ಅತ್ತಿಗೆಯೂ, ಜಿರಲೆಯೂ

ಒಳ್ಳೆಯ ಸಿಹಿ ನಿದ್ದೆಯಲ್ಲಿದ್ದ ನನಗೆ ಮೈಮೇಲೆ ಏನೋ ಹರಿದಾಡಿದಂತಾಗಿ ಎಚ್ಚರವಾಯಿತು. ಗಾಬರಿಯಾಗಿ  ಮೈಯನ್ನು ಜೋರಾಗಿ ಕೊಡವಿಕೊಂಡು ಧಡಕ್ಕನೆದ್ದು ಲೈಟು ಹಾಕಿದೆ. ಲೈಟು ಬೆಳಕಿಗೆ ಪಕ್ಕದಲ್ಲೇ ಮಲಗಿದ್ದ ಅತ್ತಿಗೆಗೆ ಎಚ್ಚರವಾಯಿತು. ಏನಾಯಿತಮ್ಮ ಎನ್ನುತ್ತಾ ನಿದ್ದೆಯ ಅಮಲಿನಿಂದ ಕಣ್ಣುಗಳನ್ನು ತೆರೆಯಲು ಆಗದೆ ಕಣ್ಣು ಮುಚ್ಚಿಕೊಂಡೇ ಕೇಳಿದರು. ನನಗೆ ಅವರ ಅವಸ್ಥೆ ಕಂಡು ನಗು ಬಂದರೂ, ಪಾಪ ಇಡೀ ದಿನ ಮನೆ ಕೆಲಸ, ಅದೂ ಇದೂ ಅಂತ ಒಂದು ಘಳಿಗೆಯೂ ಸುಮ್ಮನೆ ಕೂರದ ಜೀವಕ್ಕೆ ಅಷ್ಟೇ ನಿದ್ದೆ ಬೇಕಲ್ಲವೇ ಎಂದುಕೊಳ್ಳುತ್ತ ಅತ್ತಿಗೆ, ನೀವು ಮಲಗಿಕೊಳ್ಳಿ, ಒಂದೇ ನಿಮಿಷ ಲೈಟು ಆಫ್ ಮಾಡಿಬಿಡುತ್ತೇನೆ ಎನ್ನುತ್ತಾ ನನ್ನ ಕಣ್ಣುಗಳನ್ನು ಸುತ್ತಲೂ ಹರಿದಾಡಿಸಿದೆ.

ನೆಲದ ಮೇಲೆ ಪ್ರಾಣಭಯದಿಂದ ಓಡುತ್ತಿದ್ದ ಜಿರಲೆ ಕಂಡು, ಅಯ್ಯೋ ದೇವರೇ ಎಂದು ಕಿರುಚುತ್ತ ಮಂಚದ ಮೇಲೆ ಹಾರಿದೆ. ಪಾಪ ಅತ್ತಿಗೆ ಬೆಚ್ಚಿಬಿದ್ದು, ಏನಾಯಿತೇ ಸುಮಾ ಯಾಕೆ ಹಂಗೆ ಕಿರುಚ್ದೆ ಎನ್ನುತ್ತಾ ಏಳಲಾಗದೆ ಕಣ್ಣು ಬಿಡಲಾಗದೆ ಪಡಿಪಾಟಲು ಪಡುವುದನ್ನು ಕಂಡು, ಜಿರಲೆ ಅತ್ತಿಗೆ ಎಂದೇ ಅಷ್ಟೇ! ಅವರ ನಿದ್ದೆ ಮಾರುದ್ದ ದೂರ ಹಾರಿ ಹೋಯಿತು. ಅದುವರೆಗೂ ಕಣ್ಣು ತೆರೆಯಲು ಕಷ್ಟ ಆಡುತ್ತಿದ್ದ ಅತ್ತಿಗೆ ಕಣ್ಣುಗಳನ್ನು ದೊಡ್ಡದಾಗಿ ಅರಳಿಸುತ್ತಾ, ಏನು