸಹಿಸಲಾಗದೆ ಅವತ್ತೀಡಿ ದಿನ ರೂಮು ಸೇರಿಕೊಂಡು ಅತ್ತಿದ್ದ.

ನಂತರ ವರುಷಗಳು ಉರುಳಿದಂತೆ ಶಾಂತಿಯ ನೆನಪೂ ಮಸುಕಾಗತೊಡಗಿತು. ಉದ್ಯೋಗದ ನಿಮಿತ್ತ ಬೆಂಗಳೂರು ಸೇರಿದ. ಕಾಲ ಕ್ರಮೇಣ ಅವಳನ್ನು ಮರೆತು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಮದುವೆಯಾದ. ಅವನಿಗೆ ನಾಲ್ಕು ಗಂಡು ಮಕ್ಕಳೂ ಆದವು. ಆಮೇಲೆ ಹನುಮಂತಯ್ಯ ಶಾಂತಿಯನ್ನು ನೋಡಿರಲೇ ಇಲ್ಲ. ಅವಳು ಮುಂಬೈನಲ್ಲಿ ಇದ್ದಾಳೆ ಎಂದು ಮಾತ್ರ ತಿಳಿದಿತ್ತು. ಅವಳು ತವರು ಮನೆಗೂ ಬರುತ್ತಿರಲಿಲ್ಲ. ಅವಳನ್ನು ನೋಡಿಕೊಂಡು ಬರಲು ತಾಯಿ ಮನೆಯವರೇ ಮುಂಬೈಗೆ ಹೋಗಿ ಬರುತ್ತಿದ್ದರು.

ವರುಷಗಳು ಕಳೆದಂತೆ ಹನುಮಂತಯ್ಯನ ಮಕ್ಕಳೆಲ್ಲ ದೊಡ್ಡವರಾಗಿ, ವಿದ್ಯಾವಂತರಾಗಿ ಒಳ್ಳೆಯ ಕೆಲಸವೂ ದೊರಕಿತು. ಆಗ ಹನುಮಂತನ ತಾಯಿ, ನೀನು ಶಾಂತಿಯನ್ನು ಮದುವೆಯಾಗಿದ್ದಿದ್ದರೆ ನಿನ್ನ ಮಕ್ಕಳೆಲ್ಲ ಹೀಗಿರುತ್ತಿರಲಿಲ್ಲ ಎಂದು ಛೇಡಿಸಿದ್ದರು. ಶಾಂತಿಗೆ ಮಕ್ಕಳಾಗಿದೆಯೋ ಇಲ್ಲವೋ ಅವನಿಗೆ ತಿಳಿಯಲಿಲ್ಲ. ಅವಳ ಬಗ್ಗೆ ಮನೆಯಲ್ಲಿ ಯಾರೂ ಮಾತನಾಡುತ್ತಿರಲಿಲ್ಲ. ಶಾಂತರಾಮ ದುಬೈ ಸೇರಿ ಅಲ್ಲೇ ನೆಲೆ ನಿಂತ. ಯಾರನ್ನಾದರೂ ವಿಚಾರಿಸೋಣವೆಂದರೆ ಮದುವೆಯಾದ ಮಹಿಳೆಯ ಬಗ್ಗೆ ವಿಚಾರಿಸಲು ಧೈರ್ಯ ಸಾಲುತ್ತಿರಲಿಲ್ಲ.

 ಎರಡು ವರುಷಗಳ ಹಿಂದೆ ಹನುಮಂತಯ್ಯನ ಹೆಂಡತಿ ಕಾಯಿಲೆ ಬಂದು ತೀರಿಕೊಂಡ ಮೇಲೆ ಶಾಂತಿಯ ನೆನಪು ಅವನಿಗೆ ಬಹುವಾಗಿ ಕಾಡಿತ್ತು. ಹೆಂಡತಿಗೆ ಸಾಯುವ ಮುನ್ನ ತನ್ನ ಮಕ್ಕಳ ಮದುವೆ ನೋಡಲು ಆಸೆಯೆಂದು ಬೇಗ ಬೇಗನೆ ಅವರ ಮದುವೆಯನ್ನೂ ಮಾಡಿಸಿದ್ದಾಯಿತು. ಮಕ್ಕಳೆಲ್ಲ ರೆಕ್ಕೆ ಬಂದ ಹಕ್ಕಿಯಂತೆ ಹಾರಿ ಹೋದಾಗ ಹನುಮಂತಯ್ಯ ಒಬ್ಬಂಟಿಗರಾಗಿ ಬಿಟ್ಟಿದ್ದರು.

ಹೆಂಡತಿ ತೀರಿಕೊಂಡ ಮೇಲೆ ಹನುಮಂತಯ್ಯ ತಮ್ಮ ಊರಿಗೆ ಬಂದು ತಮ್ಮ ಮನೆಯನ್ನು ರಿಪೇರಿ ಮಾಡಿಸಿ ಅಲ್ಲೇ ಇರತೊಡಗಿದರು. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರೂ ಅವರಿಗೆ ಒಂಟಿತನ ಬಹುವಾಗಿ ಕಾಡುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ಅವರಿಗೆ ತಮ್ಮ ಜೊತೆ ಬಂದಿರಲು ಹೇಳಿದ್ದರೂ ಹನುಮಂತಯ್ಯ ಮಾತ್ರ ತಾನು ತನ್ನ ಮನೆಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಬೇರೆ ದಾರಿ ಕಾಣದೆ ಮಕ್ಕಳು ಅಡಿಗೆ ಮತ್ತು ಮನೆಕೆಲಸ ಮಾಡಲು ಜನ ನೇಮಿಸಿದ್ದರು.

ಈಗ ಸುಮಾರು ಮೂವತ್ತು ವರುಷಗಳಾದ ಮೇಲೆ ಶಾಂತಿಯನ್ನು ನೋಡಿದಾಗ ಅವಳು ಹೌದೋ ಅಲ್ಲವೋ ಎಂದು ಗೊಂದಲವಾಯಿತು. ಆದರೆ ಸಂಜೆಯ ಹೊತ್ತಿಗೆ, ಬಂದಿರುವುದು ಶಾಂತಿಯೇ ಎಂದು ಅಡಿಗೆಯ ಸುಂದರಮ್ಮನಿಂದ ತಿಳಿಯಿತು. ಅವಳು ಬಂದ ದಿನ ಅವಳ ಬೋಳು ಹಣೆ ನೋಡಿದ ನೆನಪಾಗಿ ಹನುಮಂತಯ್ಯನಿಗೆ ಶಾಂತಿಯನ್ನು ನೋಡಬೇಕು ಅವಳ ಜೊತೆ ಮಾತನಾಡಬೇಕು ಎಂದು ಹಂಬಲವಾಯಿತು. ಜೊತೆಗೆ ಹಿಂದಿನ ನೆನಪುಗಳು ಮತ್ತೆ ಬಲವಾಗಿ ಕಾಡತೊಡಗಿದವು. ದಿನವೂ ಹನುಮಂತಯ್ಯ ಶಾಂತಿ ಏನಾದರೂ ಕಾಣುವಳೇ ಎಂದು ಪಕ್ಕದ ಮನೆಯತ್ತ ಯಾವಾಗಲೂ ನೋಡುತ್ತಿದ್ದರು. ಆದರೆ ಶಾಂತಿ ಮಾತ್ರ ಹೊರಗೆಲ್ಲೂ ಕಾಣಿಸಲಿಲ್ಲ.

ಒಂದು ದಿನ ಅವರು ವಾಕಿಂಗ್ ನಿಂದ ಬರುತ್ತಿರುವಾಗ ಶಾಂತಿ ವರಾಂಡದಲ್ಲಿ ನಿಂತು ತಮ್ಮ ಮನೆಯತ್ತ ನೋಡುತ್ತಾ ನಿಂತಿದ್ದು ಕಂಡು ಹನುಮಂತಯ್ಯನಿಗೆ ಸಂತೋಷವಾಗಿ ಲಗುಬಗೆಯಿಂದ ಅವಳ ಮನೆಯತ್ತ ಹೆಜ್ಜೆ ಹಾಕಿದರು. ಹೇ ಶಾಂತಿ ಹೇಗಿದ್ದೀಯಾ ಎಂದು ಹಿಂದಿನ ಸಲುಗೆಯಿಂದಲೇ ಕೇಳಿದಾಗ ಶಾಂತಿ ತನ್ನ ಕನ್ನಡಕವನ್ನು ಸರಿ ಮಾಡಿ ಕೊಳ್ಳುತ್ತಾ, ಯಾರು, ಹನುಮನಾ ಎಂದು ಕೇಳಿದಳು. ನಂತರ ಗೇಟು ತೆರೆದು ಬಂದು, ನೀನು ಇದ್ದ ಹಾಗೆ ಇದ್ದೀಯಲ್ಲೋ, ಮುಖದ ಮೇಲೆ ನಾಲ್ಕು ಗೆರೆ ಬಿಟ್ಟರೆ ಏನೂ ವ್ಯತ್ಯಾಸವಾಗಿಲ್ಲ ಎಂದಾಗ ಹನುಮಂತಯ್ಯನಿಗೆ ಸಂತಸವಾಗಿ, ಬಾ ನಮ್ಮ ಮನೆಗೆ, ನಿನ್ನ ಬಳಿ ಮಾತನಾಡುವುದಿದೆ ಎಂದಾಗ ಶಾಂತಿ ನಗುತ್ತ ಇನ್ನೂ ನಿನ್ನ ಹಳೆಯ ಚಾಳಿ ಬಿಟ್ಟಿಲ್ಲವೇನೋ ಎನ್ನುತ್ತಾ ಅವನ ಹಿಂದೆಯೇ ಬರುತ್ತಾ ಅವನ ಮನೆಯ ಕಡೆ ನಡೆದಳು.

ಇಬ್ಬರೂ ತಮ್ಮ ತಮ್ಮ ಸಂಸಾರದ ಬಗ್ಗೆ ಮಾತನಾಡಿಕೊಂಡರು. ಆಗ ಶಾಂತಿ ನಾನು ನಿನ್ನನ್ನು ಬಿಟ್ಟು ದೊಡ್ಡ ತಪ್ಪು ಮಾಡಿದೆ ಅಂತ ನನಗೆ ಮದುವೆಯಾದ ಮೇಲೆ ತಿಳೀತು. ಮದುವೆಗೆ ಮೊದಲು ಗಂಡ ಶ್ರೀಮಂತ, ಜೊತೆಗೆ ಮುಂಬೈ ನಲ್ಲಿ ಇರುವವರು ಎಂದು ಕುಣಿದಾಡಿ ಬಿಟ್ಟಿದ್ದೆ. ನನ್ನ ಗಂಡನ ಮನೆಯವರು ಶ್ರೀಮಂತರೇನೋ ನಿಜ, ಆದರೆ ನನ್ನ ಗಂಡ ಮಾತ್ರ ಮಹಾ ಕುಡುಕ, ಕುಡಿದ ಅಮಲಿನಲ್ಲಿ ಆತ ದಿನವೂ ನಡೆಸುತ್ತಿದ್ದ ರಂಪ ರಾಮಾಯಣ ನೋಡಿ ಎಷ್ಟೋ ಸಲ ನಿನ್ನಂಥಾ ಒಳ್ಳೆಯ ಹುಡುಗನನ್ನು ಬಿಟ್ಟೆನಲ್ಲ ಎಂದು ಅದೆಷ್ಟೋ ಬಾರಿ ಅತ್ತಿದ್ದುಂಟು.

ತಮ್ಮ ಮಗನಿಗೆ ಜೋರಿನ ಹುಡುಗಿ ಸಿಕ್ಕಿದರೆ ಅವಳೇ ತನ್ನ ಗಂಡನನ್ನು ಸರಿ ಮಾಡುತ್ತಾಳೆ ಎಂದು ಅವನ ತಾಯಿ ನನ್ನನ್ನು ಆರಿಸಿದ್ದರು. ಆದರೆ ಅವನ ರಂಪಾಟದ ಮುಂದೆ ನನ್ನದೇನೂ ನಡೆಯಲೇ ಇಲ್ಲ. ಕೊನೆಗೆ ಅವನು ಕುಡಿದು ಕುಡಿದೇ ಸತ್ತು ಬಿಟ್ಟ. ಹುಟ್ಟಿದ ಒಬ್ಬ ಮಗನಿಗೂ ನಾನು ಬೇಕಾಗಿಲ್ಲ. ಅವನಿಗೆ ಅಮೆರಿಕಾದಲ್ಲಿ ಒಳ್ಳೆ ಕೆಲಸ ಸಿಕ್ಕಿ ಬಿಟ್ಟಿದೆ. ಅದಕ್ಕೆ ನಮ್ಮ ಅತ್ತಿಗೆ ಇಲ್ಲಿ ಬಂದಿರು ಅಂತ ಹೇಳಿದ್ಲು, ಅಣ್ಣನೂ ಇಲ್ಲ ಅವರಿಗೆ ಮಕ್ಕಳೂ ಇಲ್ಲ, ಅವಳಿಗೂ ಒಂಟಿತನ ಬೇಜಾರು ಬಂದು ಬಿಟ್ಟಿದೆ, ಅದಕ್ಕೆ ನನ್ನ ಮಗ ಇಲ್ಲಿ ಕರೆತಂದು ಬಿಟ್ಟು ಹೋದ ಎಂದು ಹೇಳಿ ತನ್ನ ಕಥೆಯನ್ನು ಮುಗಿಸಿದಳು.

ಹನುಮಂತಯ್ಯ, ನನಗೂ ಹೆಂಡತಿ ತೀರಿಕೊಂಡ ಮೇಲೆ ಒಂಟಿ ಬಾಳು ಸಾಕಾಗಿದೆ. ನೀನು ಒಪ್ಪೊದಾದ್ರೆ ನಾನು ಈಗ್ಲೂ ನಿನ್ನನ್ನು ಮದ್ವೇಯಾಗೋಕೆ ರೆಡಿ, ನಿನ್ನನ್ನು ಮದುವೆಯಾಗಬೇಕು ಎನ್ನುವ ಆಸೆ ಇನ್ನೂ ಜೀವಂತವಾಗೇ ಇದೆ ಎಂದಾಗ ಶಾಂತಿ ನಾಚುತ್ತ, ಥೂ ಈ ವಯಸ್ಸಿನಲ್ಲೇ? ಜನ ಕೇಳಿದ್ರೆ ನಕ್ಕಾರು, ಊರು ಹೋಗಿ ಕಾಡು ಹತ್ತಿರ ಬಂತು ಅನ್ನೋ ಸಮಯದಲ್ಲಿ, ಹೋಗ್ಲಿ ನಿನ್ನ ಮಕ್ಕಳು ಏನೂ ಅನ್ನೋಲ್ವಾ ಎಂದಾಗ ಹನುಮಂತಯ್ಯ ಆತುರಾತುರವಾಗಿ, ಅದಕ್ಕೆಲ್ಲ ನೀನು ತಲೆ ಕೆಡಿಸಿಕೊ ಬೇಡಾ ನೀನು ಹೂಂ ಅನ್ನು ಸಾಕು, ಪ್ರೀತಿಗೆ ವಯಸ್ಸನ್ನೋದು ಇಲ್ಲ ಎಂದಾಗ ಶಾಂತಿಯ ಮುಖ ಲಜ್ಜೆಯಿಂದ ಕೆಂಪೇರಿತು. ಅದನ್ನು ನೋಡಿ ಹನುಮಂತಯ್ಯನಿಗೆ ಯೌವ್ವನ ಮರುಕಳಿಸಿದಂತಾಯಿತು.

ಮುಸುಕಿದ ಮಂಜು

ಅದೊಂದು ದಿನ ಬೆಳಗ್ಗೆ ಆರರ ಸಮಯ. ಆ ದಿನ ಮಂಜು ಬಹಳ ದಟ್ಟವಾಗಿ ಕವಿದಿತ್ತು. ಸುತ್ತಮುತ್ತಲು ಏನಿದೆ ಎಂದು ಕಾಣಿಸುತ್ತಿರಲಿಲ್ಲ. ರಸ್ತೆ ಎಲ್ಲಿದೆ ಎಂದೂ ಕಾಣಿಸದೆ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಬರುತ್ತಿದ್ದರು. ಮಂಜು ಎಷ್ಟು ದಟ್ಟವಾಗಿತ್ತೆಂದರೆ ರಸ್ತೆಯ ತಿರುವು ತೀರಾ ಹತ್ತಿರ ಬರುವವರೆಗೂ ಕಾಣಿಸುತ್ತಿರಲಿಲ್ಲ. ಬೆಳಗ್ಗಿನ ಸಮಯವಾದ್ದರಿಂದ ಅಂಥಾ ವಾಹನ ಸಂಚಾರ ಏನೂ ಇರಲಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಸುಮಾರು ಐದು ವರುಷದ ಹುಡುಗ ಎಂದಿನಂತೆ ಹಾಲು ತರಲು ಹೊರಟಿದ್ದ.

ದಟ್ಟವಾಗಿ ಕವಿದಿದ್ದ ಮಂಜನ್ನು ನೋಡಿ ಸಂಭ್ರಮಾಶ್ಚರ್ಯದಿಂದ ಕುಣಿಯುತ್ತ ಮಂಜನ್ನು ಕೈಯಲ್ಲಿ ಹಿಡಿಯಲು ಯತ್ನಿಸುತ್ತ ತಾನು ಆಕಾಶದಲ್ಲಿ ತೇಲಾಡುತ್ತಿರುವೇನೋ ಎಂದು ಭ್ರಮಿಸುತ್ತ ನಡೆಯುತ್ತಿದ್ದ. ಸುತ್ತಮುತ್ತ ಏನೂ ಕಾಣಿಸದೆ ಇದ್ದರೂ ದಿನವೂ ಹಾಲು ಅವನೇ ತರುತ್ತಿದುದರಿಂದ ಅಭ್ಯಾಸಬಲದಿಂದ ರಸ್ತೆ ದಾಟಲು ಮುಂದಾದ. ಅತ್ತಿತ್ತ ನೋಡಿದರೂ ಏನೂ ಕಾಣಿಸದೆ ರಸ್ತೆ ದಾಟುತ್ತಿರುವಾಗ ಆ ಪುಟ್ಟ ಬಾಲಕನ ಸಂತೋಷ ಕಂಡು ವಿಧಿಗೆ ಸಹಿಸದಾಯಿತೇನೋ ಎಂಬಂತೆ ಹೆಡ್ ಲೈಟು ಹಾಕದೆ ಹಾರ್ನ್ ಕೂಡ ಮಾಡದೆ ಅತಿವೇಗದಿಂದ ಬಂದ ಲಾರಿಯೊಂದು ಯಮದೂತನಂತೆ ಬಂದು ಅವನ ಮೇಲೆರಗಿತು.

ಲಾರಿಯ ಚಾಲಕನಿಗೆ ಚಕ್ರದ ಅಡಿ ಏನೋ ಬಿದ್ದಿದ್ದು ಅರಿವಾದರೂ ಬಹುಶ ನಾಯಿ ಇರಬೇಕು ಎಂದುಕೊಂಡು ಅವನು ಲಾರಿಯನ್ನು ನಿಲ್ಲಿಸದೆ ಮುಂದಕ್ಕೆ ಹೋದ. ಲಾರಿಯ ಕೆಳಗೆ ಬಿದ್ದ ಆ ಪುಟ್ಟ ಹುಡುಗನ ಪ್ರಾಣಪಕ್ಷಿ ಅದಾಗಲೇ ಹಾರಿ ಹೋಗಿತ್ತು. ಅವನ ದೇಹದ ಅಂಗಾಗಗಳ ಚೂರುಗಳು ರಸ್ತೆಯ ತುಂಬಾ ಹರಡಿ ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿದ್ದವು. ನಂತರ ಅದೇ ದಾರಿಯಾಗಿ ಅದೆಷ್ಟೋ ವಾಹನಗಳು ಬಂದು ಹೋದವು. ಆದರೆ ಅವರ್ಯಾರಿಗೂ ಅಲ್ಲಿ ರಸ್ತೆ ತುಂಬಾ ಹರಡಿದ್ದ ಮಾಂಸದ ತುಣುಕುಗಳು ಮಬ್ಬಾಗಿದ್ದುದರಿಂದ ಕಾಣಿಸಲಿಲ್ಲ.

ಇತ್ತ ಹಾಲು ತರಲು ಹೋಗಿದ್ದ ಮಗ ಇನ್ನೂ ಯಾಕೆ ಬಂದಿಲ್ಲ ಎಂದು ಆ ಹುಡುಗನ ತಾಯಿ ಅವನನ್ನು ಹುಡುಕಿಕೊಂಡು ಬಂದಳು. ಹೊರಗೆ ಕವಿದಿದ್ದ ದಟ್ಟವಾದ ಮಂಜು ನೋಡಿ ತಾಯಿ ಹೃದಯ ಕ್ಷಣಕಾಲ ಆತಂಕಗೊಂಡಿತು. ಅಯ್ಯೋ ದೇವರೇ ಇದೇನಿದು ಇಷ್ಟೊಂದು ಮಂಜು ನಾನು ಯಾವತ್ತೂ ಕಂಡಿರಲೇ ಇಲ್ಲ. ಇವನು ಎಲ್ಲಿ ಹೋದ ಎಂದು ಚಿಂತೆಯಾದರೂ ಮರುಕ್ಷಣ ಬಹುಶ ಮಂಜು ನೋಡಿ ಆಟವಾಡುತ್ತಿರಬೇಕು ಎಂದುಕೊಳ್ಳುತ್ತ ಆಕೆ ಮತ್ತೆ ಮನೆಗೆ ಹಿಂತಿರುಗಿದಳು. ತನ್ನ ಮನೆಕೆಲಸ ಮುಗಿಸಿ ಬೇರೆಯವರ ಮನೆಕೆಲಸಕ್ಕೆ ಹೋಗುವ ಧಾವಂತದಲ್ಲಿದ್ದ ಆಕೆ, ಮಗ ಹಾಲು ತಂದ ಮೇಲೆ ಟೀ ಮಾಡಿದರಾಯಿತು. ಅಷ್ಟರಲ್ಲಿ ಅಡಿಗೆ ಮುಗಿಸಿ ಇವರಿಗೆ ಬುತ್ತಿ ಕಟ್ಟಿ ಕೊಡಬೇಕಲ್ಲ ಎಂದುಕೊಂಡು ಅಡಿಗೆ ಕೆಲಸ ಮುಂದುವರಿಸಿದಳು.

ಸುಮಾರು ಏಳುಗಂಟೆಯ ಹೊತ್ತಿಗೆ ಅವಳ ಗಂಡ ಎದ್ದು ಟೀ ಕೊಡೇ ತುಂಬಾ ತಲೆ ನೋಯ್ತಿದೆ ಎಂದಾಗ ಅವಳು ನಿಮ್ಮ ಮಗ ಹಾಲು ತೆಗೆದುಕೊಂಡು ಬಂದರಲ್ಲವೇ ಟೀ ಮಾಡೋದು, ಎಲ್ಲಿ ಅಲೀತಿದ್ದಾನೋ, ಇವತ್ತು ಮಂಜು ಬೇರೆ ದಟ್ಟವಾಗಿದೆ. ಯಾವುದಕ್ಕೂ ಒಮ್ಮೆ ನೋಡಿ ಬರ್ತೀನಿ ಎನ್ನುತ್ತಾ ಸೆರಗಿನಿಂದ ಕೈಯನ್ನು ಒರೆಸಿಕೊಂಡು ಮಗನನ್ನು ಹುಡುಕಿಕೊಂಡು ಹೊರಟಳು. ಆಗಲೇ ಮಂಜು ಬಹಳಷ್ಟು ಕರಗಿತ್ತು. ಎಲ್ಲಿ ಹೋದ ಇವನು ಎಂದುಕೊಳ್ಳುತ್ತ ರಸ್ತೆಯ ಬದಿ ಬಂದಾಗ ರಸ್ತೆಯ ತುಂಬಾ ಹರಡಿದ್ದ ಮಾಂಸದ ಚೂರುಗಳನ್ನು ನೋಡಿ ಆಶ್ಚರ್ಯಗೊಂಡು ಮುಂದಕ್ಕೆ ನಡೆದಳು.

ಆಗಲೇ ಕೆಲವು ಜನ ಅಲ್ಲಿ ಸೇರಿದ್ದರು. ನಡುದಾರಿಯಲ್ಲಿ ಆ ಅವಶೇಷಗಳ ನಡುವೆ ಪುಟ್ಟ ಕೈಗಳ ಜೊತೆ ತನ್ನ ಮಗನ ಶರ್ಟ್ ಸಿಕ್ಕಿದಾಗ ಆಕೆಯ ಹೃದಯವೇ ಬಾಯಿಗೆ ಬಂದಂತಾಯಿತು. ಆಕೆ ಜೋರಾಗಿ ಅಳಲು ಶುರು ಮಾಡಿದಳು. ಮಗಾ, ನನ್ನ ಕಂದ ಏನಾಗಿ ಹೋಯ್ತೋ, ಯಾಕಾದರೂ ನಿನ್ನನ್ನು ಹಾಲು ತರಲು ಕಳುಹಿಸಿದೇನೋ, ನಮ್ಮನ್ನು ಬಿಟ್ಟು ಹೊರಟು ಹೋದಿಯಲ್ಲೋ. ನಾನು ಪಾಪಿ ಕಣೋ, ನಿನ್ನಂಥ ಪುಟ್ಟ ಹುಡುಗನನ್ನು ಇಷ್ಟೊಂದು ಬೆಳ್ಳಂಬೆಳಗ್ಗೆ ಹಾಲು ತರಲು ಕಳುಹಿಸಿದ್ದೆನಲ್ಲ, ಇಲ್ಲಿ ಇಷ್ಟೊಂದು ಮಂಜು ಕವಿದಿದೆ ಅಂತಾ ನೋಡಲೇ ಇಲ್ವಲ್ಲೋ, ಎಲ್ಲಿದ್ದೀಯಾ ನನ್ನ ಕಂದ, ಒಮ್ಮೆ ಬಾರೋ ಅಮ್ಮನ ಬಳಿಗೆ, ಇನ್ಯಾವತ್ತೂ ನಿನ್ನನ್ನು ಹಾಲು ತರೋಕೆ ಕಳುಹಿಸಲ್ಲ ಕಣೋ. ಅಯ್ಯೋ ದೇವರೇ, ನಮ್ಮ ವಂಶದ ಕುಡಿಗೆ ಇಂಥಾ ಸ್ಥಿತಿ ತಂದು ಬಿಟ್ಟೆಯಲ್ಲ, ನಿನಗೆ ಕರುಣೆ ಅನ್ನೋದೇ ಇಲ್ವಾ ಎನ್ನುತ್ತಾ ರೋಧಿಸತೊಡಗಿದಳು. ಅವಳ ಆಕ್ರಂದನ ಕೇಳಿ ಮತ್ತಷ್ಟು ಜನರು ಸೇರಿದರು.

ಕೆಲವರಿಗೆ ಅದನ್ನೆಲ್ಲ ನೋಡಲಾಗದೆ ವಾಂತಿ ಮಾಡತೊಡಗಿದರು. ಇನ್ನು ಕೆಲವರು ಆಕೆಗೆ ಸಮಾಧಾನ ಹೇಳಲು ಪ್ರಯತ್ನಿಸಿದರು. ಪೊಲೀಸರಿಗೆ ಕರೆ ಹೋಯಿತು. ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರಬೇಕು ಎಂದು ಪೊಲೀಸರು ಆ ವಾಹನ ಯಾವುದೆಂದು ಕಂಡು ಹಿಡಿಯಲು ತನಿಖೆ ಶುರು ಮಾಡಿದರು. ಆ ದಾರಿಯಲ್ಲಿ ವಾಹನ ಸಂಚಾರ ನಿಂತಿತು. ಸುದ್ದಿ ಹರಡುತ್ತಿದ್ದಂತೆ ಮಾಧ್ಯಮದವರೂ ಅಪಘಾತದ ವಿಷಯವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರು.

