ನೋಟಿನ ಏಟು

ಸುಧಾ ಆಸ್ಪತ್ರೆಯಿಂದ ಹೊರಡುವಾಗಲೇ ಲೇಟಾಗಿತ್ತು. ಇವತ್ತೇ ಎ ಟಿ ಎಂ ಗೆ ಹೋಗಿ ದುಡ್ಡು ಡ್ರಾ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತ ಸುಧಾ ತನ್ನ ನಡಿಗೆಯನ್ನು ತೀವ್ರಗೊಳಿಸಿದಳು. ಎ ಟಿ ಎಂ ಹತ್ತಿರ ಬರುತ್ತಲೇ ಅದಕ್ಕೆ ಶಟ್ಟರ್ ಎಳೆದಿರುವುದನ್ನು ನೋಡಿ ಸುಧಾ ಕಂಗಾಲಾದಳು. ಛೆ ಅರ್ಜೆಂಟಿಗೆ ಬೇಕಾದಾಗೆಲ್ಲ ಈ ಎ ಟಿ ಎಂ ತೆರೆದಿರುವುದೇ ಇಲ್ಲ ಎಂದುಕೊಳ್ಳುತ್ತ ಇನ್ನೊಂದು ಬ್ಯಾಂಕಿನ ಎ ಟಿ ಎಂ ಕಡೆ ಧಾವಿಸಿದಳು.

ಅಲ್ಲಿ ನೋಡಿದರೆ ಅದೂ ಬಂದ್, ಅರೆ ಏನಿವತ್ತು ಎಲ್ಲ ಬೇಗ ಬಂದ್ ಆಗಿ ಬಿಟ್ಟಿದೆ, ಜನರ ಬಳಿ ದುಡ್ಡು ಜಾಸ್ತಿಯಾಗಿ ಅವರೆಲ್ಲ ದುಡ್ಡು ತೆಗೆದು ತೆಗೆದೂ ಖಾಲಿ ಮಾಡಿರಬೇಕು. ನಾಳೆ ಬೆಳಗ್ಗೆ ಬ್ಯಾಂಕ್ ಗೆ ಹೋಗಿ ತೆಗೆದರಾಯಿತು. ಅಮ್ಮನಿಗೆ ನಾಳೆ ಆಪರೇಶನ್ ಬೇರೆ ಇದೆ, ಡಾಕ್ಟರ್ ಮೂವತ್ತು ಸಾವಿರ ರೂಪಾಯಿ ಜಮೆ ಮಾಡಲು ತಿಳಿಸಿದ್ದಾರೆ. ನಾಳೆ ಬೇಗ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಅವಸರದ ಹೆಜ್ಜೆ ಹಾಕುತ್ತ ಮನೆಯ ಕಡೆ ನಡೆದಳು.

ಮನೆಗೆ ಬಂದು ನೋಡಿದಾಗ ಅವಳ ಅಪ್ಪ ಆಗಲೇ ಊಟ ಮಾಡಿ ಮಲಗಿದ್ದರು. ಇವತ್ತು ಅಪ್ಪನಿಗೆ ಕುಡಿದಿದ್ದು ಜಾಸ್ತಿಯಾಗಿರಬೇಕು ಎಂದುಕೊಳ್ಳುತ್ತ ಕೈ ಕಾಲು ತೊಳೆದುಕೊಂಡು ಒಂದು ತಟ್ಟೆಯಲ್ಲಿ ಊಟ ಬಡಿಸಿಕೊಂಡು ಟೀವಿ ನೋಡುತ್ತಾ ಉಣ್ಣ ತೊಡಗಿದಳು. ಇದ್ದಕ್ಕಿದ್ದಂತೆ ಬ್ರೆಕಿಂಗ್ ನ್ಯೂಸ್ ಎಂದು ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಬಂದ ಸುದ್ದಿ ನೋಡಿ ಸುಧಾಳ ಕೈಯಲ್ಲಿದ್ದ ತುತ್ತು ತಟ್ಟೆಗೆ ಬಿತ್ತು.

ಅಯ್ಯೋ ದೇವರೇ, ಅಮ್ಮನ ಆಪರೇಶನ್ ಗೆ ಎಂದು ಮೊನ್ನೆಯೇ ಮನೆಯಲ್ಲಿ ಹತ್ತು ಸಾವಿರ ರೂಪಾಯಿ ತಂದಿಟ್ಟಿದ್ದೆ, ಅದೆಲ್ಲವೂ ಹೋಯಿತೇ ಹಾಗಾದರೆ ಎಂದು ಆತಂಕ ಪಟ್ಟುಕೊಳ್ಳುವಷ್ಟರಲ್ಲಿ ಟೀವಿಯಲ್ಲಿ, ಜನರು ತಮ್ಮಲ್ಲಿದ್ದ ನೋಟುಗಳನ್ನು ಬ್ಯಾಂಕಿಗೆ ಕೊಟ್ಟು ಬದಲಾಯಿಸಿಕೊಳ್ಳಬಹುದು ಎಂಬ ಮಾಹಿತಿ ಬಂದಾಗ ಅವಳಿಗೆ ಹೋದ ಜೀವ ಬಂದಂತಾಯಿತು. ಆದರೆ ಮರುಕ್ಷಣದಲ್ಲೇ ಒಬ್ಬರು ಕೇವಲ ನಾಲ್ಕು ಸಾವಿರ ರೂಪಾಯಿ ಮಾತ್ರ ಬದಲಾಯಿಸಿಕೊಳ್ಳಬಹುದು ಎಂದು ತಿಳಿದಾಗ ಮತ್ತೆ ಅವಳಿಗೆ ಆತಂಕ ಶುರುವಾಯಿತು.

ಗಾಬರಿಯಿಂದ ತಂದೆಯನ್ನು ಎಬ್ಬಿಸಲು ಓಡಿದಳು. ಆದರೆ ಕುಡಿದ ಮತ್ತಿನಲ್ಲಿದ್ದ ಅವಳ ತಂದೆಗೆ ಎಚ್ಚರವಾಗಲಿಲ್ಲ. ಅವಳಿಗೆ ಗಾಬರಿಯಾಗಿ ಏನು ಮಾಡುವುದು ಎಂದು ತಿಳಿಯಲಿಲ್ಲ. ಹಾಗೇ ಯೋಚಿಸುತ್ತ ಕುಳಿತಳು. ತಟ್ಟೆಯಲ್ಲಿದ್ದ ಅನ್ನ ತಣ್ಣಗಾದರೂ ಅವಳಿಗೆ ಏನು ಮಾಡುವುದು ಎಂದು ಹೊಳೆಯಲಿಲ್ಲ. ದೇವರೇ ನೀನೇ ನಮ್ಮನ್ನು ಕಾಪಾಡಬೇಕು. ನನಗೆ ಈ ಜಗತ್ತಿನಲ್ಲಿ ನನ್ನವರು ಅಂತ ಇರೋದು ನನ್ನ ಅಮ್ಮ ಮಾತ್ರ. ಅಪ್ಪ ಇದ್ದರೂ ಹೆಸರಿಗೆ ಮಾತ್ರ. ಕೆಲಸ ಮಾಡುವುದು ಮತ್ತು ಕುಡಿಯುವುದು ಬಿಟ್ಟರೆ ಅವರಿಗೆ ಬೇರೆ ಏನೂ ಬೇಕಾಗಿಲ್ಲ. ಪ್ರೀತಿ ಮಮತೆ ಅವರ ಜಾಯಮಾನದಲ್ಲೇ ಇಲ್ಲ ಎಂದುಕೊಳ್ಳುತ್ತ ಊಟ ಬಿಟ್ಟು ಎದ್ದಳು.

ನಾಳೆಯೇ ದುಡ್ಡು ಕಟ್ಟಬೇಕೆಂದು ಡಾಕ್ಟರ್ ಮೊದಲೇ ತಾಕೀತು ಮಾಡಿದ್ದರು. ಈಗ ದುಡ್ಡು ಕಟ್ಟದಿದ್ದರೆ ಅಮ್ಮನಿಗೆ ಆಪರೇಶನ್ ಮಾಡುವುದಿಲ್ಲ, ಸಧ್ಯದ ಪರಿಸ್ಥಿತಿಯಲ್ಲಿ ಆಪರೇಶನ್ ಮಾಡದಿದ್ದರೆ ಅಮ್ಮ ಉಳಿಯುವುದಿಲ್ಲ. ನಾಳೆ ಬೇಗನೆ ಬ್ಯಾಂಕಿಗೆ ಹೋಗಬೇಕು ಎಂದುಕೊಳ್ಳುತ್ತ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಬೇಗನೆ ಮಲಗಿದಳು. ಸುಸ್ತಾದ ಜೀವಕ್ಕೆ ಸೊಂಪಾದ ನಿದ್ರೆ ಬಂದಿತು.

ಬೆಳಿಗ್ಗೆ ಬೇಗನೆ ಎದ್ದು ಮನೆ ಕೆಲಸವನ್ನೆಲ್ಲಾ ಮುಗಿಸಿ ಅಪ್ಪನಿಗೆ ತಿಂಡಿ ಕೊಟ್ಟು ಟೀವಿಯಲ್ಲಿ ಬಂದ ಸುದ್ದಿಯ ಬಗ್ಗೆ ಹೇಳಿದಾಗ ಆತ ಅದು ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಎತ್ತಲೋ ನೋಡುತ್ತಾ ತಿಂಡಿ ಮುಗಿಸಿ ಹೊರಗೆ ಹೊರಟಾಗ ಅವಳಿಗೆ ಇಂಥಾ ಕಷ್ಟ ಕಾಲದಲ್ಲೂ ತಂದೆಯಿಂದ ತನಗೆ ಯಾವುದೇ ರೀತಿಯ ಸಹಾಯ ಇಲ್ಲದ್ದು ಕಂಡು ದುಃಖವಾಗಿ ಅಳು ಒತ್ತರಿಸಿ ಬಂದಿತು. ಆದರೂ ಈಗ ಅಳುತ್ತ ಕೂರುವ ಸಮಯವಲ್ಲ ಎಂದುಕೊಂಡು ಬಂದ ಅಳುವನ್ನು ನುಂಗಿಕೊಂಡು ಮನೆಗೆ ಬೀಗ ಹಾಕಿ ಬ್ಯಾಂಕ್ ನತ್ತ ಓಡಿದಳು. ಗಂಟೆ ಒಂಭತ್ತುವರೆಯಾದರೂ ಉದ್ದದ ಜನರ ಸಾಲು ಕಂಡು ಅವಳಿಗೆ ಕಣ್ಣು ಕತ್ತಲು ಬಂದಂತಾಯಿತು.

ದೇವರೇ ಇಷ್ಟೊಂದು ಜನರಿದ್ದಾರೆ. ತನ್ನ ಸರದಿ ಬರಲು ಎಷ್ಟು ಹೊತ್ತಾಗುವುದೋ ಏನೋ ಎಂದುಕೊಳ್ಳುತ್ತ ಎ ಟಿ ಎಂ ನತ್ತ ಧಾವಿಸಿದಳು. ಅಲ್ಲಿಯೂ ಉದ್ದದ ಸರತಿಯ ಸಾಲು ಕಂಡು ಕಂಗಾಲಾಗಿ, ದೇವರೇ ನೀನೆ ಏನಾದರೂ ದಾರಿ ತೋರಿಸಬೇಕು, ನನ್ನ ತಾಯಿಯನ್ನು ಉಳಿಸಿಕೊಳ್ಳಲು ನನಗೆ ದುಡ್ಡು ಬೇಕು, ಅದಕ್ಕೆ ದಾರಿ ತೋರಿಸು, ನನ್ನ ಕೈ ಬಿಡಬೇಡ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತ ಮತ್ತೆ ಬ್ಯಾಂಕ್ ನತ್ತ ಓಡಿದಳು. ಸರತಿಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದ್ದಿತು. ಅರ್ಧ ಗಂಟೆಯಾದರೂ ಅವಳ ಮುಂದೆ ನಿಂತಿದ್ದ ಸಾಲು ಕರಗುವ ಸೂಚನೆಯೇ ಕಾಣಲಿಲ್ಲ.

ಇದರ ನಡುವೆ ಬ್ಯಾಗಿನಲ್ಲಿದ್ದ ಬಿಸಿಯಾದ ತಿಂಡಿಯ ಡಬ್ಬ ಅವಳ ಕೈಗೆ ತಗಲಿದಾಗ ತಾಯಿಗೆ ತಿಂಡಿ ತೆಗೆದುಕೊಂಡು ಹೋಗಬೇಕಿತ್ತು ಎಂದು ನೆನಪಾಯಿತು. ಈ ಸರತಿಯ ಸಾಲಿನಲ್ಲಿ ನಿಂತರೆ ಅಮ್ಮ ಉಪವಾಸ ಇರಬೇಕಾಗುತ್ತದೆ. ನಾನೊಬ್ಬಳೇ ಇಲ್ಲಿಯೂ ನಿಂತು ಅಮ್ಮನಿಗೂ ಹೇಗೆ ತಿಂಡಿ ಕೊಡಲಿ. ಬೇರೆ ಯಾರನ್ನಾದರೂ ಕಳುಹಿಸೋಣ ಎಂದರೆ ತನಗೆ ಸಹಾಯ ಮಾಡುವವರು ಬೇರೆ ಯಾರಿದ್ದಾರೆ. ಕಷ್ಟಕಾಲದಲ್ಲಿ ಎಲ್ಲರೂ ದೂರ ಸರಿಯುವವರೇ, ಏನು ಮಾಡಲಿ ಈಗ ಸಾಲಲ್ಲಿ ನಿಲ್ಲಲೇ ಅಥವಾ ಅಮ್ಮನಿಗೆ ತಿಂಡಿ ಕೊಟ್ಟು ನಂತರ ಪುನಃ ಬರಲೇ ಎಂದು ಯೋಚಿಸಿದಳು.

ಅಮ್ಮ ಅಲ್ಲಿ ಹಸಿವಿನಿಂದ ಕಂಗಲಾಗಿರುತ್ತಾರೆ, ಅವರಿಗೆ ಮಾತ್ರೆ ಬೇರೆ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ನಿಂತುಕೊಳ್ಳದಿದ್ದರೆ ದುಡ್ಡು ಸಿಗುವುದಿಲ್ಲ ಏನು ಮಾಡಲಿ ಎಂದು ತೀವ್ರವಾಗಿ ಯೋಚಿಸಿದಳು. ಇದ್ದಕ್ಕಿದ್ದಂತೆ ಅವಳಿಗೆ ಡಾಕ್ಟರ್ ಗೆ ತಾನು ಚೆಕ್ ಕೊಡಬಹುದಲ್ಲವೇ ಎಂದು ಹೊಳೆಯಿತು. ಅಬ್ಬ ಬದುಕಿದೆ ಎನ್ನುತ್ತಾ ಮೊದಲು ಅಮ್ಮನಿಗೆ ತಿಂಡಿ ಕೊಟ್ಟು ಡಾಕ್ಟರ್ ಗೆ ಚೆಕ್ ಕೊಟ್ಟು ನಂತರ ಬಂದು ದುಡ್ಡು ವಿನಿಮಯ ಮಾಡಿಕೊಳ್ಳಲು ಸಾಲಲ್ಲಿ ನಿಲ್ಲೋಣ ಎಂದುಕೊಂಡು ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದಳು. ಇವತ್ತು ಸಂಜೆ ಅಮ್ಮನಿಗೆ ಅಪರೇಷನ್ ಮಾಡುತ್ತೇನೆ ಎಂದಿದ್ದರು ಡಾಕ್ಟರ್ ಅವರ ಬಳಿ ಮಾತನಾಡಬೇಕು ಎಂದುಕೊಳ್ಳುತ್ತ ಆಸ್ಪತ್ರೆಗೆ ದಾಪುಗಾಲು ಹಾಕುತ್ತ ನಡೆದಳು.

ಆಸ್ಪತ್ರೆಯಲ್ಲಿ ಅಮ್ಮನಿಗೆ ದುಡ್ಡಿನ ಪರಿಪಾಟಲಿನ ಬಗ್ಗೆ ಹೇಳದೆ ಎಂದಿನಂತೆ ನಗುತ್ತ ತಿಂಡಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದಳು. ಅವರ ತಿಂಡಿ ಮುಗಿಯುತ್ತಲೇ ಅವರಿಗೆ ಕೊಡಬೇಕಾದ ಮಾತ್ರೆಗಳನ್ನು ಕೊಟ್ಟು ತಾನು ಡಾಕ್ಟರನ್ನು ನೋಡಲು ಹೋಗುವುದಾಗಿ ತಾಯಿಗೆ ಹೇಳಿ ಡಾಕ್ಟರ್ ನ ಕೊಠಡಿಯತ್ತ ತೆರಳಿದಳು. ಅವಳ ಪುಣ್ಯಕ್ಕೆ ಅಲ್ಲಿ ಡಾಕ್ಟರ್ ಇದ್ದರು. ಅವಳು ಡಾಕ್ಟರ್ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡು ತಾನು ಇಪ್ಪತ್ತು ಸಾವಿರಕ್ಕೆ ಚೆಕ್ ಕೊಟ್ಟು ಉಳಿದ ಹಣವನ್ನು ಕ್ಯಾಶ್ ಕೊಡಬಹುದೇ ಎಂದಾಗ ಡಾಕ್ಟರ್ ಮೊದಲು ಒಪ್ಪದಿದ್ದರೂ ನಂತರ ಕ್ಷಣ ಕಾಲ ಯೋಚಿಸಿ ಆಗಲಿ ಆದರೆ ಐನೂರು ಹಾಗೂ ಸಾವಿರ ರೂಪಾಯಿಗಳ ನೋಟುಗಳು ಬೇಡ ಎಂದಾಗ ಅಬ್ಬ ಅಷ್ಟಕ್ಕಾದರೂ ಒಪ್ಪಿದರಲ್ಲ ಎಂದು ಅವಳಿಗೆ ಹೋದ ಜೀವ ಬಂದಂತಾಯಿತು.

ತಾನು ತಂದಿದ್ದ ಇಪ್ಪತ್ತು ಸಾವಿರದ ಚೆಕ್ ಡಾಕ್ಟರ್ ಗೆ ಕೊಟ್ಟಾಗ ಅವರು ಸಂಜೆಯ ಹೊತ್ತಿಗೆ ಇನ್ನುಳಿದ ಹತ್ತು ಸಾವಿರ ಕೊಟ್ಟರೆ ಮಾತ್ರ ಆಪರೇಶನ್ ಮಾಡಲಾಗುವುದು ಎಂದು ಧೃಡವಾಗಿ ಹೇಳಿದಾಗ ಅವಳು ಸುಮ್ಮನೆ ತಲೆಯಾಡಿಸಿದಳು. ಆದರೂ ಅವಳಿಗೆ ಹತ್ತು ಸಾವಿರ ಹೊಂದಿಸುವುದು ಹೇಗೆ ಎಂದು ಯೋಚನೆಯಾಯಿತು. ಅಮ್ಮನ ಬಳಿ ತನಗೆ ಸ್ವಲ್ಪ ಕೆಲಸವಿದೆ ಬೇಗನೆ ಬರುತ್ತೇನೆ ಎನ್ನುತ್ತಾ ಅಲ್ಲಿಂದ ಬ್ಯಾಂಕಿಗೆ ಓಡಿದಳು. ಸರತಿಯ ಸಾಲು ಈಗ ದ್ವಿಗುಣಗೊಂಡಿತ್ತು. ಆಗಲೇ ಗಂಟೆ ಹನ್ನೊಂದುವರೆಯಾಗಿತ್ತು. ಅವಳಿಗೆ ಅಲ್ಲಿ ನಿಲ್ಲಲಾಗದೆ ಬ್ಯಾಂಕ್ ಮ್ಯಾನೇಜರನ್ನು ಹುಡುಕಿಕೊಂಡು ಹೋದಳು.

ತನ್ನ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡಾಗ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತ, ಇಲ್ಲಿಗೆ ಬಂದಿರುವ ಎಷ್ಟೋ ಜನ ನಿಮ್ಮಂತೆಯೇ ದುಡ್ಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಈ ನೋಟಿನ ಸಮಸ್ಯೆಯಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಕೆಲವರಿಗೆ ಒಂದು ಹೊತ್ತು ಊಟಕ್ಕೂ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ದುಡ್ಡಿದ್ದವರೂ ಬಡತನವನ್ನು ಅನುಭವಿಸುತ್ತಿದ್ದಾರೆ. ನಾನೇನೂ ಮಾಡುವ ಹಾಗಿಲ್ಲ. ದಯವಿಟ್ಟು ಸಾಲಿನಲ್ಲಿ ನಿಂತುಕೊಳ್ಳಿ ಎಂದು ಅವರು ಸೂಚಿಸಿದಾಗ ಅವಳಿಗೆ ಅಳು ಒತ್ತರಿಸಿ ಬಂದಿತು. ಬೇರೆ ಬ್ಯಾಂಕುಗಳಿಗೆ ಹೋಗಿ ನೋಡೋಣ ಎಂದು ಅಲ್ಲಿಂದ ಓಡಿದಳು.

ಅಲ್ಲಿಯೂ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಇರಲಿಲ್ಲ. ಅಲ್ಲಿಂದ ಪೋಸ್ಟ್ ಆಫೀಸ್ ಗೆ ಓಡಿದಳು. ಅಲ್ಲಿ ಸರತಿಯ ಸಾಲು ಚಿಕ್ಕದಾಗಿರುವುದು ಕಂಡು ಸಮಾಧಾನವಾಗಿ ಸಾಲಿನಲ್ಲಿ ನಿಂತಳು. ಅಲ್ಲಿ ಹಣ ಇನ್ನೂ ಬಂದಿಲ್ಲವೆಂದು ಪೋಸ್ಟ್ ಆಫೀಸಿನವರು ಹೇಳಿದಾಗ ಅವಳು ಕಂಗಾಲಾದಳು. ಆದರೂ ಈಗ ಇಲ್ಲಿಂದ ಹೋದರೆ ಸಾಲು ಮತ್ತಷ್ಟು ಉದ್ದವಾದರೆ ಎಂದು ಅಲ್ಲೇ ನಿಂತುಕೊಂಡಳು. ತನ್ನ ವಾಚ್ ನೋಡಿಕೊಂಡಾಗ ಸಮಯ ಹನ್ನೊಂದು ಮುಕ್ಕಾಲು ಆಗಿತ್ತು. ಪರವಾಗಿಲ್ಲ ಇಲ್ಲಿ ಸಾಲು ಚಿಕ್ಕದಾಗಿದೆಯಲ್ಲ ಬೇಗನೆ ದುಡ್ಡು ಸಿಗಬಹುದು ಎಂದುಕೊಳ್ಳುತ್ತ ಸಮಾಧಾನದ ನಿಟ್ಟುಸಿರು ಬಿಟ್ಟಳು. ಸುಮಾರು ಹತ್ತು ನಿಮಿಷಗಳ ಬಳಿಕ ಸಾಲಿಗೆ ಜೀವ ಬಂದಂತಾಗಿ ಎಲ್ಲರೂ ಮುಂದೆ ಮುಂದೆ ಹೋದಾಗ ಅವಳಿಗೆ ಮತ್ತಷ್ಟು ಸಮಾಧಾನವಾಯಿತು.

ತನ್ನ ಸರದಿ ಬಂದಾಗ ನಾಲ್ಕು ಸಾವಿರ ವಿನಿಮಯ ಮಾಡಿಕೊಂಡು ತನ್ನ ತಾಯಿಗೆ ಆಪರೇಶನ್ ಇದೆ, ತನಗೆ ಅರ್ಜೆಂಟಾಗಿ ದುಡ್ಡು ಬೇಕಾಗಿದೆ ಉಳಿದ ಆರು ಸಾವಿರವನ್ನು ಬದಲಾಯಿಸಿ ಕೊಡುವಿರಾ ಎಂದು ವಿನಮ್ರವಾಗಿ ಬೇಡಿಕೊಂಡಳು. ಆದರೆ ಅವರು ಸರಕಾರದ ನಿರ್ದೇಶನದ ಪ್ರಕಾರ ಒಬ್ಬರಿಗೆ ನಾಲ್ಕು ಸಾವಿರ ಮಾತ್ರ ಕೊಡಬಹುದು ತಾವೇನೂ ಮಾಡುವ ಹಾಗಿಲ್ಲ ಎಂದು ಕೈ ಚೆಲ್ಲಿದರು. ಅವಳಿಗೆ ನಿರಾಶೆಯಾದರೂ ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು ಉಳಿದ ಹಣಕ್ಕೆ ತನ್ನ ಬಾಸನ್ನು ಕೇಳಿದರಾಯಿತು ಎಂದುಕೊಂಡು ಅಲ್ಲಿಂದ ಬಸ್ಸಿನಲ್ಲಿ ಆಫೀಸಿಗೆ ಹೋದಳು.

ಆದರೆ ಬಾಸ್ ಅಲ್ಲಿರಲಿಲ್ಲ. ತನ್ನ ಸಹೋದ್ಯೋಗಿಗಳ ಬಳಿ ಸಹಾಯ ಯಾಚಿಸಿದಳು. ಆದರೆ ಅವರೆಲ್ಲ ತಾವೂ ದಿನನಿತ್ಯದ ಖರ್ಚಿಗೆ ಪರದಾಡುತ್ತಿದ್ದೇವೆ. ನಿನಗೆಲ್ಲಿಂದ ಕೊಡಲಿ, ಬೇಕಿದ್ದರೆ ಐನೂರರ ನೋಟು ಕೊಡುತ್ತೇವೆ ಎಂದು ಅಸಹಾಯಕರಾಗಿ ಹೇಳಿದಾಗ ಸುಧಾ ತಲ್ಲಣಗೊಂಡಳು. ದೇವರೇ ಏನಾದರೂ ಮಾಡಿ ದಾರಿ ತೋರಿಸು. ಸರಕಾರ ಯಾಕೆ ಇವತ್ತೇ ಈ ನಿರ್ಧಾರ ಕೈಗೊಂಡಿತು. ಒಂದು ದಿನ ಬಿಟ್ಟು ಈ ನಿರ್ಧಾರ ಮಾಡಿದಿದ್ದರೆ ತನ್ನ ತಾಯಿಯ ಆಪರೇಶನ್ ಆದರೂ ಸುಸೂತ್ರವಾಗಿ ನಡೆಯುತ್ತಿತ್ತು ಎಂದು ದುಃಖ ಪಡುತ್ತಿರುವಾಗ ಅವಳ ಸಹೋದ್ಯೋಗಿ ಅವಳಲ್ಲಿದ್ದ ಉಳಿದ ಹಣವನ್ನು ಅವಳ ಖಾತೆಗೆ ಹಾಕಿ ನಂತರ ಅದನ್ನು ಅವಳು ತೆಗೆಯಬಹುದಲ್ಲವೇ ಎಂದಾಗ ಅವಳಿಗೆ ಆಶಾ ಕಿರಣ ಮೂಡಿದಂತಾಗಿ ಅಲ್ಲೇ ಇದ್ದ ತನ್ನ ಬ್ಯಾಂಕಿನ ಬೇರೊಂದು ಬ್ರಾಂಚ್ ಗೆ ಓಡಿದಳು.

ಖಾತೆಗೆ ಹಣ ಹಾಕುವ ಸರತಿಯ ಸಾಲು ಚಿಕ್ಕದಾಗಿರುವುದನ್ನು ನೋಡಿ ಸಮಾಧಾನವಾಗಿ ಬೇಗನೆ ಸ್ಲಿಪ್ ನಲ್ಲಿ ವಿವರ ನಮೂದಿಸಿ ಸಾಲಿನಲ್ಲಿ ನಿಂತುಕೊಂಡಳು. ಆದರೆ ಅವಳ ಸರದಿ ಬಂದಾಗ ಬ್ಯಾಂಕಿನವರ ಊಟದ ಸಮಯವಾದ್ದರಿಂದ ಮಧ್ಯಾಹ್ನ ಎರಡು ಗಂಟೆಯ ನಂತರ ಬರುವಂತೆ ತಿಳಿಸಿದಾಗ ಅವಳಿಗೆ ತುಂಬಾ ನಿರಾಶೆಯಾಯಿತು. ಛೆ ತಾನು ಬೇಗನೆ ಬರಬೇಕಿತ್ತು. ತನಗೆ ಮೊದಲೇ ತಿಳಿದಿದ್ದರೆ ತಾನು ಆಫೀಸಿಗೆ ಹೋಗುವ ಬದಲು ಇಲ್ಲೇ ನಿಂತು ದುಡ್ಡು ತನ್ನ ಖಾತೆಗಾದರೂ ಬೀಳುವಂತೆ ನೋಡಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ಮನೆಯ ಕಡೆ ಧಾವಿಸಿದಳು.

ಮನೆಗೆ ಹೋಗಿ ಬೆಳಿಗ್ಗೆ ಮಾಡಿದ ಅಡಿಗೆಯನ್ನು ಬಿಸಿ ಮಾಡುತ್ತಿರುವಾಗ ಆಸ್ಪತ್ರೆಯಿಂದ ಫೋನ್ ಬಂದಿತು. ಸುಧಾ ಆತಂಕದಲ್ಲಿ ಫೋನ್ ಕೈಗೆತ್ತಿಕೊಂಡಾಗ ಅವಳ ತಾಯಿಯ ಆರೋಗ್ಯ ಹದಗೆಟ್ಟಿರುವುದರಿಂದ ಆಪರೇಶನ್ ಬೇಗನೆ ಮಾಡಬೇಕಾಗಿದೆ. ಉಳಿದ ಹಣವನ್ನು ಜಮೆ ಮಾಡಿದರೆ ಮಧ್ಯಾಹ್ನ ಎರಡುವರೆಗೆ ಆಪರೇಶನ್ ಮಾಡಬಹುದು ಎಂದು ಅವರು ತಿಳಿಸಿದಾಗ ಅವಳಿಗೆ ಕಾಲಬುಡದಲ್ಲಿ ಕುಸಿದ ಅನುಭವ. ದೇವರೇ ಏನು ಮಾಡಲಿ ಯಾರ ಸಹಾಯ ಕೇಳಲಿ ಎಂದುಕೊಳ್ಳುತ್ತ ಅಕ್ಕಪಕ್ಕದ ಮನೆಯವರ ಬಳಿ ಸಹಾಯ ಯಾಚಿಸಲು ಧಾವಿಸಿದಳು.

ಆದ್ರೆ ಅವರೆಲ್ಲರ ಪರಿಸ್ಥಿತಿ ಅವಳಿಗಿಂತ ಭಿನ್ನವಾಗಿರಲಿಲ್ಲ. ಮನೆಗೆ ಸಾಮಾನು ತರಲೂ ಅವರ ಬಳಿ ದುಡ್ಡಿರಲಿಲ್ಲ. ದೇವರೇ ಎಂಥಾ ಕಷ್ಟ ತಂದು ಬಿಟ್ಟೆ. ನಿನ್ನೆವರೆಗೆ ಅಮ್ಮನ ಆಪರೇಶನ್ ಮಾಡಲು ಏನೂ ತೊಂದರೆಯಿಲ್ಲ ಅಂದುಕೊಂಡು ನಿರಾಳವಾಗಿದ್ದವಳಿಗೆ ಈಗೆಂಥಾ ದುರ್ಗತಿ ತಂದು ಬಿಟ್ಟೆ. ನಾನು ಮಾಡಿದ ಅಪರಾಧವಾದರೂ ಏನು ಎಂದುಕೊಳ್ಳುತ್ತ ಗಳಗಳನೆ ಅತ್ತಳು. ಕೈಯಲ್ಲಿದ್ದ ನಾಲ್ಕು ಸಾವಿರ ಕೊಟ್ಟು ಉಳಿದ ಆರು ಸಾವಿರ ನಂತರ ಕೊಡುತ್ತೇನೆ ಎಂದರೆ ಡಾಕ್ಟರ್ ಒಪ್ಪಬಹುದೇನೋ, ಎಷ್ಟಾದರೂ ಡಾಕ್ಟರ್ ಜೀವ ಉಳಿಸುವವರು ಹೃದಯವಂತರು ಎಂದು ಯೋಚಿಸಿ ಆಶಾ ಕಿರಣ ಮೂಡಿದಂತಾಗಿ ಮನೆಗೆ ಬೀಗ ಹಾಕಿ ಆಸ್ಪತ್ರೆಗೆ ಓಡಿದಳು.

ಆದರೆ ಡಾಕ್ಟರ್ ಉಳಿದ ಆರು ಸಾವಿರ ಹಣ ಕೊಟ್ಟರೆ ಮಾತ್ರವೇ ಆಪರೇಶನ್ ಮಾಡುವುದು ಎಂದು ಖಡಾಖಂಡಿತವಾಗಿ ಹೇಳಿದಾಗ ಅವಳು ನಿಂತಲ್ಲೇ ಕುಸಿದಳು. ಪ್ರಾಣ ಉಳಿಸಬೇಕಾದ ಡಾಕ್ಟರ್ ಮಾನವೀಯತೆ ಮರೆತು ದುಡ್ಡಿಗೋಸ್ಕರ ನಿರ್ದಯರಾಗಬಹುದು ಎಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಈಗೇನು ಮಾಡುವುದು ಎಂದು ಅವಳಿಗೆ ತಿಳಿಯಲಿಲ್ಲ. ಉಳಿದ ಹಣಕ್ಕೆ ಪೋಸ್ಟ್ ಡೇಟ್ ನ ಚೆಕ್ ಕೊಡುತ್ತೇನೆ ಎಂದರೂ ಡಾಕ್ಟರ್ ಒಪ್ಪಲಿಲ್ಲ. ನಿಮ್ಮ ಹಾಗೆ ಎಲ್ಲರೂ ಹೇಳಿದರೆ ನಾವು ಬದುಕುವುದು ಹೇಗೆ, ನಮ್ಮ ಕಷ್ಟ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ತಾವು ಮಾಡಿದ್ದೆ ಸರಿ ಎನ್ನುವಂತೆ ಮಾತನಾಡಿದಾಗ ಅವಳಿಗೆ ಏನು ಮಾಡುವುದೆಂದು ತೋಚಲಿಲ್ಲ. ದುಃಖ ಉಮ್ಮಳಿಸಿ ಬಂದು ತಡೆಯಲಾಗದೆ ಅಮ್ಮನನ್ನು ನೋಡಲು ಧಾವಿಸಿದಳು.

ಮಗಳ ನಿಸ್ತೇಜಗೊಂಡ ಮುಖ ನೋಡಿ ತಾಯಿ ಹೃದಯ ಆತಂಕ ಪಟ್ಟಿತು. ತಮ್ಮ ನೋವಿಗಿಂತಲೂ ಮಗಳ ನೋವು ಜಾಸ್ತಿಯಾದಂತೆನಿಸಿ ಅವಳನ್ನು ವಿಚಾರಿಸಿದಾಗ ಸುಧಾ ಬೇರೆ ದಾರಿಯಿಲ್ಲದೆ ಎಲ್ಲ ವಿಷಯವನ್ನು ಹೇಳಿ ತಾನಾಗಲೇ ಮತ್ತೆ ಬ್ಯಾಂಕಿಗೆ ಹೋಗಬೇಕಾಗಿದೆ. ದುಡ್ಡು ತೆಗೆಯಬೇಕಿದೆ, ನೀನು ಧೈರ್ಯವಾಗಿರು ನಾನು ದುಡ್ಡು ತಂದೇ ತರುತ್ತೇನೆ ಎಂದಾಗ ಆ ತಾಯಿ ಹೃದಯ, ತನ್ನಿಂದಾಗಿ ಮಗಳಿಗೆ ಎಷ್ಟು ಕಷ್ಟವಾಗ್ತಿದೆ. ದೇವರೇ ಯಾಕೆ ಇಂಥಾ ಕಷ್ಟ ಕೊಡುತ್ತಿಯಾ, ಅವಳ ತಂದೆಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ತಾನಾಯಿತು ತನ್ನ ಕುಡಿತವಾಯಿತು, ಹೆಂಡತಿ ಮಕ್ಕಳು ಇದ್ದಾರೆ ಎಂದು ಮರೆತೇ ಬಿಟ್ಟಿದ್ದಾರೆ. ನಾನು ಆಸ್ಪತ್ರೆ ಸೇರಿದ ಮೇಲೆ ಒಮ್ಮೆಯೂ ನೋಡಲು ಬಂದಿಲ್ಲ. ನನಗೇನಾದರೂ ಆದರೆ ನನ್ನ ಮಗಳ ಗತಿಯೇನು, ಮಗಳಿಗೋಸ್ಕರವಾದರೂ ನನ್ನನ್ನು ಬದುಕಿಸು ದೇವರೇ ಎಂದು ಬೇಡಿಕೊಂಡರು.

ಸುಧಾ ಬ್ಯಾಂಕಿನತ್ತ ನಡೆದಾಗ ಅಲ್ಲಿ ಮತ್ತೆ ಉದ್ದನೆಯ ಸರತಿಯ ಸಾಲು ಕಂಡು ಅವಳಿಗೆ ಜೋರಾಗಿ ಅಳುವಂತಾಯಿತು. ಅಯ್ಯೋ ದೇವರೇ ನಾನು ಸಾಲು ಬಿಟ್ಟು ಮನೆಗೆ ಹೋಗಲೇ ಬಾರದಿತ್ತು. ಈಗ ಸಾಲಲ್ಲಿ ನಿಂತರೆ ಅಮ್ಮನ ಆಪರೇಶನ್ ಆದ ಹಾಗೆ ಎಂದುಕೊಳ್ಳುತ್ತ ಅಲ್ಲಿ ನಿಂತಿದ್ದ ಜನರಲ್ಲಿ ತನಗೆ ಮೊದಲ ಅವಕಾಶ ಕೊಡುವಂತೆ ಬೇಡಿಕೊಂಡಳು. ತನ್ನ ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಆಪರೇಶನ್ ಗೆ ಅರ್ಜೆಂಟಾಗಿ ದುಡ್ಡು ಬೇಕಿದೆ, ದಯವಿಟ್ಟು ನನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದಳು. ಆದರೆ ಅಲ್ಲಿದ್ದವರ ಯಾರ ಹೃದಯವೂ ಮಿಡಿಯಲಿಲ್ಲ.

ಕೆಲವರು ಮನೆಯಲ್ಲಿ ತಮ್ಮ ಹೆಂಡತಿ ಮಕ್ಕಳು ಹಸಿದುಕೊಂಡಿದ್ದಾರೆ. ಅವರಿಗೆ ನಾವು ತಿಂಡಿ ಕೊಡುವುದು ಬೇಡವೇ ನಮಗೂ ನಿಮ್ಮಂತೆ ಕಷ್ಟ ಇದೆ ಎಂದರೆ ಇನ್ನು ಕೆಲವರು ದುಡ್ಡು ತೆಗೆದುಕೊಳ್ಳೋದಿಕ್ಕೆ ಇದೊಂದು ನಾಟಕ ಮಾಡ್ತಿರಬಹುದು ಎಂದುಕೊಳ್ಳುತ್ತ, ನೋಡಮ್ಮಾ ನಿನ್ನ ನಾಟಕಕ್ಕೆಲ್ಲ ನಾವು ಕರಗೋದಿಲ್ಲ, ನಿನಗೆ ದುಡ್ಡು ಬೇಕಾದರೆ ಸಾಲಲ್ಲಿ ನಿಂತ್ಕೋ, ನೀನು ಲೇಟು ಮಾಡಿದಷ್ಟು ನಿನಗೇ ತೊಂದರೆ ಎನ್ನುತ್ತಾ ತಮ್ಮ ತಮ್ಮ ತಾಪತ್ರಯಗಳನ್ನು ಹೇಳಿ ಕೊಳ್ಳ ತೊಡಗಿದರು.

ಸುಧಾ ಮದ್ಯಾಹ್ನ ಊಟ ಕೂಡ ಮಾಡಿರಲಿಲ್ಲ. ಆದ್ದರಿಂದ ಆಯಾಸ ಹೆಚ್ಚಾಗಿ ಕಣ್ಣು ಕತ್ತಲೆ ಬರುವಂತಾಯಿತು. ಬೆಳಗ್ಗಿನಿಂದಲೂ ಒಂದೇ ಸಮನೆ ದುಡ್ಡಿಗಾಗಿ ಅಲೆದಾಡಿ ಸೋತಿದ್ದಳು. ಇದೆಂಥಾ ಗ್ರಹಚಾರ ಕೈಯಲ್ಲಿ ದುಡ್ಡಿದ್ದರೂ ಇಲ್ಲದಂಥಾ ಪರಿಸ್ಥಿತಿ. ಮೊದಲೇ ಗೊತ್ತಿದ್ದರೆ ಬಾಸ್ ಬಳಿ ತೆಗೆದುಕೊಂಡ ಮುಂಗಡ ಹಣ ತಾನು ಬ್ಯಾಂಕ್ ನಲ್ಲೆ ಇಡುತ್ತಿದ್ದೆ. ಈಗ ಕೇವಲ ಆರು ಸಾವಿರ ಹೊಂದಿಸಲು ಅದೆಷ್ಟು ಕಷ್ಟ ಪಡಬೇಕು. ದೇವರೇ ಯಾಕಿಂಥಾ ಕಷ್ಟ ಕೊಡುತ್ತಿಯಾ ಎಂದುಕೊಳ್ಳುತ್ತಿದ್ದಂತೆ ಅವಳಿಗೆ ಅಳು ಒತ್ತರಿಸಿ ಬಂದು ಜೋರಾಗಿ ಅಳತೊಡಗಿದಳು.

ಅವಳ ಅಳು ನೋಡಿ ಮುದುಕನೊಬ್ಬ, ಬಾಮ್ಮ ನನ್ನ ಜಾಗದಲ್ಲಿ ನಿಂತ್ಕೋ, ನಾನು ನಾಳೆ ಬರುತ್ತೇನೆ ಎಂದು ಹೇಳಿದಾಗ ಸುಧಾಗೆ ಎಲ್ಲಿಲ್ಲದ ಸಂತೋಷವಾಗಿ ಆ ಮುದುಕನನ್ನು ಅಪ್ಪಿಕೊಂಡು ತನ್ನ ಸಂತಸ ವ್ಯಕ್ತ ಪಡಿಸಿದಳು. ಥಾಂಕ್ಸ್ ಅಂಕಲ್, ನಿಮ್ಮಿಂದ ತುಂಬಾ ಉಪಕಾರವಾಯಿತು, ನನ್ನ ತಾಯಿ ಜೀವ ಉಳಿಸಿದ ಪುಣ್ಯ ನಿಮಗೆ ಬರುತ್ತೆ ಎಂದು ಮನಪೂರ್ವಕವಾಗಿ ಹೇಳಿದಾಗ ಆತ ನಗುತ್ತ, ಸರಿಯಮ್ಮ ದುಡ್ಡು ತೆಗೆದುಕೊಂಡು ಅಮ್ಮನಿಗೆ ಆಪರೇಶನ್ ಮಾಡಿಸು ಎಂದು ಹೇಳಿ ಆತ ಹೊರಟುಹೋದ.

ಸುಧಾ ಸಮಯ ನೋಡಿದಾಗ ಎರಡು ಗಂಟೆಯಾಗಿತ್ತು. ಅಯ್ಯೋ ದೇವರೇ ಇನ್ನು ಅರ್ಧ ಗಂಟೆಯಲ್ಲಿ ಆಪರೇಶನ್ ಮಾಡುತ್ತೇನೆ ಎಂದಿದ್ದರು. ಈಗ ದುಡ್ಡು ಕೊಡದೆ ಹೋದರೆ ಆಪರೇಶನ್ ಮಾಡುವುದಿಲ್ಲ ಎಂದು ಗಾಬರಿಯಾಗಿ ತನಗಿಂತ ಮುಂದೆ ನಿಂತಿದ್ದವರನ್ನು ತನಗೆ ಮೊದಲು ಹೋಗಲು ಅವಕಾಶ ಮಾಡಿಕೊಡಿ ಎಂದು ಇನ್ನಿಲ್ಲದಂತೆ ಬೇಡಿಕೊಂಡಳು. ಆದರೆ ಅಲ್ಲಿ ನಿಂತಿದ್ದವರ ಮನಸ್ಸು ಕರಗಲಿಲ್ಲ. ಜನರು ಒಬ್ಬೊಬ್ಬರಾಗಿ ಮುಂದಕ್ಕೆ ಹೋಗುತ್ತಿದ್ದಂತೆ ಸುಧಾ ನಿಂತಲ್ಲೇ ಚಡಪಡಿಸಿದಳು. ದುಡ್ಡು ಡ್ರಾ ಮಾಡಿಕೊಂಡವರ ಬಳಿ ಹಣ ಕೊಡಲು ಕೇಳಿ ಅದರ ಬದಲು ತಾನು ಚೆಕ್ ನೀಡುವೆ ಎಂದು ಬೇಡಿಕೊಂಡಳು.

ಆದರೂ ಜನ ಅವಳ ಮಾತಿಗೆ ಕಿವಿಕೊಡದೆ ತಮಗೆ ದುಡ್ಡು ಸಿಕ್ಕಿದ ಸಂತಸದಿಂದ ಮನೆಯ ಕಡೆ ಧಾವಿಸ ತೊಡಗಿದರು. ಕೊನೆಗೆ ಮಹಿಳೆಯೊಬ್ಬಳು ಅವಳ ಮನವಿಗೆ ಕರಗಿ ತಾನು ತೆಗೆದ ದುಡ್ಡಿನಲ್ಲಿ ಆರು ಸಾವಿರ ರೂಪಾಯಿ ಕೊಟ್ಟು ಅವಳ ಬಳಿ ಚೆಕ್ ಬರೆಸಿಕೊಂಡಳು. ಸುಧಾ ಅತ್ಯಂತ ಸಂತಸದಿಂದ ಆಕೆಗೆ ಧನ್ಯವಾದ ತಿಳಿಸಿ ಆಸ್ಪತ್ರೆಯತ್ತ ಓಡಿದಳು. ಸಮಯ ನೋಡಿದಾಗ ಎರಡು ಮುಕ್ಕಾಲಾಗಿತ್ತು. ಅಯ್ಯೋ ದೇವರೇ ಡಾಕ್ಟರ್ ಅಮ್ಮನಿಗೆ ಆಪರೇಶನ್ ಮಾಡಲು ಶುರು ಮಾಡಿರಬಹುದೇ ಅಥವಾ ನಾನು ಬರಲೆಂದು ಕಾಯ್ತಾ ಕೂತಿರಬಹುದೇ, ಅಮ್ಮ ಹೇಗಿರಬಹುದು ಅವಳಿಗೇನೂ ಆಗದೇ ಇರಲಿ ಎಂದು ಆಶಿಸುತ್ತ ಮತ್ತೆ ಓಡಿದಳು.

ಅಷ್ಟರಲ್ಲಿ ಅವಳ ಫೋನ್ ರಿಂಗಣಿಸಿತು. ಸುಧಾಗೆ ಭಯವಾಗಿ ಬೇಗನೆ ತೆಗೆದು ನೋಡಿದಳು. ಆಸ್ಪತ್ರೆಯಿಂದ ಫೋನ್ ಬಂದಿತ್ತು. ಅವಳು ಫೋನ್ ಎತ್ತಿ ತಕ್ಷಣ, ನಾನು ದುಡ್ಡು ತೆಗೆದುಕೊಂಡು ಬರ್ತಿದ್ದೀನಿ, ಅಮ್ಮನಿಗೆ ಆಪರೇಶನ್ ಶುರು ಮಾಡಿ ಎಂದು ಹೇಳಿದಾಗ ಅತ್ತ ಕಡೆಯಿಂದ, ಇನ್ನು ಅವರಿಗೆ ಆಪರೇಶನ್ ಅಗತ್ಯವಿಲ್ಲ, ನಿಮ್ಮ ತಾಯಿ ತೀರಿಕೊಂಡರು ಎಂದು ಹೇಳಿದಾಗ ಸುಧಾಗೆ ಆಘಾತವಾಗಿ ಅಲ್ಲೇ ಕುಸಿದಳು. ಅಯ್ಯೋ ದೇವರೇ, ಏನಾಗಿ ಹೋಯ್ತಮ್ಮ, ಕೈಯಲ್ಲಿ ಕಾಸಿದ್ದೂ ನಿನ್ನ ಆಪರೇಶನ್ ಮಾಡಿಸಲಾಗಲಿಲ್ಲವಲ್ಲ. ನಿನ್ನನ್ನು ಬಿಟ್ಟು ಬೇರೆ ಯಾರಿದ್ದಾರಮ್ಮ ನನಗೆ, ಯಾಕೆ ನನ್ನನ್ನು ಬಿಟ್ಟು ಹೋದೆ, ನಾನು ಬರುವವರೆಗೂ ಕಾಯಬಾರದಿತ್ತೆ, ನೀನಿಲ್ಲದೆ ನಾನು ಹೇಗೆ ಬದುಕಲಮ್ಮ ಎನ್ನುತ್ತಾ ಸುಧಾ ಒಂದೇ ಸಮನೇ ರೋಧಿಸತೊಡಗಿದಳು.