ಜಿರಲೆನಾ, ಅಯ್ಯೋ ದೇವರೇ ಏನು ಮಾಡ್ಲೀಪಾ, ಇವುಗಳ ಕಾಟ ತಡೆಯೋಕೆ ಆಗ್ತಿಲ್ಲ. ಫ್ಲಾಟ್ ನಲ್ಲಿದ್ದ್ರೆ ಇದೆ ಖರ್ಮ, ಬೇರೆಯವರ ಮನೆ ಜಿರಲೆ ನಮ್ಮ ಮನೆ ಸೇರುತ್ವೆ. ಅವುಗಳನ್ನು  ಸಾಯಿಸೋಕೆ ಅಂತ ಔಷಧಿ  ತಂದರೆ ಒಂದೇ ವಾರದಲ್ಲಿ ಖಾಲಿಯಾದರೂ ಜಿರಲೆ ಮಾತ್ರ ರಕ್ತ ಬೀಜಾಸುರನಂತೆ ದಿನೇದಿನೇ ಜಾಸ್ತಿಯಾಗ್ತಾನೇ ಇದೆ. ನನ್ನ ಎರಡು ಒಳ್ಳೆ ಸೀರೆನಾ ತಿನ್ಧಾಕಿವೆ, ಇವರ್ದು ಅದೇನೋ ಕೇಬಲ್ ತಿಂದು ಹಾಕಿದೆ ಅಂತಿದ್ರು ಎನ್ನುತ್ತಾ ಅತ್ತಿಗೆ ಪಟ್ಟಿ ಮಾಡುತ್ತಲೇ  ಓಡಿ ಹೋಗಿ ಚಪ್ಪಲಿ ತಂದು ಜಿರಲೆಗೆ ರಪ್ಪನೆ ಬಡಿದರು. ಒಂದೇ ಏಟಿಗೆ ಜಿರಲೆ ಗೊಟಕ್ !

 ನಾನು ಜೋರಾಗಿ ಆಕಳಿಸುತ್ತಾ, ಅಷ್ಟೇ ಅಲ್ಲ ಅತ್ತಿಗೆ, ಮೊನ್ನೆ ಅದ್ಯಾವುದೋ ಪೇಪರ್ ನಲ್ಲಿ ಓದ್ದೆ.  ಚೀನಾದಲ್ಲಿ ಒಬ್ಬನ ಕಿವಿಯಿಂದ ಡಾಕ್ರು ಬರೋಬ್ಬರಿ 26 ಜಿರಳೆಗಳನ್ನು ತೆಗೆದ್ರಂತೆ ಅಂದಾಗ ಅತ್ತಿಗೆ ನಗೆಯಾಡುತ್ತ, ಚೀನಾದಲ್ಲಿ ಜನಸಂಖ್ಯೆ ಜಾಸ್ತಿ ಅಲ್ವೇ ಅದಕ್ಕೆ ಪಾಪ, ಜಾಗ ಇಲ್ಲದೆ ಮನುಷ್ಯರ ಕಿವಿಯೊಳಗೆ ಮನೆ ಮಾಡಿಕೊಂಡಿರಬೇಕು ಎನ್ನುತ್ತಾ ಹೊದಿಕೆಯನ್ನು ಸರಿ ಮಾಡಿಕೊಳ್ಳುತ್ತ ಮಂಚದ ಮೇಲೆ ಪವಡಿಸಿದರು. ನಾನು ಅತ್ತಿಗೆ, ಕಾಟನ್ ಎಲ್ಲಿದೆ ಎಂದು ಕೇಳಿದೆ. ಇಷ್ಟೊತ್ತಲ್ಲಿ ಕಾಟನ್ ಯಾಕೆ ನಿಂಗೆ, ನಾಳೆ ಬೆಳಿಗ್ಗೆ ಕೊಡ್ತೀನಿ, ಇವಾಗ ಮಲಕ್ಕೋ ಎನ್ನುತ್ತಾ ಕಣ್ಣು ಮುಚ್ಚಿಕೊಂಡರು.

