ಭಾಗ – 2

ಹತ್ತು ನಿಮಿಷದಲ್ಲೇ ಸದ್ದು ಮಾಡುತ್ತಾ ಬಂದ ಅಂಬುಲೆನ್ಸ್ ಆ ಯುವತಿಯನ್ನು ಹೊತ್ತು ಆಸ್ಪತ್ರೆಯತ್ತ ಧಾವಿಸಿತು. ಆಂಬುಲೆನ್ಸ್ ಅತ್ತ ಹೋಗುತ್ತಿದ್ದಂತೆ ಪೋಲೀಸ್ ಜೀಪ್ ಇತ್ತ ಧಾವಿಸಿ ಬಂದಿತು. ಅಲ್ಲಿದ್ದ ಜನರ  ಹಾಗೂ ಬಸ್ಸಿನವರ ಹೇಳಿಕೆ ಪಡೆದುಕೊಂಡು ಬಸ್ಸಿನಲ್ಲಿದ್ದ ಜನರಿಗೆ ತೊಂದರೆ ಕೊಡುವುದು ಬೇಡವೆಂದು ಪೊಲೀಸರು ಬಸ್ಸನ್ನು ಟ್ರಿಪ್ ಮುಗಿಸಿ ಪೋಲೀಸ್ ಸ್ಟೇಷನ್ ಗೆ ಬರಬೇಕೆಂದು ತಾಕೀತು ಮಾಡಿ ಬಸ್ಸಿನ ವಿವರಗಳನ್ನು ಬರೆದುಕೊಂಡು ಜೀಪಿನಲ್ಲಿ ಆಸ್ಪತ್ರೆಯತ್ತ ದೌಡಾಯಿಸಿದರು. ಬಸ್ಸಿನಲ್ಲಿ ಕೆಲವರೆಲ್ಲ ಇಳಿದು ಹೋಗಿದ್ದರಿಂದ ಸೀಟುಗಳೆಲ್ಲ ಖಾಲಿಯಾಗಿದ್ದು ಕಂಡು ನಿಂತು ನಿಂತೂ ಕಾಲು ಸೋತು ಹೋದವರು ನಾ ಮುಂದು ತಾ ಮುಂದು ಎಂದು ಖಾಲಿ ಸೀಟುಗಳನ್ನು ಆಕ್ರಮಿಸಲು ಮುಗಿಬಿದ್ದರು. ಕೊನೆಗೂ ಬಸ್ಸಿನ ನಿರ್ವಾಹಕ ಸೀಟಿ ಊದಿದ್ದು ಕಂಡು ಜನ ನಿರಾಳವಾಗಿ ಕೆಳಗೆ ಬಿದ್ದ ಯುವತಿಯ ಬಗ್ಗೆ ಮಾತನಾಡುತ್ತ ಕುಳಿತರು. ಇನ್ನು ಕೆಲವರು ಇದಕ್ಕೂ ಮುಂಚೆ ಬಸ್ಸಿನಲ್ಲಾದ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳತೊಡಗಿದರು.

ಎಲ್ಲರಿಗೂ ಆ ಯುವತಿ ಬಿದ್ದಿದ್ದು ಹೇಗೆ, ಅವಳಿಗೆ ಪ್ರಜ್ಞೆ ತಪ್ಪಿದ್ದಾದರೂ ಏಕೆ? ಅವಳಿಗೆ ಆರೋಗ್ಯ ಸರಿಯಿರಲಿಲ್ಲವೇ ಅಥವಾ ನಿಜವಾಗಿಯೂ ಬಸ್ಸಿನವ ಅವಳು ಇಳಿಯುವ ಮೊದಲೇ ಚಾಲನೆ ಮಾಡಿದ್ದನೆ ಎಂಬ ಸಂದೇಹಗಳು ಹರಿದಾಡಿದಾಗ  ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಿರ್ವಾಹಕ, ಆ ಯುವತಿ ತನ್ನ ಶರ್ಟ್ ಒಳಗೆ ಏನೋ ಜಂತು ಸೇರಿದೆ ತುರ್ತಾಗಿ ಕೆಳಗಿಳಿಯಬೇಕು ಎಂದು ಹೇಳಿದ್ದನ್ನು ನೆನೆಪಿಸಿಕೊಂಡು ಅದನ್ನು ಪ್ರಯಾಣಿಕರ ಬಳಿ ಹೇಳಿಕೊಂಡ. ಅದಕ್ಕೆ ಆ ಯುವತಿಯ ಅಕ್ಕ ಪಕ್ಕ ಕುಳಿತವರಿಗೆ ಆ ಹುಡುಗಿ ತನ್ನ ಬಟ್ಟೆ ಒದರಿದ್ದು ನೆನಪಾಗಿ  ಅವನು ಹೇಳುತ್ತಿರುವುದು ನಿಜವೆಂದೂ ಅವಳು ಕಿಟಾರನೆ ಕಿರಿಚುತ್ತ ತನ್ನ ಶರ್ಟ್ ಒದರುತ್ತ ಇದುದ್ದು ತಾವೂ ಕಂಡಿದ್ದೆವು ಅದನ್ನು ನೋಡಿ ತಮಗೂ ಆತಂಕವಾಗಿತ್ತು ಎನ್ನುತ್ತಿದ್ದಂತೆ ಆ ಜಂತು ಯಾವುದಿರಬಹುದು, ವಿಷಜಂತುವಿರಬಹುದೇ ಎಂದು ಪ್ರಯಾಣಿಕರಲ್ಲಿ ಸಂಶಯದ ಹುಳ ಹೊಕ್ಕಿ ಅವರ ತಲೆಯನ್ನು ಕೊರೆಯತೊಡಗಿತು. ಆ ಯೋಚನೆ ಬರುತ್ತಿದ್ದಂತೆ ಅವಳ ಸೀಟಿನಲ್ಲಿ ಕುಳಿತಿದ್ದವರು ಒಮ್ಮೆಲೇ ಹೌಹಾರಿ ಆ ಜಂತು ಇನ್ನೂ ಅಲ್ಲೇ ಇದ್ದು ತಮ್ಮನ್ನು ಕಚ್ಚಿದರೆ ಎಂದು ಭೀತಿಗೊಂಡು ಕುಳಿತಲ್ಲಿಂದ ಎದ್ದು ಬಗ್ಗಿ ಸೀಟಿನ ಕೆಳಗೆ, ಅತ್ತ ಇತ್ತ ಹುಡುಕಾಟ ನಡೆಸಿದರು. ಎದ್ದು ತಮ್ಮ ಬಟ್ಟೆಗಳನ್ನು ಒದರಿಕೊಂಡು ಏನೂ ಇಲ್ಲವೆಂದು ಮನವರಿಕೆಯಾದಾಗ ನಿರಾಳವಾಗಿ ಕುಳಿತರು. ಎಲ್ಲರಿಗೂ ಆದಷ್ಟೂ ಬೇಗ ಮನೆ ತಲುಪಿದರೆ ಸಾಕೆನಿಸಿತ್ತು.

ಆಂಬುಲೆನ್ಸ್ ನಲ್ಲಿದ ಯುವತಿಯನ್ನು ಸ್ಟ್ರೆಚರ್ ನಲ್ಲಿ ಹಾಕಿಕೊಂಡು ಆಸ್ಪತ್ರೆಯ ಒಳಗೆ ದೌಡಾಯಿಸಿದಾಗ ಅವರನ್ನೇ ಕಾಯುತ್ತಿದ್ದ ಡಾಕ್ಟರ್ ಯುವತಿಯ ಹೃದಯ ಬಡಿತ ಪರೀಕ್ಷಿಸಿ ಅವಳಲ್ಲಿ ಕುಟುಕು ಜೀವ ಇನ್ನೂ ಇರುವುದನ್ನು ನೋಡಿ ಐ ಸಿ ಯು ಗೆ  ಆದಷ್ಟೂ ಬೇಗ ತರುವಂತೆ ಹೇಳಿ ಅವರು ಐ ಸಿ ಯು ನತ್ತ ಧಾವಿಸಿದರು. ಅವಳ ದೇಹದಲ್ಲಿ ಆದ ಪರಿಣಾಮಗಳನ್ನೆಲ್ಲ ನೋಡಿದಾಗ ಅವಳಿಗೆ ಅದು ಯಾವುದೋ ವಿಷ ಜಂತು ಕಚ್ಚಿರಬೇಕೆಂದು ಅನಿಸಿ ಅವಳ ಮೈ ಮೇಲಿನ ಬಟ್ಟೆ ಸರಿಸಿದಾಗ ಚೇಳು ಸಿಕ್ಕಿತು. ಕೂಡಲೇ ಡಾಕ್ಟರ್ ಗೆ ಅದೇ ಆಕೆಯನ್ನು ಕಚ್ಚಿರಬಹುದು ಎಂದು ಅರಿವಾಗಿ ತಕ್ಷಣ ಅವಳಿಗೆ ಚಿಕಿತ್ಸೆ ಕೊಡಲು ಶುರು ಮಾಡಿದರು. ಆದರೆ ಆಕೆ  ಮಾತ್ರ ಚಿಕಿತ್ಸೆಗೆ ಸ್ಪಂದಿಸದೇ  ಡಾಕ್ಟರ್ ನ ಪ್ರಯತ್ನಗಳನ್ನೆಲ್ಲ ನಿಷ್ಫಲಗೊಳಿಸಿ ಅರ್ಧ ಗಂಟೆಯಲ್ಲಿ ಕೊನೆಯುಸಿರೆಳೆದಳು. ಡಾಕ್ಟರ್ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಪೊಲೀಸರು ಆಸ್ಪತ್ರೆಗೆ ಧಾವಿಸಿ ಬಂದರು.