ಆ ದಿನ ಬೆಳಿಗ್ಗೆ ಆ ದಾರಿಯಾಗಿ ಬಂದ ವಾಹನ ಸವಾರರು ವಿಷಯ ತಿಳಿದು ತಮ್ಮ ವಾಹನದ ಕೆಳಗೆ ಆ ಪುಟ್ಟ ಹುಡುಗ ಬಿದ್ದಿರಬಹುದೇ ಎಂದುಕೊಂಡು ಗಾಬರಿಯಿಂದ ಓಡೋಡಿ ತಮ್ಮ ವಾಹನಗಳ ಚಕ್ರಗಳನ್ನು ಪರಿಶೀಲಿಸಿದಾಗ ಅವುಗಳಿಗೆ ರಕ್ತ ಮೆತ್ತಿಕೊಂಡಿರುವುದನ್ನು ಕಂಡು ಮತ್ತಷ್ಟು ಗಾಬರಿಯಾದರು. ಪೊಲೀಸರಿಗೆ ತಿಳಿದರೆ ತಮಗೆ ಜೈಲೇ ಗತಿ ಎಂದುಕೊಂಡು ಅವಸರವಸರವಾಗಿ ತಮ್ಮ ವಾಹನಗಳನ್ನು ತೊಳೆಯುವುದರಲ್ಲಿ ಮಗ್ನರಾದರು. ಜೊತೆಗೆ ಆ ಪುಟ್ಟ ಹುಡುಗನ ಸಾವಿಗೆ ತಾನು ಕಾರಣನಾದೆನಲ್ಲ ಎಂದು ಪ್ರತಿಯೊಬ್ಬರೂ ಪಶ್ಚಾತ್ತಾಪ ಪಟ್ಟರು. ಆದರೆ ಹುಡುಗನ ಸಾವಿಗೆ ನಿಜವಾಗಿ ಕಾರಣನಾದ ಆ ಲಾರಿಯವ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ಹಾಡನ್ನು ಗುನುಗುತ್ತ ಸಂತೋಷದಿಂದ ಲಾರಿ ಚಲಾಯಿಸುತ್ತಲೇ ಇದ್ದ.

ಕೊರಗು

ವಾಸುದೇವರಾಯರು ಅಂದಿನ ಪೇಪರ್ ಓದುತ್ತಿದ್ದಾಗ, ಹುಡುಗ ನಾಪತ್ತೆ ಶೀರ್ಷಿಕೆಯ ಅಡಿ ಸುಮಾರು ಹನ್ನೆರಡು ವರುಷದ ಹುಡುಗನ ಭಾವಚಿತ್ರ ನೋಡಿ ಅವರ ಕಣ್ಣುಗಳು ಮಂಜಾದವು. ಅವರ ಮನಸ್ಸು ಹಿಂದಕ್ಕೋಡಿತು. ತಮ್ಮದು ದೊಡ್ಡ ಕುಟುಂಬ. ತಮ್ಮ ಆರು ಮಕ್ಕಳಲ್ಲಿ ಎರಡನೆಯ ಮಗ ಸುಧಾಕರ. ಓದಿನಲ್ಲಿ ಬಹಳ ಜಾಣ. ಆದರೆ ಅವನಿಗೆ ಹಠ ಜಾಸ್ತಿ. ತನಗೆ ಮೆಡಿಕಲ್ ಓದಿಸಬೇಕೆಂದು ಎಷ್ಟೊಂದು ಕೇಳಿಕೊಂಡಿದ್ದ. ಆದರೆ ಆರು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವುದು ತಮ್ಮಿಂದ ಸಾಧ್ಯವಿರಲಿಲ್ಲ. ಒಬ್ಬರಿಗೆ ಉತ್ತಮ ಶಿಕ್ಷಣ ನೀಡಿ ಉಳಿದ ಮಕ್ಕಳಿಗೆ ತಾರತಮ್ಯ ಮಾಡಲು ರಾಯರ ಮನಸೊಪ್ಪಲಿಲ್ಲ. ಹಾಗಾಗಿ ಎಲ್ಲರಿಗೂ ಪಿಯೂಸಿಯವರೆಗೆ ಮಾತ್ರ ಶಿಕ್ಷಣ ನೀಡುವುದು ಎಂದು ಅವರು ನಿರ್ಧರಿಸಿದ್ದರು. ಅವರ ನಾಲ್ಕು ಗಂಡು ಎರಡು ಹೆಣ್ಣು ಮಕ್ಕಳೂ ಪ್ರತಿಭಾವಂತರಾಗಿದ್ದರು. ಅವರು ಆಸುಪಾಸಿನ ಮಕ್ಕಳಿಗೆಲ್ಲ ಪಾಠ ಹೇಳಿ ತಮ್ಮ ಓದಿನ ಖರ್ಚು ನೋಡಿಕೊಳ್ಳುತ್ತಿದ್ದರು.

ವಾಸುದೇವರಾಯರು ವೃತ್ತಿಯಲ್ಲಿ ಅರ್ಚಕರಾಗಿದ್ದರು. ಅವರಿಗೆ ಹೇಳಿಕೊಳ್ಳುವಂಥಾ ವರಮಾನವೇನಿರಲಿಲ್ಲ. ಅವರ ಪತ್ನಿ ವೆಂಕಮ್ಮ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಎಲ್ಲ ತಯಾರಿಸಿ ಅದನ್ನು ಮಕ್ಕಳ ಕೈಯಲ್ಲಿ ಮಾರಾಟಕ್ಕೆ ಮನೆಮನೆಗೆ ಕಳುಹಿಸುತ್ತಿದ್ದರು. ಹೀಗೆ ರಾಯರ ಜೀವನ ಕುಂಟುತ್ತ ಸಾಗಿತ್ತು. ಮೊದಲ ಮಗ ಪಿಯೂಸಿ ವರೆಗೆ ಓದಿ ಅಪ್ಪನ ಮಾತಿನಂತೆ ಇಲೆಕ್ಟ್ರಿಶಿಯನ್ ಕೆಲಸ ಕಲಿಯತೊಡಗಿದ. ಆದರೆ ಎರಡನೆಯ ಮಗ ಸುಧಾಕರ ಪಿಯೂಸಿಯಲ್ಲಿ ಕಾಲೇಜಿಗೆ ಮೊದಲಿಗನಾಗಿ ಬಂದಾಗ ರಾಯರು ಸಂತೋಷದ ಜೊತೆಗೆ ಸಂಕಟ ಪಟ್ಟಿದ್ದರು. ಪಾಪ ಹುಡುಗ ಎಷ್ಟು ಬುದ್ಧಿವಂತ ಆದರೆ ತನಗೆ ಅವನಿಗೆ ಬೇಕಾದ ಶಿಕ್ಷಣ ಒದಗಿಸಲು ಸಾಧ್ಯವಿಲ್ಲವಲ್ಲ ಎಂದು ಕೊರಗುತ್ತಿದ್ದರು.

ಅವನಿಗಾಗಿ ತಮ್ಮ ನಿರ್ಧಾರ ಮೀರಿ ರಾಯರು ಎಷ್ಟೋ ಜನರ ಬಳಿ ಸಹಾಯ ಕೇಳಿದರೂ ಅವರೆಲ್ಲ ಕೆಲವು ನೂರು ರೂಪಾಯಿಗಳನ್ನು ಮಾತ್ರ ಕೊಟ್ಟಾಗ ಅವರು ತೀರಾ ನೊಂದುಕೊಂಡಿದ್ದರು. ಜೊತೆಗೆ ಸುಧಾಕರನೂ ಮಂಕಾಗಿ ಬಿಟ್ಟಿದ್ದ. ತಾನು ಎಷ್ಟೊಂದು ಒಳ್ಳೆಯ ಅಂಕಗಳನ್ನು ಪಡೆದುಕೊಂಡಿದ್ದರೂ ತನಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲವಲ್ಲ. ಇವರ ಹೊಟ್ಟೆಯಲ್ಲಿ ಯಾಕಾದರೂ ತಾನು ಹುಟ್ಟಿದೇನೋ. ಸಿರಿವಂತರ ಮನೆಯ ಮಗನಾಗಿದಿದ್ದರೆ ತನ್ನ ಡಾಕ್ಟರ್ ಆಗುವ ಕನಸೂ ನನಸಾಗುತ್ತಿತ್ತು ಎಂದು ಅಪ್ಪನ ಬಳಿ ತನ್ನ ಮನಸ್ಸಿನಲ್ಲಿದ್ದ ಸಿಟ್ಟನ್ನು ಬಾಯಿಬಿಟ್ಟು ಹೇಳಿದ್ದ.

ರಾಯರು ತಮ್ಮ ಅಸಹಾಯಕತೆ ತೋಡಿಕೊಂಡರೂ ಸುಧಾಕರ ಮಾತ್ರ ತನಗಾದ ನಿರಾಸೆ ಸಹಿಸಲಾಗದೆ ನಿಮಗೆ ಎಷ್ಟು ಮಕ್ಕಳನ್ನು ಸಾಕುವ ತಾಕತ್ತು ಇದೆಯೋ ಅಷ್ಟೇ ಮಕ್ಕಳನ್ನು ಹುಟ್ಟಿಸಬೇಕು, ಹುಟ್ಟಿಸಿ ನಮ್ಮ ಬಾಳನ್ನು ಯಾಕೆ ಹಾಳು ಮಾಡ್ತೀರಿ ಎಂದು ಅದೇ ಸಿಟ್ಟಿನಲ್ಲಿ ಮನೆ ಬಿಟ್ಟು ಹೋಗಿದ್ದ. ವಾಸುದೇವರಾಯರು ಮಗನ ಮಾತಿನಿಂದ ತೀವ್ರ ಆಘಾತಗೊಂಡಿದ್ದರು. ವೆಂಕಮ್ಮ ಮಗನಿಗಾಗಿ ಬಹಳ ರೋಧಿಸಿದರು. ತಮ್ಮ ಅಸಹಾಯಕತೆಗೆ ಮರುಗಿದರು. ಮನೆಯವರೆಲ್ಲ ಅವನನ್ನು ಹುಡುಕದ ಸ್ಥಳವಿರಲಿಲ್ಲ. ಕೊನೆಗೆ ಮಗ ಆತ್ಮಹತ್ಯೆ ಮಾಡಿಕೊಂಡಿರಬಹುದೇನೋ ಎಂಬ ಆತಂಕದಲ್ಲಿ ಕೆರೆ ಬಾವಿಯನ್ನು ಶೋಧಿಸಿದ್ದೂ ಆಯಿತು. ಆದರೆ ಮಗ ಮಾತ್ರ ಸಿಗಲ್ಲಿಲ್ಲ. ಆಗ ರಾಯರಿಗೆ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದೊಂದೇ ಸಮಾಧಾನದ ವಿಷಯವಾಗಿತ್ತು. ಸಂಕಟ ಪಡುತ್ತಿದ್ದ ವೆಂಕಮ್ಮನಿಗೆ ಮಗ ವಾಪಸು ಬಂದೇ ಬರುತ್ತಾನೆ ಎಂದು ಸಮಾಧಾನ ಮಾಡಿದ್ದರು.

ಆದರೆ ಹೋದ ಮಗ ಮಾತ್ರ ಹಿಂತಿರುಗಿ ಬರಲೇ ಇಲ್ಲ. ಪೋಲೀಸ್ ಸ್ಟೇಶನ್ ಅಲೆದಿದ್ದೂ ಆಯಿತು. ಪೇಪರ್ ನಲ್ಲಿ ಹಾಕಿಸಿದ್ದೂ ಆಯಿತು. ಆದರೆ ಸುಧಾಕರನ ಸುಳಿವೇ ಇಲ್ಲ. ಮಗನಿಗಾಗಿ ಹಲವು ಹರಕೆಗಳನ್ನು ಹೊತ್ತುಕೊಂಡರೂ ದೇವರು ಕರುಣೆ ತೋರಿಸಲಿಲ್ಲ. ದಿನಗಳು ಕಳೆದು ತಿಂಗಳುಗಳು ಉರುಳಿದವು. ಇಂದಲ್ಲ ನಾಳೆ ಮಗ ಬರುತ್ತಾನೆ ಎಂದು ಕಾಯುತ್ತಿದ್ದವರಿಗೆ ನಿರಾಶೆಯೇ ಆಯಿತು. ಆದರೂ ಮಗನಿಗಾಗಿ ಕಾಯುವುದು ಬಿಡಲಿಲ್ಲ. ವರುಷಗಳು ಉರುಳಿದವು. ಸುಧಾಕರ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು ಅವರಿಗೆ ತಿಳಿಯಲೇ ಇಲ್ಲ. ಕೊನೆಗೆ ಮಗ ಎಲ್ಲಿಯಾದರೂ ಇರಲಿ ಆದರೆ ಅವನು ಚೆನ್ನಾಗಿರಲಿ ಅದೊಂದನ್ನಾದರೂ ನಡೆಸಿಕೊಡು ಎಂದು ದೇವರಲ್ಲಿ ದಿನಾ ಬೇಡಿಕೊಳ್ಳತೊಡಗಿದರು.

ಈಗ ಪೇಪರ್ ನಲ್ಲಿ ಒಬ್ಬ ಹುಡುಗನ ನಾಪತ್ತೆ ವಿಷಯ ಓದಿ ಮಗನ ನೆನಪು ಹಸಿರಾಗುತ್ತಿದ್ದಂತೆ ಈಗ ಅವನು ನೋಡಲು ಹೇಗಿರಬಹುದು, ಅವನಿಗೆ ಮುಂದಿನ ತಿಂಗಳು ಇಪ್ಪತ್ತೈದು ತುಂಬುತ್ತದಲ್ಲವೇ, ಅವನು ಏನು ಮಾಡುತ್ತಿರಬಹುದು ಅವನಾಸೆಯಂತೆ ಮೆಡಿಕಲ್ ಓದುತ್ತಿರಬಹುದೇ ಎಂದುಕೊಳ್ಳುತ್ತಿದ್ದಂತೆ, ಛೆ, ಅದು ಹೇಗೆ ಸಾಧ್ಯ ಅದಕ್ಕೆಲ್ಲ ಬಹಳ ಹಣ ಬೇಕು. ಹಾಗಿದ್ದರೆ ಅವನು ಏನು ಮಾಡುತ್ತಿರಬಹುದು. ಅವನಿಗೆ ನಮ್ಮ ಮೇಲಿನ ಸಿಟ್ಟು ಕರಗುವುದೇ ಇಲ್ಲವೇ, ಅವನು ಬದುಕಿರಬಹುದೇ ಎಂದುಕೊಳ್ಳುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿಬಂದವು.

ಎರಡು ಟಿಕೇಟು

ಬಸ್ ನಿಲ್ದಾಣದಲ್ಲಿ ಓರ್ವ ಧೃಡಕಾಯದ ಮುದುಕ ಬಸ್ಸನ್ನೇರಿ ಉಸ್ಸೆಂದು ಕುಳಿತು ಎಷ್ಟೊಂದು ಸೆಖೆ ಅಲ್ವ ಎನ್ನುತ್ತಾ ಕರ್ಚೀಫಿನಿಂದ ಗಾಳಿ ಹಾಕಿಕೊಳ್ಳತೊಡಗಿದ. ಕಂಡಕ್ಟರ್ ಬರುತ್ತಿದ್ದಂತೆ ಮುದುಕ ಎರಡು ಟಿಕೇಟ್ ತೆಗೆದುಕೊಂಡ. ಕಂಡಕ್ಟರ್ ಗೆ ಆ ಮುದುಕ ಸೀಟಿನಲ್ಲಿ ಒಬ್ಬನೇ ಕುಳಿತಿದ್ದರಿಂದ ಇನ್ನೊಂದು ಟಿಕೆಟ್ ಯಾರದು ಎಂದು ಕೇಳಬೇಕೆನಿಸಿದರೂ ಬಹುಶ ಅವನ ಜೊತೆ ಮಹಿಳೆ ಇದ್ದು ಆಕೆ ಮಹಿಳೆಯರ ಸೀಟಿನಲ್ಲಿ ಕುಳಿತಿರಬೇಕು ಎಂದು ಭಾವಿಸಿ ಮುಂದೆ ನಡೆದ. ಬಸ್ಸಿನಲ್ಲಿ ಜನಸಂದಣಿ ಅಷ್ಟೇನೂ ಇರಲಿಲ್ಲ. ಬಸ್ಸು ಹೊರಡುತ್ತಿದ್ದಂತೆ ಒಬ್ಬ ಯುವತಿ ಓಡುತ್ತ ಬಂದು ಬಸ್ಸನ್ನೇರಿ ಎಲ್ಲೂ ಸೀಟು ಖಾಲಿಯಿಲ್ಲದೆ ಆ ಮುದುಕನ ಬಳಿಯ ಖಾಲಿ ಸೀಟು ಕಂಡು, ಅಂಕಲ್ ಸ್ವಲ್ಪ ಆಚೆ ಸರೀರಿ, ನಾನು ಕೂತ್ಕೋ ಬೇಕು ಎನ್ನುತ್ತಿದ್ದಂತೆ ಆತ ಅವಳನ್ನು ದುರದುರನೆ ನೋಡುತ್ತಾ, ಎಲ್ಲಿ ಕೂತ್ಕೋತಿಯ, ನನ್ನ ತಲೆ ಮೇಲಾ, ನಾವಿಬ್ರು ಕೂತಿದ್ದು ಕಾಣ್ಸಲ್ವ ಎಂದು ಗದರಿದ. ಆಕೆ ಗಲಿಬಿಲಿಗೊಂಡು ಬಗ್ಗಿ ಪಕ್ಕದ ಸೀಟಿನತ್ತ ನೋಡಿದಳು. ಆದರೆ ಆ ಸೀಟು ಖಾಲಿಯಾಗಿಯೇ ಇತ್ತು. ಅರೆ! ತನಗೆ ಆಕೆ ಕಾಣಿಸುತ್ತಿಲ್ಲವೇಕೆ ಎಂದುಕೊಳ್ಳುತ್ತ ಕಣ್ಣುಜ್ಜಿ ಮತ್ತೆ ಮತ್ತೆ ನೋಡಿದಳು. ಹೇಗೆ ನೋಡಿದರೂ ಆತನ ಪಕ್ಕದ ಸೀಟು ಖಾಲಿಯಾಗಿಯೇ ಇತ್ತು. 

ಅವಳು ಅಕ್ಕ ಪಕ್ಕದ ಸೀಟಿನಲ್ಲಿ ಕುಳಿತವರ ಬಳಿ ಆ ಮುದುಕನ ಬಳಿ ಯಾರಾದರೂ ಕುಳಿತಿದ್ದಾರೆಯೇ ಎಂದು ಕೇಳಿದಳು. ಅವರೆಲ್ಲ ಅಲ್ಲಿ ಯಾರೂ ಇಲ್ಲ ಎಂದಾಗ ಅವಳಿಗೆ ರೇಗಿ ಹೋಯಿತು. ಇವರು ನನ್ನ ಬಳಿ ಆಟ ಆಡುತ್ತಿದ್ದಾರೆಯೇ, ವಯಸ್ಸಾದವರಿಗೆ ಮರ್ಯಾದೆ ಕೊಟ್ಟಷ್ಟು ಅಹಂಕಾರ ಜಾಸ್ತಿ. ತಾವು ಹೇಳಿದ್ದೆ ನಡೆಯಬೇಕೆಂಬ ಹಠ, ಒಬ್ಬರೇ ಆರಾಮವಾಗಿ ಪ್ರಯಾಣ ಮಾಡೋ ಆಸೆ. ಮಾಡುತ್ತೇನೆ ಇವರಿಗೆ ಎಂದುಕೊಳ್ಳುತ್ತಾ ದೊಡ್ಡ ದನಿಯಲ್ಲಿ, ಆಚೆ ಸರೀತಿರೋ ಇಲ್ಲಾ ಕಂಡಕ್ಟರ್ ನ್ನು ಕರೀಲೋ ಎಂದು ಕೇಳಿದಾಗ ಅವಳ ದನಿಗೆ ಬೆಚ್ಚಿದ ಆತ, ಯಾಕಮ್ಮ ಹೀಗೆ ಹಠ ಮಾಡ್ತಿಯಾ, ನಾವು ವಯಸ್ಸಾದವರು, ನಮಗೆ ನಿಂತು ಪ್ರಯಾಣ ಮಾಡುವಷ್ಟು ಶಕ್ತಿ ಇಲ್ಲ. ನನ್ನ ಮಗನ ಕಾರು ಕೆಟ್ಟೋಗಿದೆ, ಅವಳಿಗೆ ಡಾಕ್ಟರ್ ಹತ್ತಿರ ಹೋಗೋದಿತ್ತು ಅದ್ಕೆ ಬಸ್ಸಲ್ಲಿ ಬರಬೇಕಾಯಿತು. ಬೇರೆ ಎಲ್ಲಾದ್ರೂ ಹೋಗಿ ಕೂತ್ಕೋ ಎಂದು ಹೇಳಿ ಖಾಲಿ ಸೀಟಿನತ್ತ ತಿರುಗಿ ತನ್ನ ಹೆಂಡತಿ ಜೊತೆ ಮಾತನಾಡುತ್ತಿರುವವನಂತೆ, ಈಗಿನ ಕಾಲದವರಿಗೆ ವಯಸ್ಸಾದವರೆಂದ್ರೆ ಮರ್ಯಾದೆಯೇ ಇಲ್ಲ, ಮೊದಲೆಲ್ಲ ವಯಸ್ಸಾದವರು ಬಂದ್ರೆ ಚಿಕ್ಕವರು ತಮ್ಮ ಸೀಟನ್ನು ಅವರಿಗೆ ಬಿಟ್ಟು ಕೊಡುತ್ತಿದ್ದರು. ಈಗಿನ ಹುಡುಗರಿಗೆ ವಯಸ್ಸಾದವರೇ ತಮ್ಮ ಸೀಟು ಬಿಟ್ಟು ಕೊಡಲಿ ಅಂತ. ಏನು ಕಾಲನಪ್ಪ.. ಎನ್ನುತ್ತಿದ್ದಂತೆ ಆ ಹುಡುಗಿ ಕಂಡಕ್ಟರ್ .. ಎಂದು ಕೂಗಿದಳು.

ಆತ ಓಡುತ್ತ ಬಂದು ಏನ್ ಮೇಡಂ ಎಂದ. ಆ ಹುಡುಗಿ, ನೋಡಿ, ಇವರ ಪಕ್ಕದ ಸೀಟು ಖಾಲಿಯಿದೆ. ನಂಗೆ ಅಲ್ಲಿ ಕೂತ್ಕೊಳಕ್ಕೆ ಇವರು ಬಿಡ್ತಾ ಇಲ್ಲ, ನೀವೇ ಹೇಳಿ ಎಂದಳು. ಕಂಡಕ್ಟರ್, ಸರ್, ಸ್ವಲ್ಪ ಸರಿದು ಕೂತ್ಕೊಳ್ಳಿ ಸರ್, ಮೇಡಂ ಕೂತ್ಕೋ ಬೇಕಲ್ಲ ಎಂದು ವಿನಯದಿಂದ ಕೇಳಿಕೊಂಡ. ಆದರೆ ಆ ಮುದುಕನಿಗೆ ಮಾತ್ರ ರೇಗಿ ಹೋಗಿ, ಏನಯ್ಯಾ ನಿಂಗೆ ಕಣ್ಣು ಕಾಣಿಸ್ತಾ ಇಲ್ವಾ ನನ್ನ ಪಕ್ಕ ನನ್ನ ಹೆಂಡತಿ ಕೂತಿರೋದು, ಈ ಹುಡುಗಿನ ನನ್ನ ಕಾಲ ಮೇಲೆ ಕೂತ್ಕೊಳಿಸ್ಲಾ .. ಎನ್ನುತ್ತಿದ್ದಂತೆ ಬಸ್ಸಿನಲ್ಲಿದ್ದ ಪಡ್ಡೆ ಹುಡುಗರು ಕಿಸಕ್ಕನೆ ನಗುತ್ತ ಘಾಟಿ ಮುದುಕ ಎಂದರು. ಅದನ್ನು ಕೇಳಿ ಹುಡುಗಿಯ ಮುಖ ಸಿಟ್ಟಿನಿಂದ ಕೆಂಪಾಗಿ, ಯೋ ತಾತ, ಮರ್ಯಾದೆ ಕೊಟ್ಟು ಮಾತಾಡು ಇಲ್ಲಾಂದ್ರೆ ನೆಟ್ಟಗಿರಲ್ಲ ಎಂದಳು. ಧುಮುಗುಡುತಿದ್ದ ಅವಳ ಮುಖ ನೋಡಿ, ನೋಡಮ್ಮ, ನೀನು ನನ್ನ ಮೊಮ್ಮಗಳ ವಯಸ್ಸಿನವಳು, ನಾನೇನೂ ನಿನ್ನ ಬಗ್ಗೆ ಕೆಟ್ಟ ಮಾತಾಡಿಲ್ಲ, ಅಷ್ಟಕ್ಕೂ ನಾವು ಎರಡನೆಯ ಸ್ಟಾಪಲ್ಲಿ ಇಳೀತಿವಿ, ಆಮೇಲೆ ನೀನು ಮಹಾರಾಣಿಯಾಗಿ ಕೂತ್ಕೋ ಎಂದ. ಅದಕ್ಕೆ ಕಂಡಕ್ಟರ್, ಸರ್, ನಿಮ್ಮ ಪಕ್ಕದ ಸೀಟಲ್ಲಿ ಕೂತ್ಕೊಳ್ಳಕ್ಕೆ ಆಕೇನ ಬಿಡಿ ಸರ್, ಹೆಣ್ಣು ಮಕ್ಕಳಿಗೆ ಕಷ್ಟ ಕೊಡಬಾರದಲ್ವ ಎಂದ.

ಮುದುಕನಿಗೆ ಮತ್ತಷ್ಟು ರೇಗಿ ಪಕ್ಕ ತಿರುಗಿ ಮತ್ತೆ ಹೆಂಡತಿ ಹತ್ತಿರ ಮಾತನಾಡುತ್ತಿರುವವನಂತೆ, ನೀನು ಸುಮ್ಮನಿರು, ಇವರಿಗೆಲ್ಲ ಮುದುಕರು ಅಂದ್ರೆ ತಾತ್ಸಾರ. ಹುಡುಗೀರಿಗೋಸ್ಕರ ಏನು ಬೇಕಾದರೂ ಮಾಡ್ತಾರೆ ಎನ್ನುತ್ತಾ ಇತ್ತ ತಿರುಗಿ ನೋಡಯ್ಯಾ, ನಾನು ಎರಡು ಟಿಕೇಟು ತೆಗೊಂಡಿದೀನಿ ನೋಡು ಎನ್ನುತ್ತಾ ಕಿಸೆಯಲ್ಲಿದ್ದ ಟಿಕೇಟು ತೆಗೆದು ತೋರಿಸಿದ. ಕಂಡಕ್ಟರ್ ಗೆ ಏನು ಹೇಳುವುದೆಂದು ತೋಚದೆ ಹುಡುಗಿಯತ್ತ ನೋಡುತ್ತಾ, ಪಿಸು ದನಿಯಲ್ಲಿ, ಮೇಡಂ, ಅವರಿಗೆ ಸ್ವಲ್ಪ ಲೂಸು ಅಂತ ಕಾಣುತ್ತೆ. ನೀವು ಅವರ ಹತ್ತಿರ ಕೂತ್ಕೊಳ್ಳದೇ ಇರೋದು ವಾಸಿ, ಆಮೇಲೆ ಏನಾರ ಮಾಡಿದ್ರೆ ಕಷ್ಟ ಎಂದಾಗ ಆ ಹುಡುಗಿ ಬೆದರಿ ಹಿಂದೆ ಹೋಗಿ ನಿಂತಳು. ಉಳಿದ ಪ್ರಯಾಣಿಕರೆಲ್ಲ ಪುಕ್ಕಟೆ ಮನರಂಜನೆಯ ಸವಿ ಸವಿಯುತ್ತಿದ್ದವರು ಕೆಲವರು ನಗುತ್ತಿದ್ದರೆ ಇನ್ನೂ ಕೆಲವರು ಪಾಪ ಮುದಿ ಭ್ರಾಂತಿ ಇರಬೇಕು, ತಮಗೆ ಆತನ ವಯಸ್ಸಲ್ಲಿ ಹೀಗೆ ಆಗದಿದ್ದರೆ ಸಾಕಪ್ಪ ದೇವರೇ ಎಂದು ದೇವರನ್ನು ಪ್ರಾರ್ಥಿಸಿದರು.