ನಾನು, ನೀವು ಎಲ್ಲಿದೆ ಅಂತ ಹೇಳಿ ನಾನೇ ತೊಗೋತೀನಿ ಅಂದಾಗ ಅವರು, ಏನು ಅದು ಅಷ್ಟು ಅರ್ಜೆಂಟು, ಏನಾಯಿತು ಮೈ ಕೈ ಏನಾದರೂ ಗಾಯ ಆಗಿದ್ಯಾ ಎನ್ನುತ್ತಾ ಕಾಳಜಿಯಿಂದ ಎದ್ದು ಬಂದು ದೇವರ ಗೂಡಿನಲ್ಲಿದ್ದ ಹತ್ತಿಯನ್ನು ಸ್ವಲ್ಪ ಮುರಿದು ನನ್ನ ಕೈಗೆ ತಂದಿಟ್ಟು ನೀರು ಕುಡಿಯಲು ಅಡಿಗೆ ಮನೆಗೆ ಹೋದರು. ಅಡಿಗೆಮನೆಯಲ್ಲಿ  ಅತ್ತಿಗೆ ಏನೋ ಶಬ್ದ ಮಾಡುತ್ತಿರುವುದನ್ನು ಕಂಡು ಅತ್ತಿಗೆ ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂದು ನೋಡಲು ನಾನೂ ಅಡಿಗೆ ಮನೆಗೆ ನಡೆದೆ. ನೋಡಿದರೆ ಅತ್ತಿಗೆ ಚಪ್ಪಲಿಯಿಂದ ಜಿರಲೆಗಳನ್ನು ಹೊಡೆದು ಸಾಯಿಸುವುದರಲ್ಲಿ ಮಗ್ನರಾಗಿದ್ದರು.

 ನಾನು ಸತ್ತ ಜಿರಲೆಗಳನ್ನು ಎಣಿಸಲು ಆರಂಭಿಸಿದೆ. ಒಟ್ಟು ಹನ್ನೆರಡು ಜಿರಲೆಗಳು, ಜೊತೆಗೆ ಸಣ್ಣ ಪುಟ್ಟ ಮರಿಗಳೂ ಇದ್ದವು. ನಾನು ಅತ್ತಿಗೆಗೆ, ಜಿರಲೆ ಎಲ್ಲಿಂದ ಬರುತ್ತದೆ ಎಂದು ನೋಡಿ ಆ ದಾರಿ ಮುಚ್ಚಿಡಬಹುದಲ್ಲ ಎಂದು ಸಲಹೆ ಮಾಡಿದೆ. ಅಯ್ಯೋ ಅದೆಲ್ಲ ಮಾಡಾಯ್ತು, ಬಾಗಲ ಸಂದಿನಿಂದ, ಕಿಟಕಿ ಸಂದಿನಿಂದ, ಎಲ್ಲೆಲ್ಲಿಂದಾನೋ ಬರ್ತಾವೆ. ಬಹಳಷ್ಟು ಸಂದಿಗಳನ್ನು ಮುಚ್ಚಿ ಬಿಟ್ಟಿದೀನಿ, ಅದರೂ ಜಿರಲೆ ಬರೋದು ಮಾತ್ರ ನಿಂತಿಲ್ಲ ಎಂದಾಗ ನಾನು, ಅತ್ತಿಗೆ ನೀವು ಬೆಕ್ಕು ಸಾಕಬಹುದಲ್ವೆ ಎಂದೆ.ಅವರು, ನನಗೆ ಬೆಕ್ಕು ಕಂಡ್ರೆನೆ ಆಗಲ್ಲ,  ಬೆಳಗ್ಗೆನೇ ಶುರು ಆದ್ರೆ ಅದ್ರ ಪಿರಿಪಿರಿ ರಾತ್ರಿ ಅದರೂ ನಿಲ್ಲಲ್ಲ. ಅದಕ್ಕಿಂತ ಜಿರಲೇನೆ ವಾಸಿ, ಅವುಗಳದೇನಿದ್ರೂ ರಾತ್ರಿ  ಮಾತ್ರ ಕಾರುಬಾರು ಎಂದರು. ಜಿರಲೆಗಳ ಮಾರಣ ಹೋಮ ಮುಗಿಸಿ ಎಲ್ಲವನ್ನು ಸ್ವಚ್ಛ ಮಾಡಿ ಇಬ್ಬರೂ ಮಲಗುವ ಕೋಣೆಗೆ ಬಂದೆವು.