ಫೋಟೋದಲ್ಲಿನ ಹುಡುಗ

ಎದುರು ಮನೆಯಿಂದ ಹೊರಬರುತ್ತಿದ್ದ ಯುವಕನನ್ನು ನೋಡಿ ಶುಭಾ ಆಶ್ಚರ್ಯ ಪಟ್ಟಳು. ಆ ಮನೆಯಲ್ಲಿ ಅವಳಿಗೆ ತಿಳಿದಂತೆ ಬರೀ ವೃದ್ಧ ದಂಪತಿಗಳು ವಾಸವಿದ್ದರು. ಇದುವರೆಗೂ ಬೇರೆ ಯಾರೂ ಆ ಮನೆಗೆ ಬಂದಿದ್ದನ್ನು ಅವಳು ನೋಡಿರಲೇ ಇಲ್ಲ. ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದರು. ಅವರೆಲ್ಲ ಬರೀ ಫೋನ್ ನಲ್ಲಿ ಮಾತನಾಡಿ ಅವರ ಖರ್ಚಿಗೆ ದುಡ್ಡು ಕಳುಹಿಸುತ್ತಿದ್ದರೇ ಹೊರತು ಒಂದು ದಿನವೂ ಬಂದಿದ್ದನ್ನು ಯಾರೂ ನೋಡಿರಲಿಲ್ಲ. ಹಾಗಾದರೆ ಈಗ ಬಂದಿರುವ ಹುಡುಗ ಯಾರು, ಅವರ ಸಂಬಂಧಿಕನೇ ಅಥವಾ ಅವರ ಮೊಮ್ಮಗ ಇರಬಹುದೇ ಎಂದುಕೊಳ್ಳುತ್ತಿದ್ದಂತೆ ಆ ಹುಡುಗ ಶುಭಾಳನ್ನೇ ನೋಡುತ್ತಾ ನಸುನಕ್ಕು ಮುಂದೆ ಹೋದ. ಶುಭಾಗೆ ಅವನನ್ನು ಎಲ್ಲೋ ನೋಡಿದ ನೆನಪು. ಅರೆ! ಇವನು ತನ್ನ ಪರಿಚಯದವನೇ! ಯಾರಿರಬಹುದು, ಅವನನ್ನು ನೋಡಿ ನಗಬೇಕೋ ಬೇಡವೋ ಎಂದು ಅವಳು ಗೊಂದಲದಲ್ಲಿರುವಾಗಲೇ ಅವನು ಮುಂದೆ ಹೋಗಿಯಾಗಿತ್ತು. ಅಷ್ಟರಲ್ಲಿ ಅವಳಿಗೆ ತಾನಿನ್ನೂ ಕಾಲೇಜಿಗೆ ಹೊರಟಿಲ್ಲ ಎಂದು ನೆನಪಾಗಿ ದಾಪುಗಾಲು ಹಾಕುತ್ತ ಶುಭ ಮನೆಯೊಳಕ್ಕೆ ಓಡಿದಳು.

ಕಾಲೇಜಿನಲ್ಲಿ ಆ ಹುಡುಗ ಎಲ್ಲೂ ಕಾಣಿಸಲಿಲ್ಲ. ಹಾಗಿದ್ದರೆ ಅವನನ್ನು ತಾನು ಎಲ್ಲಿ ನೋಡಿರಬಹುದು ಎಂದು ಶುಭಾ ಯೋಚಿಸತೊಡಗಿದಳು. ಅದೇ ಯೋಚನೆಯಲ್ಲಿ ಮುಂದೆ ಸಾಗುತ್ತಿದ್ದವಳಿಗೆ ತನ್ನ ಕ್ಲಾಸು ಬಂದಿದ್ದು ಅರಿವಾಗಲಿಲ್ಲ. ಅವತ್ತು ಕಾಲೇಜು ಮುಗಿಸಿ ಮನೆಗೆ ಬಂದ ಮೇಲೆ ಎದುರು ಮನೆಯನ್ನೇ ದಿಟ್ಟಿಸಿ ನೋಡುತ್ತಾ ಆ ಯುವಕ ಎಲ್ಲಾದರೂ ನೋಡಲು ಸಿಗಬಹುದೇ ಎಂದು ಅತ್ತಿತ್ತ ನೋಡಿದಳು. ಅವಳ ತಾಯಿ ಶುಭಾಳನ್ನು, ಯಾಕೆ ಅಲ್ಲಿ ನಿಂತಿದ್ದಿಯಾ ಒಳಗೆ ಬಾ ಎಂದಾಗ ಶುಭಾ ಆ ಹುಡುಗನ ಬಗ್ಗೆ ಅಮ್ಮನಿಗೆ ಹೇಳುವುದೋ ಬೇಡವೋ ಎಂದು ಯೋಚಿಸುತ್ತ ಒಳಗೆ ಹೋದಳು. ಮರುದಿನ ಬೆಳಗ್ಗೆ ಮತ್ತೆ ಆ ಯುವಕ ಮನೆಯಿಂದ ಹೊರಬರುತ್ತಿರುವುದನ್ನು ನೋಡಿ ಶುಭಾಗೆ ಅವನು ಆ ಮನೆಯಲ್ಲಿರುವುದು ಖಚಿತವಾಯಿತು. ಅಂದು ಅವನು ಅವಳನ್ನು ನೋಡಿ ನಕ್ಕಾಗ ಅವಳಿಗರಿವಿಲ್ಲದಂತೆ ಅವಳ ಮುಖದಲ್ಲಿ ನಗು ಮೂಡಿತು. ಅವನು ಮುಂದೆ ಹೋಗುತ್ತಿರುವಾಗ ಅವನ ಕೈನಲ್ಲಿದ್ದ ಪುಸ್ತಕವೊಂದು ಜಾರಿ ಕೆಳಗೆ ಬಿದ್ದಿತು. ಆದರೆ ಅದನ್ನು ಆತ ಗಮನಿಸಿದಂತೆ ಕಾಣಲಿಲ್ಲ. ಶುಭಾ ಓಡಿಹೋಗಿ ಅದನ್ನು ಎತ್ತಿಕೊಂಡು ಅವನನ್ನು ಕೂಗಿ ಕರೆಯುವಷ್ಟರಲ್ಲಿ ಅವನು ಹೊರಟು ಹೋಗಿದ್ದ. ಅವಳು ಇದೇ ಸಮಯವೆಂದುಕೊಂಡು, ಅವನ ಬಗ್ಗೆ ತಿಳಿಯಲು ಪುಸ್ತಕದ ನೆಪ ಹಿಡಿದು ಎದುರು ಮನೆಯತ್ತ ಹೆಜ್ಜೆ ಹಾಕಿದಳು.

ಬೆಲ್ ಮಾಡಿದಾಗ ಅಜ್ಜಿ ಬಾಗಿಲು ತೆರೆದು ಏನು ಎನ್ನುವಂತೆ ಹುಬ್ಬೇರಿಸಿದರು. ಶುಭಾ ಅವರಿಗೆ ಪುಸ್ತಕ ಕೊಡುತ್ತಾ, ಈಗ ತಾನೇ ನಿಮ್ಮ ಮನೆಯಿಂದ ಹೊರಹೋದ ಹುಡುಗನ ಕೈಯಿಂದ ಬಿದ್ದ ಪುಸ್ತಕ ಇದು. ನಾನು ಅವನನ್ನು ಎಷ್ಟೇ ಕೂಗಿ ಕರೆದರೂ ಅವನು ನಿಲ್ಲದೆ ಹೊರಟು ಹೋದ ಎಂದಾಗ ಅಜ್ಜಿ, ಇಲ್ಲಿ ಯಾವ ಹುಡುಗನೂ ಇಲ್ಲವೆಂದು ನಿನಗೆ ಗೊತ್ತಿಲ್ಲವೇ. ನಾವಿಬ್ಬರೇ ಮನೆಯಲ್ಲಿರುವುದು. ನೀನು ಯಾರನ್ನು ನೋಡಿದ್ಯೋ ಏನೋ ಎಂದು ಹೇಳಿ ಬಾಗಿಲು ಮುಚ್ಚಿದಾಗ ಶುಭಾಗೆ ಆಘಾತವಾಯಿತು. ಬಹುಶಃ ಆ ಅಜ್ಜಿಗೆ ತಾನು ಅವನ ಸ್ನೇಹ ಬೆಳೆಸುವುದು ಇಷ್ಟವಿಲ್ಲವೇನೋ ಅದಕ್ಕೆ ಹಾಗಂದಿರಬೇಕು ಎಂದುಕೊಂಡಾಗ ಅವಳ ಮನಸ್ಸು ಮುದುರಿತು. ಶುಭಾ ಅಲ್ಲಿಂದ ಹೊರಟು ತನ್ನ ಮನೆಗೆ ಬಂದ ಮೇಲೆ ಪುಸ್ತಕವನ್ನು ತನ್ನ ರೂಮಿಗೆ ತೆಗೆದುಕೊಂಡು ಹೋಗಿ ಟೇಬಲ್ ಮೇಲೆ ಇಡುವಾಗ ಆ ಪುಸ್ತಕವನ್ನೇ ನೋಡಿದರೆ ಅವನ್ಯಾರು, ಏನು ಓದುತ್ತಿದ್ದಾನೆ ಎಂದು ತಿಳಿಯಬಹುದು. ಎಂದು ಪುಸ್ತಕ ತೆರೆದು ನೋಡಿದರೆ ಅದು ಅವಳದ್ದೇ ಪುಸ್ತಕ. ಅರೆ! ತನ್ನ ಪುಸ್ತಕ ಆವನ ಬಳಿ ಹೇಗೆ ಬಂದಿತು. ತಾನೇನೂ ತನ್ನ ಪುಸ್ತಕ ಯಾರಿಗೂ ಕೊಡಲೇ ಇಲ್ಲ ಎಂದುಕೊಳ್ಳುತ್ತ ನೆನಪಿಸಿಕೊಳ್ಳತೊಡಗಿದಳು.

ತಕ್ಷಣ ಅವಳಿಗೆ ಕೆಲವು ತಿಂಗಳುಗಳ ಹಿಂದೆ ತನ್ನ ಪುಸ್ತಕ ಕಳೆದು ಹೋಗಿದ್ದು ನೆನಪಾಗಿ ಅರೆ, ಇದೇ ಅದು. ಬಹುಶ ಅವನಿಗೆ ಇಷ್ಟು ಸಮಯದಿಂದ ಪುಸ್ತಕವನ್ನು ತನಗೆ ಕೊಡಲು ಧೈರ್ಯ ಸಾಲದೇ ಕೊನೆಗೆ ಕೆಳಗೆ ಬೀಳಿಸಿಕೊಂಡು ಹೋಗಿರಬೇಕು ಎಂದುಕೊಂಡು ಪುಕ್ಕಲ ಎಂದುಕೊಳ್ಳುತ್ತ ನಕ್ಕಳು. ಪುಸ್ತಕ ತೆರೆದು ಪುಟಗಳನ್ನು ತಿರುವುತ್ತಿರುವಾಗ ಅಲ್ಲೊಂದು ಫೋಟೋ ಇದ್ದುದು ನೋಡಿ ಕುತೂಹಲದಿಂದ ನೋಡುವಾಗ ಅದು ಆ ಹುಡುಗನದ್ದೇ ಫೋಟೋ! ನನ್ನ ಪುಸ್ತಕದಲ್ಲಿ ಅವನ ಫೋಟೋ ಯಾಕಿದೆ. ಅವನು ಬೇಕೆಂದೇ ಇಟ್ಟಿರಬಹುದೇ ಎಂದುಕೊಳ್ಳುತ್ತ ಫೋಟೋವನ್ನೇ ದಿಟ್ಟಿಸಿ ನೋಡಿದಳು.

ಇವನನ್ನು ಮೊದಲೇ ಎಲ್ಲೋ ನೋಡಿದ್ದೇನೆ ಆದರೆ ಎಲ್ಲಿ ಎಂದು ನೆನಪಿಗೆ ಬರುತ್ತಿಲ್ಲ ಎಂದುಕೊಳ್ಳುತ್ತ ಫೋಟೋವನ್ನು ತಿರುಗಿಸಿ ನೋಡಿದಾಗ ಅಲ್ಲಿ ‘ಐ ಲವ್ ಯೂ’ ಎಂದು ಬರೆದು ಕೆಳಗೆ ಫೋನ್ ನಂಬರ್ ಬರೆದಿತ್ತು. ಅದನ್ನು ನೋಡಿ ಅವಳ ಮುಖ ಲಜ್ಜೆಯಿಂದ ಕೆಂಪೇರಿತು. ಅವನು ಇದನ್ನು ತನಗೆ ಹೇಳಿರಬಹುದೇ. ನಾನು ಕಳೆದುಕೊಂಡ ಪುಸ್ತಕವನ್ನು ಅದಕ್ಕಾಗಿಯೇ ಅವನು ತನ್ನ ಬಳಿ ಇಟ್ಟು ಕೊಂಡಿದ್ದನೇ. ಇವತ್ತು ಇದನ್ನು ಹೇಳಿ ತನಗೆ ಅವನ ನಂಬರ್ ಕೊಡಲೆಂದು ತನ್ನೆದುರೇ ಪುಸ್ತಕ ಬೀಳಿಸಿಕೊಂಡು ಹೋಗಿರಬಹುದೇ ಎಂದುಕೊಂಡಾಗ ಅವಳ ಕೆನ್ನೆಗಳು ಮತ್ತಷ್ಟು ಕೆಂಪಾದವು. ಆ ಫೋಟೋವನ್ನು ಮತೊಮ್ಮೆ ನೋಡಿ, ನೋಡಲು ಎಷ್ಟು ಚೆನ್ನಾಗಿದ್ದಾನೆ. ಅವನ ಗುಣ, ನಡತೆಯೂ ಚೆನ್ನಾಗಿದ್ದರೆ ತಾನೂ ಅವನು ಪ್ರೇಮಿಗಳಾಗಿ ನಂತರ ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿ ಬಾಳಬಹುದು ಎಂದು ಮನಸ್ಸು ತುಂಬಾ ದೂರವರೆಗಿನ ಕನಸು ಕಾಣತೊಡಗಿತು. ಅಷ್ಟರಲ್ಲಿ ಅವಳ ತಾಯಿ ಕರೆದಿದ್ದರಿಂದ ಶುಭಾ ಕನಸಿನಿಂದ ವಾಸ್ತವಕ್ಕೆ ಬಂದಳು. ಬೇಗನೆ ಆ ಫೋಟೋವನ್ನು ಬಚ್ಚಿಟ್ಟು ರೂಮಿಂದ ಹೊರಗೋಡಿದಳು.

ಮರುದಿನ ಶುಭಾ ಬೇಗನೆ ಕಾಲೇಜಿಗೆ ರೆಡಿಯಾಗಿ ಆ ಹುಡುಗನಿಗಾಗಿ ಕಾಯುತ್ತ ಕುಳಿತಳು. ಆದರೆ ಆ ಹುಡುಗ ಮನೆಯಿಂದ ಹೊರಬರಲೇ ಇಲ್ಲ. ಇವತ್ತು ಕಾಲೇಜಿಗೆ ಹೋಗುವುದಿಲ್ಲವೇನೋ ಅಂದುಕೊಳ್ಳುತ್ತ ಶುಭಾ ನಿರಾಶೆಯಿಂದ ಕಾಲೇಜಿನತ್ತ ಹೆಜ್ಜೆ ಹಾಕಿದಳು. ಅವತ್ತು ಮನೆಗೆ ಬಂದಮೇಲೆ ಅವಳಿಗೆ ಒಂದು ಫೋನ್ ಕರೆ ಬಂದಿತು. ಯಾವುದೋ ಹೊಸ ನಂಬರ್. ತನಗ್ಯಾರು ಕಾಲ್ ಮಾಡುತ್ತಾರೆ, ಈ ಹೊಸ ನಂಬರ್ ಯಾರದು ಎಂದು ದಿಟ್ಟಿಸಿ ನೋಡುತ್ತಿರುವಾಗ ಆ ನಂಬರ್ ತನಗೆ ಪರಿಚಿತ ಎನಿಸಿ ಯಾರದಿರಬಹುದು ಎಂದುಕೊಳ್ಳುತ್ತಿದ್ದಾಗಲೇ ಆ ಕರೆ ನಿಂತಿತು. ತಕ್ಷಣ ಆವಳಿಗೆ ಏನೋ ಹೊಳೆದಂತಾಗಿ ಆ ಹುಡುಗನ ಫೋಟೋದ ಹಿಂದಿದ್ದ ನಂಬರ್ ತೆಗೆದು ನೋಡಿದಾಗ ಅವಳಿಗೆ ಶಾಕ್ ಆಯಿತು. ಅದೇ ನಂಬರ್! ಅಂದರೆ ಅವನು ಕರೆ ಮಾಡಿದ್ದ! ಆದರೆ ತನ್ನ ನಂಬರ್ ಅವನಿಗೆ ಹೇಗೆ ತಿಳಿಯಿತು. ಬಹುಶಃ ತನ್ನ ಗೆಳತಿಯರನ್ನು ಕೇಳಿ ಪಡಕೊಂಡಿರಬೇಕು ಎಂದುಕೊಳ್ಳುತ್ತಿದ್ದಂತೆ ಅವಳ ಮುಖದಲ್ಲಿ ನಗು ಮೂಡಿತು. ಮತ್ತೆ ಕರೆ ಮಾಡಿದರೆ ತಾನು ಎತ್ತಬೇಕೋ ಬೇಡವೋ ಎಂದು ಯೋಚಿಸಿದಾಗ ಅವನು ಎದುರು ಮನೆಯವನೇ ಆದ್ದರಿಂದ ತೊಂದರೆ ಮಾಡಲಾರ ಎಂದುಕೊಂಡು ನಿರಾಳವಾದಳು.

ಆದರೆ ಅವಳಿಗೆ ಆ ನಂಬರ್ ನಿಂದ ಮತ್ತೆ ಫೋನ್ ಬರದಾಗ ಶುಭಾಗೆ ನಿರಾಸೆಯಾಯಿತು. ತಾನು ಅವನು ಕರೆ ಮಾಡಿದಾಗ ಎತ್ತಲಿಲ್ಲವೆಂದು ಅವನಿಗೆ ಬೇಸರವಾಗಿರಬಹುದೇ ಎಂದುಕೊಂಡರೂ ಇಷ್ಟು ಬೇಗ ಅಷ್ಟೊಂದು ಮುಂದುವರಿಯುವುದು ಬೇಡವೆಂದು ಅವಳಿಗೆ ಅನಿಸಿತು. ಮರುದಿನವೂ ಅವನು ಎದುರು ಮನೆಯಿಂದ ಹೊರಬರಲಿಲ್ಲ. ಶುಭಾ, ಅವನು ತಾನು ಹೊರಬರುವ ಮೊದಲೇ ಹೋಗಿರಬಹುದೇ ಅಥವಾ ಅವನಿಗೆ ಹುಷಾರಿಲ್ಲವೇ ಎಂದುಕೊಂಡಳು. ಅವಳಿಗೆ ಬೇಸರವಾಗಿ ಒಳಹೋಗಿ ತಾನು ಕಾಲೇಜಿಗೆ ಹೊರಡುತ್ತಿರುವಾಗ ಅವಳ ತಾಯಿ, ಎಲ್ಲಿಗೆ ಹೊರಟೆ. ಇವತ್ತು ಕಾಲೇಜಿಗೆ ರಜಾ ಅಲ್ಲವೇ ಎಂದಾಗ ಶುಭಾ ಓಹ್, ಮರೆತೇ ಬಿಟ್ಟಿದ್ದೆ ಎಂದು ನಕ್ಕು ಅದಕ್ಕೆ ಅವನು ಕಾಣಿಸಿಕೊಂಡಿಲ್ಲ. ಅವನ ಧ್ಯಾನದಲ್ಲಿ ತನಗಿವತ್ತು ಕಾಲೇಜಿಗೆ ರಜಾ ಎಂದೂ ತಲೆಗೆ ಹೊಳೆಯಲಿಲ್ಲ. ಹೀಗಾದರೆ ಮುಂದೆ ಬಹಳ ಕಷ್ಟ. ತಾನು ಅವನ ಬಗ್ಗೆ ಅಷ್ಟೊಂದು ಯೋಚನೆ ಮಾಡಬಾರದು ಎಂದು ತನ್ನ ಬ್ಯಾಗನ್ನು ಟೇಬಲ್ ಮೇಲೆ ಇಡುವಾಗ ಅವಳ ಫೋನ್ ರಿಂಗಣಿಸಿತು.

ನೋಡಿದರೆ ಅವನದ್ದೇ ಫೋನ್. ತಕ್ಷಣ ಎತ್ತಿದ ಶುಭಾ ಹಲೋ ಎಂದಾಗ ಅವನೂ ಹಲೋ ಎಂದ. ನಂತರ ಮೌನ. ಬಹುಶಃ ಅವನಿಗೆ ನನ್ನ ಬಳಿ ಏನು ಮಾತನಾಡಬೇಕೆಂದು ತೋಚುತ್ತಿಲ್ಲವೇನೋ ಅಥವಾ ನಾಚಿಕೆಯೋ ಏನೋ ಎಂದುಕೊಂಡು ತಾನೇ ಏನಾದರೂ ಮಾತನಾಡೋಣ ಎನ್ನುವಷ್ಟರಲ್ಲಿ ಕಾಲ್ ಕಟ್ಟಾಯಿತು. ಇದೇನಿದು, ತಾನು ಮಾತನಾಡಿಲ್ಲ ಎಂದು ಅವನೇ ಕಾಲ್ ಕಟ್ ಮಾಡಿದನೇ ಅಥವಾ ನೆಟ್ ವರ್ಕ್ ಸಮಸ್ಯೆ ಇರಬಹುದೇ ಎಂದು ಯೋಚಿಸುತ್ತ ಅವನಿಗೆ ಮೆಸೇಜು ಮಾಡಿದಳು. ಹಾಯ್, ನೀವು ಯಾರೂಂತ ನೆನಪಾಗುತ್ತಿಲ್ಲ ಆದರೆ ನಿಮ್ಮನ್ನೆಲ್ಲೋ ನೋಡಿದ ನೆನಪು ಎಂದು ಬರೆದು ಅವನ ನಂಬರ್ ಗೆ ಕಳುಹಿಸಿದಳು. ತಕ್ಷಣ, ನಾನು ಸುಶಾಂತ್. ಡಿಗ್ರಿ ಓದುತ್ತಿದ್ದೇನೆ ಎಂದು ಅವನಿಂದ ಉತ್ತರ ಬಂದಾಗ ಶುಭಾಗೆ ಅವನ ಹೆಸರೂ ಕೂಡ ಪರಿಚಿತ ಎನಿಸಿತು. ತನ್ನ ಕಾಲೇಜಿನವನೇ ಎಂದು ಮರು ಪ್ರಶ್ನಿಸಿದಾಗ ಅವನು, ಅಲ್ಲ ಬೇರೆ ಕಾಲೇಜು ಎಂದ. ಶುಭಾ ಬಹುಶಃ ಅವನನ್ನು ತಾನು ಬಸ್ಸಿನಲ್ಲಿ ನೋಡಿರಬಹುದು ಎಂದುಕೊಂಡು ಸಮಾಧಾನ ಪಟ್ಟುಕೊಂಡಳು. ಅಂದಿನಿಂದ ಅವರ ಮೆಸೇಜುಗಳು ಪರಸ್ಪರ ವಿನಿಮಯವಾಗತೊಡಗಿದವು. ಹೀಗೆ ಅವನೊಂದಿಗೆ ಸುಮ್ಮನೆ ಹರಟುತ್ತಿದ್ದಾಗ ಶುಭಾ, ಅವನ ಅಜ್ಜಿ ಅವನಿಲ್ಲವೆಂದು ಹೇಳಿದ್ದನ್ನು ತಿಳಿಸಿದಾಗ ಅವನು ತಾನು ಆ ಮನೆಯವನಲ್ಲ, ಯಾವುದೋ ಕೆಲಸದ ಮೇಲೆ ಹೋಗಿದ್ದೆ ಎಂದು ಅವನು ಹೇಳಿದ್ದನ್ನು ನೋಡಿ ಶುಭಾ ಚಕಿತಗೊಂಡಳು.

ಅವಳು ಆತನನ್ನು ಎರಡು ದಿನ ಅದೇ ಮನೆಯಿಂದ ಹೊರಬರುತ್ತಿದ್ದುದನ್ನು ನೋಡಿದ್ದಳು. ಅವನು ನೋಡಿದರೆ ತಾನು ಆ ಮನೆಯವನಲ್ಲ ಎನ್ನುತ್ತಿದ್ದಾನೆ. ಅವನು ತನ್ನಿಂದ ಏನಾದರೂ ಮುಚ್ಚಿಡುತ್ತಿದ್ದಾನೆಯೇ ಅಥವಾ ಸುಮ್ಮನೆ ತಮಾಷೆಗೆ ಹೇಳುತ್ತಿರಬಹುದೇ. ಆದರೆ, ನಂತರ ತಾನು ಅವನನ್ನು ನೋಡಲೇ ಇಲ್ಲ ಎಂದು ಎನಿಸಿ ಅವಳಿಗೆ ಅವನ ಜೊತೆ ಮಾತು ಮುಂದುವರೆಸುವ ಇಷ್ಟವಾಗದೆ ಫೋನ್ ತೆಗೆದಿಟ್ಟು ಅಲ್ಲಿಂದ ಎದ್ದು ಹೋದಳು. ನಂತರ ಶುಭಾ ಅವನಿಗೆ ಮೆಸೇಜ್ ಮಾಡಲಿಲ್ಲ. ಅವನಿಂದಲೂ ಮೆಸೇಜ್ ಬರಲಿಲ್ಲ. ಮೂರು ದಿನಗಳು ಕಳೆದವು. ಅವನ ಜೊತೆ ಮಾತನಾಡಬೇಕೆಂದು ಅವಳಿಗೆ ಹಂಬಲ ಇದ್ದರೂ ಅವನೇ ಮೆಸೇಜ್ ಮಾಡಲಿ. ಅವನು ತನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ. ಹಾಗಾಗಿ ಅವನೇ ಮೊದಲು ಮಾತನಾಡಲಿ ಎಂದುಕೊಂಡಳು. ಆದರೆ ಅವಳು ಕಾದಿದ್ದೆ ಬಂದಿತು, ಅವನು ಮಾತ್ರ ಮೆಸೇಜು ಮಾಡಲೇ ಇಲ್ಲ. ಅವನು ಎದುರು ಮನೆಯಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಇದರಲ್ಲಿ ಏನೋ ಗೊಂದಲವಿದೆ. ತಾನು ಅವನ ಬಗ್ಗೆ ಸರಿಯಾಗಿಯೇ ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು ಎಂದುಕೊಂಡು ಶುಭಾ ಯೋಚನೆ ಮಾಡುತ್ತಿದ್ದಾಗ ಅವನ ಮೆಸೇಜ್ ಬಂದಿತು.

ಮೂರು ದಿನಗಳ ನಂತರ ಮೆಸೇಜ್ ಮಾಡಿದ್ದಾನೆ. ಈಗವನಿಗೆ ತನ್ನ ನೆನಪಾಯಿತೇ ಎಂದು ನಸುಮುನಿಸಿನಿಂದ ಅವನ ಮೆಸೇಜ್ ಓದಿದಳು. ತಾನು ಬಹಳ ದೂರ ಹೋಗುತ್ತಿರುವುದಾಗಿಯೂ ತನಗೆ ಅವಳನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಹೋಗುವ ಮೊದಲು, ಅವಳನ್ನು ತಾನು ಮನಸಾರೆ ಪ್ರೀತಿಸುತ್ತಿದ್ದೇನೆ ಎಂದು ತಿಳಿಸಬೇಕಾಗಿತ್ತು ಎಂದು ಬರೆದಿತ್ತು. ಶುಭಾ ಅದನ್ನು ನೋಡಿ ಕಂಗಾಲಾದಳು. ಅವನೇಕೆ ತನ್ನನ್ನು ಬಿಟ್ಟು ಹೋಗುತ್ತಿದ್ದಾನೆ. ಅವನಿಗೆ ಅಂಥಾ ಅನಿವಾರ್ಯ ಪರಿಸ್ಥಿತಿ ಏನು ಬಂದಿರಬಹುದು ಅಥವಾ ಅವನು ತನ್ನನ್ನು ಪ್ರೀತಿಸುತ್ತಿದ್ದಾನೆಂದು ಅವನ ಹೆತ್ತವರಿಗೆ ತಿಳಿದು ಅವರಿಗೆ ಇಷ್ಟವಿಲ್ಲದಿರಬಹುದೇ, ಅದಕ್ಕಾಗಿ ಅವರು ಅವನನ್ನು ನನ್ನಿಂದ ದೂರ ಕಳುಹಿಸುತ್ತಿರಬಹುದೇ ಎಂದು ಯೋಚಿಸುತ್ತ, ಯಾಕೆ? ಎಲ್ಲಿಗೆ ಹೋಗ್ತಿದ್ದೀಯಾ ಎಂದು ತಕ್ಷಣ ಮೆಸೇಜ್ ಕಳುಹಿಸಿ ಉತ್ತರಕ್ಕಾಗಿ ಕಾಯುತ್ತ ಕುಳಿತಳು.

ಶುಭಾಳ ತಂದೆ, ಗುಜುರಿಯವ ಬಂದಿದ್ದಾನೆ. ಅವನಿಗೆ ಅಟ್ಟದ ಮೇಲಿನ ಹಳೆಯ ಪೇಪರ್ ತೆಗೆದು ಕೊಡಲು ತನಗೆ ಸಹಾಯ ಮಾಡಲು ಬಾ ಎಂದು ಕರೆದಾಗ ಶುಭಾ ತನ್ನ ಆಲೋಚನೆಗಳಿಂದ ಹೊರಬಂದು ತಂದೆಗೆ ಸಹಾಯ ಮಾಡಲು ಧಾವಿಸಿದಳು. ಶುಭಾ ನಿರುತ್ಸಾಹದಿಂದಲೇ ಅಪ್ಪ ಕೊಟ್ಟ ಹಳೆಯ ಪೇಪರ್ ಗಳನ್ನೂ ಎಲ್ಲ ಒಂದೆಡೆ ರಾಶಿ ಹಾಕಿದಳು. ನಂತರ ಅದನ್ನೆಲ್ಲ ಸರಿಯಾಗಿ ಜೋಡಿಸುವಾಗ ಕೆಳಗೆ ಬಿದ್ದಿದ್ದ ಪೇಪರ್ ನಲ್ಲಿ ಏನೋ ನೋಡಿದ ಹಾಗಾಗಿ ಆ ಪೇಪರನ್ನು ಎತ್ತಿ ನೋಡಿದಾಗ ಅವಳಿಗೆ ಆಘಾತ ಕಾದಿತ್ತು. ಅದರಲ್ಲಿ ಸುಶಾಂತ್ ನ ಫೋಟೋ ಬಂದಿತ್ತು. ಅದೂ ಒಂದಲ್ಲ ಎರಡಲ್ಲ ಆ ಪುಟದ ತುಂಬಾ ಅವನದ್ದೇ ಫೋಟೋಗಳು. ಫೋಟೋದ ಮೇಲೆ ಶ್ರದ್ದಾಂಜಲಿ ಎಂದಿದ್ದನ್ನು ನೋಡಿ ಶುಭಾಗೆ ಕಣ್ಣು ಕತ್ತಲೆ ಬಂದಂತಾಯಿತು.

ನಂತರ ಸಾವರಿಸಿಕೊಂಡು ತನ್ನ ಕಣ್ಣುಗಳೆರಡನ್ನೂ ಉಜ್ಜುತ್ತ ತಾನು ನೋಡುತಿರುವುದು ಭ್ರಮೆಯೋ ವಾಸ್ತವವೋ ಎಂದು ಮತ್ತೆ ಮತ್ತೆ ನೋಡಿದಳು. ನಿಜವಾಗಿಯೂ ಅಲ್ಲಿ ಅವನ ಫೋಟೋ ಇತ್ತು. ಅವನು ಸಾವನ್ನಪ್ಪಿದ್ದು ಸ್ಪಷ್ಟವಾಗಿತ್ತು. ಆಗ ಅವಳಿಗೆ ಅವನನ್ನು ತಾನು ಎಲ್ಲೋ ನೋಡಿದ್ದಂತೆ ಅನಿಸಿದ್ದು ಯಾಕೆ ಎಂದು ತಿಳಿಯಿತು. ಅವನ ಫೋಟೋಗಳು ಪತ್ರಿಕೆಯಲ್ಲಿ ಬಂದಿದ್ದಾಗ ತಾನು ಅದನ್ನು ನೋಡಿ, ಯಾರೋ ಪಾಪ ಚಿಕ್ಕ ವಯಸ್ಸು. ನೋಡಲು ಲಕ್ಷಣವಾಗಿದ್ದಾನೆ. ಸಿರಿವಂತರ ಮನೆಯ ಹುಡುಗನೇ. ಆದರೆ ದೇವರು ಅವನಿಗೆ ಎಲ್ಲವನ್ನೂ ಕೊಟ್ಟು ದೀರ್ಘಾಯುಷ್ಯ ಕೊಡಲು ಯಾಕೆ ಮರೆತನೋ ಎಂದು ತಾನು ಅಂದುಕೊಂಡಿದ್ದು ಅವಳಿಗೆ ನೆನಪಿಗೆ ಬಂದಿತು.

ತಾರೀಕು ನೋಡಿದಳು. ಎರಡು ತಿಂಗಳ ಹಿಂದಿನದ್ದು. ಅಂದರೆ ಅವನು ಎರಡು ತಿಂಗಳ ಹಿಂದೆ ತೀರಿಕೊಂಡನೇ. ಹಾಗಾದರೆ ಇದುವರೆಗೂ ಮೆಸೇಜ್ ಮೂಲಕ ತನ್ನ ಜೊತೆ ಮಾತನಾಡಿದ್ದು ಯಾರು? ಅವನಲ್ಲವೇ, ಆದರೆ ತಾನು ಅವನನ್ನು ಖುದ್ದು ನೋಡಿದ್ದೇನಲ್ಲ, ಹಾಗಾದರೆ ಯಾವುದು ನಿಜ ಎಂದುಕೊಳ್ಳುತ್ತ ಆ ಪೇಪರನ್ನು ಎತ್ತಿಕೊಂಡು ರೂಮಿಗೆ ಧಾವಿಸಿದಳು. ತನ್ನ ಫೋನ್ ಕೈಗೆತ್ತಿಕೊಂಡು ಅವನು ಇವತ್ತಿನವರೆಗೆ ಕಳುಹಿಸಿದ ಮೆಸೇಜುಗಳನ್ನು ನೋಡಲು ಹುಡುಕಿದರೆ ಒಂದೂ ಸಿಗುತ್ತಿಲ್ಲ! ಈಗ ಸ್ವಲ್ಪ ಹೊತ್ತಿಗೆ ಮುಂಚೆ ಅವನು ಕಳುಹಿಸಿದ ಮೆಸೇಜ್ ಎಲ್ಲಿ ಹೋಯಿತು. ತಾನವನ ಮೆಸೇಜುಗಳನ್ನು ಡಿಲೀಟ್ ಮಾಡಿಬಿಟ್ಟೆನೆ ಎಂದುಕೊಳ್ಳುತ್ತ ಸೆಂಟ್ ಫೋಲ್ಡರ್ ನಲ್ಲಿ ತಾನವನಿಗೆ ಕಳುಹಿಸಿದ ಮೆಸೆಜುಗಳನ್ನೆಲ್ಲ ಪರಿಶೀಲಿಸಿದಳು.

ಅವಳ ಮೆಸೇಜುಗಳೆಲ್ಲ ಅಲ್ಲೇ ಇದ್ದವು. ಆದರೆ ಎಲ್ಲವೂ ಸೆಂಡಿಂಗ್ ಫೇಲ್ಡ್ ಎಂದಿತ್ತು. ಅದನ್ನು ನೋಡಿ ಶುಭಾಗೆ ತಲೆ ತಿರುಗಿದಂತಾಯಿತು. ಏನಿದು ಇಷ್ಟು ದಿನ ತಾನು ಮೆಸೇಜು ಮಾಡುತ್ತಿದ್ದುದು ಎಲ್ಲ ಭ್ರಮೆಯೇ. ತನಗವನು ಮೆಸೇಜು ಮಾಡಲೇ ಇಲ್ಲವೇ ಎಂದುಕೊಳ್ಳುತ್ತಿದ್ದಂತೆ ಅವಳಿಗೆ ಅವನು ಮೊದಲು ಕಾಲ್ ಮಾಡಿದ್ದು ನೆನಪಾಗಿ ಕಾಲ್ ಲಿಸ್ಟ್ ನಲ್ಲಿ ಅವನ ನಂಬರ್ ಗಾಗಿ ಹುಡುಕಾಡಿದಳು. ಆದರೆ ಅವನ ನಂಬರ್ ಅಲ್ಲಿರಲಿಲ್ಲ! ಇದೇನು, ತನಗೇನು ಹುಚ್ಚು ಹಿಡಿದಿದೆಯೇ. ಇದೆಲ್ಲ ತನ್ನ ಭ್ರಾಂತಿಯೇ ಎಂದುಕೊಳ್ಳುತ್ತ ನಡುಗುವ ಕೈಗಳಿಂದ ಅವನ ನಂಬರ್ ಗೆ ಡಯಲ್ ಮಾಡಿದಳು. ಆಗ ಆ ನಂಬರ್ ಅಸ್ತಿತ್ವದಲ್ಲೇ ಇಲ್ಲ ಎಂದು ಬಂದಾಗ ಇದುವರೆಗೂ ತಾನು ಮೆಸೇಜು ಮಾಡುತ್ತಿದ್ದುದು, ಅವನ ಮೆಸೇಜು ಬರುತ್ತಿದುದು ಭ್ರಮೆಯೇ ಅಥವಾ ಮೆಸೇಜು ಮಾಡುತ್ತಿದುದು ಆತನ ದೆವ್ವವೇ ಎಂದು ತಿಳಿಯದೆ ಎಲ್ಲವೂ ಆಯೋಮಯವಾದಂತಾಗಿ ಶುಭಾ ಕುಸಿದು ಬಿದ್ದಳು.

ಅನಿವಾರ್ಯತೆ

ಬೆಳಗ್ಗೆ ಸುಮಾರು ಹತ್ತು ಗಂಟೆ. ಮುಕುಂದರಾಯರು ಮೆಲ್ಲನೆ ಅಡಿಗೆಮನೆಗೆ ಕಾಲಿಟ್ಟು, ಕಸ್ತೂರಿ, ಇವತ್ತು ಬೆಳಗ್ಗೆ ಏನು ತಿಂಡಿ ಮಾಡಿದ್ದೆ ಹೇಳು ಎಂದರು. ಕಸ್ತೂರಿ ಅವಾಕ್ಕಾಗಿ, “ಏನ್ರೀ, ನೀವು ಎರಡು ಗಂಟೆ ಮುಂಚೆ ಏನು ತಿಂದಿದ್ರಿ ಅಂತನೂ ಮರೆತು ಬಿಟ್ರಾ” ಎನ್ನುತ್ತಾ ಕ್ಷಣ ಕಾಲ ಅವರನ್ನೇ ದಿಟ್ಟಿಸಿ, “ಇವತ್ತು ನಿಮಗಿಷ್ಟ ಅಂತ ಪಲಾವ್ ಮಾಡಿದ್ದಲ್ವೇನ್ರಿ, ಈಗಲಾದರೂ ನೆನಪಾಯಿತಾ ಅಥವಾ ಇನ್ನೂ ಬೇಕಿತ್ತಾ ಅದಕ್ಕೆ ಈ ಥರ ಕೇಳಿದ್ರಾ” ಎಂದು ಕೀಟಲೆ ಮಾಡಿದರು. ಆದರೆ ರಾಯರು ಹಾಸ್ಯದ ಮೂಡಿನಲ್ಲಿರಲಿಲ್ಲ. ಅವರ ತಲೆಯಲ್ಲಿ ಒಂದೇ ಯೋಚನೆ, ಯಾಕೆ ನನಗೆ ಹೀಗೆ ಮರೆವು ಕಾಡ್ತಾ ಇದೆ. ಮೊನ್ನೆ ಬ್ಯಾಂಕಿಗೆ ಹೋದವನಿಗೆ ನಮ್ಮ ಮನೆಯೆಲ್ಲಿದೆ, ಯಾವ ದಿಕ್ಕಿನಲ್ಲಿದೆ ಎಂದು ತಿಳಿಯದೆ ಒದ್ದಾಡಿ ಕೊನೆಗೆ ಹೆಂಡತಿಗೆ ಫೋನ್ ಮಾಡೋಣವೆಂದು ಜೇಬಿಗೆ ಕೈ ಹಾಕಿದಾಗ ಬ್ಯಾಂಕ್ ಪಾಸ್ ಪುಸ್ತಕ ಸಿಕ್ಕಿ ಅದರಲ್ಲಿ ತಮ್ಮ ಮನೆಯ ವಿಳಾಸ ಇದ್ದುದರಿಂದ ಬಚಾವಾದೆ. ಹೆಂಡತಿಗೆ ಫೋನ್ ಮಾಡಿ ಮನೆಯೆಲ್ಲಿದೆ ಎಂದು ಕೇಳಿದರೆ ಗಾಬರಿಯಾಗುತ್ತಿದ್ದಳು. ದೇವರು ದೊಡ್ಡವನು ಎನ್ನುತ್ತಾ ಮನೆಗೆ ಬಂದರೂ ಅವಳಿಗೆ ಮಾತ್ರ ಆ ವಿಷಯ ಹೇಳಲಿಲ್ಲ. ಈಗ ನೋಡಿದರೆ ತಿಂದ ತಿಂಡಿ ಯಾವುದು ಎಂದು ಎಷ್ಟು ಯೋಚಿಸಿದರೂ ನೆನಪಿಗೆ ಬರುತ್ತಿಲ್ಲ ಏನಾಗುತ್ತಿದೆ ತನಗೆ. ಈ ಥರ ಮರೆಗುಳಿತನ ಯಾಕೆ ಶುರುವಾಯಿತು ಎಂದೆಲ್ಲ ಯೋಚಿಸುತ್ತಿದ್ದಂತೆ ಒಂದು ಪ್ಲೇಟ್ ತುಂಬಾ ಪಲಾವ್ ಹಾಕಿಕೊಂಡು ಕಸ್ತೂರಿ, “ಬನ್ನಿ, ಈ ವಯಸ್ಸಿನಲ್ಲೂ ಸಂಕೋಚಾನಾ, ಬೆಳಿಗ್ಗೆ ತಿಂಡಿ ತಿನ್ನೋವಾಗ್ಲೆ ಇನ್ನೂ ಬೇಕೂಂತ ಕೇಳಿದ್ರೆ ನಾನು ಕೊಡ್ತಿರಲಿಲ್ಲವೆ” ಎನ್ನುತ್ತಾ ಟೇಬಲ್ ಮೇಲಿಟ್ಟರು.

ರಾಯರು “ನಾನು ಪೇಪರ್ ಓದ್ತಾ ತಿಂತೀನಿ” ಅಂದಾಗ, “ಸರಿ ಬಿಡಿ, ಬರೋ ಒಂದು ನ್ಯೂಸ್ ಪೇಪರ್ ಅದೆಷ್ಟು ಸಲ ಓದ್ತೀರೋ ಏನೋ, ಸುಮ್ನೆ ಟೀವಿ ನೋಡಬಾರದೇ” ಎಂದರು. ರಾಯರು, “ಸರಿ ಕಣೆ, ಟೀವಿ ನೋಡ್ತಾ ತಿಂತೀನಿ ಆಯ್ತಾ” ಎನ್ನುತ್ತಾ ಪ್ಲೇಟ್ ತೆಗೆದುಕೊಂಡು ಹೊರ ಹೋದರು. ಕಸ್ತೂರಿ ನಗುತ್ತ, ಅದೇನು ದಾಕ್ಷಿಣ್ಯನೋ ಏನೋ ಮೊದಲೆಲ್ಲ ಹೀಗಿರಲಿಲ್ಲಾಪ್ಪ. ಈಗ ರಿಟೈರ್ ಆದ ಮೇಲೆ ಶುರುವಾದ ಹಾಗಿದೆ ಎಂದುಕೊಳ್ಳುತ್ತ ತನ್ನ ಕೆಲಸ ಮುಂದುವರೆಸಿದರು. ರಾಯರಿಗೆ ಹಸಿವಿಲ್ಲದಿದ್ದರೂ ಹೆಂಡತಿ ಏನಾದರೂ ಅನ್ನುತ್ತಾಳೆಂದು ಟೀವಿ ಚಾಲೂ ಮಾಡಿ ತಿನ್ನುತ್ತ ಕುಳಿತರು. ಆದರೆ ಅವರ ಮನಸ್ಸು ಮಾತ್ರ ತನಗೆ ಯಾಕೆ ಇಷ್ಟೊಂದು ಮರೆವು ಕಾಡ್ತಾ ಇದೆ. ಈ ಬಾರಿ ದೊಡ್ಡ ಮಗನ ಫೋನ್ ಬಂದಾಗ ಕೇಳಬೇಕು ದೊಡ್ಡ ಮಗ ಡೆಂಟಿಸ್ಟ್ ಆದರೂ ಅವನಿಗೆ ಈ ವಿಷಯ ತಿಳಿದಿರಬಹುದು ಎಂದುಕೊಂಡರು. ಆವತ್ತು ಮಗನ ಫೋನ್ ಬಂದಾಗ ಹೆಂಡತಿ ಪಕ್ಕದಲ್ಲಿಲ್ಲದ ಸಮಯ ನೋಡಿ ತನ್ನ ವಿಪರೀತ ಮರೆಗುಳಿತನದ ಬಗ್ಗೆ ಹೇಳಿಕೊಂಡಾಗ ಅವನು ನಗುತ್ತ, “ಅದೇನೂ ದೊಡ್ಡ ಸಮಸ್ಯೆ ಅಲ್ಲ, ನಿಮಗೆ ವಯಸ್ಸಾಯಿತಲ್ಲಾಪ್ಪ, ಅದಕ್ಕೆ ಹೀಗಾಗಿದೆ. ಎಲ್ರಿಗೂ ಹೀಗೆ ಆಗುತ್ತೆ, ಯೋಚನೆ ಮಾಡಬೇಡಿ” ಅಂದಾಗ ರಾಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ದಿನ ಕಳೆದಂತೆ ಮರೆವು ಜಾಸ್ತಿಯಾಗತೊಡಗಿದಾಗ ಮುಕುಂದರಾಯರು ತೀವ್ರ ಯೋಚನೆಗೊಳಗಾದರು. ಮೊದಲಿಗೆಲ್ಲ ಕಸ್ತೂರಿ ಅವರ ಮರೆವಿಗೆ ಹಾಸ್ಯ ಮಾಡಿ ನಗುತ್ತಿದ್ದವರು ನಂತರ ಈ ರೀತಿಯ ಘಟನೆಗಳು ಜಾಸ್ತಿಯಾಗತೊಡಗಿದಾಗ ರೇಗತೊಡಗಿದರು. ಕನ್ನಡಕ ತೆಗೆದು ಫ್ರಿಜ್ಜಿನಲ್ಲಿಡುವುದು, ಸ್ನಾನಕ್ಕೆಂದು ಹೋದವರು ಸ್ನಾನ ಮಾಡದೇ ಹಾಗೆ ಬರುವುದು, ಊಟವಾದರೂ ಹೆಂಡತಿ ಊಟ ಕೊಟ್ಟಿಲ್ಲವೆಂದು ಗಲಾಟೆ ಮಾಡುವುದು ಇತ್ಯಾದಿ ಮಾಡತೊಡಗಿದಾಗ ಕಸ್ತೂರಿಗೆ ಸಹಿಸಲಾರದಾಯಿತು. ಪುಟ್ಟ ಮಕ್ಕಳಂತೆ ಆಡುವ ಗಂಡನನ್ನು ನೋಡಿ ಅವರಿಗೆ ಸಿಟ್ಟು ಜಾಸ್ತಿಯಾಗತೊಡಗಿತು. ಅದಕ್ಕೆ ಸರಿಯಾಗಿ ಅವರಿಗೆ ಬಿ.ಪಿಯ ಸಮಸ್ಯೆ ಇತ್ತು.