ಕೆಲವು ಕಿಲಾಡಿ ಹುಡುಗರು, ತಾತನ ಪಕ್ಕ ದೆವ್ವ ಕೂತಿದೆ ಮೇಡಂ, ನೀವು ಅಲ್ಲಿ ಕೂತರೆ ದೆವ್ವ ನಿಮ್ಮ ಮೈಮೇಲೆ ಬರುತ್ತೆ ಎಂದು ಪಕಪಕನೆ ನಕ್ಕರು. ಮುದುಕ ಆ ಹುಡುಗರನ್ನು ದುರುಗುಟ್ಟಿ ನೋಡಿದಾಗ ಅವರು ತಮ್ಮ ನಗು ನಿಲ್ಲಿಸಿ ಗಂಭೀರವಾಗಿ ಕುಳಿತುಕೊಂಡರು. ಕಂಡಕ್ಟರ್ ನಗುತ್ತ ಮುಂದೆ ನಡೆದ. ತಾನು ಇಳಿಯುವ ಸ್ಟಾಪ್ ಬರುತ್ತಿದ್ದಂತೆ ಎದ್ದ ಮುದುಕ ಇಳಿಯುವಾಗ ತನ್ನ ಜೊತೆ ಹೆಂಡತಿ ಇದ್ದವರಂತೆ, ಮೊದಲು ನಿಧಾನವಾಗಿ ಇಳಿ ಎನ್ನುತ್ತಾ ಅವರೂ ಇಳಿದು ಹೋದ ಮೇಲೆ ಬಸ್ಸಿನಲ್ಲಿ ನಗೆಯ ಅಬ್ಬರ ಉಕ್ಕಿತು. ಆತ ಇಳಿದು ಹೋದ ಮೇಲೆ ಬಸ್ಸಿನಲ್ಲಿದ್ದ ಸಹಪ್ರಯಾಣಿಕನೊಬ್ಬ, ಅವರು ನನಗೆ ಗೊತ್ತು. ವಾರದ ಹಿಂದೆ ಅವರ ಹೆಂಡತಿ, ಮಗನ ಜೊತೆ ಕಾರಿನಲ್ಲಿ ಹೋಗುವಾಗ ಆಕ್ಸಿಡೆಂಟ್ ಆಗಿ ಸ್ಪಾಟಲ್ಲೇ ಸತ್ತು ಹೋದರು. ಮಗನಿಗೆ ಮಾತ್ರ ತರಚಿದ ಗಾಯಗಳಾಗಿತ್ತು ಅಷ್ಟೇ. ಇವರಿಗೆ ಅದು ಶಾಕ್ ಆಗಿ ಬಿಟ್ಟಿದೆ. ಆಗಿನಿಂದ ಹೀಗೆ ತಮ್ಮ ಹೆಂಡತಿ ತಮ್ಮ ಜೊತೆ ಇದ್ದಾರೇನೋ ಅನ್ನೋ ಹಾಗೆ ವರ್ತಿಸ್ತಾರೆ ಎಂದಾಗ ಪ್ರಯಾಣಿಕರೆಲ್ಲ ಒಮ್ಮೆಲೇ ಮೌನವಾಗಿ ಬಿಟ್ಟರು. ಆತನ ನಡವಳಿಕೆಯ ಹಿಂದೆ ದುರಂತದ ಕಥೆ ಇದೆ ಅಂತ ತಿಳಿದಾಗ ಕೆಲವರು ಛೆ! ಪಾಪ, ಹಾಗಾಗಬಾರದಿತ್ತು ಎಂದರು. ಆ ಹುಡುಗಿಗೂ ತಾನು ಆತನ ಜೊತೆ ಅಷ್ಟೊಂದು ಕಠಿಣವಾಗಿ ವರ್ತಿಸಬಾರದಿತ್ತು ಕೇವಲ ಹದಿನೈದು ನಿಮಿಷ ನಿಂತುಕೊಳ್ಳಲು ತನ್ನಿಂದ ಆಗುತ್ತಿರಲಿಲ್ಲವೇ ಎಂದು ಪಶ್ಚಾತ್ತಾಪವಾಯಿತು.

ಮರೆಗುಳಿ ಪ್ರೊಫೆಸರ್

ಪ್ರೊಫೆಸರ್  ವಾದಿರಾಜ್ ಎಂದಿನಂತೆ ಕಾಲೇಜು ಮುಗಿಸಿ ತನ್ನ ಕಾರಿನಲ್ಲಿ ಮನೆಯತ್ತ ತೆರಳಿದರು. ಕಾಲಿಂಗ್ ಬೆಲ್ ಒತ್ತಿದಾಗ ಓರ್ವ ವೃದ್ಧ ಹೆಂಗಸು  ಬಾಗಿಲು ತೆರೆದಿದ್ದು ನೋಡಿ ದಂಗಾದರು. ಇವರು ಯಾರಪ್ಪ ನಮ್ಮ ಮನೆಯಲ್ಲಿ ಯಾಕಿದ್ದಾರೆ ಎಂದು ಗೊಂದಲವಾಗಿ ಅವರನ್ನೇ ಕೇಳಿದರು. ಆ ವೃದ್ಧೆ, ನೀವು ಯಾರು ಎಂದು ಮರು ಪ್ರಶ್ನಿಸಿದಾಗ ವಾದಿರಾಜ್ ವಿಸ್ಮಯ ಗೊಂಡರು. ಅರೆ !ನನ್ನ ಮನೆಯಲ್ಲಿ ಬಂದು ಇದ್ದಿದ್ದೂ ಅಲ್ಲದೆ ನನಗೆ ನೀವು ಯಾರು ಎಂದು ಕೇಳುತ್ತಿದ್ದಾರಲ್ಲ  ಎಂದು ಅಚ್ಚರಿ ಪಟ್ಟರು. ಈ ಮಹಿಳೆಗೆ ನನ್ನ ಪರಿಚಯವಿಲ್ಲವೆಂದರೆ ನನ್ನ  ಕಡೆಯವರಂತೂ ಅಲ್ಲ ಹಾಗಾದರೆ ನನ್ನ ಹೆಂಡತಿ ತನುಜಾ ಕಡೆಯವರಿರಬಹುದೇ ಎಂದು ಸಂಶಯವಾಗಿ ಕೇಳಿದಾಗ ಆ ಹೆಂಗಸು ತನುಜಾ ಯಾರು ಎಂದು ಕೇಳಬೇಕೆ ! ವಾದಿರಾಜ್ ಗೆ ಅಚ್ಚರಿಯ ಮೇಲೆ ಅಚ್ಚರಿ. ನೀವೇಕೆ ಇಲ್ಲಿದ್ದೀರಿ ಎಂದು ವಾದಿರಾಜ ಕೇಳಿಯೇ ಬಿಟ್ಟರು. ನಮ್ಮ ಮನೆಯಲ್ಲಿ ನಾನಿದ್ದೇನೆ ನಿಮಗೇನು ಕಷ್ಟ ಎನ್ನಬೇಕೆ !!  ಆಗ ವಾದಿರಾಜ್ ಗೆ ತಕ್ಷಣ ಮೊದಲು ತಾವಿಲ್ಲಿ ಇದ್ದಿದ್ದು ನಂತರ  ಒಂದು ಹಳೆ ಮನೆಯನ್ನು ಕೊಂಡು ಒಂದು ವಾರದ ಹಿಂದೆ  ಅಲ್ಲಿ ವಾಸಮಾಡಲು ಶುರು ಮಾಡಿದ್ದು ಎಂದು ನೆನಪಾಯಿತು.  ಅಭ್ಯಾಸಬಲದಿಂದ ತಾನು ಮರೆತು ಇಲ್ಲಿಗೆ ಬಂದಿದ್ದು ಎಂದು ನೆನಪಾಗಿ ನಕ್ಕುಬಿಟ್ಟು ಅಲ್ಲಿಂದ ಹೊರಟರು. ಆ ವೃದ್ಧೆ ವಿಚಿತ್ರ ಮನುಷ್ಯ ಎನ್ನುತ್ತಾ ಬಾಗಿಲು ಹಾಕಿಕೊಂಡರು. ವಾದಿರಾಜ್ ಮನೆಗೆ ಬಂದಾಗ ತನುಜಾ ಆಗಲೇ ಕೆಲಸದಿಂದ ಬಂದಾಗಿತ್ತು. ಯಾರೋ ಪಕ್ಕದ ಮನೆಯವರ ಜೊತೆ ಮಾತನಾಡುತ್ತಿರುವುದನ್ನು ನೋಡಿ ನೇರವಾಗಿ ತಮ್ಮ ಕೋಣೆಗೆ ಹೋದರು. ವಾದಿರಾಜ್ ಗೆ ಕಾಫಿ ತಿಂಡಿ ಕೊಟ್ಟು ತನುಜಾ ನೆರೆಹೊರೆಯವರೊಂದಿಗೆ ಮತ್ತೆ ಮಾತಿಗೆ ಕುಳಿತರು.

ಹೊಸದಾಗಿ ಪರಿಚಯವಾಗಿದ್ದರಿಂದ  ಪಕ್ಕದ ಮನೆಯ ರಮಣಿ ಮಕ್ಕಳಿಲ್ಲವೇ ಎಂದು ತನುಜಾಳನ್ನು ಕೇಳಿದಳು. ಅದಕ್ಕೆ ತನುಜಾ, ಇವರನ್ನು ಸುಧಾರಿಸುವುದರಲ್ಲಿ ಸಾಕಾಗಿ ಬಿಡುತ್ತದೆ ಎಂದಾಗ ರಮಣಿ ಕಿಸಕ್ಕನೆ ನಕ್ಕು ಅಷ್ಟು ತುಂಟಾಟ ಮಾಡ್ತಾರಾ ಎಂದಾಗ ಉಳಿದ ಹೆಂಗಸರೆಲ್ಲ ನಕ್ಕರು. ತನುಜಾ ನಾಚಿಕೊಂಡು, ನಾನು ಹಾಗಲ್ಲ ಹೇಳಿದ್ದು,  ಅವರಿಗೆ ವಿಪರೀತ ಮರೆವು, ಮರೆತು ಏನೇನೋ ಮಾಡ್ತಾ ಇರ್ತಾರೆ.ಮದುವೆಯಾದ ಹೊಸದರಲ್ಲಿ  ನಾನು ಹದಿನೈದು ದಿವಸ ತವರು ಮನೆಗೆ ಹೋಗಿ ಬಂದಾಗ ನನ್ನನ್ನೇ ಯಾರು ನೀವು ಅಂತ  ಕೇಳಿ ಬಿಟ್ರು ! ಇನ್ನು ಮಕ್ಕಳಾದರೆ ಇವು ಯಾರ ಮಕ್ಳು ಅಂತಾ ಗಲಾಟೆ ಮಾಡಿದ್ರೆ ಕಷ್ಟ.  ಅದಕ್ಕೆ ಮದುವೆಯಾಗಿ ಐದು ವರುಷ ಆದ ಮೇಲೂ ಮಕ್ಕಳಾಗಲಿಲ್ಲ ಅಂತ ಬೇಜಾರು ಮಾಡಿಕೊಂಡಿಲ್ಲ. ಇನ್ನು ಮನೆ ಸಾಮಾನು ತನ್ನಿ ಅಂತ ಅಂದ್ರೆ ಲಿಸ್ಟ್ ಮಾಡಿ ಕೊಟ್ರೂ ಲಿಸ್ಟನ್ನು ಮನೇಲೆ ಮರ್ತು ಬಿಟ್ಟು ಅಂಗಡಿಗೆ ಹೋಗಿ ಏನು ಸಾಮಾನು  ತೊಗೊಳ್ಬೇಕು ಅಂತ ಗೊತ್ತಾಗದೆ ಯಾವ್ಯಾವುದೋ ಸಾಮಾನೆಲ್ಲ ತಂದು ಹಾಕ್ತಾರೆ ಎಂದಳು .ಅದಕ್ಕೆ ರಮಣಿಯ ಅತ್ತೆ,  ಅವ್ರಿಗೆ ಧ್ಯಾನ ಮಾಡಕ್ಕೆ ಹೇಳಿ ಎಂದು ಸೂಚಿಸಿದರು. ತನುಜಾ, ಅಯ್ಯೋ, ಎಲ್ಲ ನೋಡಾಯ್ತು ಮಾಡಾಯ್ತು , ಧ್ಯಾನ ಮಾಡಿ ಅಂತ ಒತ್ತಾಯ ಮಾಡಿ ಕೂರಿಸಿ ಬಂದು ಸ್ವಲ್ಪ ಹೊತ್ತಾದಮೇಲೆ ಹೋಗಿ ನೋಡಿದ್ರೆ  ಅವ್ರು ಚೆನ್ನಾಗಿ ನಿದ್ದೆ ಮಾಡ್ತಿರ್ತಾರೆ ಏನ್ ಮಾಡೋದು ಹೇಳಿ. ಇನ್ನು ಡಾಕ್ಟರ್ ಹತ್ರ ಹೋಗಿ ಔಷಧಿ ತೊಗೊಂಡ್ ಬಂದ್ರೆ ಮರ್ತು ತೊಗೊಳ್ಳೋದೇ ಇಲ್ಲ. ನಾನು ಎಷ್ಟೂಂತ ಮಾಡಲಿ ಅದಕ್ಕೆ ಹಾಗೇ ಬಿಟ್ಟಿದ್ದೇನೆ, ಆದ್ರೆ ಅವರ ಕಾಲೇಜು ವಿಷಯ, ಮಕ್ಕಳಿಗೆ ಪಾಠ ಹೇಳಿಕೊಡೋ ವಿಷಯ ಮಾತ್ರ ಅವರಿಗೆ ಚೆನ್ನಾಗಿ ಜ್ಞಾಪಕ ಇರುತ್ತೆ ಎನ್ನುತ್ತಿದ್ದಂತೆ ವಾದಿರಾಜ್, ತನೂ ಎಂದು ಕರೆದದ್ದು ಕೇಳಿ, ನೋಡಿ ಅವ್ರಿಗೆ ನಿಮ್ಮ ಹೆಸರು ನೆನಪಿದೆ ಎಂದು ಹಾಸ್ಯ ಮಾಡುತ್ತ ಎಲ್ಲರೂ ಅಲ್ಲಿಂದೆದ್ದು ತಮ್ಮ ತಮ್ಮ ಮನೆಗಳಿಗೆ ಹೊರಟರು.

ವಾದಿರಾಜ್ ಮರುದಿನ ಬೆಳಿಗ್ಗೆ ಕಾಲೇಜಿಗೆಂದು ಹೊರಟು, ಹೆಂಡತಿಯೂ ಕಾರಿನಲ್ಲಿ ಜೊತೆಯಲ್ಲೇ ಬರುವುದು ರೂಢಿಯಾಗಿದ್ದರಿಂದ ತನೂ ಎಂದು ಕರೆದರು. ಅವಳು ಅಡಿಗೆಮನೆಯಿಂದಲೇ,  ನಾನು ಇವತ್ತು ರಜಾ ಹಾಕಿದ್ದೀನಿ ಕಲೀಗ್ ನ ಮಗಳ ಮದುವೆಗೆ ಹೋಗ್ತಿದ್ದೀನಿ ಅಂತ ನಿನ್ನೆ ರಾತ್ರಿ ಹೇಳಿದ್ದು ಮರ್ತು ಬಿಟ್ರಾ ಎಂದಳು. ಸರಿ ಎನ್ನುತ್ತಾ ಕಾಲೇಜಿಗೆ ಲೇಟಾಯಿತು ಎಂದು ವಾದಿರಾಜ್ ಗಡಿಬಿಡಿಯಿಂದ ಕಾರಿನ ಕೀ ತೆಗೆದುಕೊಂಡು ಹೊರಟರು. ತನುಜಾ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮದುವೆಗೆ ಹೊರಡಲು ತಯಾರಾಗಿ ಮುಂಬಾಗಿಲು ತೆರೆಯಲು ನೋಡಿದರೆ ಆಗುತ್ತಿಲ್ಲ ! ಬಾಗಿಲು ಎಳೆದಾಗ ಹೊರಗಿನಿಂದ ಬೀಗ ಅಲುಗಾಡಿದ ಶಬ್ದ ಕೇಳಿಸಿತು. ಅಯ್ಯೋ ದೇವರೇ!  ಇವರು ಬೀಗ ಹಾಕಿ ಹೋಗಿದ್ದಾರೆ ಈಗ ಮದುವೆಗೆ ಹೋಗುವುದು ಹೇಗೆ, ಈ ಮನೆಗೆ ಹಿತ್ತಿಲು ಬಾಗಿಲು ಕೂಡ ಇಲ್ಲ, ಪಕ್ಕದ ಮನೆಯವರನ್ನು ಕರೆಯೋದು ವಾಸಿ ಎಂದುಕೊಂಡು ರಮಣಿ ಎಂದು ಕೂಗಿದಳು. ಅಲ್ಲೇ ಇದ್ದ ರಮಣಿ ಓಡಿ ಬಂದು ಇದೇನ್ರಿ ನಿಮ್ಮ ಮನೆಯವರು ನಿಮ್ಮನ್ನು ಕೂಡಿ ಹಾಕಿದ್ದಾರಾ ಎಂದು ಕೀಟಲೆ ಮಾಡಿದಳು. ತನುಜಾ, ಅವರಿಗೆ ಮರೆವು ಅಂದೆನಲ್ಲ ನೋಡಿ, ಹೀಗೆ ನಾವು ದಿನಾ ಕೆಲಸಕ್ಕೆ ಹೋಗುವಾಗ ಅವರೇ ಮನೆಗೆ ಬೀಗ ಹಾಕೋದು, ಹಾಗಾಗಿ ಇವತ್ತೂ ನಾನು ಅವರ ಜೊತೆ ಬಂದಿಲ್ಲ ಅಂತ ಮರೆತು ಬೀಗ ಹಾಕಿ ಬಿಟ್ಟಿದ್ದಾರೆ ಎಂದು ನಕ್ಕು ತನ್ನ ಬಳಿ ಇದ್ದ ಇನ್ನೊದು ಬೀಗದ ಕೈ ರಮಣಿಗೆ ಕೊಟ್ಟು ಬೀಗ ತೆರೆಯುವಂತೆ ಹೇಳಿದಳು. ರಮಣಿ ನಗುತ್ತ ಬಾಗಿಲು ತೆರೆದು ನೀವು ಬಾಗಿಲಿಗೆ ಡೋರ್ ಲಾಕ್ ಹಾಕಿಸುವುದು ಒಳ್ಳೆಯದು ನೀವೇ ಒಳಗಿಂದ ತೆಗೀಬಹುದಲ್ವಾ ಎಂದು ಸೂಚಿಸಿದಾಗ ತನುಜಾಗೆ ಸರಿಯೆನ್ನಿಸಿ ಹಾಗೆ ಮಾಡಲು ನಿರ್ಧರಿಸಿದಳು.

ಕೆಲದಿನಗಳ ನಂತರ ಒಂದುದಿನ ತನುಜಾಗೆ ಬೇಗನೆ ಕೆಲಸಕ್ಕೆ ಹೋಗಲಿಕ್ಕಿದ್ದುದರಿಂದ ಗಂಡನಿಗೆ ತಾನು ಬಸ್ಸಿನಲ್ಲಿ ಹೋಗುವುದಾಗಿ ಹೇಳಿ ಮನೆ ಕೆಲಸ ಬೇಗನೆ ಮುಗಿಸಿ ಹೊರಟಳು. ವಾದಿರಾಜ್ ಬಹಳ ಹೊತ್ತಿನವರೆಗೆ ಟೀವಿ ನೋಡುತ್ತಾ ಕುಳಿತವರಿಗೆ ತನಗೆ ಕಾಲೇಜಿಗೆ ಹೋಗಲಿಕ್ಕಿರುವುದು ನೆನಪಾಗಿ ಗಡಿಬಿಡಿಯಿಂದ ಹೊರಟರು. ಕಾರಿನಲ್ಲಿ ಕುಳಿತು ಸುಮಾರು ದೂರ ಬಂದ ಮೇಲೆ ಆಕಸ್ಮತ್ತಾಗಿ ಅವರ ದೃಷ್ಟಿ ಕೆಳಗೆ ಹೋದಾಗ  ತಾನು ಪ್ಯಾಂಟ್ ಧರಿಸಿಯೇ  ಇಲ್ಲ  ಎಂದು ತಿಳಿದು ಮುಜುಗರಕ್ಕೊಳಗಾದರು. ಈಗಲೇ ಗೊತ್ತಾಗಿದ್ದು ಒಳ್ಳೆಯದಾಯಿತು ಇಲ್ಲದಿದ್ದರೆ ನನ್ನ ಅವಸ್ಥೆಯಾಗುತ್ತಿತ್ತು ಎಂದು ಅವಸರದಿಂದ ಕಾರನ್ನು ಮತ್ತೆ ಮನೆಕಡೆಗೆ ತಿರುಗಿಸತೊಡಗಿದರು. ಇದನ್ನು ಗಮನಿಸುತ್ತಿದ್ದ ಟ್ರಾಫಿಕ್ ಪೋಲೀಸಿನವ ವಿಸಿಲ್ ಊದುತ್ತ ಕಾರನ್ನು ನಿಲ್ಲಿಸಲು ಹೇಳಿದ. ಆಗ ವಾದಿರಾಜ್ ಗಡಿಬಿಡಿಯಿಂದ ತಾನು ಪ್ಯಾಂಟ್ ಧರಿಸಲು ಮರೆತಿದ್ದು ಅದಕ್ಕಾಗಿ ಮನೆಗೆ ವಾಪಾಸು ಹೋಗುತ್ತಿದ್ದೇನೆ ಎಂದಾಗ ಪೋಲೀಸ್ ಗೆ ನಗು ತಡೆಯಲಾಗಲಿಲ್ಲ ಅವರು ಹೇಳುವುದು ನಿಜವೋ ಸುಳ್ಳೋ ಎಂದು ನೋಡಬೇಕೆನಿಸಿದರೂ ಇನ್ನೂ ಏನೇನು ಹಾಕಿಲ್ಲವೋ ಎಂದೆನಿಸಿ ನೋಡಲು ಮುಜುಗರವಾಗಿ ಅವರಿಗೆ ಹೋಗಲು ಅನುವು ಮಾಡಿಕೊಟ್ಟ. ಗಡಿಬಿಡಿಯಿಂದ ಮನೆಗೆ ಧಾವಿಸಿ ಕೈಗೆ ಸಿಕ್ಕ ಪ್ಯಾಂಟ್ ನ್ನು ಏರಿಸಿಕೊಂಡು ಮತ್ತೆ ಕಾಲೇಜಿನತ್ತ ಕಾರನ್ನು ಓಡಿಸಿದರು. ಕ್ಲಾಸಿಗೆ ಬಂದಾಗ ಒಮ್ಮೆಲೆ ಮೌನವಾದ ಮಕ್ಕಳು ನಂತರ ವಾದಿರಾಜ್ ರತ್ತ ನೋಡುತ್ತಾ ಏನೋ ಗುಸುಗುಸು ಮಾತನಾಡಲು ಶುರುಮಾಡಿದರು. ಕೆಲವರು ಮೆಲ್ಲನೆ ನಗಲು ಶುರು ಮಾಡಿದರು. ವಾದಿರಾಜ್  ಗೆ ಸಿಟ್ಟು ಬಂದು ಏನದು ಗುಸುಗುಸು ಎಂದು ಕೇಳಿದರು. ಕೊನೆಯ ಬೆಂಚಿನಲ್ಲಿದ್ದ ಒಬ್ಬ ಹುಡುಗ ಕುಳಿತಲ್ಲಿಂದಲೇ ಸರ್, ನಿಮ್ಮ ಪೋಸ್ಟ್ ಆಫೀಸ್ ಓಪನ್ ಆಗಿದೆ ಎಂದ ! ವಾದಿರಾಜ್ ಗೆ ಅರ್ಥವಾಗದೆ ಯಾವ ಪೋಸ್ಟ್ ಆಫೀಸ್ ಎಂದು ಕೇಳಿದಾಗ ನಗೆಯ ದೊಡ್ಡ ಅಲೆಯೇ ಎದ್ದಿತು. ಆಗ ಮೊದಲ ಬೆಂಚಿನಲ್ಲಿ ಕುಳಿತ ಹುಡುಗ ಸರ್, ನಿಮ್ಮ ಪ್ಯಾಂಟ್ ನ ಜಿಪ್ …. ಎಂದು ಅರ್ಧದಲ್ಲೇ ನಿಲ್ಲಿಸಿ ಅವರನ್ನೇ ನೋಡತೊಡಗಿದ. ಆಗ ಅವರಿಗೆ ತಾನು ಅವಸರದಲ್ಲಿ ಜಿಪ್ ಹಾಕಲು ಮರೆತಿದ್ದು ಗೊತ್ತಾಗಿ ತಿರುಗಿ ನಿಂತು ಸರಕ್ಕನೆ ಜಿಪ್ ಎಳೆದು ಮತ್ತೆ ವಿಧ್ಯಾರ್ಥಿಗಳತ್ತ  ತಿರುಗಿ ನೀವು ನನ್ನ ಪಾಠ ಕೇಳಲು ಬರುತ್ತೀರೋ ಅಥವಾ ಎಲ್ಲಿ ಏನು ಕಾಣಿಸ್ತಿದೆ ಅಂತ ನೋಡೋಕೆ ಬರ್ತಿದ್ದೀರೋ ಎಂದು ಗದರಿಸಿದಾಗ ಇಡೀ ಕ್ಲಾಸ್ ನಗೆಯ ಅಬ್ಬರದಲ್ಲಿ ಮುಳುಗಿತು.

