ಟಕ ಟಕ….

ಟಕ ಟಕ ಬಾಗಿಲಿಗೆ ಬಡಿದ ಶಬ್ದ.   ದಿನವಿಡೀ  ಕೆಲಸ ಮಾಡಿ  ಸುಸ್ತಾದ ಸುಲತ  ಆಗ ತಾನೇ ನಿದ್ದೆ ಹೋಗಿದ್ದಳು. ಹಾಸಿಗೆಯಲ್ಲಿ ಬಿದ್ದವಳಿಗೆ ಲೋಕವೇ ಇರಲಿಲ್ಲ. ಬಾಗಿಲು ಬಡಿದ ಶಬ್ದ ಕೇಳಿದರೂ ಕಣ್ಣು ತೆರೆಯಲಾಗದಷ್ಟು ನಿದ್ದೆ ಆವರಿಸಿತ್ತು. ಅವಳ ಮಗ ತುಷಾರ್ ರಾತ್ರಿ ಹೊತ್ತು ತನಗೆ ಏನಾದರೂ ಬೇಕಾದಾಗ ಉಗುರಿನಿಂದ  ಹಾಗೇ ಬಾಗಿಲು ಬಡಿಯುತ್ತಿದ್ದ. ಅವನೇ ಇರಬೇಕೆಂದು   ಕಷ್ಟಪಟ್ಟು ಕಣ್ಣು ತೆರೆದು ಏನೋ ಅದು ? ಏನಾಯಿತು, ಹುಷಾರಿಲ್ಲವಾ ? ಎಂದು ಕೇಳಿದಳು. ಆದರೆ ಅವನ ಉತ್ತರವೇ ಇಲ್ಲದ್ದನ್ನು ಕಂಡು ಬಾಗಿಲು ಬಡಿದ ಹಾಗೆ  ತನಗೆ ಕನಸು ಬಿದ್ದಿರಬೇಕು ಎಂದುಕೊಳ್ಳುತ್ತ ಮುಸುಕೆಳೆದು ಮಲಗಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಮತ್ತೆ ಟಕ ಟಕ ಸದ್ದು,  ಅವಳಿಗೆ ರೇಗಿ ಹೋಯಿತು. ಆರಾಮವಾಗಿ ಒಂದು ಗಳಿಗೆ ಮಲಗಲೂ ಸ್ವಾತಂತ್ರ್ಯವಿಲ್ಲ ಎಂದುಕೊಂಡು ಸಿಟ್ಟಿನಿಂದ ಎದ್ದು ಬಾಗಿಲು ತೆರೆದಳು. ಮಗನಿಗೆ  ಚೆನ್ನಾಗಿ ಗದರಿಸಬೇಕೆಂದುಕೊಂಡವಳಿಗೆ ಅಲ್ಲಿ ಯಾರೂ ಇರದ್ದು ಕಂಡು ಮತ್ತಷ್ಟು ಸಿಟ್ಟು ಬಂದಿತು. ಸೀದಾ ಮಗನ ರೂಮಿಗೆ ಹೋಗಿ ಲೈಟು ಹಾಕಿದಳು. ಮಗ ಚೆನ್ನಾಗಿ ನಿದ್ರಿಸುತ್ತಿದ್ದ,  ನಾಟಕ ಮಾಡುತ್ತಿದ್ದಾನೆಯೇ ಎಂದು ನೋಡಲು ಅವನ ಮೈ ಅಲುಗಾಡಿಸಿದಳು. ನಿದ್ದೆಯಲ್ಲಿದ್ದ  ಅವನು ಗಾಬರಿಗೊಂಡು ಎದ್ದು ಏನಾಯಿತು ಮಮ್ಮಿ ಎಂದ. ಅರೆ! ನೀನು ಬಂದು ಬಾಗಿಲು ಬಡಿದು ನನ್ನನ್ನು ಎಬ್ಬಿಸಿ ಈಗ ನಾಟಕವಾಡುತ್ತೀಯಾ ಎಂದು ಗದರಿಸಿದಳು.