ಕೊನೆಗೆ ತಡೆಯಲಾಗದೆ ದೊಡ್ಡ ಮಗನ ಬಳಿ ದೂರಿದಾಗ ಅವನು ಅವರಿಗೆ ಬಹುಶಃ ಅಲಜೈಮರ್ ಕಾಯಿಲೆ ಬಂದಿರಬೇಕು ಎಂದು ಹೇಳಿದಾಗ ಕಸ್ತೂರಿ ಹತಾಶರಾದರು. ಈಗಲೇ ಅವರಿಗೆ ಪತಿಯ ಮರೆವಿನ ಸಮಸ್ಯೆಯಿಂದ ಸಾಕಷ್ಟು ತೊಂದರೆಯಾಗಿತ್ತು. ಇನ್ನು ಇದು ತೀವ್ರಗೊಂಡರೆ ಏನು ಗತಿ, ಅಲ್ಲದೆ ಮಕ್ಕಳು ಮೊಮ್ಮಕ್ಕಳು ಎದುರಿಗಿದ್ದರೆ ಸ್ವಲ್ಪವಾದರೂ ಇವರು ಸುಧಾರಿಸಿ ಕೊಳ್ಳಬಹುದು ಎಂಬ ಆಸೆ ಎಂದುಕೊಳ್ಳುತ್ತ ಮಗನಿಗೆ, “ನೀನು ಅಮೆರಿಕಾದಲ್ಲಿ ದುಡಿದದ್ದು ಸಾಕು ಊರಿಗೆ ಬಾ, ನಿನ್ನ ಅಪ್ಪನನ್ನು ನೋಡಿಕೊಳ್ಳಲು ನನಗಾಗುತ್ತಿಲ್ಲ” ಎಂದರು. ಆದರೆ ಮಗ, “ಈಗ ಸಧ್ಯ ಊರಿಗೆ ಬರಲಾಗುವುದಿಲ್ಲ, ಇಲ್ಲಿ ಒಳ್ಳೆ ಕೆಲಸ, ಒಳ್ಳೆ ಸಂಬಳ ಇದೆ, ಅಲ್ಲದೆ ಕಾಂಟ್ರಾಕ್ಟ್ ಮುಗಿಯಲು ಇನ್ನೂ ಸಮಯವಿದೆ, ಮಕ್ಕಳ ಸ್ಕೂಲನ್ನು ಮಧ್ಯದಲ್ಲಿ ಬಿಡಿಸಕಾಗಲ್ಲ, ಹಾಗಾಗಿ ತಮ್ಮನಿಗೆ ಊರಿಗೆ ಬರಲು ಹೇಳಿ, ಇಲ್ಲ ಕೆಲಸಕ್ಕೆ ಒಂದು ಜನ ಇಟ್ಕೊಳ್ಳಿ, ದುಡ್ಡು ತಾನು ಕಳುಹಿಸುತ್ತೇನೆ” ಎಂದು ಹೇಳಿ ಮೆಲ್ಲನೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ.

ಕಸ್ತೂರಿಗೆ ಬೇಸರವಾದರೂ ತಮ್ಮ ಚಿಕ್ಕ ಮಗನಿಗೆ ತಾನೆಂದರೆ ತುಂಬಾ ಪ್ರೀತಿ, ತನ್ನ ಮಾತಿಗೆ ಅವನು ಇಲ್ಲವೆನ್ನುವುದಿಲ್ಲ ಎಂಬ ವಿಶ್ವಾಸದಿಂದ ಸಿಂಗಾಪುರದಿಂದ ಚಿಕ್ಕ ಮಗನ ಫೋನ್ ಬಂದಾಗ ಅವನಿಗೆ ರಾಯರ ಮಾನಸಿಕ ಪರಿಸ್ಥಿತಿಯ ಬಗ್ಗೆ ತಿಳಿಸಿ ಅವರನ್ನು ನೋಡಿಕೊಳ್ಳಲು ತನ್ನಿಂದಾಗದು. ಸೊಸೆ ಇದ್ದರೆ ತನಗೆ ಸ್ವಲ್ಪ ಸಹಾಯನಾದ್ರೂ ಆಗುತ್ತೆ. ಆದ್ದರಿಂದ ಅಲ್ಲಿನ ಕೆಲಸ ಬಿಟ್ಟು ಬರುವಂತೆ ತಿಳಿಸಿದರು. ಆದರೆ ಅವನೂ, “ಈಗ ಆರಂಭವಾದ ಪ್ರಾಜೆಕ್ಟ್ ಮುಗಿಸದೆ ಬರುವ ಹಾಗಿಲ್ಲ, ಸಧ್ಯಕ್ಕೆ ರಜೆಯೂ ಇಲ್ಲ. ಊರಿನಲ್ಲಿ ತನಗೆ ಒಳ್ಳೆಯ ಕೆಲಸ ಸಿಕ್ಕಿಲ್ಲವೆಂದು ತಾನೇ ಸಿಂಗಾಪುರಕ್ಕೆ ಬಂದಿದ್ದು, ಈಗ ಇದನ್ನೆಲ್ಲಾ ಬಿಟ್ಟು ಬಾ ಅಂದರೆ ಹೇಗೆ, ನಾನು ಕೆಲಸದಲ್ಲಿ ಅತ್ಯುತ್ತಮ ಸ್ಥಾನಕ್ಕೇರಬೇಕೆಂದು ನಿನಗೆ ಆಸೆ ಇಲ್ಲವೇ, ನಾನು ಅಲ್ಲಿಗೆ ಬಂದು ಕಷ್ಟ ಪಡುವುದನ್ನು ನೋಡಬೇಕೆಂದು ನಿನಗೆ ಆಸೆಯಾದರೆ ಹೇಳು, ನಾನೀಗಲೇ ಕೆಲಸ ಬಿಟ್ಟು ಬರುತ್ತೇನೆ” ಎಂದು ಜಾಣ್ಮೆಯಿಂದ ತಾಯಿಗೇ ನಿರ್ಧರಿಸಲು ಹೇಳಿದ. ಅದನ್ನು ಕೇಳಿ ಕಸ್ತೂರಿಗೆ ಅವನಿಗೆ ಕೆಲಸ ಬಿಟ್ಟು ಬಾ ಎಂದು ಹೇಳಲು ಮನಸ್ಸಾಗದೆ ಮುಂಬೈನಲ್ಲಿ ಮಗಳಿದ್ದಾಳೆ, ಅವಳನ್ನೇ ಸ್ವಲ್ಪ ಸಮಯದ ಮಟ್ಟಿಗೆ ಕರೆಸೋಣ ಎಂದು ಮಗಳಿಗೆ ಫೋನ್ ಮಾಡಿದರು.

ಮಗಳು ಆಸಕ್ತಿಯಿಂದ ತಾಯಿ ಜೊತೆ ಹರಟೆ ಹೊಡೆಯುತ್ತಿದ್ದಂತೆ ಕಸ್ತೂರಿ ಮಾತಿನ ಮಧ್ಯೆ ಸ್ವಲ್ಪ ಸಮಯದ ಮಟ್ಟಿಗಾದರೂ ಊರಿಗೆ ಬಂದು ನನ್ನ ಜೊತೆ ಇರು ಎಂದು ಮಗಳನ್ನು ಕೇಳಿಕೊಂಡರು. ಆಗ ಅವಳು, “ಅಮ್ಮಾ, ನಾನು ಬರ್ತಿದ್ದೆ, ಆದ್ರೆ ಮಗೂ ಚಿಕ್ಕದಲ್ವೇ. ಅದನ್ನು ನೋಡಿಕೊಳ್ಳೋದೇ ಒಂದು ದೊಡ್ಡ ಕೆಲಸ. ಹಾಗಿರುವಾಗ ನಾನು ಬಂದೂ ನಿಮಗೆ ಸಹಾಯವಾಗುವುದಕ್ಕಿಂತ ತೊಂದರೆಯೇ ಜಾಸ್ತಿ. ಅಲ್ಲದೆ ಗಂಡ ಮನೆಯಿಂದ ಊಟ ತೆಗೆದುಕೊಂಡು ಹೋಗುತ್ತಿರುವುದರಿಂದ ಅವರಿಗೂ ತಾನಿಲ್ಲದಿದ್ದರೆ ತೊಂದರೆಯಾಗುತ್ತದೆ ಅದರ ಬದಲು ಅಣ್ಣಂದಿರಿಗೆ ಬರಲು ಹೇಳಿ ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದಲ್ಲವೇ” ಎಂದು ಹೇಳಿದಾಗ ಕಸ್ತೂರಿಯ ಕಣ್ಣುಗಳಲ್ಲಿ ನೀರು ತುಂಬಿತು. ಮಾತನಾಡದೆ ಫೋನ್ ಇಟ್ಟು ಬಿಕ್ಕಿ ಬಿಕ್ಕಿ ಅತ್ತರು. ತಮ್ಮ ಮೂರು ಮಕ್ಕಳಿಗೆ ಅವರಿಗೆ ಬೇಕಾದುದನ್ನೆಲ್ಲ ಕೊಡಿಸಿ, ಕಷ್ಟ ಪಟ್ಟು ಒಳ್ಳೆಯ ಶಿಕ್ಷಣ ನೀಡಿ ಅವರೆಲ್ಲ ಒಳ್ಳೆಯ ನೆಲೆ ಕಾಣುವಂತೆ ಮಾಡಿ, ಮಗಳಿಗೂ ಅವಳ ಗಂಡನ ಮನೆಯವರು ಕೇಳಿದ್ದನ್ನೆಲ್ಲ ಕೊಟ್ಟು ಅದ್ದೂರಿಯಿಂದ ಮದುವೆ ಮಾಡಿಕೊಟ್ಟರೂ ಅವರ್ಯಾರಿಗೂ ಕೃತಜ್ಞತೆಯೇ ಇಲ್ಲ. ತಮ್ಮ ಈ ಸಂಕಟದ ಪರಿಸ್ಥಿತಿಯಲ್ಲಿ ಯಾರೂ ತಮಗೆ ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ವಾರಕ್ಕೊಮ್ಮೆ ಮಾತ್ರ ಎಲ್ಲರೂ ತಪ್ಪದೆ ಕಾಟಾಚಾರಕ್ಕೆ ಫೋನ್ ಮಾಡುತ್ತಾರೆ. ನಿಜವಾದ ಪ್ರೀತಿ ಯಾರಿಗೂ ಇಲ್ಲ. ತಮಗೆ ವಯಸ್ಸಾಯಿತಲ್ಲವೇ, ಇನ್ನು ಅವರಿಗೆಲ್ಲ ತಮ್ಮಿಂದ ಆಗಬೇಕಾದ್ದೇನಿಲ್ಲ, ಇನ್ಯಾಕೆ ಅವರು ನಮಗೆ ಸಹಾಯ ಮಾಡುತ್ತಾರೆ. ಮಕ್ಕಳು ಅಂದ್ರೆ ಇಷ್ಟೇನಾ, ಅವರನ್ನು ಕಷ್ಟ ಪಟ್ಟು ಬೆಳೆಸೋದು ಓದ್ಸೋದು ನಂತರ ಅವರು ರೆಕ್ಕೆ ಬಂದ ಹಕ್ಕಿಗಳ ಹಾಗೆ ಹಾರಿ ಹೋಗೋದು. ಊರಿನಲ್ಲಿ ಬೇರೆಯವರಿಗೆಲ್ಲ ಒಬ್ಬನೇ ಮಗ ಇದ್ದವರ ಪಾಡು ನೋಡಿ ತಮಗೆ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಸಹಾಯ ಮಾಡೇ ಮಾಡುತ್ತಾರೆ ಎಂದು ನಂಬಿದ್ದು ಸುಳ್ಳಾಯಿತಲ್ಲವೇ. ಈ ಸುಖಕ್ಕೆ ತಮಗೆ ಮಕ್ಕಳು ಬೇಕಿತ್ತೇ, ಅವರು ಸ್ವಾರ್ಥಿಗಳಾದ ಹಾಗೆ ನಾವೂ ನಮಗಾಗಿಯೇ ಬದುಕಿದ್ದಿದ್ದರೆ ಇವರೆಲ್ಲ ಇಷ್ಟು ಎತ್ತರಕ್ಕೆ ಇವತ್ತು ಏರುತ್ತಿದ್ದರೇ. ಅದೆಲ್ಲ ಯಾಕೆ ಅವರ ತಲೆಗೆ ಹೊಳೆಯುತ್ತಿಲ್ಲ. ಅಪ್ಪ ಅಮ್ಮ ತಮಗಾಗಿ ಬಹಳ ಕಷ್ಟ ಪಟ್ಟಿದ್ದಾರೆ. ಈಗ ಅವರಿಗೆ ಸಹಾಯ ಮಾಡುವುದು ತಮ್ಮ ಧರ್ಮ ಎಂದು ಮಕ್ಕಳಿಗೆ ಯಾಕೆ ತಿಳಿಯುತ್ತಿಲ್ಲ. ಹೀಗಾದರೆ ತಾನು ಈ ವಯಸ್ಸಿನಲ್ಲಿ ಇವರೊಂದಿಗೆ ಹೇಗೆ ಏಗಲಿ. ತನಗೂ ಆರೋಗ್ಯ ಸರಿ ಇಲ್ಲ ಇದಕ್ಕೆಲ್ಲ ಏನು ಪರಿಹಾರ, ಮಗ ಹೇಳಿದಂತೆ ಕೆಲಸಕ್ಕೆ ಜನ ಇಡುವುದೇ ಎಂದು ಯೋಚಿಸಿ ಸಧ್ಯಕ್ಕೆ ಅದನ್ನು ಮಾಡಿ ನೋಡೋಣ ಎಂದು ತಮಗೆ ಗೊತ್ತಿರುವವರ ಬಳಿ ಕೆಲಸಕ್ಕೆ ಜನ ಇದ್ದರೆ ಹೇಳಿ ಎಂದು ತಿಳಿಸಿದರು. ಇವರ ಕಷ್ಟ ನೋಡಿ ಸಂಬಂಧಿಕರೇ ಒಂದು ಹುಡುಗಿಯನ್ನು ಗೊತ್ತು ಮಾಡಿಕೊಟ್ಟರು. ರಾಯರನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಅವರ ಬಳಿ ಔಷಧಿ, ರಾಯರನ್ನು ಹೇಗೆ ನೋಡಿಕೊಳ್ಳಬೇಕೆಂದು ಸಲಹೆ ಪಡೆದುಕೊಂಡು ಬಂದರು.

ಹುಡುಗಿ ಮೊದಮೊದಲು ಅತ್ಯುತ್ಸಾಹದಿಂದ ರಾಯರ ನೆರಳಿನಂತೆ ಇದ್ದು ಅವರಿಗೆ ಬೇಕಾದ್ದನ್ನೆಲ್ಲ ಒದಗಿಸಿ ಕೊಡುತ್ತಿದ್ದಳು. ರಾಯರು ಎಲ್ಲಿಗೆ ಹೋಗಬೇಕಾದರೂ ಜೊತೆಯಲ್ಲೇ ಹೋಗಿ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಕೊಡುತ್ತಿದ್ದಳು. ಇತ್ತ ಮಕ್ಕಳು ಫೋನ್ ಮಾಡುವುದನ್ನು ಕಡಿಮೆ ಮಾಡತೊಡಗಿದರು. ಯಾವಾಗಲೂ ಅಮ್ಮ, ಅಪ್ಪನ ಬಗ್ಗೆ ದೂರು ಹೇಳುತ್ತಾ ತನ್ನ ಕಷ್ಟಗಳನ್ನೂ ಹೇಳಿಕೊಳ್ಳುವಾಗ ಮತ್ತೆ ಎಲ್ಲಿ ಅವರು ಊರಿಗೆ ವಾಪಾಸು ಬರಲು ಒತ್ತಾಯಿಸುವರೋ ಎಂಬ ಆತಂಕ ಅವರಲ್ಲಿ ಮನೆ ಮಾಡಿತ್ತು. ಇದು ಕಸ್ತೂರಿಗೂ ಅರ್ಥವಾಗಿ ಬಿಟ್ಟಿತು. ಮಕ್ಕಳು ಬಂದಿರದಿದ್ದರೂ ಕೆಲಸದ ಹುಡುಗಿಯಿಂದ ತನಗೆ ಕಷ್ಟ ತಪ್ಪಿತಲ್ಲ ಎಂದು ನಿಟ್ಟುಸಿರುಬಿಟ್ಟರು. ಆದರೆ ತಿಂಗಳು ಕಳೆಯುತ್ತಿದ್ದಂತೆ ಆ ಹುಡುಗಿಗೆ ಕೆಲಸದಲ್ಲಿ ನಿರಾಸಕ್ತಿ ಮೂಡತೊಡಗಿತು. ರಾಯರಿಗೆ ಸಹಾಯ ಮಾಡುವ ಬದಲು ಆಗಾಗ ಟೀವಿ ನೋಡುತ್ತಾ ಕೂರತೊಡಗಿದಳು. ರಾಯರ ಔಷಧ ಮುಗಿದರೂ ಕಸ್ತೂರಿಗೆ ಹೇಳುತ್ತಿರಲಿಲ್ಲ. ದಿನೇ ದಿನೇ ರಾಯರ ಬಗ್ಗೆ ಅವಳ ನಿರ್ಲಕ್ಷ್ಯತನ ಜಾಸಿಯಾಗುತ್ತ ಹೋಯಿತು.

ಒಮ್ಮೆ ರಾಯರು ಹೊರಗೆ ಹೋದವರು ಎಷ್ಟು ಹೊತ್ತಾದರೂ ಬರದಿದ್ದಾಗ ಕಸ್ತೂರಿ ಆತಂಕಗೊಂಡರು. ಆ ಹುಡುಗಿಗೆ ಹೇಳಿದಾಗ ಅವರೇನು ಚಿಕ್ಕ ಮಕ್ಕಳೇ ಮನೆಗೆ ಬಂದೇ ಬರುತ್ತಾರೆ ಎಂದು ಉದ್ಧಟತನದಿಂದ ಮಾತನಾಡಿದಾಗ ಕಸ್ತೂರಿಗೆ ಸಿಟ್ಟು ಬಂದು ಅವಳ ಸಹವಾಸ ಸಾಕೆನಿಸಿ ಇಂಥ ಕೆಲಸದವಳು ಇದ್ದು ಪ್ರಯೋಜನ ಏನು ಎಂದುಕೊಂಡು ಅವಳನ್ನು ಮನೆಗೆ ಕಳುಹಿಸಿದಳು. ರಾಯರು ಯಾರದೋ ಸಹಾಯದಿಂದ ಮನೆಗೆ ಮರಳಿದಾಗ ಕಸ್ತೂರಿ ನಿಟ್ಟುಸಿರು ಬಿಟ್ಟರು. ಮತ್ತೆ ಕೆಲಸದ ಹುಡುಗಿಯ ಬೇಟೆ ಶುರುವಾಯಿತು. ಒಂದು ದಿನ ಹುಡುಗನೊಬ್ಬ ಕೆಲಸ ಕೇಳಿಕೊಂಡು ಬಂದಾಗ ಕೆಲ್ಸಕ್ಕೆ ಜನ ಹುಡುಕಿ ಹುಡುಕಿ ಸುಸ್ತಾದ ಕಸ್ತೂರಿ ಹಿಂದು ಮುಂದು ನೋಡದೆ ಆತನನ್ನು ಕೆಲಸಕ್ಕೆ ಇಟ್ಟು ಕೊಂಡರು. ಆತನೂ ಮೊದಲೆರೆಡು ತಿಂಗಳು ಚೆನ್ನಾಗಿಯೇ ಕೆಲಸ ಮಾಡಿದ. ನಂತರ ರಾಯರ ಪರಿಸ್ಥಿತಿ ಕಂಡು ಅವರ ಪರ್ಸ್ ನಲ್ಲಿದ್ದ ಹಣ ಕದಿಯುವುದು, ಮನೆಯಲ್ಲಿದ್ದ ಸಣ್ಣ ಪುಟ್ಟ ವಸ್ತುಗಳನ್ನು ಕದಿಯುವುದು ಮಾಡತೊಡಗಿದ. ಅದನ್ನು ನೋಡಿ ಕಸ್ತೂರಿ ಎಷ್ಟೇ ಚೆನ್ನಾಗಿ ಅವನನ್ನು ನೋಡಿ ಕೊಂಡರೂ ಕೈ ತುಂಬಾ ಸಂಬಳ ಕೊಟ್ಟರೂ ಅವನು ಕದಿಯುವುದು ಮಾತ್ರ ನಿಲ್ಲಲಿಲ್ಲ. ಒಮ್ಮೆ ರಾಯರ ಬ್ಯಾಂಕ್ ಚೆಕ್ ಪುಸ್ತಕದಲ್ಲಿ ರಾಯರಿಂದ ಸಹಿ ಹಾಕಿಸಿಕೊಳ್ಳುವಾಗ ಕಸ್ತೂರಿ ಅದನ್ನು ನೋಡಿ ಕಂಗಾಲಾದರು. ಹೀಗೆ ಇವನನ್ನು ಸುಮ್ಮನೆ ಬಿಟ್ಟರೆ ಮನೆಯನ್ನೇ ದೋಚಿಕೊಂಡು ಹೋಗಬಹುದು ಎನಿಸಿ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ಆಮೇಲೆ ಬಂದ ಕೆಲಸದವರ ಸ್ಥಿತಿ ಅದಕ್ಕಿಂತ ಭಿನ್ನವಾಗಿರದ್ದು ಕಂಡು ಕಸ್ತೂರಿ ಸೋತುಹೋಗಿ ಕೆಲಸಕ್ಕೆ ಜನ ಹುಡುಕುವುದನ್ನೇ ಬಿಟ್ಟರು. ದಿನೇದಿನೇ ರಾಯರ ಪರಿಸ್ಥಿತಿ ಹದಗೆಡುತ್ತ ಹೋಯಿತು. ಕಸ್ತೂರಿಯ ಆರೋಗ್ಯವೂ ಹದಗೆಟ್ಟಿತು. ಅವರಿಗೆ ಸಣ್ಣದಾಗಿ ಎದೆಯಲ್ಲಿ ನೋವು ಶುರುವಾಗತೊಡಗಿತು. ಸ್ವಲ್ಪ ನಡೆದರೂ ಬಹಳ ಆಯಾಸದಿಂದ ಜೀವ ಹಿಂಡಿದಂತಾಗುತ್ತಿತ್ತು.

ಒಂದು ದಿನ ರಾಯರು ತರಕಾರಿ ತೆಗೆದುಕೊಂಡು ಬರುತ್ತಿದ್ದ ಕಸ್ತೂರಿಯನ್ನು ನೋಡಿ, ನೀವ್ಯಾರು, ಏನು ಬಂದಿದ್ದು ಎಂದು ಕೇಳಿದಾಗ ಕಸ್ತೂರಿ ಹೌಹಾರಿ ಬಿಟ್ಟರು. ಹೀಗೆ ಆದರೆ ಮುಂದೇನು ಗತಿ, ತಮ್ಮನ್ನೇ ಮನೆಯಿಂದ ರಾಯರು ಹೊರಗೆ ಹಾಕಿ ಬಿಟ್ಟರೆ ಏನು ಮಾಡುವುದು ಎಂದು ಮತ್ತೆ ಮಕ್ಕಳ ಮೊರೆಹೋದರು. ಆದರೆ ಮಕ್ಕಳಿಂದ ಅದೇ ಮಾತುಗಳು ಪುನರಾವರ್ತಿತವಾದಾಗ ಕಸ್ತೂರಿ ಬಹಳ ನೊಂದುಕೊಂಡರು. ನಂತರ ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಆ ದಿನ ಪತಿಯ ಪ್ರೀತಿಯ ತಿಂಡಿ ಪಲಾವ್ ಮಾಡಿದರು. ಅದಕ್ಕೆ ಹಲವು ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ಚೆನ್ನಾಗಿ ಬೆರೆಸಿ ಅದನ್ನು ರಾಯರಿಗೆ ಕೊಟ್ಟು ತಾವೂ ಅವರ ಬಳಿ ಕುಳಿತು ಅದನ್ನೇ ತಿನ್ನಲು ಶುರು ಮಾಡಿದರು. ರಾಯರು ಮುಗ್ಧರಾಗಿ ತಿಂಡಿ ತಿನ್ನುವಾಗ ಕಸ್ತೂರಿಗೆ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ನನ್ನನ್ನು ಕ್ಷಮಿಸಿ ಬಿಡಿ ನನಗೆ ಬೇರೆ ದಾರಿಯಿಲ್ಲ. ಮಕ್ಕಳು ನಮ್ಮನ್ನು ನೋಡಿಕೊಳ್ಳುವುದಿಲ್ಲ. ನನಗೂ ಆರೋಗ್ಯ ಸರಿಯಿಲ್ಲ ನಾನು ಹಾಸಿಗೆ ಹಿಡಿದರೆ ನನ್ನನ್ನು ಮತ್ತು ನಿಮ್ಮನ್ನು ನೋಡಿಕೊಳ್ಳುವವರ್ಯಾರು, ಹಾಗಾಗಿ ಬೇರೆ ದಾರಿಯಿಲ್ಲದೆ ಹೀಗೆ ಮಾಡಬೇಕಾಯಿತು. ಮುಂದಿನ ಜನ್ಮದಲ್ಲಿ ನಾನು ಮಾಡಿದ ಈ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಆದರೆ ರಾಯರು ಮಾತ್ರ ಯಾವುದೋ ಗಾಢ ಯೋಚನೆಯಲ್ಲಿ ಮುಳುಗಿದ್ದರು. ಸ್ವಲ್ಪ ಹೊತ್ತಿನ ನಂತರ ತಿಂಡಿ ತಿನ್ನುತ್ತಿದ್ದ ರಾಯರ ತಲೆ ನಿಧಾನವಾಗಿ ಟೇಬಲ್ ಮೇಲೆ ಒರಗಿತು. ಕಸ್ತೂರಿಯೂ ಕುಳಿತಲ್ಲೇ ಎಂದೂ ಎಚ್ಚರವಾಗದ ಗಾಢ ನಿದ್ದೆಗೆ ಜಾರಿದರು.

ಎದುರು ಮನೆಯಾತ

ತಮ್ಮ ಎದುರು ಮನೆಯ ಕ್ರಿಶ್ಚಿಯನ್ ಕುಟುಂಬ ಸ್ವಂತ ಮನೆ ಕಟ್ಟಿಸಿಕೊಂಡು ಮನೆ ಖಾಲಿ ಮಾಡಿದಾಗ ಶ್ವೇತಾಗೆ ತುಂಬಾ ಬೇಸರವಾಗಿತ್ತು. ಅವರಿಗೂ ಶ್ವೇತಾ ಹಾಗೂ ಅವಳ ಮಗಳು ಅಂದರೆ ಬಹಳ ಅಚ್ಚುಮೆಚ್ಚು. ಜಾತಿ ಧರ್ಮ ಯಾವುದೂ ಅವರ ಸ್ನೇಹಕ್ಕೆ ಅಡ್ಡಿ ಬರಲಿಲ್ಲ. ಶ್ವೇತಾಳ ಮಗಳು ಪೂರ್ವಿಯನ್ನಂತೂ ತಮ್ಮ ಮಗಳೇ ಅನ್ನುವಷ್ಟು ಪ್ರೀತಿ ಮಮತೆ ತೋರಿಸಿದ್ದರು. ಅವರು ಮನೆ ಖಾಲಿ ಮಾಡಿ ಹೋಗುವಾಗ ಪೂರ್ವಿ, ಹೋಗ್ಬೇಡಿ ಆಂಟಿ ಎಂದು ಹಠ ಮಾಡಿ ಬಹಳ ಅತ್ತಿದ್ದಳು. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ಶ್ವೇತಾಳದ್ದು ಅಂತರ್ಜಾತಿ ವಿವಾಹ. ಎರಡೂ ಮನೆಯವರೂ ಒಪ್ಪದ ಕಾರಣ ಅವರಿಬ್ಬರೂ ಓಡಿ ಬಂದು ಮದುವೆಯಾಗಿದ್ದರು. ಮದುವೆಯಾದ ಮೇಲೆ ಊರಿನಲ್ಲೇ ಕೆಲಸ ಮಾಡಿಕೊಂಡಿದ್ದ ಶ್ವೇತಾಳ ಗಂಡನಿಗೆ, ಮಗಳು ಪೂರ್ವಿ ಹುಟ್ಟಿ ಸುಮಾರು ಎರಡು ವರುಷವಾದ ಮೇಲೆ ದುಬೈ ನಲ್ಲಿ ಅತ್ಯತ್ತಮ ನೌಕರಿ ದೊರೆತಾಗ ಊರಿನಲ್ಲಿ ಶ್ವೇತಾ ಹಾಗೂ ತನ್ನ ಪುಟ್ಟ ಮಗಳನ್ನು ಬಿಟ್ಟು ಅವನು ದುಬೈಗೆ ಹಾರಿದ್ದ. ಕುಟುಂಬದ ಬೆಂಬಲವಿಲ್ಲದ ತಮಗೆ ಆರ್ಥಿಕ ಸಧೃಡತೆಯ ಆವಶ್ಯಕತೆ ಇದೆ ಎಂದು ಅದಕ್ಕೆ ಶ್ವೇತಾಳ ಒಪ್ಪಿಗೆಯೂ ಇತ್ತು. ಮಗಳನ್ನು ಶಾಲೆಗೆ ಸೇರಿಸಿದ ಮೇಲೆ ಶ್ವೇತಾ ತಾನೂ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದ್ದಳು. ಶ್ವೇತಾ ಮನೆಗೆ ಬರುವವರೆಗೂ ಕ್ರಿಶ್ಚಿಯನ್ ಕುಟುಂಬ ಪೂರ್ವಿಯನ್ನು ನೋಡಿಕೊಳ್ಳುತ್ತಿದ್ದರು. ಶ್ವೇತಾಳ ಗಂಡ ಆರು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಸುಮಾರು ಆರು ವರುಷಗಳ ಸ್ನೇಹ ಸಂಬಂಧದಲ್ಲಿ ನಿಶ್ಚಿಂತೆಯಾಗಿದ್ದ ಶ್ವೇತಾಗೆ ಮುಂದೆ ಎದುರು ಮನೆಗೆ ಬಾಡಿಗೆಗೆ ಬರುವವರು ಎಂತಹವರಿರುತ್ತಾರೋ ಎಂದು ಯೋಚನೆಯಾಗಿತ್ತು. ಜೊತೆಗೆ ಕ್ರಿಶ್ಚಿಯನ್ ಕುಟುಂಬದಂತೆ ಒಳ್ಳೆ ಸಂಸಾರ ಬಂದರೆ ತನಗೆ ಸಹಾಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಳು.

ಎರಡು ತಿಂಗಳು ಕಳೆದರೂ ಎದುರು ಮನೆಗೆ ಯಾರೂ ಬರದಿದ್ದಾಗ ಶ್ವೇತಾ ನಿರಾಸೆಗೊಂಡಳು. ನಂತರ ಒಂದು ದಿನ ಶ್ವೇತಾ ಕೆಲಸದಿಂದ ಮರಳಿದಾಗ ಆ ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಕುತೂಹಲಗೊಂಡಳು. ಯಾರು ಬಂದಿರಬಹುದು ಎಂದು ಯೋಚಿಸುತ್ತಿದ್ದಾಗ ಮಧ್ಯವಯಸ್ಕನೊಬ್ಬ ಮಾತ್ರ ಇರುವುದನ್ನು ಕಂಡು, ಇವರೊಬ್ಬರೇ ಬಂದಿದ್ದಾರಲ್ಲ. ಇವರ ಕುಟುಂಬ ಯಾಕೆ ಇವರ ಜೊತೆ ಬಂದಿಲ್ಲ ಅಥವಾ ಅವರೆಲ್ಲ ಇನ್ನು ಸ್ವಲ್ಪ ಸಮಯ ಬಿಟ್ಟು ಬರಬಹುದೇ ಎಂದು ಶ್ವೇತಾ ಯೋಚಿಸಿದಳು. ಬಂದರೆ ಆ ಕುಟುಂಬ ಒಳ್ಳೆಯವರಾದರೆ ಪೂರ್ವಿಗೆ ಒಳ್ಳೆಯದಾಗುತ್ತಿತ್ತು, ತನಗೂ ಅನುಕೂಲವಾಗುತ್ತಿತ್ತು ಎಂದು ಮನಸ್ಸಿಸಲ್ಲೇ ಮಂಡಿಗೆ ಮುರಿಯತೊಡಗಿದಳು. ಆದರೆ ಬಂದ ದಿನದಿಂದಲೇ ಆತ ಹೊರಗೆ ನಿಂತು ಇಡೀ ದಿನ ಸಿಗರೇಟು ಸೇದತೊಡಗಿದಾಗ ಶ್ವೇತಾಗೆ ಸಿಟ್ಟು ಬಂದಿತು. ಅವನ ಸಿಗರೇಟಿನ ಹೊಗೆ ಕಿಟಕಿಗಳ ಮೂಲಕ ಇವರ ಮನೆಯೊಳಗೆಲ್ಲ ಹರಡಿ ಶ್ವೇತಾಗೆ ಉಸಿರು ಕಟ್ಟಿದಂತಾಗುತ್ತಿತ್ತು. ಪೂರ್ವಿಯೂ ಘಾಟು ತಾಳಲಾಗದೆ ಕೆಮ್ಮುತ್ತಿದ್ದಳು. ಅದಕ್ಕಾಗಿ ಶ್ವೇತಾ ತಮ್ಮ ಮನೆಯ ಕಿಟಕಿ ಬಾಗಿಲನ್ನು ಮುಚ್ಚಿಯೇ ಇಡತೊಡಗಿದಳು.

ರಜೆಯ ದಿನಗಳಲ್ಲಂತೂ ಕಿಟಕಿ ತೆರೆಯಲಾರದೆ ಶ್ವೇತಾ ಮತ್ತು ಪೂರ್ವಿ ಇಬ್ಬರೂ ಶುದ್ಧ ಗಾಳಿ ಇಲ್ಲದೆ ಮನೆಯಲ್ಲಿ ಕುಳಿತುಕೊಳ್ಳಲಾಗದೆ ಒದ್ದಾಡತೊಡಗಿದರು. ಹೀಗೆ ಸುಮ್ಮನೆ ಕುಳಿತರೆ ತಮ್ಮ ಪ್ರಾಣ ಹೋದರೂ ಆಶ್ಚರ್ಯವಿಲ್ಲ ಎಂದುಕೊಂಡು ಶ್ವೇತಾ ಆತನಿಗೆ ತಮ್ಮ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಆತನ ಮನೆಯತ್ತ ನಡೆದು ಕರೆಗಂಟೆ ಬಾರಿಸಿದಳು. ಎರಡು ಮೂರು ಸಲ ಕರೆಗಂಟೆ ಒತ್ತಿದರೂ ಆತನ ಸುಳಿವಿಲ್ಲ. ಶ್ವೇತಾಗೆ ಸಿಟ್ಟು ಬಂದಿತು. ಬಾಗಿಲು ತೆರೆಯುವ ಸೌಜನ್ಯ ಕೂಡ ಇಲ್ಲವಲ್ಲ ಎಂದುಕೊಂಡು ಬೇರೆ ದಾರಿ ಕಾಣದೆ ತನ್ನ ಮನೆಯತ್ತ ತಿರುಗಿದಳು. ಆಗಲೇ ಬಾಗಿಲು ತೆರೆದ ಸದ್ದಾಯಿತು. ಅಬ್ಬಾ, ಕೊನೆಗೂ ದರುಶನ ಕೊಡಲು ಒಪ್ಪಿದ ಮಹರಾಯ ಎಂದುಕೊಳ್ಳುತ್ತ ಮತ್ತೆ ಅವನತ್ತ ಧಾವಿಸಿ ಅವನ ಸಿಗರೇಟು ಸೇದುವಿಕೆಯಿಂದ ತಮಗೆ ತೊಂದರೆಯಾಗುತ್ತಿದೆ ಎಂದು ವಿವರವಾಗಿ ತಿಳಿಸಿದಳು. ಆತ ಅವಳು ಹೇಳುವುದನ್ನೆಲ್ಲ ಸುಮ್ಮನೆ ನಿಂತು ಕೇಳಿಸಿಕೊಂಡ. ಅವಳು, ಆತ ತನ್ನ ಬಳಿ ಕ್ಷಮೆ ಕೇಳಬಹುದು ಎಂದುಕೊಳ್ಳುತ್ತಿದ್ದಾಗಲೇ ಅವನು ತಟ್ಟನೆ ಮನೆಯ ಬಾಗಿಲು ಮುಚ್ಚಿ ಬಿಟ್ಟ. ಶ್ವೇತಾಗೆ ಸಿಟ್ಟು ಏರಿದರೂ ಅವನು ಮಾತನಾಡಿ ತನಗೇನೂ ಆಗಬೇಕಾದ್ದಿಲ್ಲ, ತನ್ನ ಸಮಸ್ಯೆ ಹೇಳಿದ್ದರಿಂದ ಮುಂದೆ ಸುಧಾರಿಸಿಕೊಳ್ಳಬಹುದು ಎಂದು ಸುಮ್ಮನಾದಳು.

ಆದರೆ ಅವಳ ನಿರೀಕ್ಷೆಯನ್ನು ಹುಸಿ ಮಾಡಿ ಆತ ಸಿಗರೇಟು ಯಥಾವತ್ತಾಗಿ ಸೇದಲು ಶುರು ಮಾಡಿದಾಗ ಶ್ವೇತಾ ತನ್ನ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಅವನು ಈ ವಿಷಯವನ್ನು ಮನೆಯ ಮಾಲಕರಿಗೆ ತಿಳಿಸುವುದು ಉತ್ತಮ ಎಂದ. ಶ್ವೇತಾಗೂ ಸರಿಯೆನ್ನಿಸಿ, ಆ ಕ್ರಿಶ್ಚಿಯನ್ ಕುಟುಂಬ ಇದ್ದಾಗ ಎಷ್ಟು ಚೆನ್ನಾಗಿತ್ತು ಈಗ ಎಂಥಾ ಕಷ್ಟ ಎಂದುಕೊಳ್ಳುತ್ತಿದ್ದಂತೆ ಸಿಗರೇಟಿನ ಹೊಗೆ ಮತ್ತೆ ಮನೆಯೆಲ್ಲ ಆವರಿಸಿತು. ಶ್ವೇತಾಗೆ ಸಿಟ್ಟು ನೆತ್ತಿಗೇರಿ ಹೊರಗೆ ಧಾವಿಸಿದಳು. ಆದರೆ ಆತ ಅಲ್ಲಿರಲ್ಲಿಲ್ಲ. ಬೇಕೆಂದೇ ಆತ ಸಿಗರೇಟಿನ ಹೊಗೆ ಹಾಕಿ ಕಳ್ಳನಂತೆ ಒಳಗೆ ಸೇರಿಕೊಂಡಿರಬೇಕು ಎಂದುಕೊಂಡು ಮೂಗು ಮುಚ್ಚಿಕೊಳ್ಳುತ್ತ ಮತ್ತೆ ಅವನ ಮನೆಗೆ ಧಾವಿಸಿ ಕರೆಗಂಟೆಯನ್ನು ಮೇಲಿಂದ ಮೇಲೆ ಒತ್ತಿದಳು. ಆತ ಬಾಗಿಲು ತೆರೆದಾಗ ಶ್ವೇತಾ ಒಮ್ಮೆಲೇ, ನಿಮಗೆ ಹೆಂಡತಿ ಮಕ್ಕಳು ಯಾರೂ ಇಲ್ಲವೇನ್ರಿ, ನಮಗೆ ತೊಂದರೆಯಾಗ್ತಿದೆ ಅಂದ್ರೂ ನಿಮ್ಮ ಚಾಳಿ ನೀವು ಬಿಡ್ತಿಲ್ಲವಲ್ಲ, ಬೇರೆಯವರಿಗೆ ತೊಂದರೆ ಕೊಡಬಾರದು ಅಂತ ಗೊತ್ತಿಲ್ಲವೇನ್ರಿ. ಬೇರೆ ಎಲ್ಲಾದರೂ ಹೋಗಿ ನಿಮ್ಮ ಹೊಗೆ ಬಿಡಬಾರದೇ. ನಮಗ್ಯಾಕೆ ಇಷ್ಟು ಕಾಟ ಕೊಡ್ತೀರಿ, ನಮಗೆ ಮನೇನಲ್ಲಿ ಉಸಿರಾಡಲೂ ಸಾಧ್ಯವಾಗ್ತಿಲ್ಲ. ನನಗೆ ಬಿಡಿ, ನನ್ನ ಪುಟ್ಟ ಮಗಳಿಗೆ ನಿಮ್ಮ ಹೊಗೆಯಿಂದ ಕೆಮ್ಮು ಬರುತ್ತೆ. ಮಗುವಿನ ಮೇಲೂ ಕರುಣೆ ಇಲ್ವಾ, ನಾವೇನು ಮಾಡಿದ್ದೀವಿ ನಿಮಗೆ, ನಮ್ಮ ಪಾಡಿಗೆ ನಾವಿದ್ದೀವಿ ಆದರೂ ಹೀಗೆ ನಮ್ಮ ಮನೆ ತುಂಬಾ ಹೊಗೆ ಹಾಕ್ತೀರಲ್ಲ, ಹೀಗೆ ಬೇರೆಯವರಿಗೆ ತೊಂದರೆ ಕೊಡೋ ಬದಲು ನೇಣು ಹಾಕಿಕೊಂಡು ಸಾಯಬಾರದೇ ಎಂದು ತನ್ನ ರೋಷವನ್ನು ವ್ಯಕ್ತ ಪಡಿಸಿದಳು. ಆತ ಇವಳ ಬೈಗುಳ ಮುಗಿಯುವವರೆಗೂ ಅಲ್ಲೇ ನಿಶ್ಚಲನಾಗಿ ನಿಂತಿದ್ದು ನಂತರ ನಿಧಾನವಾಗಿ ಬಾಗಿಲು ಹಾಕಿಕೊಂಡ. ತಾನು ಅಷ್ಟೆಲ್ಲ ಬೈದರೂ ಅವನ ಪ್ರತಿಕ್ರಿಯೆಯೇ ಇಲ್ಲದ್ದು ಕಂಡು ತಾನು ಇಷ್ಟು ಹೊತ್ತು ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗಾಯಿತು ಎಂದುಕೊಳ್ಳುತ್ತ ಮನೆಗೆ ಧಾವಿಸಿ ಮನೆಯ ಮಾಲಕರಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಆಗ ಅವರು, ಆತ ಬರೀ ಒಂದು ತಿಂಗಳಿಗಷ್ಟೇ ಬಂದಿರುವುದು, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂದಾಗ ಶ್ವೇತಾಗೆ ಆತನ ಮೇಲಿನ ಸಿಟ್ಟು ಮನೆ ಮಾಲೀಕನ ಮೇಲೆ ತಿರುಗಿತು. ಮನೆ ಖಾಲಿ ಬಿದ್ದಿರುತ್ತಲ್ಲ ಅಂತ ಕಚಡಾ ಮನುಷ್ಯರಿಗೂ ಮನೆ ಕೊಡುತ್ತಾನಲ್ಲ ಈ ಮನೆ ಮಾಲೀಕ ಎಂದು ಮನಸ್ಸಿನಲ್ಲೇ ಮನೆ ಮಾಲೀಕನಿಗೆ ಶಾಪ ಹಾಕಿದಳು. ಆ ಹೊತ್ತಿನಿಂದ ಎದುರು ಮನೆಯಿಂದ ಸಿಗರೇಟಿನ ಹೊಗೆ ಬರದೆ ಇದ್ದಾಗ ಅಬ್ಬಾ, ಕೊನೆಗೂ ತನ್ನ ಮಾತು ಅವನ ಮೇಲೆ ಪರಿಣಾಮ ಬೀರಿರಬೇಕು ಇಲ್ಲಾ ಮಾಲೀಕರು ಆತನಿಗೆ ಹೇಳಿರಬೇಕು ಎಂದುಕೊಂಡು ಶ್ವೇತಾ ನಿಟ್ಟುಸಿರು ಬಿಟ್ಟಳು.

ಇದಾದ ಎರಡು ಮೂರು ದಿನಗಳಲ್ಲೇ ಎದುರು ಮನೆಯಿಂದ ಭಯಂಕರ ಕೆಟ್ಟ ವಾಸನೆ ಬರಲು ಶುರುವಾಯಿತು. ಬಾಗಿಲು ಕಿಟಕಿ ಮುಚ್ಚಿ ಗಂಧದ ಕಡ್ಡಿ ಹಚ್ಚಿದರೂ ವಾಸನೆ ಹೋಗಲೊಲ್ಲದು. ಶ್ವೇತಾಗೆ ಮನೆಗೆ ಬರುವುದೇ ಬೇಡಾ ಅನಿಸುವಷ್ಟು ದುರ್ವಾಸನೆ. ಸಿಗರೇಟು ಘಾಟಿಗೆ ಗಲಾಟೆ ಮಾಡಿದ್ದಕ್ಕೆ ಬಹುಶ ಆತನಿಗೆ ಸಿಟ್ಟು ಬಂದು ಏನೋ ಕೊಳೆಸಿ ದುರ್ವಾಸನೆ ಬರಿಸುತ್ತಿರಬೇಕು. ನಮಗೇ ಇಷ್ಟೊಂದು ವಾಸನೆ ಸಹಿಸಲಾಗುತ್ತಿಲ್ಲವೆಂದರೆ ಆತನಿಗೆ ವಾಸನೆಯೇ ಬರುತ್ತಿಲ್ಲವೇ, ಅವನ ಮೂಗು ಕೆಲಸ ಮಾಡುತ್ತಿಲ್ಲವೇ ಎಂದು ಮತ್ತಷ್ಟು ಸಿಟ್ಟು ಬಂದು ಮನೆಯ ಮಾಲಕರಿಗೆ ಫೋನ್ ಮಾಡಿ ವಿಷಯ ತಿಳಿಸಿ ಕೂಡಲೇ ಬಂದು ಅವನಿಗೆ ಬುದ್ದಿ ಹೇಳಬೇಕೆಂದು ವಿನಂತಿಸಿಕೊಂಡಳು. ಮಾಲಕರು ಸಂಜೆಯಾದ ಮೇಲೆ, ಶ್ವೇತ ಮನೆಗೆ ಮರಳಿದ ಮೇಲೆ ಬಂದಾಗ ಶ್ವೇತಾ, ಅಂತೂ ಈಗಲಾದರೂ ಬಂದರಲ್ಲ ಎಂದುಕೊಂಡು ನಿಶ್ಚಿಂತಳಾದಳು. ಮನೆ ಮಾಲಕರು ಬಂದು ಅವನ ಮನೆಯ ಕರೆಗಂಟೆ ಒತ್ತಿದರೂ ಆ ಮನುಷ್ಯ ಬಾಗಿಲು ತೆರೆಯಲಿಲ್ಲ. ಮಾಲೀಕರು ಮೇಲಿಂದ ಮೇಲೆ ಕರೆಗಂಟೆ ಒತ್ತಿದಾಗ ಶ್ವೇತಾ ತನ್ನ ಮನೆಯಿಂದ ಹೊರಬಂದು, ಹೀಗೆ.. ಬೆಲ್ ಒತ್ತಿದರೆ ಬಾಗಿಲು ತೆರೆಯೋದೆ ಇಲ್ಲ ಎಂದು ತನ್ನ ಅಸಮಾಧಾನ ವ್ಯಕ್ತ ಪಡಿಸಿದಳು.

