ಪುಟ್ಟ ಹುಡುಗಿಯ ಕಿಡ್ನ್ಯಾಪ್ ಪ್ರಕರಣ

ನಾನು ಶಾಪಿಂಗ್ ಮುಗಿಸಿ ನಮ್ಮ ಕಾರಿನತ್ತ ನಡೆಯುತ್ತಿದ್ದಂತೆ ಅಚಾನಕ್ಕಾಗಿ ಎಲ್ಲಿಂದಲೋ ಓಡಿ ಬಂದ ಪುಟ್ಟ ಹುಡುಗಿ ಏದುಸಿರು ಬಿಡುತ್ತ ನನ್ನ ಕೈ ಹಿಡಿದು, ಮಮ್ಮಿ, ನೀನು ಇಲ್ಲಿದ್ದಿಯಾ, ನಾನು ಎಲ್ಲೆಲ್ಲ ನಿನ್ನನ್ನು ಹುಡುಕಾಡಿದೆ ಗೊತ್ತಾ ಎಂದು ಹೇಳಿದಾಗ ನಾನು ಕಕ್ಕಾಬಿಕ್ಕಿಯಾದೆ. ಸ್ವಲ್ಪ ದೂರದಲ್ಲಿ ತರಕಾರಿ ಮಾರುತ್ತಿದ್ದವ ನನ್ನನ್ನೇ ನೋಡಿದ. ಛೆ ಎಂಥಾ ಹೆಂಗಸು ಮಗಳ ಜವಾಬ್ದಾರಿನೇ ಇಲ್ಲ ಎನ್ನುತ್ತಾ ಮುಖ ಸಿಂಡರಿಸಿದ. ನಾನು ಅವನ ಮಾತನ್ನು ನಿರ್ಲಕ್ಷಿಸುತ್ತ, ಯಾರಪ್ಪ ಈ ಹುಡುಗಿ, ನನ್ನನ್ನು ಯಾಕೆ ಮಮ್ಮಿ ಎನ್ನುತ್ತಿದ್ದಾಳೆ ಎಂದು ನಾನು ಆಶ್ಚರ್ಯ ಪಡುತ್ತ, ಯಾರಮ್ಮ ನೀನು, ನನ್ನನ್ನು ಮಮ್ಮಿ … ಎನ್ನುತ್ತಿದ್ದಂತೆ ಅವಳು ತನ್ನ ಪುಟ್ಟ ಕೈಗಳಿಂದ ನನ್ನನ್ನು ಜಗ್ಗುತ್ತ ಗುಟ್ಟು ಹೇಳುವವಳಂತೆ ನನ್ನನ್ನು ಎಳೆದಳು. ನಾನು ಬಗ್ಗಿದಾಗ  ನನ್ನ ಕಿವಿಯಲ್ಲಿ ಗುಟ್ಟಾಗಿ, ಆಂಟಿ, ಸಾರಿ, ನೀವು ಯಾರೋ ಗೊತ್ತಿಲ್ಲ ಆದರೆ ನನ್ನನ್ನು ಯಾರೋ ಕಿಡ್ ನ್ಯಾಪ್ ಮಾಡಲು ನೋಡುತ್ತಿದ್ದಾರೆ. ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎನ್ನುತ್ತಾ  ಅತ್ತಿತ್ತ ನೋಡಿ ಸುಮಾರು ದೂರದಲ್ಲಿ ನಿಂತು ಸುತ್ತಲೂ ನೋಡುತ್ತಿದ್ದ ಯುವಕನ ಕಡೆ ಬೆಟ್ಟು ಮಾಡಿದಳು. ಅವನನ್ನು ನೋಡುತ್ತಿದ್ದಂತೆ ಅವನ ಕಟ್ಟು ಮಸ್ತಾದ ಶರೀರ ಕಂಡು ನನ್ನೆದೆ ಝಲ್ಲೆಂದಿತು. ಅವಳು ನನ್ನ ಕೈ ಬಿಗಿಯಾಗಿ ಹಿಡಿಯುತ್ತ, ಮಮ್ಮಿ, ನಡಿ ಹೋಗೋಣ ಎಂದಳು. ಕೆಲವರು ನಮ್ಮತ್ತಲೇ ನೋಡುತ್ತಿದ್ದರು. ಎಂಥ ತಾಯಿ, ಮಗಳ ಪರಿವೆ ಇಲ್ಲದೆ ಶಾಪಿಂಗ್ ನಲ್ಲಿ ಮಗ್ನಳಾಗಿದ್ದಳಲ್ಲ ಎಂಬ ಭಾವ ಅವರ ಮುಖದಲ್ಲಿ ಕಂಡು ನಾನು ಏನೂ ಹೇಳಲಾಗದೆ ತಲೆ ತಗ್ಗಿಸಿದೆ.

ಹುಡುಗಿ ನೋಡಲು ತುಂಬಾ ಮುದ್ದಾಗಿದ್ದಳು. ಸುಮಾರು ಐದಾರು ವರುಷವಿರಬಹುದು. ಅವಳನ್ನು ನೋಡುತ್ತಿದ್ದರೆ ಮಧ್ಯಮ ವರ್ಗದ ಹುಡುಗಿಯಂತೆ ಕಾಣುತ್ತಿದ್ದಳು. ನಾನು ಅವಳ ಬಳಿ ಪಿಸುದನಿಯಲ್ಲಿ, ನೀನು ಯಾರಮ್ಮ ? ನಿನ್ನ ಅಪ್ಪ ಅಮ್ಮ ಎಲ್ಲಿ ? ಎಂದು ಕೇಳಿದೆ. ಅದಕ್ಕವಳು, ಆಂಟಿ, ಈಗ ಸುಮ್ಮನೆ ನಡೀರಿ ಎಂದು ನನಗೆ ಆಣತಿಯಿತ್ತಳು ! ನಾನು ವಿಧೇಯಳಂತೆ ತಲೆಯಾಡಿಸುತ್ತಾ ಅವಳನ್ನು ಕರೆದುಕೊಂಡು ಕಾರಿನತ್ತ ನಡೆದೆ. ನಮ್ಮ ಡ್ರೈವರ್, ನನ್ನ ಜೊತೆ ಬರುತ್ತಿದ್ದ ಪುಟ್ಟ ಹುಡುಗಿಯನ್ನು ತದೇಕ ಚಿತ್ತದಿಂದ ನೋಡುತ್ತಿದ್ದ. ನಾವು ಕಾರಿನ ಬಳಿ ಬಂದ ತಕ್ಷಣ ಡ್ರೈವರ್ ಬಾಗಿಲು ತೆರೆದು, ಯಾರು ಮೇಡಂ, ಈ ಹುಡುಗಿ ಎಂದು ಕೇಳಿದ. ನಾನು ಅವನಿಗೆ ಅವಳ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಆ ಹುಡುಗಿ ನನ್ನ ಕೈ ಕೊಸರಿಕೊಂಡು ಓಡಿದಳು. ನಾನು ಗಾಬರಿಯಿಂದ ಇವಳು ಮತ್ತೆ ಆ ಧಡಿಯನ ಕೈಗೆ ಸಿಕ್ಕಿ ಬಿಡುತ್ತಾಳಲ್ಲ ಎಂಬ ಆತಂಕದಿಂದ ಡ್ರೈವರ್ ಗೆ ಅವಳನ್ನು ಹಿಡಿಯುವಂತೆ ಹೇಳಿ ನಾನೂ ಅವಳ ಹಿಂದೆ ಧಾವಿಸಿದೆ. ಜನರೆಲ್ಲಾ ನಮ್ಮನ್ನೇ ನೋಡುತ್ತಿದ್ದರು. ಆ ಹುಡುಗಿ ಯಾಕೆ ಓಡುತ್ತಿದ್ದಾಳೆ ಎಲ್ಲಿಗೆ ಓಡುತ್ತಿದ್ದಾಳೆ ಎಂದು ಮಿಕಿ ಮಿಕಿ ನೋಡುತ್ತಿದ್ದರು. ನಾನು ನೋಡುತ್ತಿದ್ದಂತೆ ಆ ಹುಡುಗಿ ಅಲ್ಲೇ ನಿಂತಿದ್ದ ಮಹಿಳೆಯೊಬ್ಬಳ ಬಳಿ ಧಾವಿಸಿ ಮಮ್ಮಿ .. ಎಂದಳು.