ಆ ಯುವತಿ ಚೇಳಿನ ಕಡಿತದಿಂದ ಸಾವನ್ನಪ್ಪಿದ್ದು ಕಂಡು ಆಶ್ಚರ್ಯಗೊಂಡು ಆ ಚೇಳು ಎಲ್ಲಿಂದ ಬಂದಿರಬಹುದು. ಅವಳು ಬಸ್ಸಿನಿಂದ ಕೆಳಕ್ಕೆ ಬಿದ್ದ ಮೇಲೆ ಅವಳಿಗೆ ಕಚ್ಚಿರಬಹುದೇ ಎಂದು ಡಾಕ್ಟರ್ ನ್ನು ಕೇಳಿದಾಗ ಆ ಯುವತಿಗೆ ಕೆಳಕ್ಕೆ ಬೀಳಲಿಲ್ಲ, ಅವಳಿಗೆ ಮೊದಲೇ ಆ ಚೇಳು ಕಚ್ಚಿ ಅದರ ವಿಷ ಮೈಯೆಲ್ಲಾ ವ್ಯಾಪಿಸಿ ಅಲರ್ಜಿಯಾಗಿ ಕುಸಿದಿದ್ದಾಳೆ ಎಂದು ಹೇಳಿದಾಗ ಪೊಲೀಸರಿಗೆ ಆಶ್ಚರ್ಯವೆನಿಸಿತು. ಅವಳ ಮೈ ಮೇಲೆ ಚೇಳು ಬಂದಿದ್ದಾದರೂ ಎಲ್ಲಿಂದ, ಬಸ್ಸಿನಲ್ಲಿ ಇದ್ದಿರಬಹುದೇ ಎಂದು ಸಂಶಯ ಮೂಡಿ ಬಸ್ಸಿನವರನ್ನು ವಿಚಾರಿಸಲು ಧಾವಿಸಿದರು. ಬಸ್ಸಿನವರು ತಾವು ದಿನವೂ ಬಸ್ಸನ್ನು ಸ್ವಚ್ಛ ಮಾಡುತ್ತಿರುವುದರಿಂದ ಬಸ್ಸಿನಲ್ಲಿ ಚೇಳು ಬರಲು ಸಾಧ್ಯವಿಲ್ಲ, ಒಂದೋ ಆ ಯುವತಿ ಬಸ್ಸು ಹತ್ತುವ ಮೊದಲೇ ಚೇಳು ಅವಳ ಬಟ್ಟೆಯಲ್ಲಿದ್ದಿರಬೇಕು ಅಥವಾ ಆ ಯುವತಿ ಬೀಚಿಗೇನಾದರೂ ಹೋಗಿರಬಹುದು ಅಥವಾ ಕಾಡಿನ ದಾರಿಯಾಗಿ ಬಂದಿದ್ದರೆ ಆಗಲೂ ಅವಳ ಮೈ ಮೇಲೆ ಚೇಳು ಹತ್ತಿರುವ ಸಾಧ್ಯತೆ ಇದೆ ಎಂದು ವಾದಿಸಿದರು. ಪೊಲೀಸರಿಗೆ ಅವರು ಹೇಳುವುದು ಸರಿ ಎನಿಸಿ ಆ ಯುವತಿಯ ಮನೆಯವರಿಗೆ ಆಕೆ ತೀರಿಕೊಂಡ ವಿಷಯ ಫೋನ್ ಮಾಡಿ ತಿಳಿಸಿದರು. ಆ ಯುವತಿಯ ಮನೆಯವರು ತಮ್ಮ ಮಗಳು ಚೇಳು ಕಡಿದು ಸಾವನ್ನಪ್ಪಿದಳು ಎಂದು ಕೇಳಿ ದಿಗ್ಭ್ರಾಂತರಾಗಿ ಆಸ್ಪತ್ರೆಗೆ ಧಾವಿಸಿದರು.