 ನಾನು ಅತ್ತಿಗೆ ಕೊಟ್ಟ ಹತ್ತಿಯನ್ನು ಎರಡು ಭಾಗವನ್ನಾಗಿ ಮಾಡಿಕೊಂಡು ಉಂಡೆ ಮಾಡಿ ನನ್ನ ಎರಡೂ ಕಿವಿಯೊಳಗೆ ತುರುಕಿಸಿ ಬಿಟ್ಟೆ. ಅತ್ತಿಗೆ ಅಚ್ಚರಿಯಿಂದ ನನ್ನನ್ನು ನೋಡುತ್ತಾ, ಹೋ ನಿನಗೆ ಆ ಚೀನಾದವನ ನೆನಪಾಯಿತಾ, ನಮ್ಮನೆಯಲ್ಲಿ ತುಂಬಾನೇ ಜಾಗ ಇದೆ ಕಣೆ ಜಿರಲೆಗಳಿಗೆ, ನೀನು ಹೆದರ್ಕೋಬೇಡ ಬಾ ಮಲಕ್ಕೋ ಎಂದರು. ಆದರೂ ನಾನು ಹತ್ತಿಯನ್ನು ಕಿವಿಯಿಂದ ತೆಗೆಯದೆ, ಪರವಾಗಿಲ್ಲ ನನಗೆ ತುಂಬಾನೇ ಭಯ ಆಗ್ತಿದೆ. ಎನ್ನುತ್ತಾ ಲೈಟು ಆಫ್ ಮಾಡಿ ಅವರ ಪಕ್ಕದಲ್ಲೇ ಉರುಳಿಕೊಂಡೆ. ಅತ್ತಿಗೆ ಅಷ್ಟರಲ್ಲೇ ನಿದ್ದೆ ಹೋಗಿದ್ದರು. ಅತ್ತಿಗೆ ಬಹಳ ಪುಣ್ಯವಂತರಪ್ಪ, ನಿದ್ದೆ ಬಹಳ ಚೆನ್ನಾಗಿ ಬರುತ್ತೆ ಅಂದುಕೊಳ್ಳುತ್ತ ನಾನು ತಿರುಗುತ್ತಿದ್ದ ಫ್ಯಾನನ್ನು ದಿಟ್ಟಿಸಿ ನೋಡುತ್ತಾ ಮಲಗಿದೆ.

ನಮ್ಮಣ್ಣ ಶಿವೂ ದೂರದ ಊರಿಗೆಲ್ಲ ಹೋಗಬೇಕಾದ್ರೆ ಪಕ್ಕದ ಊರಿನಲ್ಲೇ ಇದ್ದ ನನ್ನನ್ನು ಅತ್ತಿಗೆ ಕರೆಸಿಕೊಳ್ಳುತ್ತಿದ್ದಳು. ನಾನು ಖುಶಿಯಿಂದಲೇ ಓಡಿ ಬರುತ್ತಿದ್ದೆ. ಗಂಡನಿಗೆ ನಾನು ಆಗಾಗ ತವರಿಗೆ ದೌಡಾಯಿಸುವುದು ಇಷ್ಟವಾಗದೆ ಇದ್ದರೂ ಏನೂ ಹೇಳುತ್ತಿರಲಿಲ್ಲ. ಕಾರಣ ನಮ್ಮತ್ತಿಗೆ. ಅಪ್ಪ ಅಮ್ಮ ಇಲ್ಲದ ನನ್ನನ್ನು ಸ್ವಂತ ತಾಯಿಗಿಂತ ಹೆಚ್ಚಾಗಿ ಅಕ್ಕರೆಯಿಂದ ಕಾಣುತ್ತಿದ್ದಳು.