ಮುಜುಗರದಿಂದ ಬೇಗನೇ ಕ್ಲಾಸ್ ಮುಗಿಸಿ ವಾದಿರಾಜ್ ಮುಂದಿನ ತರಗತಿಗೆ ಧಾವಿಸಿದರು. ಕ್ಲಾಸ್ ರೂಮಿಗೆ ಧಾವಿಸಿ ಹಾಜರಾತಿ ಕೊನೆಗೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಗಡಿಬಿಡಿಯಿಂದ  ಪಾಠ ಶುರು ಮಾಡತೊಡಗಿದರು. ವಿಧ್ಯಾರ್ಥಿಗಳಿಗೆ ಇವರು ಹೇಳುವ ತಲೆಬುಡ ಅರ್ಥವಾಗದೆ ಗುಸುಗುಸು ಮಾತನಾಡತೊಡಗಿದರು. ವಾದಿರಾಜ್ ಮತ್ತೆ ತನ್ನ ಪ್ಯಾಂಟ್ ಜಿಪ್ ಏನಾದರೂ ಬಿಚ್ಚಿಕೊಂಡಿತೇ ಅದಕ್ಕಾಗಿ ಇವರೆಲ್ಲ ಗುಸುಗುಸು ಮಾತನಾಡುತ್ತಿರಬಹುದೇ ಎಂದು ಗಾಬರಿಯಾಗಿ ಬೋರ್ಡ್ ನತ್ತ ತಿರುಗಿ ಜಿಪ್ ಪರೀಕ್ಷಿಸಿಕೊಂಡರು. ಆದರೆ ಎಲ್ಲವೂ ಸರಿಯಾಗಿಯೇ ಇತ್ತು. ಮಕ್ಕಳಿಗೆ ಪಾಠ ಕೇಳುವ ಮನಸ್ಸೇ ಇಲ್ಲ ಎಂದು ಸಿಟ್ಟು ಬಂದು ಯಾರಿಗೆಲ್ಲ ಕ್ಲಾಸ್ ಬೇಡವೋ ಅವರೆಲ್ಲ ಎದ್ದು ಹೋಗಿ ಎಂದರು. ಅವರು ಹೇಳಿದ್ದೆ ಸಾಕು ಎನ್ನುವಂತೆ ಎಲ್ಲರೂ ಎದ್ದು ಹೊರಟಾಗ ವಾದಿರಾಜ್  ಗೆ ಸುಸ್ತು! ನಿಮಗ್ಯಾರಿಗೂ ಹಾಜರಿ ಕೊಡುವುದಿಲ್ಲ ಎಂದು ಬೆದರಿಕೆಯ ಬಾಣ ಬಿಟ್ಟರು. ಆಗ ಅವರಲ್ಲೊಬ್ಬ ಹುಡುಗ ಸಾರ್ ,ನಿಮ್ಮ ಹಾಜರಿ ನಮಗೆ ಬೇಡ, ನಾವು ಸಾಯನ್ಸ್ ವಿಧ್ಯಾರ್ಥಿಗಳು ನೀವು ನಮಗೆ ಇಕನಾಮಿಕ್ಸ್ ಪಾಠ ಮಾಡಿದರೆ ನಾವು ಕೇಳುತ್ತೆವೆಯೇ ಎಂದಾಗ ವಾದಿರಾಜ್ ಗರಬಡಿದಂತವರಾದರು. ತಕ್ಷಣ ರೂಂ ನಂಬರ್ ಪರಿಶೀಲಿಸಿ ನೋಡಿದರೆ 31 ಎಂದಿತ್ತು. ಛೆ , ತನಗೆ 13 ನೆ ರೂಂ ನಂಬರ್ ನಲ್ಲಿ ಕ್ಲಾಸ್ ಇದ್ದಿದ್ದು ತಾನು ತಪ್ಪಾಗಿ ಇಲ್ಲಿಗೆ ಬಂದೆನಲ್ಲ ಎಂದುಕೊಂಡು ಮತ್ತೆ ಮುಜುಗರಕ್ಕೊಳಗಾದರು. ತಕ್ಷಣವೇ ಅಲ್ಲಿಂದ ವಿಧ್ಯಾರ್ಥಿಗಳ ನಡುವೆ ನುಸುಳಿಕೊಂಡು ತಮ್ಮ ತರಗತಿಗೆ ಧಾವಿಸಿದರು. ಅಲ್ಲಿ ನೋಡಿದರೆ ಯಾರೂ ಇಲ್ಲ. ಮಕ್ಕಳೆಲ್ಲ ಇವರಿಗಾಗಿ ಕಾದು ಬೇಸತ್ತು  ಹೊರನಡೆದಿದ್ದರು. ಯಾಕೋ ಇತ್ತೀಚೆಗೆ ಮರೆವು ತೀರಾ ಜಾಸ್ತಿಯಾಗುತ್ತಿದೆ, ವೈದ್ಯರ ಬಳಿ ಹೋಗಬೇಕು ಎಂದುಕೊಳ್ಳುತ್ತ ಕಾರು ಚಲಾಯಿಸಿದರು. ಆದರೆ ಅಭ್ಯಾಸ ಬಲದಿಂದ ಕಾರನ್ನು ಮನೆಯತ್ತ ತಿರುಗಿಸಿ ವೈದ್ಯರ ಬಳಿ ಹೋಗುವುದನ್ನೇ ಮರೆತು ಬಿಟ್ಟರು.

ರಾಹುಕಾಲ

ಉಮಾ ತಮ್ಮ ಮದುವೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಬೆಳಗ್ಗೆ ಬೇಗನೆ ಎದ್ದು ಸ್ನಾನ ಪೂಜೆ ಮುಗಿಸಿ ಹಾಡೊಂದನ್ನು ಮೆಲ್ಲನೆ ಹಾಡುತ್ತ ಕಾಫಿ ತಿಂಡಿಯ ತಯಾರಿಯಲ್ಲಿ ತೊಡಗಿದ್ದರು. ಬಿಸಿ ಕಾಫಿ ಮಾಡಿ ಒಂದು ಕಪ್ ನಲ್ಲಿ ಹಾಕಿ ಗಂಡನಿಗೆ ಕೊಡಲೆಂದು ರೂಮಿಗೆ ಹೊರಟರು. ಗಂಡ ಮಹೇಶ್ ಇನ್ನೂ ಎದ್ದಿರದ್ದು ಕಂಡು ಉಮಾ ನಸು ಮುನಿಸಿನಿಂದ “ಏನ್ರೀ ಇವತ್ತು, ಏಳೋ ಮನಸ್ಸೇ ಇಲ್ವಾ, ಕಾಫಿ ತಂದಿದ್ದೀನಿ ಏಳಿ ಮೇಲೆ” ಎನ್ನುತ್ತಾ ಕಾಫಿಯನ್ನು ಅಲ್ಲೇ ಇದ್ದ ಟೇಬಲ್ ಮೇಲೆ ಇಟ್ಟು ಅವರ ಹೊದಿಕೆಯನ್ನೆಳೆದರು.

ಮಹೇಶ್ “ಇನ್ನೂ ಸ್ವಲ್ಪ ಹೊತ್ತು ಮಲಗೋಕೆ ಬಿಡೇ” ಎನ್ನುತ್ತಾ ಗಡಿಯಾರದ ಕಡೆ ನೋಡಿ “ಇನ್ನೂ ಎಂಟು ಗಂಟೆ ಕೂಡ ಆಗಿಲ್ಲ, ಯಾಕೆ ಇಷ್ಟು ಬೇಗ ಎಬ್ಬಿಸಿದೆ” ಎನ್ನುತ್ತ ಮತ್ತೆ ಹೊದಿಕೆಯನ್ನು ಹೊದೆಯಲು ನೋಡಿದರು. “ರೀ ಇವತ್ತು ದೇವಸ್ಥಾನಕ್ಕೆ ಹೋಗ್ಬೇಕು ಮರೆತು ಬಿಟ್ರಾ” ಎಂದು ಉಮಾ ಅಂದಾಗ ಮಹೇಶ್ ಗೆ ತಕ್ಷಣ ಇವತ್ತು ನಮ್ಮ ಮದುವೆಯ ವಾರ್ಷಿಕೋತ್ಸವ ಎಂದು ನೆನಪಾಗಿ ತಕ್ಷಣವೇ ಹೆಂಡತಿಯ ಕೈ ಹಿಡಿದು ಎಳೆದು ಅವರನ್ನು ತನ್ನ ಪಕ್ಕ ಕೂರಿಸಿಕೊಂಡು ಏನೂ ಗೊತ್ತಿಲ್ಲದವರಂತೆ “ಯಾಕೆ? ಇವತ್ತು ಏನು ಸ್ಪೆಷಲ್?” ಎಂದಾಗ ಉಮಾ “ನೀವು ಯಾವಾಗಲೂ ಹೀಗೆ, ಯಾವುದೂ ನಿಮಗೆ ನೆನಪಿರೋದೇ ಇಲ್ಲ. ಆದ್ರೆ ನಿಮ್ಮ ಬಿಸಿನೆಸ್ ನಲ್ಲಿ ಯಾವ ಪ್ರಾಜೆಕ್ಟ್ ಯಾವಾಗ ಶುರು ಮಾಡಿದ್ದು ಅಂತೆಲ್ಲ ಯಾವಾಗಲೂ ನೆನಪಿರುತ್ತೆ. ಅದರಲ್ಲೇ ಗೊತ್ತಾಗುತ್ತೆ ನಿಮಗೆ ನಾನು ಮುಖ್ಯ ಅಲ್ಲ ಅಂತ” ಎಂದು ಉಮಾ ಮೂತಿ ಉಬ್ಬಿಸಿದರು.

ಮಹೇಶ್ ” ಲೇ,ಲೇ, ನಂಗೆ ಚೆನ್ನಾಗಿ ನೆನಪಿದೆ ಕಣೆ, ಸುಮ್ನೆ ನಿನ್ನನ್ನು ಸ್ವಲ್ಪ ಗೋಳು ಹುಯ್ಕೊಳ್ಳೋಣ ಅನ್ನಿಸ್ತು, ಹ್ಯಾಪ್ಪಿ ಆನಿವರ್ಸರಿ ಚಿನ್ನ” ಎಂದು ಉಮಾ ಕೆನ್ನೆಗೆ ಸಿಹಿ ಮುತ್ತೊಂದನ್ನು ಇತ್ತಾಗ ಉಮಾ ನಾಚಿ “ಛೀ, ಏನ್ರೀ ಇದು, ಚಿನ್ನ ರನ್ನಾಂತ, ಬೆಳೆದ ಮಕ್ಕಳು ಮನೇಲಿದ್ದಾರೆ, ಅವರೇನಾದರೂ ನೋಡಿದ್ರೆ …. ನಿಮಗೆ ಸ್ವಲ್ಪಾನೂ ಮಾನ ಮರ್ಯಾದೆ ಅನ್ನೋದೇ ಇಲ್ಲ” ಎನ್ನುತ್ತಾ ನಸುನಕ್ಕು ಕಾಫಿ ಕಪ್ಪನ್ನು ಗಂಡನ ಕೈಗಿತ್ತರು. ಮಹೇಶ್ “ನಮ್ಮ ರೂಮಲ್ಲಿ ನಾವು ಏನೇ ಮಾಡಿದ್ರೂ ಮಕ್ಕಳಿಗೆ ಹೇಗೆ ಗೊತ್ತಾಗುತ್ತೆ. ಅಷ್ಟಕ್ಕೂ ಅವರಿಬ್ಬರೂ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲ್ಲ” ಎನ್ನುತ್ತಿದ್ದಂತೆ “ಹ್ಯಾಪಿ ಆನಿವರ್ಸರಿ ಡ್ಯಾಡಿ, ಮಮ್ಮಿ” ಎನ್ನುತ್ತಾ ಮಕ್ಕಳಿಬ್ಬರೂ ರೂಮಿಗೆ ಬಂದಾಗ ಮಹೇಶ್ ಕಕ್ಕಾಬಿಕ್ಕಿಯಾದರು.

ಉಮಾ ಮಹೇಶರತ್ತ ನೋಡಿ ಕೀಟಲೆಯ ನಗು ನಕ್ಕಾಗ ಮಕ್ಕಳು “ಡ್ಯಾಡಿ, ಇವತ್ತು ಪಾರ್ಟಿ ಇಟ್ಕೊಳ್ಳೋಣ. ಸಿಲ್ವರ್ ಜ್ಯುಬಿಲಿಯಾದ್ರಿಂದ ಸೆಲೆಬ್ರೇಟ್ ಮಾಡಲೇ ಬೇಕು” ಎಂದು ಗಲಾಟೆ ಮಾಡಿದರು. ಮಹೇಶ್ ಹೊದಿಕೆ ಸರಿಸುತ್ತ “ಸಾರಿ ಮಕ್ಳಾ, ಇವತ್ತು ನಂಗೆ ದೊಡ್ಡ ಪ್ರಾಜೆಕ್ಟ್ ಸಿಗೋದ್ರಲ್ಲಿದೆ, ಅದಕ್ಕಾಗಿ ತುಂಬಾ ಓಡಾಡಬೇಕು, ಆದ್ರೆ ರಾತ್ರಿ ನಾನು ಬಂದ ಮೇಲೆ ನಾವೇ ಸೇರಿ ಒಂದು ಚಿಕ್ಕ ಪಾರ್ಟಿ ಮಾಡೋಣ. ಯಾರಿಗೂ ಹೇಳೋದು ಬೇಡ” ಎಂದಾಗ ಮಕ್ಕಳಿಬ್ಬರಿಗೂ ತುಸು ಬೇಸರವಾದರೂ ಅಪ್ಪನ ಪ್ರಾಜೆಕ್ಟ್ ಮುಖ್ಯವಾದ್ದರಿಂದ ಹೆಚ್ಚು ಬಲವಂತ ಮಾಡದೆ ತಾವೇ ನಡೆಸುವ ಪಾರ್ಟಿಯನ್ನಾದರೂ ಭರ್ಜರಿಯಾಗಿ ಮಾಡಬೇಕೆಂದು ಅದರ ಬಗ್ಗೆಯೇ ಮಾತನಾಡುತ್ತ ಅಣ್ಣ ತಂಗಿ ಅಲ್ಲಿಂದ ಹೊರಟರು.

ಉಮಾಗೂ ಗಂಡ ಇವತ್ತೂ ಕೂಡ ತನ್ನೊಂದಿಗೆ ಇರುವುದಿಲ್ಲ ಎಂದು ತಿಳಿದು ಬೇಸರವಾಗಿತ್ತು. ಆದರೆ ವ್ಯವಹಾರವನ್ನೂ ಕಡೆಗಣಿಸಲಾಗುವುದಿಲ್ಲ. ಮಕ್ಕಳಿಬ್ಬರ ಮೆಡಿಕಲ್ ಕಾಲೇಜ್ ಫೀಸೇ ಬೇಕಾದಷ್ಟಾಗುತ್ತದೆ. ಅದಕ್ಕಾಗಿ ಗಂಡನಿಗೆ ಒತ್ತಾಯ ಮಾಡದೆ ದೇವಸ್ಥಾನಕ್ಕಾದ್ರೂ ಹೋಗಿ ಬರೋಣ ಎಂದಾಗ ಮಹೇಶರಿಗೆ ಹೆಂಡತಿಯ ಮುದುಡಿದ ಮುಖ ನೋಡಲಾಗದೆ ಸ್ನಾನಕ್ಕೆ ಧಾವಿಸಿದರು. ಮನೆಯವರೆಲ್ಲ ಸೇರಿ ಕಾರಿನಲ್ಲಿ ದೇವಸ್ಥಾನಕ್ಕೆ ಹೋದರು. ಉಮಾಗೆ ಗಂಡ ತನಗಾಗಿ ಇಷ್ಟಾದರೂ ಮಾಡಿದರಲ್ಲ ಎಂದು ತೃಪ್ತಿಯಾಯಿತು. ಮನೆಗೆ ವಾಪಸು ಬರುತ್ತಿದ್ದಂತೆ ಮಗಳು ವಿನ್ಯಾ, “ಮಮ್ಮಿ, ಇವತ್ತು ರಿಂಗ್ ಎಕ್ಸ್ ಚೇಂಜ್ ಆದರೂ ಮಾಡ್ಬೇಕು” ಅನ್ನುತ್ತ, “ಡ್ಯಾಡಿ, ಜ್ಯುವೆಲ್ಲರಿ ಶಾಪ್ ಗೆ ಹೋಗೋಣ” ಎಂದಳು. ಆಗ ಉಮಾ, “ಇಷ್ಟು ಬೇಗ ಯಾವ ಅಂಗಡೀನೂ ತೆರೆದಿರಲ್ಲ. ಆಮೇಲೆ ನಾನೇ ಹೋಗಿ ತೊಗೊಂಡ್ ಬರ್ತೀನಿ” ಎಂದರು. ಮಗ ಸುದೇಶ್, “ಕೊನೇಪಕ್ಷ ಬಟ್ಟೆ ಅಂಗ್ಡಿಗಾದರೂ ಹೋಗಿ ಹೊಸ ಬಟ್ಟೆಗಳನ್ನ ತರೋಣ” ಎಂದಾಗ ಉಮಾ, ಡ್ರೆಸ್ ಗಳನ್ನು ತಾನು ನಿನ್ನೆಯೇ ತಂದಿಟ್ಟಿದ್ದೇನೆ ಅದು ಸರ್ಪ್ರೈಸ್ ಎಂದು ಉಮಾ ಮಗನ ಕಿವಿಯಲ್ಲಿ ಪಿಸುಗುಟ್ಟಿದರು.

ಗಂಡ ಆಫೀಸಿಗೆ, ಮಕ್ಕಳು ಕಾಲೇಜಿಗೆ ಹೋದ ಮೇಲೆ ಉಮಾ, ಕೆಲಸದವಳು ತನ್ನ ಕೆಲಸ ಮುಗಿಸುವುದನ್ನೇ ಕಾಯುತ್ತ ಅವಳು ಹೊರಡುತ್ತಿದ್ದಂತೆ ತಾವೂ ಚಿನ್ನದ ಅಂಗಡಿಗೆ ಹೊರಟರು. ಡ್ರೈವರ್ ಎರಡು ದಿನ ರಜಾ ಹಾಕಿದ್ದರಿಂದ ತಾನೇ ಸ್ವತಹ ಡ್ರೈವ್ ಮಾಡಿಕೊಂಡು ಹೋದರು. ಇವರನ್ನು ನೋಡಿ ಚಿನ್ನದ ಅಂಗಡಿಯವನ ಮುಖ ಅರಳಿತು. ಇವತ್ತು ತನಗೆ ಒಳ್ಳೆಯ ವ್ಯಾಪಾರವಾಗಲಿದೆ ಎಂದುಕೊಳ್ಳುತ್ತ ಅವರನ್ನು ಸಂತಸದಿಂದಲೇ ಬರಮಾಡಿಕೊಂಡರು. ತಮ್ಮ ಹುಡುಗನಿಗೆ ಅವರಿಗೆ ಅತ್ಯುತ್ತಮವಾದುದನ್ನೇ ತೋರಿಸಲು ಹೇಳಿ, ಅದೇ ಸಮಯದಲ್ಲಿ ಬೇರೆ ಗ್ರಾಹಕರು ಬಂದದ್ದು ನೋಡಿ ಗಲ್ಲಾ ಪೆಟ್ಟಿಗೆಯತ್ತ ನಡೆದರು.

ಅಲ್ಲಿದ್ದ ಸಿಸಿ ಟೀವಿಯಲ್ಲಿ ಗ್ರಾಹರನ್ನು ಗಮನಿಸುತ್ತ ಕುಳಿತರು. ಉಮಾ ಮೊದಲು ಉಂಗುರ ತೋರಿಸುವಂತೆ ಹೇಳಿದಾಗ ಅಂಗಡಿಯ ಹುಡುಗ ವಿವಿಧ ವಿನ್ಯಾಸದ ಉಂಗುರಗಳಿದ್ದ ಪೆಟ್ಟಿಗೆಯನ್ನೇ ತೆರೆದಿಟ್ಟ. ಉಮಾ ಎಲ್ಲವನ್ನೂ ನೋಡುತ್ತಾ ಕೊನೆಗೆ ತನಗೂ ಹಾಗೂ ತನ್ನ ಗಂಡನಿಗೆಂದು ಅತ್ಯುತ್ತಮವಾದ ಎರಡು ವಜ್ರದುಂಗುರಗಳನ್ನು ಆರಿಸಿದರು. ಜೊತೆಗೆ ತನಗೊಂದು ಬ್ರೇಸ್ ಲೆಟ್ ತೆಗೆದುಕೊಳ್ಳುವ ಆಸೆಯಾಗಿ ಅಂಗಡಿಯವರಿಗೆ ಬ್ರೇಸ್ ಲೆಟ್ ತೋರಿಸಲು ಹೇಳಿದಾಗ ಆತ ಉಂಗುರಗಳ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಬ್ರೇಸ್ ಲೆಟ್ ತರಲು ಹೋದ. ಉಮಾ ಅಷ್ಟು ಹೊತ್ತು ಮಾಡುವುದೇನು ಎಂದುಕೊಂಡು ಉಂಗುರಗಳನ್ನೇ ಮತ್ತೆ ನೋಡತೊಡಗಿದರು.

ಅದರಲ್ಲಿ ಒಂದು ನವರತ್ನದ ಉಂಗುರ ಅವರಿಗೆ ಬಹಳ ಹಿಡಿಸಿತು. ಆದರೆ ಯಾಕೋ ಏನೋ ಆ ಕ್ಷಣ ಅವರಿಗೆ ಅದನ್ನು ಕದಿಯುವ ಮನಸ್ಸಾಯಿತು. ತಾನು ಒಂದು ಉಂಗುರ ಕದ್ದರೆ ಯಾರಿಗೂ ತಿಳಿಯಲಾರದು. ಅಂಗಡಿಯವ ತನಗೆ ಚೆನ್ನಾಗಿ ಪರಿಚಯವಿರುವುದರಿಂದ ತನ್ನ ಮೇಲೆ ಆತನಿಗೆ ಅನುಮಾನ ಬಾರದು ಎಂದುಕೊಂಡು ಅತ್ತಿತ್ತ ನೋಡಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಖಾತ್ರಿ ಪಡಿಸಿ ತಕ್ಷಣವೇ ಅದನ್ನೆತ್ತಿ ತನ್ನ ಬ್ಯಾಗಿಗೆ ಹಾಕಿಕೊಂಡರು. ಅಷ್ಟರಲ್ಲಿ ಬ್ರೇಸ್ ಲೆಟ್ ಬಂದಿದ್ದರಿಂದ ಉಮಾ ಏನೂ ಆಗಿಯೇ ಇಲ್ಲವೆಂಬಂತೆ ಅದನ್ನು ನೋಡತೊಡಗಿದರು. ಇತ್ತ ಅಂಗಡಿಯಾತ ಸಿಸಿಟೀವಿಯಲ್ಲಿ ಉಮಾ ಒಂದು ಉಂಗುರ ತೆಗೆದು ತನ್ನ ಬ್ಯಾಗಿಗೆ ಹಾಕಿಕೊಳ್ಳುವುದನ್ನು ನೋಡಿ ದಿಗ್ಭ್ರಮೆಗೊಂಡರು. ಅವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಅಷ್ಟೊಂದು ಶ್ರೀಮಂತ ಮನೆತನದಿಂದ ಬಂದವರು ಕಳವು ಮಾಡುವರೇ ಅಥವಾ ಅವರು ತಾವೇ ತಂದ ಉಂಗುರವನ್ನೇ ತನ್ನ ಬ್ಯಾಗಿಗೆ ಹಾಕಿಕೊಂಡರೆ ಎಂದು ಅವರಿಗೆ ಗೊಂದಲವಾಯಿತು.

ಉಂಗುರಗಳನ್ನು ತೆಗೆದಿಡುತ್ತಿದ್ದ ಹುಡುಗ ಬಂದು ಅವರ ಕಿವಿಯಲ್ಲಿ ಒಂದು ನವರತ್ನದ ಉಂಗುರ ಕಾಣಿಸುತ್ತಿಲ್ಲ ಎಂದು ಗುಟ್ಟಾಗಿ ಹೇಳಿದಾಗ ಅಂಗಡಿಯ ಮಾಲೀಕರಿಗೆ ಉಮಾ ಉಂಗುರ ಕದ್ದಿದ್ದು ಖಾತ್ರಿಯಾಯಿತು. ಜೊತೆಗೆ ಅವರಿಗೆ ಆಶ್ಚರ್ಯವಾಯಿತು. ಅವರು ಯಾವತ್ತೂ ಹೀಗೆ ಮಾಡಿದವರಲ್ಲ, ಏನಾಯಿತು ಅವರಿಗೆ ಇದ್ದಕ್ಕಿದ್ದಂತೆ, ಅದರಲ್ಲೂ ಅವರು ಕೊಂಡ ಉಂಗುರಗಳ ಬೆಲೆಗಿಂತ ಕಡಿಮೆ ಬೆಲೆಯದ್ದನ್ನು ಕದಿಯುವ ಆವಶ್ಯಕತೆಯಾದರೂ ಏನಿತ್ತು? ಯಾಕೆ ಹಾಗೆ ಮಾಡಿದರು ಎಂದುಕೊಳ್ಳುತ್ತ ಅಚ್ಚರಿ, ದಿಗ್ಭ್ರಮೆಗಳಿಂದ ಅವರತ್ತ ನೋಡಿದರು.

ಉಮಾ ಮಾತ್ರ ಏನೂ ಆಗದವರಂತೆ ಬ್ರೇಸ್ ಲೆಟ್ ಗಳನ್ನು ನೋಡುತ್ತಾ ಕುಳಿತರು. ಹುಡುಗ ಆಕೆ ಉಂಗುರ ಕದ್ದಿದ್ದರಿಂದ ಇನ್ನು ಬ್ರೇಸ್ ಲೆಟ್ ಕೂಡ ಕದ್ದರೆ ಎಂದು ಭಯವಾಗಿ ಅಲ್ಲೇ ನಿಂತು ಅವರನ್ನು ಸೂಕ್ಷ್ಮವಾಗಿ ಗಮನಿಸತೊಡಗಿದ. ಅವನಿಗೂ ಉಮಾ ವರ್ತನೆ ಅಚ್ಚರಿ ತಂದಿತ್ತು. ಇಷ್ಟೊಂದು ಶ್ರೀಮಂತ ಮನೆತನದವರು ಉಂಗುರ ಕದ್ದಿದ್ದಾದರೂ ಯಾಕೆ ಎಂದು ಅಚ್ಚರಿಯಿಂದ ಅವರನ್ನೇ ನೋಡುತ್ತಾ ನಿಂತ.
ಉಮಾ ಬ್ರೇಸ್ ಲೆಟ್ ನ್ನು ಆರಿಸಿ ಅದನ್ನು ಪ್ಯಾಕ್ ಮಾಡಲು ತಿಳಿಸಿ ದುಡ್ಡು ಕೊಡಲು ಗಲ್ಲಾ ಪೆಟ್ಟಿಗೆಯತ್ತ ನಡೆದರು. ಅಲ್ಲಿ ಮಾಲೀಕರು, ಉಂಗುರ ಮತ್ತು ಬ್ರೇಸ್ ಲೆಟ್ ಗಳ ದರವನ್ನೆಲ್ಲ ಪರಿಶೀಲಿಸಿ ಹುಡುಗನಿಗೆ ಅದನ್ನೆಲ್ಲ ಚೆನ್ನಾಗಿ ಪ್ಯಾಕ್ ಮಾಡಲು ಹೇಳಿ ಅಲ್ಲಿಂದ ಕಳುಹಿಸಿದರು.

ಅಂಗಡಿಯಾತ, ಉಮಾ ಕೊಂಡ ಆಭರಣಗಳ ಜೊತೆ ನವರತ್ನದ ಉಂಗುರದ ಬೆಲೆಯನ್ನೂ ನಮೂದಿಸಿ ಬಿಲ್ಲನ್ನು ಅವರ ಕೈಗಿತ್ತು ಅವರನ್ನೇ ಗಮನಿಸುತ್ತ ಕುಳಿತರು. ಉಮಾ ಬಿಲ್ಲನ್ನು ಪರಿಶೀಲಿಸುತ್ತಿದ್ದಂತೆ ಅವರ ಮುಖ ಕಪ್ಪಿಟ್ಟಿತು. ಅಂಗಡಿಯಾತ ತಾನು ಕದ್ದ ಉಂಗುರದ ಬೆಲೆಯನ್ನು ನಮೂದಿಸಿ ತಾನು ಕದ್ದಿದ್ದು ಅವರಿಗೆ ತಿಳಿದಿದೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದು ನೋಡಿ ಉಮಾಗೆ ತೀವ್ರ ಮುಜುಗರವಾಯಿತು.
ಛೆ, ತಾನೇಕೆ ಉಂಗುರವನ್ನು ಕದ್ದೆ, ತನ್ನ ಗಂಡ ಅಂತಹ ನೂರು ಉಂಗುರಗಳನ್ನು ಒಮ್ಮೆಲೇ ಕೊಂಡುಕೊಳ್ಳುವ ಶಕ್ತಿಯಿದ್ದವರಾಗಿದ್ದೂ ತಾನೇಕೆ ಕದಿಯುವಂತಹ ಹೀನ ಕೆಲಸಕ್ಕೆ ಕೈ ಹಾಕಿದೆ, ಎಂತಹ ಅವಮಾನವಾಯಿತು. ಇನ್ನು ಆ ಹುಡುಗ ಮತ್ತು ಅಂಗಡಿಯಾತ ತಾನು ಕದ್ದ ವಿಷಯವನ್ನು ಎಲ್ಲರ ಬಳಿ ಹೇಳಿಕೊಂಡರೆ ತಮ್ಮ ಮರ್ಯಾದೆಯೇ ಹೋಗುತ್ತದೆ. ಛೆ, ಛೆ, ಎಂತಹ ಕೆಲಸ ಮಾಡಿಬಿಟ್ಟೆ, ಚಿನ್ನದ ಅಂಗಡಿಯಲ್ಲಿ ಯಾರೂ ಗಮನಿಸುತ್ತಿಲ್ಲವೆಂದು ಯಾಕೆ ತಾನು ಅಂದುಕೊಂಡೆ. ಅವರು ಪೋಲೀಸಿವರಿಗೆ ಹೇಳಿದ್ದರೆ ತನ್ನ ಗತಿ ಏನಾಗುತ್ತಿತ್ತು. ತಾನು ಉಂಗುರ ಕದ್ದೆ ಎಂದು ಎಲ್ಲರಿಗೂ ತಿಳಿಯುವಂತೆ ಗಲಾಟೆ ಮಾಡದೆ ತನಗೆ ಅವಮಾನವಾಗಬಾರದು ಎಂದು ಇಷ್ಟು ಸೂಕ್ಷ್ಮವಾಗಿ ತಿಳಿಸಿದ್ದಾರೆ, ಅವರೆಷ್ಟು ಒಳ್ಳೆಯವರು. ತಾನು ಮಾತ್ರ ತನ್ನ ಮರ್ಯಾದೆ ಬಗ್ಗೆ ಯೋಚಿಸದೆ ಒಂದು ಕ್ಷಣಕ್ಕೆ ಮತಿಗೆಟ್ಟು ಎಂಥ ಕೆಲಸ ಮಾಡಿಬಿಟ್ಟೆ. ಈಗ ತಾನು ಉಂಗುರದ ದರ ಕೊಡಲು ಒಪ್ಪದಿದ್ದರೆ ಅವರು ಖಂಡಿತ ದೊಡ್ಡ ಗಲಾಟೆ ಮಾಡುತ್ತಾರೆ. ದುಡ್ಡು ಕೊಟ್ಟು ಬಿಟ್ಟರೆ ತಾನು ಕಳ್ಳಿಯೆಂದು ಒಪ್ಪಿಕೊಂಡಂತಾಗುತ್ತದೆ ಎಂದುಕೊಂಡು ದ್ವಂದ್ವಕ್ಕೊಳಗಾದರು. ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ.