(ಮುಂದುವರಿಯುವುದು)

ಚೇಳು ಬಂದದ್ದಾದರೂ ಎಲ್ಲಿಂದ ?

ಭಾಗ – 1

ಸಂಜೆ ಸುಮಾರು ಏಳರ ಸಮಯ. ಎಲ್ಲರಿಗೂ ಆದಷ್ಟೂ ಬೇಗ ಮನೆ ತಲುಪುವ ಆತುರದಿಂದಾಗಿ ಬಸ್ ನಿಲ್ದಾಣದಲ್ಲಿ ಜನಜಂಗುಳಿಯೇ ಸೇರಿತ್ತು. ಅಲ್ಲಿ ಆಗ ತಾನೇ ಬಂದು ನಿಂತಿದ್ದ ಬಸ್ ಕಿಕ್ಕಿರಿದು ತುಂಬಿತ್ತು. ಆದರೂ ಇನ್ನಷ್ಟು ಜನ ಆ ಬಸ್ಸನ್ನು ಹತ್ತುವ ಆತುರ ತೋರಿದಾಗ ಬಸ್ಸಿನ ನಿರ್ವಾಹಕ ಅವರಿಗೆ ಹತ್ತದಂತೆ ತಡೆದು ಸೀಟಿ ಊದಿದ. ಬಸ್ಸು ತುಂಬಿದ ಗರ್ಭಿಣಿಯಂತೆ ವಾಲಾಡುತ್ತ ನಿಧಾನವಾಗಿ ಚಲಿಸತೊಡಗಿದಾಗ ಅದುವರೆಗೂ ಬಸ್ಸಿನಲ್ಲಿ ಉಸಿರಾಡಲೂ ಸಾಧ್ಯವಾಗದೇ ಚಡಪಡಿಸುತ್ತಿದ್ದ ಜನರೆಲ್ಲಾ ಒಮ್ಮೆ ನಿಟ್ಟುಸಿರು ಬಿಟ್ಟರು. ಬಸ್ಸು ಹೊರಟ ಮೇಲೆ ಬಸ್ಸಿನ ಒಳಗೆ ಸ್ವಲ್ಪ ಗಾಳಿ ಆಡಿ ಸೆಖೆಯಿಂದ ಅಳುತ್ತಿದ್ದ ಮಕ್ಕಳಿಗೆ ಹಾಯೆನಿಸಿ ಕಿಟಕಿಯಿಂದ ಹೊರಗೆ ನೋಡತೊಡಗಿದರು.