ನಾನು ಮದುವೆಯಾದ ಮೊದಲಿಗೆ ನನ್ನ ಗಂಡ ವಿನಾ ಕರಣ ಜಗಳ ಮಾಡುತ್ತಿದ್ದರು. ನಿಂಗೆ ತವರಿನವರು ಅದು ಕೊಡಲಿಲ್ಲ ಇದು ಕೊಡಲಿಲ್ಲ ಎಂದು ಕಿಚಾಯಿಸುತ್ತಿದ್ದರು. ಅತ್ತೆ  ಮಾವ ಕೂಡ ಕಿರುಕುಳ ಕೊಡಲು ಶುರು ಮಾಡಿದಾಗ ಅತ್ತಿಗೆ ಬಳಿ ಫೋನಿನಲ್ಲಿ ಹೇಳಿಕೊಂಡು ಅತ್ತಿದ್ದೆ. ಅವಳು ತಕ್ಷಣ ಅಣ್ಣನ ಜೊತೆ ನಮ್ಮ ಮನೆಗೆ ಬಂದು ಎಲ್ಲರಿಗೂ ಚೆನ್ನಾಗಿ ದಬಾಯಿಸಿ ನಮ್ಮ ಹುಡುಗಿಗೆ ಏನೋ ಬೇಕೋ ಅದನ್ನು ನಾವು ಕೊಡ್ತೇವೆ. ನಿಮಗೆ ಏನೋ ಬೇಕೋ ಅದನ್ನು ನೀವೇ ತೊಗೋಬೇಕು, ನನ್ನ ನಾದಿನಿ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ, ನಮ್ಮಣ್ಣ ಪೋಲೀ ಸ್ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದಾನೆ. ಅವನಿಗೆ ಒಂದು ಫೋನು ಮಾಡಿದ್ರೆ ಸಾಕು, ಮತ್ತೆ ನೀವೆಲ್ಲ ಜೀವನ ಪೂರ್ತಿ ಜೈಲಿನಲ್ಲೇ ಕಳೆಯಬೇಕಾಗುತ್ತೆ ಎಂದು ಎಚ್ಚರಿಸಿದ್ದಳು.

ನನ್ನ ಅಣ್ಣ ಅವಳ ಮಾತು ಕೇಳಿ ಭಾವುಕನಾಗಿ ಕಣ್ಣಲ್ಲಿ ನೀರು ತುಂಬಿಕೊಂಡು, ಸುಧಾ, ನನ್ನ ತಂಗಿ ಎಂದರೆ ನಿನಗೆಷ್ಟು ಪ್ರೀತಿ ಕಣೆ ಎಂದಿದ್ದ. ನನಗೂ ಅತ್ತಿಗೆ ಮೇಲೆ ಅಭಿಮಾನ ಉಕ್ಕಿ ಬಿಟ್ಟಿತ್ತು. ಅಂದಿನಿಂದ ಗಂಡನ ಮನೆಯವರು ನಾನು ಏನು ಮಾಡಿದರೂತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಒಂದು ತಿಂಗಳ ನಂತರ ಅತ್ತಿಗೆ ಅವರ ಅಣ್ಣನೊಂದಿಗೆ ನಮ್ಮ ಮನೆಗೆ ಬಂದಾಗ ನಮ್ಮ ಅತ್ತೆ ಮಾವ ಬೆವರಿಬಿಟ್ಟಿದ್ದರು. ಕೊನೆಗೆ ಅವರು ಬಂದಿದ್ದು ಅವರ ಮಗನ ಬ್ರಹ್ಮೋಪದೇಶಕ್ಕೆ ಆಮಂತ್ರಣ ನೀಡಲು ಎಂದು ತಿಳಿದಾಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆಗ ಅತ್ತಿಗೆ ನನ್ನತ್ತ ವಾರೆ ನೋಟ ಬೀರಿ ನಕ್ಕಿದ್ದಳು. ಎಲ್ಲ ನೆನಪು ಮಾಡಿಕೊಳ್ಳುತ್ತಲೇ ನಿದ್ದೆ ಹೋದೆ.