ಊರಿನ ಪ್ರಖ್ಯಾತ ಬಿಲ್ಡರ್ ನ ಹೆಂಡತಿ ಚಿನ್ನದ ಅಂಗಡಿಯಲ್ಲಿ ಉಂಗುರ ಕದ್ದಳೆಂದರೆ ಅದಕ್ಕಿಂತ ಅವಮಾನಕರ ಬೇರಿಲ್ಲ. ಇದೆಲ್ಲ ಮಾಧ್ಯಮದಲ್ಲಿ ಪ್ರಸಾರವಾದರೆ ಏನು ಮಾಡುವುದು ಎಂದು ಜಿಲ್ಲನೆ ಬೆವರಿದರು. ಅವರಿಗೆ ಬಿಸಿ ತುಪ್ಪದಂತೆ ಅಲ್ಲವೆನ್ನಲೂ ಆಗದೆ ಸರಿ ಎಂದು ಒಪ್ಪಿಕೊಳ್ಳಲೂ ಆಗದೆ ತೊಳಲಾಡಿದರು. ಚಿನ್ನದ ಅಂಗಡಿಯಲ್ಲಿ ಎ.ಸಿ ಹಾಕಿದ್ದರೂ ಉಮಾ ಬೆವರಿನಿಂದ ತೋಯ್ದು ಹೋಗಿದ್ದರು.
ಬಹಳ ಯೋಚಿಸಿ ಕೊನೆಗೆ ಇದೆಲ್ಲದರಿಂದ ಪಾರಾಗಲು ತಾನು ತಪ್ಪಿ ಅದನ್ನು ಬ್ಯಾಗ್ ಗೆ ಹಾಕಿದೆ. ದಯವಿಟ್ಟು ಕ್ಷಮಿಸಿ ಎನ್ನುತ್ತಾ ಅದರ ಮೊತ್ತವನ್ನೂ ಸೇರಿಸಿ ದುಡ್ಡು ಕೊಟ್ಟರು. ಅಂಗಡಿಯಾತ ಏನೂ ಆಗದವರಂತೆ, ಪರವಾಗಿಲ್ಲಮ್ಮ, ಒಮ್ಮೊಮ್ಮೆ ಹೀಗಾಗುತ್ತದೆ, ಯೋಚನೆ ಮಾಡಬೇಡಿ ಎಂದು ಮಂದಹಾಸ ಬೀರಿ ಅವರನ್ನು ಬೀಳ್ಕೊಟ್ಟರು.

ಅಂಗಡಿಯಿಂದ ಹೊರ ಬಂದೊಡನೆ ಉಮಾಗೆ ಅವರು ಬೇರೆಯವರಿಗೆ ಈ ವಿಚಾರ ಹೇಳಿದರೆ ಏನು ಮಾಡುವುದು. ತನ್ನ ಗಂಡನಿಗೆ ಗೊತ್ತಾದರೆ ಆಘಾತವಾಗುತ್ತದೆ, ಇನ್ನು ಮಕ್ಕಳಿಗೆ ಗೊತ್ತಾದರೆ ಎಷ್ಟು ಅವಮಾನ, ತಾನು ಯಾಕಾದರೂ ಕದಿಯಲು ಹೋದೇನೋ, ಯಾವ ರೋಗ ತನಗೆ ಬಡಿದಿತ್ತೋ, ತಾನು ಆ ಘಟನೆಯೇ ನಡೆಯದಂತೆ ಮತ್ತೆ ಸರಿ ಮಾಡಲು ಆಗಿದ್ದಿದ್ದರೆ ಎಷ್ಟು ಚೆನ್ನಾಗಿತ್ತು. ಒಂದು ಕ್ಷಣದ ತಪ್ಪಿಗೆ ಜೀವಮಾನವಿಡೀ ನರಳುವಂತಾಯಿತಲ್ಲ ಎಂದು ಪಶ್ಚಾತ್ತಾಪ ಪಟ್ಟರು.

ತನ್ನ ಗಂಡ ತನಗೆ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ದುಡ್ಡಿಗೇನೂ ಬರವಿಲ್ಲ ಆದರೂ ತಾನ್ಯಾಕೆ ಇಂಥ ಕೆಲಸ ಮಾಡಿದೆ, ಇನ್ನು ತಾನು ಈ ಅಂಗಡಿಗೆ ಬರಲು ಸಾಧ್ಯವೇ, ಇನ್ನು ಕದ್ದ ಉಂಗುರವನ್ನು ತನ್ನ ಬಳಿ ಇಟ್ಟುಕೊಂಡರೆ ಅದು ತಾನು ಕದ್ದಿದ್ದನ್ನು ಜೀವಮಾನವಿಡೀ ನೆನಪಿಸುತ್ತದೆ. ಇದನ್ನು ತೆಗೆದು ಬಿಸಾಕಲೇ ಎಂದುಕೊಂಡರು. ಆದರೆ ಮರುಕ್ಷಣವೇ, ಬಿಸಾಕಿದರೆ ಯಾರಿಗಾದರೂ ಅದು ಸಿಕ್ಕಿ ಅವರು ಪ್ರಾಮಾಣಿಕವಾಗಿ ಹಿಂತಿರುಗಿಸಲು ಬಯಸಿ ಪತ್ರಿಕೆಗಳಲ್ಲಿ ಮಾಹಿತಿ ಕೊಟ್ಟರೆ ಚಿನ್ನದ ಅಂಗಡಿಯಾತ ಅದು ತಾನು ಉಂಗುರ ಕದ್ದ ವಿಷಯ ಹೊರಬಂದರೇ! ಎಂದುಕೊಂಡು ಮತ್ತಷ್ಟು ಬೆವರಿದರು.

ಕೊನೆಗೆ ಅದನ್ನು ಮನೆಯಲ್ಲಿ ಯಾವುದಾರೂ ಮೂಲೆಯಲ್ಲಿ ಇರಿಸಿದರಾಯಿತು ಎಂದುಕೊಳ್ಳುತ್ತ ಕಾರಿನತ್ತ ನಡೆದರು. ಸುತ್ತಲಿದ್ದ ಜನರೆಲ್ಲಾ ತಾನು ಕಳ್ಳಿಯೆಂದು ತನ್ನತ್ತಲೇ ದಿಟ್ಟಿಸಿ ನೋಡುತ್ತಿದ್ದಾರೆ ಎಂದೆನಿಸಿ ಮುಜುಗರವಾಗಿ ಲಗುಬಗೆಯಿಂದ ಕಾರಿನತ್ತ ಧಾವಿಸಿದರು. ಚಿನ್ನದ ಅಂಗಡಿಗೆ ಬರುವಾಗ ಇದ್ದ ಸಂಭ್ರಮ ಅಲ್ಲಿಂದ ಹೊರಡುವಾಗ ಅವರ ಮುಖದಲ್ಲಿ ಇರಲಿಲ್ಲ. ಹೇಗೋ ಕಾರು ಚಲಾಯಿಸಿ ಮನೆಗೆ ಬಂದರು. ಇವತ್ತು ಬೆಳಗ್ಗೆ ಎದ್ದ ಘಳಿಗೆಯೇ ಸರಿ ಇಲ್ಲ ಎಂದುಕೊಂಡರೂ ಬೆಳಗ್ಗಿನಿಂದ ಚೆನ್ನಾಗಿಯೇ ಇದ್ದುದು ನೆನಪಾಗಿ ತಾನು ಚಿನ್ನದ ಅಂಗಡಿಗೆ ಹೋದ ಘಳಿಗೆಯೇ ಸರಿ ಇಲ್ಲ ಎಂದುಕೊಂಡರು.

ಅವರಿಗೆ ಒಂದು ಕಡೆ ಕುಳಿತು ಕೊಳ್ಳಲು ಆಗದೆ ಅತ್ತಿಂದಿತ್ತ ಶತಪಥ ಹೆಜ್ಜೆ ಹಾಕಿದರು. ಅವರ ಫೋನ್ ಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯ ಕೋರಲು ಸಂಬಂಧಿಕರ ಕರೆಗಳು ಒಂದಾದರ ಮೇಲೊಂದರಂತೆ ಬರುತ್ತಿದ್ದವು. ಆದರೆ ಉಮಾಗೆ ಕರೆ ಸ್ವೀಕರಿಸುವ ಸ್ಥಿತಿಯಲ್ಲೇ ಇರಲಿಲ್ಲ. ಚಿನ್ನದ ಅಂಗಡಿಯವ ವಿಷಯ ಎಲ್ಲರಿಗೂ ಹೇಳಿ ಆ ಬಗ್ಗೆ ಕೇಳಲು ಅವರು ಫೋನ್ ಮಾಡಿರಬಹುದೇ ಎಂದು ಅವರಿಗೆ ಸಂದೇಹ.

ಗಾಬರಿಯಿಂದ ಟೀವಿ ಹಾಕಿ ನ್ಯೂಸ್ ಚ್ಯಾನೆಲ್ ಗಳನ್ನೂ ಬದಲಾಯಿಸುತ್ತ ನೋಡಿದರು. ಎಲ್ಲಾದರೂ ತಾನು ಉಂಗುರ ಕದ್ದ ವಿಷಯ ಬಂದಿರಬಹುದೇ ಎಂದು ಸಂಶಯದಿಂದ ಮತ್ತೆ ಮತ್ತೆ ಹಾಕಿ ನೋಡಿದರು. ಆದರೆ ಎಲ್ಲೂ ವಿಷಯದ ಪ್ರಸ್ತಾಪವೇ ಇಲ್ಲದಾಗ ಉಮಾಗೆ ಸ್ವಲ್ಪ ಸಮಾಧಾನವಾಯಿತು. ಮರುಕ್ಷಣವೇ ನಾಳಿನ ಪತ್ರಿಕೆಯಲ್ಲಿ ವಿಷಯ ಬಹಿರಂಗವಾದರೆ ಏನು ಮಾಡುವುದು ಎಂದು ಚಿಂತಾಕ್ರಾಂತರಾದರು. ಅವರಿಗೆ ಬದುಕುವುದೇ ಬೇಡವೆನಿಸಿತು. ಇದೆಲ್ಲ ನೋಡಲು ತಾನು ಬದುಕಿದ್ದರೆ ತಾನೇ, ಅದಕ್ಕಿಂತ ತಾನು ಸಾಯುವುದು ಒಳ್ಳೆಯದು ಎಂದು ಉಮಾಗೆ ಮನಸ್ಸಿಗೆ ಬಂದದ್ದೇ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು.

ಬದುಕು ಎಷ್ಟು ಚೆನ್ನಾಗಿ ನಡೆಯುತ್ತಿತ್ತು. ಯಾವುದೋ ವಿಷ ಘಳಿಗೆಯಲ್ಲಿ ತನ್ನ ಕೈಯಾರೆ ತಾನೇ ಬದುಕನ್ನು ಹಾಳು ಮಾಡಿಕೊಂಡೆ. ಆದರೆ ತಾನು ಆತ್ಮಹತ್ಯೆ ಮಾಡಿಕೊಂಡರೆ ತನ್ನ ಸಾವಿಗೆ ಬೇರೆ ಯಾವುದೇ ಕಾರಣಗಳಿಲ್ಲದೆ ಪೊಲೀಸರು ತನಿಖೆ ನಡೆಸಿ ತಾನು ಉಂಗುರ ಕದ್ದು ಅವಮಾನ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡೆ ಎಂದು ಸತ್ಯ ಬಯಲಾದರೆ ಏನು ಮಾಡುವುದು. ಸತ್ತ ಮೇಲೂ ತನ್ನ ಗಂಡ ಮಕ್ಕಳು ಊರಿನವರು ಎಲ್ಲರಿಗೂ ತಿಳಿದು ಬಿಡುತ್ತದೆ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಬಾರದು, ಆದರೆ ಬದುಕುವುದಾದರೂ ಹೇಗೆ, ತಾನು ಉಂಗುರ ಕದ್ದೆ ಎನ್ನುವುದು ಇನ್ನು ದಿನವೂ ಮನಸ್ಸಿಗೆ ಚುಚ್ಚುತ್ತಿರುತ್ತದೆ.

ತನ್ನ ಪಾಲಿಗೆ ಇವತ್ತು ಸಂಭ್ರಮದ ದಿನ, ಬೆಳಗ್ಗಿನಿಂದ ಅದೆಷ್ಟು ಸಂತೋಷವಾಗಿದ್ದೆ, ಯಾರ ಕೆಟ್ಟ ದೃಷ್ಟಿ ಬಿದ್ದಿತೋ ಏನೋ ಎಲ್ಲ ಹಾಳಾಗಿ ಹೋಯಿತು. ನಾಳಿನ ಪತ್ರಿಕೆಯಲ್ಲಿ ನಾನು ಉಂಗುರ ಕದ್ದ ವಿಷಯ ಬಂದರೆ ತಾನು ತಲೆ ಎತ್ತಿ ತಿರುಗಾಡಲಾದೀತೇ, ನನ್ನ ಮಕ್ಕಳು ನನ್ನ ಬಗ್ಗೆ ಏನು ತಿಳಿದುಕೊಂಡಾರು. ಅವರು ಊರಿನಲ್ಲಿ ತಲೆ ಎತ್ತಿ ತಿರುಗಾಡಲಾದೀತೇ, ಅದಕ್ಕಿಂತ ಹೆಚ್ಚಾಗಿ ಮಹೇಶ್ ಗೆ ಹೇಗಾದೀತು, ಅವರು ಎದೆ ಒಡೆದುಕೊಂಡು ಸತ್ತಾರು. ಇದನ್ನೆಲ್ಲಾ ಹೇಗೆ ಸರಿ ಮಾಡಲಿ ದೇವರೇ ಅಂಗಡಿಯವರು ನಾನು ಕದ್ದ ವಿಷಯ ಯಾರ ಬಳಿಯೂ ಹೇಳದಿರಲಿ ಎಂದು ಬೇಡಿಕೊಂಡರು.
ಅಡಿಗೆ ಮಾಡಲೂ ಅವರಿಗೆ ಆಸಕ್ತಿ ಉಳಿಯಲಿಲ್ಲ. ಒಂದು ಕ್ಷಣದಲ್ಲಿ ಏನೆಲ್ಲಾ ಆಗಿ ಹೋಯಿತು ಎಂದುಕೊಳ್ಳುತ್ತ ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು. ಅವಮಾನ, ಮಾನಸಿಕ ಕಿರಿಕಿರಿ ತಾಳಲಾರದೇ ಸಾಯುವುದೇ ಮೇಲು ಎಂದುಕೊಂಡು ಮನೆಯಲ್ಲಿ ಯಾವಾಗಲೋ ತಂದಿಟ್ಟ ನಿದ್ದೆ ಮಾತ್ರೆಗಳ ನೆನಪಾಗಿ ಬಾಟಲಿ ತೆರೆದರು. ಅದರಲ್ಲಿ ಎರಡು ಮಾತ್ರೆಗಳು ಮಾತ್ರ ಇದ್ದವು. ಅಷ್ಟಾದರೂ ಸಾಕು ಎಂದುಕೊಂಡು ಮಾತ್ರೆಗಳನ್ನು ನುಂಗಿಕೊಂಡು ಹಾಸಿಗೆಯ ಮೇಲೆ ಬಿದ್ದರು. ಕ್ಷಣ ಕಾಲ ಅವರ ಬದುಕೆಲ್ಲ ಒಂದು ಚಿತ್ರದಂತೆ ಅವರ ಸ್ಮ್ರತಿ ಪಟಲದ ಮುಂದೆ ಸುಳಿಯತೊಡಗಿತು. ಕ್ರಮೇಣ ಅವರು ನಿದ್ದೆಗೆ ಜಾರಿದರು.

ಮಕ್ಕಳಿಬ್ಬರೂ ಸಂಜೆ ಕಾಲೇಜು ಮುಗಿಸಿ ಪಾರ್ಟಿಗೆ ಬೇಕಾದ ಎಲ್ಲ ಸಾಮಾನುಗಳನ್ನು ಖರೀದಿಸಿ ಮನೆಗೆ ಬಂದಾಗ ಗಂಟೆ ಏಳಾಗಿತ್ತು. ಮನೆಯಲ್ಲಿ ಆವರಿಸಿದ ಕತ್ತಲು ನೋಡಿ ಮಕ್ಕಳಿಬ್ಬರಿಗೂ ಆತಂಕವಾಯಿತು. ಅಮ್ಮ ಎಲ್ಲಿ ಹೋದರು, ಮನೆಯಲ್ಲಿ ಯಾಕೆ ಇಷ್ಟೊಂದು ಕತ್ತಲಿದೆ. ಅಮ್ಮನೇ ಏನಾದರೂ ಸರ್ ಪ್ರೈಸ್ ಮಾಡಲು ಹೀಗೆ ಮಾಡಿರಬಹುದೇ ಎಂದುಕೊಳ್ಳುತ್ತ, ಮಮ್ಮಿ ಮಮ್ಮಿ ಎಂದು ಕರೆಯುತ್ತ ಹೊರಟರು. ಆದರೆ ಅವರ ಸುಳಿವೇ ಇಲ್ಲದ್ದು ಕಂಡು ತಾವೇ ಮನೆಯ ಎಲ್ಲ ಲೈಟು ಗಳನ್ನೂ ಉರಿಸಿ ಅಮ್ಮನ ರೂಮಿನತ್ತ ಧಾವಿಸಿದರು.
ಅಲ್ಲಿ ಉಮಾ ಅಂಗಾತವಾಗಿ ಮಲಗಿದ್ದರು. ಅದನ್ನು ನೋಡಿ ಬೆಚ್ಚಿ ಬಿದ್ದ ಮಕ್ಕಳು, ಮಮ್ಮಿ ಮಮ್ಮಿ ಎನ್ನುತ್ತ ಅವರನ್ನು ಅಲುಗಾಡಿಸಿ ಎಬ್ಬಿಸಲು ನೋಡಿದರು. ಆದರೆ ಉಮಾ ಎಚ್ಚರಗೊಳ್ಳಲಿಲ್ಲ. ಅದನ್ನು ನೋಡಿ ಭಯಭೀತರಾಗಿ ತಮ್ಮ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದರು. ಮಹೇಶ್ ಕೂಡಲೇ ಡಾಕ್ಟರ್ ಗೆ ಕರೆ ಮಾಡಿ ವಿಷಯ ತಿಳಿಸಿ ತಕ್ಷಣವೇ ಮನೆಗೆ ಹೋಗುವಂತೆ ತಿಳಿಸಿ ತಾವೂ ಮನೆಯತ್ತ ಧಾವಿಸಿದರು.

ಡಾಕ್ಟರ್ ಬಂದು ಪರೀಕ್ಷೆ ಮಾಡಿ ಅವರು ನಿದ್ದೆ ಮಾತ್ರೆ ತೆಗೆದುಕೊಂಡಿರುವುದರಿಂದ ಅವರಿಗೆ ಎಚ್ಚರವಾಗಿಲ್ಲ, ಮನೆಯಲ್ಲಿ ಏನಾದರೂ ಅವರ ಮನಸ್ಸಿಗೆ ನೋವಾಗುವ ಘಟನೆ ನಡೆಯಿತೇ ಎಂದು ಕೇಳಿದಾಗ ಎಲ್ಲರೂ, ಏನೂ ನಡೆದಿಲ್ಲ. ಬೆಳಗ್ಗಿನಿಂದಲೂ ಅವರು ಖುಷಿಯಾಗಿಯೇ ಇದ್ದರು ಎಂದರು. ಆದರೆ ಅವರಿಗೆಲ್ಲ ಉಮಾ ನಿದ್ದೆ ಮಾತ್ರೆ ಯಾವ ಕಾರಣಕ್ಕಾಗಿ ತೆಗೆದುಕೊಂಡರು ಎಂದು ಮಾತ್ರ ಅರಿವಾಗಲಿಲ್ಲ.
ವಿನ್ಯಾ ಅಮ್ಮನ ವ್ಯಾನಿಟಿ ಬ್ಯಾಗ್ ತೆರೆದು ಅಲ್ಲೇನಾದರೂ ಸುಳಿವು ಸಿಗುತ್ತದೋ ಎಂದು ನೋಡಿದಳು. ಆದರೆ ಅಲ್ಲಿ ಮೂರು ಉಂಗುರ ಒಂದು ಬ್ರೇಸ್ ಲೆಟ್ ಮತ್ತು ಅವುಗಳ ಬಿಲ್ ಬಿಟ್ಟರೆ ಬೇರೆ ಏನೂ ಸಿಗಲಿಲ್ಲ. ಡಾಕ್ಟರ್ ಉಮಾಗೆ ಇಂಜೆಕ್ಷನ್ ನೀಡಿ ನಾಳೆ ಬೆಳಿಗ್ಗೆ ಅವರಿಗೆ ಎಚ್ಚರವಾಗಬಹುದು. ಹಾಗೇನಾದರೂ ಆಗದಿದ್ದರೆ ತನಗೆ ತಿಳಿಸಿ ಎಂದು ಹೇಳಿ ಅಲ್ಲಿಂದ ಹೊರಟರು.

ಬೆಳಗ್ಗೆ ಉಮಾಗೆ ಎಚ್ಚರವಾದಾಗ ವಿಪರೀತ ತಲೆ ಸಿಡಿಯುತ್ತಿತ್ತು. ತಕ್ಷಣವೇ ಅವರಿಗೆ ತಾನು ಸಾಯಬೇಕೆಂದು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡರೂ ತಾನು ಸಾಯದೆ ಇದ್ದುದು ಕಂಡು ಅವರಿಗೆ ಆಶ್ಚರ್ಯವಾಯಿತು. ದೇವರೇ, ನಾನು ಅವಮಾನಗಳಿಂದ ತಪ್ಪಿಸಿಕೊಳ್ಳಲು ನೋಡಿದರೆ ನೀನು, ನಾನು ಅವಮಾನ ಅನುಭವಿಸಲೆಬೇಕೆಂದು ಹಟದಿಂದ ನನ್ನನ್ನು ಬದುಕಿಸಿದೆಯಾ ಎಂದು ನೊಂದುಕೊಳ್ಳುತ್ತ ಇವತ್ತಿನ ಪತ್ರಿಕೆಗಳಲ್ಲಿ ನಾನು ಉಂಗುರ ಕದ್ದ ವಿಷಯ ಬಂದಿರಬಹುದೇ ಎಂದುಕೊಂಡು ಗಾಬರಿಯಾಗಿ ಮುಂಬಾಗಿಲತ್ತ ಧಾವಿಸಿದರು. ಪತ್ರಿಕೆಯನ್ನು ಗಡಿಬಿಡಿಯಿಂದ ಬಿಡಿಸಿ ನೋಡಿದಾಗ ಎಲ್ಲೂ ತನ್ನ ವಿಷಯ ಬರದೆ ಇದ್ದಿದ್ದು ಕಂಡು ಒಂದು ಕ್ಷಣ ಮನಸ್ಸಿಗೆ ಸಮಾಧಾನವಾಯಿತು. ಮರುಗಳಿಗೆಯಲ್ಲಿ ಟೀವಿಯಲ್ಲಿ ಏನಾದರೂ ಬಂದಿರಬಹುದೇ ಎಂದು ನೋಡಲು ಅತ್ತ ಧಾವಿಸಿದರು. ಟೀವಿಯಲ್ಲೂ ಎಲ್ಲೂ ಕಳ್ಳತನದ ವಿಷಯ ಬರಲೇ ಇಲ್ಲ, ಅಬ್ಬಾ, ತಾನು ಬಚಾವಾದೆ. ಇನ್ನು ಯಾವತ್ತಿಗೂ ಆ ಚಿನ್ನದ ಅಂಗಡಿಯತ್ತ ಕಾಲಿಡುವುದಿಲ್ಲ ಎಂದುಕೊಂಡರು.

ಮಹೇಶರಿಗೆ ಎಚ್ಚರವಾಗಿ ಉಮಾಳ ನೆನಪಾಗಿ ಗಡಿಬಿಡಿಯಿಂದ ಎದ್ದು ನೋಡಿದಾಗ ಉಮಾ ಆರೋಗ್ಯವಾಗಿ ಇರುವುದನ್ನು ನೋಡಿ ಸಮಾಧಾನ ಪಟ್ಟುಕೊಂಡರು. ಮಹೇಶ್ ಆಕೆಗೆ ನಿದ್ದೆ ಮಾತ್ರೆ ಏಕೆ ತೆಗೆದುಕೊಂಡೆ ಎಂದು ಕೇಳಿದಾಗ ಉಮಾಳಿಗೆ ಏನು ಹೇಳಬೇಕೆಂದು ತೋಚದೆ ತಡಬಡಾಯಿಸಿದರು. ಇವರಿಗೆ ಹೇಗೆ ಗೊತ್ತಾಯಿತು ತಾನು ನಿದ್ದೆ ಮಾತ್ರೆ ತೆಗೆದುಕೊಂಡದ್ದು ಎಂದು ಆಶ್ಚರ್ಯವೂ ಆಯಿತು.
ಅವರ ಮನಸ್ಸನ್ನು ಅರಿತವರಂತೆ ಮಹೇಶ್, ನಿನ್ನೆ ಉಮಾ ಮೈ ಮೇಲೆ ಎಚ್ಚರವಿಲ್ಲದವರಂತೆ ಮಲಗಿದಾಗ ಗಾಬರಿಯಾಗಿ ಡಾಕ್ಟರ್ ನ್ನು ಕರೆಸಿದ್ದ ವಿಷಯ ಹೇಳಿದರು. ನಂತರ, ನೀನು ನಿದ್ದೆ ಮಾತ್ರೆ ಯಾಕೆ ತೆಗೆದುಕೊಂಡೆ ಎಂದೂ ನನಗೆ ಗೊತ್ತು ಎಂದಾಗ ಉಮಾ ಮುಖ ಕಪ್ಪಿಟ್ಟಿತು.