ನನಗೆ ರೇಗಿ ಹೋಯಿತು. ಇವಳು ಒಮ್ಮೆ ನನ್ನನ್ನು ಮಮ್ಮಿ ಎಂದಳು ಈಗ ಈಕೆಯನ್ನು ಮಮ್ಮಿ ಎನ್ನುತ್ತಿದ್ದಾಳೆ, ಏನಾಗಿದೆ ಈ ಹುಡುಗಿಗೆ ಎಂದುಕೊಳ್ಳುತ್ತಿದ್ದಂತೆ ನಾನು ಅವರನ್ನು ಸಮೀಪಿಸಿದೆ. ಡ್ರೈವರ್ ಕೂಡ ಆಕೆಯನ್ನು ಸಮೀಪಿಸಿ ಹುಡುಗಿಯ ಕೈ ಹಿಡಿದು, ಬಾಮ್ಮ ನಡೀ ಹೋಗೋಣ ಎಂದಾಗ ಅವಳು ಅವನ ಕೈ ಕೊಡವುತ್ತ, ಇವರೇ ನನ್ನ ಮಮ್ಮಿ ಎಂದಳು. ಅಷ್ಟರಲ್ಲಿ ನಾನು ಅವಳನ್ನು ಏನಮ್ಮ ನಾಟಕ ಆಡ್ತಿದ್ದೀಯಾ ಕ್ಷಣಕ್ಕೊಬ್ಬರನ್ನು ಮಮ್ಮಿ ಅನ್ನುತ್ತಿದ್ದೀಯಾ ಏನು ನಿನ್ನ ಕತೆ ಎಂದು ಕೇಳಿದೆ. ಅವಳು ಬೆದರಿ ಆ ಮಹಿಳೆಯನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಆ ಮಹಿಳೆ ನನ್ನತ್ತ ನೋಡುತ್ತಾ ಸಾರಿ, ಇವಳು ನನ್ನ ಮಗಳು ರಾಣಿ, ಅವಳಿಗೆ ಡ್ರಾಮಾ ಜೂನಿಯರ್ಸ್ ಗೆ ಹೋಗಬೇಕೆಂದು ಆಸೆ. ಆದ್ರೆ ನಾನು ಬೇಡಾ ಅಂತ ಹೇಳ್ತಿದ್ದೆ ನಿಂಗೆ ಅದೆಲ್ಲ ಮಾಡಕ್ಕೆ ಬರಲ್ಲ ಅಂತ ಅದ್ಕೆ ಅವಳು ನಿಮ್ಮ ಬಳಿ ಬಂದು ನಾಟಕ ಮಾಡಿದ್ಲು ಬೇಜಾರಾಗಿದ್ರೆ ಕ್ಷಮಿಸಿ ಎಂದಳು. ಆ ಹುಡುಗಿ ನನ್ನನ್ನು ಬೇಸ್ತು ಬೀಳಿಸಿದ್ದು ನೋಡಿ ಪೆಚ್ಚಾದೆ. ಅವಳು  ಇಷ್ಟೊತ್ತು ನಾಟಕ ವಾಡಿದಳೆ, ನನಗೆ ಗೊತ್ತಾಗಲೇ ಇಲ್ವಲ್ಲ, ಛೆ! ನಾನೆಂಥಾ ಪೆದ್ದು, ಇಷ್ಟೊಂದು ಜನ ಓಡಾಡೋ ಜಾಗದಲ್ಲಿ ಯಾರಾದರೂ ಕಿಡ್ ನ್ಯಾಪ್ ಮಾಡಲು ನೋಡುತ್ತಾರೆಯೇ ಎಂದುಕೊಂಡು ನಾಚುತ್ತ, ಪರವಾಗಿಲ್ಲಮ್ಮ ನಿಮ್ಮ ಮಗಳು ತುಂಬಾ ಚೆನ್ನಾಗಿ ನಾಟಕ ಮಾಡ್ತಾಳೆ ಅವಳನ್ನು ಆ ಸ್ಪರ್ಧೆಗೆ ಖಂಡಿತ ಕಳುಹಿಸಿ  ನಾವು ಚಿಕ್ಕವವರಿರುವಾಗ ಇಂಥಾ ಸ್ಪರ್ಧೆಗಳಿರಲಿಲ್ಲ ಈಗಿನ ಮಕ್ಕಳಿಗೆ ಅಂಥಾ ಅವಕಾಶವಿರುವಾಗ ಯಾಕೆ ಬೇಡವೆನ್ನುತ್ತೀರಿ ಸ್ಪರ್ಧೆಯಲ್ಲಿ ಜಯ ಗಳಿಸುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪುಟ್ಟ ಭಾಷಣ ಬಿಗಿದೆ. ಆ ಹುಡುಗಿಯ ಬೆನ್ನು ತಟ್ಟುತ್ತ, ತುಂಬಾ ಚೆನ್ನಾಗಿ ಮಾಡಿದೆ, ಶಹಭಾಸ್ ಎಂದೆ. ಅವಳು ತುಂಟ ನಗು ಬೀರುತ್ತ, ಸಾರಿ ಆಂಟಿ ಎಂದಳು. ನಾನು ಪರವಾಗಿಲ್ಲ ಇನ್ನೂ ಚೆನ್ನಾಗಿ ಮಾಡು ಎಂದು ಹೇಳಿ ಡ್ರೈವರ್ ಗೆ ಕಾರು ಅಲ್ಲೇ ತರಲು ತಿಳಿಸಿ ಅತ್ತಿತ್ತ ನೋಡಿದೆ. ಯಾರಾದರೂ ನಾನು ಪೇಚಿಗೆ ಸಿಲುಕಿದ್ದನ್ನು ಕಂಡರೆನೋ ಎಂಬ ಮುಜುಗರ. ದೂರದಲ್ಲಿ ಆ ಧಾಂಡಿಗ ಯುವಕ ಇನ್ನೂ ಅಲ್ಲೇ ಇದ್ದ. ಅವನೂ ಈ ನಾಟಕದಲ್ಲಿ ಶಾಮೀಲಾಗಿರಬಹುದೇ ಎಂದುಕೊಳ್ಳುತ್ತಿದ್ದಂತೆ ಕಾರು ಬಂದು ನಿಂತಿತು. ಕಾರಿನಲ್ಲಿ ಕುಳಿತು ಒಮ್ಮೆ ಹಿಂತಿರುಗಿ ನೋಡಿದಾಗ ಆ ಹುಡುಗಿ ತಾಯಿಯ ಜೊತೆ ಸಂತಸದಿಂದ ಕುಣಿಯುತ್ತ ಹೋಗುತ್ತಿದ್ದಳು. ಬಹುಶ ಅವಳ ಅಮ್ಮ ಸ್ಪರ್ಧೆಗೆ ಕಳುಹಿಸಲು ಒಪ್ಪಿರಬೇಕು ಅಂತ ಅಂದುಕೊಂಡೆ.

ಯಾರ ಪಯಣ ಎಲ್ಲಿಗೋ ?