ಮರುದಿನ ಬೆಳಗ್ಗೆ ಎದ್ದಾಗ ಅತ್ತಿಗೆಯ ಹಾಡು ಮೆಲ್ಲನೆ ಕೇಳಿಸುತ್ತಿತ್ತು. ಅವರು ಆಗಲೇ ಸ್ನಾನ ಮಾಡಿ ಕಾಫಿ ತಿಂಡಿ ರೆಡಿ ಮಾಡಿ ಆಗಿತ್ತು. ನಾನು ಜಿರಲೆ ಭಯದಿಂದ ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತಾ ಬೆಳಗಿನ ಜಾವದಲ್ಲಿ ನಿದ್ದೆಗೆ ಜಾರಿದ್ದೆ. ಹಾಗಾಗಿ ಅತ್ತಿಗೆ ನನ್ನನ್ನು ಎಬ್ಬಿಸಿರಲಿಲ್ಲ. ನನ್ನನ್ನು ಕಂಡ ಅತ್ತಿಗೆ, ಎದ್ಯಾ ಮುಖ ತೊಳಕೊಂಡು ಬಾ ಕಾಫಿ ಕೊಡ್ತೀನಿ ಅಂದರು, ನಾನು ಹಲ್ಲುಜ್ಜಲು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ. ಹಲ್ಲುಜ್ಜಿಕೊಂಡು ಫ್ರೆಶ್ ಆಗಿ ಹೊರಗೆ ಬರುವಾಗ ಮೇಲಿನಿಂದ ಒಂದು ಹಲ್ಲಿ  ನನ್ನ ಎದುರೇ ಕೆಳಗಿ ಬಿದ್ದು ಬಿಟ್ಟಿತು. ಅದನ್ನು ಕಂಡು ಗಾಬರಿಯಾಗಿ ನಾನು ಕಿರುಚಿದೆ. ಅತ್ತಿಗೆ ನಗುತ್ತ, ಹಯ್ಯೋ ಆ ಹಲ್ಲಿ ನಿನಗೇನೂ ಮಾಡಲ್ಲ ಬಾ. ಮನೆ ತುಂಬಾ ಜಿರಲೆಗಳಿದ್ರೂ ತಾನೇ ಒಂದೇ ಒಂದು ಜಿರಲೆ ಹಿಡಿಯಲ್ಲ, ನಾನು ಸಾಯ್ಸಿದ ಜಿರಲೇನ ತಿನ್ನೋಕೆ ಮಾತ್ರ ಬಂದ್ಬಿಡುತ್ತೆ ಸೋಮಾರಿ ಎಂದಾಗ ನನಗೆ ನಗು ತಡೆಯಲಾಗಲಿಲ್ಲ. ಹಲ್ಲಿ  ಅಲ್ಲಿದ್ದ ಸೋಫಾದ ಕೆಳಗೆ ನುಣುಚಿ ಕೊಂಡಿತು. ಅಲ್ಲ ಅತ್ತಿಗೆ ಇಷ್ಟು ಸಮಯದಿಂದ ನಾನು ಈ ಮನೆಗೆ ಬರ್ತಾ ಇದ್ದೀನಿ. ಆದ್ರೆ ಒಂದಿನಾನೂ ನಂಗೆ ಜಿರಲೆ ಕಾಣಿಸಿಲ್ಲ ಎಂದು ನನ್ನ ಸಂದೇಹ ವ್ಯಕ್ತ ಪಡಿಸಿದೆ. ಅದಕ್ಕವರು, ಓ ಅದಾ ನಿಮ್ಮಣ್ಣ ಯಾವಾಗಲೂ ದೂರದ ಊರಿಗೆ ಹೋಗಬೇಕಾದ್ರೆ ನಾಲ್ಕು ದಿನ ಮುಂಚೆನೇ ಹೇಳುತ್ತಿದ್ದರು. ಅವರಿಗೂ ಗೊತ್ತು ನಿಂಗೆ ಜಿರಲೆ ಕಂಡ್ರೆ ಭಯ ಅಂತ! ನಾನು ನೀನು ಬರುವ ಮೊದಲೇ ಔಷಧಿ ಹಾಕಿ ಜಿರಲೆ ಸಂಹಾರ ಮಾಡಿ ಮುಗಿಸ್ತಿದ್ದೆ. ಆದ್ರೆ ಈ ಸಲ ಅವರಿಗೇನೋ ಬಹಳ ಅರ್ಜೆಂಟಾಗಿ ಹೋಗಬೇಕಾಗಿ ಬಂತು. ಹಾಗಾಗಿ ನಂಗೆ ಔಷಧಿ ಹಾಕೋಕೆ ಸಮಯ ಸಿಕ್ಕಿಲ್ಲ ಎಂದರು. ಅಣ್ಣ ಅತ್ತಿಗೆಗೆ ನನ್ನ ಮೇಲಿರುವ ಕಾಳಜಿ ಕಂಡು ನನಗೆ ಅಭಿಮಾನ ಮೂಡಿತು.