ಚಿನ್ನದ ಅಂಗಡಿಯವ ಇವರಿಗೆ ವಿಷಯ ಹೇಳಿರಬಹುದೇ ಎಂದುಕೊಂಡು ಕಳವಳ ಪಡುತ್ತಿರುವಾಗ ಮಹೇಶ್, “ನಾನು ನಮ್ಮ ಸಿಲ್ವರ್ ಜ್ಯುಬಿಲಿ ದಿನ ನಿನ್ನ ಜೊತೆ ಇರಲಿಲ್ಲ ಅಂತ ಬೇಜಾರು ಮಾಡ್ಕೊಂಡೆ ಅಲ್ವಾ. ಬೆಳಗ್ಗೆ ನಿನ್ನ ಮುಖ ನೋಡಿದಾಗಲೇ ನನಗೆ ಅನ್ನಿಸ್ತು. ಆದರೆ ನೀನು ಇಷ್ಟೊಂದು ಬೇಜಾರು ಮಾಡಿಕೊಂಡಿದ್ದೀಯಾ ಅಂತ ತಿಳಿದಿರಲಿಲ್ಲ, ಸಾರಿ ಕಣೆ” ಎಂದು ಅವರನ್ನು ಅಪ್ಪಿಕೊಂಡಾಗ ಉಮಾಗೆ, ಚಿನ್ನದ ಅಂಗಡಿಯವ ವಿಷಯ ಯಾರಿಗೂ ಹೇಳಿಲ್ಲವೆಂದಾಯಿತು ಎಂದುಕೊಂಡು ನಿರಾಳವಾದರು.

ಮಕ್ಕಳು ಎಚ್ಚರಗೊಳ್ಳುತ್ತಲೇ ತಾಯಿಯನ್ನು ನೋಡಲು ಬೇಗನೆ ಎದ್ದು ಧಾವಿಸಿದರು. ತಾಯಿ ಎಚ್ಚರವಾಗಿರುವುದನ್ನು ನೋಡಿ ಅವರಿಗೂ ಸಮಾಧಾನವಾಯಿತು. ವಿನ್ಯಾ ಅಮ್ಮನಲ್ಲಿ ಹುರುಪು ಮೂಡಿಸಲು ಅಮ್ಮನ ವ್ಯಾನಿಟಿ ಬ್ಯಾಗ್ ತೆಗೆದಾಗ ಉಮಾ ಬಿಳಿಚಿಕೊಂಡರು. ಅವಳು ಆ ಉಂಗುರ ಯಾರಿಗಾಗಿ ತಂದಿದ್ದು ಎಂದು ಕೇಳಿದರೆ ಎಂದು ಹೆದರಿದರು. ವಿನ್ಯಾ, ಉಂಗುರ ಹಾಗೂ ಬ್ರೇಸ್ ಲೆಟ್ ಗಳನ್ನು ಹೊರತೆಗೆದು, ಮಮ್ಮೀ, ಈ ಎರಡು ವಜ್ರದುಂಗುರ ನಿಮಗೆ ಮತ್ತು ಡ್ಯಾಡಿಗೆ, ಈ ಬ್ರೇಸ್ ಲೆಟ್ ನನಗೆ ಮತ್ತೆ ಈ ನವರತ್ನದ ಉಂಗುರ …ಅಣ್ಣನಿಗೆ ಅಲ್ವಾ ಮಮ್ಮಿ ಎಂದಾಗ ಉಮಾ ನಿಟ್ಟುಸಿರುಬಿಟ್ಟರು.

ಬದುಕಿನಲ್ಲಿ ಬಂದ ಸುನಾಮಿ

ಜಯಶ್ರೀ ಸಂಭ್ರಮದಿಂದ ಮಗ ಕಿರಣ್ ನ ಜಾತಕ ಹಿಡಿದು ಶಾಸ್ತ್ರಿಗಳ ಬಳಿ ಮಗನ ಮದುವೆಯ ಬಗ್ಗೆ ಕೇಳಬೇಕೆಂದು ಹೊರಟಿದ್ದರು. ಕಿರಣ್ ಅದಾಗಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು ಅವಳನ್ನೇ ಮುದುವೆಯಾಗಬೇಕೆಂದು ಆಸೆ ಪಟ್ಟಾಗ ಜಯಶ್ರೀಯೂ ಒಪ್ಪಿಗೆ ಕೊಟ್ಟರೂ ಅವರಿಬ್ಬರು ಮದುವೆಯಾದರೆ ಸುಖವಾಗಿರುತ್ತಾರೆಯೇ, ಅವರಿಬ್ಬರ ಜಾತಕ ಹೊಂದಿಕೊಳ್ಳುತ್ತದೆಯೇ ಎಂದು ತಿಳಿದುಕೊಳ್ಳಲು ಶಾಸ್ತ್ರಿಗಳಲ್ಲಿ ಆ ಬಗ್ಗೆ ಕೇಳಿದಾಗ ಅವರು ಅವನ ಜಾತಕವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಂತೆ ಅವರ ಮುಖ ಗಂಭೀರವಾಯಿತು. ಅದನ್ನು ನೋಡಿ ಜಯಶ್ರೀ ಕಳವಳಗೊಂಡು, “ಏನು ಹೇಳಿ ಸ್ವಾಮಿಗಳೇ, ಅವನ ಭವಿಷ್ಯ ಒಳ್ಳೆಯದಿದೆ ತಾನೇ” ಎಂದು ಕೇಳಿದರು. ಶಾಸ್ತ್ರಿಗಳು ಒಂದು ಕ್ಷಣ ಮೌನವಾಗಿದ್ದು ನಂತರ ಗಂಭೀರವಾಗಿ, “ನೋಡಮ್ಮಾ, ಮದುವೆಯ ವಿಷ್ಯ ಸಧ್ಯಕ್ಕೆ ಬೇಡ, ಅವನಿಗೆ ಸಧ್ಯದಲ್ಲೇ ದೊಡ್ಡ ಗಂಡಾಂತರ ಕಾದಿದೆ, ಇನ್ನು ಸ್ವಲ್ಪ ದಿನಗಳಲ್ಲಿ ನಿಮ್ಮ ಮಗನಿಗೆ ಅಪಘಾತವಾಗಿ ಅವನು ನಿಮ್ಮಿಂದ ದೂರವಾಗುತ್ತಾನೆ” ಎಂದಾಗ ಜಯಶ್ರೀ ಗೆ ಆಕಾಶವೇ ಕಳಚಿ ಬಿದ್ದಂತಾಯಿತು. ತನ್ನ ಮಗನಿಗೆ ಅಪಘಾತವೇ, ಅವನು ತನ್ನಿಂದ ದೂರವಾಗುತ್ತಿದ್ದಾನೆಯೇ, ಅದರ ಅರ್ಥವೇನು ಅವನು ಬದುಕುವುದಿಲ್ಲವೇ ಎಂದು ಕಳವಳದಿಂದ ಅವರನ್ನು ಕೇಳಿದಾಗ ಶಾಸ್ತ್ರಿಗಳು, ಅವನ ಜೀವಕ್ಕೆ ಅಪಾಯವಿಲ್ಲ ಆದರೆ ಅವನು ನಿಮ್ಮಿಂದ ಮಾತ್ರ ದೂರವಾಗುವುದು ಖಂಡಿತ ಎಂದಾಗ ಜಯಶ್ರೀ ಗೆ ಕಣ್ಣಿಗೆ ಕತ್ತಲು ಕವಿದಂತಾಯಿತು. ಅವರಲ್ಲಿ, ಇದಕ್ಕೇನಾದರೂ ಪರಿಹಾರವಿದೆಯೇ ಎಂದು ಕೇಳಿದಾಗ ಶಾಸ್ತ್ರಿಗಳು “ಸಾಧ್ಯವಾದಷ್ಟು ಅವನಿಗೆ ಬೈಕ್ ,ಕಾರು ಇತ್ಯಾದಿಗಳನ್ನೆಲ್ಲ ಚಾಲನೆ ಮಾಡಲು ಬಿಡಬೇಡಿ. ನಾಗಬನಕ್ಕೆ ಮಂಗಳವಾರ ಮತ್ತು ಶನಿವಾರ ಸುತ್ತು ಬರಲಿ ಗಣಪತಿಗೆ ದಿನವೂ ಗರಿಕೆ ಇಟ್ಟು ಪೂಜೆ ಮಾಡಿದರೆ ತೀವ್ರತೆ ಸ್ವಲ್ಪವಾದರೂ ಕಡಿಮೆಯಾಗಬಹುದು” ಎಂದರು. ಎರಡು ವರುಷಗಳ ಹಿಂದೆ ತನ್ನ ಗಂಡ ತೀರಿಕೊಂಡ ಮೇಲೆ ಕಿರಣ್ ಮಾತ್ರ ಜಯಶ್ರೀಗೆ ಆಧಾರವಾಗಿದ್ದ. ಒಬ್ಬನೇ ಮಗನಾಗಿದ್ದರಿಂದ ಮೊದಲಿನಿಂದಲೂ ಮುದ್ದಾಗಿ ಬೆಳೆಸಿದ್ದರು. ಅವನಿಗೂ ಅಪ್ಪನಿಗಿಂತ ಆಮ್ಮನೆಂದರೆ ಅಚ್ಚುಮೆಚ್ಚು. ಅವಳಿಂದ ಏನನ್ನೂ ಮುಚ್ಚಿಡುತ್ತಿರಲಿಲ್ಲ. ತನ್ನ ಕಷ್ಟ ಸುಖ ಎಲ್ಲವನ್ನು ಅಮ್ಮನ ಬಳಿ ಹೇಳಿಕೊಂಡರೇನೇ ಅವನಿಗೆ ಸಮಾಧಾನ. ಆದರೆ ಅವನು ದೇವರು, ಜಾತಕ ಇದನ್ನೆಲ್ಲಾ ನಂಬುತ್ತಲೇ ಇರಲಿಲ್ಲ. ಮಗನಿಗೆ ಇದನ್ನೆಲ್ಲಾ ಹೇಗೆ ಹೇಳುವುದು, ಹೇಳಿದರೂ ಅವನು ಇದನ್ನೆಲ್ಲಾ ಮಾಡುತ್ತಾನೆಯೇ ಎಂದು ಯೋಚಿಸುತ್ತ ಮನೆಗೆ ಬಂದರು.

ಕಿರಣ್ ಆಗ ತಾನೇ ಬೈಕ್ ನಲ್ಲಿ ಎಲ್ಲಿಗೋ ಹೊರಟಿದ್ದವ ಅಮ್ಮನ ಕಳಾಹೀನ ಮುಖ ಕಂಡು ಗಾಬರಿಯಾಗಿ ಏನಾಯಿತಮ್ಮ ಎಂದು ವಿಚಾರಿಸಿದ. ಜಯಶ್ರೀ ಅವನನ್ನು ಮನೆ ಒಳಗೆ ಬರುವಂತೆ ತಿಳಿಸಿ ಶಾಸ್ತ್ರಿಗಳು ಹೇಳಿದ ಮಾತನ್ನು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತು. ತಾಯಿಯ ಕಣ್ಣಲ್ಲಿ ನೀರು ಕಂಡು ಕಿರಣ್ ಒಂದು ಕ್ಷಣ ವಿಚಲಿತನಾಗಿ “ಅಮ್ಮ, ಯಾಕೆ ನೀನು ಶಾಸ್ತ್ರಿಗಳ ಬಳಿ ಹೋಗುತ್ತಿ, ಇಪ್ಪತ್ತೊಂದನೆಯ ಶತಮಾನದಲ್ಲಿದ್ದು ಇನ್ನು ಹಳೆಯ ಕಾಲದವರಂತೆ ಜಾತಕ,ಭವಿಷ್ಯ ಎಂದೆಲ್ಲ ಯಾಕಮ್ಮ ಕೇಳಲು ಹೋಗುತ್ತಿ,, ಅವರಿಗೆ ಜೀವನ ನಡೆಸಲು ದುಡ್ಡು ಬೇಕಾಗುತ್ತೆ ಅದಕ್ಕೆ ಅವರು ನಿಮಗೆಲ್ಲ ಏನೇನೋ ಹೇಳಿ ಹೆದರಿಸಿ ಆ ಪರಿಹಾರ ಈ ಪೂಜೆ ಅಂತೆಲ್ಲ ನೆಪ ಹೇಳಿ ನಿಮ್ಮಿಂದ ದುಡ್ಡು ಕಿತ್ಕೊಂಡು ಬಿಡ್ತಾರೆ. ನೀವು ಅದನ್ನೆಲ್ಲ ನಂಬಿ ದುಡ್ಡು ಸುರಿತೀರಿ. ಆದ್ರೆ ಅಮ್ಮ, ನನ್ನ ವಿಚಾರದಲ್ಲಿ ಅವರು ನನಗೆ ಏನೇ ಹೇಳಿದರೂ ನಾನು ಅದನ್ನು ಮಾಡಲ್ಲ, ಆದ್ರೆ ನಿನಗೋಸ್ಕರ ಬೈಕ್ ಕಾರಿನಲ್ಲಿ ಹೋಗಲ್ಲ ಆಷ್ಟೇ ನಂಗೆ ಮಾಡೋಕಾಗೋದು” ಎಂದು ಧ್ರಡವಾಗಿ ಹೇಳಿ ಬಿಟ್ಟ. ಜಯಶ್ರೀ ಗೆ ಇದರಿಂದ ತೀರಾ ನಿರಾಶೆಯಾದರೂ ಮಗ ಅಷ್ಟಾದರೂ ಹೇಳಿದನಲ್ಲ ಎಂದು ಸ್ವಲ್ಪ ಸಮಾಧಾನ ಪಟ್ಟರು. ಅವನು ಪರಿಹಾರ ಕಾರ್ಯ ಮಾಡದೆ ಹೋದರೆ ಏನೆಲ್ಲಾ ಆಗುತ್ತದೋ ಏನೋ, ಅವನನ್ನು ಒಪ್ಪಿಸುವುದ ಬಹಳ ಕಷ್ಟ ಅವನು ಬೈಕ್, ಕಾರು ಉಪಯೋಗಿಸಲ್ಲ ಅಂತ ಹೇಳಿದ್ದೇ ಹೆಚ್ಚು, ಅದರ ಬದಲು ತಾನೇ ಆ ಪರಿಹಾರ ಕಾರ್ಯಗಳನ್ನು ಮಾಡಿದರೆ ಸ್ವಲ್ಪವಾದರೂ ಕಡಿಮೆಯಾಗಬಹುದು ಎಂದುಕೊಂಡು ಜಯಶ್ರೀ ಶಾಸ್ತ್ರಿಗಳು ಹೇಳಿದಂತೆ ನಡೆಯತೊಡಗಿದರು. ಜೊತೆಗೆ ದೇವರಿಗೆ ಹಲವಾರು ಹರಕೆಗಳನ್ನೂ ಹೊತ್ತು ಮಗನನ್ನು ಕಾಪಾಡು ಎಂದು ಬೇಡಿಕೊಂಡರು.

ಕಿರಣ್ ಅಮ್ಮನಿಗೆ ಮಾತುಕೊಟ್ಟಂತೆ ತನ್ನ ಬೈಕ್, ಕಾರು ಉಪಯೋಗಿಸದೆ ಬಸ್ಸಿನಲ್ಲೇ ಕೆಲಸಕ್ಕೆ ಹೋಗಿ ಬರತೊಡಗಿದ. ಒಂದು ದಿನ ಇದ್ದಕ್ಕಿದ್ದಂತೆ ಬಸ್ ಮುಷ್ಕರ ಶುರುವಾದಾಗ ಮನೆ ಹೇಗೆ ತಲುಪುವುದು ಎಂದು ಯೋಚನೆ ಮಾಡುತ್ತಿದ್ದಂತೆ ಅವನ ಗೆಳೆಯ ತನ್ನ ಜೊತೆ ಬೈಕಿನಲ್ಲಿ ಬರುವಂತೆ ಕೇಳಿದಾಗ ಕಿರಣ್ ಒಪ್ಪಿ ಅವನ ಜೊತೆ ಬೈಕ್ ನಲ್ಲಿ ಹೊರಟ. ಗೆಳೆಯನ ಜೊತೆ ಹರಟುತ್ತ ಆರಾಮಾವಾಗಿ ಹೋಗುತ್ತಿರುವಾಗ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಇವರ ಬೈಕ್ ಗೆ ಗುದ್ದಿ ಬಿಟ್ಟು ಪರಾರಿಯಾಗಿ ಬಿಟ್ಟಿತು. ಕಿರಣ್ ಹಾಗೂ ಅವನ ಗೆಳೆಯ ರಕ್ತದ ಮಡುವಿನಲ್ಲಿ ಬಿದ್ದರು. ತಕ್ಷಣ ಜನರೆಲ್ಲಾ ಒಟ್ಟಾಗಿ ಆಂಬುಲೆನ್ಸ್ ಗೆ ಕರೆ ಮಾಡಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಕಿರಣ್ ನ ಗೆಳೆಯ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ. ಕಿರಣ್ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡಿದ್ದ. ಆಸ್ಪತ್ರೆಯಿಂದ ಫೋನ್ ಬಂದಾಗ ಜಯಶ್ರೀಗೆ ಎದೆ ಒಡೆದುಹೋಯಿತು. ಯಾವುದನ್ನು ಆಗಬಾರದು ಎಂದು ಹಗಲು ರಾತ್ರಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಳೋ ಅದೇ ನಡೆದು ಹೋಯಿತಲ್ಲ, ಶಾಸ್ತ್ರಿಗಳ ಮಾತು ಸತ್ಯವಾಯಿತೇ ಎಂದು ಕಳವಳಗೊಂಡರು. ಉಟ್ಟ ಬಟ್ಟೆಯಲ್ಲಿ ಆಸ್ಪತ್ರೆಗೆ ಧಾವಿಸಿ ನೋಡಿದಾಗ ಕಿರಣ್ ಪ್ರಜ್ಞೆಯಿಲ್ಲದೆ ಮಲಗಿಬಿಟ್ಟಿದ್ದ. ಅವನ ತಲೆಗೆ, ಬಲ ಕೈಗೆ ಬ್ಯಾಂಡೇಜ್ ಕಟ್ಟಿದ್ದರು. ಅಂಥಾ ಪರಿಸ್ಥಿತಿಯಲ್ಲಿದ್ದ ಮಗನನ್ನು ಕಂಡು ಜಯಶ್ರೀ ಗೆ ದುಃಖ ತಡೆಯಲಾಗದೆ ಜಯಶ್ರೀ ಬಿಕ್ಕಿ ಬಿಕ್ಕಿ ಅತ್ತರು. ಅಲ್ಲಿದ್ದ ಡಾಕ್ಟರ್ ಹಾಗೂ ನರ್ಸ್ ಗಳು ಅವರಿಗೆ ಸಮಾಧಾನ ಮಾಡುತ್ತಾ ಅವನ ಜೊತೆಯಲ್ಲಿದ್ದ ಬೈಕ್ ಸವಾರ ಸಾವನ್ನಪ್ಪಿದ್ದ ವಿಷಯ ಹೇಳಿದಾಗ ಜಯಶ್ರೀ ಗೆ ಆಘಾತವಾದರೂ ತಮ್ಮ ಮಗನ ಪ್ರಾಣವಾದರೂ ಉಳಿಯಿತಲ್ಲ ಎಂದು ಸಮಾಧಾನವಾಯಿತು. ಆದರೆ ಅಷ್ಟರಲ್ಲಿ ಡಾಕ್ಟರ್ ಅವನಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿರುವುದರಿಂದ ಅವನಿಗೆ ಇನ್ನು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರಜ್ಞೆ ಬರದಿದ್ದರೆ ಅವನು ಕೋಮಾಕ್ಕೆ ಹೋಗುವ ಸಾಧ್ಯತೆ ಇದೆ ಎಂದಾಗ ಜಯಶ್ರೀ ಗೆ ದಿಕ್ಕೇ ತೋಚದಾಯಿತು. ದೇವರೇ ತನಗೇಕೆ ಇಂತಹ ಕಷ್ಟಗಳನ್ನು ಕೊಡುತ್ತಿ , ಮೊದಲು ನನ್ನ ಗಂಡನನ್ನು ನನ್ನಿಂದ ಕಿತ್ತುಕೊಂಡೆ, ಈಗ ಮಗನ ಮೇಲೂ ಕಣ್ಣು ಹಾಕಿದೆಯಾ ಅದರ ಬದಲು ನನಗೇ ಏನಾದರೂ ಮಾಡಿಬಿಡಬಹುದಿತ್ತಲ್ಲ, ಮಗನ ಬದುಕು ಇನ್ನು ಶುರುವಾಗಬೇಕಷ್ಟೇ, ನನ್ನಿಂದ ಮಗನನ್ನು ಕಿತ್ತುಕೊಳ್ಳ ಬೇಡ ದೇವರೇ ಎಂದು ಗೋಳಾಡಿದರು. ಇದನ್ನೆಲ್ಲಾ ಹೇಗೆ ಸಹಿಸಲಿ, ನನ್ನವರು ಅಂತ ನನಗ್ಯಾರೂ ಇಲ್ಲ ಎಂದುಕೊಳ್ಳುತ್ತಿದ್ದಂತೆ ಕಿರಣ್ ನ ಗೆಳತಿ ಶಶಿರೇಖಾಳ ನೆನಪಾಗಿ ಅವಳಿಗೆ ಫೋನ್ ಮಾಡಿ ಅಳುತ್ತ ಕಿರಣ್ ಆಸ್ಪತ್ರೆಯಲ್ಲಿರುವ ವಿಷಯ ಹೇಳಿದಳು.

ಸುದ್ದಿ ತಿಳಿಯುತ್ತಲೇ ಶಶಿ ರೇಖಾ ಆಸ್ಪತ್ರೆಗೆ ಧಾವಿಸಿದಳು. ಕಿರಣ್ ಪರಿಸ್ಥಿತಿ ನೋಡಿ ಅವಳಿಗೂ ದುಃಖ ಒತ್ತಿಕೊಂಡು ಬಂದಿತು. ಇನ್ನು ಸ್ವಲ್ಪ ದಿನಗಳಲ್ಲೇ ತಾವಿಬ್ಬರೂ ಮದುವೆಯಾಗಬೇಕು ಎಂದುಕೊಂಡಿದ್ದಾಗ ಇದೇನಾಗಿ ಹೋಯಿತು ಎಂದು ಬಿಕ್ಕಿ ಬಿಕ್ಕಿ ಅತ್ತಳು. ಜಯಶ್ರೀ ಅವಳಿಗೆ ಸಮಾಧಾನ ಮಾಡಲು ಯತ್ನಿಸಿದರು. ಅವತ್ತಿನ ದಿನವೆಲ್ಲ ಇಬ್ಬರೂ ಆತಂಕದಿಂದಲೇ ಕಳೆದರು. ಮರುದಿನವೂ ಅವನಿಗೆ ಪ್ರಜ್ಞೆ ಮರಳದೆ ಡಾಕ್ಟರ್ ಅವನು ಕೋಮಾ ಗೆ ಹೋಗಿರುವ ವಿಷಯತಿಳಿಸಿ ಯಾವಾಗ ಕೋಮಾದಿಂದ ಹೊರಬರುತ್ತಾನೆಂದು ನಿಖರವಾಗಿ ಹೇಳಲಾಗದು ಎಂದಾಗ ಜಯಶ್ರೀ ಗೆ ಕಣ್ಣು ಕತ್ತಲೆ ಬಂದಂತಾಗಿ ಅಲ್ಲೇ ಕುಸಿದರು. ದಿನವೂ ಶಶಿರೇಖಾ ಹಾಗೂ ಜಯಶ್ರೀ ಸರದಿಯಂತೆ ಕಿರಣ್ ಬಳಿಬಂದು ಕುಳಿತುಕೊಂಡು ಅವನಿಗೆ ಪ್ರಜ್ಞೆ ಬರುವುದೋ ಎಂದು ಕಾಯುತ್ತಿದ್ದರು. ಜಯಶ್ರೀ ಗೆ ಶಾಸ್ತ್ರಿಗಳು ಮಗ ತಮ್ಮಿಂದ ದೂರವಾಗುತ್ತಾನೆ ಎಂದು ಹೇಳಿದ್ದು ನೆನಪಾಗಿ ಅವರು ಇದಕ್ಕೇ ಹೇಳಿರಬಹುದೇ ಎಂದು ಅಂದುಕೊಂಡರು. ಮಗ ಬೇಗ ಕೋಮಾದಿಂದ ಹೊರಬರಲಿ ಎಂದು ದಿನವೂ ದೇವರನ್ನು ಪ್ರಾರ್ಥಿಸಿಕೊಳ್ಳ ತೊಡಗಿದರು. ದಿನವೂ ಆಸ್ಪತ್ರೆ ದೇವಸ್ಥಾನ ಆ ಪೂಜೆ ಈ ಪೂಜೆ ಎಂದು ಸರಿಯಾಗಿ ಊಟ ತಿಂಡಿ ಮಾಡಲೂ ಆಗದೇ ಜಯಶ್ರೀ ಸೊರಗಿದರು.

ದಿನಗಳು ಉರುಳಿ ತಿಂಗಳುಗಳಾದರೂ ಕಿರಣ್ ನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ನಂತರ ಸುಮಾರು ಮೂರು ತಿಂಗಳ ನಂತರ ಜಯಶ್ರೀ ಆಸ್ಪತ್ರೆಗೆ ಬಂದು ಎಂದಿನಂತೆ ಅವನ ಕೈ ಹಿಡಿದುಕೊಂಡು ಬೇಗ ಎಚ್ಚರಗೊಳ್ಳು ಪುಟ್ಟಾ, ಈ ಮುದೀ ಜೀವವನ್ನು ಇನ್ನೆಷ್ಟು ಸತಾಯಿಸ್ತಿಯ ನಿನ್ನ ಅಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ನಿನಗೋಸ್ಕರ ಬದುಕಿದ್ದಾಳೆ ಕಣೋ, ಬೇಗ ಕಣ್ತೆರೆದು ನೋಡಪ್ಪಾ ಎಂದು ಗೋಳಾಡಿದಾಗ ಅವನ ಕೈ ಬೆರಳುಗಳಲ್ಲಿ ಚಲನೆ ಕಂಡಂತಾಗಿ ಜಯಶ್ರೀ ಸಂಭ್ರಮದಿಂದ ಮತ್ತೆ ಮತ್ತೆ ಕಿರಣ್ ಒಮ್ಮೆ ಕಣ್ಣು ಬಿಟ್ಟು ನೋಡಪ್ಪ ಎಂದು ಹೇಳಿದಾಗ ಕಿರಣ್ ನಲ್ಲಿ ಮತ್ತೆ ಚಲನೆ ಕಂಡು ಜಯಶ್ರೀ ಉತ್ಸಾಹದಿಂದ ಓಡಿ ಹೋಗಿ ಡಾಕ್ಟರನ್ನು ಕರೆದುಕೊಂಡು ಬಂದರು. ಡಾಕ್ಟರ್ ಕಿರಣ್ ನ್ನು ಪರೀಕ್ಷಿಸುತ್ತಿರುವಾಗ ಕಿರಣ್ ಮೆಲ್ಲನೆ ಕಣ್ಣು ತೆರೆದ. ಜಯಶ್ರೀ ಸಂಭ್ರಮದಿಂದ ಅವನತ್ತ ಧಾವಿಸಿ, ಹೇಗಿದ್ದೆಯಾ ಮಗು ಎಂದು ಕೇಳಿದಾಗ ಕಿರಣ್ ಜಯಶ್ರೀಯನ್ನು ಕಂಡು ಅಪರಿಚಿತರನ್ನು ನೋಡುವವರಂತೆ ನೋಡುತ್ತಾ, ಯಾರು ನೀವು ಇಲ್ಲಿಗೇಕೆ ಬಂದಿದ್ದೀರಿ, ನಾನೆಲ್ಲಿದ್ದೇನೆ ಎಂದು ಕೇಳಿದಾಗ ಜಯಶ್ರೀ ಕೊಂಚ ಗಲಿಬಿಲಿ ಗೊಂಡರು. ಡಾಕ್ಟರ್ ಕೂಡ ಅವನತ್ತ ಅಚ್ಚರಿಯಿಂದ ನೋಡಿದರು. ನಂತರ ಜಯಶ್ರೀ ಸಾವರಿಸಿಕೊಂಡು ತಾನು ತೀರಾ ಸೊರಗಿರುವುದರಿಂದ ಅವನಿಗೆ ಪರಿಚಯವಾಗಿಲ್ಲವೇನೋ ಎಂದುಕೊಳ್ಳುತ್ತ “ಏನಪ್ಪಾ ಅಷ್ಟು ಬೇಗ ಅಮ್ಮನನ್ನು ಮರೆತು ಬಿಟ್ಯಾ, ನಿನ್ನ ಯೋಚನೆಯಲ್ಲಿ ಸ್ವಲ್ಪ ಸಣ್ಣಗಾಗಿದ್ದೀನಿ ಅಷ್ಟೇ ನೀನು ಇಂಥ ಸಮಯದಲ್ಲಿ ತಮಾಷೆ ಮಾಡಬೇಡ” ಎಂದಾಗ ಕಿರಣ್ “ನೋಡಿ ಮೇಡಂ ನೀವು ನನ್ನ ಅಮ್ಮನ ಬಟ್ಟೆ ಹಾಕಿಕೊಂಡು ಅವರ ಹಾಗೇ ಇರಲು ನೋಡಿದಾಕ್ಷಣ ನೀವು ನನ್ನ ಅಮ್ಮ ಆಗುವುದಿಲ್ಲ, ನನ್ನ ಅಮ್ಮನನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಮೊದಲು ಹೇಳಿ” ಎನ್ನುತ್ತಾ ಧಡಕ್ಕನೆದ್ದು ಕುಳಿತ. ಅವನ ಈ ವಿಚಿತ್ರ ವರ್ತನೆಯಿಂದ ಘಾಸಿಗೊಂಡ ಜಯಶ್ರೀ ಯಾಕೆ ಅವನು ಹಾಗೇ ಹೇಳುತ್ತಿದ್ದಾನೆ ತಾಯಿಯಾದ ತನ್ನನ್ನು ಯಾಕೆ ಗುರುತಿಸುತ್ತಿಲ್ಲವೆಂದು ಕಳವಳದಿಂದ ಡಾಕ್ಟರ್ ಬಳಿ ಕೇಳಿದಾಗ ಅವರು ಅವನು ಈಗಷ್ಟೇ ಕೋಮಾದಿಂದ ಹೊರಬಂದಿದ್ದಾನೆ ಚೇತರಿಸಿಕೊಳ್ಳಲು ಅವನಿಗೆ ಸ್ವಲ್ಪ ಸಮಯ ಕೊಡಿ ಎಂದರು.