ಕುಂದಾಪುರದಲ್ಲಿ ಹೆಂಡತಿ ಮಕ್ಕಳನ್ನು ಬೀಳ್ಕೊಟ್ಟು ನಾನು ಬೆಂಗಳೂರಿನ ಬಸ್ಸು ಹತ್ತುವಾಗ ರಾತ್ರಿ ಸುಮಾರು ಎಂಟು ಗಂಟೆಯಾಗಿತ್ತು. ಬಸ್ಸು ಮುಂದೆ ಹೋಗುತ್ತಿದ್ದಂತೆ ಬಸ್ಸಿನ ಶಬ್ದ ಜೋಗುಳ ಹಾಡಿದಂತಾಗಿ ನಂಗೆ ನಿದ್ದೆ ಆವರಿಸಿತು. ನಾನು ಹದಿನೈದು ದಿನಗಳಿಗೊಮ್ಮೆ  ಊರಿಗೆ ಬರುತ್ತಿದ್ದುದರಿಂದ ಬಸ್ ಪ್ರಯಾಣ ನನಗೆ ಹೊಸತೇನಾಗಿರಲಿಲ್ಲ. ಬಸ್ ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದುವರೆಯುತ್ತಿತ್ತು. ಜನರು ಹತ್ತುವಾಗ ದಡಬಡ ಶಬ್ದ, ಅವರನ್ನು ಬೀಳ್ಕೊಡಲು ಬಂದ ಜನರ ಮಾತುಗಳು ಎಲ್ಲವೂ ನನಗೆ ಕೇಳಿಸುತ್ತಿದ್ದರೂ ನಿದ್ದೆಯ ಮಂಪರಿನಲ್ಲಿದ್ದ ನಾನು ಕಣ್ಣು ತೆರೆಯದೇ ಕುಳಿತಿದ್ದೆ. ಬಸ್ಸು ಮಂಗಳೂರಿಗೆ ಬಂದು ನಿಂತಾಗ ಬಹಳಷ್ಟು ಜನ ಹತ್ತಿದರು. ಖಾಲಿಯಾಗಿದ್ದ ಬಸ್ಸು ತುಂಬಿಕೊಂಡರೂ ನನ್ನ ಬಳಿ ಇದ್ದ ಸೀಟು ಮಾತ್ರ ಖಾಲಿಯಾಗಿತ್ತು. ಅದನ್ನು ನೋಡಿ ಇನ್ನು ಯಾರೂ ಬರಲಿಕ್ಕಿಲ್ಲ ಎಂದುಕೊಂಡು ಖುಷಿಯಾಗಿ ನನ್ನ ಮತ್ತು ಆ ಸೀಟಿನ ನಡುವೆ ಕೈ ಇಡಲು ಇದ್ದ ಹಿಡಿಯನ್ನು ಮೇಲೆತ್ತಿ ನಾನು ರಾಜನಂತೆ ಎರಡೂ ಸೀಟಿನಲ್ಲಿ ನನ್ನ ದೇಹವನ್ನು ಹರಡಿಕೊಂಡು ಇನ್ನಷ್ಟು ಆರಾಮಾವಾಗಿ ಮಲಗಿಕೊಂಡೆ. ತಕ್ಷಣ ಗಾಢವಾದ ನಿದ್ದೆ ಆವರಿಸಿತು. ಸುಮಾರು ದೂರ ಬಂದ ಬಳಿಕ ಬಸ್ಸು ಏಕಾಏಕಿ ನಿಂತಿತು. ಬ್ರೇಕ್ ಹಾಕಿದ ಶಬ್ದಕ್ಕೆ ಎಚ್ಚರವಾಗಿ ಏನಾಯಿತಪ್ಪ ಎಂದು ನಾವೆಲ್ಲ ಆತಂಕ ಪಡುತ್ತಿರುವಾಗ ಒಬ್ಬ ಧಡೂತಿ ದೇಹದ ಮನುಷ್ಯ ನಮ್ಮ ಬಸ್ಸನ್ನೇರಿ ನನ್ನ ಸೀಟಿನ ಬಳಿಯೇ ಧಾವಿಸಿ ಬರುತ್ತಿರುವುದನ್ನು ಕಂಡು ಅಬ್ಬ! ಇವನೊಬ್ಬನಿಗೇ ಎರಡು ಸೀಟು ಬೇಕಾದೀತು, ನನ್ನ ಸೀಟನ್ನೂ ಇವನು ಆವರಿಸಿಕೊಂಡರೆ ನಾನು ಮುದ್ದೆಯಾಗಿ ಕುಳಿತು ಉಸಿರುಕಟ್ಟಿ ಸತ್ತೇ ಹೋಗಿಬಿಡುತ್ತೇನೆ ಎಂದು ಭಯವಾಗಿ ತಕ್ಷಣ ಕೈ ಹಿಡಿಯನ್ನು ಅದರ ಸ್ವಸ್ಥಾನಕ್ಕೆ ಸೇರಿಸಿ ನನ್ನ ಸೀಟಿನಲ್ಲೇ ಆದಷ್ಟೂ ಆರಾಮಾವಾಗಿ ಕುಳಿತು ಕಣ್ಣು ಮುಚ್ಚಿಕೊಂಡು ಆತನೇನಾದರೂ ಕೈ ಹಿಡಿಯನ್ನು ಎತ್ತಿದರೆ ಎಂದು ಅದರ ಮೇಲೆ ಕೈ ಇಟ್ಟು ನಿದ್ದೆ ಬಂದವನಂತೆ ನಟಿಸಿದೆ. ಆತನಿಗೆ ಇಂತಹ ಅನುಭವಗಳು ಸಾಕಷ್ಟು ಬಾರಿ ಆಗಿದ್ದಿರಬೇಕು ಎನ್ನುವಂತೆ ತನ್ನ ಸೀಟಿನಲ್ಲಿ ಧಡೂತಿ ಶರೀರವನ್ನು ತುರುಕಿಸುತ್ತ ಕಷ್ಟ ಪಟ್ಟು ಕುಳಿತ. ಅವನು ಕುಳಿತೊಡನೆ ಇಡೀ ಬಸ್ಸು ಅವನ ಭಾರಕ್ಕೆ ಸ್ವಲ್ಪ ಅಲುಗಾಡಿತು.ಅದರೊಡನೆ ಬೆವರಿನ ವಾಸನೆಯೂ ನನ್ನ ಮೂಗಿಗೆ ಬಡಿದು ಮೂಗು ಮುಚ್ಚಿಕೊಳ್ಳುವಂತಾಯಿತು. ಅವನ ಮೈ ಎಲ್ಲ ಬೆವರಿನಿಂದ ಒದ್ದೆಯಾಗಿತ್ತು, ಬಹುಶಃ ಬರುವುದು ಲೇಟಾಗಿ ಓಡಿ ಬಂದಿರಬೇಕು. ನನಗೆ ವಾಸನೆ ತಡೆಯಲಾಗದೆ ವಾಂತಿ ಬಂದಂತಾಗಿ ಎದ್ದು ಕಿಟಕಿಯನ್ನು ಪೂರ್ತಿಯಾಗಿ ತೆರೆದೆ. ಹೊರಗಿನಿಂದ ತಂಗಾಳಿ ಬೀಸಿದಾಗ ಹಾಯೆನಿಸಿತು.