ಅತ್ತ ಕಡೆಯ ರೂಮಿನಿಂದ ಅವಳ ಅತ್ತೆ ಒಂದು ಗಳಿಗೆ ನಿದ್ದೆ ಮಾಡುವ ಹಾಗಿಲ್ಲ ಮಧ್ಯರಾತ್ರಿಯಲ್ಲೂ ಅದೇನು ಮಾತೋ ಎಂದು ಗೊಣಗುವುದು ಕೇಳಿಸಿತು. ಸುಲತಾಳ  ಸಿಟ್ಟು ಅತ್ತೆಯ ಮೇಲೆ ತಿರುಗಿತು. ಅತ್ತೆ  ಆರೋಗ್ಯವಾಗಿದ್ದರೂ ಸಹ ದಿನವಿಡೀ ಮಲಗಿಕೊಂಡೇ ಇರುವುದು, ತನಗೆ ಮನೆಕೆಲಸದಲ್ಲಿ ಯಾವುದೇ ಸಹಾಯ ಮಾಡುವುದಿಲ್ಲ ಆದರೂ ನಿದ್ದೆಯ ಭೂತ ಹಿಡಿದಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಜೋರಾಗಿ ಹೇಳಿದರೆ ನಡುರಾತ್ರಿಯಲ್ಲೂ  ಜಗಳಕ್ಕೆ ಕಾಲು ಕೆರೆದು ಬರುತ್ತಾರೆ ಎಂದು ಅವಳಿಗೆ ಚೆನ್ನಾಗಿ ಗೊತ್ತು. ತುಷಾರ್ ತನಗೆ ಸ್ವಲ್ಪ ತಲೆನೋಯುತ್ತಿದೆ ಆದರೂ ತಾನು ಬಾಗಿಲು ಬಡಿದಿಲ್ಲ ಎಂದ. ಸರಿ ಎಂದು ಅವನಿಗೆ ತಲೆನೋವಿಗೆ ಮಾತ್ರೆ ಕೊಟ್ಟು ತನ್ನ ರೂಮಿಗೆ ನಡೆದಳು. ಅವಳ ಗಂಡ ಶ್ರೀಪತಿ ಆರಾಮವಾಗಿ ಮಲಗಿದ್ದ . ಇವರಿಗಂತೂ ಮನೆಯ ಮಾಡೇ ತಲೆ ಮೇಲೆ ಬಿದ್ದರೂ  ಗೊತ್ತಾಗಲಿಕ್ಕಿಲ್ಲ ಎಂದು ಹೇಳುತ್ತ ಮಲಗಿಕೊಂಡಳು.

ಸುಮಾರು ಅರ್ಧ ಗಂಟೆಯ ನಂತರ ಮತ್ತೆ  ಟಕ ಟಕ ಸದ್ದು ಕೇಳಿಸಿತು. ಯಾಕೋ  ಇವತ್ತು ನನಗೆ ನಿದ್ದೆ ಮಾಡುವ ಯೋಗವೇ ಇಲ್ಲ ಎಂದುಕೊಳ್ಳುತ್ತ ಗಂಡ ಹಾಯಾಗಿ ಮಲಗಿದ್ದನ್ನು ನೋಡಿ ಈ ಸಲ ಅವರೇ ಎದ್ದು ನೋಡಲಿ ಎಂದು ಸುಮ್ಮನಾದಳು. ಟಕ ಟಕ ಶಬ್ದ ಮುಂದುವರೆಯಿತು. ಆಸಾಮಿ ಏಳುವ ಲಕ್ಷಣ ಇರಲಿ ಅತ್ತಿಂದಿತ್ತ ಅಲುಗಾಡಲೂ ಇಲ್ಲ. ಸುಲತಾಗೆ ರೇಗಿಹೋಯಿತು ಎಲ್ಲ ನಾನೇ ಯಾಕೆ ಮಾಡಬೇಕು  ಎಂದುಕೊಳ್ಳುತ್ತ ಗಂಡನನ್ನು ಎಬ್ಬಿಸಿದಳು ನೋಡಿ, ಯಾರೋ ಬಾಗಿಲು ಬಡಿಯುತ್ತಿದ್ದಾರೆ,  ಮಗ ನಿದ್ದೆ ಮಾಡುತ್ತಿದ್ದಾನೆ  ಬಹುಶಃ  ನಿಮ್ಮ ಅಪ್ಪ ಇರಬೇಕು ಎಂದಳು. ಆದರೆ ಆ ಮಹಾಶಯ ಕಣ್ಣು ಕೂಡ ತೆರೆಯದೇ ಕುಡಿದು ಅಮಲೇರಿದವನಂತೆ  ಯಾರಾ… ದರೂ ಇರ್ಲಿ….  