ಮಾರನೆಯ ದಿನವೂ ಕಿರಣ್ ಜಯಶ್ರೀಯನ್ನು ಗುರುತಿಸದೇ ಇದ್ದಾಗ ಡಾಕ್ಟರ್ ಸ್ವಲ್ಪ ಹೊತ್ತು ಯೋಚಿಸಿ ನಂತರ ಜಯಶ್ರೀಗೆ ರೂಮಿನ ಹೊರಗೆ ನಿಂತೇ ಕಿರಣ್ ಗೆ ಕರೆ ಮಾಡುವಂತೆ ಹೇಳಿ ಅವರು ಮಾತ್ರ ಕಿರಣ್ ಬಳಿ ಹೋಗಿ ನಿಂತರು. ಕಿರಣ್ ಡಾಕ್ಟರನ್ನು ತನ್ನ ತಾಯಿ ಎಲ್ಲಿ ಅವರ ಜೊತೆ ಮಾತನಾಡಬೇಕು ಅವರನ್ನು ನೋಡಬೇಕು ಎಂದು ಹೇಳುತ್ತಿದ್ದಂತೆ ಕಿರಣ್ ಬಳಿಯಿದ್ದ ಫೋನ್ ರಿಂಗಣಿಸಿತು. ಕಿರಣ್ ತಕ್ಷಣ ಫೋನ್ ಎತ್ತಿದಾಗ ಅತ್ತಲಿಂದ ಅಮ್ಮನ ಸ್ವರ ಕೇಳಿ ಸಂತೋಷಗೊಂಡು “ಅಮ್ಮ ಎಲ್ಲಿದ್ದಿ ನೀನು, ನನ್ನನ್ನು ನೋಡಲು ಯಾಕೆ ಬಂದಿಲ್ಲ” ಎಂದು ಕೇಳಿದಾಗ ಜಯಶ್ರೀಗೆ  ಅಬ್ಬಾ! ಮಗ ತನ್ನ ಸ್ವರ ಗುರುತಿಸಿದನಲ್ಲ ಎಂದು ನಿರಾಳವಾಗಿ ತಾನು ಈಗಲೇ ಬರುತ್ತೇನೆ ಎಂದು ಹೇಳುತ್ತಲೇ ಸಂಭ್ರಮದಿಂದ ಒಳಗೆ ಬಂದರು. ಕಿರಣ್ ಜಯಶ್ರೀಯನ್ನು ನೋಡಿ, ನೀವು ಮತ್ತೆ ಯಾಕೆ ಬಂದಿರಿ, ಯಾರು ನೀವು, ನನ್ನ ಅಮ್ಮನ ಬಟ್ಟೆ ಯಾಕೆ ಹಾಕಿಕೊಂಡಿದ್ದೀರಿ, ನನ್ನ ಅಮ್ಮ ಎಲ್ಲಿ ? ನಾನು ಈಗಲೇ ಅವರನ್ನು ನೋಡಬೇಕು ಎಂದಾಗ ಜಯಶ್ರೀಗೆ ಆಘಾತವಾಯಿತು. ಮಗ ತನ್ನ ಸ್ವರ ಗುರುತಿಸಿದರೂ ತನ್ನನ್ನು ಯಾಕೆ ಗುರುತಿಸ್ಸುತ್ತಿಲ್ಲ ಎಂದು ಆತಂಕ ಪಟ್ಟರು. ಅವರಿಗೆ ದುಃಖ ತಡೆಯಲಾಗದೆ ಶಶಿರೇಖಾ ಳಿಗೆ ಕಿರಣ್ ಗೆ ಪ್ರಜ್ಞೆ ಬಂದಿರುವ ವಿಷಯ ತಿಳಿಸಿ ಅವಳನ್ನಾದರೂ ಮಗ ಗುರುತಿಸಬಹುದು ಎಂದುಕೊಂಡರು. ಶಶಿರೇಖಾ ಬಂದಾಗ  ಕಿರಣ್ ಅಚ್ಚರಿಯಿಂದ ನೋಡುತ್ತಾ, ನಿಮ್ಮನ್ನೆಲ್ಲೋ ನೋಡಿದ ಹಾಗಿದೆ, ಎನ್ನುತ್ತಾ ಸ್ವಲ್ಪಹೊತ್ತು ಸುಮ್ಮನಿದ್ದು “ಹಾಂ , ನೋಡಲು ಶಶಿ ರೇಖಾಳಂತೆ ಕಾಣುತ್ತಿದ್ದೀರಿ, ಆದರೆ ನೀವು ಮಾತ್ರ ಅವಳಲ್ಲ, ಎಲ್ಲಿ ನನ್ನ ಶಶಿ? ಯಾಕೆ ಅವಳು ನನ್ನನ್ನು ನೋಡಲು ಬರಲಿಲ್ಲ ? ನೀವೆಲ್ಲ ಯಾರು, ನನ್ನ ತಾಯಿ ಮತ್ತು ಶಶಿಯನ್ನು ಎಲ್ಲಿ ಬಚ್ಚಿಟ್ಟಿದ್ದೀರಿ” ಎಂದು ಸವನೆ ಉದ್ವೇಗಗೊಂಡು ಕೇಳಿದಾಗ ಶಶಿರೇಖಾ ದಿಗ್ಭ್ರಾಂತ ಳಾದಳು. ಅವಳು ಅಳುತ್ತ ಜಯಶ್ರೀಯನ್ನು ಅಪ್ಪಿಕೊಂಡು “ಆಂಟಿ, ನಿಮ್ಮ ಮಗ ಏನೇನೋ ಮಾತಾಡ್ತಿದ್ದಾರೆ ಏನಾಗಿದೆ ಅವರಿಗೆ, ಮೂರು ತಿಂಗಳಿನಿಂದ ನಾವು ದಿನವೂ ಅವರಿಗಾಗಿ ಒದ್ದಾಡುತ್ತಿದ್ದರೆ ಅವರು ಮಾತ್ರ ನಾವು ಯಾರೋ ಮೋಸಗಾರರು ಅನ್ನುವ ಥರ ಮಾತನಾಡುತ್ತಾರಲ್ಲ” ಎಂದು ಕೇಳಿದಾಗ ಜಯಶ್ರೀ ಗೆ ಕರುಳು ಚುರುಕ್ಕೆಂದಿತು.

ಜಯಶ್ರೀ, ಅವನಿಗೆ ಕಣ್ಣಿನಲ್ಲಿ ಏನಾದರೂ ತೊಂದರೆಯಾಗಿ ಹೀಗಾಗುತ್ತಿದೆಯೇ ಎಂದು ಡಾಕ್ಟರನ್ನು ಕೇಳಿದಾಗ ಅವರು ಜಯಶ್ರೀಯನ್ನು ಹೊರಗೆ ಕರೆದುಕೊಂಡು ಹೋಗಿ, ನಿಮ್ಮ ಮಗನಿಗೆ ತಲೆಗೆ ತೀವ್ರ ಪೆಟ್ಟಾಗಿದ್ದುದರಿಂದ ಈ ಸಮಸ್ಯೆ ಉಂಟಾಗಿದೆ. ನಮ್ಮ ಮೆದುಳಿನಲ್ಲಿ ನಾವು ಕಣ್ಣಿನಿಂದ ನೋಡುವ ವ್ಯಕ್ತಿಗೂ ಅವರ ಬಗ್ಗೆ ಇರುವ ನಮ್ಮ ಭಾವನೆಗಳಿಗೂ ಜೋಡಣೆಯಾದಾಗಲೇ ನಮಗೆ ಅವರನ್ನು ಗುರುತಿಸಲು ಸಾಧ್ಯವಾಗುವುದು. ಕಿರಣ್ ಗೆ ಅಪಘಾತದ ಸಂದರ್ಭದಲ್ಲಿ ತಲೆಗೆ ಜೋರಾಗೇ ಏಟು ಬಿದ್ದಿದ್ದರಿಂದ ಆ ಜೋಡಣೆಯಲ್ಲಿ ಹಾನಿಯಾಗಿ ನೋಡುತ್ತಿರುವ ವ್ಯಕ್ತಿಗೂ ಅವನಲ್ಲಿ ಮೂಡುವ ಭಾವನೆಗಳಿಗೂ ಹೊಂದಾಣಿಕೆಯಾಗದೆ ಈ ರೀತಿಯಾಗುತ್ತದೆ. ಇದಕ್ಕೆ ಕಾಪ್ ಗ್ರಾಸ್ ಡಿಲ್ಯೂಶನ್ ಎಂದು ವೈಜ್ಞಾನಿಕ ಹೆಸರು. ಈಗಲೇ ಚಿಕಿತ್ಸೆ ಮಾಡಿದರೆ ಇದನ್ನು ವಾಸಿ ಮಾಡಲು ಸಾಧ್ಯ. ಇಲ್ಲದಿದ್ದರೆ ಕ್ರಮೇಣ ಅವನು ನೋಡುತ್ತಿರುವ ಪ್ರತಿಯೊಬ್ಬರನ್ನು ಅವರು ಗುರುತಿಸಲಿಕ್ಕಿಲ್ಲ ಕೊನೆಗೆ ಸ್ವತಹ ತಾನು ಜೀವಂತವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಹೋಗಬಹುದು ಎಂದಾಗ ಜಯಶ್ರೀ ಕಳವಳಗೊಂಡು “ಇಲ್ಲ ಡಾಕ್ಟರ್, ಖರ್ಚಿನ ಬಗ್ಗೆ ಯೋಚಿಸಬೇಡಿ, ಮೊದಲು ಅವನಿಗೆ ಅಗತ್ಯವಾದ ಚಿಕಿತ್ಸೆ ಕೊಡಿ, ನನ್ನ ಮಗನನ್ನು ಬೇಗ ಮೊದಲಿನಂತೆ ಮಾಡಿ. ನನ್ನ ಮಗನ  ಮದುವೆಯ ಸಿಧ್ಧತೆಯಲ್ಲಿರುವಾಗಲೇ ಹೀಗಾಗಿ ಬಿಟ್ಟಿತು. ಶಶಿರೇಖಾಳನ್ನು ತೋರಿಸುತ್ತ,  ಈ ಮಗು ಅದೆಷ್ಟು ತಾಳ್ಮೆಯಿಂದ ಅವನಿಗೋಸ್ಕರ ಕಾಯುತ್ತಿದೆ, ಬೇರೆ ಯಾರಾದರೂ ಆಗಿದ್ದರೆ ಅವನಿಗೆ ಅಪಘಾತವಾದ ತಕ್ಷಣ ಅವನನ್ನು ಬಿಟ್ಟು ಓಡಿ ಹೋಗುತ್ತಿದ್ದರು. ಇವಳು ದಿನವೂ ಇಲ್ಲಿ ಬಂದು ಅವನ ಆರೈಕೆ ಮಾಡಿ ಕೋಮಾದಿಂದ ಯಾವಾಗ ಹೊರಬರುತ್ತಾನೆ ಎಂದು ಕಾಯುತ್ತ ಕುಳಿತಿದ್ದಾಳೆ, ಆದಷ್ಟೂ ಬೇಗನೆ ಅವನ ಚಿಕಿತ್ಸೆ ಶುರುಮಾಡಿ” ಎಂದರು, ಡಾಕ್ಟರ್ ಅತ್ತ ಹೋದಮೇಲೆ ಜಯಶ್ರೀ ಶಶಿರೇಖಾಗೆ ಫೋನ್ ಕೊಟ್ಟು ಕಿರಣ್ ಜೊತೆ ಫೋನ್ ನಲ್ಲಿ ಮಾತನಾಡು ಎಂದಾಗ ಶಶಿ ನಿರುತ್ಸಾಹದಿಂದಲೇ ಫೋನ್ ಮಾಡಿದಳು. ಅವಳಿಗೆ ಕಿರಣ್ ಅವಳನ್ನು ಗುರುತಿಸದೆ ಹೋಗಿದ್ದು ಬಹಳ ನೋವಾಗಿತ್ತು. ಕಿರಣ್ ,ಹಲೋ ಎನ್ನುತ್ತಿದ್ದಂತೆ ಶಶಿ , ನಾನು ಶಶಿ ಮಾತಾಡ್ತಿರೋದು ಎಂದಾಗ ಕಿರಣ್ ಸಂಭ್ರಮದಿಂದ ಶಶಿ, ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ ಅಂತ ಕಾಣುತ್ತೆ ಅದಕ್ಕೆ ನೀನು ನನ್ನನ್ನು ನೋಡಲು ಬಂದಿಲ್ಲ ನಾನು ನಿನಗೋಸ್ಕರ ಅದೆಷ್ಟುಆಸೆಯಿಂದ ಕಾಯುತ್ತಿದ್ದೇನೆ, ಒಮ್ಮೆ ನನ್ನನ್ನು ನೋಡಲು ಬರುತ್ತೀಯಾ ಎಂದು ಕೇಳಿದಾಗ  ಅವನ ವಿಚಿತ್ರ ವರ್ತನೆ ಕಂಡು ಶಶಿ ಅವಕ್ಕಾದಳು. ನಂತರ ಜಯಶ್ರೀ ಅವಳಿಗೆ ಸಮಾಧಾನ ಮಾಡುತ್ತಾ ಎಲ್ಲವೂ ಸಧ್ಯದಲ್ಲೇ ಸರಿಹೋಗುತ್ತದೆ ಯೋಚನೆ ಮಾಡಬೇಡ, ಅವನು ಹೆತ್ತ ತಾಯಿಯಾದ ನನಗೂ ಹಾಗೇ ಮಾಡಿದ್ದಾನೆ, ದೇವರಿದ್ದಾನೆ ನಮ್ಮನ್ನು ಕಾಯಲು. ಅವನನ್ನು ದಿನವೂ ನೋಡಲು ಬರುತ್ತಿರು ಆಗಲೇ ಅವನಿಗೆ ನಿನ್ನ ಗುರುತು ಬೇಗ ಆಗುತ್ತದೆ ಎಂದು ಸಮಾಧಾನ ಮಾಡಿದರು. ಡಾಕ್ಟರ್ ಕಿರಣ್ ಗೆ ಚಿಕಿತ್ಸೆ ಶುರು ಮಾಡಿದರು. ದಿನವೂ ಜಯಶ್ರೀ ಹಾಗೂ ಶಶಿರೇಖಾ ಪ್ರೀತಿಯಿಂದ ಅವನ ಬಳಿ ಇದ್ದು ಅವನನ್ನು ಮಾತನಾಡಿಸುತ್ತಿದ್ದರು. ಕಿರಣ್ ಮಾತ್ರ ಅವರು ಯಾರೋ ತನಗೆ ಮೋಸ ಮಾಡುತ್ತಿದ್ದಾರೆ ಎಂದೇ ತಿಳಿದು ಅವರೊಂದಿಗೆ ಒರಟಾಗಿ ವರ್ತಿಸುತ್ತಿದ್ದ. ನಂತರದ ದಿನಗಳಲ್ಲಿ ಅವನ ಜೊತೆ ಫೋನ್ ನಲ್ಲಿ ಮಾತನಾಡುತ್ತ ಅವರಿಬ್ಬರೂ ಅವನ ರೂಮಿಗೆ ಬಂದಾಗ ತಾನು ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಹಾಗೂ ತಾನು ನೋಡುತ್ತಿರುವ ವ್ಯಕ್ತಿ ಒಂದೇ ಎಂದು ಅವನಿಗೆ ಅರಿವಾಗತೊಡಗಿತು. ಜೊತೆಗೆ ಡಾಕ್ಟರ್ ಕೊಟ್ಟ ಔಷಧಿ ಕೂಡ ಕೆಲಸ ಮಾಡತೊಡಗಿ ಒಂದು ದಿನ ಕಿರಣ್, ಜಯಶ್ರೀ ಆಸ್ಪತ್ರೆಗೆ ಬಂದೊಡನೆ ಅವರನ್ನು ನೋಡಿ ಅಮ್ಮಾ ಎಂದಾಗ ಜಯಶ್ರೀಗೆ ಅವನು ಮಗುವಿದ್ದಾಗ ಮೊದಲ ಬಾರಿ ಅಮ್ಮಾ ಎಂದಿದ್ದಕ್ಕಿಂತ ನೂರು ಪಟ್ಟು ಸಂತಸವಾಯಿತು.

ಉರುಳಿದ ಆಧಾರಸ್ತಂಭ

ಅಖಿಲಾ ತನ್ನ ಗೆಳತಿ ನಿಶ್ಮಿತಾ ಜೊತೆ ಬೇಗ ಬೇಗನೆ ಹೆಜ್ಜೆಗಳನ್ನು ಹಾಕುತ್ತ ಮನೆಯತ್ತ ಧಾವಿಸುತ್ತಿದ್ದರು. ಅವತ್ತು ಸಂಬಳದ ದಿನವಾದ್ದರಿಂದ ನೋಟುಗಳಿಂದ ತುಂಬಿದ್ದ ಕವರ್ ಅವರ ಬ್ಯಾಗ್ ನಲ್ಲಿ ಬೆಚ್ಚಗೆ ಕುಳಿತಿತ್ತು. ಮುನ್ನಾದಿನವೇ ಅಖಿಲಾಳ ತಂಗಿ ಹಾಗೂ ತಮ್ಮಂದಿರು ತಮಗೆ ಬೇಕಾದ ವಸ್ತುಗಳ ಪಟ್ಟಿಯನ್ನು ಅಖಿಲಾಗೆ ಕೊಟ್ಟಿದ್ದರಿಂದ ಅವಳು ನಿಶ್ಮಿತಾ ಜೊತೆ ಹೋಗಿ ಅವರಿಗೆ ಬೇಕಾದುದೆಲ್ಲವನ್ನು ಕೊಂಡು ಭಾರವಾದ ಬ್ಯಾಗ್ ಗಳೊಂದಿಗೆ ಮನೆಗೆ ಹೊರಡುವಾಗ ರಾತ್ರಿಯಾಗಿತ್ತು. ತನ್ನ ಮೊದಲ ಸಂಬಳದಿಂದ ತಂದ ಸಾಮಾನುಗಳಿದ್ದ ಬ್ಯಾಗ್ ಗಳನ್ನು ನೋಡುವಾಗ ಅಖಿಲಾ ಗೆ ಅದೇನೋ ಹೇಳಲಾಗದ ಸಂಭ್ರಮ. ಜೊತೆಗೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ನೋಟುಗಳು ತುಂಬಿದ ಕವರ್ ಆಗಾಗ ಮುಟ್ಟಿ ನೋಡಿ ಖುಷಿ ಪಡುತ್ತಿದ್ದಳು.

ಅವಳ ಮನೆಯಲ್ಲಿ ದೊಡ್ಡದೊಡ್ಡ ನೋಟುಗಳನ್ನು ಯಾರೂ ಕಂಡಿರಲೇ ಇಲ್ಲ ಅಷ್ಟೊಂದು ಬಡತನ ಅವರನ್ನು ಕಾಡುತ್ತಿತ್ತು. ಜೊತೆಗೆ ದೊಡ್ಡ ಸಂಸಾರ ಬೇರೆ. ಅವಳ ತಂದೆ ಖಾಯಿಲೆಯಿಂದ ಮಲಗಿ ಅದೆಷ್ಟೋ ವರುಷಗಳಾಗಿದ್ದವು. ಅವರಿಗೆ ಔಷಧಿ ತರುವುದೋ ಮಕ್ಕಳ ಹೊಟ್ಟೆ ತುಂಬಿಸುವುದೋ ಎಂದು ಅಖಿಲಾ ತಾಯಿಗೆ ಯಾವಾಗಲೂ ಗೊಂದಲವಾಗುತ್ತಿತ್ತು. ಆಕೆ ಅವರಿವರ ಬಟ್ಟೆಗಳನ್ನು ಹೊಲಿದುಕೊಟ್ಟು ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದಳು. ಗಂಡನಿಗೆ ಔಷಧಿ ಮಾಡದೆ ಪಾಪ ಪ್ರಜ್ಞೆ ಕಾಡಿ ಪಂಡಿತರ ಮದ್ದು ಮಾಡತೊಡಗಿದಳು. ಅಖಿಲಾ ಓದಿನಲ್ಲಿ ಜಾಣೆಯಾಗಿದ್ದರಿಂದ ತಮ್ಮ ತಂಗಿಯರಿಗೂ ಹಾಗೂ ಸುತ್ತ ಮುತ್ತಲಿನ ಮಕ್ಕಳಿಗೆ ಪಾಠ ಹೇಳುತ್ತಾ ತನ್ನ ವಿಧ್ಯಾಭ್ಯಾಸಕ್ಕೆ ಬೇಕಾಗುವ ಖರ್ಚುಗಳನ್ನೆಲ್ಲ ತಾನೇ ನಿಭಾಯಿಸುತ್ತಿದ್ದಳು. ಓದು ಮುಗಿಸಿದ ಅಖಿಲಾಗೆ ಕೈ ತುಂಬಾ ಸಂಬಳ ಬರುವ ಒಳ್ಳೆಯ ನೌಕರಿ ಸಿಕ್ಕಾಗ ಅವಳ ತಾಯಿ ಇನ್ನು ತಮ್ಮ ಕಷ್ಟಗಳೆಲ್ಲ ತೀರಿದವು ಎಂದು ನಿಟ್ಟುಸಿರು ಬಿಟ್ಟಿದ್ದರು.

ಇನ್ನಾದರೂ ತಂದೆಯ ಖಾಯಿಲೆಗೆ ಒಳ್ಳೆಯ ಔಷಧಿ ಮಾಡಬೇಕು ಎಂದು ಅಂದುಕೊಳ್ಳುತ್ತ ಅಖಿಲಾ ತನ್ನ ಹೆಜ್ಜೆಗಳನ್ನು ತೀವ್ರಗೊಳಿಸಿದಳು. ನಿಶ್ಮಿತಾ ಳಿಗೆ ಹಾಗಲ್ಲಅಖಿಲಾಳ ಪರಿಸ್ಥಿತಿಗೆ ತದ್ವಿರುದ್ಧ, ಅವಳು ದುಡಿದು ಮನೆಗೆ ಕೊಡಬೇಕಾಗಿಲ್ಲವಾದ್ದರಿಂದ ಅವಳು ತನಗೆ ಬೇಕಾದ ಬಟ್ಟೆಬರೆ, ಮೇಕಪ್ ಸಾಮಾನುಗಳನ್ನೆಲ್ಲ ಖರೀದಿಸಿದ್ದಳು. ಅವಳ ತಂದೆ ತಾಯಿ ಇಬ್ಬರೂ ಕಾಲೇಜೊಂದರಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದುದರಿಂದ ಕೈ ತುಂಬಾ ಸಂಬಳ ಬರುತ್ತಿತ್ತು ಜೊತೆಗೆ ಒಬ್ಬಳೇ ಮಗಳು. ಅಖಿಲಾ ಹಾಗೂ ನಿಶ್ಮಿತಾ ತಮ್ಮ ತಮ್ಮ ಸಂಭ್ರಮಗಳಲ್ಲಿ ಮುಳುಗಿದ್ದರಿಂದ ಕತ್ತಲಿನ ಜೊತೆ ಅವರ ಮೌನವೂ ಸೇರಿ ಬರಿಯ ಜೀರುಂಡೆಗಳ ಸದ್ದು ಮಾತ್ರ ಕೇಳಿಸುತ್ತಿತ್ತು. ಅಷ್ಟರಲ್ಲಿ ಏನೋ ದೊಡ್ಡ ಸದ್ದಾಯಿತು. ನಿಶ್ಮಿತಾ ಚೀರಿದ್ದು ಕೇಳಿ ಅಖಿಲಾ ತಲೆ ತಗ್ಗಿಸಿ ನಡೆಯುತ್ತಿದ್ದವಳು ಬೆಚ್ಚಿ ಒಮ್ಮೆಲೇ ತಲೆ ಎತ್ತಿದಳು. ಕ್ಷಣ ಕಾಲವಷ್ಟೇ ಆಮೇಲೇನಾಯಿತು ಎಂದು ಅವಳಿಗೆ ಗೊತ್ತಾಗಲಿಲ್ಲ. ಎಚ್ಚರವಾದಾಗ ಎದುರಿಗೆ ಭವ್ಯ ಬಂಗಲೆಯೊಂದು ಕಾಣಿಸುತ್ತಿತ್ತು ಅರೆ, ಈ ಬಂಗಲೆ ನಾನು ಇದುವರೆಗೂ ನೋಡಿರಲಿಲ್ಲವಲ್ಲ ಅಥವಾ ಕೆಲ್ಸಕ್ಕೆ ಹೋಗುವ ಗಡಿಬಿಡಿಯಲ್ಲಿ ತಾನು ಗಮನಿಸಿಲ್ಲವೇನೋ ಎಂದುಕೊಂಡು ಆಶ್ಚರ್ಯದಿಂದ ನೋಡಿದಳು.