ಕುಳಿತಿದ್ದ ಪ್ರಯಾಣಿಕರೆಲ್ಲ ಆದಷ್ಟೂ ವಿಶಾಲವಾಗಿ ಕಿಟಕಿಯ ಗಾಜನ್ನು ಸರಿಸಿ ಹೊರಗಿನ ತಂಗಾಳಿಯನ್ನು ಆಸ್ವಾದಿಸುತ್ತಾ ತಮ್ಮ ತಮ್ಮ ಯೋಚನೆಗಳಲ್ಲಿ ಮುಳುಗಿದರು. ಕೆಲವರು ತಮ್ಮ ಫೋನ್ ತೆಗೆದು ತಮಗೆ ಬಂದಂತಹ ಮೆಸೇಜುಗಳನ್ನು ಓದುತ್ತ ಮುಗುಳ್ನಗುತ್ತಿದ್ದರೆ ಇನ್ನು ಕೆಲವರು ಫೋನ್ ನಲ್ಲಿ ಯಾರ ಜೊತೆಗೋ ದೊಡ್ಡ ಧ್ವನಿಯಲ್ಲಿ ಮಾತನಾಡತೊಡಗಿದಾಗ ಏನೂ ಮಾಡದೆ ಸುಮ್ಮನೆ ಕುಳಿತಿದ್ದ ಕೆಲವರ ಕಿವಿ ನೆಟ್ಟಗಾಗಿ ಅವರ ಸಂಭಾಷಣೆಯನ್ನು ಆಲಿಸಲಾರಂಭಿಸಿದರು. ಪಡ್ಡೆ ಹುಡುಗರು ಕಿವಿಗೆ ಹೆಡ್ ಫೋನ್ ತುರುಕಿಕೊಂಡು ತಮಗಿಷ್ಟವಾದ ಸಂಗೀತ ಕೇಳುತ್ತ ಕಲ್ಪನಾ ಲೋಕದಲ್ಲಿ ವಿಹರಿಸತೊಡಗಿದರು.

ಸಾಸಿವೆ ಹಾಕಲೂ ಜಾಗವಿಲ್ಲದಂತೆ ಕಿಕ್ಕಿರಿದು ನಿಂತಿದ್ದ ಜನರ ನಡುವೆ ಬಸ್ಸಿನ ನಿರ್ವಾಹಕ ಗೂಳಿಯಂತೆ ನುಗ್ಗಿಕೊಂಡು ಬರುತ್ತಾ ಅವರಿವರ ಕಾಲು ತುಳಿದು ಅವರಿಂದ ಬೈಸಿಕೊಂಡು ಟಿಕೇಟ್ ಟಿಕೇಟ್ ಎಂದು ಅರಚುತ್ತ ಬಂದ. ಅದುವರೆಗೂ ಟಿಕೇಟ್ ಕೊಳ್ಳದವರು ಹಣವನ್ನು ಅವನತ್ತ ಚಾಚಿ ಟಿಕೇಟ್ ಗಾಗಿ ಕಾದರು. ಎಲ್ಲರೂ ದೊಡ್ಡ ದೊಡ್ಡ ನೋಟುಗಳನ್ನೇ ಕೊಡಲಾರಂಭಿಸಿದಾಗ ನಿರ್ವಾಹಕ ಚಿಲ್ಲರೆಗಾಗಿ ಪರದಾಡುತ್ತ ಅವರನ್ನೇ ಕೇಳಿ ರೇಗಾಡುತ್ತ ಟಿಕೇಟ್ ಗಳನ್ನು ವಿತರಿಸುತ್ತಾ ಬಂದ. ಬಸ್ಸು ಸುಮಾರು ದೂರ ಬಂದ ಮೇಲೆ ಪ್ರಯಾಣಿಕರೆಲ್ಲ ಅಕ್ಕ ಪಕ್ಕ ಕುಳಿತವರ ಜೊತೆ ಹರಟುತ್ತ ಮಾತಿನ ಮಂಟಪ ಕಟ್ಟುತ್ತ ತಮ್ಮ ತಮ್ಮ ಲೋಕದಲ್ಲಿ ಮುಳುಗಿರುವಾಗ ಮಹಿಳೆಯರ ಕೊನೆಯ ಸೀಟಿನಲ್ಲಿ ಕುಳಿತಿದ್ದ ಜೀನ್ಸಧಾರಿ ಯುವತಿಯೊಬ್ಬಳಿಗೆ ಏನೋ ಕಚ್ಚಿದ ಅನುಭವವಾಗಿ ಒಮ್ಮೇಲೆ ಅಮ್ಮಾ ಎಂದು ಕಿರಿಚುತ್ತ ವಿಲವಿಲ ಒದ್ದಾಡುತ್ತಾ ತನ್ನ ಟೀ ಶರ್ಟ್ ನ್ನು ಒದರುತ್ತ ನಲಿದಾಡತೊಡಗಿದಳು. ಇದನ್ನು ನೋಡಿ ಅಕ್ಕ ಪಕ್ಕ ಕುಳಿತವರು ತಮ್ಮ ಹೌಹಾರಿ ಹಾವು ಮೈ ಮೇಲೆ ಬಿದ್ದವರಂತೆ ವರ್ತಿಸತೊಡಗಿದರು. ಪಡ್ಡೆ ಹುಡುಗರು ಅವಳತ್ತ ನೋಡುತ್ತಾ ಕಿಸಿ ಕಿಸಿ ನಗತೊಡಗಿದರು. ಅವಳಿಗೆ ಉರಿ ತಡೆಯಲಾಗದೆ ಕುಳಿತುಕೊಳ್ಳಲೂ ನಿಂತುಕೊಳ್ಳಲೂ ಆಗದೆ ಒದ್ದಾಡುತ್ತಾ ಶರ್ಟ್ ಒಳಗೆ ಏನೋ ಜಂತು ಹರಿದಾಡಿದ ಅನುಭವವಾಗಿ ಕಿಟಾರನೆ ಕಿರಿಚುತ್ತ ಎಲ್ಲರ ಗಮನ ಕ್ಷಣಕಾಲ ಸೆಳೆದಳಾದರೂ ಮಾತಿನ ಪ್ರಪಂಚದಲ್ಲಿ ಮುಳುಗಿದ ಜನರಿಗೆ ತಮ್ಮ ಮಾತುಗಳೇ ಮುಖ್ಯವೆನಿಸಿ ಅವರೆಲ್ಲ ಮತ್ತೆ ತಮ್ಮ ಪ್ರಪಂಚಕ್ಕೆ ಮರಳಿದರು.