ಮಾಲಕರು ಮತ್ತಷ್ಟು ಬಾರಿ ಬೆಲ್ ಒತ್ತಿದರೂ ಆತ ಮಾತ್ರ ಬಾಗಿಲು ತೆರೆಯಲೇ ಇಲ್ಲ. ಬಹುಶಃ ಅವನಿಲ್ಲವೇನೋ ಎಂದುಕೊಂಡು ಶ್ವೇತಾ ತನ್ನ ಮನೆಯೊಳಗೆ ಹೋದಳು. ಮಾಲಕರು ಆತನಿಲ್ಲದಿದ್ದರೆ ಕಿಟಕಿಯಿಂದ ನೋಡಿ ಏನು ಕೊಳೆಯಲು ಹಾಕಿದ್ದಾನೆ ಎಂದು ತಿಳಿಯುತ್ತದೆ ಎಂದುಕೊಂಡು, ಕಿಟಕಿ ಎಲ್ಲಾದರೂ ತೆರೆದಿದಿಯೋ ಎಂದು ನೋಡಲು ಮನೆಯ ಸುತ್ತ ನಡೆದರು. ಬೆಡ್ ರೂಮಿನ ಕಿಟಕಿಯೊಂದು ತೆರೆದಿತ್ತು. ಅಲ್ಲಿಂದ ದುರ್ವಾಸನೆ ಬರುವುದನ್ನು ನೋಡಿ ಮೂಗು ಮುಚ್ಚಿ ಕೊಂಡು, ಶ್ವೇತಾ ಹೇಳಿದಂತೆ ಏನೋ ಮಾಂಸ ತಂದಿಟ್ಟು ಕೊಳೆಸುತ್ತಿದ್ದಾನೋ ಏನೋ ಎಂದುಕೊಂಡು ಕಿಟಕಿಯಿಂದ ಇಣಕಿ ನೋಡಿದಾಗ ಭಯಾನಕ ದೃಶ್ಯ ಕಂಡಿತು. ಆ ಮನುಷ್ಯ ಫ್ಯಾನಿಗೆ ಶವವಾಗಿ ನೇತಾಡುತ್ತಿದ್ದ. ದೇಹ ಕೊಳೆತು ಊದಿಕೊಂಡಿತ್ತು. ಅದನ್ನು ನೋಡಿ ಮಾಲಕರು ದಂಗು ಬಡಿದಂತಾದರು. ಯಾಕಿವನು ಆತ್ಮಹತ್ಯೆ ಮಾಡಿಕೊಂಡ, ಅಂಥಾದ್ದು ಏನಾಯಿತು ಇವನಿಗೆ, ಬಂದು ಇನ್ನೂ ಹದಿನೈದು ದಿನಗಳು ಕಳೆದಿಲ್ಲ. ಅಥವಾ ಅವನು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದನೇ, ಛೆ, ನಾನು ಎಂಥವನಿಗೆ ಮನೆ ಬಾಡಿಗೆಗೆ ಕೊಟ್ಟೆ, ನಮ್ಮ ಮನೆಗೇ ಬಂದು ಇವನು ಆತ್ಮಹತ್ಯೆ ಮಾಡಿಕೊಳ್ಳಬೇಕೇ, ಇವನಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವೇ. ಒಂದು ತಿಂಗಳಿಗೆ ಮಾತ್ರ, ಪ್ರಾಪರ್ಟಿ ಕೆಲಸದ ಮೇಲೆ ಬಂದಿದ್ದೇನೆ ಎಂದಾಗ ತನಗೇಕೆ ಸಂಶಯ ಬರಲಿಲ್ಲ, ಖಾಲಿ ಬಿದ್ದಿರುವ ಬದಲು ಇರುತ್ತಾನಲ್ಲ ಎಂದು ಕೊಟ್ಟದ್ದೇ ಕೇಡಾಯಿತಲ್ಲ, ಇನ್ನು ಈ ಮನೆಗೆ ಬಾಡಿಗೆಗೆ ಯಾರು ಬರುತ್ತಾರೆ. ಈತನ ಮನೆಯವರು ಎಲ್ಲಿದ್ದಾರೋ, ನಂಗೆ ಕೊಟ್ಟ ವಿಳಾಸ ಸರಿಯಾಗಿದೆಯೋ ಇಲ್ಲವೋ ಎಂದು ಆತಂಕವಾಗಿ ಮಾಲಕರು ಪೊಲೀಸರಿಗೆ ಫೋನ್ ಮಾಡಿದರು.

ಪೋಲೀಸರು ಬಂದು ಬಾಗಿಲು ಒಡೆದು ಒಳಹೋಗಿ ಸುತ್ತ ಮುತ್ತ ಪರಿಶೀಲಿಸಿ ಶವದ ಮಹಜರು ನಡೆಸಿ ಮಾಲಕರು ಕೊಟ್ಟ ಮಾಹಿತಿಯನ್ನು ಪಡೆದುಕೊಂಡು ಎದುರು ಮನೆಯವರಾದ್ದರಿಂದ ಶ್ವೇತಾಗೆ ಈ ಬಗ್ಗೆ ಏನಾದರೋ ಗೊತ್ತಿದೆಯೇ ಎಂದು ವಿಚಾರಿಸಲು ಅವಳ ಮನೆಯ ಬೆಲ್ ಒತ್ತಿದರು. ಬಾಗಿಲು ತೆಗೆದ ಶ್ವೇತಾ ಅಲ್ಲಿ ನಿಂತಿದ್ದ ಪೋಲೀಸರನ್ನು ಕಂಡು ಅಧೀರಳಾದಳು. ಪೋಲೀಸರು ಯಾತಕ್ಕೆ ಬಂದಿದ್ದಾರೆ, ಆತನೇನಾದರೂ ನನ್ನ ಬಗ್ಗೆ ದೂರು ನೀಡಿರಬಹುದೇ, ಅದಕ್ಕಾಗಿ ನನ್ನನ್ನು ಬಂಧಿಸಲು ಇವರು ಬಂದಿರಬಹುದೇ ಎಂದು ಭಯದಿಂದ ಮೈ ನಡುಗತೊಡಗಿತು. ಅವಳು ಗಾಬರಿಗೊಂಡದ್ದನ್ನು ನೋಡಿ ಪೋಲೀಸರು, ಹೆದರಬೇಡಿ, ನಿಮ್ಮ ಎದುರು ಮನೆಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮಗೇನಾದರೂ ಆ ಬಗ್ಗೆ ಗೊತ್ತಿದೆಯೇ ಎಂದಾಗ ಶ್ವೇತಾಳ ಮುಖ ಬಿಳಿಚಿಕೊಂಡಿತು. ಅವನು ಸಿಗರೇಟಿನ ಹೊಗೆ ಬಿಡುತ್ತಾನೆಂದು ತಾನು ಅವನನ್ನು ಸಿಟ್ಟಿನಿಂದ ಬೈದಿದ್ದಕ್ಕೆ ಅವನು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂದು ಅವಳಿಗೆ ಭಯದಿಂದ ನಿಲ್ಲಲ್ಲೂ ನಿತ್ರಾಣವಾಗಿ ತಾನೆಲ್ಲಿ ಕುಸಿದು ಬೀಳುತ್ತೇನೋ ಎಂಬ ಭಯದಿಂದ ಬಾಗಿಲನ್ನು ಭದ್ರವಾಗಿ ಹಿಡಿದುಕೊಂಡಳು. ಆಗ ಅಲ್ಲಿಗೆ ಬಂದ ಮನೆ ಮಾಲಕರು ಶ್ವೇತಾ ಮಗುವಿನೊಡನೆ ಒಬ್ಬಳೇ ಇರುವುದರಿಂದ ಅವಳಿಗೆ ಆತ ಗೊತ್ತಿಲ್ಲ ಅಲ್ಲದೆ ಆ ಮನುಷ್ಯ ಬಂದು ಬರೀ ಹದಿನೈದು ದಿನಗಳಾಗಿತ್ತು ಅಷ್ಟೇ. ಆ ಮನೆಯಿಂದ ದುರ್ವಾಸನೆ ಬರ್ತಿದೆ ಎಂದು ಇವರು ಫೋನ್ ಮಾಡಿದ್ದರಿಂದ ನಾನು ನೋಡಲು ಬಂದೆ ಎಂದಾಗ ಶ್ವೇತಾ ಸಾವರಿಸಿಕೊಂಡು ಹಾ.. ಹೌದು ನಾನು ಆತನನ್ನು ಅಷ್ಟೇನೂ ನೋಡಲಿಲ್ಲ ಎಂದು ಸುಳ್ಳು ಹೇಳಿದಳು. ಅವನು ಸಿಗರೇಟಿನ ಹೊಗೆ ಬಿಟ್ಟು ತಮಗೆ ತೊಂದರೆ ಕೊಡುತ್ತಿದ್ದ ಎಂದು ಮಾಲೀಕರಿಗೆ ಗೊತ್ತಿದ್ದರಿಂದ ಅವರೇನಾದರೂ ಆ ಬಗ್ಗೆ ಪೋಲೀಸರಿಗೆ ಹೇಳಿ ಅವರು ತನ್ನನ್ನು ಅರೆಸ್ಟ್ ಮಾಡಿದರೆ ಎಂದು ಶ್ವೇತಾ ಕಂಗಾಲಾದಳು. ಅವನೇನಾದರೂ ಡೆತ್ ನೋಟ್ ನಲ್ಲಿ ನನ್ನ ಬಗ್ಗೆ ಉಲ್ಲೇಖಿಸಿದರೆ ಏನು ಮಾಡುವುದು, ತಾನು ಯಾಕಾದರೂ ಅವನನ್ನು ಬೈಯ್ಯಲು ಹೋದೇನೋ ಅದೂ ಅಲ್ಲದೆ ತಾನು ಸಿಟ್ಟಿನ ಭರದಲ್ಲಿ ಬೇರೆಯವರಿಗೆ ತೊಂದರೆ ಕೊಡುವ ಬದಲು ನೇಣು ಹಾಕಿಕೊಂಡು ಸಾಯಬಾರದೇ ಎಂದು ಬಾಯಿಗೆ ಬಂದ ಹಾಗೆ ಬೈದು ಬಿಟ್ಟಿದ್ದೆ. ಅದಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೇ ತಾನು ಯಾಕಾದರೂ ಸಾಯುವ ಮಾತು ಆಡಿದೇನೋ ಎಂದು ಹಳಹಳಿಸಿದಳು. ಆದರೆ ಆವತ್ತು ತನ್ನ ಮಾತು ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂಬಂತೆ ಆತ ಇದ್ದರೂ ಮತ್ತೆ ಆತ ಸಿಗರೇಟಿನ ಹೊಗೆ ಹಾಕಿರಲಿಲ್ಲ. ಶವ ಕೊಳೆತು ವಾಸನೆ ಬರುತ್ತಿದೆ ಅಂದರೆ ತಾನು ಅವನನ್ನು ಬೈದ ದಿನವೇ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೇ, ಅವನ ಸಾವಿಗೆ ತಾನೇ ಕಾರಣಳಾದೆನೇ ಎಂದು ಅವಳಿಗೆ ಆತಂಕ ಮೂಡಿತು.

ಆದರೆ ಬಂದಿದ್ದ ಪೋಲೀಸರು ಬೇರೇನೂ ಕೇಳದೆ ಅತ್ತಿತ್ತ ನೋಡುತ್ತಾ ಸ್ವಲ್ಪ ಹೊತ್ತು ಅಲ್ಲಿ ನಿಂತಿದ್ದು ನಂತರ ಅಲ್ಲಿಂದ ನಿರ್ಗಮಿಸಿದಾಗ ಶ್ವೇತಾ ನಿಟ್ಟುಸಿರುಬಿಟ್ಟಳು. ಆದರೂ ಆ ಮನುಷ್ಯ ಯಾಕೆ ಆತ್ಮಹತ್ಯೆ ಮಾಡಿಕೊಂಡ, ತಾನು ಬೈದು ಬಿಟ್ಟೆ ಎಂದೇ ಅಥವಾ ಬೇರೆ ಯಾವ ಕಾರಣದಿಂದಲೇ, ತನ್ನ ಮಾತು ಅವನ ಮೇಲೆ ಅಷ್ಟೊಂದು ಪರಿಣಾಮ ಬೀರಿತೇ ಎಂದು ಕಳವಳ ಪಡುತ್ತಿರುವಾಗ ಶ್ವೇತಾಳ ಗಂಡನ ಫೋನ್ ಬಂದಿತು. ಶ್ವೇತಾ, ಎದುರು ಮನೆಯಾತ ಆತ್ಮಹತ್ಯೆ ಮಾಡಿಕೊಂಡದ್ದು, ತಾನು ಎರಡು ಮೂರು ದಿನಗಳ ಕೆಳಗೆ ಆತನ ಮನೆಗೆ ಹೋಗಿ ಅವನನ್ನು ಸಿಕ್ಕಾಪಟ್ಟೆ ಬೈದಿದ್ದು ಹೇಳಿದಾಗ ಶ್ವೇತಾಳ ಗಂಡನಿಗೂ ಆತಂಕವಾಗಿ, ಅವನನ್ನು ಯಾಕೆ ಬೈಯ್ಯಲು ಹೋದೆ, ಅದರಿಂದಾಗಿಯೇ ಅವನು ಆತ್ಮಹತ್ಯೆ ಮಾಡಿಕೊಂಡಿದ್ದರೆ ನಮ್ಮ ಗತಿ ಏನು, ಪೊಲೀಸರಿಗೆ ತನಿಖೆ ಮಾಡುವಾಗ ಗೊತ್ತಾಗದೆ ಇರುತ್ತಾ, ನೀನು ಸ್ವಲ್ಪ ಸುಮ್ಮನಿರಬಾರದಿತ್ತೆ ಎಂದು ಕಳವಳದಿಂದ ಹೇಳಿದಾಗ ಶ್ವೇತಾ ಮತ್ತಷ್ಟು ಗಾಬರಿಗೊಂಡು ಗೊಳೋ ಎಂದು ಅತ್ತಳು. ನಾನೇನು ಮಾಡಲಿ ಈಗ, ಪೊಲೀಸರು ನನ್ನನ್ನು ಅರೆಸ್ಟ್ ಮಾಡಿದರೆ ಏನು ಮಾಡುವುದು, ನನ್ನ ಮಾನ ಮರ್ಯಾದೆ ಎಲ್ಲ ಹೋಗುತ್ತ,ದೆ ನನ್ನ ಸಂಸಾರ ಹಾಳಾಗುತ್ತದೆ ಎಂದು ರೋಧಿಸತೊಡಗಿದಳು. ಆಗ ಶ್ವೇತಾಳ ಗಂಡ ಹಾಗೇನು ಆಗುವುದಿಲ್ಲ ನಾನಿದ್ದೇನೆ. ಮೊದಲು ಮಾಲೀಕರ ಹತ್ತಿರ ಆತ ಯಾಕೆ ಆತ್ಮಹತ್ಯೆ ಮಾಡಿಕೊಂಡ, ಡೆತ್ ನೋಟ್ ಏನಾದರೂ ಬಿಟ್ಟಿದ್ದಾನೆಯೇ ಹೇಗೆ ಎಂದು ಕೇಳು. ಅವರೇನು ಹೇಳುತ್ತಾರೋ ನೋಡೋಣ, ನಾಳೆ ಮತ್ತೆ ಫೋನ್ ಮಾಡ್ತೀನಿ ಎಂದು ಫೋನ್ ಇಟ್ಟ.

ಶ್ವೇತಾಗೆ ಮಾಲೀಕರ ಬಳಿ ಈಗಲೇ ಕೇಳಿದರೆ ಅವರಿಗೆ ಸಂಶಯ ಬರುವುದಿಲ್ಲವೇ ಅದರ ಬದಲು ನಾಳೆ ಅವರು ಬರಬಹುದು ಆಗ ಕೇಳಿದರಾಯಿತು. ಅಷ್ಟಕ್ಕೂ ಪೊಲೀಸರು ಅವನು ಡೆತ್ ನೋಟ್ ನಲ್ಲಿ ನನ್ನ ಬಗ್ಗೆ ಬರೆದಿದ್ದರೆ ಅವರು ಆಗಲೇ ಆ ಬಗ್ಗೆ ವಿಚಾರಿಸುತ್ತಿದ್ದರು. ಅವರು ಏನೂ ಕೇಳದ್ದು ನೋಡಿದರೆ ನನ್ನ ಕಾರಣದಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬೇರೆ ಏನು ಕಾರಣವಿರಬಹುದು. ಅವನ ಸಂಸಾರದ ಜಂಜಾಟದಿಂದ ಇರಬಹುದೇ ಅಥವಾ ಕುಡಿಯುವ ಚಟ ಇದ್ದು ಅದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ .. ಸಿಗರೇಟು ಸುಡುವ ಮನುಷ್ಯನಿಗೆ ಕುಡಿಯುವ ಚಟವಿದ್ದಿರಲೂಬಹುದು ಅಥವಾ ಅವನು ಬಹಳಷ್ಟು ಸಾಲ ಮಾಡಿಕೊಂಡಿರಬಹುದು ಅದನ್ನು ತೀರಿಸಿಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಯತ್ನಿಸಿದರೂ ಅವನನ್ನು ಬೈಯ್ಯುವಾಗ ಸಿಟ್ಟಿನ ಭರದಲ್ಲಿ ನೇಣು ಹಾಕಿಕೊಂಡು ಸಾಯಬಾರದೇ ಎಂದು ತಾನು ಹೇಳಿದ್ದು ನೆನಪಾಗಿ ಜಿಲ್ಲನೆ ಬೆವರಿದಳು. ತಾನು ಹಾಗೆ ಹೇಳಿದ್ದಕ್ಕಾಗಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅನಿಸಿ ವಿಪರೀತ ಭಯದಿಂದ ತಲೆಯೊಡೆದು ಹೋಗುತ್ತೇನೋ ಎಂದು ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಪೂರ್ವಿ ಬೇಗನೆ ಮಲಗಿದ್ದರಿಂದ ಅವಳಿಗೆ ಇದೆಲ್ಲ ತಿಳಿಯಲಿಲ್ಲ ಆದರೆ ನಾಳೆ ನನ್ನನ್ನು ಪೊಲೀಸರು ಅರೆಸ್ಟ್ ಮಾಡಿದರೆ ಅವಳ ಗತಿ..? ಎಂದು ಭಯವಾಗಿ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಆತಂಕದಲ್ಲೇ ಕಳೆದಳು.

ಮಾರನೆಯ ದಿನ, ಮಾನಸಿಕವಾಗಿ ಜರ್ಜರಿತಳಾಗಿದ್ದ ಶ್ವೇತಾ ಕೆಲಸಕ್ಕೆ ರಜೆ ಹಾಕಿದಳು, ಮಗಳನ್ನು ಮಾತ್ರ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಳು. ಅವಳು ಬರುವಾಗ ಎದುರು ಮನೆಗೆ ಮಾಲೀಕರು ಬಂದಿದ್ದರು. ಆತನೊಂದಿಗೆ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳಿದ್ದರು. ಬಹುಶಃ ಆ ಮನುಷ್ಯನ ಹೆಂಡತಿ ಮಕ್ಕಳಿರಬೇಕು ಎಂದುಕೊಂಡ ಶ್ವೇತಾಗೆ ಮತ್ತೆ ಭಯ ಶುರುವಾಯಿತು. ಅಷ್ಟರಲ್ಲಿ ಮಾಲಕರು ಶ್ವೇತಾಳನ್ನು ನೋಡಿ ಅವಳತ್ತ ಬಂದರು. ಓಹ್, ಅವನು ನನ್ನ ಬಗ್ಗೆ ಬರೆದಿದ್ದನ್ನು ಹೇಳಲು ಇವರು ತನ್ನತ್ತ ಬರುತ್ತಿದ್ದಾರೆ. ಏನು ಮಾಡುವುದು ಈಗ, ತನ್ನನ್ನು ಪೊಲೀಸರು ಬಂದು ಅರೆಸ್ಟ್ ಮಾಡಿ ಕೊಂಡುಹೋಗುವ ದೃಶ್ಯ ಅವಳ ಕಣ್ಣ ಮುಂದೆ ಸುಳಿಯಿತು. ಪೂರ್ವಿ ತನ್ನ ಹಿಂದೆಯೇ ಅಳುತ್ತ ಬಂದಂತೆ ಅನಿಸಿ ಅವಳ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯತೊಡಗಿತು. ಅದನ್ನು ನೋಡಿ ಮಾಲಕರು ಯಾಕಮ್ಮ ಅಳ್ತಿದ್ದೀಯಾ. ಆ ಮನುಷ್ಯ ಮನೆಯಲ್ಲಿ ಪತ್ರ ಬಿಟ್ಟು ಬಂದಿದ್ದನಂತೆ. ತನ್ನನ್ನು ಯಾರೂ ಹುಡುಕುವುದು ಬೇಡ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು. ಇವರು ಪೋಲೀಸ್ ಕಂಪ್ಲೈಂಟ್ ಕೊಟ್ಟಿದ್ದರಂತೆ. ಮೈ ತುಂಬಾ ಸಾಲ ಮಾಡಿಕೊಂಡಿದ್ದನಂತೆ. ಸಾಲಗಾರರ ಕಾಟ ತಡೆಯಲಾರದೆ ಇಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ತಿಂಗಳಿಂದ ಮನೆ ಖಾಲಿ ಬಿದ್ದಿತ್ತಲ್ಲ. ಅದಕ್ಕೆ ಒಂದು ತಿಂಗಳಿನ ಬಾಡಿಗೆ ಆಸೆಯಿಂದ ಹಿಂದು ಮುಂದು ನೋಡದೆ ಕೊಟ್ಟು ಮುಠ್ಠಾಳತನದ ಕೆಲಸ ಮಾಡಿದೆ. ಒಂದೇ ತಿಂಗಳಿಗೆ ಮಾತ್ರ ಯಾಕೆ ಅಂತಾನೂ ಕೇಳಲಿಲ್ಲ. ಇನ್ನು ಆ ಮನೆಗೆ ಯಾರು ಬರುತ್ತಾರೆ ಎಂದು ವಿಷಾದದಿಂದ ಹೇಳಿದಾಗ ಶ್ವೇತಾಗೆ ಹೋದ ಜೀವ ಬಂದಂತಾಯಿತು. ಕಣ್ಣೀರು ಒರೆಸಿಕೊಂಡು, ಅಂಕಲ್, ಸ್ವಲ್ಪ ಸಮಯ ಖಾಲಿ ಬೀಳಬಹುದು. ಆಮೇಲೆ ಯಾರಾದರೂ ಬಂದೇ ಬರ್ತಾರೆ. ಎಷ್ಟೋ ಜನ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡ್ಕೋಳ್ಳಲ್ವೇ ಆ ರೂಮಿಗೆ ಬೇರೆಯವರು ಬರ್ತಾರಲ್ವೆ ಹಾಗೆ ಎಂದಾಗ ಹೌದಮ್ಮ ಆದ್ರೆ ಸಂಸಾರಸ್ಥರು ಬರೋದು ಡೌಟು ನೋಡೋಣ ಏನಾಗುತ್ತೋ ಎನ್ನುತ್ತಾ ಎದುರು ಮನೆಯತ್ತ ಹೆಜ್ಜೆ ಹಾಕಿದರು. ಶ್ವೇತಾ, ಅಬ್ಬಾ, ದೊಡ್ಡ ಗಂಡಾಂತರದಿಂದ ಪಾರಾದೆ ಎಂದು ನಿಟ್ಟುಸಿರುಬಿಡುತ್ತ ಸೋಫಾದಲ್ಲಿ ಮೈ ಚೆಲ್ಲಿದಳು.

ನಿಗೂಢ ಕಾಯಿಲೆ

ತನಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ ಆತ್ಮೀಯ ಗೆಳೆಯ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿದ ಸುದ್ದಿ ಕೇಳಿ ಆಘಾತದಿಂದ ಸಮರ್ ಗೆ ಕಣ್ಣು ಕತ್ತಲೆ ಬಂದಂತಾಯಿತು. ಆದರೂ ಚೇತರಿಸಿಕೊಂಡು ಗೆಳೆಯನಿಗೆ ಅಂತಿಮ ನಮನ ಸಲ್ಲಿಸಲು ಸಮರ್ ಆತನ ಮನೆಗೆ ಧಾವಿಸಿದ. ಅಲ್ಲಿ ಅವನ ಶೋಕತಪ್ತ ಮನೆಯವರಿಗೆ ಸಮಾಧಾನ ಹೇಳಿ ಅವರಿಗೆ ತನ್ನಿಂದ ಸಾಧ್ಯವಾದಷ್ಟೂ ಸಹಾಯ ಮಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವವರೆಗೂ ಅಲ್ಲಿದ್ದು ಕೊನೆಗೆ ಅಲ್ಲಿಂದ ಬರುತ್ತಿರುವಾಗ ಏನೋ ಕಾಲಿಗೆ ಚುಚ್ಚಿದಂತಾಗಿ ತೀವ್ರ ನೋವಾಯಿತು. ಅಸಾಧ್ಯ ನೋವನ್ನು ತಡೆಯಲಾಗದೆ ಸಮರ್, ತನ್ನ ಶೂಸ್ ಮತ್ತು ಸಾಕ್ಸನ್ನು ಭೇದಿಸಿ ತನ್ನ ಕಾಲನ್ನು ಚುಚ್ಚಬೇಕಾದರೆ ಅದು ಎಂಥಾ ಮುಳ್ಳಿರಬಹುದು ಎಂದುಕೊಳ್ಳುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ತನ್ನ ಶೂಸ್ ಮತ್ತು ಸಾಕ್ಸನ್ನು ಬಿಚ್ಚಿ ನೋಡಿದವನಿಗೆ ಆಶ್ಚರ್ಯ ಕಾದಿತ್ತು. ಎರೆಹುಳುವಿನಂತಿದ್ದ ಹುಳುವೊಂದರ ಅರ್ಧಭಾಗ ಇನ್ನೂ ಪಾದದ ಹೊರಗೆ ನೇತಾಡುತ್ತಿತ್ತು ! ಅರೆ ! ಹುಳು ಇಷ್ಟೊಂದು ನೋವು ಕೊಡುತ್ತದೆಯೇ ಅಲ್ಲದೆ ಅದು ತನ್ನ ಕಾಲಿನ ಒಳಗೆ ಹೊಕ್ಕಿದ್ದಾದರೂ ಹೇಗೆ ಎಂದು ಅಚ್ಚರಿ ಪಡುತ್ತ ಅದನ್ನು ಎಳೆದು ಹೊರ ತೆಗೆಯಲು ಪ್ರಯತ್ನಿಸಿದ. ಆದರೆ ಅದು ಆತನ ಕೈಗೆ ಸಿಗದೇ ಜಾರುತ್ತಿತ್ತು. ಕೊನೆಗೆ ಸಮರ್ ಅಲ್ಲಿ ಕೆಳಗೆ ಬಿದ್ದಿದ್ದ ಕಾಗದದ ಚೂರನ್ನು ತೆಗೆದುಕೊಂಡು ಅದರಿಂದ ಹುಳುವನ್ನು ಹೊರಕ್ಕೆ ತೆಗೆಯಲು ಯತ್ನಿಸಿದ. ಅವನು ಎಳೆದ ರಭಸಕ್ಕೆ ಹುಳ ಎರಡು ತುಂಡಾಯಿತು. ಹೊರಗೆ ನೇತಾಡುತ್ತಿದ್ದ ಭಾಗ ಮಾತ್ರ ಅವನ ಕೈಗೆ ಸಿಕ್ಕಿತು. ಇದರಿಂದ ಕ್ಷಣ ಕಾಲ ವಿಚಲಿತನಾದ ಸಮರ್ ಅರ್ಧ ಭಾಗ ಒಳಗೆ ಇದ್ದರೂ ಅದು ತುಂಡಾಗಿರುವುದರಿಂದ ಅದು ಸತ್ತು ಹೋಗುತ್ತದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಕೈಗೆ ಸಿಕ್ಕಿದ ಹುಳುವನ್ನು ನೋಡಲು ಮುದ್ದೆಯಾದ ಕಾಗದ ಬಿಚ್ಚಿ ನೋಡಿದ. ಆದರೇನಾಶ್ಚರ್ಯ, ಅಲ್ಲಿ ಹುಳು ಇರಲಿಲ್ಲ ಅದರ ಬದಲು ಸ್ವಲ್ಪ ಮಣ್ಣು ಇತ್ತು ! ಆತಂಕದಿಂದ ಸಮರ್ ಹುಳು ಎಲ್ಲಿ ಹೋಯಿತು ಎಂದು ಸುತ್ತ ಮುತ್ತ ಹುಡುಕಾಡಿದ. ಆದರೆ ಅದು ಸಿಗಲೇ ಇಲ್ಲ ಮತ್ತೆ ತನ್ನ ಪಾದವನ್ನು ಪರೀಕ್ಷಿಸಿ ನೋಡಿದಾಗ ಅಲ್ಲಿ ಗಾಯದ ಗುರುತೇ ಇರಲಿಲ್ಲ ! ಅದನ್ನು ನೋಡಿ ದಂಗಾದ ಸಮರ್, ಏನಾಗುತ್ತಿದೆ ತನಗೆ, ನಿಜವಾಗಿಯೂ ಕಾಲಿಗೆ ಏನಾದರೂ ಚುಚ್ಚಿತ್ತೆ ಅಥವಾ ಇದೆಲ್ಲ ಭ್ರಮೆಯೇ ಎಂದು ಗಲಿಬಿಲಿಗೊಂಡು ಬೇಗನೆ ಶೂಸ್ ಧರಿಸಿ ಮನೆಯತ್ತ ನಡೆದ. ಮನೆಯಲ್ಲಿ ಹೆಂಡತಿಯ ಬಳಿ ಹೇಳೋಣ ಎಂದುಕೊಂಡರೂ ಅವಳು ಗಾಬರಿಯಾದಾಳು ಎಂದು ಅವಳಿಗೆ ತಿಳಿಸುವುದು ಬೇಡ ಎಂದು ನಿರ್ಧರಿಸಿದ.

ಎರಡು ದಿನಗಳಾದರೂ ತನಗೆ ಆರೋಗ್ಯದಲ್ಲಿ ಏನೂ ಸಮಸ್ಯೆಯಾಗದೇ ಇದ್ದುದ್ದು ಕಂಡು ಸಮರ್ ಆ ಹುಳದಿಂದ ಏನೂ ತೊಂದರೆಯಿಲ್ಲ ಎಂದುಕೊಂಡು ನಿರಾಳನಾದ. ಆದರೆ ಕೆಲವು ದಿನಗಳ ಬಳಿಕ ರಾತ್ರಿ ಸುಮಾರು ಹೊತ್ತಿನ ನಂತರ ಸಮರ್ ನ ಹೆಂಡತಿ ಅವನ ಗೊರಕೆಯ ವಿಪರೀತ ಸದ್ದಿನಿಂದ ಎಚ್ಚೆತ್ತು ಗಂಡನನ್ನು ಎಬ್ಬಿಸಲು ಲೈಟ್ ಹಾಕಿದಳು. ಇನ್ನೇನು ಅವನನ್ನು ಎಬ್ಬಿಸಬೇಕು ಎನ್ನುವಷ್ಟರಲ್ಲಿ ಅವಳ ದೃಷ್ಟಿ ಅಚಾನಕ್ಕಾಗಿ ಅವನ ಮೂಗಿನತ್ತ ಹರಿಯಿತು. ಅವನ ಮೂಗಿನಿಂದ ಹುಳುವೊಂದು ಅವನ ಉಸಿರಾಟಕ್ಕೆ ತಕ್ಕಂತೆ ಹೊರಗೆ ಬರುತ್ತಾ ಒಳಗೆ ಹೋಗುತ್ತಾ ಇತ್ತು. ಇದನ್ನು ಕಂಡ ಜ್ಯೋತಿ ಬೆಚ್ಚಿ ಬಿದ್ದು ಗಂಡನ ಮೂಗಿನಲ್ಲಿ ಹುಳ ಎಲ್ಲಿಂದ ಬಂತು ಎಂದುಕೊಂಡು ಸೂಕ್ಷ್ಮವಾಗಿ ಅದನ್ನು ಪರಿಶೀಲಿಸಿದಳು. ಅದು ನೋಡಲು ಎರೆ ಹುಳುವಿನಂತೆ ಇತ್ತು. ಫಳಫಳನೆ ಹೊಳೆಯುತ್ತಿತ್ತು. ಗಂಡನನ್ನು ಎಬ್ಬಿಸಿದರೆ ಅವನು ಉಸಿರೆಳೆದುಕೊಂಡಾಗ ಅದು ಪೂರ್ತಿಯಾಗಿ ಒಳ ಹೋಗಿಬಿಟ್ಟರೆ ಎಂದು ಭಯವಾಗಿ ತಾನೇ ಅದನ್ನು ಹೊರ ತೆಗೆಯಲು ಪ್ರಯತ್ನಿಸಬೇಕು ಎಂದುಕೊಂಡರೂ ಅವಳಿಗೆ ಕೈಯಿಂದ ಅದನ್ನು ಮುಟ್ಟಲು ಅಸಹ್ಯವಾಗಿ ಅಲ್ಲೇ ಟೇಬಲ್ ಮೇಲಿದ್ದ ಗಂಡನ ಕರ್ಚೀಫ್ ತೆಗೆದು ಮೆಲ್ಲನೆ ಅದರಿಂದ ಹುಳುವನ್ನು ಹಿಡಿದೆಳೆಯಲು ಪ್ರಯತ್ನಿಸಿದಳು. ಅವನು ಉಸಿರು ಬಿಟ್ಟಾಗ ಹೊರಬರುತ್ತಿದ್ದ ಹುಳು ಅವನು ಉಸಿರೆಳೆದಾಗ ಮತ್ತೆ ಒಳಗೆ ಹೋಗುತ್ತಿತ್ತು. ಹಾಗಾಗಿ ಜಾಗರೂಕತೆಯಿಂದ ಹೊರಬರುವುದನ್ನೇ ಕಾದು ಕರ್ಚೀಫಿನ ಮೂಲಕ ಚಕ್ಕನೆ ಹಿಡಿದು ಮೆಲ್ಲಗೆ ಎಳೆದಳು. ಹುಳು ಅವಳ ಕೈಗೆ ಬಂದಾಗ ನಿಟ್ಟುಸಿರು ಬಿಟ್ಟು ಗಂಡನನ್ನು ಎಬ್ಬಿಸಿದಳು.

ಸಮರ್ ಗೆ ಅವನ ಮೂಗಿನಿಂದ ಹೊರಬರುತ್ತಿದ್ದ ಹುಳುವಿನ ಬಗ್ಗೆ ಅವಳು ಹೇಳಿದಾಗ ಸಮರ್ ಬೆಚ್ಚಿ ಬಿದ್ದು ಎಲ್ಲಿ ಆ ಹುಳು ತೋರಿಸು ಎಂದಾಗ ಜ್ಯೋತಿ ಅವನ ಕರ್ಚೀಫ್ ತೆರೆದಳು. ಆದರೆ ಅದರಲ್ಲಿ ಹುಳು ಮಾತ್ರ ಇರಲಿಲ್ಲ. ಅದನ್ನು ನೋಡಿ ಜ್ಯೋತಿ ಗಾಬರಿಯಿಂದ ಅದು ಜಾರಿ ಇಲ್ಲೇ ಎಲ್ಲಾದರೂ ಬಿದ್ದಿರಬಹುದು ಎಂದುಕೊಂಡು ಇಡೀ ಹಾಸಿಗೆಯನ್ನೇ ಬುಡಮೇಲು ಮಾಡಿ ಹುಡುಕಿದರೂ ಹುಳು ಮಾತ್ರ ಸಿಗಲೇ ಇಲ್ಲ. ಸಮರ್ ಗೆ ಆಗ ತನಗೆ ಸ್ನೇಹಿತನ ಅಂತ್ಯಕ್ರಿಯೆಗೆ ಹೋದಾಗ ಹುಳು ಚುಚ್ಚಿದ್ದು ನೆನಪಾಗಿ ಇದು ಅದರ ಉಳಿದ ಅರ್ಧಭಾಗವೇ ಇರಬಹುದೇ, ಆದರೆ ಕಾಲಿಗೆ ಚುಚ್ಚಿದ್ದು ಮೂಗಿನಲ್ಲಿ ಬಂದದ್ದಾದರೂ ಹೇಗೆ ಎಂದು ಆತಂಕಗೊಂಡ. ಜ್ಯೋತಿಗೆ ಈ ವಿಷಯ ಹೇಳಲೇಬೇಕೆಂದುಕೊಂಡು ಗೆಳೆಯನ ಅಂತ್ಯಕ್ರಿಯೆಗೆ ಹೋದಾಗ ಹುಳು ಕಾಲಿಗೆ ಚುಚ್ಚಿದ್ದು ಅದನ್ನು ತಾನು ಕಷ್ಟ ಪಟ್ಟು ಹೊರತೆಗೆಯುವಾಗ ಹುಳುವಿನ ಅರ್ಧಭಾಗ ಮಾತ್ರ ಹೊರಗೆ ಬಂದಿದ್ದು, ನಂತರ ನೋಡಿದಾಗ ಹುಳುವಿನ ತುಂಡು ಸಿಗದೇ ಇದ್ದಿದ್ದು, ಆ ಹುಳುವಿನ ಅರ್ಧ ಭಾಗವೇ ಇದಾಗಿರಬಹುದು ಎಂದು ಹೇಳಿದಾಗ ಜ್ಯೋತಿ ಕಂಗಾಲಾದಳು. “ನಾಳೆನೇ ಡಾಕ್ಟರ್ ಹತ್ರ ಹೋಗೋಣ ಕಣ್ರೀ, ನನಗ್ಯಾಕೋ ಭಯವಾಗ್ತಿದೆ. ನೀವು ಯಾಕಾದರೂ ಸ್ಮಶಾನಕ್ಕೆ ಹೋದಿರೋ” ಎಂದು ಆತಂಕ ವ್ಯಕ್ತಪಡಿಸಿದಾಗ ಸಮರ್, “ಆ ಹುಳು ನನಗೆ ಏನೂ ಮಾಡಿಲ್ಲ, ಅಲ್ಲದೆ ಆ ಹುಳುವಿನ ಅರ್ಧಭಾಗ ಇದ್ದಿದ್ದು ಅದೂ ಈಗ ಹೊರಗೆ ಹೋಯಿತಲ್ಲ ಅಷ್ಟೇ, ನೀನು ಸುಮ್ಮನೆ ಟೆನ್ಶನ್ ಮಾಡ್ಕೊಳ್ತೀಯಾ ಅಂತ ನಾನು ಮೊದಲೇ ನಿಂಗೆ ಹೇಳಿಲ್ಲ, ಈಗ ಸುಮ್ಮನೆ ಮಲಕ್ಕೋ” ಎಂದು ತಾನೂ ಮುಸುಕೆಳೆದು ಮಲಗಿಕೊಂಡ. ಜ್ಯೋತಿಗೆ ಏನೂ ಇಲ್ಲವೆಂದು ಹೇಳಿದರೂ ಅವನಲ್ಲೂ ಆತಂಕ ಮನೆ ಮಾಡಿತ್ತು. ಆದರೆ ತಾನು ಗಾಬರಿಯಾದರೆ ಜ್ಯೋತಿ ಕಂಗಾಲಾಗುತ್ತಾಳೆ ಎಂದು ತನ್ನ ಆತಂಕವನ್ನು ತೋರಗೊಡಲಿಲ್ಲ. ದೇವರೇ, ಇವರಿಗೆ ಏನೂ ಆಗದಂತೆ ಕಾಪಾಡಪ್ಪ ಎಂದು ಮನಸ್ಸಿನಲ್ಲೇ ಬೇಡಿಕೊಳ್ಳುತ್ತ ಜ್ಯೋತಿಯೂ ಮಲಗಿದಳು. ಆದರೆ ಇಬ್ಬರಿಗೂ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ.

ಬೆಳಗ್ಗೆ ಎದ್ದ ಜ್ಯೋತಿ, ಮುಸುಕೆಳೆದು ಮಲಗಿದ್ದ ಗಂಡನ ಹೊದಿಕೆ ಮೆಲ್ಲನೆ ಎಳೆದು ಮತ್ತೆ ಅವನ ಮೂಗಿನಲ್ಲಿ ಹುಳು ಇದೆಯೇ ಎಂದು ಪರೀಕ್ಷಿಸಿದಳು. ಆದರೆ ಹುಳು ಇರದ್ದು ಕಂಡು ನಿಟ್ಟುಸಿರು ಬಿಡುತ್ತ ಅಡಿಗೆ ಮನೆಯತ್ತ ನಡೆದಳು. ಸಮರ್ ಏನೂ ಆಗದವರಂತೆ ಎಂದಿನಂತೆ ಎದ್ದು, ಮಕ್ಕಳನ್ನು ಎಬ್ಬಿಸಿ ಅವರನ್ನು ಹಲ್ಲುಜ್ಜಿಸಿ, ಶಾಲೆಗೆ ಹೊರಡಿಸಿ ತಿಂಡಿ ತಿನ್ನಲು ಕರೆದುಕೊಂಡು ಬಂದಾಗ ಜ್ಯೋತಿಯ ಗಮನ ಗಂಡನತ್ತಲೇ ಇತ್ತು. ಅವನು ಏನೂ ಆಗದವರಂತೆ ಇದ್ದುದು ನೋಡಿ ದೇವರಿಗೆ ಮನಸ್ಸಿನಲ್ಲೇ ಧನ್ಯವಾದ ಅರ್ಪಿಸಿದಳು. ಮಕ್ಕಳು ಶಾಲೆಗೆ ಹೊರಡುತ್ತಲೇ ಗಂಡನಿಗೆ ಡಾಕ್ಟರ್ ಬಳಿ ಹೋಗಲು ತಿಳಿಸಿದಳು. ಆದರೆ ಸಮರ್ ಮಾತ್ರ, ಡಾಕ್ಟರ್ ಬಳಿ ಏನೆಂದು ಹೇಳಲಿ, ಹುಳು ಕೂಡ ಇಲ್ಲ, ಗಾಯದ ಗುರುತು ಕೂಡ ಇಲ್ಲ ಅಲ್ಲದೆ ತಾನಂತೂ ಆರೋಗ್ಯವಾಗಿದ್ದೇನೆ ಮತ್ಯಾಕೆ ಎಂದಾಗ ಜ್ಯೋತಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಕೊನೆಗೆ ಸಮರ್ ಇನ್ನೊಮ್ಮೆ ಹುಳು ಕಾಣಿಸಿಕೊಂಡರೆ ಹೋದರಾಯಿತು ಏನೂ ಚಿಂತೆ ಮಾಡಬೇಡ ಎನ್ನುತ್ತಾ ಸ್ನಾನಕ್ಕೆ ಹೊರಟ. ಅದಾಗಿ ಕೆಲವು ದಿನಗಳಾದರೂ ಮತ್ತೆ ಹುಳು ಕಾಣಿಸಿಕೊಳ್ಳದಿದ್ದಾಗ ಇಬ್ಬರೂ ಅದರ ಚಿಂತೆಯನ್ನು ಬಿಟ್ಟುಬಿಟ್ಟರು.

ಆದರೆ ಒಂದು ದಿನ ಸಮರ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವನ ಎಡ ಕೈಯಲ್ಲಿ ಏನೋ ಹರಿದಂತಾಗಿ ನೋಡಿದಾಗ ಅವನ ಕೈಯ ಚರ್ಮದ ಕೆಳಗೆ ಸಣ್ಣ ಹುಳುವೊಂದು ಅತ್ತಿತ್ತ ಸರಿಯುತ್ತಿದ್ದುದ್ದು ಸ್ಪಷ್ಟವಾಗಿ ಕಾಣಿಸಿತು. ಅದನ್ನು ನೋಡಿ ಸಮರ್ ದಿಗ್ಭ್ರಾಂತನಾದ. ಇದು ತನಗೆ ಮಾತ್ರ ಕಾಣಿಸುತ್ತಿದೆಯೋ ಎಂದುಕೊಂಡು ಪಕ್ಕದಲ್ಲಿ ಕುಳಿತ್ತಿದ್ದ ಕಲೀಗ್ ಗೆ ತನ್ನ ಕೈ ತೋರಿಸಿದಾಗ ಆತ ಬೆಚ್ಚಿ ಬಿದ್ದು, “ಏನೋ ಇದು ವಿಚಿತ್ರ .. ಇದ್ಯಾವ ಯಾವ ಹುಳು ನಿನ್ನ ಕೈ ಹೊಕ್ಕಿದೆ. ಇಂಗ್ಲೀಷ್ ನ ಹಾರರ್ ಫಿಲಂ ನಲ್ಲಿ ಇದ್ದ ಹಾಗಿದೆಯಲ್ಲೋ” ಎಂದು ಉದ್ಗರಿಸಿದ. ಅದನ್ನು ಕೇಳಿ ಸಮರ್ ಗೆ ಮತ್ತಷ್ಟು ಆತಂಕವಾಯಿತು. ಅವನ ಮಾತು ಕೇಳಿ ಇತರರೆಲ್ಲ ಧಾವಿಸಿ ಬಂದರು. ಎಲ್ಲರಿಗೂ ಅವನ ಕೈಯಲ್ಲಿ ತೆವಳುತ್ತಿದ್ದ ಹುಳು ಕಂಡು ಆಶ್ಚರ್ಯವಾಯಿತು. ಕೆಲವರು ಡಾಕ್ಟರ್ ಬಳಿ ಹೋಗಲು ತಿಳಿಸಿದರೆ ಇನ್ನು ಕೆಲವರು ಅವನು ತನ್ನ ಕೈಗೆ ಬ್ಲೇಡಿನಿಂದ ಗೀರಿಕೊಂಡರೆ ಹುಳುವನ್ನು ಹೊರ ತೆಗೆಯಬಹುದು, ಡಾಕ್ಟರ್ ಬಳಿ ಹೋಗುವವರೆದೂ ಅದು ಹುಳು ಅಲ್ಲಿ ಇರದಿದ್ದರೆ ಎಂದು ತಮ್ಮ ಆತಂಕ ವ್ಯಕ್ತ ಪಡಿಸಿದರು. ಅದನ್ನು ಕೇಳಿ ಸಮರ್ ತನ್ನ ಟೇಬಲ್ ಡ್ರಾಯರ್ ತೆರೆದು ಅಲ್ಲಿದ್ದ ಬ್ಲೇಡ್ ತೆಗೆದುಕೊಂಡು ವಾಶ್ ರೂಂನತ್ತ ಧಾವಿಸಿದ. ವಾಶ್ ಬೇಸಿನ್ ನಲ್ಲಿ ಕೈಯಿಟ್ಟು ಮೆಲ್ಲನೆ ಹುಳು ಇರುವ ಕಡೆ ಗೀರಿದ. ಆದರೆ ಅದು ತಪ್ಪಿಸಿಕೊಂಡು ಮುಂದೆ ಹೋಯಿತು. ತುಂಬಾ ನೋವಾಗುತ್ತಿದರೂ ಸಹಿಸಿಕೊಂಡು ಹುಳುವನ್ನು ಹಿಡಿಯಲೇ ಬೇಕೆಂಬ ಹಟದಿಂದ ಸಮರ ಅಲ್ಲಿಯೂ ಗೀರಿದ. ಆದರೆ ಅವನೆಷ್ಟೇ ಪ್ರಯತ್ನಿಸಿದರೂ ಕೈ ತುಂಬಾ ಗಾಯಗಳಾಗಿ ರಕ್ತಧಾರೆಯೇ ಹರಿಯಿತೇ ವಿನಃ ಹುಳು ಮಾತ್ರ ಸಿಗಲೇ ಇಲ್ಲ. ಸಮರ್ ಆತಂಕದಿಂದ ರಕ್ತ ಸಿಕ್ತ ಕೈಗೆ ಟವೆಲ್ ಸುತ್ತಿ ಇನ್ನು ಡಾಕ್ಟರ್ ಬಳಿ ಹೋಗುವುದೊಂದೇ ದಾರಿ ಎಂದುಕೊಂಡು ಹೊರಬಂದ. ಅವನ ಅವಸ್ಥೆ ಕಂಡು ಆಫೀಸಿನವರೆಲ್ಲ ಕಂಗಾಲಾಗಿ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಆದರೆ ಡಾಕ್ಟರ್ ಬಂದು ಪರೀಕ್ಷೆ ಮಾಡಿದಾಗ ಯಾವ ಹುಳುವೂ ಅವರಿಗೆ ಗೋಚರಿಸಲಿಲ್ಲ. ಸಮರ್ ನ ಆಫೀಸಿನವರೆಲ್ಲ ಹುಳುವನ್ನು ತಾವೂ ನೋಡಿದ್ದಾಗಿ ಹೇಳಿದಾಗ ಡಾಕ್ಟರ್ ಗೆ ವಿಚಿತ್ರವೆನಿಸಿತು. ಆಗ ಸಮರ್ ತನ್ನ ಕತೆಯೆಲ್ಲ ಹೇಳಿದಾಗ ಎಲ್ಲರೂ ದಂಗು ಬಡಿದು ಹೋದರು. ಡಾಕ್ಟರ್ ಗೆ ಇದು ಯಾವ ಕಾಯಿಲೆ ಎಂದು ತಿಳಿಯಲಿಲ್ಲ. ಅವನ ರಕ್ತ ಪರೀಕ್ಷೆ ಎಲ್ಲ ಬಗೆಯ ಸ್ಕ್ಯಾನಿಂಗ್ ಮಾಡಿದರೂ ಡಾಕ್ಟರ್ ಗೆ ಸಮರ್ ಗೆ ಇರುವ ಸಮಸ್ಯೆ ಯನ್ನು ಕಂಡು ಹಿಡಿಯಲಾಗಲಿಲ್ಲ. ಆದರೂ ಅವರು ಹುಳಕ್ಕೆ ಮಾತ್ರೆ ಬರೆದು ಕೊಟ್ಟು ಇದನ್ನು ತೆಗೆದುಕೊಂಡು ನೋಡಿ, ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿ ಅವನ ರಕ್ತಸಿಕ್ತ ಕೈಯನ್ನು ಶುದ್ದಿ ಮಾಡಿ ಬ್ಯಾಂಡೇಜ್ ಹಾಕಿ ಕಳುಹಿಸಿದರು. ಸಮರ್ ಅಲ್ಲಿಂದ ನೇರವಾಗಿ ಮನೆಗೆ ಹೋದ.