ಅಷ್ಟರಲ್ಲಿ ಹಿಂದಿನ ಸೀಟಿನವ ನಾನು ಕಿಟಕಿಯನ್ನು ಪೂರ್ತಿಯಾಗಿ ತೆರೆದಿದ್ದುದರಿಂದ ಅವನ ಕಿಟಕಿ ಮುಚ್ಚಿಹೋಗಿದ್ದಕ್ಕಾಗಿ ಗೊಣಗಾಡುತ್ತ ಕಿಟಕಿಯ ಗಾಜನ್ನು ಸರಿಸಲು ನೋಡಿದ. ಆಗ ನಾನು ಐದೇ ನಿಮಿಷ, ಮತ್ತೆ ನೀವು ಕಿಟಕಿಯ ಗಾಜನ್ನು ಸರಿಸಬಹುದು ನನಗೆ ವಾಂತಿ ಬಂದಂತೆ ಆಗುತ್ತಿದೆ ಎಂದಾಗ ಅವನು ಮುಖ ಸಿಂಡರಿಸಿಕೊಂಡು ತಾನು ಗಾಜು ಸರಿಸಿದರೆ ವಾಂತಿ ತನ್ನ ಮೇಲೆ ಸಿಡಿಯಬಹುದು ಎಂದು ಮತ್ತೆ ಗಾಜನ್ನು ಸರಿಸಲು ಹೋಗಲಿಲ್ಲ. ನಾನು ಆದಷ್ಟೂ ನನ್ನ ಮುಖವನ್ನು ಕಿಟಕಿಯ ಹೊರಗೆ ಹಾಕಿ ತಂಗಾಳಿಯನ್ನು ಆಸ್ವಾದಿಸುತ್ತ ಕುಳಿತೆ. ಒಮ್ಮೆ ತಿರುಗಿ ನೋಡಿದಾಗ ಆ ಧಡೂತಿ ಮನುಷ್ಯ ತನ್ನ ಕರ್ಚೀಫು ತೆಗೆದು ತನ್ನ ಮೈಯೆಲ್ಲಾ ಒರೆಸಿ ನಂತರ ಅದನ್ನು ಹಿಂಡಿ ಹಾಕಿ ಎದುರಿನ ಸೀಟಿನ ಮೇಲೆ ಒಣಗಿಸಲು ಹಾಕಿದ. ಅಬ್ಬಾ! ಎಂತಹ ಕೊಳಕು ಮನುಷ್ಯ, ಇಂತಹವನ ಜೊತೆ ನಾನು ಇಡೀ ರಾತ್ರಿ ಪ್ರಯಾಣ ಮಾಡಬೇಕಲ್ಲಪ್ಪ ಎಲ್ಲ ನನ್ನ ಗ್ರಹಚಾರ ಎಂದುಕೊಳ್ಳುತ್ತ ನನ್ನ ಮೋರೆಯನ್ನು ಮತ್ತೆ ಕಿಟಕಿಯತ್ತ ತಿರುಗಿಸಿದೆ. ಬಸ್ಸು ಮುಂದಕ್ಕೆ ಹೋಗುತ್ತಿದ್ದಂತೆ ತಂಗಾಳಿಗೆ ಬೆವರಿನ ವಾಸನೆಯೂ ಹೋಗಿ ಹಾಯಾದಂತಾಗಿ ಹಿಂದಿನ ಸೀಟಿನವನಿಗೆ ಕಿಟಕಿಯ ಗಾಜು ಸರಿಸಿ ಕೊಟ್ಟೆ. ಆದರೆ ಅವನು ನಾನು ವಾಂತಿ ಮಾಡಿದರೆ ಎಂದು ಭಯದಿಂದ ಕಿಟಕಿಯನ್ನು ಮುಚ್ಚಿಬಿಟ್ಟ ! ನನಗೆ ಸಂತೋಷವಾಗಿ ತಂಗಾಳಿಗೆ ಮೈಯೊಡ್ಡಿ ಮತ್ತೆ ನಿದ್ದೆ ಹೋದೆ. ಸುಮಾರು ಹೊತ್ತಿನ ಬಳಿಕ ಆ ಧಡೂತಿ ಮನುಷ್ಯ ನನ್ನನ್ನು ಎಬ್ಬಿಸಿ ತನಗೆ ವಾಂತಿ ಬರುತ್ತಿದೆ ಆದ್ದರಿಂದ ನನ್ನ ಸೀಟನ್ನು ಅವನಿಗೆ ಬಿಟ್ಟುಕೊಡಬೇಕೆಂದು ಹೇಳಿದ. ಆದರೆ ನನಗೆ ಸೀಟನ್ನು ಬಿಟ್ಟುಕೊಡಲು ಸುತರಾಂ ಇಷ್ಟವಿರಲಿಲ್ಲ, ಅಷ್ಟರಲ್ಲಿ ಬಸ್ಸು ನಿಂತಿದ್ದರಿಂದ ಆ ಧಡೂತಿ ಮನುಷ್ಯ ಎದ್ದು ಕೆಳಗಿಳಿದು ಹೋದ. ನಾನು ಅಬ್ಬಾ ಎಂದು ನಿಟ್ಟುಸಿರು ಬಿಟ್ಟೆ. ಅವನ ಹಿಂದೆ ಇನ್ನೂ ಕೆಲವರು ಇಳಿದರು. ಬಸ್ಸು ಮತ್ತೆ ಹೊರಡುತ್ತಿದ್ದಂತೆ ಉಳಿದವರೊಂದಿಗೆ ಆತ ಮತ್ತೆ ಬಸ್ಸನ್ನೇರಿದ. ಬಸ್ಸು ಮುಂದೆ ಹೋಗುತ್ತಿದ್ದಂತೆ ನನಗೆ ನಿದ್ದೆ ಆವರಿಸಿತು.