ನೀನು..  ಸುಮ್ನೆ ..ಮಲಕ್ಕೋ ಎಂದು ಉಲಿದು ಸಣ್ಣದಾಗಿ  ಗೊರಕೆ ಆರಂಭಿಸಿದ. ಅವಳಿಗೆ ತಲೆ ಚಿಟ್ಟು ಹಿಡಿದಂತಾಯಿತು. ಅತ್ತ   ಟಕ  ಟಕ ಸದ್ದು ಇತ್ತ ಗೊರಕೆ ಸದ್ದು  ಕೇಳಲಾಗದೆ ಅವಳಿಗೆ ಜೋರಾಗಿ ಕಿರಿಚಿಕೊಳ್ಳೋಣ ಎಂದೆನಿಸಿತು. ತಕ್ಷಣವೇ ಅವನ ಮೂಗು ಹಿಡಿದಳು, ಗೊರಕೆಯ ಸದ್ದು ನಿಂತಿತು. ಅವನು ಬದಿಗೆ ತಿರುಗಿ ಮಲಗಿದ. ಅದು ಅವನಿಗೆ ತಿಳಿದದ್ದೇ. ದಿನಾ ಅವನು ದೊಡ್ಡದಾಗಿ ಗೊರಕೆ ಹೊಡೆಯುವುದು ಒಳ್ಳೆಯ ನಿದ್ದೆಯಲ್ಲಿದ್ದ ಅವಳು ಅವನ ಭಯಾನಕ ಗೊರಕೆ ಸದ್ದಿಗೆ ಬೆಚ್ಚಿ  ಏಳುವುದು ನಂತರ ಅವನ ಗೊರಕೆ ನಿಲ್ಲಿಸಲು ಅವನ ಮೂಗು ಹಿಡಿಯುವುದು ಆಗ ಅವನಿಗೆ ಎಚ್ಚರವಾಗಿ ಬದಿಗೆ ತಿರುಗಿ ಮಲಗುವುದು ಇದು  ಪದ್ಧತಿ !

ಗೊರಕೆಯಂತೂ ನಿಂತಿತು,  ಇನ್ನು ಬಾಗಿಲಿಗೆ ಯಾರು ಬಡಿಯುತ್ತಿದ್ದಾರೆ ಎಂದು ನೋಡಬೇಕು ಎಂದು ಮೆಲ್ಲನೆ ಬಾಗಿಲು ತೆರೆದಳು. ಆದರೆ ಅಲ್ಲಿ ಯಾರೂ ಇರಲಿಲ್ಲ . ಇದೇನಪ್ಪಾ ಆಶ್ಚರ್ಯ ! ಭೂತ, ಪ್ರೇತ ಏನಾದರೂ ಇರಬಹುದೇ  ಎಂದುಕೊಳ್ಳುತ್ತಿದ್ದಂತೆ ಮೈಯೆಲ್ಲ ಬೆವರಿತು. ಭಯದಿಂದ ತಕ್ಷಣವೇ ಬಾಗಿಲು ಹಾಕಿ ದೇವರನ್ನು ಧ್ಯಾನಿಸತೊಡಗಿದಳು. ಭಯದಿಂದ ಅವಳ ನಿದ್ದೆ ಹಾರಿ ಹೋಗಿತ್ತು. ಹಳೇಯ ಕಾಲದ ಮನೆ, ಇವರ ತಾತ ಮುತ್ತಾತ ಏನಾದರೂ ದೆವ್ವವಾಗಿ ಬಂದರೇ ಎಂದುಕೊಂಡು ನಡುಗಿದಳು. ಇಷ್ಟೆಲ್ಲ ಯೋಚನೆ ಮಾಡುತ್ತಿರುವಾಗ  ಸದ್ದು ನಿಂತಿದ್ದು ಅವಳ ಗಮನಕ್ಕೆ ಬರಲಿಲ್ಲ. ದಿಂಬಿನಿಂದ ಮುಖ ಮುಚ್ಚಿಕೊಂಡು ಮುದ್ದೆಯಾಗಿ ಮಲಗಿದಳು. ಆಗ ಅವಳಿಗೆ ಸದ್ದು ನಿಂತಿದ್ದು ಅರಿವಾಯಿತು. ಸಧ್ಯ ದೆವ್ವ ಹೋಯಿತು ಅಂದುಕೊಂಡು ಮಲಗಿದಳು.