ಜ್ಯೋತಿಗೆ ಈ ವಿಷಯ ತಿಳಿದಾಗ ಕಂಗಾಲಾದಳು. ಡಾಕ್ಟರ್ ಗೆ ಗೊತ್ತಿಲ್ಲ ಅಂದ್ರೆ ಏನ್ರೀ, ನಾವು ಬೇರೆ ಡಾಕ್ಟರ್ ಹತ್ರ ಹೋಗೋಣ ಎಂದು ಊರಿನ ಪ್ರಖ್ಯಾತ ಡಾಕ್ಟರ್ ಬಳಿ ಗಂಡನನ್ನು ಕರೆದುಕೊಂಡು ಹೋದಳು. ಅಲ್ಲಿಯೂ ಡಾಕ್ಟರ್ ಹಲವಾರು ಪರೀಕ್ಷೆಗಳನ್ನು ನಡೆಸಿ ಮರುದಿನ ಬರುವಂತೆ ಅವರಿಗೆ ತಿಳಿಸಿದರು. ಆ ಇಡೀ ದಿನ ಇಬ್ಬರೂ ಆತಂಕದಲ್ಲೇ ಕಳೆದರು. ಶಾಲೆಯಿಂದ ಬಂದ ಮಕ್ಕಳು ತಂದೆಯ ಕೈಯಲ್ಲಿ ಬ್ಯಾಂಡೇಜ್ ನೋಡಿ ಗಾಬರಿಗೊಂಡು ಏನಾಯಿತು ಎಂದು ಕೇಳಿದರು. ಆದರೆ ಸಮರ್ ಗೂ, ಜ್ಯೋತಿಗೂ ಮಕ್ಕಳಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. ಹುಳುವಿನ ಬಗ್ಗೆ ಹೇಳಿದರೆ ಮಕ್ಕಳು ಗಾಬರಿಯಾದಾರು ಎಂದುಕೊಂಡು ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಗಾಯವಾಯಿತು ಎಂದು ಸುಳ್ಳು ಹೇಳಿದಾಗ ಆ ಪುಟ್ಟ ಮಕ್ಕಳು, ಮಮ್ಮಿ ಅಪ್ಪನಿಗೆ ಸ್ವಲ್ಪ ಕೂಡ ಜವಾಬ್ದಾರಿ ಇಲ್ಲ ಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು ಎಂದು ಯಾಕೆ ಅವರಿಗೆ ಗೊತ್ತಾಗುವುದಿಲ್ಲ ಎಂದು ಹಿರಿಯರಂತೆ ಮಾತನಾಡಿದಾಗ ಸಮರ್ ಗೆ ನಗುವುದೋ ಅಳುವುದೋ ಎಂದು ತಿಳಿಯಲಿಲ್ಲ. ಆದರೂ ಜ್ಯೋತಿ, ಇನ್ಮೇಲೆ ಡ್ಯಾಡಿ ಹೀಗೆಲ್ಲ ಗಾಯ ಮಾಡಿ ಕೊಳ್ಳಲ್ಲ ಸರಿನಾ ಎಂದಾಗ ಮಕ್ಕಳು ಗುಡ್ ಬಾಯ್ ಎಂದು ಹೇಳಿದಾಗ ಜ್ಯೋತಿಗೆ ಸಂಕಟದಲ್ಲೂ ನಗು ಬಂದಿತು. ಮರುದಿನ ಡಾಕ್ಟರ್ ಬಳಿ ಹೋದಾಗ ಅವರಿಗೂ ಸಮರ್ ಗೆ ಇರುವ ಸಮಸ್ಯೆ ಏನೆಂದು ಸರಿಯಾಗಿ ತಿಳಿಯಲಿಲ್ಲ. ಆದರೆ ಇಂಥ ಸಮಸ್ಯೆ ಬೇರೆ ಕೆಲವು ದೇಶಗಳಲ್ಲಿ ಇದ್ದು ಅವರು ಅದರ ಬಗ್ಗೆ ಓದಿದ್ದರು. ಹಾಗಾಗಿ ಆ ದೇಶದ ವೈದ್ಯರನ್ನು ಸಂಪರ್ಕಿಸಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರೂ ಸಮರ್ ನ ಸಮಸ್ಯೆ ಅದಕ್ಕಿಂತ ಭಿನ್ನವಾಗಿದೆ ಅನಿಸಿದ್ದರಿಂದ ತಮಗೆ ತಿಳಿದ ಮಾತ್ರೆಗಳನ್ನು ಕೊಟ್ಟರು.

ಕೆಲವು ದಿನಗಳ ನಂತರ ಸಮರ್ ಕೈನ ಬ್ಯಾಂಡೇಜ್ ಬಿಚ್ಚಿ ಗಾಯಗಳು ಗುಣವಾದರೂ ಹುಳುವಿನ ನೆನಪು ಮಾತ್ರ ಹೋಗಲಿಲ್ಲ. ಇನ್ನು ಯಾವಾಗ ಎಲ್ಲಿ ಹುಳು ಕಾಣಿಸಿಕೊಳ್ಳುತ್ತದೋ ಎಂದು ಇಬ್ಬರಲ್ಲೂ ಆತಂಕ ಮನೆ ಮಾಡಿತ್ತು. ಸಮರ್ ಅಂತೂ ಇಡೀ ದಿನ ಆಗಾಗ್ಗೆ ತನ್ನ ಮೈ ಕೈ ಮೂಗು ಎಲ್ಲ ಪರೀಕ್ಷಿಸಿ ನೋಡುತ್ತಿದ್ದ. ತಿಂಗಳಾದರೂ ಹುಳು ಕಾಣಿಸಿಕೊಳ್ಳದಿದ್ದಾಗ ಸಮರ್ ಹಾಗೂ ಜ್ಯೋತಿ ಡಾಕ್ಟರ್ ಮದ್ದು ಪರಿಣಾಮ ಬೀರಿರಬೇಕು, ಇನ್ನು ಹುಳು ಕಾಣಿಸಿ ಕೊಳ್ಳುವುದಿಲ್ಲ ಎಂದು ನಿರಾಳವಾದರು. ಸಮರ್ ನಲ್ಲಿ ನಿಧಾನವಾಗಿ ಹಿಂದಿನ ಲವಲವಿಕೆ ಮೂಡ ತೊಡಗಿತು. ಇಬ್ಬರೂ ಹುಳುವಿನ ಬಗ್ಗೆ ಮರೆತೂ ಬಿಟ್ಟರು. ತಮ್ಮ ಸಂಸಾರದಲ್ಲಿ ಸಂತಸದಿಂದ ಇರುವಾಗ ಒಂದು ಭಾನುವಾರ ಸಮರ್ ಸ್ನಾನ ಮಾಡುತ್ತಿರುವಾಗ ಅವನಿಗೆ ಬೆನ್ನಲ್ಲಿ ತುರಿಕೆಯಾದಂತಾಗಿ ಹೆಂಡತಿಗೆ ತನ್ನ ಬೆನ್ನುಜ್ಜಲು ಕರೆದ. ಅವಳೂ ಗಂಡ ಮೊದಲಿನಂತೆ ರಸಿಕನಾಗುತ್ತಿದ್ದಾನೆ ಎಂದು ಖುಷಿ ಪಡುತ್ತ ಬಾತ್ ರೂಮಿಗೆ ಹೋದಳು. ಸೋಪ್ ತೆಗೆದುಕೊಂಡು ಗಂಡನ ಬೆನ್ನುಜ್ಜುವಾಗ ಅವಳಿಗೆ ಮಿಂಚು ಹೊಡೆದಂತಾಯಿತು. ಸಮರ್ ನ ಬೆನ್ನಲ್ಲಿ ಚರ್ಮದ ಕೆಳಗೆ ಅಲ್ಲಲ್ಲಿ ನಾಲ್ಕೈದು ಸಣ್ಣ ಹುಳುಗಳು ನಿಧಾನವಾಗಿ ತೆವಳುತ್ತಿದ್ದವು. ಗಾಬರಿಯಿಂದ ಜ್ಯೋತಿ ಚಿಟ್ಟನೆ ಚೀರಿದಳು. ಸಮರ್ ಏನಾಯಿತು ಎಂದು ಕೇಳಿದಾಗ ಜ್ಯೋತಿಗೆ ವಿಷಯ ಅವನಿಗೆ ತಿಳಿಸುವುದೋ ಬೇಡವೋ ಎಂದು ಗೊಂದಲವಾಯಿತು. ಕೈಯಲ್ಲಿ ಒಂದು ಹುಳು ಓಡಾಡುತ್ತಿರುವುದನ್ನು ಕಂಡು ಕೈಯೆಲ್ಲ ಗೀರಿ ಕೊಂಡ ಮನುಷ್ಯ, ಇನ್ನು ನಾಲೈದು ಹುಳುಗಳು ಬೆನ್ನಲ್ಲಿ ತೆವಳುತ್ತಿವೆ ಎಂದರೆ ಏನಾದೀತು ಎಂದುಕೊಳ್ಳುತ್ತ, ಏನಿಲ್ಲ ಓಲೆ ಮೇಲೆ ಹಾಲಿಟ್ಟದ್ದು ಜ್ಞಾಪಕ ಬಂದಿತು ಅಷ್ಟೇ ಎಂದು ಬಾತ್ ರೂಮಿನಿಂದ ಹೊರಗೆ ಧಾವಿಸಿದಳು. ಸಮರ್ ಗೆ ಜ್ಯೋತಿಯ ಮಾತಿನ ಮೇಲೆ ನಂಬಿಕೆ ಹುಟ್ಟಲಿಲ್ಲ. ಅವಳ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು. ಯಾಕಾಗಿರಬಹುದು ಎಂದು ಯೋಚಿಸುತ್ತಿದ್ದಂತೆ ಅವನಿಗೆ ತಟ್ಟನೆ ಹುಳುವಿನ ನೆನಪಾಯಿತು. ಮತ್ತೆ ಹುಳುವೇನಾದರೂ ಮತ್ತೆ ಬೆನ್ನಲ್ಲಿ ಕಾಣಿಸಿಕೊಂಡಿರಬಹುದೇ, ಅದನ್ನು ನೋಡಿ ಜ್ಯೋತಿ ಚೀರಿದಳೇನು ಎಂದು ಸಂಶಯವಾಗಿ ಬೇಗ ಬೇಗ ಸ್ನಾನ ಮುಗಿಸಿ ರೂಮಿಗೆ ಧಾವಿಸಿದ.

ಕನ್ನಡಿಯಲ್ಲಿ ಬೆನ್ನನ್ನು ನೋಡಿಕೊಂಡಾಗ ಅವನಿಗೆ ಕಣ್ಣು ಕತ್ತಲೆ ಬಂದತಾಯಿತು. ಅಲ್ಲಿ ಒಂದಲ್ಲ ಎರಡಲ್ಲ ನಾಲ್ಕೈದು ಹುಳುಗಳು ಚಲಿಸುತ್ತಿದ್ದವು. ಹುಳುಗಳಿದ್ದ ಚರ್ಮದ ಭಾಗ ಉಬ್ಬಿಕೊಂಡು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದನ್ನು ನೋಡಿ ಸಮರ್ ಕಂಗಾಲಾದ. ಬೇಗನೆ ಬಟ್ಟೆ ಧರಿಸಿ ಜ್ಯೋತಿಗೂ ಹೇಳದೆ ಸೀದಾ ಡಾಕ್ಟರ್ ಶಾಪ್ ಗೆ ಧಾವಿಸಿದ. ಆದರೆ ಕ್ಲಿನಿಕ್ ಭಾನುವಾರವಾದ್ದರಿಂದ ಮುಚ್ಚಿತ್ತು. ಅವನಿಗೆ ಆತಂಕದಿಂದ ಏನು ಮಾಡುವುದೆಂದು ತೋಚಲಿಲ್ಲ. ಮನೆಗೆ ಮರಳಿ ಜ್ಯೋತಿಗೆ ಅತಿಯಾದ ಬಿಸಿ ನೀರಿನ ಬ್ಯಾಗ್ ಸಿದ್ಧ ಪಡಿಸಿ ರೂಮಿಗೆ ತರಲು ಹೇಳಿದ. ಜ್ಯೋತಿ ತಕ್ಷಣ ಅವನು ಹೇಳಿದಂತೆ ಬಿಸಿ ನೀರಿನ ಬ್ಯಾಗ್ ತಂದು ಎಲ್ಲೆಲ್ಲ ಹುಳುಗಳು ಚಲಿಸುತ್ತಿವೆಯೋ ಅಲ್ಲೆಲ್ಲ ಸ್ವಲ್ಪ ಹೊತ್ತು ಅದರ ಮೇಲೆ ಇಟ್ಟು ಬಿಸಿಗೆ ಹುಳುಗಳು ಸಾಯಬಹುದು ಎಂದು ತನ್ನ ಪ್ರಯತ್ನ ಮಾಡಿದಳು. ಆದರೆ ಬಿಸಿ ತಾಗಿ ಸಮರ್ ನೋವು ಅನುಭವಿಸಿದ್ದೇ ಹೊರತು ಹುಳಗಳಿಗೆ ಏನೂ ಆಗಲಿಲ್ಲ. ಅದನ್ನು ನೋಡಿ ಜ್ಯೋತಿಗೆ ಇನ್ನೊಬ್ಬ ಡಾಕ್ಟರ್ ನೆನಪಾಗಿ ಅವರ ಬಳಿ ಹೋಗುವಂತೆ ಹೇಳಿದಾಗ ಸಮರ್ ಧಾವಿಸಿದ. ಅವನ ಪುಣ್ಯಕ್ಕೆ ಅಲ್ಲಿ ಡಾಕ್ಟರ್ ಇದ್ದರು. ಸಮರ್ ತನ್ನ ಶರ್ಟ್ ಬಿಚ್ಚಿ ಬೆನ್ನು ತೋರಿಸಿದಾಗ ಡಾಕ್ಟರ್ ದಿಗ್ಮೂಢ ರಾದರು. ಅಲ್ಲಿ ಹುಳುಗಳು ಅತ್ತಿಂದಿತ್ತ ಚಲಿಸುತ್ತಿದನ್ನು ಕಂಡು ಅವನನ್ನು ಬೇಗನೆ ಆಪರೇಶನ್ ಥಿಯೇಟರ್ ಗೆ ಕರೆದುಕೊಂಡು ಹೋದರು. ಹುಳುಗಳಿದ್ದ ಕಡೆ ಗಾಯ ಮಾಡಿ ಒಳಗೆ ಪರೀಕ್ಷಿಸಿದರೆ ಅಲ್ಲಿ ಏನೂ ಕಾಣಲಿಲ್ಲ. ಹುಳುಗಳು ಅಲ್ಲಿಂದ ತಪ್ಪಿಸಿ ಬೇರೆ ಕಡೆ ಚಲಿಸಲು ಆರಂಭಿಸಿದವು. ಅಲ್ಲಿಯೂ ಗಾಯ ಮಾಡಿದರೂ ಹುಳುಗಳು ಮಾತ್ರ ಕಾಣ ಸಿಗಲಿಲ್ಲ. ಡಾಕ್ಟರ್ ಈ ವಿಚಿತ್ರ ನೋಡಿ ದಂಗು ಬಡಿದು ಹೋದರು. ಕೊನೆಗೆ ನಿಸ್ಸಹಾಯಕರಾಗಿ ಗಾಯ ಹಾಕುವುದನ್ನು ಬಿಟ್ಟು ಗಾಯಗಳಿಗೆಲ್ಲ ಮದ್ದು ಹಾಕಿ ಬ್ಯಾಂಡೇಜ್ ಸುತ್ತಿದರು. ಸಮರ್ ಗೆ, ಡಾಕ್ಟರ್ ಗೆ ಏನೂ ಮಾಡಲಾಗಲಿಲ್ಲ ಎಂದು ತಿಳಿದು ಆತಂಕ ಮತ್ತಷ್ಟು ಹೆಚ್ಚಿತು. ಹುಳುಗಳೆಲ್ಲ ಮೈ ತುಂಬಾ ಆವರಿಸಿದರೆ ಏನು ಮಾಡುವುದು ಎಂದು ಅವನಿಗೆ ಭಯವಾಯಿತು. ಮನೆಗೆ ಬಂದು ಜ್ಯೋತಿಗೆ ವಿಷಯ ತಿಳಿಸಿದಾಗ ಅವಳಿಗೂ ಏನು ಮಾಡುವುದೆಂದು ತಿಳಿಯಲಿಲ್ಲ. ಕೊನೆಗೆ ಆಯುರ್ವೇದ ಪಂಡಿತರ ಬಳಿ ಹೋಗಲು ನಿರ್ಧರಿಸಿ ಜ್ಯೋತಿ ತನ್ನ ಗಂಡನನ್ನು ಪಂಡಿತರ ಬಳಿ ಕರೆದುಕೊಂಡು ಹೋಗಿ ನಡೆದ ಎಲ್ಲ ವಿಷಯ ತಿಳಿಸಿದರು. ಪಂಡಿತರು ಎಲ್ಲವನ್ನು ಕೇಳಿಸಿಕೊಂಡು ಲೇಪವನ್ನು ಅರೆದು ಸಮರ್ ನ ಬೆನ್ನಿನ ಬ್ಯಾಂಡೇಜ್ ತೆಗೆದು ಬೆನ್ನಿಗೆಲ್ಲ ಸವರಿ ಬಿಟ್ಟರು. ದಿನವೂ ಆ ಲೇಪವನ್ನು ಹಚ್ಚಲು ತಿಳಿಸಿ ವಾರದ ಬಳಿಕ ಮತ್ತೆ ಬರಲು ತಿಳಿಸಿದರು. ಒಂದು ವಾರದಲ್ಲಿ ಬೆನ್ನಿನಲ್ಲಿ ಚಲಿಸುತ್ತಿದ್ದ ಹುಳಗಳು ಕಣ್ಮರೆಯಾದವು. ಸಮರ್ ಗೆ ಸಮಧಾವಾದರೂ ಜ್ಯೋತಿಗೆ ಮಾತ್ರ, ಅದು ಬೇರೆ ಕಡೆ ಬಚ್ಚಿಟ್ಟು ಕೊಂಡಿರಬಹುದು ಇನ್ನೊಂದು ದಿನ ಮತ್ತೆ ಕಾಣಿಸಬಹುದು ಎಂದು ಚಿಂತೆಯಾಯಿತು.

ಹೀಗೆ ಕೆಲವು ದಿನಗಳು ಕಳೆದ ಮೇಲೆ ಒಂದು ದಿನ ಬೆಳಗ್ಗೆ ಸಮರ್ ಅಸಾಧ್ಯ ಕಿವಿ ನೋವಿನಿಂದ ನರಳತೊಡಗಿದ. ನೋವಿನ ಮಾತ್ರೆ ತೆಗೆದುಕೊಂಡರೂ ನಿಲ್ಲದ ನೋವು. ಕಣ್ಣು ಕತ್ತಲೆ ಬರುವಷ್ಟು ನೋವಿನಿಂದ ನರಳುತ್ತಿದ್ದ ಸಮರ ನನ್ನು ಕಂಡು ಜ್ಯೋತಿ ಜೋರಾಗಿ ಅಳಲು ಪ್ರಾರಂಭಿಸಿದಳು. ಅವಳು ಅಳುವುದನ್ನು ನೋಡಿ ಮಕ್ಕಳೂ ಆಳಲಾರಂಭಿಸಿದರು. ಕೊನೆಗೆ ತಡೆಯಲಾಗದೆ ಜ್ಯೋತಿ ಊರಿನಲ್ಲಿದ್ದ ತನ್ನ ಅತ್ತೆಗೆ ಕರೆ ಮಾಡಿ ವಿಷಯವನ್ನೆಲ್ಲ ಹೇಳಿದಳು. ಅತ್ತೆ ಮಾವ ತಕ್ಷಣ ಹೊರಟು ಬರುವುದಾಗಿ ಹೇಳಿದರು. ಸಮರನ ತಾಯಿ ಬಂದವರೇ ಎಣ್ಣೆ ಬಿಸಿ ಮಾಡಿ ಅವನ ಕಿವಿಗೆ ಹಾಕಿದರು. ಸಮರ ನ ಕಿವಿಯಿಂದ ಹುಳುಗಳು ಒಂದೊಂದಾಗಿ ಹೊರಬರಲು ಪ್ರಾರಂಭಿಸಿದವು. ಅದನ್ನು ನೋಡಿ ಎಲ್ಲರೂ ದಿಗ್ಮೂಢರಾದರು. ಮಕ್ಕಳು ಓಡಿಹೋಗಿ ತಾಯಿಯ ಹಿಂದೆ ಬಚ್ಚಿಟ್ಟುಕೊಂಡರು. ಜ್ಯೋತಿ ಪೇಪರ್ ತುಂಡೊಂದನ್ನು ಸಮರನ ಕಿವಿಯ ಬಳಿ ಇಟ್ಟಳು. ಆದರೆ ಹುಳುಗಳು ಕೆಳಕ್ಕೆ ಬೀಳುತ್ತಿರಲಿಲ್ಲ ಅದರ ಬದಲಾಗಿ ಒಳಕ್ಕೂ ಹೊರಗೂ ಚಲಿಸತೊಡಗಿದವು. ಅದನ್ನು ನೋಡಿ ಸಮರ್ ನ ತಾಯಿ ಬಿಸಿ ಎಣ್ಣೆಯನ್ನು ಕಿವಿಯ ಒಳಗೆ ಹೋಗದಂತೆ ನಿಗಾ ವಹಿಸಿ ಕಿವಿಯ ಮೇಲೆ ಸುರಿದು ಬಿಟ್ಟರು. ಹುಳುಗಳೆಲ್ಲ ಕಿವಿಯ ಸುತ್ತ ಆವರಿಸಿ ಕೊಂಡವು. ಸಮರ್ ನೋವು ಸಹಿಸಲಾಗದೆ ಬೊಬ್ಬಿಡುತ್ತಿದ್ದ. ಅದನ್ನು ನೋಡಿ ಜ್ಯೋತಿ ಆಯುರ್ವೇದ ಪಂಡಿತರನ್ನು ಕರೆಸಿದಳು. ಅವರು ಬಂದು ಅವನ ಕಿವಿಯ ಮೇಲೆ ಲೇಪವನ್ನು ಸುರಿದರು. ನಿಮಿಷದಲ್ಲೇ ಆ ಹುಳುಗಳೆಲ್ಲ ಕರಗಿ ಹೋದವು. ಇದನ್ನು ನೋಡಿ ಮನೆಯವರೆಲ್ಲ ನಿಟ್ಟುಸಿರು ಬಿಟ್ಟರು. ಸಮರ್ ನೋವಿನಿಂದ ಮುಕ್ತನಾದ. ಅಬ್ಬಾ ಕೊನೆಗೂ ನೋವು ಹೋಯಿತಲ್ಲ ಎಂದು ಸಮರ್ ಸ್ವಲ್ಪ ಹೊತ್ತಿನಲ್ಲೇ ಎದ್ದು ತನ್ನ ಕೆಲಸದಲ್ಲಿ ತೊಡಗಿದ. ಮಗ ಆರೋಗ್ಯವಾಗಿದ್ದನ್ನು ಕಂಡು ಅವನ ತಂದೆ ತಾಯಿ ಊರಿಗೆ ಹೊರಟು ನಿಂತರು.
ಸುಮಾರು ಹದಿನೈದು ದಿನಗಳ ಬಳಿಕ ಒಂದು ಬೆಳಿಗ್ಗೆ ಸಮರ್ ಗೆ ಇನ್ನೊಂದು ಕಿವಿ ನೋಯಲು ಶುರು ಮಾಡಿತು. ಸಮರ್ ಮತ್ತೆ ನೋವಿನಿಂದ ವಿಲವಿಲನೆ ಒದ್ದಾಡಿದ. ಅದರ ಜೊತೆ ಮೂಗೂ ಕೂಡ ನೋಯತೊಡಗಿತು. ಪರಿಸ್ಥಿತಿಯ ಗಂಭೀರತೆ ಕಂಡು ಜ್ಯೋತಿ ಮತ್ತೆ ಅತ್ತೆಗೆ ಫೋನ್ ಮಾಡಿ ತಕ್ಷಣ ಹೊರಟು ಬರಲು ಹೇಳಿದಳು. ಇವನ ಆರ್ತನಾದ ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಧಾವಿಸಿ ಬಂದರು. ವಿಷಯ ತಿಳಿದಾಗ ಕೆಲವರು ಬಹುಶ ಸ್ನೇಹಿತನೇ ದೆವ್ವವಾಗಿ ಸಮರನನ್ನು ಕಾಡುತ್ತಿರಬೇಕು ಎಂದೆಲ್ಲ ಮಾತನಾಡಿಕೊಂಡರು. ಇನ್ನು ಕೆಲವರು ಯಾರೋ ಆಗದವರು ಮಾಟ ಮಾಡಿರಬೇಕು ಅಂದರು.

ಊರಿನಿಂದ ಬಂದ ಸಮರ್ ನ ತಂದೆತಾಯಿಗೆ ಮಗನ ಪರಿಸ್ಥಿತಿ ಕಂಡು ಕರುಳು ಕಿತ್ತು ಬರುವಂತಾಯಿತು. ಪಕ್ಕದ ಮನೆಯವರ ಸಲಹೆಯಂತೆ ಸಮರ್ ನ ತಂದೆ ಅವರ ಸಹಾಯದಿಂದ ಮಾಂತ್ರಿಕನನ್ನು ಕರೆಸಿದರು. ಮಾಂತ್ರಿಕ ಇಡೀ ದಿನ ತನ್ನ ತಂತ್ರ ಮಂತ್ರ ಹೋಮ ಹವನ ಎಲ್ಲ ಮಾಡಿದರೂ ಸಮರ್ ನ ನೋವು ಮಾತ್ರ ಕಡಿಮೆಯಾಗಲೇ ಇಲ್ಲ. ಅವನ ನೋವು ನರಳಾಟ ನೋಡಿ ಅವನ ತಾಯಿ, ಜ್ಯೋತಿ ಎಲ್ಲ ಅಳಲು ಶುರು ಮಾಡಿದರು. ಸಮರನ ಮೂಗಿನಿಂದ, ಕಿವಿಯಿಂದ ಹುಳುಗಳು ಹೊರಗೆ ಬರಲು ಆರಂಭಿಸಿದವು. ಅವುಗಳನ್ನು ಹಿಡಿಯಲು ಹೋದರೆ ಕೈಗೆ ಸಿಗುತ್ತಿರಲಿಲ್ಲ. ಅದನ್ನು ನೋಡಿ ಕಂಗಾಲಾದ ಸಮರ್ ನ ತಂದೆ ಡಾಕ್ಟರ್ ನ್ನು ಕರೆಸಿದರು. ಡಾಕ್ಟರ್ ಬಂದು ಸಮರ ನನ್ನು ಪರೀಕ್ಷಿಸಿ ಇಂಜೆಕ್ಷನ್ ಮಾತ್ರೆ ಎಲ್ಲ ಕೊಟ್ಟರು. ಆದರೂ ಸಮರ್ ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದನ್ನು ನೋಡಲಾಗದೆ ಜ್ಯೋತಿ ಮಕ್ಕಳನ್ನು ಕರೆದುಕೊಂಡು ಬೇರೆ ರೂಮಿಗೆ ಹೋಗಿ ಅಳುತ್ತ ಕುಳಿತಳು. ಪಂಡಿತರಿಗೂ ಕರೆ ಹೋಗಿ ಅವರು ಬಂದು ಮೂಗು ಕಿವಿಗೆಲ್ಲ ಲೇಪ ಹಚ್ಚಿದರು. ಆದರೆ ಈ ಬಾರಿ ಲೇಪ ತನ್ನ ಕೆಲಸ ಮಾಡಲಿಲ್ಲ. ಹುಳುಗಳ ಸಂಖ್ಯೆ ಜಾಸ್ತಿಯಾದವೇ ಹೊರತು ಕಡಿಮೆಯಾಗಲಿಲ್ಲ. ಡಾಕ್ಟರ್ ಪಂಡಿತ, ಮಾಂತ್ರಿಕ ಎಲ್ಲರ ಪ್ರಯತ್ನಗಳು ನಿಷ್ಫಲವಾಗಿ ಅವರೆಲ್ಲ ಅಸಹಾಯಕರಾಗಿ ನೋಡುತ್ತಿದ್ದಂತೆ ನೋವಿನಿಂದ ಅರಚುತ್ತ ವಿಲವಿಲನೆ ಒದ್ದಾಡುತ್ತಿದ್ದ ಸಮರ ಉಸಿರಾಡಲು ಚಡಪಡಿಸುತ್ತಾ ಅಮ್ಮಾ ಎಂದು ಜೋರಾಗಿ ಕಿರಿಚಿ ನಂತರ ನಿಶ್ಚಲನಾಗಿ ಬಿಟ್ಟ. ಡಾಕ್ಟರ್ ಸಮರನನ್ನು ಪರೀಕ್ಷಿಸಿ ಅವನಿಲ್ಲವೆಂದಾಗ ಎಲ್ಲರ ಅಳು ತಾರಕ್ಕೇರಿತು. ಬರೀ ಒಂದು ಸಣ್ಣ ಹುಳ ಕಚ್ಚಿ ಸಮರನ ಜೀವಕ್ಕೇ ಅಪಾಯವಾಗಬಹುದು ಎಂದು ಯಾರೂ ಎಣಿಸಿರಲಿಲ್ಲ. ಆರೋಗ್ಯವಂತನಾಗಿದ್ದ ಸಮರ್ ಗೆ ತೀರಿಕೊಂಡ ಗೆಳೆಯನೇ ಹುಳುವಿನ ರೂಪದಲ್ಲಿ ಕಾಟ ಕೊಟ್ಟನೆ ? ಆದರೆ ಸಮರ್ ನ ಒಳ್ಳೆಯ ಸ್ನೇಹಿತನಾಗಿದ್ದ ಅವನು ಸಮರ್ ಗೆ ಯಾಕೆ ತೊಂದರೆ ಮಾಡುತ್ತಾನೆ. ಹಾಗಿದ್ದರೆ ಸಮರ್ ಗೆ ಏನಾಗಿತ್ತು ಅವನಿಗೆ ಇದ್ದ ಸಮಸ್ಯೆಯಾದರೂ ಏನು ? ಸಮರ್ ನ ಕಾಲಿಗೆ ಕಚ್ಚಿದ ಆ ಹುಳು ಯಾವುದು ಎಂಬುದು ಕಗ್ಗಂಟಾಗಿಯೇ ಉಳಿಯಿತು.

ವಿಚಿತ್ರ ಕಳ್ಳ

ಸುನಂದಾ ಬೆಳಗ್ಗೆ ಎದ್ದು ಹಾಲು, ಪೇಪರ್ ತರಲು ಎಂದಿನಂತೆ ಮುಂಬಾಗಿಲ ಚಿಲಕ ತೆಗೆಯಲು ನೋಡಿದಾಗ ಚಿಲಕ, ಬೀಗ ಹಾಕಿಯೇ ಇರಲಿಲ್ಲ. ಅಯ್ಯೋ ದೇವರೇ ನಿನ್ನೆ ರಾತ್ರಿ ಇವರೇನಾದರೂ ಬೀಗ ಹಾಕಲು ಮರೆತು ಬಿಟ್ಟರೇ ಎಂದು ಆತಂಕವಾಗಿ ಓಡುತ್ತ ಹೋಗಿ ಗಂಡನನ್ನು ಎಬ್ಬಿಸಿದಳು. ರೀ, ನೀವು ನಿನ್ನೆ ರಾತ್ರಿ ಬಾಗಿಲಿಗೆ ಬೀಗಾನೂ ಹಾಕಿಲ್ಲ ಚಿಲಕಾನೂ ಹಾಕಿರಲಿಲ್ಲ ಗೊತ್ತಾ, ಕಳ್ಳ ಬಂದಿದ್ದರೆ .. ? ಎನ್ನುತ್ತಿದ್ದಂತೆ ಅವಳ ಗಮನ ಬೀರುವಿನತ್ತ ಹರಿಯಿತು. ಬೀರುವಿ ನ ಬಾಗಿಲು ದೊಡ್ದಾದಾಗಿ ತೆರೆದೇ ಇತ್ತು. ಅದನ್ನು ನೋಡಿ ಸುನಂದಾ, “ಅಯ್ಯೋ ಶಿವನೇ, ಎಲ್ಲ ಹೋಯ್ತು, ನಮ್ಮ ದುಡ್ಡುಕಾಸು, ಬಂಗಾರ, ಬೆಳ್ಳಿ ಸಾಮಾನು ಎಲ್ಲ ಹೋಯಿತು ಎಂದು ಎದೆಗೆ ಬಡಿದುಕೊಳ್ಳುತ್ತಾ ಜೋರಾಗಿ ರೋಧಿಸತೊಡಗಿದಳು. ಅವಳ ರೋಧನದಿಂದ ಬೆಚ್ಚಿ ಬಿದ್ದ ಸುನಂದಾಳ ಗಂಡ ರವಿಚಂದ್ರ ಏ.. ಹೇ , ಏನಾಯ್ತೇ ಯಾಕೆ ಹಾಗೆ ಗಂಟಲು ಹರಿದು ಹೋಗೋ ತರಾ ಕಿರಿಚಾಡ್ತಿದ್ದೀಯ, ಏನಾಯ್ತು ಎಂದ. ಸುನಂದಾ, ನೋಡಿ ನಿಮ್ಮ ಕರ್ಮ, ಒಂಚೂರು ಜವಾಬ್ದಾರಿನೇ ಇಲ್ಲ. ನಿನ್ನೆ ರಾತ್ರಿ ನೀವು ಮುಂದಿನ ಬಾಗಿಲಿಗೆ ಬೀಗ ಹಾಕೇ ಇಲ್ಲ. ಕಳ್ಳ ಸುಮ್ಮನೆ ಬಿಡ್ತಾನಾ, ನೋಡಿ ನಮ್ಮ ಹಣ ಒಡವೆ ಎಲ್ಲ ಹೋಯಿತು” ಎಂದು ಮತ್ತೆ ರೋಧಿಸ ತೊಡಗಿದಾಗ ರವಿಚಂದ್ರ ಬೆಚ್ಚಿ ಬಿದ್ದು, “ಏನೂ .. ಕಳ್ಳ ಬಂದಿದ್ದಾನಾ, ಅದೂ ನಾವು ಇಲ್ಲೇ ಮಲಗಿಕೊಂಡಿದ್ದಾಗ .. ಅಯ್ಯೋ ದೇವರೇ ನಮಗ್ಯಾಕೆ ಎಚ್ಚರ ಆಗ್ಲಿಲ್ಲ .. ಹೇ ಮೊದ್ಲು ನೋಡೇ ಏನೆಲ್ಲಾ ಹೋಗಿದೆ ಅಂತ.. ” ಎಂದು ತಾನೂ ಎದ್ದು ಬೀರುವಿನತ್ತ ಧಾವಿಸಿದ. ಸುನಂದಾ ಕೂಡ ಧಾವಿಸಿದಳು.

ರವಿಚಂದ್ರ ಲಾಕರ್ ತೆಗೆದು ನೋಡಿದಾಗ ಚಿನ್ನ, ಒಡವೆ ಬೆಳ್ಳಿ ಸಾಮಾನು ಕ್ಯಾಶ್, ಎಲ್ಲ ಅಲ್ಲೇ ಇದ್ದವು ! ರವಿಚಂದ್ರನಿಗೆ ಆಶ್ಚರ್ಯವಾಗಿ, “ಲೇ ಸರಿಯಾಗಿ ನೋಡೇ, ಎಲ್ಲ ಇಲ್ಲೇ ಇದ್ದ ಹಾಗೆ ಕಾಣುತ್ತೆ” ಎಂದು ಹೇಳಿ ತಾನು ಸರಿದು ಸುನಂದಾಗೆ ಜಾಗ ಮಾಡ್ಕೊಟ್ಟ . ಅವಳು ತನ್ನೆಲ್ಲ ಒಡವೆಗಳನ್ನು ಒಂದೊಂದಾಗಿ ಪರಿಶೀಲಿಸುತ್ತ ಸಂತಸದಿಂದ, “ಎಲ್ಲ ಇದೆ ರೀ, ನಿಮ್ಮ ದುಡ್ದೆನಾದ್ರೂ ಹೋಗಿದ್ಯೋ ನೋಡಿ” ಎಂದು ಅವಸರಿಸಿದಳು. ರವಿಚಂದ್ರ, “ದುಡ್ಡೆಲ್ಲ ಹಾಗೆ ಇದೆ ಕಣೆ ನೀನು ಸುಮ್ನೇ ಗಲಾಟೆ ಮಾಡ್ದೆ, ಏನೂ ಆಗಿಲ್ಲ, ಬಹುಶಃ ಅವನು ಬೀರು ಬಾಗಿಲು ತೆಗೀಬೇಕಾದ್ರೆ ನಂಗೆ ಎಚ್ಚರ ವಾಗಿರಬೇಕು ಅದ್ಕೆ ಅವನು ಓಡಿ ಹೋಗಿರಬೇಕು” ಎಂದು ಹೇಳಿದಾಗ ಸುನಂದಾ ದೊಡ್ಡ ನಿಟ್ಟುಸಿರು ಬಿಟ್ಟು, “ಅಬ್ಬಾ, ನಾವು ಬಚಾವ್ ಕಣ್ರೀ, ದೇವ್ರು ದೊಡ್ಡವನು” ಎನ್ನುತ್ತಾ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮಂದಹಾಸ ಬೀರಿದಳು. ಆಗ ರವಿಚಂದ್ರ, “ನಿನ್ನ ಸೀರೆಗಳೆನಾದ್ರೂ ಹೋಗಿದ್ಯೇ ನೋಡೇ, ಕಳ್ಳರು ಏನೂ ಬಿಡಲ್ಲ” ಎಂದಾಗ ಸುನಂದಾಗೆ ಹೌದೆನ್ನಿಸಿ ಮತ್ತೆ ಬೀರು ತೆರೆದು ಸೀರೆಗಳನ್ನೆಲ್ಲ ಲೆಕ್ಕ ಮಾಡಿದಳು. ಸರಿಯಾಗಿಯೇ ಇತ್ತು. ಅವಳಿಗೆ ಹೋದ ಜೀವ ಬಂದಂತಾಯಿತು. “ವಾಚು, ಫೋನು ಕೂಡ ಇಲ್ಲೇ ಇದೆ ಕಣೆ ಕಳ್ಳ ಏನೂ ತೆಗೆದುಕೊಂಡು ಹೋಗಿಲ್ಲ” ಎಂದು ನಿರಾಳವಾಗಿ ಆಲಸ್ಯದಿಂದ ಮೈ ಮುರಿಯುತ್ತ ರವಿಚಂದ್ರ ಬಾತ್ ರೂಂ ನತ್ತ ನಡೆದ. ಸುನಂದಾ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರಿಗೆ ಧನ್ಯವಾದ ತಿಳಿಸಿ ಕಾಫಿ ತಿಂಡಿಯ ತಯಾರಿಯಲ್ಲಿ ತೊಡಗಿದಳು. ಮಕ್ಕಳು ಎದ್ದು ಗಲಾಟೆ ಮಾಡ ತೊಡಗಿದಾಗ ರವಿಚಂದ್ರ ಅವರನ್ನು ಬಾತ್ ರೂಂ ನತ್ತ ಕರೆದೊಯ್ದ.

ಮಕ್ಕಳನ್ನು ಶಾಲೆಗೆ ಹೊರಡಿಸಿ ಗಂಡನೂ ಆಫೀಸ್ ಗೆ ಹೋದ ಮೇಲೆ ಸುನಂದಾಗೆ ಸ್ವಲ್ಪ ಸುಸ್ತು ಎನಿಸಿ ವಿಶ್ರಾಂತಿ ತೆಗೆದು ಕೊಳ್ಳಲು ಬೆಡ್ ರೂಮಿನತ್ತ ನಡೆದಳು. ಅಲ್ಲಿ ಹಾಸಿಗೆಯಲ್ಲಿ, ನೆಲದ ಮೇಲೆ ಬಿದ್ದಿದ್ದ ಬಟ್ಟೆಗಳನ್ನು ನೋಡಿ ಒಗೆಯುವ ಬಟ್ಟೆಗಳನ್ನೆಲ್ಲ ಒಂದೆಡೆ ರಾಶಿ ಹಾಕಿದಳು. ಆಗ ಅವಳಿಗೆ ಗಂಡ ಆಫೀಸಿಗೆ ಹೋಗುವಾಗ ಹಾಕುವ ಎರಡು ಜೊತೆ ಬಟ್ಟೆಗಳು ನೆಲದ ಮೇಲೆ ಬಿದ್ದಿದ್ದು ಕಂಡು ಆಶ್ಚರ್ಯವಾಗಿ ಯಾಕೆ ಎರಡು ಜೊತೆ ಬಟ್ಟೆಗಳನ್ನು ನೆಲಕ್ಕೆಸೆದಿದ್ದಾರೆ. ಇವುಗಳಲ್ಲಿ ಯಾವುದನ್ನು ಅವರು ಹಾಕಿದ್ದಿರಬಹುದು ಎಂದು ನೆನಪಿಸಿಕೊಳ್ಳತೊಡಗಿದಳು. ಅವನು ಯಾವ ಬಟ್ಟೆ ಧರಿಸಿದ್ದ ಎಂದು ನೆನಪಿಗೆ ಬಾರದೆ ಯಾವ ಶರ್ಟ್ ಧರಿಸಿದ್ದಿರಬಹುದು ಎಂದು ಅವುಗಳನ್ನು ಮೂಸಿ ನೋಡಿದಳು. ಒಂದಕ್ಕೆ ಮಾತ್ರ ಬೆವರಿನ ಕಮಟು ವಾಸನೆ ಇತ್ತು ಥೂ ! ಎಂಥಾ ವಾಸನೆ ಎಂದುಕೊಳ್ಳುತ್ತ ಅದನ್ನು ಒಗೆಯುವ ಬಟ್ಟೆಗಳ ರಾಶಿಯತ್ತ ಬೀಸಿ ಒಗೆದಳು. ಇನ್ನೊಂದನ್ನು ಹಾಗೆ ಎತ್ತಿ ಹ್ಯಾಂಗರ್ ಗೆ ನೇತು ಹಾಕಿದಳು. ಚೆನ್ನಾಗಿ ಒಗೆದು ಇಸ್ತ್ರಿ ಮಾಡಿದ್ದ ಬಟ್ಟೆಗಳನ್ನು ನೆಲಕ್ಕೆ ಎಸೆದಿದ್ದ್ಯಾಕೆ ಎಂದು ಗಂಡ ಮನೆಗೆ ಬಂದ ಮೇಲೆ ವಿಚಾರಿಸಬೇಕು ಎಂದುಕೊಂಡಳಾದರೂ ಆಮೇಲೆ ಅವಳಿಗೆ ಮಕ್ಕಳ ಗಲಾಟೆಯಲ್ಲಿ ಮರೆತು ಹೋಯಿತು.

ಈ ಘಟನೆ ನಡೆದು ಎರಡು ಮೂರು ದಿನ ಎಲ್ಲವೂ ಸರಿಯಾಗಿಯೇ ಇತ್ತು. ಆನಂತರ ಒಂದು ದಿನ ಬೆಳಗ್ಗೆ ಸುನಂದಾ ಎದ್ದು ಕಣ್ಣುಜ್ಜಿ ಕೊಳ್ಳುತ್ತಾ, ಆಕಳಿಸುತ್ತಾ ಮುಂಬಾಗಿಲ ಬೀಗ ತೆಗೆಯಲು ನೋಡಿದರೆ ಬೀಗ ಹಾಕಿಯೇ ಇಲ್ಲ ! ಅವಳ ಆಕಳಿಕೆ ಅರ್ಧದಲ್ಲಿಯೇ ನಿಂತು ಹೋಯಿತು. ಅಯ್ಯೋ ದೇವರೇ, ಇವರು ಮತ್ತೆ ಬೀಗ ಹಾಕಲು ಮರೆತು ಬಿಟ್ಟಿದ್ದಾರೆ. ಕಳ್ಳ ಮತ್ತೆ ಬಂದಿರಬಹುದೇ ಎಂದುಕೊಳ್ಳುತ್ತ ಬೆಡ್ ರೂಮಿನತ್ತ ಧಾವಿಸಿದಳು. ರೂಮಿನಲ್ಲಿ ಬೀರುವಿನ ಬಾಗಿಲು ತೆರೆದೇ ಇತ್ತು. ಆತಂಕದಿಂದ ಸುನಂದಾಳ ಎದೆ ತೀವ್ರವಾಗಿ ಬಡಿದು ಕೊಳ್ಳತೊಡಗಿತು. ಧಾವಿಸಿ ಹೋಗಿ ಬೀರುವಿನಲ್ಲಿ ಏನಾದರೂ ಕಳವಾಗಿದೆಯೇ ಎಂದು ನೋಡಿದಳು. ಆದರೇನಾಶ್ಚರ್ಯ ಎಲ್ಲವೂ ಇದ್ದ ಹಾಗೆ ಇದೆ ! ಕಳ್ಳ ಮತ್ತೆ ಕದಿಯಲಾಗದೆ ಓಡಿ ಹೋದನೇ ಎಂದು ಅವಳಿಗೆ ಅಚ್ಚರಿಯಾಯಿತು. ಗಂಡನನ್ನು ಎಬ್ಬಿಸಿ ಮತ್ತೆ ಪುನ ಕಳ್ಳ ಬಂದು ಹಾಗೆ ಹೋದದನ್ನು ಹೇಳಿದಾಗ ರವಿಚಂದ್ರನಿಗೆ ಇದು ಕಳ್ಳನಲ್ಲ ಬೇರೆ ಯಾರೋ ಮಾಡುತ್ತಿರಬೇಕು. ಕಳ್ಳನಾದರೆ ಕದಿಯದೇನೆ ವಾಪಾಸು ಹೋಗುವನೇ ಎಂದು ಸಂಶಯ ಮೂಡಿತು. ಅದನ್ನು ಸುನಂದಾ ಬಳಿ ಹೇಳಿದಾಗ ಅವಳಿಗೆ ಭಯವಾಗತೊಡಗಿತು. ನಮ್ಮ ಮನೆಯಲ್ಲಿ ಯಾಕೆ ಹೀಗಾಗುತ್ತಿದೆ ದೆವ್ವದ ಕಾಟವಲ್ಲ ತಾನೇ ಎಂದುಕೊಂಡಾಗ ಅವಳ ಮೈ ಚಳಿ ಜ್ವರ ಬಂದವರಂತೆ ನಡುಗತೊಡಗಿತು. ಗಂಡನ ಬಳಿ ಹೇಳಿದರೆ ಅವರು ನಗುತ್ತಾರೆ ಎಂದುಕೊಂಡು, ದೇವರೇ ನಮ್ಮನು ಕಾಪಾಡಪ್ಪ ಎನ್ನುತ್ತಲೇ ಅಡಿಗೆ ಮನೆಯತ್ತ ನಡೆದಳು.