ಬಸ್ಸು ಘಾಟಿಯಲ್ಲಿ ಹೋಗುತ್ತಿದ್ದಂತೆ ತಿರುವಿನಲ್ಲಿ ಆತ ನಿದ್ದೆಯಲ್ಲೇ ನನ್ನ ಕಡೆ ವಾಲಿದ. ಅವನ ತಲೆಗೆ ಹಾಕಿದ ಎಣ್ಣೆಯ ಘಾಟು ನನ್ನನ್ನು ಎಚ್ಚರಿಸಿ ನನಗೆ ಅವನ ಮೈ ಮುಟ್ಟಲು ಅಸಹ್ಯವೆನಿಸಿ ರೀ, ಸ್ವಲ್ಪ ಸರಿಯಾಗಿ ಕೂತ್ಕೊಳ್ರೀ ಎಂದೆ. ಆದರೆ ಆತ ಬಹಳ ಗಾಢ ನಿದ್ದೆಯಲ್ಲಿದ್ದಂತೆ ಕಾಣಿಸಿತು. ಅದಕ್ಕೆ ನಾನು ನನ್ನ ಬೆರಳಿನಿಂದ ಅವನ ತಲೆಯನ್ನು ಸರಿಸಲು ನೋಡಿದೆ. ಆದರೆ ನನ್ನ ಬೆರಳು ಮುರಿದಂತಾಗಿ ನೋವಾಯಿತೇ ಹೊರತು ಅವನ ತಲೆ ನನ್ನ ಭುಜದ ಮೇಲಿನಿಂದ ಒಂದಿಂಚೂ ಅಲುಗಾಡಲಿಲ್ಲ. ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದುಕೊಳ್ಳುತ್ತ ನಾನು ಸ್ವಲ್ಪ ಮುಂದಕ್ಕೆ ಜರುಗಿ ಕುಳಿತೆ. ಆಗ ಅವನು ಪೂರ್ತಿಯಾಗಿ ನನ್ನ ಸೀಟಿನ ಮೇಲೆ ವಾಲಿಬಿಟ್ಟ! ಅಷ್ಟಾದರೂ ಅವನಿಗೆ ಎಚ್ಚರಿಕೆಯಾಗದ್ದು ನೋಡಿ ನನಗೆ ಆಶ್ಚರ್ಯ ವಾಯಿತು! ಛೆ! ಎಂತಹ ನಿದ್ದೆನಪ್ಪ ಇವನಿಗೆ ಎಂದುಕೊಂಡು ಅವನನ್ನು ನಾನೇ ಎತ್ತಿ ಆ ಕಡೆ ಸರಿಸಿದೆ. ಆಗ ಆತ ಇನ್ನೊಂದು ಕಡೆ ವಾಲಿ ಬಿದ್ದ. ಏನಾದರಾಗಲಿ ನನ್ನ ಕಡೆ ವಾಲದಿದ್ದರೆ ಸರಿ ಎಂದುಕೊಂಡು ಮತ್ತೆ ಕಣ್ಣು ಮುಚ್ಚಿದೆ. ಮುಂದಿನ ತಿರುವಿನಲ್ಲಿ ಮತ್ತೆ ಅವನು ನನ್ನ ಕಡೆ ವಾಲಿದಾಗ ಮತ್ತೆ ಅವನನ್ನು ಆ ಕಡೆ ಸರಿಸಿದೆ. ಇನ್ನು ಘಾಟಿ ಮುಗಿಯುವವರೆಗೂ ಇದು ಪುನರಾವರ್ತನೆ ಯಾಗುತ್ತದೆ ಎಂದುಕೊಳ್ಳುತ್ತ ಮೇಲಿಟ್ಟ ನನ್ನ ಬ್ಯಾಗನ್ನು ತೆಗೆದು ನನ್ನ ಮತ್ತು ಆತನ ನಡುವೆ  ಅಡ್ಡವಾಗಿ ಇಟ್ಟು ಆತ ನನ್ನ ಕಡೆ ವಾಲದ ಹಾಗೆ ಮಾಡಿದೆ. ನನ್ನ ಉಪಾಯ ಫಲಿಸಿ ಆತ ಇನ್ನೊಂದು ಕಡೆಗೇ ವಾಲಿದಾಗ ನಿರಾಳವಾಗಿ ಮಲಗಿದೆ. ಇಷ್ಟಾದರೂ ಅವನಿಗೆ ಒಂದು ಸಲವೂ ಎಚ್ಚರವಾಗಿಲ್ಲದ್ದು ನೋಡಿ ಪರಮಾಶ್ಚರ್ಯ ವಾಯಿತು. ಎಂಥಾ ಜನರಿದ್ದಾರಪ್ಪ ಈ ಲೋಕದಲ್ಲಿ ಎಂದುಕೊಂಡು ಮತ್ತೆ ಕಣ್ಣ್ಮುಚ್ಚಿ ನಿದ್ರಿಸಲು ನೋಡಿದೆ. ಹಾಸನ ಬಂದಾಗ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದರೆ ಆತ ಆ ಕಡೆಗೆ ವಾಲಿದ ಸ್ಥಿತಿಯಲ್ಲೇ ಇದ್ದ. ಬಸ್ಸು ನಿಂತಾಗ ಜನರಿಗೆ ಇಳಿದು ಹೋಗಲು ದಾರಿಯಲ್ಲಿ ಅವನು ಅಡ್ಡಲಾಗಿ ವಾಲಿದ್ದರಿಂದ ಆಗದೆ ಅವರೆಲ್ಲ ಪಿರಿಪಿರಿ ಮಾಡುತ್ತಾ ಆತನನ್ನು ನೂಕಿಕೊಂಡೇ ಹೋಗತೊಡಗಿದರು. ಇಷ್ಟಾದರೂ ಅವನಿಗೆ ಎಚ್ಚರವಾಗದ್ದು ನೋಡಿ ಸಂಶಯವಾಗಿ ಒಬ್ಬ ಪ್ರಯಾಣಿಕ  ಆ ಧಡೂತಿ ಮನುಷ್ಯನನ್ನು ಎತ್ತಿ ಸರಿಸಲು ಹೋದಾಗ ಅವನ ಮೈ ತಣ್ಣಗೆ ಅನಿಸಿ ಅವನ ನಾಡಿ ಹಿಡಿದು ನೋಡಿ ಬೆಚ್ಚಿ ಬಿದ್ದ. ತಕ್ಷಣವೇ ನನಗೆ ಆ ಮನುಷ್ಯ ಬದುಕಿಲ್ಲವೇನೋ ಎಂದು ಅನಿಸಿ ನಾನೂ ಬೆಚ್ಚಿ ಬಿದ್ದೆ. ಸುದ್ದಿ ತಿಳಿದು ತಕ್ಷಣವೇ ಬಸ್ಸಿನ ಕಂಡಕ್ಟರ್ ಡ್ರೈವರ್ ಎಲ್ಲ ಅವನನ್ನು ನೋಡಲು ಬಂದು ಆ ಮನುಷ್ಯ ಸತ್ತಿರುವುದನ್ನು ಖಾತ್ರಿ ಮಾಡಿಕೊಂಡರು. ನಾನು ಹೌಹಾರಿ ಬಿಟ್ಟೆ. ಕೆಲವರಂತೂ ನಾನೇನಾದರೂ ಅವನ ಕೊಲೆ ಮಾಡಿರಬಹುದೇ ಎಂದು ನನ್ನ ಕಡೆ ಸಂಶಯದಿಂದ ನೋಡುತ್ತಿದ್ದರು. ಆಯ್ಯೋ ದೇವರೇ ಈ ಮನುಷ್ಯ ಯಾವಾಗ ಸತ್ತ, ನಾನು ಇಷ್ತೊತ್ತಿನಿಂದ ಹೆಣದ ಜೊತೆ ಕುಳಿತು ಪ್ರಯಾಣ ಮಾಡುತ್ತಿದ್ದೆನೆ?  ಆ ಮನುಷ್ಯನನ್ನು ಎಷ್ಟು ಎಬ್ಬಿಸಿದರೂ ಎಚ್ಚರವಾಗದೇ ಇದ್ದಾಗ ತನಗೇಕೆ ಸಂಶಯ ಬರಲಿಲ್ಲ? ಯಾವಾಗ ಸತ್ತಿದ್ದಾನೋ ಏನೋ, ಎಂಥ ಕರ್ಮ ನನ್ನದು, ಏನು ಪಾಪ ಮಾಡಿದ್ದೇನೋ ಏನೋ ಅದಕ್ಕೆ ಇವತ್ತು ಹೆಣದ ಜೊತೆ ಪ್ರಯಾಣ ಮಾಡಬೇಕಾಯಿತು ಎಂದು ಹಣೆಗೆ ಬಡಿದುಕೊಂಡು ಕಂಡಕ್ಟರ್ ಬಳಿ ನನಗೆ ಬೇರೆ ಸೀಟು ಕೊಡುವಂತೆ ಹೇಳಿದೆ. ಆದರೆ ಬೇರೆ ಯಾವ ಸೀಟೂ ಖಾಲಿಯಿರಲಿಲ್ಲ, ಕೊನೆಗೆ ಡ್ರೈವರ್ ಬಳಿ ಇದ್ದ ಸೀಟನ್ನಾದರೂ ನನಗೆ ಕೊಡಿ ಎಂದೆ. ಅವರಿಗೆ ನನ್ನ ಪರಿಚಯವಿದ್ದುದರಿಂದ ನನಗೆ ಆ ಸೀಟನ್ನು ಬಿಟ್ಟುಕೊಟ್ಟು ಬಸ್ಸನ್ನು ಪೋಲೀಸ್ ಸ್ಟೇಷನ್ ಕಡೆಗೆ ತಿರುಗಿಸಿದರು. ಪ್ರಯಾಣಿಕರೆಲ್ಲ ಭಯದಿಂದ ಜೀವ ಕೈಯಲ್ಲಿ ಹಿಡಿದು ಮುಂದೇನು ಕಾದಿದೆಯೋ, ತಮ್ಮ ಪ್ರಯಾಣಕ್ಕೆ ದೊಡ್ಡ ಅಪಶಕುನವಾಯಿತು ಎಂದು ಎಲ್ಲ ಗುಸುಗುಸು ಮಾತನಾಡುತ್ತ  ಕುಳಿತರು. ಕೆಲ ಹೆಂಗಸರು ಅಳತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಬಸ್ಸಿನಲ್ಲಿ ಸ್ಮಶಾನ ಮೌನ ಆವರಿಸಿತು. ಕತ್ತಲಲ್ಲಿ ಆ ಮನುಷ್ಯನ ಆತ್ಮ ಇಲ್ಲೇ ಇದ್ದು  ಕಾಡಿದರೆ ಎಂದು ಭಯವಾಗಿ ಡ್ರೈವರ್ ಗೆ ಬಸ್ಸಿನ ಒಳಗಿನ ಲೈಟು ತೆಗೆಯುವುದು ಬೇಡ ಎಂದು ಎಲ್ಲರೂ ಕೇಳಿಕೊಂಡಿದ್ದರಿಂದ ಲೈಟು ಉರಿದೇ ಇತ್ತು. 