ಆಗ ನನಗೆ ಒಮ್ಮೆ ಯಾರೋ ಜಿರಲೆಗಳಿಗೆ ಅಂತ ಬಾಂಬ್ ಇದೆ, ಅದನ್ನು ಉಪಯೋಗಿಸೋವಾಗ ಮನೆಯವರು ಮಾತ್ರ ಎರಡು ದಿನ ಮನೇಲಿ ಇರಬಾರದಂತೆ ಅಂತ ಹೇಳಿದ್ದು ನೆನಪಾಯಿತು, ಅದನ್ನೇ ಅತ್ತಿಗೆಗೆ ಹೇಳಿದೆ, ಎರಡು ದಿನ ನೀವಿಬ್ಬರೂ ನಮ್ಮನೆಗೆ ಬಂದ್ಬಿಡಿ, ನಿಮ್ಮ ಸಮಸ್ಯೆ ಪರಿಹಾರವಾದ ಹಾಗೆನೇ ಎಂದೆ. ಅತ್ತಿಗೆ, ಏನೂ ಬಾಂಬಾ, ಮನೇಲಿ ಗ್ಯಾಸ್ ಅದೂ ಇದೂ ಎಲ್ಲ ಇದೆ ಕಣೆ, ಮನೆನೇ ಸುಟ್ಟು ಹೋದರೆ ಎಂದು ಆತಂಕ ವ್ಯಕ್ತ ಪಡಿಸಿದರು. ನಾನು ನಗುತ್ತ, ಅಯ್ಯೋ ಅತ್ತಿಗೆ ಅಂಥಾ ಬಾಂಬ್ ಅಲ್ಲ, ಏನೂ ಆಗಲ್ಲ ಎಂದೆ. ಅದರ ಬಗ್ಗೆ ನನಗೆ ಜಾಸ್ತಿ ಏನೂ ಮಾಹಿತಿ ಇರಲಿಲ್ಲ.

ಆಗ ಅತ್ತಿಗೆ, ಒಂದು ದಿನ ಮನೆಗೆ ಬೀಗ ಇದ್ರೆ ಕಳ್ರು ನುಗ್ತಾರೆ, ಇನ್ನು ಎರಡು ದಿನ ಮನೆ ಬಿಟ್ಟಿದ್ದರೆ ಕಳ್ಳರು ಬಂದು ಮನೆನ ಗುಡ್ಸಿ ಗುಂಡಾಂತರ ಮಾಡಿ ಬಿಡ್ತಾರೆ, ಆಮೇಲೆ ಮನೆಯೆಲ್ಲ ಖಾಲಿ ಖಾಲಿ,ಜಿರಲೆಗಳೂ ಇಲ್ಲ, ಮನೆ ಸಾಮಾನೂ ಇಲ್ಲ ಎನ್ನುತ್ತಾ ನಕ್ಕರು, ನಾನೂ ನಕ್ಕೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ನಾನು ಓಡಿ ಹೋಗಿ ಬಾಗಿಲು ತೆರೆದೆ, ಅಣ್ಣ ಬಂದಿದ್ದ, ಅತ್ತಿಗೆ ಅವನನ್ನು ಕಂಡು ಆಶ್ಚರ್ಯದಿಂದ, ಏನು ಇವತ್ತು ಬಂದ್ರಿ, ನಾಳೆ ಬರ್ತೀನಿ ಅಂತಿದ್ರಿ ಎಂದಾಗ ಅಣ್ಣ ಅಲ್ಲಿ ಕೆಲಸವೆಲ್ಲ ಬೇಗ ಮುಗೀತು ಅದಕ್ಕೆ ಬಂದೆ, ಸುಮ್ನೆ ನಮ್ಮ ಸುಮಾಗೆ ಯಾಕೆ ತೊಂದ್ರೆ ಎನ್ನುತ್ತಾ ಸೋಫಾದ ಮೇಲೆ ಉಶ್ ಎನ್ನುತ್ತಾ ಕುಕ್ಕರಿಸಿದರು.