ಸುಮಾರು ಹೊತ್ತಿನ ಬಳಿಕ ಮತ್ತೆ ಟಕ ಟಕ ಶಬ್ದ ಶುರುವಾಯಿತು. ದೇವರಿದ್ದ ಕಡೆ ದೆವ್ವ ಬರುವುದಿಲ್ಲ ಎಂದು ಕೇಳಿ ಅರಿತಿದ್ದ ಅವಳು ದೇವರ ಮೂರ್ತಿಯನ್ನು ಬಾಗಿಲ ಬಳಿ ಇಟ್ಟರೆ ಹೇಗೆ  ಅಂತ ಅಂದುಕೊಂಡಳು. ಎದ್ದು ಲೈಟ್  ಹಾಕಿದಳು,  ತಮ್ಮ ಕೋಣೆಯಲ್ಲಿದ್ದ ದೇವರ ಮೂರ್ತಿಯನ್ನು ಬಾಗಿಲ ಬಳಿ ಇಡಲು ಬಗ್ಗಿದಾಗ ಅಲ್ಲಿ ಇಲಿಯೊಂದು ಬಾಗಿಲಿಗಿದ್ದ   ಚಿಕ್ಕ ಎಡೆಯನ್ನು ಕೊರೆದು ಸ್ವಲ್ಪ ದೊಡ್ಡದು ಮಾಡಿ ಅದರ ಮೂಲಕ ಹೊರಹೋಗಲು ಹವಣಿಸುತ್ತಿರುವುದನ್ನು ನೋಡಿ ಅವಳಿಗೆ ಜೋರಾಗಿ  ನಗು ಬಂದಿತು. ಟಕ ಟಕ ಸದ್ದು ಮಾಡುತ್ತಿದುದು ದೆವ್ವವಲ್ಲ, ಇಲಿ ! ನೀನಾ ನನ್ನ ನಿದ್ದೆ ಹಾಳು ಮಾಡಿದ್ದು ? ಇವತ್ತಿಗೆ ನಿನ್ನ ಕಾಲ ಮುಗೀತು ಎಂದು ಇಲಿಯನ್ನು ಹೊಡೆಯಲು ಏನಾದರೂ ಸಿಗುವುದೇ ಎಂದು ಸುತ್ತ ಮುತ್ತ ನೋಡಿದಳು. ಏನೂ ಸಿಗಲಿಲ್ಲ, ಕಾಲಿನಿಂದಲೇ ತುಳಿಯಲು ನೋಡಿದಳು. ಅದು ಬಾಗಿಲ ಎಡೆಯಿಂದ ನುಸುಳಿತು.  ಇನ್ನು ಅದು ಪಾರಾದಂತೆಯೇ ಎಂದುಕೊಂಡವಳಿಗೆ ಬಾಲ ಇನ್ನೂ ಬಾಗಿಲ ಒಳಗೇ ಇದ್ದುದು ಕಂಡು ಸಂತೋಷವಾಗಿ ತಕ್ಷಣವೇ ಬಾಲವನ್ನೇ ಗಟ್ಟಿಯಾಗಿ ಹಿಡಿದಳು! ಅದನ್ನು ಮುಟ್ಟಲು ಅವಳಿಗೆ ಮುಜುಗರವಾದರೂ ತನ್ನ ನಿದ್ದೆಯನ್ನು ಹಾಳುಮಾಡಿದ್ದಕ್ಕಾಗಿ ಅವಳಿಗೆ ಆ ಇಲಿಯ ಮೇಲೆ ಕೆಟ್ಟ ಕೋಪ ಬಂದಿತ್ತು. ಅದನ್ನು ಬಿಡಲೇಬಾರದು ಎಂದು ಛಲ ತೊಟ್ಟಳು.