ಇವತ್ತು ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ದೇನೋ ಎಂಥ ಕೆಟ್ಟ ದಿನವಪ್ಪ ಇವತ್ತು ಇನ್ನು ಪೋಲೀಸ್ ಸ್ಟೇಷನ್ ನಲ್ಲಿ ಎಷ್ಟು ಹೊತ್ತಾಗುತ್ತದೋ ಎಂದುಕೊಳ್ಳುತ್ತಾ ಆತಂಕ ಪಟ್ಟೆ. ಮರುಕ್ಷಣವೇ ನಾನು ಎಷ್ಟೊಂದು ಸ್ವಾರ್ಥಿಯಾಗಿ ಯೋಚಿಸುತ್ತಿದ್ದೇನೆ ಪಾಪ, ಆತ ಮನೆಯವರು ಯಾರೂ ಹತ್ತಿರವಿಲ್ಲದೆ ಇದ್ದ ಸಮಯದಲ್ಲಿ ತೀರಿಕೊಂಡಿದ್ದಾನೆ. ಬೆಂಗಳೂರಿಗೆ ಒಬ್ಬನೇ ಯಾಕೆ ಹೊರಟಿದ್ದನೋ,  ಆತನಿಗೆ ಏನೆಲ್ಲಾ ಆಸೆಗಳಿದ್ದವೋ ಏನೋ, ಸಾವು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬರಬಹುದು. ಆತನ ಮನೆಯವರು ಎಷ್ಟು ದುಃಖ ಪಡುತ್ತಾರೋ ಏನೋ ಎಂದೆಲ್ಲ ಮನಸ್ಸಿಗೆ ಬರುತ್ತಿದ್ದಂತೆ ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹಾರೈಸಿದೆ. ಬಸ್ಸಿನಲ್ಲಿ ಎಲ್ಲರ ನಿದ್ದೆಯೂ ಹಾರಿ ಹೋಗಿತ್ತು. ಎಲ್ಲರೂ ಗುಸುಗುಸು ಮಾತನಾಡುವವರೇ, ಒಂದು ಚಿಕ್ಕ ಶಬ್ದವಾದರೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದರು.  ಅಕ್ಕ ಪಕ್ಕದ ಸೀಟಿನವರಿಗೆ ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಭಯವಾಗಿ ಹಿಂದೆ ಹೋಗಿ ನಿಂತೇ ಪ್ರಯಾಣಿಸಿದರು. ಬಸ್ಸು ಪೋಲೀಸ್ ಸ್ಟೇಷನ್ ತಲುಪಿ ಪೊಲೀಸರು ಮೃತ ದೇಹವನ್ನು ಪರಿಶೀಲಿಸಿ ಡಾಕ್ಟರ್ ಗೆ ಬರಹೇಳಿ ನಮಗೆಲ್ಲ ಅಲ್ಲೇ ಇರುವಂತೆ ಹೇಳಿದಾಗ ಕೆಲವರು ಹಣೆ ಚಚ್ಚಿಕೊಂಡರು. ನನ್ನನ್ನು ಪೊಲೀಸರು ಕರೆದಾಗ ನನ್ನ ಎದೆ ಜೋರಾಗಿ ಬಡಿದುಕೊಳ್ಳತೊಡಗಿತು. ನನ್ನನ್ನು ಯಾಕೆ ಕರೆಯುತ್ತಿದ್ದಾರಪ್ಪ ಎಂದು ಗಾಬರಿಯಾದೆ. ಆ ಮನುಷ್ಯನ ಬಗ್ಗೆ ನನಗೆ ತಿಳಿದುದೆಲ್ಲ ಹೇಳಿದೆ ಆದರೂ ಅವನು ಸತ್ತ ಬಗ್ಗೆ ನನಗೆ ತಿಳಿದಿರಲಿಲ್ಲ ಬೇರೆ ಪ್ರಯಾಣಿಕ ಹೇಳಿದ ಮೇಲೆ ತಿಳಿಯಿತು ಎಂದೆ. ನನಗೆ ಅವರೆಲ್ಲಿ ನಾನೇ ಕೊಲೆ ಮಾಡಿರಬೇಕು ಎನ್ನುವ ಸಂಶಯ ಮೂಡಿ ನನ್ನನ್ನು ಅರೆಸ್ಟ್ ಮಾಡಿದರೆ ನನ್ನ ಗತಿ ಏನು ಎಂದು ಭಯವಾಯಿತು. ಅಷ್ಟರಲ್ಲಿ ಡಾಕ್ಟರ್ ಬಂದು ಮೃತ ದೇಹವನ್ನು ಪರಿಶೀಲಿಸಿ ಆ ಮನುಷ್ಯ ಸತ್ತು ಮೂರು ನಾಲ್ಕು ಗಂಟೆಗಳಾದರೂ ಆಗಿರಬಹುದು ಎಂದಾಗ ನಾವೆಲ್ಲ ಬೆಚ್ಚಿ ಬಿದ್ದೆವು. ಪೊಲೀಸರು ಅವನ ಬ್ಯಾಗ್ ತರಿಸಿ ತೆರೆದು ನೋಡುವಾಗ ಅಲ್ಲಿ ಫೈಲೊಂದು ಇದ್ದಿದ್ದು ಕಂಡು ತೆರೆದು ನೋಡಿದರು. ಅದು ಆಸ್ಪತ್ರೆಯ ರಿಪೋರ್ಟ್ ಆಗಿತ್ತು. ಡಾಕ್ಟರ್ ಅದನ್ನು ಪರಿಶೀಲಿಸಿದಾಗ ಆತನಿಗೆ ಈ ಮೊದಲು ಹೃದಯಘಾತವಾಗಿದ್ದುದು ಕಂಡು ಬಂದಿತು. ಆದ್ದರಿಂದ ಆ ಮನುಷ್ಯ ಮತ್ತೆ ತೀವ್ರ ಹೃದಯಘಾತವಾಗಿ ಸತ್ತಿರಬೇಕು ಎಂದು ಡಾಕ್ಟರ್ ಹೇಳಿದಾಗ ನಾನು ಅಬ್ಬಾ! ಪೊಲೀಸರು ಇನ್ನು ನನ್ನ ಮೇಲೆ ಸಂಶಯ ಪಡಲಿಕ್ಕಿಲ್ಲ ಎಂದು ನೀಳವಾದ ನಿಟ್ಟುಸಿರು ಬಿಟ್ಟೆ. ಪೊಲೀಸರು ನಮ್ಮೆಲ್ಲರ ವಿವರಗಳನ್ನು ಕೇಳಿ ತಿಳಿದುಕೊಂಡು ನಮ್ಮನ್ನೆಲ್ಲ ಹೋಗಲು ಬಿಟ್ಟಾಗ ನಾವೆಲ್ಲ ಬದುಕಿದೆಯಾ ಬಡ ಜೀವವೇ ಎಂದು ಕೊಂಡು ಬೇಗನೆ ಬಸ್ ಹತ್ತಿದೆವು. ಆ ಮನುಷ್ಯನ ಮೃತ ದೇಹವಿಲ್ಲದಿದ್ದರೂ ಕುಳಿತುಕೊಳ್ಳಲು ಭಯವಾದರೂ ಇನ್ನೂ ತುಂಬಾ ಹೊತ್ತು ಪ್ರಯಾಣ ಮಾಡಬೇಕಾಗಿದ್ದುದರಿಂದ ಎಲ್ಲರೂ ವಿಧಿಯಿಲ್ಲದೇ ದೇವರ ಜಪ ಮಾಡುತ್ತಾ ಕುಳಿತೆವು. ಕೆಲವರು ತಾವು ಕೇಳಿದ ಇಂತಹ ಅನುಭವಗಳ ಬಗ್ಗೆ ಮಾತನಾಡತೊಡಗಿದರು.  ನಿದ್ದೆಯಂತೂ ಮಾರು ದೂರ ಹಾರಿ ಹೋಗಿತ್ತು. ಕೊನೆಗೆ ಬಸ್ಸು ಬೆಂಗಳೂರು  ಸುಮಾರು ಹನ್ನೆರಡು ಗಂಟೆಗೆ ತಲುಪಿದಾಗ ನಾವೆಲ್ಲ ನಿಟ್ಟುಸಿರು ಬಿಟ್ಟೆವು.

ಯಾಕೆ ಹೀಗಾಗುತ್ತಿದೆ?

ಒಂದು ಕಾಲದಲ್ಲಿ ಯಾರಾದರು ತೀರಿಕೊಂಡರೆ ಅಥವಾ ತೊಂದರೆಗೊಳಗಾದರೆ ಜನ ಸಹಾಯ ಮಾಡಲು ಧಾವಿಸುತ್ತಿದ್ದರು. ಆದರೆ ಈಗೀಗ ಮನುಷ್ಯ ಮಾನವೀಯತೆ ಯನ್ನೇ ಮರೆತು ಬಿಡುತ್ತಿದ್ದಾನೆ .ನಮ್ಮ ಕನ್ನಡದ ಖ್ಯಾತ ಸಾಹಿತಿ ವಿಧಿವಶರಾದರು ಎಂದು ಸುದ್ದಿ ಕೇಳಿ ಕೆಲವರು ಸಂಭ್ರಮಾಚರಣೆ ಮಾಡಿದರು ಎಂಥ ಅಮಾನವೀಯ ಕೃತ್ಯ !! ಆ ಸಂಭ್ರಮಾಚರಣೆಯಿಂದ ಮನುಷ್ಯ ಕುಲವೇ ನಾಚುವಂತಾಗಿದೆ. ಸಾಹಿತಿಗಳ ಮನೆಯವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಎಷ್ಟೊಂದು ನೋವಾಗಿರಬೇಡ. ಆ ಸಂಭ್ರಮಾಚರಣೆ ಮಾಡಿದ ಜನರೇ ಮುಂದೊಂದು ದಿನ ಸಾಯುತ್ತಿರುವಾಗ ಬೇರೆಯವರು ಅವರ ಮನೆ ಮುಂದೆ ಸಂಭ್ರಮಾಚರಣೆ ಮಾಡಿದರೆ ಹೇಗೆನಿಸುತ್ತದೆ ಅವರಿಗೆ ಹಾಗೂ ಅವರ ಮನೆಯವರಿಗೆ. ಯಾಕೆ ನಮ್ಮ ಜನ ಮನುಷ್ಯತ್ವ ಮರೆಯುತ್ತಿದ್ದಾರೆ? ಬೇರೆಯವರ ಮರಣ ಸಂಭ್ರಮಕ್ಕೆ ಕಾರಣವಾಗಿದೆ ಎಂದರೆ ಮನುಷ್ಯ ಎಷ್ಟು ಕ್ರೂರಿಯಾಗುತ್ತಿದ್ದಾನೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕೇ ?