ಆ ಯುವತಿಗೆ ತಡೆಯಲಾಗದೆ ಆದಷ್ಟೂ ಬೇಗನೆ ಇಳಿದು ತಕ್ಷಣವೇ ಎಲ್ಲಿಗಾದರೂ ಹೋಗಿ ಶರ್ಟ್ ಬಿಚ್ಚಿ ಆ ಜಂತುವನ್ನು ತೆಗೆದು ಬಿಸಾಕಿದರೆ ಸಾಕು ಎನಿಸಿ ಆಗಾಗ ಬಟ್ಟೆಯನ್ನು ಒದರುತ್ತ ತನ್ನ ಬ್ಯಾಗನ್ನು ಎತ್ತಿಕೊಂಡು ನಿಂತಿದ್ದ ಜನರ ನಡುವೆ ನುಗ್ಗುತ್ತಾ ಸಿಕ್ಕಸಿಕ್ಕವರ ಕಾಲು ತುಳಿಯುತ್ತ ಅವರೆಲ್ಲ ಅವಳಿಗೆ ಸಹಸ್ರನಾಮ ಮಾಡಿದರೂ ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿ ಇಲ್ಲದ ಅವಳು ಅದು ಹೇಗೋ ನುಗ್ಗಿಕೊಂಡು ಬಸ್ಸಿನ ಬಾಗಿಲ ಬಳಿ ಬಂದು ನಿರ್ವಾಹಕನಿಗೆ, ತನಗೆ ತುರ್ತಾಗಿ ಇಳಿಯಬೇಕಾಗಿದೆ, ಶರ್ಟ್ ಒಳಗೆ ಏನೋ ಸೇರಿಕೊಂಡಿದೆ ದಯವಿಟ್ಟು ಬಸ್ಸು ನಿಲ್ಲಿಸಿ ಎಂದು ಗೋಗರೆದಳು. ಅವನೂ ಪಡ್ಡೆ ಹುಡುಗರಂತೆ ಅಶ್ಲೀಲವಾಗಿ ಕಿಸಿ ಕಿಸಿ ನಕ್ಕು ಸೀಟಿ ಊದಿದ. ಬಸ್ಸು ನಿಲ್ಲುತ್ತಿದ್ದಂತೆ ಯುವತಿಗೆ ನಿತ್ರಾಣವಾಗಿ ಮೈಯಲ್ಲಿ ಬಲವಿಲ್ಲದಂತಾಗಿ ಇಳಿಯುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದಳು.