ಮಕ್ಕಳು ಹಾಗೂ ಗಂಡ ಹೊರಗೆ ಹೋದ ಮೇಲೆ ಒಗೆಯುವ ಬಟ್ಟೆ ಗಳನ್ನು ಒಂದೆಡೆ ಹಾಕುವಾಗ ಗಂಡ ಮತ್ತೆ ಎರಡು ಜೊತೆ ಬಟ್ಟೆಗಳನ್ನು ನೆಲಕ್ಕೆ ಎಸೆದಿದ್ದು ಕಂಡು ಸುನಂದಾಗೆ ಸಿಟ್ಟು ಬಂದಿತು. ಚೆನ್ನಾಗಿ ಒಗೆದು ಇಸ್ತ್ರಿ ಮಾಡಿಟ್ಟ ಬಟ್ಟೆಗಳನ್ನು ಯಾಕೆ ನೆಲಕ್ಕೆ ಒಗೆಯುತ್ತಾರೆ ಎಂದು ಇವತ್ತು ಕೇಳಲೇ ಬೇಕು ಎಂದು ನಿಶ್ಚಯಿಸಿದಳು. ರವಿಚಂದ್ರ ಸಂಜೆ ಆಫೀಸಿನಿಂದ ಬಂದ ಮೇಲೆ ಮರೆಯದೆ ಸುನಂದಾ, ಎರಡು ಜೊತೆ ಬಟ್ಟೆಗಳನ್ನು ಯಾಕೆ ಒಗೆಯಲು ಹಾಕಿದ್ದು ಎಂದು ಕೇಳಿದಳು. ರವಿಚಂದ್ರ ಆಶ್ಚರ್ಯದಿಂದ, “ನಾನ್ಯಾಕೆ ಎರಡು ಜೊತೆ ಬಟ್ಟೆ ಒಗೆಯಕ್ಕೆ ಹಾಕಲಿ .. ಬಹುಶ ಅದು ನಾನು ಬೇರೆ ಬಟ್ಟೆ ತೆಗೆಯುವಾಗ ಅದು ಕೆಳಕ್ಕೆ ಬಿದ್ದಿರಬೇಕು” ಎಂದ. ಆಗ ಸುನಂದಾ, ಹೋಗಲಿ ಶರ್ಟ್ ತಪ್ಪಿ ಬಿದ್ದಿರಬಹುದು ಅಂತ ಅಂದ್ಕೊಳ್ಳೋಣ ಆದ್ರೆ ಅದ್ರ ಪ್ಯಾಂಟ್ ಕೂಡ ಹೇಗೆ ಬೀಳುತ್ತೆ ಎಂದಾಗ ರವಿಚಂದ್ರನಿಗೆ ಏನು ಹೇಳುವುದೆಂದು ತೋಚಲಿಲ್ಲ. ಸುನಂದಾಗೆ ಈ ರಹಸ್ಯವನ್ನು ಭೇದಿಸಲೇ ಬೇಕು ಎಂದು ಅಂದಿನಿಂದ ಗಂಡ ಆಫೀಸಿಗೆ ಹೋಗಲು ರೆಡಿಯಾಗಿ ಆತ ರೂಮಿನಿಂದ ಹೊರಟು ಬಂದ ಮೇಲೆ ರೂಮಿಗೆ ಹೋಗಿ ನೋಡಿದರೆ ನೆಲದ ಮೇಲೆ ಬಟ್ಟೆಗಳಿರುತ್ತಿರಲಿಲ್ಲ. ಸುನಂದಾ ತಾನು ಗದರಿಸಿದ್ದರಿಂದ ಗಂಡ ಸುಧಾರಿಸಿಕೊಂಡಿರಬೇಕು ಎಂದು ಸುಮ್ಮನಾದಳು.

ಕೆಲವು ದಿನಗಳು ಕಳೆದ ಮೇಲೆ ಒಂದು ನಡುರಾತ್ರಿಯಲ್ಲಿ ಸುನಂದಾಗೆ ಏನೋ ಶಬ್ದವಾದಂತಾಗಿ ಎಚ್ಚರವಾಯಿತು. ನೋಡಿದರೆ ಕತ್ತಲಲ್ಲಿ ಒಂದು ಆಕೃತಿ ಬೀರುವಿನ ಬಾಗಿಲು ತೆರೆಯುತ್ತಿತ್ತು. ಅಬ್ಬಾ! ಕಳ್ಳ ಬಂದಿದ್ದಾನೆ ಎಂದು ಭಯದಿಂದ ಸುನಂದಾಳ ಹೃದಯ ಬಾಯಿಗೆ ಬಂದಿತು. ಅವಳಿಗೆ ಒಂದು ಘಳಿಗೆ ಏನು ಮಾಡುವುದೆಂದು ತೋಚಲಿಲ್ಲ. ಗಂಡನನ್ನು ಎಬ್ಬಿಸಿದರೆ ಶಬ್ದವಾಗಿ ಕಳ್ಳ ಓಡಿ ಹೋಗಬಹುದು. ತಾನೇ ಏನಾದರೂ ಮಾಡಬೇಕು ಎಂದುಕೊಂಡು ಧೈರ್ಯ ವಹಿಸಿ ಅವನಿಗೆ ಕದಿಯಲು ಬಿಡಲೇ ಬಾರದು, ಅವನಿಗೆ ಚೆನ್ನಾಗಿ ಬಾರಿಸಬೇಕು ಎಂದುಕೊಂಡು ಕತ್ತಲಲ್ಲಿ ಅತ್ತಿತ್ತ ತಡಕಾಡುತ್ತಿದ್ದಾಗ ಆ ಆಕೃತಿ ಬೀರುವಿನಿಂದ ಬಟ್ಟೆಗಳನ್ನು ತೆಗೆದು ಹಾಕಿಕೊಳ್ಳತೊಡಗಿತು. ಸುನಂದಾಗೆ ಆಶ್ಚರ್ಯವಾಯಿತು. ಕಳ್ಳ ಯಾಕೆ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದಾನೆ ಎಂದು ಆಶ್ಚರ್ಯವಾಗಿ ಬೇಗನೆ ಎದ್ದು ಲೈಟ್ ಹಾಕಿದಳು. ನೋಡಿದರೆ ರವಿಚಂದ್ರ ! ಸುನಂದಾಗೆ ಅಚ್ಚರಿಯಾಯಿತು ಈ ನಡುರಾತ್ರಿಯಲ್ಲಿ ಇವರು ಎಲ್ಲಿಗೆ ಹೊರಟಿದ್ದಾರೆ. ತಾನು ಲೈಟ್ ಹಾಕಿದ್ದು ಒಳ್ಳೆಯದಾಯಿತು. ಕಳ್ಳ ಎಂದು ಕತ್ತಲಲ್ಲೇ  ಹೊಡೆದಿದ್ದರೆ ..ಎಂದುಕೊಳ್ಳುತ್ತ, “ರೀ ಎಲ್ಲಿಗೆ ಹೊರಟಿದ್ದೀರಿ ಈ ಅಪರಾತ್ರಿಯಲ್ಲಿ” ಎಂದು ಅವನ ಬಳಿ ಧಾವಿಸಿ ಕೇಳಿದಳು. ರವಿಚಂದ್ರ ಅವಳಿಗೆ ಉತ್ತರಿಸಲಿಲ್ಲ. ಅವನ ನಿರ್ಭಾವದ ಕಣ್ಣುಗಳನ್ನು ನೋಡಿ ಸುನಂದಾಗೆ ಹೆದರಿಕೆಯಾಯಿತು. ಗಂಡನ ಮೇಲೆ ದೆವ್ವ ಏನಾದರೂ ಬಂದಿದೆಯೇ ಗಾಬರಿಗೊಂಡಳು. ಅವಳು ನೋಡುತ್ತಿದ್ದಂತೆ ಆತ ಹೊರಟು ಮುಂಬಾಗಿಲ ಬೀಗ ತೆಗೆದು ಹೊರ ಹೋದ. ಸುನಂದಾ ಅವನನ್ನು ಹಿಂಬಾಲಿಸಿಕೊಂಡು ಹೋದಳು. ಗಂಡ ಯಾಕೆ ಮಾತನಾಡುತ್ತಿಲ್ಲ, ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಅಚ್ಚರಿಯಾಗಿ ನೋಡಿದರೆ ಗೇಟಿನ ಬಳಿ ಸ್ವಲ್ಪ ಹೊತ್ತು ನಿಂತು ಮತ್ತೆ ರವಿಚಂದ್ರ ಒಳಗೆ ಬಂದು ಬಾಗಿಲು ಮುಚ್ಚಿದ. ಎದುರಲ್ಲೇ ಸುನಂದಾ ನಿಂತಿದ್ದರೂ ಅವಳತ್ತ ನೋಡದೆ ಸೀದಾ ರೂಮಿಗೆ ನಡೆದ.

ಸುನಂದಾ ಬೇಗನೆ ಬಾಗಿಲಿಗೆ ಬೀಗ ಹಾಕಿ ಗಂಡನ ಹಿಂದೆಯೇ ಹೋದಳು. ರವಿಚಂದ್ರ ಬಟ್ಟೆ ಬದಲಿಸಿ ಹಾಸಿಗೆಯ ಮೇಲೆ ಉರುಳಿದ. ಸ್ವಲ್ಪ ಹೊತ್ತಿನ ಬಳಿಕ ಸುನಂದಾ ಅವನನ್ನು ತಟ್ಟಿ ಎಬ್ಬಿಸಿ ಎಲ್ಲಿಗೆ ಹೋಗಿದ್ರಿ ಎಂದು ಕೇಳಿದಳು. ಆತ ಸಿಡುಕುತ್ತ, “ನಾನು ಎಲ್ಲಿಗೆ ಹೋಗ್ಲಿ, ಇಲ್ಲೇ ಮಲಗಿಕೊಂಡೆ ಇದ್ದೇನಲ್ಲ, ಏನು ನಿದ್ದೆಯಲ್ಲಿ ಮಾತನಾಡ್ತಿದ್ದೀಯಾ ಅಥವಾ ಕನಸೇನಾದರೂ ಬಿತ್ತಾ” ಎಂದ ಆಗ ಸುನಂದಾಗೆ ತಕ್ಷಣ, ಗಂಡನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇರಬಹುದೇ ಎಂದು ಅನಿಸಿತು. ಆದರೆ ಇದು ಇಷ್ಟು ವರುಷ ತನ್ನ ಗಮನಕ್ಕೆ ಯಾಕೆ ಬಂದಿಲ್ಲ, ಅಥವಾ ಇತ್ತೀಚೆಗೆ ಏನಾದರೂ ಶುರುವಾಯಿತೇ. ಪಾಪ, ಸಂಸಾರದ ಜವಾಬ್ದಾರಿಯ ಚಿಂತೆ ಜಾಸ್ತಿಯಾಗಿರಬೇಕು ಎಂದು ಚಿಂತಿಸುತ್ತಾ ಸುನಂದಾ ಮಲಗಿದಳು. ಮರುದಿನ ಬೆಳಗ್ಗೆ ಎದ್ದು ಗಂಡನಿಗೆ ನಡೆದ ವಿಷಯವೆಲ್ಲ ಹೇಳಿದಾಗ ಆತ ಮೊದಲು ನಂಬದಿದ್ದರೂ ರೂಮಿನಲ್ಲಿ ನೆಲಕ್ಕೆ ಬಿದ್ದ ಬಟ್ಟೆಗಳನ್ನು ಕಂಡು ನಂಬಲೇ ಬೇಕಾಯಿತು. ಸುನಂದಾ ಕಳವಳದಿಂದ ಮೊದ್ಲು ಡಾಕ್ಟರ್ ಹತ್ರ ಹೋಗಿ, ಇಲ್ಲಾಂದ್ರೆ ಒಂದಿನ ನಿಜವಾಗಿ ಕಳ್ಳ ಬಂದೇ ಬರ್ತಾನೆ ಎಂದಾಗ ರವಿಚಂದ್ರ ನಗುತ್ತ, “ಆಯಿತು ಕಣೆ. ಇವತ್ತೇ ಡಾಕ್ಟರ್ ಹತ್ರ ಹೋಗ್ತೀನಿ ಸರಿನಾ” ಎಂದ.

ಹತಾಶೆ

ಮಗಳು ಇನ್ನೂ ಯಾಕೆ ಬಂದಿಲ್ಲವೆಂದು ಚಿಂತಿಸುತ್ತಾ ಕುಳಿತ ಮುಕ್ತಾ ಹಲವು ಬಾರಿ ಫೋನ್ ಮಾಡಲು ಪ್ರಯತ್ನಿಸಿ ಸೋತು ಎಲ್ಲಿ ಹೋದಳು ಇವಳು ಕಾಲೇಜಿಗೆ ಹೋದವಳು ಇನ್ನೂ ಯಾಕೆ ಬಂದಿಲ್ಲ ಎಂದು ಆತಂಕ ಪಡುತ್ತ ಇರುವಾಗ ದೂರವಾಣಿ ಕರೆ ಬಂದಿದ್ದು ನೋಡಿ ತಕ್ಷಣ ಮಗಳದ್ದೇ ನಂಬರ್ ನೋಡಿ ನಿಟ್ಟುಸಿರು ಬಿಡುತ್ತ, ಏನಮ್ಮಾ ಶ್ರೀಷಾ ಎಲ್ಲಿದ್ದಿಯಾ ? ಯಾಕೆ ಇನ್ನೂ ಮನೆಗೆ ಬಂದಿಲ್ಲ, ನನಗೆಷ್ಟು ಯೋಚನೆ ಆಗಿತ್ತು ಗೊತ್ತಾ .. ಎನ್ನುತ್ತಾ ಪ್ರಶ್ನೆಗಳ ಸುರಿಮಳೆ ಸುರಿಸಿದಳು. ಅವಳ ಮಾತನ್ನು ಮಧ್ಯದಲ್ಲೇ ತುಂಡರಿಸುತ್ತ ಅತ್ತ ಕಡೆಯಿಂದ ಗಂಡು ಧ್ವನಿಯೊಂದು ತಾನು ಪೋಲೀಸ್ ಮಾತನಾಡುತ್ತಿರುವುದಾಗಿ ಹೇಳಿ, ನಿಮ್ಮ ಮಗಳಿಗೆ ಅಪಘಾತವಾಗಿ ನಾವು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ತಕ್ಷಣ ಹೊರಟು ಬನ್ನಿ ಎಂದಾಗ ಮುಕ್ತಾಗೆ ಕಾಲ ಬುಡವೇ ಕುಸಿದಂತಾಯಿತು. ನಿಲ್ಲಲೂ ತ್ರಾಣವಿಲ್ಲದಂತಾಗಿ ಅಲ್ಲೇ ಇದ್ದ ಸೋಫಾದ ಮೇಲೆ ಕುಸಿದಳು. ತಾನು ಯಾವುದು ಆಗಬಾರದು ಎಂದು ಹಗಲೂ ರಾತ್ರಿ ಆಸೆ ಪಡುತ್ತಿದ್ದೇನೋ ಅದೇ ನಡೆದು ಹೋಯಿತಲ್ಲ ಈಗ ನಾನು ಏನು ಮಾಡಲಿ ? ದೇವರೇ, ಇದ್ದ ಒಂದು ಕರುಳ ಕುಡಿಯನ್ನೂ ನನ್ನಿಂದ ಕಿತ್ತುಕೊಳ್ಳಬೇಡ ಎಂದು ದೀನಳಾಗಿ ದೇವರಲ್ಲಿ ಪ್ರಾರ್ಥಿಸುತ್ತ ಗಡಬಡಿಸಿ ಎದ್ದು ದೇವರಿಗೆ ತುಪ್ಪದ ದೀಪ ಹಚ್ಚಿ ಆಸ್ಪತ್ರೆಗೆ ಧಾವಿಸಿದಳು.

ಆಸ್ಪತ್ರೆಯಲ್ಲಿ ಶ್ರೀಷಾಗೆ ಆಗಲೇ ಚಿಕಿತ್ಸೆ ನಡೆಯುತ್ತಿತ್ತು. ಮುಕ್ತಾ ಅಲ್ಲೇ ಇದ್ದ ನರ್ಸ್ ಬಳಿ ತನ್ನ ಮಗಳು ಹೇಗಿದ್ದಾಳೆ ಎಂದು ಕೇಳಿದಾಗ ಆಕೆ ತಲೆಗೆ ತುಂಬಾ ಪೆಟ್ಟಾಗಿದೆ, ಅವಳ ಸ್ಥಿತಿ ಗಂಭೀರವಾಗಿದೆ ಎಂದಾಗ ಮುಕ್ತಾಳ ಕೈ ಕಾಲು ನಡುಗಲು ಶುರುವಾಯಿತು. ಪೊಲೀಸರು ಬಂದು, ಟಿಪ್ಪರ್ ಲಾರಿಯೊಂದು ಶ್ರೀಷಾಳ ಸ್ಕೂಟಿಗೆ ಬಡಿದಿದ್ದರಿಂದ ಅಪಘಾತವಾಗಿದೆ ತಾವು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿ ಅಲ್ಲಿಂದ ತೆರಳಿದರು. ಮುಕ್ತಾ ಅಲ್ಲೇ ಇದ್ದ ಬೆಂಚಿನ ಮೇಲೆ ಕುಳಿತು ತನ್ನ ಮಗಳನ್ನು ಉಳಿಸಿಕೊಡು ದೇವರೇ ಇವಳೊಬ್ಬಳೆ ತನ್ನ ಬದುಕಿನ ಆಸರೆ, ಅವಳನ್ನೂ ನನ್ನಿಂದ ಕಿತ್ತುಕೊಳ್ಳಬೇಡ. ನನ್ನ ಗಂಡ, ಮಗನನ್ನು ಕಿತ್ತುಕೊಂಡೆ ಆದರೂ ಎಲ್ಲವನ್ನೂ ಸಹಿಸಿಕೊಂಡೆ. ಈಗ ಇವಳನ್ನೂ ನೀನು ಕಿತ್ತುಕೊಂಡರೆ ನನಗೆ ಆಸರೆ ಯಾರು ? ಯಾಕೆ ನಿನಗೆ ನನ್ನ ಮೇಲೆ ಈ ಪರಿಯ ದ್ವೇಷ ? ಮಗಳ ಬದಲು ನನ್ನನ್ನಾದರೂ ಕೊಲ್ಲಬಹುದಿತ್ತಲ್ಲವೇ ಶ್ರೀಷಾ ಇನ್ನೂ ಚಿಕ್ಕವಳು ಬದುಕೆಂದರೆ ಏನು ಎಂದು ತಿಳಿಯದವಳು ಅವಳನ್ನು ಬದುಕಿಸಿ ಕೊಡು ಎಂದು ದೇವರಲ್ಲಿ ಅಂಗಲಾಚಿ ಬೇಡಿಕೊಂಡಳು.

ಸುದ್ದಿ ತಿಳಿದ ಮುಕ್ತಾಳ ಗಂಡನ ಮನೆಯವರೆಲ್ಲ ಶ್ರೀಷಾಳನ್ನು ನೋಡಲು ಆಸ್ಪತ್ರೆಗೆ ಬಂದರು. ಶ್ರೀಷಾ ತೀವ್ರ ನಿಗಾ ಘಟಕದಲ್ಲಿದ್ದುದ್ದರಿಂದ ಅವಳನ್ನು ನೋಡಲು ಯಾರನ್ನೂ ಒಳಗೆ ಬಿಡಲಿಲ್ಲ, ಬಂದವರೆಲ್ಲ, ಮುಕ್ತಾ, ಏನು ನಿನ್ನ ದುರಾದ್ರಷ್ಟ, ಗಂಡ, ಮಗನನ್ನು ಕಳಕೊಂಡೆ. ಮಗಳಿಗೆ ಏನೂ ಆಗಬಾರದು ಎಂದು ಎಷ್ಟು ಕಾಳಜಿ ವಹಿಸಿದೆ ಆದರೆ ಈಗ ಮಗಳೂ … ಎನ್ನುತ್ತಿದ್ದಂತೆ ಮುಕ್ತಾ ದೈನ್ಯವಾಗಿ, ಹಾಗೆಲ್ಲ ಹೇಳಬೇಡಿ ನನ್ನ ಮಗಳು ಖಂಡಿತ ಬದುಕುತ್ತಾಳೆ ದೇವರು ಅಷ್ಟು ಕಠಿಣ ಮನಸ್ಸಿನವನಲ್ಲ ಎಂದಳು. ಒಬ್ಬ ವಯಸ್ಸಾದ ಹೆಂಗಸು, ನೋಡು, ನಿನ್ನ ಕಾಲ್ಗುಣ ಒಳ್ಳೆಯದಲ್ಲ ಅದಕ್ಕಾಗಿ ನಿನ್ನ ಗಂಡ ದುಬೈನಲ್ಲಿ ಒಳ್ಳೆಯ ಕೆಲಸದಲ್ಲಿದ್ದರೂ ಅಪಘಾತಕ್ಕೀಡಾಗಿ ಸಾವನ್ನಪ್ಪಿದ. ಅದಾದ ಎರಡು ವರುಷದಲ್ಲೇ ಆಯುರ್ವೇದ ಓದುತ್ತಿದ್ದ ನಿನ್ನ ಮಗ ಸ್ನೇಹಿತರ ಜೊತೆಗೆ ತಿರುಗಾಡಲು ಹೋಗಿ ನೀರಿನಲ್ಲಿ ಮುಳುಗಿ ಸತ್ತ. ಈಗ ಮಗಳೂ … ನೀನು ಅವಳನ್ನು ದೂರ ಮಾಡಿದ್ದಿದ್ದರೆ ಅವಳು ಬದುಕುತ್ತಿದ್ದಳೆನೋ ಆದರೆ ಅಲ್ಲಿಯೂ ನೀನು ಸಾವಿನ ನೆರಳಿನಂತೆ ಅವಳನ್ನು ಎಲ್ಲಿ ಹೋದರೂ ಹಿಂಬಾಲಿಸುತ್ತಾ ಹೋದೆ. ಅದರಿಂದಾಗಿಯೇ ಅವಳು ಈ ಸ್ಥಿತಿಗೆ ಬಂದಿದ್ದಾಳೆ. ಅವರೆಲ್ಲ ಬದುಕಿದ್ದಿದ್ದರೆ ನಿನ್ನಷ್ಟು ಸುಖೀ ಯಾರೂ ಇರುತ್ತಿರಲಿಲ್ಲ ಆದರೆ ನಿನ್ನ ಕೆಟ್ಟ ಕಾಲ್ಗುಣದಿಂದಾಗಿ ಅವರನ್ನೆಲ್ಲ ನುಂಗಿ ಬಿಟ್ಟೆ. ಇನ್ನು ಈ ಮಗಳನ್ನೂ ನುಂಗಿಬಿಡು ಎಂದು ಕಟುವಾಗಿ ನುಡಿದಾಗ ಮುಕ್ತಾಳ ದುಃಖದ ಕಟ್ಟೆಯೊಡೆದು ಕಣ್ಣೀರಾಗಿ ಹರಿಯತೊಡಗಿತು.

ಮುಕ್ತಾ ಕಣ್ಣೀರೊರೆಸುತ್ತ, ದಯವಿಟ್ಟು ಹಾಗೆಲ್ಲ ಮಾತನಾಡಿ ನನಗೆ ಇನ್ನಷ್ಟು ನೋವು ಕೊಡಬೇಡಿ. ಮೊದಲೇ ಎಲ್ಲರನ್ನು ಕಳೆದುಕೊಂಡು ಅತ್ಯಂತ ನೋವಿನಲ್ಲಿದ್ದೇನೆ ನನಗೆ ಇನ್ನಷ್ಟು ನೋವು ಕೊಡಬೇಡಿ ದಯವಿಟ್ಟು ನೀವೆಲ್ಲ ಇಲ್ಲಿಂದ ಹೋಗಿ ನಿಮ್ಮ ಕೈ ಮುಗಿದು ಕೇಳಿ ಕೊಳ್ಳುತ್ತೇನೆ ಎಂದು ಅಂಗಲಾಚಿ ಬೇಡಿಕೊಂಡಳು. ಬಂದವರೆಲ್ಲ ದುರ್ದಾನ ತೆಗೆದುಕೊಂಡವರಂತೆ, ಏನೋ ಪಾಪ ಮಗಳು ಆಸ್ಪತ್ರೆಯಲ್ಲಿ ನರಳ್ತಾ ಇದ್ದಾಳೆ ಅಂತ ನೋಡೋಣ ಅಂತ ಬಂದ್ರೆ ಅವಳ ಅಹಂಕಾರ ನೋಡಿದ್ರಾ, ನಮ್ಮನ್ನೇ ಹೋಗಿ ಅಂತ ಅಂದ್ಲು. ಗುಂಡುಕಲ್ಲಿನಂತಿದ್ದ ಗಂಡ, ಮಗನನ್ನು ನುಂಗಿ ನೀರು ಕುಡಿದಾಯ್ತು ಇನ್ನು ಮಗಳನ್ನು ಯಾವಾಗ ನುಂಗೋದು ಅಂತ ಕಾಯ್ತಾ ಇದ್ಲು, ಆಯ್ತಲ್ಲ ಅದೂ ನಡೆದು ಹೋಯಿತು ತಲೆಗೆ ಏಟಾಗಿದೆ ತುಂಬಾ ಸೀರಿಯಸ್ಸಾಗಿದೆ ಅಂತ ನರ್ಸ್ ಹೇಳ್ತಿದ್ಲು ಅಂದ ಮೇಲೆ ಅವಳು ಬದುಕಿದ ಹಾಗೆಯೇ, ಮಗಳ ಬದಲು ಇವಳಾದರೂ ಸಾಯಬಾಯರದಿತ್ತೆ ಎಂದು ತಮ್ಮ ನಂಜನ್ನು ಕಾರಿಕೊಂಡರು.

ಮುಕ್ತಾಗೆ ಅವರ ಮಾತು ತುಂಬಾನೇ ನೋಯಿಸಿದರೂ ಸಧ್ಯದ ಪರಿಸ್ಥಿತಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ನೋವು ಮಗಳ ಅಪಘಾತದಿಂದ ಉಂಟಾಗಿತ್ತು, ಅವಳ ಮನಸ್ಸು ಮಗಳ ಬಗ್ಗೆಯೇ ಚಿಂತಿಸುತ್ತಿತ್ತು. ಅವಳು ಬದುಕಿ ಉಳಿದರೆ ಸಾಕು ಎಂದು ಅವಳ ಮನಸ್ಸು ದೇವರನ್ನು ಪ್ರಾರ್ಥಿಸತೊಡಗಿತು. ಸಂಬಂಧಿಕರ ಕಟುನುಡಿ ಅವಳಿಗೆ ಹೊಸದೇನಲ್ಲ. ಸ್ವಲ್ಪ ಸಮಯದ ನಂತರ ಡಾಕ್ಟರ್ ಬಂದು ಮೆದುಳಿಗೆ ತುಂಬಾ ಪೆಟ್ಟಾಗಿದೆ ಹಾಗಾಗಿ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದಾಗ ಮುಕ್ತಾ ಹತಾಶೆಗೊಂಡಳು. ಅವಳಿಗೆ ತಮ್ಮ ಸಂಬಂಧಿಕರೆಲ್ಲ ಹೇಳುವುದು ನಿಜವಿರಬಹುದೇ ಎಂದು ಅನುಮಾನ ಮೂಡತೊಡಗಿತು. ನಿಜವಾಗಿಯೂ ತಾನು ಕೆಟ್ಟ ಕಾಲ್ಗುಣದವಳೇ, ತನ್ನಿಂದಾಗಿಯೇ ತನ್ನ ಗಂಡ ಮಕ್ಕಳು ತೀರಿಕೊಂಡರೇ, ಅಂದುಕೊಂಡರೂ ಅವಳ ಒಳಮನಸ್ಸು, ಹಾಗಿದ್ದರೆ ಮದುವೆಯಾದ ಕೂಡಲೇ ಏಕೆ ತನ್ನ ಗಂಡ ಸಾಯಲಿಲ್ಲ ಅವರು ದುಬೈನಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರೆ ಇಲ್ಲಿರುವ ತಾನು ಕಾರಣಳಾಗುತ್ತೇನೆಯೇ ? ಅವರ ಸಾವಿನಿಂದ ತಾನೆಷ್ಟು ಕಂಗೆಟ್ಟಿದ್ದೆ. ಮಕ್ಕಳನ್ನು ಅದೆಷ್ಟು ಕಷ್ಟದಿಂದ ಸಾಕಿದೆ, ತನ್ನ ಮಗ ಏಕೆ ಇಪ್ಪತ್ತು ವರುಷದವೆರೆಗೂ ಬದುಕಿದ್ದ ? ಅವನು ತನ್ನ ಸ್ನೇಹಿತರೊಂದಿಗೆ ತನಗೆ ಹೇಳದೆ ಸಮುದ್ರ ನೋಡಲು ಹೋಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ. ಅದಕ್ಕೂ ತಾನೇ ಕಾರಣವೇ, ಹೊಟ್ಟೆಯಲ್ಲಿ ಹುಟ್ಟಿದ ಮಗ ಕಣ್ಣೆದುರು ಶವವಾಗಿ ಬಂದಾಗ ತನಗಾದ ಸಂಕಟವೆಷ್ಟು ನಾನು ಪಟ್ಟ ಪಾಡು ಯಾವ ತಂದೆತಾಯಿಗೂ ಬರಬಾರದು. ಆದರೂ ಮಗಳಿಗಾಗಿ ಎಲ್ಲವನ್ನೂ ಸಹಿಸಿದೆ, ಆದರೆ ಈಗ ಮಗಳೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ, ಅವಳಿಗೇನಾದರೂ ಆದರೆ ? ಇಲ್ಲ, ಗಂಡ ತೀರಿಕೊಂಡಾಗ ತನಗೂ ಸಾಯುವ ಮನಸ್ಸು ಬಂದಿದ್ದರೂ ಮಕ್ಕಳಿಗಾಗಿ ಜೀವ ಹಿಡಿದುಕೊಂಡು ಬದುಕಿದೆ. ಮಗನೂ ನನ್ನನ್ನು ಬಿಟ್ಟು ಹೋದಮೇಲೆ ಜೀವನದಲ್ಲಿ ಜಿಗುಪ್ಸೆ ಮೂಡಿತ್ತು. ಆದರೆ ಕರುಳಿನ ಕುಡಿ ಶ್ರೀಷಾಳ ಗತಿ ಏನು ಎಂದು ಮತ್ತೆ ಮಗಳಿಗಾಗಿ ಉಸಿರಾಡಿದೆ. ಈಗ ಮಗಳ ಉಸಿರು ನಿಲ್ಲುವ ಮೊದಲೇ ನನ್ನ ಉಸಿರು ನಿಲ್ಲಬೇಕು, ವಿಧಿ ಅವಳ ಬಲಿ ತೆಗೆದುಕೊಳ್ಳುವ ಬದಲು ನಾನೇ ನನ್ನ ಬಲಿ ಕೊಡುತ್ತೇನೆ ಎಂದುಕೊಳ್ಳುತ್ತ ಆವೇಶದಿಂದ ಮುಕ್ತಾ ಮನೆಯತ್ತ ಓಡಿದಳು.

ತಾನು ಇನ್ನು ಯಾರಿಗಾಗಿ ಬದುಕಬೇಕು ಬದುಕು ನನಗೆ ಕೊಟ್ಟಿದ್ದಕ್ಕಿಂತ ಜಾಸ್ತಿ ವಿಧಿ ನನ್ನಿಂದ ಕಿತ್ತುಕೊಂಡದ್ದೆ ಜಾಸ್ತಿ. ಇನ್ನು ನನ್ನ ಬಲಿಯೂ ಆಗಿ ಹೋಗಲಿ ನಮ್ಮ ಕುಟುಂಬದ ಸರ್ವನಾಶವನ್ನೇ ದೇವರು ಅಪೇಕ್ಷಿಸುತ್ತಿದ್ದಾನೆ ಅಂತಾದರೆ ಅದೂ ಆಗಿ ಹೋಗಲಿ ಇಲ್ಲಾಂದ್ರೆ ನಾನು ಏನು ತಪ್ಪು ಮಾಡಿದೆ ಅಂತ ನನಗೆ ಇಂಥಾ ಯಾತನೆಗಳ ಮೇಲೆ ಯಾತನೆ ಕೊಡುತ್ತಿ ದೇವರೇ ಎಂದು ರೋಧಿಸುತ್ತ ಮನೆಯ ಬಾವಿಗೆ ಹಾರುವ ನಿರ್ಧಾರ ಮಾಡಿಕೊಂಡು ಬಾವಿಯ ಬಳಿ ಧಾವಿಸಿದಳು. ಮುಕ್ತಾ ಚಕಚಕನೆ ಬಾವಿ ಕಟ್ಟೆಯನ್ನೇರಿ ಒಂದು ನಿಮಿಷವೂ ಯೋಚಿಸದೆ ಅಲ್ಲಿಂದ ಹಾರಿದಳು. ಅಷ್ಟರಲ್ಲಿ ಮುಕ್ತಾಗೆ ಮಗಳು ಅಮ್ಮಾ ಎಂದು ಅಂದಂತಾಯಿತು ಮುಕ್ತಾಗೆ ತನ್ನ ಮಗಳು ಬದುಕಿಕೊಂಡಳೇನೋ ಈಗ ತಾನು ಸತ್ತರೆ ಅವಳಿಗೆ ಯಾರು ದಿಕ್ಕು ಛೆ ತಾನು ದುಡುಕಿ ಬಿಟ್ಟೆ ಮಗಳು ಬದುಕಿದರೆ ಎಂದು ತಾನು ಯಾಕೆ ಯೋಚಿಸಲಿಲ್ಲ ಅಂದುಕೊಳ್ಳುತ್ತಿದ್ದಂತೆ ಬದುಕಬೇಕೆಂಬ ಆಸೆ ಹುಟ್ಟಿಕೊಂಡಿತು. ಆದರೆ ಆಗಲೇ ತೀರಾ ತಡವಾಗಿ ಬಿಟ್ಟಿತು. ನೀರಿನಲ್ಲಿ ಬಿದ್ದ ಮುಕ್ತಾ ಉಸಿರಾಡಲಾಗದೆ ಮುಳುಗಿ ಹೋದಳು.

ಅತ್ತ ಆಸ್ಪತ್ರೆಯಲ್ಲಿ ಶ್ರೀಷಾಗೆ ಪ್ರಜ್ಞೆ ಬಂದು ಅಮ್ಮಾ ಎಂದು ನರಳಿದಳು. ಮಗಳು ಬದುಕುವುದಿಲ್ಲ ಎಂದು ಹತಾಶೆಯಿಂದ ತೆಗೆದುಕೊಂಡ ಮುಕ್ತಾಳ ನಿರ್ಧಾರ ಶ್ರೀಷಾಳನ್ನು ತಬ್ಬಲಿಯನ್ನಾಗಿ ಮಾಡಿ ಬಿಟ್ಟಿತು.

ಕವಿತೆ ಬರೆಯುವವನ ಕಥೆ

ಚಿದಾನಂದನಿಗೆ ಸುಮಾರು ಹದಿಮೂರು ವರುಷದವನಿರುವಾಗಿನಿಂದಲೇ ಕವಿತೆ ಬರೆಯುವ ಹವ್ಯಾಸ ಶುರುವಾಗಿತ್ತು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಕವಿತೆಗಳನ್ನು ಆಗಾಗ ಓದುತ್ತಿದ್ದಂತೆ ಅವನಿಗೂ ಕವಿತೆ ಬರೆಯುವ ಮನಸ್ಸಾಯಿತು. ಅವನು ತಾನು ಮೊದಲು ರಚಿಸಿದ ಕವಿತೆಯನ್ನು ಸಂಭ್ರಮದಿಂದ ತನ್ನ ತಾಯಿಗೆ ಹೇಳುತ್ತಿರುವಾಗ ಅನಕ್ಷರಸ್ತೆಯಾದ ಸೌಭಾಗ್ಯಮ್ಮ ಉಬ್ಬಿ ಹೋಗಿದ್ದಳು. ಅವನ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಳು. ಇಷ್ಟೊಂದು ಜಾಣನಾಗಿರುವ ಮಗ ಮುಂದೆ ದೊಡ್ಡ ಆಫೀಸರ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಕನಸು ಕಾಣತೊಡಗಿದಳು. ಕುಡುಕ ಗಂಡನಿಂದಾಗಿ ಜೀವನದಲ್ಲಿ ಕಷ್ಟವನ್ನೇ ಕಂಡಿರುವ ಸೌಭಾಗ್ಯಮ್ಮ ಮಗನಿಂದಾದರೂ ಸುಖ ಸಿಗಬಹುದು ಎಂದು ನಿರೀಕ್ಷೆಯಲ್ಲಿ ಮಗನ ಓದಿಗೆ ಬೇಕಾದ ಎಲ್ಲ ಸಹಾಯವನ್ನೂ ಮಾಡುತ್ತಿದ್ದಳು. ತನ್ನ ಹೆಸರು ಮಾತ್ರ ಸೌಭಾಗ್ಯಮ್ಮ ಆದರೆ ಯಾವ ಸೌಭಾಗ್ಯವೂ ಇಲ್ಲದೆ ದಟ್ಟ ದರಿದ್ರತನದಿಂದ ತುಂಬಿ ಹೋಗಿದ್ದ ತನ್ನ ಬದುಕಿನ ಆಶಾ ಕಿರಣ ತನ್ನ ಮಗ ಚಿದಾನಂದ, ಅವನು ತನ್ನ ಬಾಳಿನಲ್ಲಿ ಬೆಳಕು ತಂದೇ ತರುತ್ತಾನೆ ಎಂದು ಅವಳ ಅಚಲ ವಿಶ್ವಾಸ.

ಚಿದಾನಂದ ತನಗೆ ಕವಿತೆ ಬರೆಯಬೇಕೆನಿಸಿದಾಗೆಲ್ಲ ತನ್ನ ಶಾಲೆಯ ಪುಸ್ತಕಗಳ ಕೊನೆಯ ಪುಟಗಳಲ್ಲಿ ಬರೆಯುತಲಿದ್ದ. ತಮ್ಮ ಮನೆಯ ನಾಯಿಯ ಬಗ್ಗೆ, ತನ್ನ ತಾಯಿಯ ಬಗ್ಗೆ, ಕುಡುಕ ತಂದೆಯ ಬಗ್ಗೆ, ತಮ್ಮ ಊರಿನ ಜಾತ್ರೆಯ ಬಗ್ಗೆ, ಹೀಗೆ ತಾನು ದೈನಂದಿನ ಬದುಕಿನಲ್ಲಿ ಕಾಣುತ್ತಿದ್ದ ಹಲವು ವಿಷಯಗಳು ಅವನ ಕವಿತೆಗಳಿಗೆ ಸ್ಪೂರ್ತಿಯಾಗಿ ಬಿಡುತ್ತಿದ್ದವು. ತಾನು ಬರೆದ ಕವಿತೆಗಳನ್ನೆಲ್ಲ ಚಿದಾನಂದ ತನ್ನ ಸ್ನೇಹಿತರಿಗೆ ಓದಿ ಹೇಳುತ್ತಿದ್ದ. ಅವರೆಲ್ಲ ಬಹಳ ಸೊಗಸಾಗಿದೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದರಿಂದ ಕವಿತೆ ಬರೆಯುವ ಹವ್ಯಾಸ ಮತ್ತಷ್ಟು ಚಿಗುರೊಡೆದು ಹೆಮ್ಮರವಾಗಿ ಬೆಳೆಯಿತು. ಸಮಯ ಕಳೆದಂತೆ ಕವಿತೆ ಅವನ ಉಸಿರಾಗಿ ಬೆಳೆಯಿತು. ರಜೆಯಲ್ಲಿ ಉಳಿದವರೆಲ್ಲ ಆಟದಲ್ಲಿ ಮಗ್ನರಾದರೆ ಚಿದಾನಂದ ಮಾತ್ರ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ. ಕವಿತೆ ಬರೆದೂ ಬರೆದೂ ಅವನ ವಯಸ್ಸಿಗಿಂತ ಹೆಚ್ಚು ಪ್ರಬುದ್ಧವಾಗಿ ಕವನಗಳನ್ನು ರಚಿಸುವಷ್ಟರ ಮಟ್ಟಿಗೆ ಚಿದಾನಂದ ಬೆಳೆದ. ಆದರೆ ಬಡವನಾದ ಚಿದಾನಂದನಿಗೆ ಕವಿತೆ ಬರೆಯಲೆಂದೇ ಪುಸ್ತಕ ಕೊಳ್ಳಲು ದುಡ್ಡು ಹೊಂದಿಸಲಾಗುತ್ತಿರಲಿಲ್ಲ. ಹಾಗಾಗಿ ಅವನು ತನ್ನ ನೋಟು ಪುಸ್ತಕಗಳಲ್ಲಿ ಕೊನೆಯ ಪುಟಗಳಲ್ಲಿ ಬರೆಯುತ್ತಿದ್ದ. ಇದರಿಂದಾಗಿ ಅವನ ನೋಟು ಪುಸ್ತಕಗಳು ಬಹು ಬೇಗ ಖಾಲಿಯಾಗಿ ಬಿಡುತ್ತಿದ್ದವು. ನಂತರ ಬರೆಯಲು ಪುಸ್ತಕವಿಲ್ಲದೆ ಚಿದಾನಂದ ಒದ್ದಾಡುತ್ತಿದ್ದ. ಶಿಕ್ಷಕರು ಅವನಿಗೆ ಹೊಸ ಪುಸ್ತಕ ತರುವಂತೆ ಒತ್ತಾಯಿಸುತ್ತಿದ್ದರು. ಆದರೆ ಬೇರೆಯವರ ಮನೆ ಕೆಲಸ ಮಾಡುವ ತಾಯಿಗೆ ತಿಂಗಳ ಸಂಬಳ ಬರದೇ ಅವನು ಪುಸ್ತಕ ಕೊಳ್ಳುವುದಾದರೂ ಹೇಗೆ, ಹಾಗಾಗಿ ಅವನು ಅಮ್ಮನ ಬಳಿ ಪುಸ್ತಕ ಖಾಲಿಯಾದ ವಿಷಯ ಹೇಳುತ್ತಲೇ ಇರಲಿಲ್ಲ.

ಒಂದು ದಿನ ಶಿಕ್ಷಕರಿಗೆ ಸೌಭಾಗ್ಯಮ್ಮ ದಾರಿಯಲ್ಲಿ ಸಿಕ್ಕಾಗ ಅವರು ಚಿದಾನಂದನ ಕವಿತೆ ಬರೆಯುವ ಹವ್ಯಾಸದಿಂದಾಗಿ ಅವನ ಪುಸ್ತಕಗಳೆಲ್ಲ ಬೇಗನೆ ಮುಗಿದು ಹೋಗುತ್ತಿವೆ, ಕೂಲಿ ಕೆಲಸ ಮಾಡುವ ನೀವು ಅವನಿಗೆ ಎಷ್ಟೂಂತ ಪುಸ್ತಕ ಕೊಡಿಸುತ್ತೀರಿ, ಅವನಿಗೆ ಕವಿತೆ ಬರೆಯುವ ಹವ್ಯಾಸ ಬಿಟ್ಟು ಪಾಠದ ಕಡೆ ಗಮನ ಕೊಡಲು ಹೇಳಿ ಎಂದಾಗ ಸೌಭಾಗ್ಯಮ್ಮ ದಿಗ್ಭ್ರಾಂತಳಾಗಿ ಮಗ ಓದಿನ ಕಡೆ ಗಮನ ಹರಿಸುವ ಬದಲು ಕವನ, ಕವಿ ಎಂದೆಲ್ಲ ಕುಳಿತರೆ ತನ್ನ ಕನಸು ಕನಸಾಗೇ ಉಳಿಯುತ್ತದನೋ ಎಂದು ಆತಂಕದಿಂದ ಮಗನಿಗೆ ಬುದ್ದಿ ಹೇಳಿ ಈಗಲೇ ಸರಿ ಮಾಡಬೇಕು ಎಂದು ಕೊಳ್ಳುತ್ತಾ ಮನೆ ಕಡೆ ಬಿರಬಿರನೆ ಹೆಜ್ಜೆ ಹಾಕಿದಳು. ಮನೆಗೆ ಬಂದಾಗ ಚಿದಾನಂದ ಆಟವಾಡುತ್ತಿರುವುದನ್ನು ನೋಡಿ ಸೌಭಾಗ್ಯಮ್ಮನಿಗೆ ಪಿತ್ತ ನೆತ್ತಿಗೆರಿದಂತಾಗಿ ಧಾವಿಸಿ ಬಂದು ಅವನಿಗೆರಡು ಬಾರಿಸಿಯೇ ಬಿಟ್ಟಳು. ಚಿದಾನಂದ ಕಕ್ಕಾಬಿಕ್ಕಿಯಾಗಿ ಅವಳನ್ನೇ ನೋಡುತ್ತಾ ಜೋರಾಗಿ ಅಳಲು ಶುರು ಮಾಡಿದ. ಅವನ ಕಣ್ಣೀರು ನೋಡಿ ಕರುಣೆ ಉಕ್ಕಿ ಅವನನ್ನು ಹೊಡೆದದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತ ಅವನನ್ನು ಅಪ್ಪಿ ಹಿಡಿದು, ಮಗಾ ನಾವು ಬಡವರು, ತಿನ್ನಾಕೆ ಎರಡು ಹೊತ್ತು ಊಟಕ್ಕೆ ಹೊಂದಿಸೋದ್ರಲ್ಲೇ ಬದುಕು ಮುಗಿದು ಹೋಗುತ್ತೆ, ಆದರೂ ನೀನು ಜಾಣ ಇದ್ದೀ ಅಂತ ಶಾಲೆಗೆ ಕಳುಹಿಸಿದೆ, ನೀನು ಓದಿ ದೊಡ್ಡ ಆಫೀಸರ್ ಆಗ್ತೀಯಾ ಅಂತ ಕನಸು ಕಾಣ್ತಾ ಇದ್ರೆ ನೀನು ನಿನ್ನ ಶಾಲೆಯ ಪುಸ್ತಕದಲ್ಲೆಲ್ಲ ಅದೇನೋ ಗೀಚ್ತಿಯಂತೆ ನಿಮ್ಮ ಮೇಷ್ಟ್ರು ಹೇಳಿದ್ರು. ಹೀಗಾದ್ರೆ ನೀನು ಆಫೀಸರ್ ಆಗೋದು ಹೇಗೆ, ನಾವೆಲ್ಲಾ ಹೀಗೆ ಬಡವರಾಗೇ ಇರಬೇಕಾ ನಿನ್ನ ಅಪ್ಪಂಗೆ ಬುದ್ದಿ ಹೇಳಿ ಹೇಳಿ ಸೋತು ಹೋದೆ. ನೀನೂ ಅಪ್ಪನಂತೆ ಆಗಬೇಡ ಕಂದ. ನನಗೆ ಕಷ್ಟ ನೋಡಿ ನೋಡಿ ಸಾಕಾಗಿದೆ. ನೀನು ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರಬೇಕು ಅದಕ್ಕೆ ನೀನು ಏನೇನೋ ಬರದು ಪುಸ್ತಕ ಹಾಳು ಮಾಡ್ಬೇಡಾ ಮಗಾ, ನಂಗೆ ಯಾವಾಗಲೂ ಪುಸ್ತಕ ತಂದ್ಕೊಡಕೆ ಆಗಾಕಿಲ್ಲ. ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಾಗ ಚಿದಾನಂದನಿಗೆ ಅಮ್ಮನ ಅಸಹಾಯ ಪರಿಸ್ಥಿತಿಗೆ ಕರುಣೆ ಉಕ್ಕಿತು. ಆಗ್ಲಿ ಅವ್ವಾ ನೀನು ಚಿಂತೆ ಮಾಡ್ಬೇಡಾ ನಾನು ಚೆನ್ನಾಗಿ ಓದಿ ಆಫೀಸರ್ ಆಗೇ ಆಗ್ತೀನಿ ಎಂದಾಗ ಸೌಭಾಗ್ಯಮ್ಮನಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ಚಿದಾನಂದ ತಾನು ನೋಟು ಪುಸ್ತಕಗಳಲ್ಲಿ ಬರೆದ ಕವನಗಳನ್ನೆಲ್ಲ ರಬ್ಬರಿನಿಂದ ಉಜ್ಜಿ ಅಳಿಸಿ ಹಾಕಿ ಆ ಪುಸ್ತಕವನ್ನೇ ಮತ್ತೆ ಬಳಸಲು ಶುರು ಮಾಡಿದ. ಆ ಬಳಿಕ ಮನೆಯಲ್ಲಿ ಸಿಕ್ಕ ಚೂರು ಪಾರು ಕಾಗದಗಳಲ್ಲೇ ಚಿದಾನಂದನ ಕವನಗಳು ಆಶ್ರಯ ಪಡೆಯತೊಡಗಿದವು. ಪಾಠದಲ್ಲೂ ಆಸಕ್ತಿ ವಹಿಸಿ ಉತ್ತಮ ಅಂಕಗಳು ಅವನಿಗೆ ಬರತೊಡಗಿದವು. ಸೌಭಾಗ್ಯಮ್ಮ ಮತ್ತೆ ಮೇಷ್ಟ್ರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತಮ ಪ್ರತಿಕ್ರಿಯೆ ನೋಡಿ ತನ್ನ ಕನಸು ನನಸಾಗುವುದರಲ್ಲಿ ಸಂಶಯವೇ ಇಲ್ಲ, ತಾನೂ ಮುಂದೊಂದು ದಿನ ತಾನು ಕೆಲಸ ಮಾಡುತ್ತಿರುವ ಮನೆಯವರಂತೆ ಸೋಫಾದಲ್ಲಿ ಕುಳಿತು ಟಿವಿ ನೋಡುವ, ತಮ್ಮ ಮನೆಯ ತುಂಬಾ ದುಬಾರಿ ಬೆಲೆಯ ವಸ್ತುಗಳಿಂದ ತುಂಬಿ ಹೋಗಿರುವ ಕನಸು ಕಾಣತೊಡಗಿದಳು.