ಬಾಗಿಲ ಹೊರಗಿದ್ದ  ಇಲಿ ತನ್ನ ಬಾಲ ಬಿಡಿಸಿಕೊಳ್ಳಲು ಹೆಣಗಾಡತೊಡಗಿತು. ಅವಳಿಗೂ, ಇಲಿಗೂ ಬಾಲ ಜಗ್ಗಾಟ ನಡೆಯಿತು.  ಇನ್ನು ಅದು ಹೇಗಾದರೂ ಮಾಡಿ ತಪ್ಪಿಸಿಕೊಂಡು ಓಡುತ್ತದೆ ಎಂದುಕೊಂಡು ತನ್ನ ಎರಡೂ ಕೈಗಳಿಂದ ಬಾಲವನ್ನು ಭದ್ರವಾಗಿ ಹಿಡಿದುಕೊಂಡಳು!  ಅತ್ತೆ..  ಅತ್ತೆ .. ಮಾವ..  ಮಾವ  ಎಂದು ಜೋರಾಗಿ ಕಿರಿಚಿದಳು. ಇವಳು ಅಪರಾತ್ರಿಯಲ್ಲಿ ಯಾಕೆ ಕಿರಿಚಿದಳು? ಮಗನಿಗೇನಾದರೂ ಆಯಿತೇ ಎಂದು ಭಯದಿಂದ ಇಬ್ಬರೂ ಓಡಿ ಬಂದರು. ಆಗ ಸುಲತ ಬಾಗಿಲು ತೆರೆಯದೇ  ನಮ್ಮ ರೂಮಿನ ಬಾಗಿಲ ಹತ್ತಿರ ಇಲಿ ಸಿಕ್ಕಿಹಾಕಿಕೊಂಡಿದೆ, ಇಲಿ ಹೊರಗೆ ಬಂದಿದೆ ಆದರೆ  ಅದರ ಬಾಲ ಮಾತ್ರ ನಾನು ಒಳಗಿನಿಂದ ಹಿಡಿದುಕೊಂಡಿದ್ದೇನೆ ನೀವು ಅದನ್ನು ಕೊಂದುಬಿಡಿ ಎಂದಳು. ಅತ್ತೆ, ಮಾವ ಇಬ್ಬರೂ ಇವಳು ಇಲಿಯ ಬಾಲ ಹಿಡಿದು ಕೂತಿದ್ದಾಳೆ ಎಂದಾಗ  ಇವಳು ನಿದ್ದೆಯಲ್ಲೇನೋ ಮಾತಾಡುತ್ತಿದ್ದಾಳೆ ಯಾರಿಗಾದರೂ ಇಲಿಯ ಬಾಲ ಹಿಡಿಯಲಿಕ್ಕಾಗುತ್ತದೆಯೇ ಎಂದು ಜೋರಾಗಿ ನಕ್ಕರು. ಸುಲತಾಗೆ ಸಿಟ್ಟು ಬಂದು ಬಾಗಿಲ ಬುಡದಲ್ಲಿ ನೋಡಿ, ಇಲಿ ಕಾಣುತ್ತದೆಯೇ ಎಂದಾಗ ಅಲ್ಲಿ ಕೊಸರಾಡುತ್ತಿದ್ದ ಇಲಿಯನ್ನು ಕಂಡು ಬೆರಗಾದರು. ಆಗ ಅವಳ ಮಾವನಿಗೆ ತಕ್ಷಣವೇ ಪಕ್ಕದ ಮನೆಯ ಬೆಕ್ಕಿನ ನೆನಪಾಗಿ ಅವರು ಬಿಲ್ಲು….  ಬಿಲ್ಲು ಎಂದು ಜೋರಾಗಿ ಅರಚುತ್ತ ಹೊರಗೆ ಓಡಿದರು ! ಆ ಹೊತ್ತಿನಲ್ಲಿ ಬೆಕ್ಕೆಲ್ಲಿ ಸಿಗಬೇಕು? ಈಗ ನಗುವ ಸರದಿ ಸುಲತಾಳದ್ದಾಯಿತು.  ಅಲ್ಲಿ ಪೊರಕೆ ಇದ್ದರೆ ಅದರಿಂದ ಹೊಡೆದುಬಿಡಿ ಜಾಸ್ತಿ ಹೊತ್ತು ನನಗೆ ಹಿಡಿದಿಡಲು ಆಗುವುದಿಲ್ಲ  ಅತ್ತೆ, ಎಂದಳು. ಅವಳ ಅತ್ತೆ,  ನಾನು ಇಲಿಯನ್ನು ಕೊಲ್ಲುವ ಪಾಪ ಮಾಡಲಾರೆ,  ನನ್ನಿಂದಾಗದು ಎಂದರು. ಸುಲತಾಗೆ ಸಿಟ್ಟು ಬಂದು  ಇಡೀ ದಿನ ಮನೆಯಲ್ಲಿ ಇಲ್ಲ ಸಲ್ಲದ ಕಾರಣಕ್ಕೆ ನನ್ನ ಜೀವ ತಿನ್ನುವಾಗ ಪಾಪ ಪುಣ್ಯದ ಅರಿವಿರುವುದಿಲ್ಲ. ನನ್ನ ಜೀವ ತಿಂದು ನರಕಕ್ಕೆ ಹೋಗುವುದಿಲ್ಲ ಅಂದುಕೊಂಡಿದ್ದೀರಾ ಎಂದು ಗೊಣಗಿದಳು. ಅಷ್ಟರಲ್ಲಿ ತುಷಾರ್ ಎದ್ದು ರೂಮಿನಿಂದಲೇ, ಏನು ಗಲಾಟೆ ಮಮ್ಮೀ ಎಂದ. ಸುಲತಾ, ಏನಿಲ್ಲ ಪುಟ್ಟಾ,  ಇಲಿ ಬಂದಿದೆ, ನೀನು ಮಲಕ್ಕೋ ಎಂದಳು.