ಕತ್ತಲಲ್ಲಿ ಅವಳು ಬಿದ್ದಿದ್ದನ್ನು ನೋಡದೆ ನಿರ್ವಾಹಕ ಮತ್ತೆ ಸೀಟಿ ಊದಿದ. ಬಸ್ಸು ಹೊರಡುತ್ತಿದ್ದಂತೆ ಕಿಟಕಿಯ ಬಳಿ ಕುಳಿತಿದ್ದ ಪ್ರಯಾಣಿಕರು ಆ ಯುವತಿ ಕೆಳಗೆ ಬಿದ್ದಿದ್ದು ನೋಡಿ ಬೊಬ್ಬೆ ಹಾಕಿ ಬಸ್ಸು ಮುಂದೆ ಹೋಗದಂತೆ ತಡೆದರು. ನಿರ್ವಾಹಕ ಏನಾಯಿತು ಎಂದು ಧಾವಿಸಿ ಬಂದು ನೋಡಿದಾಗ ಆಗ ತಾನೇ ಇಳಿದ ಯುವತಿ ರಸ್ತೆಯಲ್ಲಿ ಮುದ್ದೆಯಾಗಿ ಬಿದ್ದಿದ್ದಳು. ಇದನ್ನು ನೋಡಿ ಸುತ್ತಮುತ್ತಲಿದ್ದ ಜನರೆಲ್ಲಾ ಧಾವಿಸಿ ಓಡಿ ಬಂದು ಬಸ್ಸಿನವ ಆ ಯುವತಿ ಕೆಳಗೆ ಇಳಿಯುವುದಕ್ಕೆ ಮೊದಲೇ ಬಸ್ ಚಾಲನೆ ಮಾಡಿದ್ದರಿಂದ ಅವಳು ಆಯ ತಪ್ಪಿ ಅವಳು ಕೆಳಕ್ಕೆ ಬಿದ್ದಿರಬೇಕು ಎಂದು ಭಾವಿಸಿ ಬಸ್ಸಿನ ಬಳಿ ಬಂದು ಬಸ್ಸಿಗೆ ಬಡಿಯುತ್ತ ಗಲಾಟೆ ಮಾಡತೊಡಗಿದರು. ಚಾಲಕ ಹಾಗೂ ನಿರ್ವಾಹಕ, ಆ ಯುವತಿ ಕೆಳಗಿಳಿಯುವವರೆಗೂ ತಾವು ಬಸ್ಸನ್ನು ಚಾಲನೆ ಮಾಡಿಲ್ಲವೆಂದು ಪ್ರತಿಪಾದಿಸತೊಡಗಿದರು. ಬಸ್ಸಿನಲ್ಲಿ ಕಿಟಕಿಯ ಬಳಿ ಕುಳಿತ ಪ್ರಯಾಣಿಕರು ಅವರಿಗೆ ಸಾಥ್ ನೀಡಿದರು. ಇವರ ಗಲಾಟೆಯಿಂದ ತಾವು ಮನೆಗೆ ಇನ್ನಷ್ಟು ವಿಳಂಬವಾಗಿ ತಲುಪುತ್ತೇವಲ್ಲ ಎಂಬ ಬೇಸರ, ಸ್ವಾರ್ಥ  ಬಸ್ಸಿನಲ್ಲಿದ್ದ ಎಲ್ಲರಲ್ಲೂ ಎದ್ದು ಕಾಣುತ್ತಿತ್ತೇ ಹೊರತು ಕೆಳಗೆ ಬಿದ್ದ ಆ ಹುಡುಗಿಯ ಬಗ್ಗೆ ಒಂದಿಷ್ಟೂ ಕಾಳಜಿ ಕಾಣಿಸಲಿಲ್ಲ.