ಹೀಗೆ ವರುಷಗಳು ಉರುಳಿದವು. ಚಿದಾನಂದ ತೇರ್ಗಡೆಯಾಗುತ್ತ ಮುಂದಿನ ತರಗತಿಗೆ ಹೋಗುತ್ತಿದ್ದಂತೆ ಸೌಭಾಗ್ಯಮ್ಮ ಇನ್ನಷ್ಟು ಮನೆಯ ಕೆಲಸಗಳನ್ನು ವಹಿಸಿಕೊಳ್ಳತೊಡಗಿದಳು. ಈ ನಡುವೆ ಅವಳ ಗಂಡ ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ. ಆದರೆ ಇದು ಚಿದಾನಂದನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅವನ ತಂದೆ ಯಾವತ್ತೂ ಅವನ ಬಳಿ ಮಾತನಾಡಿದ್ದೇ ಇಲ್ಲ ಅವನಿಗೇನು ಬೇಕು ಎಂದು ವಿಚಾರಿಸಿದ್ದೇ ಇಲ್ಲ. ಆದರೆ ಅಮ್ಮ ತನಗಾಗಿ ಕಷ್ಟ ಪಡುವುದನ್ನು ಮಾತ್ರ ನೋಡಿದ್ದ. ಅವನಿಗೆ ತನ್ನ ಅಮ್ಮನ ಕನಸನ್ನು ನನಸಾಗಿಸುವ ಹಂಬಲ ಇತ್ತು. ತನ್ನ ಪಾಠದ ಜೊತೆ ಕವಿತೆ ಬರೆಯುವ ಹವ್ಯಾಸ ಮುಂದುವರೆಸಿಕೊಂಡು ಬಂದಿದ್ದ. ಕವನಗಳು ಅವನಲ್ಲಿ ಎಲ್ಲಿಲ್ಲದ ಚೈತನ್ಯ ತುಂಬಿ ಬಿಡುತ್ತಿದ್ದುದರಿಂದ ಪಾಠ ಓದಲು ಮತ್ತಷ್ಟು ಹುರುಪು ಬಂದು ಹತ್ತನೆಯ ತರಗತಿಯಲ್ಲಿ ಅತ್ಯತ್ತಮ ಅಂಕಗಳೊಂದಿಗೆ ಚಿದಾನಂದ ತೇರ್ಗಡೆಯಾದಾಗ ಸೌಭಾಗ್ಯಮ್ಮಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು.

ಅವನನ್ನು ಕಾಲೇಜಿಗೆ ಸೇರಿಸಲು ಬೇಕಾದ ದುಡ್ಡನ್ನು ಹೊಂದಿಸಲು ತಾನು ಕೆಲಸ ಮಾಡುತ್ತಿದ್ದ ಮನೆಯವರ ಬಳಿ ಸಾಲ ಕೇಳಲು ಮಗನನ್ನು ಕರೆದುಕೊಂಡು ಹೋದಳು. ಅಲ್ಲಿ ತನ್ನ ಮಗನ ಬಗ್ಗೆ ಹೊಗಳುತ್ತಾ ಅವನು ಕವಿತೆ ಬರೆಯುವ ವಿಷಯ ಹೇಳಿದಾಗ ಅವರೆಲ್ಲ ತಮ್ಮ ಮಕ್ಕಳಲ್ಲಿಲ್ಲದ ಪ್ರತಿಭೆ ಅವನಲ್ಲಿದೆ ಎಂದು ಮತ್ಸರ ಪಡುತ್ತ, ಕಾಲೇಜು ಅಂದ್ರೆ ತಮಾಷೆ ಅಲ್ಲ, ಅಲ್ಲಿ ಎಷ್ಟೊಂದು ಓದೋದಕ್ಕೆ ಇರುತ್ತೆ. ಅವನು ಕವಿತೆ ಬರೀತಾ ಕೂತರೆ, ಓದು ಮೂಲೆ ಸೇರಿ ನೀನು ಸಾಲ ಮಾಡಿದ್ದೆಲ್ಲ ದಂಡವಾಗಿ ಬಿಡುತ್ತೆ. ಮತ್ತೆ ನೀನು ನಮ್ಮ ಸಾಲ ಹೇಗೆ ತೀರಿಸ್ತಿಯಾ ಎಂದಾಗ ಸೌಭಾಗ್ಯಮ್ಮ ದಿಗ್ಭ್ರಾಂತಳಾಗಿ, ಇಲ್ರವ್ವ, ಅವನು ಕವನ ಬರೆದರೂ ಚೆನ್ನಾಗಿ ಓದ್ತಾನೆ. ಈ ಸಲ ಒಳ್ಳೆ ಮಾರ್ಕ್ಸ್ ಬಂದಿದೆ ಅಂತ ಮೇಷ್ಟ್ರು ಹೇಳಿದ್ರು, ನಿಮ್ಮ ಸಾಲಕ್ಕೇನೂ ಮೋಸ ಮಾಡೋಲ್ಲ, ದಯವಿಟ್ಟು ಸಹಾಯ ಮಾಡಿ ಎಂದು ಗೋಗರೆದಳು. ಅವನಿಗೆ ಕವನ ಬರೆಯುವುದನ್ನು ನಿಲ್ಲಿಸಲು ಹೇಳಿ ಬರೀ ಪಾಠದ ಕಡೆ ಗಮನ ಕೊಡುವಂತೆ ತಾನು ಮಾಡುತ್ತೇನೆ ಎಂದು ಅವರಿಗೆ ಆಶ್ವಾಸನೆ ನೀಡಿ ಅವರಿಂದ ಸಾಲ ಪಡೆದಳು. ಅಲ್ಲಿಂದ ಮನೆಗೆ ಬಂದ ಮೇಲೆ ಸೌಭಾಗ್ಯಮ್ಮನಿಗೆ ಅವಳ ಮನೆಯೊಡತಿಯರು ಹೇಳಿದ ಮಾತುಗಳೇ ಕಿವಿಯಲ್ಲಿ ಗುಯ್ ಗುಡತೊಡಗಿದವು. ಅವನ ಕವನಗಳೇ ಅವನ ಏಳಿಗೆಗೆ ಅಡ್ಡವಾದರೆ ಎಂದು ಆತಂಕವಾಗಿ ಅವಳು ಚಿದಾನಂದನಿಗೆ ಕವಿತೆಗಳನ್ನು ಬರೆಯುವುದನ್ನು ಸಂಪೂರ್ಣವಾಗಿ ಬಿಡಲು ಹೇಳಿದಾಗ ಚಿದಾನಂದನಿಗೆ ಆಘಾತವಾಯಿತು. ಅವನೆಷ್ಟೇ ಅವಳನ್ನು ಸಮಾಧಾನ ಪಡಿಸಲು ನೋಡಿದರೂ ಸೌಭಾಗ್ಯಮ್ಮ ಮಾತ್ರ ಪಟ್ಟು ಹಿಡಿದು ಕೂತು ಬಿಟ್ಟಳು. ಚಿದಾನಂದನಿಗೆ ಕವಿತೆಗಳೇ ಅವನ ಉಸಿರಾಗಿದ್ದವು. ಅದಿಲ್ಲದ ಬದುಕು ಅವನಿಗೆ ಊಹಿಸಲು ಅಸಾಧ್ಯ. ಅಮ್ಮ ಯಾಕೆ ಇಷ್ಟೊಂದು ಹಠ ಹಿಡಿಯುತ್ತಿದ್ದಾಳೆ, ತನ್ನ ಮೇಲೆ ಯಾಕೆ ನಂಬಿಕೆ ಇಲ್ಲ, ತಾನು ಕವಿತೆ ಬರೆಯುವುದರ ಜೊತೆ ಚೆನ್ನಾಗಿ ಓದುತ್ತೇನೆ ಎಂದರೂ ಬೇರೆಯವರು ಹೇಳಿದ ಮಾತನ್ನೇ ಕೇಳಿಕೊಂಡು ಆತಂಕ ಪಡುವುದ್ಯಾಕೆ, ಅಥವಾ ಅವಳು ಸಾಲ ಮಾಡಿ ತನ್ನನ್ನು ಓದಿಸುತ್ತಿರುವುದರಿಂದ ಅವರ ಮಾತು ಕೇಳಬೇಕು ಎಂದು ತನಗೆ ಹೀಗೆ ಹೇಳುತ್ತಿದ್ದಾಳೆಯೇ ಅಥವಾ ತಾನು ಕವಿತೆ ಬರೆದು ಚೆನ್ನಾಗಿ ಓದದೇ ಇದ್ದರೆ ಸಾಲ ಹಿಂತಿರುಗಿಸುವುದು ಹೇಗೆ ಎಂದು ಯೋಚನೆಯೇ ಎಂದೆಲ್ಲ ಚಿಂತಿಸುತ್ತಾ ಹತಾಶನಾದ. ಅಮ್ಮನ ಮಂಕು ಕವಿದ ಮುಖ ನೋಡಲಾಗದೆ ಚಿದಾನಂದ ತಾನೇ ಸೋತು ಅಮ್ಮನಿಗೆ ಇನ್ನು ಯಾವತ್ತೂ ಕವನಗಳನ್ನು ಬರೆಯುವುದಿಲ್ಲ ಎಂದು ಹೇಳಿದಾಗ ಸೌಭಾಗ್ಯಮ್ಮಳ ಮುಖ ಅರಳಿತು.

ತನ್ನ ತಾಯಿಗೆ ಕವನ ಬರೆಯುವುದಿಲ್ಲ ಎಂದು ಮಾತು ಕೊಟ್ಟರೂ ಅವನ ಮನಸ್ಸಿನಲ್ಲಿ ಮೂಡುತ್ತಿದ್ದ ಕವಿತೆಗಳನ್ನು ಅವನಿಂದ ಅಳಿಸಲಾಗಲಿಲ್ಲ. ಉಕ್ಕಿ ಉಕ್ಕಿ ಬರುತ್ತಿದ್ದ ಕವನಗಳ ಸಾಲುಗಳನ್ನು ಬರೆಯಲಾಗದೆ ಕದ್ದು ಮುಚ್ಚಿ ಕವಿತೆಗಳನ್ನು ಹೇಳಿಕೊಳ್ಳಲು ಶುರು ಮಾಡಿದ. ನಂತರ ನಿದ್ದೆಯಲ್ಲೂ ಕವನಗಳನ್ನೇ ಬಡಬಡಿಸತೊಡಗಿದಾಗ ಸೌಭಾಗ್ಯಮ್ಮ ಬೆಚ್ಚಿ ಬಿದ್ದಳು. ಎಷ್ಟೋ ಸಾರಿ ಅವನನ್ನು ತಟ್ಟಿ ಎಬ್ಬಿಸಿ ಏನಾಯಿತೆಂದು ಕೇಳುತ್ತಿದ್ದಳು. ಅವನು ಮಾತ್ರ ಏನೂ ಇಲ್ಲ ಎನ್ನುತ್ತಿದ್ದ. ದಿನ ಕಳೆದಂತೆ ಚಿದಾನಂದ ಮಂಕಾಗುತ್ತ ಬಂದ. ಯಾವುದರಲ್ಲೂ ಉತ್ಸಾಹವೇ ಇಲ್ಲ. ಏನೇನೋ ಬಡಬಡಿಸುತ್ತ ಇರುವ ಮಗನನ್ನು ಕಂಡು ಸೌಭಾಗ್ಯಮ್ಮ ಕಂಗಾಲಾದಳು. ಕಾಲೇಜು ಶುರುವಾಗುವ ದಿನ ಹತ್ತಿರ ಬರುತ್ತಿದ್ದರೂ ಅವನು ಯಾವುದೇ ತಯಾರಿ ನಡೆಸದೆ ಸುಮ್ಮನೆ ಕುಳಿತಿದ್ದು ನೋಡಿ ಸೌಭಾಗ್ಯಮ್ಮ ತನ್ನ ಮಗನಿಗೆ ಯಾರೋ ಮಾಟ ಮಾಡಿರಬೇಕೆಂದು ಕೊಂಡಳು. ಅದಕ್ಕಾಗಿ ಮಾಂತ್ರಿಕನನ್ನು ಕರೆಸಿ ಪೂಜೆ ಎಲ್ಲ ಮಾಡಿಸಿದರೂ ಫಲಿತಾಂಶ ಮಾತ್ರ ಶೂನ್ಯ. ತನ್ನ ಮಗ ಮೊದಲಿನಂತಾಗಲಿ ಎಂದು ಕಂಡ ಕಂಡ ದೇವರಿಗೆಲ್ಲ ಹರಕೆ ಹೊತ್ತಳು. ಚೈತನ್ಯದ ಚಿಲುಮೆಯಾಗಿದ್ದ ತನ್ನ ಮಗ ಇದ್ದಕ್ಕಿದ್ದಂತೆ ಮಂಕು ಬಡಿದವನಂತೆ ವರ್ತಿಸುತ್ತಿದ್ದುದು ಕಂಡು ಸೌಭಾಗ್ಯಮ್ಮ ನಿಗೆ ದಿಕ್ಕೇ ತೋಚದಂತಾಯಿತು. ಕೊನೆಗೆ ಪಕ್ಕದ ಮನೆಯವರ ಸಲಹೆಯಂತೆ ವೈದ್ಯರ ಬಳಿ ಕರೆದೊಯ್ದಾಗ ಅವರು ಮಾನಸಿಕ ತಜ್ಞರನ್ನು ಭೇಟಿಯಾಗಲು ತಿಳಿಸಿದರು.

ಸೌಭಾಗ್ಯಮ್ಮ ಮಗನನ್ನು ಮಾನಸಿಕ ತಜ್ಞರಲ್ಲಿ ಕರೆದೊಯ್ದಾಗ ಅವರು ಅವನನ್ನು ಪರಿಶೀಲಿಸಿ ಯಾವಾಗಿನಿಂದ ಹೀಗೆ ಆಗುತ್ತದೆ ಎಂದಾಗ ಸೌಭಾಗ್ಯಮ್ಮ ತಾನು ಅವನನ್ನು ಕಾಲೇಜು ಸೇರಿಸಲು ಯತ್ನಿಸುತಿದ್ದುದ್ದು ಅದಕ್ಕಾಗಿ ಅವನ ಕವನ ಬರೆಯುವ ಹವ್ಯಾಸ ಬಿಡುವಂತೆ ಅವನಿಗೆ ಹೇಳಿದ್ದು ಎಲ್ಲವನ್ನು ಹೇಳಿದಾಗ ವೈದ್ಯರು ಸೌಭಾಗ್ಯಮ್ಮಳಿಗೆ, ಅವಳು ಅವನ ಅಚ್ಚುಮೆಚ್ಚಿನ ಹವ್ಯಾಸವನ್ನು ಬಿಡುವಂತೆ ಹೇಳಿದ್ದರಿಂದ ಅವನು ಈ ರೀತಿ ವರ್ತಿಸುತ್ತಿದ್ದಾನೆ. ಅವನು ಕವನ ಬರಿಯುವುದರ ಜೊತೆಗೆ ಪಾಠದಲ್ಲೂ ಚೆನ್ನಾಗಿ ಇರುವಾಗ ಅವನ ಈ ಹವ್ಯಾಸ ತಪ್ಪಿಸಲು ನೋಡಿದ್ದೇಕೆ, ಅವನ ಕವನಗಳೇ ಅವನಲ್ಲಿ ಚೈತನ್ಯ ತುಂಬುವುದು. ಅದನ್ನು ನೀವು ನಿಲ್ಲಿಸಿದರೆ ಅವನು ಮಂಕಾಗದೆ ಇನ್ನೇನಾಗುತ್ತದೆ, ಜನರು ಏನು ಹೇಳುತ್ತಾರೋ ಅದನ್ನು ಕೇಳುವುದಲ್ಲ, ಮಕ್ಕಳಿಗೆ ಏನು ಮುಖ್ಯ ಅದನ್ನು ತಂದೆತಾಯಿ ನೋಡಬೇಕು ಅದು ಅವರ ಕರ್ತವ್ಯ ಕೂಡ, ಅದರ ಜೊತೆ ಅವನ ಕವನಗಳನ್ನು ಪತ್ರಿಕೆಗಳಿಗೆ ಕಳುಹಿಸಿದರೆ ಅದಕ್ಕೆ ತಕ್ಕ ಸಂಭಾವನೆ ದೊರಕುತ್ತದೆ. ಕವನಗಳನ್ನೆಲ್ಲ್ಲ ಸೇರಿಸಿ ಪುಸ್ತಕ ಪ್ರಕಟ ಮಾಡಿದರೆ ಅದರಿಂದ ಇನ್ನಷ್ಟು ಆದಾಯ ಬರುತ್ತದೆ. ಇದನ್ನು ದೇವರು ನಿಮಗೆ ಕೊಟ್ಟ ವರವೆಂದು ತಿಳಿದು ಅವನಿಗೆ ಪ್ರೋತ್ಸಾಹ ಮಾಡಿ. ಅವನಿಗೆ ಎಂದಿನಂತೆ ಕವನ ಬರೆಯಲು ಹೇಳಿ ಅವನು ಶೀಘ್ರವೇ ಮೊದಲಿನಂತಾಗುತ್ತಾನೆ ಎಂದು ಹೇಳಿ ಚಿದಾನಂದನಿಂದ ಕೆಲವು ಕವಿತೆಗಳನ್ನು ಹೇಳಿಸಿದಾಗ ಅವನ ಪ್ರಬುಧ್ಧತೆಗೆ ವೈದ್ಯರೇ ಅಚ್ಚರಿಗೊಂಡರು. ಇವನು ಮುಂದೆ ಬಹು ದೊಡ್ಡ ಕವಿಯಾಗಬಲ್ಲ ಎಂದುಕೊಂಡು ಚಿದಾನಂದನಿಗೆ ಕವಿತೆಗಳನ್ನು ಪತ್ರಿಕೆಗಳಿಗೆ ಕಳುಹಿಸುವಂತೆ ಹೇಳಿ ಕವಿತೆ ಬರೆಯುವುದನ್ನು ನಿಲ್ಲಿಸಬೇಡ ಅದು ನಿನ್ನ ಜೀವಾಳ. ನೀನು ಚೆನ್ನಾಗಿರಬೇಕಾದರೆ ನೀನು ಕವಿತೆ ಬರೆಯಲೇ ಬೇಕು ನಿನ್ನ ಅಮ್ಮನಿಗೆ ನಿನ್ನ ಹಾಗೂ ನಿನ್ನ ಕವನಗಳ ಮಧ್ಯ ಅಡ್ಡ ಬರದಿರಲು ಹೇಳಿದ್ದೇನೆ, ಅದಕ್ಕೆ ಆಕೆ ಒಪ್ಪಿದ್ದಾಳೆ, ಸ್ವಲ್ಪ ಕಾಲ ಈ ಮಾತ್ರೆಗಳನ್ನು ತಪ್ಪದೆ ತೆಗೆದುಕೋ ನಂತರ ನೀನು ಮೊದಲಿನಂತಾಗುತ್ತಿಯಾ ಎಂದು ಹೇಳಿ ಅವನನ್ನು ಕಳುಹಿಸಿದರು. ಸೌಭಾಗ್ಯಮ್ಮ ತನ್ನಿಂದಾಗಿ ತನ್ನ ಮಗ ಈ ಸ್ಥಿತಿಗೆ ಬಂದನಲ್ಲ ಎಂದು ಪಶ್ಚಾತ್ತಾಪ ಪಡುತ್ತ ತಾನು ಬೇರೆಯವರ ಮಾತು ಕೇಳಬಾರದಿತ್ತು ಎಂದು ನೊಂದುಕೊಂಡು ತನ್ನ ಮಗನಿಗೆ ಮತ್ತೆ ಕವಿತೆಗಳನ್ನು ಬರೆಯುವಂತೆ ಹೇಳಿ ಒಂದು ಪುಸ್ತಕವನ್ನೇ ತಂದುಕೊಟ್ಟಾಗ ಚಿದಾನಂದನ ಮುಖದಲ್ಲಿ ನಗು ಅರಳಿತು. ದಿನಗಳು ಉರುಳಿದಂತೆ ಚಿದಾನಂದ ಮುಖದಲ್ಲಿ ಗೆಲುವು ಕಾಣಿಸತೊಡಗಿತು. ಕಾಲೇಜು ಪ್ರಾರಂಭವಾಗುವ ದಿನ ಚಿದಾನಂದ ಉತ್ಸಾಹದಿಂದಲೇ ಕಾಲೇಜಿಗೆ ಹೊರಟಾಗ ಸೌಭಾಗ್ಯಮ್ಮ ನಿಟ್ಟುಸಿರು ಬಿಟ್ಟಳು.

ಬಲಿ ಪಡೆದ ಸ್ವಾರ್ಥ

ಜಾರ್ಜ್ ತಮ್ಮ ಮನೆಯ ವರಾಂಡದ ಕುರ್ಚಿಯಲ್ಲಿ ಕಾಲು ಚಾಚಿ ಕುಳಿತು ಅಂದಿನ ದಿನ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲಿ ಗೇಟು ತೆರೆದ ಸದ್ದಾಯಿತು. ಇಷ್ಟೊಂದು ಬೆಳಗ್ಗೆ ಯಾರು ಬಂದರಪ್ಪ ಎಂದು ಕಣ್ಣು ಕಿರಿದುಗೊಳಿಸಿ ನೋಡಿದಾಗ ಯುವಕನೊಬ್ಬ ಕೈಯಲ್ಲಿ ಚೀಟಿ ಹಿಡಿದು ನಿಂತಿದ್ದ. ಅವನನ್ನು ನೋಡುತ್ತಲೇ ಜಾರ್ಜ್ ಗೆ ತನ್ನ ಮಗ ಡೆನಿಸ್ ನ ನೆನಪಾಯಿತು. ತನ್ನ ಮಗ ಬದುಕಿದ್ದಿದ್ದರೆ ಅವನೂ ಹೀಗೆ ಇರುತ್ತಿದ್ದನೇನೋ ಎಂದು ಅನಿಸಿ ಭಾವುಕರಾಗಿ ಕಣ್ಣುಗಳು ತೇವಗೊಂಡವು. ಆ ಯುವಕ ಜಾರ್ಜ್ ಬಳಿ ಬಂದು ಈ ವಿಳಾಸ ಎಲ್ಲಿ ಅಂತ ಸ್ವಲ್ಪ ಹೇಳುತ್ತೀರಾ ಸರ್ ಎನ್ನುತ್ತಾ ಚೀಟಿಯೊಂದನ್ನು ಅವರ ಕೈಗಿತ್ತಾಗ ಜಾರ್ಜ್ ಚೀಟಿಯ ಮೇಲೆ ಕಣ್ಣಾಡಿಸಿದರು. ನಂತರ ಅವನತ್ತ ದಿಟ್ಟಿಸಿ ನೋಡುತ್ತಾ ಅವನಿಗೆ ವಿಳಾಸ ಎಲ್ಲಿದೆಯೆಂದು ಹೇಳಿದಾಗ ಆತ ಥ್ಯಾಂಕ್ಸ್ ಎಂದು ಹೇಳಿ ಮುಗುಳ್ನಗೆಯೊಂದನ್ನು ಬೀರಿ ಹೊರಟು ಹೋದ. ಜಾರ್ಜ್ ಅವನು ಕಣ್ಣಿಂದ ಮರೆಯಾಗುವವರೆಗೂ ಅವನನ್ನೇ ನೋಡುತ್ತಾ ನಿಂತು ನಂತರ ನಿಟ್ಟುಸಿರೊಂದನ್ನು ಬಿಟ್ಟು ಮತ್ತೆ ಪತ್ರಿಕೆಯನ್ನು ಹಿಡಿದು ಕುಳಿತರು. ಆದರೆ ಮನಸ್ಸು ಮಾತ್ರ ಅಲ್ಲೋಲ್ಲ ಕಲ್ಲೋಲವಾಗಿದ್ದರಿಂದ ಪತ್ರಿಕೆ ಓದಲು ಮನಸ್ಸು ಬಾರದೆ ಕಣ್ಣು ಮುಚ್ಚಿ ಕುಳಿತರು. ಅವರ ಮನಸ್ಸು ಹಿಂದಿನ ನೆನಪುಗಳನ್ನು ಕದಡತೊಡಗಿತ್ತು

ಜಾರ್ಜ್ ಪ್ರಖ್ಯಾತ ಕಂಪೆನಿ ಯೊಂದರಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಆಫೀಸಿನಲ್ಲಿ ಅವರ ಕೈ ಕೆಳಗಿನ ಅಧಿಕಾರಿಗಳ ನಡುವೆ ತಮ್ಮ ಮಕ್ಕಳ ಓದಿನ ಬಗ್ಗೆ ಅವರವರಲ್ಲೇ ಪೈಪೋಟಿ ನಡೆದಿತ್ತು. ಎಲ್ಲರೂ ತಮ್ಮ ಮಕ್ಕಳನ್ನು ಇಂಜಿನೀಯರ್ ಮತ್ತು ಮೆಡಿಕಲ್ ಓದಿಸಲು ಹರಸಾಹಸ ಪಡುತ್ತಿದ್ದರು. ಹೀಗಿರುವಾಗ ಸಹಜವಾಗಿ ಜಾರ್ಜ್ ಗೂ ತನ್ನ ಒಬ್ಬನೇ ಮಗ ಡೆನಿಸ್ ಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು ಅವರೆಲ್ಲರಿಗಿಂತ ತನ್ನ ಮಗ ಅತ್ಯುನ್ನತ ಕಾಲೇಜಿನಲ್ಲಿ ಓದಬೇಕು ಎಂದೆಲ್ಲ ಕನಸು ಕಾಣತೊಡಗಿದರು. ಅದಕ್ಕಾಗಿ ಬೇಕಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಲೂ ಇದ್ದರು. ಆದರೆ ಡೆನಿಸ್ ಗೆ ಮಾತ್ರ ತಾನು ಕಾಲೇಜು ಲೆಕ್ಚರರ್ ಆಗಬೇಕು ಎಂದು ಆಸೆ ಇತ್ತು. ಆದರೆ ಇದನ್ನು ಮಾತ್ರ ಅವನು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಕಾರಣ ಇದುವರೆಗೂ ಅವನ ಅಪ್ಪ ಅಮ್ಮ ಅವನ ಯಾವ ಆಸೆಗಳಿಗೂ ಅಡ್ಡಿ ಮಾಡಿರಲಿಲ್ಲ. ಅವನಿಗೆ ಇತಿಹಾಸ, ಸಮಾಜದ ಪಾಠಗಳು ಅಚ್ಚುಮೆಚ್ಚಿನದ್ದಾಗಿದ್ದವು. ಡೆನಿಸ್ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೆರ್ಗಡೆಯಾದಾಗ ಜಾರ್ಜ್ ತನ್ನ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದು ಬಹಳ ಸಂತಸ ಪಟ್ಟಿದ್ದರು. ಅವನನ್ನು ಕಾಲೇಜಿಗೆ ಸೇರಿಸಲು ಮಗನ ಬಳಿ ಸಾಯನ್ಸ್ ತೆಗೆದುಕೋ, ಮುಂದೆ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಓದಲು ಅದೇ ಬೇಕಾಗುತ್ತದೆ ಎಂದಾಗ ಡೆನಿಸ್, ತನಗೆ ಅದೆಲ್ಲ ಇಷ್ಟವಿಲ್ಲ, ತಾನು ಬಿ. ಎ ಮಾಡಿ ಎಂ. ಎ ಮಾಡಿ ಕಾಲೇಜು ಲೆಕ್ಚರರ್ ಆಗುತ್ತೇನೆ ಎಂದು ತನ್ನ ಆಸೆ ತೋಡಿಕೊಂಡಾಗ ಜಾರ್ಜ್ ಗರ ಬಡಿದವರಂತಾಗಿದ್ದರು. ಅವರಿಗೆ ತನ್ನ ಕನಸಿನ ಗೋಪುರ ಕುಸಿದು ಬಿದ್ದ ಅನುಭವ ! ಆದರೂ ಸಾವರಿಸಿಕೊಂಡು ಮಗನಿಗೆ ಈಗಿನ ಕಾಲದಲ್ಲಿ ಬರಿಯ ಲೆಕ್ಚರರ್ ಆದರೆ ಯಾವ ಬೆಲೆಯೂ ಇಲ್ಲ. ಸಂಬಳವೂ ಚೆನ್ನಾಗಿ ಜೀವನ ನಡೆಸಲು ಸಾಕಾಗುವುದಿಲ್ಲ ಎಂದು ಅವನ ಮನಸ್ಸನ್ನು ತಿರುಗಿಸಲು ಇನ್ನಿಲ್ಲದ ಪ್ರಯತ್ನ ಗಳನ್ನೂ ಮಾಡಿದರೂ ಪರಿಣಾಮ ಮಾತ್ರ ಶೂನ್ಯ.

ಮನೆಯಲ್ಲಿ ದಿನವೂ ಇದರ ಬಗ್ಗೆ ಚರ್ಚೆಯಾಗತೊಡಗಿತು. ಆದರೆ ಡೆನಿಸ್ ಹಠ ಹಿಡಿದು ಕುಳಿತು ಬಿಟ್ಟಿದ್ದ. ತನಗೆ ಇಂಜಿನೀಯರಿಂಗ್, ಮೆಡಿಕಲ್ ಓದಲು ಆಸಕ್ತಿಯೇ ಇಲ್ಲ ಎಂದು ಪಟ್ಟು ಹಿಡಿದಾಗ ಜಾರ್ಜ್ ಸಿಟ್ಟುಗೊಂಡು ಬಿ. ಎ ಓದಿ ನನ್ನ ಮರ್ಯಾದೆ ತೆಗೆಯಬೇಕೆಂದಿದ್ದಿಯಾ, ನನ್ನ ಆಫೀಸಿನ ಕೈ ಕೆಳಗಿನ ಕೆಲಸದವರ ಮಕ್ಕಳೆಲ್ಲ ಡಾಕ್ಟರ್, ಇಂಜಿನಿಯರ್ ಓದುತ್ತಿರುವಾಗ ನೀನು ಬಿ. ಎ ಓದಿದರೆ ನಾನು ತಲೆ ಎತ್ತಿ ತಿರುಗುವ ಹಾಗಿಲ್ಲ ಎಂದು ಅಬ್ಬರಿಸುತ್ತ, ಇದೇ ಕೊನೆ ಮಾತು, ನಾನು ಹೇಳಿದಂತೆ ನೀನು ಓದಬೇಕು, ಇಲ್ಲವಾದರೆ ನಾನು ಖಂಡಿತ ಬದುಕುಳಿಯುವುದಿಲ್ಲ ನನಗೆ ನನ್ನ ಮರ್ಯಾದೆ ಮುಖ್ಯ ಎಂದಾಗ ಡೆನಿಸ್ ನ ತಾಯಿ ಲಿಂಡಾ, ಇದುವರೆಗೂ ಅಪ್ಪ ಮಗನ ಮಾತಿನ ಮಧ್ಯೆ ಬಾಯಿ ಹಾಕದೆ ಸುಮ್ಮನಿದ್ದವರು ಜಾರ್ಜ ರ ಉಗ್ರ ರೂಪ ನೋಡಿ ಬೆದರಿ ಮಗನಿಗೆ ಡ್ಯಾಡಿ ಹೇಳಿದಂತೆ ಕೇಳು, ನಿನ್ನ ಡ್ಯಾಡಿ ಬದುಕದಿದ್ದರೆ ನಾನೂ ಬದುಕುವುದಿಲ್ಲ ಎಂದು ಅಮ್ಮನೂ ಬೆದರಿಸಿದಾಗ ಡೆನಿಸ್ ಮುಖ ಕಳಾಹೀನವಾಯಿತು. ಏನೂ ಹೇಳಲೂ ತೋಚದೆ ಸುಮ್ಮನೆ ತಲೆಯಾಡಿಸಿದ. ಅಮ್ಮನಾದರೂ ತನ್ನ ಪಕ್ಷ ವಹಿಸಬಹುದು ಎಂದುಕೊಂಡ ಡೆನಿಸ್ ಗೆ ಇದರಿಂದ ತುಂಬಾ ಆಘಾತವಾಯಿತು. ಆದರೂ ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿದರೆ ಅವರು ಡ್ಯಾಡಿ ಯನ್ನು ಒಪ್ಪಿಸಬಹುದು ಎಂಬ ಪುಟ್ಟ ಆಸೆ ಮನದ ಮೂಲೆಯಲ್ಲಿ ಇತ್ತು.

ಮರುದಿನ ಅಮ್ಮ ಒಳ್ಳೆ ಮೂಡಿನಲ್ಲಿ ಇರುವಾಗ ಮೆಲ್ಲನೆ ಡೆನ್ನಿಸ್ ತಾನು ಲೆಕ್ಚರರ್ ಆಗಬೇಕೆಂಬ ತನ್ನ ಆಸೆಯನ್ನು ಅಮ್ಮನ ಬಳಿ ತೋಡಿಕೊಂಡ. ಆದರೆ ಅವರು ಮಾತ್ರ ಜಾರ್ಜ್ ರನ್ನೇ ಸಮರ್ಥಿಸುತ್ತ, ಅವರು ಹೇಳಿದ್ದರಲ್ಲಿ ತಪ್ಪೇನಿದೆ ನಿನ್ನ ಒಳ್ಳೆಯದಕ್ಕೆ ಹೇಳುತ್ತಿದ್ದಾರೆ. ನಾಳೆ ನೀನು ಚೆನ್ನಾಗಿ ಬಾಳಿ ಬದುಕಬೇಕು ಎಂದು ಹೇಳುತ್ತಿದ್ದಾರೆಯೇ ಹೊರತು ನಿನಗೆ ಕೇಡು ಮಾಡಲು ಹೇಳುತ್ತಿಲ್ಲ. ನೀನಿನ್ನೂ ಚಿಕ್ಕವನು, ನಿನಗೆ ಏನೂ ತಿಳಿಯದು. ಈಗಿನ ಕಾಲದಲ್ಲಿ ಲೆಕ್ಚರರ್ ಆದರೆ ಬರುವ ಸಂಬಳ ತಿಂಗಳ ಖರ್ಚಿಗೆ ಸಾಲದು. ನನ್ನ ಗೆಳತಿಯರ ಮಕ್ಕಳೆಲ್ಲ ಒಂದೋ ಇಂಜಿನಿಯರಿಂಗ್ ಓದುತ್ತಿದ್ದಾರೆ ಇಲ್ಲವೇ ಡಾಕ್ಟರ್, ಅಂಥಾದ್ದರಲ್ಲಿ ನನ್ನ ಮಗ ಬಿ ಎ ಓದುತ್ತಿದ್ದಾನೆ ಎಂದರ ನನಗೆ ಮರ್ಯಾದೆ ಎಲ್ಲಿ ಇರುತ್ತೆ. ಸುಮ್ಮನೆ ಡ್ಯಾಡಿ ಹೇಳಿದ ಹಾಗೆ ಕೇಳು ಎಂದು ಬಿಟ್ಟರು. ಡೆನಿಸ್ ಮಾತ್ರ ಪಟ್ಟು ಬಿಡದೆ ಮಮ್ಮಿ, ನಂಗೆ ಇಂಜಿನೀಯರಿಂಗ್ ಕಷ್ಟವಾಗುತ್ತದೆ, ಮೆಡಿಕಲ್ ನನಗೆ ಇಷ್ಟವಿಲ್ಲ ಎಂದಾಗ, ಕಷ್ಟವಾದರೆ ಏನಂತೆ ಅದಕ್ಕೆ ಟ್ಯೂಶನ್ ಕೊಡಿಸೋಣ ಅದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡ ಸುಮ್ಮನೆ ಡ್ಯಾಡಿ ಏನು ಹೇಳುತ್ತಾರೋ ಅದನ್ನೇ ಓದು ಎಂದಾಗ ಡೆನಿಸ್ ಮಂಕಾಗಿ ಬಿಟ್ಟ. ಯಾಕೆ ಇವರು ಇಷ್ಟೊಂದು ಹಠ ಹಿಡಿಯುತ್ತಾರೆ, ಲೆಕ್ಚರರ್ ಕೆಲಸ ಮಾಡಿದರೆ ಮರ್ಯಾದೆ ಹೋಗುತ್ತದೆ ಎಂದು ಯಾರೂ ಲೆಕ್ಚರರ್ ಕೆಲಸ ಮಾಡದೇ ಇದ್ದರೆ ಮುಂದಿನ ಪೀಳಿಗೆಯವರಿಗೆ ಪಾಠ ಹೇಳಿಕೊಡುವವರು ಯಾರು ? ಎಲ್ಲರೂ ಇಂಜಿನೀಯರಿಂಗ್ ಮತ್ತು ಡಾಕ್ಟರ್ ಓದಲು ತೊಡಗಿದರೆ ಬೇರೆ ಕೆಲಸಗಳನ್ನೆಲ್ಲ ಮಾಡುವವರ್ಯಾರು? ಅದೂ ಅಲ್ಲದೆ ಈಗಾಗಲೇ ಅದೆಷ್ಟೋ ಜನ ಇಂಜಿನೀಯರಿಂಗ್ ಓದಿದವರಿಗೆ ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಸರಿಯಾದ ಕೆಲಸ ಸಿಗದೇ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಿರುವಾಗ ಇನ್ನಷ್ಟು ಜನ ಇಂಜಿನಿಯರಿಂಗ್ ಓದಿದರೆ ಅವರಿಗೆಲ್ಲ ಕೆಲಸ ಕೊಡುವವರಾರು, ಕೆಲಸ ಸಿಗದಾಗ ಇವರಿಗೆ ಮರ್ಯಾದೆ ಹೋಗುವುದಿಲ್ಲವೇ, ಯಾಕೆ ಎಲ್ಲರಿಗೂ ತಾನು ಬೇರೆಯವರಿಗಿಂತ ಭಿನ್ನವಾದದ್ದನ್ನೇ ಮಾಡಬೇಕು ಎಂದು ಅನಿಸುವುದಿಲ್ಲ ಎಲ್ಲರೂ ಕುರಿಗಳಂತೆ ಬೇರೆಯವರನ್ನು ಅನುಕರಣೆ ಯಾಕೆ ಮಾಡುತ್ತಾರೆ. ತಮ್ಮಲ್ಲಿನ ಪ್ರತಿಭೆಯನ್ನು ಮೂಲೆಗುಂಪಾಗಿಸಿ ಬರೀ ದುಡ್ಡು ಮಾಡುವ ಉದ್ದೇಶದಿಂದ ಎಲ್ಲರೂ ಯಾಕೆ ಒಂದೇ ತೆರನಾದ ಶಿಕ್ಷಣ ಪಡೆಯುತ್ತಿದ್ದಾರೆ. ತಾನಾದರೂ ಬೇರೆಯವರಿಗಿಂತ ಭಿನ್ನವಾಗಿರಬೇಕು ಎಂದು ಅದೆಷ್ಟು ಆಸೆ ಪಟ್ಟೆ. ಆದರೆ ಅಪ್ಪನ ಬೆದರಿಕೆಗೆ ಮಣಿಯಲೇ ಬೇಕಾದರೆ ತಾನೇನು ಮಾಡುವುದು ಎಂದು ಡೆನಿಸ್ ಚಿಂತಾಕ್ರಾಂತನಾದ.

ಕೆಲವು ದಿನಗಳು ಹೀಗೆ ಕಳೆಯಿತು ಒಂದು ದಿನ ಜಾರ್ಜ್, ಪ್ರಖ್ಯಾತ ಕಾಲೋಜೊಂದರ ಫಾರ್ಮ್ ತಂದು ಮಗನ ಕೈಗಿತ್ತು ಸಾಯನ್ಸ್ ಓದಲು ತೆಗೆದುಕೊಳ್ಳು ಎಂದು ಷರತ್ತು ವಿಧಿಸಿ ಅದನ್ನು ತುಂಬಿಸಿ ಕೊಡುವಂತೆ ಹೇಳಿದಾಗ ಡೆನಿಸ್ ಮನಸಿಲ್ಲದಿದ್ದರೂ ಅದನ್ನು ಭರ್ತಿ ಮಾಡಿ ಜಾರ್ಜ್ ಕೈಗಿತ್ತಾಗ ಮಗ ತಮ್ಮ ಮಾತು ಕೇಳಿದನಲ್ಲ ಎಂದು ಸಂತಸದಿಂದ ಅವನ ತಲೆ ನೇವರಿಸುತ್ತ ನಿನಗೆ ಏನೂ ತೊಂದರೆಯಾಗದಂತೆ  ನಾನು ನೋಡಿಕೊಳ್ಳುತ್ತೇನೆ, ನೀನು ಮನಸ್ಸಿಟ್ಟು ಓದಿದರೆ ಸಾಕು ಎಂದು ಹೇಳಿದರು. ಡೆನಿಸ್ ಗೆ ಮಾತ್ರ ಬಹಳ ಅಸಮಾಧಾನವಾಗಿತ್ತು ಆದರೆ ಅವನು ಅಸಹಯಾಕನಾಗಿದ್ದ. ಅಪ್ಪ ಅಮ್ಮನಿಲ್ಲದ ಬದುಕು ಅವನು ಊಹಿಸಲು ಅಸಾಧ್ಯ. ಅವರ ಜೀವಕ್ಕಿಂತ ತನ್ನ ಆಸೆ ದೊಡ್ಡದಲ್ಲ, ಅದಕ್ಕಾಗಿ ಜಾರ್ಜ್ ಹೇಳಿದ ಕಾಲೇಜಿಗೆ ಸೇರಿಕೊಂಡ. ಪಾಠಗಳು ಸುಲಭವಾಗಿ ಕಂಡಿದ್ದರಿಂದ ಡೆನಿಸ್ ಸ್ವಲ್ಪ ಸಮಯದಲ್ಲೇ ತನ್ನ ನೋವನ್ನು ಮರೆತ. ಉತ್ತಮ ಅಂಕಗಳೊಂದಿಗೆ ಅವನು ಆ ವರುಷ ತೇರ್ಗಡೆಯಾದಾಗ ಜಾರ್ಜ್ ನಿಟ್ಟಿಸಿರು ಬಿಟ್ಟಿದ್ದರು.ಅದರ ಜೊತೆ ಇಷ್ಟು ಬುದ್ಧಿವಂತನಾದ ಮಗನಿಗೆ ಇಂಜಿನೀಯರಿಂಗ್ ಓದಿಸುವ ಬದಲು ಮೆಡಿಕಲ್ ಓದಿಸಿದರೆ ಹೇಗೆ ನಮ್ಮ ಆಫೀಸಿನವರ ಮಕ್ಕಳೆಲ್ಲ ಇಂಜಿನೀಯರಿಂಗ್ ತಾನೇ ಮಾಡುವುದು ಎಂಬ ದುರಾಸೆ ಮೂಡತೊಡಗಿತು. ಅದಕ್ಕೆ ಸರಿಯಾಗಿ ಅವರ ಪತ್ನಿ ಲಿಂಡಾ ಕೂಡ ಅವರ ಆಸೆಗೆ ಸ್ಪಂದಿಸಿ ತನ್ನ ಹೆಚ್ಚಿನ ಗೆಳತಿಯರ ಮಕ್ಕಳೂ ಇಂಜಿನೀಯರಿಂಗ್ ಮಾಡುತ್ತಿದ್ದಾರೆ, ಹಾಗಾಗಿ ಅವನನ್ನು ಮೆಡಿಕಲ್ ಓದಿಸಿದರೆ ನಮಗೂ ಸ್ಟೇಟಸ್ ಬರುತ್ತದೆ ನಮ್ಮ ಮಗ ಡಾಕ್ಟ್ರು ಎನ್ನುವ ಹೆಮ್ಮೆ ನನ್ನದಾಗುತ್ತದೆ ಎಂದು ತಮ್ಮ ಆಸೆಯನ್ನೂ ವ್ಯಕ್ತ ಪಡಿಸಿದ್ದರಿಂದ ಜಾರ್ಜ್ ಗೆ ಮತ್ತಷ್ಟು ಸಂತೋಷವಾಯಿತು.