ಹೆಣ್ಣಿನ ಮೇಲೆ ಅತ್ಯಾಚಾರವಂತೂ ಮಾಮೂಲಾಗಿ ಬಿಟ್ಟಿದೆ. ಮನುಷ್ಯ ಮೃಗೀಯವಾಗಿ ವರ್ತಿಸುತ್ತಿದ್ದಾನೆ.ಕಾನೂನಿನ ವೈಫಲ್ಯದಿಂದ ಜನರಿಗೆ ಕೆಟ್ಟ ಧೈರ್ಯ ಬಂದಿದೆ. ಕೊಲೆ ದರೋಡೆಯಂತೂ ಪತ್ರಿಕೆಗಳ ಮಾಮೂಲು ಸುದ್ದಿಯಾಗಿದೆ. ಹೆಣ್ಣು ರಾತ್ರಿ ಹೊತ್ತು ಹೊರಬರುವುದನ್ನು ಬಿಡಬೇಕಾಗಿದೆ. ಹೊರ ಹೋದ ಹೆಣ್ಣು ವಾಪಾಸು ಮನೆಗೆ ಸುರಕ್ಷಿತವಾಗಿ ಬರುತ್ತಾಳೆ ಎಂಬುದು ಖಾತ್ರಿಯೇ ಇಲ್ಲ. ಹೌದಲ್ಲವೆ ?ರಾತ್ರಿ ಹೊತ್ತು ಮೃಗಗಳು ಓಡಾಡುವ ಹೊತ್ತಲ್ಲವೇ ? ಮನುಷ್ಯ ರೂಪದ ಮೃಗಗಳು ರಾತ್ರಿಹೊತ್ತು ರಾಜಾರೋಷರಾಗಿ ತಿರುಗುತ್ತಿರುತ್ತಾರೆ. ಕಾನೂನು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ತನಗೇನೂ ಕಾಣುತ್ತಿಲ್ಲವೆಂದು ಮೌನವಾಗಿ ಕುಳಿತು ಬಿಟ್ಟಿದೆ. ಅಪರಾಧಿಗಳನ್ನು ಬಂಧಿಸಿದರೂ ಲಂಚಾವತಾರದ ಬಲೆಗೆ ಬಲಿಯಾಗಿ ಅಫರಾದ ನಿರಪರಾಧವಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲವೇ ಸಾಕ್ಷಿಗಳನ್ನು ಕೊಂಡು ಕೊಂಡೋ ಅಥವಾ ಹೆದರಿಸಿಯೋ ಅಪರಾಧಿಗಳು ಸಾಕ್ಷ್ಯವೇ ಇಲ್ಲದಂತಾಗಿ ಮಾಡಿ ಹೊರಬಂದು ಮತ್ತೆ ಅಪರಾಧಗಳನ್ನು ನಿರ್ಭಯದಿಂದ ಮಾಡುತ್ತಾರೆ. ಹೀಗಾಗಿ ಸಾಕ್ಷಿ ಹೇಳುವುದೆಂದರೆ ಜನರಿಗೆ ಹೆದರಿಕೆಯೇ ಜಾಸ್ತಿ. ಒಂದೊಮ್ಮೆ ತಮ್ಮ ಸಾಕ್ಷಿಯಿಂದ ಅಪರಾಧಿಗೆ ಶಿಕ್ಷೆಯಾದರೆ ಸಾಕ್ಷಿ ಹೇಳಿದವರಿಗೂ ಅವರ ಕುಟುಂಬದವರಿಗೂ ಉಳಿಗಾಲವಿರುವುದಿಲ್ಲ.ಆ ಹೆದರಿಕೆಯೇ ಜನರನ್ನು ಹಿಂಜರಿಸುತ್ತಿದೆ.

ಒಡಹುಟ್ಟಿದವರ ಮಧ್ಯೆಯೂ ಪ್ರೀತಿ ವಾತ್ಸಲ್ಯ ನಶಿಸಿ ದ್ವೇಷ ಜಗಳವಾಗುತ್ತಿದೆ. ಆಸ್ತಿ ವಿಚಾರವಾಗಿ ಒಡ ಹುಟ್ಟಿದವರನ್ನೇ ಕೊಲ್ಲುತ್ತಿದ್ದಾರೆ. ತಂದೆ ತಾಯಿಯರನ್ನೇ ಕೊಲ್ಲುವ ಕುಪುತ್ರರೂ ಇದ್ದಾರೆ. ವಯಸ್ಸಾದಂತೆ ತನ್ನ ತಂದೆ ತಾಯಿಯರನ್ನೇ ಹೊರ ಹಾಕುವ ಮಂದಿಯೆಷ್ಟು ಜನ. ಪ್ರೀತಿ ಮಮಕಾರ ಎಲ್ಲಿ ಕಣ್ಮರೆಯಾಯಿತು ತನ್ನ ಶ್ರೇಯಸ್ಸಿಗೊಸ್ಕರ ತಮ್ಮ ಬದುಕನ್ನೇ ಪಣವಾಗಿಟ್ಟು ಶ್ರಮಿಸಿ ನುಜ್ಜು ಗುಜ್ಜಾದ ಪೋಷಕರನ್ನು ಮರೆಯುವ ಮಕ್ಕಳೆಷ್ಟು.ಅಷ್ಟೇಕೆ ಗಂಡಂದಿರೂ ಹೆಂಡತಿಯರೂ ಕ್ರೂರಿಗಳಾಗುತ್ತಿದ್ದಾರೆ. ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ. ತಾಳ್ಮೆ ಪ್ರೀತಿ ವಿಶ್ವಾಸಕ್ಕೆ ಹೆಸರಾದ ಹೆಣ್ಣೂ ತಾಳ್ಮೆ ಕಳೆದುಕೊಳ್ಳುತ್ತಿದ್ದಾಳೆ.

ಗಾಂಧೀಜಿಯ ರಾಮ ರಾಜ್ಯದ ಕನಸು ಕನಸಾಗಿಯೇ ಉಳಿಯಿತು.ಅದು ಇನ್ನೆಂದೂ ನನಸಾಗುವುದಿಲ್ಲ. ಪ್ರೀತಿ ವಾತ್ಸಲ್ಯ,ದಯೆ, ಕರುಣೆ ಎಂಬುದು ಮನುಷ್ಯರ ಮನಸ್ಸಿನಿಂದ ದಿನೇ ದಿನ ದೂರವಾಗುತ್ತಿದೆ. ಸ್ವಾರ್ಥ,ದುರಾಸೆ,ವಿಕೃತ ಮನ,ದ್ವೇಷ,ಅಧಿಕಾರ ದಾಹ ಇವು ಆ ಸ್ಥಾನವನ್ನು ತುಂಬುತ್ತಿವೆ. ಸ್ನೇಹವೂ ದುರುಪಯೋಗವಾಗುತ್ತಿದೆ. ಶಿಷ್ಟಾಚಾರ ಮರೆತು ತನ್ನದೇ ಗೆಳತಿಯ ಅಶ್ಲೀಲ ಚಿತ್ರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸ್ನೇಹಕ್ಕೆ ಮಸಿ ಬಳಿಯುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲೇ ಮಾನವೀಯ ಮೌಲ್ಯಗಳು ಕಣ್ಮರೆ ಯಾಗುತ್ತಿರುವಾಗ ಬೇರೆಲ್ಲಿ ಸಿಕ್ಕಾವು? ಜನರಲ್ಲಿ ಧೈರ್ಯ ಕಡಿಮೆಯಾಗುತ್ತಿದೆ ಅನ್ಯಾಯವನ್ನು ಪ್ರತಿಭಟಿಸುವ ಬದಲು ಅದಕ್ಕೆ ತಗ್ಗಿ ಬಗ್ಗಿ ಅನ್ಯಾಯ ಹೆಚ್ಚಾಗುವಂತೆ ಮಾಡುತ್ತಿದ್ದಾರೆ. ತನಗೇಕೆ ಬೇರೆಯವರ ಉಸಾಬರಿ ಎಂದು ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೂ ನೋಡದವರಂತೆ ಮುಂದಕ್ಕೆ ನಡೆಯುತ್ತಾರೆ.ಯಾಕೆ ಹೀಗಾಗುತ್ತಿದೆ?