ಕೆಲವರು ಈ ಗಲಾಟೆ ಜೋರಾಗಿ ಬಸ್ಸನ್ನು ಮುಂದಕ್ಕೆ ಹೋಗಲು ಬಿಡದಿದ್ದರೆ ತಾವೆಲ್ಲ ಇವತ್ತು ಮನೆ ತಲುಪಿದಾಗ ಹಾಗೇ ಎಂದುಕೊಂಡು ಬೇರೆ ಬಸ್ಸನ್ನು ಹಿಡಿಯಲು ಒಬ್ಬೊಬ್ಬರಾಗಿ ಇಳಿದು ಹೋಗತೊಡಗಿದರು. ಮುಂದಿನ ಒಂದೆರಡು ಸ್ಟಾಪ್ ಗಳಲ್ಲಿ  ಇಳಿಯಬೇಕಾದವರು  ಇನ್ನೊಂದು ಬಸ್ಸಿಗೆ ಕಾಯುವಷ್ಟು ವ್ಯವಧಾನವಿಲ್ಲದೆ ನಡೆದುಕೊಂಡೇ ಹೋದರು. ಕೆಳಗಿದ್ದ ಜನರೆಲ್ಲಾ ಬಸ್ಸಿನ ಚಾಲಕ, ನಿರ್ವಾಹಕರೊಂದಿಗೆ  ಪರಸ್ಪರ ವಾಕ್ ಪ್ರಹಾರದಲ್ಲೇ  ಮುಳುಗಿದ್ದರೇ ವಿನಃ ಕೆಳಕ್ಕೆ ಬಿದ್ದ ಯುವತಿಯನ್ನು ಎತ್ತುವವರಿಲ್ಲವಾಗಿ ಬಸ್ಸಿನಲ್ಲಿದ್ದ ಕೆಲವು ಮಹಿಳೆಯರಿಗೆ ಪಾಪ ಅನ್ನಿಸಿ ತಾವೇ ಕೆಳಗಿಳಿದು ಅವಳನ್ನು ತಟ್ಟಿ ಎಬ್ಬಿಸಲು ನೋಡಿದಾಗ ಅವಳು ಏಳದೆ ಇದ್ದುದ್ದು ಕಂಡು ನೀರಿಗಾಗಿ ಬೊಬ್ಬೆ ಹಾಕುತ್ತ ಕೊನೆಗೆ ಯಾರದೋ ನೀರಿನ ಬಾಟಲಿ ಸಿಕ್ಕಿ ಅದರ ತಳಭಾಗದಲ್ಲಿ ಸ್ವಲ್ಪವೇ ಇದ್ದ ನೀರನ್ನು ಅವಳ ಮುಖಕ್ಕೆ ಚಿಮುಕಿಸಿದರು.

ಆಗಲೂ ಅವಳು ಎಚ್ಚರಗೊಳ್ಳದಿದ್ದಾಗ ಅವರೆಲ್ಲ ಗಾಬರಿಗೊಂಡು  ಗಲಾಟೆ ಮಾಡುತ್ತಿದ್ದ ಜನರಿಗೆ, ಮೊದಲು ಗಲಾಟೆ ನಿಲ್ಲಿಸಿ ಈ ಹುಡುಗಿಗೆ ಸಹಾಯ ಮಾಡಿ, ಇಲ್ಲಾ ಪೊಲೀಸರಿಗೆ ಫೋನ್ ಮಾಡಿ, ಆಂಬುಲೆನ್ಸ್ ಗೆ ಫೋನ್ ಮಾಡಿ ಎಂದು ಕಿರಿಚಿದಾಗ ಅಲ್ಲಿಯವರೆಗೂ ಗಲಾಟೆ ಮಾಡುತ್ತಿದ್ದ ಜನರೆಲ್ಲಾ ಒಮ್ಮೆಲೇ ಸ್ತಂಭೀಭೂತರಾಗಿ  ಪರಿಸ್ಥಿತಿಯ ಗಂಭೀರತೆ ಕಂಡು ತಮ್ಮ ತಮ್ಮ ಫೋನ್ ಗಳತ್ತ ಗಮನ ಹರಿಸಿದರು. ಕೆಲವರು ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದರೆ ಇನ್ನು ಕೆಲವರು ಆಂಬುಲೆನ್ಸ್ ಗೆ ಕರೆ ಮಾಡಿದರು. ಪಡ್ಡೆ ಹುಡುಗರು  ಆ ಹುಡುಗಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಯ ಬಿಡತೊಡಗಿದರು. ಚಾಲಕ ಮತ್ತು ನಿರ್ವಾಹಕ ತಮಗೆ ಮುಂದೇನು ಕಾದಿದೆಯೋ ಎಂದು ಚಿಂತಾಕ್ರಾಂತ ಮುಖ ಹೊತ್ತು ಅನಿವಾರ್ಯತೆಯಿಂದ ಪೋಲೀಸರ ಬರವಿಗಾಗಿ ಕಾಯುತ್ತ ತಾವು ಇವತ್ತು ಬೆಳಿಗ್ಗೆ ಏಳುವಾಗ ಯಾರ ಮುಖ ನೋಡಿದೆವು ಎಂದು ನೆನಪಿಸಿಕೊಳ್ಳ ತೊಡಗಿದರು.

(ಮುಂದುವರಿಯುವುದು)