ಇಬ್ಬರೂ ಸೇರಿ ಮಗನಿಗೆ ಮೆಡಿಕಲ್ ಓದಿಸುವ ಇಚ್ಚೆಯನ್ನು ಡೆನಿಸ್ ಬಳಿ ಹೇಳಿಕೊಂಡಾಗ ಅವನಿಗೆ ಆಕಾಶವೇ ಕಳಚಿ ಮೈ ಮೇಲೆ ಬಿದ್ದ ಹಾಗಾಯಿತು. ಯಾಕಮ್ಮ ನಿಮಗೆ ನಾನು ಮೆಡಿಕಲ್ ಓದಬೇಕೆಂದು ಆಸೆ, ನನ್ನ ಆಸೆಗೆ ಬೆಲೆಯೇ ಇಲ್ಲವೇ ? ನಿಮ್ಮ ಅಪ್ಪ ಅಮ್ಮಂದಿರು ನಿಮ್ಮ ಮೇಲೆ ಅವರ ಆಸೆಯನ್ನು ಹೇರಿದ್ದರಾ, ನೀವು ನಿಮಗಿಷ್ಟ ಬಂದುದನ್ನು ಕಲಿಯಲಿಲ್ಲವೇ ಎಂದು ಪ್ರಶ್ನಿಸಿದಾಗ ಜಾರ್ಜ್, ಅವರು ನಮ್ಮ ಮೇಲೆ ಒತ್ತಡ ಹೇರದೆ ಇದ್ದುದರಿಂದಲೇ ನಾವು ಜೀವನದಲ್ಲಿ ಮೇಲೇರಲು ಬಹಳಷ್ಟು ಕಷ್ಟ ಪಡಬೇಕಾಯಿತು. ನಾವು ಪಟ್ಟ ಕಷ್ಟ ನಿನಗೆ ಬೇಡ ಎಂದು ನಾವು ನಿನಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತಿದ್ದೇವೆ. ಅದಕ್ಕೆ ನೀನು ಸ್ವಲ್ಪ ಸಹಕರಿಸಿದರೆ ನಿನ್ನ ಭವಿಷ್ಯವೇ ಒಳ್ಳೆಯದಾಗುವುದು ಮುಂದೆ ನೀನೆ ಹೇಳುತ್ತಿಯಾ ಅಪ್ಪ ಅಮ್ಮ ಒತ್ತಡ ಹೇರಿದ್ದರಿಂದಲೇ ನಾನೀಗ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂದು. ಡೆನಿಸ್, ಆದರೆ ಡ್ಯಾಡಿ, ನನಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಆಸೆ ಇದೆಯೇ ಹೊರತು ದುಡ್ಡು ಸಂಪತ್ತು ಎಲ್ಲ ಬೇಡ. ಅದೆಲ್ಲ ನೀವು ಆಗಲೇ ಮಾಡುತ್ತಿದ್ದೀರಲ್ಲ. ನನಗೆ ಮಕ್ಕಳಿಗೆ ಒಳ್ಳೆಯ ಪಾಠ ಹೇಳುತ್ತಾ ಅವರ ಜೀವನಕ್ಕೆ ಒಳ್ಳೆಯ ಮಾರ್ಗದರ್ಶನ ಜೊತೆಗೆ ನಮ್ಮ ಸಂಸ್ಕೃತಿ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕೆಂದು ಆಸೆ ಅಷ್ಟೇ, ಅದನ್ನಾದರೂ ಮಾಡಲು ಬಿಡಿ ಎಂದು ಡೆನಿಸ್ ಗೋಗರೆದರೂ ಜಾರ್ಜ್ ಮತ್ತು ಲಿಂಡಾ ನಿಂಗೆ ನಾವು ಎಷ್ಟೇ ಹೇಳಿದರೂ ಅರ್ಥವಾಗುವುದಿಲ್ಲ ಯಾಕೆಂದರೆ ನಿಂಗೆ ಲೋಕ ಜ್ಞಾನ ಕಡಿಮೆ, ಮುಂದೆ ನಿನಗೆ ಎಲ್ಲ ಅರ್ಥವಾಗುತ್ತದೆ, ಈಗ ನಾವು ಹೇಳಿದಂತೆ ನೀನು ಕೇಳಲೇ ಬೇಕು ಎಂದು ಪಟ್ಟು ಹಿಡಿದು ಕುಳಿತರು.

ಡೆನಿಸ್ ಗೆ ತನ್ನ ಬದುಕು ಅಂಧಕಾರಮಯವಾದಂತೆ ಅನಿಸಿತು. ಅಪ್ಪ ಅಮ್ಮ ಯಾಕೆ ಹಣಕ್ಕಿಷ್ಟು ಮಹತ್ವ ಕೊಡುತ್ತಾರೆ. ನಾಳೆ ನಾನು ಇಂಜಿನಿಯರಿಗ್ ಅಥವಾ ಮೆಡಿಕಲ್ ಕಷ್ಟ ಪಟ್ಟು ಮಾಡಿದರೂ ಸರಿಯಾದ ಕೆಲಸ ಸಿಗುತ್ತದೆ ಎಂದು ಏನು ಖಾತರಿ. ಉತ್ತಮ ಅಂಕಗಳು ಸಿಗದೇ ಅಥವಾ ಫೈಲಾಗಿ ಬಿಟ್ಟರೆ ಓದಿಸಲು ಮಾಡಿದ ಖರ್ಚು ಪೋಲಾದಂತೆ ಅಲ್ಲವೇ. ಬಲವಂತದ ವಿದ್ಯೆಗಿಂತ ಆಸಕ್ತಿಯಿಂದ ಓದಿದ ವಿದ್ಯೆಗೆ ಬೆಲೆ ಇರುವುದು. ಸುಮ್ಮನೆ ಬಾಯಿಪಾಠ ಮಾಡಿ ಓದಿ ಉತ್ತಮ ಅಂಕಗಳನ್ನು ಗಳಿಸಿದರೆ ಏನೂ ಪ್ರಯೋಜನ, ಅದರಿಂದ ಮುಂದೆ ನಾವು ಮಾಡುವ ಕೆಲಸ ಮಾಡಲು ನಮಗೇ ಕಷ್ಟ ವಾಗುತ್ತದೆ. ಇದೆಲ್ಲ ಅಪ್ಪ ಅಮ್ಮನಿಗೆ ಯಾಕೆ ತಿಳಿಯುತ್ತಿಲ್ಲ, ನಾನೇನು ಮಾಡಲಿ ಈಗ ?ಅಪ್ಪ ಅಮ್ಮನಿಗೆ ಹೇಗೆ ಬುದ್ದಿ ಹೇಳಲಿ ?, ಹೇಳಿದರೂ ಅವರು ತಮ್ಮ ಹಠ ಬಿಡುತ್ತಾರೆಯೇ ಎಂದೆಲ್ಲ ಯೋಚಿಸುತ್ತ ಡೆನಿಸ್ ದಿನೇ ದಿನೇ ಮಂಕಾಗುತ್ತ ಬಂದ. ಕಾಲೇಜು, ಟ್ಯೂಶನ್, ಸಿ ಇ ಟಿ ಎಂದೆಲ್ಲ ನಿರಂತರ ಮಾನಸಿಕ ಶ್ರಮದಂದ ಡೆನಿಸ್ ಜರ್ಜರಿತನಾಗಿ ಬಿಟ್ಟ. ಅವನಿಗೆ ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಿತು. ಪರಿಣಾಮ ಎರಡನೇ ವರುಷದ ಮಧ್ಯಂತರ ಪರೀಕ್ಷೆಯಲ್ಲಿ ಅವನು ತೀರ ಕಡಿಮೆ ಅಂಕಗಳನ್ನು ಗಳಿಸಿದ. ಇದನ್ನು ನೋಡಿ ಅವನ ತಂದೆ ತಾಯಿ ಹೌಹಾರಿ ಬಿಟ್ಟರು. ಹೀಗಾದರೆ ತಮ್ಮ ಮಗ ಮೆಡಿಕಲ್ ಅಲ್ಲ ಇಂಜಿನಿಯರಿಂಗ್ ಶಿಕ್ಷಣ ಕೂಡ ಪಡೆಯುವುದು ಕನಸೇ ಸರಿ ಎಂದುಕೊಂಡರು. ಆದ್ದರಿಂದ ಡೆನಿಸ್ ಮೇಲೆ ಮತ್ತಷ್ಟು ಒತ್ತಡ ಹೇರತೊಡಗಿದರು. ಜಾರ್ಜ್ ಅಂತೂ ಮಗ ಬೇಕೆಂದೇ ತಮ್ಮ ಮೇಲಿನ ಹಠದಿಂದ ಹೀಗೆಲ್ಲ ಮಾಡಿ ಮರ್ಯಾದೆ ಕಳೆಯಲು ನೋಡುತ್ತಿದ್ದಾನೆ ಎಂದುಕೊಂಡು ಅವನಿಗೆ ಉತ್ತಮ ಅಂಕಗಳನ್ನು ಗಳಿಸದಿದ್ದರೆ ಅವನನ್ನು ಮನೆಯಿಂದ ಹೊರಹಾಕುವುದಾಗಿ ಎಚ್ಚರಿಸಿದರು. ತಾವು ಇದುವರೆಗೂ ಮಗನ ಸಂತೋಷಕ್ಕೆ ಆಡ್ಡಿ ಬಂದಿಲ್ಲ. ಆದ್ದರಿಂದ ನಮ್ಮ ಒಂದು ಆಸೆಯನ್ನು ಈಡೇರಿಸುವುದು ಅವನ ಕರ್ತವ್ಯ ಎಂದು ಅವರಿಗೆ ಅನಿಸತೊಡಗಿ ಅವನು ಮಂಕಾಗುತ್ತ ಬಂದಿದ್ದು, ಯಾರೊಡನೆಯೂ ಮಾತನಾಡದೆ ರೂಮು ಸೇರಿಕೊಳ್ಳುತ್ತಿದ್ದುದು, ಖಿನ್ನತೆಗೆ ಒಳಗಾಗಿದ್ದು ಯಾವುದೂ ಗೋಚರಿಸಲೇ ಇಲ್ಲ. ಲಿಂಡಾ, ಮಗ ಯಾರೊಂದಿಗೂ ಮಾತನಾಡದೆ ಮಗ ರೂಮು ಸೇರಿಕೊಳ್ಳುತ್ತಿದ್ದುದನ್ನು ನೋಡಿ ತಮ್ಮ ಬೆದರಿಕೆಯ ಬಿಸಿ ತಟ್ಟಿದೆ ಎಂದುಕೊಂಡು ನಿರಾಳವಾದರು.

ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಡೆನಿಸ್ ಗೆ ಭಯದಿಂದ ಕೈ ಕಾಲು ನಡುಗಲು ಶುರುವಾಗತೊಡಗಿತು. ಇದರಿಂದ ಓದಿದ್ದೆಲ್ಲ ಮರೆತು ಹೋಗತೊಡಗಿತು. ಹಗಲು ರಾತ್ರಿ ಎನ್ನದೆ ಓದಿದರೂ ತಲೆಗೆ ಮಾತ್ರ ಯಾವುದೂ ಹತ್ತಲಿಲ್ಲ, ಜೊತೆಗೆ ಡ್ಯಾಡಿ ಕಡಿಮೆ ಅಂಕ ಬಂದರೆ ಮನೆಯಿಂದ ಹೊರ ಹಾಕುತ್ತೇನೆ ಎಂದು ಹಾಕಿದ ಬೆದರಿಕೆ ಅವನನ್ನು ಕಂಗಾಲಾಗಿ ಮಾಡಿ ಬಿಟ್ಟಿತು. ಇದೆಲ್ಲದರಿಂದ ಹತಾಶೆಗೊಂಡು ಮಾನಸಿಕ ಒತ್ತಡ ತಾಳಲಾಗದೆ ಹುಚ್ಚನಂತಾದ. ಇನ್ನು ತನಗೆ ಸಾವು ಒಂದೇ ದಾರಿ ಇದೆಲ್ಲದರಿಂದ ಮುಕ್ತಿ ಪಡೆಯಲು, ತಾನು ಬದುಕಿದ್ದರೆ ತನ್ನ ಆಸೆ ಆಸಕ್ತಿಗಳನ್ನೆಲ್ಲ ಕೊಂದು ಅವರಿಗಾಗಿ ಬದುಕ ಬೇಕಾಗುತ್ತದೆ, ಇದರಿಂದ ತನಗೆ ಮಾನಸಿಕ ಸಮಾಧಾನ ಇರುವುದಿಲ್ಲ ಜೊತೆಗೆ ಕೆಲಸದಲ್ಲೂ ಬಹಳ ಕಷ್ಟ ಪಡಬೇಕಾಗುತ್ತದೆ ಹಾಗಾಗಿ ಇಂತಹ ಬದುಕಿಗಿಂತ ಸಾವೇ ಲೇಸು, ತಾನು ಪರೀಕ್ಷೆಯಲ್ಲಿ ಫೈಲಾದರೆ ಮಮ್ಮಿ ಡ್ಯಾಡಿಯ ಮರ್ಯಾದೆ ಹೋಗುತ್ತದೆ. ತಾನಂತೂ ಸಧ್ಯದ ಪರಿಸ್ಥಿತಿಯಲ್ಲಿ ಖಂಡಿತ ಪಾಸಾಗುವುದಿಲ್ಲ ಎಂದುಕೊಂಡು ನಿರಾಶನಾಗಿ ಪರೀಕ್ಷೆಯ ಮುನ್ನಾದಿನ ರಾತ್ರಿ ಡೆನಿಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಇವತ್ತು ಪರೀಕ್ಷೆಯಾದರೂ ಮಗ ಇನ್ನು ಎದ್ದಿಲ್ಲ ಯಾಕೆ ಎಂದು ಲಿಂಡಾ ಅವನ ರೂಮಿನ ಬಾಗಿಲು ತಟ್ಟಿದಾಗ ಬಾಗಿಲು ಚಿಲಕ ಹಾಕದ್ದರಿಂದ ತೆರೆದುಕೊಂಡಿತು. ಅಲ್ಲಿನ ದ್ರಶ್ಯ ಕಂಡು ಲಿಂಡಾ ಕಿಟಾರನೆ ಕಿರುಚಿದರು. ಅವರ ಕಿರುಚಾಟ ಕೇಳಿ ಜಾರ್ಜ್ ಎದ್ದು ಓಡೋಡಿ ಬಂದು ನೋಡಿದಾಗ ಡೆನಿಸ್ ಫ್ಯಾನ್ ಗೆ ನಿರ್ಜೀವವಾಗಿ ನೇತಾಡುತ್ತಿದ್ದುದನ್ನು ಕಂಡು ಅಲ್ಲೇ ಕುಸಿದರು. ಮಗನ ರೂಮಿನಲ್ಲಿ ಪತ್ರವೊಂದು ಸಿಕ್ಕಿ ಡ್ಯಾಡಿ ಮಮ್ಮಿ ನಿಮ್ಮ ಆಸೆ ನೆರವೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದ. ಇದು ಜಾರ್ಜ್ ಗೆ ಆಘಾತವಾಯಿತು, ಜೊತೆಗೆ ಮಗನ ಮಾನಸಿಕ ತುಮುಲದ ಅರಿವೂ ಆಯಿತು, ತಾವು ಅವನಿಗೆ ಇಷ್ಟೊಂದು ಒತ್ತಡ ಹೇರಬಾರದಿತ್ತು. ಅವನ ಆಸೆಯಂತೆ ಬಿ.ಎ ಓದಲು ಬಿಟ್ಟಿದ್ದರೆ ನಮ್ಮ ಮಗ ಇವತ್ತು ಬದುಕಿರುತ್ತಿದ್ದ ಎಂದು ರೋಧಿಸತೊದಗಿದರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು ಆದರೆ ತುಂಬಾ ತಡವಾಗಿ ಬಿಟ್ಟಿತ್ತು. ಅವರ ಸ್ವಾರ್ಥಕ್ಕೆ ಮಗ ಡೆನಿಸ್ ಬಲಿಯಾಗಿ ಬಿಟ್ಟ. ನಾವು ನಮ್ಮ ಸುಖ ಸಂತೋಷಗಳಿಗಾಗಿ ಬದುಕಬೇಕೆ ಹೊರತು ಪೊಳ್ಳು ಸ್ಥಾನ ಮಾನ ಗೌರವ ಇತ್ಯಾದಿಗಳಿಗಾಗಿ ತಮ್ಮ ಸುಖ ಸಂತೋಷಗಳನ್ನು ಬಲಿಕೊಡಬಾರದು ಎಂದು ಜಾರ್ಜ್ ಹಾಗೂ ಲಿಂಡಾಗೆ ಬದುಕು ಎಂದಿಗೂ ಮರೆಯಲಾಗದ ಪಾಠ ಕಲಿಸಿ ಬಿಟ್ಟಿತ್ತು.

ಪರಮೇಶನ ಆತ್ಮಹತ್ಯೆ

ಪರಮೇಶ ಬೆಳಿಗ್ಗೆ ಏಳು ಗಂಟೆಗೆ ಎಂದಿನಂತೆ ತನ್ನ ಗದ್ದೆ ಕಡೆ ನಡೆದಾಗ ಅವನ ಇನ್ನೊಂದು ಪಕ್ಕದ ಜಮೀನಿನ ವೆಂಕಪ್ಪ ಓಡುತ್ತ ಬಂದು ನಿನ್ನೆ ರಾತ್ರಿ ಯಾರೋ ಕಳ್ಳರು ನುಗ್ಗಿ ನಿಮ್ಮ ಪೈರನ್ನು ಹಾಳು ಮಾಡಲು ಬಂದಿದ್ದರು. ನಾನು ನನ್ನ ನಾಡಕೋವಿಯಿಂದ ಗುಂಡು ಹಾರಿಸಿದ ಮೇಲೆ ಅವರೆಲ್ಲ ಓಡಿಹೋದರು ಎಂದಾಗ ಪರಮೇಶ ನಿಟ್ಟುಸಿರು ಬಿಟ್ಟು ಅವನಿಗೆ ಧನ್ಯವಾದ ತಿಳಿಸಿ ಯಾಕೋ ಇತ್ತೀಚೆಗೆ ತನ್ನ ಗದ್ದೆಗೆ ಕಳ್ಳತನಕ್ಕೆ ಬರುವುದು ಜಾಸ್ತಿಯಾಗಿದೆ ಇದಕ್ಕೆ ಏನಾದರೂ ಮಾಡಬೇಕು ಎಂದುಕೊಳ್ಳುತ್ತ ತನ್ನ ಗದ್ದೆಯತ್ತ ಕಣ್ಣು ಹಾಯಿಸಿದ. ಪೈರುಗಳೆಲ್ಲ ಸುಸ್ಥಿತಿ ಯಲ್ಲಿ ಇದ್ದುದ್ದು ಕಂಡು, ವೆಂಕಪ್ಪ ಇದ್ದಿದ್ದರಿಂದ ಪೈರುಗಳು ಉಳಿದವು, ಇವತ್ತಿನಿಂದ ತಾನು ರಾತ್ರಿ ಹೊತ್ತು ಗದ್ದೆಯನ್ನು ಕಾಯಬೇಕು ಎಂದುಕೊಳ್ಳುತ್ತ ಮುಂದೆ ನಡೆದ. ಪರಮೇಶನಿಗೆ ಮೂರೆಕರೆ ಜಮೀನು ಇದ್ದು ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದ. ಅವನ ಹೆಂಡತಿ ಅವನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಳು. ಪರಮೇಶನ ಇಬ್ಬರು ಹೆಣ್ಣು ಮಕ್ಕಳೂ ಶಾಲೆಯಿಂದ ಮನೆಗೆ ಬಂದ ಮೇಲೆ ಅವನ ಹೊಲದಲ್ಲಿ ದುಡಿಯುತ್ತಿದ್ದರು. ಪರಮೇಶನ ಹೊಲದಲ್ಲಿನ ಕಳ್ಳತನಕ್ಕೆ ಕಾರಣ ಇನ್ನೊಂದು ಬದಿಯ ಜಮೀನಿನ ನೀಲೇಶ , ಆತನಿಗೆ ಪರಮೇಶ ಇಷ್ಟೊಂದು ಅಭಿವೃದ್ಧಿ ಗೊಂಡದ್ದು ಹೊಟ್ಟೆಯುರಿ ತಂದಿತ್ತು. ಮೊದಲು ಪರಮೇಶನ ಜಮೀನು ಕೂಡ ನೀಲೇಶನ ಜಮೀನಿನಂತೆ ಹಾಳು ಬಿದ್ದಿದ್ದವು. ಕೃಷಿ ಇಲಾಖೆಯವರು ಬಂದು ರೈತರನ್ನೆಲ್ಲ ಸಭೆ ಸೇರಿಸಿ ಪೈರನ್ನು ಹೇಗೆ ಬೆಳೆಸಬೇಕು, ಯಾವ ಗೊಬ್ಬರಗಳನ್ನೆಲ್ಲ ಹಾಕಬೇಕು, ಎಂತಹ ಕೀಟನಾಶಕಗಳನ್ನು ಬಳಸಿದರೆ ಉತ್ತಮ, ತಮ್ಮ ಮಾರ್ಗದರ್ಶನದಲ್ಲಿ ರೈತರು ಬೆಳೆಗಳನ್ನು ಬೆಳೆದದ್ದೇ ಆದರೆ ಪೈರುಗಳು ಚೆನ್ನಾಗಿ ಬೆಳೆದು ಉತ್ತಮ ಫಸಲು ಕೊಡುವುದರಲ್ಲಿ ಸಂಶಯವಿಲ್ಲ, ತಾವು ಕೃಷಿ ಉಪಕರಣಗಳನ್ನು ಬಾಡಿಗೆ ಕೊಡುವ ವಿಚಾರವನ್ನೆಲ್ಲ ಹೇಳಿದಾಗ ಪರಮೇಶನಿಗೆ ತನ್ನ ಗದ್ದೆಯನ್ನು ಚೆನ್ನಾಗಿ ಉಳಬೇಕು ಎಂದು ಎಲ್ಲಿಲ್ಲದ ಹುಮ್ಮಸ್ಸು ಬಂದಿತು. ಆಗಾಗ ಕೃಷಿ ಇಲಾಖೆಯವರ ಸಹಾಯ ಪಡೆಯುತ್ತಾ ಬೆಳೆದ ಪೈರು ಉತ್ತಮವಾಗಿ ಬೆಳೆದು ಕೈತುಂಬಾ ಲಾಭ ತಂದಾಗ ಅವನ ಉತ್ಸಾಹ ಇನ್ನೂ ಜಾಸ್ತಿಯಾಗಿ ಬಿಟ್ಟಿತು. ಅವನ ಕೆಲಸಗಳಲ್ಲಿ ಜಾನಕಿಯೂ ಕೈ ಜೋಡಿಸಿದ್ದರಿಂದ ಜಮೀನು ಇನ್ನಷ್ಟು ಅಭಿವೃದ್ಧಿ ಗೊಂಡಿತು. ಕೃಷಿ ಇಲಾಖೆಯವರೂ ಇವನ ಉತ್ಸಾಹಕ್ಕೆ ಸ್ಪಂದಿಸಿ ಅವನಿಗೆ ಬೇಕಾದ ಎಲ್ಲ ಸಹಾಯವನ್ನು ಮುಕ್ತ ಮನಸ್ಸಿನಿಂದ ಮಾಡಿ ಕೊಟ್ಟರು. ತಮ್ಮಿಬ್ಬರೂ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ಸರಕಾರೀ ಕೆಲಸಕ್ಕೆ ಸೇರುವಂತೆ ಮಾಡಬೇಕು ಎಂದು ಪರಮೇಶ ಕನಸು ಕಂಡ. ಪರಮೇಶನ ಈ ಮಟ್ಟದ ಬೆಳವಣಿಗೆ ನೀಲೇಶನಿಗೆ ರುಚಿಸಲಿಲ್ಲ ಕಾರಣ ಅವನ ಹೆಂಡತಿ ಅವನನ್ನು ಪರಮೇಶನ ಜೊತೆ ಹೋಲಿಸಿ ಯಾವಾಗಲೂ ಮೂದಲಿಸುತ್ತಿದ್ದಳು. ನೀಲೇಶನಿಗೆ ಕೃಷಿ ಇಲಾಖೆಯವರು ಬಂದು ಅಷ್ಟೆಲ್ಲ ಮಾಹಿತಿ ನೀಡಿದರೂ ಅವನು ಅದನ್ನು ಉಪಯೋಗಿಸಲು ಅವನ ಆಲಸ್ಯ ಬಿಡಲಿಲ್ಲ. ಪರಿಣಾಮ ಪೈರುಗಳು ಸರಿಯಾಗಿ ಬೆಳೆಯದೆ ಮೈತುಂಬಾ ಸಾಲ ಮಾಡಿಕೊಂಡಿದ್ದ. ಕುಡಿಯುವುದು ಜೂಜಾಟ ಇತ್ಯಾದಿ ದುರಭ್ಯಾಸಗಳೂ ಅವನಿಗೆ ಅಂಟಿಕೊಂಡಿದ್ದವು.

ವರುಷಗಳು ಉರುಳಿದಂತೆ ಪರಮೇಶ ಅಕ್ಕ ಪಕ್ಕದ ಹಳ್ಳಿಗಳಿಗೆಲ್ಲ ಮಾದರಿ ರೈತನಾಗಿ ಬೆಳೆದು ಬಿಟ್ಟ. ಅವನ ಹೊಲವನ್ನು ನೋಡಲು ಅದೆಷ್ಟೋ ರೈತರು ಬರುತ್ತಿದ್ದರು. ಪರಮೇಶ ಅವರಿಗೆ ಬೇಕಾದ ಮಾಹಿತಿಗಳನ್ನೆಲ್ಲ ನೀಡಿ ಅವರಲ್ಲಿ ಉತ್ಸಾಹ ತುಂಬುತ್ತಿದ್ದ. ಪರಮೇಶ ನ ಅಭಿವೃದ್ಧಿ ಜನಪ್ರಿಯತೆ ಕಂಡು ನೀಲೇಶನ ಕಣ್ಣು ಕೆಂಪಗಾಗತೊಡಗಿತು. ಅವನ ಬೆಳೆಗಳನ್ನು ಸರ್ವನಾಶ ಮಾಡಬೇಕೆಂದು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅವೆಲ್ಲ ನಿಷ್ಫಲವಾಗಿದ್ದವು. ಆದರೂ ಅವನು ತನ್ನ ಪ್ರಯತ್ನಗಳೆಲ್ಲ ಬಿಡದೆ ಮುಂದುವರೆಸಿದ್ದ. ಆ ವರ್ಷ ವಿಪರೀತ ಮಳೆ ಬಂದು ನೀಲೇಶನ ಗದ್ದೆ ತುಂಬಾ ನೀರು ನಿಂತಾಗ ಅವನು ಇದೇ ತಕ್ಕ ಸಮಯ ವೆಂದು ತನ್ನ ಗದ್ದೆಯ ನೀರನ್ನೆಲ್ಲ ಪರಮೇಶನ ಜಮೀನಿಗೆ ಹೋಗುವಂತೆ ಮಾಡಿದ. ಇದರಿಂದ ಪರಮೇಶ ಸಿಟ್ಟಾದರೂ ಚಾಕಚಕ್ಯತೆಯಿಂದ ತನ್ನ ಗದ್ದೆಗೆ ಬಂದ ನೀರನ್ನೆಲ್ಲ ತನ್ನ ಜಮೀನಿನಲ್ಲಿದ್ದ ನೀರಿಲ್ಲದ ಬಾವಿಗೆ ಹಾಯಿಸಿದ. ಎರಡೇ ದಿನಗಳಲ್ಲಿ ಗದ್ದೆಗಳ ನೀರೆಲ್ಲ ಹೋಗಿ ಬಾವಿಯಲ್ಲಿ ಸಾಕಷ್ಟು ನೀರು ತುಂಬಿದಾಗ ಪರಮೇಶನಿಗೆ ಸಂತಸವಾಯಿತು. ಇದನ್ನು ನೋಡಿ ನೀಲೇಶ ಇಂಗುತಿಂದ ಮಂಗನಂತಾದ. ತಾನೇನೇ ಕೆಟ್ಟದು ಮಾಡಲು ನೋಡಿದರೂ ಪರಮೇಶನಿಗೆ ಅದರಿಂದ ಒಳ್ಳೆಯದೇ ಆಗುತ್ತದಲ್ಲ ಎಂದು ಚಿಂತೆಗೀಡಾದ. ಕೆಲವರಿಗೆ ದುಡ್ಡು ಕೊಟ್ಟು ಪರಮೇಶನ ಬೆಳೆದ ಪೈರುಗಳನ್ನು ಕದ್ದೊಯ್ಯಲು ಕಳುಹಿಸಿದರೆ ವೆಂಕಪ್ಪ ಅವರನ್ನು ಓಡಿಸಿ ಬಿಟ್ಟ. ತಾನು ಹೊರಗಿನಿಂದ ಏನೇ ಮಾಡಿದರೂ ಫಲಿತವಾಗದ್ದು ಕಂಡು ಒಳಗಿನಿಂದಲೇ ಅವನನ್ನು ಟೊಳ್ಳು ಮಾಡಬೇಕು ಎಂದು ಹಠ ತೊಟ್ಟು ಅವನ ಸ್ನೇಹ ಬೆಳೆಸಿ ಅವನಿಗೆ ದುರಭ್ಯಾಸ ಕಲಿಸಿ ಅವನನ್ನು ನಾಶ ಮಾಡಬೇಕೆಂದು ನಿಶ್ಚಯಿಸಿದ. ಮರುದಿನ ಪರಮೇಶ ಗದ್ದೆಗೆ ಬಂದಾಗ ಅವನಿಗಾಗಿ ಕಾದು ಕುಳಿತ ನೀಲೇಶ ಪರಮೇಶನ ಕಾಲಿಗೆ ಬಿದ್ದು ತನ್ನ ತಪ್ಪೆಲ್ಲ ಮನ್ನಿಸಿ ತನಗೂ ಅವನಂತೆ ಉತ್ತಮ ಪೈರು ಬೆಳೆಯಲು ಸಹಾಯ ಮಾಡೆಂದು ಗೋಗರೆಯುವ ನಾಟಕ ಮಾಡಿದ. ಅವನ ಕಣ್ಣೀರು ಕಂಡು ನಿಜವೆಂದೇ ತಿಳಿದು ಪರಮೇಶ ಭಾವುಕನಾಗಿ ಅವನನ್ನು ಕ್ಷಮಿಸಿದ. ಅಂದಿನಿಂದ ಅವರಿಬ್ಬರೂ ಗೆಳೆಯರಾದರು. ಆದರೆ ಜಾನಕಿಗೆ ತನ್ನ ಗಂಡ ನೀಲೇಶನ ಜೊತೆ ಸ್ನೇಹ ಬೆಳೆಸಿದ್ದು ಇಷ್ಟವಾಗಲಿಲ್ಲ, ತಮಗೆಷ್ಟೋ ಕೆಟ್ಟದ್ದನ್ನು ಮಾಡಿದವನನ್ನು ತನ್ನ ಗಂಡ ಕ್ಷಮಿಸಬಾರದಿತ್ತು, ಅವನೇನಿದ್ದರೂ ನಾಗರ ಹಾವಿನಂತೆ, ಯಾವಾಗ ಏನು ಮಾಡುತ್ತಾನೋ ತಿಳಿಯದು ಎಂದು ಗಂಡನಿಗೆ ಬುದ್ಧಿವಾದ ಹೇಳಿದಳು. ಆದರೆ ಅವನು, ಮನುಷ್ಯರು ತಪ್ಪು ಮಾಡುವುದು ಸಹಜ ಆದರೆ ಅವನಿಗೆ ಆ ಬಗ್ಗೆ ಪಶ್ಚಾತ್ತಾಪ ಮೂಡಿದರೆ ತಾವು ಅದನ್ನು ಕ್ಷಮಿಸಿ ಅವನನ್ನು ಸರಿದಾರಿಗೆ ತರಲು ಶ್ರಮಿಸಬೇಕು ಎಂದು ಹೇಳಿ ಅವಳ ಬಾಯಿ ಮುಚ್ಚಿಸಿ ಬಿಟ್ಟ. ದಿನಕಳೆದಂತೆ ಪರಮೇಶ ಮತ್ತು ನೀಲೇಶನ ಸ್ನೇಹ ಗಾಢವಾಗತೊಡಗಿತು. ವೆಂಕಪ್ಪನೂ, ಅವನ ಸ್ನೇಹ ಮಾಡಬೇಡ, ಬೀದಿಗೆ ಬರುತ್ತಿಯಾ ಎಂದು ಎಷ್ಟೇ ಹೇಳಿದರೂ ಕೇಡುಗಾಲಕ್ಕೆ ಕೆಟ್ಟ ಬುದ್ಧಿ ಎಂಬಂತೆ ಪರಮೇಶ ಅವನ ಮಾತಿಗೆ ಕಿವಿಗೊಡಲಿಲ್ಲ.

ಆ ವರ್ಷ ಬಂಪರ್ ಬೆಳೆ ಬಂದಿದೆ ಎಂದು ಪರಮೇಶ ನೀಲೇಶನಿಗೆ ಹೇಳಿದಾಗ ಅವನಿಗೆ ಹೊಟ್ಟೆ ಉರಿದರೂ ಮೇಲೆ ಮಾತ್ರ ತೋರಿಸಿಕೊಳ್ಳದೆ ಈ ಸಂತೋಷವನ್ನು ಆಚರಿಸೋಣ ಎಂದು ಅವನನ್ನು ಒತ್ತಾಯದಿಂದ ಸಾರಾಯಿ ಅಂಗಡಿಗೆ ಕರೆದುಕೊಂಡು ಹೋದ. ಶರಾಬು ಕುಡಿಯಲು ಪರಮೇಶ ಒಪ್ಪದಿದ್ದರೂ ನೀಲೇಶ ಬಲವಂತ ಮಾಡಿ ತನ್ನ ಖರ್ಚಿನಲ್ಲೇ ಅವನಿಗೆ ಚೆನ್ನಾಗಿ ಕುಡಿಸಿದ. ಅಂದಿನಿಂದ ಶುರುವಾದ ಕುಡಿತ ಕ್ರಮೇಣ ದಿನವೂ ನೀಲೇಶನ ಜೊತೆ ಶರಾಬು ಕುಡಿಯಲು ಹೋಗುವಷ್ಟರ ಮಟ್ಟಿಗೆ ಅಭ್ಯಾಸವಾಯಿತು. ಪರಮೇಶ ಅಲ್ಲಿಂದ ನೇರವಾಗಿ ಗದ್ದೆಯನ್ನು ಕಾಯಲು ಹೋಗುತ್ತಿದುದರಿಂದ ಅವನು ಕುಡಿಯುವುದು ಜಾನಕಿಗೆ ತಿಳಿದಿರಲಿಲ್ಲ. ಪೈರುಗಳನ್ನೆಲ್ಲ ಮನೆಗೆ ಸಾಗಿಸಿದ ಮೇಲೆ ಪರಮೇಶನಿಗೆ ಗದ್ದೆ ಕಾಯುವ ಕೆಲಸ ಇಲ್ಲವಾಗಿ ಕುಡಿದು ನೇರವಾಗಿ ಮನೆಗೆ ಬರತೊಡಗಿದ. ಒಂದೆರಡು ದಿನ ಸುಮ್ಮನಿದ್ದ ಜಾನಕಿ ದಿನವೂ ಗಂಡ ಕುಡಿದು ಬರತೊಡಗಿದಾಗ ಗಂಡನ ಕುಡಿತದ ಚಟ ನೋಡಿ ಜಾನಕಿ ಹೌ ಹಾರಿ ಬಿದ್ದಳು. ಅವನನ್ನು ಪರಿಪರಿಯಾಗಿ ಬೇಡಿಕೊಂಡು ಕುಡಿತದ ಚಟ ಬಿಡಿಸಲು ನೋಡಿದರೂ ಅವಳ ಪ್ರಯತ್ನಗಳೆಲ್ಲ ಮಣ್ಣು ಪಾಲಾದವು. ಇದಕ್ಕೆ ಕಾರಣನಾದ ನೀಲೇಶನಿಗೆ ಜಾನಕಿ ಮನಸಾರೆ ಶಾಪ ಹಾಕಿದಳು. ಅದೂ ಸಾಲದು ಎಂಬಂತೆ ಗಂಡ ಜೂಜಾಡಲೂ ತೊಡಗಿದ್ದು ಜನರಿಂದ ತಿಳಿದು ಜಾನಕಿಗೆ ಆಘಾತವಾಯಿತು. ಇವನನ್ನು ಹೀಗೆ ಬಿಟ್ಟರೆ ತಾವು ಸರ್ವನಾಶವಾಗುವುದು ಖಂಡಿತ, ತಮ್ಮ ಇಬ್ಬರು ಬೆಳೆದ ಹೆಣ್ಣುಮಕ್ಕಳ ಗತಿಯೇನು ಎಂದುಕೊಂಡು ಊರಜನರಿಂದ ಅವನಿಗೆ ಬುದ್ಧಿವಾದ ಹೇಳಿಸಿದಳು. ಪರಮೇಶ ಅವರು ಹೇಳಿದ್ದಕ್ಕೆಲ್ಲ ತಲೆಯಾಡಿಸಿ ಇನ್ನು ಚೆನ್ನಾಗಿ ಇರುತ್ತೇನೆ ಎಂದು ಹೇಳಿದವನಿಗೆ ರಾತ್ರಿಯಾದಂತೆ ಎಲ್ಲವೂ ಮರೆತು ಹೋಗಿ ಸಾರಾಯಿ ಅಂಗಡಿಗೆ ಹೋಗಿ ಕಂಠ ಮಟ್ಟಕುಡಿಯತೊಡಗಿದ. ಮೊದಲು ನೀಲೇಶ ನ ದುಡ್ಡಿನಲ್ಲಿ ಕುಡಿಯುತ್ತಿದ್ದವನು ಈಗ ತನ್ನ ದುಡ್ಡಿನಲ್ಲಿ ನೀಲೇಶ ನಿಗೆ ಕುಡಿಸಿ ತಾನೂ ಕುಡಿದು ಎಲ್ಲೆಂದರಲ್ಲಿ ಬಿದ್ದು ಕೊಳ್ಳುತ್ತಿದ್ದ. ಪರಮೇಶನ ಈ ಸ್ಥಿತಿಯನ್ನು ಕಂಡು ಊರವರೆಲ್ಲ ಬೆಚ್ಚಿ ಬಿದ್ದರು. ಹೇಗಿದ್ದವ ಏನಾಗಿಹೋದ ಎಂದು ಜನ ಮಾತನಾಡಿಕೊಳ್ಳ ತೊಡಗಿದರು. ಆದರೆ ಜಾನಕಿ ತಾವು ಬೀದಿಗೆ ಬರಬಾರದು ಎಂದು ಹಠ ಹಿಡಿದು ಊರಿನಿಂದ ಅಣ್ಣಂದಿರನ್ನು ಕರೆಸಿ ಅವರ ಸಹಾಯದಿಂದ ಗದ್ದೆಯನ್ನು ಉಳತೊಡಗಿದಳು. ಹೆಣ್ಣು ಮಕ್ಕಳಿಗೆ ತಮ್ಮ ಓದಿನ ಕಡೆಗೇ ಗಮನ ಹರಿಸಲು ಹೇಳಿದಳು. ಒಬ್ಬಳು ಹತ್ತನೇ ತರಗತಿಯಲ್ಲಿದ್ದರೆ ಚಿಕ್ಕವಳು ಎಂಟನೆಯ ತರಗತಿಯಲ್ಲಿ ಓದುತ್ತಿದ್ದಳು. ಪರಮೇಶ ಮನೆಗೆ ಬರಬೇಕೆಂದೆನಿಸಿದಾಗ ಮಾತ್ರ ಬರುತ್ತಿದ್ದ. ಅವನ ಕುಡಿತಕ್ಕೆ ಜೂಜಾಟಕ್ಕೆ ಬೇಕಾದ ಹಣವನ್ನೆಲ್ಲ ಹೆಂಡತಿಗೆ ಸಿಕ್ಕಾ ಪಟ್ಟೆ ಹೊಡೆದು ಅವಳಿಂದ ಕಿತ್ತುಕೊಳ್ಳುತ್ತಿದ್ದ. ಕ್ರಮೇಣ ಮಕ್ಕಳ ಮೈ ಮೇಲೂ ಕೈ ಮಾಡತೊಡಗಿದ. ಒಂದು ಕಾಲದಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳ ಒಳ್ಳೆಯದನ್ನೇ ಬಯಸುತ್ತಿದ್ದ ಪರಮೇಶ ಈಗ ಅವರನ್ನೇ ಹಿಂಸಿಸತೊಡಗಿದ. ಇದನ್ನು ನೋಡಿ ನೀಲೇಶನಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ಕೊನೆಗೂ ತಾನು ದ್ವೇಷವನ್ನು ಸಾಧಿಸಿ ಬಿಟ್ಟೆ ತನ್ನ ಉಪಾಯ ಕೊನೆಗೂ ಫಲಿಸಿತು ಎಂದು ಸಂತಸ ಗೊಂಡ.

ಕೂಡಿಟ್ಟ ಹಣವೆಲ್ಲ ಖಾಲಿಯಾಗತೊಡಗಿದಾಗ ಜಾನಕಿ ಕಂಗಾಲಾದಳು. ಇಷ್ಟೂ ಸಾಲದು ಎಂಬಂತೆ ಒಂದು ದಿನ ಕುಡಿದ ಅಮಲಿನಲ್ಲಿ ಪರಮೇಶ ಹಿರಿಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಜಾನಕಿಗೆ ಸಹಿಸಲಾಗಲಿಲ್ಲ. ಹೇಗಿದ್ದವ ಹೇಗಾಗಿ ಹೋದ, ಇವನನ್ನು ಸರಿ ಮಾಡಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲವೇನೋ ಎಂದುಕೊಂಡಳು. ಮೊದಲು ಯಾರೆಲ್ಲ ಅವನನ್ನು ಮೆಚ್ಚಿ ಹೊಗಳುತ್ತಿದ್ದರೋ ಅವರೇ ಅವನ ಬಗ್ಗೆ ಕೆಟ್ಟದಾಗಿ ಮಾತನಾಡ ತೊಡಗಿದರು. ಮನೆಯಲ್ಲಿ ಹೆಂಡತಿ ಹಣ ಕೊಡದಿದ್ದರೆ ಪರಮೇಶ ಸಿಕ್ಕ ಸಿಕ್ಕವರ ಬಳಿ ಸಾಲ ಕೇಳಿ ಇಸಿದು ಕೊಳ್ಳುತ್ತಿದ್ದ, ಅವರೆಲ್ಲ ಅವನು ಸರಿಯಾಗಿರದಿದ್ದರೂ ಅವನ ಹೆಂಡತಿ ಹಾಗೂ ಅವಳ ಅಣ್ಣಂದಿರು ಕಷ್ಟ ಪಟ್ಟು ಬೆಳೆಸಿದ ಹೊಲದಲ್ಲಿನ ಪೈರು ಚೆನ್ನಾಗಿದೆಯಲ್ಲ ಎಂದುಕೊಂಡು ಅವನು ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದರು. ನಂತರ ಮನೆಗೆ ಬಂದು ಬಲವಂತದಿಂದ ವಸೂಲಿ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದಾಗಿ ತೀವ್ರವಾಗಿ ನೊಂದುಕೊಂಡ ಜಾನಕಿ ಇದೆಲ್ಲದಕ್ಕೂ ಒಂದು ದಾರಿ ಕಾಣಿಸಲೇ ಬೇಕು ಎಂದು ತೀವ್ರವಾಗಿ ಯೋಚಿಸತೊಡಗಿದಳು. ಆ ವರ್ಷ ಮಳೆಯೇ ಬರಲಿಲ್ಲ ಆದರೂ ಜಾನಕಿಗೆ ಬಾವಿಯ ನೀರು ಇದ್ದಿದುದರಿಂದ ಬೆಳೆ ಬೆಳೆಯಲು ತೊಂದರೆ ಇರಲಿಲ್ಲ. ಆ ಊರಿನ ಹಲವರು ಮಳೆಯ ನೀರನ್ನೇ ಆಶ್ರಯಿಸಿದ್ದರಿಂದ ಬೆಳೆ ಬೆಳೆಯಲಾಗದೆ ತಾವು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳ ತೊಡಗಿ ಊರೆಲ್ಲ ಸ್ಮಶಾನವಾಗತೊಡಗಿತು. ತನ್ನ ಗಂಡನೂ ಅವರಂತೆ ಆತ್ಮಹತ್ಯೆ ಮಾಡಿಕೊಂಡರೆ ತನ್ನ ಕಷ್ಟಗಳೆಲ್ಲ ದೂರವಾಗುತ್ತಿದ್ದವೇನೋ ಎಂದುಕೊಳ್ಳುವಷ್ಟರ ಮಟ್ಟಿಗೆ ಜಾನಕಿಯ ಮನಸ್ಸು ರೋಸಿ ಹೋಗಿತ್ತು. ಹಾಗೇ ಯೋಚಿಸುತ್ತಿದ್ದಂತೆ ಜಾನಕಿಗೆ ಮಿಂಚು ಹೊಳೆದಂತಾಯಿತು. ಸಧ್ಯದ ಪರಿಸ್ಥಿತಿಯನ್ನು ಉಪಯೋಗಿಸಿ ತನ್ನ ಗಂಡನೂ ಆತ್ಮಹತ್ಯೆ ಮಾಡಿಕೊಂಡಂತೆ ಮಾಡಿದರೆ ಹೇಗೆ ಎಂದು ಯೋಚಿಸಿದಳು.ಆದರೆ ಜೊತೆಗೆ ದುಃಖವೂ ಉಕ್ಕಿ ಬಂತು. ಮೊದಲು ಅದೆಷ್ಟು ಸಭ್ಯನಾಗಿದ್ದವನು ಈಗ ಸರಿ ಮಾಡಲಾಗದಷ್ಟು ಕೆಟ್ಟು ಹೋಗಿದ್ದಾನೆ, ಎಂಥಾ ದಿನ ಬಂದಿತು, ತನ್ನ ಬಾಳಿನಲ್ಲಿ ಕೈ ಹಿಡಿದ ಗಂಡನನ್ನೇ ಕೊಲ್ಲುವ ಯೋಚನೆ ಮಾಡುವಷ್ಟು ತನಗೆ ಪರಿಸ್ಥಿತಿ ಬಂದಿತಲ್ಲ ಅವನು ಒಳ್ಳೆಯವನಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ದುಃಖ ಪಟ್ಟಳು. ಆದರೆ ಅವಳಿಗೆ ಬೇರೆ ದಾರಿಯಿರಲಿಲ್ಲ, ಜಮೀನು, ಮನೆ ಎಲ್ಲವೂ ಗಂಡನ ಹೆಸರಲ್ಲಿತ್ತು ಯಾವಾಗ ಅದೆಲ್ಲ ತಮ್ಮ ಕೈ ತಪ್ಪಿ ತಾವೆಲ್ಲ ಬೀದಿಗೆ ಬರುತ್ತೇವೆಂಬುದು ಹೇಳಲಾಗದು. ಬುದ್ಧಿ ಮಾತಿಗೆ ಬಗ್ಗದವನಿಂದ ಏನನ್ನು ಅಪೇಕ್ಷೆ ಮಾಡಲಾದೀತು. ತಾನು ಮಕ್ಕಳಿಗೋಸ್ಕರವಾದರೂ ಅವರ ಹಿತದೃಷ್ಟಿ ಯಿಂದ ಈ ಕೆಲಸ ಮಾಡಲೇಬೇಕು ಎಂದುಕೊಂಡಳು. ಅವಳಿಗೂ ಗಂಡ ಹಿಂಸೆ ಸಹಿಸಿ ಸಾಕಾಗಿತ್ತು. ಆ ರಾತ್ರಿ ವಿಪರೀತವಾಗಿ ಕುಡಿದು ಬಂದ ಪರಮೇಶ ಗಾಢ ನಿದ್ದೆಯಲ್ಲಿದ್ದಾಗ ನಡುಗುವ ಕೈಗಳಿಂದ ಅವನ ಪಂಚೆಯಿಂದಲೇ ಅವನ ಕುತ್ತಿಗೆಗೆ ಬಿಗಿದು ಮಾಡಿನ ಪಕ್ಕಾಸಿಗೆ ಕಷ್ಟ ಪಟ್ಟು ಸಿಕ್ಕಿಸಿ ಅವನನ್ನು ನೇತಾಡಿಸಿದಳು. ಅವನು ಉಸಿರಾಡಲು ಸಾಧ್ಯವಾಗದೆ ವಿಲವಿಲನೆ ಒದ್ದಾಡಿದಾಗ ನೋಡಲು ಸಾಧ್ಯವಾಗದೆ ಮುಖ ತಿರುಗಿಸಿ ಮೌನವಾಗಿ ಅಳುತ್ತ ತನ್ನನ್ನು ಕ್ಷಮಿಸು ಎಂದು ಮನಸ್ಸಲ್ಲೇ ಬೇಡಿಕೊಳ್ಳುತ್ತ ಕುಳಿತು ಬೆಳಗು ಮಾಡಿದಳು. ಬೆಳಗ್ಗೆ ಎದ್ದವಳೇ ಪರಮೇಶ ನೇಣು ಬಿಗಿಕೊಂಡಿದ್ದು ಅಚಾನಾಕ್ಕಾಗಿ ನೋಡಿದವಳಂತೆ ಜಾನಕಿ ಕಿಟಾರನೆ ಕಿರುಚಿದಳು. ಮನೆಯವರೆಲ್ಲ ಓಡಿ ಬಂದು ನೋಡಿದಾಗ ಪರಮೇಶ ಮಾಡಿನ ಪಕ್ಕಾಸಿಗೆ ನಿರ್ಜೀವವಾಗಿ ನೇತಾಡುತ್ತಿದ್ದ. ಪರಮೇಶ ತನ್ನ ಕುಡಿತದ ಹಾಗೂ ಜೂಜಾಟದ ಚಟದಿಂದಾಗಿ ಮೈ ತುಂಬಾ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಊರೆಲ್ಲ ಸುದ್ದಿಯಾಯಿತು.