ಅವಳ ಅತ್ತೆ ಹೊರಗೆ ಹೋಗಿ ತನ್ನ ಗಂಡನಿಗೆ, ಈ ಹೊತ್ತಿನಲ್ಲಿ ಬೆಕ್ಕನ್ನು ಹುಡುಕಲು ನಿಮಗೆ ತಲೆ ಸರಿ ಇಲ್ವಾ?  ಮುದಿಭ್ರಾಂತಿ ಶುರುವಾಗಿದೆ ನಿಮಗೆ  ಎಂದು ಬೈಯುವುದು ಕೇಳಿಸಿತು. ಇನ್ನು ಇವರಿಬ್ಬರ ಜಗಳ ಶುರುವಾದರೆ ಈ ಇಲಿಯನ್ನು ಕೊಂದಹಾಗೇ ಎಂದುಕೊಂಡು ಮಾವ … ಮಾವ  ಎಂದು ಕಿರುಚಿದಳು. ಹೆಂಡತಿಯ ಬೈಗುಳ ತಪ್ಪಿಸಿಕೊಳ್ಳಲು ಒಳ್ಳೆಯ ಅವಕಾಶ ಎಂದು ಅವಳ ಮಾವ ಓಡೋಡಿ ಬಂದರು. ಸುಲತಾ, ಮಾವನಿಗೆ ಇಲಿಯನ್ನು ಪೊರಕೆಯಿಂದ ಹೊಡೆದು ಕೊಲ್ಲಲು ಹೇಳಿ ಪೊರಕೆ ಅಡಿಗೆ ಮನೆಯ ಮೂಲೆಯಲ್ಲಿದೆ ಎಂದು ತಿಳಿಸಿದಳು. ಅವಳ ಮಾವ ಪೊರಕೆಯಿಂದ  ಇಲಿಗೆ ರಪ್ಪನೆ ಬಡಿದು ಹೆಂಡತಿಯ ಮೇಲಿನ ಸಿಟ್ಟನ್ನು ಇಲಿಯ ಮೇಲೆ ತೀರಿಸಿದರು! ಅವರ ಒಂದೇ ಏಟಿಗೆ ಇಲಿ  ಸತ್ತು ಬಿದ್ದಿತು. ಸುಲತಾ ತಕ್ಷಣವೇ ತಾನು  ಹಿಡಿದುಕೊಂಡಿದ್ದ ಇಲಿಯ ಬಾಲವನ್ನು ಬಿಟ್ಟಳು. ಅಬ್ಬ!  ಇನ್ನು ನಾನು ನಿಶ್ಚಿಂತೆಯಿಂದ ನಿದ್ದೆ  ಮಾಡಬಹುದಲ್ಲ ಎಂದು  ಸುಲತಾ ಖುಶಿ ಪಟ್ಟಳು. ಅವಳ ಮಾವ ಆಗ ತಾನೇ ಹೆಂಡತಿ ಬೈದಿದ್ದು ಮರೆತು ಮತ್ತೆ ಬಿಲ್ಲು….  ಬಿಲ್ಲು ಎನ್ನುತ್ತ ಬೆಕ್ಕನ್ನು ಸತ್ತ ಇಲಿ ತಿನ್ನಲು ಕರೆಯತೊಡಗಿದರು!  ಇಷ್ಟೆಲ್ಲಾ ರಾದ್ಧಾಂತವಾಗಿದ್ದರೂ ಅವಳ ಪತಿ ಮಹಾಶಯ ಮಾತ್ರ ಸ್ವಲ್ಪವೂ ಎಚ್ಚರಗೊಳ್ಳದೆ ಹಾಯಾಗಿ ಮಲಗಿದ್ದ!!