ಅಷ್ಟರಲ್ಲಿ ನಿಶ್ಮಿತಾ ಅಖಿ ಬಾ ಎಂದು ಕರೆದಂತಾಗಿ ಆ ಕರೆ ಬಂಗಲೆಯ ಒಳಗಿನಿಂದ ಕೇಳಿಸಿದಂತಾಗಿತನ್ನ ಜೊತೆ ಇದ್ದವಳು ಆ ಬಂಗಲೆಯ ಒಳಗೆ ಹೇಗೆ ಹೋದಳು ಎಂದು ಅವಳಿಗೆ ಅಚ್ಚರಿಯಾಗಿ ತಿರುಗಿ ನೋಡಿದರೆ ಅವಳಿಲ್ಲ! ಹಾಗಿದ್ದರೆ ಇದು ಅವಳ ಮನೆಯಿರಬಹುದೇ ಅವಳ್ಯಾಕೆ ನನಗೆ ಆ ಬಗ್ಗೆ ತಿಳಿಸಿಲ್ಲ ಎಂದುಕೊಂಡು ಕುತೂಹಲದಿಂದ ಕಬ್ಬಿಣದ ದೊಡ್ಡಗೇಟನ್ನುತೆರೆದು ಬಂಗಲೆಯ ಒಳಗೆ ಕಾಲಿಡುವುದೋ ಬೇಡವೋ ಅನುಮಾನಿಸುತ್ತ ನಿಂತಳು. ಜೊತೆಗೆ ಮನೆಗೆ ಹೋಗಬೇಕಾದ ಧಾವಂತವೂ ಇತ್ತು. ಅಷ್ಟರಲ್ಲಿ ಮತ್ತೆ ಅಖೀ ಎಂದು ನಿಶ್ಮಿತಾ ಕರೆದಂತಾಗಿ ಕುತೂಹಲ ತಡೆಯಲಾಗದೆ ಮೆಲ್ಲನೆ ಒಳಗೆ ಅಡಿಯಿಟ್ಟಳು. ಆದರೆ ಒಳಗೆಲ್ಲ ಕಾರ್ಗತ್ತಲು ತುಂಬಿತ್ತು. ಇಷ್ಟು ದೊಡ್ಡ ಬಂಗಲೆಯಲ್ಲಿ ಯಾಕೆ ಬೆಳಕಿಲ್ಲ? ಎಲ್ಲ ಎಲ್ಲಿ ಹೋದರು ಎಂದುಕೊಳ್ಳುತ್ತ ನಿಶೀ ಎಂದು ಗೆಳತಿಯನ್ನು ಕರೆದಳು. ಆದರೆ ಅವಳ ಸದ್ದೇ ಇಲ್ಲ, ಬಹುಶ ತಾನು ಒಳಗಡಿಯಿಡುವಾಗಲೇ ಕರೆಂಟು ಹೋಗಿರಬೇಕು. ಅದಕ್ಕೆ ಅವಳು ಕ್ಯಾಂಡಲ್ ತರಲು ಹೋಗಿರಬಹುದೇ ಇಷ್ಟು ದೊಡ್ಡ ಮನೆಯಲ್ಲಿ ಜನರೇಟರ್ ಕೂಡ ಇಲ್ಲವೇ ಎಂದುಕೊಳ್ಳುತ್ತ ತನ್ನ ಫೋನಿನ ಲೈಟಿನ ಬೆಳಕಲ್ಲಿ ಸುತ್ತಲೂ ನೋಡಿದಳು.

ಅದೊಂದು ಭವ್ಯ ಬಂಗಲೆ, ಹಾಲ್ ನಲ್ಲಿ ದೊಡ್ಡದಾದ ಗೊಂಚಲಿನ ತೂಗು ದೀಪ ವನ್ನು ಕಂಡು ಬೆರಗಾಗಿ ಅಖಿಲಾ ಅದರತ್ತ ತನ್ನ ಫೋನ್ ನ ಲೈಟನ್ನು ಹಾಯಿಸಿದಾಗ ಕಣ್ಣು ಕೋರೈಸುವ ಬೆಳಕು ಹರಿದಂತಾಗಿ ಅಖಿಲಾ ಕರೆಂಟು ಬಂದಿರಬೇಕು ಎಂದುಕೊಂಡಳು. ಆ ಬೆಳಕಲ್ಲೇ ಸುತ್ತ ನೋಡಿದಾಗ ಯಾರೋ ರಾಜ ಮಹಾರಾಜರ ಅರಮನೆಯಿರಬಹುದೋ ಎನಿಸುವಷ್ಟು ಅಲ್ಲಿನ ಕಲಾಕೃತಿ ಗಳು ಗೋಡೆಗಳ ಮೇಲಿದ್ದ ಭವ್ಯಾಗಿದ್ದ ವಿವಿಧ ತೈಲವರ್ಣದ ಚಿತ್ರಗಳನ್ನು ಕಂಡು ಅವಳು ಬೆರಗಾದಳು. ಆದರೆ ಕ್ಷಣಾರ್ಧದಲ್ಲಿ ಬೆಳಕು ಮರೆಯಾಯಿತು. ಅಖಿಲಾ ಲೈಟಿನ ಸ್ವಿಚ್ ಹುಡುಕುತ್ತ ಹೊರಟಳು. ಅಲ್ಲಿ ಯಾವುದೇ ಗೋಡೆಗಳಲ್ಲಿ ಸ್ವಿಚ್ ಇರಲೇ ಇಲ್ಲ! ಅರೆ, ಸ್ವಿಚ್ ಇಲ್ಲದೆ ಇವರು ಲೈಟ್ ಹೇಗೆ ಹಾಕುತ್ತಾರಪ್ಪ ಎಂದು ಅಖಿಲಾ ಬೆರಗಾದಳು. ಕತ್ತಲಿನಲ್ಲಿ ಅಖಿಲಾ ಗೆ ಭಯವಾಗಿ ನಿಶ್ಮಿತಾ ಳನ್ನು ಕರೆಯುತ್ತ ಅವಳನ್ನು ಹುಡುಕುತ್ತ ಹೊರಟಳು. ಫೋನ್ ಬೆಳಕಲ್ಲಿ ಅಲ್ಲಿ ಇದ್ದ ಪ್ರತಿಯೊಂದು ಕೋಣೆಯಲ್ಲೂ ಗೆಳತಿಗಾಗಿ ಹುಡುಕಾಡಿದಳು. ಆದರೆ ನಿಶ್ಮಿತಾಳ ಸುಳಿವೇ ಇರಲಿಲ್ಲ.

ಮಹಡಿಗೆ ಹೋಗುವ ಮೆಟ್ಟಿಲುಗಳನ್ನು ನೋಡಿ ಮೇಲಕ್ಕೆ ಹತ್ತಿ ಗೆಳತಿಯನ್ನು ಹುಡುಕುವುದೋ ಅಥವಾ ಮನೆಗೆ ಹೋಗುವುದೋ ಎಂದು ಅಖಿಲಾ ಳಿಗೆ ಗೊಂದಲವಾಯಿತು. ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿ, ಮನೆಗೆ ಹೋಗುವುದಂತೂ ಇದ್ದೇ ಇದೆ ಆದರೆಗೆಳತಿ ಏನಾದರೂ ಸಂಕಷ್ಟದಲ್ಲಿದ್ದರೆ ಅವಳಿಗೆ ಸಹಾಯ ಮಾಡುವುದು ತನ್ನ ಕರ್ತವ್ಯ ಎಂದುಕೊಂಡು ಮಹಡಿ ಹತ್ತಿದಳು. ಅಲ್ಲಿ ಇನ್ನೊಂದಷ್ಟು ಕೋಣೆಗಳು ,ಪ್ರತಿಯೊಂದು ಕೋಣೆಗಳು ಬಹಳ ಆಕರ್ಷಕ ವಾಗಿದ್ದವು. ಗೋಡೆ ಗಳನ್ನು ಅಲಂಕರಿಸಿದ್ದ ತೈಲ ಚಿತ್ರಗಳು ಪ್ರತಿಯೊಂದು ಕೋಣೆಗಳಿಗೂ ಭಿನ್ನವಾಗಿದ್ದವು. ನಿಶ್ಮಿತಾ ಇಂತಹ ಅರಮನೆಯಲ್ಲಿ ವಾಸವಾಗಿದ್ದಾಳೆಯೇ ಎಂದು ಅಖಿಲಾ ಅಚ್ಚರಿ ಪಟ್ಟಳು. ಕೋಣೆಗಳಂತೂ ಲೆಕ್ಕವಿಲ್ಲದಷ್ಟು ಇದ್ದವು. ಅವಳಿಗೆ ಭಯವಾಗಿ ಇಲ್ಲೇ ಹೀಗೆ ತಿರುಗುತ್ತ ಇದ್ದರೆ ಮನೆಗೆ ಯಾವಾಗ ಹೋಗುವುದು, ಮನೆಯಲ್ಲಿ ಎಲ್ಲರೂ ಇನ್ನೂ ಯಾಕೆ ತಾನು ಬರಲಿಲ್ಲವೆಂದು ಚಿಂತೆ ಮಾಡುತ್ತಿರಬಹುದು. ತಂಗಿ ತಮ್ಮಂದಿರಿಗೆಲ್ಲ ತಾವು ಬೇಕೆಂದು ಹೇಳಿದ ವಸ್ತುಗಳನ್ನು ನೋಡಲು ಅದೆಷ್ಟು ಕಾತರರಾಗಿದ್ದಾರೋ ಅವರನ್ನು ಕಾಯಿಸುವುದು ಬೇಡ ,ಆದಷ್ಟೂ ಬೇಗ ಇಲ್ಲಿಂದ ಮನೆಗೆ ಹೋಗಿ ನಿಶ್ಮಿತಾಳ ತಾಯಿಗೆ ಫೋನ್ ಮಾಡಿ ವಿಷಯ ಹೇಳಿದರೆ ಅವರೇ ಹುಡುಕುತ್ತಾರೆ ಎಂದುಕೊಂಡು ಹೊರಟಾಗ ಅಲ್ಲಿಂದ ಹೊರಗೆ ಹೋಗುವ ದಾರಿ ಅಖಿಲಾ ಗೆ ತಿಳಿಯದೆ ಗೋಜಲಾಯಿತು.

ತಾನು ಮೊದಲು ಎಲ್ಲಿಂದ ಬಂದೆ ಎಂದೇ ಗೊಂದಲವಾಗಿ ಅಖಿಲಾ ಆತಂಕಗೊಂಡಳು. ಗಡಿಬಿಡಿಯಿಂದ ಸಿಕ್ಕ ಸಿಕ್ಕ ಕೋಣೆಗಳಿಗೆಲ್ಲ ನುಗ್ಗಿ ಅಲ್ಲಿಂದ ಹೊರ ಹೋಗುವ ದಾರಿ ಸಿಗುತ್ತದೋ ಮಹಡಿಯ ಮೆಟ್ಟಿಲುಗಳು ಕಾಣಿಸುತ್ತದೋ ಎಂದು ನೋಡತೊಡಗಿದಳು. ಮನೆಯವರಿಗೆ ತಾನು ಸಧ್ಯದಲ್ಲೇ ಬರುತ್ತಿದ್ದೇನೆ ಎಂದು ತಿಳಿಸೋಣ ಎಂದು ಫೋನ್ ಮಾಡಲು ಹೋದರೆ ಆ ಕ್ಷಣವೇ ಬ್ಯಾಟರಿ ಖಾಲಿಯಾಗಿ ಫೋನ್ ನಿಸ್ತೆಜವಾಗಿ ಬಿಟ್ಟಿತು. ಅವಳಿಗೆ ತನ್ನ ವ್ಯಾನಿಟಿ ಬ್ಯಾಗ್ ನ ನೆನಪಾಗಿ ಅದರಲ್ಲಿ ಮೊದಲ ತಿಂಗಳದ ಸಂಬಳ ಇದ್ದು ಜೋಪಾನ ವಾಗಿ ಇದೆಯೇ ಎಂದು ನೋಡಲು ಹೆಗಲಿಗೆ ಕೈ ಹಾಕಿದಳು ಆದರೆ ಅವಳ ವ್ಯಾನಿಟಿ ಬ್ಯಾಗ್ ಅಲ್ಲಿರಲೇ ಇಲ್ಲ! ನಿಶ್ಮಿತಾಳನ್ನು ಹುಡುಕುವ ಭರದಲ್ಲಿ ಬ್ಯಾಗ್ ಎಲ್ಲಿ ಇಟ್ಟು ಬಿಟ್ಟೆ ಎಂದು ಆತಂಕ ಪಡುತ್ತಿರುವಾಗ ಸಾಮಾನುಗಳ ಬ್ಯಾಗ್ ಕೂಡ ತನ್ನ ಕೈಯಲ್ಲಿ ಇಲ್ಲದ್ದು ಕಂಡು ಅವಳಿಗೆ ಆಘಾತವಾಯಿತು. ಆಯ್ಯೋ ದೇವರೇ ಈಗೇನು ಮಾಡಲಿ ? ಎಲ್ಲಿ ಹೋದವು ನನ್ನ ಬ್ಯಾಗ್ ಗಳು ? ಹೇಗೆ ಹುಡುಕಲಿ, ಚಕ್ರವ್ಯೂಹದಂತಿರುವ ಈ ಮನೆಯಲ್ಲಿ ಹೊರಗೆ ಹೋಗುವ ದಾರಿಯಾದರೂ ಹೇಗೆ ಹುಡುಕಲಿ ಎಂದುಕೊಳ್ಳುತ್ತಿದ್ದಂತೆ ಭಯದಿಂದ ಅವಳ ಗಂಟಲು ಒಣಗತೊಡಗಿತು. ಕತ್ತಲಲ್ಲಿ ಗೋಡೆಯನ್ನಾಧರಿಸಿ ನೀರಿಗಾಗಿ ಹುಡುಕುತ್ತ ಹೊರಟಳು.

ಇದ್ದಕ್ಕಿದ್ದಂತೆ ಒಂದು ವಿಶಾಲವಾದ ಕೋಣೆಯಲ್ಲಿ ಮಂದ ಬೆಳಕು ಕಂಡು ಸಂತಸದಿಂದ ಅತ್ತ ನಡೆದಳು. ಅದು ದೊಡ್ಡದಾದ ಡೈನಿಂಗ್ ಹಾಲ್, ಮಧ್ಯಭಾಗದಲ್ಲಿ ಉದ್ದನೆಯ ಕರಿ ಮರದ ಟೇಬಲ್, ಅದರ ಎರಡೂ ಬದಿಯಲ್ಲೂ ಕುಸುರಿ ಕೆತ್ತನೆಯ ಸುಂದರ ಕುರ್ಚಿಗಳು, ಟೇಬಲ್ ಮೇಲೆ ಹಲವಾರು ಖಾದ್ಯಗಳು ಸಾಲಾಗಿ ಜೋಡಿಸಲ್ಪಟ್ಟಿದ್ದವು. ಜೊತೆಗೆ ತರಹೇವಾರಿ ಹಣ್ಣು ಹಂಪಲುಗಳು ಬೇರೆ ಬೇರೆ ಬೆಳ್ಳಿಯ ಬಟ್ಟಲುಗಳಲ್ಲಿ ಜೋಡಿಸ ಲ್ಪಟ್ಟಿದ್ದವು . ನೆಲದ ಮೇಲೆ ರತ್ನಗಂಬಳಿ ಹಾಸಿತ್ತು, ಇದನ್ನೆಲ್ಲಾ ನೋಡುತ್ತಾ ಇದ್ದಾಗ ಖಾದ್ಯಗಳ ವೈವಿಧ್ಯಮಯ ಸುಮದುರ ಪರಿಮಳಕ್ಕೆ ಅಖಿಲಾಗೆ ಹೊಟ್ಟೆ ಚುರುಗುಟ್ಟತೊಡಗಿತು. ಅಲ್ಲಿದ್ದ ಬೆಳಕು ಮಾತ್ರ ಎಲ್ಲಿಂದ ಬರುತ್ತಿದೆ ಎಂದು ಮಾತ್ರ ಅವಳಿಗೆ ತಿಳಿಯಲಿಲ್ಲ. ನೀರಿನ ಜಗ್ ಕೂಡ ಇದ್ದುದು ಕಂಡು ಸಂತಸವಾಗಿ ನೀರನ್ನು ಅಲ್ಲೇ ಇದ್ದ ಬೆಳ್ಳಿ ಲೋಟಕ್ಕೆ ಬಗ್ಗಿಸಿ ಅದನ್ನೆತ್ತಿ ಕುಡಿಯುವಾಗ ಅವಳಿಗೆ ತಾನು ಅಮೃತ ಕುಡಿದಷ್ಟು ಆನಂದವಾಯಿತು.

ಬಿಸಿ ಬಿಸಿ ಖಾಧ್ಯಗಳನ್ನು ನೋಡುತ್ತಲೇ ಹಸಿವೂ ಹೆಚ್ಚಾಯಿತು. ಹೇಗೂ ಹೊರಗೆ ಹೋಗಲು ದಾರಿ ಕಾಣುತ್ತಿಲ್ಲ, ಹುಡುಕಲು ಶಕ್ತಿ ಬೇಕಲ್ಲವೇ ಮೊದಲು ಊಟ ಮಾಡಿ ನಂತರ ಹುಡುಕಿದರಾಯ್ತು ಎಂದುಕೊಂಡು ಊಟಕ್ಕೆ ಕುಳಿತಳು. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಈ ಬಿಸಿ ಬಿಸಿ ಅಡಿಗೆಗಳನ್ನು ತಯಾರಿಸಿದವರು ಯಾರು ಎಂದು ಅಖಿಲಾಗೆ ಸಮಸ್ಯೆಯಾದರೂ ಹೊಟ್ಟೆ ತಾಳ ಹಾಕುತ್ತಿದುದರಿಂದ ಜಾಸ್ತಿ ಆ ಬಗ್ಗೆ ಯೋಚಿಸಲು ಅವಳ ಹೊಟ್ಟೆ ಬಿಡದೆ ಅಲ್ಲಿದ್ದ ಬೆಳ್ಳಿ ಯ ಬಟ್ಟಲಯನ್ನು ತೆಗೆದು ಒಂದೊಂದಾಗಿ ಖಾದ್ಯಗಳನ್ನು ಬಡಿಸಿಕೊಂಡಳು. ಊಟ ಮಾಡುತ್ತಿದ್ದಂತೆ ಅವಳಿಗೆ ಇಷ್ಟೊಂದು ರುಚಿಯಾದ ಅಡಿಗೆಯನ್ನು ತಾನು ಈ ಜನ್ಮದಲ್ಲೇ ತಿಂದಿಲ್ಲವೆನಿಸಿತು. ಮತ್ತಷ್ಟು ತಿನ್ನುವ ಮನಸ್ಸಾಗಿ ಹಲವು ಬಗೆಯ ಖಾದ್ಯಗಳಿದ್ದುದರಿಂದ ತಾನು ತಿನ್ನದೇ ಇದ್ದ ಖಾದ್ಯಗಳನ್ನು ಮತ್ತೆ ಬಟ್ಟಲಿಗೆ ಬಡಿಸಿಕೊಂಡು ಹೊಟ್ಟೆಗೆ, ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದಳು.

ಒಂದು ದಿನವಾದರೂ ತನಗೆ ಇಂತಹ ಭರ್ಜರಿ ಊಟ ಸಿಕ್ಕಿತಲ್ಲ ಅದೂ ಅರಮನೆಯಲ್ಲಿ, ಬೆಳ್ಳಿಯ ಬಟ್ಟಲಲ್ಲಿ ,ರುಚಿಯಾದ ಸೊಗಸಾದ ಖಾದ್ಯಗಳು ಎಂದುಕೊಳ್ಳುತ್ತ ಬಾಯಿ ಚಪ್ಪರಿಸಿದಳು. ಆಗ ಅವಳಿಗೆ ಮನೆಯವರ ನೆನಪಾಯಿತು. ತನ್ನ ತಂಗಿ ತಮ್ಮಂದಿರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ತಾನು ಭೂರಿ ಭೋಜನವನ್ನೇ ಬಾರಿಸಿದ್ದು ಕೆಡುಕೆನಿಸಿತು. ಅವರಿಗಾಗಿ ಸ್ವಲ್ಪ ತೆಗೆದುಕೊಂಡು ಹೋಗಬೇಕು ಎನಿಸಿದರೂ ಭರ್ಜರಿ ಊಟದಿಂದಾಗಿ ಅವಳಿಗೆ ಮಂಪರು ಹತ್ತಿತು. ಮಲಗುವ ಕೋಣೆ ಪಕ್ಕದಲ್ಲೇ ಇದ್ದುದರಿಂದ ಧೊಪ್ಪನೆ ಹಾಸಿಗೆಯಲ್ಲಿ ಬಿದ್ದಳು. ಮೆತ್ತನೆಯ ಹಾಸಿಗೆಯಲ್ಲಿ ಅವಳಿಗೆ ತಕ್ಷಣವೇ ನಿದ್ದೆ ಹತ್ತಿತು.

ಇತ್ತ ರಾತ್ರಿ ಗಂಟೆ ಹತ್ತಾಗುತ್ತ ಬಂದರೂ ಅಖಿಲಾಳ ಪತ್ತೆ ಇಲ್ಲದ್ದು ಕಂಡು ಅವಳ ಮನೆಯವರಿಗೆಲ್ಲ ಗಾಬರಿಯಾಗತೊಡಗಿತು. ಅಖಿಲಾಳ ತಮ್ಮ ತಂಗಿಯರೆಲ್ಲ ಅವಳಿಗಾಗಿ ಕಾದು ಕಾದು ಕುಳಿತಲ್ಲೇ ನಿದ್ದೆ ಹೋದರು. ಅಖಿಲಾಳ ತಾಯಿ ಆತಂಕದಿಂದ ಮಗಳಿಗೇನಾದರೂ ತೊಂದರೆಯಾಗಿರಬಹುದೇ ಎಂದು ಕಳವಳಗೊಂಡು ದೇವರಲ್ಲಿ ತನ್ನ ಮಗಳು ಶೀಘ್ರ ವಾಗಿ ಮನೆ ತಲುಪುವಂತೆ ಮಾಡು ಎಂದು ಬೇಡಿಕೊಂಡಳು. ಗಂಡು ಮಕ್ಕಳನ್ನು ಎಬ್ಬಿಸಿ ಅಕ್ಕನನ್ನು ಹುಡುಕಿ ಕೊಂಡು ಬರಲು ಕಳುಹಿಸಿದಳು. ಅಖಿಲಾಳ ತಾಯಿಗೆ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚುತ್ತಿತ್ತು ಮಕ್ಕಳು ಅಕ್ಕ ಸಿಗದೆ ವಾಪಾಸು ಬಂದಾಗ ಮಗಳಿಗೆ ಏನಾದರೂ ಹೆಚ್ಚು ಕಡಿಮೆಯಾಗಿರಬಹುದೇ ಎಂದು ಗಾಬರಿಯಾಗಿ ದೇವರಿಗೆ ದೀಪ ಹಚ್ಚಲು ಹೋದಾಗ ಗಾಳಿಗೆ ದೀಪ ಆರಿ ಹೋಗಿ ಏನೋ ಕೆಡುಕು ಕಾದಿದೆ ಎಂದು ಆಕೆ ಕಂಗಾಲಾದಳು. ಆಕೆಗೆ ಏನು ಮಾಡಬೇಕೆಂದು ತೋಚಲಿಲ್ಲ.

ರಾತ್ರಿಯೆಲ್ಲ ಮಗಳಿಗಾಗಿ ಚಡಪಡಿಸುತ್ತಾ ಸ್ವಲ್ಪವೂ ನಿದ್ದೆ ಮಾಡದೆ ಹೇಗೋ ಬೆಳಗು ಮಾಡಿದಳು. ಬೆಳಕು ಹರಿಯುತ್ತಲೇ ತಾನೇ ಮಗಳನ್ನು ಹುಡುಕಿಕೊಂಡು ಹೊರಟಳು. ದಾರಿಯಲ್ಲಿ ಒಬ್ಬಾತ ಓಡುತ್ತ ಬರುತ್ತಿದುದನ್ನು ಕಂಡು ಗಾಬರಿಯಾಗಿ ಅವನನ್ನು ಏನೆಂದು ವಿಚಾರಿಸಿದಳು. ಆಗ ಅವನು ತಡವರಿಸುತ್ತ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಅಪಘಾತವಾಗಿದೆ ಎನ್ನುತ್ತಾ ಅವಳ ಮಾತಿಗೆ ಕಾಯದೆ ಮತ್ತೆ ಓಡತೊಡಗಿದ. ಅಖಿಲಾ ಳ ತಾಯಿಗೆ ಅದು ತನ್ನ ಮಗಳಾಗಿರಬಹುದೇ ಅನಿಸಿ ಹೃದಯವೇ ಬಾಯಿಗೆ ಬಂದಂತಾಗಿ ಬಿಕ್ಕಿ ಬಿಕ್ಕಿ ಅಳುತ್ತ ಸ್ಮಶಾನದತ್ತ ಓಡ ತೊಡಗಿದಳು. ಅವಳು ಅಪಘಾತ ದ ಸ್ಥಳಕ್ಕೆ ಬಂದಾಗ ಅಲ್ಲಿ ಕೆಲ ಜನ ಸೇರಿದ್ದರು. ಅವರನ್ನೆಲ್ಲ ಬದಿಗೆ ಸರಿಸುತ್ತ ಮುಂದಕ್ಕೆ ನುಗ್ಗಿ ನೋಡಿದಾಗ ಅವಳಿಗೆ ಕಣ್ಣು ಕತ್ತಲೆ ಬಂದಂತಾಗಿ ಅಲ್ಲೇ ಕುಸಿದಳು.

ನಿಶ್ಮಿತಾ ಸ್ಮಶಾನಕ್ಕೆ ಹೋಗುವ ತಿರುವಿನಲ್ಲೇ ತಲೆ ಜಜ್ಜಲ್ಪಟ್ಟು ಬಿದ್ದಿದ್ದರೆ ಅಪಘಾತದ ರಭಸಕ್ಕೆ ಅಪರಿಚಿತ ವಾಹನ ಅಖಿಲಾಳನ್ನು ಸ್ವಲ ದೂರದವರೆಗೂ ಎಳೆದುಕೊಂಡು ಹೋಗಿತ್ತು. ಅವಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅವಳ ಕೈಯೊಂದು ತುಂಡಾಗಿ ಬಿದ್ದಿತ್ತು. ಅವಳ ಬ್ಯಾಗ್ ನಲ್ಲಿದ್ದ ನೋಟುಗಳೆಲ್ಲ ರಕ್ತಸಿಕ್ತವಾಗಿ ರಸ್ತೆ ತುಂಬಾ ಹರಡಿದ್ದವು. ತಮ್ಮ ತಂಗಿಯರಿಗಾಗಿ ಕೊಂಡುಕೊಂಡ ಸಾಮಾನುಗಳೆಲ್ಲ ಅಲ್ಲಲ್ಲಿ ಅಪ್ಪಚ್ಚಿಯಾಗಿ ಬಿದ್ದುಕೊಂಡಿದ್ದವು. ಇಂತಹ ಭಯಾನಕ ದೃಶ್ಯ ನೋಡಲಾಗದೆ ಅಖಿಲಾಳ ತಾಯಿ ವಿಲವಿಲ ಒದ್ದಾಡಿದಳು. ತಮ್ಮ ಮಗಳಿಗಾದ ಗತಿ ಕಂಡು ಗೊಳೋ ಎಂದು ಅಳತೊಡಗಿದಳು. ತಮ್ಮ ಮನೆಯ ಬೆಳಕಾಗಿದ್ದ ಮುದ್ದಿನ ಮಗಳು ರಕ್ತದ ಮಡುವಿನಲ್ಲಿ ನಿಶ್ಚಲವಾಗಿ ಬಿದ್ದಿದ್ದನ್ನು ನೋಡಲಾಗದೆ ಕಷ್ಟ ಪಟ್ಟು ಎದ್ದು ಹೋಗಿ ಮಗಳು ಬದುಕಿರಬಹುದೇ ಎಂದು ಸಣ್ಣ ಆಸೆ ಚಿಗುರಿ ಅವಳ ದೇಹ ಮುಟ್ಟಿ ನೋಡಿದಾಗ ನಿರ್ಜೀವ ಕೊರಡಾಗಿತ್ತು. ತಮ್ಮ ಮನೆಯ ಜವಾಬ್ದಾರಿ ಹೊತ್ತುಕೊಂಡು ತಮ್ಮ ತಂಗಿಯರಿಗೆ ಆಸರೆಯಾಗಿ ಚೆನ್ನಾಗಿ ಬಾಳಬೇಕಾಗಿದ್ದ ಮಗಳು ನಿರ್ಜೀವವಾಗಿ ಬಿದ್ದಿದ್ದನ್ನು ನೋಡಿ ಅಖಿಲಾಳ ತಾಯಿ ತಮ್ಮ ಭವಿಷ್ಯ ಅಂಧಕಾರ ಮಯವಾದಂತೆ ಅನಿಸಿ ಅಲ್ಲೇ ಕುಸಿದಳು.