ಪ್ರಕೃತಿಯ ಮಡಿಲಲ್ಲಿ

ನಮ್ಮ ಮನೆಯ ಬಾಲ್ಕನಿ ಯಿಂದ ನೋಡಿದರೆ ಕಣ್ಣು ಹಾಯಿಸಿದಲ್ಲೆಲ್ಲ ಹಸಿರೇ ಹಸಿರು. ಒತ್ತೊತ್ತಾಗಿ ಬೆಳೆದ ಮರಗಳಿಂದ ತುಂಬಿದ ಕಾಡು. ಕಾಂಕ್ರೀಟ್ ಕಟ್ಟಡಗಳನ್ನೇ ನೋಡಿ ಬೇಸರವಾಗಿ ಈಗ ಹಸಿರಿನ ನಡುವೆ ಬದುಕು ಸುಂದರವಾದಂತೆ ಅನಿಸಿತು. ಮುಂಜಾನೆ ಹಲವು ಹಕ್ಕಿಗಳ ಹಾಗೂ ನವಿಲುಗಳ ಕೂಗು ಹಿತವಾಗಿ ಮನಸ್ಸು ಉಲ್ಲಾಸ ಗೊಳ್ಳುತ್ತದೆ. ಸೂರ್ಯ ಮೇಲೆ ಬಂದಂತೆ ಬೆಳಕು ಮತ್ತು ನೆರಳಿನಾಟ ಶುರುವಾಗುತ್ತದೆ. ಮೋಡಗಳು ಬಿಸಿಲನ್ನು ನುಂಗಲು ಧಾವಿಸಿ ಬಂದಂತೆ ಕಾಣಿಸುತ್ತದೆ. ಸ್ವಲ್ಪ ಕಡೆ ಬಿಸಿಲು ಇದ್ದರೆ ಇನ್ನು ಸ್ವಲ್ಪ ಕಡೆ ನೆರಳು. ಮೋಡ ಮುಂದೆ ಧಾವಿಸುವಾಗ ಬಿಸಿಲು ಮಕ್ಕಳಾಟದಂತೆ ಹಿಂದೆ ಕೈಗೆ ಸಿಗದೆ ಹಿಂದೆ ಓಡಿದಂತೆ. ಅದನ್ನು ನೋಡುವುದೇ ಒಂದು ಸೊಗಸು.

ಬೇಸಿಗೆಯಲ್ಲಿ ಬಡವಾಗಿ ಮಳೆಗೆ ಹಾತೊರೆಯುತ್ತಿದ್ದ ಮರಗಳು ಮಳೆಗಾಲದಲ್ಲಿ ಮೈ ತುಂಬಿ ನಳನಳಿಸುತ್ತವೆ. ಮಳೆಗೆ ಸಂತೋಷದಿಂದ ತೂಗಾಡುತ್ತವೆ. ಮಳೆ ಬರುವಾಗಲೂ ಅಷ್ಟೇ ದೂರದಿಂದ ಧಾವಿಸಿ ಬಂದಂತೆ ಕಾಣುತ್ತದೆ. ಮೊದಲು ದೂರದಲ್ಲಿ ಮಳೆಯಾದದ್ದು ಮಬ್ಬಾಗಿ ಮಂಜಿನಿಂದ ತುಂಬಿಕೊಂಡಂತೆ ಕಾಣಿಸುತ್ತದೆ. ನಂತರ ಮುಂದಕ್ಕೆ ಬರುತ್ತಾ ಎಲ್ಲ ಕಡೆ ಸಮಾನವಾಗಿ ಮಳೆಯನ್ನು ಹರಡುತ್ತಾ ಮುಂದಕ್ಕೆ ಬರುವಾಗ ಮಳೆಯ ಅಬ್ಬರ ಕೇಳಿಸುತ್ತದೆ. ಗಾಳಿಯೂ ಮಳೆಯೊಂದಿಗೆ ಆಟವಾಡಿದಂತೆ ಮಳೆಯ ನೀರು ಅಲೆ ಅಲೆಯಾಗಿ ಮುಂದಕ್ಕೆ ಸಾಗುವಂತೆ ಕಾಣುತ್ತದೆ. ಅದು ನೋಡಲು ಬಹಳ ಸೊಗಸು. ಕ್ಯಾಮೆರ ಕಣ್ಣು ಆ ದ್ರಶ್ಯವನ್ನು ಸೆರೆಹಿಡಿಯಲಾಗುವುದಿಲ್ಲ. ಮಳೆ ಕಡಿಮೆಯಾದಾಗ ಮರಗಳು ಬಿಳಿ ಹಳದಿ ಬಣ್ಣದ ಹೂಗಳಿಂದ ತುಂಬಿ ಮದುವಣಗಿತ್ತಿಯಂತೆ ಕಾಣಿಸುತ್ತದೆ. ಆ ಕಾಡಿನಿಂದಾಗಿ ಯಾವಾಗಲೂ ಒಳ್ಳೆಯ ತಂಪಾದ ಗಾಳಿ ಬೀಸುತ್ತಿರುತ್ತದೆ. ಕಾಡುಪ್ರಾಣಿಗಳು ಮಾತ್ರ ಇಲ್ಲವೇನೋ ನಾನಂತೂ ನೋಡಿಲ್ಲ.ಸಂಜೆಯಾಗುತ್ತಿದ್ದಂತೆ ಮತ್ತೆ ಹಕ್ಕಿಗಳ ಕಲರವ ಕೇಳುತ್ತದೆ. ಸೂರ್ಯ ಅಸ್ತಮಿಸುತ್ತಿದ್ದಂತೆ ಬಾನಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡುತ್ತದೆ. ರಾತ್ರಿಯಾದಂತೆ ಜೀರುಂಡೆ ಹಾಗೂ ಕಪ್ಪೆಗಳ ವಟಗುಟ್ಟುವಿಕೆ ದ್ವಂದ್ವ ಮೇಳದಂತೆ ಕೇಳಿಸುತ್ತದೆ. ಬಹು ದೂರದಲ್ಲಿನ ಬೀದಿ ದೀಪಗಳು ಹಾಗೂ ಮನೆಗಳ ದೀಪಗಳು ಮಿನುಗುವುದನ್ನು ಕಂಡಾಗ ನಕ್ಷತ್ರಗಳೇ ಭೂಮಿಗಿಳಿದು ಬಂದವೇನೋ ಎಂಬಂತೆ ಭಾಸವಾಗುತ್ತದೆ.

ನಮ್ಮ ನಾಡಿನ ಸ್ವಾತಂತ್ರೋತ್ಸವದ ದಿನ ಬೆಳಗ್ಗೆ ದೂರದ ಗುಡ್ಡದಲ್ಲಿ ನಮ್ಮ ರಾಷ್ಟ ಪಕ್ಷಿ ನವಿಲು ಗರಿ ಬಿಚ್ಚಿ ನರ್ತಿಸುವುದನ್ನು ಕಂಡ ಭಾಗ್ಯಶಾಲಿ ನಾನು. ನನ್ನ ಜೀವಮಾನದಲ್ಲೇ ನಾನು ಮೊದಲ ಬಾರಿಗೆ ನವಿಲು ತನ್ನ ಗರಿ ಬಿಚ್ಚಿ ನರ್ತಿಸುವುದನ್ನು ಕಂಡೆ. ಇದಕ್ಕೂ ಮುಂಚೆ ನಾನು ನವಿಲನ್ನು ಬೇರೆ ಕಡೆಯಲ್ಲೂ ನೋಡಿದ್ದರೂ ಅದಕ್ಯಾವುದಕ್ಕೂ ಗರಿಗಳಿರಲ್ಲಿಲ್ಲ. ಯಾರೋ ದುರಾತ್ಮರು ಅದನ್ನು ಕಿತ್ತಿರಬೇಕು. ಮನುಷ್ಯನಿಗೆ ಸುಂದರವಾದ್ದದ್ದೆಲ್ಲ ತನ್ನದಾಗಬೇಕೆಂಬ ದುರಾಸೆ.

ಮನಸ್ಸಿಗೆ ಏನೇ ಬೇಸರವಾದರೂ ಹಸಿರರಾಶಿ ಕಂಡಾಗ ಎಲ್ಲ ಮರೆತು ಹಾಯೆನಿಸುತ್ತದೆ, ಶುದ್ಧವಾದ ಗಾಳಿ ಮುದನೀಡುತ್ತವೆ. ಆದರೆ ಈ ಹಸಿರ ರಾಶಿ ಇನ್ನೆಷ್ಟು ಸಮಯವಿರುತ್ತದೋ. ಮನುಷ್ಯನಿಗೆ ಎಷ್ಟು ಇದ್ದರೂ ಸಾಲದು. ಈಗಲೇ ಕಟ್ಟಡಗಳು ಕಾಡನ್ನು ಆಕ್ರಮಿಸಲು ಶುರುವಾಗಿದೆ. ಇನ್ನು ಕೆಲವೇ ವರುಷಗಳಲ್ಲಿ ಹಸಿರು ಕಾಡು ಕಾಂಕ್ರೀಟ್ ಕಾಡಾಗಿ ಮಾರ್ಪಡುವುದರಲ್ಲಿ ಸಂದೇಹವೇ ಇಲ್ಲ.